ಕನ್ನಡ ವಿಶ್ವವಿದ್ಯಾಲಯಕ್ಕೆ ಈ ವರ್ಷ ದಶಮಾನೋತ್ಸವದ ಸಂಭ್ರಮ. ಈ ಸಂಭ್ರಮದ ಸಡಗರದಲ್ಲಿ ಜರುಗುತ್ತಲಿರುವ ೭ನೆಯ ಘಟಿಕೋತ್ಸವಕ್ಕೆ ಘನತೆವೆತ್ತ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀಮತಿ ವಿ.ಎಸ್. ರಮಾದೇವಿಯರನ್ನು, ಸಮ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀ ಜಿ. ಪರಮೇಶ್ವರ ಅವರನ್ನು, ಗೌರವಾನ್ವಿತರಾದ ಪದ್ಮಭೂಷಣ ಡಾ. ಯು.ಆರ್.ರಾವ್, ಪದ್ಮಭೂಷಣ ಡಾ. ಭೀಮಸೇನ ಜೋಶಿ ಅವರನ್ನು, ಗಣ್ಯ ಮಹನೀಯರನ್ನು, ವಿಶ್ವವಿದ್ಯಾಲಯದ ಕಾರ್ಯಕಾರಿ ಮತ್ತು ಆಡಳಿತ ಮಂಡಳಿಯ ಮಾನ್ಯ ಸದಸ್ಯರನ್ನು, ಸರ್ವಸಭಿಕರನ್ನು ಆದರದಿಂದ ಸ್ವಾಗತಿಸುತ್ತೇನೆ.

ಕರ್ನಾಟಕದ ಪ್ರಥಮ ಮಹಿಳಾ ರಾಜ್ಯಪಾಲರಾದ ಘನತೆವೆತ್ತ ಶ್ರೀಮತಿ ವಿ.ಎಸ್. ರಮಾದೇವಿ ಅವರು, ರಾಜಭವನದ ಬಾಗಿಲುಗಳನ್ನು ಪ್ರಜೆಗಳಿಗೆ ತೆರೆಯುವುದರ ಮೂಲಕ ತಾವು ರಾಜಸತ್ತಾಯುಗದ ರಾಜ್ಯಪಾಲರಲ್ಲ, ಪ್ರಜಾಸತ್ತಾಯುಗದ ರಾಜ್ಯಪಾಲರೆಂಬುದನ್ನು ಸಾಬೀತು ಪಡಿಸಿದ್ದಾರೆ. ಪ್ರಜೆಗಳ ಗುಡಿಸಲುಗಳೇ ರಾಜಭವನ ಎಂಬ ಇವರ ಸಾಮಾನ್ಯತಾಪ್ರಜ್ಞೆ ರಾಷ್ಟ್ರದ ಎಲ್ಲ ರಾಜ್ಯಪಾಲರಿಗೂ ಮಾದರಿಯಾಗಿದೆ. ಕನ್ನಡಿಗರ ತಾಯಿಯಾಗಿರುವ ಈ ‘ಗವ್ಹರ್ನರಮ್ಮ’ನಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಹಾರ್ದಿಕ ಸ್ವಾಗತವನ್ನು ಕೋರುತ್ತೇನೆ.

ವಿದ್ಯಾಸಚಿವರಾದ ಮಾನ್ಯ ಶ್ರೀ ಜಿ. ಪರಮೇಶ್ವರ ಅವರು ತಮ್ಮ ಹೆಸರಿಗೆ ಹೆಸರು ತರುವ ರೀತಿಯಲ್ಲಿ ನಮ್ಮೊಂದಿಗೆ ನಡೆದುಕೊಳ್ಳುವ ಬಗೆ ಅನನ್ಯವಾದುದು. ನಾವೆಲ್ಲ ಕುಲಪತಿಗಳು ಅವರ ಸೌಜನ್ಯ, ಸಹಕಾರ ಮನೋಭಾವಗಳಿಂದ ತುಂಬ ಪ್ರಭಾವಿತರಾಗಿದ್ದೇವೆ. ಎಲ್ಲ ವಿಶ್ವವಿದ್ಯಾಲಯಗಳ ಬಗ್ಗೆ ಅದರಲ್ಲಿಯೂ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಅಪಾರ ಪ್ರೀತಿಯಿಟ್ಟುಕೊಂಡಿರುವ ಮಾನ್ಯ ಸಮಕುಲಾಧಿಪತಿಗಳಿಗೆ ಆದರದ ಸ್ವಾಗತ ಬಯಸುತ್ತೇನೆ.

ಭಾರತೀಯ ಬಾಹ್ಯಕಾಶ ವಿಜ್ಞಾನದಲ್ಲಿ ಹೊಸ ಅಧ್ಯಾಯ ತೆರೆದು, ಕನ್ನಡಿಗರ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆದ ಮಾನ್ಯ ಶ್ರೀ ಯು.ಆರ್. ರಾವ್ ಅವರಿಗೂ, ಸಂಗೀತಕ್ಕೆ ಇನ್ನೊಂದು ಹೆಸರು ಎಂದೇ ಖ್ಯಾತರಾಗಿ, ಕನ್ನಡದ ಧ್ವನಿಯನ್ನು ಜಗತ್ತಿಗೆ ಕೇಳಿಸಿದ ಮಾನ್ಯ ಶ್ರೀ ಭೀಮಸೇನ ಜೋಶಿ ಅವರಿಗೂ ಗೌರವ ಪೂರ್ವಕ ಸ್ವಾಗತ ಕೋರುತ್ತೇನೆ ಮತ್ತು ಕನ್ನಡ ವಿಶ್ವವಿದ್ಯಾಲಯ ನೀಡಲಿರುವ “ನಾಡೋಜ” ಹೆಸರಿನ ಈ ತವರುಮನೆ ಬಾಗಿನವನ್ನು ಸ್ವೀಕರಿಸಬೇಕೆಂದು ಇಬ್ಬರಲ್ಲಿಯೂ ಭಿನ್ನವಿಸಿಕೊಳ್ಳುತ್ತೇನೆ.

“ಮಾತೆಂಬುದು ಜ್ಯೋತಿರ್ಲಿಂಗ” ಇದು ವಿಶ್ವವಿದ್ಯಾಲಯದ ಧ್ಯೇಯವಾಕ್ಯ ಈ ವಾಕ್ಯವನ್ನು ತಾನು ಬದುಕುವುದು, ಕನ್ನಡಿಗರೂ ಇದನ್ನು ಬದುಕುವಂತೆ ಮಾಡುವುದು, ಕನ್ನಡೇತರರಿಗೂ ಇದರ ಮಹತ್ವವನ್ನು ತಿಳಿಸಿಕೊಡುವುದು. ಹೀಗೆ ಮೂರು ನೆಲೆಗಳಲ್ಲಿ ದುಡಿಯವುದು ಈ ವಿಶ್ವವಿದ್ಯಾಲಯದ ದಾರಿ ಗುರಿ ಏನೆಲ್ಲ ಆಗಿದೆ.

“ಕನ್ನಡ ಮಾತ”ನ್ನು ಈ ವಿಶ್ವವಿದ್ಯಾಲಯ ಬದುಕುವುದೆಂದರೆ, “ಕನ್ನಡ ವಿದ್ಯೆ”ಯನ್ನು ತಾನು ಶೋಧಿಸುವುದು ಮತ್ತು ಉತ್ಪಾದಿಸುವುದು. ಕಳೆದ ಒಂಬತ್ತು ವರ್ಷಗಳಿಂದ ಈ ಶೋಧನ-ಉತ್ಪಾದನ ಕ್ರಿಯೆಗೆ ಈ ವಿದ್ಯಾಸಂಸ್ಥೆ ನೆಲವಾಗಿದೆ, ಒಲವಾಗಿದೆ. ಇಲ್ಲಿಯ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳ ಶ್ರಮದಿಂದಾಗಿ, ಈವರೆಗೆ ಕಳೆದುಹೋಗಿದ್ದ ಕನ್ನಡದ ದಾರಿಗಳು ಮತ್ತೊಮ್ಮೆ ಕಾಣಿಸಿಕೊಂಡಿವೆ. ಹೊಸದಾರಿಗಳು ಹುಟ್ಟಿಕೊಂಡಿವೆ. ಇದಕ್ಕೆ ಈ ಆವರಣದಲ್ಲಿ ಸೃಷ್ಟಿಯಾದ ಭೌತಿಕ ಅಭಿವೃದ್ಧಿ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಾಕ್ಷಿಯೆನಿಸಿವೆ.

ಈ ವರ್ಷದ ಭೌತಿಕ ಅಭಿವೃದ್ಧಿಯನ್ನು ಕುರಿತು ಹೇಳುವುದಾದರೆ, ಶಿಕ್ಷಕರ ೧೮ ಮನೆಗಳು, ಹೆಚ್ಚಿನದಾಗಿ ಕುಲಸಚಿವರ ಮನೆ, ಕುಲಪತಿ ಭವನ ಇವು ಈ ವರ್ಷದ ನಿರ್ಮಾಣವೆನಿಸಿವೆ. ಇವುಗಳಿಗಾಗಿ ನಾವು ವ್ಯಯಿಸಿದ ಹಣ ಸುಮಾರು ಒಂದೂವರೆ ಕೋಟಿ ರೂಪಾಯಿ. ಇದಲ್ಲದೆ ೮೦ ಲಕ್ಷ ರೂಪಾಯಿ ಮೌಲ್ಯದ ಸರ್ವಜ್ಞ ಹೆಸರಿನ ಗ್ರಂಥಾಲಯ ಕಟ್ಟಡದ ಕಾರ್ಯ ಆರಂಭವಾಗಿದೆ. ಇವುಗಳಿಗೆ ಆರ್ಥಿಕ ನೆರವು ನೀಡಿದ ಸಚಿವೆಯಾದ ಶ್ರೀಮತಿ ಸುಮಾವಸಂತ್ ಅವರಿಗೆ, ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಎನ್.ಎಸ್. ಬೋಸರಾಜು ಅವರಿಗೆ, ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಚೇರಮನ್ ಶ್ರೀ ಹರಿಗೌತಮ್ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ರಸ್ತೆಗಳ ಡಾಂಬರೀಕರಣಕ್ಕಾಗಿ ಲೋಕಸಭಾ ಸದಸ್ಯರಾದ ಶ್ರೀ ಹೆಚ್.ಜಿ. ರಾಮುಲು ಅವರು ೫ ಲಕ್ಷ ರೂಪಾಯಿ ನೀಡಿದುದನ್ನು, ರಾಜ್ಯ ಸಭಾ ಸದಸ್ಯರಾದ ಶ್ರೀ ಕೆ.ಸಿ. ಕೊಂಡಯ್ಯ ಅವರು ರಸ್ತೆದೀಪಕ್ಕಾಗಿ ೧೫ ಲಕ್ಷ ರೂಪಾಯಿ ನೀಡಲು ಮುಂದೆ ಬಂದುದನ್ನು, ಬಾದಾಮಿಯ ಶಿಲ್ಪಕಲಾಕೇಂದ್ರದ ಅಭಿವೃದ್ಧಿಗಾಗಿ ಬಾಗಲಕೋಟೆಯ ಲೋಕಸಭಾ ಸದಸ್ಯರಾದ ಮಾನ್ಯ ಶ್ರೀ ಆರ್.ಎಸ್. ಪಾಟೀಲ್ ಅವರು ೫ ಲಕ್ಷ ರೂಪಾಯಿ ನೀಡಿದುದನ್ನು, ಕುಮಾರರಾಮ ಹೆಸರಿನ ಉದ್ಯಾನ ನಿರ್ಮಿತಿಗಾಗಿ ತೋಟಗಾರಿಕೆ ಇಲಾಖೆ ಸಚಿವರಾದ ಶ್ರೀ ಅಲ್ಲಂ ವೀರಭದ್ರಪ್ಪನವರು ೫ ಲಕ್ಷ ರೂಪಾಯಿ ಕೊಡಮಾಡಿರುವುದನ್ನು ಗೌರವದಿಂದ ನೆನೆಯುತ್ತೇನೆ. ನೀರಿನ ಅರವಟ್ಟಿಗೆ ನಿರ್ಮಿತಿಗಾಗಿ ಹುಬ್ಬಳ್ಳಿಯ ಮಾನ್ಯ ಶ್ರೀ ಮುಥಾ ವಾಘಮಲ್ ಭೂರಾಜಿ ಅವರು ೨ ಲಕ್ಷ ರೂಪಾಯಿ ನೀಡಿದುದನ್ನು, ಬಳ್ಳಾರಿ ಜಿಲ್ಲಾ ಪಂಚಾಯತ್ ನೀರು ಪೂರೈಕೆಗೆ ಮುಂದು ಬಂದುದನ್ನು ನೆನೆಯುವುದು ನಮಗೆ ಸಂತೋಷದ ವಿಷಯವಾಗಿದೆ. ಈ ಎಲ್ಲ ಸಹಾಯಗಳಿಂದಾಗಿ ನಿಮ್ಮ ಆವರಣ ಮೈತುಂಬಿಕೊಂಡು ಬೆಳೆಯುವುದರೊಂದಿಗೆ, ಈ ವರ್ಷ ಕುಟುಂಬಗಳು ಇಲ್ಲಿ ವಾಸಮಾಡಲು ಆರಂಭಿಸಿದುದು ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವೆನಿಸಿದೆ. ಇದಕ್ಕೆ ಪೂರಕವೆಂಬಂತೆ ಹೆಲಿಪ್ಯಾಡ್, ಪ್ರಾಥಮಿಕ ಶಾಲೆ, ವ್ಯಾಪಾರ ಮಳಿಗೆ, ಹಾಸ್ಟೆಲ್, ಬಸ್‌ಸ್ಟ್ಯಾಂಡ್, ಆಸ್ಪತ್ರೆಗಳು ನಿರ್ಮಾಣಗೊಂಡರೆ ಈ ಆವರಣ ‘ಪೂರ್ಣಗ್ರಾಮ’ವೆನಿಸುತ್ತದೆ. ಆದುದರಿಂದ ದಶಮಾನೋತ್ಸವ ಸಂದರ್ಭದಲ್ಲಿ ಈ ಕೆಲಸಗಳಿಗೆ ಮುಂದುಬರಲು ದಾನಿಗಳಲ್ಲಿ ಭಿನ್ನವಿಸಿಕೊಳ್ಳುತ್ತೇನೆ.

ಈ ಭೌತಿಕ ಬೆಳವಣಿಗೆಯನ್ನು ಮೀರಿ, ಇತ್ತೀಚೆಗೆ ಶೈಕ್ಷಣಿಕ ಹೊಸ ಅಧ್ಯಾಯವೊಂದು ಇಲ್ಲಿ ತೆರೆದುಕೊಂಡಿದೆ. ಮುಖ್ಯವಾಗಿ ಶಿಕ್ಷಕರಲ್ಲಿ, ಅದರಲ್ಲಿಯೂ ಯುವ ಶಿಕ್ಷಕರಲ್ಲಿ ಲೆಕ್ಕಣಿಕೆ ಹಿಡಿಯುವ ಆತ್ಮವಿಶ್ವಾಸವನ್ನು ತುಂಬಲಾಗಿದೆ. ಇವರು ಕೈಗೆತ್ತಿಕೊಂಡ ಯೋಜನೆಗಳ ಫಲವಾಗಿ ಈ ವರ್ಷ ಇಲ್ಲಿಯವರೆಗೆ ಸುಮಾರು ೭೫ ಪುಸ್ತಕಗಳು ಪ್ರಕಟವಾಗಿವೆ. ಈ ನುಡಿಹಬ್ಬ ಸಂದರ್ಭದಲ್ಲಿ ೨೫ ಪುಸ್ತಕಗಳು ಪ್ರಕಟವಾಗಲಿವೆ. ಹೀಗೆ ಕಳೆದ ವರ್ಷದಂತೆ ಈ ವರ್ಷವೂ ೧೦೦ ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಇವುಗಳಲ್ಲಿ ಕುಮಾರವ್ಯಾಸ, ತಿಮ್ಮಣಕವಿಗಳ “ಕನ್ನಡ ಭಾರತ” ಪ್ರಕಟಣೆಗಾಗಿ ವಿಜಯನಗರ ಉಕ್ಕಿನ ಉದ್ದಿಮೆಯ ಒಡೆಯರಾದ ಶ್ರೀ ಸಜ್ಜನ ಜಿಂದಾಲ್ ಅವರು ೩ ಲಕ್ಷ ರೂಪಾಯಿ ನೀಡಿದ್ದಾರೆ. “ಜೈನ ಸಾಹಿತ್ಯಮಾಲೆ”ಯ ಸ್ಥಾಪನೆಗಾಗಿ ಹೊಸಪೇಟೆಯ ಶ್ರೀ ಅಭೇರಾಜ ಬಲ್ಡೋಟಾ ಅವರು ಈ ವರ್ಷ ೧ ಲಕ್ಷ ರೂಪಾಯಿ ನೀಡಿದ್ದು, ಮುಂದಿನ ವರ್ಷ ಶಾಶ್ವತನಿಧಿಗಾಗಿ ೧೦ ಲಕ್ಷ ರೂಪಾಯಿ ನೀಡುವ ವಾಗ್ದಾನ ಮಾಡಿದ್ದಾರೆ.

ಕಳೆದ ವರ್ಷ ಗಳಗನಾಥರ ಕಾದಂಬರಿ ಸಮಗ್ರ ಸಂಪುಟಕ್ಕೆ ೬ ಲಕ್ಷ ರೂಪಾಯಿ ನೀಡಿದ್ದ ಲೋಕಶಿಕ್ಷಣ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀ ಕೆ. ಶ್ಯಾಮರಾವ್ ಅವರು ಈ ವರ್ಷ ಬೆಟಗೇರಿ ಕೃಷ್ಣಶರ್ಮರ ಸಮಗ್ರ ಕೃತಿ ಪ್ರಕಟನೆಗಾಗಿ ೫ ಲಕ್ಷ ರೂಪಾಯಿ ನೀಡುವ ವಾಗ್ದಾನ ಮಾಡಿದ್ದಾರೆ. ಶ್ರೀ ವಿ.ಎಂ. ಕುಮಾರಸ್ವಾಮಿ ಅವರು ಕುವೆಂಪು ಅವರ ಸಮಗ್ರ ಕವನ ಸಂಕಲನ ಪ್ರಕಟಣೆಗಾಗಿ ಅಮೇರಿಕೆಯ ಕನ್ನಡಿಗರಿಂದ ಒಂದು ಸಾವಿರ ಡಾಲರ್ ಒದಗಿಸಿಕೊಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಹೀಗೆ ಸಾರ್ವಜನಿಕರನ್ನು ಬಿಟ್ಟರೂ ಸರಕಾರಿ ಇಲಾಖೆಗಳು ನೀಡಿದ ಕೊಡುಗೆ ಕೆಳಗಿನಂತಿವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯರಾದ ಶ್ರೀಮತಿ ರಾಣಿ ಸತೀಶ್ ಅವರು ಹಂಪಿ ಉತ್ಸವದ ಪ್ರಕಟಣೆಗಾಗಿ ೧ ಲಕ್ಷ, ಶಾಸನ ಪ್ರಕಟಣೆಗಾಗಿ ೨ ಲಕ್ಷ, ಮ್ಯೂಸಿಯಂ ಅಭಿವೃದ್ಧಿಗಾಗಿ ೪ ಲಕ್ಷ ರೂಪಾಯಿ ನೀಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಶ್ರೀ ಕುಮಾರ ಬಂಗಾರಪ್ಪ ಅವರು ಕರ್ನಾಟಕದ ಕೆರೆಗಳನ್ನು ಕುರಿತ ಕೃತಿ ಪ್ರಕಟಣೆಗಾಗಿ ೨ ಲಕ್ಷ ನೀಡಿದ್ದಾರೆ. “ಕರ್ನಾಟಕ ರಾಜ್ಯಕೋಶ ಮಾಲೆ”ಯ ಸಸ್ಯಕೋಶ ಸಂಪುಟದ ಪ್ರಕಟಣೆಗಾಗಿ ಸಚಿವರಾದ ಶ್ರೀ ಅಲ್ಲಂ ವೀರಭದ್ರಪ್ಪ ಅವರು ೨.೫ ಲಕ್ಷ ರೂಪಾಯಿ ಮಂಜೂರು ಮಾಡಿದ್ದಾರೆ. ಒಂದೂವರೆ ಸಾವಿರ ಪುಟಗಳ ಕರ್ನಾಟಕ ಚಲನಚಿತ್ರ ಚರಿತ್ರೆ’ಯ ಪ್ರಕಟಣೆಗಾಗಿ ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಚಿವರಾದ ಪ್ರೊ. ಬಿ.ಕೆ. ಚಂದ್ರಶೇಖರ ಅವರು ೭ ಲಕ್ಷ ರೂಪಾಯಿ ಮಂಜೂರು ಮಾಡಿದ್ದಾರೆ. ಗಂಗಾವತಿಯ ಶಾಸಕರಾದ ಮಾನ್ಯ ಶ್ರೀ ಶ್ರೀರಂಗದೇವ ರಾಯಲು ಅವರು ತಮ್ಮ ಶಾಸಕರ ನಿಧಿಯಿಂದ ಗ್ರಂಥಾಲಯ ಅಭಿವೃದ್ಧಿಗಾಗಿ ೨ ಲಕ್ಷ ಕೊಡಮಾಡಿದ್ದಾರೆ. ಉರ್ದು, ಪರ್ಶಿಯನ್, ಅರೇಬಿಕ್ ಶಾಸನ ಪ್ರಕಟಣೆಗಾಗಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಎನ್.ಎಸ್. ಭೋಸರಾಜು ರೂ. ೧ ಲಕ್ಷ ಮಂಜೂರು ಮಾಡಿದ್ದಾರೆ. ದಶಮಾನೋತ್ಸವದ ವಿಶೇಷ ಸಾಧನೆಯೆಂಬಂತೆ ಎಲ್ಲ ಶರಣರ ಎಲ್ಲ ವಚನಗಳ ಮರುಮುದ್ರಣಕ್ಕಾಗಿ ೧೦ ಲಕ್ಷ ರೂಪಾಯಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದುದು ಚಾರಿತ್ರಿಕ ದಾಖಲೆಯೆನಿಸಿವೆ. ಸ್ವಾತಂತ್ರ್ಯ ಯೋಧ ಶ್ರೀ ಟೇಕೂರ ಸುಬ್ರಹ್ಮಣ್ಯಂ ಅವರ ಜನ್ಮ ಶತಮಾನೋತ್ಸವ ನೆನಪಿನ ಕನ್ನಡ, ಇಂಗ್ಲೀಷ್ ಪುಸ್ತಕಗಳ ಪ್ರಕಟಣೆಗಾಗಿ ಬಳ್ಳಾರಿ ಜಿಲ್ಲಾಧಿಕಾರಿಗಳು ಆರ್ಥಿಕ ನೆರವು ನೀಡಿದ್ದಾರೆ. ಈ ಎಲ್ಲ ಇಲಾಖೆಗಳನ್ನು ಎಲ್ಲ ಮಹನೀಯರನ್ನು ಕೃತಜ್ಞತೆಯಿಂದ ನೆನೆಯುತ್ತೇವೆ. ಈ ನೆರವುಗಳ ಸರಮಾಲೆಯಲ್ಲಿ ಕರ್ನಾಟಕ ಸರ್ಕಾರ ‘ಪುರಂದರದಾಸ ಅಧ್ಯಯನ ಪೀಠ’ ಸ್ಥಾಪನೆಗಾಗಿ ೧೦ ಲಕ್ಷ ರೂಪಾಯಿ ಕೊಡಮಾಡಿರುವುದನ್ನು, ದಶಮಾನೋತ್ಸವ ಸಮಾರಂಭ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ ೫೦ ಲಕ್ಷ ರೂಪಾಯಿಗಳ ಹೆಚ್ಚಿನ ಅನುದಾನವನ್ನು ವಿಶೇಷವಾಗಿ ಸ್ಮರಿಸುತ್ತೇವೆ. ಇದೆಲ್ಲ ಸೇರಿ ಈ ವರ್ಷ ಸರಕಾರದ ವಾರ್ಷಿಕ ಅನುದಾನವನ್ನು ಹೊರತುಪಡಿಸಿ, ಎರಡು ಕೋಟಿ ಹಣವನ್ನು ಅನ್ಯಮೂಲಗಳಿಂದ ಹೆಚ್ಚಿಗೆ ಸಂಗ್ರಹಿಸಿದ ಸಾಧನೆ ನಮ್ಮದಾಗಿದೆ.

ಬೌದ್ಧ ಸಾಹಿತ್ಯದ ಮತ್ತು ಬೌದ್ಧರಿಗೂ ಕರ್ನಾಟಕಕ್ಕೂ ಇರುವ ಸಂಬಂಧಗಳ ಅಧ್ಯಯನದ ಬೃಹತ್ ಯೋಜನೆಗೆ ನಮ್ಮ ಸಿಂಡಿಕೇಟ್ ಸಭೆ ಒಪ್ಪಿಗೆ ನೀಡಿದ್ದು, ಈ ವರ್ಷ ೧೦ ಉತ್ತಮ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯಿದಾಗಿದೆ. ಅನುವಾದ ಯೋಜನೆಗೂ ಈ ವರ್ಷ ವಿಶೇಷ ಗಮನಕೊಟ್ಟಿದ್ದು, ತೆಲುಗಿನಿಂದ ಕಾಟಮರಾಜು ಕಥಲು, ಕ್ರೀಡಾಭಿರಾಮಮು, ತಮಿಳಿನಿಂದ ಶಿಲಪ್ಪದಿಗಾರಂ, ಸಂಸ್ಕೃತದಿಂದ ನೀತಿ ವಾಕ್ಯಾಮೃತಂ ಕನ್ನಡಕ್ಕೆ ತರಲಾಗಿದೆ. ವಿಜ್ಞಾನ ಸಂಗಾತಿ, ಚೆಲುವ ಕನ್ನಡ, ಪುಸ್ತಕ ಮಾಹಿತಿಗಳೊಂದಿಗೆ ಮಹಿಳಾ ಅಧ್ಯಯನ, ಕನ್ನಡ ಅಧ್ಯನಗಳನ್ನು ಆರಂಭಿಸಿದ್ದ ನಾವು ಈ ವರ್ಷದಿಂದ ಕರ್ನಾಟಕ ಅಭಿವೃದ್ಧಿ ಹೆಸರಿನ ಹೊಸ ಪತ್ರಿಕೆಯನ್ನು ಆರಂಭಿಸಲಿದ್ದೇವೆ. ನಮ್ಮ ಪ್ರಸಾರಾಂಗದ ಪುಸ್ತಕ ಪ್ರಕಟಣೆ ಮಾರಾಟ ಇತ್ತೀಚೆಗೆ ನಾಲ್ಕು ಪಟ್ಟು ವರ್ಧಿಸಿರುವುದರಿಂದ ಇಲ್ಲಿ ನಡೆಯುತ್ತಲಿರುವುದು ಕೇವಲ ಪುಸ್ತಕದ ಪ್ರಕಟಣೆಯಲ್ಲ, ಪುಸ್ತಕದ ಪವಾಡವೆಂದೇ ಹೇಳಬೇಕು. ಬಹುಶಃ ಇಂದು ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪ್ರತಿವರ್ಷ ಇಷ್ಟು ಸಂಖ್ಯೆ ಪುಸ್ತಕ ಪ್ರಕಟವಾಗುವುದು ಅನುಮಾನ.

ಈ ವರ್ಷ ನಮ್ಮ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳಿಗೆ ಪ್ರಶಸ್ತಿ. ಬಹುಮಾನಗಳ ಸುಗ್ಗಿ ಕಾಲ. ಕಳೆದ ವಾರ ಪ್ರಕಟವಾದ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನಗಳಲ್ಲಿ ೫ ಬಹುಮಾನಗಳನ್ನು ನಮ್ಮ ಸಿಬ್ಬಂದಿಯವರೇ ಗೆದ್ದು ತಂದುದು ಈ ವಿಶ್ವವಿದ್ಯಾಲಯದ, ಏಕೆ ಯಾವುದೇ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಚರಿತ್ರಾರ್ಹ ದಾಖಲೆಯೆನಿಸಿದೆ. ಡಾ. ಕರೀಗೌಡ ಬೀಚನಹಳ್ಳಿ, ಶ್ರೀ ಶಿವಾನಂದ ವಿರಕ್ತಮಠ ಹೀಗೆ ಇಬ್ಬರು ಪುರುಷರು, ಡಾ. ಎಚ್.ಎಸ್. ಶ್ರೀಮತಿ, ಶ್ರೀಮತಿ ನಾಗವೇಣಿ, ಡಾ. ಶೈಲಜಾ ಹಿರೇಮಠ ಹೀಗೆ ಮೂವರು ಮಹಿಳೆಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಐದು ಗೌರವಗಳು ಸಾಲದೆಂಬಂತೆ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್, ಡಾ. ಹಿ.ಚಿ.ಬೋರಲಿಂಗಯ್ಯ, ಪ್ರೊ. ಎ.ವಿ.ನಾವಡ, ಡಾ. ಅಮರೇಶ ನುಗಡೋಣಿ, ಶ್ರೀ ಮೊಗಳ್ಳಿ ಗಣೇಶ್, ಡಾ. ಸಿ.ಆರ್. ಗೋವಿಂದರಾಜು ಈ ಆರು ಜನರ ಗ್ರಂಥಗಳಿಗೆ ಆರು ಬಹುಮಾನಗಳು ಪ್ರಾಪ್ತವಾಗಿವೆ. ಈ ವರ್ಷ ಶ್ರೀಮತಿ ನಾಗವೇಣಿ ಅವರ ಒಂದೇ ಪುಸ್ತಕಕ್ಕೆ ೪ ಬಹುಮಾನಗಳು ಬಂದಿವೆ. ನಮ್ಮ ಚರಿತ್ರೆ ವಿಭಾಗದ ಡಾ. ವಿಜಯ ಪೂಣಚ್ಚ ಅವರು ಯುಜಿಸಿ ನೆರವಿನಿಂದ ವಿಶೇಷ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ಇದೆಲ್ಲವನ್ನು ಸಂತೋಷದಿಂದ ಸ್ಮರಿಸುತ್ತೇನೆ.

ಹೀಗೆ ಭೌತಿಕ, ಶೈಕ್ಷಣಿಕ ಉತ್ಪಾದನೆಯ ಪ್ರಕ್ರಿಯೆ ಈ ವಿಶ್ವವಿದ್ಯಾಲಯದಲ್ಲಿ ನಿರಂತರ ನಡೆದಿದ್ದು, ಈಗ ದಶಮಾನೋತ್ಸವದ ತಿರುವು ಬಿಂದುವಿನಲ್ಲಿ ನಾವು ನಿಂತಿದ್ದೇವೆ. ಆದುದರಿಂದ ಈವರೆಗೆ ಉತ್ಪಾದನೆ, ಇನ್ನು ಮೇಲೆ ವಿಸ್ತರಣೆ ಎಂಬ ಘೋಷಣೆಯೊಂದಿಗೆ ನಾವು ಹೊಸ ಅಧ್ಯಾಯ ತೆರೆಯ ಬಯಸಿದ್ದೇವೆ. ಅಂದರೆ ಈವರೆಗಿನ ಕೇಂದ್ರೀಯ ಅಭಿವೃದ್ಧಿಯನ್ನು ಇನ್ನು ಮೇಲೆ ವಿಕೇಂದ್ರೀಯಗೊಳಿಸುವುದು ನಮ್ಮ ಹೊಸ ಧ್ಯೇಯವಾಗಿದ್ದು, ಈ ವಿಸ್ತರಣೆ ಸ್ಥಾನಿಕ, ಜಾಗತಿಕ ಮತ್ತು ಅನ್ವಯಿಕ ಹೀಗೆ ಮೂರು ನೆಲೆಗಳಲ್ಲಿ ಜರುಗಬೇಕಿದೆ.

೧೯೫೬ ಪೂರ್ವದ ಭಾರತ ಭೂಪಟದಲ್ಲಿ ಕರ್ನಾಟಕದ ನಕ್ಷೆಯೇ ಇರಲಿಲ್ಲ. ಆಮೇಲೆ ಕನ್ನಡನುಡಿಯನ್ನಾಧರಿಸಿ ಈ ಭೂಪಟದಲ್ಲಿ ‘ಕನ್ನಡನಾಡು’ ಅಸ್ತಿತ್ವಕ್ಕೆ ಬಂದಿತು. ಹೀಗೆ ನುಡಿಯನ್ನಾಧರಿಸಿ ನಾಡು ಹುಟ್ಟಿರುವುದುರಿಂದ ನಮ್ಮ ನಾಡಿನ ಯಾವುದೇ ಚಟುವಟಿಕೆಗಳಿಗೆ ನಮ್ಮ ನುಡಿಯೇ ಮಾನದಂಡವಾಗಬೇಕಾಗುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು, ನಾವು ಕನ್ನಡ ನುಡಿಯನ್ನು ಮತ್ತು ಈ ನುಡಿಯನ್ನಾಧರಿಸಿದ ಕನ್ನಡನಾಡನ್ನು ಗೌಣಗೊಳಿಸುತ್ತ ನಡೆದಿದ್ದೇವೆ. ಸರಕಾರ ಕನ್ನಡವನ್ನು ಆಡಳಿತ ಮಾಧ್ಯಮ ಮಾಡಬೇಕು, ಶಿಕ್ಷಣ ಮಾಧ್ಯಮ ಮಾಡಬೇಕು ನಿಜ. ಇದೆಲ್ಲಕ್ಕಿಂತ ಮೊದಲು ಸಾಮಾಜಿಕರು ಕನ್ನಡವನ್ನು ಸಮಾಜಮಾಧ್ಯಮ ಮಾಡಬೇಕಿದೆ. ಈ ಉದ್ದೇಶ ಸಾಧನೆಗಾಗಿ ಅಂದರೆ ಈವರೆಗೆ ಏಕೀಕರಣ, ಇನ್ನು ಮೇಲೆ ಕನ್ನಡೀಕರಣ ಎಂದು ಸಾಮಾಜಿಕರು ದೀಕ್ಷೆ ತೊಡುವುದಕ್ಕಾಗಿ ಕನ್ನಡ ವಿಶ್ವವಿದ್ಯಾಲಯ ಶ್ರಮಿಸಬೇಕಾಗಿದೆ. ಕನ್ನಡ ಕೇವಲ ‘ಕನ್ನಡಿಗರ ಮಾತೃಭಾಷೆ’ ಯಲ್ಲ, ‘ಕರ್ನಾಟಕದ ಮಾತೃಭಾಷೆ’. ಅಂದರೆ ಕರ್ನಾಟಕದಲ್ಲಿರುವ ಎಲ್ಲ ಮಾತೃ ಭಾಷೆ ಎಂಬ ಗುರಿ ಸಾಧನೆಗಾಗಿ ಚಳುವಳಿ ರೂಪದ ಹೊಸ ಯೋಜನೆಗಳನ್ನು ಕನ್ನಡ ವಿಶ್ವವಿದ್ಯಾಲಯ ಕೈಗೆತ್ತಿಕೊಳ್ಳಬೇಕಾಗಿದೆ. ಈ ಆದರ್ಶಕ್ಕೆ ಅರ್ಥ ತುಂಬುವ ಸಲುವಾಗಿ, ಕರ್ನಾಟಕದ ಎಲ್ಲ ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ ಸಂಪರ್ಕವನ್ನಿಟ್ಟು ಕೊಂಡು, ಅವುಗಳಿಗೆ ಸರಿಯಾದ ದಾರಿ ದಿಕ್ಕು ತೋರುವುದು, ಅಲ್ಲಲ್ಲಿಯೇ ಅವು ಕನ್ನಡೀಕರಣದ ಕೆಲಸದಲ್ಲಿ ತೊಡಗುವಂತೆ ಮಾಡುವುದು ಇವೇ ಮೊದಲಾದ ಕೆಲಸಗಳಿಗೂ ಕನ್ನಡ ವಿಶ್ವವಿದ್ಯಾಲಯ ಇನ್ನು ಮೇಲೆ ಆದ್ಯತೆ ಕೊಡಬಯಸಿದೆ.

ಹೀಗೆ ಒಳಗೆ ಕರ್ನಾಟಕವನ್ನು ಕನ್ನಡೀಕರಣಗೊಳಿಸುವುದು ಒಂದು ಹಂತವಾದರೆ, ಹೊರಗೆ ವಾಸಿಸುತ್ತಿರುವ ಕನ್ನಡಿಗರು ಕನ್ನಡಿಗರಾಗಿ ಉಳಿಯುವಂತೆ ನೋಡಿಕೊಳ್ಳುವುದು ಇನ್ನೊಂದು ಹಂತವಾಗಿದೆ. ಇದಕ್ಕಾಗಿ ದೂರದಲ್ಲಿದ್ದರೂ ಅವರು ಕರ್ನಾಟಕವನ್ನು ನೋಡುವ, ಕೇಳುವ ಓದುವ ಸಾಮಾಗ್ರಿಗಳನ್ನು ಸೃಷ್ಟಿಸಿ ವಿತರಿಸುವುದು. ಅವರೊಂದಿಗೆ ವಿಚಾರ ಸಂಕಿರಣ, ಉಪನ್ಯಾಸಗಳ ಮೂಲಕ ನಿರಂತರ ಸಂಪರ್ಕ ಬೆಳೆಸುವುದು ನಮ್ಮ ಉದ್ದೇಶವಾಗಿದೆ.

ಬೇರೆ ದೇಶದ ಪ್ರಜೆಗಳನ್ನು ಕನ್ನಡದತ್ತ ಆಕರ್ಷಿಸುವುದು ನಮ್ಮ ಇನ್ನೊಂದು ಉದ್ದೇಶವಾಗಿದೆ. ಅಂದರೆ ೧ ಕೋಟಿ ರೂಪಾಯಿ ಶಾಶ್ವತನಿಧಿಯನ್ನು ಸ್ಥಾಪಿಸಿ, ಅದರ ಬಡ್ಡಿ ಹಣವನ್ನು ನಮ್ಮ ಭಾಷೆ, ಸಂಸ್ಕೃತಿಗಳ ಅಧ್ಯಯನಕ್ಕೋಸುಗ ಬರಲಿರುವ ವಿದೇಶಿ ವಿದ್ವಾಂಸರು. ವಿದ್ಯಾರ್ಥಿಗಳಿಗಾಗಿ ಉಪಯೋಗಿಸುವುದು ಇದರ ಸ್ವರೂಪವಾಗಿದೆ. ಈ ದೊಡ್ಡ ಮೊತ್ತವನ್ನು ಕರ್ನಾಟಕ ಸರ್ಕಾರ ಪೂರೈಸಬೇಕೆಂದು ಭಿನ್ನವಿಸಿಕೊಳ್ಳುತ್ತೇನೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಪೀಠಗಳನ್ನು ಸ್ಥಾಪಿಸುವುದರೊಂದಿಗೆ, ವಿದೇಶಗಳಲ್ಲಿ “ಕನ್ನಡಪೀಠ” ಸ್ಥಾಪಿಸುವುದು ಇಂದಿನ ಬಹುಮುಖ್ಯ ಅಗತ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯದ ಈ ಕನಸನ್ನು ಕರ್ನಾಟಕ ಸರ್ಕಾರ ನನಸಾಗಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಹೀಗೆ ಸ್ಥಾನಿಕ ನೆಲೆಯಲ್ಲಿ ಕನ್ನಡವನ್ನು ತುಂಬುವ, ಜಾಗತಿಕ ನೆಲೆಯಲ್ಲಿ ಕನ್ನಡವನ್ನು ವಿಸ್ತರಿಸುವಷ್ಟೇ ಮುಖ್ಯವಾದುದು. ಅನ್ವಯಿಕ ಬೋಧನಕ್ರಮವನ್ನು ಆರಂಭಿಸುವುದು. ಈ ವರೆಗೆ ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರ ನೀಡುವ ಬೋಧನಕ್ರಮವನ್ನು ಅನುಸರಿಸಿದ ಪರಿಣಾಮವಾಗಿ, ನಮ್ಮ ಶಿಕ್ಷಣ ಬಹುಮಟ್ಟಿಗೆ ಅಪ್ರಯೋಜಕ ವೆನಿಸಿದೆ. ಈ ಪದ್ಧತಿಗೆ ತಿಲಾಂಜಲಿ ಹೇಳುವ ರೀತಿಯಲ್ಲಿ ‘ಅನ್ವಯಿಕ’ ಬೋಧನ ಕ್ರಮವನ್ನು ಅಸ್ತಿತ್ವಕ್ಕೆ ತರಬೇಕಾಗಿದೆ. ಕನಿಷ್ಠ ಪಕ್ಷ ಸೃಜನಸಾಹಿತ್ಯ ಕ್ಷೇತ್ರಕ್ಕಾದರೂ ಇದನ್ನು ಅನ್ವಯಿಸಬೇಕಾಗಿದೆ.

ಶಿಕ್ಷಕರೇ ಶಿಕ್ಷಣ ಸಂಸ್ಥೆಯ ಶಕ್ತಿ. ಅದರ ಆಗು ಹೋಗುಗಳಿಗೆ ಅವರೇ ಜವಾಬ್ದಾರರು ಎಂಬ ತಿಳುವಳಿಕೆ ನಮ್ಮೆಲ್ಲರದಾಗಿದೆ. ನಮ್ಮ ವಿಭಾಗದಲ್ಲಿ ಉತ್ಪಾದನೆಗೆ ಅವಕಾಶ ಮಾಡಿಕೊಳ್ಳುತ್ತೇವೆ ಮತ್ತು ನಾವು ಅನ್ವಯಿಕ ಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತೇವೆ. ನಮ್ಮ ವಿಭಾಗವನ್ನು ಸ್ಥಾನಿಕ ನೆಲೆಗಳಲ್ಲಿ ವಿಸ್ತರಿಸುತ್ತೇವೆ ಮತ್ತು ಜಾಗತಿಕ ನೆಲೆಗಳಲ್ಲಿ ಬೆಳೆಸುತ್ತೇವೆ.” ಹೀಗೆ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಏಕಕಾಲಕ್ಕೆ ನಾಲ್ಕು ಮುಖಗಳಲ್ಲಿ ತಮ್ಮ ವಿಭಾಗಗಳನ್ನು ಬೆಳೆಸುವ ಹೊಸ ನಾಂದಿ ಹಾಡುವರೆಂಬ ವಿಶ್ವಾಸ ಈ ವಿದ್ಯಾಸಂಸ್ಥೆಯದಾಗಿದೆ.

ಮಾತು ಮುಗಿಸುವ ಮುನ್ನ ಒಂದು ಮಾತು; ಕನ್ನಡ ವಿಶ್ವವಿದ್ಯಾಲಯಕ್ಕೆ ಕರ್ನಾಟಕದ ಲಲಿತಕಲಾ ಕಾಲೇಜುಗಳನ್ನು ಸಂಲಗ್ನಗೊಳಿಸುವುದು, ೬೯ ಜನ ಕ್ರೋಢೀಕೃತ ನೌಕರರನ್ನು ಖಾಯಂಗೊಳಿಸುವುದು ಈ ಎರಡು ಮುಖ್ಯ ಪ್ರಶ್ನೆಗಳು ಬಗೆಹರಿಯಲಿಲ್ಲ. ನಾವು ಅನೇಕ ಸಲ ಪ್ರಯತ್ನಿಸಿದ್ದಾಯಿತು. ಮಾನ್ಯ ಕುಲಾಧಿಪತಿಗಳು, ಸಮಕುಲಾಧಿಪತಿಗಳು ಈ ಬೇಡಿಕೆಗಳನ್ನು ಬೇಗ ಪೂರೈಸಿಕೊಡಬೇಕೆಂದು ಈ ಘಟಿಕೋತ್ಸವದಲ್ಲಿಯೂ ಮತ್ತೆ ಭಿನ್ನವಿಸಿಕೊಳ್ಳುತ್ತೇನೆ. ಇಷ್ಟು ಮಾತುಗಳೊಂದಿಗೆ ಎಲ್ಲರಿಗೂ ಇನ್ನೊಮ್ಮೆ ಸ್ವಾಗತ ಕೋರುತ್ತೇನೆ.

೨ ಫೆಬ್ರವರಿ ೨೦೦೧