ಸಾಹಿತ್ಯ ಅಥವಾ ಹಳಗನ್ನಡ ಪರಂಪರೆಯ ಪರಿಭಾಷೆಯಲ್ಲಿ ಹೇಳುವುದಾದರೆ ಕಾವ್ಯ, ಭಾಷೆಯಲ್ಲಿ ಸಂಭವಿಸತಕ್ಕದ್ದು. ಎಂದರೆ ಕವಿಗೆ ಇರುವ ಸಾಧನ – ಸಾಮಗ್ರಿಯೆಲ್ಲವೂ ಭಾಷೆಯೇ. ಈ ಭಾಷೆ ಕವಿ ಬದುಕುವ ಪರಿಸರದ ಒಂದು ಸಾಮಾಜಿಕ ಸಂಪರ್ಕ ಮಾಧ್ಯಮ. ಅದು ಸಮಾಜದ ವ್ಯಕ್ತಿಗಳ ವ್ಯವಹಾರದ ಮಾಧ್ಯಮವಾದುದರಿಂದಲೇ. ಕವಿ ತಾನು ಬದುಕುವ ಸಮಾಜದೊಂದಿಗೆ, ತನ್ನ ಭಾವನೆಗಳನ್ನು ತಿಳಿಯಪಡಿಸಲು, ಅಥವಾ ಹಂಚಿಕೊಳ್ಳಲು, ಆ ಸಮಾಜದ ಸಂಪರ್ಕ ಮಾಧ್ಯಮವಾದ ಭಾಷೆಯನ್ನೆ ಅವಲಂಬಿಸಬೇಕಾಗುತ್ತದೆ. ಎಂದರೆ, ಕವಿಯ ಮೂಲಭೂತವಾದ ಉದ್ದೇಶ, ಈ ಸುತ್ತಣ ಭಾಷೆಯನ್ನು ತನ್ನ ಅನುಭವದ ಅಭಿವ್ಯಕ್ತಿಗೆ ದುಡಿಸಿಕೊಳ್ಳುವುದು. ಹೀಗೆ ಮಾಡಬೇಕಾದರೆ, ಕವಿ ಅದನ್ನು ಯಥಾವತ್ತಾಗಿ ಬಳಸದೆ, ಅದನ್ನು ತನ್ನ ಭಾವದ ಭಾಷೆಯನ್ನಾಗಿ ಮಾಡಿಕೊಳ್ಳುತ್ತಾನೆ, ಅಥವಾ ಯಥಾವತ್ತಾದ ಭಾಷೆಯನ್ನು ಒಂದಷ್ಟು ಪರಿಷ್ಕರಿಸಿ, ತನ್ನ ವ್ಯಕ್ತಿವಿಶಿಷ್ಟವಾದ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳುತ್ತಾನೆ.

ಕನ್ನಡ ಕಾವ್ಯ ಪರಂಪರೆಯಲ್ಲಿ ಹಿಂದಿನಿಂದ ಇಂದಿನತನಕ ಪ್ರಯಾಣ ಮಾಡಿಕೊಂಡು ಬರುವ ಓದುಗ, ಭಾಷೆಯ ವಿಚಾರದಲ್ಲಿ ನಮ್ಮ ಕವಿಗಳು ತಾಳಿದ ಧೋರಣೆಗಳನ್ನು, ಭಾಷೆಯನ್ನು ತನ್ನ ಕಾವ್ಯದ ಮಾಧ್ಯಮವನ್ನಾಗಿ ಮಾಡಿಕೊಂಡ ರೀತಿಗಳನ್ನು ಕಂಡು ಆಶ್ಚರ್ಯಪಡುವಂತಾಗುತ್ತದೆ. ಅತ್ಯಂತ ಪ್ರೌಢಾವಸ್ಥೆಯಿಂದ ಹಿಡಿದು ಅತ್ಯಂತ ಸರಳತೆಯವರೆಗೂ ಇರುವ ಈ ವಿವಿಧ ಭಾಷಾರೂಪಗಳು, ಅಂದಂದಿನ ಛಂದೋರೂಪಗಳನ್ನು ಮಾರ್ಪಡಿಸಿರುವುದನ್ನೂ ಕಾಣಬಹುದು. ಭಾಷೆ ಎಲ್ಲೆಲ್ಲಿ ತನ್ನ ಸಮಾಜದೊಂದಿಗೆ ಸಂಪರ್ಕವನ್ನೆ ಕಳೆದುಕೊಳ್ಳುವಷ್ಟರಮಟ್ಟಿಗೆ, ಪ್ರೌಢಾವಸ್ಥೆಯನ್ನು ತಾಳಿದೆಯೋ ಅಲ್ಲೆಲ್ಲ ಅದು ‘ಮಾರ್ಗ ಕಾವ್ಯ’ ಪದ್ಧತಿಯಾಗಿ, ಮತ್ತು ಎಲ್ಲೆಲ್ಲಿ ಆ ಒಂದು ಸ್ಥಿತಿಯಿಂದ ಕೆಳಗಿಳಿಸಿ ಅದು ಕಳೆದುಕೊಂಡ ಸಾಮಾಜಿಕ ಸಂಪರ್ಕವನ್ನು ಮತ್ತೆ ಸ್ಥಾಪಿಸುವ ಹೋರಾಟದ ಸಂದರ್ಭಗಳಲ್ಲಿ ‘ದೇಸಿಕಾವ್ಯ’ ಪದ್ಧತಿಯಾಗಿ ಕಾಣಿಸಿಕೊಳ್ಳುತ್ತದೆ. ಹೊಸಗನ್ನಡ ಸಾಹಿತ್ಯವನ್ನು ಹೊರತುಪಡಿಸಿ ನೋಡಿದರೆ, ಹಿಂದಿನ ಸಾಹಿತ್ಯದ ಮಟ್ಟಿಗೆ ‘ಮಾರ್ಗ’ ‘ದೇಸೀ’ ಎಂಬಿವು ಸಾಹಿತ್ಯದ ಭಾಷೆಯ ಎರಡು ಮುಖ್ಯ ರೂಪ – ಲಕ್ಷಣಗಳನ್ನು ಸೂಚಿಸುತ್ತವೆ. ಈ ಎರಡೂ ಕನ್ನಡ ಸಾಹಿತ್ಯದಲ್ಲಿ ಒಂದರ ಹಿಂದೊಂದು, ಒಂದರ ಜತೆಗೊಂದು – ಎನ್ನುವಂತೆ ಬಂದಿವೆ. ಕನ್ನಡ ಸಾಹಿತ್ಯಾರಂಭದ ಮೊದಲೆರಡು ಶತಮಾನಗಳಲ್ಲಿ, ಅದು ನೂರಕ್ಕೆ ನೂರರಷ್ಟು ‘ಮಾರ್ಗ’ ವಾದದ್ದು, ಅನಂತರದ ಕಾಲಗಳಲ್ಲಿ, ಹನ್ನೆರಡನೆಯ ಶತಮಾನದ ನಯಸೇನನಿಂದ ಹಿಡಿದು ಕುಮಾರವ್ಯಾಸನ ತನಕ ಮಾರ್ಗ – ದೇಸಿಗಳೆರಡೂ ಜತೆಜತೆಯಾಗಿ ಇದ್ದದ್ದನ್ನು ಕಾಣಬಹುದು. ವಚನಕಾರರ ಕ್ರಾಂತಿಯಿಂದಾಗಿ ಭಾಷೆಯಲ್ಲಿ ಸರಳತೆ, ಕಾವ್ಯ ರಚನೆಯಲ್ಲಿ ದೇಸಿಯತೆ ಕಾಣಿಸಿಕೊಂಡರೂ ಅದೇ ಕಾಲದ ನೇಮಿಚಂದ್ರ, ರುದ್ರಭಟ್ಟನಂಥವರಿಂದ, ತಕ್ಕ ಪ್ರಮಾಣದ ಪ್ರೌಢ ಚಂಪೂಕಾವ್ಯಗಳ ರಚನೆಯೂ ಆಗಿದೆ. ಕನ್ನಡದಲ್ಲಿ ನಿಜವಾಗಿಯೂ ದೇಸಿ ಯುಗವೆಂದು ಕರೆಯುವುದಾದರೆ, ಅದು ಕುಮಾರವ್ಯಾಸನಿಂದ ಷಡಕ್ಷರಿಯ ವರೆಗಿನ ಕಾಲವನ್ನು ಮಾತ್ರ. ಇದು ಷಟ್ಪದಿ – ಸಾಂಗತ್ಯಗಳ ಸುಗ್ಗಿಯಕಾಲ. ಹದಿನೇಳನೆಯ ಶತಮಾನದಿಂದ ಮೊದಲಾದ ಮೈಸೂರೊಡೆಯರ ಕಾಲ, ಮತ್ತೆ ಪ್ರೌಢವಾದ ‘ಮಾರ್ಗ ಕಾವ್ಯ’ಗಳ ಕಾಲವಾಗಿ, ಷಡಕ್ಷರಿ, ತಿರುಮಲಾರ‍್ಯ, ಚಿಕುಪಾಧ್ಯಾಯ ಇವರುಗಳಿಂದ ರಚಿತವಾದ ಚಂಪೂಕಾವ್ಯಗಳ ಅಬ್ಬರದಿಂದ ತುಂಬಿಕೊಳ್ಳುತ್ತದೆ. ಮುಂದೆ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಿಂದ, ಕಾವ್ಯದ ಭಾಷೆ, ಪ್ರೌಢತೆಯ ಬಂಧನದಿಂದ ಕ್ರಮಕ್ರಮವಾಗಿ ಬಿಡಿಸಿಕೊಂಡು, ಹೊಸಗನ್ನಡ ಸಾಹಿತ್ಯದಲ್ಲಿ ಮತ್ತೆ ಜನಜೀವನಕ್ಕೆ ಹತ್ತಿರವಾಗಿ, ಅದು ಕಳೆದುಕೊಂಡ ಸಾಮಾಜಿಕ ಸಂಪರ್ಕವನ್ನು ಸ್ಥಾಪಿಸಿಕೊಂಡಿದೆ. ಇದು ಸ್ಥೂಲವಾಗಿ ಕಾವ್ಯಗಳಿಗೆ ಮಾಧ್ಯಮವಾದ ಭಾಷಾರೂಪದ ಚರಿತ್ರೆ.

ಇದುವರೆಗೂ ‘ಮಾರ್ಗ’ ‘ದೇಸೀ’ ಎಂಬ ಎರಡು ಮಾತುಗಳನ್ನು ಬಳಸಿದೆವು. ಅವುಗಳನ್ನು ಇನ್ನಷ್ಟು ಸ್ಪಷ್ಟಮಾಡುವುದು ಅಗತ್ಯವೆಂದು ತೋರುತ್ತದೆ. ‘ಮಾರ್ಗ’ ಎಂದರೆ ಸ್ಥೂಲವಾಗಿ ಹೇಳುವುದಾದರೆ, ಯಾವ ಬರವಣಿಗೆ ಅತ್ಯಂತ ಪ್ರೌಢವೂ – ಗಂಭೀರವೂ ಆಗಿರುತ್ತದೆಯೋ ಅದು; ದೇಸಿಯೆಂದರೆ ಯಾವ ಬರವಣಿಗೆ ಸರಳವೂ, ಜನದ ಆಡುಮಾತಿಗೆ ಸಮೀಪವೂ ಆಗಿದ್ದಾಗಿದೆಯೋ, ಅದು – ಎನ್ನಬಹುದು. ‘ಮಾರ್ಗ’ ಕಾವ್ಯದ ಬರವಣಿಗೆ ಪ್ರೌಢವೂ, ಕ್ಲಿಷ್ಟವೂ ಆದುದಕ್ಕೆ ಕಾರಣ ಅದು ಸಂಸ್ಕೃತದ ಪ್ರಭಾವದಿಂದ, ಸಂಸ್ಕೃತ ಕಾವ್ಯಪದ್ಧತಿಯ ಮಾದರಿಯಲ್ಲಿಯೆ ರಚಿತವಾದದ್ದು ಎನ್ನುವುದು. ದೇಸಿಯದು, ಸರಳವಾಗಿರಲು, ಕಾರಣ, ಸಂಸ್ಕೃತದ ಪ್ರಭಾವದಿಂದ ತಪ್ಪಿಸಿಕೊಂಡು, ದೈನಂದಿನ ಸರಳಭಾಷೆಯಲ್ಲಿ, ಜನಕ್ಕೆ ಪರಿಚಿತವಾದ ಜನಪದ ಛಂದಸ್ಸಿನಲ್ಲಿ ರಚಿತವಾದದ್ದು. ಎಂದರೆ ಇಲ್ಲಿ ಮುಖ್ಯವಾಗಿ ಕಾಣುವುದು, ಕನ್ನಡ ಕಾವ್ಯ ಸಂಸ್ಕೃತದ ಪ್ರಭಾವಕ್ಕೆ ಒಳಗಾದ ಹಾಗೂ ಅದರಿಂದ ತಪ್ಪಿಸಿಕೊಂಡ ಎರಡು ಸ್ಥಿತಿಗಳೆ ಕನ್ನಡ ಕಾವ್ಯದ ಭಾಷೆಯ ಸ್ವರೂಪವನ್ನು ನಿರ್ಧರಿಸಿವೆ ಎನ್ನುವುದು. ಹಾಗಾದರೆ, ಕನ್ನಡ ಕಾವ್ಯ ಎಂದೆಂದೂ ತನ್ನ ಸಾಮಾಜಿಕ ಮಾಧ್ಯಮವಾಗಿರದ ಸಂಸ್ಕೃತದ ಪ್ರಭಾವಕ್ಕೆ ಒಳಗಾದದ್ದು ಯಾಕೆ? ಕನ್ನಡ ಕವಿಗಳು ತಮ್ಮ ಸಾಮಾಜಿಕ ಮಾಧ್ಯಮವಾದ ಕನ್ನಡವನ್ನು ತಮ್ಮ ಕಾವ್ಯದ ಭಾಷೆಯನ್ನಾಗಿ ಮಾಡಿಕೊಳ್ಳಲು ಇದ್ದ ಆತಂಕಗಳು ಯಾವುವು – ಎನ್ನುವ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ.

ಸಂಸ್ಕೃತ ಎಂದಾದರೂ ಭಾರತದಲ್ಲಿ ಜನರ ವ್ಯಾವಹಾರಿಕ ಭಾಷೆಯಾಗಿ, ಸಾಮಾಜಿಕ ಮಾಧ್ಯಮದ ಭಾಷೆಯಾಗಿ ಇತ್ತೆ ಎಂಬುದೆ ಸಂದೇಹ. ಬಹುಶಃ ಎಂದೂ ಸಂಸ್ಕೃತ ಸಾಮಾಜಿಕ ಮಾಧ್ಯಮದ ಭಾಷೆಯಾಗಿರಲಿಲ್ಲವೆಂದೇ ತೋರುತ್ತದೆ. ಆದರೆ ಅದು ಈ ದೇಶದ ‘ಬುದ್ಧಿವಂತ’ರಾದ ವೈದಿಕರ, ವಿದ್ವಾಂಸರ ಮತ್ತು ಇವರಿಬ್ಬರನ್ನೂ ಉದ್ದಕ್ಕೂ ಪೋಷಿಸಿಕೊಂಡು ಬಂದ ರಾಜಾಸ್ಥಾನಗಳ ಭಾಷೆಯಾಗಿತ್ತು. ಹೀಗೆ ಜನಸಾಮಾನ್ಯರು ಎಂದೂ ವ್ಯವಹಾರದಲ್ಲೇ ತಾರದ ಭಾಷೆಯೊಂದು, ಈ ದೇಶದ ಜನದ ಅಂತರಂಗವನ್ನು ಬಿಂಬಿಸಬೇಕಾದ ಸಾಹಿತ್ಯದ ಭಾಷೆಯಾಗಿ ಮೆರೆದದ್ದು ಪರಮಾಶ್ಚರ್ಯಗಳಲ್ಲಿ ಒಂದು. ತಾನು ಹುಟ್ಟಿ ಬೆಳೆದ ಸಮಾಜಕ್ಕೆ ನೇರವಾಗಿ ಸಂಬಂಧಿಸಿದ ಕವಿ, ಆ ಸಮಾಜದ ವ್ಯವಹಾರಿಕ ಮಾಧ್ಯಮವಾಗದಿದ್ದ, ತನ್ನ ಜನ ಭಾಷೆಯನ್ನು ಬಳಸಿ ಕಾವ್ಯವನ್ನು ಬರೆಯಬೇಕಾದ ಸಂದರ್ಭಗಳಲ್ಲಿ ಅದನ್ನೂ ಸಂಸ್ಕೃತದ ಪ್ರಭಾವದಿಂದ ಪ್ರೌಢವನ್ನಾಗಿ ಮಾಡಿದ್ದು ಒಂದು ವೈಪರೀತ್ಯದಂತೆ ತೋರುತ್ತದೆ. ಇದಕ್ಕೆ ಕಾರಣ ಸಂಸ್ಕೃತವು ಪಂಡಿತ ಮಂಡಲಿಯ ಹಾಗೂ ರಾಜಾಸ್ಥಾನಗಳ ಭಾಷೆಯಾದದ್ದೆ. ಓದು-ಬರಹವನ್ನೆ ಕಾಣದ ಬಹುಸಂಖ್ಯಾತ ಜನಸಾಮಾನ್ಯರಿದ್ದ ಹಿಂದಿನ ಸಾಮಾಜಿಕ ಪರಿಸರದಲ್ಲಿ, ‘ದೇವಭಾಷೆ’ಯಾದ ಸಂಸ್ಕೃತವನ್ನು ಒಂದು ವರ್ಗದವರ ಹೊರತು ಇತರರು ಕಲಿಯುವುದಿರಲಿ ಒಂದು ವೇಳೆ ಉಚ್ಚರಿಸಿದರೂ ಅದು ಅಪವಿತ್ರವಾಗುವುದೆಂದೂ, ಸ್ತ್ರೀ-ಶೂದ್ರಾದಿಗಳು ಈ ಭಾಷೆಯಲ್ಲಿ ರಚಿತವಾದ ವೇದಾದಿಗಳನ್ನು ಕಲಿಯಲು ಅನರ್ಹರೆಂದೂ ಹೇಳಲಾಗುತ್ತಿದ್ದ ಹಿಂದಿನ ಕಾಲದಲ್ಲಿ, ಈ ಭಾಷೆಯಲ್ಲಿ ರಚಿತವಾದ ಕಾವ್ಯ-ಶಾಸ್ತ್ರಾದಿಗಳನ್ನು ಓದಬಲ್ಲವರು ಕೇವಲ ವಿದ್ವಾಂಸರು, ಅದೂ ದೇವಭಾಷೆಯನ್ನು ಕಲಿಯಲು ಅಧಿಕಾರ ಉಳ್ಳ ವೈದಿಕ ವಿದ್ವಾಂಸರು. ಆದುದರಿಂದ ಇಂಥ ಪ್ರೌಢಕಾವ್ಯಗಳ ಮಟ್ಟಿಗೆ ‘ಸಮಾಜ’ವೆಂದರೆ ಬಹುಶಃ ಇಂಥ ವಿದ್ವಾಂಸರಿಂದ ಕೂಡಿದ ‘ಸಮಾಜ’ ಎಂದೇ ಅರ್ಥವಿದ್ದಿರಬಹುದು. ಈ  ಬುಧ ಸಮಾಜದ ಆಸಕ್ತಿ ಅಭಿರುಚಿಗಳಿಗನುಸಾರವಾಗಿ, ಅವರ ಮನಃಪ್ರೀತ್ಯರ್ಥವಾಗಿ ರಚಿತವಾದ ಆಸ್ಥಾನಕಾವ್ಯಗಳು, ಅವು ಸಂಸ್ಕೃತಲ್ಲಾದರೂ ಇರಲಿ, ಸಂಸ್ಕೃತದ ಪ್ರಭಾವದಿಂದ ರಚಿತವಾದ ದೇಶಭಾಷೆಗಳಲ್ಲೇ ಇರಲಿ, ಅವು    ರಾಜರ ಮೆರವಣಿಗೆಗಳನ್ನು ಅನುಕರಿಸುವಂಥ ಶೈಲಿಯಲ್ಲಿ ರಚಿತವಾಗಿ, ನಿಜವಾದ ಬಹುಜನ ಸಮಾಜದ ಸಂಪರ್ಕವನ್ನು ಕಳೆದುಕೊಂಡದ್ದು ಸಹಜವೇ ಆಗಿದೆ. ಇಂಥ ಸಂಪರ್ಕರಾಹಿತ್ಯ ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿಯೆ ಕನ್ನಡ ಸಾಹಿತ್ಯ ಆರಂಭವಾದದ್ದು.

ಕನ್ನಡ ಸಾಹಿತ್ಯದ ಉತ್ಕರ್ಷದ ಆರಂಭ ಕಾಲಕ್ಕೆ ಆಗಲೇ ಸಂಸ್ಕೃತ, ಪ್ರಾಕೃತ, ತಮಿಳು ಸಾಹಿತ್ಯಗಳು ಉತ್ಕರ್ಷಸ್ಥಿತಿಯಿಂದ ಇಳಿಗಾಲಕ್ಕೆ ಬಂದಿದ್ದವು. ಮತ್ತು ಕನ್ನಡ ಭಾಷೆಯ ಮೇಲೆ ಸಂಸ್ಕೃತದ ದಟ್ಟವಾದ ಪ್ರಭಾವ ವ್ಯಾಪಿಸಿಕೊಂಡಿತ್ತು. ‘ಕವಿರಾಜಮಾರ್ಗ’ ಪೂರ್ವದ ಶಾಸನಗಳ ಭಾಷೆ ಈ ಮಾತಿಗೆ ಸಾಕ್ಷಿಯಾಗಿದೆ. ಅಲ್ಲದೆ ಈ ಕೆಲವು ಶಾಸನಗಳ ಛಂದಸ್ಸು ಕೂಡಾ ಸಂಸ್ಕೃತದ್ದೆ ಆಗಿದೆ. ಹೀಗೆ ಸಂಸ್ಕತ ಭಾಷೆಯ ದಟ್ಟವಾದ ಪ್ರಭಾವ ಮತ್ತು ಸಂಸ್ಕೃತ ಕಾವ್ಯಗಳ ಮಾದರಿಯ ಹಿನ್ನೆಲೆಯಲ್ಲಿ ಕನ್ನಡ ಕಾವ್ಯ ರೂಪುಗೊಳ್ಳಬೇಕಾದ ಪರಿಸ್ಥಿತಿ ಇತ್ತು. ವಾಸ್ತವವಾಗಿ ಕನ್ನಡ ಸಾಹಿತ್ಯಕ್ಕೆ ಇದ್ದ ದೊಡ್ಡ ಆತಂಕ ಸಂಸ್ಕೃತದ್ದು. ದೇವಭಾಷೆಯಾದ, ರಾಜಾಸ್ಥಾನದ ಭಾಷೆಯನ್ನು ಬಿಡಲು ಬರುವಂತಿಲ್ಲ, ಇತ್ತ ಕನ್ನಡದಲ್ಲಿ ಕಾವ್ಯರಚನೆಯನ್ನು ಮಾಡಬೇಕು – ಇಂಥ ಪರಿಸ್ಥಿತಿಯಲ್ಲಿ ಕನ್ನಡ ಕಾವ್ಯ ಭಾಷೆಯಲ್ಲಿ ಸಂಸ್ಕೃತವನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳಬೇಕು ಎನ್ನುವುದು ಕನ್ನಡ ಕವಿಗಳ ಸಮಸ್ಯೆ. ಹೀಗಾಗಿ ಸಂಸ್ಕೃತದ ಬಗ್ಗೆ ಕನ್ನಡ ಕವಿಗಳು ತೋರಿದ ಕ್ರಿಯೆ-ಪ್ರತಿಕ್ರಿಯೆಗಳೇ ನಮ್ಮ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಂಡುಬರುವ ಕೆಲವು ಮುಖ್ಯ ಬದಲಾವಣೆಗಳಿಗೆ ಮೂಲವಾಗಿವೆ. ಈ ಪ್ರತಿಕ್ರಿಯೆ ಸ್ಥೂಲವಾಗಿ ಮೂರು ರೀತಿಯದಾಗಿದೆ.

ಒಂದು : ಸಂಸ್ಕೃತವನ್ನು ಕನ್ನಡ ಕಾವ್ಯ ರಚನೆಗೆ ಒಂದು ಆತಂಕವೆಂದು ಭಾವಿಸದೆ, ಅನುಕೂಲವೆಂದೇ ಭಾವಿಸಿದ ಪಂಡಿತ ಕವಿಗಳ ಧೋರಣೆ.

ಎರಡು : ಕನ್ನಡದಂತೆಯೆ ಸಂಸ್ಕೃತವೂ ನಮ್ಮದು. ಆದರೆ ಅದು ಕನ್ನಡದ ಸೊಗಸನ್ನು ಕಬಳಿಸದಂತೆ ನೋಡಿಕೊಂಡು, ಸಂಸ್ಕೃತದ ಸೊಗಸನ್ನು ಕನ್ನಡದ ಆಡುನುಡಿ (ದೇಸಿ)ಯೊಂದಿಗೆ ಹೊಂದಿಸಿ ಒಂದು ಸಮನ್ವಯವನ್ನು ಸಾಧಿಸುವುದು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ದೃಷ್ಟಿಯಿಂದ ಒಳ್ಳೆಯದು ಎಂಬ ಉದಾರ ಧೋರಣೆ.

ಮೂರು : ಕನ್ನಡ ಭಾಷೆಗೆ ತನ್ನದೇ ಆದ ಒಂದು ಸತ್ವವಿರುವಾಗ ಸಂಸ್ಕೃತದ ಸಂಪರ್ಕವನ್ನು ದೂರವಿರಿಸಿ, ಅಚ್ಚಗನ್ನಡದಲ್ಲಿ ಆಡುನುಡಿಗೆ ಸಮೀಪವಾಗಿರುವಂಥ ರೀತಿಯಲ್ಲಿ ಕಾವ್ಯ ಭಾಷೆಯನ್ನು ರೂಪಿಸಿಕೊಳ್ಳಬೇಕು ಎನ್ನುವ ಧೋರಣೆ.

ಸಂಸ್ಕೃತವನ್ನು ಕನ್ನಡ ಕಾವ್ಯ ರಚನೆಗೆ ಒಂದು ಆತಂಕವೆಂದು ಭಾವಿಸದೆ, ಅದು ಒಂದು ಅನುಕೂಲವೆಂದೇ ತಿಳಿದ ಪಂಡಿತ ಕವಿಗಳ ಧೋರಣೆಯಿಂದ ರಚಿತವಾದದ್ದು ‘ಮಾರ್ಗಕಾವ್ಯ’ ಪದ್ಧತಿ. ಅದು ಕನ್ನಡದಲ್ಲಿ ಹತ್ತು ಹನ್ನೊಂದನೆಯ ಶತಮಾನಗಳಲ್ಲಿ ಮತ್ತು ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದೆ. ಕನ್ನಡ ಕಾವ್ಯದ ಭಾಷೆ, ಈ ರಚನೆಯನ್ನು ತಾಳಿದ್ದಕ್ಕೆ ಕಾರಣ, ಈ ಎರಡೂ ಘಟ್ಟಗಳಲ್ಲಿ ಕೃತಿ ರಚನೆಯಾದದ್ದು ರಾಜಾಶ್ರಯದಲ್ಲಿಯೆ ಎನ್ನುವುದು. ಪಂಪ – ರನ್ನ – ರುದ್ರಭಟ್ಟ ಇವರು ಈ ಒಂದು ಕಡೆಗೂ, ಷಡಕ್ಷರಿ – ತಿರುಮಲಾರ‍್ಯ – ಚಿಕುಪಾಧ್ಯಾಯರು ಇನ್ನೊಂದು ಕಡೆಗೂ, ಈ ಬಗೆಯ ಕಾವ್ಯ ಮಾರ್ಗದ ಮೊದಲು – ತುದಿಗಳಾಗಿ ನಿಲ್ಲುತ್ತಾರೆ. ಈ ಮಾರ್ಗದ ಕವಿಗಳಲ್ಲಿ ಪಂಪನಂಥವನನ್ನು ಬಿಟ್ಟರೆ, ಉಳಿದವರಿಗೆ ಕಾವ್ಯ ಭಾಷೆಯ ಬಗ್ಗೆ ಅಂಥ ವೈಚಾರಿಕ ತಾಕಲಾಟಗಳೇ ಇಲ್ಲ. ಕನ್ನಡದಲ್ಲಿ ಬರೆದರೇನು, ಸಂಸ್ಕೃತದಲ್ಲಿ ಬರೆದರೇನು ಎಲ್ಲಾ ಒಂದೇ ಎಂದು ಭಾವಿಸಿದಂತೆ ತೋರುತ್ತಾರೆ ಇವರು. ಬಹು ದೊಡ್ಡ ದೊಡ್ಡ ಸಂಸ್ಕೃತದ ಪದಗಳನ್ನು ಪದ್ಯದ ತುಂಬಾ ಅಡಕಿ, ಅಲ್ಲೊಂದು ಇಲ್ಲೊಂದು ಕನ್ನಡ ಪದಗಳನ್ನು ಕೊಂಡಿಯಂತೆ ಬಳಸಿ ಕೈತೊಳೆದುಕೊಳ್ಳುವುದರಲ್ಲಿಯೆ ಇವರು ತೃಪ್ತರು. ನಿದರ್ಶನಕ್ಕೆ ಈ ಒಂದು ಪದ್ಯವನ್ನು ಸುಮ್ಮನೆ ಓದಿ ನೋಡಬಹುದು :

ವನಜಾಕ್ಷ ಖ್ಯಾತಿಪೂತಂ ಕಥೆ ಕವಿರಾಜಂ ವಚಸ್ಸುಂದರೀ ನೃ
ತ್ಯನಿವಾಸಂ ಚಂದ್ರಮೌಳಿ ಪ್ರಮುಖ ನಿಖಿಲ ವಿದ್ವಜ್ಜನಂ ಮೆಚ್ಚೆ ರುದ್ರಾಂ
ಕನೆ ಪೇಳ್ದಂ ದೇವಚೂಡಾಮಣಿ ಮಣಿಮುಕುರಂ ವಿಷ್ಣು ಕೈಕೊಳ್ವನೆಂದಂ
ದನವದ್ಯಂ ರೀತಿಚೋದ್ಯಂ ಸಕಲ ವಿಬುಧ ಹೃದ್ಯಂ ಸಮಂತೀಪ್ರಪದ್ಯಂ

(ಜಗನ್ನಾಥ ವಿಜಯ ೧-೨೧)

ಕವಿ ರುದ್ರಭಟ್ಟ, ತನ್ನ ಕಾವ್ಯದ ವಸ್ತು, ಕತೆ ಹೇಳಿದ ಕವಿ, ವಿದ್ವಾಂಸರ ಮೆಚ್ಚಿಗೆಗಾಗಿ ಕತೆ ಹೇಳಿದ ರೀತಿ – ಇವುಗಳನ್ನು ಕುರಿತು ಪ್ರಸ್ತಾಪಿಸಿದ್ದಾನೆಂಬುದನ್ನು ಓದುಗರು ತೀರಾ ಪ್ರಯಾಸದಿಂದ ಪತ್ತೆ ಹಚ್ಚಬೇಕಾಗಿದೆ. ಕಾವ್ಯದ ಭಾಷೆ ಸಂಸ್ಕೃತಮಯ; ಕನ್ನಡ ಪದಗಳಿದ್ದರೂ ಅವಕ್ಕೂ ಸಂಸ್ಕೃತ ಛಾಯೆ ಅವರಿಸಿಕೊಂಡಿದೆ. ಇಂಥ ಭಾಷೆ, ರುದ್ರಭಟ್ಟನ ಪರಿಸರದ ಸಾಮಾಜಿಕ ಮಾಧ್ಯಮವಾಗಿರುವುದು ಸಾಧ್ಯವೆ? ಹೊಯ್ಸಳರ ವೀರ ಬಲ್ಲಾಳನ ಆಸ್ಥಾನದ ವಿದ್ವಜ್ಜನರಲ್ಲದೆ ಇನ್ನಾರು ಇದನ್ನು ಓದಿ ಮೆಚ್ಚಲು ಸಾಧ್ಯ?

ಕಾವ್ಯ ಭಾಷೆಯ ಬಗ್ಗೆ ಇನ್ನೊಂದು ಧೋರಣೆ ಸಂಸ್ಕೃತ, ಕನ್ನಡಗಳ ಸಮನ್ವಯವನ್ನು ಕುರಿತದ್ದು. ಈ ಬಗ್ಗೆ “ನಮಗೆ ತೋರುವ ಮಟ್ಟಿಗೆ ಕವಿರಾಜಮಾರ್ಗಕಾರನ ಮಾತೇ ಮೊದಲನೆಯದು, ಮುದ್ದಣನ ಮಾತು ಕಡೆಯದು.”[1] ಕವಿರಾಜಮಾರ್ಗಕಾರ ಕನ್ನಡನಾಡು – ನುಡಿ – ಜನಗಳನ್ನು ಬಾಯ್ತುಂಬ ಹೊಗಳಿದವನು. ಅವನಿಗೆ ಸಂಸ್ಕೃತದ ಬಗ್ಗೆ ಅಭಿಮಾನ, ಕನ್ನಡದ ಬಗ್ಗೆ ಪ್ರೀತಿ. ಸಂಸ್ಕೃತವನ್ನು ತಿರಸ್ಕರಿಸಿ ಕನ್ನಡ ಬೆಳೆಯಲಾರದು, ಅದರ ಶಕ್ತಿ, ಸಾಮರ್ಥ್ಯಗಳನ್ನು ಕನ್ನಡಕ್ಕೂ ತುಂಬಬೇಕು. ಆದರೆ ಸಂಸ್ಕೃತ, ಕಾವ್ಯರಚನೆಯಲ್ಲಿ ಕನ್ನಡದ ಸೊಬಗನ್ನು ಕಬಳಿಸಬಾರದು. ಆದುದರಿಂದ ಕನ್ನಡವನ್ನೂ ಸಂಸ್ಕೃತವನ್ನೂ ಒಂದು ಸಮತೂಕದಲ್ಲಿ ಹೊಂದಿಸಿ ಕವಿ ಕಾವ್ಯದ ಭಾಷೆಯನ್ನು ರೂಪಿಸಿಕೊಳ್ಳಬೇಕು. ಇದು ಸ್ಥೂಲವಾಗಿ ಕವಿರಾಜಮಾರ್ಗಕಾರನು ಕಾವ್ಯ ಭಾಷೆಯ ಬಗ್ಗೆ ತಾಳಿದ ನಿಲುವು. ಈ ಬಗ್ಗೆ.

ನುಡಿಗಳ್ ಒಡಂಬಡಲ್ ಬಗೆದ ವೋಲ್ ಬಗೆಯಂ ಮಿಗಲೀಯದೆ ಒಂದೆ ನಾ
ಳ್ನುಡಿಯ ಬೆಡಂಗೆ ಕನ್ನಡದ ಮಾತಿನೊಳಾ ವಿಕಟಾಕ್ಷರಂಗಳೊಳ್
ತೊಡರದೆ ಸಕ್ಕದಂಗಳ್ ಪದಂ ಪವಣಾಗಿರೆ ಮೆಲ್ಪುವೆತ್ತು ದಾಂ
ಗುಡಿ ವಿಡುವಂತೆ ನೀಳ್ದು ನಿಲೆ ಪೇಳ್ವುದು ನೀತಿ ನಿರಂತರ ಕ್ರಮಂ

(ಕವಿರಾಜಮಾರ್ಗ : ೧-೧೪೯)

ಕವಿಯು ಕಾವ್ಯದಲ್ಲಿ ಬಳಸುವ ಪದಗಳು ಒಂದಕ್ಕೊಂದು ಹೊಂದಿಕೊಂಡು ಕವಿಯ ಭಾವವನ್ನು ಉಚಿತವಾದ ರೀತಿಯಲ್ಲಿ ವ್ಯಕ್ತಗೊಳಿಸುವಂತಿರಬೇಕು; ಆ ಕನ್ನಡದ ಮಾತುಗಳಲ್ಲಿ ‘ನಾಳ್ನುಡಿಯ ಬೆಡಂಗು’ ಎಂದರೆ ಆಡುಮಾತಿನ ಸೊಗಸು ಇರಬೇಕು; ಈ ಕನ್ನಡ ಪದಗಳೊಂದಿಗೆ ಬಳಸುವ ಸಂಸ್ಕೃತ ಪದಗಳು ಕರ್ಕಶವಾದ ಪರುಷಾಕ್ಷರಗಳಿಂದ ಕೂಡಿರಬಾರದು ಮತ್ತು ರಚನೆ ‘ಮೆಲ್ಪುವೆತ್ತು’ ಮೃದುಪದ ಬಂಧದಿಂದ ಹದವಾಗಿ ಸಮ್ಮಿಶ್ರವಾಗಿ, ಪದ್ಯದ ರಚನೆ ಬಳ್ಳಿಯೊಂದು ಕುಡಿ ಚಾಚಿ ಹಾಸಿಕೊಂಡಂತೆ ಇರಬೇಕು – ಎನ್ನುತ್ತಾನೆ ಕವಿರಾಜಮಾರ್ಗಕಾರ.

ಈ ಹೇಳಿಕೆ ಸ್ಪಷ್ಟವಾಗಿ ಕಾವ್ಯಭಾಷೆಯನ್ನು ಕುರಿತ ಸಮತೂಕದ ಧೋರಣೆ ಯೊಂದನ್ನು ಪ್ರತಿಪಾದಿಸುತ್ತದೆ. ಕಾವ್ಯಭಾಷೆ ಸಂಸ್ಕೃತ ಹಾಗೂ ಕನ್ನಡಗಳ ಹದವಾದ ಮಿಶ್ರಣವಾಗುವುದರ ಜತೆಗೆ ಅದರಲ್ಲಿ ನಾಡಿನ ಜನ ಆಡುವ ಭಾಷೆಯ ಬೆಡಗೂ ಇರಬೇಕು – ಎನ್ನುತ್ತದೆ. ಎಂದರೆ ಕನ್ನಡದ ಆರಂಭ ಕಾಲದ ಕವಿರಾಜಮಾರ್ಗಕಾರನಿಗೆ, ಸಂಸ್ಕೃತದ ಕಾವ್ಯ ಪರಂಪರೆಯ ಹಿನ್ನೆಲೆಯಿಂದ ಕನ್ನಡ ಕಾವ್ಯ ರೂಪು ತಾಳುತ್ತಿದ್ದ ಸಂದರ್ಭದಲ್ಲಿ, ತನ್ನ ಸಾಮಾಜಿಕ ಪರಿಸರದಲ್ಲಿ ‘ನಾಳ್ನುಡಿ – ನಾಡ ನುಡಿ’ ಅಥವಾ ಜನರಾಡುವ ಭಾಷೆಯೊಂದು ಇದೆ, ಅದರಲ್ಲಿ ಒಂದು ‘ಬೆಡಂಗು’ ಅಥವಾ ಸೊಗಸು ಇದೆ, ಕವಿ ಬರೆಯುವ ಕಾವ್ಯ ಭಾಷೆಯಲ್ಲಿ ‘ಈ ನಾಳ್ನುಡಿಯ ಬೆಡಂಗು’ ಬಂದು ಸೇರಬೇಕು ಎನ್ನುವ ಎಚ್ಚರ ಇದ್ದದ್ದು ತುಂಬ ಮೆಚ್ಚಬೇಕಾದ ಸಂಗತಿಯಾಗಿದೆ. ಕವಿರಾಜಮಾರ್ಗಕಾರನ ನಂತರ, ಮುಂದೆ ಹತ್ತನೆಯ ಶತಮಾನದ ಪ್ರಮುಖ ಕವಿಯಾದ ಪಂಪನೂ ಕಾವ್ಯ ಭಾಷೆಯ ಸ್ವರೂಪದ ಬಗ್ಗೆ ನೃಪತುಂಗನ ಮತವನ್ನೇ ಅನುಮೋದಿಸುತ್ತಾನೆ. ಪಂಪ ವ್ಯಾಸ-ಕಾಳಿದಾಸ-ಬಾಣರಂತಹ ಸಂಸ್ಕೃತ ಕವಿಗಳ ಕಾವ್ಯಪರಂಪರೆಯಿಂದ ಪುಷ್ಟನಾದವನು. ಆದರೂ ಅವರು ತನ್ನ ವಿಕ್ರಮಾರ್ಜುನ ವಿಜಯದ ಮಟ್ಟಿಗೆ, ತನ್ನ ಪರಿಸರದಲ್ಲಿದ್ದ ‘ಸಾಜದ ಪುಲಿಗೆರೆಯ ತಿರುಳ ಕನ್ನಡ’ವನ್ನು ಬಳಸಿಕೊಳ್ಳುವುದಾಗಿ ಹೇಳುತ್ತಾನೆ. ಅಂದರೆ ಕವಿರಾಜಮಾರ್ಗಕಾರನು ಹೇಳಿದ ‘ನಾಡ ನುಡಿಯ ಬೆಡಗು’ ಅವನಿಗೆ ತನ್ನ ಪರಿಸರದ ಪುಲಿಗೆರೆ (ಈಗಿನ ಲಕ್ಷ್ಮೇಶ್ವರ – ಧಾರವಾಡ ಜಿಲ್ಲೆ)ಯ ಕನ್ನಡದಲ್ಲಿ  ಕಾಣಿಸಿತು. ಸಂಸ್ಕೃತದ ಬಗ್ಗೆ ಗೌರವ, ಅಭಿಮಾನಗಳಿದ್ದ ಪಂಪ ತನ್ನ ಕಾವ್ಯ ಭಾಷೆಯಲ್ಲಿ ಸಂಸ್ಕೃತದ ‘ಮಾರ್ಗ’ವನ್ನೂ, ಕನ್ನಡದ ‘ದೇಸಿ’ಯನ್ನೂ ಹೊಂದಿಸುವ ಪ್ರಯತ್ನವನ್ನು ಮಾಡಿದನು. ತನ್ನ ಕಾವ್ಯ ಧೋರಣೆಯ ಬಗ್ಗೆ ಹೇಳುತ್ತಾ ‘ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವುದು’ ಎನ್ನುತ್ತಾನೆ. ಎಂದರೆ, ದೇಸಿಯೊಳ್ ಎಂದರೆ ತನ್ನ ಪರಿಸರದ “ಅಚ್ಚಗನ್ನಡ ಶೈಲಿಯಲ್ಲಿ ಪುಗುವುದು = ಪ್ರವೇಶ ಮಾಡಬೇಕು, ಪೊಕ್ಕು = ಹಾಗೆ ಪ್ರವೇಶಿಸಿ, ಮಾರ್ಗದೊಳೆ = ಮಾರ್ಗೀ ಶೈಲಿಯಲ್ಲಿಯೆ, ಎಂದರೆ ಸಂಸ್ಕೃತ ಶೈಲಿಯಲ್ಲಿಯೆ, ತಳ್ವುದು = ಸೇರಿ ಹೊಂದಿಕೊಳ್ಳಬೇಕು.”[2] ಹೀಗೆ ಮಾರ್ಗ – ದೇಸಿಗಳ ಒಡಂಬಡಿಕೆ ಪಂಪನಿಗೆ ಪ್ರಿಯವಾದದ್ದು. ಯಾಕೆಂದರೆ ಅದು ತನ್ನ ‘ಮಾರ್ಗ’ – ಎಂದರೆ ಪ್ರೌಢತೆಯಿಂದ, ರಾಜಾಸ್ಥಾನದ ಪಂಡಿತರಿಗೂ, ತನ್ನ ‘ದೇಸಿ’ – ಎಂದರೆ ತನ್ನ ಪರಿಸರದ ಸಾಮಾಜಿಕ ಮಾಧ್ಯಮವಾದ ತಿರುಳ್ಗನ್ನಡದಿಂದ ಜನಸಾಮಾನ್ಯಕ್ಕೂ ಪ್ರಿಯವಾಗಬೇಕು – ಎನ್ನುವುದು ಅವನ ಉದ್ದೇಶ. ಆದರೂ ಪಂಪನ ‘ವಿಕ್ರಮಾರ್ಜುನ ವಿಜಯ’ ಪ್ರೌಢವಾದ ಕಾವ್ಯವೇ; ಅವನ ‘ಆದಿಪುರಾಣ’ ಇನ್ನೂ ತೀರಾ ಪ್ರೌಢವಾದ ಕಾವ್ಯ. ‘ವಿಕ್ರಮಾರ್ಜುನ ವಿಜಯ’ ಒಟ್ಟಿನಲ್ಲಿ ಪ್ರೌಢವಾದರೂ ಅದರಲ್ಲಿ ದೇಸೀಯತೆಯ, ಎಂದರೆ ಆಡು ನುಡಿಯ ಸೊಗಸೂ ಸಾಕಷ್ಟಿದೆ : ವಿರಾಟನಗರದ ಅಜ್ಞಾತವಾಸ ಮುಗಿದು ಪಾಂಡವರು ಹೊರಗೆ ಕಾಣಿಸಿಕೊಂಡಾಗ, ಅದುವರೆಗೂ ತಮ್ಮೂರಲ್ಲೇ ಇದ್ದು, ತಟಕ್ಕನೆ ಅವರು ಕಾಣಿಸಿಕೊಂಡದ್ದರ ಬಗ್ಗೆ ಊರಿನ ಜನ ಮಾತನಾಡಿಕೊಂಡ ರೀತಿ ಇದು :

ಕೇಳಿರೆ ಕಂಕಭಟ್ಟನೆ ಯುಧಿಷ್ಠಿರನ್, ಆ ವಲಲಂ ವೃಕೋದರಂ,
ಬಾಳೆಯರಂ ದಲ್ ಆಡಿಪ ಬೃಹಂದಳೆ ಫಲ್ಗುಣನ್, ಅಂಕದ ಅಶ್ವ ಗೋ
ಪಾಳರೆಂಬರ್ ನಕುಳನುಂ ಸಹದೇವನುಂ ಆದರ್, ಏಂ ಮಹೀ
ಪಾಳರೊಳಾದ ಕಾರ್ಯಗತಿಗಳ್ ಬಗೆಯಲ್ಕೆ ಬಹು ಪ್ರಕಾರಮೋ.

(ಪಂಪ ಭಾರತ ೮-೬)

ಈ ಪದ್ಯದ ತುಂಬ ಆಶ್ಚರ್ಯ, ಸಂಭ್ರಮ, ಮೆಚ್ಚುಗೆ ತಾನೇತಾನಾಗಿದೆ. ಮೊದಲ ಮಾತೇ ಕೇಳಿದಿರಾ ಎಂಬ ಪ್ರಶ್ನೆ ಹಾಗೂ ಆಶ್ಚರ್ಯದ ಧ್ವನಿಯಿಂದ ಪ್ರಾರಂಭವಾಗುತ್ತದೆ. ಕೇಳಿದಿರಾ! ಕಂಕಭಟ್ಟ ಇದ್ದನಲ್ಲ ಅವನೆ ಯುಧಿಷ್ಠರನಂತೆ! ಆ ವಲಲ, ಅಡುಗೆ ಬೇಯಿಸುತ್ತಿದ್ದನಲ್ಲಾ ಆ ಬಾಣಸಿಗ ಅವನೇ ಭೀಮ! ನಾಟ್ಯಶಾಲೆಯಲ್ಲಿ ಹುಡುಗಿಯರಿಗೆ ನರ್ತನವನ್ನು ಕಲಿಸುತ್ತಿದ್ದನಲ್ಲ, ಆ ಬೃಹನ್ನಳೆ, ಅವನೇ ಅರ್ಜುನ! ಅಶ್ವಪಾಲ ಗೋಪಾಲರೆಂದು ತಿಳಿದಿದ್ದೆವಲ್ಲ ಅವರೇ ನಕುಲ ಸಹದೇವರು! ಈ ರಾಜರುಗಳಿದ್ದಾರಲ್ಲ, ಇವರ ಕಾರ್ಯಗತಿಗಳು, ಯೋಚನೆ ಮಾಡಿದರೆ ಎಷ್ಟೆಷ್ಟು ರೀತಿಯೊ ಏನು ಕತೆಯೋ!

ಇಡೀ ಪದ್ಯ, ಸಂಭ್ರಮಾಶ್ಚರ್ಯ ಕುತೂಹಲಗಳಿಂದ ರಾಜರುಗಳಿಗೆ ಸಂಬಂಧಪಟ್ಟ ವಿಶೇಷ ಘಟನೆಯೊಂದನ್ನು, ತಗ್ಗಿದ ದನಿಯಲ್ಲಿ ಊರ ಜನ ಮಾತನಾಡಿಕೊಂಡ ಧಾಟಿಯಲ್ಲಿದೆ. ಇದರಿಂದಲೇ ಮುಂದಿನ ಕವಿಗಳೆಲ್ಲ ಪಂಪನ ‘ದೇಸಿ’ಯನ್ನು ಮುಕ್ತ ಕಂಠದಿಂದ ಹೊಗಳುತ್ತಾರೆ. ಪಂಪನಿಗಿದ್ದಂಥ ಭಾಷಾಪ್ರಜ್ಞೆ ಬಹು ಮಂದಿ ಕವಿಗಳಿಗೆ ಇಲ್ಲ. ಆದುದರಿಂದಲೆ ಕನ್ನಡ ‘ಮಾರ್ಗ’ ಕಾವ್ಯಗಳಲ್ಲಿ ಬಹುಪಾಲು ಸಂಸ್ಕೃತಮಯವಾಗಿವೆ. ಪಂಪನ ಸಮಕಾಲೀನನಾದ ರನ್ನನಲ್ಲಿಯಂತೂ ಸಂಸ್ಕೃತದ ತೇಜಸ್ಸೇ ತೇಜಸ್ಸು!

ಕವಿರಾಜಮಾರ್ಗಕಾರನಿಂದ ಮೊದಲಾಗಿ, ಹತ್ತನೆಯ ಶತಮಾನದ ಕೇಂದ್ರ ಕವಿಯಾದ ಪಂಪನಿಂದ ಅನುಮೋದಿತವಾದ, ಸಂಸ್ಕೃತ – ಕನ್ನಡಗಳ ಸಾಮರಸ್ಯವನ್ನು ಸಾಧಿಸಬೇಕೆಂಬ ಈ ಧೋರಣೆಯು ಮತ್ತೆ ಅನುರಣಿತವಾಗುವುದು, ಇಪ್ಪತ್ತನೆ ಶತಮಾನದ ಮುದ್ದಣನಿಂದ, ಅದೂ ಹೊಸಗನ್ನಡದ ಆರಂಭ ಕಾಲದಲ್ಲಿ. ಅವನು ತನ್ನ ರಾಮಾಶ್ವಮೇಧದಲ್ಲಿ, ಹಿಂದಿನ ಮಾರ್ಗ ಕವಿಗಳ ಭಾಷೆ ‘ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು’ ಎಂದು ಟೀಕಿಸಿ ‘ಸಕ್ಕದಮಮೊಂದೆ ರನ್ನವಣಿಯಂ ಪೊನ್ನಿಂ ಬಿಗಿದಂತೆ ಎಸೆಗುಂ; ಅದರಿಂ ಕರ್ಮಣಿ ಸರದೊಳ್ ಚೆಂಬವಳಮಂ ಕೋದಂತೆ ಇರೆ, ರಸಂ ಒಸರೆ, ಲಕ್ಕಣಂ ಮಿಕ್ಕಿರೆ, ಎಡೆಯೆಡೆಯೊಳ್ ಸಕ್ಕದದ ನಲ್ನುಡಿ ಮೆರೆಯೆ, ತಿರುಳ್ಗನ್ನಡದೊಳೆ ಕತೆಯನ್ ಉಸಿರ್ವೆಂ”[3] ಎನ್ನುತ್ತಾನೆ.

ಕನ್ನಡ ಭಾಷೆಯ ಬಗೆಗೆ ಮೂರನೆಯ ಧೋರಣೆಯೊಂದು ಕಾಣಿಸಿಕೊಂಡದ್ದು ಪಂಪನ ನಂತರ ಒಂದೂವರೆ ಶತಮಾನವಾದ ಮೇಲೆ ನಯಸೇನನಿಂದ. ಕನ್ನಡವನ್ನೂ ಸಂಸ್ಕೃತವನ್ನೂ ಬೆರೆಸಬೇಕೆಂಬ, ಅವೆರಡಕ್ಕೂ ಸಾಮರಸ್ಯ ತರಬೇಕೆಂಬ ಹಿಂದಿನ ಧೋರಣೆಗೆ ಇವನ ವಿರೋಧವಿದೆ. ಯಾಕೆಂದರೆ, ಈ ಸಾಮರಸ್ಯದ ಧೋರಣೆ, ಮೇಲೆ ನೋಡಲು ಸಾಧುವಾಗಿ ಕಂಡರೂ, ಕನ್ನಡ ಕಾವ್ಯರಚನೆಯಲ್ಲಿ ಈ ಧೋರಣೆಯನ್ನನುಸರಿಸುವ ಕವಿಗಳಿಗೆ ಸಂಸ್ಕೃತದ ಮೋಹವೇ ಮಿಗಿಲಾದುದನ್ನು ಅನೇಕ ಕಾವ್ಯಗಳಲ್ಲಿ ಕಂಡ ನಯಸೇನನು,

ಪೊಸಗನ್ನಡದಿಂ ವ್ಯಾ
ವರ್ಣಿಸುವೆಂ ಸತ್ಕೃತಿಯನ್ ಎಂದು, ಕನ್ನಡಮಂ ಚಿಂ
ತಿಸಿ ಕೂಡಲಾರದೆ ಅಕ್ಕಟ
ಮಿಸುಕದ ಸಕ್ಕದಮನ್ ಇಕ್ಕುವನುಂ ಕವಿಯೇ
(ಧರ್ಮಾಮೃತ ೧-೪)

ಎಂದು ಕವಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಹೊಸಗನ್ನಡದಲ್ಲಿ ಸತ್ಕೃತಿಯನ್ನು ರಚಿಸುತ್ತೇನೆಂದು ಯೋಚನೆ ಮಾಡುತ್ತಾರಂತೆ ಕವಿಗಳು, ಆದರೆ ಅದು ಅವರಿಂದ ಸಾಧ್ಯವಾಗದೆ ‘ಮಿಸುಕದ ಸಕ್ಕದ’ವನ್ನು ಇಕ್ಕುತ್ತಾರಂತೆ. ಇಲ್ಲಿ ‘ಮಿಸುಕದ’ ಎಂದರೆ, ನಿಶ್ಚೇಷ್ಟವಾದ, ಏನು ಮಾಡಿದರೂ ಅಲ್ಲಾಡಿಸಲಾರದ ಎಂಬುದು ಒಂದು ಅರ್ಥವಾದರೆ, ಹೊಳಪನ್ನು ಕಳೆದುಕೊಂಡ ಎಂಬುದೂ ಅರ್ಥ ಇನ್ನೊಂದು ನಯಸೇನನ ಪಾಲಿಗೆ, ಕನ್ನಡ ಕಾವ್ಯಗಳಲ್ಲಿ ಕವಿಗಳು ತುರುಕುವ ಸಂಸ್ಕೃತಕ್ಕೆ ಜೀವವೂ ಇಲ್ಲ, ಕಳೆಯೂ ಇಲ್ಲ ಎಂದು ಅಭಿಪ್ರಾಯ. ಇಂಥ ತಿರಸ್ಕಾರದಿಂದ

ಸಕ್ಕದಮಂ ಪೇಳ್ವೊಡೆ ನೆರೆ
ಸಕ್ಕದಮಂ ಪೇಳ್ಗೆ, ಸುದ್ದಗನ್ನಡದೊಳ್ ತಂ
ದಿಕ್ಕುವುದೇ ಸಕ್ಕದಮಂ?
ತಕ್ಕುದೇ ಬೆರಸಲ್ಕೆ ಘೃತಮುಮಂ ತೈಲಮುಮಂ?
(ಧರ್ಮಾಮೃತ ೧-೪೮)

ಎಂದು ಪ್ರಶ್ನಿಸುತ್ತಾನೆ. ಸಂಸ್ಕೃತದಲ್ಲಿ ಹೇಳುವುದಾದರೆ, ಸಂಪೂರ್ಣವಾಗಿ ಸಂಸ್ಕೃತದಲ್ಲಿಯೇ ಹೇಳಲಿ, ಅದು ಬಿಟ್ಟು ಶುದ್ಧ ಕನ್ನಡದಲ್ಲಿ ತಂದಿಕ್ಕಬಹುದೇ ಸಂಸ್ಕೃತವನ್ನು? ತುಪ್ಪವನ್ನೂ ಎಣ್ಣೆಯನ್ನೂ ಬೆರಸುವುದು ಯೋಗ್ಯವೇ – ಎನ್ನುವ ನಯಸೇನನ ಈ ಧೋರಣೆ ತೀರಾ ಸ್ಪಷ್ಟವಾಗಿದೆ. “ಕನ್ನಡದೊಂದಿಗೆ ಸಂಸ್ಕೃತದ ಮಿಶ್ರಣವನ್ನು ವಿರೋಧಿಸಿದ್ದು ಕನ್ನಡದಲ್ಲಿ ಇದೇ ಮೊದಲು. ಕನ್ನಡ – ಸಂಸ್ಕೃತಗಳ ಬೆರಕೆಯನ್ನು ಕುರಿತು, ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ’ ಎಂಬ ನಯಸೇನನ ಟೀಕೆ, ಕನ್ನಡವು ತುಪ್ಪದಂತೆ ಶ್ರೇಷ್ಠವೆಂಬ ಪ್ರಶಂಸೆಯನ್ನೂ, ಸಂಸ್ಕೃತ ಎಣ್ಣೆಯಂತೆ ಎಂಬ ಮೂದಲಿಕೆಯನ್ನೂ ಒಟ್ಟಿಗೆ ಪ್ರಕಟಿಸುತ್ತದೆ. ಕನ್ನಡ ಕವಿಗಳ ಭಾಷಾಪ್ರಜ್ಞೆಯನ್ನು ಗಮನಿಸುವಾಗ, ಸಂಸ್ಕೃತದ ಮಹತ್ವವನ್ನು ಕೀಳ್ಗಳೆದು ನೋಡಿದ್ದು ಇಲ್ಲಿಯೇ. ಕನ್ನಡ ಭಾಷೆಗೆ ಸಾಕಷ್ಟು ಸತ್ವ ಇರುವಾಗ ಅದನ್ನೆ ಕಾವ್ಯಭಾಷೆಯನ್ನಾಗಿ ದುಡಿಸಿಕೊಳ್ಳಲು ಪ್ರಯತ್ನಪಡಬೇಕೇ ಹೊರತು ಸಂಸ್ಕೃತವನ್ನು ಅವಲಂಬಿಸಬಾರದು ಎನ್ನುವ ದಿಟ್ಟತನದ ಧೋರಣೆಯೊಂದು ಈ ಕಾಲದಲ್ಲಿ ಘೋಷಿತವಾಗಿ ‘ಕನ್ನಡದ ನುಡಿಯಲ್ಲಿ ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ, ಸಂಸ್ಕೃತದೊಳಿನ್ನೇನು’ – ಎಂದು ಹದಿನೇಳನೆಯ ಶತಮಾನದ ಮಹಲಿಂಗರಂಗನವರೆಗೂ ಅನುರಣಿತವಾಗಿದೆ”[4] ಈ ಧೋರಣೆಯಿಂದ ಬರೆದ ನಯಸೇನನ ಕಾವ್ಯದ ಭಾಷೆ, ‘ಸುದ್ದಗನ್ನಡ’ದ ಒಂದು ಯಶಸ್ವಿ ಪ್ರಯೋಗವಾಗಿದೆ. ಈಗ ಉದ್ಧರಿಸಿದ ಎರಡು ಪದ್ಯಗಳ ಭಾಷೆಯನ್ನು ನೋಡಿದರೆ ಸಾಕು, ಅದರ ಭಾಷೆ ಆಡುಮಾತಿಗೆ ತೀರಾ ಹತ್ತಿರವಾದದ್ದೆಂಬುದು ಸ್ಪಷ್ಟವಾಗುತ್ತದೆ. ಅವನ ಗದ್ಯ ಭಾಷೆಯ ಒಂದು ತುಣುಕನ್ನು ನೋಡಬಹುದು :

‘ಆ ಸಮ್ಯಗ್‌ದರ್ಶನಮಿಲ್ಲದೆ ಮುಕ್ತಿಶ್ರೀಯಂ ಪಡೆವೆನೆಂಬಾತಂ
ಕಣ್ಣಿಲ್ಲದೆ ಕಾಣ್ಬೆನೆಂಬ, ಮಣ್ಣಿಲ್ಲದೆ ಬೆಳೆವೆನೆಂಬ, ಸತಿಯಿಲ್ಲದೆ ಸುತರಂ
ಪಡೆವೆನೆಂಬ, ಮತಿಯಿಲ್ಲದೆ ಪರದುಗೈವೆನೆಂಬ, ಕೇರಿಲ್ಲದೆ ಚಿತ್ರಮಂ ಬರೆವೆನೆಂಬ,
ನೀರಿಲ್ಲದೆ ಕೂಳನ್ ಅಡುವೆನೆಂಬ, ಅಂಬಿಲ್ಲದೆ ಬಿಲ್ವಿಡಿವೆನೆಂಬ,
ತೂಬಿಲ್ಲದೆ ಕೆರೆಯಂ ಕಟ್ಟುವೆನೆಂಬ, ಕಾಲಿಲ್ಲದೆ ಪರಿವೆನೆಂಬ, ಕೀಲಿಲ್ಲದೆ
ಪಡಿದೆರೆವೆನೆಂಬ, ಭೈತ್ರಮಿಲ್ಲದೆ ಸಮುದ್ರದೊಳ್ ಪೋಪೆನೆಂಬ, ಗೋತ್ರ
ಮರಿಯದೆ ಕೂಸುಗುಡುವೆನೆಂಬ, ಕಿವಿಯಿಲ್ಲದೆ ಕೇಳ್ವೆನೆಂಬ,
ಸವಿಯಿಲ್ಲದೆ ಉಣ್ಣೆನೆಂಬ, ಕೆಯ್ಯಿಲ್ಲದೆ ಬೇಲಿಯಿಕ್ಕುವೆನೆಂಬ,
ಬಾಗಿಲಿಲ್ಲದೆ ಪೊಗುವೆನೆಂಬ, ಧನಮಿಲ್ಲದೆ ಅಧಿಕನೆಂಬ, ವಾಹನಮಿಲ್ಲದೆ
ಏರುವೆನೆಂಬ, ನಾಲಗೆಯಿಲ್ಲದೆ ನುಡಿವೆನೆಂಬ, ಪರುಗೋಲಿಲ್ಲದೆ ತೊರೆಯಂ
ಪಾಯ್ವೆನೆಂಬ ಪಚ್ಚ ಪಸಿಯ ಎಗ್ಗನಂ ಪೋಲ್ಕುಂ’
(ಧರ್ಮಾಮೃತ ೧-೬೭)

ಇದು ನಯಸೇನನ ‘ಸುದ್ದಗನ್ನಡ’. ಅಂದಿನ ಜನಭಾಷೆಯ ನಾಣ್ಣುಡಿ ಜಾಣ್ಣುಡಿಗಳಿಂದ ಇಡಿಕಿರಿದು, ತುಂಬ ಆತ್ಮೀಯವಾದ ರೀತಿಯೊಂದನ್ನು ಪರಿಚಯ ಮಾಡಿಕೊಡುತ್ತದೆ. ಹನ್ನೆರಡನೆಯ ಶತಮಾನದ ಮೊದಲಲ್ಲಿ ನಯಸೇನ ಕನ್ನಡ ಭಾಷೆಯನ್ನು ಹದಗೊಳಿಸಿದ ಈ ಪ್ರಯೋಗ ಇವನ ನಂತರದ ಐವತ್ತು ವರ್ಷಗಳ ಅವಧಿಯಲ್ಲಿ ಆರಂಭವಾದ ವಚನಕಾರರ, ವಚನಗಳ ಭಾಷೆಗೆ ಪ್ರೇರಣೆಯಾಗಿದ್ದಿರಲೂಬಹುದು. ನಯಸೇನನ ಧೋರಣೆ ವಚನಕಾರರಿಂದ, ಅಭಿವ್ಯಕ್ತಿಯ ರೂಪವನ್ನೆ ಬದಲಾಯಿಸುವುದರ ಮೂಲಕ ವ್ಯಕ್ತವಾಯಿತು. ನಯಸೇನ ಭಾಷೆ ಬದಲಾಗಬೇಕೆಂದು ಹೇಳಿದರೂ, ಹಾಗೆ ಬದಲಾದ ಭಾಷೆಗೆ, ಅಭಿವ್ಯಕ್ತಿಯ ಹೊಸರೂಪವೊಂದನ್ನು ನಿರ್ಮಿಸಿಕೊಳ್ಳಲಿಲ್ಲ; ಯಾಕೆಂದರೆ ಅವನು ಅನುಸರಿಸಿದ್ದು ‘ಮಾರ್ಗ’ ಕಾವ್ಯಪದ್ಧತಿಯ ರೂಪವಾದ ‘ಚಂಪು’ವನ್ನೆ. ಆದರೆ ವಚನಕಾರರು ಮಾತ್ರ ಅದುವರೆಗೂ ಪರಿಚಿತವಾದ ಚಂಪೂ ರೂಪವನ್ನೆ ತಿರಸ್ಕರಿಸಿ, ‘ವಚನ’ಗಳೆಂಬ ಮುಕ್ತ ಛಂದಸ್ಸಿನ, ಗದ್ಯದ ಲಯ ಉಳ್ಳ, ಆದರೆ ಪದ್ಯಗಂಧಿಯಾದ ರೂಪವೊಂದನ್ನು ಆವಿಷ್ಕಾರ ಮಾಡಿಕೊಂಡರು. ಭಾಷೆಯ ಬಗ್ಗೆ ಇವರು ಹಿಂದಿನ ಕವಿಗಳಂತೆ ಯಾವ ಧೋರಣೆಯನ್ನೂ ಎತ್ತಿ ಹೇಳಲಿಲ್ಲ. ಅದಕ್ಕೆ ಕಾರಣ ಅವರು, ತಾವು ಬರೆಯುತ್ತಿರುವುದು ಸಾಹಿತ್ಯ ಎಂದು ಅಂದುಕೊಳ್ಳಲೇ ಇಲ್ಲ. ಧರ್ಮಪ್ರಸಾರವೇ ಪ್ರಧಾನವಾದ ಅವರಿಗೆ, ಸಾಮಾನ್ಯ ಜನತೆಯೊಂದಿಗೆ, ಸಂಪರ್ಕವನ್ನು ಸ್ಥಾಪಿಸಿಕೊಂಡು ತಿಳಿಯಹೇಳಲು, ‘ವಚನ’ದಂತಹ, ಎಂದರೆ ಮಾತನಾಡಿದಂತಿರುವ ಭಾಷಾರೂಪವನ್ನು ಅನುಸರಿಸುವುದು ಒಂದು ಅವಶ್ಯಕತೆಯಾಯಿತು.

ಉಳ್ಳವರು ಶಿವಾಲಯವ ಮಾಡುವರು
ಬಡವನಯ್ಯಾ; ನಾನೇನ ಮಾಡುವೆನಯ್ಯಾ!
ಎನ್ನ ಕಾಲೇ ಕಂಭ, ಎನ್ನ ದೇಹವೇ ದೇಗುಲ;
ಎನ್ನ ಶಿರವೇ ಹೊನ್ನ ಕಳಸವಯ್ಯಾ,
ಕೂಡಲ ಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಎಂಬ ಈ ವಚನ, ಕನ್ನಡ ಭಾಷೆಯ ಸಿದ್ಧಿಯನ್ನು ಸೂಚಿಸುತ್ತದೆ. ವಚನಕಾರರು ‘ಅಚ್ಚಗನ್ನಡ ಬೇಸಾಯಗಾರರು’ ಎಂಬ ಪ್ರಶಸ್ತಿಗೆ ಇವರ ಭಾಷೆ ಸಾಕ್ಷಿಯಾಗಿದೆ. ಇದೊಂದೇ ಕಾಲದಲ್ಲಿ ಕನ್ನಡ ಸಾಹಿತ್ಯ, ಜನಸಾಮಾನ್ಯದ ಆಡುಮಾತನ್ನು, ಅಂತರಂಗದ ಸೂಕ್ಷ್ಮವಾದ, ನವುರಾದ, ಗಾಢವಾದ ಭಾವನೆಗಳ ಅಭಿವ್ಯಕ್ತಿಗೆ ಮಾಧ್ಯಮವನ್ನಾಗಿ ಮಾಡಿಕೊಂಡದ್ದಷ್ಟೆ ಅಲ್ಲ, ಗಹನವಾದ ಶಾಸ್ತ್ರವಿಚಾರಗಳಿಗೂ, ಗೂಢವಾದ ಆಧ್ಯಾತ್ಮಿಕ ಅನುಭವಗಳಿಗೂ ಮಾಧ್ಯಮವಾಯಿತು. ಹಿಂದೆ ಆಗಲೇ ನಾವು ಹೇಳಿರುವಂತೆ, ಸಂಸ್ಕೃತ ಇದುವರೆಗೂ ಏನೇನು ಸಾಧ್ಯತೆಗಳನ್ನು ಒಳಗೊಂಡಿತೋ, ಅದೆಲ್ಲವನ್ನೂ ಕನ್ನಡ ಭಾಷೆಯು ಸಾಧಿಸಿ ತೋರಿಸಿತು.

ವಚನಕಾರರಿಂದ ಮೊದಲಾದ ಈ ‘ಭಾಷಾ ಕ್ರಾಂತಿ’ ಹದಿನೇಳನೆಯ ಶತಮಾನದವರೆಗೆ, ಸುಮಾರು ಐದು ನೂರು ವರ್ಷಗಳವರೆಗೆ ಒಂದು ದೇಸೀ ಯುಗವನ್ನೆ ಕನ್ನಡ ಸಾಹಿತ್ಯದಲ್ಲಿ ನಿರ್ಮಾಣ ಮಾಡಿತು. ಅಲ್ಲಲ್ಲಿ ಈ ಕಾಲದಲ್ಲೂ ಒಂದೊಂದು ಮಾರ್ಗ ಪದ್ಧತಿಯ ಪ್ರಯತ್ನಗಳಿದ್ದರೂ, ಮುಖ್ಯವಾಗಿ ಬಂದ ಪ್ರಕಾರಗಳೆಂದರೆ, ರಗಳೆ, ಷಟ್ಪದಿ, ಕೀರ್ತನೆ, ಸಾಂಗತ್ಯ ಮತ್ತು ತ್ರಿಪದಿಗಳು. ಈ ರೂಪಗಳೆಲ್ಲ ‘ದೇಸೀ’ಯತೆಯನ್ನು, ಅಥವಾ ಸಾಧ್ಯವಾದಷ್ಟು ಜನಭಾಷೆಯನ್ನು, ಹಿಡಿದಿಡಲು ತಕ್ಕ ರೂಪಗಳು. ಭಾಷೆ ಬದಲಾಗಬೇಕು ಎಂದರೆ, ಅದನ್ನು ಅಭಿವ್ಯಕ್ತಿಗೆ ಬಳಸುವ ರೂಪ (form)ವೂ ಬದಲಾಗಬೇಕು. ಇಲ್ಲದಿದ್ದರೆ ಅದನ್ನು ಬದಲಾವಣೆ ಎಂದು ಕರೆಯುವುದರಲ್ಲಿ ಅರ್ಥವಿಲ್ಲ. ಇಂಥ ನಿಜವಾದ ಬದಲಾವಣೆಯನ್ನು ‘ದೇಸೀಯುಗ’ದಲ್ಲಿ ಕಾಣಬಹುದು. ಆದುದರಿಂದಲೇ ಹರಿಹರನ ರಗಳೆಗಳ ಭಾಷೆ, ರಾಘವಾಂಕ – ಕುಮಾರವ್ಯಾಸರ ಷಟ್ಪದಿಯ ಭಾಷೆ, ಹರಿದಾಸರ ಕೀರ್ತನೆಗಳ ಭಾಷೆ, ರತ್ನಾಕರ – ನಂಜುಂಡ ಇವರ ಸಾಂಗತ್ಯದ ಭಾಷೆ, ಸರ್ವಜ್ಞನ ತ್ರಿಪದಿಗಳ ಭಾಷೆ ಇವುಗಳಲ್ಲಿ ಈ ಬದಲಾವಣೆ ಎದ್ದು ಕಾಣುತ್ತದೆ. ಇವುಗಳೆಲ್ಲದಕ್ಕೂ ನಿದರ್ಶನಗಳನ್ನು ಕೊಡುವುದು ಅನವಶ್ಯಕ. ಆದರೆ ಕನ್ನಡದ ಮಹಾ ಕವಿಗಳಲ್ಲಿ ಒಬ್ಬನಾದ ಕುಮಾರವ್ಯಾಸ ತನ್ನ ಷಟ್ಪದಿಯಲ್ಲಿ, ಮಾಡಿದ ಭಾಷಾ ಪ್ರಯೋಗಕ್ಕೆ ಒಂದೇ ಒಂದು ಉದಾಹರಣೆಯನ್ನು ನೋಡಿದರೆ ಸಾಕು :

ಬಸುರ ಬಗೆವೆನು ಕೀಚಕನ; ನಸು
ಮಿಸುಕಿದೊಡೆ ವೈರಾಟವಂಶದ
ಹೆಸರ ತೊಡೆವೆನು; ನಮ್ಮನರಿದೊಡೆ, ಕೌರವ ವ್ರಜವ
ಕುಸುರಿದರಿವೆನು; ಭೀಮ ಕಷ್ಟವ
ನೆಸಗಿದನು, ಹಾ ಎಂದರಾದೊಡೆ
ಮುಸುಡನ್ ಅಮರಾದ್ರಿಯಲಿ ತೇವೆನು ದೇವ ಸಂತತಿಯ
(ವಿರಾಟಪರ್ವ : ೩-೬೮)

ಕುಮಾರವ್ಯಾಸನ ಭಾಷೆಯಲ್ಲಿ ಕಂಡುಬರುವ ಗ್ರಾಮೀಣರೂಕ್ಷತೆ, ಅದರೊಂದಿಗೆ ಹೊಂದಿಕೊಂಡು ಬರುವ ಆಡು ಮಾತಿನ ಧಾಟಿ, ಮತ್ತು ಮಾರ್ಗಕಾವ್ಯದ ಶಕ್ತಿ ಇವುಗಳನ್ನು ಕುಮಾರವ್ಯಾಸನ ‘ದೇಸಿ’ಯಲ್ಲಿ ಕಾಣಬಹುದು.

ಈ ನಡುವೆ ಹದಿಮೂರನೆಯ ಶತಮಾನದ ಆಂಡಯ್ಯನೆಂಬ ಕವಿ ತನ್ನ ಅಚ್ಚಗನ್ನಡದ ಧೋರಣೆಯಿಂದ ಗಮನವನ್ನು ಸೆಳೆಯುತ್ತಾನೆ. ಇವನೂ ನಯಸೇನನಂತೆ, ಕನ್ನಡದ ಕಾವ್ಯದಲ್ಲಿ ಸಂಸ್ಕೃತದ ಪ್ರಭಾವ ಹಾಗೂ ಸಮ್ಮಿಶ್ರವನ್ನು ವಿರೋಧಿಸಿದವನು. ಕನ್ನಡದಲ್ಲಿ ಸ್ವತಂತ್ರವಾದ ವಸ್ತುವೊಂದನ್ನು ಕಂಡುಕೊಂಡು ಕಾವ್ಯ ರಚನೆ ಮಾಡಿದ್ದಲ್ಲದೆ, ಅಚ್ಚಗನ್ನಡವನ್ನು ಬಳಸಿ, ಅಂದರೆ ಒಂದಾದರೂ ಸಂಸ್ಕೃತ ಪದವನ್ನು ಬಳಸದೆ, ಕಾವ್ಯ ರಚನೆ ಮಾಡಿದ್ದು ಈತನ ವಿಶೇಷತೆ. ಅವನ ಒಂದು ಪದ್ಯವನ್ನು ಗಮನಿಸಬಹುದು :

ಪಲವುಂ ನಾಲಗೆಯುಳ್ಳವಂ ಬಗೆವೊಡೆ ಎಂದುಂ ಬಣ್ಣಿಸಲ್ಕೆ ಆರನ್ ಆ
ನೆಲನಂ, ಮತ್ತಿನ ಮಾನಿಸರ್ ಪೊಗಳಲ್ ಏನಂ ಬಲ್ಲರು ಎಂಬ ಒಂದು, ಬ
ಲ್ಲುಲಿಯಂ ನೆಟ್ಟನೆ ತಾಳ್ದು ಕನ್ನಡಮೆನಿಪ್ಪಾನಾಡು ಚೆಲ್ವಾಯ್ತು, ಮೆ
ಲ್ಲೆಲರಿಂ, ಪೂತಕೊಳಂಗಳಿಂ, ಕೆರೆಗಳಿಂ, ಕಾಲೂರ್ಗಳಿಂ, ಕೆಯ್ಗಳಿಂ

ಇದು ಕನ್ನಡ ನಾಡಿನ ವರ್ಣನೆ. ಪದ್ಯದ ಮೊದಲ ಪದ ‘ಪಲವುಂ ನಾಲಗೆಯುಳ್ಳವಂ’, ಎಂದರೆ ಅನೇಕ ನಾಲಗೆಗಳುಳ್ಳ ‘ಆದಿಶೇಷ’ ಎಂಬ ಸಂಸ್ಕೃತ ಪದಕ್ಕೆ ಬದಲಾಗಿ ಆಂಡಯ್ಯನು ರೂಪಿಸಿಕೊಂಡ ಕನ್ನಡ ಪದ. ಸಂಸ್ಕೃತ ಪದವನ್ನೆ ಬಳಸದೆ, ಸಂಸ್ಕೃತ ಪದಗಳಿಗೆ ಪ್ರತಿ ಪದಗಳನ್ನು ರೂಪಿಸಿಕೊಂಡು ತದ್ಭವಗಳನ್ನು ಮಾಡಿಕೊಂಡು ಬರೆದಿದ್ದಾನೆ. ನೋಡಲು ಇಂಥ ಕೆಲವು ಪದಗಳು ವಿಲಕ್ಷಣವಾಗಿ ಕಂಡರೂ, ಆಂಡಯ್ಯನ ಅಚ್ಚಗನ್ನಡದ ವೀರಧೋರಣೆಯನ್ನು ಮೆಚ್ಚದಿರಲಾಗುವುದಿಲ್ಲ. ಆದರೆ ಆಂಡಯ್ಯ ಕಾವ್ಯಭಾಷೆಯ ಬಗೆಗೆ ಹೇಳಿರುವ ಹೊಸಮಾತೊಂದು ತೀರಾ ಗಮನಿಸಬೇಕಾದದ್ದು. ಅದು ಹೀಗಿದೆ : ‘ಅದು (ಎಂದರೆ ಕಾವ್ಯ) ಮಾತನಾಡಿದವೊಲ್ ಅಂದವನ್ ಆಳ್ದಿರೆ, ಬಲ್ಪು ನೆಟ್ಟಗೆ ದೊರೆಕೊಂಡುದು’. ಕಾವ್ಯ ಮಾತನಾಡಿದ ಹಾಗೆ ಅಂದವನ್ನು ಒಳಕೊಂಡರೆ, ಅದಕ್ಕೆ ನೇರವಾದ ಶಕ್ತಿಯೊಂದು ಪ್ರಾಪ್ತವಾಗುತ್ತದೆ – ಎಂಬ ಆಂಡಯ್ಯನ ಈ ವಿಚಾರ ಅತ್ಯಂತ ಆಧುನಿಕವಾಗಿದೆ.[5] ಎಂದರೆ ಆಂಡಯ್ಯನ ಪ್ರಕಾರ ಕಾವ್ಯ ಮಾತನಾಡಿದ ಹಾಗಿರಬೇಕು. ಆದರೆ ಅದು ‘ಅಂದ’ವನ್ನು ಒಳಗೊಂಡಿರಬೇಕು. ಬರೀ ಮಾತನಾಡಿದ ಹಾಗಿದ್ದರೆ ಮಾತ್ರ ಸಾಲದು.  ಈ ‘ಅಂದ’ವೆನ್ನುವುದು ಕವಿ ಕೌಶಲದಿಂದ ವ್ಯವಹಾರದ ಭಾಷೆಗೆ, ಕಾವ್ಯದ ನೆಲೆಯಲ್ಲಿ ಪ್ರಾಪ್ತವಾಗುತ್ತದೆ. ಹೀಗಾದಾಗಲೆ ಕಾವ್ಯಕ್ಕೆ ಒಂದು ‘ಬಲ್ಪು’ ಅಥವಾ ಶಕ್ತಿ ಕೂಡಿಕೊಳ್ಳುತ್ತದೆ. ಆಂಡಯ್ಯನ ಈ ಅಭಿಪ್ರಾಯವನ್ನೆ ಹೊಸಗನ್ನಡದ ಕವಿಗಳೂ ಹೇಳುತ್ತಿರುವುದು ಎಂಬುದನ್ನು ನೆನೆದರೆ, ಆಶ್ಚರ್ಯವಾಗುತ್ತದೆ.

ಹೊಸಗನ್ನಡ ನವೋದಯ ಸಾಹಿತ್ಯದ ಭಾಷಾ ಪ್ರಜ್ಞೆ ವಿಶೇಷ ರೀತಿಯದು. ಕಾವ್ಯದ ಭಾಷೆ ಮತ್ತು ಗದ್ಯದ ಭಾಷೆಗಳೆಂದು ಎರಡು ರೀತಿಯಲ್ಲಿ ಇಂದಿನ ಸಾಹಿತ್ಯದ ಭಾಷೆಯನ್ನು ಗುರುತಿಸಬಹುದು. ಕಾವ್ಯದ ಭಾಷೆ, ಪ್ರಾಸ – ಛಂದಸ್ಸಿನ ಶಿಸ್ತಿಗೆ ಒಳಪಡುವುದರಿಂದ, ಅದು ಯಾವಾಗಲೂ ಗದ್ಯದ ಭಾಷೆಯಿಂದ ಸಹಜವಾಗಿಯೆ ಭಿನ್ನವಾಗಿರುತ್ತದೆ – ಎಲ್ಲ ಕಾಲಗಳಲ್ಲಿಯೂ. ಗದ್ಯದ ಭಾಷೆ, ಹಿಂದಿನ ಸಾಹಿತ್ಯದಲ್ಲಿ ಮಾರ್ಗ ಕಾವ್ಯಗಳ ನಡುವೆ ಪ್ರೌಢವಾಗಿಯೂ, ಅನಂತರ ಪದ್ಯಗಂಧಿಯಾಗಿಯೂ ಇದ್ದದ್ದು, ಇಂದು ಆಡುಮಾತಿನಿಂದಲೇ ರೂಪುಗೊಂಡು, ಕತೆ – ಕಾದಂಬರಿ ಇತ್ಯಾದಿಗಳಲ್ಲಿ ವಿವಿಧ ಪ್ರಾದೇಶಿಕ ವೈಲಕ್ಷಣ್ಯಗಳನ್ನು ಪ್ರಕಟಿಸಿಕೊಂಡಿದೆ. ಕಾವ್ಯ ಭಾಷೆಯ ಮಟ್ಟಿಗೆ ಹೇಳುವುದಾದರೆ, ನವೋದಯ ಕಾವ್ಯದ ಭಾಷೆ ಜನಭಾಷೆಗೆ ಹತ್ತಿರವಾದರೂ ಒಂದು ರೀತಿಯ ನಾದಮಯತೆಯಿಂದ ತುಂಬಿದೆ; ನವ್ಯ ಕಾವ್ಯದ ಭಾಷೆ, ಕಾವ್ಯವನ್ನು ಈ ನಾದಮಯತೆ ಅಥವಾ ‘ಸಂಗೀತದ ಸಾಹಚರ್ಯ’ದಿಂದ ಪಾರುಮಾಡಿ ಗದ್ಯದ ನೆಲೆಗೆ ತಂದಿದ್ದರ ಪರಿಣಾಮವಾಗಿದೆ.

ಹೊಸಗನ್ನಡ ಕಾಲದ ತನಕ ಹರಹಿದ ಹಿಂದಿನ ಕನ್ನಡ ಕವಿಗಳು ಕಾವ್ಯ ಭಾಷೆಯ ಬಗ್ಗೆ ಇಟ್ಟುಕೊಂಡ ಧೋರಣೆಗಳನ್ನು, ಮಾಡಿದ ಪ್ರಯೋಗಗಳನ್ನು ನೋಡಿದ ಮೇಲೆ ನಮಗೆ ಅನ್ನಿಸುವುದು ಇಷ್ಟು : ಕನ್ನಡ ಕವಿಗಳಿಗೆ, ತಾವು ಕಾವ್ಯ ಬರೆಯಬೇಕಾದದ್ದು, ಬರೆಯುತ್ತಿರುವುದು ಕನ್ನಡದಲ್ಲಿ ಎನ್ನುವುದು ಮುಖ್ಯವಾಗಿತ್ತು. ಆದರೆ ಕನ್ನಡದಲ್ಲಿ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳುವುದಕ್ಕೆ ಇದ್ದ ಆತಂಕ ಸಂಸ್ಕೃತದ್ದು. ಇದು ಬರೀ ಆತಂಕವಲ್ಲ, ಒಂದು ಸವಾಲೂ (challenge) ಕೂಡ. ಇದನ್ನು ಎದುರಿಸುವಲ್ಲಿ ಅವರು ತಾಳಿದ ನಿಲುವುಗಳು, ತೋರಿದ ಪ್ರತಿಕ್ರಿಯೆಗಳು, ಕನ್ನಡ ಸಾಹಿತ್ಯದ ವಿವಿಧ ರೂಪಗಳ ಆವಿಷ್ಕಾರಕ್ಕೆ ಕಾರಣವಾದವು. ಸಂಸ್ಕೃತದ ಆಕರ್ಷಣೆಯನ್ನು ತಿರಸ್ಕರಿಸಲಾರರು, ಕನ್ನಡದ ಸೊಗಸನ್ನು ಬಲಿಕೊಡಲಾರರು. ಇಂಥ ಒಂದು ಸಂಘರ್ಷ ಅವರಲ್ಲಿ, ಮುಖ್ಯವಾಗಿ ನೃಪತುಂಗ, ಪಂಪನಂಥವರಲ್ಲಿ ಕಾಣಿಸಿಕೊಂಡದ್ದು, ಕ್ರಮೇಣ ಸಂಸ್ಕೃತದ ಮಿತಿಮೀರಿದ ಪ್ರಭಾವದಿಂದ ಪಾರಾಗಿ, ಕನ್ನಡ ತನ್ನ ಸತ್ವ – ಸಾಮರ್ಥ್ಯಗಳನ್ನು ಪ್ರಕಟಿಸಿಕೊಂಡದ್ದು ಹೇಗೆ ಎನ್ನುವುದನ್ನು ದೇಸೀರೀತಿಯ ಕಾವ್ಯಪರಂಪರೆ ಹೇಳುತ್ತದೆ. ನೃಪತುಂಗನಿಂದ ಹಿಡಿದು, ಆಧುನಿಕ ಕಾಲದವರೆಗೆ ಭಾಷೆಯನ್ನು ಕುರಿತ ಕವಿಗಳ ಧೋರಣೆಯಲ್ಲಿ ತೀರಾ ಗಮನಾರ್ಹವಾದ ಅಂಶವೆಂದರೆ, ‘ಕಾವ್ಯ ಆಡುಮಾತಿಗೆ ಸಮೀಪವಾಗಿರಬೇಕು; ಆಡುಮಾತಿನ ಸೊಗಸನ್ನು, ಸತ್ವವನ್ನು ಒಳಗೊಳ್ಳಬೇಕು’ – ಎನ್ನುವುದು. ಇದರಿಂದ, ನಮ್ಮ ಕವಿಗಳಿಗೆ ತಮ್ಮ ಕಾವ್ಯ ಪಂಡಿತರಲ್ಲದ ಸಾಮಾನ್ಯಜನಕ್ಕೂ ತಲುಪಬೇಕೆಂಬ, ಹಾಗೆ ತಲುಪಬೇಕಾದರೆ ಆ ಜನದ ಸಾಮಾಜಿಕ ಪರಿಸರದ ಭಾಷೆಯನ್ನು ಕಾವ್ಯದಲ್ಲಿ ತಂದುಕೊಳ್ಳಬೇಕೆಂಬ ಎಚ್ಚರವೂ, ಆಸೆಯೂ ಇದ್ದುವೆಂದು ಅರ್ಥಹೊರಡುತ್ತದೆ. ಆದರೆ ಇದು ನಿಜವಾಗಿದ್ದರೆ ಸಂತೋಷಪಡಬಹುದಾಗಿತ್ತು. ವಾಸ್ತವ ಪರಿಸ್ಥಿತಿಯನ್ನು ಗಮನಿಸಿದರೆ ಇದು ಒಂದು ಘನವಾದ ಉದ್ದೇಶವಾಯಿತೇ ಹೊರತು ಬೇರೇನೂ ಅಲ್ಲ. ಸಾವಿರ ವರ್ಷಗಳ ಸಾಹಿತ್ಯ ಪರಂಪರೆಯಲ್ಲಿ ಅರ್ಧದಷ್ಟು ಬರವಣಿಗೆ ಜನಸಾಮಾನ್ಯಕ್ಕೆ ಅರ್ಥವಾಗುವಂತಿದೆಯೆ ಎಂಬುದು ಸಂಶಯಾಸ್ಪದವಾಗಿದೆ. ಇಲ್ಲದಿದ್ದರೆ ‘ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು’, ಎನ್ನುವ ಟೀಕೆ ಬರುತ್ತಿರಲಿಲ್ಲ. ಈ ಘನವಾದ ಉದ್ದೇಶವನ್ನು ತಕ್ಕಮಟ್ಟಿಗೆ ಕಾರ್ಯಗತ ಮಾಡಿದವುಗಳು ದೇಸೀ ಕಾವ್ಯಗಳೆ; ರಾಜಾಸ್ಥಾನಗಳ ಹೊರಗೆ ರಚಿತವಾದ ಕಾವ್ಯಗಳೆ. ಇದರಿಂದ ನಿಷ್ಪನ್ನವಾಗುವ ಅಂಶವೆಂದರೆ, ಕನ್ನಡ ಸಾಹಿತ್ಯ ಎಲ್ಲೆಲ್ಲಿ ರಾಜಾಶ್ರಯದ ಹಂಗನ್ನು ಹರಿದು ನಿಂತಿದೆಯೋ ಅಲ್ಲೆಲ್ಲಾ ಕಾವ್ಯದ ಭಾಷೆ ಬಹುಮಟ್ಟಿಗೆ ಜನಭಾಷೆಗೆ ಸಮೀಪವಾಗಿದೆ, ಮತ್ತು ಕನ್ನಡ ಸಾಹಿತ್ಯ ಪರಂಪರೆಗೆ ಒಂದು ಹೊಸ ತಿರುವು ಅಂಥ ಕಡೆ ಬಂದಿದೆ. ಇಂಥ ಒಂದು ತಿರುವು ಬಂದದ್ದೂ ಕೂಡ ಸಾಹಿತ್ಯಕ ಕಾರಣದಿಂದ ಅಲ್ಲ, ಧಾರ್ಮಿಕ ಆಂದೋಲನದಿಂದ ಎನ್ನುವುದು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯಾಗಿದೆ. ಎಂದರೆ ಒಂದು ಧಾರ್ಮಿಕ ಕ್ರಾಂತಿಯ ಸಂದರ್ಭದಲ್ಲಿ, ಅದೂ ಸಮಾಜದ ಅತ್ಯಂತ ಸಾಮಾನ್ಯ ಜನರಿಂದಲೇ ಸಾಹಿತ್ಯ ರಚನೆ ಮೊದಲಾದದ್ದರಿಂದ, ಮತ್ತು ಆ ಸಾಮಾನ್ಯ ಜನರೊಂದಿಗೆ ಅಂದಿನ ಕ್ರಾಂತಿಯ ಮುಂದಾಳುಗಳು ವ್ಯವಹರಿಸಬೇಕಾದದ್ದರಿಂದ, ಅವರ ಅಭಿವ್ಯಕ್ತಿಯಿಂದಾಗಿ ಕನ್ನಡ ಸಾಹಿತ್ಯಕ್ಕೆ ಒಂದುಹೊಸ ತಿರುವು ಬಂದಿತು. ಧಾರ್ಮಿಕ ಆವಶ್ಯಕತೆ ಅಂದಂದಿನ ಕಾವ್ಯದ ಭಾಷೆಯನ್ನು ಹೇಗೆ ರೂಪಿಸಬಲ್ಲದೆಂಬುದಕ್ಕೆ ವಚನಕಾರರ ಮತ್ತು ಅವರಿಂದ ಸ್ಫೂರ್ತಿಪಡೆದ ಕವಿಗಳ, ಮತ್ತು ವೈಷ್ಣವ ಕೀರ್ತನಕಾರರ ಹಾಗೂ ಕವಿಗಳ ಕೃತಿಗಳೇ ಸಾಕ್ಷಿಯಾಗಿವೆ. ಜೈನಧರ್ಮದ ದೃಷ್ಟಿಯಿಂದಲೂ ಈ ಮಾತು ನಿಜ. ಯಾಕೆಂದರೆ ಸಂಸ್ಕೃತದ ಹಂಗನ್ನು ಹರಿದು ‘ಸುದ್ದಗನ್ನಡ’ವನ್ನೆ ಸಾಹಿತ್ಯದ ಭಾಷೆಯನ್ನಾಗಿ ಮಾಡಬೇಕೆಂಬ ಮೊದಲ ಧ್ವನಿ ಹೊರಟದ್ದು, ನಯಸೇನನೆಂಬ ಹನ್ನೆರಡನೆಯ ಶತಮಾನದ ಜೈನ ಕವಿಯಿಂದ. ನಯಸೇನನಿಗೆ, ಕಾವ್ಯದ ಭಾಷೆ ಹೀಗೆ ಜನಸಾಮಾನ್ಯರ ಭಾಷೆಯಾಗಬೇಕೆಂದು ತೋರಿದ್ದು ಒಂದು ಧಾರ್ಮಿಕ ಅವಶ್ಯಕತೆಯಾಗಿಯೇ. ಏಕೆಂದರೆ, ಹನ್ನೆರಡನೆಯ ಶತಮಾನದ ವೇಳೆಗೆ ಕರ್ನಾಟಕದಲ್ಲಿ ಜೈನಧರ್ಮ ಇಳಿಗಾಲದಲ್ಲಿದ್ದು ಶೈವ-ವೈಷ್ಣವ ಧರ್ಮಗಳೊಂದಿಗೆ ಸೆಣಸಾಡಿ, ತನ್ನ ಉಳಿವಿಗಾಗಿ ಹೋರಾಟ ನಡೆಯಿಸಿತ್ತು. ಇಂಥ ಸಂದರ್ಭದಲ್ಲಿ ಹತ್ತನೆಯ ಶತಮಾನದ ಕವಿಗಳಂತೆ ಪ್ರೌಢವಾಗಿ ಪುರಾಣಗಳನ್ನು ಬರೆಯುವುದರಿಂದ ಪ್ರಯೋಜನವಿಲ್ಲ, ಜೈನ ಧರ್ಮ ಉಳಿಯಬೇಕಾದರೆ ಅದನ್ನು ಜನದ ಆಡುಮಾತಿನಲ್ಲಿ, ಅವರಿಗೆ ತಿಳಿಯುವಂಥ ರೀತಿಯಲ್ಲಿ ಹೇಳಬೇಕು ಎಂಬ ವಿವೇಕ ನಯಸೇನನಲ್ಲಿ ಮೂಡಿದ್ದರಿಂದಲೇ, ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲಿಗೆ ಕಾವ್ಯಭಾಷೆಯ ಬಗ್ಗೆ ಸಂಸ್ಕೃತ ವಿರೋಧಿ ಧೋರಣೆಯೊಂದು ಹುಟ್ಟಿಕೊಂಡಿತು. ಮತ್ತು ಮುಂದಿನ ಅನೇಕ ಜೈನ ಕವಿಗಳಿಗೆ ಇದು ಮಾದರಿಯಾಗಿ ಅನೇಕ ಜೈನ ಪುರಾಣಗಳು, ಕಾವ್ಯಗಳು ಸಾಂಗತ್ಯದಂಥ ದೇಸೀಯ ಛಂದಸ್ಸಿನಲ್ಲಿ ರಚಿತವಾದವು. ಹಾಗಾದರೆ ಪಂಪ-ರನ್ನ-ಪೊನ್ನರೆಂಬ ರತ್ನತ್ರಯರು ಬರೆದ ಕಾಲಕ್ಕೆ ಅವರ ಕಾವ್ಯಗಳು ಅತ್ಯಂತ ಪ್ರೌಢವಾಗಿ ಏಕೆ ರಚಿತವಾದವು, ಅವರಿಗೂ ಧರ್ಮ ಪ್ರಸಾರದ ಅವಶ್ಯಕತೆ ಇತ್ತಲ್ಲ ಎಂಬ ಪ್ರಶ್ನೆ ಏಳಬಹುದು. ಅವರಿಗೆ ಧರ್ಮ ಪ್ರಸಾರದ ಉದ್ದೇಶವಿತ್ತೆ ಹೊರತು, ನಯಸೇನನ ಕಾಲಕ್ಕೆ ಇದ್ದಂಥ ಆತಂಕದ ಸ್ಥಿತಿ ಇರಲಿಲ್ಲವೆನ್ನುವುದೆ ಈ ಪ್ರಶ್ನೆಗೆ ಉತ್ತರ. ಪಂಪ ರನ್ನಾದಿಗಳ ಕಾಲ ಜೈನ ಧರ್ಮದ ಉತ್ಕರ್ಷದ ಕಾಲ. ಅದು ಹಾಗೆ ಉತ್ಕರ್ಷವಾಗಲು, ಜೈನಧರ್ಮ ಅನೇಕ ಶತಮಾನಗಳಿಂದಲೂ ಕರ್ನಾಟಕದಲ್ಲಿದ್ದುದೆ ಕಾರಣ. ಕರ್ನಾಟಕಕ್ಕೆ ಜೈನ ಧರ್ಮ ಬಹುಶಃ ಕ್ರಿಸ್ತಪೂರ್ವದಲ್ಲಿಯೇ ಪ್ರವೇಶಿಸಿರಬೇಕು. ಅದು ಅನೇಕ ರಾಜರುಗಳ ಆಶ್ರಯದಿಂದ, ಕ್ರಿ.ಶ. ಐದನೆಯ ಶತಮಾನದಿಂದಲೇ ಕರ್ನಾಟಕದಲ್ಲಿ ಪ್ರಬಲವಾಗತೊಡಗಿ, ಹತ್ತನೆಯ ಶತಮಾನದ ವೇಳೆಗೆ ಶಿಖರವನ್ನು ಮುಟ್ಟಿತು. ಆಗ ಅದನ್ನು ಜನಸಾಮಾನ್ಯಕ್ಕೆ ತಿಳಿಯಹೇಳುವಂಥ ಸರಳ ದೇಶೀಯ ಪ್ರಯತ್ನಗಳು ಅಗತ್ಯವಾಗಿರಲಿಲ್ಲ. ಹಾಗೆ ನೋಡಿದರೆ ಜೈನಧರ್ಮ ಪ್ರಕರ್ಷವಾದ ಈ ಕಾಲದ ಜೈನ ಕವಿಗಳಿಗೆ ಆಶ್ರಯ ಕೊಟ್ಟ ರಾಜರಾರೂ ಜೈನರಲ್ಲ ಎಂಬುದನ್ನು ನೆನೆದರೆ, ಇದಕ್ಕೆ ಅಂತಹ ರಾಜಾಶ್ರಯವಾಗಲೀ, ದೇಶಭಾಷೆಯ ನೆರವಾಗಲೀ ಬೇಕಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಕಾಲದಲ್ಲಿ ಪಂಪ – ರನ್ನ – ಪೊನ್ನರು ಬರೆದ ಜೈನ ಪುರಾಣಗಳನ್ನು ನೋಡಿದರೆ ಅವು ಮುಖ್ಯವಾಗಿ ಪಂಡಿತರನ್ನು ಮೆಚ್ಚಿಸಲು ಬರೆದಂತೆ ತೋರುತ್ತವೆಯೇ ವಿನಾ, ತಮ್ಮ ಸಮಕಾಲೀನವಾದ ಸಾಮಾನ್ಯ ಜೈನಧರ್ಮೀಯರನ್ನು ಮೆಚ್ಚಿಸುವ, ಅಥವಾ ಅವರಿಗೆ ತಮ್ಮ ಪುರಾಣಗಳ ಮೂಲಕ ಜೈನಧರ್ಮವನ್ನು ಮುಟ್ಟಿಸುವ ಉದ್ದೇಶವಿದ್ದಂತೆ ತೋರುವುದಿಲ್ಲ. ರತ್ನತ್ರಯರು ಪ್ರೌಢಶೈಲಿಯಲ್ಲಿ ಬರೆದ ಈ ಪುರಾಣಗಳು ಕನ್ನಡಿಗರಾದ ಜೈನಧರ್ಮೀಯರ ಪಾರಾಯಣ ಗ್ರಂಥವಾಗಿದ್ದುವೆ, ಅಥವಾ ಆಗಿವೆಯೇ ಎನ್ನುವುದು ತೀರಾ ಸಂಶಯಾಸ್ಪದ. ಅತ್ತಿಮಬ್ಬೆಯಂಥವಳು ಪೊನ್ನನ ಶಾಂತಿ ಪುರಾಣದ ಸಹಸ್ರ ಪ್ರತಿಗಳನ್ನು ಮಾಡಿಸಿ ‘ಶಾಸ್ತ್ರದಾನ’ ರೂಪದಲ್ಲಿ ಹಂಚಿದಳೆಂದರೆ, ಅದನ್ನು ಅಂದಿನ ಜನಪಾರಾಯಣಕ್ಕೆ ಬಳಸಲು ಸಾಧ್ಯವಾಯಿತು ಎಂದೇನೂ ಅರ್ಥವಾಗುವುದಿಲ್ಲ; ಬಹುಶಃ ಜನ ಅವುಗಳನ್ನು, ಶ್ರದ್ಧೆಯಿಂದ ಪೂಜಿಸಿದ್ದಿರಬಹುದು. ಈಗಲೂ ಜೈನಗೃಹಸ್ಥರು ಪಾರಾಯಣಕ್ಕೆ ಬಳಸುವುದು ರತ್ನಾಕರನ ‘ಭರತೇಶವೈಭವ’ದಂಥ ಸಾಂಗತ್ಯ ಕೃತಿಗಳನ್ನು. ನಯಸೇನನ ಕಾಲಕ್ಕೆ ಒದಗಿದಂತಹ ಪರಿಸ್ಥಿತಿ, ಜೈನಧರ್ಮಕ್ಕೆ ಪಂಪನ ಕಾಲದಲ್ಲಿಯೇ ಒದಗಿದ್ದರೆ, ಬಹುಶಃ ಅಂದೇ ದೇಸೀ ಕಾವ್ಯ ಧೋರಣೆ ಕನ್ನಡದಲ್ಲಿ ಹುಟ್ಟಬಹುದಾಗಿತ್ತು. ಆದರೆ ಹನ್ನೊಂದನೆಯ ಶತಮಾನದಿಂದ ಜೈನಧರ್ಮಕ್ಕೆ ಅಳಿವು – ಉಳಿವಿನ ಹೋರಾಟ ಪ್ರಾಪ್ತವಾದಾಗ ಅದಕ್ಕೆ ಜನಸಾಮಾನ್ಯರ ಭಾಷೆಯ ಅಗತ್ಯ ತಲೆದೋರಿತು. ಎಂದರೆ, ಜೈನರು ಕನ್ನಡಕ್ಕೆ (ಎಂದರೆ ಶುದ್ಧಗನ್ನಡಕ್ಕೆ) ಒಲಿದದ್ದು ಜೈನಧರ್ಮದ ಇಳಿಗಾಲದಲ್ಲಿ; ವೀರಶೈವರು ಕನ್ನಡಕ್ಕೆ ಒಲಿದದ್ದು ವೀರಶೈವ ಧರ್ಮದ ಉತ್ಕರ್ಷದ ಕಾಲದಲ್ಲಿ; ಜೈನರು ಪ್ರೌಢತೆಗೆ ಅಥವಾ ಸಂಸ್ಕೃತಕ್ಕೆ ಒಲಿದದ್ದು ಅದರ ಉತ್ಕರ್ಷದ ಕಾಲದಲ್ಲಿ; ವೀರಶೈವರು ಪ್ರೌಢತೆಗೆ ಅಥವಾ ಸಂಸ್ಕೃತಕ್ಕೆ ಒಲಿದದ್ದು ವೀರಶೈವ ಧರ್ಮದ ಇಳಿಗಾಲದಲ್ಲಿ. ಹದಿನಾರನೆಯ ಶತಮಾನದ ನಂತರದ ವೀರಶೈವ ಸಾಹಿತ್ಯ ತಕ್ಕಷ್ಟು ಪ್ರೌಢವಾಗಿರುವುದಲ್ಲದೆ, ವಚನಗಳ ವ್ಯಾಖ್ಯಾನ, ಸಂಸ್ಕೃತದ ಹಿನ್ನೆಲೆಯಲ್ಲಿ ಮತ್ತು ಸಂಸ್ಕೃತದಲ್ಲಿ ಎಂಬುದನ್ನು ಇಲ್ಲಿ ಗಮನಿಸಬಹುದು. ವೈಷ್ಣವರು ಕನ್ನಡಕ್ಕೆ ಒಲಿದದ್ದು ಹದಿನೈದನೆಯ ಶತಮಾನದ ಹೊತ್ತಿಗೆ, ಭಾಗವತ ಪ್ರಜ್ಞೆಯ ತರಂಗವೊಂದು ಕರ್ನಾಟಕವನ್ನು ವ್ಯಾಪಿಸಿದಾಗ. ಒಟ್ಟಿನಲ್ಲಿ ಸಾಹಿತ್ಯದ ಭಾಷೆ ಜನಸಾಮಾನ್ಯರ ಭಾಷೆಯಾದದ್ದು – ಹೊಸಗನ್ನಡ ಸಾಹಿತ್ಯವನ್ನು ಬಿಟ್ಟರೆ – ಮೂಲತಃ ಧಾರ್ಮಿಕ ಅವಶ್ಯಕತೆಯಿಂದ; ಯಾವುದೇ ಧರ್ಮ ತಾನು ಹೊಸದಾಗಿ ನೆಲೆಗೊಳ್ಳಬೇಕಾದ ಅಥವಾ ಬದುಕಿ ಉಳಿಯಬೇಕಾದ ಸಂಘರ್ಷದ ಕಾಲಗಳಲ್ಲಿ ಧಾರ್ಮಿಕ ಅವಶ್ಯಕತೆ, ಸಾಹಿತ್ಯಕ್ಕೆ ಹೊಸ ತುಡಿತ – ತೀವ್ರತೆಗಳನ್ನು ಕೊಟ್ಟು, ಅಂದಂದಿನ ಭಾಷೆಯ ಸ್ವರೂಪವನ್ನೆ ಬದಲಿಸಿ ಮತ್ತು ಹೊಸ ಛಂದೋರೂಪಗಳನ್ನು ತೊಡಿಸಿ ಕನ್ನಡ ಸಾಹಿತ್ಯದಲ್ಲಿ ಒಂದೆರಡು ತಿರುವುಗಳಿಗೆ ಕಾರಣವಾಗಿದೆ. ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಶುದ್ಧ ಸಾಹಿತ್ಯ ಚಳವಳಿ ಎಂಬುದೇ ಇಲ್ಲ; ಸಾಹಿತ್ಯಕ ಕಾರಣಗಳಿಂದ ಮತ್ತು ಶುದ್ಧಸಾಹಿತ್ಯ ಚಳವಳಿಗಳಿಂದ ಸಾಹಿತ್ಯದ ರೂಪದಲ್ಲಿ ಬದಲಾವಣೆಗಳಾದದ್ದು ಹೊಸಗನ್ನಡಕಾಲದಲ್ಲಿ ಮಾತ್ರ.


[1] ಜಿ.ಎಸ್. ಶಿವರುದ್ರಪ್ಪ : ಕನ್ನಡ ಕವಿಗಳ ಭಾಷಾಪ್ರಜ್ಞೆ ೧ ಸಾಧನೆ. ೧-೯. ಪು. ೨೦

[2] ಡಿ.ಎಲ್. ನರಸಿಂಹಾಚಾರ್ : ಪಂಪಭಾರತ ದೀಪಿಕೆ. ಪು. ೫ (೧೯೭೧)

[3] ಎಂ.ಎ. ರಾಮಾನುಜಯ್ಯಂಗಾರ್ (ಪ್ರ.) ಮುದ್ದಣ ಕವಿಪ್ರಣೀತಂ ಶ್ರೀ ರಾಮಾಶ್ವಮೇಧಂ. ಪು.೧

[4] ಜಿ.ಎಸ್. ಶಿವರುದ್ರಪ್ಪ : ಕನ್ನಡ ಕವಿಗಳ ಭಾಷಾಪ್ರಜ್ಞೆ ೧ ಸಾಧನೆ. ೧-೯. ಪು. ೨೩

[5] No Poetry, of course, is ever exactly the same speech that the Poet talks and hears : but it has to be in such relation to the speech of his time that the listener or reader can say ‘that is how I should talk if I could talk Poetry’, – ಇದರೊಂದಿಗೆ ಆಂಡಯ್ಯನ ಮಾತನ್ನು ಹೋಲಿಸಿ ನೋಡಿ.