ವಚನ ಚಳುವಳಿಯಂತೆಯೇ ಹರಿದಾಸ ಚಳುವಳಿಯೂ ಭಕ್ತಿಪಂಥದ ಒಂದು ಆವಿಷ್ಕಾರವಾಗಿದೆ. ಮೊದಲನೆಯದಕ್ಕೆ ಹರಭಕ್ತಿ ಪ್ರೇರಣೆಯಾದರೆ, ಎರಡನೆಯದಕ್ಕೆ ಹರಿಭಕ್ತಿ ಪ್ರೇರಣೆಯಾಗಿದೆ. ವಚನ ಚಳುವಳಿ ಮೂಲಭೂತವಾಗಿ ವೈದಿಕ ಪರಂಪರೆಗೆ ತೋರಿದ ಪ್ರತಿಭಟನೆಯಾದರೆ, ಹರಿದಾಸ ಚಳುವಳಿ,  ವೈದಿಕ ಧರ್ಮತಿರುಳಾದ ವರ್ಣಾಶ್ರಮ ಪದ್ಧತಿಯನ್ನು ಪರಿಶುದ್ಧವಾದ ವಿಷ್ಣುಭಕ್ತಿಯ ತಳಹದಿಯ ಮೇಲೆ ನಿಲ್ಲಿಸಿದ ಮಧ್ವ ಸಿದ್ಧಾಂತದ ಪ್ರತಿಪಾದನೆಯಾಗಿದೆ. ಹೀಗಾಗಿ ಇದು, ವರ್ಣಾಶ್ರಮ ವ್ಯವಸ್ಥೆಯನ್ನು ಒಪ್ಪಿಕೊಂಡ, ಆದರೆ ಭಕ್ತಿಯ ಕಾರಣದಿಂದ ಸ್ವಲ್ಪ ಉದಾರವಾದ ನಿಲುವುಗಳನ್ನು ಎತ್ತಿಹಿಡಿಯುವ ಸ್ವರೂಪದ್ದಾಗಿದೆ. ಈ ಕಾರಣದಿಂದ ಈ ಚಳುವಳಿ ಒಂದರ್ಥದಲ್ಲಿ ವೈದಿಕ ಪರಂಪರೆಯ, ಸ್ವಲ್ಪ ಸುಧಾರಿತವಾದ ಮುಂದುವರಿಕೆ ಎನ್ನಬಹುದು ಮತ್ತು ವಚನ ಚಳುವಳಿಯಂತೆ, ವರ್ಣ ವರ್ಗಗಳ ತರತಮಗಳನ್ನು ಕುರಿತು, ಮೂಲಭೂತವಾದ ಬದಲಾವಣೆಯನ್ನು ತರುವ ನಿಶ್ಚಿತ ವೈಚಾರಿಕತೆಯನ್ನು ಒಳಗೊಂಡದ್ದಾಗಿರಲಿಲ್ಲ. ವಚನಕಾರರು, ವೇದೋಪನಿಷತ್ತು-ಪುರಾಣ ಮಹಾಕಾವ್ಯಗಳನ್ನು, ನಿರಾಕರಿಸಿದರೆ, ಹರಿದಾಸ ಚಳುವಳಿ, ವೇದೋಪನಿಷತ್ತುಗಳ ಸಾರವನ್ನು ಕನ್ನಡದಲ್ಲಿ ಎಲ್ಲರಿಗೂ ತಿಳಿಯುವಂತೆ ಹೇಳುವುದರಲ್ಲಿ ಮತ್ತು ಪುರಾಣ ಪ್ರಸಂಗಗಳನ್ನು ಭಗವಂತನ ಮಹಿಮೆ ಹಾಗೂ ಭಕ್ತವತ್ಸಲತೆಗಳ ಪ್ರತಿಪಾದನೆಯನ್ನು ಕೀರ್ತನೆಗಳಲ್ಲಿ ನಿರೂಪಿಸುವುದರಲ್ಲಿ ಆಸಕ್ತಿಯನ್ನು ಪ್ರಕಟಿಸಿತು. ವಚನಕಾರರಂತೆ, ಸಮಾಜ ವಿಮರ್ಶೆಯನ್ನು, ಲೋಕ ವಿಡಂಬನೆಗಳನ್ನು, ಹರಿದಾಸ ಚಳುವಳಿ ಕೈಕೊಂಡರೂ, ಅದು ಕೇವಲ ನೀತಿನಿಷ್ಠ ನಿಲುವಾಗಿದೆಯೇ ಹೊರತು, ಅದಕ್ಕಿಂತ ಹೆಚ್ಚೇನಲ್ಲ. ಆದರೆ ಶ್ರೀಹರಿಭಕ್ತಿಯನ್ನು ಅತ್ಯಂತ ಉತ್ಕಟವಾಗಿ, ಅನುಭವಿಸುತ್ತ ಅದನ್ನು  ಸಕಲ ಜನಹಿತಕ್ಕಾಗಿ ಮನೆಮನೆಯ ಬಾಗಿಲಿಗೆ  ತೆಗೆದುಕೊಂಡು ಹೋಗಬೇಕೆನ್ನುವ ಲೋಕಾನುಂಪೆ ಇಲ್ಲಿ ಅನನ್ಯವಾಗಿದೆ. ಹಾಗೆಯೇ ಕೀರ್ತನೆಗಳೆಂಬ ಹೊಸ ಗೇಯರೂಪದ ಪ್ರವಾಹವೊಂದು ಈ ಚಳುವಳಿಯ ಪರಿಣಾಮವಾಗಿದೆ. ಮೂಲತಃ ಹಾಡುಗಾರಿಕೆಗೆ ಅಳವಡುವ, ಹಾಡಿದಾಗ ಇನ್ನೂ ಹೆಚ್ಚು ಭಾವಪೂರ್ಣತೆಯಿಂದ ಸಂವಹನಗೊಳ್ಳುವ ಈ ಕೀರ್ತನೆಗಳು, ಸಾಹಿತ್ಯಕ್ಕಿಂತ, ಸಂಗೀತಕ್ಕೇ ಮಹತ್ವದ ಕೊಡುಗೆಗಳಾಗಿವೆ. ಅಲ್ಲದೆ ಕೀರ್ತನಕಾರರಲ್ಲಿ ದೊಡ್ಡ ಹೆಸರಾಗಿರುವ ಪುರಂದರದಾಸರು ತೆಲುಗಿನ ಮಹಾ ವಾಗ್ಗೇಯಕಾರರಾದ ತ್ಯಾಗರಾಜರಿಗೆ ಸ್ಫೂರ್ತಿಯೂ ಪ್ರೇರಣೆಯೂ ಆಗಿ, ಕರ್ನಾಟಕ ಸಂಗೀತದ ಪಿತಾಮಹರಾಗಿದ್ದಾರೆ.

ವಚನಕಾರರಿಗೂ, ಕೀರ್ತನಕಾರರಿಗೂ ಸಮಾನವಾದ ಒಂದು ಸಂಗತಿಯೆಂದರೆ, ಕನ್ನಡಪರವಾದ ಒಲವು ಮತ್ತು ಆ ಮೂಲಕ ಪ್ರಕಟವಾಗುವ ಜನಪರ ನಿಲುವುಗಳು. ಕನ್ನಡವನ್ನು ಮೊಟ್ಟ ಮೊದಲಿಗೆ ಅಧ್ಯಾತ್ಮ ಹಾಗೂ ಅನುಭಾವಗಳ ಭಾಷೆಯನ್ನಾಗಿ ವಚನಕಾರರು ಶ್ರೀಮಂತಗೊಳಿಸಿದಂತೆ, ಅದನ್ನು ಭಗವದ್ ಭಕ್ತಿಯ ಹಾಗೂ ತತ್ವಜ್ಞಾನದ ಭಾಷೆಯನ್ನಾಗಿ ರೂಢಿಸಿದವರು ಹರಿದಾಸರು. ಹರಿದಾಸರಿಗೆ ಹಿನ್ನೆಲೆಯಾದ ಮಾಧ್ವಸಿದ್ಧಾಂತವಿರುವುದು ಶುದ್ಧ ಸಂಸ್ಕೃತದಲ್ಲಿ. ಆದರೆ ಈ ಸಿದ್ಧಾಂತದ ಸಾರವನ್ನು ಕನ್ನಡದಲ್ಲಿ ಹಿಡಿದು ಕೊಟ್ಟವರು ಹರಿದಾಸರು. ಮಧ್ವಾಚಾರ್ಯರ  ಸಾಕ್ಷಾತ್ ಶಿಷ್ಯರಾದ ನರಹರಿತೀರ್ಥರು ಕನ್ನಡದಲ್ಲಿ ಮೊಟ್ಟ ಮೊದಲು ದೇವರನಾಮಗಳನ್ನು ಬರೆದರೆಂದು ತಿಳಿದುಬರುತ್ತದೆ. ಮುಂದೆ ಒಂದು ಶತಮಾನಕ್ಕೂ  ಕಡಿಮೆಯ ಕಾಲಮಾನದಲ್ಲಿ ಬಂದ ವ್ಯಾಸತೀರ್ಥರು, ಉದ್ದಾಮ ಪಂಡಿತರಾಗಿದ್ದು, ಉತ್ತರಭಾರತದ ಯಾತ್ರೆಯನ್ನು ಮುಗಿಸಿ ಮುಳಬಾಗಿಲಿನ ಶ್ರೀಪಾದರಾಯರಲ್ಲಿಗೆ ಬಂದಾಗ, ಶ್ರೀಪಾದರಾಯರು ಕನ್ನಡದಲ್ಲಿ ಬರೆದು, ದೇವರಪೂಜೆಯ ವೇಳೆಗೆ ಬಳಸುತ್ತಿದ್ದ ಹರಿಭಕ್ತಿ ಪರವಾದ ಹಾಡುಗಳನ್ನು ಕೇಳಿ, ಅವುಗಳಿಂದ ಬಹುಮಟ್ಟಿಗೆ ಪ್ರಭಾವಿತರಾದರು. ಮುಂದೆ ವ್ಯಾಸರಾಯರು ವಿಜಯನಗರಕ್ಕೆ ಬಂದು ಕೃಷ್ಣದೇವರಾಯನ ಗುರುಗಳಾಗಿದ್ದು, ಬ್ರಹ್ಮಸೂತ್ರಗಳ ಅರ್ಥ ಎಲ್ಲರಿಗೂ ತಿಳಿಯುವಂತೆ ಕನ್ನಡದಲ್ಲಿ ಬರೆಯುವ ಸಾಹಸವನ್ನು ಮಾಡಿದರು. ಹಾಗೂ ಪುರಂದರದಾಸ, ಕನಕದಾಸರಂಥ ಶಿಷ್ಯರಿಗೆ ಅನುಗ್ರಹ ಮಾಡಿ ಕನ್ನಡದ ಕೀರ್ತನ ಪರಂಪರೆಯ, ಉತ್ಕರ್ಷಕ್ಕೆ ಕಾರಣರಾದರು. ಈ ಹಿನ್ನೆಲೆಯಿಂದ ಹೇಳುವುದಾದರೆ ವಚನಗಳಂತೆ, ಕೀರ್ತನೆಗಳೂ, ಕನ್ನಡಭಕ್ತಿ ಸಾಹಿತ್ಯದ ಅತ್ಯಂತ ವಿಶಿಷ್ಟ ರೂಪಗಳು. ಭಕ್ತಿ ಹಾಗೂ ಅನುಭಾವ ಚಳುವಳಿಯ ಪರಿಣಾಮಗಳಾದ ವಚನ ಮತ್ತು ಕೀರ್ತನ ಪ್ರಕಾರಗಳು ಆಧುನಿಕ ಕನ್ನಡ ಸಾಹಿತ್ಯದ ಮೇಲೆಯೂ ತಮ್ಮ ಪ್ರೇರಣೆ-ಪ್ರಭಾವಗಳನ್ನು ಒಡ್ಡಿವೆ ಎಂಬುದು ಗುರುತಿಸಿಕೊಳ್ಳಬೇಕಾದ ಸಂಗತಿಯಾಗಿದೆ.

೨. ಆಧುನಿಕ ಕನ್ನಡ ಸಾಹಿತ್ಯ ಚಳುವಳಿಗಳು

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸಗನ್ನಡ ಅಥವಾ ಆಧುನಿಕ ಕನ್ನಡ ಸಾಹಿತ್ಯದ ಕಳೆದ ಎಂಟು ದಶಕಗಳ ಕಾಲಮಾನವು ಅತ್ಯಂತ ಚಲನಶೀಲವೂ ವೈವಿಧ್ಯಮಯವೂ ಆದ ಒಂದು ಸಾಹಿತ್ಯ ಸಂದರ್ಭವಾಗಿದೆ. ಸುಮಾರು ಒಂದು ಸಾವಿರ ವರ್ಷಗಳಷ್ಟು ಸುದೀರ್ಘವಾದ ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸಾಹಿತ್ಯವು ಪಡೆದುಕೊಂಡ ಕೆಲವೇ ತಿರುವುಗಳಿಗೆ ಹಾಗೂ ಅದರ ಮಂದಗತಿಗೆ ಹೋಲಿಸಿದರೆ, ಆಧುನಿಕ ಕನ್ನಡ ಸಾಹಿತ್ಯದ ವೇಗ ಮತ್ತು ಅದಕ್ಕೆ ಕಾರಣವಾದ ಸಾಹಿತ್ಯ ಚಳುವಳಿಗಳ ಸ್ವರೂಪವು ಬೆರಗು ಹುಟ್ಟಿಸುವಂಥದಾಗಿದೆ. ಈ ಕಾಲಮಾನದಲ್ಲಿ ಅಧ್ಯಯನದ ದೃಷ್ಟಿಯಿಂದ ಗುರುತಿಸಬಹುದಾದ ನಾಲ್ಕು ಚಳುವಳಿಗಳಾದ, ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಚಳುವಳಿಗಳೆಂದು ಇವು ನಿರ್ದೇಶಿತವಾಗಿವೆ. ಈ ನಾಲ್ಕು ಚಳುವಳಿಗಳಲ್ಲಿ ಮೊದಲಿನ ಎರಡು ಭಾರತೀಯ ಸ್ವಾತಂತ್ರ್ಯಪೂರ್ವದವುಗಳಾದರೆ, ಇನ್ನೆರಡು ಸ್ವಾತಂತ್ರೋತ್ತರ ಕಾಲದವುಗಳಾಗಿವೆ. ಈ ನಾಲ್ಕು ಚಳುವಳಿಗಳನ್ನು ಒಟ್ಟಾರೆಯಾಗಿ ಆಧುನಿಕ ಕನ್ನಡ ಸಾಹಿತ್ಯ ಚಳುವಳಿಗಳು ಎಂದು ಕರೆಯುತ್ತೇವೆ.

ಆಧುನಿಕ ಪೂರ್ವ ಸಾಹಿತ್ಯ ಸಂದರ್ಭದ ಚಳುವಳಿಗಳು, ಅಥವಾ ಬದಲಾಗುವ ಪ್ರಕ್ರಿಯೆಗಳು ತಮಗೆ ಹಿನ್ನೆಲೆಯಾದ ಭಾರತೀಯ ಸಾಹಿತ್ಯ ಪರಂಪರೆಗೆ, ಹಾಗೂ ಉದ್ದಕ್ಕೂ ಪ್ರಾದೇಶಿಕ ಸಾಹಿತ್ಯದಲ್ಲಿ ರೂಪುಗೊಳ್ಳುತ್ತ ಬಂದ ಬರವಣಿಗೆಯ ಸಂಪ್ರದಾಯಗಳಿಗೆ, ಅಂದಂದು ಬದಲಾಗುತ್ತಿದ್ದ ಸಾಹಿತ್ಯವು ತೋರಿದ ಪ್ರತಿಕ್ರಿಯೆಗಳ ಪರಿಣಾಮವಾಗಿದೆ. ಆದರೆ ಹೊಸಗನ್ನಡದ ಈ ನಾಲ್ಕು ಚಳುವಳಿಗಳು, ಮುಖ್ಯವಾಗಿ ಪಶ್ಚಿಮದ ಸಾಹಿತ್ಯ ಪ್ರೇರಣೆಗಳಿಗೆ ತಮ್ಮ ಕಾಲಮಾನದ ಸಾಂಸ್ಕೃತಿಕ ಒತ್ತಡಗಳಿಗೆ ಅನುಸಾರವಾಗಿ ಕನ್ನಡದ ಸೃಜನಾತ್ಮಕ  ಪ್ರತಿಭೆಯು ತೋರಿದ ಪ್ರತಿಕ್ರಿಯೆಗಳ ಫಲವಾಗಿವೆ. ನವೋದಯ ಚಳುವಳಿಯ ಹಿಂದೆ ಪಶ್ಚಿಮದ ರೊಮ್ಯಾಂಟಿಕ್ ಕಾವ್ಯ ಸಂಪ್ರದಾಯವೂ, ಪ್ರಗತಿಶೀಲ ಚಳುವಳಿಯ ಹಿಂದೆ ಯೂರೋಪಿನ  ವಾಸ್ತವವಾದೀ ಚಳುವಳಿಗಳೂ, ನವ್ಯದ ಹಿಂದೆ ಪಶ್ಚಿಮದ ಎಲಿಯಟ್, ಅಡೆನ್, ಎಸ್ರಾಪೌಂಡ್ ಇವರ ಕಾವ್ಯದ ಮಾದರಿಗಳೂ, ದಲಿತ-ಬಂಡಾಯದ ಹಿಂದೆ ಎಡಪಂಥೀಯ ಧೋರಣೆಗಳಿಂದ ರೂಪುಗೊಂಡ ಭಾರತೀಯ ಹಾಗೂ ಜಾಗತಿಕ ಪ್ರತಿಭಟನಾ ಸಾಹಿತ್ಯ ಸಂದರ್ಭಗಳೂ, ಪ್ರೇರಣೆಗಳಿಂದ ಕೆಲಸ ಮಾಡಿವೆ. ಆದರೆ ಕನ್ನಡದಲ್ಲಿ ಈ ಚಳುವಳಿಗಳ ಸಂದರ್ಭದಲ್ಲಿ ರೂಪುಗೊಂಡ ಸಾಹಿತ್ಯವು ಹಾಗೆ ತಾನು ಪ್ರೇರಣೆ ಪಡೆದ ಪಶ್ಚಿಮದ ಸಾಹಿತ್ಯಗಳ ಅನುಕರಣೆಯಾಗಲೀ, ಅನುಸರಣವಾಗಲೀ ಆಗಿಲ್ಲ ಎನ್ನುವುದು ತುಂಬ ಮಹತ್ವದ ಸಂಗತಿಯಾಗಿದೆ.

ಆಧುನಿಕ ಕನ್ನಡದ ಸಾಹಿತ್ಯ ಚಳುವಳಿಗಳ ಒಂದು ಮುಖ್ಯ ಲಕ್ಷಣಗಳೆಂದರೆ ಅವೆಲ್ಲವೂ ಮೂಲತಃ ಸಾಂಸ್ಥಿಕ ಧರ್ಮಗಳನ್ನು ನಿರಾಕರಣೆ ಮಾಡುವ ಸ್ವರೂಪದವೂ, ವ್ಯವಸ್ಥೆಯನ್ನು ವಿರೋಧಿಸುವಂತಹವೂ ಆಗಿವೆ ಎನ್ನುವುದು. ಇದರಿಂದಾಗಿ ಇಡೀ ಕನ್ನಡ ಸಾಹಿತ್ಯವನ್ನು ಉದ್ದಕ್ಕೂ ನಿಯಂತ್ರಿಸುತ್ತ ಬಂದ ಮತಧರ್ಮ ಹಾಗೂ ಪ್ರಭುತ್ವಗಳನ್ನು ಮೊಟ್ಟ ಮೊದಲಿಗೆ ತಿರಸ್ಕರಿಸುವ ದಿಟ್ಟತನದ ನಿಲುವೊಂದು ಆಧುನಿಕ ಕನ್ನಡ ಸಾಹಿತ್ಯದಲ್ಲಿ ರೂಪುಗೊಂಡು, ವಾಸ್ತವತೆ, ವೈಚಾರಿಕತೆ, ಪ್ರತಿಭಟನೆ, ಮತ-ಧರ್ಮ ನಿರಪೇಕ್ಷತೆ, ಮಾನವೀಯತೆ ಇತ್ಯಾದಿ ಲಕ್ಷಣಗಳಿಂದ ಆಧುನಿಕ ಸಾಹಿತ್ಯವು ನಿಜವಾದ ಅರ್ಥದಲ್ಲಿ ಜನಪರವಾಯಿತೆಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಆಧುನಿಕ ಕನ್ನಡ ಸಾಹಿತ್ಯ ಚಳುವಳಿಗಳಲ್ಲಿ ಮೊದಲನೆಯದೆಂದು ನಾವು ಗುರುತಿಸುವ ನವೋದಯ ಚಳುವಳಿಯು, ತದನಂತರದ ಇತರ ಮೂರು ಚಳುವಳಿಗಳಂತೆ, ನಿರ್ದಿಷ್ಟ ತತ್ವಪ್ರಣಾಲಿಯನ್ನೊಳಗೊಂಡ, ಒಂದು ಸಮೂಹದ ನಾಯಕತ್ವವನ್ನು ಹೊಂದಿ ರೂಪುಗೊಂಡ, ಚಳುವಳಿಯಲ್ಲ. ಅದು ಮೂಲತಃ ವಸಾಹತುಷಾಹೀ ಸಂದರ್ಭದಲ್ಲಿ, ಬ್ರಿಟಿಷರ ಪ್ರಭುತ್ವಕ್ಕೆ ಒಳಗಾದ ಭಾರತದ ಪರಿಸರದಲ್ಲಿ ಇಂಗ್ಲಿಷ್  ಶಿಕ್ಷಣದ ಮೂಲಕ ನುಗ್ಗಿಬಂದ ಪಾಶ್ಚಿಮಾತ್ಯ ಪ್ರಭಾವಗಳ ಕಾರಣದಿಂದ ಉಂಟಾದ ಭಾರತೀಯ ಪುನರುಜ್ಜೀವನದ ಒಂದು ಭಾಗವಾಗಿದೆ. ಈ ಭಾರತೀಯ ಪುನರುಜ್ಜೀವನ ಎನ್ನುವುದು ಪಶ್ಚಿಮದ ಬಹುಮುಖಿಯಾದ ಪ್ರಭಾವ ಪ್ರೇರಣೆಗಳಿಗೂ, ಭಾರತೀಯ ಪರಂಪರೆಯ ವಿಚಾರಧಾರೆಗಳಿಗೂ ನಡೆದ ಸಂಘರ್ಷದ ಪರಿಣಾಮವಾಗಿದೆ. ಇದರಿಂದಾಗಿ ಭಾರತೀಯ ಪುನರುಜ್ಜೀವನವೆನ್ನುವುದು, ಭಾರತದ ಸಾಮಾಜಿಕ, ರಾಜಕೀಯ ಧಾರ್ಮಿಕ, ಹಾಗೂ ಸಾಹಿತ್ಯಕ ವಲಯಗಳಲ್ಲಿ ಉಂಟಾದ ಹೊಸ ಎಚ್ಚರಗಳನ್ನೂ ಬದಲಾವಣೆಗಳನ್ನೂ ಸೂಚಿಸುತ್ತದೆ. ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ, ಈ ಕಾಲದಲ್ಲಿ ಪಶ್ಚಿಮದ, ಅದರಲ್ಲಿಯೂ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಪ್ರೇರಣೆಯಿಂದ ಭಾರತದ ವಿವಿಧ ಪ್ರಾದೇಶಿಕ ಭಾಷಾಸಾಹಿತ್ಯಗಳು ತಮ್ಮೊಳಗಿನ ಸಾಂಸ್ಕೃತಿಕ ಸತ್ವಕ್ಕೆ ಅನುಗುಣವಾಗಿ, ಒಂದು ಬಗೆಯ ಪುನರುಜ್ಜೀವನವನ್ನು ಪಡೆದುಕೊಂಡವು. ಹಾಗೆ ಪುನರುಜ್ಜೀವನಕ್ಕೆ ಒಳಗಾದ ಸಾಹಿತ್ಯಗಳಲ್ಲಿ ಕನ್ನಡವೂ ಒಂದು, ಮತ್ತು ಈ ಸಂದರ್ಭದ ಸಾಹಿತ್ಯದ ಬದಲಾವಣೆಗೆ ಕಾರಣವಾದ ಸಾಹಿತ್ಯದ ಧೋರಣೆಗಳನ್ನು ಈ ದಿನ ನಾವು ನವೋದಯ ಚಳುವಳಿಯ ಲಕ್ಷಣಗಳೆಂದು ಗುರುತಿಸುತ್ತೇವೆ.

ಈ  ಬಗೆಯ ಪುನರುಜ್ಜೀವನಕ್ಕೆ ಒಳಗಾಗುವ ಮುನ್ನ, ಇಡೀ ಕನ್ನಡ ಸಾಹಿತ್ಯವು, ತನಗೆ ಹಿಂದಿನ ಎರಡು ಶತಮಾನಗಳಿಗೂ ಮೀರಿದ ಕಾಲಮಾನದಲ್ಲಿ ಸೃಜನಶೀಲತೆಯನ್ನು ಕಳೆದುಕೊಂಡು ಒಂದು ಸ್ಥಾವರ ಸ್ಥಿತಿಯನ್ನು ತಲುಪಿತ್ತು. ಇಪ್ಪತ್ತನೆಯ ಶತಮಾನದವರೆಗಿನ ಈ ಸ್ಥಾವರ ಸ್ಥಿತಿಯ ಕಾಲದಲ್ಲಿ, ಕನ್ನಡದಲ್ಲಿ ಕೇವಲ ಸಿದ್ಧರೂಪಗಳ ಪುನರಾವರ್ತನೆಗಿಂತ ಬೇರೆಯದೇನೂ ನಡೆಯಲಿಲ್ಲ. ಇಂಥ ಹೊತ್ತಿನಲ್ಲಿ ಕನ್ನಡಕ್ಕೆ ಮತ್ತೆ ಚಲನಶೀಲತೆಯನ್ನು ತರುವುದು ಹೇಗೆ ಎಂಬ ಚಿಂತನೆಗಳೇ ಹಲವರನ್ನು ಕಾಡತೊಡಗಿದವು. ಈ ವೇಳೆಗೆ, ಭಾರತೀಯ ಪುನರುಜ್ಜೀವನದ ಕಾರಣದಿಂದ ಪಶ್ಚಿಮದ ಹಲವು ಸಾಹಿತ್ಯಗಳ ಪರಿಚಯ ಹಾಗೂ ಪರಿಣತಿಯನ್ನು ಪಡೆದುಕೊಂಡ ಕೆಲವರು, ಕನ್ನಡದಲ್ಲಿ ಬದಲಾವಣೆಯಾಗಬೇಕಾದರೆ ನಾವು ಪಶ್ಚಿಮದ ಸಾಹಿತ್ಯ ಪ್ರೇರಣೆಯಿಂದ ಕನ್ನಡದಲ್ಲಿ ಹೊಸರೂಪಗಳನ್ನು ಆವಿಷ್ಕಾರ ಮಾಡುವುದೊಂದೇ ದಾರಿ ಎಂಬುದನ್ನು ಕಂಡುಕೊಂಡರು. ಇದರ ಪರಿಣಾಮವಾಗಿ ೧೮೭೭ ರಿಂದಲೇ ಷೇಕ್ಸ್‌ಪಿಯರನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನ ತ್ವರಿತಗತಿಯಿಂದ ಪ್ರಾರಂಭವಾಯಿತು. ಹಾಗೆಯೇ ಇಂಗ್ಲಿಷ್ ಸಾಹಿತ್ಯದ ಹಲವು ಕವಿಗಳ ಕವಿತೆಗಳನ್ನು ಅನುವಾದ ಮಾಡುವ ಪ್ರಯೋಗಗಳೂ ನಡೆದವು. ಆದರೆ ಷೇಕ್ಸ್‌ಪಿಯರನ ಕೃತಿಗಳೆಲ್ಲಾ ಮೂಲತಃ ರೂಪಾಂತರಗಳಾಗಿಯೇ ಕನ್ನಡಕ್ಕೆ ಬಂದದ್ದು ಸ್ವಾರಸ್ಯವಾದ ಸಂಗತಿಯಾಗಿದೆ. ಕಿಂಗ್‌ಲಿಯರ್ ನಾಟಕ ಕನ್ನಡದಲ್ಲಿ ‘ಹೇಮಚಂದ್ರವಿಲಾಸ’ವಾಯಿತು. ಒಥೆಲೋ ನಾಟಕ ‘ವೆನಿಸು ನಗರದ ವರ್ತಕ,’ ‘ವೇಣುಪುರಿಯ ವರ್ತಕ’, ‘ಸುರತನಗರದ ಶ್ರೇಷ್ಠಿ’ – ಇತ್ಯಾದಿ ಹೆಸರುಗಳಲ್ಲಿ ಹಲವು ಲೇಖಕರಿಂದ ರೂಪಾಂತರ ಪಡೆಯಿತು. ಆದರೆ ಇಂಗ್ಲಿಷ್ ಕವಿತೆಗಳ ಮೊದಲ ಅನುವಾದ ಪ್ರಯತ್ನಗಳು, ನೇರ ಭಾಷಾಂತರವಾಗಿಯೇ ಕಾಣಿಸಿಕೊಂಡವು. ಇಂಗ್ಲಿಷಿನಿಂದ ಮಾತ್ರವಲ್ಲ, ಸಂಸ್ಕೃತದಿಂದ, ತೆಲುಗಿನಿಂದ, ಬಂಗಾಳಿಯಿಂದ, ಮರಾಠಿಯಿಂದ, ತಮಿಳಿನಿಂದ, ೧೮೫೦ ರಿಂದ  ೧೯೦೦ರ ಕಾಲದಲ್ಲಿ ಈ ಬಗೆಯ ಅನುವಾದಗಳ ಕಾರ್ಯ ರಭಸದಿಂದ ನಡೆದುದನ್ನು ನೋಡಿದರೆ, ನವೋದಯ ಪೂರ್ವದ ಈ ಮುಂಬೆಳಗಿನ ಕಾಲದಲ್ಲಿ ಕನ್ನಡಕ್ಕೆ ಏನಾದರೂ ಮಾಡಿ ಚಲನಶೀಲತೆಯನ್ನು ತರುವ ತೀವ್ರತೆಯೊಂದು ಹೇಗೆ ಕ್ರಿಯಾಶೀಲವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ರಾಮಾಶ್ವಮೇಧವನ್ನು ಬರೆದ ಮುದ್ದಣನ ಪ್ರಯತ್ನವಾಗಲೀ, ಷೇಕ್ಸ್‌ಪಿಯರನ ಕೃತಿಗಳ ರೂಪಾಂತರವಾಗಲೀ, ಹಟ್ಟಿಯಂಗಡಿ ನಾರಾಯಣರಾಯರು, ಎಸ್.ಜಿ. ನರಸಿಂಹಾಚಾರ್ಯರು ಇಂಥವರ ಇಂಗ್ಲಿಷ್ ಕಾವ್ಯಭಾಗಗಳ ಅನುವಾದಗಳಾಗಲೀ, ಕನ್ನಡಕ್ಕೆ ನಿಜವಾಗಿಯೂ ಅಗತ್ಯವಾದ ಹೊಸರೂಪಗಳನ್ನು ತಂದುಕೊಡಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಅವರೆಲ್ಲರನ್ನೂ ನಿಯಂತ್ರಿಸಿದ್ದು ಸಾಂಪ್ರದಾಯಿಕವಾದ ಛಂದೋರೂಪಗಳ ಪ್ರಭಾವವೇ. ಕನ್ನಡ ಕಾವ್ಯವನ್ನು ಯಾವತ್ತಿನಿಂದಲೋ ನಿಯಂತ್ರಿಸಿಕೊಂಡು ಬಂದ ದ್ವಿತೀಯಾಕ್ಷರ ಪ್ರಾಸ ನಿರ್ಬಂಧದ, ಕಂದ, ವೃತ್ತ, ಷಟ್ಪದೀ, ಚೌಪದೀ ರೂಪಗಳು ಬದಲಾದ ಕಾಲದ ಹೊಸ ಸಂವೇದನೆಗಳನ್ನು ಅಭಿವ್ಯಕ್ತಿಸಲಾರವು  ಎಂಬ ಸಂಗತಿ ಈ ಎಲ್ಲ ಪ್ರಯೋಗಗಳಲ್ಲಿ ತೊಡಗಿದವರಿಗೆ ಹೊಳೆಯದಾಯಿತು. ೧೯೧೧ರಲ್ಲಿ ಗೋವಿಂದ ಪೈ ಅವರು, ಕನ್ನಡ ಪದ್ಯ  -ರೂಪಗಳಿಗಿದ್ದ ದ್ವಿತೀಯಾಕ್ಷರ ಪ್ರಾಸವನ್ನು ಮೊಟ್ಟಮೊದಲಿಗೆ ಕೈಬಿಡುವ ನಿರ್ಧಾರವನ್ನು ಕೈಕೊಂಡಾಗ, ಅವರ ಸಮಕಾಲೀನ ಸಾಹಿತಿಗಳಿಂದ ಪ್ರಬಲವಾದ ವಿರೋಧವು ವ್ಯಕ್ತವಾಯಿತೆಂಬುದನ್ನು ನೋಡಿದರೆ, ಕನ್ನಡಕ್ಕೆ ಹೊಸ ರೂಪಗಳನ್ನು ಆವಿಷ್ಕಾರ ಮಾಡುವುದು ಎಂತಹ ಸಾಹಸದ ವಿಚಾರವಾಗಿತ್ತೆಂಬುದು ತಿಳಿಯುತ್ತದೆ. ಈ ಸಾಹಸವನ್ನು ಮೊದಲಿಗೆ ಕೈಕೊಂಡು ಕನ್ನಡ ಕಾವ್ಯಕ್ಕೆ ಹೊಸ ರೂಪವನ್ನು ಕೊಟ್ಟವರು ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು. ಈ ದೃಷ್ಟಿಯಿಂದ ಶ್ರೀಯವರ ‘ಇಂಗ್ಲಿಷ್ ಗೀತೆಗಳು’ ನವೋದಯ ಸಾಹಿತ್ಯ ಸಂದರ್ಭದಲ್ಲಿ ಕನ್ನಡದ ಹೊಸ ದಾರಿಯನ್ನು ತೆರೆದವುಗಳಾಗಿವೆ. ಇಂಗ್ಲಿಷ್ ಸಾಹಿತ್ಯದ ಪ್ರೇರಣೆಯಿಂದ ಕನ್ನಡದಲ್ಲಿ ಹೊಸ ರೂಪಗಳನ್ನು ಆವಿಷ್ಕಾರ ಮಾಡಿಕೊಳ್ಳಬೇಕೆಂಬ ನಿಲುವನ್ನು, ನವೋದಯ ಸಾಹಿತ್ಯ ಚಳುವಳಿಯ ಒಂದು ತತ್ವ ಪ್ರಣಾಲಿಯಾಗಿ ಘೋಷಿಸಿದವರು ಆಚಾರ್ಯ ಬಿ.ಎಂ.ಶ್ರೀಕಂಠಯ್ಯ ಅವರು. ೧೯೧೧ ರಷ್ಟು ಹಿಂದೆಯೆ ಅವರು ‘ಕನ್ನಡ ಮಾತು ತಲೆ ಎತ್ತುವ ಬಗೆ’ ಎಂಬ ಉಪನ್ಯಾಸದಲ್ಲಿ ‘ಇಂಗ್ಲಿಷ್ ಸಾಹಿತ್ಯವೇ, ಜೀರ್ಣವಾದ ನಮ್ಮ ಕಾವ್ಯಮಾಲೆಗೆ ಇಳಿದಿರುವ ದೋಷಗಳನ್ನು ಪರಿಹಾರ ಮಾಡಬೇಕು’ (ಶ್ರೀ ಸಾಹಿತ್ಯ : ಪು ೨೫೦) ಎಂದು ಹೇಳುತ್ತಾರೆ. ಆದರೆ ಶ್ರೀಯವರ ಈ ನಿಲುವು ಇಂಗ್ಲಿಷ್ ಸಾಹಿತ್ಯ ಪ್ರೇರಣೆಯಿಂದ ಕನ್ನಡದಲ್ಲಿ ರೂಪುಗೊಳ್ಳುವ ಕಾವ್ಯವು ಇಂಗ್ಲಿಷ್ ಸಾಹಿತ್ಯದ ಅನುಸರಣೆ ಅಥವಾ ಅನುಕರಣೆಯಾಗದೆ ಕನ್ನಡದಲ್ಲಿ ಅಗತ್ಯವಾದ ಹೊಸ ಹುಟ್ಟೊಂದನ್ನು ಪಡೆದುಕೊಳ್ಳುವ ಸ್ವರೂಪದ್ದಾಗಬೇಕು ಎಂಬ ಎಚ್ಚರವನ್ನೂ ಒಳಗೊಂಡದ್ದಾಗಿತ್ತು. ಕನ್ನಡದ ಈ ‘ನವೋದಯ’ವನ್ನು ಅವರು, ‘ಪುನರುಜ್ಜೀವನ’ ಎಂಬ ಮಾತಿನಿಂದ ನಿರ್ದೇಶಿಸುತ್ತ ಅದರ ಲಕ್ಷಣವನ್ನು ಹೀಗೆಂದು ಸ್ಪಷ್ಟಪಡಿಸುತ್ತಾರೆ : “ಅದು ಬರಿಯ ಪುನರುತ್ಥಾನವಲ್ಲ; ಜೀರ್ಣೋದ್ಧಾರವಲ್ಲ; ಅನುಸರಣವಲ್ಲ. ಪುನರುಜ್ಜೀವನ ಎನ್ನುವುದು ಏನೋ ಒಂದು ಧೈರ್ಯದಿಂದ ಕೂಡಿದ ವಿಚಾರ, ಹೊಸ ನಿರ್ಮಾಣ, ಮರುಹುಟ್ಟು, ಆಳವಾದ ಸಮನ್ವಯ-ಹೊಸದು, ಹಳದು, ನಮ್ಮದು, ಹೆರವರದು ಎಲ್ಲವನ್ನೂ ಹೊಂದಿಕೆ ಮಾಡುವುದು.” (ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ ಪು. ೨೮೫)

ನವೋದಯ ಸಾಹಿತ್ಯ ಚಳುವಳಿಯ ಸೈದ್ಧಾಂತಿಕ ನೆಲೆಯನ್ನು ಶ್ರೀಯವರ ಈ ಹೇಳಿಕೆ ಸ್ಪಷ್ಟಪಡಿಸುತ್ತದೆ ಮತ್ತು ಈ ಕಾರಣದಿಂದ ನವೋದಯ ಸಾಹಿತ್ಯ, ತನಗಿಂತ ಹಿಂದಿನ ಕನ್ನಡ ಸಾಹಿತ್ಯ ಪರಂಪರೆಯನ್ನು ಅವಿಚಾರವಾಗಿ ನಿರಾಕರಿಸುವ ಅಬ್ಬರಗಳನ್ನು ಪ್ರದರ್ಶಿಸದೆ, ಅದರಿಂದ ಪಡೆದುಕೊಳ್ಳಬಹುದಾದ ಸತ್ವಗಳನ್ನು ತನ್ನಲ್ಲಿ ಅಳವಡಿಸಿಕೊಂಡಿತು. ಹಾಗೆಯೇ ಪಶ್ಚಿಮದ ಸಾಹಿತ್ಯದಿಂದ ಪಡೆದುಕೊಳ್ಳಬಹುದಾದ ಪ್ರೇರಣೆಗಳನ್ನು, ತನ್ನ ಸೃಜನಾತ್ಮಕ ಪ್ರತಿಭೆಯೊಳಕ್ಕೆ ಸ್ವೀಕರಿಸುತ್ತ, ತನ್ನ ಪ್ರಾದೇಶಿಕ – ಸಾಂಸ್ಕೃತಿಕ ಸತ್ವದಿಂದ ಹೊಸ ನಿರ್ಮಿತಿಯಲ್ಲಿ ತೊಡಗಿತ್ತು. ಕುವೆಂಪು, ಪು.ತಿ.ನ., ಕೆ.ಎಸ್.ನ., ವಿ.ಸೀ., ರಾಜರತ್ನಂ ಇಂಥ ಹಲವರ ಪ್ರಯೋಗ ಪರಿಣತಿಗಳಿಂದ ನವೋದಯ ಕಾವ್ಯದ ಒಂದು ಮಾರ್ಗ ಹಳೆಯ ಮೈಸೂರಿನ ಪರಿಸರದಲ್ಲಿ ಆಚಾರ್ಯ ಶ್ರೀಯವರ ಮುಂದಾಳುತನದಲ್ಲಿ ರೂಪುಗೊಂಡಿತು. ಆದರೆ ಇದಿಷ್ಟೇ ನವೋದಯ ಚಳುವಳಿಯ ಎಲ್ಲವೂ ಅಲ್ಲ. ನವೋದಯ ಚಳುವಳಿಯ ಇನ್ನೆರಡು ಮಾರ್ಗಗಳೂ ಇವೆ. ಅವುಗಳಲ್ಲಿ ಒಂದು, ಉತ್ತರ ಕರ್ನಾಟಕ ಧಾರವಾಡದ ಬೇಂದ್ರೆಯವರ ಗೆಳೆಯರ ಗುಂಪಿನ ನವೋದಯ, ಮತ್ತೊಂದು ಮಂಗಳೂರು ಪರಿಸರದಲ್ಲಿ ಗೋವಿಂದ ಪೈ, ಪಂಜೆ ಮಂಗೇಶರಾಯರು, ಕಡೆಂಗೋಡ್ಲು ಶಂಕರಭಟ್ಟರು ಇವರಿಂದ ರೂಪುಗೊಂಡ ನವೋದಯ. ಬೇಂದ್ರೆಯವರ ಬಳಗದ, ಗೋಕಾಕ್, ಮಧುರಚನ್ನ, ಮುಗಳಿ ಮುಂತಾದವರ ‘ಗೆಳೆಯರ ಗುಂಪಿನ’ ನವೋದಯದ ಮುಖ್ಯ ಪ್ರೇರಣೆ ಕನ್ನಡದ ಸಂತ ಕವಿಗಳ ಹಾಗೂ ಜಾನಪದ ಪರಂಪರೆಯಲ್ಲಿದೆ. ಆದುದರಿಂದ, ಈ ನವೋದಯದ ಕವಿಗಳ ಅಭಿವ್ಯಕ್ತಿ ಮೂಲತಃ ದೇಸೀ ಸ್ವರೂಪದ್ದಾಗಿದೆ ಮತ್ತು ಅದು ತೀರಾ ಸ್ಪಷ್ಟವಾಗಿ ತನ್ನ ರೂಪಾಂಶದಲ್ಲಿ, ಬಿ.ಎಂ.ಶ್ರೀ.ಯವರ ನವೋದಯ ಕಾವ್ಯದಿಂದ ಭಿನ್ನವಾಗಿದೆ. ಮಂಗಳೂರಿನ ಕಡೆಯ ಪಂಜೆ – ಪೈ – ಅವರ ನವೋದಯ, ನವೋದಯದ ಇನ್ನೆರಡು ಪ್ರಭೇದಗಳಷ್ಟು ವಿಶಿಷ್ಟವೂ ಮಾರ್ಗ ನಿರ್ಮಾಪಕವೂ ಆಗದೆ ಹೋದದಕ್ಕೆ, ಪೈ ಅವರು ಮೂಲತಃ ವಿದ್ವಾಂಸರೂ ಸಂಶೋಧಕರೂ ಆದದ್ದೆ ಕಾರಣವಿರಬಹುದು. ಆದರೆ ಪಂಜೆ, ಕಡೆಂಗೋಡ್ಲು ಅವರ ಕಾವ್ಯ, ತನಗೆ ತಾನೇ ತುಂಬ ಲವಲವಿಕೆಯಿಂದ ಗಮನಾರ್ಹವಾದ ಕಾವ್ಯವಾಗಿರುವುದಕ್ಕೆ ಅವರ ವೈಯಕ್ತಿಕವಾದ ಸಾಮರ್ಥ್ಯಗಳೆ ಕಾರಣವಾಗಿವೆ ಎನ್ನಬಹುದು.

ಒಟ್ಟಾರೆಯಾಗಿ ನೋಡಿದರೆ, ಕನ್ನಡದಲ್ಲಿ ರೂಪುಗೊಂಡ ನವೋದಯವು ತುಂಬ ವ್ಯಾಪಕ ಸ್ವರೂಪದ್ದೂ, ಬಹುಮುಖಿಯಾದದ್ದೂ ಆಗಿದೆ, ಮತ್ತು ಇಡೀ ಭಾರತೀಯ ಪುನರುಜ್ಜೀವನವನ್ನು ರೂಪಿಸಿದ ರಾಷ್ಟ್ರೀಯತೆ, ಆಧುನಿಕ ವೈಜ್ಞಾನಿಕ ಚಿಂತನೆಗಳು, ಟ್ಯಾಗೂರ್, ಗಾಂಧೀ-ಅರವಿಂದರು, ರಾಮಕೃಷ್ಣ, ವಿವೇಕಾನಂದರ ವಿಚಾರಗಳು, ಮತ್ತು ವಿವಿಧ ಜಾಗತಿಕ ತಾತ್ವಿಕ ಪ್ರಭಾವಗಳು – ಇತ್ಯಾದಿಗಳಿಂದ ತನ್ನನ್ನು ರೂಪಿಸಿಕೊಂಡ ಕನ್ನಡ ನವೋದಯವು, ವಿವಿಧ ಕಾವ್ಯ ಪ್ರಕಾರಗಳಲ್ಲಿ ಮಾತ್ರವಲ್ಲ, ಕಥಾ ಸಾಹಿತ್ಯದ ಮೂಲಕವೂ, ಕನ್ನಡಕ್ಕೆ ಮಹತ್ವದ ಕೃತಿಗಳನ್ನು ನೀಡಿದ ಚಳುವಳಿಯಾಗಿದೆ. ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿಯವರಂತಹ ಶಿಖರ ಸಾಹಿತಿಗಳು, ನವೋದಯದ ಚಳುವಳಿಯ ಪ್ರತಿನಿಧಿ -ಗಳಾಗಿದ್ದಾರೆ.

೧೯೨೦ ರಿಂದ ೧೯೫೦ ರವರೆಗಿನ ಕಾಲಮಾನವನ್ನು ನವೋದಯ ಸಾಹಿತ್ಯದ ಉತ್ಕರ್ಷದ ಕಾಲವೆಂದು ಪರಿಗಣಿಸಬಹುದು. ನವೋದಯ ಸಾಹಿತ್ಯ ಸಂದರ್ಭದ ಮಹತ್ವಾಕಾಂಕ್ಷೆಯ ಕೃತಿ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಪ್ರಕಟವಾದದ್ದು ೧೯೪೯ರಲ್ಲಿ. ಮುಂದೆ ಮೂರೇ ವರ್ಷಗಳಲ್ಲಿ ಅಡಿಗರ ‘ನಡೆದು ಬಂದ ದಾರಿ’ ಪ್ರಕಟವಾಗಿ ಅದರ ಮುನ್ನುಡಿಯ ಘೋಷಣೆಗಳು ಮತ್ತು ಇದೇ ಸಂಕಲನದ ಕೆಲವು ಕವಿತೆಗಳು ನವ್ಯ ಸಾಹಿತ್ಯ ಚಳುವಳಿಗೆ ನಾಂದಿಯಾದವು. ಈ ಎರಡು ಚಳುವಳಿಗಳಲ್ಲಿ ಒಂದರ ಮುಕ್ತಾಯ ಮತ್ತೊಂದರ ಪ್ರಾರಂಭದ ಸಂಧಿಕಾಲದಲ್ಲಿಯೇ ಕನ್ನಡದಲ್ಲಿ ‘ಪ್ರಗತಿಶೀಲ’ವೆಂಬ ಅಪ್ರಮುಖ ಸಾಹಿತ್ಯ ಚಳುವಳಿಯೊಂದು ಕಾಣಿಸಿಕೊಂಡಿತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ನವೋದಯ ಸಾಹಿತ್ಯದ ಜತೆ ಜತೆಗೇ, ಕೆಲವು ವಿಚಾರಗಳಲ್ಲಿ ನವೋದಯದ ಧೋರಣೆಗಳಿಗೆ ಪ್ರತಿಕ್ರಿಯೆಯೆಂಬಂತೆ ಹುಟ್ಟಿಕೊಂಡ ಈ ಚಳುವಳಿ, ಮುಖ್ಯವಾಗಿ ಸಮೃದ್ಧ ಕಥಾ ಸಾಹಿತ್ಯ ಪ್ರಕಾರದಲ್ಲಿ ಕಾಣಿಸಿಕೊಂಡು, ಕನ್ನಡದ ಪರಿಸರದಲ್ಲಂತೂ ಕೇವಲ ಐದಾರು ವರ್ಷಗಳಲ್ಲಿ- ೧೯೪೩ ರಿಂದ, ೧೯೪೭-೪೮ ರಷ್ಟು ಕಾಲದಲ್ಲಿ – ತನ್ನ ಕಾವನ್ನು ಕಳೆದುಕೊಂಡಿತು. ಈ ದೃಷ್ಟಿಯಿಂದ ನವೋದಯಕ್ಕೂ, ನವ್ಯಕ್ಕೂ ನಡುವಣ ಒಂದು ಅವಸ್ಥಾಂತರವೆಂದು ಇದನ್ನು ಕರೆಯಬಹುದು.

‘ಪ್ರಗತಿಶೀಲ’ ಎನ್ನುವ ಮಾತು, ಇತರ ಸಾಹಿತ್ಯ ಚಳುವಳಿಗಳಿರುವ ಹೆಸರಿನಂತೆಯೆ ಬದುಕಿನ ಹಾಗೂ ಸಾಹಿತ್ಯದ ನಿರಂತರತೆಯನ್ನು ಸೂಚಿಸುವ ಪದವಾಗಿದೆ. ಆದರೆ ನವೋದಯ, ನವ್ಯ, ದಲಿತ, ಬಂಡಾಯ – ಈ ಪದಗಳು, ಅವಕ್ಕೆ ಸಂವಾದಿಯಾದ ಹಾಗೂ ಪ್ರೇರಣೆಯಾದ ಪಶ್ಚಿಮದ ಸಾಹಿತ್ಯ ಚಳುವಳಿಗಳಿಗಿದ್ದ ಹೆಸರುಗಳಿಗೆ ಸಮೀಪವಾದ ಅರ್ಥವನ್ನು ಪ್ರಕಟಿಸುವಂತೆ ‘ಪ್ರಗತಿಶೀಲ’ ಅನ್ನುವುದು, ಆ  ಬಗೆಯ ಪಶ್ಚಿಮದ ಸಾಹಿತ್ಯ ಚಳುವಳಿಯ ಛಾಯೆಯಾಗಲೀ, ಸಂವಾದಿ ಪದವಾಗಲೀ ಆಗಿಲ್ಲ. ಯಾಕೆಂದರೆ ಈ ಪದದ ಅರ್ಥವನ್ನು ಒಳಗೊಳ್ಳುವ ‘ಪೋಗ್ರೇಸೀವ್ ಮೂವ್‌ಮೆಂಟ್’ ಎಂಬ ಮಾತಾಗಲಿ, ‘ಪ್ರೋಗ್ರೆಸೀವ್ ಸಾಹಿತ್ಯ’ ಎಂಬ ಮಾತಾಗಲೀ ಪಶ್ಚಿಮದ ಸಾಹಿತ್ಯ ಚರ್ಚೆಯಲ್ಲಿ ಕಂಡು ಬರುವುದಿಲ್ಲ. ಆದರೆ ಭಾರತೀಯ ಪರಿಸರದಲ್ಲಿ ಪ್ರಗತಿಶೀಲ ಎಂಬ ಪದವು ಸೂಚಿಸುವ ಧೋರಣೆಯಾಗಲೀ, ಅದರ ಪರಿಣಾಮವಾದ ಸಾಹಿತ್ಯ ನಿರ್ಮಿತಿಯಾಗಲಿ ಮೂಲತಃ ತನ್ನ ಪ್ರೇರಣೆಯನ್ನು ಪಡೆದುಕೊಂಡದ್ದು ಪಶ್ಚಿಮದ ವಾಸ್ತವತಾವಾದೀ ಚಳುವಳಿಯಿಂದ. ‘ರಿಯಲಿಸಂ’ ಅಥವಾ ವಾಸ್ತವವಾದ ಚಳುವಳಿಯೊಂದು ಯೂರೋಪಿನಲ್ಲಿ ಹುಟ್ಟಿಕೊಂಡದ್ದು, ಹತ್ತೊಂಬತ್ತು-ಇಪ್ಪತ್ತನೇ ಶತಮಾನದಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಮತ್ತು ರಾಜಕೀಯ ಕ್ರಾಂತಿಗಳ ಪರಿಣಾಮವಾದ ಆಲೋಚನಾ ಕ್ರಮಗಳಿಂದ. ಕೈಗಾರಿಕಾ ಕ್ರಾಂತಿಯಿಂದ, ಶ್ರಮಿಕ ಮತ್ತು ಬಂಡವಾಳಷಾಹಿ ವರ್ಗಗಳು ರೂಪುಗೊಂಡು ಇವುಗಳೊಳಗೆ ಉಂಟಾದ ಆರ್ಥಿಕ ಅಸಮಾನತೆ, ಹಾಗೂ ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ವರ್ಗರಹಿತ ಸಮಾಜದ ಕನಸುಗಳು, ಮತ್ತು ಸಾಹಿತಿಗಳಲ್ಲಿ ಮೂಡಿದ ಜನಪರ ಆಲೋಚನೆಗಳು, ಸಾಹಿತ್ಯದ ಸ್ವರೂಪ  ಲಕ್ಷಣಗಳನ್ನು ಬದಲಾಯಿಸಿದವು. ಇದರಿಂದಾಗಿ ಲೇಖಕನಾದವನು, ಹಿಂದಿನ ರೊಮ್ಯಾಂಟಿಕ್ ಚಳುವಳಿಯ ಲೇಖಕರಂತೆ, ಕೇವಲ ಸೌಂದರ್ಯನಿಷ್ಠವಾಗಿ ಬದುಕನ್ನು ಗ್ರಹಿಸದೆ ಅದನ್ನು ಅದರ ಯಥಾಸ್ಥಿತಿಯಲ್ಲಿ ಗ್ರಹಿಸಿ ರೂಪಿಸುವುದೇ ನಿಜವಾದ ಸಾಹಿತ್ಯ ಎಂಬ ನಿಲುವು ಗಟ್ಟಿಗೊಳ್ಳುತ್ತ, ‘ವಾಸ್ತವ ವಾದ’ ಎಂಬ ಚಳುವಳಿಯೊಂದು ಹುಟ್ಟಿಕೊಂಡಿತು. ಇದೇ ಸಂದರ್ಭದ ಹಿನ್ನೆಲೆಯಾಗಿ ಸಂಭವಿಸಿದ ಫ್ರೆಂಚ್ ಮಹಾಕ್ರಾಂತಿ ಹಾಗೂ ಅನಂತರದ ರಷ್ಯನ್ ಮಹಾಕ್ರಾಂತಿಗಳು, ವಾಸ್ತವವಾದಿ ನಿಲುವಿಗೆ ಒಂದು ಚಾಲನೆಯನ್ನೂ, ಹಲವು ಆಯಾಮಗಳನ್ನೂ ನೀಡಿದವು. ಹೀಗಾಗಿ ‘ವಾಸ್ತವ ವಾದ’, ಅತಿ ‘ವಾಸ್ತವ ವಾದ’ ‘ಸಮಾಜವಾದೀ ವಾಸ್ತವ ವಾದ’ ಈ  ಬಗೆಯ ಹಲವು ಪ್ರಭೇದಗಳು ಕಂಡುಬಂದರೂ, ಮೂಲಭೂತವಾಗಿ ಈ ವಾಸ್ತವವಾದಿಗಳ ನಿಲುವು ಮುಖ್ಯವಾಗಿ, ಸಾಹಿತ್ಯವು ಜನಪರವಾಗುತ್ತ, ಅವರ ಬದುಕಿನ ನಿಜವಾದ ವಾಸ್ತವಗಳನ್ನು, ಯಾವ ಉತ್ಪ್ರೇಕ್ಷೆಯೂ ಇಲ್ಲದೆ ಗ್ರಹಿಸಿ ರೂಪಿಸುತ್ತಾ, ಸಾಮ್ಯವಾದದ ನೆಲೆಯಲ್ಲಿ, ಸಾಮಾನ್ಯನ ಘನತೆಯನ್ನೂ, ಅವನ ಆಶೋತ್ತರಗಳನ್ನೂ ಅಭಿವ್ಯಕ್ತಪಡಿಸಬೇಕು ಎನ್ನುವುದೇ ಆಗಿತ್ತು. ಈ ನಿಲುವಿನ ಅಭಿವ್ಯಕ್ತಿ ಹೆಚ್ಚಾಗಿ ಕಥಾ ಸಾಹಿತ್ಯ ಮತ್ತು ನಾಟಕ ಪ್ರಕಾರಗಳಲ್ಲಿ ಕಾಣಿಸಿಕೊಂಡಿತು. ಪಶ್ಚಿಮದ ಈ ವಾಸ್ತವತಾವಾದೀ ಚಳುವಳಿಗಳಿಂದ ಪ್ರೇರಣೆ ಪಡೆದು, ಸ್ವಾತಂತ್ರ್ಯ ಪೂರ್ವ ಭಾರತದ ಪರಿಸರದಲ್ಲಿ, ನವೋದಯ ಸಾಹಿತ್ಯ ಸಂದರ್ಭದಲ್ಲಿಯೇ, ಪ್ರಗತಿಶೀಲವೆಂಬ ಹೆಸರಿನ ಸಾಹಿತ್ಯ ಚಳುವಳಿಯೊಂದು ಹುಟ್ಟಿಕೊಂಡಿತು. ಉತ್ತರದ ಲಕ್ನೋದಲ್ಲಿ ೧೯೩೬ ರಂದು ಸಾಹಿತಿ ಪ್ರೇಮ್‌ಚಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತದ ಪ್ರಗತಿಶೀಲ ಲೇಖಕರ ಪ್ರಥಮ ಅಧಿವೇಶನವೊಂದು, ಈ ಚಳುವಳಿಗೆ ಚಾಲನೆ ನೀಡಿತು. ಬದುಕಿನಲ್ಲಿ ಹೊಸ ಸೌಂದರ್ಯವನ್ನು ಅನ್ವೇಷಿಸುವ, ಜನಸಮುದಾಯದ ಮೇಲೆ ನಡೆಯುವ ದಬ್ಬಾಳಿಕೆಗಳನ್ನು ವಿರೋಧಿಸುವ, ಮನುಷ್ಯನ ಘನತೆಯನ್ನು ಎತ್ತಿಹಿಡಿಯುವುದಕ್ಕಾಗಿ, ಸಾಮ್ರಾಜ್ಯಷಾಹಿ, ಹಾಗೂ ಬಂಡವಾಳಷಾಹೀ ಶಕ್ತಿಗಳ ವಿರುದ್ಧ ದನಿಯೆತ್ತುವ ಮತ್ತು ನಿಜವಾದ ಸಮಾನತಾ ಸಾಮಾಜಿಕ ವ್ಯವಸ್ಥೆಯೊಂದನ್ನು ರೂಪಿಸುವ ಹೊಸ ಎಚ್ಚರಗಳನ್ನು ಹುಟ್ಟಿಸುವುದು ತನ್ನ ಉದ್ದೇಶವೆಂದು ಈ ಅಧಿವೇಶನ ಘೋಷಿಸಿತು. ಇದರಿಂದ ಪ್ರೇರಣೆಗೊಂಡು ಕನ್ನಡದಲ್ಲಿ ೧೯೪೩ರ ವೇಳೆಗೆ  ಪ್ರಗತಿಶೀಲ ಲೇಖಕರ ಸಂಘವೊಂದು ಅಸ್ತಿತ್ವಕ್ಕೆ ಬಂದಿತು. ಅ.ನ. ಕೃಷ್ಣರಾಯರು ಈ ಸಂಘದ ಮುಖ್ಯ ವಕ್ತಾರರಾದರು. ಅವರೊಂದಿಗೆ, ನಿರಂಜನ, ತ.ರಾ.ಸು, ಕಟ್ಟೀಮನಿ ಮೊದಲಾದ ಉತ್ಸಾಹೀ ಬರಹಗಾರರು ಸೇರಿಕೊಂಡು, ಕನ್ನಡದಲ್ಲಿ ಪ್ರಗತಿಶೀಲ ಚಳುವಳಿಯೊಂದು ಹುಟ್ಟಿಕೊಂಡು ಬಹುಸಂಖ್ಯೆಯ ಕತೆ ಕಾದಂಬರಿಗಳ ನಿರ್ಮಿತಿಯಲ್ಲಿ ಇದು ತನ್ನ ಅಭಿವ್ಯಕ್ತಿಯನ್ನು ಕಂಡುಕೊಂಡಿತು.

ಕನ್ನಡದಲ್ಲಿ ಕಾಣಿಸಿಕೊಂಡ ಈ ಪ್ರಗತಿಶೀಲ ಚಳುವಳಿ ಮುಖ್ಯವಾಗಿ ಕನ್ನಡದಲ್ಲಿ ನೆಲೆಗೊಂಡ ನವೋದಯ ಸಾಹಿತ್ಯದ ಒಲುವುಗಳಿಗೆ ತೋರಿದ ಪ್ರತಿಕ್ರಿಯೆಯಾಗುತ್ತ, ಮಧ್ಯಮವರ್ಗದವರ ಬದುಕನ್ನು ತನ್ನ ಮುಖ್ಯವಸ್ತುವನ್ನಾಗಿ ಮಾಡಿಕೊಂಡಿತು. ಬಡವರ, ಕೂಲಿಕಾರರ, ಶೋಷಿತರ, ಮಹಿಳೆಯರ – ಜೀವನವನ್ನು ಕುರಿತು ಕತೆ ಕಾದಂಬರಿಗಳ ಮೂಲಕ ಅತ್ಯಂತ ರೋಚಕವಾಗಿ ಕಾಣಿಸಿಕೊಂಡ ಈ ಸಾಹಿತ್ಯ, ಒಂದು ರೀತಿಯಲ್ಲಿ ಹಲವರ ವೃತ್ತಿನಿರತ ರಚನೆಯಾಗಿ, ಕೇವಲ ಭಾವುಕ – ಅನುಕಂಪಗಳ ಮೂಲಕ ಗ್ರಹಿಸಿದ ಬದುಕಿನ ಚಿತ್ರವಾಗಿ, ಕಲೆಗೆ ತಕ್ಕ ಹದದ ಅಭಾವದಿಂದಾಗಿ, ಗಟ್ಟಿಯಾದ ಬರೆಹಗಳನ್ನು ನಿರ್ಮಿಸಲಾರದೆ ಹೋಯಿತು. ಸೃಜನತೆಯ ತುರ್ತಿಗಿಂತ ಬರೆಯುವುದನ್ನೇ ಒಂದು ಅಭ್ಯಾಸವನ್ನಾಗಿ ಮಾಡಿಕೊಂಡ ಈ ಪಂಥದ ಲೇಖಕರಲ್ಲಿ ಬಹುಮಂದಿ ಗ್ರಾಮೀಣ ಪರಿಸರದಿಂದಾಗಲೀ, ಸಮಾಜದ ಕೆಳಗಿನ ವರ್ಗಗಳಿಂದಾಗಲೀ ಬಂದವರಲ್ಲದ ಕಾರಣ, ಅವರ ಸಾಹಿತ್ಯದ ಮೂಲದ್ರವ್ಯ, ಅವರ ನಿಜವಾದ ಅನುಭವದ ಆಳದಿಂದ ರೂಪುಗೊಳ್ಳದೆ, ಕೇವಲ ಮೇಲು ನೋಟದ ಕಾಣ್ಕೆಗಳನ್ನಷ್ಟೆ ಪ್ರಕಟಿಸುವುದರಲ್ಲಿ  ಪರ‍್ಯವಸಾನವಾಯಿತು. ಹೀಗಾಗಿ ಈ ಚಳುವಳಿ ಕನ್ನಡದ ಪರಿಸರದಲ್ಲಿ ಕೇವಲ ಐದಾರು ವರ್ಷ ಮಾತ್ರ ವಿಜೃಂಭಿಸಿ, ಕೇವಲ ಕುತೂಹಲದ ವಸ್ತುವಾಯಿತು.

ಆದರೆ ಪ್ರಗತಿಶೀಲ ಚಳುವಳಿ ಸಾಂಸ್ಕೃತಿಕವಾಗಿ ಉಂಟು ಮಾಡಿದ ಪರಿಣಾಮಗಳನ್ನು ನಿರ್ಲಕ್ಷಿಸುವುದು ಆ ಚಳುವಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮೊದಲನೆಯದಾಗಿ ಅದು ಕನ್ನಡದಲ್ಲಿ ರೂಪುಗೊಳ್ಳುತ್ತಿದ್ದ ವಾಸ್ತವವಾದೀ ನಿಲುವುಗಳಿಗೆ, ಒಂದು ಗಟ್ಟಿನೆಲೆಯನ್ನು ನೀಡಿ, ಅದರ ಸಾಧ್ಯತೆಗಳನ್ನು ವಿಸ್ತರಿಸಿತು. ಎರಡನೆಯದಾಗಿ ಬಹುಸಂಖ್ಯಾತವಾದ ಸುಲಭ ಬೆಲೆಯ ಕಾದಂಬರಿಗಳ ಮೂಲಕ ಮೊಟ್ಟ ಮೊದಲಿಗೆ ಕನ್ನಡ ಜನದಲ್ಲಿ ಕೊಂಡು ಓದುವ ಆಸಕ್ತಿಯನ್ನು, ಪುಸ್ತಕ ಪ್ರೀತಿಯನ್ನು ಹುಟ್ಟಿಸುವುದರ ಮೂಲಕ ಓದುವ  ವರ್ಗವೊಂದನ್ನು ವಿಸ್ತಾರಮಾಡಿತು. ಆದರೆ ಓದುವ ವರ್ಗವನ್ನು ತಲುಪಿದ, ಆ ಪುಸ್ತಕಗಳು, ಓದುಗರಲ್ಲಿ ಒಳ್ಳೆಯ ಅಭಿರುಚಿಯನ್ನು ಮೂಡಿಸುವಂಥವು -ಗಳಾಗಿರದೆ, ಕೇವಲ ರೋಚಕ ಸಾಮಗ್ರಿಗಳು ಮಾತ್ರವಾಗಿದ್ದುವೆಂಬುದನ್ನು ಒಪ್ಪಿದರೂ, ಒಳ್ಳೆಯ ಸಾಹಿತ್ಯವನ್ನೂ ಈ ಓದುವವರ್ಗ ಸ್ವೀಕರಿಸಲು ಸಾಧ್ಯವಾಗುವಂತಹ ಪೂರ್ವಸಿದ್ಧತೆಯೊಂದು  ಇದರಿಂದ ನಿರ್ಮಾಣವಾಯಿತೆಂಬುದನ್ನು ತಳ್ಳಿ ಹಾಕುವಂತಿಲ್ಲ. ಮೂರನೆಯದಾಗಿ, ಈ ಚಳುವಳಿಯ ಹಲವು ಬರೆಹಗಾರರು, ಒಳ್ಳೆಯ ವಾಗ್ಮಿಗಳಾಗಿದ್ದು ಕರ್ನಾಟಕ ಉದ್ದಗಲಕ್ಕೂ ಸಂಚಾರಮಾಡಿ, ನಾಡು – ನುಡಿಗಳ ಮೇಲಿನ ಪ್ರೇಮವನ್ನು ಹುಟ್ಟಿಸಿ, ಕನ್ನಡ ನಾಡಿನ ಭಾವೈಕ್ಯತೆಗೆ ಹಾಗೂ ಏಕೀಕರಣಕ್ಕೆ ಜನಮನವನ್ನು ಸಿದ್ಧಪಡಿಸಿದರು. ಕೊನೆಯದಾಗಿ, ಈ ಪ್ರಗತಿಶೀಲ ಚಳುವಳಿ, ನವ್ಯೋತ್ತರ ಸಾಹಿತ್ಯ ಚಳುವಳಿಯಾದ ದಲಿತ-ಬಂಡಾಯ ಚಳುವಳಿಯ ಬೀಜಗಳು, ಪ್ರಗತಿಶೀಲ ಚಳುವಳಿಯಲ್ಲಿಯೇ ಕಾಣಿಸಿಕೊಂಡಿವೆ ಎಂದರೆ ತಪ್ಪೇನಿಲ್ಲ.

ಪ್ರಗತಿಶೀಲ ಸಾಹಿತ್ಯ ಸಂದರ್ಭದಲ್ಲಿ ಬರೆಯಲು ಪ್ರಾರಂಭಿಸಿದ ಮತ್ತು ಆ ಚಳುವಳಿಯೊಡನೆ ಸಂಗಡಿಸಿಕೊಂಡ ಹಲವು ಲೇಖಕರು, ಆ ಚಳುವಳಿಯ ಸಂದರ್ಭದಲ್ಲಿ ಬರೆದ ಕೃತಿಗಳಿಗಿಂತ, ಉತ್ತಮವಾದ ಕೃತಿಗಳನ್ನು ಆ ಚಳುವಳಿಯ ಆಚೆಗಿನ ಕಾಲಮಾನದಲ್ಲಿ ಬರೆದಿದ್ದಾರೆ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಶ್ರೀ ಕಟ್ಟೀಮನಿ, ನಿರಂಜನ,  ಚದುರಂಗ, ತ.ರಾ.ಸು, ಇವರು ಇತ್ತೀಚೆಗೆ ಬರೆದ ಕೆಲವು ಶ್ರೇಷ್ಠ ಕಾದಂಬರಿಗಳನ್ನು ನೋಡಿದಾಗ ಅನ್ನಿಸುತ್ತದೆ, ಒಂದು ಚಳುವಳಿಯನ್ನು ಮೀರಿದಾಗ ಹುಟ್ಟಿಕೊಳ್ಳುವ ಕೃತಿಗಳು, ಆ ಚಳುವಳಿಯ ಬದ್ಧತೆಯನ್ನು ಒಪ್ಪಿಕೊಂಡು ನಿರ್ಮಿತವಾದ ಕೃತಿಗಳಿಗಿಂತ ಹೆಚ್ಚು ಉತ್ತಮವಾಗಿರುವುದುಂಟು.

ಆಧುನಿಕ ಕನ್ನಡ ಸಾಹಿತ್ಯದ ಸ್ವಾತಂತ್ರೋತ್ತರ ಸಂದರ್ಭದಲ್ಲಿ ಕಾಣಿಸಿಕೊಂಡ ನವ್ಯಸಾಹಿತ್ಯ ಚಳುವಳಿ, ಅತ್ಯಂತ ಕುತೂಹಲಕಾರವೂ, ಸಾಹಿತ್ಯ ಕಲ್ಪನೆಗಳ ಬೇರನ್ನೆ ಮೊದಲಿಗೆ ಅಲ್ಲಾಡಿಸುವಂಥದ್ದೂ, ಪ್ರಖರವಾದ ವಿಮರ್ಶನಪ್ರಜ್ಞೆಯಿಂದ ಕೂಡಿದ್ದೂ, ಅನೇಕ ಹೊಸ ಪ್ರಯೋಗ ಪರಿಣತಿಗಳಿಂದ ಸಾಹಿತ್ಯದ ವಸ್ತು-ರೂಪ-ಭಾಷೆಗೆ ಕಾಯಕಲ್ಪ ಮಾಡಿದಂಥದೂ ಆಗಿದೆ.

ಯಾವುದನ್ನು ನವ್ಯಸಾಹಿತ್ಯ ಚಳುವಳಿ ಅನ್ನುತ್ತೇವೋ, ಅದು ಸ್ವಾತಂತ್ರೋತ್ತರ ಪರಿಸರದ ಮೊಟ್ಟಮೊದಲ ಚಳುವಳಿಯಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಈ ನಾಡಿನ ಬದುಕನ್ನು ನಿಯಂತ್ರಿಸಿದ ಉತ್ಸಾಹ, ಕನಸುಗಾರಿಕೆ, ದೇಶಭಕ್ತಿ, ಆದರ್ಶಪರತೆ, ಮೌಲ್ಯನಿಷ್ಠೆ ಇತ್ಯಾದಿಗಳು, ಮಹಾತ್ಮ ಗಾಂಧೀಜಿಯವರ ಕೊಲೆಯ ಮೂಲಕ ತಮ್ಮ ಎಲ್ಲಾ ಅರ್ಥವನ್ನೂ ಕಳೆದುಕೊಂಡು, ಸ್ವಾತಂತ್ರೋತ್ತರ ಭಾರತದ ಪರಿಸರ ಅತ್ಯಂತ ಕಲುಷಿತವಾಗಿತ್ತು. ಜನಜನಗಳ ನಡುವಣ ನಂಬಿಕೆಗಳ ಕುಸಿತ, ಭ್ರಷ್ಟ ರಾಜಕಾರಣದ ಮೂಲಕ ವಿಜೃಂಭಿಸಿದ ಹುಸಿ ಮೌಲ್ಯಗಳು, ಮಾತಿಗೂ ಕೃತಿಗೂ ನಡುವೆ ತೆರೆದುಕೊಂಡ ಕಂದರಗಳು, ಪ್ರಜಾಪ್ರಭುತ್ವದ ಹೆಸರಿನಲ್ಲಿ ವ್ಯಕ್ತಿಯ ವೈಶಿಷ್ಟ್ಯಗಳನ್ನೇ ತೊಡೆದು ಹಾಕುವ ಹಾಗೂ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯಿಸುವ ಸನ್ನಾಹಗಳು; ಅಧ್ಯಾತ್ಮದ ಹೆಸರಿನಲ್ಲಿ ನಡೆಯುವ ಆತ್ಮವಂಚನೆಗಳು; ಯಂತ್ರನಾಗರಿಕತೆಯ ನಗರ ಗೊಂದಲಗಳಲ್ಲಿ ವಿಚ್ಛಿದ್ರವಾದ ಜೀವನ ವಿಧಾನಗಳು; ಈ ಪರಿಸ್ಥಿತಿಯಲ್ಲಿ ತಮ್ಮ ತಮ್ಮ ಬೇರುಗಳನ್ನು ಕಳೆದುಕೊಂಡು ಯಾವುದೇ ಹೊಸ ಶ್ರದ್ಧೆಯ ಆಲಂಬನವನ್ನೂ ಕಾಣದೆ, ಏಕಾಂಗಿಯಾಗಿ, ಅನಾಥವಾಗಿ, ತೊಳಲಾಡುವ ಹೊಸ ಜನಾಂಗದ ತಾಕಲಾಟಗಳು – ಇತ್ಯಾದಿಗಳ ಮೂಲಕ ಅವ್ಯವಸ್ಥೆಗೊಂಡ ಬದುಕಿನ ಸಂವೇದನೆಗಳಿಗೆ ತಕ್ಕ ಅಭಿವ್ಯಕ್ತಿಯನ್ನು ಕೊಡಬಲ್ಲ ಹೊಸ ಸಾಹಿತ್ಯದ ಅಗತ್ಯವೊಂದನ್ನು ಈ ಕಾಲದ ಪ್ರಜ್ಞಾವಂತರು ಕಂಡುಕೊಂಡರು. ನವೋದಯ ಸಾಹಿತ್ಯದ ನಿಲುವುಗಳಾಗಲೀ ಅದು ರೂಪಿಸಿದ ಕಾವ್ಯಭಾಷೆಯಾಗಲೀ ಬದಲಾದ ಪರಿಸರದ ಸಮರ್ಥ ಪ್ರತಿನಿಧಿಯಾಗಲಾರದು. ಆದಕಾರಣ, ನಿಂತಲ್ಲೇ ನಿಂತು ಅರ್ಥವನ್ನು ಕಳೆದುಕೊಂಡ ಕಾವ್ಯಕ್ಕೆ ಹೊಸಚಾಲನೆಯನ್ನು ತಂದುಕೊಡಬೇಕೆಂಬ ಕಳಕಳಿಗೆ ಮೊದಲ ವಕ್ತಾರರಾದವರು ವಿ.ಕೃ.ಗೋಕಾಕರು; ಅನಂತರ ಶ್ರೀ ಗೋಪಾಲಕೃಷ್ಣ ಅಡಿಗರು. ಇವರಿಬ್ಬರ ಯೋಚನೆ ಹಾಗೂ ಪ್ರಯತ್ನಗಳಿಂದಾಗಿ ಐವತ್ತರ ದಶಕದಲ್ಲಿ ಕನ್ನಡದಲ್ಲಿ ನವ್ಯಕಾವ್ಯ ಎಂಬ ಪ್ರಕಾರವೊಂದು ಪ್ರಾರಂಭಗೊಡು ಆವತ್ತಿನ ಇಡೀ ಸಾಹಿತ್ಯದ ಚಲನಶೀಲತೆಗೆ ಕಾರಣವಾದ ಧೋರಣೆಗಳು ರೂಪುಗೊಂಡು ಸಾಹಿತ್ಯದ ಇತರ ಪ್ರಕಾರಗಳಿಗೂ ಪ್ರೇರಕವಾದ ನವ್ಯ ಸಾಹಿತ್ಯ ಚಳುವಳಿಯೊಂದು ಹುಟ್ಟಿಕೊಂಡಿತು.

ಐವತ್ತರ ದಶಕದ ವೇಳೆಗೆ, ಕನ್ನಡ ಕಾವ್ಯದಲ್ಲಿ ಬದಲಾವಣೆಯೊಂದರ ಅಗತ್ಯವಿದೆ ಎಂಬ ದನಿ ಎತ್ತಿದ ಗೋಕಾಕರಾಗಲೀ, ಅಡಿಗರಾಗಲೀ ಬರೆಯಲು ಪ್ರಾರಂಭಿಸಿದ್ದು ನವೋದಯದ ಸಂದರ್ಭದಲ್ಲಿಯೇ. ಮೂಲತಃ ಇಬ್ಬರೂ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದವರೆ; ಇಂಗ್ಲಿಷಿನ ಮೂಲಕ ಪಶ್ಚಿಮದ ಸಾಹಿತ್ಯವನ್ನು ಕರಗತ ಮಾಡಿಕೊಂಡವರೇ. ಆದರೆ ನವೋದಯದ ಪ್ರಾರಂಭದಿಂದಲೇ ಬೇಂದ್ರೆಯವರ ಗೆಳೆಯರ ಗುಂಪಿನ ಜತೆಗೆ ಕಾವ್ಯಜೀವನವನ್ನು ಪ್ರಾರಂಭಿಸಿದ ಗೋಕಾಕರೂ, ನವೋದಯದ ಉತ್ಕರ್ಷ ಕಾಲದಲ್ಲಿ ಕಾವ್ಯ ಜೀವನ ಪ್ರಾರಂಭಿಸಿದ ಅಡಿಗರೂ – ಇಬ್ಬರಿಗೂ, ೧೯೫೦ರ ದಶಕದ ವೇಳೆಗೆ ಕನ್ನಡ  ಕಾವ್ಯದಲ್ಲಿ ಮತ್ತೊಂದು ಬದಲಾವಣೆಯಾಗಬೇಕೆನ್ನುವ ವಿಚಾರದಲ್ಲಿ ಸಾಮ್ಯವಿರುವಂತೆ ಕಂಡು ಬಂದರೂ, ಹಾಗೆ ಬದಲಾಗಬೇಕಾದ ಕಾವ್ಯದ ನಿಚ್ಚಳವಾದ ಕಲ್ಪನೆಗೆ ಅಡಿಗರಲ್ಲಿ ಸ್ಪಷ್ಟವೂ ಖಚಿತವೂ ಆಗಿ ಕಾಣಿಸಿದಂತೆ, ಗೋಕಾಕರಲ್ಲಿ ಕಾಣಿಸಿಕೊಳ್ಳಲಿಲ್ಲ. ಹೀಗೆ ಬದಲಾಗಬೇಕೆಂಬ ಇಚ್ಛೆಯನ್ನೂ, ಆ ಬದಲಾಗುವ ಕಾವ್ಯಕ್ಕೆ ‘ನವ್ಯಕಾವ್ಯ’ ಎಂಬ ನಾಮಕರಣವನ್ನು ಮಾಡುವುದರ ಮೂಲಕ ಗೋಕಾಕರು ಚಾರಿತ್ರಿಕವಾಗಿ ಈ ಚಳುವಳಿಯ ಮೊದಲಿಗರಾದರೂ, ಗೋಕಾಕರಿಗೆ ನವ್ಯತೆ ಅನ್ನುವುದು ಒಂದು ತಾಂತ್ರಿಕ ಅವಶ್ಯಕತೆಯಾಯಿತೇ ವಿನಾ ಹೊಸ ಸಂವೇದನೆಯ ತುರ್ತಿಗೆ ಅಗತ್ಯವಾದ ಒಂದು ಅಭಿವ್ಯಕ್ತಿ ಎಂದು ಅನ್ನಿಸಿದಂತೆ ತೋರುವುದಿಲ್ಲ. ೧೯೫೦ರ ಮುಂಬೈ ಸಾಹಿತ್ಯ ಸಮ್ಮೇಳನದಲ್ಲಿ ಗೋಕಾಕರು “ನವ್ಯಕಾವ್ಯವೆಂದರೆ ಆಧುನಿಕ ಕಾವ್ಯಕ್ಕಿಂತ (ಅಂದರೆ ನವೋದಯಕ್ಕಿಂತ) ಬೇರೆಯಾದ ಕಾವ್ಯ; ವಿಶೇಷ ತಂತ್ರ ವಿಧಾನಗಳನ್ನು ಪಡೆದ ಕಾವ್ಯ” ಎಂದು ಹೇಳುತ್ತಾರೆ. ಆದರೆ ಅಡಿಗರಿಗೆ, ಅದು ಹೊಸ ಜೀವನ ದೃಷ್ಟಿಯ ಅಭಿವ್ಯಕ್ತಿಗಾಗಿ, ಇದುವರೆಗಿನ ಕಾವ್ಯಕ್ಕಿಂತ ಭಿನ್ನವಾಗಿ ರೂಪು ತಳೆಯಬೇಕಾದ ಕಾವ್ಯ ಎನ್ನುವ ಪ್ರಜ್ಞೆ ಇದ್ದುದರಿಂದ, ಅವರು ನವೋದಯದ ರೀತಿಯಲ್ಲಿ ಇನ್ನು ಮುಂದೆ ಬರೆಯುವುದರಲ್ಲಿ ಅರ್ಥವಿಲ್ಲ ಎಂಬುದರ ಕಡೆಗೆ ಗಮನ ಸೆಳೆಯುತ್ತ “ ಆ ಸಂಪ್ರದಾಯದ ಸತ್ವ ಈಗ ತೀರಿದೆ. ಅದಕ್ಕೆ ಅವನತಿ ಬಂದಿದೆ. ಅದರ ದೋಷಗಳೆಲ್ಲ ಈಗ ಎದ್ದು ಕಾಣುತ್ತಿವೆ. ನೆಲದ ಮೇಲೆ ಕಾಲೂರಿ ನಿಂತೇ ನಕ್ಷತ್ರವನ್ನು ತಡಕುತ್ತಿದ್ದ ಕಣ್ಣು ಈಗ ನೆಲ ಬಿಟ್ಟು ಮೇಲೇರಿ ವೇದಾಂತದ ಮಂಜಿನಲ್ಲಿ ಮರೆಯಾಗಿ ಹೋಗುತ್ತಿದೆ…. ಇಂಥ ಕಾಲದಲ್ಲಿ ಕಾವ್ಯಕ್ಕೆ ಮತ್ತೆ ವಾಸ್ತವದ ರಕ್ತದಾನ ನಡೆಯಬೇಕು. ಮತ್ತೆ ಮಣ್ಣಿನ ವಾಸನೆ ಹೊಡೆಯಬೇಕು. ಈ ಜಗತ್ತನ್ನು ಬಿಟ್ಟು ಕಾವ್ಯ ಬದುಕಲಾರದು ಎಂಬುದನ್ನು ಮತ್ತೆ ಮತ್ತೆ ಕವಿಗಳು ಅರಿಯಬೇಕಾಗುತ್ತದೆ. ಆದರೆ ಕೇವಲ ವಾಸ್ತವವಾದುದು, ಇಂದ್ರಿಯ ಗಮ್ಯವಾದುದು ಮಾತ್ರವೇ ಕಾವ್ಯದ ವಸ್ತುವಾಗಲಾರದು. ಈ ದೃಷ್ಟಿಯಿಂದ ಆಧುನಿಕ ಇಂಗ್ಲಿಷ್ ಕಾವ್ಯದ ಪ್ರಸಿದ್ಧ ಕವಿಗಳಾದ ಈಲಿಯಟ್, ಆಡೆನ್, ಮುಂತಾದವರಿಂದ ನಾವು ಇನ್ನು ಮುಂದೆ ಸ್ಫೂರ್ತಿಯನ್ನು ಪಡೆಯುವುದು ಅತ್ಯಗತ್ಯ” ಎಂದು, ಈ ಕಾವ್ಯಮಾರ್ಗದ ತತ್ವಪ್ರಣಾಲಿಯನ್ನು ಮಂಡಿಸುತ್ತಾರೆ.

ಮೊದಲು ಕಾವ್ಯಕೇಂದ್ರಿತವಾಗಿ ರೂಪುಗೊಂಡ ಈ ಚಳುವಳಿಯ ಸಿದ್ಧಾಂತಗಳು, ಈ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ಹುಟ್ಟಿದ ಕತೆ, ಕಾದಂಬರಿ ಹಾಗೂ ಸಾಹಿತ್ಯ ವಿಮರ್ಶೆಗಳಿಗೂ ಬುನಾದಿಯಾಗಿವೆ. ಸುಮಾರು ಕಾಲು ಶತಮಾನಗಳ ಕಾಲ ಅತ್ಯಂತ ಕ್ರಿಯಾಶೀಲವಾದ ಈ ಚಳುವಳಿಯ ಮುಖ್ಯ ಲಕ್ಷಣವೆಂದರೆ ಒಂದು  ಬಗೆಯ ಪ್ರಖರವಾದ ವಿಮರ್ಶನ ಪ್ರಜ್ಞೆ. ಇದರಿಂದಾಗಿ ಇದು ಅನುಭವಗಳನ್ನು, ವ್ಯಕ್ತಿ ಪ್ರಜ್ಞೆಯ ನಿಕಷದಲ್ಲಿ ಒರೆಗೆ  ಹಚ್ಚಿದ್ದಲ್ಲದೆ ಸ್ವೀಕರಿಸಲಾರದು. ಹಿಂದಿನ ಬರೆಹದ ಕ್ರಮದಲ್ಲಿ ಸಾಮಾಜಿಕ ಜೀವನ, ಸಾಮಾಜಿಕ ಸಮಸ್ಯೆಗಳು ಮುಖ್ಯವಾಗಿದ್ದರೆ, ಇಲ್ಲಿ ವ್ಯಕ್ತಿಯ ವೈಯಕ್ತಿಕ ಸಮಸ್ಯೆಗಳು ಮುಖ್ಯವಾಗುತ್ತವೆ. ಹಾಗೆಯೇ ವ್ಯಕ್ತಿಯ ಅಂತರಾಳದ ಬದುಕನ್ನು ಶೋಧಿಸಿ ನೋಡುತ್ತಾ, ಅವನ ಪ್ರಜ್ಞೆಯ ಹಲವು ಸ್ತರಗಳಿಗೆ ಅಭಿವ್ಯಕ್ತಿಯನ್ನು ನೀಡುವುದರ ಮೂಲಕ ಮನುಷ್ಯನನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯನ್ನು ಇಲ್ಲಿ ಕಾಣಬಹುದು. ಹಾಗೆಯೇ ಬದುಕನ್ನು ತೀರ ಸರಳವಾದ ಗ್ರಹಿಕೆಗೆ ಒಳಪಡಿಸದೆ ಮನುಷ್ಯಜೀವನವನ್ನು ಅದರ ಎಲ್ಲಾ ಸಂಕೀರ್ಣತೆಗಳೊಂದಿಗೆ, ಸಂಕೇತ – ಪ್ರತೀಕಗಳ ಭಾಷೆಯಲ್ಲಿ ಅಭಿವ್ಯಕ್ತ ಪಡಿಸುವುದು ನವ್ಯ ಸಾಹಿತ್ಯದ ವಿಧಾನವಾಗಿದೆ.

ಕಾವ್ಯದ ಭಾಷೆಯನ್ನು ಕುರಿತ ಈ ಚಳುವಳಿಯ ನಿಲುವುಗಳು, ನವೋದಯ ಕಾವ್ಯಕ್ಕೆ ಕೈತೋರಿದ ಪ್ರತಿಕ್ರಿಯೆಗಳಾಗಿವೆ. ನವೋದಯ ಕಾವ್ಯದ ಅಚ್ಚುಕಟ್ಟಾದ ಛಂದೋ ಬಂಧಗಳನ್ನು ಮುರಿದ ನವ್ಯ ಕಾವ್ಯವು ಮುಕ್ತ ಅಥವಾ ಸ್ವಚ್ಛಂದ ಛಂದೋರೂಪವೊಂದನ್ನು ಪ್ರತಿಪಾದಿಸುತ್ತದೆ ಮತ್ತು ಕಾವ್ಯ ಅನ್ನುವುದು ಆಡುಮಾತನ್ನು ಬಳಸಬೇಕು, ಕಾವ್ಯ ಮಾತನಾಡಿದ ಹಾಗಿರಬೇಕು, ಜತೆಗೆ ಕಾವ್ಯದ ಭಾಷೆಯನ್ನು ಸಂಗೀತದ ಸಾಹಚರ್ಯದಿಂದ ಪಾರುಮಾಡಬೇಕು- ಇವು ನವ್ಯ ಚಳುವಳಿಯಲ್ಲಿ ಭಾಷೆಯನ್ನು ಕುರಿತ ನಿಲುವುಗಳಾಗಿವೆ. ಈ ಕೆಲವು ಲಕ್ಷಣಗಳಿಂದ ನವ್ಯಕಾವ್ಯದ ಭಾಷೆಗೆ ಒಂದು ರೀತಿಯ  ನಾಟ್ಯದ ಸಂವಾದಮಯತೆ ಪ್ರಾಪ್ತವಾದರೂ, ಅದರ ಮುಕ್ತ ಛಂದೋವಿಧಾನ ಬರಬರುತ್ತಾ ಒಂದು ಬಗೆಯ ಏಕತಾನತೆಗೆ ಅವಕಾಶಮಾಡಿಕೊಟ್ಟಿತು.

ನವ್ಯಕಾವ್ಯವು ತನಗೆ ಸಮೀಪಕಾಲದ ನವೋದಯ ಕಾವ್ಯದ ದೋಷದೌರ್ಬಲ್ಯಗಳನ್ನು ಉತ್ಪ್ರೇಕ್ಷಿಸುತ್ತ, ಅದನ್ನೊಂದು ಪ್ರತಿಪಕ್ಷವೆಂಬಂತೆ ಭಾವಿಸುತ್ತ, ಆ ಕಾವ್ಯದ ಬಗ್ಗೆ ಒಂದು ರೀತಿಯ ಅರುಚಿಯನ್ನು ಹುಟ್ಟಿಸುವುದರಲ್ಲಿ ಯಶಸ್ವಿಯಾಯಿತು. ಒಂದು ರೀತಿಯಲ್ಲಿ ಒಂದು ಪರಂಪರೆಯ ನಿರಾಕರಣೆಯ ನಿಲುವಿನಂತೆ ತೋರುತ್ತ, ‘ನಡೆದು ಬಂದ ದಾರಿ ಕಡೆಗೆ ತಿರುಗಿಸಬೇಡ, ಕಣ್ಣ ಹೊರಳಿಸಬೇಡ’ ಎಂಬ ಅಡಿಗರ ಘೋಷಣೆಯ ಮೂಲಕ ಗಟ್ಟಿಗೊಳ್ಳುತ್ತ, ನವ್ಯಕಾವ್ಯದ ಬಗೆಗಷ್ಟೇ ಗಮನವನ್ನು ಕೇಂದ್ರೀಕರಿಸುವ ತಂತ್ರವೂ ಆದಂತೆ ತೋರುತ್ತದೆ. ಆದರೆ, ನಿಜವಾಗಿ ನೋಡಿದರೆ ನವ್ಯ ಸಾಹಿತ್ಯ, ಪರಂಪರೆಯ ವಿರೋಧಿಯಲ್ಲ. ನಿಜವಾದ ಕವಿಗೆ ಪರಂಪರೆಯ ಅರಿವು ಎಂಥದು, ಅದನ್ನು ಅವನು ಹೇಗೆ ರಕ್ತಗತಮಾಡಿಕೊಳ್ಳಬೇಕು ಮತ್ತು ಈ ಬಗೆಯ ಚಾರಿತ್ರಿಕ ಪ್ರಜ್ಞೆಯಿಲ್ಲದವನ ಕೃತಿ ಗಟ್ಟಿ ಮುಟ್ಟಾಗಲಾರದು ಎಂದು ನವ್ಯಕಾವ್ಯದ ಪ್ರೇರಕ ಹಾಗೂ ಮಾದರಿಯಾದ ಟಿ.ಎಸ್. ಎಲಿಯಟ್ ಹೇಳಿದ ಮಾತುಗಳನ್ನು ಕನ್ನಡದ ನವ್ಯರು ಕೇಳಿಸಿಕೊಳ್ಳಲಿಲ್ಲ ಎಂದು ನಾವು ತಿಳಿಯಬೇಕಾಗಿಲ್ಲ. ಪರಂಪರೆಯನ್ನು ಕುರಿತು ಎಲಿಯಟ್ ಹೇಳಿದ್ದನ್ನು ಕನ್ನಡ ನವ್ಯ ಕಾವ್ಯದ ವಕ್ತಾರರು ಬಲ್ಲವರಾದರೂ ಮತ್ತು ಅಡಿಗರಿಗೆ ಪಾರಂಪರಿಕ ಮೌಲ್ಯಗಳ ಬಗ್ಗೆ ಗಾಢವಾದ ಗೌರವವಿರುವುದಾದರೂ, ನವೋದಯ ಕಾವ್ಯ ಪರಂಪರೆಯ ವಿಚಾರದಲ್ಲಿ ಅಡಿಗರ ಹಾಗೂ ಅವರ ಅನುಯಾಯಿಗಳ ನಿಲುವು ತೀರಾ ಅನುದಾರವಾದದ್ದೆಂದು ಹೇಳದೆ ವಿಧಿಯಿಲ್ಲ. ಅವರ ನಿಲುವು ಹೀಗಾದುದಕ್ಕೆ ಅವರಿಗೆ ತಮ್ಮದೇ ಆದ ವೈಯಕ್ತಿಕ ಕಾರಣಗಳಿರಬಹುದು. ಆದರೆ ನವ್ಯ ಕಾವ್ಯ ಚಳುವಳಿಯ ಸೆಳೆತಕ್ಕೆ ಸಿಕ್ಕಿದ ಎಷ್ಟೋ ಸಮರ್ಥ ತರುಣರು ಮಾತ್ರ, ನವೋದಯ ಕಾವ್ಯ ಸೊಗಸು-ಸ್ವಾರಸ್ಯಗಳಿಂದ, ಮತ್ತು ಅದರಿಂದ ಪಡೆಯಬಹುದಾಗಿದ್ದ ಪುಷ್ಟಿಯಿಂದ ಹಾಗೂ ಕಲಿಯಬಹುದಾಗಿದ್ದ ಪಾಠಗಳಿಂದ ವಂಚಿತರಾದರು. ಜತೆಗೆ, ನವ್ಯ ಕಾವ್ಯ ನವೋದಯದ ಜನ ಸಂವಹನ ಗುಣವನ್ನು ಅದರ ಜನಪ್ರಿಯತೆಯನ್ನೂ ತೀರಾ ಗುಮಾನಿಯಿಂದ ನೋಡುತ್ತ, ಕಾವ್ಯ ಅನ್ನುವುದು ಕೆಲವೇ ಬುದ್ಧಿ ಜೀವಿಗಳ ಕಾಳಜಿಯ ಸಂಗತಿಯೆಂಬಂತೆ, ಒಂದು ರೀತಿಯ ವಿವಿಕ್ತ ಪರಿಮಿತ ಓದುಗ ವರ್ಗವನ್ನು ನಿರ್ಮಿಸುವುದರಲ್ಲಿ ನಿರತವಾಯಿತು. ಹೀಗಾಗಿ ಬರವಣಿಗೆ ಒಂದು ರೀತಿಯಲ್ಲಿ ಸಂಕೀರ್ಣ-ಜಟಿಲವೂ, ಬೌದ್ಧಿಕವೂ ಆಯಿತೆಂಬುದರ ಜತೆಗೆ, ನಗರಜೀವನದ ಗೊಂದಲಗಳೂ, ಮನುಷ್ಯನ ಪಾತಾಳ ಮನಸ್ಸಿನ ಅಕರಾಳ ವಿಕರಾಳಗಳೂ, ಹತಾಶೆ-ಭಯ-ಏಕಾಕಿತನಗಳೂ, ಪ್ರೇಮದ ಬದಲು ಕಾಮವೂ, ಸೌಂದರ್ಯದ ಬದಲು ವಿಕೃತಿಯೂ, ದೇಶಾಭಿಮಾನದ ಬದಲು ಕೇವಲ ಭ್ರಷ್ಟರಾಜಕಾರಣದ ವಿಡಂಬನೆಯೂ, ಈ ಕಾವ್ಯದ ಹೆಚ್ಚು ಭಾಗವನ್ನು ತುಂಬಿಕೊಂಡವುಗಳಾಗಿವೆ.

ನವ್ಯ ಚಳುವಳಿ, ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ತಿರುವನ್ನು ತಂದುಕೊಟ್ಟು, ಪ್ರಖರವಾದ ಒಂದು ವಿಮರ್ಶನ ಪ್ರಜ್ಞೆಯ ಬೆಳವಣಿಗೆಗೆ ಕಾರಣವಾಯಿತೆಂಬುದು ಅದರ  ಮಹತ್ವದ ಕೊಡುಗೆಯಾಗಿದೆ. ನವ್ಯಕತೆ, ನವ್ಯಕಾದಂಬರಿಗಳ ಮೂಲಕ, ನವೋದಯದ ಕಥಾ ಸಾಹಿತ್ಯಕ್ಕಿಂತ ಭಿನ್ನವಾದ, ಹಾಗೂ ಒಂದು ಪಾತ್ರದ ಪ್ರಜ್ಞೆಯ ಮೂಲಕ ಜೀವನವನ್ನು ಗ್ರಹಿಸುವ ಮತ್ತು ಚಿತ್ರಿಸುವ ಕಲಾ ವಿಧಾನವನ್ನು ಈ ಚಳುವಳಿ ರೂಢಿಸಿತು. ಸುಮಾರು ಕಾಲು ಶತಮಾನಗಳ ಕಾಲ ಕನ್ನಡ ಸಾಹಿತ್ಯವನ್ನು ಕ್ರಿಯಾಶೀಲವನ್ನಾಗಿಸಿದ ಈ ಚಳುವಳಿ, ನವೋದಯ ಚಳುವಳಿಯಷ್ಟು ವಿಸ್ತಾರವನ್ನು, ಬಹುಮುಖತ್ವವನ್ನು, ಸಮೃದ್ಧಿಯನ್ನು ಪಡೆದುಕೊಳ್ಳದೆ, ತನ್ನದೇ ಆದ ಗಟ್ಟಿಯಾದ ಪರಂಪರೆಯೊಂದನ್ನು ನಿರ್ಮಿಸಲು ಸಾಧ್ಯವಾಗದುದಕ್ಕೆ ಅದರ ಅತಿಬೌದ್ಧಿಕ ನಿಲುವುಗಳೂ ಮತ್ತು ಅದರ ಪ್ರತ್ಯೇಕತಾ ಧೋರಣೆಗಳೂ ಕಾರಣವೆಂದು ತೋರುತ್ತದೆ.

ಎಪ್ಪತ್ತರ ದಶಕದ ವೇಳೆಗೆ ಪ್ರಾರಂಭವಾದ ದಲಿತ-ಬಂಡಾಯ ಸಾಹಿತ್ಯ ಚಳುವಳಿ, ಕನ್ನಡ ಸಾಹಿತ್ಯದ ನಾಲ್ಕನೆಯ ಆಯಾಮವಾಗಿದೆ. ನಲವತ್ತರ ದಶಕದ ಪ್ರಗತಿಶೀಲ ಚಳುವಳಿಯ ಸಂದರ್ಭದಲ್ಲಿ ಎಡಪಂಥೀಯ ಕಾಳಜಿಗಳಿಂದ ಗಟ್ಟಿಗೊಂಡ ಜನಪರ ನಿಲುವುಗಳು, ಮತ್ತು ನವ್ಯ ಕಾವ್ಯದ ಅತಿಬೌದ್ಧಿಕ ನಿಲುವುಗಳಿಗೆ, ಎಚ್ಚೆತ್ತ ಹೊಸ ಜನಾಂಗದ ಪ್ರಜ್ಞೆ ಅತ್ಯಂತ ಗಾಢವಾಗಿ ತೋರಿದ ಪ್ರತಿಕ್ರಿಯೆಗಳೂ ಈ ಚಳುವಳಿಯ ಮೂಲಧೋರಣೆಗಳಾಗಿವೆ.

ದಲಿತ-ಬಂಡಾಯ ಸಾಹಿತ್ಯ ಎಂಬುದು ಶತಶತಮಾನಗಳ ಕಾಲ ಮೇಲಿನ ಎಲ್ಲಾ ಸ್ತರಗಳವರಿಂದ ಶೋಷಣೆ ಮತ್ತು ಅವಮಾನಗಳಿಗೆ ಒಳಗಾದ, ಸಾಮಾಜಿಕ ಸ್ತರವೊಂದು ಮೊಟ್ಟಮೊದಲಿಗೆ, ತನ್ನ ನೋವುಗಳಿಗೆ, ಸಿಟ್ಟುಗಳಿಗೆ ಅಕ್ಷರ ರೂಪದ ಅಭಿವ್ಯಕ್ತಿಯನ್ನು ನೀಡಲು ಪ್ರಾರಂಭವಾದುದರ ಪರಿಣಾಮವಾಗಿದೆ. ಬಂಡಾಯ ಅಥವಾ ಪ್ರತಿಭಟನೆ ಈ ಸಾಹಿತ್ಯದ ಮುಖ್ಯ ಲಕ್ಷಣವಾಗಿದೆ. ಹಾಗೆ ನೋಡಿದರೆ ಬಂಡಾಯ ಅಥವಾ ಪ್ರತಿಭಟನೆ ಎಂಬುದು ಮೊದಲಿನಿಂದಲೂ, ಇರುವ ಹಾಗೂ ಗುರುತಿಸಬಹುದಾದ ಒಂದು ಮನೋಧರ್ಮವಾದರೂ, ಅದು ಮೊಟ್ಟಮೊದಲಿಗೆ ಒಂದು ಮೌಲ್ಯವೆಂಬಂತೆ ಕ್ರಿಯಾಶೀಲವಾದದ್ದು ಇವತ್ತಿನ ದಲಿತ ಬಂಡಾಯ ಸಾಹಿತ್ಯದಲ್ಲಿಯೇ. ಹೀಗಾಗಿ ಇದು ನಿಜವಾದ ಅರ್ಥದಲ್ಲಿ ಪ್ರತಿಭಟನಾ ಸಾಹಿತ್ಯ. ಹಾಗೆಯೇ, ಹೀಗೆ ಬಂಡಾಯ ಏಳುವವರಿಗೆ, ಶೋಷಕ ಶಕ್ತಿಗಳ ಬಗ್ಗೆ  ನಿಚ್ಚಳವಾದ ಅರಿವು ಹಾಗೂ ಅದನ್ನು ಕುರಿತ ಪ್ರತಿಭಟಿಸುವ ಧೈರ್ಯ ಲಭಿಸಿರುವುದು ಮಹತ್ವದ ಸಂಗತಿಯಾಗಿದೆ. ಈ ದೃಷ್ಟಿಯಿಂದ ಬಂಡಾಯ ಸಾಹಿತ್ಯ ಚಳುವಳಿ ಎಂಬುದು ಒಂದು ಚಾರಿತ್ರಿಕ ಅನಿವಾರ್ಯತೆಯಾಗಿದೆ.

ಈ ಚಾರಿತ್ರಿಕ ಅನಿವಾರ್ಯತೆ ರೂಪುಗೊಂಡದ್ದರ ಹಿಂದೆ ಹಲವಾರು ಸಾಂಸ್ಕೃತಿಕ ಒತ್ತಡಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಗಾಂಧೀಜಿಯವರ ದಲಿತೋದ್ಧಾರದ ನಿಲುವುಗಳು, ಮತ್ತು ಅದಕ್ಕಿಂತಲೂ ಮುಖ್ಯವಾಗಿ ದಲಿತರಲ್ಲಿ ಆತ್ಮಗೌರವವನ್ನು, ಹೋರಾಟದ ಕೆಚ್ಚನ್ನೂ ಪ್ರಚೋದಿಸಿದ ಅಂಬೇಡ್ಕರ್ ಅವರ ವಿಚಾರಧಾರೆಗಳು. ಜತೆಗೆ ಭಾರತೀಯ ಸ್ವಾತಂತ್ರ್ಯ ಪ್ರಾಪ್ತಿಯಿಂದ ಸಮಾಜದ ನಿರ್ಲಕ್ಷಿತ ಸ್ತರಗಳವರಿಗೂ ಲಭ್ಯವಾದ ಶಿಕ್ಷಣದ ಸವಲತ್ತು, ಮೀಸಲಾತಿ ಕ್ರಮಗಳು, ಮತ್ತು ಸಮಾನ ಅವಕಾಶಗಳ ಸಾಧ್ಯತೆಗಳು- ಇತ್ಯಾದಿಗಳ ಕಾರಣದಿಂದ ಶತಮಾನಗಳ ಕಾಲ ನಿರ್ಲಕ್ಷ್ಯಕ್ಕೆ ಹಾಗೂ ತುಳಿತಕ್ಕೆ ಒಳಗಾದ ಸಾಮಾಜಿಕ ಸ್ತರವೊಂದು ತನ್ನ ಅನುಭವಗಳನ್ನು ತನ್ನದೇ ಆದ siಷೆಯಲ್ಲಿ ತೋಡಿಕೊಳ್ಳಲು ಸಾಧ್ಯವಾಯಿತು. ಅಲ್ಲದೆ ಭಾರತೀಯ ಪರಿಸರದ ಲೋಹಿಯಾ ಹಾಗೂ ಜೆ.ಪಿ. ಚಳುವಳಿಗಳು, ೧೯೭೪ರಂದು ಕರ್ನಾಟಕದಲ್ಲಿ ರೂಪುಗೊಂಡ ಬರಹಗಾರರ ಒಕ್ಕೂಟ, ರೈತ ಚಳುವಳಿ, ಜಾತಿ ವಿನಾಶ ಸಮ್ಮೇಳನ ಇತ್ಯಾದಿಗಳೂ, ಬಂಡಾಯ ಚಳುವಳಿಯ ಸೈದ್ಧಾಂತಿಕ ನೆಲೆಯನ್ನು ರೂಪಿಸುವುದರಲ್ಲಿ ತಕ್ಕ ಪ್ರಭಾವವನ್ನು ಬೀರಿ, ೧೯೭೯ ರಲ್ಲಿ ಪ್ರಥಮ ಬಂಡಾಯ ಸಾಹಿತ್ಯ ಸಂಘಟನೆಯೊಂದು ಪ್ರಾರಂಭವಾಯಿತು.

ಸಾಹಿತ್ಯಕವಾಗಿ ಹೇಳುವುದಾದರೆ, ಕನ್ನಡದ ದಲಿತ-ಬಂಡಾಯ ಚಳುವಳಿಗೆ, ಇದೇ ಬಗೆಯ ಜಾಗತಿಕ ಹಾಗೂ ಭಾರತೀಯ ಪರಿಸರದ ಸಾಹಿತ್ಯ ಚಳುವಳಿಗಳೂ ಪ್ರೇರಣೆಯನ್ನೊದಗಿಸಿವೆ. ಪಶ್ಚಿಮದ ಕಪ್ಪು ಕಾವ್ಯ, ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳುವಳಿ, ತೆಲುಗಿನ ದಿಗಂಬರ ಕಾವ್ಯದ ಧೋರಣೆಗಳೂ, ಕನ್ನಡ ಕವಿಗಳನ್ನು ಪ್ರಭಾವಿಸಿವೆ. ಒಂದು ಮಾತಿನಲ್ಲಿ ಹೇಳುವುದಾದರೆ ದಲಿತ – ಬಂಡಾಯ ಚಳುವಳಿ ಎಡಪಂಥೀಯ ನಿಲುವುಗಳನ್ನೊಳಗೊಂಡ, ಪ್ರತಿಭಟನೆಯನ್ನೆ ತನ್ನ ಕೇಂದ್ರ ಕಾಳಜಿಯನ್ನಾಗಿ ಮಾಡಿಕೊಂಡ ಒಂದು ಜನಪರ ಸಾಹಿತ್ಯ ಚಳುವಳಿಯಾಗಿದೆ.

ಈವರೆಗಿನ ಮಾತುಗಳಲ್ಲಿ ದಲಿತ-ಬಂಡಾಯ ಪದಗಳನ್ನು ಒಟ್ಟೊಟ್ಟಿಗೆ ಬಳಸುತ್ತಾ, ಆ ಎರಡೂ ಪದಗಳೂ ಕೂಡಿದ ಚಳುವಳಿ ಮೂಲತಃ ಒಂದೇ ಎಂದರ್ಥ ಬರುವಂತೆ ಸೂಚಿಸಲಾಗಿದೆ. ದಲಿತ ಚಳುವಳಿ ಮತ್ತು ಬಂಡಾಯ ಚಳುವಳಿ ಎಂಬ ಎರಡೂ ಚಳುವಳಿಗಳಿಗೆ ಸಮಾನವಾದ ಲಕ್ಷಣವೆಂದರೆ ಬಂಡಾಯ ಅಥವಾ ಪ್ರತಿಭಟನೆ. ಆದರೆ ಹಾಗೆ ಬಂಡಾಯವೇಳುವ ದಲಿತರು ಬರೆದ ಸಾಹಿತ್ಯವನ್ನು ದಲಿತ ಸಾಹಿತ್ಯ ಎಂದೂ, ಒಟ್ಟಾರೆಯಾಗಿ ಪ್ರತಿಭಟನೆಯ ಅಥವಾ ಬಂಡಾಯದ ಮನೋಧರ್ಮವನ್ನೇ ವಿಶಿಷ್ಟ ರೀತಿಯಲ್ಲಿ ಅಭಿವ್ಯಕ್ತಪಡಿಸುವ ದಲಿತೇತರ ವರ್ಗದವರು ಬರೆದ ಸಾಹಿತ್ಯವನ್ನು ಬಂಡಾಯ ಸಾಹಿತ್ಯವೆಂದೂ ಕರೆಯುವುದು ಅಗತ್ಯವೆಂದೂ ಕೆಲವು ವಿಮರ್ಶಕರು ಸೂಚಿಸುತ್ತಾರೆ. ಹಾಗೆಯೇ, ಈ ವಿಂಗಡಣೆಯಲ್ಲಿ ದಲಿತರು ಬರೆದದ್ದು ಮಾತ್ರವೇ ದಲಿತ ಸಾಹಿತ್ಯ ಎಂದೂ, ದಲಿತರನ್ನು ಕುರಿತು ಇತರ ವರ್ಗಗಳವರು ಬರೆದ ಸಾಹಿತ್ಯ ದಲಿತ ಸಾಹಿತ್ಯವಾಗುವುದಿಲ್ಲವೆಂದೂ ಈ ವಾದ ಮುಂದುವರಿಯುತ್ತದೆ. ಆದರೆ ದಲಿತರಾಗಲಿ ಮತ್ತಿತರರಾಗಲೀ ಬಂಡಾಯವನ್ನೇ ಒಂದು ಕೇಂದ್ರ ಕಾಳಜಿಯನ್ನಾಗಿ ಮಾಡಿಕೊಂಡು ಬರೆಯುವ ಸಾಹಿತ್ಯವನ್ನು ಬಂಡಾಯ ಸಾಹಿತ್ಯ ಎಂಬ ವಿಶಾಲಾರ್ಥದಲ್ಲಿ ಕರೆಯಬಹುದೆನ್ನುವ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.

ವಾಸ್ತವವಾಗಿ ‘ದಲಿತ’ ಎಂಬ ಮಾತಿಗೆ ತುಳಿಯಲ್ಪಟ್ಟವನು ಎಂಬ ಅರ್ಥವಿದೆ. ನಮ್ಮ ಸಾಮಾಜಿಕ ಪರಿಸರದಲ್ಲಿ ಅಸ್ಪೃಶ್ಯರಂತೆ ಇತರ ಹಿಂದುಳಿದ ವರ್ಗಗಳವರೂ ಮೇಲಿನ  ವರ್ಗಗಳವರಿಂದ ತುಳಿತಕ್ಕೆ ಶೋಷಣೆಗೆ ಒಳಗಾಗಿರುವ ಕಾರಣದಿಂದ, ಉಚ್ಚ ವರ್ಗದವರಲ್ಲದ ಎಲ್ಲರೂ ಒಂದರ್ಥದಲ್ಲಿ ದಲಿತರೇ ಆಗುತ್ತಾರಲ್ಲವೆ ಎಂಬ ಪ್ರಶ್ನೆಯೊಂದನ್ನು ಎತ್ತಲು ಅವಕಾಶವಿದೆ. ಆದರೆ “ಒಬ್ಬ ಅವಮಾನಿತ ವ್ಯಕ್ತಿ ಸ್ವಾಭಿಮಾನಿಯೂ ಆದಾಗ ಹುಟ್ಟುವ ಸಾಹಿತ್ಯಕ್ಕೆ ಒಂದು ಗುಣವಿರುತ್ತದೆ. ಅದನ್ನು ಪ್ರಪಂಚದ ಎಲ್ಲ ಕಡೆಯೂ ನಾವು ಪ್ರತಿಭಟನಾ ಸಾಹಿತ್ಯವೆಂದು ಕಾಣುತ್ತೇವೆ. ಹೀಗೆ ಅವಮಾನಿತ ಸ್ವಾಭಿಮಾನಿಯಾದವನು ಅಸ್ಪೃಶ್ಯನೂ ಆಗಿದ್ದಲ್ಲಿ ದಲಿತ ಸಾಹಿತ್ಯ ಹುಟ್ಟಿಬರುತ್ತದೆ” – ಎಂಬ ಅನಂತಮೂರ್ತಿಯವರ ವಿಶ್ಲೇಷಣೆಯಲ್ಲಿ ದಲಿತ ಹಾಗೂ ಬಂಡಾಯ ಸಾಹಿತ್ಯಗಳ ಸರಿಯಾದ ವ್ಯತ್ಯಾಸವು ನಿರೂಪಿತವಾಗಿದೆ. ಕನ್ನಡದಲ್ಲಿ ಮೊಟ್ಟಮೊದಲಿಗೆ ಈ ದಲಿತ ಧ್ವನಿ ಕಾಣಿಸಿಕೊಂಡದ್ದು ಸಿದ್ಧಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಕೃತಿಯ ಮೂಲಕ ಮತ್ತು ದೇವನೂರು ಮಹಾದೇವ ಅವರ ಕತೆಗಳ ಮೂಲಕ. ಅವರ ‘ಒಡಲಾಳ’ ಈ ಬರವಣಿಗೆಯ ಶ್ರೇಷ್ಠ ನಿದರ್ಶನವಾಗಿದೆ.

ಈಗಾಗಲೇ ಪ್ರಸ್ತಾಪಿಸಿದಂತೆ ಬಂಡಾಯ ಸಾಹಿತ್ಯ ಸಂಘಟನೆ ಪ್ರಾರಂಭವಾದದ್ದು, ೧೯೭೯ ರಂದು. ಪ್ರತಿಭಟನೆಯನ್ನು ಒಂದು ಮೌಲ್ಯವನ್ನಾಗಿ ಅಂಗೀಕರಿಸಿದ ಬರಹಗಾರರೆಲ್ಲರ ಒಕ್ಕೂಟ ಇದು. ಈ ಬಂಡಾಯ ಸಾಹಿತ್ಯದ ಮುಖ್ಯವಸ್ತು ಗ್ರಾಮೀಣ ಪರಿಸರದ ಅನುಭವ ದ್ರವ್ಯವಾಗಿದೆ. ಯಾಕೆಂದರೆ ನಿಜವಾದ ಇಂಡಿಯಾ, ನವೋದಯದವರು ಭಾವಿಸಿದಂತೆ ಕೇವಲ ನಿಸರ್ಗದ ರಮ್ಯತೆಯ ಮಡಿಲಲ್ಲಾಗಲೀ, ನವ್ಯದವರ ಗೊಂದಲಪುರದ ಬುದ್ಧಿಜೀವಿಗಳ ತಾಕಲಾಟಗಳಲ್ಲಾಗಲೀ, ಇಲ್ಲ. ಅದು ಇರುವುದು ಬಹುಸಂಖ್ಯಾತವಾದ ಹಳ್ಳಿಗಳಲ್ಲಿ. ಹಳ್ಳಿಗಳಲ್ಲಿರುವ ಈ ಅಸಂಖ್ಯಾತ ಅನಕ್ಷರಸ್ಥರು ಒಂದು ಕಡೆ ತಮಗಿಂತ ಮೇಲಿನ ವರ್ಗದವರಿಂದ, ಮತ್ತೊಂದೆಡೆ ಭ್ರಷ್ಟರಾಜಕಾರಣಿಗಳಿಂದ ಹಾಗೂ ಪುರೋಹಿತಶಾಹೀ ಕುತಂತ್ರಗಳಿಂದ ತುಳಿತಕ್ಕೆ ಹಾಗೂ ಶೋಷಣೆಗೆ ಒಳಗಾಗಿದ್ದಾರೆ. ಗ್ರಾಮೀಣ ಭಾರತದ ಈ ಶೋಷಿತ ಜನಾಂಗ, ತನ್ನೊಳಗಿನ ಸಂಕಟಗಳಿಗೆ ತನ್ನೊಳಗಿನ ರೊಚ್ಚಿಗೆ, ತನಗಾಗಿರುವ ಅನ್ಯಾಯಗಳಿಗೆ ಪ್ರತಿಭಟನೆಯ ದನಿಯನ್ನು ‘ಬಂಡಾಯ ಸಾಹಿತ್ಯ’ದ ಮೂಲಕ ಎತ್ತುತ್ತಿದೆ ಮತ್ತು ಇದು ನ್ಯಾಯವೂ ಆಗಿದೆ. ಡಾ|| ಬೆಸಗರಹಳ್ಳಿ ರಾಮಣ್ಣ, ಕುಂ. ವೀರಭದ್ರಪ್ಪ, ಕಾಳೇಗೌಡ ನಾಗವಾರ, ಚಂದ್ರಶೇಖರ ಪಾಟೀಲ, ಚನ್ನಣ್ಣವಾಲೀಕಾರ, ಅರವಿಂದ ಮಾಲಗತ್ತಿ, ಮನಜ, ಬರಗೂರು ರಾಮಚಂದ್ರಪ್ಪ ಇಂಥವರ ಕವಿತೆ, ಕಾದಂಬರಿಗಳು ಬಂಡಾಯ ಚಳುವಳಿಯ ಪ್ರತಿನಿಧಿಗಳಾಗಿವೆ.

ಈ ಬಂಡಾಯ ಬರೆಹಗಳು, ಅವುಗಳು ಗದ್ಯ ರೂಪದಲ್ಲಿರಲಿ ಅಥವಾ ಪದ್ಯ ರೂಪದಲ್ಲಿರಲಿ, ಅವು ಮೂಲತಃ ಎತ್ತರದ ದನಿಯಲ್ಲಿ ಪ್ರತಿಭಟನೆಯನ್ನು ದಾಖಲು ಮಾಡುತ್ತವೆ. ಏಕಕಾಲದಲ್ಲಿ ಇದು ಈ ಬರಹಗಳ  ಲಕ್ಷಣವೂ ಅಗಿರುವಂತೆ ಅವುಗಳನ್ನು ಕುರಿತ ಆಕ್ಷೇಪಣೆಯ ಮಾತೂ ಆಗಿದೆ. ಆದರೆ ಎತ್ತರದ ದನಿಯನ್ನು ಅದರ ಅನಿವಾರ‍್ಯವಾದ, ಆದರೆ ತಾತ್ಕಾಲಿಕವಾದ ಒಂದು ಲಕ್ಷಣವೆಂದು ಭಾವಿಸುವುದೇ ಸರಿಯಾದದ್ದು, ಮತ್ತು ಆ ದನಿ ಹಾಗಿರುವುದಕ್ಕೆ ಅದರ ಹಿಂದಿರುವ ಚಾರಿತ್ರಿಕ ಒತ್ತಡಗಳೇ ಕಾರಣ. ಎರಡನೆಯದಾಗಿ, ನವ್ಯದ, ಅತಿಬೌದ್ಧಿಕ ಹಾಗೂ ಅಂತರ್ಮುಖೀ ರಚನೆಗಳನ್ನು ಬಂಡಾಯ ಮನೋಧರ್ಮ ತಿರಸ್ಕರಿಸುತ್ತ, ಒಂದು ಬಗೆಯ ಘೋಷಣಾತ್ಮಕ ನಿಲುವಿನಿಂದ ಬಹುಜನ ಸಮ್ಮುಖವಾದ ಬರಹಗಳನ್ನು ರೂಢಿಸಿತು. ನವ್ಯಕಾವ್ಯ ನಿರಾಕರಿಸಿದ ಗೇಯತೆಯನ್ನು ಬಂಡಾಯ ಕವಿತೆ ಅಳವಡಿಸಿಕೊಂಡು, ಅದನ್ನು ಸಂವಹನದ ಮಾಧ್ಯಮವನ್ನಾಗಿ ಮಾಡಿಕೊಳ್ಳುವುದರ ಮೂಲಕ ಓದಬಲ್ಲವರಿಗೆ ಮಾತ್ರವಲ್ಲ, ಅನಕ್ಷರಸ್ಥ ಜನ ಸಮುದಾಯಕ್ಕೂ ಸಾಮಾಜಿಕ ವಾಸ್ತವಗಳನ್ನು ಅರಿವು ಮಾಡಿಕೊಟ್ಟು ಅವರಲ್ಲಿ ಹೊಸ ಎಚ್ಚರವನ್ನು ಹುಟ್ಟಿಸುವ ಕಾರ್ಯವನ್ನು ಮಾಡಿತು. ಇದರಿಂದ ಸಾಹಿತ್ಯದ ನಿಯೋಗವು, ಮುಖ್ಯವಾಗಿ ಸಾಮಾಜಿಕ ಎಚ್ಚರದ ಕಡೆಗೆ ವಿಸ್ತರಿಸಿದಂತಾಯಿತು. ಆದರೆ ಇದು ಕೇವಲ ಪ್ರಚಾರ ಹಾಗೂ ಘೋಷಣಾ ರೂಪದ ಬರೆಹಗಳಿಗಿಂತ, ಆ ಬರೆಹ ನಿಜವಾದ ಸಾಹಿತ್ಯವಾಗುವುದರಿಂದ ಮಾತ್ರವೇ ಹೆಚ್ಚು ಮೌಲಿಕವೂ ಪರಿಣಾಮಕಾರಿಯೂ ಆಗಬಲ್ಲದೆಂಬ ಪ್ರಜ್ಞೆ ಬಂಡಾಯ ಚಳುವಳಿಯ ಕೆಲವು ಮಹತ್ವದ ಬರೆಹಗಾರರಿಗೆ ಇದೆ ಎನ್ನುವುದು, ಈ ಚಳುವಳಿಯ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುವ ಸಂಗತಿಯಾಗಿದೆ.

ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಅತ್ಯಂತ ಗಮನಾರ್ಹವಾದ ಪರಿಣಾಮವೆಂದರೆ, ಬಹುಸಂಖ್ಯಾತ ಮಹಿಳೆಯರು ಸಾಹಿತ್ಯಲೋಕವನ್ನು ಪ್ರವೇಶಿಸಿದ್ದು. ಒಂದರ್ಥದಲ್ಲಿ ಈ ದೇಶದ ಮಹಿಳೆಯರೂ ‘ದಲಿತ’ರೇ ಆದ ಕಾರಣ, ದಲಿತ-ಬಂಡಾಯ ಚಳುವಳಿ ನಿರ್ಮಿಸಿದ ಹೊಸ ಎಚ್ಚರದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಂಡವರಲ್ಲಿ ಮಹಿಳೆಯರೂ ಸೇರುತ್ತಾರೆ. ಕೇವಲ ವಿದ್ಯಾವಂತ ಮಧ್ಯಮ  ವರ್ಗದ ಮಹಿಳೆಯರೇ ನವೋದಯ ಸಂದರ್ಭದಲ್ಲಿ, ಬರೆಹಗಾರರಾಗಿ ಕಾಣಿಸಿಕೊಂಡರೂ, ಅವರಲ್ಲಿ ಸಂಪ್ರದಾಯ ಪ್ರಿಯತೆಯೇ ಮುಖ್ಯವಾಗಿತ್ತೆ ಹೊರತು ತಮ್ಮನ್ನು ನಿಯಂತ್ರಿಸುತ್ತಿದ್ದ ಪಾರಂಪರಿಕ ಮೌಲ್ಯಗಳನ್ನು ಕುರಿತು ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ಪ್ರವೃತ್ತಿ (ತ್ರಿವೇಣಿ, ವೀಣಾ ಇಂಥ ಒಬ್ಬಿಬ್ಬರನ್ನು ಬಿಟ್ಟರೆ) ಅಷ್ಟಾಗಿ ಅಭಿವ್ಯಕ್ತವಾಗಲೇ ಇಲ್ಲ ಎನ್ನಬಹುದು. ಆದರೆ ಕಳೆದ ಕೆಲವು ವರ್ಷಗಳಲ್ಲಿ ವರ್ಧಿಸಿರುವ  ಮಹಿಳಾ ಬರೆಹಗಾರ್ತಿಯರೂ, ಅವರಲ್ಲಿ ಪ್ರಕಟವಾಗುತ್ತಿರುವ ಪ್ರತಿಭಟನಾ ಪ್ರವೃತ್ತಿಯೂ, ಖಂಡಿತವಾಗಿಯೂ ಈ ಬಂಡಾಯ ಚಳುವಳಿಯ ಪರಿಣಾಮಗಳಾಗಿವೆ. ಜತೆಗೆ ಕರ್ನಾಟಕದ ಉಪಸಂಸ್ಕೃತಿಯಾದ ಮುಸ್ಲಿಂ ಜನಾಂಗದ ಹಲವರೂ, ಮೊಟ್ಟಮೊದಲಿಗೆ ತಮ್ಮ ಧಾರ್ಮಿಕ – ಸಾಂಸ್ಕೃತಿಕ  ಪಟ್ಟಭದ್ರಹಿತಾಸಕ್ತಿಗಳ ಶೋಷಣೆಯನ್ನು ತಮ್ಮ ಬರೆಹಗಳ ಮೂಲಕ ದಾಖಲು ಮಾಡುತ್ತಿರುವುದೂ, ಈ ಚಳುವಳಿಯ ಚೌಕಟ್ಟಿನಲ್ಲಿಯೇ, ರಂಜಾನ್‌ದರ್ಗಾ, ಸಾರಾ ಅಬೂಬಕರ್, ಬಾನುಮುಷ್ತಾಕ್, ಫಕೀರ್ ಮಹಮದ್ ಕಟ್ಪಾಡಿ, ಬೋಳುವಾರು ಮಹಮ್ಮದ್ ಕುಂಞ – ಇಂಥವರ ಬರೆಹಗಳು ಈ ಮಾತಿಗೆ ನಿದರ್ಶನವಾಗಿವೆ.

ದಲಿತ – ಬಂಡಾಯ ಚಳುವಳಿಯ ಮತ್ತೊಂದು ಕೊಡುಗೆಯೆಂದರೆ, ನಿಜವಾದ ದಲಿತ ಹಾಗೂ ಶೋಷಿತ ಜಗತ್ತು ತನಗೆ ತಾನೇ ನೇರವಾಗಿ ತನ್ನೆಲ್ಲ ವಾಸ್ತವಗಳೊಂದಿಗೆ ಕನ್ನಡ ಸಾಹಿತ್ಯದಲ್ಲಿ ಪ್ರತ್ಯಕ್ಷವಾದದ್ದು ಒಂದು ಅಪೂರ್ವವಾದ ಘಟನೆಯಾಗಿದೆ. ದಲಿತರಲ್ಲದವರು ನೇರವಾಗಿ ಶೋಷಿತರಲ್ಲದವರು, ನಿಜವಾದ ದಲಿತರ ಹಾಗೂ ಶೋಷಿತರ ಬದುಕನ್ನು ಕುರಿತು ಬರೆಯುವುದಕ್ಕೂ, ಆಯಾ  ಅನುಭವಕ್ಕೆ ಒಳಗಾದವರೇ ತಮ್ಮನ್ನು ತಾವು ಕುರಿತು ಬರೆದುಕೊಳ್ಳುವುದಕ್ಕೂ ಮೌಲಿಕವಾದ ವ್ಯತ್ಯಾಸವಿದೆ. ದಲಿತರು, ಶೋಷಿತರು ತಮ್ಮ ಬದುಕನ್ನು ಕುರಿತು ತಾವೇ ಬರೆದುಕೊಂಡಾಗ ಅದಕ್ಕೆ ಒದಗುವ ಸಾಚಾತನ ಮತ್ತು ಆ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ಹೊಸಭಾಷೆಯ ನುಡಿಗಟ್ಟು ಹಾಗೂ ಲಯಗಳೂ, ವಿಶೇಷ ರೀತಿಯವಾಗಿರುತ್ತವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಪ್ರತ್ಯೇಕತೆ ಅಥವಾ ವಿಶಿಷ್ಟತೆ ದಲಿತ – ಬಂಡಾಯ ಸಾಹಿತ್ಯಕ್ಕಿದೆ.

ದಲಿತ – ಬಂಡಾಯ ಚಳುವಳಿ ಪ್ರಾರಂಭವಾಗಿ ಒಂದು ದಶಕಕ್ಕಿಂತ ಹೆಚ್ಚು ಕಾಲವಾಗಿದೆ. ಒಂದು ಸಿದ್ಧಾಂತವಾಗಿ ಕನ್ನಡ ಸಾಹಿತ್ಯದ ಹಾಗೂ ಸಾಹಿತಿಗಳ ಮೇಲೆ ಅದು ಮಾಡಿರುವ ಪರಿಣಾಮವು, ಅದರಲ್ಲಿ ಸಂಭವಿಸಿದ ಸಾಹಿತ್ಯದ ಪರಿಣಾಮಕ್ಕಿಂತ ಗಾಢವಾದುದು. ಇವತ್ತಿನ ಪರಿಸರದಲ್ಲಿ ಬರೆಯುತ್ತಿರುವ ಮತ್ತು ಹಲವಾರು ಸಾಹಿತ್ಯ ಚಳುವಳಿಗಳ ಮೂಲಕ ಹಾದು ಬಂದಿರುವ ಎಲ್ಲ ಸಾಹಿತಿಗಳಲ್ಲಿಯೂ ಬಹುಮಟ್ಟಿಗೆ ಸಮಾನವಾಗಿ ಕಾಣಿಸಿಕೊಳ್ಳುತ್ತಿರುವ ಸಾಮಾಜಿಕ ಕಳಕಳಿಗಳು, ಈ ದಲಿತ ಬಂಡಾಯ ಚಳುವಳಿಯ ಪರಿಣಾಮಗಳಾಗಿವೆ ಎಂದರೆ ಅದೇನೂ ಉತ್ಪ್ರೇಕ್ಷೆಯ ಮಾತಲ್ಲ.