ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಟಿ.ಎನ್. ಚತುರ್ವೇದಿ ಅವರೇ, ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರೂ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಡಿ. ಎಚ್. ಶಂಕರಮೂರ್ತಿ ಅವರೇ, ಕನ್ನಡ ವಿಶ್ವವಿದ್ಯಾಲಯದ ೧೫ನೇ ನುಡಿಹಬ್ಬದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಕನ್ನಡದ ಹಿರಿಯ ಧೀಮಂತ ಪತ್ರಕರ್ತರೂ ಸ್ವಾತಂತ್ರ್ಯ ಹೋರಾಟಗಾರರೂ ಕರ್ನಾಟಕ ಏಕೀಕರಣದ ರೂವಾರಿಗಳೂ ಆಗಿರುವ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರೇ, ಈ ನುಡಿಹಬ್ಬದಲ್ಲಿ ನಾಡೋಜ ಗೌರವ ಪದವಿಗಳನ್ನು ಸ್ವೀಕರಿಸಲು ಒಪ್ಪಿಕೊಂಡು ದಯಮಾಡಿಸಿರುವ ಕನ್ನಡದ ಹಿರಿಯ ಕವಿ ಕರ್ನಾಟಕ ಏಕೀಕರಣದ ಹೋರಾಟಗಾರ ಡಾ. ಕಯ್ಯಾರ ಕಿಞ್ಙಣ್ಣ ರಯ ಅವರೇ, ಕನ್ನಡ ಸಾಹಿತ್ಯ ಹಿರಿಯ ಲೇಖಕಿ ಹಾಗೂ ಕನ್ನಡಿಗರ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಡಾ. ಸರೋಜಿನಿ ಮಹಿಷಿ ಅವರೇ, ಹಿರಿಯ ನಾಟಕಕಾರ ಜಾನಪದ ವಿದ್ವಾಂಸ ಹಾಗೂ ಕರ್ನಾಟಕ ಏಕೀಕರಣದ ಸಾಂಸ್ಕೃತಿಕ ಶಕ್ತಿಯಾಗಿರುವ ಶ್ರೀ ಮುದೇನೂರ ಸಂಗಣ್ಣ ಅವರೇ, ಕನ್ನಡ ಸಂಶೋಧನೆಗೆ ಅಪೂರ್ವ ಕೊಡುಗೆಯನ್ನು ಕೊಟ್ಟಿರುವ ಜೈನ ಸಂಸ್ಕೃತಿಯ ಮಹತ್ವದ ಶೋಧಕರೂ ಸಂಘಟಕರೂ ಆಗಿರುವ ಡಾ. ಹಂಪ. ನಾಗರಾಜಯ್ಯ ಅವರೇ, ಜನಪದ ಮಹಾಕಾವ್ಯಗಳ ಅಪೂರ್ವ ಭಂಡಾರವಾಗಿ, ಮೌಖಿಕ ಪರಂಪರೆಯ ಶ್ರೇಷ್ಠ ಪ್ರತಿನಿಧಿಯಾಗಿರುವ ಶ್ರೀಮತಿ ಬುರ್ರಕಥಾ ಈರಮ್ಮ ಅವರೇ, ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿ ಸದಸ್ಯರೇ, ಈ ಪರಿಸರದ ಎಲ್ಲಾ ಪ್ರತಿನಿಧಿಗಳೇ; ಮಾಧ್ಯಮದ ಗೆಳೆಯರೇ, ಕನ್ನಡ ವಿಶ್ವವಿದ್ಯಾಲಯದ ಕೂಡುಕುಟುಂಬದ ನನ್ನ ಪ್ರೀತಿಯ ಬಂಧುಗಳೇ, ಆಹ್ವಾನಿತರೇ ಮತ್ತು ಸ್ನೇಹಿತರೇ.

ಕನ್ನಡ ವಿಶ್ವವಿದ್ಯಾಲಯದ ೧೫ನೇ ನುಡಿಹಬ್ಬಕ್ಕೆ ತಮ್ಮೆಲ್ಲರನ್ನು ಆದರ ಅಭಿಮಾನಿಗಳಿಂದ ಬರಮಾಡಿಕೊಳ್ಳಲು ಆನಂದ ಪಡುತ್ತೇನೆ.

ಘನತೆವೆತ್ತ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀ ಟಿ.ಎನ್. ಚರ್ತುವೇದಿ ಅವರು ಈ ನುಡಿಹಬ್ಬದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆಗಳನ್ನು ಕೊಟ್ಟಿರುವ ಐದು ಮಂದಿ ಹಿರಿಯರಿಗೆ ನಾಡೋಜ ಗೌರವ ಪದವಿಗಳನ್ನು ಮತ್ತು ಅರ್ಹ ಅಭ್ಯರ್ಥಿಗಳಿಗೆ ಡಿ.ಲಿಟ್. ಮತ್ತು ಪಿಎಚ್.ಡಿ. ಪದವಿಯನ್ನು ನೀಡಲು ಒಪ್ಪಿಕೊಂಡು ಬಂದಿರುತ್ತಾರೆ. ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ತಿಳುವಳಿಕೆಯುಳ್ಳ ಮಾನವಿಕ ಕಾಳಜಿಯುಳ್ಳ ಹಿರಿಯ ಮುತ್ಸದ್ಧಿಯಾಗಿರುವ ಘನತೆವೆತ್ತ ಕುಲಾಧಿಪತಿಗಳ ಮಾರ್ಗದರ್ಶನ ಮತ್ತು ಬೆಂಬಲದಿಂದ ಕನ್ನಡ ವಿಶ್ವವಿದ್ಯಾಲಯವು ಬಹುಮುಖ ಪ್ರಗತಿಯನ್ನು ಸಾಧಿಸುತ್ತಿದೆ. ಘನತೆವೆತ್ತ ಕುಲಾಧಿಪತಿಗಳಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಗೌರವಪೂರ್ವಕ ಸ್ವಾಗತ ಕೋರುತ್ತೇನೆ. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರೂ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಡಿ.ಎಚ್. ಶಂಕರಮೂರ್ತಿ ಅವರು ಈ ನುಡಿಹಬ್ಬದಲ್ಲಿ ಪಾಲ್ಗೊಂಡು ಎಂ.ಫಿಲ್ ಪದವೀಧರರಿಗೆ ಪದವಿ ಪ್ರದಾನ ಮಾಡಲಿದ್ದಾರೆ. ನಮ್ಮ ವಿಶ್ವವಿದ್ಯಾಲಯಕ್ಕೆ ನಿರಂತರ ಮಾರ್ಗದರ್ಶನ ನೀಡುತ್ತಿರುವ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀ. ಡಿ.ಎಚ್. ಶಂಕರಮೂರ್ತಿ ಅವರಿಗೆ ಗೌರವ ಪೂರ್ವಕ ಸ್ವಾಗತವನ್ನು ಕೋರುತ್ತೇನೆ. ಈ ವರ್ಷದ ನುಡಿಹಬ್ದಲ್ಲಿ ಮುಖ್ಯ ಅತಿಥಿಗಳಾಗಿ ಭಾಷಾಣ ಮಾಡಲು ಕನ್ನಡದ ಹಿರಿಯ ಧೀಮಂತ ಪತ್ರಕರ್ತರು, ಭಾರತ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಏಕೀಕರಣದ ರೂವಾರಿಗಳು ಆಗಿರುವ ನಾಡೋಜ ಪಾಟೀಲ ಪುಟ್ಟಪ್ಪನವರು ಆಗಮಿಸಿದ್ದಾರೆ. ಪ್ರಪಂಚ, ಸಂಗಮ, ವಿಶ್ವವಾಣಿ, ಮನೋರಮ, ಸ್ತ್ರೀ ಇಂತಹ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳನ್ನು ಹೊರತಂದು ಕರ್ನಾಟಕದ ಸಾಂಸ್ಕೃತಿಕ, ರಾಜಕೀಯ ಬೆಳವಣಿಗೆಗೆ ಅಪಾರವಾದ ಕೊಡುಗೆಗಳನ್ನು ಕೊಟ್ಟಿದ್ದಾರೆ. ನನ್ನದು ಈ ಕನ್ನಡ ನಾಡು, ನಮ್ಮದು ಈ ಭರತ ಭೂಮಿ, ಕರ್ನಾಟಕದ ಕಥೆಯಂತಹ ಕೃತಿಗಳು ಪಾಪು ಅವರ ಭಾಷಾಭಿಮಾನ ಮತ್ತು ದೇಶಾಭಿಮಾನದ ಜೀವಂತ ನಿದರ್ಶನಗಳು. ಉತ್ತಮ ಸಣ್ಣಕಥೆಗಾರರಾಗಿ, ಅಂಕಣಕಾರರಾಗಿ ಪಾಪು ಪ್ರಪಂಚವನ್ನೇ ನಿರ್ಮಿಸಿದ ಪಾಟೀಲ ಪುಟ್ಟಪ್ಪನವರು ಕರ್ನಾಟಕ ಏಕೀಕರಣದ ದಿಗ್ಗಜರಲ್ಲಿ ಒಬ್ಬರು. ಕರ್ನಾಟಕ ಕಾವಲು ಮತ್ತು ಗಡಿ ಸಲಹಾ ಸಮಿತಿ ಅಧ್ಯಕ್ಷರಾಗಿ ಇವರು ಮಾಡಿರುವ ಕನ್ನಡದ ಹೋರಾಟ ವಿಶೇಷವಾದದ್ದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೭೬), ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್ (೧೯೯೪), ಪತ್ರಿಕಾ ಅಕಾಡೆಮಿ ಪ್ರಶಸ್ತಿ (೧೯೯೩), ಪ್ರಥಮ ಟಿಎಸ್‌ಆರ್ ಪತ್ರಿಕೋದ್ಯಮ ಪ್ರಶಸ್ತಿ (೧೯೯೪), ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿ (೧೯೯೬), ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ (೨೦೦೬) ಅಂತಹ ಅನೇಕ ಗೌರವ ಪ್ರಶಸ್ತಿಗಳನ್ನು ಪಡೆದ, ಕನ್ನಡ ಸಾಹಿತ್ಯ, ಪತ್ರಿಕೋದ್ಯಮದ ಭೀಷ್ಮರೂ ಕರ್ನಾಟಕ ಏಕೀಕರಣದ ಮೂಲಕ ಕನ್ನಡನಾಡಿನ ಸರ್ವತೋಮುಖ ಬೆಳವಣಿಗೆ ಬಗ್ಗೆ ಅಪಾರ ಕಾಳಜಿ ಉಳ್ಳವರೂ ಆದ ನೇರ ನಡೆನುಡಿಯ ನಾಡೋಜ ಪಾಟೀಲ ಪುಟ್ಟಪ್ಪನವರನ್ನು ಈ ಸುವರ್ಣ ಕರ್ನಾಟಕದ ನುಡಿಹಬ್ಬಕ್ಕೆ ಗೌರವ ಆದರಗಳಿಂದ ಸ್ವಾಗತಿಸುತ್ತೇನೆ.

ಸುವರ್ಣ ಕರ್ನಾಟಕದ ಈ ನುಡಿಹಬ್ಬದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ನಾಡೋಜ ಗೌರವ ಪದವಿಗಳನ್ನು ಸ್ವೀಕರಿಸಲು ಬಂದಿರುವ ಐದು ಮಂದಿ ಹಿರಿಯ ಸಾಧಕರು ನಮ್ಮೊಡನೆ ಇದ್ದಾರೆ.

ಡಾ. ಕಯ್ಯಾರ ಕಿಞ್ಞಣ್ಣರೈ ಕಳೆದ ೭೦ ವರ್ಷಗಳಿಂದ ಕನ್ನಡದ ಕವಿಯಾಗಿ, ಅನುವಾದಕರಾಗಿ, ಕನ್ನಡ ಪಠ್ಯಪುಸ್ತಕ ರಚನೆಕಾರರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ ಕರ್ನಾಟಕ ಏಕೀಕರಣದ ನಿರಂತರ ಹೋರಾಟಗಾರರಾಗಿ ವಿಶೇಷ ಸಾಧನೆಯನ್ನು ಮಾಡಿರುವ ಹಿರಿಯರು. ‘ಕಾಸರಗೋಡು ಕನ್ನಡನಾಡು’ ಎನ್ನುವ ದಿವ್ಯಮಂತ್ರವನ್ನು ಇಂದಿಗೂ ಪಠಿಸುತ್ತಿರುವ ಅಪ್ಪಟ ಗಾಂಧಿವಾದಿ ಮತ್ತು ಕನ್ನಡವಾದಿ, ಕವಿ ಡಾ. ಕಯ್ಯಾರ ಕಿಞ್ಞಣ್ಣ ರೈ.

ಡಾ. ಸರೋಜಿನಿ ಮಹಿಷಿ ಅವರು ಕನ್ನಡ ಸಾಹಿತ್ಯದ ಲೇಖಕಿಯಾಗಿ ಸಂಶೋಧಕಿಯಾಗಿ ಕನ್ನಡಪರ ಆಡಳಿತದ ನೇತಾರರಾಗಿ ಭಾರತ ಸರ್ಕಾರದ ಸಚಿವರಾಗಿ ಮಹಿಳಾಪರ ಚಿಂತಕರಾಗಿ ವಿಶೇಷವಾದ ಕೊಡುಗೆಗಳನ್ನು ಕೊಟ್ಟವರು. ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕೊಟ್ಟಿರುವ ಮಹಿಷಿ ವರದಿಯು ಇಂದು ಹೆಚ್ಚು ಪ್ರಸ್ತುತವಾಗಿದೆ. ಕವಯಿತ್ರಿಯಾಗಿ, ಸಂಶೋಧಕರಾಗಿ, ರಾಜಕಾರಣಿಯಾಗಿ, ಹೋರಾಟಗಾರರಾಗಿ, ಕನ್ನಡಿಗರ ಮತ್ತು ಮಹಿಳೆಯರ ಪ್ರಗತಿಗೆ ಅಪೂರ್ವ ಕೊಡುಗೆಗಳನ್ನು ಕೊಟ್ಟವರು ಡಾ. ಸರೋಜಿನಿ ಮಹಿಷಿ ಅವರು.

ಶ್ರೀ ಮುದೇನೂರ ಸಂಗಣ್ಣ ಅವರು ನಾಟಕಕಾರರಾಗಿ, ಜಾನಪದ ವಿದ್ವಾಂಸರಾಗಿ, ರಂಗಭೂಮಿ ತಜ್ಞರಾಗಿ, ಅನುವಾದಕರಾಗಿ, ಕೋಶ ನಿರ್ಮಾಪಕರಾಗಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ವಿಶೇಷವಾಗಿ ಬೆಳೆಸಿದ್ದರು. ಕನ್ನಡ ಸಾಹಿತ್ಯ ಮತ್ತು ಜಾನಪದವನ್ನು ಸಮಾಜವಾದಿ ನೆಲೆಯಲ್ಲಿ ಕಟ್ಟಿದ್ದವರು ಮತ್ತು ವಿಸ್ತರಿಸಿದವರು ಶ್ರೀ ಮುದೇನೂರ ಸಂಗಣ್ಣ ಅವರು ಕನ್ನಡದ ಹಿರಿಯ ಪ್ರಾಧ್ಯಾಪಕರೂ ಸಾಹಿತಿಗಳೂ ಸಂಶೋಧಕರೂ ಸಂಘಟಕರೂ ಆಗಿರುವ ಡಾ. ಹಂಪ ನಾಗರಾಜಯ್ಯ ಅವರು ಭಾಷಾ ವಿಜ್ಞಾನ ಮತ್ತು ಪ್ರಾಚೀನ ಕನ್ನಡ ಕಾವ್ಯಗಳ ಸಂಪಾದನೆಗೆ, ಜೈನ ಸಾಹಿತ್ಯ ಸಂಶೋಧನೆಗೆ ಹೊಸ ಆಯಾಮಗಳನ್ನು ನೀಡಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಮತ್ತು ಸಂಘಟನೆಗಳ ಅಪೂರ್ವ ಸಂಗಮವಾಗಿರುವ ಚೈತನ್ಯದ ಚಿಲುಮೆ ಡಾ. ಹಂಪ ನಾಗರಾಜಯ್ಯ ಅವರು.

ಶ್ರೀಮತಿ ಬುರ್ರಕಥಾ ಈರಮ್ಮನವರು ಪರಿಶಿಷ್ಟ ಜಾತಿಗೆ ಸೇರಿದ ಬುಡಕಟ್ಟು ಅಲೆಮಾರಿ ಜನಾಂಗದವರಾಗಿದ್ದು, ಜನಪದ ಮಹಾ ಕಾವ್ಯಗಳ ಭಂಡಾರವಾಗಿರುವ ಪ್ರತಿಭಾವಂತ ಕಲಾವಿದೆ. ಮೌಖಿಕ ಪರಂಪರೆಯ ಸಾಂಸ್ಕೃತಿಕ ರೂಪಕವಾಗಿರುವ ಬುರ್ರಕಥಾ ಈರಮ್ಮ ಅವರು ಸಾಮಾಜಿಕ ಕಾಳಜಿಯನ್ನು ಬದುಕಿನ ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡುತ್ತಿರುವ ನಡೆದಾಡುವ ಜನಪದ ಮಹಾಕಾವ್ಯ.

ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿ  ಸದಸ್ಯರನ್ನು, ನುಡಿಹಬ್ಬಕ್ಕೆ ಆಗಮಿಸುತ್ತಿರುವ ಮಾನ್ಯ ಜನಪ್ರತಿನಿಧಿಗಳನ್ನು, ಕನ್ನಡ ವಿಶ್ವವಿದ್ಯಾಲಯದ ಪ್ರಗತಿಗೆ ಸದಾ ಬೆಂಬಲವನ್ನು ಕೊಡುತ್ತಿರುವ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮದ ಗೆಳೆಯರನ್ನು, ನಮ್ಮ ವಿಶ್ವವಿದ್ಯಾಲಯದ ಅವಿಭಕ್ತ ಕುಟುಂಬದ ಸದಸ್ಯರಾದ ಅಧ್ಯಾಪಕರು, ಆಡಳಿತ ಸಿಬ್ಬಂದಿಯವರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳನ್ನು ಮತ್ತು ಎಲ್ಲಾ ಆಹ್ವಾನಿತರನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದೇನೆ.

ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳಾಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳನ್ನು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಕಳೆದ ವರ್ಷ ಡಿಸೆಂಬರ್ ೨೦೦೫ ರಿಂದ ಇಂದಿನ ನುಡಿಹಬ್ಬದವರೆಗಿನ ಸುಮಾರು ಹನ್ನೊಂದುವರೆ ತಿಂಗಳ ಅವಧಿಯಲ್ಲಿ ನಮ್ಮ ವಿಶ್ವವಿದ್ಯಾಲಯವು ಬಹುಮುಖಿಯಾಗಿ, ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಬೆಳೆದಿದೆ ಮತ್ತು ವಿಸ್ತಾರಗೊಂಡಿದೆ. ಅವಕಾಶಗಳನ್ನು ಹೊಸತಾಗಿ ರೂಪಿಸುವ ಮತ್ತು ಆವರಿಸಿಕೊಳ್ಳುವ ಕೆಲಸಗಳು ಕನ್ನಡ ನಾಡಿನ ತುಂಬೆಲ್ಲ ಬಹುಬಗೆಗಳಲ್ಲಿ ನಡೆದಿವೆ.

ಕನ್ನಡ ವಿಶ್ವವಿದ್ಯಾಲಯದ ಎಲ್ಲ ಶೈಕ್ಷಣಿಕ ವಿಭಾಗಗಳಲ್ಲಿ ಅಧ್ಯಯನ, ಪ್ರಕಟಣೆ ಮತ್ತು ವಿಸ್ತರಣೆಯ ಚಟುವಟಿಕೆಗಳು ನಿರಂತರವಾಗಿ, ವೈವಿಧ್ಯಮಯವಾಗಿ, ಜನಮುಖಿಯಾಗಿ ನಡೆದಿವೆ. ವಿಚಾರ ಸಂಕಿರಣ, ಕಮ್ಮಟ, ತರಬೇತಿ ಶಿಬಿರ, ವಿಶೇಷ ಉಪನ್ಯಾಸ, ಸಮ್ಮೇಳನ, ವೈಯಕ್ತಿಕ ಮತ್ತು ಸಾಂಸ್ಥಿಕ ಸಂಶೋಧನ ಯೋಜನೆಗಳು ವರ್ಷದ ಉದ್ದಕ್ಕೂ ವಿಶೇಷವಾಗಿ ನಡೆದಿವೆ. ಕನ್ನಡ ಭಾಷಾಧ್ಯಯನ ವಿಭಾಗದಿಂದ ತೀ.ನಂ.ಶ್ರೀ. ಜನ್ಮಶತಮಾನೋತ್ಸವದ ಅಂಗವಾಗಿ ಕನ್ನಡ ಭಾಷಾಧ್ಯಯನದ ಮುಂದಿನ ಹೆಜ್ಜೆಗಳು, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಹರಿಶ್ಚಂದ್ರ ಚಾರಿತ್ರ್ಯ: ಸಾಂಸ್ಕೃತಿಕ ಮುಖಾಮುಖಿ ಮಲೆಮಾದೇಶ್ವರ, ಇಂಗ್ಲೀಷ್ ಗೀತೆಗಳು: ಸಾಂಸ್ಕೃತಿಕ ಮುಖಾಮುಖಿ ಎಂಬ ನಾಲ್ಕು ವಿಚಾರ ಸಂಕಿರಣಗಳು; ದ್ರಾವಿಡ ಸಂಸ್ಕೃತಿ ವಿಭಾಗದಿಂದ ಅಭೇರಾಜ್ ಜೈನ ಸಂಸ್ಕೃತಿ ಅಧ್ಯಯನ ಪೀಠದ ಸಹಯೋಗದಲ್ಲಿ ದಕ್ಷಿಣ ಭಾರತದಲ್ಲಿ ಜೈನಧರ್ಮ (ಮೂಡಬಿದರೆ) ಎಂಬ ರಾಷ್ಟ್ರೀಯ ವಿಚಾರ ಸಂಕಿರಣ; ಭಾಷಾಂತರ ಅಧ್ಯಯನ ವಿಭಾಗದಿಂದ ಸಮಾಜವಿಜ್ಞಾನಗಳಲ್ಲಿ ಭಾಷಾಂತರ (ಕಾಸರಗೋಡು) ರಾಷ್ಟ್ರೀಯ ವಿಚಾರಸಂಕಿರಣ, ಡಾ. ಶ್ರೀಕಂಠೇಶಗೌಡರ ಕುರಿತು ವಿಚಾರ ಸಂಕಿರಣ (ಬೆಂಗಳೂರು), ಯುವ ಭಾಷಾಂತರ ಕಮ್ಮಟ (ಕುಂದಾಪುರ)ಗಳನ್ನು ನಡೆಸಲಾಗಿದೆ; ಕನ್ನಡ-ಮರಾಠಿ ಭಾಷಾಂತರ ಪ್ರಕ್ರಿಯೆಗಳು ಎಂಬ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬೆಳಗಾವಿ ಜಿಲ್ಲೆಯ ಹಾರೋಗೇರಿಯಲ್ಲಿ ಏರ್ಪಡಿಸಲಾಗಿದೆ. ಹಸ್ತಪ್ರತಿ ಅಧ್ಯಯನ ವಿಭಾಗದಿಂದ ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನ (ತುಮಕೂರು), ಹಸ್ತಪ್ರತಿ ವಿಭಾಗದ ದಶಮಾನೋತ್ಸವ, ದಕ್ಷಿಣ ಭಾರತೀಯ ಗ್ರಂಥ ಸಂಪಾದನೆ ರಾಷ್ಟ್ರೀಯ ವಿಚಾರಸಂಕಿರಣ ಹಸ್ತಪ್ರತಿ ತರಬೇತಿಯ ಜಾಗೃತಿ ಶಿಬಿರಗಳನ್ನು ನಡೆಸಲಾಗಿದೆ. ದಶಮಾನೋತ್ಸವದ ಅಂಗವಾಗಿ ಹಸ್ತಪ್ರತಿ ಅಧ್ಯಯನಕ್ಕೆ ಸಂಬಂಧಿಸಿದಂತೆ ಹತ್ತು ಪ್ರಕಟಣೆಗಳನ್ನು ಹೊರತರಲಾಗಿದೆ. ಹಸ್ತಪ್ರತಿಗಳ ಸರ್ವೇಕ್ಷಣೆ, ಸೂಚೀಕರಣ ಕಾರ್ಯ ಸಮರ್ಪಕವಾಗಿ ಮುಂದುವರಿದಿದೆ. ಈ ವಿಭಾಗದಲ್ಲಿರುವ ಹಸ್ತಪ್ರತಿ ಸಂಪನ್ಮೂಲ ಕೇಂದ್ರವು ನ್ಯಾಷನಲ್ ಮ್ಯಾನ್‌ಸ್ಕ್ರಿಪ್ಟ್ ಮಿಷನ್ನಿನ ನೆರವಿನಿಂದ ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹ ಮತ್ತು ಜಾಗೃತಿ ಶಿಬಿರಗಳನ್ನು ವ್ಯಾಪಕವಾಗಿ ನಡೆಸಿದೆ. ಮಹಿಳಾ ಅಧ್ಯಯನ ವಿಭಾಗವು ಸ್ತ್ರೀವಾದಿ ಸಂಶೋಧನ ವಿಧಾನಗಳ ಕಮ್ಮಟ ನಡೆಸಿದೆ. ಚರಿತ್ರೆ ವಿಭಾಗವು ಕರ್ನಾಟಕ ಇತಿಹಾಸ ಕಾಂಗ್ರೆಸ್‌ನ ೧೮ನೇ ಅಧಿವೇಶನವನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ವ್ಯವಸ್ಥಿತವಾಗಿ ನಡೆಸಿದ್ದು, ಅದರಲ್ಲಿ ಕರ್ನಾಟಕ ಏಕೀಕರಣ ಕುರಿತು ವಿಶೇಷ ವಿಚಾರ ಸಂಕಿರಣ ಏರ್ಪಡಿಸಿದೆ. ಚರಿತ್ರೆ ವಿಭಾಗದಿಂದ ಪಠ್ಯಪುಸ್ತಕ ರಚನೆ ಕುರಿತು ಕಮ್ಮಟ ಮತ್ತು ಚರಿತ್ರೆ ಪುನರ್ಮನನ ಶಿಬಿರಗಳನ್ನು ನಡೆಸಲಾಗಿದೆ. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದಿಂದ ತಮಿಳು ವಿಶ್ವವಿದ್ಯಾಲಯದ ಸಹಯೋಗದಲ್ಲಿ Recent Discoveries and otheir inpect on South Indian History ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ತಂಜಾವೂರಿನಲ್ಲಿ, ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆಯ ಅಡಿಯಲ್ಲಿ ಹಾನಗಲ್ಲ ಪಟ್ಟಣಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ (ಹಾನಗಲ್ಲ)ವನ್ನು ನಡೆಸಲಾಗಿದೆ. ಕರ್ನಾಟಕ ದೇವಾಲಯ ಕೋಶ (ಧಾರವಾಡ ಜಲ್ಲೆ), ಕರ್ನಾಟಕ ದೇವಾಲಯ ಕೋಶ (ಬಿಜಾಪುರ ಜಿಲ್ಲೆ) ಪ್ರಕಟವಾಗಿದೆ. ಕರ್ನಾಟಕ ದೇವಾಲಯ ಕೋಶ (ಗದಗ) ಯೋಜನೆಯನ್ನು ಪೂರ್ಣಗೊಳಿಸಿದೆ. ಗುಲ್ಬರ್ಗಾ, ಬಾಗಲಕೋಟೆ ದೇವಾಲಯ ಕೋಶಗಳು ಪ್ರಗತಿಯಲ್ಲಿವೆ. ಶಾಸನಶಾಸ್ತ್ರ ವಿಭಾಗದಿಂದ ಬೀದರ ಮತ್ತು ಬಾಗಲಕೋಟೆ ಜಿಲ್ಲೆಯ ಶಾಸನ ಸಂಪುಟಗಳು ಬಿಡುಗಡೆಯಾಗಿವೆ. ಹಾವೇರಿ, ಗುಲ್ಬರ್ಗಾ, ಗದಗ, ಬಿಜಾಪುರ, ಬೆಳಗಾವಿ ಜಿಲ್ಲೆಗಳ ಶಾಸನ ಸಂಪುಟಗಳು ಪ್ರಗತಿಯಲ್ಲಿವೆ. ಶೃಂಗೇರಿ ಮಹಾ ಸಂಸ್ಥಾನ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶೃಂಗೇರಿಯಲ್ಲಿ ನಡೆಸಲಾಗಿದೆ. ಅಭಿವೃದ್ಧಿ ಅಧ್ಯಯನ ವಿಭಾಗದಿಂದ ಪ್ರಾಥಮಿಕ ಶಾಲಾ ಸಮಾಜವಿಜ್ಞಾನ ಶಿಕ್ಷಕರ ಕಮ್ಮಟ (ದೇವದುರ್ಗ), ಪ್ರಾಥಮಿಕ ಶಿಕ್ಷಕರಿಗೆ ಲಿಂಗಸಂಬಂಧಿ ಕಮ್ಮಟ (ದೇವದುರ್ಗ) ಗ್ರಾಮೀನ ಪೊಲೀಸರಿಗೆ ಮಾನವ ಹಕ್ಕುಗಳ ಕಮ್ಮಟ (ಕೊಪ್ಪಳ), ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣದ ಗತಿಶೀಲತೆ ಕುರಿತು ಮೂರು ದಿನಗಳ ವಿಚಾರ ಸಂಕಿರಣ, ಕರ್ನಾಟಕ ದಲಿತ ವಿಮೋಚನೆಯ ಮಾನವ ಹಕ್ಕುಗಳ ಸಂಸ್ಥೆಯ ಸಹಯೋಗದೊಂದಿಗೆ ದಲಿತ ಪಂಚಾಯತ್ ಸದಸ್ಯರಿಗೆ ಪಂಚಾಯತ್ ಕಾರ್ಯ ವಿಧಾನ ಕುರಿತು ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಜಾನಪದ ಅಧ್ಯಯನ ವಿಭಾಗದಿಂದ ಗ್ರೀನ್ ಪ್ರತಿಷ್ಠಾನದ ಸಹಯೋಗದೊಂದಿಗೆ ಅಪೂರ್ವ ದೇಶಿ ಬೀಜಗಳ ಪ್ರದರ್ಶನ ಮತ್ತು ಸಂವಾದದ ಬೀಜ ಸಂರಕ್ಷಕರ ಜಾತ್ರೆಯನ್ನು ನಡೆಸಲಾಗಿದೆ. ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಯುಜಿಸಿ ಪ್ರಾಯೋಜಿತ ವಿಶೇಷ ಸಹಾಯ ಯೋಜನೆಯಡಿಯಲ್ಲಿ ಕರ್ನಾಟಕದ ಐವತ್ತು ಬುಡಕಟ್ಟುಗಳ ಅಧ್ಯಯನ ಮುಂದುವರೆದಿದೆ. ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ಬುಡಕಟ್ಟು ಸಂಶೋಧನ ಸಂಸ್ಥೆಯ ಸಹಯೋಗದಲ್ಲಿ ಗಿರಿಜನ ಆಶ್ರಮ ಶಾಲಾ ಶಿಕ್ಷಕರ ತರಬೇತಿ ಶಿಬಿರಗಳು (ಮೂರು), ಬುಡಕಟ್ಟು ಯುವಕ-ಯುವತಿಯರಿಗಾಗಿ ಜಾಗೃತಿ ಶಿಬಿರಗಳು (ಮೂರು), ಬುಡಕಟ್ಟು ಮಹಿಳಾ ಸದಸ್ಯರ ತರಬೇತಿ ಶಿಬಿರಗಳು (ಎರಡು), ಬುಡಕಟ್ಟು ಮಾಹಿತಿ ಸಂಪನ್ಮೂಲ ಶಿಬಿರ (ಒಂದು) ಇಂತಹ ಹನ್ನೊಂದು ಶಿಬಿರಗಳನ್ನು ನಡೆಸಲಾಗಿದೆ. ಇದರಲ್ಲಿ ಸುಮಾರು ಮುನ್ನೂರಕ್ಕೂ ಮೇಲ್ಪಟ್ಟು ಕರ್ನಾಟಕದ ಬೇರೆ ಬೇರೆ ಬುಡಕಟ್ಟುಗಳ ಯುವಕ-ಯುವತಿಯರು ಭಾಗವಹಿಸಿದ್ದಾರೆ. ಇದರೊಂದಿಗೆ ವಿಭಾಗದ ಅಧ್ಯಾಪಕರು ಕರ್ನಾಟಕ ಬುಡಕಟ್ಟುಗಳ ಕುಲ ಶಾಸ್ತ್ರೀಯ ಅಧ್ಯಯನ, ಕರ್ನಾಟಕ ಬುಡಕಟ್ಟು ಮಹಿಳೆ, ಅರಣ್ಯವಾಸಿ ಬುಡಕಟ್ಟುಗಳ ಅಧ್ಯಯನ ಬುಡಕಟ್ಟುಗಳು ಮತ್ತು ನಕ್ಸಲಬಾರಿ ಯೋಜನೆಗಳನ್ನು ಆರಂಭಿಸಿ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದ ಕಲ್ಯಾಣ ನಿರ್ದೇಶನಾಲಯದ ಆಶ್ರಯದಲ್ಲಿ ದೇವರಾಜ ಅರಸು ಸಂಶೋಧನ ಕೇಂದ್ರದ ಕೋರಿಕೆಯಂತೆ ಅರೆಅಲೆಮಾರಿ ಸಮುದಾಯಗಳಿಗೆ ಸೇರಿದ ಕುಣಬಿ, ಬುಂಡೆಬೆಸ್ತ, ಸಿಕ್ಕಲಿಗಾರ, ಗೌಳಿಗ, ಹೆಳವ ಸಮುದಾಯದ ಅಧ್ಯಯನಗಳನ್ನು ಪೂರ್ಣಗೊಳಿಸಲಾಗಿದೆ. ದೃಶ್ಯಕಲಾ ವಿಭಾಗದಿಂದ ಕರ್ನಾಟಕ ಚಿತ್ರಕಲೆ ವಿಚಾರ ಸಂಕಿರಣ, ನಿಸರ್ಗಚಿತ್ರ ರಚನೆಯ ಕಾರ್ಯಾಗಾರ ಮತ್ತು ಕಲಾ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಬಾದಾಮಿಯಲ್ಲಿರುವ ಶಿಲ್ಪ ಮತ್ತು ವರ್ಣಚಿತ್ರಕಲಾ ವಿಭಾಗದಿಂದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಬಾಗಲಕೋಟೆ ಜಿಲ್ಲಾಡಳಿತದ ಸಹಯೋಗದೊಂದಿಗೆ ಚಾಲುಕ್ಯ ಶಿಲ್ಪರಚನಾ ಶಿಬಿರ ನಡೆಸಲಾಗಿದೆ. ನುಡಿಹಬ್ಬದ ಸಂದರ್ಭದಲ್ಲಿ ಬಾದಾಮಿಯ ಮತ್ತು ದೃಶ್ಯಕಲಾ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಶಿಲ್ಪವನದ ಇನ್ನಷ್ಟು ಬಂಡೆಗಳಿಗೆ ಆಕಾರ, ಬಣ್ಣ ಮತ್ತು ಜೀವವನ್ನು ತುಂಬಿದ್ದಾರೆ. ಅದ್ಭುತ ಸೃಜನಶೀಲ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕುಪ್ಪಳ್ಳಿಯಲ್ಲಿರುವ ಕನ್ನಡ ಅಧ್ಯಯನ ಕೇಂದ್ರವನ್ನು ಭೌತಿಕವಾಗಿ ಮತ್ತು ಶೈಕ್ಷಣಿಕವಾಗಿ ವಿಸ್ತರಿಸಲಾಗಿದ್ದು, ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದಿಂದ ಸ್ಥಳಾವಕಾಶವನ್ನು ಪಡೆದು ಕುವೆಂಪು ಗ್ರಂಥಾಲಯವೊಂದನ್ನು ರೂಪಿಸಲಾಗಿದೆ. ಕುವೆಂಪು ತಂತ್ರಾಂಶ ಅಭಿವೃದ್ಧಿಗಾಗಿ ಪ್ರತ್ಯೇಕ ಕೊಠಡಿ ಮತ್ತು ಉಪಕರಣಗಳನ್ನು ಜೋಡಿಸಿ ಘಟಕವೊಂದನ್ನು ಸ್ಥಾಪಿಸಲಾಗಿದೆ. ಕುವೆಂಪು ದೃಶ್ಯ ಶ್ರವ್ಯ ದಾಖಲಾತಿ ಕೇಂದ್ರವನ್ನು ಮುಂದಿನ ವರ್ಷ ಸ್ಥಾಪಿಸಲಾಗುವುದು.

ಯುಜಿಸಿ ಆರ್ಥಿಕ ನೆರವಿನೊಂದಿಗೆ ಸ್ಥಾಪಿತವಾದ ಮಹಿಳಾ ಅಧ್ಯಯನ ಕೇಂದ್ರದಿಂದ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯನ್ನು ಪ್ರಕಟಿಸಲಾಗಿದೆ. ಮಹಿಳೆಯ ಸಬಲೀಕರಣದ ಭಾಗವಾಗಿ ವಿಶ್ವವಿದ್ಯಾಲಯದ ಪರಿಸರದ ಗ್ರಾಮೀಣ ಪ್ರದೇಶದಲ್ಲಿ ಆರು ಸ್ವಸಹಾಯ ಗುಂಪುಗಳನ್ನು ಕಟ್ಟಲಾಗಿದೆ. ಹೊಸದಾಗಿ ಇನ್ನೂ ಆರು ಮಹಿಳಾ ಸ್ವಸಹಾಯ ಗುಂಪುಗಳನ್ನು ಕಟ್ಟಲು ಕ್ರಮ ಕೈಗೊಳ್ಳಲಾಗಿದೆ. ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಜಾಗೃತಿ ಶಿಬಿರವನ್ನು ನಡೆಸಲಾಗಿದೆ. ಗ್ರಾಮೀಣ ಮಹಿಳೆಯರಿಗಾಗಿ ಮಹಿಳಾ ಆರೋಗ್ಯ ಮತ್ತು ಚಿಕಿತ್ಸಾ ಶಿಬಿರಗಳನ್ನು ಕೇಂದ್ರದ ವತಿಯಿಂದ ನಡೆಸಲಾಗುತ್ತಿದೆ. ಈ ಕೇಂದ್ರದಿಂದ ಸುಮಾರು ೭೦೦ ಮಹಿಳೆಯರು ಪ್ರಯೋಜನವನ್ನು ಪಡೆದಿದ್ದಾರೆ. ಮಹಿಳಾ ಕೇಂದ್ರದ ವತಿಯಿಂದ ಸಂತಾನೋತ್ಪತ್ತಿ ಕೇಂದ್ರ ಸ್ಥಾಪಿಸಲಾಗಿದ್ದು ವಾರದಲ್ಲಿ ಎರಡು ದಿನ ಕಮಲಾಪುರದ ಆರೋಗ್ಯ ಕೇಂದ್ರದ ವತಿಯಿಂದ ಚಿಕಿತ್ಸೆಯನ್ನು ಕೊಡಲಾಗುತ್ತಿದೆ. ಮಹಿಳಾ ಅಧ್ಯಯನದ ವಿಷಯ ವಿಶ್ವಕೋಶವನ್ನು ಆರಂಭಿಸಲಾಗಿದ್ದು, ಈ ಕುರಿತು ತಜ್ಞರ ಶಿಬಿರವೊಂದು ಕಳೆದ ವಾರವಷ್ಟೇ ನಡೆದಿದೆ. ಮಹಿಳಾ ಅಧ್ಯಯನ ಪೂರಕ ಸಾಹಿತ್ಯದ ದೃಷ್ಟಿಯಿಂದ ಇಪ್ಪತ್ತು ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಆರಂಭಿಸಲಾಗಿದೆ. ಮಹಿಳಾ ಅಧ್ಯಯನ ಪಾರಿಭಾಷಿಕ ಪದಕೋಶ ಈ ವರ್ಷ ಆರಂಭಿಸುವ ಇನ್ನೊಂದು ಮಹತ್ವದ ಯೋಜನೆ, ವಿಶ್ವವಿದಾಲಯದ ಭಾಷಾಂತರ ಕೇಂದ್ರದಿಂದ ಆರಂಭಿಸಲಾಗಿದ್ದ ಐನೂರು ವಚನಗಳ ಇಂಗ್ಲಿಷ್ ಭಾಷಾಂತರ ಮತ್ತು ಆಯ್ದ ಕನ್ನಡ ಮೌಖಿಕ ಕಾವ್ಯಗಳ ಇಂಗ್ಲಿಷ್ ಭಾಷಾಂತರ ಎಂಬ ಎರಡು ಯೋಜನೆಗಳು ಪೂರ್ಣಗೊಂಡಿದ್ದು, ಪ್ರಕಟಣೆಗೆ ಸಿದ್ಧವಾಗಿವೆ. ಕನಕದಾಸರ ರಾಮಧಾನ್ಯಚರಿತೆ, ನಳಚರಿತೆ, ಆಯ್ದ ಕೀರ್ತನೆಗಳ ಇಂಗ್ಲಿಷ್ ಭಾಷಾಂತರ ಯೋಜನೆ ಪೂರ್ಣಗೊಂಡಿದ್ದು ಪ್ರಕಟಣೆಗೆ ಸಿದ್ಧವಾಗಿವೆ. ಬರುವ ಜನವರಿಯಲ್ಲಿ ಈ ಮೂರು ಮಹತ್ವದ ಪ್ರಕಟಣೆಗಳು ಹೊರಬರಲಿವೆ. ಮುಂದಿನ ವರ್ಷ ವಡ್ಡಾರಾಧನೆ ಹಾಗೂ ಸರ್ವಜ್ಞ ವಚನಗಳ ಇಂಗ್ಲಿಷ್ ಭಾಷಾಂತರಗಳು ಪೂರ್ಣಗೊಳ್ಳಲಿವೆ.

ದೂರಶಿಕ್ಷಣ ಕೇಂದ್ರವು ಪ್ರಾದೇಶಿಕ ಅಧ್ಯಯನ ಕೇಂದ್ರಗಳನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ತೆರೆಯುವ ಮೂಲಕ ಕನ್ನಡ ಮಾಧ್ಯಮದಲ್ಲಿ ಕನ್ನಡ, ಚರಿತ್ರೆ, ಪತ್ರಿಕೋದ್ಯಮ ಮತ್ತು ಮಾಧ್ಯಮ ಶಿಕ್ಷಣ ಎಂಬ ಸ್ನಾತಕೋತ್ತರ ಕೋರ್ಸ್‌ಗಳನ್ನು ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಡಿಪ್ಲೋಮಾ ಕೋರ್ಸ್‌ಗಳನ್ನು ಜನಪ್ರಿಯಗೊಳಿಸಲಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ ಪ್ರೊ. ಡೇವಿಡ್ ವಾಶ್‌ಬ್ರೂಕ್ ಅವರು ದೂರಶಿಕ್ಷಣ ಕೇಂದ್ರದ ವತಿಯಿಂದ ದಕ್ಷಿಣ ಏಷ್ಯಾ ಅಧ್ಯಯನದ ಹೊಸ ಪ್ರವೃತ್ತಿಗಳು ಎಂಬ ವಿಶೇಷ ಉಪನ್ಯಾಸವನ್ನು ನೀಡಿದ್ದಾರೆ.

ಲೋಹಿಯಾ ಅಧ್ಯಯನ ಪೀಠದಿಂದ ಲೋಹಿಯಾವಾದಿ ಚಳುವಳಿಗಾರರ ಸಂದರ್ಶನ ಸಂಪುಟ, ಸಂಡೂರು ಭೂ ಹೋರಾಟ, ಹೆಬ್ಬಲ್ಳಿ ಭೂ ಹೋರಾಟ, ಲೋಹಿಯಾ ಜೀವನ ಮತ್ತು ಕಾರ್ಯ ಎಂಬ ಯೋಜನೆಗಳು ಪೂರ್ಣಗೊಂಡಿದ್ದು ಈ ವರ್ಷ ಅವು ಪ್ರಕಟಗೊಳ್ಳುತ್ತವೆ. ಜೈನಸಂಸ್ಕೃತಿ ಅಧ್ಯಯನ ಪೀಠವು ಮೂಡುಬಿದರೆಯಲ್ಲಿ ದಕ್ಷಿಣ ಭಾರತದಲ್ಲಿ ಜೈನಧರ್ಮ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಿದೆ. ಶಂಬಾ ಜೋಶಿ ಅಧ್ಯಯನ ಪೀಠದಿಂದ ಸಂಶೋಧನ ಕಮ್ಮಟವನ್ನು ನಡೆಸಲಾಗಿದೆ ಮತ್ತು ಅಧ್ಯಯನ ವಿಧಿವಿಧಾನಗಳು ಎಂಬ ಪುಸ್ತಕವನ್ನು ಪ್ರಕಟಣೆಗೆ ಸಿದ್ಧಪಡಿಸಲಾಗಿದೆ. ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ದಲಿತರು, ಭಾಷೆ ಮತ್ತು ಸಮಾಜ ಎಂಬ ವಿಚಾರ ಸಂಕಿರಣ (ಬೆಂಗಳೂರು)ವನ್ನು ನಡೆಸಲಾಗಿದೆ; ದಲಿತರು ಮತ್ತು ಪರ್ಯಾಯ ರಾಜಕಾರಣ ಎಂಬ ಗ್ರಂಥ ಪ್ರಕಟಿಸಲಾಗಿದೆ. ವಾಲ್ಮೀಕಿ ಅಧ್ಯಯನ ಪೀಠದಿಂದ ಕರ್ನಾಟಕದ ಬೇಡ ಸಮುದಾಯ: ಚರಿತ್ರೆ ಮತ್ತು ಸಂಸ್ಕೃತಿ ಎಂಬ ವಿಚಾರ ಸಂಕಿರಣ (ಕೂಡ್ಲಿಗಿ)ವನ್ನು ನಡೆಸಲಾಗಿದೆ. ಕರ್ನಾಟಕದಲ್ಲಿ ತಳವಾರಿಕೆ, ತರೀಕೆರೆ ಪಾಳೆಗಾರ ಸರ್ಜಪ್ಪನಾಯಕನ ಕಥನಕಾವ್ಯ, ಕಾಮಗೇತಿ ವಂಶಜರ ಚರಿತ್ರೆ, ವಾಲ್ಮೀಕಿ ಸಮುದಾಯದ ಪ್ರಾತಃಸ್ಮರಣೀಯರು ಎಂಬ ನಾಲ್ಕು ಗ್ರಂಥಗಳನ್ನು ಪ್ರಕಟಿಸಲಾಗಿದೆ.

ಕನ್ನಡ ಸಂಶೋಧನೆಗೆ ಸಂಬಂಧಿಸಿದಂತೆ ಸಿರಿಗನ್ನಡ ಗ್ರಂಥಾಲಯದಲ್ಲಿ ಆರಂಭಿಸಲಾದ ಸಂಶೋಧನಾ ಕರ್ನಾಟಕ ಪೂರ್ಣಗೊಂಡಿದ್ದು ರಾಜ್ಯ, ಹೊರರಾಜ್ಯಗಳ ಒಟ್ಟು ಐವತ್ತಾರು ವಿಶ್ವವಿದ್ಯಾಲಯಗಳಿಂದ ೬೬೦ ಸೂಕ್ಷ್ಮಾತಿ ಸೂಕ್ಷ್ಮ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ೭೪೭೨ ಸಂಶೋಧನಾ ಮಾಹಿತಿಗಳನ್ನು ಕಂಪ್ಯೂಟರ್ ಜಾಲಕ್ಕೆ ಅಳವಡಿಸಲಾಗಿದೆ. ಕನ್ನಡ ಮತ್ತು ಕನ್ನಡತ್ವಕ್ಕೆ ಸಂಬಂಧಿಸಿದ ಈ ಮಾಹಿತಿಯನ್ನು ಹೊಸ ವರ್ಷದ ಆರಂಭದಲ್ಲಿ ಅಂತರ್‌ಜಾಲದಲ್ಲಿ ಸಂಶೋಧಕರ ಬಳಕೆಗೆ ತೆರೆಯಲಾಗುತ್ತದೆ. ವಿಶ್ವವಿದ್ಯಾಲಯದ ಮಾಹಿತಿ ಕೇಂದ್ರದಲ್ಲಿ ಕಳೆದ ವರ್ಷ ಆರಂಭಿಸಲಾದ ಕರ್ನಾಟಕದ ಕಲಾವಿದರು, ಕರ್ನಾಟಕದ ಬರಹಗಾರರು, ಕರ್ನಾಟಕದ ಜಲಸಂಪತ್ತು, ಕರ್ನಾಟಕದ ಪ್ರಾಣಿಪಕ್ಷಿಗಳು ಎನ್ನುವ ಯೋಜನೆಗಳು ಹೆಚ್ಚಿನ ಪ್ರಗತಿಯನ್ನು ಸಾಧಿಸಿದ್ದು, ಈ ಅಪೂರ್ವ ಮಾಹಿತಿಯನ್ನು ದತ್ತಕಣಜದಲ್ಲಿ ಸಂಗ್ರಹಿಸಿ ಇಡಲಾಗಿದೆ. ಮುಂದಿನ ವರ್ಷದಲ್ಲಿ ಇವನ್ನು ಅಂತರ್ಜಾಲದಲ್ಲಿ ಕನ್ನಡಿಗರಿಗೆ ಸಮರ್ಪಿಸುವ ಕಾರ್ಯ ನಡೆಯಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ ಮತ್ತು ಹಿಂದುಳಿದ ವರ್ಗಗಳ ಘಟಕಗಳು ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ; ಅರಿವಿನ ಶಿಬಿರ ಮತ್ತು ಸಂವಾದ ಗೋಷ್ಠಿಗಳನ್ನು ನಡೆಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದಿಂದ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಪ.ಜಾ ಮತ್ತು ಪ.ಪಂ., ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ತರಬೇತಿ ಶಿಬರ ಏರ್ಪಡಿಸಲಾಗಿದೆ. ಇದರಲ್ಲಿ ಮೂವರು ವಿದ್ಯಾರ್ಥಿಗಳು ಮುಖ್ಯಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ರಾಷ್ಟ್ರೀಯ ಮಟ್ಟದ ರಾಜೀವ್‌ಗಾಂಧಿ ಶಿಷ್ಯವೇತನವು ಪ.ಜಾ ಮತ್ತು ಪ.ಪಂ., ಹಿಂದುಳಿದವರ್ಗದ ಮೂವರು ವಿದ್ಯಾರ್ಥಿಗಳಿಗೆ ದೊರೆತಿದೆ. ಯುಜಿಸಿಯ ರಾಷ್ಟ್ರೀಯ ಅರ್ಹತಾ ಘಟಕವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೂರು ತಂಡಗಳು ತರಬೇತಿ ಪಡೆದಿದ್ದು, ಒಂದು ತಂಡದ ತರಬೇತಿ ಈಗ ನಡೆಯುತ್ತಿದೆ. ಇಲ್ಲಿ ತರಬೇತಿಗೊಂಡ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಶೇಕಡ. ೮೦ ರಷ್ಟು ಫಲಿತಾಂಶವನ್ನು ತಂದಿದ್ದಾರೆ. ಮತ್ತು ಇಬ್ಬರು ವಿದ್ಯಾರ್ಥಿಗಳು ಜೆ.ಆರ್.ಎಫ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಷ್ಯವೇತನ ಪಡೆಯುತ್ತಿದ್ದಾರೆ. ಅಕ್ಷರ ಗ್ರಂಥಾಲಯದ ಸಂಪೂರ್ಣ ಗಣಕೀಕರಣ ಕಾರ್ಯ ಈ ವರ್ಷ ಪೂರ್ಣಗೊಳ್ಳುತ್ತದೆ. ವಸ್ತು ಸಂಗ್ರಹಾಲಯದ ವತಿಯಿಂದ ಕ್ಷೇತ್ರಕಾರ್ಯ, ದತ್ತಿ ಉಪನ್ಯಾಸವನ್ನು ನಡೆಸುತ್ತಿದೆ.

ನಮ್ಮ ಪ್ರಸಾರಾಂಗವು ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು ೬೨ ಪುಸ್ತಕಗಳನ್ನು ಈ ವರ್ಷ ಪ್ರಕಟಿಸಿದೆ. ನಿನ್ನೆ ತಾನೇ ೩೨ ಪುಸ್ತಕಗಳು ಬಿಡುಗಡೆಯಾಗಿವೆ. ಈ ದಿನ ಬೆಳಿಗ್ಗೆ ಘನತೆವೆತ್ತ ರಾಜ್ಯಪಾಲರು ನಮ್ಮ ಪ್ರತಿಷ್ಠಿತ ಗ್ರಂಥವಾದ ಪ್ರಾಣಿಪಕ್ಷಿ ಸಂಪುಟವನ್ನು ಲೋಕಾರ್ಪಣೆ ಮಾಡಿದ್ದಾರೆ. ವಿಜ್ಞಾನ ಮತ್ತು ಸಮಾಜವಿಜ್ಞಾನಕ್ಕೆ ಸಂಬಂಧಪಟ್ಟ ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳು, ಕನ್ನಡದ ಶ್ರೇಷ್ಠ ಆಕರಗ್ರಂಥಗಳಾದ ಜನಪದ ನುಡಿಗಟ್ಟುಗಳ ಕೋಶ, ಕರ್ನಾಟಕದ ನಾಥಪಂಥ, ಮೌಖಿಕ ಕಥನ, ಕೇರಳ ಕಥನ, ಹಂಪಿ ಸಂಪುಟ, ದಲಿತ ಕಥನ, ದಲಿತ ಅಧ್ಯಯನ, ದಲಿತರು ಮತ್ತು ಚರಿತ್ರೆ, ಕನ್ನಡ ಶೈಲಿ ಕೈಪಿಡಿ, ಗೋಣಿ ಬಸಪ್ಪನ ಕಾವ್ಯ, ಜೀರ್ಣ ವಿಜಯನಗರ ದರ್ಶನಂ ಎಂಬ ಮಹತ್ವಪೂರ್ಣ ಗ್ರಂಥಗಳು ಹೊರಬಂದಿವೆ. ವಿಜ್ಞಾನ ಸಂಗಾತಿ ಮಾಸಪತ್ರಿಕೆಯು ಹೊಸರೂಪ ಮತ್ತು ವೈವಿಧ್ಯಮಯ ವಿಷಯಗಳೊಂದಿಗೆ ಮತ್ತೆ ಪ್ರಕಟವಾಗಿ ಓದುಗರ ಮೆಚ್ಚುಗೆಯನ್ನು ಗಳಿಸಿದೆ.

ಸುವರ್ಣ ಕರ್ನಾಟಕದ ಅಂಗವಾಗಿ ಕರ್ನಾಟಕ ಗೆಜೆಟಿಯರ್ ಇಲಾಖೆಯ ನೆರವಿನಲ್ಲಿ ಸುವರ್ಣ ಕರ್ನಾಟಕ ಸಾಹಿತ್ಯ-ಸಂಸ್ಕೃತಿ ಪಥ, ಅಭಿವೃದ್ಧಿ ಪಥ, ಬೃಹತ್ ಕರ್ನಾಟಕ ಎಂಬ ಮೂರು ಬೃಹತ್ ಸಂಪುಟಗಳ ಕಾರ್ಯ ಮುಗಿದಿದ್ದು, ಮುದ್ರಣ ಪ್ರಕ್ರಿಯೆಯಲ್ಲಿವೆ. ಸಮಗ್ರ ಜೈನ ಸಾಹಿತ್ಯ ಮಾಲೆಯ ಇಪ್ಪತ್ತು ಬೃಹತ್ ಸಂಪುಟಗಳ ಸಂಪಾದನೆ ಮತ್ತು ಮುದ್ರಣಕಾರ್ಯ ಮುಗಿದಿದ್ದು, ಲೋಕಾರ್ಪಣೆಗೆ ಸಿದ್ಧವಾಗಿವೆ. ಸುವರ್ಣ ಕರ್ನಾಟಕದ ನೆನಪಿಗಾಗಿ ಕನ್ನಡವನ್ನು ಕಟ್ಟಿದ ಹಿರಿಯ ಸಾಹಿತಿಗಳ ಹೊಸ ಪುಸ್ತಕಗಳ ಪ್ರಕಟಣೆ ಹೊನ್ನಾರು ಮಾಲೆಯಲ್ಲಿ ೪೦ ಪುಸ್ತಕಗಳನ್ನು ಹೊರತರಲು ಯೋಜಿಸಲಾಗಿದ್ದು, ೨೦ ಹಸ್ತಪ್ರತಿಗಳು ಮುದ್ರಣ ಹಂತದಲ್ಲಿವೆ. ಸುವರ್ಣ ಕರ್ನಾಟಕದ ಅರಿವಿನಂಗಣ ಮಾಲೆಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ೨೦ ಹಸ್ತಪ್ರತಿಗಳು ಪ್ರಕಟನೆಗೆ ಸಿದ್ಧವಾಗುತ್ತಿವೆ. ಈ ವರ್ಷ ಪ್ರಸಾರಾಂಗವು ಪುಸ್ತಕ ಸಂಸ್ಕೃತಿ ಯಾತ್ರೆಯ ಮೂಲಕ ೩೦ ಲಕ್ಷ ರೂಪಾಯಿಗಳ ಮಾರಾಟವನ್ನು ಮಾಡಿ ದಾಖಲೆಯನ್ನು ನಿರ್ಮಿಸಿದೆ. ಮುಂದಿನ ಪ್ರಕಟಣೆಯಲ್ಲಿ ಭಾಷೆ ವಿಶ್ವಕೋಶ, ತುಳು ಸಾಹಿತ್ಯ ಚರಿತ್ರೆ, ಪರಿಸರ ಕೋಶ, ಶಾಸನ ಸಂಪುಟಗಳು, ದೇವಾಲಯ ಕೋಶಗಳು, ಹಸ್ತಪ್ರತಿಸೂಚಿಗಳು, ಮಹಿಳಾ ವಿಶ್ವಕೋಶ, ದೇಜಗೌ ಅವರ ಕುವೆಂಪು ದರ್ಶನ, ಸಿಂಪಿ ಲಿಂಗಣ್ಣ ಅವರ ಜನಪದ ಸಾಹಿತ್ಯ ಸಂಪುಟಗಳು ಸಿದ್ಧಗೊಂಡು ಹೊರಬರಲಿವೆ.

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕನ್ನಡವನ್ನು ಸಮರ್ಥವಾಗಿ ಬಳಸುವ ದೃಷ್ಟಿಯಿಂದ ಕಳೆದ ಒಂದು ವರ್ಷದಿಂದ ಕುವೆಂಪು ತಂತ್ರಾಂಶ ಅಭಿವೃದ್ಧಿ ಕಾರ್ಯ ಸಮರ್ಪಕವಾಗಿ ನಡೆದಿದ್ದು ಇನ್ನೊಂದು ತಿಂಗಳಲ್ಲಿ ಇದನ್ನು ಸಾರ್ವಜನಿಕ ಉಪಯೋಗಕ್ಕೆ ತೆರೆದಿಡಲಾಗವುದು. ಅಕ್ಷರ ವಿನ್ಯಾಸದ ವೈವಿಧ್ಯ, ಕೀಲಿಮಣೆಯ ಸಾಧ್ಯತೆಗಳು, ತಂತ್ರಾಂಶಗಳ ನಡುವಿನ ಪರಿವರ್ತಕಗಳು, ಅಂಚಿನ ವಿನ್ಯಾಸದ ಹೊಸ ರೂಪಗಳು ಈ ತಂತ್ರಾಂಶದಲ್ಲಿ ಲಭ್ಯವಾಗಲಿವೆ.

ಕನ್ನಡ ವಿಶ್ವವಿದ್ಯಾಲಯವು ದಕ್ಷಿಣ ಏಷ್ಯಾ ಭಾಷಾ ವಿಶ್ಲೇಷಣೆ (SALA) ಎನ್ನುವ ಸಂಸ್ಥೆಯ ೨೬ನೇ ಅಂತಾರಾಷ್ಟ್ರೀಯ ಭಾಷಾ ಸಮ್ಮೇಳನವನ್ನು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಸಹಯೋಗದಲ್ಲಿ ಮೈಸೂರಿನಲ್ಲಿ ಇದೇ ಡಿಸೆಂಬರ್ ೧೯, ೨೦, ೨೧ ರಂದು ನಡೆಸಲಿದೆ. ಇದರಲ್ಲಿ ಭಾರತದ ಭಾಷಾತಜ್ಞರ ಜೊತೆಗೆ ಸುಮಾರು ೧೫ಕ್ಕೂ ಹೆಚ್ಚಿನ ಬೇರೆ ಬೇರೆ ದೇಶಗಳ ವಿದ್ವಾಂಸರು ಭಾಗವಹಿಸುತ್ತಿದ್ದಾರೆ. ಬರುವ ಜನವರಿ ೧೯, ೨೦, ೨೧ ರಂದು ಭವಿಷ್ಯದ ಸುವರ್ಣ ಕರ್ನಾಟಕ ಎನ್ನುವ ಮೂರು ದಿನಗಳ ರಾಷ್ಟ್ರೀಯ ಅಭಿವೃದ್ಧಿ ಸಂವಾದವನ್ನು ಅಭಿವೃದ್ಧಿ ಅಧ್ಯಯನ ವಿಭಾಗದಿಂದ ಹಮ್ಮಿಕೊಳ್ಳಲಾಗಿದೆ. ಪೆಬ್ರವರಿ ಕೊನೆಯ ವಾರದಲ್ಲಿ ‘ಸಾಂವಿಧಾನಿಕ ಚೌಕಟ್ಟು ಮತ್ತು ದಲಿತ ಆಂದೋಲನ’ ಎಂಬ ರಾಷ್ಟ್ರೀಯ ವಿಚಾರಸಂಕಿರಣವನ್ನು ನಡೆಸಲಾಗುವುದು. ಗ್ರಾಮೀನ ಜನರ ಸಹಭಾಗಿತ್ವದೊಂದಿಗೆ ಜನಾಯೋಜನೆ ರೂಪಿಸುವ ಮಾದರಿಯನ್ನು ಅಭಿವೃದ್ಧಿ ಅಧ್ಯಯನ ವಿಭಾಗ ಸಿದ್ಧಪಡಿಸಿದ್ದು, ಈ ಮಾದರಿಯನ್ನು ಕರ್ನಾಟಕ ಸರ್ಕಾರದ ಗ್ರಾಮೀನ ಉದ್ಯೋಗ ಖಾತರಿ ಕಾರ್ಯಕ್ರಮ ಮತ್ತು ಪಂಚಾಯಿತಿಗಳಿಗೆ ಯೋಜನೆ ಸಿದ್ಧಪಡಿಸಲು ಬಳಸಲಾಗುತ್ತಿದೆ. ಬರುವ ಜನವರಿ ೨ನೇ ವಾರದಲ್ಲಿ ದ್ರಾವಿಡ ಸಂಸ್ಕೃತಿ ಅಧ್ಯಯನದ ವಿಭಾಗದ ಮೂಲಕ ದಕ್ಷಿಣ ಭಾರತದ ಜನಪದ ರಂಗಭೂಮಿ ಎನ್ನುವ ರಾಷ್ಟ್ರೀಯ ವಿಚಾರಸಂಕಿರಣ ಮತ್ತು ಕಲಾಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರು ತಮ್ಮ ಸಂಶೋಧನೆ, ಪ್ರಕಟಣೆ ಮತ್ತು ಸಾಹಿತ್ಯ ನಿರ್ಮಾಣದ ಮೂಲಕ ಬೌದ್ಧಿಕವಾಗಿ ಮನ್ನಣೆಯನ್ನು ಪಡೆದಿದ್ದಾರೆ. ಪ್ರೊ. ಲಕ್ಷ್ಮಣ್ ತೆಲಗಾವಿ ಅವರಿಗೆ ಭಾರತ ದಲಿತ ಸಾಹಿತ್ಯ ಅಕಾಡೆಮಿಯ ಡಾ. ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ, ಡಾ. ಎಚ್. ನಾಗವೇಣಿ ಅವರಿಗೆ ಭಾರತೀಸುತ ಕಥಾ ಪ್ರಶಸ್ತಿ ಮತ್ತು ಯು.ಆರ್. ಅನಂತಮೂರ್ತಿ ಸಾಹಿತ್ಯ ಪ್ರಶಸ್ತಿ, ಪ್ರೊ. ವಿ.ಎಸ್. ಬಡಿಗೇರ ಅವರಿಗೆ ಉತ್ತರ ಕರ್ನಾಟಕದ ಶ್ರೇಷ್ಠ ಯುವಸಾಹಿತಿ ಪ್ರಶಸ್ತಿ, ಪ್ರೊ. ಎಫ್.ಟಿ. ಹಳ್ಳಿಕೇರಿ ಅವರಿಗೆ ಕಂಠಪತ್ರ ಕೃತಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ ದೊರೆತಿವೆ. ಡಾ. ಮೊಗಳ್ಳಿ ಗಣೇಶ್ ಅವರು ಸಾಹಿತ್ಯ ಅಕಾಡೆಮಿ ನವದೆಹಲಿಯ ಯೋಜನೆಯಡಿ ಅಕ್ಟೋಬರ್ ೨೦೦೬ ರಂದು ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಲೇಖಕರ ಮೇಳ, ಫ್ರಾಂಕ್‌ಫರ‍್ಟ್ ಪುಸ್ತಕ ಮೇಳದಲ್ಲಿ ಲೇಖಕರಾಗಿ  ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ಒಂದು ತಿಂಗಳ ಅವಧಿಯಲ್ಲಿ ಸಾಹಿತ್ಯ, ಸಂಸ್ಕೃತಿ, ಚರಿತ್ರೆಗೆ ಸಂಬಂಧಿಸಿದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪ್ರೊ. ಕರೀಗೌಡ ಬೀಚನಹಳ್ಲಿ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಕರ್ನಾಟಕ ಸರ್ಕಾರವು ನಾಮನಿರ್ದೇಶನ ಮಾಡಿದೆ.

ದಕ್ಷಿಣ ಭಾರತದ ಭಾಷಾ ವಿಶ್ವವಿದ್ಯಾಲಯಗಳಾದ ಕನ್ನಡ ವಿಶ್ವವಿದ್ಯಾಲಯ, ತಮಿಳು ವಿಶ್ವವಿದ್ಯಾಲಯ, ತೆಲುಗು ವಿಶ್ವವಿದ್ಯಾಲಯ, ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯ ಇವು ನಮ್ಮ ಸಹಯೋಗದ ಕಾರ್ಯಕ್ರಮಗಳನ್ನು ಮುಂದುವರಿಸಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ಸಭೆ ಸೇರಿ ತಮ್ಮ ಮುಂದಿನ ಕಾರ್ಯಯೋಜನೆಯನ್ನು ರೂಪಿಸಲಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಹತ್ತು ಮಂದಿ ಅಧ್ಯಾಪಕರಿಗೆ ಯು.ಜಿ.ಸಿಯ ಬೃಹತ್ ಸಂಶೋಧನ ಯೋಜನೆಗಳು ಮತ್ತು ಮೂವರು ಅಧ್ಯಾಪಕರಿಗೆ ಯು.ಜಿ.ಸಿ. ಕಿರು ಸಂಶೋಧನ ಯೋಜನೆಗಳು ಈ ವರ್ಷ ದೊರೆತಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಪ್ರೊ. ಹಿ.ಚಿ. ಬೋರಲಿಂಗಯ್ಯ ಪ್ರೊ. ರಹಮತ್ ತರೀಕೆರೆ, ಪ್ರೊ. ಎಚ್.ಎಸ್. ಶ್ರೀಮತಿ, ಪ್ರೊ. ಸ.ಚಿ.ರಮೇಶ್, ಪ್ರೊ. ಎಫ್.ಟಿ.ಹಳ್ಳಿಕೇರಿ, ಪ್ರೊ. ಟಿ. ವಿಠಲರಾವ್ ಗಾಯಕ್ವಾಡ್, ಡಾ. ಶಿವಾನಂದ ವಿರಕ್ತಮಠ, ಡಾ.ಕೆ. ರವೀಂದ್ರನಾಥ, ಡಾ. ಎಸ್.ಡಿ.ಹರಿಶ್ಚಂದ್ರ, ಡಾ. ಗಂಗಾಧರ ದೈವಜ್ಞ ಇವರಿಗೆ ಬೃಹತ್ ಸಂಶೋಧನ ಯೋಜನೆಗಳು ಮತ್ತು ಡಾ. ಎಚ್.ಡಿ. ಪ್ರಶಾಂತ್, ಡಾ. ವೆಂಕಟೇಶ ಇಂದ್ವಾಡಿ, ಡಾ. ಡಿ.ವಿ. ಪರಮಶಿವಮೂರ್ತಿ ಇವರಿಗೆ ಕಿರುಸಂಶೋಧನೆ ಯೋಜನೆಗಳು ಯು.ಜಿ.ಸಿ.ಯಿಂದ ದೊರೆತಿವೆ. ಕರ್ನಾಟಕ ರಾಜ್ಯದಲ್ಲಿ ಅಧ್ಯಾಪಕರಿಗೆ ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನ ಯೋಜನೆಗಳು ದೊರೆತಿರುವುದು ಒಂದು ದಾಖಲೆಯಾಗಿದೆ ಎಂದು ತಿಳಿಸಲು ಅಭಿಮಾನಪಡುತ್ತೇವೆ. ಯು.ಜಿ.ಸಿ.ಯು ನಮ್ಮ ವಿಶ್ವವಿದ್ಯಾಲಯದಲ್ಲಿ ಸಮಗ್ರ ಸೌಲಭ್ಯಗಳುಳ್ಳ ಸುಸಜ್ಜಿತ ಕಂಪ್ಯೂಟರ್ ಕೇಂದ್ರವೊಂದನ್ನು ಸ್ಥಾಪಿಸಲು ಅನುದಾನವನ್ನು ಕೊಡುವ ಪ್ರಸ್ತಾವ ಅನುಮೋದನೆ ಗೊಂಡಿದೆ.

ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದಲ್ಲಿ ಭೌತಿಕ ಸೌಕರ್ಯಗಳನ್ನು ಈ ವರ್ಷ ಇನ್ನಷ್ಟು ವಿಸ್ತರಿಸಲಾಗಿದೆ. ಯು.ಜಿ.ಸಿ. ಅನುದಾನದಿಂದ ನಿರ್ಮಿಸಲಾದ ವಿದ್ಯಾರ್ಥಿನಿಯರ ನಿಲಯದ ಹೊಸ ಕಟ್ಟಡ ಪೂರ್ಣಗೊಂಡಿದೆ. ಯು.ಜಿ.ಸಿ. ಅನುದಾನ ರೂ. ೪೯ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ವಿದ್ಯಾರ್ಥಿ ನಿಲಯದ ಹೊಸ ಕಟ್ಟಡವನ್ನು ಈ ದಿನ ಘನತೆವೆತ್ತ ರಾಜ್ಯಪಾಲರು ಉದ್ಘಾಟಿಸಿದ್ದಾರೆ. ಕಂಪ್ಯೂಟರ್ ಕೇಂದ್ರ, ಸಂಶೋಧಕರ ವಸತಿ ಗೃಹ, ಚರಿತ್ರೆ ವಿಭಾಗ, ಅಭಿವೃದ್ಧಿ ಅಧ್ಯಯನ ವಿಭಾಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯ ಹಾಗೂ ಆಡಳಿತ ಸಿಬ್ಬಂದಿ ವಸತಿ ಗೃಹ ಕಟ್ಟಡಗಳ ನಿರ್ಮಾಣದ ಕೆಲಸಗಳು ಪ್ರಗತಿಯಲ್ಲಿವೆ. ರಸ್ತೆಗಳ ಡಾಂಬರೀಕರಣದ ಕೆಲಸ ನಡೆದಿದ್ದು ಮುಂದಿನ ವರ್ಷ ಇನ್ನಷ್ಟು ರಸ್ತೆಗಳನ್ನು ಸುಸಜ್ಜಿತಗೊಳಿಸಲಾಗುತ್ತದೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ನಿಧಿಯಿಂದ ೨೦ ಲಕ್ಷಗಳ ಅನುದಾನದಡಿಯಲ್ಲಿ ಹೊಸ ರಸ್ತೆಗಳಿಗೆ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಸುಮಾರು ಎರಡು ಸಾವಿರ ಹಣ್ಣಿನ ಗಿಡಗಳನ್ನು ಮತ್ತು ತೇಗದ ಗಿಡಗಳನ್ನು ನೆಡಲಾಗಿದ್ದು, ‘ಚಿನ್ನದ ಬೆಳಸು’ ಎಂಬ ಹಣ್ಣಿನ ತೋಟವೊಂದು ತೆರೆದುಕೊಂಡಿದೆ.

ಕನ್ನಡನಾಡು ಒಂದಾಗಿ ಐವತ್ತು ತುಂಬಿದ ಈ ಉತ್ಸಾಹದ ಸಂದರ್ಭದಲ್ಲಿ ೧೫ ವಸಂತಗಳನ್ನು ಕಂಡ ಕನ್ನಡ ವಿಶ್ವವಿದ್ಯಾಲಯ ನಾಡಿನ ಸಾಂಸ್ಕೃತಿಕ. ಬೌದ್ಧಿಕ ಕೇಂದ್ರವಾಗಿ ರೂಪಿತವಾಗಿದ್ದು, ಜನಮುಖಿಯಾಗಿ ತನ್ನ ಶರೀರವಚನ್ನು ಕನ್ನಡ ನಾಡಿನಾದ್ಯಂತ ಚಾಚಿಕೊಂಡಿದೆ. ಒಂದು ಕಾಲಕ್ಕೆ ಇದ್ದ ನಾಡು ಇನ್ನೊಂದು ಕಾಲಕ್ಕೆ ಬೇರೆಯೇ ನಾಡಾಗುತ್ತದೆ. ಒಂದು ಕಾಲಕ್ಕೆ ಇದ್ದ ಸಂಸ್ಕೃತಿ ಇನ್ನೊಂದು ಕಾಲಕ್ಕೆ ಬೇರೆಯೇ ಆದ ಇನ್ನೊಂದು ಸಂಸ್ಕೃತಿಯಾಗುತ್ತದೆ. ಈ ರೂಪಾಂತರ ಪ್ರಕ್ರಿಯೆಯ ಹಿಂದೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಒತ್ತಾಸೆಗಳಿರುತ್ತವೆ. ಇಂದು ಕನ್ನಡ ನಾಡು, ನುಡಿ, ಬದುಕಿನ ಬಗ್ಗೆ ಆತಂಕ, ತಲ್ಲಣ, ಸಂಭ್ರಮ ಎಲ್ಲವೂ ಏಕಕಾಲಕ್ಕೆ ಕಾಣಿಸಿಕೊಳ್ಳುತ್ತವೆ. ಜಾಗತೀಕರಣದ ಮತ್ತು ಆಧುನೀಕರಣದ ಒತ್ತಾಸೆಯ ಪ್ರಕ್ರಿಯೆಯಲ್ಲಿ ಒಳಗಿನಿಂದ ಮತ್ತು ಹೊರಗಿನಿಂದ ಪ್ರಯೋಗವಾಗುವ ಒತ್ತಡಗಳು ಮತ್ತು ಶಕ್ತಿಗಳು ಹೇಗಿರಬೇಕು ಮತ್ತು ಹೇಗಿರಬಾರದು ಎನ್ನುವ ಚಿಂತನೆ ಮತ್ತು ಆಚರಣೆ ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ನಮಗೆ ತೀರ ಅಗತ್ಯವಾದದ್ದು. ಕನ್ನಡ ವಿಶ್ವವಿದ್ಯಾಲಯವು ಅರಿವು ಮತ್ತು ಆಚರಣೆಗಳ, ತಲ್ಲಣ ಮತ್ತು ಸಂಭ್ರಮಗಳ ಪರಂಪರೆ ಮತ್ತು ಆಧುನಿಕತೆಗಳ ಮುಖಾಮುಖಿಯನ್ನು ನಡೆಸುವ ಮುಲಕವೇ ಕನ್ನಡವನ್ನು ಮತ್ತು ಕನ್ನಡಿಗರನ್ನು ಆತ್ಮವಿಶ್ವಾಸದ ಮೂಲಕ ಬೆಳೆಸಲು ಅವಕಾಶ ಕಲ್ಪಿಸಿಕೊಡುವ ಸವಾಲನ್ನು ಸ್ವೀಕರಿಸಿತು. ಕನ್ನಡ ಮಾತೆಯನ್ನು ಭಾರತ ಜನನಿಯ ತನುಜಾತೆ ಎನ್ನುವ ತತ್ತ್ವವನ್ನು ಒಪ್ಪಿಕೊಳ್ಳುವುದರ ಜೊತೆಗೆ, ಕನ್ನಡನಾಡೇ ನಮ್ಮ ದೇಶ ಮತ್ತು ನಮ್ಮ ಜಗತ್ತು ಎನ್ನುವ ಮಟ್ಟದಲ್ಲಿ ಅದನ್ನು ಕಟ್ಟಲು ತಮ್ಮೆಲ್ಲರ ಮಾರ್ಗದರ್ಶನ ಮತ್ತು ಸಹಕಾರವನ್ನು ಕೋರುತ್ತೇನೆ.

೪ ಡಿಸೆಂಬರ್ ೨೦೦೬