ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳೂ, ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಮಾನ್ಯ ಶ್ರೀ ಜೆ.ಎಚ್.ಪಟೇಲ್ ಅವರೇ, ಉನ್ನತ ಶಿಕ್ಷಣ ಸಚಿವರೂ, ಕನ್ನಡ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳೂ ಆಗಿರುವ ಮಾನ್ಯ ಶ್ರೀ ಬಸವರಾಜ ಪಾಟೀಲ ಅಟ್ಟೂರ ಅವರೇ, “ನಾಡೋಜ” ಗೌರವ ಪದವಿ ವಿಭೂಷಿತರಾದ ಡಾ. ದೇ. ಜವರೇಗೌಡ, ಡಾ. ರಾಜಕುಮಾರ್, ಡಾ. ಜಾರ್ಜ್‌ಮಿಶಲ್ ಅವರೇ, ಮುಖ್ಯ ಅತಿಥಿಗಳಾದ ಡಾ. ವಿ. ಐ. ಸುಬ್ರಹ್ಮಣ್ಯಂ ಅವರೇ, ಮಾನ್ಯ ಸಚಿವರೇ, ಶಾಸಕರೇ, ಮಹನಿಯರೇ, ಮಹಿಳೆಯರೇ – ನಿಮ್ಮೆಲ್ಲರಿಗೂ ಸ್ವಾಗತ.

ಪಾಶ್ಚಿಮಾತ್ಯ ಪದ್ಧತಿಯ ವಿಶ್ವವಿದ್ಯಾಲಯಗಳು ಭಾರತದಲ್ಲಿ ಆರಂಭವಾಗಿ ನೂರು ವರ್ಷ ಗತಿಸಿದವು. ಈ ಅವಧಿಯಲ್ಲಿ ಸಿದ್ಧ ಮಾದರಿಯ ಈ ವಿಶ್ವವಿದ್ಯಾಲಯಗಳಿಂದ ಭಿನ್ನವೆಂಬಂತೆ, ಶಾಂತಿನಿಕೇತನದಂಥ ಹೊಸ ಬಗೆಯ ವಿಶ್ವವಿದ್ಯಾಲಯಗಳು ಅಲ್ಲಲ್ಲಿ ಅಸ್ತಿತ್ವಕ್ಕೆ ಬಂದವು. ಇವುಗಳಲ್ಲಿ ಒಂದು ವಿಶಿಷ್ಟ ಪ್ರಯೋಗವೆನಿಸಿದೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ. ಕನ್ನಡ ಸಂಸ್ಕೃತಿಯನ್ನು ಶೋಧಿಸುವ, ವ್ಯಾಖ್ಯಾನಿಸುವ, ಪ್ರಕಟಣ, ಪ್ರಸಾರ ಕಾರ್ಯವನ್ನು ಪೂರೈಸುವ ಹೊಣೆಯನ್ನು ಈ ಸಂಸ್ಥೆ ಹೊಂದಿದೆ. ಈ ಎಲ್ಲ ಚುಟವಟಿಕೆಗಳಿಗೆ ತಾತ್ವಿಕ ನೆಲೆಯಾಗಿದೆ, ದೇಶಿ.

ಸಮಗ್ರ ಭಾರತದಲ್ಲಿಯೇ ರಾಜ್ಯ ಸರಕಾರ ಪೋಷಿಸುವ ಏಕೈಕ ವಿದ್ಯಾ ಸಂಸ್ಥೆಯಾಗಿದೆ ಕನ್ನಡ ವಿಶ್ವವಿದ್ಯಾಲಯ. ಹೀಗಾಗಿ ಮೊದಲಿನಿಂದಲೂ ಈ ಸಂಸ್ಥೆಗೆ ಉದಾರ ನೆರವು ನೀಡುತ್ತ ಬಂದ ಕರ್ನಾಟಕ ಸರ್ಕಾರವನ್ನು, ಅದರ ಮಹಾನಾಯಕನಾಗಿರುವ ಮಾನ್ಯ ಶ್ರೀ ಜೆ.ಎಚ್. ಪಟೇಲ್ ಅವರನ್ನು ಆರಂಭದಲ್ಲಿಯೇ ಅಭಿನಂದಿಸುತ್ತೇನೆ.

ಶಿಕ್ಷಣ, ವಿಶ್ವವಿದ್ಯಾಲಯದ ಹೃದಯ. ಇದಕ್ಕೆ ಅರ್ಥ ತುಂಬುವುದಕ್ಕಾಗಿ ಈ ವರ್ಷದ ಆರಂಭದಲ್ಲಿಯೇ ಮಾಡಿದ ಬಹುಮುಖ್ಯ ಕೆಲಸವೆಂದರೆ ವಿಭಾಗಗಳ ಪುನಾರಚನೆ. ಇದರಿಂದಾಗಿ ಮಹಿಳಾ ಅಧ್ಯಯನ ವಿಭಾಗ, ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ, ವಿಶ್ವ ಕನ್ನಡ ವಿಭಾಗಗಳು ಅಸ್ತಿತ್ವಕ್ಕೆ ಬಂದು ಈ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಕಾಸಕ್ಕೆ ಹೊಸ ಆಯಾಮಗಳು ಪ್ರಾಪ್ತವಾಗಿವೆ.

ವಿಶ್ವವಿದ್ಯಾಲಯದ ಬೆಳವಣಿಗೆಯೆಂದರೆ ವಿಭಾಗಗಳ ಬೆಳವಣಿಗೆ. ಅವುಗಳ ಬೆನ್ನೆಲುಬು ಗಟ್ಟಿಯಾದರೆ ಮಾತ್ರ ವಿಶ್ವವಿದ್ಯಾಲಯದ ಬೆನ್ನೆಲುಬು ಗಟ್ಟಿಯಾಗಿರುತ್ತದೆ. ಈ ಆದರ್ಶದಲ್ಲಿ ವಿಭಾಗಗಳು ಮೈಮುರಿದು ಬೆಳೆಯುವುದಕ್ಕಾಗಿ, ಅವುಗಳಲ್ಲಿ ಸ್ವತಂತ್ರ ಘಟಕದ ಸ್ಥಾನಮಾನವನ್ನು ಕಲ್ಪಿಸಿಕೊಡಲಾಗಿದೆ. ಅಂದರೆ ವಾರ್ಷಿಕ ಬಜೆಟ್ ಹಂಚಿಕೊಟ್ಟು, ಸಾಂಸ್ಥಿಕ ಯೋಜನೆ, ವೈಯಕ್ತಿಕ ಯೋಜನೆ, ವಿಚಾರ ಸಂಕಿರಣಗಳ ಹೊಣೆಗಳನ್ನು ವಹಿಸಿಕೊಡಲಾಗಿದೆ. ಪ್ರತಿ ತಿಂಗಳು ವರದಿ ತರಿಸಿಕೊಳ್ಳುವ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಕುಲಪತಿಗಳು ವಿಭಾಗಗಳಿಗೆ ಭೇಟಿ ನೀಡುವ ಮೂಲಕ, ಅಲ್ಲಿ ಸಂಶೋಧನೆ ಕ್ರಮಬದ್ಧವಾಗಿ ಮುನ್ನಡೆಯುವಂತೆ ಎಚ್ಚರವಹಿಸಲಾಗಿದೆ.

ಇದು ‘ದೇಶೀ ಅಧ್ಯಯನ’ದ ವಿಶ್ವವಿದ್ಯಾಲಯ. ಇಲ್ಲಿ ಕರ್ನಾಟಕದ ಅಧ್ಯಯನ ಮತ್ತು ಇದಕ್ಕೆ ನೆಲೆಯಾಗಿರುವ ದ್ರಾವಿಡ ಅಧ್ಯಯನಗಳಿಗೆ ವಿಶೇಷ ಒತ್ತು ಕೊಡುತ್ತಲೇ ಲೋಕ ಸಂಬಂಧವನ್ನು ಕಲ್ಪಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಆದುದರಿಂದ ಪ್ರಸ್ತುತ ವರ್ಷದ ಯೋಜನೆ, ವಿಚಾರ ಸಂಕಿರಣ, ಗ್ರಂಥ ಪ್ರಕಟಣೆಗಳು ಈ ದಾರಿಯಲ್ಲಿ ಹೀಗೆ ಮುನ್ನಡೆದಿವೆ.

ಕರ್ನಾಟಕದ ಬುಡಕಟ್ಟು ಮಹಾಕಾವ್ಯಗಳ ಮತ್ತು ಉತ್ತರ ಕರ್ನಾಟಕದ ಜನಪದ ಮಹಾಕಾವ್ಯಗಳ ಸಂಗ್ರಹ, ‘ದೇಶೀ’ ಸಮ್ಮೇಳನ ಮತ್ತು ‘ಬುಡಕಟ್ಟು ಮಹಿಳೆ’ಯನ್ನು ಕುರಿತ ವಿಚಾರ ಸಂಕಿರಣಗಳ ಸಂಘಟನೆ. ಕರ್ನಾಟಕದ ಜನಸಮುದಾಯ ಕೋಶ ಮತ್ತು ಕೃಷಿ ಪದಕೋಶಗಳ ಸಿದ್ಧತೆ, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಶಾಸನ ಸಂಪಾದನೆ, ಕರ್ನಾಟಕದ ಪ್ರತಿಯೊಂದು ಗ್ರಾಮದ ದೇವಾಲಯಗಳ ಪರಿವೀಕ್ಷಣೆ, ಹಸ್ತಪ್ರತಿಗಳ ಸಂಗ್ರಹ ಇವೇ ಮೊದಲಾದ ಯೋಜನೆಗಳು ಈ ವರ್ಷ ಆರಂಭವಾಗಿದೆ. ಹೀಗೆ ಅಧ್ಯಯನವನ್ನು ಕರ್ನಾಟಕದ ಪ್ರಾಚೀನತೆಗೆ ಮಾತ್ರ ಸೀಮಿತಗೊಳಿಸದೆ, ಆಧುನಿಕತೆಗೂ ಮುಂದುವರಿಸಿದ ಫಲವಾಗಿ, ಕರ್ನಾಟಕದ ಹೊಸ ಜಿಲ್ಲೆಗಳ ಅಧ್ಯಯನ ಯೋಜನೆಯೊಂದಿಗೆ, ಉತ್ತರ ಕರ್ನಾಟಕದ ಅಭಿವೃದ್ಧಿ ಅಧ್ಯಯನ, ಕನ್ನಡ ಮಹಿಳೆಯ ಮತ್ತು ಸ್ವಾತಂತ್ರ್ಯ ಹೋರಾಟ, ಕನ್ನಡ ಸಾಹಿತ್ಯದ ಅಧ್ಯಯನಗಳ ಪುನರ್ ವ್ಯಾಖ್ಯಾನ, ಮೌಖಿಕ ಚರಿತ್ರೆ ಇವೇ ಮೊದಲಾದ ವಿಚಾರ ಸಂಕಿರಣಗಳನ್ನು ಈ ವರ್ಷ ಜರುಗಿಸಲಾಗಿದೆ.

ಹೀಗೆ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳ್ಳದೆ, ತಾನು ದ್ರಾವಿಡ ವ್ಯಾಪ್ತಿಗೂ ಹಿಗ್ಗಬೇಕೆಂದು ಕನ್ನಡ ವಿಶ್ವವಿದ್ಯಾಲಯದ ಸಂಕಲ್ಪವಾಗಿದೆ. ಈ ಸಂಕಲ್ಪವನ್ನು ಸಕಾರಗೊಳಿಸುತ್ತಿರುವುದಕ್ಕೆ ನಿದರ್ಶನವೆಂಬಂತೆ “ದ್ರಾವಿಡ ಕಾವ್ಯ ಮೀಮಾಂಸೆ” ಹೆಸರಿನ ವಿಚಾರ ಸಂಕಿರಣವನ್ನು ಸಂಘಟಿಸುವುದರೊಂದಿಗೆ, ‘ದ್ರವಿಡಿಯನ್ ‘ಎಟಿಮಾಲಾಜಿಕಲ್ ಡಿಕ್ಷನರಿ’ಯ ಅನುವಾದ ಕಾರ್ಯವನ್ನು, ದ್ರಾವಿಡ ಸಾಹಿತ್ಯ ಚರಿತ್ರೆ, ಕನ್ನಡಕ್ಕೆ ಅನುವಾದಗೊಂಡ ದ್ರಾವಿಡ ಗ್ರಂಥಸೂಚಿಗಳ ಸಿದ್ಧತೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ವರ್ಷದ ನುಡಿಹಬ್ಬಕ್ಕೆ ದ್ರಾವಿಡ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ. ವಿ.ಐ. ಸುಬ್ರಹ್ಮಣ್ಯಂ ಅವರನ್ನು ಮುಖ್ಯ ಅತಿರ್ಥಿಗಳನ್ನಾಗಿ ನಾವು ಬರಮಾಡಿಕೊಂಡುದ್ದು, ಈ ಹಿನ್ನೆಲೆಯಲ್ಲಿ.

ಹೀಗೆ ದ್ರಾವಿಡ ಅಧ್ಯಯನ ನಡೆಸುತ್ತಲೇ ಇದರ ಆಚೆಗೂ ಇರುವ ಲೋಕದೊಂದಿಗೆ ಆದಾನ-ಪ್ರದಾನ ಸಂಬಂಧ ಇಟ್ಟುಕೊಳ್ಳುವುದು ಈ ಸಂಸ್ಥೆಯ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಿಂತು, ಮರಾಠಿ ಅಭಂಗಗಳ ಅನುವಾದ ಕಾರ್ಯ, ಕನ್ನಡಕ್ಕೆ ಅನುವಾದಗೊಂಡ ಇಂಗ್ಲಿಷ್ ಗ್ರಂಥಸೂಚಿಗಳ ಸಿದ್ಧತೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಭೌತಿಕ ಮತ್ತು ಬೌದ್ಧಿಕ ಹಸಿವನ್ನು ಹಿಂಗಿಸಿಕೊಳ್ಳಬೇಕೆಂದು ಜಗತ್ತಿನ ಮೂಲೆ ಮೂಲೆಗೆ ವಲಸೆ ಹೋಗಿರುವ ಕನ್ನಡಿಗರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು, ವಿದೇಶಿಯರಿಗೆ ಕನ್ನಡ ಸಂಸ್ಕೃತಿಯನ್ನು ಪರಿಚಯಿಸಲು ಅಸ್ತಿತ್ವಕ್ಕೆ ಬಂದಿರುವ ‘ವಿಶ್ವ ಕನ್ನಡ ವಿಭಾಗ’ ಈ ದಿಶೆಯಲ್ಲಿ ದುಡಿಯುವ ಉದ್ದೇಶ ಹೊಂದಿದೆ. ಇಂದು ಡಾ. ಜಾರ್ಜ್ ಮಿಶಲ್ ಅವರಿಗೆ ‘ನಾಡೋಜ’ ಗೌರವ ಪದವಿಯನ್ನು ನೀಡುವ ಉದ್ದೇಶವೂ ಲೋಕವಿಸ್ತಾರ ಪಡೆಯುವುದೇ ಆಗಿದೆ.

ಹೀಗೆ, ಕನ್ನಡವನ್ನು ಕೇಂದ್ರವಾಗಿಟ್ಟುಕೊಳ್ಳುತ್ತಲೇ ಕನ್ನಡದಿಂದ ದ್ರಾವಿಡಕ್ಕೆ, ದ್ರಾವಿಡದಿಂದ ಆರ್ಯಕ್ಕೆ, ಆರ್ಯದಿಂದ ಆರ್ಯೇತರಕ್ಕೆ ವಿಸ್ತಾರ ಪಡೆಯುತ್ತಲಿರುವ ಇಲ್ಲಿಯ ಅಧ್ಯಯನ, ‘ಸೀಮೋಲ್ಲಂಘನ ಪ್ರಕ್ರಿಯಾ’ ಸ್ವರೂಪದ್ದಾಗುವಂತೆ ನೋಡಿಕೊಳ್ಳಲಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಕಣ್ಣಮುಂದೆ ಇರುವ ಇನ್ನೊಂದು ಕನಸು ಅನ್ವಯಿಕ ಬೋಧನೆ. ಅಂದರೆ, ಸಾಹಿತ್ಯವನ್ನು ಬೋಧಿಸುವುದನ್ನಲ್ಲ, ಸೃಷ್ಟಿಸುವುದನ್ನು ಕಲಿಸುವುದು. ಇದಕ್ಕೆ ಪೂರ್ವಭಾವಿ ಪ್ರಯೋಗವೆಂಬಂತೆ ‘ಕಾವ್ಯ ಕಟ್ಟುವ ಬಗೆ’ ವಿಷಯವನ್ನು ಕುರಿತ ಹತ್ತು ದಿನಗಳ ಕಮ್ಮಟದಲ್ಲಿ ೨೦ ಯುವಕರಿಗೆ ಮಾರ್ಗದರ್ಶನ – ತರಬೇತಿ ನೀಡಿದುದು ಒಂದು ಹೊಸ ಪ್ರಯೋಗವೆಂದೇ ಹೇಳಬೇಕು. ಈ ಆದರ್ಶದಲ್ಲಿ ‘ಸೃಜನಶೀಲ ಕನ್ನಡ’ ಡಿಪ್ಲೋಮಾ ವರ್ಗವನ್ನು ಮುಂದಿನ ವರ್ಷದಿಂದ ತೆರೆಯಲಾಗುತ್ತದೆ. ಈಗ ಸಂಗೀತ ವಿಭಾಗ, ಶಿಲ್ಪಕಲಾ ವಿಭಾಗಗಳಲ್ಲಿ ಡಿಪ್ಲೋಮಾ ವರ್ಗ ನಡೆಸಲಾಗುತ್ತಿದ್ದು, ಮುಂದಿನ ವರ್ಷ ‘ಮಹಿಳಾ ಅಧ್ಯಯನ ಡಿಪ್ಲೋಮಾ’ ವರ್ಗವನ್ನು ಆರಂಭಿಸಲಾಗುತ್ತದೆ.

ಲೋಹಿಯಾ ಅಧ್ಯಯನ ಪೀಠ, ದಲಿತ ಸಂಸ್ಕೃತಿ ಅಧ್ಯಯನ ಪೀಠ, ಶಂಭಾ ಅಧ್ಯಯನ ವೇದಿಕೆಗಳನ್ನು ಪುನಾಃರಚಿಸಲಾಗಿದ್ದು, ಲೋಹಿಯಾ ಅಧ್ಯಯನ ಪೀಠ, ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟವನ್ನು ಪ್ರಕಟಿಸಿದೆ. ಮಿಕ್ಕವು ಸೂಕ್ತ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಈ ವರ್ಷ ಕನ್ನಡ ತೆಲುಗು ಸಂಸ್ಕೃತಿಪೀಠ, ಶ್ವೇತಾಂಬರ ಜೈನಸಂಸ್ಕೃತಿ ಪೀಠ ಆರಂಭಿಸುವ ಪೂರ್ವಸಿದ್ಧತೆ ನಡೆದಿದೆ.

ಶೈಕ್ಷಣಿಕ ಅಭಿವೃದ್ಧಿಗಾಗಿ ಜಾನಪದ ಮ್ಯೂಜಿಯಂ, ಆರ್ಟ್‌ಗ್ಯಾಲರಿ, ಹಸ್ತಪ್ರತಿ ಗ್ರಂಥಾಲಯಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಕೊಪ್ಪಳದ ಶ್ರೀ ಸಂಗಣ್ಣ ಅಗಡಿ, ಧಾರವಾಡದ ಶ್ರೀ ಕೆ.ಎಸ್. ದೇಶಪಾಂಡೆ ಅವರಿಂದ ಅಪೂರ್ವ ಗ್ರಂಥಗಳನ್ನು ಕಾಣಿಕೆಯಾಗಿ ಪಡೆದು, ಗ್ರಂಥಾಲಯವನ್ನು ಬೆಳೆಸಲಾಗಿದೆ.

ಪ್ರಸಾರಾಂಗ, ನಮ್ಮ ವಿಶ್ವವಿದ್ಯಾಲಯದ ಶಕ್ತಿ ಆಸಕ್ತಿಗಳನ್ನು ಜಗತ್ತಿಗೆ ಪರಿಚಯಿಸುವ ಪ್ರಕಟನೆ ಸಂಸ್ಥೆ. ಈ ಮೊದಲಿನ ಪತ್ರಿಕೆಗಳ ಜೊತೆಗೆ ಈ ವರ್ಷ ‘ಕನ್ನಡ ಅಧ್ಯಯನ’, ‘ಮಹಿಳಾ ಅಧ್ಯಯನ’ ಹೆಸರಿನ ಎರಡು ಹೊಸ ಪತ್ರಿಕೆಗಳನ್ನು ಆರಂಭಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ, ನಾಟಕ ರಂಗಕೃತಿಗಳ ಪ್ರಯೋಗ, ಬೃಹದ್ದೇಶೀ, ರಜಾಕಾರ ಲಾವಣಿ ಕೃತಿಗಳು ಇತ್ತೀಚೆಗೆ ಪ್ರಕಟವಾಗಿದ್ದು, ನುಡಿಹಬ್ಬದ ಅಂಗವಾಗಿ ಮಂಟಪಮಾಲೆಯ ೧೦ ಪುಸ್ತಕಗಳು, ಬಳ್ಳಾರಿ ಜಿಲ್ಲೆಯ ಶಾಸನ ಸಂಪುಟ, ಕೃಷಿಜ್ಞಾನ ಪ್ರದೀಪಿಕೆ, ಕೋಡೆಕಲ್ಲ ವಚನವಾಕ್ಯ, ಆದಿಲ್‌ಸಾಹಿ ಆಸ್ಥಾನ ಸಾಹಿತ್ಯ, ಕರ್ನಾಟಕದ ಸೂಫಿಗಳು, ಕನ್ನಡ ರಂಗಭೂಮಿ ಈ ಆರು ಕೃತಿಗಳು ಇಂದು ಬಿಡುಗಡೆಯಾಗಿದೆ. ಈ ವರ್ಷ ಬಾಹ್ಯಯೋಜನೆಯ ಅಂಗವಾಗಿ ಕೊಲ್ಲಾಪುರ ಜಿಲ್ಲೆಯ ಶಾಸನಗಳು, ಆಂಧ್ರಪ್ರದೇಶದ ಕನ್ನಡ ಶಾಸನಗಳು, ತಮಿಳುನಾಡಿನ ಕನ್ನಡ ಶಾಸನಗಳು ಹೆಸರಿನ ಸಂಪುಟಗಳ ರೂಪುಗೊಳ್ಳುತ್ತಲಿವೆ.

ಪ್ರಸಾರಾಂಗದ ಇನ್ನೊಂದು ಕೆಲಸವೆಂದರೆ, ಪುಸ್ತಕ ಸಂಸ್ಕೃತಿಯಾತ್ರೆ. ಇದರ ಅಂಗವಾಗಿ ಬೀದರ್, ಗುಲ್ಬರ್ಗಾ, ಬಳ್ಳಾರಿ, ಸಂಡೂರು, ಸಂಕೇಶ್ವರ, ಬೆಳಗಾವಿ, ಚಿತ್ರದುರ್ಗ, ಹಂಪಿ, ಧರ್ಮಸ್ಥಳಗಳಲ್ಲಿ ಪುಸ್ತಕ ಮಾರಾಟ ನಡೆಸಲಾಗಿದೆ. ಬಳ್ಳಾರಿ ಸಂಡೂರು, ಹೆಬ್ರಿ, ಸಂಕೇಶ್ವರ, ಕಾಸರಗೋಡುಗಳಲ್ಲಿ ಮಂಟಪಮಾಲೆಯ ಉಪನ್ಯಾಸವನ್ನು ಕೈಕೊಳ್ಳಲಾಗಿದೆ. ‘ಉಪೇಕ್ಷಿತ ಸಾಹಿತ್ಯಮಾಲೆ’ಯ ಹೆಸರಿನಲ್ಲಿ ಅದಿಲ್‌ಶಾಹಿ ಆಸ್ಥಾನ ಸಾಹಿತ್ಯ ವಿಷಯವನ್ನು ಕುರಿತ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಹೊಸಪೇಟೆಯಲ್ಲಿ ಪುಸ್ತಕ ಮಾರಾಟ ಮಳಿಗೆಯನ್ನು ಆರಂಭಿಸಿರುವುದು ಈ ವರ್ಷದ ವಿಶೇಷ ಸಾಧನೆಯಾಗಿದೆ.

ಆಡಳಿತ ಸುಧಾರಣೆ ಈ ವರ್ಷದ ಇನ್ನೊಂದು ಸಾಧನೆ. ಸಂಶೋಧನೆ ವಿಭಾಗಗಳಲ್ಲಿ ಸೇರಿಹೋಗಿದ್ದ ‘ಅಧ್ಯಯನಾಂಗ’ವನ್ನು ಆಡಳಿತ ವಿಭಾಗದಲ್ಲಿ ಸ್ಥಾಪಿಸಿ, ಅದಕ್ಕೆ ಕ್ರಮವತ್ತಾದ ಕಾರ್ಯ ಯೋಜನೆಯನ್ನು ರೂಪಿಸಿಕೊಡಲಾಗಿದೆ. ಪಠ್ಯಕ್ರಮ, ಪರೀಕ್ಷೆ, ಪಿಎಚ್.ಡಿ. ನಿಯಮಗಳಲ್ಲಿ ಸುಧಾರಣೆ ಮಾಡಲಾಗಿದೆ. ವಿತ್ತ ಭಂಡಾರದ ಮೇಲೆ ಹತೋಟಿ ಸಾಧಿಸಲಾಗಿದೆ. ಇದರ ಫಲವಾಗಿ ಹಣಕಾಸಿನಲ್ಲಿ ಮಿತವ್ಯಯ, ಕಾಗದ ಪತ್ರಗಳ ಪರಿಚಲನೆಯಲ್ಲಿ ವೇಗಗಳು ಸಾಧ್ಯವಾಗಿದೆ.

ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಆವರಣದಲ್ಲಿ ಬ್ಯಾಂಕ್ ಸ್ಥಾಪಿಸಲಾಗಿದೆ. ಬಸ್ ವ್ಯವಸ್ಥೆ ಮಾಡಿ ತಿಂಗಳಿಗೆ ೩೦ ಸಾವಿರ ರೂಪಾಯಿ ಉಳಿತಾಯ ಮಾಡಲಾಗಿದೆ. ಐದು ಸಾವಿರ ಗಿಡಗಳನ್ನು ಈ ವರ್ಷ ನೆಡಿಸಲಾಗಿದೆ. ಶ್ರೀಶೈಲ ಅತಿಥಿಗೃಹವನ್ನು ಪೀಠೋಪಕರಣಗಳಿಂದ ಸುಸಜ್ಜಿತಗೊಳಿಸಲಾಗಿದೆ. ಅಂಚೆ ಕಛೇರಿಯನ್ನು ಆರಂಭಿಸುವ ಸಿದ್ಧತೆ ನಡೆದಿದೆ. ಬರುವ ಮಾರ್ಚ್‌ದೊಳಗಾಗಿ ಆವರಣದ ಎಲ್ಲ ರಸ್ತೆಗಳ ಡಾಂಬರೀಕರಣ ಮಾಡಲಾಗುತ್ತದೆ.

ವರ್ಷದ ಆರಂಭದಿಂದಲೂ ಆರ್ಥಿಕ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದ್ದೇವೆ.  ಕಳೆದ ವರ್ಷ ನೀಡುತ್ತಲಿದ್ದ ಎರಡೂವರೆ ಕೋಟಿ ವಾರ್ಷಿಕ ಅನುದಾನ, ಈ ವರ್ಷ ಮೂರು ಕೋಟಿಗೆ ಏರಿದೆ. ಹೋದ ವರ್ಷದ ಬಾಕಿ ತೀರಿಸಲು ಈ ವರ್ಷದ ಆರಂಭದಲ್ಲಿಯೇ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಜೆ.ಎಚ್. ಪಟೇಲ್ ಅವರು ಮತ್ತೆ ಹೆಚ್ಚಿನದಾಗಿ ಒಂದು ಕೋಟಿ ರೂಪಾಯಿ ಅನುದಾನ ನೀಡಿರುವುದನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

ಈ ವರ್ಷ ‘ಕನ್ನಡ ಸಂಸ್ಕೃತಿ ಇಲಾಖೆ’ ನೀಡಿದ ನೆರವು ಸ್ಮರಣೀಯವೆನಿಸಿದೆ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಶಾಸನ ಪ್ರಕಟಣೆಗಾಗಿ ಈ ಇಲಾಖೆ ಪ್ರತಿವರ್ಷ ಎರಡು ಲಕ್ಷ ರೂಪಾಯಿಗಳಂತೆ ಹತ್ತು ವರ್ಷ ಅನುದಾನವನ್ನು ಮಂಜೂರು ಮಾಡಿದೆ. ‘ಬೃಹದ್ದೇಶೀ’ ಗ್ರಂಥ ಪ್ರಕಟಣೆಗೆ ಒಂದು ಲಕ್ಷ ರೂಪಾಯಿ ನೀಡಿದೆ. ಆವರಣದ ಒಳರಸ್ತೆಗಳ ಡಾಂಬರೀಕರಣಕ್ಕೆ ಪ್ರವಾಸೋದ್ಯಮ ನಿರ್ದೇಶನಾಲಯ ವತಿಯಿಂದ ಆರೂವರೆ ಲಕ್ಷ ಬರಲಿದೆ. ಲೋಕೋಪಯೋಗಿ ಇಲಾಖೆ ಆಳ್ವಿಕೆರೆಯ ಮೇಲಿನ ರಸ್ತೆಯ ಡಾಂಬರೀಕರಣಕ್ಕಾಗಿ ಆರೂವರೆ ಲಕ್ಷ ನೀಡಿದೆ. ‘ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯು ವಿಶ್ವವಿದ್ಯಾಲಯದ ಆವರಣದ ಅಭಿವೃದ್ಧಿಗಾಗಿ ೫೦ ಲಕ್ಷ ರೂಪಾಯಿಗಳು ನೀಡುವುದಾಗಿ ಆಶ್ವಾಸನೆ ನೀಡಿದೆ. ಈ ಎಲ್ಲ ಅನುದಾನಗಳಿಗಾಗಿ ಮಾನ್ಯ ಸಚಿವರಾದ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್, ಶ್ರೀ ಸಿ.ಎಂ. ಉದಾಸಿ, ಶ್ರೀ ಕೆ. ಶರಣಪ್ಪ ಅವರ ಔದಾರ್ಯವನ್ನು ನೆನೆಯುತ್ತೇನೆ. ಇವೆಲ್ಲವುಗಳ ಹಿಂದೆ ಬಹುದೊಡ್ಡ ಪಾತ್ರವಾಡಿದ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಎಂ.ಪಿ. ಪ್ರಕಾಶ್ ಅವರನ್ನು ವಿಶೇಷವಾಗಿ ಸ್ಮರಿಸುತ್ತೇನೆ.

ಕನ್ನಡ ವಿಶ್ವವಿದ್ಯಾಲಯ ತನ್ನ ಅಸ್ತಿತ್ವನ್ನು ಪ್ರಕಟಣೆಗಳ ಮುಲಕ ತೋರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮುದ್ರಣ ವೆಚ್ಚದ ಏರಿಕೆ ಕಾರಣವಾಗಿ, ಎಲ್ಲ ವಿಶ್ವವಿದ್ಯಾಲಯಗಳ ಪ್ರಕಟಣ ಕಾರ್ಯ ಸೊರಗುತ್ತಲಿದೆ. ಈ ದುಃಸ್ಥಿತಿ ಕನ್ನಡ ವಿಶ್ವವಿದ್ಯಾಲಯಕ್ಕೆ ಒದಗಬಾರದೆಂದು ‘ಸಂಸದ ಸಾಹಿತ್ಯನಿಧಿ’ ಯೋಜನೆಯನ್ನು ರೂಪಿಸಲಾಗಿದೆ. ಇದರನ್ವಯ ಜಿಲ್ಲಾ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಲೋಕಸಭೆ ರಾಜ್ಯಸಭೆಗಳ ಸದಸ್ಯರಿಗೆ ಕೊಡಮಾಡುವ ಒಂದು ಕೋಟಿ ರೂಪಾಯಿ ಹಣದಲ್ಲಿ ಐದು ಲಕ್ಷ ರೂಪಾಯಿಗಳನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡಲು ಎಲ್ಲ ಸಂಸತ್ ಸದಸ್ಯರಿಗೆ ಭಿನ್ನವಿಸಿಕೊಳ್ಳಲಾಗಿದೆ. ಮಾನ್ಯರಾದ ಶ್ರೀ ಕೆ.ಸಿ. ಕೊಂಡಯ್ಯ, ಶ್ರೀ ಎಚ್.ಜಿ. ರಾಮಲು, ಶ್ರೀ ಬಸವರಾಜ ಪಾಟೀಲ ಸೇಡಂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಾನ್ಯರಾದ ಶ್ರೀ ರಾಮಕೃಷ್ಣ ಹೆಗಡೆ, ಶ್ರೀ ಅನಂತಕುಮಾರ ಅವರು ಭರವಸೆ ನೀಡಿದ್ದಾರೆ. ಮಿಕ್ಕವರಿಂದ  ಒಪ್ಪಿಗೆ ನೀರಿಕ್ಷಿಸಿದ್ದು, ಇವರೆಲ್ಲರು ಕೊಡಮಾಡಿದರೆ ಒಂದೂವರೆ ಕೋಟಿ ರೂಪಾಯಿ ಸಂಗ್ರಹವಾಗಿ, ಅದರ ಬಡ್ಡಿ ಹಣದಲ್ಲಿ ಪ್ರಕಟಣೆಗಳು ನಿರಾತಂಕವಾಗಿ ನಡೆಸಬಹುದಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಈ ಸಂಸತ್ ಸದಸ್ಯರಿಗೆ ಒಂದು ಮಾತು ಹೇಳಿದರೆ ದೊಡ್ಡ ಉಪಕಾರವಾಗುತ್ತದೆ.

ವಿಶ್ವವಿದ್ಯಾಲಯದಲ್ಲಿ ಹದಿನೆಂಟು ವಿಭಾಗಗಳಿವೆ. ಪ್ರತಿಯೊಂದು ವಿಭಾಗದಲ್ಲಿ ದತ್ತಿ ಉಪನ್ಯಾಸ ಸ್ಥಾಪಿಸಲು ಈ ವರ್ಷ ಯೋಜಿಸಲಾಗಿದೆ. ಇದರ ಅಂಗವಾಗಿ ಬಳ್ಳಾರಿಯ ಶ್ರೀ ಕೆ.ಸಿ. ಕೊಂಡಯ್ಯ, ಶಿವಮೊಗ್ಗೆಯ ಶ್ರೀ ಎಚ್. ಇಬ್ರಾಹಿಂ ಸಾಹೇಬ್, ಬಳ್ಳಾರಿಯ ಶ್ರೀ ಅಲ್ಲಂ ಬಸವರಾಜ, ಬೆಳಗಾವಿಯ ಕೆ.ಎಲ್.ಇ. ಸೊಸೈಟಿ, ಬಾಗಲಕೋಟಿಯ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ ತಲಾ ೫೦ ಸಾವಿರ ಕೊಡಮಾಡಿದ್ದಾರೆ. ಹೀಗೆ ಮಿಕ್ಕ ವಿಭಾಗಗಳಲ್ಲಿಯೂ ದತ್ತನಿಧಿ ಸ್ಥಾಪಿಸುವ ಪ್ರಯತ್ನ ಮುಂದುವರೆದಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಸಿಬ್ಬಂದಿಗಳ ಮನೆಗಳನ್ನು ಕಟ್ಟಲು ಹುಡ್ಕೋದಿಂದ ಒಂದೂವರೆ ಕೋಟಿ ಮಂಜೂರಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಪುರಾತತ್ವ ವಸ್ತುಸಂಗ್ರಹಾಲಯಕ್ಕಾಗಿ ಒಂದು ಕೋಟಿ ಎಪ್ಪತ್ತೈದು ಲಕ್ಷ ಹಣ ಮಂಜೂರು ಮಾಡಿದೆ. ಹೀಗೆ ಸಾಧ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಕ್ರೋಢಿಕರಿಸಲಾಗಿದೆ. ಹೀಗಿದ್ದೂ ಹಿಂದಿನ ಬಾಕಿ ಇನ್ನೂ ೭೫ ಲಕ್ಷ ಇದ್ದು, ಮಾನ್ಯ ಮುಖ್ಯಮಂತ್ರಿಗಳನ್ನು ಈ ಅನುದಾನಕ್ಕಾಗಿ ಭಿನ್ನವಿಸಿಕೊಳ್ಳುತ್ತೇನೆ. ‘ಹಣವನ್ನು ನೀರಿನಂತೆ ಗಳಿಸಬೇಕು. ತೀರ್ಥದಂತೆ ಬಳಸಬೇಕು’ ಎಂಬ ಅರ್ಥನೀತಿಯನ್ನು ಅನುಸರಿಸಿ, ಮಿತವ್ಯಯವನ್ನು ಪಾಲಿಸಿರುವುದರಿಂದಾಗಿ, ಈ ವಿಶ್ವವಿದ್ಯಾಲಯಕ್ಕೆ ಪ್ರತಿ ವರ್ಷ ೧೨ ಲಕ್ಷ ರೂಪಾಯಿ ಉಳಿತಾಯವಾಗುತ್ತಲಿದೆ.

ವಿಶ್ವವಿದ್ಯಾಲಯದ ಆಸ್ತಿ ಎಂದರೆ ಇಲ್ಲಿಯ ಸಿಬ್ಬಂದಿ ವರ್ಗ ಮತ್ತು ಇಲ್ಲಿಯ ಪ್ರಕಟಣೆಗಳು. ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಕರ್ನಾಟಕ ಜಾನಪದ ಕಲೆಗಳ ಕೋಶ (ಸಂ.ಪ್ರೊ.ಹಿ.ಚಿ.ಬೋರಲಿಂಗಯ್ಯ) ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಬಹುಮಾನ, ದೆಹಲಿಯ ಅಖಿಲ ಭಾರತ ಪ್ರಕಾಶನ ಸಂಸ್ಥೆಯ ಪ್ರಥಮ ಬಹುಮಾನಗಳು ಲಭ್ಯವಾಗಿದೆ. ಬುಡಕಟ್ಟು ವಿಭಾಗ ಪ್ರಕಟಿಸಿದ ಬುಡಕಟ್ಟು ಮಹಾಕಾವ್ಯ ಮಾಲೆ (ಸಂ. ಡಾ. ಕೆ.ಎಂ. ಮೇತ್ರಿ, ಡಾ. ಕೇಶವನ್ ಪ್ರಸಾದ್, ಡಾ. ಚಲುವರಾಜು ಮತ್ತು ಶ್ರೀ ಮೊಗಳ್ಳಿ ಗಣೇಶ) ಪುಸ್ತಕಕ್ಕೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಬಹುಮಾನವನ್ನು, ಬೇರು ಕಾಂಡ ಚಿಗುರು (ಡಾ. ಕೆ.ವಿ. ನಾರಾಯಣ), ತಮಂಧದ ಕೇಡು (ಡಾ. ಅಮರೇಶ್ ನುಗಡೋಣಿ), ನಾಕನೆಯ ನೀರು (ಶ್ರೀಮತಿ ನಾಗವೇಣಿ) ಕೃತಿಗಳು ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಗೆದ್ದುಕೊಂಡಿವೆ. ಪ್ರೊ. ಎ.ವಿ. ನಾವಡ ಅವರು ಈ ವರ್ಷ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜಾನಪದ ಅಕಾಡೆಮಿಗೆ ಪ್ರೊ. ಹಿ.ಚಿ. ಬೋರಲಿಂಗಯ್ಯ, ಶಿಲ್ಪಕಲಾ ಅಕಾಡೆಮಿಗೆ, ಶ್ರೀ ಜಯಕುಮಾರ್ ಸದಸ್ಯರಾಗಿ ನಾಮಕರಣಗೊಂಡಿದ್ದಾರೆ. ಈ ಸಂಗತಿಗಳು ವಿಶ್ವವಿದ್ಯಾಲಯದ ಕಿರೀಟಕ್ಕೆ ತುರಾಯಿ ಎನಿಸಿವೆ.

‘ನಾಡೋಜ’ ಮಹಾಕವಿ ಪಂಪನ ಬಿರುದು. ನಾಡಿನ ಉಪಾಧ್ಯಾಯ, ನಾಡಿನ ಆಚಾರ್ಯ ಪುರುಷ ಎಂದು ಇದರ ಅರ್ಥ. ಆ ಕಾಲದ ‘ಪಂಪ ಪ್ರತಿಭೆ’ಯನ್ನು ನೆನಪಿಸುವ ಈ ಕಾಲದ ಗಣ್ಯರಿಗೆ, ಕನ್ನಡ ವಿಶ್ವವಿದ್ಯಾಲಯ ‘ನಾಡೋಜ’ ಗೌರವ ಪದವಿ ಪ್ರದಾನ ಮಾಡುತ್ತ ಬಂದಿದೆ. ಈ ವರ್ಷ ಅಭಿನಯ ಕಲಾ ಸಾಮ್ರಾಜ್ಯದ ಅನಭಿಷಕ್ತ ದೊರೆ ಡಾ. ರಾಜ್‌ಕುಮಾರ್ ಅವರಿಗೆ, ಕನ್ನಡ ಉನ್ನತ ಶಿಕ್ಷಣದ ಶಿಲ್ಪಿಗಳಾದ ಡಾ. ದೇ. ಜವರೇಗೌಡ, ಡಾ. ಆರ್.ಸಿ. ಹಿರೇಮಠ ಅವರಿಗೆ ಮತ್ತು ಕರ್ನಾಟಕಾಂತರ್ಗತ ಭಾರತೀಯ ಪುರಾತತ್ವ ವಿದ್ವಾಂಸ ಡಾ. ಜಾರ್ಜ್‌ಮಿಶಲ್ ಅವರಿಗೆ ಈ ಗೌರವ ಪದವಿಯನ್ನು ನೀಡಲಾಗುತ್ತಿದ್ದು, ಇವರೆಲ್ಲರನ್ನು ಆದರದಿಂದ ಸ್ವಾಗತಿಸುತ್ತೇನೆ.

ಈ ವರ್ಷದ ನುಡಿಹಬ್ಬಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಡಾ. ವಿ. ಆಯ್. ಸುಬ್ರಹ್ಮಣ್ಯಂ ಅವರು ಅಂತಾರಾಷ್ಟ್ರೀಯ ದ್ರಾವಿಡ ವಿದ್ವಾಂಸರು. ತಮಿಳು ವಿಶ್ವವಿದ್ಯಾಲಯದ ಪರಿಕಲ್ಪನೆಗೆ ಹುಟ್ಟುಹಾಕಿ, ಅದನ್ನು ಅಸ್ತಿತ್ವಕ್ಕೆ ತರುವ ಮೂಲಕ, ಇವರು ಪರ್ಯಾಯವಾಗಿ ತೆಲುಗು ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯಗಳ ಸೃಷ್ಟಿಗೂ ಕಾರಣವೆನಿಸಿದ್ದಾರೆ. ಈ ಚಿಂತನೆಯ ಮುಂದುವರಿಕೆಯೆಂಬಂತೆ ಈಗ ಕುಪ್ಪಂನಲ್ಲಿ ‘ದ್ರಾವಿಡ ವಿಶ್ವವಿದ್ಯಾಲಯ’ವನ್ನು ಅಸ್ತಿತ್ವಕ್ಕೆ ತಂದು, ಅದರ ಸಹಕುಲಾಧಿಪತಿಗಳಾಗಿರುವ ಇವರನ್ನು ಗೌರವದಿಂದ ಬರಮಾಡಿಕೊಳ್ಳುತ್ತೇನೆ.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿ ೩-೪ ಜಿಲ್ಲೆಗಳಿಗೆ ಮಾತ್ರ ಸೀಮಿತ. ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಕರ್ನಾಟಕದ ಎಲ್ಲ ಜಿಲ್ಲೆಗಳು, ಏಕೆ? ಕನ್ನಡಿಗರಿರುವ ಜಗತ್ತಿನ ಎಲ್ಲ ಪ್ರದೇಶಗಳೂ ಸೇರುತ್ತವೆ. ಇವುಗಳಿಗೆ ಕನ್ನಡ ವಿಶ್ವವಿದ್ಯಾಲಯ ಕೇಂದ್ರವಾಗಬೇಕೆಂಬುದು ನಮ್ಮ ಕನಸು. ಈ ಉದ್ದೇಶದ ಸಫಲತೆಗಾಗಿ, ಹಂಪಿಯ ಕನ್ನಡದ ವಿಶ್ವವಿದ್ಯಾಲಯವನ್ನು ರಾಜ್ಯದ ಮೂಲೆಮೂಲೆಗೆ ಕೊಂಡೊಯ್ಯುವ ಮೊದಲ ಹಂತದ ಹೊಸ ಪ್ರಯೋಗಗಳನ್ನು ಆರಂಭಿಸಲಾಗಿದೆ. ಇದರಿಂದಾಗಿ ಈ ವರ್ಷ ಕರ್ನಾಟಕ ವ್ಯಾಪ್ತಿಗೆ ಹಿಗ್ಗುತ್ತಲಿರುವ ಈ ಸಂಸ್ಥೆ, ಮುಂದಿನ ವರ್ಷ ಭಾರತ, ವಿದೇಶಗಳ ವ್ಯಾಪ್ತಿಯನ್ನು ಸಾಧಿಸಲಿದೆ. ‘ಎಲ್ಲ ರಸ್ತೆಗಳ ರೋಮ್‌ದ ಕಡೆಗೆ’ ಎಂಬಂತೆ ಕನ್ನಡದ ಎಲ್ಲ ಹಾದಿಗಳು ಹಂಪಿಯ ಕಡೆಗೆ ಎಂಬಂಥ ವಾತಾವರಣ ನಿರ್ಮಾಣ ಮಾಡುವ ಗುರಿ, ಈ ಸಂಸ್ಥೆಯ ಕಣ್ಣ ಮುಂದಿದೆ. ಈ ಕಾರ್ಯದಲ್ಲಿ ಕನ್ನಡಿಗರ ಸಹಕಾರವನ್ನು ಬಯಸುತ್ತೇನೆ. ಎಲ್ಲರಿಗೂ ನಮಸ್ಕಾರ.

ಜನವರಿ ೪, ೧೯೯೯