೧. ಪ್ರಾಚೀನ ಕನ್ನಡ ಸಾಹಿತ್ಯ ಚಳುವಳಿಗಳು

೧. ಸಾಹಿತ್ಯ ಚಳುವಳಿಗಳು : ಸಾಮಾನ್ಯ ಲಕ್ಷಣಗಳು

ಇದು ಚಳುವಳಿಗಳ ಯುಗ. ದಿನಬೆಳಗಾದರೆ ತಮಗೆ ಅಗತ್ಯವಾದ ಬದಲಾವಣೆಗಳಿಗಾಗಿ, ಬೇಡಿಕೆಗಳ ಪೂರೈಕೆಗಾಗಿ, ಸುಸಂಘಟಿತವಾದ ಸಮುದಾಯಗಳು, ವಿವಿಧ ಕಾರ್ಯಕ್ಷೇತ್ರಗಳಲ್ಲಿ ಚಳುವಳಿಗಳನ್ನು ಹೂಡುತ್ತವೆ. ಹೀಗಾಗಿ ಚಳುವಳಿ ಅಂದ ಕೂಡಲೇ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುವ ಚಿತ್ರವೆಂದರೆ, ಯಥಾಸ್ಥಿತಿಯ ಬದಲಾವಣೆಗಾಗಿ, ಗುಂಪು, ಪ್ರದರ್ಶನ, ಘೋಷಣೆ ಹಾಗೂ ನಿರ್ದಿಷ್ಟವಾದ ಬೇಡಿಕೆಗಳು. ಮುಖ್ಯವಾಗಿ ಈ ಚಳುವಳಿಗಳನ್ನು ನಾವು ನೇರವಾಗಿ ಕಾಣುವುದು ರಾಜಕೀಯ, ಸಾಮಾಜಿಕ, ಧಾರ್ಮಿಕ ಇತ್ಯಾದಿ ವಲಯಗಳಲ್ಲಿ ಸಂಭವಿಸುವ ಸಾಮೂಹಿಕ ಹೋರಾಟಕ್ಕೆ ಸಂಬಂಧಿಸಿದಂತೆ. ಆದರೆ ಅದೇ ಕಲ್ಪನೆಯನ್ನು, ನಾವು ಸಾಹಿತ್ಯ ಚಳುವಳಿಗಳಿಗೂ ಅನ್ವಯಿಸಿ ನೋಡುವುದು ಸಾಧುವಾದದ್ದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಆದರೆ ಸಾಹಿತ್ಯದ ಸಂದರ್ಭದಲ್ಲಿಯೂ ಈ ಮಾತನ್ನು ನಾವು ನಮ್ಮ ಸಾಹಿತ್ಯ ಚರ್ಚೆಗಳಲ್ಲಿ ಬಳಸುತ್ತಾ ಬಂದಿದ್ದೇವೆ. ಸಾಹಿತ್ಯದಲ್ಲಿ ಕಾಲದಿಂದ ಕಾಲಕ್ಕೆ ಆಗುವ ಬದಲಾವಣೆಗಳ ಮೂಲಮಾನದಿಂದ, ಹಾಗೆ ಬದಲಾಗುವ ಸಂದರ್ಭದ ಹಿಂದೆ, ಆ ಬದಲಾವಣೆಗೆ ಆಶಿಸುವ, ಪ್ರಯತ್ನಿಸುವ ಸಾಹಿತಿಗಳ ವೈಚಾರಿಕವಾದ ಚಟುವಟಿಕೆಗಳನ್ನು ಸ್ಥೂಲವಾಗಿ ಸಾಹಿತ್ಯ ಚಳುವಳಿ ಎಂದು ಗುರುತಿಸುತ್ತೇವೆ. ಇಂಗ್ಲಿಷಿನಲ್ಲಿ ಈ ಸಂದರ್ಭಗಳನ್ನು  Literary movements ಎಂದು ಕರೆಯಲಾಗಿದೆ. ಈ ಮಾತಿಗೆ ಸಂವಾದಿಯಾಗಿ ನಾವು ‘ಸಾಹಿತ್ಯ ಚಳುವಳಿಗಳು’ ಎಂಬ ಮಾತನ್ನು ಬಳಸುತ್ತಿದ್ದೇವೆ.  ವಾಸ್ತವವಾಗಿ ‘ಚಳುವಳಿ’ ಎಂಬ ಮಾತೇ ‘ಚಲನ ವಲನ’ ಎಂಬ ಸಂಸ್ಕೃತ ಶಬ್ದದ ತದ್ಭವವಾಗಿದ್ದು, ಇಂಗ್ಲಿಷಿನ movements ಎಂಬುದಕ್ಕೆ ಸಮಾನ ಪದವೂ ಆಗಿದೆ. ಈ ‘ಚಲನವಲನ’ ಮೂಲಭೂತವಾಗಿ ಸಾಹಿತ್ಯದ ನಿರಂತರತೆಯನ್ನೂ, ತನ್ನ ಸ್ಥಗಿತ ಸ್ಥಿತಿಯಿಂದ ಒಂದು ಬಗೆಯ ಚಲನ ಅಥವಾ ಜಂಗಮ ಸ್ಥಿತಿಗೆ ಅದು ಬದಲಾಗುವ ಕ್ರಿಯೆಯನ್ನೂ ಸೂಚಿಸುತ್ತದೆ. ಅಂದರೆ ಚಳುವಳಿಯ ಮುಖ್ಯ ಉದ್ದೇಶ, ಯಥಾಸ್ಥಿತಿಯ ನೆಲೆಯಿಂದ, ಬದಲಾವಣೆಯ ಕಡೆಗೆ ಸಾಹಿತ್ಯವನ್ನು ಮುಂದುವರಿಸುವುದೇ ಆಗಿದೆ. ಯಾವಾಗ ಒಂದು ಸಾಹಿತ್ಯ ‘ಪರಂಪರೆ’ ತನ್ನ ಚಲನಶೀಲತೆಯನ್ನು ಕಳೆದುಕೊಂಡು ಸಿದ್ಧ  ರೂಪಗಳ ಪುನರಾವರ್ತನೆಯ ‘ಸಂಪ್ರದಾಯ’ದ ಸ್ಥಾವರ ಸ್ಥಿತಿಯನ್ನು ತಲುಪುತ್ತದೋ ಆಗ, ಈ ಪರಿಸ್ಥಿತಿಯಿಂದ ಅದನ್ನು ಪಾರು ಮಾಡಿ ಸಾಹಿತ್ಯಕ್ಕೆ ಹೊಸ ತಿರುವನ್ನು, ಹೊಸ ರೂಪವನ್ನು, ಹೊಸ ಭಾಷೆಯನ್ನು, ಹೊಸ ನಿಲುವುಗಳನ್ನು ತಂದು ಮತ್ತೆ ಅದನ್ನು ಕ್ರಿಯಾಶೀಲವನ್ನಾಗಿ ಮಾಡಬೇಕೆಂಬ ಸೃಜನಾತ್ಮಕ ಪ್ರಯೋಗಗಳು ನಡೆಯುವ ಕಾಲವನ್ನು ಸಾಹಿತ್ಯ ಚಳುವಳಿಗಳ ಕಾಲ ಎಂದು ಕರೆಯುತ್ತೇವೆ. ಮತ್ತು ಹೀಗೆ, ಈ  ಬಗೆಯ ಬದಲಾವಣೆಗಳನ್ನು ತರಬೇಕೆಂದು ಬಯಸುವ ಆಸಕ್ತಿಗಳು, ಅಂದಂದಿನ ಕಾಲದ ಯಾವುದೋ ಒಬ್ಬ ಪ್ರಮುಖ ಬರೆಹಗಾರನ ಮೂಲಕವೋ, ಅಥವಾ ಹಲವು ಬರೆಹಗಾರರ ಮೂಲಕವೋ, ಒಂದು ನಿರ್ದಿಷ್ಟ ಹಾಗೂ ಸಮಾನವಾದ ಸಾಹಿತ್ಯ ತತ್ವಪ್ರಣಾಲಿಯಾಗಿ ರೂಪುಗೊಂಡು, ಈ ಚಳುವಳಿಯ ‘ಧೋರಣೆ’ ಅಥವಾ ‘ಥೀಸಿಸ್’ – ಒಂದು ರೂಪುಗೊಳ್ಳುತ್ತದೆ. ಈ ಬಗೆಯ ಚಿಂತನೆಯ ಮುಖ್ಯ ಲಕ್ಷಣಗಳೆಂದರೆ, ಅದು ಪ್ರಸ್ತುತದಲ್ಲಿ ಸ್ಥಗಿತಗೊಂಡ ಬರಹದ ಬಗ್ಗೆ ಅತೃಪ್ತಿಯನ್ನೂ ಮತ್ತು ಬದಲಾಗಬೇಕಾದ ಅಥವಾ ಪ್ರಸ್ತುತ ಸಾಹಿತ್ಯವು ಪಡೆದುಕೊಳ್ಳಬೇಕಾದ ಹೊಸ – ರೂಪ ಧ್ವನಿಗಳ ಸ್ವರೂಪವನ್ನೂ ಕುರಿತ ಚರ್ಚೆಯೊಂದನ್ನು ಪ್ರಾರಂಭಿಸುತ್ತದೆ. ಹೀಗೆ, ಸಾಹಿತ್ಯ ಪರಂಪರೆಯೊಂದು, ಸ್ಥಗಿತಗೊಂಡ ಸಂದರ್ಭಗಳಲ್ಲಿ ಬದಲಾವಣೆಗಾಗಿ ಆಶಿಸುವ ಪ್ರಜ್ಞಾವಂತ ಬರಹಗಾರರು, ವೈಯಕ್ತಿಕವಾಗಿಯೋ, ಸಾಮೂಹಿಕವಾಗಿಯೋ, ಬದಲಾಗಬೇಕಾದ ಅಗತ್ಯವನ್ನೂ, ಹಾಗೆ ಬದಲಾಗಬೇಕಾದ ಸಾಹಿತ್ಯದ ಗುಣಲಕ್ಷಣ – ಸ್ವರೂಪಗಳನ್ನೂ ಕುರಿತು ತಮಗೆ ತಾವೇ ಮಾತನಾಡಿಕೊಳ್ಳತೊಡಗಿದಾಗ ಅಥವಾ ಘೋಷಿತ ರೂಪದಲ್ಲಿ ಮಾತನಾಡಿದಾಗ ಅಥವಾ ಬರೆದಾಗ ಆ ಸಾಮೂಹಿಕ ಚಿಂತನ ಸಂದರ್ಭಗಳನ್ನು ಸಾಹಿತ್ಯ ಚಳುವಳಿಗಳ ಕಾಲವೆಂದು ಕರೆಯುತ್ತೇವೆ.

ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಸಾಹಿತ್ಯದಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳಾಗಿವೆಯಲ್ಲ, ಅವೆಲ್ಲವೂ ಅನಿವಾರ್ಯವಾಗಿ ಈ ಬಗೆಯ ಸಾಹಿತ್ಯ ಚಳುವಳಿಗಳ ಕಾರಣದಿಂದಲೇ ಆಗಿವೆಯೆ? ಇವತ್ತೇನೋ, ಸಾಹಿತಿಗಳು ಬದಲಾವಣೆಗೆ ಆಶಿಸುವ ಸಂದರ್ಭದಲ್ಲಿ ಅವರೆಲ್ಲರೂ ಒಂದೆಡೆ ಸೇರುವ, ಚರ್ಚಿಸುವ, ಅವಕಾಶಗಳೂ, ಅವರು ಈ ಕುರಿತು ಆಡುವ ಮಾತುಗಳನ್ನು ಪ್ರಸಾರ ಮಾಡುವ ಪತ್ರಿಕೆಗಳ ಹಾಗೂ ಮತ್ತಿತರ ಮಾಧ್ಯಮಗಳ ಅನುಕೂಲಗಳೂ ಇವೆ. ಆದುದರಿಂದ ಇವತ್ತು ಜಗತ್ತಿನ ಬೇರೆ ಬೇರೆ ಸಾಹಿತ್ಯ ವಲಯಗಳಲ್ಲಿ ಸಂಭವಿಸುವ ಚಳುವಳಿಗಳೂ, ಅವುಗಳಿಂದ ಪಡೆಯಬಹುದಾದ ಪ್ರೇರಣೆಯ ಸಾಧ್ಯತೆಗಳೂ ಇದ್ದು, ಸಾಹಿತ್ಯ ಚಳುವಳಿಗೆ ಒಂದು ನಿರ್ದಿಷ್ಟ ಆಕಾರ ಪ್ರಾಪ್ತವಾಗುತ್ತದೆ. ಆದರೆ ಹಿಂದೆ ತಮ್ಮ ಪಾಡಿಗೆ ತಾವು ನಾಡಿನ ಯಾವುದೋ ಒಂದು ಕಡೆ, ರಾಜಾಸ್ಥಾನಗಳಲ್ಲೋ ಏಕಾಂಗಿಯಾಗಿಯೋ ಸಾಹಿತ್ಯ ನಿರ್ಮಿತಿಯಲ್ಲಿ ತೊಡಗುತ್ತಿದ್ದ ಸಂದರ್ಭದಲ್ಲಿ, ಸಾಹಿತ್ಯದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಕುರಿತು, ಇದೇ ಮಾತನ್ನು ಹೇಳಲು ಸಾಧ್ಯವಿಲ್ಲ. ಆದರೆ ನಿಜವಾದ ಪ್ರತಿಭಾವಂತರಾದ ಬರೆಹಗಾರರು, ಯಾವತ್ತೂ ಕೇವಲ ಪರಂಪರೆಯನ್ನು ಮುಂದುವರಿಸುವಲ್ಲಿ ಖಂಡಿತವಾಗಿಯೂ ಆಸಕ್ತರಾಗಿಲ್ಲದಿರುವುದರಿಂದಲೇ, ಅವರು ತಮ್ಮ ಹಿಂದಿನ ಪರಂಪರೆಗೆ ತಂತಮ್ಮ ಕೃತಿನಿರ್ಮಿತಿಯ ಸಂದರ್ಭದಲ್ಲಿ, ಸೃಜನಾತ್ಮಕವಾದ ಪ್ರತಿಕ್ರಿಯೆಯನ್ನು ತೋರಿಸುವುದರ ಮೂಲಕ ತಮ್ಮ ಪ್ರಯೋಗಪರಿಣತಿಯನ್ನು, ತತ್ಪರಿಣಾಮವಾದ ಬದಲಾವಣೆಗಳನ್ನೂ ತಂದಿದ್ದಾರೆ ಎಂಬುದನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ ಹಾಗೂ ಕನ್ನಡದ ಪ್ರಾಚೀನ ಕಾವ್ಯಗಳ  ಪ್ರಾಸ್ತಾವಿಕ ಭಾಗಗಳಲ್ಲಿ ಹಿಂದಿನ ಬರೆಹದ ಸಂಪ್ರದಾಯಗಳ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನೂ, ತಮ್ಮ ಕಾವ್ಯದಲ್ಲಿ ಮತ್ತು ಪ್ರಸ್ತುತ ಕಾವ್ಯ ಸಂದರ್ಭದಲ್ಲಿ ಆಗಬೇಕಾದ ಬದಲಾವಣೆಯ ಸ್ವರೂಪವನ್ನೂ ಕುರಿತು ತಮ್ಮದೇ ಆದ ಚಿಂತನೆಗಳನ್ನೂ ದಾಖಲು ಮಾಡಿದ್ದಾರೆ ಎಂಬುದನ್ನೂ ನಾವು ಪರಿಗಣಿಸಬೇಕಾಗಿದೆ. ಈ ಪ್ರಾಸಂಗಿಕ ಕಾವ್ಯ ಚಿಂತನೆಗಳು ಒಂದರ್ಥದಲ್ಲಿ ಅಂದಂದಿನ ‘ಸಾಹಿತ್ಯ ಚಳುವಳಿ’ಗಳ ಪರಿಚಯವನ್ನು ನಮಗೆ ಮಾಡಿಕೊಡುವುದಾದರೂ, ಅವು ಇವತ್ತಿನ ಸಾಹಿತ್ಯ ಚಳುವಳಿಗಳಷ್ಟು ಸ್ಪಷ್ಟವೂ, ಘೋಷಿತವೂ ಆಗಿಲ್ಲವೆಂಬುದು ನಿಜ; ಆದರೆ ಅವು ಸ್ಥಗಿತಗೊಂಡ ಸಾಹಿತ್ಯ ಸಂದರ್ಭವೊಂದರಲ್ಲಿ ಅದಕ್ಕೆ ಚಲನಶೀಲತೆಯನ್ನು ತರುವ ಸೃಜನಶೀಲ ಮನಸ್ಸುಗಳ ತುಡಿತವಾಗಿವೆಯೆಂಬುದಂತೂ ಖಂಡಿತ. ಆದರೆ ಬರವಣಿಗೆಯ ಇಕ್ಕಟ್ಟುಗಳ ಮತ್ತು ಓದುವ ವರ್ಗದ ರುಚಿ-ಅಭಿರುಚಿಗಳ ಕಾರಣದಿಂದ, ಹಿಂದಿನ ಸಾಹಿತ್ಯದೊಳಗಣ ಬದಲಾವಣೆಗಳು, ಇವತ್ತಿನ ಹಾಗೆ  ಕ್ಷಿಪ್ರಗತಿಯಲ್ಲಿ ಆಗಲು ಸಾಧ್ಯವೇ ಇರಲಿಲ್ಲ. ಈ ಕಾರಣದಿಂದಲೆ ಹಿಂದಿನ ಸಾಹಿತ್ಯದಲ್ಲಿ ಆಗಿರುವ ಬದಲಾವಣೆಗಳು ಅತ್ಯಂತ ಮಂದಗತಿಯವೂ, ಕೇವಲ ಒಂದು ಕೈ ಬೆರಳೆಣಿಕೆಗೂ ಒಳಪಡದವೂ ಆಗಿವೆ. ಆದರೆ ಇವತ್ತು ಕೇವಲ ಒಂದು ದಶಕದ ಒಳಗೇ, ಒಂದು ಬರವಣಿಗೆಯ ಕ್ರಮದ ಬಗ್ಗೆ ಅರುಚಿ ಹುಟ್ಟಿ ಮತ್ತೊಂದು ಬದಲಾವಣೆಗೆ ಮನಸ್ಸು ತುಡಿಯುತ್ತದೆ. ಆದುದರಿಂದಲೇ ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ಗುರುತಿಸಬಹುದಾದ ನಾಲ್ಕೈದು ಸಾಹಿತ್ಯ ಚಳುವಳಿಗಳನ್ನು ನಾವು ಕಾಣಲು ಸಾಧ್ಯವಾಗಿದೆ.

ಪ್ರತಿಯೊಂದು ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ನಾವು ಕಾಣುವ ಒಂದು ಸಮಾನ ಲಕ್ಷಣವೆಂದರೆ, ಯಾವುದೇ ಹೊಸ ಸಾಹಿತ್ಯ ಚಳುವಳಿ, ನೆಲೆನಿಂತ ಹಾಗೂ ಅದಕ್ಕೆ ಹಿನ್ನೆಲೆಯಾದ ಸಾಹಿತ್ಯ ಪರಂಪರೆಯ ಬಗ್ಗೆ ತನ್ನ ಅತೃಪ್ತಿಯನ್ನೂ, ಅಸಮಾಧಾನವನ್ನೂ ದಾಖಲು ಮಾಡುವ ಒಂದು ವಿಧಾನ. ಮೇಲುನೋಟಕ್ಕೆ ಒಂದೊಂದು ಸಲ ಇದು, ಹಿಂದಿನ ಸಾಹಿತ್ಯ ಪರಂಪರೆಯ ನಿರಾಕರಣೆಯಂತೆ  ತೋರಿದರೂ, ವಾಸ್ತವವಾಗಿ ಅದು ನಿರಾಕರಣೆ ಅಲ್ಲ; ಅದೊಂದು ರೀತಿಯ ಪ್ರತಿಕ್ರಿಯೆ. ಈ ಪ್ರತಿಕ್ರಿಯೆ ಒಂದು ರೀತಿಯಲ್ಲಿ ಹಿಂದಿನ ಸಾಹಿತ್ಯದ ವಿಮರ್ಶೆ ಕೂಡಾ ಆಗಬಹುದು. ಆದರೆ ಈ ವಿಮರ್ಶೆಯಲ್ಲಿ ಯಾವಾಗಲೂ ಸಮತೂಕವಿರುತ್ತದೆ ಎಂದು ನಂಬುವಂತಿಲ್ಲ. ಹೊಸ ಬದಲಾವಣೆಗೆ ಹಾಗೂ ಹೊಸ ನಿರ್ಮಿತಿಗೆ ಹೊರಡುವ ಚಳುವಳಿಯ ಸಂದರ್ಭದ ವಿಮರ್ಶೆ, ತನಗೆ ಹಿಂದಿನ ಸಾಹಿತ್ಯದ ದೋಷ ದೌರ್ಬಲ್ಯಗಳನ್ನು ಉತ್ಪ್ರೇಕ್ಷಿಸುವ, ಹಾಗೂ ಬದಲಾದ ಬರವಣಿಗೆಯಲ್ಲಿ ಸಂಭವಿಸುವ ಕೃತಿಗಳ ಬಗ್ಗೆ ಉತ್ಸಾಹಪೂರ್ಣ ಪಕ್ಷಪಾತವನ್ನು ಪ್ರದರ್ಶಿಸುವ ರಭಸದಿಂದ ಕೂಡಿರುವುದು ಆ “ಕಾಲದ ಗುಣ”ಕ್ಕೆ ಸಹಜವಾದ ಸಂಗತಿಯಾಗಿರುತ್ತದೆ. ಆದರೆ ಯಾವುದೇ ಸಿದ್ಧ ಸಂಪ್ರದಾಯದಲ್ಲಿ ನಿಂತು ಹೊಸರೂಪಗಳ ಆವಿಷ್ಕಾರಕ್ಕಾಗಿ ತೊಡಗುವ ನೂತನ ಸಾಹಿತ್ಯ ಚಳುವಳಿಯ ಬರಹಗಾರರು, ತಮ್ಮನ್ನು ತಾವು ಹಿಂದಿನ ಹಿಡಿತಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತಮ್ಮದೇ ಆದ ಖಚಿತವಾದ ಸಾಹಿತ್ಯಕ ನಿಲುವುಗಳನ್ನೂ, ಧೋರಣೆಗಳನ್ನೂ ರೂಪಿಸಿಕೊಳ್ಳುತ್ತಾರೆ ಮತ್ತು ಅದಕ್ಕೆ ಉಚಿತವಾದ ಪ್ರೇರಣೆಗಳನ್ನು, ಅನ್ಯ ಸಾಹಿತ್ಯಗಳಿಂದ ಪಡೆಯಲು ಸಿದ್ಧರಾಗುತ್ತಾರೆ. ಹೊಸಗನ್ನಡ ಸಾಹಿತ್ಯದ ಹಲವು ಸಾಹಿತ್ಯ ಚಳುವಳಿಗಳ ವಿಷಯದಲ್ಲಿಯೂ ಈ ಮಾತು ನಿಜವಾಗಿದೆ.

ಮತ್ತೊಂದು ಸಂಗತಿಯೆಂದರೆ, ಪ್ರತಿಯೊಂದು ಸಾಹಿತ್ಯ ಚಳುವಳಿಯೂ ಅಂದಂದಿನ ಐತಿಹಾಸಿಕ ಅಗತ್ಯವಾಗಿದ್ದು ಅದರ ಹಿಂದೆ ಹಲವಾರು ಸಾಂಸ್ಕೃತಿಕ, ಸಾಹಿತ್ಯಕ – ವೈಚಾರಿಕ ಒತ್ತಡಗಳಿರುತ್ತವೆ. ಹಾಗಲ್ಲದೆ ಕೇವಲ ವೈಯಕ್ತಿಕ ಪ್ರಯತ್ನವಾಗಲೀ, ಸಾಹಿತ್ಯ ಪರಂಪರೆಯೊಂದಿಗೆ ಸಂಬಂಧವನ್ನಿರಿಸಿಕೊಳ್ಳದ ತುರ್ತುಗಳಾಗಲೀ ನಿಜವಾದ ಸಾಹಿತ್ಯ ಚಳುವಳಿಯನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಸಾಹಿತ್ಯದಲ್ಲಿ ಬದಲಾವಣೆಗಳು ಮುಖ್ಯವಾಗಿ ಆಗುವುದು ಒಂದು ಬರೆಹದ ಸಂಪ್ರದಾಯ ತನಗಿಂತ ಹಿಂದಿನ ಬರೆಹದ ಸಂಪ್ರದಾಯಕ್ಕೆ ತೋರುವ ಸೃಜನಾತ್ಮಕ ಮುಖಾಮುಖಿ ಮತ್ತು ಪ್ರತಿಕ್ರಿಯೆಗಳ ಕಾರಣದಿಂದ. ಈ ದೃಷ್ಟಿಯಿಂದ ಹೇಳುವುದಾದರೆ ಯಾವುದೇ ಸಾಹಿತ್ಯ ಚಳುವಳಿ ಇನ್ನೊಂದು ಸಾಹಿತ್ಯ ಚಳುವಳಿಗೆ ವಿರೋಧಿಯಾಗಲೀ ಮಾರಕವಾದುದಾಗಲೀ ಅಲ್ಲ. ಅವು ಒಂದು ಮತ್ತೊಂದಕ್ಕೆ ಪೂರಕವಾಗುತ್ತ ಸಾಹಿತ್ಯದ ನಿರಂತರತೆಯನ್ನು ಮುಂದುವರಿಸುವ ವೇಗವರ್ಧಕಗಳು ಎಂದು ತಿಳಿಯುವುದೇ ಸರಿಯಾದ ನಿಲುವು.

ಒಂದು ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ತಮ್ಮನ್ನು ತೊಡಗಿಸಿ ಕೊಂಡವರೆಲ್ಲರೂ ಒಂದೇ ರೀತಿಯಲ್ಲಿ ಬರೆಯುತ್ತಾರೆ ಎಂದು ತಿಳಿಯಬಾರದು. ಸಾಹಿತ್ಯ ಚಳುವಳಿಯ ಒಟ್ಟು ನಿಲುವನ್ನು ಆ ಸಂದರ್ಭದ ಬರೆಹಗಾರರೆಲ್ಲರೂ ತಾತ್ವಿಕವಾಗಿ ಒಪ್ಪಿಕೊಂಡರೂ, ಅವರವರು ತಮ್ಮ ತಮ್ಮ ವ್ಯಕ್ತಿ ಪ್ರತಿಭೆಗೆ ಅನುಗುಣವಾಗಿ ತಮ್ಮ ವ್ಯಕ್ತಿ ವಿಶಿಷ್ಟಾಭಿವ್ಯಕ್ತಿಯನ್ನು ಸಾಧಿಸಿಕೊಳ್ಳುತ್ತಾರೆ ಎನ್ನುವುದೇ ಒಂದು ಸಾಹಿತ್ಯ ಚಳುವಳಿಯ ಮಹತ್ವಕ್ಕೆ ಸಾಕ್ಷಿಯಾಗುತ್ತದೆ. ಹಾಗೆಯೇ ಅದೇ ಪರಿಸರದಲ್ಲಿಯೇ, ಅಂದಂದಿನ ಸಾಹಿತ್ಯ ಚಳುವಳಿಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳದ ಸಾಹಿತಿಗಳು ಇರುವುದೂ ಸಾಧ್ಯವಿದೆ ಮತ್ತು ಅವರು ಚಳುವಳಿಯ ಹೊರಗಿದ್ದೂ ಅಂದಿನ ಸಾಹಿತ್ಯಕ್ಕೆ ಮೌಲಿಕವಾದ ಕೊಡುಗೆಯನ್ನು ನೀಡಬಲ್ಲರು ಎಂಬುದನ್ನು ನಾವು ಗುರುತಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಒಂದು ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ಕೃತಿರಚನೆ ಮಾಡುವ ಸಾಹಿತಿ, ಆ ಸಂದರ್ಭದ ಪ್ರಾತಿನಿಧಿಕ ಕೃತಿಗಳನ್ನು ನಿರ್ಮಿಸಿದರೂ, ಆ ಚಳುವಳಿಯ ನಂತರದ ಕಾಲದಲ್ಲಿ ಆತ ಬರೆದ ಕೃತಿಗಳು ಮೊದಲಿನವುಗಳಿಗಿಂತ ಹೆಚ್ಚು ಮೌಲಿಕವಾಗಿರುವ ಉದಾಹರಣೆಗಳೂ ಉಂಟು. ಸಾರಾಂಶವೇನೆಂದರೆ, ನಿಜವಾದ ಸಾಹಿತಿ ತಾನು ಸಂಗಡಿಸಿಕೊಂಡ ಚಳುವಳಿಯ ನಿಲುವುಗಳನ್ನು ಮೀರಿ ನಿಂತಾಗ ಮಾತ್ರ ಶ್ರೇಷ್ಠವಾದ ಕೃತಿಗಳನ್ನು ಬರೆಯಬಲ್ಲ. ಯಾಕೆಂದರೆ ನಿಜವಾದ ಕೃತಿ ನಿರ್ಮಿತಿ ಎನ್ನುವುದು ಬರೆಹಗಾರನೊಬ್ಬನ ಸತ್ವ ಹಾಗೂ ವ್ಯಕ್ತಿ ಪ್ರತಿಭೆಯ ಪರಿಣಾಮ. ಸಾಹಿತ್ಯ ಚಳುವಳಿಗಳೇನಿದ್ದರೂ ಬದಲಾವಣೆಗೆ ತಕ್ಕ ಸಂದರ್ಭವನ್ನು ನಿರ್ಮಿಸಬಹುದು. ಅಲ್ಲದೆ ಸಾಹಿತ್ಯ ಚಳುವಳಿಗಳು ಸ್ವರೂಪತಃ ಸಾಮೂಹಿಕ; ಸಾಹಿತ್ಯ ನಿರ್ಮಿತಿ ವೈಯಕ್ತಿಕ. ಹೀಗಿರುವಲ್ಲಿ ಏಕಾಂತದ ಸೃಜನ ಪ್ರತಿಭೆ ಎಷ್ಟರಮಟ್ಟಿಗೆ ಸಾಮೂಹಿಕ ಚಳುವಳಿಯ ಚಿಂತನೆಗಳಿಂದ ನಿಯಂತ್ರಿತವಾಗಿರುತ್ತದೆ ಎನ್ನುವುದೂ ಈ ಹಂತದಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯಾಗಿದೆ.

ಸಾಹಿತ್ಯ ಚಳುವಳಿಗಳು ಸಂಭವಿಸುವುದು ಸಾಹಿತ್ಯದಲ್ಲಿ ಮೂಲಭೂತವಾದ ಬದಲಾವಣೆಗಳನ್ನು ತರುವ ಸಲುವಾಗಿ. ಆದರೆ ಕೇವಲ ಬದಲಾವಣೆಗಳನ್ನು ತರುವುದಷ್ಟೇ ಅಲ್ಲ, ಈ ಬದಲಾವಣೆಗಳಿಂದ ರೂಪುಗೊಳ್ಳುವ ಸಾಹಿತ್ಯವು ಒಂದು ಗಟ್ಟಿಯಾದ ಪರಂಪರೆಯನ್ನು ನಿರ್ಮಿಸುವಂತಿರಬೇಕು. ಹಾಗಾದಾಗ ಮಾತ್ರ ಆ ಚಳುವಳಿಗೆ ಒಂದು ಮಹತ್ವವುಂಟಾಗುತ್ತದೆ.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನಾವು ಗುರುತಿಸಬಹುದಾದ ಚಳುವಳಿಗಳೆಂದರೆ, ಹಳಗನ್ನಡ ಅಥವಾ ಮಾರ್ಗಸಾಹಿತ್ಯ ಚಳುವಳಿ, ನಡುಗನ್ನಡ ಅಥವಾ ದೇಶೀ ಚಳುವಳಿ; ನವೋದಯ; ಪ್ರಗತಿಶೀಲ; ನವ್ಯ; ದಲಿತ – ಬಂಡಾಯ.

೨. ಹಳಗನ್ನಡ ಅಥವಾ ಮಾರ್ಗಸಾಹಿತ್ಯ ಚಳುವಳಿ

ಪಂಪನಿಂದ ನಯಸೇನನವರೆಗಿನ ಎರಡು ಶತಮಾನಗಳ ಕಾಲವನ್ನು ಹಳಗನ್ನಡ ಅಥವಾ ಮಾರ್ಗ ಸಾಹಿತ್ಯದ ಕಾಲ ಎಂದು ಕರೆಯಬಹುದು. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕಂಡುಬರುವ ಮಾರ್ಗ ಮತ್ತು ದೇಶೀ ಪರಂಪರೆಗಳಲ್ಲಿ, ವಚನ ಸಾಹಿತ್ಯವನ್ನು ನಿಜವಾದ ಚಳುವಳಿ ಎಂದು ಕರೆಯುವ ಹಾಗೆ ಇನ್ನುಳಿದ ಬದಲಾವಣೆ -ಗಳನ್ನು ಯಾವುದೇ ಚಳುವಳಿಗಳ ಪರಿಣಾಮ ಎಂದು ಕರೆಯುವುದು ಕಷ್ಟ. ಹಾಗೆಯೇ ಹೊಸಗನ್ನಡ ಸಾಹಿತ್ಯ ಚಳುವಳಿಗಳನ್ನು ‘ಸಾಹಿತ್ಯ ಚಳುವಳಿಗಳು’ ಎಂದು ಕರೆಯುವಂತೆ, ಪ್ರಾಚೀನ ಕನ್ನಡ ಸಾಹಿತ್ಯ ಸಂದರ್ಭದ ಚಳುವಳಿಗಳನ್ನು ಸಾಹಿತ್ಯ ಚಳುವಳಿಗಳೆಂದು ಕರೆಯುವುದೂ ಕಷ್ಟ. ಯಾಕೆಂದರೆ, ಹಿಂದಿನ ಸಾಹಿತ್ಯ ಚಳುವಳಿಗಳೆಲ್ಲವೂ ಶುದ್ಧ       ಸಾಹಿತ್ಯ ಚಳುವಳಿಗಲ್ಲ. ಅವುಗಳ ಹಿಂದಿನ ಮುಖ್ಯ ಕಾರಣ – ಪ್ರೇರಣೆಗಳು ಧಾರ್ಮಿಕವಾದವುಗಳು. ಸಾಹಿತ್ಯದಲ್ಲಿ ಆದ ಆ ಬದಲಾವಣೆಗಳಿಗೆ ಸಾಹಿತ್ಯಕ ಕಾರಣಗಳು ಮುಖ್ಯವಾಗಿಲ್ಲ. ಅದರ ಬದಲು ಧರ್ಮಶ್ರದ್ಧೆ ಹಾಗೂ ಮತ ಪ್ರಸಾರಗಳೆ ಅಂದಂದಿನ ಸಾಹಿತ್ಯದ ವಸ್ತು-ರೀತಿ-ಧೋರಣೆಗಳನ್ನು ಕಾಲದಿಂದ ಕಾಲಕ್ಕೆ ರೂಪಿಸಿವೆ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಜತೆಗೆ ರಾಜಾಸ್ಥಾನಗಳೂ, ರಾಜನಿಷ್ಠೆಯೂ ಇದಕ್ಕೆ ಪೂರಕವಾದ ಕಾರಣವಾಗಿದೆ. ಹೀಗಾಗಿ ಧರ್ಮನಿಷ್ಠೆ ಮತ್ತು ಪ್ರಭುನಿಷ್ಠೆಗಳಿಗೆ ನಮ್ಮ ಕವಿಗಳು ತೋರಿದ ಪ್ರತಿಕ್ರಿಯೆಗಳೇ ಹಳಗನ್ನಡ ಸಾಹಿತ್ಯ ಪರಂಪರೆಯ ಮುಖ್ಯ ಲಕ್ಷಣಗಳಾಗಿವೆ.

ಒಂದು ಸ್ವಾರಸ್ಯದ ಸಂಗತಿ ಎಂದರೆ, ಕನ್ನಡ ಸಾಹಿತ್ಯ ಪ್ರಾರಂಭವಾದದ್ದೆ, ವೈದಿಕ – ಧಾರ್ಮಿಕ ನಿಲುವಿಗೆ, ಕನ್ನಡದ ಮೊದಲ ಹಂತದ ಕವಿಗಳು ತೋರಿಸಿದ ಪ್ರತಿಭಟನಾತ್ಮಕವಾದ ಪ್ರತಿಕ್ರಿಯೆಯಿಂದ. ಪ್ರತಿಭಟನೆ ಮತ್ತು ತನ್ಮೂಲಕ ಒಂದು ಪರಂಪರೆಯ ನಿರ್ಮಾಣ, ಇವು ಸಾಹಿತ್ಯ ಚಳುವಳಿಗಳ ಪ್ರಮುಖ ಲಕ್ಷಣಗಳಾಗಿರುತ್ತವೆ ಎನ್ನುವುದನ್ನು ನೆನೆದರೆ, ಹಳಗನ್ನಡದ ಮಾರ್ಗ ಮತ್ತು ದೇಸೀ ಸಾಹಿತ್ಯ ಸಂದರ್ಭದಲ್ಲಿ, ಅನುಕ್ರಮವಾಗಿ ಎರಡು ಚಳುವಳಿಗಳು ಕ್ರಿಯಾಶೀಲವಾಗಿದ್ದವೆಂದು ಭಾವಿಸಬಹುದು. ಇವುಗಳಲ್ಲಿ ಒಂದು, ಪಂಪನಿಂದ ಪ್ರಾರಂಭವಾದ ‘ಮಾರ್ಗಕಾವ್ಯ ಚಳುವಳಿ’, ಮತ್ತೊಂದು ಶಿವಶರಣರಿಂದ ಪ್ರಾರಂಭವಾದ ‘ವಚನ ಚಳುವಳಿ’. ಆದರೆ ‘ವಚನ ಚಳುವಳಿ’ ಅದರ ಸಮಸ್ತ ಸ್ವರೂಪದಲ್ಲಿಯೂ, ‘ಚಳುವಳಿ’ ಎಂದು ಕರೆಯಲು ಅರ್ಹವಾದಂತೆ, ಪಂಪನಿಂದ ಪ್ರಾರಂಭವಾದ ಮಾರ್ಗ ಸಾಹಿತ್ಯವನ್ನು, ಒಂದು ನಿರ್ದಿಷ್ಟ ಚಳುವಳಿಯ ಪರಿಣಾಮ ಎಂದು ಕರೆಯುವುದು ಕಷ್ಟವಾಗುತ್ತದೆ. ಯಾಕೆಂದರೆ ‘ವಚನ ಚಳುವಳಿ’ ಇತ್ತೀಚಿನ ಸಾಹಿತ್ಯ ಚಳುವಳಿಗಳಂತೆ ಸಾಮೂಹಿಕ ಸ್ವರೂಪದ್ದು; ಆದರೆ, ಪಂಪನಿಂದ ಪ್ರಾರಂಭವಾದ ಕನ್ನಡ ಸಾಹಿತ್ಯದ ಲಕ್ಷಣಗಳನ್ನು ನೋಡಿದರೆ, ಅದು ಮೂಲತಃ ತನಗಿಂತ ಹಿಂದಿನ, ಹಾಗೂ ಸಮಸ್ತ ಭಾರತೀಯ ಸಾಹಿತ್ಯಗಳಿಗೆ ಹಿನ್ನೆಲೆಯಾದ ಮತ್ತು ಅವುಗಳನ್ನು ನಿಯಂತ್ರಿಸುತ್ತಿದ್ದ ವೈದಿಕ ಅಥವಾ ಸಂಸ್ಕೃತ ಸಾಹಿತ್ಯ ಪರಂಪರೆಗೆ ತೋರಿದ ಪ್ರತಿಕ್ರಿಯೆಗಳ ಪರಿಣಾಮವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಮತ್ತು ಪಂಪನಿಂದ ಪ್ರಾರಂಭವಾದ ಹೊಸ ಬರವಣಿಗೆಯ ಕ್ರಮವೊಂದು, ಮುಂದೆ ರನ್ನ, ಪೊನ್ನ, ಜನ್ನ, ನಾಗಚಂದ್ರ ಮೊದಲಾದ ಕವಿಗಳ ಮೂಲಕ ಮುಂದುವರಿದು ಪರಂಪರೆಯೊಂದನ್ನು ನಿರ್ಮಿಸಿದೆ. ಹಾಗೆಯೆ ಈ ಪರಂಪರೆಯ ಲಕ್ಷಣಗಳು, ಸಂಸ್ಕೃತ ಕಾವ್ಯ ಪರಂಪರೆಯಿಂದ ತಕ್ಕಷ್ಟು ಭಿನ್ನವಾಗಿಯೇ ಇವೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಸಾಹಿತ್ಯದಲ್ಲಿ ಹೊಸತನವನ್ನು ತರುವ ‘ಚಳುವಳಿ’, ಸಾಮೂಹಿಕ ವಾಗಿರುವಂತೆ, ಅತ್ಯಂತ ಪ್ರತಿಭಾಶಾಲಿಯಾದ ಲೇಖಕನೊಬ್ಬ ತನಗಿಂತ ಹಿಂದಿನ ಪರಂಪರೆಗೆ ತೋರುವ ಸೃಜನಾತ್ಮಕ ಪ್ರತಿಕ್ರಿಯೆಗಳ ರೂಪದಲ್ಲಿಯೂ ಇರುತ್ತದೆ ಎಂಬುದನ್ನು ನಾವು ಒಪ್ಪಬೇಕಾಗುತ್ತದೆ. ಆದ ಕಾರಣ ಪಂಪನಿಂದ ಕನ್ನಡದ ಮಾರ್ಗ ಕಾವ್ಯ ಚಳುವಳಿಯೊಂದು ರೂಪುಗೊಂಡಿತೆಂದು ಭಾವಿಸುವುದು ತಪ್ಪೇನೂ ಅಲ್ಲ. ಮತ್ತು ಈ ‘ಚಳುವಳಿ’ಯ ಸ್ವರೂಪವನ್ನು ಪಂಪ ತನ್ನ ಕಾವ್ಯ ನಿರ್ಮಿತಿಯ ಸಂದರ್ಭದಲ್ಲಿ ಪ್ರಸ್ತಾಪಿಸುವ ಹಲವು ಕಾವ್ಯಪರ ಚಿಂತನೆಗಳಿಂದ ನಾವು ಕಟ್ಟಿಕೊಳ್ಳಲು ಸಾಧ್ಯವಿದೆ.

ಯಾವುದೇ ಸಾಹಿತ್ಯ ಚಳುವಳಿಯ ಮುಖ್ಯ ಲಕ್ಷಣಗಳೆಂದರೆ ಅದು ತನಗೆ ಪೂರ್ವದ ಸಾಹಿತ್ಯದ ಪರಂಪರೆಯ ಬಗ್ಗೆ ತನ್ನ ಪ್ರತಿಕ್ರಿಯೆಯನ್ನು ದಾಖಲು ಮಾಡುವ ಕ್ರಮದಲ್ಲಿದೆ. ಪಂಪ, ಸಾಹಿತ್ಯ ನಿರ್ಮಿತಿಗೆ ತೊಡಗಿದ ಸಂದರ್ಭದ ಸಾಹಿತ್ಯ ಪರಂಪರೆ ಎಂದರೆ, ಈಗ ನಮಗೆ  ಉಪಲಬ್ಧವಾಗದ ಪಂಪಪೂರ್ವ ಕನ್ನಡ ಸಾಹಿತ್ಯ, ಮತ್ತು ಉಜ್ವಲ ಪರಂಪರೆಯನ್ನು ಉಳ್ಳ ಭಾರತೀಯ ಸಂಸ್ಕೃತ ಸಾಹಿತ್ಯ. ಪಂಪನ ಕೃತಿಗಳು ಅವನಿಗೆ ಹಿಂದಿನ ಕನ್ನಡ ಕಾವ್ಯಗಳನ್ನು ‘ಇಕ್ಕಿಮೆಟ್ಟಿದವು’ ಎನ್ನುವ ಮಾತಿನಿಂದ, ಪಂಪನ ಕೃತಿಗಳು ಅವನಿಗೆ ಆ ಹಿಂದಿನ ಕನ್ನಡ ಕಾವ್ಯಗಳ ಸತ್ವವನ್ನು  ಅರಗಿಸಿಕೊಂಡು, ಅವುಗಳನ್ನು ಮೀರಿಸುವ ‘ಅನನ್ಯತೆ’ಯನ್ನು ಪಡೆದುಕೊಂಡವು ಎಂಬ ಅರ್ಥ ಸೂಚಿತವಾಗುತ್ತದೆ; ಆದರೆ ಆ ಹಿಂದಿನ ಕಾವ್ಯಗಳ  ಬಗ್ಗೆ ಅವನು ಯಾವ ಖಚಿತವಾದ ಪ್ರತಿಕ್ರಿಯೆಯನ್ನು ತೋರಿದನೆಂದು ತರ್ಕಿಸುವುದಕ್ಕೆ, ಆ ಪರಂಪರೆಯ ಕೃತಿಗಳು ಅನುಪಲಬ್ಧವಾಗಿರುವುದು ಒಂದು ದೊಡ್ಡ ತೊಡಕಾಗಿದೆ. ಇನ್ನು ಆತ, ಸಂಸ್ಕೃತ  ಸಾಹಿತ್ಯಕ್ಕೆ ತೋರಿದ ಪ್ರತಿಕ್ರಿಯೆಗಳಂತೂ  ಸ್ಪಷ್ಟವಾಗಿಯೇ ಇವೆ, ಮತ್ತು ಆ ಸಾಹಿತ್ಯ ಪರಂಪರೆಯ ಬಗ್ಗೆ ಆತನಿಗೆ ಪ್ರೀತಿ ಗೌರವಗಳಿವೆ. ಆದರೆ, ಆ ಕಾರಣಕ್ಕೆ ಆ ಪರಂಪರೆಯನ್ನೆ ಯಥಾವತ್ತಾಗಿ ಮುಂದುವರಿಸಬಾರದೆಂಬ ಎಚ್ಚರವೇ, ಆತ ‘ವಿಕ್ರಮಾರ್ಜುನ ವಿಜಯ’ವನ್ನು ಬರೆಯುವ ಹೊತ್ತಿನಲ್ಲಿ ಮೂಲಭಾರತದ ಕಥಾವಸ್ತುವಿಗೆ ತೋರಿದ ಪ್ರತಿಕ್ರಿಯೆಗಳಲ್ಲಿ ಸುವ್ಯಕ್ತವಾಗಿದೆ. ಮೊದಲನೆಯದಾಗಿ ವ್ಯಾಸಭಾರತದ ಕಥಾವಸ್ತುವನ್ನು, ಅರ್ಜುನಕೇಂದ್ರಿತ, ಏಕವೀರ ಕಥೆಯನ್ನಾಗಿ ಮಾರ್ಪಡಿಸಿದ್ದು; ಆ ಕಥೆಯನ್ನು ಪುರಾಣ – ಪ್ರಸ್ತುತ ಸಮೀಕರಣ ತಂತ್ರದೊಳಗೆ ಅಳವಡಿಸಿ ‘ಸಮಸ್ತಭಾರತ’ ವನ್ನಾಗಿ ಮಾಡಿದ್ದು; ವಸ್ತುನಿಷ್ಠ ಕಾವ್ಯದಲ್ಲಿ ಅನೇಕ ವ್ಯಕ್ತಿನಿಷ್ಠ ಅಂಶಗಳನ್ನು ತಂದದ್ದು; ದುರ‍್ಯೋಧನ, ಕರ್ಣ, ಇಂಥ ಪಾತ್ರಗಳನ್ನು, ಆಧುನಿಕ ದುರಂತ ನಾಯಕ ಪಾತ್ರಗಳಂತೆ ರೂಪುಗೊಳಿಸಿದ್ದು; ಮೂಲಭಾರತವನ್ನು ಹತ್ತನೆಯ ಶತಮಾನದ ಕರ್ನಾಟಕದ ಪ್ರಾದೇಶಿಕತೆಯ ಮೂಲಮಾನದಲ್ಲಿ ವ್ಯಾಖ್ಯಾನಿಸಿದ್ದು- ಇತ್ಯಾದಿಗಳು ಸ್ಪಷ್ಟವಾಗಿ, ವ್ಯಾಸಭಾರತ ಪರಂಪರೆಗೆ, ಪಂಪನು ತೋರಿದ ಸೃಜನಾತ್ಮಕ ಪ್ರತಿಕ್ರಿಯೆಗಳ ಪರಿಣಾಮವೆಂದು ಭಾವಿಸಬೇಕಾಗುತ್ತದೆ.

ಪಂಪನ ‘ಸಾಹಿತ್ಯ ಚಳುವಳಿ’ಯ ಇನ್ನೊಂದು ಕೊಡುಗೆ ಎಂದರೆ, ಜಿನಸೇನಾಚಾರ್ಯರ ಸಂಸ್ಕೃತ ಮಹಾಪುರಾಣ ಪರಂಪರೆಗೆ, ಕನ್ನಡದಲ್ಲಿ ‘ಆದಿ ಪುರಾಣ’ವನ್ನು ಬರೆಯುವುದರ ಮೂಲಕ ತೋರಿದ ಪ್ರತಿಕ್ರಿಯೆಯಲ್ಲಿದೆ. ಸಂಸ್ಕೃತದಲ್ಲಿ ಮಹಾಪುರಾಣದ ಒಂದು ಭಾಗವಾಗಿರುವ ತೀರ್ಥಂಕರ ಚರಿತ್ರೆಯನ್ನು ಕನ್ನಡದಲ್ಲಿ ಬಿಡಿಬಿಡಿಯಾಗಿ ಒಬ್ಬೊಬ್ಬ ತೀರ್ಥಂಕರರನ್ನು ಕುರಿತು ಬರೆಯಬಹುದೆಂಬ ಸಾಧ್ಯತೆಯನ್ನೂ ಹಾಗೂ ಪುರಾಣಕಾವ್ಯಗಳ ಒಂದು ಪರಂಪರೆಯನ್ನೂ, ‘ಆದಿಪುರಾಣ’ ನಿರ್ಮಿತಿಯ ಮೂಲಕ ಹಾಕಿಕೊಟ್ಟವನು ಪಂಪನೇ. ಅಷ್ಟೇ ಅಲ್ಲ ‘ಆದಿಪುರಾಣದೊಳರಿವುದು ಧರ್ಮಮಂ ಕಾವ್ಯಧರ್ಮಮುಮಂ’ ಎಂಬ ಘೋಷಣೆಯ ಮೂಲಕ, ಧರ್ಮ ಮತ್ತು ಕಾವ್ಯಧರ್ಮಗಳೆರಡನ್ನೂ ಪರಿಣಾಮಕಾರಿಯಾಗಿ ನಿರ್ವಹಿಸುವ ಕಲೆಗಾರಿಕೆಯನ್ನು ಕಲಿಸಿಕೊಟ್ಟವನು ಪಂಪ. ಅದಕ್ಕೂ ಮಿಗಿಲಾಗಿ ಧರ್ಮಶ್ರದ್ಧೆಗೆ ಒಂದು, ಲೌಕಿಕಾನುಭವಕ್ಕೆ ಒಂದು ಎಂಬಂತೆ, ಎರಡು ಕಾವ್ಯಗಳನ್ನು ಬರೆದು ‘ಬೆಳಗುವೆನಿಲ್ಲಿ ಲೌಕಿಕಮಂ, ಅಲ್ಲಿ ಜಿನಾಗಮಮುಮಂ’ ಎಂದು ಘೋಷಿಸಿ, ದ್ವಿಕಾವ್ಯ ಪರಂಪರೆಯೊಂದನ್ನು ಕನ್ನಡದಲ್ಲಿ ರೂಢಿಸಿದ್ದು ಪಂಪನ ಕಾವ್ಯ ಪ್ರಯೋಗದ ಮತ್ತೊಂದು ಲಕ್ಷಣವಾಗಿದೆ.

ಪ್ರತಿಯೊಂದು ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿಯೂ ಕಾವ್ಯದ ಭಾಷೆಯನ್ನು ಕುರಿತ ಬೇರೆಯಾದ ನಿಲುವೊಂದು ಘೋಷಿತವಾಗುವುದು ಅದರ ಸಾಮಾನ್ಯ ಲಕ್ಷಣವಾಗಿದೆ. ಯಾಕೆಂದರೆ ಸಾಹಿತ್ಯದಲ್ಲಿ ಬದಲಾವಣೆಯೆಂದರೆ ಮೂಲಭೂತವಾಗಿ ಬರೆವಣಿಗೆಯ ಕ್ರಮ ಅಥವಾ ಅದರ ರೀತಿ ಅಥವಾ ಶೈಲಿಯಲ್ಲಿ ಆಗುವ ಬದಲಾವಣೆಯೆ. ರೀತಿಯ ಬದಲಾವಣೆ ಮುಖ್ಯವಾಗಿ ಕಾಣಿಸಿಕೊಳ್ಳುವುದು ಕಾವ್ಯದ ಭಾಷೆಯನ್ನು ಹೊಸದಾಗಿ ಮುರಿದು ಕಟ್ಟುವ ಪ್ರಯೋಗಗಳಲ್ಲಿ, ಮತ್ತು ಅದು ಹೆಚ್ಚು ಜನಪರವಾಗಿರಬೇಕು ಎಂಬ ಧೋರಣೆಯಲ್ಲಿ. ಕನ್ನಡ ಸಾಹಿತ್ಯದ ಹಲವು ಚಳುವಳಿಗಳ ಹಂತದಲ್ಲಿ, ಕಾವ್ಯದ ಭಾಷೆಯನ್ನು  ಕುರಿತ ಚರ್ಚೆಗಳೇ ಹೆಚ್ಚು ಗಮನವನ್ನು ಸೆಳೆಯುತ್ತವೆ. ಈ ದೃಷ್ಟಿಯಿಂದ ಪಂಪನಿಂದ ಪ್ರಾರಂಭವಾದ ಮಾರ್ಗ ಕಾವ್ಯ ಸಂದರ್ಭದಲ್ಲಿ, ಮಾರ್ಗ – ದೇಸಿಗಳ ಒಡಂಬಡಿಕೆಯ ಚರ್ಚೆ ತುಂಬ ಗಮನಾರ್ಹವಾಗಿದೆ. ಈ ಚರ್ಚೆಯ ನೆಲೆಯೆಂದರೆ, ಕನ್ನಡದ ಮೇಲೆ ಸವಾಲಾಗಿ, ಆತಂಕವಾಗಿ ಕವಿದುಕೊಂಡಿದ್ದ ಸಂಸ್ಕೃತ ಭಾಷೆಯ ಪ್ರಭಾವ ಹಾಗೂ ಪ್ರವೇಶಗಳನ್ನು, ಕನ್ನಡದಲ್ಲಿ ಕೃತಿ ರಚನೆ ಮಾಡುವ ಕವಿಗಳು ಎಷ್ಟರಮಟ್ಟಿಗೆ ಸ್ವೀಕರಿಸಬಹುದು ಎನ್ನುವುದೇ ಆಗಿದೆ. ಈ ದೇಶದ ಬುದ್ಧಿಯ ಭಾಷೆಯಾದ ಹಾಗೂ ರಾಜಭಾಷೆಯಾದ ಸಂಸ್ಕೃತವನ್ನು, ತಮ್ಮ ಪ್ರಾದೇಶಿಕ ಪರಿಸರದಲ್ಲಿ, ತಮ್ಮ ಜನಕ್ಕಾಗಿ ರಚಿತವಾಗುವ ಕನ್ನಡ ಕಾವ್ಯದ ಶೈಲಿಯಲ್ಲಿ ಎಷ್ಟರ ಮಟ್ಟಿಗೆ ಅಳವಡಿಸಿಕೊಳ್ಳಬಹುದು ಎನ್ನುವುದೇ ಇಲ್ಲಿನ ಸಮಸ್ಯೆ. ಈ ಸಮಸ್ಯೆಗೆ, ಪಂಪನಿಗೆ ಪೂರ್ವದಲ್ಲಿ ಇದ್ದ ಕವಿರಾಜಮಾರ್ಗಕಾರನೇ, ತುಂಬ ವಿವೇಕಯುತವಾದ ವಿಧಾನವೊಂದನ್ನು ಸೂಚಿಸಿದ್ದನು. ಅದೇನೆಂದರೆ, ಕನ್ನಡದ ಹಾಗೆ ಸಂಸ್ಕೃತವೂ ನಮ್ಮದೇ ಆಗಿರುವ ಪರಿಸರದಲ್ಲಿ, ಕನ್ನಡದಲ್ಲಿ ಕೃತಿರಚನೆ ಮಾಡಬೇಕಾದ ಕವಿಗಳು, ಸಂಸ್ಕೃತವೂ ನಮ್ಮದೇ ಆಗಿರುವ ಪರಿಸರದಲ್ಲಿ, ಕನ್ನಡದಲ್ಲಿ ಕೃತಿರಚನೆ ಮಾಡಬೇಕಾದ ಕವಿಗಳು, ಸಂಸ್ಕೃತವನ್ನು ನಿರಾಕರಿಸಬೇಕಾಗಿಲ್ಲ; ಆದರೆ ಹಾಗೆ ಕನ್ನಡದೊಂದಿಗೆ ಬಳಕೆಯಾಗುವ ಸಂಸ್ಕೃತ ಪದಗಳು, ಕನ್ನಡದ ನಾಡನುಡಿಯ ಬೆಡಗನ್ನು ಕಬಳಿಸುವಂತಿರಬಾರದು- ಎನ್ನುತ್ತಾನೆ ಕವಿರಾಜಮಾರ್ಗಕಾರ. ಪಂಪನೂ, ಈ ನಿಲುವನ್ನು ಒಪ್ಪಿಕೊಂಡು, ಮಾರ್ಗ ಹಾಗೂ ದೇಸಿಗಳ ಒಡಂಬಡಿಕೆಯೊಂದನ್ನು ಕಾವ್ಯಭಾಷೆಯ ಮುಖ್ಯ ಲಕ್ಷಣವನ್ನಾಗಿ ಎತ್ತಿ ಹೇಳುತ್ತಾನೆ. ಮುಂದೆ ಬಂದ ಕವಿಗಳು ಪಂಪನ ದೇಸಿಯನ್ನು ತುಂಬ ಹೊಗಳುತ್ತಾರೆ. ತಿರುಳ್ಗನ್ನಡದಲ್ಲಿ ಕಾವ್ಯವನ್ನು ಬರೆಯುತ್ತೇನೆ ಎಂದು ಹೇಳಿಕೊಂಡ ಪಂಪ – ಅದನ್ನೇ ದೇಸಿ ಎಂದು ಕರೆಯುತ್ತಾನೆ – ಈ ತಿರುಳ್ಗನ್ನಡದ ಸೊಗಸಿಗೆ ಧಕ್ಕೆಯಾಗದ ಹಾಗೆ ಸಂಸ್ಕೃತದ ಪದಗಳನ್ನೂ ತನ್ನ ಕಾವ್ಯಶೈಲಿಯಲ್ಲಿ ಹದವಾಗಿ ಅಳವಡಿಸಿಕೊಳ್ಳುವ ನಿಲುವೊಂದನ್ನು ಪ್ರತಿಪಾದಿಸುತ್ತಾನೆ. ಹೀಗೆ ಕಾವ್ಯದ ವಸ್ತುನಿರ್ವಹಣೆ, ಹಾಗೂ ಕಾವ್ಯಭಾಷೆಯನ್ನು ಕುರಿತ ಪಂಪನ ಮಾತುಗಳು ಮತ್ತು ಸುಭದ್ರವಾಗಿ ಹಾಕಿಕೊಟ್ಟ ಒಂದು ಪರಂಪರೆ- ಇತ್ಯಾದಿಗಳು ಪಂಪನಿಂದ ಪ್ರಾರಂಭವಾದ ‘ಏಕವ್ಯಕ್ತಿ ಚಳುವಳಿ’ಯ ಪರಿಣಾಮಗಳಾಗಿವೆ.

ವಾಸ್ತವವಾಗಿ ಈ ‘ಮಾರ್ಗಸಾಹಿತ್ಯ ಚಳುವಳಿ’, ‘ಪಂಪನಿಂದ ಪ್ರಾರಂಭ -ವಾದರೂ, ಮುಂದೆ ಒಂದೂವರೆ ಶತಮಾನದವರೆಗೆ, ಇನ್ನೂ ಹಲವು ಕವಿಗಳ ವಿಚಾರಗಳನ್ನು ಒಳಗೊಳ್ಳುವಷ್ಟು ವ್ಯಾಪಕವಾಗಿದೆ. ಧರ್ಮಶ್ರದ್ಧೆಯ ನಿಲುವಿನಲ್ಲಿ ವ್ಯಕ್ತಿಪಡೆದುಕೊಳ್ಳುವ ಆತ್ಮಪ್ರತ್ಯಯ ಹಾಗೂ ವ್ಯವಸ್ಥೆಯನ್ನು ವಿರೋಧಿಸುವ ಮನೋಧರ್ಮಗಳು ರೂಪುಗೊಂಡದ್ದಲ್ಲದೆ, ಪಂಪನಿಂದ ಉದ್ ಘೋಷಿತವಾದ ಮಾರ್ಗ-ದೇಸಿಗಳ ಒಡಂಬಡಿಕೆಯ ಧೋರಣೆಯೂ ಚಿಕಿತ್ಸೆಗೆ ಗುರಿಯಾಗಿ ‘ಸುದ್ದಗನ್ನಡ’ದ ಪ್ರತಿಪಾದನೆಯೊಂದು, ಈ ಚಳುವಳಿಯ ಚರಮಫಲವಾಗಿ ನಯಸೇನನಿಂದ ನೆಲೆಗೊಂಡದ್ದು  ಮುಖ್ಯವಾದ ಸಂಗತಿಯಾಗಿದೆ. ಸಂಸ್ಕೃತ ಕನ್ನಡಗಳ ಅಥವಾ ಮಾರ್ಗದೇಸಿಗಳ ಒಡಂಬಡಿಕೆಯ ಧೋರಣೆ ತುಂಬ ಸಮತೂಕದ್ದೆಂದು ಮೇಲುನೋಟಕ್ಕೆ ತೋರಿದರೂ, ಕಾವ್ಯರಚನೆಯ ಸಂದರ್ಭದಲ್ಲಿ ಸಂಸ್ಕೃತದ ಸೆಳೆತವೇ ಮಿಗಿಲಾಗಿ ಬಿಡುವುದೆಂಬ  ಅಪಾಯವನ್ನು ಸೂಕ್ಷ್ಮವಾಗಿ ಗಮನಿಸಿದ ನಯಸೇನನು, ‘ಸಂಸ್ಕೃತದಲ್ಲಿ ಹೇಳುವುದಾದರೆ, ಒಳ್ಳೆಯ ಸಂಸ್ಕೃತದಲ್ಲಿಯೆ ಹೇಳಲಿ; ಶುದ್ಧ ಕನ್ನಡದಲ್ಲಿ ಸಂಸ್ಕೃತವನ್ನು ತಂದು ಹೇರುವುದೇಕೆ? ಎಣ್ಣೆಯನ್ನೂ ತುಪ್ಪವನ್ನೂ ಒಂದರೊಳಗೊಂದು ಬೆರೆಸುವುದಾದರೂ ಯಾತಕ್ಕೆ ಎಂದು ವಾದಿಸುತ್ತ, ಸಂಸ್ಕೃತವನ್ನು  ಎಣ್ಣೆಗೂ, ಕನ್ನಡವನ್ನು ತುಪ್ಪಕ್ಕೂ ಹೋಲಿಸುವುದರ ಮೂಲಕ ಮೊಟ್ಟಮೊದಲಿಗೆ ಕನ್ನಡದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಾನೆ. ಮತ್ತು ಅವನು ಶುದ್ಧ (ಸುದ್ಧ) ಕನ್ನಡದ ಶೈಲಿಯೊಂದನ್ನು ತನ್ನ ‘ಧರ್ಮಾಮೃತ’ ಕೃತಿಯ ಮೂಲಕ ರೂಢಿಸಿ ತೋರಿಸುತ್ತಾನೆ. ನಯಸೇನನ ‘ಸುದ್ಧಗನ್ನಡ ಚಳುವಳಿ’ಯ ಧೋರಣೆಗಳು, ಮುಂದೆ ಅಂಡಯ್ಯನಲ್ಲಿ ಅಚ್ಚಗನ್ನಡದ ಪ್ರತಿಜ್ಞೆಯಾಗಿ ಒಂದು ಅತಿರೇಕವನ್ನು ತಲುಪಿದರೂ, ನಯಸೇನನಂತರದ ‘ವಚನ ಚಳುವಳಿ’ಯ ಪ್ರಾದುರ್ಭಾವಕ್ಕೆ ನೃಪತುಂಗನಿಂದ ಹಿಡಿದು ನಯಸೇನನವರೆಗಿನ ಭಾಷಿಕ ಚಿಂತನೆಗಳು ನೀಡಿದ ಪ್ರೇರಣೆಗಳು ಕಡಿಮೆಯೇನಲ್ಲ.

೩. ಭಕ್ತಿ ಮತ್ತು ಅನುಭಾವ ಸಾಹಿತ್ಯ ಚಳುವಳಿಗಳು

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎರಡನೆಯ ಮಹತ್ವದ ತಿರುವು ಕಾಣಿಸಿಕೊಂಡಿದ್ದು, ವೀರಶೈವ ಮತ್ತು ಹರಿದಾಸ ಚಳುವಳಿಗಳ ಕಾರಣದಿಂದ. ಇವೆರಡಕ್ಕೂ ಮುಖ್ಯ ಪ್ರೇರಣೆ ಎಂದರೆ ಭಕ್ತಿ ಮತ್ತು ಆನುಭಾವಿಕ ನೆಲೆಗಳೇ. ಈ ಚಳುವಳಿ, ಪಂಪನ ನಂತರ ಸುಮಾರು ಎರಡು ಶತಮಾನಗಳ ಕಾಲ ಕನ್ನಡ ಸಾಹಿತ್ಯವನ್ನು ವ್ಯಾಪಿಸಿಕೊಂಡಿದ್ದ ಮಾರ್ಗ ಕಾವ್ಯ ಪದ್ಧತಿಯನ್ನು ಮುರಿದು ವಚನ-ರಗಳೆ-ಷಟ್ಪದಿ-ಕೀರ್ತನೆಗಳೆಂಬ ಹಲವು ದೇಸೀ ಪ್ರಧಾನವಾದ ರೂಪಗಳನ್ನು ಆವಿಷ್ಕಾರ ಮಾಡಿದ್ದು ಮಹತ್ವದ ಸಂಗತಿಯಾಗಿರುವಂತೆಯೇ, ಈ ಕಾಲದ ಸೃಜನಶೀಲತೆಗೂ ಸಾಕ್ಷಿಯಾಗಿದೆ. ಭಕ್ತರೂ, ಸಂತರೂ, ಅನುಭಾವಿಗಳೂ ತಮ್ಮ ಅಭಿವ್ಯಕ್ತಿಯ ಮೂಲಕ ಒಂದು ಹೊಸ ಸಾಮಾಜಿಕ ಧಾರ್ಮಿಕ ಎಚ್ಚರವನ್ನು ಹುಟ್ಟಿಸಿದ್ದು ಈ ಚಳುವಳಿಗಳ ಒಂದು ವಿಶೇಷತೆಯಾಗಿದೆ.

ಕನ್ನಡ ಸಾಹಿತ್ಯದ ಮೊದಲ ಹಂತದ ಜೈನಸಾಹಿತ್ಯ ಹೇಗೆ ಭಾರತೀಯ ವೈದಿಕ ಪರಂಪರೆಗೆ ಒಂದು ಪ್ರತಿಕ್ರಿಯೆಯಾಗಿ ರೂಪುಗೊಂಡಿತೋ, ಹಾಗೆಯೇ ಎರಡನೆಯ ಹಂತದ ವೀರಶೈವ ಸಾಹಿತ್ಯವೂ ಪರಂಪರಾಗತವಾದ ವೈದಿಕ ನಿಲುವಿಗೆ ತೋರಿದ ಪ್ರತಿಭಟನೆಯ ಪರಿಣಾಮವಾಗಿದೆ. ಕೇವಲ ಹಿಂದಿನ ವೈದಿಕ ಧರ್ಮಕ್ಕೆ ಮಾತ್ರವಲ್ಲ, ಅದರ ನಂತರ ಬಂದ ಬೌದ್ಧ ಹಾಗೂ ಜೈನ ಧಾರ್ಮಿಕ ನಿಲುವುಗಳನ್ನೂ ಕುರಿತು ತನ್ನ ಪ್ರತಿಕ್ರಿಯೆಯನ್ನು ಇದು ವ್ಯಕ್ತಪಡಿಸುತ್ತದೆ. ಮತ್ತು ಈ ಲಕ್ಷಣ ವಚನಕಾರರ ನಿಲುವುಗಳಲ್ಲಿ ಮೂರ್ತಗೊಂಡು ಅನಂತರದ ಹರಿಹರ ರಾಘವಾಂಕಾದಿ ಕವಿಗಳಲ್ಲಿ ಅನುರಣಿತವಾಗಿದೆ. ಹೀಗೆ  ಪ್ರತಿಭಟನೆಯನ್ನು ಕೇಂದ್ರವಾಗಿ ಉಳ್ಳ ಮೊದಲ ಸಾಹಿತ್ಯ ಚಳುವಳಿ ಎಂದರೆ ವಚನ ಚಳುವಳಿಯೇ.

ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ಸಂಭವಿಸಿದ ಈ ವಚನ ಚಳುವಳಿ, ಅದುವರೆಗೆ ಭಾರತೀಯ ಪರಿಸರದಲ್ಲಿ ಮಾತ್ರವಲ್ಲ, ಇಡೀ ಜಾಗತಿಕ ಪರಿಸರದಲ್ಲಿಯೇ ನಡೆಯದಿದ್ದ ಒಂದು ಅಭೂತಪೂರ್ವ ಘಟನೆಯಾಗಿದೆ. ಶಿವಭಕ್ತಿಯ ನೆಲೆಯಲ್ಲಿ ನಡೆದ ಈ ಚಳುವಳಿ ಮೂಲತಃ ಸಾಮಾಜಿಕ-ಧಾರ್ಮಿಕ ಸ್ವರೂಪದ್ದಾಗಿದ್ದು, ವೈದಿಕ ಧರ್ಮದ ಚಾತುರ್ವಣ್ಯಕಲ್ಪನೆಯಿಂದ ಕೂಡಿ ಜಡವಾದ ಸಾಮಾಜಿಕ ಅಸಮಾನತೆಗಳ ವಿರುದ್ಧವಾಗಿ ನಿಂತು, ಅದಕ್ಕೆ ಪ್ರತಿಯಾಗಿ ಜಾತಿ-ವರ್ಗಲಿಂಗಭೇದಗಳಿಲ್ಲದ ಸಮಾನತಾ ಸಮಾಜವೊಂದನ್ನು ನೆಲೆಗೊಳಿಸುವ ಧರ್ಮವೊಂದನ್ನು ಸ್ಥಾಪಿಸುವ ಉದ್ದೇಶದ್ದಾಗಿತ್ತು. ಅದರ ಪರಿಣಾಮವಾಗಿ ರೂಪುಗೊಂಡದ್ದು ವೀರಶೈವ ಎಂಬ ಹೊಸ ಧರ್ಮ; ಮತ್ತು ಈ ಧರ್ಮದ ಸಂದರ್ಭದಲ್ಲಿ ತೊಡಗಿಕೊಂಡವರು, ತಮ್ಮ ಅನುಭವಗಳಿಗೆ, ವಿಚಾರಗಳಿಗೆ ಹಾಗೂ ಕಾಣ್ಕೆಗಳಿಗೆ ನೀಡಿದ ಅಭಿವ್ಯಕ್ತಿಯೇ ‘ವಚನ’. ಹೀಗೆ ವೀರಶೈವವೆಂಬ ಒಂದು ಸಾಮಾಜಿಕ – ಧಾರ್ಮಿಕ ಆಂದೋಳನದ ಸಂದರ್ಭದಲ್ಲಿ ಹುಟ್ಟಿಕೊಂಡದ್ದು ವಚನಗಳೆಂಬ ವಿಶಿಷ್ಟ ಅಭಿವ್ಯಕ್ತಿ ಪ್ರಕಾರ.

ಹನ್ನೆರಡನೆಯ ಶತಮಾನದಷ್ಟು ಹಿಂದೆ, ಒಂದು ಸಾಮಾಜಿಕ ಧಾರ್ಮಿಕ ಚಳುವಳಿಯ ಉಪಉತ್ಪನ್ನಗಳಾಗಿ ಕಾಣಿಸಿಕೊಂಡ ‘ವಚನ’ಗಳನ್ನು ಇವತ್ತು ನಾವು, ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವಾಗಿ ಗಣನೆಗೆ ತೆಗೆದುಕೊಂಡು, ಅವುಗಳಲ್ಲಿ ಅತ್ಯುತ್ತಮ ಸಾಹಿತ್ಯದ ಲಕ್ಷಣಗಳನ್ನು ಗುರುತಿಸುತ್ತೇವೆ. ಮತ್ತು ಈ ವಚನಗಳು ಹುಟ್ಟಿಕೊಂಡ ಸಂದರ್ಭವನ್ನು ‘ವಚನ ಸಾಹಿತ್ಯ ಚಳುವಳಿ’ ಎಂದು ಕರೆಯುತ್ತೇವೆ. ಆದರೆ, ವಚನಗಳ ಸಾಹಿತ್ಯಕ ಮೌಲ್ಯಗಳನ್ನು ಕುರಿತು ಚರ್ಚಿಸುತ್ತೇವೆ. ಆದರೆ, ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿ ವಚನಗಳನ್ನು ಇರಿಸಿ ಚರ್ಚಿಸುವ ಕ್ರಮ ಕೇವಲ ಆಧುನಿಕ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಹುಟ್ಟಿಕೊಂಡದ್ದೇ ಹೊರತು ಇದಕ್ಕೆ ಹಿಂದಿನ ಕಾಲಮಾನಗಳಲ್ಲಿ ಎಂದೂ ವಚನಗಳನ್ನು ಸಾಹಿತ್ಯದ ಲೆಕ್ಕದಲ್ಲಿ ಎಣಿಸಿದ್ದೇ ಇಲ್ಲ ಎನ್ನುವುದು ಸ್ವಾರಸ್ಯದ ಸಂಗತಿಯಾಗಿದೆ. ಯಾಕೆಂದರೆ, ವಚನಗಳನ್ನು ಸಾಹಿತ್ಯ ಕೃತಿಗಳೆಂದೂ, ವಚನಕಾರರನ್ನು ಕವಿ ಅಥವಾ ಸಾಹಿತಿಗಳೆಂದೂ ಭಾವಿಸಿದ, ಗುರುತಿಸಿದ, ಹಾಗೂ ಸ್ಮರಿಸಿದ ಯಾವೊಂದು ಉಲ್ಲೇಖವೂ ಆಧುನಿಕ ಪೂರ್ವ ಸಾಹಿತ್ಯ ಪರಂಪರೆಯಲ್ಲಿ  ಕಂಡು ಬರುವುದಿಲ್ಲ. ಅದರ ಬದಲು ವಚನಗಳನ್ನು ‘ಶಾಸ್ತ್ರ’ಗಳೆಂದೂ, ಪವಿತ್ರವಾದ ಧಾರ್ಮಿಕ ಉಲ್ಲೇಖಗಳೆಂದೂ, ವಚನಕಾರರನ್ನು ಕೇವಲ ಶರಣರು, ಮಹಾನುಭಾವಿಗಳು, ದೈವಾಂಶ ಪುರುಷರು ಎಂದೂ ಭಾವಿಸಲಾಗಿದೆಯೆ ವಿನಾ, ಸಾಹಿತ್ಯ – ಸಾಹಿತಿ ಪರಿಭಾಷೆಗಳಲ್ಲಿ ಗ್ರಹಿಸಿದ ದಾಖಲೆಗಳೇ ಇಲ್ಲ. ಇದಕ್ಕಿಂತ ಮಿಗಿಲಾಗಿ ವಚನಗಳನ್ನು ಬರೆದವರು ಕೂಡಾ, ತಾವೊಂದು ಸಾಹಿತ್ಯ ಪರಂಪರೆಯ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದಾಗಲೀ, ವಚನ ರಚನೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡುತ್ತಿದ್ದೇವೆ ಎಂದಾಗಲೀ ಎಂದೂ ಭಾವಿಸಿರಲಿಲ್ಲವೆಂಬುದನ್ನು ನೆನೆದರೆ, ವಚನ ನಿರ್ಮಿತಿ ನಿಜವಾದ ಸಾಹಿತ್ಯೇತರ ನಿಲುವಿನಲ್ಲಿ ಹುಟ್ಟಿಕೊಂಡ ಒಂದು ವಿಶಿಷ್ಟ ಪ್ರಕಾರವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ, ಕನ್ನಡ ಭಾಷೆಯ ಸಂದರ್ಭದಲ್ಲಿ ರೂಪುಗೊಂಡ ಈ ವಚನಗಳು, ಅತ್ಯಪೂರ್ವವಾದ ರೀತಿಯ ಅಭಿವ್ಯಕ್ತಿ ಪ್ರಕಾರಗಳಾಗಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಗಳಾಗಿರುವುದಂತೂ ನಿಶ್ಚಯವಾದ ಸಂಗತಿಯಾಗಿದೆ ಮತ್ತು ಈ ಬಗೆಯ ಅಭಿವ್ಯಕ್ತಿ ಕ್ರಮ ಆವರೆಗೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೇ ಇರಲಿಲ್ಲವೆಂಬುದು ಮಾತ್ರವಲ್ಲ, ಜಗತ್ತಿನ ಸಾಹಿತ್ಯದಲ್ಲಿಯೆ ಇವುಗಳನ್ನು ಹೋಲುವ ರೂಪಗಳು ತೀರಾ ವಿರಳ.

ವಚನಗಳೆಂಬ ವಿಶಿಷ್ಟ ಅಭಿವ್ಯಕ್ತಿಗೆ ಕಾರಣವಾದ ಈ ಚಳುವಳಿ ಮೂಲತಃ ಒಂದು ಸಾಮೂಹಿಕ ವೈಚಾರಿಕ ಚಳುವಳಿಯಾಗಿದೆ. ಅಂದಿನ ಸಮಾಜದ ವಿವಿಧ ಸ್ತರಗಳಿಂದ, ವಿವಿಧ ವೃತ್ತಿಗಳಲ್ಲಿ ನಿರತರಾದ ಸಾಮಾನ್ಯ ಜನರು, ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ಸಂಘಟಿತರಾಗಿ ತಮ್ಮ ಪರಿಸರವನ್ನು ಪರಂಪರೆಯನ್ನು ಕುರಿತು ಪ್ರಶ್ನೆ ಮಾಡುತ್ತ ವೈಚಾರಿಕ ಸಂವಾದದಲ್ಲಿ ತೊಡಗಿದ್ದು ಈ ಚಳುವಳಿಯ ವೈಶಿಷ್ಟ್ಯವಾಗಿದೆ. ಮತ್ತು ಈ  ಬಗೆಯ ಚರ್ಚೆಯಲ್ಲಿ ತೊಡಗಲು ವೇದಶಾಸ್ತ್ರಾದಿಗಳ ಪಾಂಡಿತ್ಯವಿರಬೇಕಾಗಿಲ್ಲ, ಶ್ರೇಷ್ಠವಾದ ಕುಲದಲ್ಲಿ ಹುಟ್ಟಿರಬೇಕಾಗಿಲ್ಲ, ಗಂಡೆನ್ನದೆ, ಹೆಣ್ಣೆನ್ನದೆ, ಕಲಿತವರೆನ್ನದೆ, ಕಲಿಯದವರೆನ್ನದೆ ಎಲ್ಲರೂ ಆತ್ಮಪ್ರತ್ಯಯವಿರುವ ಮತ್ತು ವಿಚಾರ ಮಾಡಲು ಸಮರ್ಥರಾದ ಯಾರು ಬೇಕಾದರೂ ಇಲ್ಲಿ ಪಾಲುಗೊಳ್ಳಲು ಸಾಧ್ಯ ಎಂಬ ಧೈರ್ಯವೇ ಈ ಸಂಘಟನೆಯ ಜೀವಾಳವಾಗಿದೆ. ಇದರಿಂದಾಗಿ ಈ ಜನ ಪರಂಪರಾಗತವಾದ ಈ ದೇಶದ ವೈಚಾರಿಕತೆಯನ್ನೂ ಮತ್ತು ಬದುಕನ್ನು ನಿಯಂತ್ರಿಸುತ್ತಿದ್ದ ವೇದ-ಶಾಸ್ತ್ರ-ಪುರಾಣ- ಆಗಮಪರಂಪರೆಗಳನ್ನು ನಿರಾಕರಿಸುವುದನ್ನೂ ಮೊದಲ ಹೆಜ್ಜೆಯನ್ನಾಗಿ ಕೈಕೊಂಡರು. ಯಾಕೆಂದರೆ ವೇದ-ಶಾಸ್ತ್ರ-ಪುರಾಣ-ಆಗಮಗಳೇ, ಸಾಮಾಜಿಕ ತರ-ತಮಗಳನ್ನು ಸುಭದ್ರವಾಗಿ ಉಳಿಸುವ, ಚಾತುರ್ವಣ್ಯವನ್ನು ಪ್ರತಿಪಾದಿಸುವ, ಪ್ರಬಲ ಮಾಧ್ಯಮಗಳೆಂಬುದನ್ನು ಅವರು ಅನುಭವದಿಂದ ಕಂಡುಕೊಂಡವರಾಗಿದ್ದರು. ಹಾಗೆಯೇ ರಾಮಾಯಣ-ಮಹಾಭಾರತಗಳನ್ನು ಓದಿಕೊಳ್ಳುವುದೇ ವಿದ್ಯೆ ಎಂದು ಪರಿಗಣಿತವಾದ ಸಂದರ್ಭದಲ್ಲಿ  ಮನುಷ್ಯನಾದವನು ಅವುಗಳನ್ನು ಓದಿಕೊಳ್ಳದೆಯೆ ವಿಚಾರವಂತನಾಗಿ ಬದುಕಲು ಸಾಧ್ಯ ಎಂಬ ನಿಲುವನ್ನೂ ಪ್ರತಿಪಾದಿಸಿದರು. ಹೀಗೆ ಈ ದೇಶದ ಮಹತ್ ಪರಂಪರೆ ಎಂದು ಯಾವುದನ್ನು ಕರೆಯುತ್ತಾರೋ, ಆ ವೇದಶಾಸ್ತ್ರ-ಪುರಾಣಾಗಮ- ಮಹಾಕಾವ್ಯ ಪರಂಪರೆಯನ್ನೇ ವಚನಕಾರರು ನಿರಾಕರಿಸುವುದರ ಮೂಲಕ ವೈದಿಕ ಸಂಪ್ರದಾಯದ ಬಗ್ಗೆ ತಮ್ಮ ಪ್ರತಿಭಟನೆಯನ್ನು, ದಾಖಲು ಮಾಡುತ್ತಾರೆ. ಮತ್ತು ಪ್ರಸ್ತುತ ಪ್ರತಿಭಟನೆ ವಚನ ಸಾಹಿತ್ಯದ ಒಂದು ಮುಖ್ಯ ಧೋರಣೆ ಮಾತ್ರವಲ್ಲ, ಮುಂದಿನ ವೀರಶೈವ ಸಾಹಿತ್ಯದ ಪ್ರಧಾನ ಲಕ್ಷಣವೂ ಆಗಿದೆ. ಈ ಕಾರಣದಿಂದ ವೀರಶೈವ ಕವಿಗಳು ಯಾರೂ ರಾಮಾಯಣ ಮಹಾಭಾರತಾದಿಗಳಿಂದ ಯಾವ ‘ವಸ್ತು’ವನ್ನೂ ತೆಗೆದುಕೊಳ್ಳದೆ, ಶಿವನನ್ನೂ ಶಿವಭಕ್ತರನ್ನೂ ತಮ್ಮ ಕಾವ್ಯದ ‘ವಸ್ತು’ಗಳನ್ನಾಗಿ ಮಾಡಿಕೊಂಡರು ಮತ್ತು ಶಿವಭಕ್ತರನ್ನು ಕುರಿತ ನಿರ್ವಹಣೆಯಲ್ಲಿ ಪ್ರಾಚೀನರಾದ ಅರವತ್ತು ಮೂವರು ಪುರಾತನರೂ ಹಾಗೆಯೇ ಬಸವಾದಿ ಶಿವಶರಣರೂ ಕನ್ನಡ ಕಾವ್ಯದ ನಾಯಕರಾಗುತ್ತ, ಐತಿಹಾಸಿಕ ಪೌರಾಣಿಕ ವೀರರ ಬದಲು, ಈ ನೆಲದ ಸಾಮಾನ್ಯ ಜನರು, ಅಸಾಮಾನ್ಯವಾಗಿ ಬದುಕಿದ ಕತೆಯನ್ನು ಕಟ್ಟಿಕೊಡುವ ಪರಂಪರೆಯೊಂದು ಪ್ರಾರಂಭವಾಯಿತು.

ವಚನ ಚಳುವಳಿಯ ಮುಖ್ಯವಾದ ಧಾರ್ಮಿಕ ನಿಲುವೆಂದರೆ ಅದು ವಾಸ್ತವ ಜೀವನವನ್ನು ಒಪ್ಪಿಕೊಂಡ ಒಂದು ಕ್ರಮ. ಆಧ್ಯಾತ್ಮ ಎನ್ನುವುದು ಸಂಸಾರಕ್ಕೆ ವಿರೋಧವಾದುದಲ್ಲ; ಸನ್ಯಾಸವೆಂದರೆ ಈ ವಾಸ್ತವ ಬದುಕಿನಿಂದ ದೂರ ಸರಿದು ಕಾಡು-ಮೇಡುಗಳಿಗೆ ಹೋಗುವ ವಿಧಾನವಲ್ಲ; ಹೆಣ್ಣು ಎಂಬುದು ತಪೋವಿಘ್ನಕಾರಿಯಾದ ಮಾಯೆ ಅಲ್ಲ; ಈ ಜಗತ್ತು ಮಿಥ್ಯೆ ಅಲ್ಲ; ಅದೂ ಸತ್ಯ. ಈ ಚಿಂತನೆಗಳು ವೈದಿಕ-ಬೌದ್ಧ-ಜೈನ ತತ್ವಗಳ ನಿಲುವಿಗೆ ತೋರಿದ ಪ್ರತಿಕ್ರಿಯೆಗಳಾಗಿವೆ. ಹಾಗೆಯೇ ಜೀವನ ಪ್ರೀತಿಯನ್ನೂ, ಆದರ್ಶವನ್ನೂ ಒಟ್ಟಿಗೆ ನೋಡುವ ದೃಷ್ಟಿಕೋನದ ಪರಿಣಾಮಗಳಾಗಿವೆ. ಸಂಸಾರವನ್ನೂ ಶಿವಯೋಗವನ್ನೂ ಹೊಂದಾಣಿಕೆಗೊಳಿಸುವ ಈ ನಿಲುವು  ಹೆಣ್ಣಿಗೆ ಆಧ್ಯಾತ್ಮಿಕ ಸಮಾನತೆಯನ್ನೂ ವೈಚಾರಿಕ ಸ್ವಾತಂತ್ರ್ಯವನ್ನೂ ತಂದುಕೊಡುವುದರ ಮೂಲಕ ವಚನ ಚಳುವಳಿಯಲ್ಲಿ ಅವರೂ ಸಕ್ರಿಯವಾಗಿ ಪಾಲುಗೊಳ್ಳುವ ಅವಕಾಶ ಲಭಿಸಿದಂತಾಯಿತು. ಸುಮಾರು ಮೂವತ್ತಕ್ಕೂ ಮೀರಿದ ವಚನಕಾರ್ತಿಯರು ಈ ಸಂದರ್ಭದಲ್ಲಿ ಕಾಣಿಸಿಕೊಂಡಿರುವರಲ್ಲದೆ, ಅಕ್ಕಮಹಾದೇವಿ ಕನ್ನಡದ ಮೊದಲ ಹಾಗೂ ಮೊದಲ ದರ್ಜೆಯ ಕವಯಿತ್ರಿಯಾಗಿದ್ದಾಳೆ ಎನ್ನುವುದು ಈ ಚಳುವಳಿಯ ಮಹತ್ವಕ್ಕೆ ಸಾಕ್ಷಿಯಾಗಿದೆ. ಈಗ ಪ್ರಸ್ತಾಪಿಸಿದ ಕೆಲವು ಸಂಗತಿಗಳು ವೀರಶೈವ ಕವಿಗಳ ಕಾವ್ಯನಿರ್ವಹಣೆಯಲ್ಲಿ ತಕ್ಕ ವಸ್ತು ಪ್ರತಿರೂಪಗಳ ಮೂಲಕ ಅಭಿವ್ಯಕ್ತಗೊಂಡಿವೆ. ಇದನ್ನು ಇನ್ನೂ ಸ್ಪಷ್ಟಪಡಿಸುವುದಾದರೆ, ಹರಿಹರನ ರಗಳೆಗಳ ಕಥಾನಾಯಕರೆಲ್ಲ ಬಹುತೇಕ ಸಂಸಾರಿಗಳೇ. ಅವರೆಲ್ಲ ಸಂಸಾರದಲ್ಲಿದ್ದುಕೊಂಡೇ ಶಿವಯೋಗವನ್ನು ಸಾಧಿಸಿದವರು ಮತ್ತು ಅವರು ಯಾರೂ ಪರದ ಹೆಸರಿನಲ್ಲಿ ಇಹವನ್ನು ಕೀಳಾಗಿ ಕಂಡವರಲ್ಲ. ಹಾಗೆಯೇ ಅಕ್ಕಮಹಾದೇವಿ, ಸೋಮನಾಥ ಚರಿತೆಯ ಪದ್ಮಾವತಿ,  ಹರಿಶ್ಚಂದ್ರಕಾವ್ಯದ ಚಂದ್ರಮತಿ, ಗಿರಿಜಾಕಲ್ಯಾಣದ ಗಿರಿಜೆ – ಇವರೆಲ್ಲರೂ ಆತ್ಮಪ್ರತ್ಯಯವುಳ್ಳ ಹಾಗೂ ಸ್ವತಂತ್ರ ವ್ಯಕ್ತಿತ್ವವುಳ್ಳ ಹೆಣ್ಣಿನ ಪ್ರತೀಕಗಳಾಗಿದ್ದಾರೆ.

ವರ್ಣ – ವರ್ಗಗಳ ತಾರತಮ್ಯವನ್ನು ಬಲವಾಗಿ ವಿರೋಧಿಸಿ, ಶಿವಭಕ್ತಿಯ ನೆಲೆಯಲ್ಲಿ ಎಲ್ಲರೂ ಸಮಾನರು – ಎಂಬ ನಿಲುವನ್ನು ಪ್ರತಿಪಾದಿಸಿದ್ದು ವಚನ ಚಳುವಳಿಯ ಬಹುಮುಖ್ಯವಾದ ಸಂಗತಿಯಾಗಿದೆ. ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರೆಲ್ಲರನೂ ಒಂದೇ ಎಂಬೆ’ ಎನ್ನುವುದೇ ಇಲ್ಲಿನ ಧೋರಣೆ. ಶಿವಭಕ್ತನಾಗಿರುವುದು ಎಲ್ಲದಕ್ಕಿಂತ ಮಹತ್ವದ್ದು, ಅದೇ ಸಮಾನತೆಯ ಸೂತ್ರ. ಹೀಗೆ ಶಿವಭಕ್ತನಾಗಿ, ಶರಣಧರ್ಮವನ್ನು ಒಪ್ಪಿಕೊಳ್ಳುವ ಮೊದಲು ಅವನು ಇದ್ದ ಸಾಮಾಜಿಕ ನೆಲೆ ಯಾವುದು, ಅವನು ನಿರ್ವಹಿಸುತ್ತಿದ್ದ ವೃತ್ತಿ ಯಾವುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳಬಾರದು. ಅವನವನು ಕೈಕೊಂಡ ವೃತ್ತಿಗಳನ್ನು, ಆತ ಈ ಧರ್ಮಕ್ಕೆ ಸೇರಿದ ಕಾರಣದಿಂದ, ಆತ ಅವುಗಳನ್ನು ವರ್ಜಿಸಬೇಕೆಂದೇನೂ ಇಲ್ಲ; ಯಾಕೆಂದರೆ ಆ ವೃತ್ತಿಗಳು ಸಮಾಜದ ಸಂಪತ್ತಿಗೆ ಅಗತ್ಯವಾದ ದುಡಿಮೆಗಳು, ಮತ್ತು ಈ ವೃತ್ತಿಗಳು, ಶರಣಧರ್ಮದ ಶಿವಾರ್ಪಿತ ಮನೋಭಾವದ ದುಡಿಮೆಗಳಾದ ಕಾರಣ ಅವುಗಳು ‘ಕಾಯಕ’ಗಳೆಂದು ನಿರ್ದೇಶಿತವಾಗಿ, ಸಮಾಜದ ಪ್ರತಿಯೊಬ್ಬನೂ ಕಾಯಕ ಮಾಡುತ್ತಲೇ ಬದುಕುವುದು ಅಗತ್ಯ ಎಂಬ ನಿಯಮವನ್ನು ಒಂದು ತತ್ವವೆಂದು ಅಂಗೀಕರಿಸಲಾಯಿತು. ಹಾಗೆಯೆ ಸಮಾಜದಲ್ಲಿ ಅವನವನ ಸ್ಥಾನಮಾನಗಳು ಅವನು ಕೈಕೊಂಡ ಕಾಯಕದ ಮೂಲಮಾನ -ದಿಂದ ನಿಷ್ಕರ್ಷೆಗೊಳ್ಳತಕ್ಕವಲ್ಲ; ಅದರ ಬದಲು ಅವನು ಶಿವಭಕ್ತನಾಗಿರುವಿಕೆಯ ಮೂಲಮಾನದಿಂದ ಸಮಾನತೆಯ ನೆಲೆಯಲ್ಲಿ ಸ್ವೀಕೃತವಾಗಬೇಕು – ಎಂಬ zsiರ್ಮಿಕ ಸಮಾಜವಾದವೊಂದು ಪ್ರತಿಪಾದಿತವಾಗಿದೆ. ಈ ನಿಲುವುಗಳು ಮುಖ್ಯವಾಗಿ ರಾಘವಾಂಕನ ಸಿದ್ಧರಾಮಚಾರಿತ್ರ, ಹರಿಹರನ ‘ಮಾದರ ಚನ್ನಯ್ಯನ ರಗಳೆ’, ‘ಬೇಡರ ಕಣ್ಣಪ್ಪನ ರಗಳೆ’, ‘ಸಾಮವೇದಿಗಳ ರಗಳೆ’ ಇತ್ಯಾದಿಗಳಲ್ಲಿ ಬಹು ಸೊಗಸಾಗಿ ವ್ಯಾಖ್ಯಾನಿತವಾಗಿದೆ.

ಭಕ್ತಿಪಂಥದ ಬಹುಮುಖ್ಯವಾದ ಲಕ್ಷಣಗಳೆಂದರೆ ಲೌಕಿಕ ಅಧೀನತೆಗಳನ್ನು ನಿರಾಕರಿಸುವುದು, ಮತ್ತು ಸಾಮಾಜಿಕವಾಗಿ ಸಮಾನತೆಯನ್ನು ಎತ್ತಿಹಿಡಿಯುವುದು. ಯಾವಾಗ ಒಬ್ಬ ವ್ಯಕ್ತಿ ಧರ್ಮಶ್ರದ್ಧೆಯ ನಿಲುವಿನಲ್ಲಿ ತನ್ನ ವ್ಯಕ್ತಿತ್ವವನ್ನು ತನ್ನ  ಇಷ್ಟದೈವಕ್ಕೆ ಅರ್ಪಿಸಿಕೊಳ್ಳುತ್ತಾನೆಯೋ ಆಗ, ಅತನಲ್ಲಿ ಹುಟ್ಟಿಕೊಳ್ಳುವ ಆತ್ಮಪ್ರತ್ಯಯ ಹಾಗೂ ಧೈರ್ಯ ವಿಶೇಷವಾದ  ರೀತಿಯದು. ವಚನಕಾರರ ಕಾಲದ ನಿಲುವಿನಲ್ಲಿ ಈ   ಬಗೆಯ ಧೈರ್ಯ ಸಾಮಾನ್ಯ ಜನರಲ್ಲಿ  ಗಟ್ಟಿಕೊಂಡದ್ದು ಬಸವಣ್ಣನವರ ಭಕ್ತಿಪಂಥದ ಪರಿಣಾಮವಾಗಿದೆ. ಮೂಲಭೂತವಾಗಿ ಇದು ಪ್ರಭುತ್ವ ವಿರೋಧಿ ಅಥವಾ ರಾಜವಿರೋಧಿಯಾದ ನಿಲುವೊಂದನ್ನು ಎತ್ತಿ ಹಿಡಿಯುತ್ತದೆ. ಬಸವಣ್ಣನವರಿಗೆ ಪೂರ್ವದಲ್ಲಿಯೇ ಕೊಂಡಗುಳಿಕೇಶಿರಾಜನ ನಡವಳಿಕೆಯಲ್ಲಿ ಈ ನಿಲುವು ಪ್ರಕಟವಾಗಿದ್ದರೂ, ಬಸವಣ್ಣನವರ ಕಾಲದಲ್ಲಿ ಈ ಮನೋಧರ್ಮ ಒಂದು ಸಾರ್ವತ್ರಿಕ ಸ್ವರೂಪವನ್ನು ಪಡೆದಂತೆ ತೋರುತ್ತದೆ. ಸ್ವತಃ ಬಸವಣ್ಣನವರೇ ಚಕ್ರವರ್ತಿ ಬಿಜ್ಜಳನ ಕೈಕೆಳಗೆ ಕೆಲಸ ಮಾಡುವ ಅನಿವಾರ್ಯತೆಗೆ ಒಳಗಾದರೂ, ಭಕ್ತರಾಗಿ ಅವರು ಗಳಿಸಿಕೊಂಡ ಅವರ ಸ್ವತಂತ್ರ  ವ್ಯಕ್ತಿತ್ವ ಮಾನಸಿಕವಾಗಿ ಈ ರಾಜಸತ್ತೆಯನ್ನು ಪ್ರಬಲವಾಗಿ ವಿರೋಧಿಸಿದರೂ, ತಾವು ಕೈಕೊಂಡ ಸೇವಾವೃತ್ತಿ, ತಮ್ಮ ಸ್ವಂತಕ್ಕಲ್ಲ, ಸರ್ವಜನ ಹಿತಕ್ಕಾಗಿ ಎಂಬ ನೆಲೆಯಲ್ಲಿ ಅವರು ಸಮಾಧಾನ ಪಟ್ಟುಕೊಂಡ ಹಾಗೆ ಕಾಣುತ್ತದೆ. ಆದರೂ ಬಸವಣ್ಣನವರಲ್ಲಿ ಐಶ್ವರ್ಯದ ಬಗ್ಗೆ, ಅಧಿಕಾರದ ಬಗ್ಗೆ ಹಾಗೂ ಸಂಪತ್ತಿನ ಬಗ್ಗೆ ಹೇವರಿಕೆಯ ಭಾವನೆಗಳಿರುವಂತೆಯೇ, ರಾಜಸತ್ತೆಗೆ ತಮ್ಮ ಅಧೀನತೆಯನ್ನು ನಿರಾಕರಿಸುವ ಧ್ವನಿಗಳೂ ಅವರ ಭಕ್ತ ಸ್ಥಲದ ನೆಲೆಯಲ್ಲಿ ಸಾಕಷ್ಟು ಸಶಕ್ತವಾಗಿಯೇ ಅಭಿವ್ಯಕ್ತಿಯನ್ನು ಪಡೆದುಕೊಂಡಿವೆ. ಸಾಹಿತ್ಯಕ ನೆಲೆಯಿಂದ ನೋಡುವುದಾದರೆ, ‘ತಾಳಮಾನ ಸರಿಸವನರಿಯೆ, ಓಜೆ ಬಜಾವಣೆ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲ ಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂಬ ಅವರ ಘೋಷಣೆ, ಬರವಣಿಗೆಯ ಸಿದ್ಧ ಸಂಪ್ರದಾಯಗಳ ಬಗೆಗೆ ಹೇಗೋ ಹಾಗೆಯೇ ಆ ಬರವಣಿಗೆಗಳು ಅದುವರೆಗೆ  ಆಶ್ರಯಪಡೆದುಕೊಂಡ ವ್ಯವಸ್ಥೆಗಳ ಬಗೆಗೂ ತೋರಿದ ಪ್ರತಿಕ್ರಿಯೆಯಾಗಿದೆ. ಪರಂಪರಾಗತವಾದ ಕಾವ್ಯವಸ್ತುವಿನೊಂದಿಗೆ ತಮ್ಮ ಅಭಿವ್ಯಕ್ತಿಯನ್ನೂ, ರಾಜಮಹಾರಾಜರ ಹಾಗೂ ರಾಜಾಸ್ಥಾನಗಳ ಪಂಡಿತ ವರ್ಗದ ಅಭಿರುಚಿಗೆ ತಮ್ಮನ್ನೂ ಒಪ್ಪಿಸಿಕೊಂಡ ಕವಿಗಳನ್ನು ಕುರಿತ ಟೀಕೆಯಾಗಿಯೂ ಈ ಘೋಷಣೆ ಮೌಲಿಕವಾಗಿದೆ. ಹಾಗೆಯೇ ಕೂಡಲಸಂಗಮನಿಗಾಗಿ ‘ಆನು ಒಲಿದಂತೆ ಹಾಡುವೆ’ ಎಂಬುದು ವಚನ ಚಳುವಳಿಯ ಬಹುಮುಖ್ಯವಾದ ಸಾಹಿತ್ಯಕ ನಿಲುವಾಗಿದೆ. ಮನುಜರ ಮೇಲೆ ಸಾವವರ ಮೇಲೆ ಕನಿಷ್ಠರ ಮೇಲೆ, ಅವರನ್ನು ಇಂದ್ರ ಚಂದ್ರ ದೇವೇಂದ್ರನೆಂದು ಹೊಗಳುತ್ತ ನಾನು ಕವಿತೆ  ಬರೆಯಲಾರೆ ಎಂಬ ಹರಿಹರನ ಘೋಷಣೆಯಲ್ಲಿ ‘ಕಾವ್ಯಮಂ ಕೇಳ್ದು ಜನ ಬದುಕಬೇಕೆಂದು ಪೇಳ್ದೆನ್ ಅನಪೇಕ್ಷೆಯಿಂದೆ’ ಎಂದು ತನ್ನ ಕೃತಿಯ ಉದ್ದೇಶವನ್ನು ಹೇಳಿಕೊಂಡ ರಾಘವಾಂಕನ ಮಾತಿನಲ್ಲಿ, ಈ ವಚನ ಚಳುವಳಿಯ ಜನಪರ ಧೋರಣೆಗಳು ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಂಡಿವೆ.

ವಚನ ಚಳುವಳಿ, ಒಂದು ಜನಪರ ಆಂದೋಲನವಾದದ್ದು, ಅದು ಜನಭಾಷೆ -ಯಾದ ಕನ್ನಡವನ್ನು ತನ್ನ ವಿಚಾರದ ಮಾಧ್ಯಮವನ್ನಾಗಿ ರೂಢಿಸಿಕೊಂಡದ್ದರಿಂದ. ಹಿಂದೆಯೆ ಪ್ರಸ್ತಾಪಿಸಿದ ಹಾಗೆ ವಚನಕಾರರು ವೈದಿಕ  ಸಂಪ್ರದಾಯವನ್ನು ನಿರಾಕರಿಸಿದಂತೆಯೆ ಆ ಸಂಪ್ರದಾಯದ ಭಾಷೆಯಾದ ಸಂಸ್ಕೃತವನ್ನೂ ನಿರಾಕರಿಸಿ ತಮ್ಮ ಅಂತರಂಗ ಅನುಭವಗಳಿಗೆ ಕನ್ನಡವನ್ನು ತಕ್ಕ ಮಾಧ್ಯಮವನ್ನಾಗಿ ದುಡಿಸಿಕೊಂಡರು. ಅದುವರೆಗೂ ಭಾರತದಲ್ಲಿ ಬುದ್ಧಿಯ ಭಾಷೆಯಾಗಿ ಸಂಸ್ಕೃತವು ಏನೇನನ್ನು ಸಾಧಿಸಿತೋ, ಅದನ್ನು ಕನ್ನಡವೂ ಸಾಧಿಸಲು ಸಾಧ್ಯ ಎಂಬುದನ್ನು ಪ್ರಾಯೋಗಿಕವಾಗಿ ಈ ಚಳುವಳಿ ಮಾಡಿ ತೋರಿಸಿತು. ಕನ್ನಡವು ಗಹನವಾದ ಗೂಢವಾದ ಆಧ್ಯಾತ್ಮಿಕ ಅನುಭವಗಳನ್ನು ಅಭಿವ್ಯಕ್ತಪಡಿಸಲು ಸಮರ್ಥವಾದ ಭಾಷೆ ಎಂಬುದನ್ನು ಈ ಸಂದರ್ಭವು ಸಾಬೀತು ಪಡಿಸಿತು. ಈ ಚಳುವಳಿಯ ಮುಂದಾಳುಗಳಾದ ಬಸವ, ಚನ್ನಬಸವ, ಅಲ್ಲಮ ಮತ್ತು ಇನ್ನೂ ಕೆಲವರು, ವೇದಶಾಸ್ತ್ರ ಆಗಮಗಳನ್ನು ಬಲ್ಲ ವಿದ್ವಾಂಸರಾಗಿದ್ದರೂ, ಅವರು ಉದ್ದೇಶಪೂರ್ವಕವಾಗಿ ಈ ಸಂಪ್ರದಾಯದ ಭಾಷೆಯನ್ನು ನಿರಾಕರಿಸಿ ಕನ್ನಡವನ್ನು, ಈ ಸಂದರ್ಭದ ಸಂವಾದ ಭಾಷೆಯನ್ನಾಗಿ ರೂಢಿಸುವುದರ ಮೂಲಕ ಬಹುಸಂಖ್ಯಾತ ಜನ ಸಮುದಾಯವನ್ನು ಈ ಚಳುವಳಿಯೊಳಕ್ಕೆ  ಸಂಗಡಿಸಿಕೊಂಡರು. ಈ ಕಾರಣದಿಂದಲೇ ಅನಕ್ಷರಸ್ಥ ಬಹುಜನ ಸಮುದಾಯವೊಂದು ಸಕ್ರಿಯವಾಗಿ ಈ ಚಳುವಳಿಯ ಸಂದರ್ಭದಲ್ಲಿ ಧೈರ್ಯದಿಂದ ಮಾತನಾಡಲು ಸಾಧ್ಯವಾಯಿತು ಮತ್ತು ಈ ವಚನ ಚಳುವಳಿಯ ಸಂದರ್ಭದಲ್ಲಿ ಕನ್ನಡ ಭಾಷೆ ತನ್ನೆಲ್ಲ ದೇಶೀಯ ಸತ್ವದಿಂದ ಅನನ್ಯವಾದ ರೀತಿಯಲ್ಲಿ ಸೃಜನಾತ್ಮಕವಾಗಿ ಬಳಕೆಯಾಯಿತು. ಭರತಖಂಡದ ಇತಿಹಾಸದಲ್ಲಿ ಜನಭಾಷೆಯಾದ ‘ಪಾಳಿ’ಯನ್ನು ಮೊಟ್ಟಮೊದಲಿಗೆ ಭಗವಾನ್ ಬುದ್ಧನು ತನ್ನ ಧರ್ಮದ ಭಾಷೆಯನ್ನಾಗಿ ಬಳಸಿದ ನಂತರ, ಅದೇ ರೀತಿಯಲ್ಲಿ  ದೇಶಭಾಷೆಯಾದ ‘ಕನ್ನಡ’ ಧರ್ಮದ ಭಾಷೆಯಾಗಿ ಬಳಕೆಯಾದದ್ದು ಬಸವಣ್ಣನವರ ಮುಂದಾಳುತನದಲ್ಲಿ ನಡೆದ ವಚನ ಚಳುವಳಿಯ ಕಾಲದಲ್ಲಿಯೇ.

ಯಾವುದೇ ಎದ್ದು ಕಾಣುವ ಘೋಷಣೆಯಿಲ್ಲದೆ ಸಂಸ್ಕೃತವನ್ನು ನಿರಾಕರಿಸಿ, ಅಚ್ಚಗನ್ನಡದಲ್ಲಿ ತನ್ನ ಅಭಿವ್ಯಕ್ತಿಯನ್ನು ರೂಪಿಸಿಕೊಂಡ ವಚನ ಎಂಬ ಈ ಪ್ರಕಾರವು, ಪದ್ಯಗಂಧಿಯಾದ ಬಿಡಿ ಬಿಡಿ ಘಟಕಗಳ ಮೂಲಮಾನದಲ್ಲಿ ಕಾಣಿಸುವ ಒಂದು ವ್ಯಕ್ತಿ ವಿಶಿಷ್ಟ ಅಭಿವ್ಯಕ್ತಿಯಾಗಿದೆ. ತನಗಿಂತ ಹಿಂದಿನ ಯಾವ ಸಾಹಿತ್ಯ ರೂಪವನ್ನೂ ಹೋಲದ, ಮತ್ತು ಮುಂದಿನ ರಗಳೆ-ಷಟ್ಪದಿ-ಸಾಂಗತ್ಯಾದಿ ರೂಪಗಳಿಂದ ಭಿನ್ನವಾದ ‘ವಚನ’ ಪ್ರಕಾರವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ದ್ವೀಪಸಂಭವದಂತೆ ಕಾಣುತ್ತದೆ. ಪ್ರತಿಯೊಬ್ಬ ವಚನಕಾರನ ಅಂತರಂಗದ ಅನುಭವಗಳನ್ನು, ಸುತ್ತಣ ಸಾಮಾಜಿಕ ಬದುಕಿಗೆ ಅವನು ತೋರಿದ ಪ್ರತಿಕ್ರಿಯೆಗಳನ್ನು ಬದುಕಿನ ಪರವಾದ ನಿಲುವುಗಳನ್ನು, ಅವನವನ ವ್ಯಕ್ತಿ ವಿಶಿಷ್ಟತೆಯನ್ನು ಸ್ಪಷ್ಟಪಡಿಸುವ ‘ಅಂಕಿತ’ಗಳ ಸಹಿತ – ಹಿಡಿದು ಮೂಡಿಸುವ ‘ವಚನ’ಗಳೆಂಬ ಅಭಿವ್ಯಕ್ತಿ ಪ್ರಕಾರವು, ಕಾವ್ಯದ ಭಾಷೆಗೆ ಇರುವ ಎಲ್ಲ ಲಕ್ಷಣಗಳನ್ನೂ ಪಡೆದುಕೊಂಡು ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯಾಗಿದೆ. ಕಾವ್ಯದ ರಮ್ಯತೆ, ಶಾಸ್ತ್ರದ ವೈಚಾರಿಕತೆ, ಆನುಭಾವಿಕ ಒಳನೋಟಗಳು – ಇತ್ಯಾದಿಗಳಿಂದ ಕೂಡಿದ ಈ ವಚನವಾಙ್ಮಯವು, ಮುಂದಿನ ವೀರಶೈವ ಕವಿಗಳ ಮೇಲೆ ಮಾತ್ರವಲ್ಲ, ಅನ್ಯಧರ್ಮದ ಕವಿಗಳ ಮೇಲೆಯೂ ಗಾಢವಾದ ಪ್ರಭಾವವನ್ನು ಬೀರಿರುವುದಷ್ಟೇ ಅಲ್ಲ, ಭಕ್ತಿಯ ಚಳುವಳಿಯ ಮುಂದಿನ ಹಂತವಾದ ಹರಿದಾಸ ಚಳುವಳಿಯ ಮೇಲೆಯೂ ತಕ್ಕಷ್ಟು ಪ್ರಭಾವವನ್ನು ಬೀರಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಕನ್ನಡ ಸಾಹಿತ್ಯ ಪರಂಪರೆಯ ಹಿಂದೆ ಬಹುಮುಖ್ಯವಾದ ಪ್ರೇರಣೆಗಳಾಗಿ ಕೆಲಸಮಾಡಿರುವ ಧರ್ಮಗಳೆಂದರೆ, ಜೈನಧರ್ಮ, ವೀರಶೈವ ಧರ್ಮ ಮತ್ತು ವೈಷ್ಣವ ಧರ್ಮಗಳು. ಇವುಗಳಲ್ಲಿ ಮೊದಲ ಎರಡು, ಇಡೀ ವೈದಿಕ ಧಾರ್ಮಿಕ ನಿಲುವುಗಳಿಗೆ ಪ್ರತಿಭಟನೆಯನ್ನು ದಾಖಲು ಮಾಡಿದ ಕಾರಣದಿಂದ, ಈ ಧರ್ಮದ ಪ್ರೇರಣೆಯಿಂದ ರೂಪುಗೊಂಡ ಸಾಹಿತ್ಯವೂ, ಮೂಲಭೂತವಾಗಿ ವೈದಿಕ ಪರಂಪರೆಯನ್ನು ನಿರಾಕರಿಸುತ್ತ, ಸಂಸ್ಕೃತ ಸಾಹಿತ್ಯ ಪರಂಪರೆಯಿಂದ ಭಿನ್ನವಾದ ಕಾವ್ಯಮಾರ್ಗಗಳನ್ನು ಕನ್ನಡದಲ್ಲಿ ರೂಢಿಸಿದವು. ಇನ್ನು ಮೂರನೆಯದಾದ ವೈಷ್ಣವ ಧರ್ಮದ ವಿಚಾರಕ್ಕೆ ಬಂದರೆ, ಕನ್ನಡದಲ್ಲಿ ಈ ವೈಷ್ಣವ ಧರ್ಮವು, ಎರಡು ಬೇರೆ ಬೇರೆಯ ಕವಲುಗಳಲ್ಲಿ ಕಾಣಿಸಿಕೊಂಡಿದೆ. ಮೊದಲನೆಯದು, ತಮಿಳುನಾಡಿನಿಂದ ಕನ್ನಡಕ್ಕೆ ಬಂದ ಶ್ರೀವೈಷ್ಣವ ಧರ್ಮ. ಇದರ ಪ್ರವರ್ತಕರು ಶ್ರೀ ರಾಮಾನುಜಾಚಾರ್ಯರು. ಎರಡನೆಯದು, ಭಾಗವತ ಪರಂಪರೆಯಿಂದ ಪ್ರಭಾವಿತವಾದ ಮತ್ತು ಮಧ್ವಾಚಾರ್ಯರ ದ್ವೆ ತಸಿದ್ಧಾಂತದಿಂದ ಹುಟ್ಟಿಕೊಂಡ ವೈಷ್ಣವಧರ್ಮ. ರಾಮಾನುಜರ ಶ್ರೀವೈಷ್ಣವ, ಧೋರಣೆಯಲ್ಲಿ ಮಧ್ವರದಕ್ಕಿಂತ ಉದಾರವಾದುದಾದರೂ, ಅದು ಕನ್ನಡನಾಡಿಗೆ ಹನ್ನೊಂದನೆಯ ಶತಮಾನದಷ್ಟು ಮೊದಲಿಗೆ ಬಂದರೂ, ಅದು ಕನ್ನಡ ಭಾಷೆಯನ್ನು ಬಳಸುವ ಬಗ್ಗೆ ಅಂತಹ ಆಸಕ್ತಿಯನ್ನು ತೋರಿಸದ ಕಾರಣದಿಂದ, ಅದು ಸಾಹಿತ್ಯಕವಾದ ಒಂದು ಪ್ರಭಾವ -ವಾಗದೆ ಹೋಯಿತು. ಆದರೆ, ಭಾಗವತ ಪಂಥದ ಪ್ರತಿನಿಧಿಯಾದ ಕುಮಾರವ್ಯಾಸ ಭಾರತ ಮತ್ತು ತದನಂತರದ ಸಮೀಪ ಕಾಲದಲ್ಲಿ ಹುಟ್ಟಿಕೊಂಡ ಹರಿದಾಸ ಕೀರ್ತನ ಚಳುವಳಿಗಳು ಮತ್ತೆ ಕನ್ನಡ ಸಾಹಿತ್ಯಕ್ಕೆ ಹೊಸ ತಿರುವನ್ನು ತಂದ ಪ್ರೇರಣೆಗಳಾಗಿವೆ.