ಎಸ್.ಎಸ್. ಒಡೆಯರ್ ರಾಜ್ಯದ ಒಳಗೆ ಹಾಗೂ ಹೊರಗೆ ಅನೇಕ ಸಾಹಿತಿಗಳನ್ನು ಶಿಕ್ಷಣ ತಜ್ಞರನ್ನು ವಿಶ್ವವಿದ್ಯಾಲಯಗಳನ್ನು ಭೇಟಿ ಮಾಡಿ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದರು. ಅದರಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಮಾನವಿಕ ಶಾಸ್ತ್ರಗಳ ಬಗ್ಗೆ ಆಳವಾದ ಅಧ್ಯಯನ ಹಾಗೂ ಉನ್ನತ ಸಂಶೋಧನೆಗೆ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯವೆಂದು ಹೇಳಲಾಗಿದೆ. ವರದಿಯನ್ನು ಒಪ್ಪಿಕೊಂಡ ಆಗಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಸ್. ಬಂಗಾರಪ್ಪನವರು ಕನ್ನಡ ವಿಶ್ವವಿದ್ಯಾಲಯವನ್ನು ಪ್ರಕಟಿಸಿದರು. ಕನ್ನಡಿಗರ ಬಹುದಿನದ ಆಶೋತ್ತರವಾದ ಈ ಸಂಸ್ಥೆಯನ್ನು ಕಟ್ಟಲು ಹಿರಿಯ ಲೇಖಕರೂ, ಸೂಕ್ಷ್ಮ ಸಂವೇದನೆ, ಸೃಜನಶೀಲ ಲೇಖಕರು ಜಾನಪದದಲ್ಲಿ ಆಳವಾದ ಸಂಶೋಧನೆ ಯುಳ್ಳವರು, ಕನಸುಗಾರರು, ನಾಟಕ, ರಂಗಭೂಮಿ, ಸಿನಿಮಾ ಮುಂತಾದ ಕ್ಷೇತ್ರಗಳಲ್ಲಿ ದೊಡ್ಡ ಕೊಡುಗೆ ಕೊಟ್ಟಿರುವ ಡಾ. ಚಂದ್ರಶೇಖರ್ ಕಂಬಾರ ಅವರನ್ನು ೨೩.೧೦.೧೯೯೧ ರಂದು ವಿಶೇಷ ಆಡಳಿತ ಅಧಿಕಾರಿಯನ್ನಾಗಿ ಸರ್ಕಾರ ನೇಮಿಸಿತ್ತು. ಹೀಗೆ ಹಂಪಿಯ ಕಲ್ಲು ಮಂಟಪಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ವಿದ್ಯುಕ್ತವಾಗಿ ಪ್ರಾರಂಭವಾಯಿತು. ಡಾ. ಕಂಬಾರರು ರಾಜ್ಯದ ಒಳಗೆ ಮತ್ತು ದೇಶದ ಒಳಗೆ ವ್ಯಾಪಕ ಪ್ರವಾಸ ನಡೆಸಿ ನಾಡು ನುಡಿಯ ಏಳ್ಗೆಗೆ ದುಡಿದಿರುವ ಹಲವಾರು ಕ್ಷೇತ್ರದ ಗಣ್ಯರ ಜೊತೆ ಸಮಾಲೋಚನೆ ಮಾಡಿ ಕನ್ನಡ ವಿಶ್ವವಿದ್ಯಾಲಯದ ರೂಪ ರೇಷೆಯನ್ನು ಒಳಗೊಂಡ ಒಂದು ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದರು.

ಸರ್ಕಾರವು ಡಾ. ಚಂದ್ರಶೇಖರ ಕಂಬಾರರನ್ನು ದಿನಾಂಕ ೧೮.೧೦.೧೯೯೨ರಂದು ಮೊದಲ ಕುಲಪತಿಯನ್ನಾಗಿ ನೇಮಿಸಿತು. ಕನ್ನಡಿಗರ ಬಹುದಿನದ ಸುಪ್ತ ಕನಸೊಂದು ನನಸಾಗಲಾರಂಭಿಸಿತು. ಡಾ. ಕಂಬಾರ ಅವರ ಆಶೆಯ ಹಂಪಿ ಕೇವಲ ವಿಜಯನಗರ ರಾಜಕೀಯ ಸಾಮ್ರಾಜ್ಯ ಆಳಿದ ಜಾಗ ಮಾತ್ರವಲ್ಲ. ಇದು ಈ ಭಾಗದ ದೈವ ವಿರೂಪಾಕ್ಷನೂ ಅವನ ಹೆಂಡತಿ ಹಂಪಮ್ಮ ಇರುವ ದೈವ ಸಾಮ್ರಾಜ್ಯ ಕೂಡ. ರಾಜಕೀಯ ಸಾಮ್ರಾಜ್ಯ ಅಳಿದು ಹೋದರೂ, ಜನಸಾಮಾನ್ಯರ ಅದಿದೈವವಾದ ವಿರೂಪಾಕ್ಷನು ಇನ್ನೂ ಆಳ್ವಿಕೆ ನಡೆಸುತ್ತಿರುವ ಜಾಗ. ಇಲ್ಲಿ ಅನೇಕ ಕವಿಗಳು, ಪಂಡಿತರು, ಸಂತರು ಆಗಿ ಹೋಗಿರುವ ಜಾಗ. ಇದು ರಾಜಪ್ರಭುತ್ವದ ಆಶ್ರಯದಲ್ಲಿ ತನ್ನ ಪಾಂಡಿತ್ಯವನ್ನು ತೋರಿದ ಮಾಧವ ಸಾಮಣರು ಇದ್ದ ಜಾಗವು ಹೌದು. ರಾಜರನ್ನು ಕುರಿತು ಬರೆಯಲಾರೆ ಎಂದು ಪ್ರತಿಜ್ಞೆ ಮಾಡಿ ಸಾಮಾನ್ಯರಲ್ಲಿ ಕಾವ್ಯದ ನಾಯಕರನ್ನಾಗಿಸಿಕೊಂಡ ಹರಿಹರನ ಜಾಗವು ಹೌದು. ಇಂಥ ಪರಿಸರದಲ್ಲಿ ಕನ್ನಡ ವಿಶ್ವವಿದ್ಯಾಲಯವು ತಲೆಯತ್ತಲು ಪ್ರಾರಂಭವಾಯಿತು.

ಕರ್ನಾಟಕ ಸಂಸ್ಕೃತಿಯ ತಲಸ್ಪರ್ಶಿಯಾದ ಅಭ್ಯಾಸ ಕನ್ನಡ ಸಂಸ್ಕೃತಿಯ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಕ್ಷೇತ್ರಕ್ಕೆ ತನ್ನನ್ನು ಸಜ್ಜುಗೊಳಿಸತೊಡಗಿತು. ಇದಕ್ಕಾಗಿ ಡಾ. ಚಂದ್ರಶೇಖರ್ ಕಂಬಾರ ಅವರು ನಾಡಿನ ವಿವಿಧ ಭಾಗಗಳಿಂದ ವಿದ್ವಾಂಸರನ್ನು ಕರೆಯಿಸಿ ಕಾರ್ಯಕ್ರಮ ಮಾಡಿದರು. ಹಂಪಿಯ ವಿಶ್ವವಿದ್ಯಾಲಯ ಒಂದು ವಿಶಾಲವಾದ ಒಂದು ಸಾಂಸ್ಕೃತಿಕ ಅವಶ್ಯಕತೆಯನ್ನು ಪೂರೈಸಲು ಮಾತ್ರ ಜನ್ಮ ತಳೆಯಿತು. ಇದು ಪದವಿ ನೀಡುವ ಕೆಲಸ ಮಾಡುವ, ರಾಜ್ಯದಲ್ಲಿ ಉಳಿದ ವಿಶ್ವವಿದ್ಯಾಲಯಗಳ ಜೊತೆ ಸ್ಪರ್ಧೆ ಮಾಡುವುದಿಲ್ಲ. ಇದು ಸಂಶೋಧನೆ ಕಾರ್ಯವಾಗಿರುವ ವಿಶ್ವವಿದ್ಯಾಲಯ. ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಂಶೋಧನೆಯ ಧ್ಯೇಯ ಕರ್ನಾಟಕದ ಬಗ್ಗೆ ಸಮಗ್ರ ತಿಳುವಳಿಕೆ ಕಡೆಗೆ ಒಯ್ಯುವಂತಾಗಿದೆ. ೧೨ನೆಯ ಶತಮಾನದ ಶರಣರು ತಮ್ಮ ಆಧ್ಯಾತ್ಮಿಕ ಅನುಭಾವ ಅಭಿವ್ಯಕ್ತಿಗೆ ಕನ್ನಡವನ್ನು ಉಪಯೋಗಿಸಿ ಅದಕ್ಕೊಂದು ಅಪೂರ್ವವಾದ ಶಕ್ತಿಯನ್ನು ತಂದುಕೊಡುತ್ತಾರೆ. ಹೀಗೆ ಕನ್ನಡವನ್ನು ಹೊಸ ಹೊಸ ಗಾನವನ್ನು ಅಭಿವ್ಯಕ್ತಿಗೊಳಿಸಲು ಶಕ್ತವಾಗುವಂತೆ, ಸಜ್ಜುಗೊಳಿಸುವಂತೆ ಕೆಲಸ ಮಾಡುವುದು ವಿಶ್ವವಿದ್ಯಾಲಯದ ಉದ್ದೇಶವಾಗಿತ್ತು.

ಜಾಗತೀಕರಣ ಪ್ರಕ್ರಿಯೆ ಆರಂಭಗೊಂಡ ಕಾಲದಲ್ಲಿ ಪ್ರಾದೇಶಿಕ ಭಾಷೆಯ ಹೆಸರಲ್ಲಿ ಆರಂಭವಾಗಿದ್ದು ಸಾಂಕೇತಿಕವಾಗಿದೆ. ಕನ್ನಡಿಗರು ಆಧುನಿಕ ವಿಜ್ಞಾನ ತಂತ್ರಜ್ಞಾನ ಇವುಗಳನ್ನೆಲ್ಲಾ ಇಂಗ್ಲೀಷ್ ಭಾಷೆಯಿಂದ ಕಲಿಯುತ್ತಿರುವರು. ಸಾಹಿತ್ಯ, ಕಲೆ, ತತ್ವಜ್ಞಾನ, ರಾಜಕೀಯ, ಸಮಾಜಶಾಸ್ತ್ರಗಳಿಗೆ ಇಂಗ್ಲಿಷ್‌ನ ಜೊತೆಗೆ ಕನ್ನಡವನ್ನು ಉಪಯೋಗಿಸುತ್ತಾ. ಇಂಗ್ಲಿಷ್ ಕನ್ನಡಕ್ಕೆ ಜಗತ್ತನ್ನು ನೋಡುವ ತಾಯಿಯು ಹೌದು. ಜೊತೆಗೆ ದೃಷ್ಟಿಕೋನವನ್ನು ತಿಳುವಳಿಕೆಯ ವಿಧಾನವನ್ನು ಕೊಡುವ ಭಾಷೆಯೂ ಹೌದು. ಈ ಹಿನ್ನೆಲೆಯಲ್ಲಿ ಕನ್ನಡವು ತನ್ನದೇ ಆದ ಶಾಸ್ತ್ರ ವಿಧಾನಗಳನ್ನು ರೂಪಿಸಲು ಕಲಿಯಬೇಕೆಂಬುದು ವಿಶ್ವವಿದ್ಯಾಲಯದ ಉದ್ದೇಶವಾಗಿತ್ತು. ಇದು ಕೇವಲ ಭಾಷಾ ಮಾಧ್ಯಮದ ಸವಾಲು ಮಾತ್ರವಾಗಿರದೇ ಹೊಸ ಅಧ್ಯಯನ ವಿಧಾನಗಳನ್ನು ಹುಟ್ಟಿಸುವ ಸವಾಲು ಕೂಡ ಆಗಿತ್ತು. ಕನ್ನಡವು ತನ್ನ ಪರಂಪರೆಯಿಂದ ಶಕ್ತಿಯನ್ನು ಪಡೆದುಕೊಳ್ಳುವಂತೆಯೆ ಹೊಸ ತಲೆಮಾರಿನ ಜನರಿಗೆ ಹೊಸಗತ್ಯಗಳನ್ನು ಪೂರೈಸುವ ಭಾಷೆಯ ಆಗಬೇಕಾಗಿದೆ.

ಕನ್ನಡಿಗರು ಕನ್ನಡದಲ್ಲಿಯೇ ಸ್ವತಂತ್ರವಾಗಿ ಆಲೋಚನೆ ಮಾಡುವ, ಅಭಿವ್ಯಕ್ತಿಸುವ ಸಾಮರ್ಥ್ಯ ಪಡೆಯುವಂಥ ಪರಿಸರ ನಿರ್ಮಾಣ ಮಾಡಬೇಕಾಗಿದೆ. ಈ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಏಕಾಂಗಿಯಾಗಿ ಮಾಡುವುದಿಲ್ಲ. ಬದಲಿಗೆ ನಾಡಿನ ಅತ್ಯುತ್ತಮವಾದ ಎಲ್ಲಾ ಮನಸ್ಸುಗಳ ಸಹಯೋಗದಲ್ಲಿ ಮಾಡಬೇಕಿದೆ. ಇದು ಕನ್ನಡ ವಿಶ್ವವಿದ್ಯಾಲಯದ ಮುಂದೆ ಇರುವ ಸಾಂಸ್ಕೃತಿಕ ಹೊಣೆಗಾರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಮುಂದಿದ್ದ ಉದ್ದೇಶಗಳು ಹೀಗಿದ್ದವು.

ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಉನ್ನತ ಮಟ್ಟದ ಸಂಶೋಧನಾ ಕೇಂದ್ರವಾಗಿ ಕೆಲಸ ಮಾಡುವುದು. ತನ್ನ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಲು ಅಪೇಕ್ಷಿಸುವ ಭಾರತದೊಳಗೆ ಅಥವಾ ಹೊರಗೆ ವಾಸಿಸುತ್ತಿರುವವರಿಗೆ ತರಬೇತಿ ನೀಡುವುದು. ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಆಧರಿಸಿ ಬೆಳೆದ ಸಾಹಿತ್ಯ, ಸಂಗೀತ, ಸಂಸ್ಕೃತಿ, ರಂಗಭೂಮಿ, ಜಾನಪದ, ಚಿತ್ರಕಲೆ, ಸಮಾಜ ವಿಜ್ಞಾನ, ಧರ್ಮ, ತತ್ವಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಉಚ್ಚ ಶಿಕ್ಷಣ ಮತ್ತು ಸಂಶೋಧನೆಗೆ ಅನುಕೂಲತೆಗಳಿವೆ. ಈ ಉದ್ದೇಶಗಳಿಗೆ ಹೊಂದಿಕೊಳ್ಳುವಂತಹ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಇತರ  ಭಾಷೆಗಳಲ್ಲಿರುವ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸುವುದು ಮತ್ತು ಕನ್ನಡದಲ್ಲಿರುವ ಪುಸ್ತಕಗಳನ್ನು ಇತರ ಭಾಷೆಗಳಿಗೆ ಭಾಷಾಂತರಿಸುವುದು. ತಾಳೆಗರಿಯಲ್ಲಿರುವ ಹಸ್ತಪ್ರತಿಗಳು ಪ್ರಾಚೀನವಾದ ಅಪೂರ್ವ ಪುಸ್ತಕಗಳನ್ನು ಸಂರಕ್ಷಿಸಿಡುವುದು, ಪ್ರಕಟಿಸುವುದು. ಅವುಗಳ ವ್ಯಾಖ್ಯಾನಕಾರ್ಯ ಮಾಡುವುದು, ಕನ್ನಡ ಭಾಷೆ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿ ಕನ್ನಡಿಗರ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳಿಗಾಗಿ ಶೋಧನೆ ನಡೆಸುವುದು, ಅವುಗಳನ್ನು ಸಂಗ್ರಹಿಸುವುದು. ಅದರ ಸಂಶೋಧನೆ ಆಧಾರದ ಮೇಲಿನ ನಿರ್ಣಯದೊಂದಿಗೆ ಅವುಗಳನ್ನು ಪ್ರಕಟಿಸುವುದು, ಕರ್ನಾಟಕದಲ್ಲಿರುವ ಕನ್ನಡಿಗರಿಂದ ಮತ್ತು ಭಾರತದ ಇತರ ಭಾಗಗಳಲ್ಲಿರುವ ಮತ್ತು ಇತರ ದೇಶಗಳಲ್ಲಿ ವಾಸಿಸುವ ಕನ್ನಡಿಗರಿಂದ ಬಳಸಲಾದ ಕನ್ನಡ ಪದಗಳು, ಅಭಿವ್ಯಕ್ತಿಗಳು, ಆಡು ನುಡಿಗಳು, ಕೈಗಾರಿಕೆಗಳು ಕೃಷಿಗೆ ಸಂಬಂಧಪಟ್ಟ ವಿಶಿಷ್ಟ ಪದಗಳನ್ನು ಸಂಗ್ರಹಿಸುವುದು ಮತ್ತು ಪ್ರಕಟಿಸುವುದು. ಮುಂದಿನ ವೈಜ್ಞಾನಿಕ ಬೆಳವಣಿಗೆಗಳ ದೃಷ್ಟಿಯಲ್ಲಿಟ್ಟುಕೊಂಡು ಪ್ರಾಚೀನ ಕಾಲದಲ್ಲಿನ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿನ ಸಂಶೋಧನೆಗಾಗಿ ಏರ್ಪಾಟುಮಾಡುವುದು.

ಅಭಿವೃದ್ಧಿಶೀಲ ವಿಶ್ವದಲ್ಲಿರುವ ಎಲ್ಲಾ ಶೈಕ್ಷಣಿಕ ಕ್ಷೇತ್ರಗಳನ್ನು ತನ್ನಲ್ಲಿ ಅಡಕ ಮಾಡಿಕೊಂಡಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಸಂಬಂಧಪಟ್ಟಂತೆ ಸಂಶೋಧನೆಗೆ ಏರ್ಪಾಟು ಮಾಡುವುದು. ಆ ಬಗ್ಗೆ ಕಾರ್ಯವಿಧಾನವನ್ನು ನಿರ್ಧರಿಸುವುದು. ಅದಕ್ಕಾಗಿ ಸೂಕ್ತ ಮಾರ್ಗವನ್ನು ಕಂಡುಕೊಳ್ಳುವುದು. ಭಾರತೀಯ ಸಂಸ್ಕೃತಿಗೆ ಸಂಬಂಧಪಟ್ಟಂತೆ, ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಅಧ್ಯಯನವನ್ನು ಪ್ರಾರಂಭಿಸುವುದು. ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರವೃತ್ತಿಗಳ ಆಳವಾದ ತಿಳುವಳಿಕೆ ಆಧಾರದ ಮೇಲೆ ಉಚ್ಚ ಶಿಕ್ಷಣ ಮತ್ತು ಸಂಶೋಧನಾ ಕಾರ್ಯಗಳನ್ನು ಸಂಘಟಿಸುವುದು, ಪ್ರಾಚೀನ ಕನ್ನಡ ಸಂಸ್ಕೃತಿಗಳನ್ನು ಪುನರುಜ್ಜೀವನಗೊಳಿಸುವ, ಪುನರ್‌ಶೋಧನೆ ಮಾಡುವ ದೃಷ್ಟಿಯಿಂದ ಪುರಾತತ್ವ ಶಾಸ್ತ್ರವನ್ನು ಎಲ್ಲಾ ವಿವಿಧ ಅಂಶಗಳ ಬಗ್ಗೆ ಉತ್ತೇಜನ ನೀಡುವುದು. ಮುಂದಿನ ಸಂಶೋಧನೆಗೆ ಅನುಕೂಲ ಮಾಡಿಕೊಡುವುದಕ್ಕಾಗಿ ರಾಜ್ಯದಲ್ಲಿಯೇ ಸ್ಮಾರಕಗಳನ್ನು ಕಾಪಾಡುವುದು. ಕತೆ, ವಾಸ್ತುಶಿಲ್ಪ, ಶಿಲ್ಪಕಲೆ, ವರ್ಣಚಿತ್ರ, ಪ್ರತಿಮಾಶಾಸ್ತ್ರ, ಶಾಸನಶಾಸ್ತ್ರ, ರಂಗಭೂಮಿ, ನೃತ್ಯ, ಸಂಗೀತ, ಬುಡಕಟ್ಟು ಕಲೆ, ಧರ್ಮ, ಜೀವನ, ತತ್ವಜ್ಞಾನ, ಸಾಮಾಜಿಕ ಆಂಧೋಲನ ಮುಂತಾದವುಗಳ ಮೂಲಕ ವ್ಯಕ್ತವಾಗಿರುವ ಕನ್ನಡ ಸಂಸ್ಕೃತಿಕ ಸಂಯೋಜಿಸುವುದು ಸಾಂಪ್ರದಾಯಿಕ ಬುಡಕಟ್ಟು, ಜನಪದ ಕಲೆ, ಪುಸ್ತಕ ಕಲೆಗಳನ್ನು ದಾಖಲೆ ಹಿಡಿದು ಕೊಂಡು ವಿಶ್ಲೇಷಿಸುವುದು ಮತ್ತು ಸಂರಕ್ಷಿಸುವುದು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಆಧುನಿಕ ಮುನ್ನಡೆಗೆ ಸಂಬಂಧಪಟ್ಟಂತೆ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಅಭಿವೃದ್ಧಿಗೊಳಿಸುವುದು. ಇತರ ದ್ರಾವಿಡ ಮತ್ತು ಇತರ ಭಾರತೀಯ ಭಾಷೆಗಳೊಂದಿಗೆ ಕನ್ನಡ ತೌಲನಿಕ ಅಧ್ಯಯನವನ್ನು ಬೆಳೆಸುವುದು, ಉತ್ಕೃಷ್ಟ ಮಾದರಿಯ ವಸ್ತುಗಳನ್ನು, ಕರ್ನಾಟಕದ ಕಲಾ ಕೃತಿಗಳನ್ನು ಸಂಗ್ರಹಿಸುವುದರಲ್ಲೂ ಒಂದು ಸಣ್ಣ ಸಂಗ್ರಹಾಲಯವನ್ನು ನಿರ್ಮಿಸುವುದು.

೨೩-೧೦-೧೯೯೧ ರಿಂದ ಪ್ರಾರಂಭವಾದ ಕನ್ನಡ ವಿಶ್ವವಿದ್ಯಾಲಯವು ೧೯೯೫ ರಿಂದ ನುಡಿಹಬ್ಬವನ್ನು ನೆರವೇರಿಸುತ್ತಾ ಬಂದಿದೆ. ಈ ನುಡಿಹಬ್ಬದಲ್ಲಿ ಬಹಳ ಮುಖ್ಯವಾಗಿ ನಾಡುನುಡಿ ಹಾಗೂ ಪುಸ್ತಕಗಳ ಬಿಡುಗಡೆ, ಘಟಿಕೋತ್ಸವ ಮತ್ತು ನಮ್ಮ ಹಬ್ಬ ಕುರಿತ ವಿಶೇಷ ಕಾರ್ಯಕ್ರಮಗಳು ನೆರವೇರುತ್ತವೆ. ಘಟಿಕೋತ್ಸವದ ಸಂದರ್ಭದಲ್ಲಿ ಆಯಾ ಕಾಲದಲ್ಲಿದ್ದ ಮಾನ್ಯ ಕುಲಪತಿಗಳು ಕನ್ನಡ ಸಾರ್ವಭೌಮತ್ವ ಕುರಿತು ತಮ್ಮ ಕನಸಿನ ಆಯಾಮಗಳನ್ನು ಹಾಗೂ ಸಾಕಾರಗೊಂಡ ಅಂಶಗಳನ್ನೊಳಗೊಂಡ ಸ್ವಾಗತ ಭಾಷಣಗಳನ್ನು ಮಾಡುವುದು ನಿಯಮ. ಈ ಹಿನ್ನೆಲೆಯಲ್ಲಿ ಮಾನ್ಯ ಕುಲಪತಿಗಳು ಮಾಡಿದಂತಹ ಭಾಷಣಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದೇನೆ. ಈ ಕಾರ್ಯಕ್ಕೆ ಆಶೀರ್ವದಿಸಿ ಕೆಲಸ ಮಾಡಲು ಪ್ರೇರೇಪಿಸಿದ ಸನ್ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಹಾಗೂ ಈ ಕಾರ್ಯದಲ್ಲಿ ನೆರವಾದ ಡಾ. ವೀರೇಶ ಬಡಿಗೇರ, ಡಾ. ಹೆಚ್.ಡಿ. ಪ್ರಶಾಂತ, ಡಾ. ಮೀನಾಕ್ಷಿ ಪಲ್ಲಾಗಟ್ಟೆ, ಶ್ರೀ ಕೆ.ಎಲ್. ರಾಜಶೇಖರ್, ಶ್ರೀ ಸುಜ್ಞಾನಮೂರ್ತಿ, ಶ್ರೀ ಸುರೇಶ, ಡಾ. ವಿ.ಸಿ. ಮಾರುತಿ ಹಾಗೂ ಪ್ರಸಾರಾಂಗ, ಆಡಳಿತಾಂಗ ಹಾಗೂ ಅಧ್ಯಯನಾಂಗದ ಸ್ನೇಹಿತರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

ಡಾ. ಮಂಜುನಾಥ ಬೇವಿನಕಟ್ಟಿ
ಕುಲಸಚಿವರು