ಸನ್ಮಾನ್ಯ ಕುಲಾಧಿಪತಿಗಳಾದ ಜೆ.ಎಚ್. ಪಟೇಲ್ ಅವರೇ, ಸನ್ಮಾನ್ಯರಾದ ಶಿವರಾಮ ಕಾರಂತ ಅವರೇ, ಸನ್ಮಾನ್ಯ ಕರೀಂಖಾನ್ ಅವರೇ, ಸನ್ಮಾನ್ಯ ಎಂ.ಪಿ. ಪ್ರಕಾಶ್ ಅವರೇ, ಹಿರಿಯರೇ, ಮತ್ತು ಸ್ನೇಹಿತರೇ, ಕನ್ನಡ ವಿಶ್ವವಿದ್ಯಾಲಯದ ಮೂರನೆಯ ನುಡಿಹಬ್ಬಕ್ಕೆ ತಮಗೆಲ್ಲ ಹೃತ್ಪೂರ್ವಕ ಸ್ವಾಗತ.

ಹಂಪಿ ಮತ್ತು ವಿಜಯನಗರಗಳ ಈ ಬೆಂಗಾಡಿನಲ್ಲಿ ತಲೆ ಎತ್ತಿದ ಈ ವಿಶ್ವವಿದ್ಯಾಲಯ ಒಂದು ಆದಮ್ಯವಾದ ಸೃಜನಶಕ್ತಿಯ ಫಲವಾಗಿದೆ. ಈ ನೆಲದಲ್ಲಿ ಮುಚ್ಚಿಹೋಗಿರುವ ಇತಿಹಾಸವನ್ನು ಮತ್ತೆ ಬಯಲಿಗೆ ತರುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ. ಹಿಂದೆ ಸನ್ಮಾನ್ಯ ಪಟೇಲರು ಇಲ್ಲಿಗೆ ಬಂದಿದ್ದಾಗ ಇಲ್ಲಿಯ ವಾತಾವರಣದಲ್ಲಿಯ ಮೌನದಲ್ಲಿ ಸಂಗೀತವಿದೆಯೆಂದು ಹೇಳಿ ತಮ್ಮ ವಿಸ್ಮಯವನ್ನು ಪ್ರಕಟಿಸಿದ್ದರು. ದೊಡ್ಡ ಗಾತ್ರದ ಬಂಡೆಗಲ್ಲುಗಳು ಈ ಪ್ರದೇಶದಲ್ಲಿ ಮೌನವಾಗಿ ಮಲಗಿವೆ. ಇಂಥ ಪ್ರದೇಶದಲ್ಲಿ ಶಿಕ್ಷಣದ ಹೊಳಹನ್ನು ಹಾಕಲಾಗಿದೆ.

ಇಂದಿಗೆ ಐದು ವರ್ಷಗಳ ಹಿಂದೆ ನಾನಿಲ್ಲಿಗೆ ಬಂದಾಗ ನನ್ನ ತಲೆಯಲ್ಲಿ ನೂರಾರು ಕನಸುಗಳಿದ್ದುವು. ವಿಜಯನಗರದ ನೆಲದಲ್ಲಿ ವಿದ್ಯಾನಗರವನ್ನು ಕಟ್ಟ ಬೇಕಾಗಿತ್ತು. ಅದು ಬಯಲಿನಲ್ಲಿ ಆಲಯವನ್ನು ಕಟ್ಟುವ ಕೆಲಸ. ಎಲ್ಲ ಸೃಜನ ವ್ಯಾಪಾರವೂ ಒಂದು ಸಂಘರ್ಷದ ಕೆಲಸ. ಕಳೆದ ಐದು ವರ್ಷಗಳಿಂದ ನಾನು ಇಂಥ ಸೃಜನಕ್ರಿಯೆಯಲ್ಲಿ ತೊಡಗಿದ್ದೇನೆ. ಕನಸುಗಳನ್ನು ಸಾಕಾರಗೊಳಿಸುವುದು ನಾವು ತಿಳಿದುಕೊಂಡಷ್ಟು ಸುಲಭವಲ್ಲ. “In Our dreams begin our the sponsibilities” ಎಂದ ಏಟ್ಸ್ ಕವಿಯ ಮಾತು ನಮಗೆಲ್ಲ ಮಾರ್ಗದರ್ಶಕವಾದ ಸೂತ್ರ. ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮತ್ವವನ್ನು ತಂದುಕೊಡುವ ಕನಸು ಇದಾಗಿದೆ. ಇದು ಕನ್ನಡ ವಿಶ್ವವಿದ್ಯಾಲಯದ ಮಹತ್ವದ ಜವಾಬ್ದಾರಿಯೂ ಆಗಿದೆ.

ಕನ್ನಡ ಸಾವಿರದ ವರ್ಷಗಳಿಂದ ಬೆಳೆದು ಬಂದ ಭಾಷೆ. ಕವಿಗಳು, ಶಾಸ್ತ್ರಕಾರರು, ಶಿವಶರಣರು, ಹರಿದಾಸರು ಇವರೆಲ್ಲ ಕೂಡಿಕೊಂಡು ಈ ಭಾಷೆಯನ್ನು ಅವರ ಎಲ್ಲ ಅಗತ್ಯಗಳ ಅಭಿವ್ಯಕ್ತಿಗೆ ಹದಗೊಳಿಸಿದರು. ಒಂದು ಕಾಲಕ್ಕೆ ಮಡಿಯಲ್ಲಿದ್ದಾಗ ಸಂಸ್ಕೃತ, ಮೈಲಿಗೆಯಲ್ಲಿದ್ದಾಗ, ಕನ್ನಡ ಎನ್ನುವ ಪರಿಸ್ಥಿತಿ ಇತ್ತು. ಅದಕ್ಕಾಗಿ ಕನ್ನಡ ಬಡವಾಯಿತು. ಶಿಕ್ಷಣ ಮಾಧ್ಯಮ ಇಂಗ್ಲಿಷ್ ಆದ ಮೇಲೆ ಇನ್ನೊಂದು ಬಗೆಯ ಮಡಿವಂತಿಕೆ ನಮ್ಮ ಜನರಲ್ಲಿ ಬಂತು. ನವಾಬರ ಕಾಲಕ್ಕೆ ಉರ್ದು, ಪೇಶ್ವೆಯರ ಕಾಲಕ್ಕೆ ಮರಾಠಿ, ಬ್ರಿಟೀಷರ ಕಾಲಕ್ಕೆ ಇಂಗ್ಲಿಷ್. ಇವು ರಾಜ ಭಾಷೆಗಳಾದವು. ಈಗ ಕರ್ನಾಟಕದಲ್ಲೂ ಕನ್ನಡ ಅಧಿಕೃತ ರಾಜಭಾಷೆ ಎಂಬುದೇನೋ ನಿಜ. ಆದರೆ ಕನ್ನಡವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಉಪಯೋಗಿಸುವ ಜನ ಮುಂದೆ ಬಂದಿಲ್ಲ. ಭಾಷೆ ಕೇವಲ ಸಂವಹನದ ಮಾಧ್ಯಮವಾಗಿ ಉಳಿದುಬಿಟ್ಟರೆ ಯಾವ ಭಾಷೆಯಾದರೂ ನಡೆದೀತು. ಈಗ ನಮ್ಮ ಕಲಿತ ಜನ ಇಂಗ್ಲಿಷನ್ನು ನೆಚ್ಚಿಕೊಂಡಿದ್ದಾರೆ. ಆದರೆ ಇಂಗ್ಲಿಷ್ ಬಲ್ಲ ಜನ ಇಂಗ್ಲಿಷ್‌ನಲ್ಲಿ ಕಾವ್ಯ ನಾಟಕವನ್ನು ಬರೆಯುವುದಿಲ್ಲ. ಶಾಸ್ತ್ರಗ್ರಂಥಗಳನ್ನು ರಚಿಸುವುದೂ ಇಲ್ಲ. ಆದರೆ ಅದನ್ನು ಸಂವಹನಕ್ಕಾಗಿ ಮಾತ್ರ ಬಳಸುತ್ತಾರೆ. ಇಂಗ್ಲಿಷ್ ನಮಗೆ ಗ್ರಂಥಾಲಯದ ಭಾಷೆ, ಸಂಸ್ಕೃತ ಧಾರ್ಮಿಕ ಭಾಷೆ, ಕನ್ನಡ ದಿನನಿತ್ಯದ ಬಳಕೆಯ ಭಾಷೆ ಹೀಗಾದರೆ ನಮ್ಮ ಮನಸ್ಸು ಕನ್ನಡವಾಗುವುದು. ನಮ್ಮ ಜನ ಪ್ರಬುದ್ಧರಾಗುವುದು ಯಾವಾಗ ನಮ್ಮ ಕನ್ನಡ ವಿಶ್ವವಿದ್ಯಾಲಯ ಈಗ ಕನ್ನಡ ಶಕ್ತಿಯನ್ನು ಗುರುತಿಸಿ ಅದನ್ನು ಸರ್ವಾಂಗೀಣ ಉಪಯೋಗಕ್ಕಾಗಿ ಸಿದ್ಧಗೊಳಿಸುವ ಕಾಯಕದಲ್ಲಿ ತೊಡಗಿದೆ.

ಕನ್ನಡ ವಿಶ್ವವಿದ್ಯಾಲಯದಲ್ಲಿ ನಾವು ಈ ಬಾರಿ ಆದ್ಯತೆ ಕೊಟ್ಟಿರುವುದು ಭಾಷೆ ಮತ್ತು ಇತಿಹಾಸಗಳ ಅಧ್ಯಯನಕ್ಕೆ. ಕನ್ನಡ ಭಾಷೆಯ ಅನೇಕ ಉಪಯೋಗಗಳು ಇಲ್ಲಿ ಅಭ್ಯಾಸದ ವಸ್ತುಗಳಾಗಿವೆ. ನಮ್ಮ ಶಾಸನಗಳು, ಜನಪದ ಮಹಾಕಾವ್ಯಗಳು, ನಾಟಕಗಳು, ಕೈಫಿಯತ್ತುಗಳು, ಗಾದೆ ಮಾತುಗಳು ಇವೆಲ್ಲ ಭಾಷೆಯ ಅನೇಕ ಅವತಾರಗಳಾಗಿವೆ. ನಮ್ಮ ವಿದ್ಯೆಗಳೇ ಆಗಲಿ, ಕಲೆಗಳೇ ಆಗಲಿ, ಅವು ಹುಟ್ಟಿ ಬೆಳೆಯುವುದು ನಮ್ಮ ಭಾಷೆ ಮತ್ತು ಇತಿಹಾಸದ ಸಂದರ್ಭದಲ್ಲಿಯೇ. ಯಾವ ವಸ್ತುವಿನ ಅಧ್ಯಯನ ನಡೆಯಬೇಕಾದರೂ ಭಾಷೆಯಲ್ಲಿ ಮತ್ತು ಭಾಷೆಯ ಮುಖಾಂತರವೇ ನಡೆಯಬೇಕು. ಅದಕ್ಕಾಗಿ ಈಗ ಕನ್ನಡ ಭಾಷೆಗೆ ತನ್ನ ಅರಿವು ಮೂಡಬೇಕು. ನಮ್ಮ ಭಾಷೆಗೆ ವ್ಯಾಕರಣದ ಅರಿವು ಇದೆ. ಆದರೆ ಕಾರ್ಯವಿಸ್ತಾರದ ಅರಿವಿಲ್ಲ. ಸಾವಿರ ವರ್ಷಗಳ ಹಿಂದೆ ಒಬ್ಬ ಸಾಮ್ರಾಟನಿಗೆ ಈ ಅರಿವಿತ್ತು. ಒಂದು ರಾಜ್ಯದ ದೇಶಿಯತೆಯ ಗಡಿರೇಖೆಗಳನ್ನು ನೃಪತುಂಗ ಕನ್ನಡ ಭಾಷೆಯಿಂದ ಗುರುತಿಸಿದ. ಕನ್ನಡ ಕಾವ್ಯಭಾಷೆಯಷ್ಟೇ ಅಲ್ಲ, ರಾಜಕಾರಣದ ಭಾಷೆಯೂ ಆಯಿತು. ಈ ಶತಮಾನದಲ್ಲಿ ಕನ್ನಡಕ್ಕೆ ಹೊಸ ಹೊಸ ಮಹತ್ವಾಕಾಂಕ್ಷೆಗಳು ಹುಟ್ಟಿ ಕೊಂಡಿವೆ. ಮನುಷ್ಯನಿಗೆ ಇರುವಂತೆ ಭಾಷೆಗೂ ಒಂದು ಪ್ರಜ್ಞೆಯ ಆಳವಾದ ಅಧ್ಯಯನ ಈಗ ನಡೆದಿದೆ.

ಇದೇ ಕಾರಣಕ್ಕಾಗಿ ನಮ್ಮ ವಿಶ್ವವಿದ್ಯಾಲಯ ಇತಿಹಾಸದ ಅಧ್ಯಯನಕ್ಕೂ ಮಹತ್ವ ಕೊಟ್ಟಿದೆ. ವಿಶ್ವವಿದ್ಯಾಲಯವಿರುವ ಈ ಸ್ಥಳ ಐತಿಹಾಸಿಕ ಮಹತ್ವ ಪಡೆದಿರುವ ಸ್ಥಳ. ಜಗತ್ತಿನ ಒಂದು ದೊಡ್ಡ ಸಾಮ್ರಾಜ್ಯ ಈ ಪ್ರದೇಶದಲ್ಲಿತ್ತು. ಸಾಮ್ರಾಜ್ಯದ ವೈಭವದೊಡನೆ ಅದರ ದರ್ಪ, ಅಭಿಮಾನ, ಸಂಸ್ಕೃತಿ, ನ್ಯಾಯ, ಅನ್ಯಾಯಗಳ ಹತ್ತು ಇತಿಹಾಸಗಳಾದರೂ ನಮಗೆ ಬೇಕು. ಭಾಷೆಯಂತೆ ಇತಿಹಾಸ ಕೂಡ ಒಂದು ಸಾಂಸ್ಕೃತಿಕ ರಚನೆ. ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ ನಮ್ಮ ದೇಶದ ಇತಿಹಾಸ ರಚನೆ ಶುರುವಾಯಿತು. ಆದರೆ ಬ್ರಿಟಿಷ್ ಕಾಲದ ನಮ್ಮ ದೇಶದ ಇತಿಹಾಸ ಕೂಡ ಬ್ರಿಟಿಷ್ ಸಾಮ್ರಾಜ್ದ ಇತಿಹಾಸವಾಗಿದೆ. ಬ್ರಿಟಿಷ್ ದೃಷ್ಟಿಕೋನವನ್ನು ತಿಳಿಯಲು ಮಾತ್ರ ಈ ಇತಿಹಾಸವನ್ನು ಅಭ್ಯಾಸ ಮಾಡಬೇಕು. ಆದರೆ ನಮ್ಮ ದೃಷ್ಟಿಕೋನವನ್ನು ಪ್ರತಿನಿಧಿಸುವ ಇತಿಹಾಸ ಇನ್ನೂ ಬಂದಿಲ್ಲ. ಅದಕ್ಕಾಗಿ ನಮ್ಮ ಇತಿಹಾಸ ಪ್ರಜ್ಞೆಯಲ್ಲಿ ಬದಲಾವಣೆ ಆಗಬೇಕು, ಅಂದರೆ ಇತಿಹಾಸದ ಕಥನ ಕ್ರಮದಲ್ಲಿ ಬದಲಾವಣೆ ಆಗಬೇಕು. ಕನ್ನಡ ವಿಶ್ವವಿದ್ಯಾಲಯದ ಧ್ಯೇಯವೆಂದರೆ ಇದೆ. ಸಂಶೋಧನೆಯ ಮಾರ್ಗ ನೀತಿ ಧೋರಣೆಗಳಲ್ಲಿ ಬದಲಾವಣೆಯಾಗಬೇಕು. ಆ ಕಾರ್ಯ ನಡೆಯುತ್ತದೆ.

ಈ ವರ್ಷದ ನಾಡೋಜ ಪದವಿ ಡಾ. ಶಿವರಾಮ ಕಾರಂತರು ಮತ್ತು ಕರೀಂ ಖಾನ್‌ರಿಗೆ ಸಲ್ಲುತ್ತಿದೆ. ಡಾ. ಶಿವರಾಮ ಕಾರಂತರಿಗೆ ಇಂಥ ಗೌರವ ಪ್ರಶಸ್ತಿ ಮತ್ತು ಪದವಿಗಳು ಹೊಸವೇನಲ್ಲ. ಅಂದರೆ ಈ ಪದವಿಯನ್ನು ಕೊಡುವುದರ ಮೂಲಕ ಅವರನ್ನು ಕನ್ನಡ ವಿಶ್ವವಿದ್ಯಾಲಯ ತನ್ನ ಬಳಗಕ್ಕೆ ಸೇರಿಸಿಕೊಳ್ಳುತ್ತಿದೆ. ಕಾರಂತರು ‘ನಾಡೋಜ’ ಪದವಿಯನ್ನು ಒಪ್ಪಿಕೊಂಡು ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದ್ದಾರೆ. ಅವರು ಬಾಲಪ್ರಪಂಚ ಮತ್ತು ವಿಜ್ಞಾನ ಪ್ರಪಂಚ ಸಂಪುಟಗಳನ್ನು ಹೊರತಂದಾಗಲೇ ನಾಡೋಜರಾಗಿ ಬಿಟ್ಟರು. ನಮ್ಮ ನವೋದಯ ಕಾಲದ ಆಶೋತ್ತರಗಳು, ಕನಸುಗಳು, ಕಾರಂತರಲ್ಲಿ ಅವರ ವ್ಯಕ್ತಿತ್ವದಲ್ಲಿ ಮೂರ್ತೀಭವಿಸಿದೆಯೆಂದರೂ ತಪ್ಪಿಲ್ಲ. ನಾಡೋಜ ಪದವಿಯನ್ನು ಸ್ವೀಕರಿಸಿದ ಇನ್ನೊಬ್ಬ ಹಿರಿಯರು ಕರೀಂಖಾನ್ ಅವರೂ ನಾಡೋಜರೇ. ನಮ್ಮ ನಾಡಿನ ವಿಶೇಷತೆಯೆಂದರೆ ಹಲವಾರು ವಿಶ್ವವಿದ್ಯಾಲಯಗಳ ಅಬ್ಬರದಲ್ಲಿ ಕೂಡ ನಮ್ಮ ಜಾನಪದ ಜೀವಂತವಾಗಿದೆ. ಸಂಸ್ಕೃತಿಯ ಇನ್ನೊಂದು ಭಿನ್ನವಾದ ಅರ್ಥ ಜನಪದದಲ್ಲಿರುವುದರಿಂದ ಕರೀಂಖಾನ್ ರಂಥವರ ಸೇವೆ ಬಹಳ ಮಹತ್ವದ್ದಾಗಿದೆ. ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯವನ್ನೇ ಈ ಇಬ್ಬರು ಹಿರಿಯರು ನಾಡಿನ ಜನರಿಗಾಗಿ ಮಾಡುತ್ತಾ ಬಂದಿದ್ದಾರೆ. ಈ ಇಬ್ಬರು ಮಹನೀಯರಿಗೂ ನನ್ನ ಅಭಿನಂದನೆಗಳು. ಹಾಗೆಯೇ ಈ ಸಲ ಪಿಎಚ್.ಡಿ. ಮತ್ತು ಎಂ.ಫಿಲ್. ಪದವಿ ಸ್ವೀಕರಿಸುತ್ತಿರುವ ನನ್ನ ಎಳೆಯ ಸ್ನೇಹಿತರಿಗೂ ಅಭಿನಂದನೆ ಹೇಳಿ ಎಲ್ಲರಿಗೂ ಇನ್ನೊಮ್ಮೆ ಸ್ವಾಗತ ಕೋರಿ ನನ್ನ ಮಾತು ಮುಗಿಸುತ್ತೇನೆ.

ಫೆಬ್ರವರಿ ೧೫, ೧೯೯೭