ಕನ್ನಡ ಸಾಹಿತ್ಯ : ಇಟ್ಟ ಹೆಜ್ಜೆ, ತೊಟ್ಟ ರೂಪಗಳು

‘ಕನ್ನಡ’ ಎಂಬುದು ಒಂದು ಭಾಷೆಯ ಹೆಸರೂ ಹೌದು, ಆ ಭಾಷೆಯನ್ನಾಡುವ ಜನ ಬದುಕುವ ಒಂದು ನಾಡಿನ ಹೆಸರೂ ಹೌದು. ಕನ್ನಡ ನಾಡಿನ ಜನರ ಭಾಷೆ ಕನ್ನಡ, ಈ ಭಾಷೆಯನ್ನಾಡುವ ಜನ ಕನ್ನಡಿಗರು. ವಾಸ್ತವವಾಗಿ ನಾಡಿಗಿದ್ದ ಈ ಹೆಸರಿನಿಂದ ಜನದ ಭಾಷೆಗೆ ಈ ಹೆಸರು ಬಂತೋ ಅಥವಾ ಈ ಭಾಷೆಯಿಂದಾಗಿ ನಾಡಿಗೆ ಈ ಹೆಸರು ಬಂತೋ ಹೇಳುವುದು ಕಷ್ಟ. ‘ಕನ್ನಡನಾಡು’ ಎಂದು ಕರೆಯಲಾಗುವ ಈ ನಾಡಿಗೆ ಅಧಿಕೃತವಾದ ಹೆಸರು ಕರ್ನಾಟಕ. ‘ಕರ್ನಾಟಕ’ ಎಂಬ ಹೆಸರು ಈ ನಾಡಿಗೆ ಇವತ್ತು ಇಟ್ಟದ್ದಲ್ಲ, ಬಹು ಹಿಂದಿನಿಂದಲೂ ಇದ್ದದ್ದೆ. ಕರ್ನಾಟಕ ಎಂಬ ಹೆಸರಿನ ಉಲ್ಲೇಖ ವ್ಯಾಸರ ಮಹಾಭಾರತದಲ್ಲಿಯೆ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ತೀರಾ ಹಿಂದಿನ ಸಂಸ್ಕೃತ ಕೃತಿಗಳಲ್ಲಿ ಮತ್ತು ಶಾಸನಗಳಲ್ಲಿ ಈ ಹೆಸರು ಬರುತ್ತದೆ. ಸಂಸ್ಕೃತವನ್ನು ಬಿಟ್ಟರೆ, ತಮಿಳು ಅತ್ಯಂತ ಪ್ರಾಚೀನವಾದ ಭಾಷೆ ಎಂದು ಪರಿಗಣಿತವಾಗಿದೆ. ಇಂಥ ತಮಿಳಿನ ಬಹು ಹಳೆಯ ಕೃತಿಗಳಲ್ಲಿಯೂ ‘ಕರ್ನಾಟಕ’ ಎಂಬ ಪದ ಕಾಣಲು ದೊರೆಯುತ್ತದೆ. ಕ್ರಿ.ಶ. ಎರಡನೆಯ ಶತಮಾನದ ಶಿಲಪ್ಪದಿಗಾರಂ ಎಂಬ ತಮಿಳು ಕೃತಿಯಲ್ಲಿ ‘ಕರುನಾಡರ್’ ಎಂಬ ಪದವಿದೆ. ‘ಕರುನಾಡು’ ಎಂಬುದು ‘ಕರ್ನಾಟಕ’ ಎಂಬುದರ ಒಂದು ಹೊಸ ರೂಪ. ‘ಕರ್ನಾಟಕ ದೇಶದವರು’  ಎಂಬ ಅರ್ಥದಲ್ಲಿ ‘ಕರುನಾಡರ್’ ‘ಕರುನಾಡಗರ್’ ಎಂಬ ರೂಪಗಳು ತಮಿಳು ಸಾಹಿತ್ಯದಲ್ಲಿ ಗೋಚರಿಸುತ್ತವೆ. ಒಟ್ಟಿನಲ್ಲಿ ಕರ್ಣಾಟ, ಕರ್ಣಾಟಕ, ಕರ್ನಾಟಕ, ಕರುನಾಡು, ಇತ್ಯಾದಿ ಪ್ರಯೋಗಗಳು ಸೂಚಿಸುವ ಕರ್ನಾಟಕ ಎಂಬುದು, ಪ್ರಾಚೀನತೆಯ ಮತ್ತು ಅರ್ಥವಂತಿಕೆಯ ದೃಷ್ಟಿಯಿಂದ ತುಂಬ ಮಹತ್ವದ ಪದವಾಗಿದೆ. ಕನ್ನಡ ಕವಿಗಳಲ್ಲಿ ‘ಕನ್ನಡ’, ‘ಕರುನಾಡು’ ‘ಕರ್ನಾಟಕ’ ಎಂಬ ಪದಗಳೇ ಬಳಕೆಯಾಗಿವೆ. ‘ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ ನಾಡು ಕನ್ನಡ’ ಎಂದು, ಕನ್ನಡದ ಮೊದಲ ಗ್ರಂಥವೆಂದು ಪರಿಗಣಿತವಾಗಿರುವ ‘ಕವಿರಾಜಮಾರ್ಗ’ದಲ್ಲಿ ಹೇಳಲಾಗಿದೆ. ಹಾಗೆಯೇ ಕನ್ನಡ ಎಂಬುದು ಭಾಷೆ ಎಂಬರ್ಥದ ಹಲವು ಉಕ್ತಿಗಳೂ ಅಲ್ಲಿವೆ. ‘ಕನ್ನಡನಾಡು’ ‘ಕರ್ನಾಟದೇಶ’ ‘ಕರ್ನಾಟ ಭಾಷೆ’ ‘ಕನ್ನಡ ನುಡಿ’ – ಇತ್ಯಾದಿ ಮಾತುಗಳಿಂದ ನಮ್ಮ ಕವಿಗಳು, ಈ ಪದಗಳನ್ನು, ದೇಶ ಮತ್ತು ಭಾಷೆ ಎನ್ನುವ ಎರಡೂ ಅರ್ಥವನ್ನು ಸೂಚಿಸಲು ಬಳಸಿದ್ದಾರೆ.

ಕನ್ನಡ ಭಾಷೆ ಸಂಸ್ಕೃತದಿಂದ ಹುಟ್ಟಿದ್ದು ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಆದರೆ ಇದು ಸರಿಯಲ್ಲ. ಕನ್ನಡ ಪಂಚದ್ರಾವಿಡ ಭಾಷೆಗಳಲ್ಲಿ ಒಂದು. ತಮಿಳು, ಕನ್ನಡ, ತೆಲುಗು, ಮಲೆಯಾಳ ಮತ್ತು ತುಳು, ಇವುಗಳನ್ನು ಪಂಚದ್ರಾವಿಡ ಭಾಷೆಗಳೆಂದು ಕರೆಯಲಾಗಿದೆ. ಈ ಐದೂ ದ್ರಾವಿಡ ಭಾಷೆಗಳಿಗೆ ತಾಯಿಯಂತಿದ್ದ ಮೂಲದ್ರಾವಿಡ ಒಂದು ಇದ್ದು, ಈ ಐದೂ ಕಾಲಕ್ರಮೇಣ ಕವಲೊಡೆದು ಬೇರೆ ಬೇರೆಯ ಭಾಷೆಗಳಾದು ವೆಂದು ಭಾಷಾ ಶಾಸ್ತ್ರಜ್ಞರ ಸಿದ್ಧಾಂತ. ಕನ್ನಡ ಭಾಷೆ ಎಷ್ಟು ಪ್ರಾಚೀನ ಎನ್ನುವ ಬಗೆಗೆ ವಿದ್ವಾಂಸರ ಭಿನ್ನಾಭಿಪ್ರಾಯಗಳಿವೆ. ಕ್ರಿಸ್ತಪೂರ್ವ ಮೂರನೆಯ ಶತಮಾನಕ್ಕೆ ಸೇರಿದ, ಕರ್ನಾಟಕದ ಸಿದ್ದಾಪುರದಲ್ಲಿ ದೊರೆತಿರುವ ಅಶೋಕನ ಶಾಸನವೊಂದರಲ್ಲಿ ಕಾಣಿಸಿಕೊಳ್ಳುವ ‘ಇಸಿಲ’ ಎಂಬ ಪದವೇ, ತೇದಿಯುಳ್ಳ ಪ್ರಾಚೀನತಮ ಕನ್ನಡ ಪದ – ಎಂದು ವಿದ್ವಾಂಸರಾದ ಡಿ. ಎಲ್. ನರಸಿಂಹಾಚಾರ್ಯರ ಅಭಿಪ್ರಾಯ.[1] ಈಜಿಪ್ಟ್ ದೇಶದ ಟಾಲೆಮಿ ಎಂಬ ಭೂಗೋಲ ಶಾಸ್ತ್ರಜ್ಞನು ಬರೆದ ಗ್ರಂಥದಲ್ಲಿ, ಭಾರತದ ಅನೇಕ ಊರುಗಳ ಹೆಸರುಗಳನ್ನು ಹೇಳುವಲ್ಲಿ ಕರ್ನಾಟಕದ ಅನೇಕ ಊರುಗಳ ಹೆಸರುಗಳೂ ಉಲ್ಲೇಖಿತವಾಗಿವೆ. ಇದರ ಕಾಲ ಕ್ರಿ.ಶ. ೧೪೦. ಸುಮಾರು ಇದೇ ಕಾಲಕ್ಕೆ ಸೇರಿದ ಗ್ರೀಕ್ ನಗೆನಾಟಕವೊಂದರಲ್ಲಿ ಕೆಲವು ಪದಗಳನ್ನು, ಕನ್ನಡ ಭಾಷೆಯವೆಂದು ಊಹಿಸಲಾಗಿದೆ. ಈ ಎಲ್ಲ ಆಧಾರಗಳ ಮೇಲೆ ಕನ್ನಡಭಾಷೆ ಎರಡು ಸಾವಿರ ವರ್ಷಗಳಷ್ಟು ಹಳೆಯದೆಂದು ಹೇಳಬಹುದು.

ಇಷ್ಟು ಪ್ರಾಚೀನವಾದ ಈ ಭಾಷೆಯಲ್ಲಿ ಯಾವಾಗ ಸಾಹಿತ್ಯ ರಚನೆ ಆರಂಭವಾಯಿತೆಂದು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಎಲ್ಲ ಭಾಷೆಗಳಿಗೂ ಇರುವಂತೆ, ಲಿಖಿತರೂಪವನ್ನು ತಾಳದ, ಬಾಯಿಂದ ಬಾಯಿಗೆ ಹರಿದು ಬರುವ ಸಾಹಿತ್ಯಾಭಿವ್ಯಕ್ತಿ ಕನ್ನಡ ಭಾಷೆಗೂ ಇದ್ದಿರಬೇಕು. ಕನ್ನಡದ ಮೊದಲ ಗ್ರಂಥವೆಂದು ಭಾವಿತವಾದ ‘ಕವಿರಾಜಮಾರ್ಗ’ದಲ್ಲಿ ಇಂಥ ಸಾಹಿತ್ಯ ಇದ್ದ ಬಗೆಗೆ ಸಾಕಷ್ಟು ಸೂಚನೆಗಳಿವೆ. ನಮಗೆ ತಿಳಿದಮಟ್ಟಿಗೆ ಕನ್ನಡ ಭಾಷೆ ಮತ್ತು ಲಿಪಿಗಳಲ್ಲಿ ಬರೆಯಲಾದ ಮೊದಲನೆಯ ದಾಖಲೆ ಸುಮಾರು ಕ್ರಿ.ಶ. ೪೫೦ರ ಹಲ್ಮಿಡಿ ಶಾಸನ. ಹಲ್ಮಿಡಿ ಎನ್ನುವುದು ಹಾಸನ ಜಿಲ್ಲೆಯ ಬೇಲೂರಿನ ಹತ್ತಿರವಿರುವ ಒಂದು ಗ್ರಾಮ. ಹಲ್ಮಿಡಿ ಶಾಸನದ ಭಾಷೆ ಗದ್ಯ. ಆದರೆ ಈ ಗದ್ಯ ಪೂರ್ವದ ಹಳಗನ್ನಡವಾಗಿದ್ದು, ಸಂಸ್ಕೃತ ಭಾಷೆಯ ಪ್ರಭಾವಕ್ಕೆ ಒಳಗಾಗಿದೆ. ಇದೇ ಕಾಲದ ತಾಳಗುಂದ ಶಾಸನ ಮತ್ತು ಕ್ರಿ.ಶ. ೬೩೪ರ ಐಹೊಳೆ ಶಾಸನಗಳು ಕಾವ್ಯಮಯವಾದ ಸಂಸ್ಕೃತದಲ್ಲಿವೆ. ಬಾದಾಮಿಯ ಶಾಸನ, ಶ್ರವಣಬೆಳಗೊಳದ ಶಾಸನ ಇವುಗಳಲ್ಲಿ ಆಗಲೇ ಕನ್ನಡ ಭಾಷೆ ಸಾಹಿತ್ಯಾಭಿವ್ಯಕ್ತಿಗೆ ಪಳಗುತ್ತಿದ್ದುದರ ಸೂಚನೆಗಳಿವೆ. ಹಲ್ಮಿಡಿ ಶಾಸನದ ಕಾಲದಿಂದ ಹಿಡಿದು, ಕವಿರಾಜಮಾರ್ಗದವರೆಗಿನ ಶಾಸನಗಳನ್ನು ಗಮನಿಸಿದರೆ, ಕನ್ನಡ ಭಾಷೆಯ ಮೇಲೆ ಇದ್ದ ಸಂಸ್ಕೃತದ ಗಾಢವಾದ ಪ್ರಭಾವವನ್ನು ಗುರುತಿಸುವುದರ ಜತೆಗೆ, ಕನ್ನಡ ಸಾಹಿತ್ಯ ಕ್ರಿ. ಶ. ಐದನೆಯ ಶತಮಾನದಷ್ಟು ಪ್ರಾಚೀನವಾದದ್ದು ಎಂದು ಊಹಿಸಲು ಅವಕಾಶವಿದೆ.

ಕ್ರಿ.ಶ. ಐದನೆಯ ಶತಮಾನದ ಹಲ್ಮಿಡಿ ಶಾಸನವನ್ನು ಮೊಟ್ಟಮೊದಲನೆಯ ಲಿಖಿತ ದಾಖಲೆಯನ್ನಾಗಿ ಪರಿಗಣಿಸಿಕೊಂಡು ಮುಂದಿನ ಸಾಹಿತ್ಯವನ್ನು ಅವಲೋಕಿಸಿದರೆ ಅನ್ನಿಸುವುದು ಇಷ್ಟು. ಈ ಶಾಸನದ ರಚನೆಗೆ ಮುನ್ನ ಕನ್ನಡದಲ್ಲಿ ಸಾಕಷ್ಟು ಸಾಹಿತ್ಯವಿದ್ದಿರಬೇಕು ಎನ್ನುವವರ ಅಭಿಪ್ರಾಯ ಕೇವಲ ಊಹೆ ಮಾತ್ರ; ಆದರೆ ಈ ಶಾಸನದ ಕಾಲದ ನಂತರದಿಂದ ಮುಂದಣ ಅವಧಿಯಿಂದ, ಎಂಟನೆ ಶತಮಾನದವರೆಗಿನ ಅವಧಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ತಕ್ಕಷ್ಟು ಕೃಷಿ ನಡೆದಿತ್ತೆಂಬುದು ಮಾತ್ರ ಸತ್ಯ. ಈ ಸಂಗತಿಗೆ ಸಾಕ್ಷಿಯಾಗಿದೆ ‘ಕವಿರಾಜಮಾರ್ಗ’.

‘ಕವಿರಾಜಮಾರ್ಗ’ ಎನ್ನುವುದು ಕನ್ನಡದ ಉಪಲಬ್ಧವಾದ ಮೊಟ್ಟಮೊದಲ ಗ್ರಂಥ. ಇದು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಚಕ್ರವರ್ತಿಯಾದ ಅಮೋಘವರ್ಷ ನೃಪತುಂಗ (ಕ್ರಿ.ಶ. ೮೧೪-೮೭೭)ನ ಕಾಲದಲ್ಲಿ ರಚಿತವಾಯಿತು. ಈ ಕೃತಿಯನ್ನು ಬರೆದವರು ಯಾರು ಎನ್ನುವ ಬಗೆಗೆ ಇಂದಿಗೂ ವಿದ್ವಾಂಸರಲ್ಲಿ ಒಮ್ಮತವಿಲ್ಲ. ರಾಷ್ಟ್ರಕೂಟ ಚಕ್ರವರ್ತಿಯಾದ ನೃಪತುಂಗನೇ ಇದನ್ನು ಬರೆದವನು ಎಂಬುದು ಕೆಲವರ ಅಭಿಪ್ರಾಯವಾದರೆ, ನೃಪತುಂಗನ ಆಸ್ಥಾನದಲ್ಲಿದ್ದ ಶ್ರೀವಿಜಯನೆಂಬುವನು ಇದನ್ನು ಬರೆದನೆಂದು ಮತ್ತೆ ಕೆಲವರ ಅಭಿಪ್ರಾಯ. ಶ್ರೀವಿಜಯನೇ ಇದರ ಕರ್ತೃವೆಂಬ ಕಡೆಗೆ ವಿದ್ವಾಂಸರ ಒಲವು ಮಿಗಿಲಾಗಿದೆ.

‘ಕವಿರಾಜಮಾರ್ಗ’ ಒಂದು ಲಕ್ಷಣಗ್ರಂಥ. ಎಂದರೆ, ಕವಿಗಳಿಗೆ ಕಾವ್ಯ ಲಕ್ಷಣವನ್ನು ತಿಳಿಸುವ, ಚರ್ಚಿಸುವ ಗ್ರಂಥ. ಕಾವ್ಯ ಎಂದರೇನು, ಕಾವ್ಯದ ಪರಿಕರಗಳು ಯಾವುವು, ಕಾವ್ಯದ ಸ್ವಾರಸ್ಯ ಎಲ್ಲಿದೆ, ಕಾವ್ಯದಲ್ಲಿ ಗುಣ ಯಾವುದು, ದೋಷ ಯಾವುದು, ಕಾವ್ಯದ ಉದ್ದೇಶ ಪ್ರಯೋಜನಗಳು ಯಾವುವು ಇತ್ಯಾದಿ ಸಂಗತಿಗಳನ್ನು ಕುರಿತ ಗ್ರಂಥ. ಇಂಥ ಕೃತಿ ಯಾವಾಗಲೂ ಸಮೃದ್ಧವಾದೊಂದು ಸಾಹಿತ್ಯವಿದ್ದಾಗ ಮಾತ್ರ ಹುಟ್ಟಲು ಸಾಧ್ಯ. ಯಾಕೆಂದರೆ ಸಾಹಿತ್ಯದ ಸ್ವರೂಪವನ್ನು ಕುರಿತ ಚರ್ಚೆ, ಹಾಗೂ ನಿರ್ದೇಶನ ಸಾಹಿತ್ಯ ರಚನೆಯ ಅನಂತರದ್ದು. ಕವಿಗಳಿಗೆ ಕಾವ್ಯರಚನೆಯ ಬಗ್ಗೆ ತಿಳಿಯ ಹೇಳುವ, ಕವಿಗಳಿಗೆ ರಾಜಮಾರ್ಗವೊಂದನ್ನು ಹಾಕಿಕೊಡುವ ಉದ್ದೇಶವುಳ್ಳ ಈ ಕೃತಿ ಮೂಲತಃ ಸ್ವತಂತ್ರ ಗ್ರಂಥವೇನಲ್ಲ. ಸಂಸ್ಕೃತ ಕವಿ ದಂಡಿಯು ಬರೆದ ‘ಕಾವ್ಯಾದರ್ಶ’ವೆಂಬ ಅಲಂಕಾರ ಗ್ರಂಥವೇ, ಕವಿರಾಜಮಾರ್ಗಕ್ಕೆ ಮೂಲ. ಆದರೆ ‘ಕವಿರಾಜಮಾರ್ಗ’ ದಂಡಿಯ ಅನುವಾದ ಮಾತ್ರವಾಗಿಲ್ಲ; ತಕ್ಕಷ್ಟು ಸ್ವತಂತ್ರ ದೃಷ್ಟಿಯನ್ನೂ, ವೈಚಾರಿಕತೆಯನ್ನೂ ಪ್ರಕಟಿಸುವ ಕೃತಿಯಾಗಿದೆ.

ಕನ್ನಡ ಸಾಹಿತ್ಯಚರಿತ್ರೆಯಲ್ಲಿ ‘ಕವಿರಾಜಮಾರ್ಗ’ದ ಸ್ಥಾನ ತುಂಬ ಮಹತ್ವದ್ದಾಗಿದೆ. ಇದು ಅಂದಿನ ಸಮಕಾಲೀನವಾದ ಕನ್ನಡ ನಾಡಿನ ಜೀವನ, ಅಭಿರುಚಿಗಳ ಬಗೆಗೆ ಅನೇಕ ಹೆಮ್ಮೆಯ ಸಂಗತಿಗಳನ್ನು ಹೇಳುವುದಲ್ಲದೆ, ಎಂಟನೆಯ ಶತಮಾನಕ್ಕೆ ಹಿಂದೆ ಇದ್ದ ಕನ್ನಡ ಸಾಹಿತ್ಯದ ಸಮೃದ್ಧಿಗೆ ಅಪೂರ್ವ ದಾಖಲೆಯೂ ಆಗಿದೆ. ಕನ್ನಡ ನಾಡಿನ ವಿಸ್ತಾರ, ಕನ್ನಡ ಜನರ ಸ್ವಭಾವದ ವರ್ಣನೆಗಳನ್ನು ಕವಿರಾಜಮಾರ್ಗದ ಕವಿ ತುಂಬ ಅಭಿಮಾನದಿಂದ ಹೇಳುತ್ತಾನೆ. ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’ ಎಂದು ಅಂದಿನ ಕನ್ನಡನಾಡಿನ ವಿಸ್ತಾರ ವರ್ಣಿತವಾಗಿದೆ. ಅಂದಿನ ಕನ್ನಡನಾಡಿಗೆ ಇತ್ತ ಕಾವೇರಿಯೂ, ಅತ್ತ ಗೋದಾವರಿಯೂ ಗಡಿಗಳಾಗಿದ್ದುವು. ಈ ವಿಸ್ತಾರದ ನಡುವಣದಲ್ಲಿ ತಿರುಳ್ಗನ್ನಡ ಸೀಮೆಯೊಂದು ಇತ್ತು. ಅದರ ಗಡಿಯನ್ನು ಗುರುತಿಸುವ ಊರುಗಳು ಇವು – ಕಿಸುವೊಳಲ್, ಕೊಪಣನಗರ, ಪುಲಿಗೆರೆ ಮತ್ತು ಒಂಕುಂದ. ಈ ನಾಲ್ಕು ನಗರಗಳು ಈಗ ಅನುಕ್ರಮವಾಗಿ ಪಟ್ಟದಕಲ್ಲು, ಕೊಪ್ಪಳ, ಲಕ್ಷ್ಮೇಶ್ವರ ಮತ್ತು ಒಕ್ಕುಂದಗಳೆಂದು ಗುರುತಿಸಬಲ್ಲವುಗಳಾಗಿವೆ. ಈ ನಾಲ್ಕು ನಗರಗಳ ನಡುವಣ ಪ್ರದೇಶವೇ ಅಂದಿನ ‘ತಿರುಳ್ಗನ್ನಡ ನಾಡು’.

ಕಾವೇರಿ ನದಿಯಿಂದ ಗೋದಾವರಿಯವರೆಗಿನ ಅಂದಿನ ಕನ್ನಡ ನಾಡಿನ ಜನ ಎಂಥವರು? ಕವಿರಾಜಮಾರ್ಗದ ಕವಿ ಹೇಳುತ್ತಾನೆ :

ಪದನ್ ಅರಿದು ನುಡಿಯಲುಂ, ನುಡಿ
ದುದನ್ ಅರಿದು ಆರಯಲುಂ ಆರ್ಪರ್ ಆ ನಾಡವರ್ಗಳ್
ಚದುರರ್ ನಿಜದಿಂ, ಕುರಿತೋ
ದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್
(ಕ. ರಾ. ಮಾ. ೧-೩೮)

ಕನ್ನಡ ನಾಡಿನ ಜನರು, ಹದವನ್ನು ಅರಿತು, ಅಥವಾ ಸಂದರ್ಭವನ್ನು ಅರ್ಥ ಮಾಡಿಕೊಂಡು ಮಾತನಾಡಲೂ, (ಇತರರು) ಆಡಿದ್ದನ್ನು ತಿಳಿದುಕೊಂಡು ಅದನ್ನು ಸರಿಯಾಗಿ ಪರಿಶೀಲಿಸಲೂ ಸಮರ್ಥರಾದವರು. ಅವರು ನಿಜವಾಗಿಯೂ, ಸಹಜವಾದ ಚದುರರು. ವಿಶೇಷ ಆಸ್ಥೆವಹಿಸಿ ಓದದೆ ಇದ್ದರೂ ಸಹ ಕಾವ್ಯ ಪ್ರಯೋಗಗಳಲ್ಲಿ ಪರಿಣತರಾದವರು. ಅಷ್ಟೇ ಅಲ್ಲ :

ಕುರಿತವರಲ್ಲದೆ ಮತ್ತಂ
ಪೆರರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್,
ಕಿರುವಕ್ಕಳುಮಾ ಮೂಗರುಂ
ಅರಿಪಲ್ಕೆ ಅರಿವರ್ ವಿವೇಕಮಂ ಮಾತುಗಳಂ.
(ಕ.ರಾ.ಮಾ. ೧-೩೯)

ತುಂಬ ಆಳವಾಗಿ ಅಭ್ಯಾಸ ಮಾಡಿದವರಲ್ಲದೆ ಇನ್ನುಳಿದ ಇತರರೂ, ತಮ್ಮ ತಮ್ಮ ಭಾಷೆಗಳಲ್ಲಿ ಜಾಣರಾಗಿದ್ದರು. ಅಷ್ಟೇಕೆ, ಕಿರಿಯ ಮಕ್ಕಳು ಕೂಡಾ ವಿವೇಕವನ್ನು ಹೇಳಬಲ್ಲವರಾಗಿದ್ದರು. ಮಹಾ ಮೂಕರೂ ಸಹ ಮಾತನಾಡ ಬಲ್ಲವರಾಗಿದ್ದರು! ಜತೆಗೆ, ಕನ್ನಡನಾಡಿನ ಆ ಜನ ಉತ್ತಮ ವಿರ್ಮಶಕರೂ ಆಗಿದ್ದರು. ಕೃತಿಗಳಲ್ಲಿನ ಅವಗುಣಗಳನ್ನು ಕಂಡರೆ, ಅದನ್ನು ಮರೆಮಾಡದೆ ಎತ್ತಿ ಹಿಡಿದು ಖಂಡಿಸುವ ಸಾಮರ್ಥ್ಯ (ಕ.ರಾ.ಮಾ. ೧-೪೦)ವನ್ನು ಗಳಿಸಿಕೊಂಡಿದ್ದರು. ಒಟ್ಟಿನಮೇಲೆ

ಸುಭಟರ್ಕಳ್, ಕವಿಗಳ್, ಸು
ಪ್ರಭುಗಳ್, ಚೆಲ್ವರ್ಕಳ್, ಅಭಿಜನರ್ಕಳ್, ಗುಣಿಗಳ್,
ಅಭಿಮಾನಿಗಳ್, ಅತ್ಯುಗ್ರರ್,
ಗಂಭೀರ ಚಿತ್ತರ್, ವಿವೇಕಿಗಳ್, ನಾಡವರ್ಗಳ್
(ಕ.ರಾ.ಮಾ. ೨-೨೮)

ಈ ಕನ್ನಡನಾಡಿನ ಜನ ಒಳ್ಳೆಯ ಯೋಧರು, ಕವಿಗಳು, ಒಳ್ಳೆಯ ಪ್ರಭುಗಳು, ಚೆಲುವಾದ ರೂಪವುಳ್ಳವರು, ಸಜ್ಜನರು, ಗುಣವಂತರು, ಅಭಿಮಾನಿಗಳು, ಅತ್ಯುಗ್ರರು, ಗಂಭೀರ ಸ್ವಭಾವದವರು, ವಿವೇಕಿಗಳು.

ಕನ್ನಡ ಜನವನ್ನು ಕುರಿತು ಕವಿರಾಜಮಾರ್ಗಕಾರನ ಈ ಎಲ್ಲ ಮಾತುಗಳು, ಉತ್ಕಟವಾದ ಪ್ರೀತಿ-ಅಭಿಮಾನಗಳಿಂದ ಪುಟಿಯುತ್ತವೆ. ಕನ್ನಡ ಜನ ‘ಚದುರರ್ ನಿಜದಿಂ’, ಒಳ್ಳೆಯ ಮಾತುಗಾರರು. ಒಳ್ಳೆಯ ವಿಮರ್ಶಕರು, ಸುಭಟರು, ಕವಿಗಳು, ಗುಣಿಗಳು, ಅಭಿಮಾನಿಗಳು, ಅತ್ಯುಗ್ರರು, ಗಂಭೀರ ಚಿತ್ತರು, ವಿವೇಕಿಗಳು-ಎಂಬ ಒಂದೊಂದು ಮಾತೂ ಕವಿರಾಜಮಾರ್ಗಕಾರನು ಕಂಡ ಕನ್ನಡಿಗರನ್ನು ವರ್ಣಿಸುವ ಮಾತುಗಳಷ್ಟೇ ಆಗದೆ, ಕನ್ನಡ ನಾಡಿನ ಜನ ಎಲ್ಲ ಕಾಲಕ್ಕೂ ಹೀಗಿರಬೇಕು ಎಂಬ ಬಹು ದೊಡ್ಡ ಆಶಯವನ್ನೂ ಸೂಚಿಸುವಂತೆ ತೋರುತ್ತದೆ. ಒಂದು ಸಾವಿರ ವರ್ಷಕ್ಕೂ ಹಿಂದೆ ಕನ್ನಡಿಗರ ಬಗ್ಗೆ ಕವಿರಾಜಮಾರ್ಗಕಾರ ಕೊಟ್ಟ ಪ್ರಶಸ್ತಿಗೆ ಇಂದಿನ ಜನ ಅರ್ಹರಾಗಬೇಕಾದ ಕಾಲ ಇನ್ನೂ ಬರಬೇಕಾಗಿದೆ.

‘ಕವಿರಾಜಮಾರ್ಗ’ದಿಂದ ಅಂದಿನ ಸಮಕಾಲೀನ ಜೀವನಪರಿಣತಿಯ ಚಿತ್ರ ದೊರೆಯುವಂತೆಯೇ, ಅದಕ್ಕಿಂತ ಹಿಂದಿನ ಸಾಹಿತ್ಯ ಪರಂಪರೆಯ ಸೂಚನೆಯೂ ಸಾಕಷ್ಟು ದೊರೆಯುತ್ತದೆ. ಸದ್ಯಕ್ಕೆ ಹಲ್ಮಿಡಿ ಶಾಸನದ ಕಾಲದಿಂದ, ಕವಿರಾಜಮಾರ್ಗದ ಕಾಲದವರೆಗೆ ಒಂದು ರೀತಿಯ ಕತ್ತಲು ಕವಿದಿದೆ. ಈ ಕತ್ತಲೆಯ ಮೇಲೆ ‘ಬಿಡುದೀಪ’ವನ್ನು ಹಾಯಿಸುವ ದೀಪಸ್ತಂಭದಂತಿದೆ ‘ಕವಿರಾಜಮಾರ್ಗ’. ‘ಕವಿರಾಜಮಾರ್ಗ’ ಅದಕ್ಕೆ ಹಿಂದಿನ ಕವಿಗಳ, ಕೃತಿಗಳ ಹಾಗೂ ಕಾವ್ಯ ಪ್ರಕಾರಗಳ ಒಂದು ಪಟ್ಟಿಯನ್ನೇ ಕೊಡುತ್ತದೆ : ವಿಮಳ, ಉದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಇತ್ಯಾದಿ ಕವಿಗಳು ಗದ್ಯ ಕವಿಗಳು; ಶ್ರೀವಿಜಯ, ಕವೀಶ್ವರ, ಪಂಡಿತ, ಲೋಕಪಾಲ, ಚಂದ್ರ ಇವರು ಪದ್ಯ ಕವಿಗಳು. ಆದರೆ ಕವಿರಾಜಮಾರ್ಗದಲ್ಲಿ ಉಕ್ತವಾಗಿರುವ ಗದ್ಯ ಪದ್ಯ ಕವಿಗಳ ಗ್ರಂಥಗಳು ಯಾವುವೂ ದೊರೆಯದೆ ಹೋಗಿರುವುದು ದುರದೃಷ್ಟದ ಸಂಗತಿ. ಈ ಕವಿಗಳ ಕೃತಿಗಳು ಯಾವುವೂ ದೊರೆಯದೆ ಹೋಗಿದ್ದರೂ, ಅವರಲ್ಲಿ ಒಬ್ಬಿಬ್ಬರ ಬಗೆಗೆ ಅಲ್ಪಸ್ವಲ್ಪ ವಿವರಣೆಗಳು ದೊರೆಯುತ್ತವೆ. ಅಂಥವರಲ್ಲಿ ಗಂಗವಂಶದ ದುರ್ವಿನೀತ ಒಬ್ಬನು. ಈ ಗದ್ಯ-ಪದ್ಯ ಪಟ್ಟಿಯಲ್ಲದೆ, ಹಿಂದೆ ಪ್ರಚಲಿತವಿದ್ದ ಕೆಲವು ಸಾಹಿತ್ಯ ರೂಪಗಳ ಉಲ್ಲೇಖವೂ ಕವಿರಾಜಮಾರ್ಗದಲ್ಲಿ ದೊರೆಯುತ್ತವೆ. ಬೆದಂಡೆ, ಚತ್ತಾಣ ಎಂಬ ಕಾವ್ಯ ರಚನೆಗಳೂ, ಪಗರಣವೆಂಬ ನಾಟ್ಯ ಪ್ರಯೋಗವೂ-ಗಮನಿಸಬೇಕಾದವುಗಳು. ಆದರೆ ಇವುಗಳ ನಿಜವಾದ ಸ್ವರೂಪವನ್ನು ಕುರಿತು ಇನ್ನೂ ವಿದ್ವಾಂಸರಲ್ಲಿ ಏಕಾಭಿಪ್ರಾಯವಿಲ್ಲ. ಕವಿರಾಜಮಾರ್ಗದಲ್ಲಿ ಅಲ್ಲಲ್ಲಿ ಉದಾಹರಣೆಗೆಂದು ಬರುವ ಪದ್ಯಗಳಲ್ಲಿ ಕೆಲವು ರಾಮಾಯಣ – ಮಹಾಭಾರತದ ಕಥಾ ಸಂದರ್ಭಗಳಿಗೆ ಸಂಬಂಧಿಸಿದವುಗಳಾಗಿವೆ. ಇದರಿಂದ ಎಂಟನೆಯ ಶತಮಾನಕ್ಕೆ ಮೊದಲು ಕನ್ನಡದಲ್ಲಿ ರಾಮಾಯಣ ಮಹಾಭಾರತವನ್ನು ಕುರಿತ ಕೃತಿಗಳಿದ್ದಿರಬಹುದೆಂದು ಕೆಲವರು ಅಭಿಪ್ರಾಯಪಡಲು ಅವಕಾಶವಾಗಿದೆ. ಆದರೆ ಇಂಥ ಲಕ್ಷ (ಉದಾಹರಣೆ) ಪದ್ಯಗಳನ್ನು ಕವಿರಾಜಮಾರ್ಗಕಾರನೇ ರಚಿಸಿರುವ ಸಂಭವವಿರುವುದರಿಂದ, ಈ ಕ್ವಚಿತ್ತಾದ ಉದಾಹರಣೆಗಳಿಂದ ಕನ್ನಡದಲ್ಲಿ ರಾಮಾಯಣ ಮಹಾಭಾರತಗಳು ರಚನೆಯಾಗಿದ್ದುವೆಂದು ಭಾವಿಸಲು ಆಧಾರಗಳು ಸಾಲವು. ಇದೇನೇ ಇರಲಿ, ಕವಿರಾಜಮಾರ್ಗದಲ್ಲಿ ಉಕ್ತವಾಗಿರುವ ಗದ್ಯ ಪದ್ಯ ಕವಿಗಳ ಹೆಸರುಗಳು, ಹಲವು ಕಾವ್ಯ ಪ್ರಕಾರಗಳ ಉಲ್ಲೇಖಗಳು ಅಜ್ಞಾತವಾದ, ಒಂದು ಸಾಹಿತ್ಯ ಪರಂಪರೆಯ ಅಸ್ತಿತ್ವವನ್ನು ನಿಸ್ಸಂದೇಹವಾಗಿ ಸೂಚಿಸುತ್ತವೆ.

‘ಕವಿರಾಜಮಾರ್ಗ’ವೆಂಬ ಈ ಲಕ್ಷಣ ಗ್ರಂಥವನ್ನು ಬಿಟ್ಟರೆ, ಮುಂದೆ ಕೇವಲ ಸುಮಾರು ಒಂದು ನೂರು ವರ್ಷದೊಳಗಿನ ಅವಧಿಯಲ್ಲಿ ರಚಿತವಾದದ್ದು ಪಂಪನ ‘ವಿಕ್ರಮಾರ್ಜುನ ವಿಜಯ’ ಮತ್ತು ‘ಆದಿಪುರಾಣ’ಗಳು. ಸಾಹಿತ್ಯದ ದೃಷ್ಟಿಯಿಂದ ನಮಗೆ ಪಂಪನೇ ಆದಿಕವಿ. ಕವಿರಾಜಮಾರ್ಗದಿಂದ, ಪಂಪಭಾರತದ ಕಾಲದ ಒಳಗಿನ ಒಂದು ಶತಮಾನಕ್ಕೂ ಮೀರಿದ ಅವಧಿಯ ಗಡುವಿನಲ್ಲಿ ಕೆಲವು ಕನ್ನಡ ಕವಿಗಳು ಕಾವ್ಯರಚನೆ ಮಾಡಿರುವ ಸಂಭವವಿದೆ. ಇವರಲ್ಲಿ ತುಂಬಳೂರಾಚಾರ್ಯ ಮತ್ತು ಗುಣವರ್ಮ ಮುಖ್ಯವಾದ ಹೆಸರುಗಳು. ತುಂಬಳೂರಾಚಾರ್ಯನು ‘ಚೂಡಾಮಣಿ’ ಎಂಬ ಹೆಸರಿನ ತೊಂಬತ್ತಾರು ಸಾವಿರ ಗ್ರಂಥ ಪ್ರಮಾಣದ ವ್ಯಾಖ್ಯಾನವೊಂದನ್ನು ಕನ್ನಡದಲ್ಲಿ ಬರೆದಿರುವಂತೆ ತಿಳಿದು ಬರುತ್ತದೆ. ಹಾಗೆ/x ಗುಣವರ್ಮ. ಗುಣವರ್ಮನೆಂಬ ಹೆಸರಿನ ಮತ್ತಿಬ್ಬರು ಕವಿಗಳಿರುವುದರಿದ ಈತನನ್ನು ಮೊದಲನೆಯ ಗುಣವರ್ಮನೆಂದು ಕರೆಯಬಹುದು. ಈತನು ‘ಶೂದ್ರಕ’, ‘ಹರಿವಂಶ’ ಎಂಬ ಹೆಸರಿನ ಚಂಪೂ ಕಾವ್ಯಗಳನ್ನು ಬರೆದಂತೆ ತಿಳಿದು ಬರುತ್ತದೆ. ಆದರೆ ಇವು ಯಾವೂ ಉಪಲಬ್ಧವಿಲ್ಲ : ಒಟ್ಟಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಪಂಪಪೂರ್ವ ಯುಗವು ಸಾಕಷ್ಟು ಸಮೃದ್ಧವಾಗಿತ್ತೆಂದು ಊಹಿಸಲು ಆಧಾರವಿದ್ದರೂ, ಪಂಪನ ಕಾಲವೇ ಕನ್ನಡ ಸಾಹಿತ್ಯದ ಬೆಳ್ಳಂ ಬೆಳಕಿನ ಕಾಲ. ಕನ್ನಡ ಸಾಹಿತ್ಯದಲ್ಲಿ ಪಂಪನ ಕಾಲವಾದ ಹತ್ತನೆಯ ಶತಮಾನವನ್ನು ಸುವರ್ಣ ಯುಗವೆಂದು ಕರೆಯಲಾಗಿದೆ. ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಇದೇ ನಮಗೆ ಪ್ರಥಮ ನವೋದಯದ ಕಾಲ. ಪಂಪನಿಂದ ಹಿಡಿದು ಇಂದಿನವರೆಗೆ ಕನ್ನಡ ಸಾಹಿತ್ಯ ಅವ್ಯಾಹತವಾಗಿ ಹೆದ್ದೊರೆಯಂತೆ ಹರಿದು ಬಂದಿದೆ. ಸಾವಿರ ವರ್ಷಕ್ಕೂ ಮೀರಿದ ಈ ಸಾಹಿತ್ಯ ಸಮೃದ್ಧಿಯಲ್ಲಿ ಕನ್ನಡಿಗರು ಹೆಮ್ಮೆಪಟ್ಟುಕೊಳ್ಳಬಹುದಾದ ಸಾಹಿತ್ಯ ಸಾಧನೆಗಳು ನಡೆದಿವೆ.

ಒಂದು ಸಾವಿರ ವರ್ಷಕ್ಕೂ ಮೀರಿದ ಸಾಹಿತ್ಯ ಸಮೃದ್ಧಿಯುಳ್ಳ ಕನ್ನಡ ಸಾಹಿತ್ಯದ ಚರಿತ್ರೆಯನ್ನು ಸಮೀಕ್ಷಿಸುವುದು ಸುಲಭವಾದ ಕಾರ್ಯವಲ್ಲ. ಏಕೆಂದರೆ ಈ ಸಾಹಿತ್ಯ ಚರಿತ್ರೆಯಲ್ಲಿ ಕಾಲದಿಂದ ಕಾಲಕ್ಕೆ ಭಾಷಾರೂಪದಲ್ಲಿ ಬದಲಾವಣೆಯಾಗಿದೆ. ಛಂದೋ ರೂಪಗಳಲ್ಲಿ ಬದಲಾವಣೆಯಾಗಿದೆ. ಕವಿಗಳಿಗೆ ಹಿನ್ನೆಲೆಯಾದ ಅಂದಂದಿನ ರಾಜಕೀಯ-ಸಾಮಾಜಿಕ ಪರಿಸ್ಥಿತಿಗಳಲ್ಲಿ ಬದಲಾವಣೆಯಾಗಿದೆ. ಪ್ರಮುಖವಾದ ಪ್ರೇರಣೆಗಳಾದ ಮತ-ಧರ್ಮಗಳಲ್ಲಿ ಬದಲಾವಣೆಯಾಗಿದೆ. ಈ ಸಾಹಿತ್ಯ ಪರಂಪರೆಯನ್ನು ಹೇಗೆ ವಿಭಾಗಿಸಿಕೊಂಡು ಅಧ್ಯಯನ ಮಾಡಬಹುದೆಂಬುದರ ಬಗೆಗೆ ವಿವಿಧ ವಿಧಾನಗಳು ಸೂಚಿತವಾಗಿವೆ : ಕನ್ನಡ ಸಾಹಿತ್ಯ. ಪ್ರಮುಖವಾದ ಮತ ಧರ್ಮಗಳಾದ ಜೈನ, ವೀರಶೈವ, ವೈಷ್ಣವ ಧರ್ಮಗಳಿಂದ ಪ್ರೇರಣೆಗೊಂಡು ರಚಿತವಾಗಿರುವುದರಿಂದ, ಕನ್ನಡ ಸಾಹಿತ್ಯ ಚರಿತ್ರೆಯನ್ನು, ಜೈನಯುಗ, ವೀರಶೈವಯುಗ ಎಂದು ಅಂದಂದಿನ ಪ್ರಭಾವಶಾಲೀ ಮತ ಧರ್ಮವನ್ನು ಮೂಲ ಮಾನವನ್ನಾಗಿ ಮಾಡಿಕೊಂಡು ನೋಡಬಹುದೆಂದು ಕೆಲವರ ಮತ. ಆದರೆ ಹೀಗೆ ಮಾಡಿಕೊಂಡರೆ ಉದ್ದಕ್ಕೂ ಈ ಮತಗಳು ಒಂದೊಂದು ಕಾಲದಲ್ಲಿ ಪ್ರವೃದ್ಧಮಾನವಾಗಿದ್ದು, ಉಳಿದ ಕಾಲದಲ್ಲಿಯೂ ಅಪ್ರಧಾನವಾಗಿ ಉಳಿದಿದ್ದ ಕಾರಣದಿಂದ, ಯಾವುದೇ ಒಂದು ಮತಧರ್ಮದ ಪ್ರಭಾವವಷ್ಟನ್ನೆ ಮೂಲ ಮಾನವಾಗಿರಿಸಿಕೊಂಡ ಈ ವಿಭಾಗ ಅಷ್ಟು ಸಮರ್ಪಕವೆನ್ನಿಸುವುದಿಲ್ಲ. ಇನ್ನು ಅಂದಂದಿನ ಭಾಷಾರೂಪಗಳನ್ನು ಮೂಲಮಾನವನ್ನಾಗಿರಿಸಿಕೊಂಡು ಸಾಹಿತ್ಯಚರಿತ್ರೆಯನ್ನು ಅಭ್ಯಾಸ ಮಾಡಬಹುದೆಂಬ ಒಂದು ವಿಧಾನವೂ ಸೂಚಿತವಾಗಿದೆ. ಅದರ ಪ್ರಕಾರ : ಆರಂಭದ ಕಾಲದಿಂದ ಕ್ರಿ.ಶ. ೭೫೦ರ ವರೆಗೆ ಪೂರ್ವದ ಹಳಗನ್ನಡ ಕಾಲ; ಕ್ರಿ.ಶ. ೭೫೦ ರಿಂದ ೧೧೫೦ರವರೆಗೆ ಹಳಗನ್ನಡ ಕಾಲ. ೧೧೫೦ ರಿಂದ ೧೭೦೦-೧೭೫೦ರ ವರೆಗೆ ನಡುಗನ್ನಡ ಕಾಲ. ೧೭೦೦ ರಿಂದ ೧೮೫೦ರ ವರೆಗೆ ಹೊಸಗನ್ನಡ ಕಾಲ. ೧೮೫೦ರಿಂದ ಮುಂದಕ್ಕೆ ನವಗನ್ನಡ ಕಾಲ. ಭಾಷಾರೂಪವನ್ನು ಮೂಲಮಾನವನ್ನಾಗಿಸಿಕೊಂಡ ಈ ವಿಧಾನವೂ ಸಂಪೂರ್ಣವಾಗಿ ಸರಿ ಹೊಂದುವುದಿಲ್ಲ. ಏಕೆಂದರೆ ಹಳಗನ್ನಡದ ಬರವಣಿಗೆ ಯಾವುದೋ ಒಂದು ಕಾಲದಿಂದ ಇನ್ನೊಂದು ಕಾಲದವರೆಗೆ ಮಾತ್ರ ಪ್ರಚಲಿತವಾಗಿತ್ತೆಂದು ಹೇಳಲು ಬಾರದು. ನಡುಗನ್ನಡದ ಹಾಗೂ ಅನಂತರದ ಕಾಲದಲ್ಲೂ ಹಳಗನ್ನಡದ ಕಾವ್ಯರಚನೆ ನಡೆದಿದೆ; ಆಧುನಿಕ ಕಾಲದಲ್ಲೂ ಹಳಗನ್ನಡದಲ್ಲಿ ಬರೆದವರಿದ್ದಾರೆ. ಸೂಚಿತವಾದ ಇನ್ನೊಂದೆರಡು ವಿಧಾನಗಳೆಂದರೆ, ಕ್ಷಾತ್ರ ಯುಗ, ಮತ ಪ್ರಚಾರ ಯುಗ, ಸಾರ್ವಜನಿಕ ಯುಗ ಮತ್ತು ಆಧುನಿಕ ಯುಗ. ಇದು ಅಂದಂದಿನ ಮುಖ್ಯ ಕಾಲ ಧರ್ಮ ಸತ್ವವನ್ನು ಅನುಲಕ್ಷಿಸಿ ಮಾಡಿದ ವಿಭಾಗ ಕ್ರಮ. ಮಾರ್ಗಯುಗ, ದೇಸೀ ಯುಗ, ಸಂಕ್ರಮಣ ಯುಗ ಇದು ಅಂದಂದಿನ ಕಾವ್ಯರೂಪಗಳನ್ನು ಗಮನದಲ್ಲಿರಿಸಿಕೊಂಡು ಸೂಚಿತವಾದ ಕ್ರಮ. ಹೀಗೆಯೇ ಕರ್ನಾಟಕವನ್ನು ಆಳಿದ ಪ್ರಮುಖ ರಾಜಮನೆತನಗಳನ್ನು ಮೂಲಮಾನವನ್ನಾಗಿ ಮಾಡಿಕೊಂಡು ಸಾಹಿತ್ಯ ಚರಿತ್ರೆಯನ್ನು ವಿಭಾಗಿಸಿ ನೋಡಬಹುದೆಂದು ಕೆಲವರ ಮತ. ಇವೆಲ್ಲಕ್ಕಿಂತ ಹೆಚ್ಚು ನಿರ್ದುಷ್ಟವಾದದ್ದು ಅಂದಂದಿನ ಸಾಹಿತ್ಯಕ ಚಳುವಳಿಯ ಕೇಂದ್ರದಲ್ಲಿ ನಿಂತ ಪ್ರಮುಖ ಕವಿಗಳನ್ನು ಆಧಾರವಾಗಿರಿಸಿಕೊಂಡು ಮಾಡುವ ವಿಭಾಗ. ಪಂಪಯುಗ, ಬಸವಯುಗ, ಹರಿಹರಯುಗ, ಕುಮಾರವ್ಯಾಸಯುಗ, ಹೀಗೆ ಪರಂಪರೆಯೊಂದರ ನಿರ್ಮಾಪಕರಾಗಿ ಅಂದಂದಿನ ಸಾಹಿತ್ಯವನ್ನು ನಿಯಂತ್ರಿಸಿದ ಕವಿ ವ್ಯಕ್ತಿತ್ವಗಳನ್ನು ಕೇಂದ್ರವನ್ನಾಗಿಸಿ ಅಧ್ಯಯನ ಮಾಡುವುದು ಹೆಚ್ಚು ಕ್ಷೇಮವೆಂದು ತೋರುತ್ತದೆ.

ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆಯುವವರಿಗೆ ಇರುವ ಮುಖ್ಯವಾದ ತೊಡಕೆಂದರೆ, ಕವಿಗಳ ಕಾಲ-ದೇಶ-ನಾಮ ವಿಚಾರಗಳನ್ನು ಕುರಿತದ್ದು. ನಮ್ಮ ಕವಿಗಳು ಬಹುಮಟ್ಟಿಗೆ ಕಾಲದೇಶನಾಮಾತೀತರು! ಅವರಿಗೆ ತಮ್ಮ ಸ್ವಂತ ವಿಚಾರಗಳನ್ನು ಹೇಳಿಕೊಳ್ಳುವುದರಲ್ಲಿ ಆಸಕ್ತಿಯೇ ಇಲ್ಲ-ಪಂಪ, ರನ್ನ, ಜನ್ನರಂಥ ಕೆಲವರನ್ನು ಬಿಟ್ಟರೆ. ಕಾವ್ಯ ಅನ್ನುವುದು ಒಂದು ಧಾರ್ಮಿಕಕ್ರಿಯೆ (Ritual) ಯಂತೆ ಭಾವಿಸಿದರೇ ವಿನಾ, ಅದೊಂದು ಕವಿ ಎಂಬ ಮನುಷ್ಯನ ನಿರ್ಮಿತಿ ಎಂಬ ಬಗ್ಗೆ ಕವಿಗಳು ತಟಸ್ಥವಾಗಿದ್ದಾರೆ. ತಾವು ಬೇರೊಂದು ದೈವೀ ಶಕ್ತಿಯ ಉಪಕರಣವೆಂದು ಅಂದುಕೊಳ್ಳುವುದರಲ್ಲಿಯೇ ಬಹು ಜನಕ್ಕೆ ಆಸಕ್ತಿ. ನಾನು ವೀಣೆ, ಆತ ವೈಣಿಕ, ನಾನು ಗುಹೆ, ಆತ ಗುಹೇಶ್ವರ, ನಾನು ಲಿಪಿಕಾರ, ಆತನೇ ಲೇಖಕ – ಎಂದು ತಾವು ಬೇರೊಂದು ಸ್ಫೂರ್ತಿ ಮೂಲವಾದ ದೈವೀಶಕ್ತಿಯ ಉಪಕರಣ ಎಂದು ಭಾವಿಸಿದ್ದರಿಂದ ತಮ್ಮ ಲೌಕಿಕ ವ್ಯಕ್ತಿತ್ವವನ್ನು ಕೃತಿಯ ಮೊದಲಲ್ಲಿ ಸ್ಪಷ್ಟವಾಗಿ ಹೇಳಿಕೊಳ್ಳುವ ಗೊಡವೆಗೆ ಕವಿಗಳು ಹೋಗಲಿಲ್ಲ. ಕನ್ನಡ ಕವಿಗಳ ಮಟ್ಟಿಗೆ ಹೇಳುವುದಾದರೆ ಜೈನ ಕವಿಗಳು ಈ ಭಾವನೆಯಿಂದ ಬಹುಮಟ್ಟಿಗೆ ಹೊರತಾಗಿದ್ದಾರೆ. ಕನ್ನಡದ ಮೊದಲ ಕವಿಯಾದ ಪಂಪ ತನ್ನ ಸ್ವಂತ ವಿಚಾರಗಳನ್ನು ಯಾವ ಸಂಕೋಚವೂ ಇಲ್ಲದೆ ಹೇಳಿಕೊಂಡಿದ್ದಾನೆ. ತನ್ನ ತಂದೆ, ತಾಯಿ, ವಂಶ, ಗುರು ಪರಂಪರೆ, ಸ್ನೇಹ-ವಿಶ್ವಾಸಗಳು, ತನ್ನ ಪ್ರೇಯಸಿಯರು ಯಾವ ಯಾವ ಪ್ರಾಂತ್ಯದಿಂದ ಬಂದವರು, ತನಗೆ ತನ್ನ ರಾಜನಿಂದ ದೊರೆತ ಸನ್ಮಾನ ಬಿರುದುಗಳು, ಕಡೆಗೆ ತಾನು ಹುಟ್ಟಿದ ತಾರೀಖನ್ನು ಕೂಡಾ ಸ್ಪಷ್ಟವಾಗಿ ಹೇಳಿದ್ದಾನೆ. ಇವನಂತೆ ರನ್ನ, ಜನ್ನರಂಥ ಇನ್ನೂ ಕೆಲವರೂ ಹೇಳಿಕೊಂಡಿದ್ದಾರೆ. ಆದರೆ, ಸಹಸ್ರಾರು ಕವಿಗಳಿಂದ ಇಡಿಕಿರಿದ ಕನ್ನಡ ಸಾಹಿತ್ಯದಲ್ಲಿ ಮುಕ್ಕಾಲು ಪಾಲಿಗಿಂತ ಮಿಗಿಲಾದ ಸಂಖ್ಯೆಯ ಕವಿಗಳ ಕಾಲ-ದೇಶಾದಿ ಸಂಗತಿಗಳು ತಿಳಿಯುವುದೇ ಇಲ್ಲ. ಕೆಲವರಂತೂ ತಮ್ಮ ಬಿರುದುಗಳಿಂದ, ಅಂಕಿತಗಳಿಂದಲೇ ತೃಪ್ತರು. ಇನ್ನು ಕೆಲವರು ಒಗಟಿನಂಥ ತಂತ್ರದಲ್ಲಿ ತಮ್ಮ ಕಾಲವನ್ನು ಹೇಳಿಕೊಳ್ಳುತ್ತಾರೆ. ಆ ಒಗಟನ್ನು ಒಡೆದು ನಿಜವಾದ ಕಾಲವನ್ನು ಪತ್ತೆ ಹಚ್ಚಬೇಕಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಕವಿಗಳಿಗೆ ಚಾರಿತ್ರಿಕ ಪ್ರಜ್ಞೆ ಇಲ್ಲದಿರುವುದು. ಪಾಶ್ಚಾತ್ಯರಲ್ಲಿ ಕವಿಯೇ ತಾನು ಬರೆದಿಟ್ಟ ದಿನಚರಿಗಳಿಂದ, ಕವಿಯ ಸಮಕಾಲೀನರಾದ ಇತರ ಲೇಖಕರು ಹಾಗೂ ಸ್ನೇಹಿತರು ಕವಿಯನ್ನು ಕುರಿತು ಬರೆದ ಐತಿಹ್ಯಗಳಿಂದ, ವರದಿಗಳಿಂದ, ಕವಿಯ ವಾಸ್ತವ ಜೀವನದ ಚಿತ್ರವನ್ನು ಬರೆದಿಡಲು ಸಾಧ್ಯವಾಗಿದೆ. ನಮ್ಮಲ್ಲಿ ಅಂಥ ದೃಷ್ಟಿಯೇ ಬೆಳೆಯಲಿಲ್ಲ.[2] ಅದರ ಬದಲು ಎಂತೆಂಥವೋ ರೋಚಕವಾದ ಕತೆಗಳು ಕವಿಗಳ ಹೆಸರಿನ ಸುತ್ತ ಹೆಣೆದುಕೊಳ್ಳುತ್ತವೆ. ನಿದರ್ಶನಕ್ಕೆ ನೇಮಿಚಂದ್ರನ ‘ಲೀಲಾವತಿ’ಯಂಥ ಶೃಂಗಾರ ಕಾವ್ಯದ ಮಹತ್ತನ್ನು ಹೆಚ್ಚಿಸಲು ಸಂಸ್ಕೃತದ ಸುಪ್ರಸಿದ್ಧ ಶೃಂಗಾರ ಕಾವ್ಯವಾದ ‘ಕಾದಂಬರೀ’ ಕಾವ್ಯವನ್ನು ಸುಟ್ಟು ಲೀಲಾವತೀ ಕಾವ್ಯಕ್ಕೆ ಬೊಟ್ಟನ್ನು ಇಡಿಸಿದರೆಂಬ ಒಂದು ಕತೆಯನ್ನು ನೋಡಬಹುದು. ಹಾಗೆಯೇ, ರುದ್ರಭಟ್ಟ ಷಡಕ್ಷರಿಯನ್ನು ಕುರಿತ ಕತೆಯೊಂದಿದೆ. ರುದ್ರಭಟ್ಟನು ಷಡಕ್ಷರಿಯ ಮೇಲಿನ ಸ್ಪರ್ಧೆಯಿಂದ ‘ಜಗನ್ನಾಥ ವಿಜಯ’ವನ್ನು ಬರೆದನಂತೆ. ಬರೆದು ಷಡಕ್ಷರಿಯ ಕಾವ್ಯವಾದ ‘ರಾಜಶೇಖರವಿಳಾಸ’ದ ಮಟ್ಟಕ್ಕೆ ಏರಲಾರದೆ ಸೋತು, ತನ್ನ ಬಿರುದುಗಳೆಲ್ಲವನ್ನೂ ಷಡಕ್ಷರಿಗೆ ಒಪ್ಪಿಸಿದನಂತೆ. ಇದನ್ನು ತಿಳಿದ ಲಕ್ಷ್ಮೀಶನು, ರುದ್ರಭಟ್ಟನಿಗಾದ ಅವಮಾನವನ್ನು ಹೋಗಲಾಡಿಸಲು, ‘ಜೈಮಿನಿ ಭಾರತ’ವನ್ನು ಬರೆದು ಷಡಕ್ಷರಿಯನ್ನು ಹಿಂದೆ ಹಾಕಿದನಂತೆ! ಇದು ಒಂದು ದಂತಕತೆ. ರುದ್ರಭಟ್ಟನ ಕಾಲ ಹನ್ನೆರಡನೆಯ ಶತಮಾನದ ತುದಿ; ಷಡಕ್ಷರಿ ಹದಿನೇಳನೆಯ ಶತಮಾನದವನು; ಲಕ್ಷ್ಮೀಶ ಷಡಕ್ಷರಿಗಿಂತ ಒಂದು ಶತಮಾನ ಮೊದಲಿನವನು. ಈ ಮೂವರಲ್ಲೂ ಸ್ಪರ್ಧೆಯಾಯಿತೆಂದು ಹೇಳುವ ದಂತ ಕತೆಯನ್ನು ನಂಬಿದರೆ ಚರಿತ್ರೆಯೇ ತಲೆಕೆಳಗಾಗುತ್ತದೆ. ಹೀಗೆಯೇ ಕುಮಾರವ್ಯಾಸ ಚಾಮರಸರಿಗೆ ಸ್ಪರ್ಧೆಯುಂಟಾಯಿತೆಂದು ಹೇಳುವ ಕತೆಗಳಿವೆ. ಇಂಥ ಅನಾರೋಗ್ಯಕರವಾದ ಕತೆಗಳನ್ನು ಐತಿಹಾಸಿಕ ದಾಖಲೆಗಳಾಗಿ ತೆಗೆದುಕೊಳ್ಳುವುದು ಅಪಾಯ. ಇಂಥವುಗಳ ಅರ್ಥ ನಮ್ಮ ಜನಕ್ಕೆ ಇತಿಹಾಸದ ಕಲ್ಪನೆಯೇ ಇರಲಿಲ್ಲ ಎನ್ನುವುದು. ಆದರೂ ಅಂದಂದಿನ ಆಶ್ರಯದಾತರಾದ ರಾಜರ ಉಲ್ಲೇಖಗಳಿಂದ, ಪೂರ್ವ ಕವಿಗಳ ಸ್ಮರಣೆ, ಸ್ತುತಿ, ಉಲ್ಲೇಖಗಳ ಆಧಾರದಿಂದ, ಶಾಸನಗಳ ಸಹಾಯದಿಂದ, ಅಂದಂದಿನ ಕಾಲದ ಭಾಷಾ ರೂಪಗಳ ವಿಶ್ಲೇಷಣೆಯಿಂದ, ಕವಿಗಳ ಕಾಲದೇಶಾದಿ ಚರಿತ್ರೆಗಳನ್ನು ವಿದ್ವಾಂಸರು ತಕ್ಕಮಟ್ಟಿಗೆ ರಚಿಸಿದ್ದಾರೆ. ಇದರ ಜತೆಗೆ, ಇನ್ನೂ ದೊರೆಯಬೇಕಾದ ಕವಿ-ಕೃತಿಗಳ ಸಂಖ್ಯೆಯೂ ಸಾಕಷ್ಟಿದೆ. ಸಾವಿರ ವರ್ಷಕ್ಕೂ ಮೀರಿದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ, ನಮ್ಮ ಜನಗಳ ಅನಕ್ಷರತೆಯಿಂದಲೋ, ಉದಾಸೀನತೆಯಿಂದಲೋ ಮತ್ತು ಮೂಢನಂಬಿಕೆಗಳಿಂದಲೋ, ಎಷ್ಟೋ ಗ್ರಂಥಗಳು ನಷ್ಟವಾಗಿವೆ. ಇನ್ನೆಷ್ಟು ತಾಳೆಯೋಲೆಯ ಗ್ರಂಥಗಳನ್ನು ನಮ್ಮ ಜನ ಇನ್ನೂ ಪೂಜ್ಯ ಭಾವನೆಯಿಂದ ದೇವರ ಕೋಣೆಯ ಕತ್ತಲಿನಲ್ಲಿ ಹುದುಗಿಸಿ ಬೂಷ್ಟು ಹಿಡಿಸಿದ್ದಾರೊ, ಇನ್ನೆಷ್ಟನ್ನು ತಿಳಿಯದೆ ತಿಪ್ಪೆಗೆಸೆದಿದ್ದಾರೋ, ನೀರೊಲೆಗೆ ಹಾಕಿ ಬೆಂಕಿ ಕಾಯಿಸಿ ಕೊಂಡಿದ್ದಾರೋ ತಿಳಿಯದಾಗಿದೆ. ಬಹುಶಃ ಮತ್ತೊಂದು ಸಲ ಇಡೀ ಕನ್ನಡ ಜನದ ಮನೆ ಮನೆಗಳನ್ನು ಶೋಧಿಸಿದರೆ, ಕೇವಲ ನಾಮಾಂಕಿತರಾಗಿರುವ ಕವಿಗಳ ಎಷ್ಟೋ ಕೃತಿಗಳು ಸಿಕ್ಕರೂ ಸಿಗಬಹುದು.


[1] ಸಾಧನೆ ೧-೩ (೧೯೭೨) ಡಾ. ಎಂ. ಚಿದಾನಂದಮೂರ್ತಿ

[2] ರಾಘವಾಂಕನು ಬರೆದ ಹರಿಹರ ಮಹತ್ವ, ಹರಿಹರನನ್ನು ಕುರಿತ ಜೀವನ ಚರಿತ್ರೆಯೆಂದು ತೋರುತ್ತದೆ. ದುರದೃಷ್ಟವಶಾತ್ ಅದು ದೊರೆತಿಲ್ಲ. ಸಿದ್ಧನಂಜೇಶನು ಬರೆದ ರಾಘವಾಂಕ ಚರಿತೆ, ರಾಘವಾಂಕನ ಬದುಕನ್ನು ಕುರಿತದ್ದು. ಇದು ಸಿಕ್ಕಿದೆ. ಇವೆರಡೇ ಜೀವನ ಚರಿತ್ರೆಯ ಬಗೆಗಿನ ಕೃತಿಗಳು. ಸಿದ್ಧನಂಜೇಶನ ಕೃತಿ ಕೂಡಾ ನಿಜವಾದ ಅರ್ಥದಲ್ಲಿ ಐತಿಹಾಸಿಕ ಎಂದು ಹೇಳಲುಬಾರದು.