ಘನತೆವೆತ್ತ ಸನ್ಮಾನ್ಯ ಕುಲಾಧಿಪತಿಗಳೇ, ಸನ್ಮಾನ್ಯ ಸಮ ಕುಲಾಧಿಪತಿಗಳೇ, ಗೌರವಾನ್ವಿತ ಡಾ. ಎ.ಎನ್. ಮೂರ್ತಿರಾವ್ ಮತ್ತು ಡಾ. ಹಾ.ಮಾ. ನಾಯಕ ಅವರೇ, ಸಂಸದ ಸದಸ್ಯರೇ, ಸಚಿವ – ಶಾಸಕರೇ, ಸೆನೆಟ್ – ಸಿಂಡಿಕೇಟ್ ಸದಸ್ಯರೇ, ಮಹನೀಯರೇ – ಮಹಿಳೆಯರೇ ಮತ್ತು ವಿದ್ಯಾರ್ಥಿಗಳೇ.

“ಕನ್ನಡ ವಿದ್ಯೆ”ಯ ಶೋಧ, ವಿಮರ್ಶೆ ಮತ್ತು ಪ್ರಸಾರಗಳ ಆದರ್ಶದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕನ್ನಡ ವಿಶ್ವವಿದ್ಯಾಲಯ ಇಂದು ತನ್ನ ಆರನೆಯ ನುಡಿಹಬ್ಬವನ್ನು ಆಚರಿಸುತ್ತಲಿದೆ. ಈ ಸಮಾರಂಭಕ್ಕೆ ಘನತೆವೆತ್ತ ಸನ್ಮಾನ್ಯ ಕುಲಾಧಿಪತಿಗಳಾದ ಶ್ರೀಮತಿ ವಿ.ಎಸ್. ರಮಾದೇವಿ ಅವರನ್ನೂ, ಸನ್ಮಾನ್ಯ ಸಮಕುಲಾಧಿಪತಿಗಳಾದ ಡಾ. ಜಿ. ಪರಮೇಶ್ವರ ಅವರನ್ನೂ, ಸುಪ್ರಸಿದ್ಧ ಸಾಹಿತಿಗಳಾದ ಡಾ. ಎ.ಎನ್. ಮೂರ್ತಿರಾವ್, ಡಾ. ಹಾ.ಮಾ. ನಾಯಕ ಅವರನ್ನೂ, ಸಂಸದ ಸದಸ್ಯರನ್ನೂ, ಸಚಿವ-ಶಾಸಕರನ್ನೂ, ಎಲ್ಲ ಮಹನೀಯರನ್ನು ಪ್ರೀತಿಯಿಂದ ಸ್ವಾಗತಿಸುತ್ತೇನೆ.

ಕನ್ನಡ ಮತ್ತು ಆಂಧ್ರ ಅಕ್ಕತಂಗಿಯರು. ಹೀಗಾಗಿ ಆಂಧ್ರದ ಮಗಳಾದ ಮಾನ್ಯ ಶ್ರೀಮತಿ ರಮಾದೇವಿಯವರು ಪರ್ಯಾಯವಾಗಿ ಕನ್ನಡದ ಮಗಳೇ ಆಗಿದ್ದಾರೆ. ಪ್ರಥಮ ದರ್ಜೆಯ ಚಿನ್ನದ ಗರಿಗಳನ್ನು ಕಿರೀಟದಲ್ಲಿ ಧರಿಸಿಕೊಳ್ಳುತ್ತಲೇ ಬೆಳೆದ ಈ ಕಾನೂನು ತಜ್ಞೆ, ಕಾನೂನು ಸಾಹಿತಿಯೂ ಆಗಿರುವುದು ಒಂದು ವಿಶೇಷ. ಕಥೆ, ಕಾದಂಬರಿ, ನಾಟಕ ರಚನೆಯ ಮೂಲಕ ತೆಲುಗು ಸಾಹಿತಿಯಾಗಿರುವುದು ಇನ್ನೂ ವಿಶೇಷ. “ನಾನು ಇಷ್ಟರಲ್ಲಿ ಕನ್ನಡದಲ್ಲಿಯೇ ವ್ಯವಹರಿಸುತ್ತೇನೆ” ಎಂದು ಇತ್ತೀಚೆಗೆ ಹೇಳಿರುವ ಮಾತು, ಇವರ ಸಾಂಸ್ಕೃತಿಕ ಕರ್ತವ್ಯ ಪ್ರಜ್ಞೆಗೆ ನಿರ್ದಶನವೆನಿಸಿದೆ. ಯಾವುದೇ ರಾಜ್ಯದ ರಾಜ್ಯಪಾಲರಿಗೆ ಮಾದರಿಯೆನಿಸಿದೆ. ಕನ್ನಡ ವಿಶ್ವವಿದ್ಯಾಲಯವು, ‘ವಿಶ್ವವಿದ್ಯಾಲಯ ಧನಸಹಾಯ ಆಯೋಗ’ಕ್ಕೆ ಸಂಲಗ್ನಗೊಂಡ ಮೊದಲ ವರ್ಷವಿದು. ಈ ಮೊದಲ ವರ್ಷದ ನುಡಿಹಬ್ಬಕ್ಕೆ ಮೊದಲನೆಯ ಕುಲಾಧಿಪತಿಯಾಗಿ ಸನ್ಮಾನ್ಯರು ಆಗಮಿಸಿರುವುದು, ಚರಿತ್ರಾರ್ಹ ಘಟನೆಯಾಗಿದೆ.

ಶಿಕ್ಷಣ ಸಚಿವರಾದ ಮಾನ್ಯ ಡಾ. ಜಿ. ಪರಮೇಶ್ವರ ಅವರು ಶಿಕ್ಷಣ ಸಂಸ್ಥೆಗಳ ಮಧ್ಯೆ ಹುಟ್ಟಿ, ಶಿಕ್ಷಣ ಸಂಸ್ಥೆಗಳ ಮಧ್ಯೆ ಬೆಳೆದವರು. ಕೃಷಿ ಪದವೀಧರರಾಗಿರುವುದು, ವಿದೇಶದಲ್ಲಿ ಪಿಎಚ್.ಡಿ. ಪದವಿ ಗಳಿಸಿರುವುದು, ೧೦೦೦ ರಷ್ಟು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಲಿರುವುದು ಇವೆಲ್ಲ ಇವರ ಶಿಕ್ಷಣ ಸಚಿವತ್ವಕ್ಕೆ ಸಮರ್ಥನೆಯನ್ನು ಒದಗಿಸಿವೆ. ಉನ್ನತ ಶಿಕ್ಷಣ ಕ್ಷೇತ್ರವನ್ನು ತೀವ್ರ ಬದಲಾವಣೆಯೊಂದಿಗೆ ೨೧ನೆಯ ಶತಮಾನಕ್ಕೆ ಕೊಂಡೊಯ್ಯಬೇಕೆನ್ನುವ ಇವರ ಆದಮ್ಯ ಬಯಕೆ ಅನನ್ಯವೆನಿಸಿದೆ.

ನಾಡೋಜ ಗೌರವ ಪದವಿ ಸ್ವೀಕರಿಸಲಿರುವ ಮಾನ್ಯ ಶ್ರೀ ಎ.ಎನ್. ಮೂರ್ತಿ ರಾವ್ ಅವರು ಭೌತಿಕ ಮತ್ತು ಸಾಂಸ್ಕೃತಿಕ ಎರಡೂ ಅರ್ಥಗಳಲ್ಲಿ ‘ಶತಮಾನ ಪುರುಷ’ ಎನಿಸಿದ್ದಾರೆ. ‘ಮೌಲ್ಯ’ ವನ್ನು ವ್ಯಕ್ತಿಯಾಗಿ ಬದುಕಿ, ಲೇಖಕರಾಗಿ ಬರೆಯುವ ಹಿರಿಯ ಸಾಹಿತಿಗಳಾದ ಶ್ರೀಯುತರು ಕನ್ನಡ ಪ್ರಬಂಧ ಸಾಹಿತ್ಯ ಪ್ರಕಾರಕ್ಕೆ, ವಿಚಾರ ಸಾಹಿತ್ಯ ಪ್ರಕಾರಕ್ಕೆ ನೀಡಿದ ಕೊಡುಗೆ ಅರ್ಥಪೂರ್ಣವಾದುದು. ಅಂದರೆ ಗುಣಾತ್ಮಕವಾಗಿರುವ ಅದು ಒಳನೋಟಗಳಿಂದ ತುಂಬಿದ್ದು, ಹೊಸ ವೈಚಾರಿಕ ದೃಷ್ಟಿಕೋನದಿಂದ ಶೋಭಿಸುತ್ತದೆ.

ನುಡಿಹಬ್ಬದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಮಾನ್ಯ ಡಾ. ಹಾ.ಮಾ. ನಾಯಕ ಅವರದು ತುಂಬ ದೊಡ್ಡ ಹೆಸರು. ಅಖಂಡ ಕರ್ನಾಟಕವನ್ನು ಸಮಾನವಾಗಿ ಪ್ರೀತಿಸುವ ಇವರು, ದೇಶ-ವಿದೇಶ ಮಟ್ಟದಲ್ಲಿ ಕನ್ನಡದ ರಾಯಭಾರಿಯಂತೆ ದುಡಿದವರು. ಕನ್ನಡದ ಹಿತರಕ್ಷಣೆ ವಿಷಯದಲ್ಲಿ ನಿರ್ಭೀತ ಸಲಗದಂತೆ ನಡೆದು ಕೊಳ್ಳುವ ಇವರು, ಅಂಥ ಸಂದರ್ಭಗಳಲ್ಲಿ ವಹಿಸಿದ ಶ್ರಮ, ತೋರಿದ ಶ್ರದ್ಧೆ ಶಬ್ದಾತೀತ. ಅಂಕಣ ಬರಹದ ಮೂಲಕ ಕರ್ನಾಟಕದ ಮನೆಮನಗಳನ್ನು ಮುಟ್ಟಿದ ಡಾ. ನಾಯಕ ಅವರು, ಆ ಪ್ರಕಾರಕ್ಕೆ ಸಾಹಿತ್ಯಕ್ಷೇತ್ರದಲ್ಲಿ ಒಂದು ಸ್ಥಿರವಾದ ಸ್ಥಾನ ಗೌರವವನ್ನು ತಂದುಕೊಟ್ಟವರು.

ಈ ಸಮಾರಂಭಕ್ಕೆ ಆಗಮಿಸಿರುವ ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಕನ್ನಡ ವಿಶ್ವವಿದ್ಯಾಲಯವನ್ನು ತುಂಬ ಗಾಢವಾಗಿ ಪ್ರೀತಿಸುತ್ತಲಿರುವರೆಂಬುದು ನನ್ನ ಪ್ರತ್ಯಕ್ಷ ಅನುಭವದ ಮಾತಾಗಿದೆ. ನುಡಿಹಬ್ಬದಲ್ಲಿ ಪಾಲ್ಗೊಂಡ ಇವರೆಲ್ಲರನ್ನು, ನಿಮ್ಮೆಲ್ಲರನ್ನು ಇನ್ನೊಮ್ಮೆ ಗೌರವದಿಂದ ಸ್ವಾಗತಿಸುತ್ತೇನೆ.

ಮೂಲತಃ ಧಾರ್ಮಿಕ ಕೇಂದ್ರವಾಗಿರುವ ಹಂಪಿ, ಕವಿ ಹರಿಹರನಿಂದಾಗಿ ಸಾಹಿತ್ಯ ಕೇಂದ್ರವಾಗಿ, ಹಕ್ಕಬುಕ್ಕರಿಂದ ರಾಜಕೀಯ ಕೇಂದ್ರವಾಗಿ ಬೆಳೆದು ‘ವಿಜಯನಗರ’ ವೆನಿಸಿತು. ಇಂದು ಆ ವಿಜಯನಗರವೇ ಕನ್ನಡ ವಿಶ್ವವಿದ್ಯಾಲಯ ಹೆಸರಿನಲ್ಲಿ ‘ವಿದ್ಯಾನಗರ’ವಾಗಿ ಬೆಳೆಯುತ್ತಲಿದೆ. ಈ ಉನ್ನತ ವಿದ್ಯಾಸಂಸ್ಥೆ ಭೌತಿಕ ಮತ್ತು ಬೌದ್ಧಿಕ ನೆಲೆಗಳಲ್ಲಿ ಮುನ್ನಡೆಯಬೇಕೆಂದು ನಮ್ಮ ಆಸೆ.
ಭೌತಿಕ ಸಾಧನೆಯನ್ನು ಕುರಿತು ಹೇಳುವುದಾದರೆ ಈ ವರ್ಷ ಕರ್ನಾಟಕ ಸರ್ಕಾರದಿಂದ ೩೬ ಲಕ್ಷ ರೂಪಾಯಿ ಹೆಚ್ಚಿನ ಅನುದಾನ ಲಭ್ಯವಾಗಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆ ಖ್ಯಾತಿಯ ಸಂಯುಕ್ತ ಕರ್ನಾಟಕದ ‘ಲೋಕಶಿಕ್ಷಣ ಟ್ರಸ್ಟ್’ ಕಾರ್ಯದರ್ಶಿಗಳಾದ ಶ್ರೀ ಕೆ. ಶ್ಯಾಮರಾವ್ ಅವರು ಗಳಗನಾಥರ ಸಮಗ್ರ ಕಾದಂಬರಿ ಸಾಹಿತ್ಯದ ಪ್ರಕಟನೆಗೆ ದೊಡ್ಡ ಮೊತ್ತದ ಹಣ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯ ಲೋಕಸಭಾ ಸದಸ್ಯರಾಗಿದ್ದ ಮಾನ್ಯ ಶ್ರೀ ಕೆ.ಸಿ. ಕೊಂಡಯ್ಯ ಅವರು ನೀಡಿದ್ದ ಲೊಕಸಭಾ ಸದಸ್ಯ ನಿಧಿಯಿಂದ ರಸ್ತೆಗಳು ಡಾಂಬರೀಕರಣಗೊಂಡಿದ್ದು, ಇಂದೇ ಅವರಿಂದ ‘ಸೂರ್ಯಬೀದಿ’ ಮತ್ತು ‘ಚಂದ್ರಬೀದಿ’ಗಳು ಉದ್ಘಾಟನೆಗೊಂಡಿದೆ. ಕೊಪ್ಪಳ ಜಿಲ್ಲೆಯ ಲೋಕಸಭಾ ಸದಸ್ಯರಾದ ಶ್ರೀ ಹೆಚ್.ಜಿ. ರಾಮುಲು ಅವರು ನೀಡಿದ ಲೋಕಸಭಾ ಸದಸ್ಯ ನಿಧಿಯಿಂದ ರೂಪಗೊಳ್ಳಲಿರುವ ‘ಸಮಗ್ರ ನೀರು ಪೂರೈಕೆ ಯೋಜನೆ’ಗಾಗಿ ಇಂದೇ ಅವರಿಂದ ಅಡಿಗಲ್ಲು ಸ್ಥಾಪಿತವಾಗಿದೆ.

ಬಳ್ಳಾರಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಕೊಡಮಾಡಿರುವ ಹಣದಿಂದ ‘ಅಕ್ಷರೋದ್ಯಾನ’ ಮತ್ತು ‘ಕ್ರಿಯಾಶಕ್ತಿ ವನ’ಗಳನ್ನು ನಿರ್ಮಿಸಲಾಗಿದೆ. ಕೊಪ್ಪಳ ಜಿಲ್ಲಾ ಪಂಚಾಯತ್‌ದವರು ಸ್ವರ್ಣ ಜಯಂತಿ ಗ್ರಾಮ ರೋಜಗಾರ ಯೋಜನೆಯ ಅಧ್ಯಯನಕ್ಕಾಗಿ ಮತ್ತು ಕೊಪ್ಪಳ ಜಿಲ್ಲಾ ಅಭಿವೃದ್ಧಿ ಗ್ರಂಥ ರಚನೆಗಾಗಿ ಆರ್ಥಿಕ ನೆರವು ನೀಡಿದ್ದಾರೆ. ಅರಣ್ಯ ಇಲಾಖೆಯವರು ವಿಶ್ವವಿದ್ಯಾಲಯದ ಆವರಣದಲ್ಲಿ ಈ ವರ್ಷ ೧೦ ಸಾವಿರ ಗಿಡಗಳನ್ನು ಬೆಳೆಸಿದ್ದಾರೆ. ಇವರೆಲ್ಲರಿಗೆ ವಿಶ್ವವಿದ್ಯಾಲಯ ಋಣಿಯಾಗಿದೆ.

ಹೀಗೆ ತನ್ನ ಸಂಪನ್ಮೂಲಗಳನ್ನು ಸರಕಾರ ಮತ್ತು ಸಾರ್ವಜನಿಕರಿಂದ ಕ್ರೋಢೀಕರಿಸಿ ಕೊಂಡು, ಅರ್ಧಕ್ಕೆ ನಿಂತಿದ್ದ ವಸತಿಗೃಹಗಳನ್ನು ಇತರ ಕಾಮಗಾರಿಗಳನ್ನು ಪೂರ್ಣ ಗೊಳಿಸುವ ಕಾರ್ಯವನ್ನು ಮಾಡುತ್ತಲಿದ್ದೇವೆ. ಎನ್.ಎಸ್. ಎಸ್. ಶಿಬಿರಗಳನ್ನು ಏರ್ಪಡಿಸಿ ಆವರಣದ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. ‘ಪುಸ್ತಕ ಮಾರಾಟ ಮಳಿಗೆ’ಯ  ಕಟ್ಟಡ ಕಾರ್ಯ ಇಷ್ಟರಲ್ಲಿ ಆರಂಭವಾಗಲಿದೆ. ಇಂದೇ ಉನ್ನತ ಶಿಕ್ಷಣ ಸಚಿವರಾದ ಮಾನ್ಯ ಶ್ರೀ ಜಿ. ಪರಮೇಶ್ವರ ಅವರು “ಮಾನಸೋಲ್ಲಾಸ” ಹೆಸರಿನ ಕುಲಪತಿ ನಿವಾಸದ, ತೋಟಗಾರಿಕೆ ಸಚಿವರಾದ ಮಾನ್ಯ ಶ್ರೀ ಅಲ್ಲಂ ವೀರಭದ್ರಪ್ಪನವರು ‘ಭುವನವಿಜಯ ಉದ್ಯಾನದ” ಅಡಿಗಲ್ಲು ಸಮಾರಂಭವನ್ನು ನೆರವೇರಿಸಿದ್ದಾರೆ.

ಜಾನಪದ-ಬುಡಕಟ್ಟು ವಸ್ತುಸಂಗ್ರಹಾಲಯ, ಇತಿಹಾಸ-ಪುರಾತತ್ವ ಸಂಗ್ರಹಾಲಯ ಮತ್ತು ಸಾಹಿತಿ – ಕಲಾವಿದರ ಚಿತ್ರಶಾಲೆಗಳನ್ನು ಸ್ಥಾಪಿಸಿ, ಅವುಗಳ ಬೆಳವಣಿಗೆಗಾಗಿ ವಿಶೇಷ ಪ್ರಯತ್ನ ಮಾಡುತ್ತಲಿದ್ದೇವೆ. ಪ್ರತಿವರ್ಷ ಬುಡಕಟ್ಟು- ಜಾನಪದ- ಸಾಂಪ್ರದಾಯಿಕ ಚಿತ್ರಕಲಾ ಸ್ಪರ್ಧೆ ಏರ್ಪಡಿಸುವ ಹೊಸ ಯೋಜನೆಯನ್ನು ಈ ವರ್ಷದಿಂದ ಆರಂಭಿಸಿದ್ದೇವೆ. ಮಾಹಿತಿ ತಂತ್ರಜ್ಞಾನದ ಬಗೆಗೆ ಕರ್ನಾಟಕ ಸರ್ಕಾರ ಹೊಸ ಅಧ್ಯಾಯ ಆರಂಭಿಸಿದ್ದು, ಇದಕ್ಕೆ ಸಹಮತವೆನ್ನುವಂತೆ ಕನ್ನಡ ವಿಶ್ವವಿದ್ಯಾಯ ತನ್ನ ಎಲ್ಲ ವಿಭಾಗಗಳಿಗೆ ಈ ತಂತ್ರಜ್ಞಾನವನ್ನು ಸಮಗ್ರವಾಗಿ ಅಳವಡಿಸಲಾಗಿದೆ. ಮುಂದುವರಿದು, ಜಾಗತಿಕ ಸಂಪರ್ಕಕ್ಕಾಗಿ ನಿನ್ನೆಯೇ ವೆಬ್‌ಸೈಟ್ ಉದ್ಘಾಟನೆಯಾಗಿರುವುದು ಈ ವರ್ಷದ ಇನ್ನೊಂದು ಸಾಧನೆಯಾಗಿದೆ. ಹೆಚ್ಚಿನದಾಗಿ ಕಟ್ಟಡಗಳಿಗೆ ವಿದ್ಯುತ್ ದೀಪ, ಆಂತರಿಕ ದೂರವಾಣಿಗಳನ್ನು ಕಲ್ಪಿಸುವುದರೊಂದಿಗೆ, ಒಂದು ಸಾವಿರ ಎಕರೆ ಭೂಮಿಗೆ ತಂತಿಬೇಲಿಯನ್ನು ಕಟ್ಟಿಸಿ, ವಿಶ್ವವಿದ್ಯಾಲಯದ ಆವರಣವನ್ನು ಸಂರಕ್ಷಿಸಲಾಗಿದೆ.

ಶೈಕ್ಷಣಿಕ ಪ್ರಗತಿಯನ್ನು ಕುರಿತು ಹೇಳುವುದಾದರೆ, ‘ವಿಶ್ವವಿದ್ಯಾಲಯ ಧನಸಹಾಯ ಆಯೋಗ’ದ ಸಂಲಗ್ನತೆ ಪ್ರಾಪ್ತವಾದುದು, ಕನ್ನಡ ವಿಶ್ವವಿದ್ಯಾಲಯದ ಚರಿತ್ರೆಯಲ್ಲಿಯೇ ಐತಿಹಾಸಿಕ ತಿರುವೆನಿಸಿದೆ. ವಿಶ್ವವಿದ್ಯಾಲಯ ರಾಷ್ಟ್ರೀಯ ಮುಖ್ಯ ಪ್ರವಾಹದಲ್ಲಿ ಸೇರಿಕೊಂಡ ಈ ಪ್ರಕ್ರಿಯೆಯಿಂದಾಗಿ, ಮೊದಲ ಕಂತು ೯೦ ಲಕ್ಷ ರೂಪಾಯಿ ಮಂಜೂರಾಗಿದ್ದು, ಹೆಚ್ಚಿನದಾಗಿ ನಮ್ಮ ಅಧ್ಯಾಪಕರು ವಿವಿಧ ರೀತಿಯ ಲಾಭಗಳನ್ನು ಪಡೆಯಲು ಅನೇಕ ಅವಕಾಶಗಳು ತೆರೆದುಕೊಂಡಿವೆ.

ಇಂತಹದೇ ಇನ್ನೊಂದು ಸಾಧನೆಯೆಂದರೆ, ವಿಶ್ವವಿದ್ಯಾಲಯ ಬಾದಾಮಿಗೆ ಶಿಲ್ಪಕಲಾ ವಿಭಾಗವನ್ನು ವರ್ಗಾಯಿಸುವ ಮೂಲಕ ಈವರೆಗೆ ಏಕಕೇಂದ್ರಿಯವಾಗಿದ್ದ ಈ ವಿಶ್ವವಿದ್ಯಾಲಯವನ್ನು ಬಹುಕೇಂದ್ರೀಯತೆಗೆ ಹೊರಳಿಸಿದುದು. ಈ ವರ್ಷ ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದೊಂದರಂತೆ ಇಂಥ ಇನ್ನೂ ಎರಡು ಕೇಂದ್ರಗಳನ್ನು ತೆರೆಯುವ ಪ್ರಯತ್ನದಲ್ಲಿದ್ದೇವೆ.

ವಿಭಾಗಗಳು ಕ್ರಿಯಾಶೀಲವಾದರೆ ವಿಶ್ವವಿದ್ಯಾಲಯ ಕ್ರಿಯಾಶೀಲವಾಗುತ್ತದೆ. ವಿಭಾಗಗಳು ಬೆಳೆದರೆ ವಿಶ್ವವಿದ್ಯಾಲಯ ಬೆಳೆಯುತ್ತದೆ. ಈ ತಿಳಿವಳಿಕೆಯ ಮೇಲೆ ಹೆಚ್ಚು ಒತ್ತುಕೊಟ್ಟು, ಪ್ರತಿಯೊಂದು ವಿಭಾಗಕ್ಕೆ ಈ ವರ್ಷವೂ ಸಾಂಸ್ಥಿಕ ಯೋಜನೆ, ವೈಯಕ್ತಿಕ ಯೋಜನೆ, ವಿಚಾರ ಸಂಕಿರಣಗಳನ್ನು ವಹಿಸಿಕೊಡಲಾಗಿದೆ. ಇವುಗಳಲ್ಲಿ ಸಾಂಸ್ಥಿಕ ಯೋಜನೆಗಳಾದ ಕರ್ನಾಟಕ ಸಂಸ್ಕೃತಿ ಚರಿತ್ರೆ ಸಂಪುಟಗಳು, ಕರ್ನಾಟಕ ಪುರಾತತ್ವ ಚರಿತ್ರೆ ಸಂಪುಟಗಳು, ಕರ್ನಾಟಕ ಬುಡಕಟ್ಟು ಸಂಸ್ಕೃತಿ ಸಂಪುಟಗಳು, ಕರ್ನಾಟಕ ದೇವಾಲಯ ಕೋಶ, ಕರ್ನಾಟಕ ಜನಸಮುದಾಯ ಕೋಶ, ಶಾಸನ ಸಂಪುಟ, ವೃತ್ತಿ ಪದಕೋಶ ಮುಖ್ಯವೆನಿಸಿವೆ. ಹೆಚ್ಚಿನದಾಗಿ ವೈಯಕ್ತಿಕ ಯೋಜನೆ ಅಡಿಯಲ್ಲಿ ಉತ್ತಮೋತ್ತಮ ಕೃತಿಗಳ ರಚನಾಕಾರ್ಯ ಮುನ್ನಡೆದಿದೆ. ಈ ವರ್ಷವೂ ವಿಚಾರ ಸಂಕಿರಣಗಳಿಗಾಗಿ ವಿಶೇಷ ಗಮನ ಕೊಡಲಾಗಿದ್ದು, ವಿಕೇಂದ್ರಿತ ಅಭಿವೃದ್ಧಿಯ ಆದರ್ಶದಲ್ಲಿ ಮೈಸೂರು ವಿಶ್ವವಿದ್ಯಾಲಯ ಮೊದಲಾದ ದೂರದ ಸಂಸ್ಥೆಗಳ ಸಹಯೋಗದೊಂದಿಗೆ ಇವುಗಳನ್ನು ಜರುಗಿಸಲಾಗಿದೆ. ಇದರಿಂದಾಗಿ ಅಧ್ಯಾಪಕರಲ್ಲಿ ಸಾಂಸ್ಕೃತಿಕ ಜವಾಬ್ದಾರಿ ಈ ವರ್ಷ ಇನ್ನೂ ಜಾಗೃತವಾಗಿ, ಅವರಲ್ಲಿ ಆರೋಗ್ಯ ಪೂರ್ಣ ಸ್ಪರ್ಧೆ ಸೃಷ್ಟಿಯಾಗಿದೆ.

ಇಂದು ಕಲಿಯುವ ಶಿಕ್ಷಣಕ್ಕೂ, ಬದುಕುವ ಜೀವನಕ್ಕೂ ಸಂಬಂಧ ತಪ್ಪಿ ಹೋಗುತ್ತಲಿದೆ. ಇದನ್ನು  ಸರಿಪಡಿಸುವ ಉದ್ದೇಶದಿಂದ “ಆನ್ವಯಿಕ ಸ್ನಾತಕೋತ್ತರ ಶಿಕ್ಷಣ” ವೆಂಬ ಹೊಸ ಬಗೆಯ ಶಿಕ್ಷಣವನ್ನು ಆರಂಭಿಸುವ ಸಿದ್ದತೆಯಲ್ಲಿದ್ದೇವೆ. ಹೊಸದಾಗಿ “ವಿಜ್ಞಾನ ನಿಕಾಯ”ವನ್ನು ಆರಂಭಿಸಿ, ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಸಂಬಂಧಪಟ್ಟ ಪಠ್ಯ ಮತ್ತು ಪೂರಕ ಸಾಹಿತ್ಯವನ್ನು ಪ್ರಕಟಿಸುವ ಗುರಿ ನಮ್ಮದಾಗಿದೆ.

ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ವಿಭಾಗವೆಂದರೆ ಪ್ರಸಾರಾಂಗ. ಕನ್ನಡ ವಿಶ್ವವಿದ್ಯಾಲಯಕ್ಕೆ ಏಕೈಕ ಆದಾಯ ಮೂಲವಾಗಿರುವ ಈ ಶಾಖೆ, ಜೇನು ಹುಟ್ಟಿನಂತೆ ದುಡಿದು ಕಳೆದ ವರ್ಷ ಪುಸ್ತಕಗಳ ಮಾರಾಟದಿಂದ ೫೦ ಲಕ್ಷ ರೂಪಾಯಿಗಳನ್ನು ಗಳಿಸಿದೆ. ಈ ವರ್ಷವೂ ಆ ದಾರಿಯಲ್ಲಿ ಮುನ್ನಡೆದು ಬೆಳಗಾವಿ, ಸಂಕೇಶ್ವರ, ಧರ್ಮಸ್ಥಳ, ಪುತ್ತೂರು, ಉಡುಪಿ, ತುಮಕೂರು, ಸಾಗರ, ಗಂಗಾವತಿ, ಚಿತ್ರದುರ್ಗ, ಬೆಂಗಳೂರು ಮತ್ತು ಹಾಸನಗಳಿಗೆ ಪುಸ್ತಕ ಸಂಸ್ಕೃತಿ ಯಾತ್ರೆಯನ್ನು ಕೈಕೊಂಡು, ಪುಸ್ತಕ ಮಾರಾಟದಲ್ಲಿ ವೇಗದ ಹೆಜ್ಜೆಯನ್ನು ಹಾಕಿದೆ. ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯ, ಧಾರವಾಡದ ಕೃಷಿ ವಿಶ್ವವಿದ್ಯಾಲಯ, ರಾಯಚೂರಿನ ಜಿಲ್ಲಾ ಸಾಹಿತ್ಯ ಪರಿಷತ್‌ನೊಂದಿಗೆ ಜರುಗಿಸಿದ ಉಪನ್ಯಾಸ, ವಿಚಾರ ಸಂಕಿರಣಗಳೂ ಮಂಗಳೂರು, ಧಾರವಾಡ, ಕೊಪ್ಪಳ, ಸಂಕೇಶ್ವರ, ಹೆಬ್ರಿ, ಚೆಳ್ಳಗುರ್ಕಿ ಗ್ರಾಮಗಳಲ್ಲಿ ಜರುಗಿದ ಪ್ರಚಾರೋಪನ್ಯಾಸಗಳೂ ಎತ್ತಿ ಹೇಳಬೇಕಾದುವು.

“ವೇಗ ಮತ್ತು ಗುಣಮಟ್ಟ” (Speed & Quality)ಗಳನ್ನು ಆದರ್ಶವಾಗಿಟ್ಟುಕೊಂಡು ದುಡಿಯುತ್ತಲಿರುವ ಪ್ರಸಾರಾಂಗದ ಮೂಲಕ, ಈ ವರ್ಷ ಒಟ್ಟು ೧೦೦ ಪುಸ್ತಕಗಳು ಪ್ರಕಟವಾಗಿವೆ. ಇವುಗಳಲ್ಲಿ ನಿನ್ನೆ ಜರುಗಿದ “ಆರನೆಯ ನುಡಿಹಬ್ಬಕ್ಕೆ ಅರುವತ್ತು ಪುಸ್ತಕಗಳ ಬಿಡುಗಡೆ” ಕಾರ್ಯಕ್ರಮವು ಅಪೂರ್ವ ಸಾಧನೆಯ ದ್ಯೋತಕವೆನಿಸಿದೆ. ನಮ್ಮ ಅಧ್ಯಾಪಕರಾದ ಡಾ. ಕೆ.ವಿ. ನಾರಾಯಣ, ಡಾ. ಎಚ್.ಎಸ್. ಶ್ರೀಮತಿ, ಡಾ. ರಹಮತ್ ತರೀಕೆರೆ ಬರೆದ ಪುಸ್ತಕಗಳು ಈ ವರ್ಷವೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೆದ್ದುಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಡಾ. ಲಕ್ಷ್ಮಣ್ ತೆಲಗಾವಿ ಅವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿಯಾದ “ಡಾ. ಅಂಬೇಡ್ಕರ್ ಫೆಲೋಶಿಪ್” ಪ್ರಾಪ್ತವಾದುದು ನಮಗೆಲ್ಲ ಹೆಮ್ಮೆಯನ್ನುಂಟು ಮಾಡಿದೆ.

ಕನ್ನಡ ವಿಶ್ವವಿದ್ಯಾಲಯ ತನ್ನ ಬಾಹುಳನ್ನು ಕ್ರಮೇಣ ಎಡಬಲಕ್ಕೆ ಚಾಚುತ್ತ ನಡೆದಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶ ಕನ್ನಡ ಪರಂಪರೆಯನ್ನು ಶೋಧಿಸುತ್ತ ತನ್ನ ಬೇರುಗಳನ್ನು ದ್ರಾವಿಡ ಸಂಸ್ಕೃತಿಯಲ್ಲಿ ಕಂಡುಕೊಳ್ಳುವುದಾಗಿದೆ. ಈ ಉದ್ದೇಶದ ಸಫಲತೆಗಾಗಿ ತಂಜಾವೂರಿನ ತಮಿಳು ವಿಶ್ವವಿದ್ಯಾಲಯದೊಂದಿಗೆ “ಸಂಗಂ ಸಾಹಿತ್ಯ”ದ ಅನುವಾದ ಕಾರ್ಯವನ್ನೂ, ಕುಪ್ಪಂ, ದ್ರಾವಿಡ ವಿಶ್ವವಿದ್ಯಾಲಯದೊಂದಿಗೆ “ತಮಿಳು ಮಹಾಕಾವ್ಯ”ಗಳ ಅನುವಾದ ಕಾರ್ಯವನ್ನೂ, ಹೈದ್ರಬಾದಿನ ತೆಲುಗು ವಿಶ್ವವಿದ್ಯಾಲಯದೊಂದಿಗೆ “ತೆಲುಗು ಸಾಂಸ್ಕೃತಿಕ ಕಾವ್ಯ”ಗಳ ಅನುವಾದ ಕಾರ್ಯವನ್ನೂ ಕೈಗೆತ್ತಿಕೊಳ್ಳುವ ಸಿದ್ಧತೆಯಲ್ಲಿದೆ, ಪ್ರಸಾರಾಂಗ. ಇಂದು ಪ್ರಕಟವಾದ ಕನ್ನಡ ಇನ್‌ಸ್ಕ್ರಿಪ್ಸನ್ಸ್ ಆಫ್ ಆಂಧ್ರಪ್ರದೇಶ, ತೆಲುಗು ದಾಕ್ಷಿಣಾತ್ಯ ಸಾಹಿತ್ಯ, ಬಳ್ಳಾರಿ ಜಿಲ್ಲೆಗೆ ತೆಲುಗರ ವಲಸೆ, ಪ್ರಕಟವಾಗಲಿರುವ ಕರ್ನಾಟದ ಉರ್ದು – ಪರ್ಸೊ-ಅರೆಬಿಕ್ ಶಾಸನ ಸಂಪುಟ ಕೃತಿಗಳು ಈ ದಿಸೆಯ ಆರಂಭಿಕ ಪ್ರಯತ್ನಗಳಾಗಿವೆ.

ಸಾಹಿತ್ಯವನ್ನು ಸುಲಭ ಬೆಲೆಯಲ್ಲಿ ಜನರಿಗೆ ತಲುಪಿಸುವ ವಿನೂತನ ಯೋಜನೆಯನ್ನು ಈ ವರ್ಷದಿಂದ ಆರಂಭಿಸಿ, ೪,೫೦೦ ಪುಟಗಳ, ಆರು ಸಂಪುಟಗಳ ಗಳಗನಾಥರ ೨೨ ಕಾದಂಬರಿಗಳನ್ನು ಕೇವಲ ೬೦೦ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ೫೦೦ಪುಟಗಳ ಹರಿಹರನ ರಗಳೆಗಳ ಸಮಗ್ರ ಸಂಪುಟಕ್ಕೆ ಕೇವಲ ರೂ. ೧೦೦ ಬೆಲೆ ಇಡಲಾಗಿದೆ. ಒಟ್ಟಾರೆ ಇಂದು ಪುಸ್ತಕದ ಉತ್ಪಾದನೆ, ಪ್ರಕಾಶನ, ಗುಣಮಟ್ಟ, ಮಾರಾಟ ವಿಷಯಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆಯೆಂದು ಹೇಳಲು ಸಂತೋಷವೆನಿಸುತ್ತದೆ.

ವಿದೇಶಗಳಲ್ಲಿ ಕನ್ನಡವನ್ನು ಪ್ರಸಾರ ಮಾಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಜರ್ಮನಿಯ ಟುಬಿಂಗನ್ ವಿಶ್ವವಿದ್ಯಾಲಯದ ಭಾರತೀಯಶಾಸ್ತ್ರ ಪ್ರಾರ್ಧಯಾಪಕರಾದ ಶ್ರೀಮತಿ ಬ್ರೂಕ್ನರ್ ಅವರನ್ನು ಇಲ್ಲಿಗೆ ಆಮಂತ್ರಿಸಿ ಅವರೊಂದಿಗೆ, ಮೊದಲ ಸುತ್ತಿನ ಚರ್ಚೆ ನಡೆಸಲಾಗಿದೆ. ಈ ವಿಚಾರದ ಮುಂದುವರಿಕೆಯೆಂಬಂತೆ ಹಾಲೆಂಡ್, ಶ್ರೀಲಂಕಾ, ಥೈಲ್ಯಾಂಡ್, ಇಂಡೋನೇಷಿಯಾ, ಮಲೇಷಿಯಾ, ಪಾಕಿಸ್ತಾನ, ಬಾಂಗ್ಲಾ ದೇಶಗಳ ಇತಿಹಾಸ ವಿದ್ವಾಂಸರು ಕಳೆದ ವಾರ ನೀಡಿದ ಭೇಟಿ, ಮಾಡಿದ ಭಾಷಣ ವಿಶೇಷವೆನಿಸಿವೆ. ಈ ವರ್ಷ ಅಮೇರಿಕೆಯ ಹೂಸ್ಟನ್‌ನಲ್ಲಿ ಜರುಗಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಶ್ವವಿದ್ಯಾಲಯ ಸಕ್ರಿಯವಾಗಿ ಭಾಗವಹಿಸುವ ಯೋಜನೆ ರೂಪಿಸಿಕೊಂಡಿದೆ. ವಿದೇಶದಲ್ಲಿರುವ ಕನ್ನಡಿಗರ ಮಕ್ಕಳಿಗಾಗಿ ಪ್ರತಿವರ್ಷ ಸಂಸ್ಕೃತಿ ಬೋಧನ ತರಬೇತಿಯನ್ನು, ಕರ್ನಾಟಕ ಪರವಾಸ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಹೀಗೆ ಜಾಗತಿಕ ಮುಖ್ಯ ವಾಹಿನಿಯಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ತೊಡಿಗಸುವ ಅನೇಕ ಯೋಜನೆಗಳು ನಮ್ಮ ಕಣ್ಣು ಮುಂದಿವೆ.

೧. ಈ ವರ್ಷದ ಅಕ್ಟೋಬರ್ ೨೩ ರಿಂದ ಇಡೀ ಒಂದು ವರ್ಷ ಕನ್ನಡ ವಿಶ್ವವಿದ್ಯಾಲಯದ ದಶಮಾನೋತ್ಸವ ಜರುಗಲಿದೆ. ಇದರ ಅಂಗವಾಗಿ ಕೆಲವು ಐತಿಹಾಸಿಕ ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದೇವೆ. ಇವುಗಳಲ್ಲಿ ಮುಖ್ಯವಾದುದು, “ಕರ್ನಾಟಕ ರಾಜ್ಯಕೋಶ” ಯೋಜನೆಯ ಅಡಿಯಲ್ಲಿ ಕರ್ನಾಟಕ ಭೂಮಿಕೋಶ, ಕರ್ನಾಟಕ ಸಸ್ಯಕೋಶ, ಕರ್ನಾಟಕ ಪ್ರಾಣಿ – ಪಕ್ಷಿಕೋಶ, ಕರ್ನಾಟಕ ಜನಸಮುದಾಯ ಕೋಶ, ಕರ್ನಾಟಕ ಭಾಷಾಕೋಶ  – ಪಂಚಕೋಶಗಳನ್ನು ಹೊರತರುವುದು. ಇದಲ್ಲದೆ ‘ಕವಿತಾಗುಣಾರ್ಣವ’ ಶೀರ್ಷಿಕೆಯಲ್ಲಿ ಪಂಪನ ಎರಡೂ ಕೃತಿಗಳನ್ನು, ಕುಮಾರರಾಮನ ಸಾಂಗತ್ಯಗಳ ಸಮಗ್ರ ಸಂಪುಟವನ್ನು, ಕುಮಾರವ್ಯಾಸ ಭಾರತ, ಭರತೇಶ ವೈಭವ ಸಂಪುಟಗಳನ್ನು, ಕುವೆಂಪು – ಬೇಂದ್ರೆ ಕವನಗಳ ಸಮಗ್ರ ಸಂಪುಟಗಳನ್ನು ಪ್ರಕಟಿಸುವುದು.

ಚಿತ್ರ, ಶಿಲ್ಪ, ಸಂಗೀತ, ನೃತ್ಯ ಮೊದಲಾದ ಕಲೆಗಳ ಅಧ್ಯಯನ, ತರಬೇತಿಗಳಿಗಾಗಿ ಒಂದು ಕೋಟಿ ರೂಪಾಯಿ ಮೌಲ್ಯದ ‘ದಶಮಾನೋತ್ಸವ ಸ್ಮಾರಕ ಭವನ’ ವನ್ನು ನಿರ್ಮಿಸುವುದು. ಇದಲ್ಲದೆ ಶೈಕ್ಷಣಿಕ ವಾತಾವರಣಕ್ಕೆ ಪೂರಕವೆಂಬಂತೆ ಕನ್ನಡ ವಿಶ್ವವಿದ್ಯಾಲಯದ ಆವರಣದ ಸಮಗ್ರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಸ್ತೆ ಡಾಂಬರೀಕರಣ, ರಸ್ತೆದೀಪ, ಉದ್ಯಾನ, ನೀರು ಪೂರೈಕೆ, ಅಧ್ಯಾಪಕ-ಅಧ್ಯಾಪಕೇತರ ವಸತಿಗೃಹ, ಪ್ರಾಥಮಿಕ ಶಾಲಾ ಕಟ್ಟಡ, ಅಂಚೆಮನೆ, ಬ್ಯಾಂಕ್ ಕಟ್ಟಡ, ಬಸ್ ನಿಲ್ದಾಣ ಇತ್ಯಾದಿಗಳನ್ನು ನಿರ್ಮಿಸುವುದು. ಇನ್ನೂ ಒಂದು ವಿಷಯವೆಂದರೆ ಇಕ್ಕಟ್ಟಾದ ಬೀದಿಗಳಲ್ಲಿ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಲು ಮತ್ತು ೩ ಕಿ.ಮೀ. ಸುತ್ತು ಬಳಸುವುದನ್ನು ನಿವಾರಿಸಲು ಸುಮಾರು ೨೦ ಲಕ್ಷ ವೆಚ್ಚದಲ್ಲಿ ‘ಕಮಲಾಪುರ ಬೈಪಾಸ್ ರಸ್ತೆ’ಯನ್ನು ನಿರ್ಮಿಸುವುದು ಅವಶ್ಯವಿದೆ. ವಿಶ್ವವಿದ್ಯಾಲಯದ ಘನತೆಗೆ ತಕ್ಕಂತೆ ‘ಹಳ್ಳಿಕೆರೆ’ ಏರಿಯ ಮೇಲೆ ಅಗಲವಾದ ಜೋಡು ರಸ್ತೆ ಅಥವಾ ನೇರ ರಸ್ತೆ ಅಗತ್ಯವಿದೆ. ಈ ಎಲ್ಲ ಕೆಲಸಗಳಿಗಾಗಿ ೧೦ ಕೋಟಿ ರೂಪಾಯಿ ಬೇಕಾಗುತ್ತದೆ. ಬಳ್ಳಾರಿ ಜಲ್ಲೆಯ ಅಭಿವೃದ್ಧಿಗಾಗಿ ಈ ವರ್ಷ ತೆಗೆದಿಟ್ಟಿರುವ ೩,೩೦೦ ಕೋಟಿ ಹಣದಲ್ಲಿ ಮೇಲೆ ಸೂಚಿಸಿದ ೧೦ ಕೋಟಿ ಹಣವನ್ನು ನೀಡಬೇಕೆಂದು ಕೋರುತ್ತೇನೆ.

೨. ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರತಿವರ್ಷ ೩ ಕೋಟಿ ಅನುದಾನ ನಿಡುತ್ತ ಬರಲಾಗಿದೆ. ವರ್ಧಿಸಿದ ಶೈಕ್ಷಣಿಕ ಮತ್ತು ಇತರ ಚಟುವಟಿಕೆಗಳಿಂದಾಗಿ ಈ ಹಣ ಏನೂ ಸಾಲುವುದಿಲ್ಲ. ಕಾರಣ ಈ ಮೊತ್ತವನ್ನು ೩ ಕೋಟಿಯಿಂದ ೫ ಕೋಟಿಗೆ ಹೆಚ್ಚಿಸುವುದು ಅವಶ್ಯವಿದೆ.

೩. ಈ ಹಿಂದೆ ಹೆಚ್ಚುವರಿಯಾಗಿ ತುಂಬಿರುವ ೬೯ ಜನ ಕ್ರೋಢೀಕೃತ ನೌಕರರನ್ನು ಖಾಯಂಗೊಳಿಸುವುದು ಇಂದಿನ ಮುಖ್ಯ ತುರ್ತು ಎನಿಸಿದೆ.

ಸನ್ಮಾನ್ಯರಾದ ಕುಲಾಧಿಪತಿಗಳು ಮತ್ತು ಸಮಕುಲಾಧಿಪತಿಗಳು, ಆಗಮಿಸಿರುವ ಸಚಿವರು, ಶಾಸಕರು ಮೇಲೆ ಸೂಚಿಸಿದ ಮೂರೂ ಬೇಡಿಕೆಗಳನ್ನು ಪೂರೈಸಿಕೊಟ್ಟು ಬೆಳೆಯುವ ಹಂತದಲ್ಲಿರುವ ಈ ವಿಶ್ವವಿದ್ಯಾಲಯಕ್ಕೆ ನೆರವಾಗಬೇಕೆಂದು ಕೋರುತ್ತೇನೆ.

‘ಹಣವನ್ನು ನೀರಿನಂತೆ ಗಳಿಸು, ತೀರ್ಥದಂತೆ ಬಳಸು’ ಎಂಬ ನೀತಿ ನಮ್ಮ ಕಣ್ಣು ಮುಂದಿರುವುದರಿಂದ, ತಾವು ನೀಡಲಿರುವ ಪ್ರತಿಯೊಂದು ಪೈಸೆಯನ್ನು ನಾವು ಪವಿತ್ರವಾಗಿ ಬಳಸುತ್ತೇವೆ.  ‘ಎಲ್ಲ ರಸ್ತೆಗಳು ರೋಮ್‌ದ ಕಡೆಗೆ’ ಎಂಬಂತೆ ಜಗತ್ತಿನ ಕನ್ನಡದ ಎಲ್ಲ ಹಾದಿಗಳು ಹಂಪಿಯ ಕಡೆಗೆ ಕೇಂದ್ರೀಕರಣಗೊಳ್ಳುವಂತೆ ನಾವೆಲ್ಲ ದುಡಿಯುತ್ತೇವೆ.

೨೧ ಜನವರಿ ೨೦೦೦