ನಮ್ಮ ಕುಲಾಧಿಪತಿಗಳಾದ ಮುಖ್ಯಮಂತ್ರಿಗಳೂ ಆಗಿರುವ ಸನ್ಮಾನ್ಯ ದೇವೇಗೌಡ ಅವರೇ, ಸಹಕುಲಾಧಿಪತಿಗಳೂ ಉನ್ನತ ಶಿಕ್ಷಣ ಸಚಿವರೂ ಆದ ಸನ್ಮಾನ್ಯ ಡಿ. ಮಂಜುನಾಥ ಅವರೇ, ಘಟಿಕೋತ್ಸವ ಭಾಷಣ ಮಾಡಲಿರುವ ಸನ್ಮಾನ್ಯ ಡಾ. ಷೇಖ್ ಅಲಿ ಅವರೇ, ಮಹಿಳೆಯರೇ ಮತ್ತು ಮಹನೀಯರೇ,

ನಮ್ಮ ವಿಶ್ವವಿದ್ಯಾಲಯದ ಎರಡನೆಯ ಘಟಿಕೋತ್ಸವಕ್ಕೆ ತಮ್ಮನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತೇನೆ. ಕನ್ನಡ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇಂದು ಚಿರಸ್ಮರಣೀಯವಾದ ದಿನ. ಹಂಪಿಯ ನಿರ್ಜನ ಪರಿಸರದಲ್ಲಿ ಒಂದು ಹೊಸ ‘ಜನಸ್ಥಾನ’ ಈಗ ತಲೆ ಎತ್ತಿದೆ. ವಿದ್ಯೆಯ ಹೊಸ ಕನಸುಗಳನ್ನು ಈ ಪ್ರದೇಶ ಕಾಣ ತೊಡಗಿದೆ. ಒಂದು ದೊಡ್ಡ ಸಾಮ್ರಾಜ್ಯವನ್ನು ನುಂಗಿ ನೀರು ಕುಡಿದ ಈ ನೆಲ ಈಗ ಮತ್ತೆ ಒಂದು ಹೊಸ ತಿಳುವಳಿಕೆಯ ಪರಿಸರವನ್ನು ಸೃಷ್ಟಿಸುತ್ತಿದೆ. ಮೈ ಹೊರಳಿಸಿದ ಕಾಲದ ಇನ್ನೊಂದು ಮಗ್ಗಲು ಕಾಣತೊಡಗಿದೆ.

ಕರ್ನಾಟಕ ಸರ್ಕಾರ ಕೊಡಮಾಡಿರುವ ಈ ವಿಸ್ತಾರವಾದ ನಿವೇಶನದಲ್ಲಿ ಈಗ ವಿಶ್ವವಿದ್ಯಾಲಯದ ಕಟ್ಟಡಗಳು ತಲೆ ಎತ್ತಿವೆ. ತ್ರಿಪದಿ, ಕೂಡಲಸಂಗಮ, ತುಂಗಾಭದ್ರಾ, ಕವಿರಾಜಮಾರ್ಗ, ದೇಸೀಮಾರ್ಗದಂಥ ಹಳೆಯ ಹೆಸರುಗಳು ಹೊಸ ಅರ್ಥವಂತಿಕೆಯನ್ನು ಪಡೆದುಕೊಳ್ಳುತ್ತಿವೆ. ಕಟ್ಟಡಗಳ ವಿನ್ಯಾಸವು ವಿಜಯ ನಗರದ ವಾಸ್ತುಶಿಲ್ಪಕ್ಕೆ ವಿಸಂಗತವಾಗದಂತೆ ನೋಡಿಕೊಳ್ಳಲಾಗಿದೆ. ವಿದ್ಯಾನಗರವಾಗಿದ್ದದ್ದು ಸಾಮ್ರಾಜ್ಯ ವಿಸ್ತಾರದಿಂದ ವಿಜಯನಗರವಾಗಿ, ಈ ವಿದ್ಯಾರಣ್ಯವಾಗಿ ಚಿಗುರುತ್ತಿದೆ. ಬೇರೆ ಬೆಟ್ಟಗಳಲ್ಲಿ ಗಿಡಮರ ಬೆಳೆದರೆ ಈ ಅರಣ್ಯದಲ್ಲಿ ಕಲ್ಲುಬಂಡೆ ಬೆಳೆಯುತ್ತದೆ. ಮೂರ್ತಿ ಇಲ್ಲವೆ ಮಂದಿರವಾಗುವ ಸುಪ್ತ ಕನಸಿನ ಈ ಕಲ್ಲು ಬಂಡೆಗಳ ಅಡಿಯಲ್ಲಿ ಈಗ ಹಸಿರು ಹುಲ್ಲು ಬೆಳೆಯುತ್ತಿದೆ. ಬಿರುಬೇಸಿಗೆಯಲ್ಲೂ ಹುಲ್ಲಿಗೆ ನೀರುಣಿಸುವ ತಾಯಿ ತುಂಗೆಭದ್ರೆಗೆ ನಮಸ್ಕರಿಸೋಣ.

ನಿಮಗೆಲ್ಲ ತಿಳಿದಿರುವಂತೆ ನಮ್ಮ ವಿಶ್ವವಿದ್ಯಾಲಯದಲ್ಲಿ ಶಿಕ್ಷಣಕ್ಕಿಂತ ಸಂಶೋಧನೆಗೆ ಮಹತ್ವ ಹೆಚ್ಚು. ನಾವು ಎಂ.ಫಿಲ್ ಮತ್ತು ಪಿಎಚ್.ಡಿ. ಪದವಿಗಳನ್ನು ಮಾತ್ರ ನೀಡುತ್ತೇವೆ. ಈ ಎರಡೂ ಪದವಿಗಳ ಪದವೀಧರರ ಎರಡನೆಯ ತಂಡ ಹೊರಬರುತ್ತಿದೆ. ಶ್ರೀ ಚನ್ನಬಸವೇಶ್ವರಸ್ವಾಮಿ ಓಲಿಮಠ ಮತ್ತು ಶ್ರೀ ವೀರಭದ್ರಪ್ಪ ಶೇಷಪ್ಪ ಬಡಿಗೇರ ಅವರು ತಮ್ಮ ಮಹಾಪ್ರಬಂಧಗಳಿಗೆ ಪಿಎಚ್.ಡಿ. ಪದವಿಯನ್ನೂ ಇವರೊಂದಿಗೆ ಇನ್ನೂ ಹದಿನಾಲ್ಕು ಜನ ವಿದ್ಯಾರ್ಥಿಗಳು ಎಂ.ಫಿಲ್. ಪದವಿಯನ್ನು ಪಡೆಯುತ್ತಾರೆ. ನಮ್ಮದಿನ್ನೂ ಶೈಶವಾವಸ್ಥೆಯಲ್ಲಿರುವ ವಿಶ್ವವಿದ್ಯಾಲಯವಾಗಿರುವುದರಿಂದ ಅದರ ತಳಹದಿ ಗಟ್ಟಿಯಾಗಿರಬೇಕೆಂದು ನಾವೆಲ್ಲ ಶ್ರಮಿಸುತ್ತಿದ್ದೇವೆ. ಬೆಳೆದ ಮೇಲೆ ಕೂಡ ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ಬಗೆಯ ರಾಜಿಗೆ ಇಲ್ಲಿ ಅವಕಾಶವಿರಬಹುದು.

ಈ ಪದವಿಗಳಲ್ಲದೆ ‘ನಾಡೋಜ’ ಎಂಬ ಗೌರವ ಪದವಿಯನ್ನೂ ನಾವು ಈ ವರ್ಷ ನೀಡುತ್ತಿದ್ದೇವೆ. ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತವಾದ ಸೇವೆ ಸಲ್ಲಿಸಿದವರಿಗೆ ಈ ಗೌರವ ಪದವಿಯನ್ನು ನೀಡಲಾಗುತ್ತಿದೆ. ಕನ್ನಡ ಸಾಹಿತ್ಯವನ್ನು ಸಮೃದ್ಧಿಗೊಳಿಸಿರುವ ಶ್ರೀ ಪುತಿನ ಮತ್ತು ಕನ್ನಡ ಪತ್ರಿಕೋದ್ಯಮದ ಏಳಿಗೆಗೆ ಮಹತ್ವದ ಕಾಣಿಕೆ ಸಲ್ಲಿಸಿರುವ ಶ್ರೀ ಪಾಟೀಲ ಪುಟ್ಟಪ್ಪ ಇವರಿಗೆ ಈ ಸಲ ಈ ಪದವಿ ಸಲ್ಲುತ್ತಿದೆ.

ಕನ್ನಡ ವಿಶ್ವವಿದ್ಯಾಲಯದ ಗುರಿ ಎಂದರೆ ಕನ್ನಡದ ಸರ್ವತೋಮುಖವಾದ ಬೆಳವಣಿಗೆಯಾಗಿದೆ. ಆದರೆ ಇಂಗ್ಲೀಷ್ ಮಾಧ್ಯಮದ ಭರಾಟೆಯಲ್ಲಿ ಕನ್ನಡದ ಬೆಳವಣಿಗೆ ಎದಕ್ಕೂ ಸಾಲದೆನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಸಮಾಜ ನಮ್ಮ ಕಣ್ಣಿಗೆ ಕಾಣದಂತೆ ಬದಲಾವಣೆ ಹೊಂದುತ್ತಿರುತ್ತದೆ. ಈ ಶತಮಾನದ ಪ್ರಾರಂಭದಲ್ಲಿ ಒಮ್ಮೆಲೆ ನಮ್ಮ ದೇಶ ಬದಲಾಗತೊಡಗಿತು. ಇದಕ್ಕೆ ಬ್ರಿಟೀಷರ ಆಗಮನವೇ ಕಾರಣವೆನ್ನುವುದು ಸ್ಪಷ್ಟವಾಗಿದೆ. ಬ್ರಿಟೀಷರಿಗಿಂತ ಮುಂಚೆ ಗ್ರೀಕರು, ಮುಸಲ್ಮಾನರು ನಮ್ಮಲ್ಲಿಗೆ ಬಂದಿದ್ದರು. ಬದಲಾವಣೆ ತಂದಿದ್ದರು. ಆದರೆ ಆ ಬದಲಾವಣೆಯ ಗತಿ ಇಷ್ಟು ತೀವ್ರವಾಗಿರಲಿಲ್ಲ. ಬ್ರಿಟೀಷರ ರಾಜಸತ್ತೆಯ ಪರಿಣಾಮವೇ ಬೇರೆ. ಅವರು ಬೇರೊಂದು ಸಂಸ್ಕೃತಿಯನ್ನು ತಂದರು. ಬೇರೊಂದು ರೀತಿಯ ರಾಜ್ಯವ್ಯವಸ್ಥೆಯನ್ನು ತಂದರು. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಇಂಗ್ಲಿಷ್ ಭಾಷೆಯನ್ನು ಕಲಿಸಿದರು.

ಇಂಗ್ಲಿಷ್ ಭಾಷೆ ಅನೇಕ ಪ್ರಲೋಭನೆಗಳನ್ನು ಒಡ್ಡಿದ ಭಾಷೆ. ಇಂದಿಗೂ ಆ ಭಾಷೆ ಕಲಿಯದವನು ವಿದ್ಯಾವಂತನೇ ಅಲ್ಲ ಎಂಬ ಭಾವನೆ ಇದೆ. ಯಾವುದೇ ಭಾಷೆ ಮನುಷ್ಯನ ತಿಳುವಳಿಕೆಯನ್ನು ತನ್ನ ರೀತಿಯಲ್ಲಿ ತಿದ್ದುತ್ತದೆ. ಇಂಗ್ಲಿಷ್ ಹಾಗೇ ಮಾಡಿತು. ಈಗ ನಮ್ಮ ಚಿಂತನೆ ಅದು ಕನ್ನಡದಲ್ಲಿ ಅಭಿವ್ಯಕ್ತಿ ಪಡೆದರೂ ನಡೆಯುವುದು ಮಾತ್ರ ಇಂಗ್ಲಿಷ್ ಭಾಷೆಯ ಮೂಲಕವಾಗಿ. ನಮ್ಮ ಶಿಕ್ಷಣದ ಮಾಧ್ಯಮ ಮೊದಲು ಇಂಗ್ಲಿಷ್ ಇದ್ದದ್ದು ಈಗ ಕನ್ನಡವಾಗುತ್ತಿದೆ. ಆದರೆ ಕನ್ನಡ ಮಾಧ್ಯಮ ಕೂಡ ಇಂಗ್ಲಿಷ್ ಮಾಧ್ಯಮದ ಅನುವಾದವಾಗಿದೆ. ನಮ್ಮ ಸಮಾಜ ತ್ವರಿತಗತಿಯಲ್ಲಿ ಬದಲಾವಣೆ ಹೊಂದುತ್ತಿರುವುದಕ್ಕೆ ಈ ಮಾಧ್ಯಮ ಕಾರಣವಾಗಿದೆ. ಇಂಗ್ಲಿಷ್ ಕಲಿತ ಮೇಲೆ ನಾವು ನಮ್ಮ ಇತಿಹಾಸದ ಕಲ್ಪನೆಯನ್ನು ರೂಪಿಸಿಕೊಂಡೆವು. ಈ ಐತಿಹಾಸಿಕ ಪ್ರಜ್ಞೆಯಿಂದ ನಮ್ಮ ಹಳೆಯ ಜ್ಞಾನಶಾಸ್ತ್ರವನ್ನು ರೂಪಿಸಿಕೊಂಡೆವು. ನಮ್ಮಲ್ಲಿರುವ ತರತಮ ಭಾವನೆಗಳಿಗೆ, ಮೌಲ್ಯಗಳಿಗೆ, ಕೀಳರಿಮೆಗೆ, ಸರಿತಪ್ಪುಗಳ ಕಲ್ಪನೆಗಳಿಗೆ, ಈ ಭಾಷೆಯೇ ಕಾರಣವೆಂದರೂ ತಪ್ಪಿಲ್ಲ. ಇದರ ಪರಿಣಾಮವಾಗಿ ನಮ್ಮಲ್ಲಿದ್ದ ವಿಜ್ಞಾನಗಳೆಲ್ಲ ಗೊಡ್ಡು ಪುರಾಣಗಳಾದವು. ಆಯುರ್ವೇದದಂಥ ವಿಜ್ಞಾನ, ದೇವಸ್ಥಾನ ರಚನೆಯಂಥ ನಮ್ಮ ಇಂಜಿನಿಯರಿಂಗ್ ಕೂಡ ಗೊಡ್ಡು ಪುರಾಣಗಳಾಗಿ ವಿಶ್ವಾಸ ಕಳೆದುಕೊಂಡವು. ನೆಲ, ಹೊಲ, ಕನ್ನಡವಾಗಿದ್ದರೂ ಕೃಷಿಶಾಸ್ತ್ರ ಕೂಡ ಇಂಗ್ಲಷಿನಲ್ಲಿ ರೂಪುಗೊಳ್ಳುತ್ತಿರುವ ವಿಪರ್ಯಾಸ ನಮ್ಮದಾಗಿದೆ.

ಈ ವಿಪರ್ಯಾಸವನ್ನು ತಡೆಗಟ್ಟುವುದು ಕನ್ನಡ ವಿಶ್ವವಿದ್ಯಾಲಯದ ಗುರಿಯಾಗಿದೆ. ಕನ್ನಡಕ್ಕೆ ತನ್ನದೇ ಆದ ಅಭಿಜಾತತೆ ಇದೆ, ಜಾನಪದವೂ ಇದೆ. ಅಲ್ಲದೆ ಹೊಸ ಕಾಲಕ್ಕೆ ತಕ್ಕಂಥ ಆಧುನಿಕತೆಯೂ ಇದೆ. ಈ ಮೂರು ನಿಟ್ಟುಗಳಲ್ಲಿ ಬೆಳವಣಿಗೆ ಪಡೆದ ಭಾಷೆಯನ್ನು ಸರಿಯಾಗಿ ದುಡಿಸಿಕೊಳ್ಳುವ ಉಪಕ್ರಮ ಇಲ್ಲಿ ನಡೆಯುತ್ತಿದೆ. ಇದಕ್ಕಾಗಿ ಸಂಶೋಧನೆಯ ಕಲ್ಪನೆ ಹಾಗೂ ಉದ್ದೇಶಗಳನ್ನು ಬದಲಿಸಿಕೊಳ್ಳಬೇಕಾಗಿದೆ.

ಪಿಎಚ್.ಡಿ. ಅಥವಾ ಅನ್ಯತ್ರ ಮಾಡಿದ ಸಂಶೋಧನೆಗಳು ಸಂಶೋಧನೆ ಮಾಡಿದವರಿಗೇ ಜೀವನದಲ್ಲಿ ಒಂದು ಬಾರಿಯೂ ಉಪಯೋಗವಾಗದಿದ್ದಲ್ಲಿ ಅಂಥ ಸಂಶೋಧನೆಯಿಂದ ಏನು ಪ್ರಯೋಜನ, ಸಂಶೋಧನೆಗಾಗಿ ಸಂಶೋಧನೆ ಆಗಬಾರದು. ಆದ್ದರಿಂದಲೇ ಅದು ಕೊನೆಪಕ್ಷ ಕನ್ನಡದ ಸಾಮಾನ್ಯ ಜನ. ವಿದ್ಯಾರ್ಥಿಗಳು ಹಾಗೂ ಬುದ್ಧಿವಂತರು ಈ ಮೂವರಲ್ಲಿ ಒಬ್ಬರಿಗಾದರೂ ಉಪಯೋಗವಾಗಬೇಕೆಂದು ಕನ್ನಡ ವಿಶ್ವವಿದ್ಯಾಲಯ ಬಯಸುತ್ತದೆ. ಜನ ಸಾಮಾನ್ಯರಿಗಾಗಿ ೧೧೦ ಪುಸ್ತಕಗಳನ್ನು ನಾವು ಪ್ರಕಟಿಸಿದ್ದೇವೆ. ಕೃಷಿ ಪದ ನಿಘಂಟು, ಜನಪದ ಕಲೆಗಳ ವಿಶ್ವಕೋಶಗಳು ಆಗಲೇ ಸಿದ್ಧವಾಗಿದೆ. ಹಾಗೆಯೇ ಆಯಗಾರರೇ ಮುಂತಾದವರ ಕಾವ್ಯ ಸಂಗ್ರಹವು ೧೦ ಸಂಪುಟಗಳಲ್ಲಿ ಸಿದ್ಧವಾಗುತ್ತಿದೆ. ಬಹುಶಃ ಭಾರತೀಯ ಭಾಷೆಗಳಲ್ಲೆ ಮೊಟ್ಟ ಮೊದಲಬಾರಿಗೆ ವೈದ್ಯ ವಿಶ್ವಕೋಶವನ್ನು ಪ್ರಕಟಿಸುತ್ತಿದ್ದೇವೆ.

ಸಾಹಿತ್ಯ ಮತ್ತು ಮಾನವಿಕ ಶಾಸ್ತ್ರಗಳಲ್ಲಿ ನಡೆದ ಸಂಶೋಧನೆ ಬೆಲೆಯುಳ್ಳದ್ದಾಗಿದೆ. ಆದರೆ ವಿಜ್ಞಾನದ ಕ್ಷೇತ್ರದಲ್ಲಿ ನಾವು ನಿರೀಕ್ಷಿಸಿದಷ್ಟು ಪ್ರಗತಿ ಆಗಿಲ್ಲ. ವೈಜ್ಞಾನಿಕ ತಿಳುವಳಿಕೆ ಇದ್ದರೂ ವೈಜ್ಞಾನಿಕ ಚಿಂತನೆ ನಮಗೆ ಇನ್ನೂ ಸಾಧಿಸಿಲ್ಲ. ಆದರೂ ಈ ದಿಕ್ಕಿನಲ್ಲಿ ನಮ್ಮ ಪ್ರಯತ್ನ ನಡೆದೇ ಇದೆ. ನಮ್ಮ ವಿಶ್ವವಿದ್ಯಾಲಯ ಪ್ರಕಟಿಸುತ್ತಿರುವ ವಿಜ್ಞಾನ ಸಂಗಾತಿಗೆ ಈ ಗುರಿಯಿದೆ. ಅಲ್ಲದೆ ಕನ್ನಡದಲ್ಲಿ ವಿಜ್ಞಾನ ಬೋಧನೆಯ ಪಠ್ಯಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಕನ್ನಡ ಕಾವ್ಯ, ಶೈಲಿ ಕೈಪಿಡಿಗಳು, ಆಗಲೇ ಸಿದ್ಧವಾಗಿವೆ. ಈವರೆಗೆ ಲಭ್ಯವಿದ್ದ, ಕರ್ನಾಟಕವನ್ನು ಕನ್ನಡಿಗರಿಗೆ ಪರಿಚಯಿಸುವ ಕರ್ನಾಟಕದ ಸಮಗ್ರ ಇತಿಹಾಸ ಆರು ಸಂಪುಟಗಳಲ್ಲಿ ಸಿದ್ಧಗೊಳ್ಳುತ್ತಿವೆ. ಕರ್ನಾಟಕದ ಬಗೆಗಿನ ಯಾವುದೇ ಮಾಹಿತಿ ಒದಗಿಸುವ ಮಾಹಿತಿ ಕೇಂದ್ರ ದಿನೇ ದಿನೇ ವೃದ್ಧಿಗೊಳ್ಳುತ್ತಿದೆ.

ಕನ್ನಡ ಚಿಂತನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗಬೇಕೆಂಬ ಉದ್ದೇಶದಿಂದ ಭಾಷಾಂತರ ವಿಭಾಗವನ್ನು ಚುರುಕುಗೊಳಿಸಿದ್ದೇವೆ. ತುಂಬ ಮಹತ್ವಾಕಾಂಕ್ಷೆಯ ಮತ್ತು ಭಾರತದ ಯಾವ ವಿಶ್ವವಿದ್ಯಾಲಯವೂ ಪ್ರಯತ್ನಿಸಲಾಗದ ಒಂದು ವಿನೂತನ ಯೋಜನೆ ನಮ್ಮ ಕನ್ನಡ ಕನ್ನಡದಲ್ಲಿ ದಿನನಿತ್ಯ ಸೃಷ್ಟಿಯಾಗುತ್ತಿರುವ ಶಬ್ದಗಳನ್ನು ಆಯಾ ತಿಂಗಳು ದಾಖಲಿಸಿ ರೂಪನಿರ್ಣಯ ಮಾಡುವುದು ಮತ್ತು ಆ ಮೂಲಕ ಕನ್ನಡದ ಬೆಳವಣಿಗೆಗೆ ನಿರ್ದೇಶನಗಳನ್ನು ಕೊಡುವುದು ಈ ಯೋಜನೆಯ ಉದ್ದೇಶ. ಇದು ಭಾರತದ ಯಾವ ಭಾಷೆಯಲ್ಲೂ ನಡೆದಿಲ್ಲ ಎನ್ನುವುದನ್ನು ಒತ್ತಿ ಹೇಳಬಯಸುತ್ತೇನೆ.

ಕನ್ನಡ ವಿಶ್ವವಿದ್ಯಾಲಯ ಈಗ ಮುಗಿಸಿರುವ ಯೋಜನೆಗಳಲ್ಲದೆ ಇನ್ನೂ ಅನೇಕ ಯೋಜನೆಗಳನ್ನು ಕೈಗೊಳ್ಳಬೇಕಿದೆ. ನಮ್ಮ ಬೇರೆ ಬೇರೆ ಭೌಗೋಳಿಕ ಪ್ರದೇಶಗಳು, ಇತಿಹಾಸದ ಬೇರೆಬೇರೆ ಮಗ್ಗುಲುಗಳು, ನಮ್ಮ ಸಾಹಿತ್ಯ, ಕಲೆಗಳು ಮುಟ್ಟಿದ ಎತ್ತರದ ಅರಿವು ನಮಗೆ ಆಗಬೇಕಾಗಿದೆ. ನಮ್ಮಲ್ಲಿ ಹೊಸದಾಗಿ ಹುಟ್ಟಿರುವ ಕಾವ್ಯಕೇಂದ್ರಕ್ಕೆ ಹಲವಾರು ಕನಸುಗಳಿವೆ. ಕನ್ನಡದ ಶಕ್ತಿ ಇರುವುದು ಅದರ ಸಾಹಿತ್ಯದಲ್ಲಿ. ನಮ್ಮದು ಕಾವ್ಯ ನಾಟಕಗಳಿಗೆ ಹೇಳಿ ಮಾಡಿಸಿದ ಭಾಷೆ. ಅದಕ್ಕಾಗಿ ಸಾಹಿತ್ಯವನ್ನು ಕುರಿತು ಅನೇಕ ಚಿಂತನೆಯ ಕ್ರಮಗಳು ಹುಟ್ಟಿ ಬಂದರೆ ಆಶ್ಚರ್ಯವಿಲ್ಲ.

ಇಷ್ಟಾಗಿ ನಮ್ಮ ಮುಂದೆ ಅನೇಕ ಕನಸುಗಳು ಸುಳಿದಾಡುತ್ತಿವೆ. ಸಾಹಿತ್ಯದ ಏಕಮೇವ ಮಾಧ್ಯಮವಾಗಿರುವ ಕನ್ನಡ ಭಾಷೆ ಇನ್ನು ಮುಂದೆ ಎಲ್ಲ ಶಾಸ್ತ್ರಗಳಿಗೂ ಮಾಧ್ಯಮವಾಗಬೇಕಾಗಿದೆ. ಸಾಹಿತ್ಯವನ್ನು ಹೊರತುಪಡಿಸಿ ಕನ್ನಡ ಭಾಷೆ ಇದೀಗ ಬೇರೆ ಚಿಂತನೆಯ ಕ್ರಮಗಳನ್ನು ಕಲಿಯತೊಡಗಿದೆ. ಮಾನವಶಾಸ್ತ್ರ ಹಾಗೂ ಭೌತಿಕ ಶಾಸ್ತ್ರಗಳು ಕನ್ನಡ ಭಾಷೆಯಲ್ಲಿ ಮೈದಾಳಲು ಕಾದು ನಿಂತಿವೆ. ಒಟ್ಟಿನಲ್ಲಿ ಹೊಸ ಶಿಕ್ಷಣ ಶಾಸ್ತ್ರ ಇಲ್ಲಿಂದ ಹುಟ್ಟಬೇಕೆಂಬುದು ನಮ್ಮ ಆಸೆ. ಮಹತ್ವಾಕಾಂಕ್ಷೆಯ ಇಂಥ ಗುರಿ ಸಾಧಿಸಲು ಸರಕಾರದ ಉದಾರ ನೆರವು ಬೇಕು. ನಿಮ್ಮೆಲ್ಲರ ಸಹಕಾರ ಬೇಕು.

ಪ್ರಖ್ಯಾತ ಇತಿಹಾಸಕಾರರು, ದಾರ್ಶನಿಕ ವಿದ್ವಾಂಸರು, ಎರಡು ವಿಶ್ವವಿದ್ಯಾಲಯಗಳ ಪ್ರಥಮ ಕುಲಪತಿಯವರೂ ಆಗಿದ್ದ ಸನ್ಮಾನ್ಯ ಪ್ರೊ. ಷೇಖ್‌ಅಲಿ ಅವರು ಘಟಿಕೋತ್ಸವ ಉಪನ್ಯಾಸ ನೀಡಲು ಆಗಮಿಸಿದ್ದಾರೆ.

ನಮ್ಮ ರಾಜ್ಯದ ಮುಖ್ಯಮಂತ್ರಿಯವರೂ ನಮ್ಮ ವಿಶ್ವವಿದ್ಯಾಲಯದ ಕುಲಾಧಿಪತಿಯವರೂ ಆದ ಸನ್ಮಾನ್ಯ ಎಚ್.ಡಿ.ದೇವೇಗೌಡ ಅವರು ಪದವಿ ಪ್ರದಾನ ಮಾಡಲಿದ್ದಾರೆ.

ಸನ್ಮಾನ್ಯ ಪಾಟೀಲ ಪುಟ್ಟಪ್ಪ ಅವರು ನಾಡೋಜ  ಗೌರವ ಪದವಿಯನ್ನು ಸ್ವೀಕರಿಸಲು ದಯವಿಟ್ಟು ಒಪ್ಪಿ ಬಂದಿದ್ದಾರೆ.

ನಮ್ಮ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯವರು ಮತ್ತು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರೂ ಆದ ಸನ್ಮಾನ್ಯ ಡಿ. ಮಂಜುನಾಥ ಅವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದಾರೆ.

ನಮ್ಮ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದಾರೆ.

ಈ ಎಲ್ಲ ಮಹನೀಯರನ್ನೂ, ಪಿಎಚ್.ಡಿ., ಎಂ.ಫಿಲ್. ಪದವಿಗಳನ್ನು ಪಡೆಯುತ್ತಿರುವ ಯಶಸ್ವಿ ಅಭ್ಯರ್ಥಿಗಳನ್ನು ಹಾಗೂ ತಮ್ಮೆಲ್ಲರನ್ನೂ ಘಟಿಕೋತ್ಸವಕ್ಕೆ ಸ್ವಾಗತಿಸುತ್ತೇನೆ.

ಮೂಡುಮಲೆಯ ಸೂರ್ಯನಾರಾಯಣ ಸ್ವಾಮಿ, ಪಡುಮಲೆಯ ಚಂದ್ರಾಮ ಸ್ವಾಮಿ ಇರುವತನಕ ಇಲ್ಲಿ ನಿತ್ಯ ನಿರಂತರವಾಗಿ ವಿದ್ಯೆ ಸೃಷ್ಟಿ ನಡೆಯುತ್ತಿರಲೆಂದು ಪಂಪಾಂಬಿಕೆ ಸಮೇತ ವಿರೂಪಾಕ್ಷನ ಸನ್ನಿಧಿಯಲ್ಲಿ ಪ್ರಾರ್ಥಿಸುತ್ತೇನೆ.

ಮಾರ್ಚ್ ೧೦, ೧೯೯೬