ಕನ್ನಡ ಕವಿಗಳ ಕಾವ್ಯ ಕಲ್ಪನೆ

ಸಿದ್ಧ ಪ್ರಸಿದ್ಧವಾದ ವಸ್ತುವನ್ನಾರಿಸಿಕೊಂಡು, ಮತ – ಧರ್ಮ, ರಾಜಾಶ್ರಯ, ಅಷ್ಟಾದಶವರ್ಣನೆಯ ಸಂಪ್ರದಾಯ ಇತ್ಯಾದಿಗಳ ಇಕ್ಕಟ್ಟಿನಲ್ಲಿ ಕಾವ್ಯರಚನೆ ಮಾಡಬೇಕಾದ ನಮ್ಮ ಹಿಂದಿನ ಕವಿಗಳಿಗೆ, ತಮ್ಮ ಕೃತಿ ರಚನೆಗೆ ಹಿನ್ನೆಲೆಯಾಗಿ ಕಾವ್ಯಸ್ವರೂಪ – ಉದ್ದೇಶ ಇತ್ಯಾದಿಗಳನ್ನು ಕುರಿತು, ತಮ್ಮದೇ ಆದ ವಿಚಾರಗಳನ್ನು ಅಭಿಪ್ರಾಯಗಳನ್ನು ಇರಿಸಿಕೊಳ್ಳುವುದಕ್ಕೆ ಸಾಧ್ಯವಾಗಿತ್ತೆ, ಮತ್ತು ತಮ್ಮ ಕಲ್ಪನೆಗೆ ಅನುಸಾರವಾಗಿ ಒಂದಷ್ಟು ಸ್ವಾತಂತ್ರ್ಯವಹಿಸಿ ಪ್ರಯೋಗಗಳನ್ನು ನಡೆಸಲು ಸಾಧ್ಯವಾಯಿತೆ ಎಂಬ – ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆಗೆ ತಕ್ಕಮಟ್ಟಿನ ಉತ್ತರ ನಮಗೆ ನಮ್ಮ ಕವಿಗಳ ಕಾವ್ಯದ ಪೀಠಿಕಾ ಪ್ರಕರಣಗಳಲ್ಲಿ ಮತ್ತು ಕಾಲದಿಂದ ಕಾಲಕ್ಕೆ ಬದಲಾದ ಕವಿಗಳ ಧೋರಣೆಯಲ್ಲಿ ದೊರೆಯುತ್ತದೆ.

ಆಗಲೇ ಹೇಳಿರುವಂತೆ, ಕವಿಯಾಗತಕ್ಕವನಿಗೆ, ಸಾಕಷ್ಟು ವಿದ್ವತ್ತಿನ ಹಿನ್ನೆಲೆ ಇತ್ತು. ಕಾವ್ಯಕ್ಕೆ ಅಗತ್ಯವಾದ ಹಲವು ಶಾಸ್ತ್ರಗಳಲ್ಲಿ ಕಾವ್ಯಮೀಮಾಂಸೆಯೂ ಒಂದು. ಕಾವ್ಯ ಎಂದರೇನು, ಕಾವ್ಯದ ಪರಿಕರಗಳು ಯಾವುವು, ಕಾವ್ಯದ ಉದ್ದೇಶ ಹಾಗೂ ಪ್ರಯೋಜನಗಳೇನು ಎನ್ನುವುದನ್ನು ಚರ್ಚಿಸುವ ಶಾಸ್ತ್ರಕ್ಕೆ ಕಾವ್ಯಮೀಮಾಂಸೆ ಎಂದು ಹೆಸರು. ಈ ಕಾವ್ಯಮೀಮಾಂಸೆಯ ಗ್ರಂಥಗಳಿಗೆ ಅಲಂಕಾರಶಾಸ್ತ್ರಗಳೆಂದು ಕರೆಯುತ್ತಾರೆ. ಅಲಂಕಾರಶಾಸ್ತ್ರಗಳು ವಿಶೇಷವಾಗಿ ರಚಿತವಾಗಿರುವುದು ಸಂಸ್ಕೃತದಲ್ಲಿ. ಕನ್ನಡದಲ್ಲಿ ಕಾವ್ಯರಚನೆ ಆರಂಭವಾಗುವ ಕಾಲಕ್ಕೆ ಸಂಸ್ಕೃತ ಅಲಂಕಾರಶಾಸ್ತ್ರ ತಕ್ಕಷ್ಟು ಬೆಳೆದಿತ್ತು; ಆ ಶಾಸ್ತ್ರದ ಬಹು ಮುಖ್ಯವಾದ ತತ್ವಗಳು ಆಗಲೇ ಪ್ರಸಿದ್ಧವಾಗಿದ್ದವು. ಅಲಂಕಾರ, ರೀತಿ, ವಕ್ರೋಕ್ತಿ, ರಸ, ಧ್ವನಿ – ಈ ವಿಷಯಗಳು ಆಗಲೇ ಪರಿಚಿತವಾಗಿದ್ದುವು. ಇಂತಹ ಹಿನ್ನೆಲೆಯಲ್ಲಿ ಕಾವ್ಯ ರಚನೆ ಪ್ರಾರಂಭ ಮಾಡಿದ ಕನ್ನಡ ಕವಿಗಳಿಗೆ ಸಂಸ್ಕೃತ ಅಲಂಕಾರ ಶಾಸ್ತ್ರದ ಪರಿಚಯವಿತ್ತು. ಆದುದರಿಂದ ಕಾವ್ಯವನ್ನು ಕುರಿತು, ನಮ್ಮ ಕನ್ನಡ ಕವಿಗಳು ಈ ಸಂಸ್ಕೃತ ಅಲಂಕಾರ ಶಾಸ್ತ್ರಗಳಿಂದ ಸಾಕಷ್ಟು ವಿಚಾರಗಳನ್ನು ಕನ್ನಡಿಸಿ ಹೇಳುವುದು ಅಭ್ಯಾಸವಾಯಿತು. ಸಂಸ್ಕೃತ ಸಾಹಿತ್ಯದ ಹಾಗೂ ಭಾಷೆಯ ಪ್ರಭಾವ ಹೇಗೆ ಕನ್ನಡ ಕವಿಗಳನ್ನು ಕಾಡಿತೋ, ಹಾಗೆಯೇ ಸಂಸ್ಕೃತ ಅಲಂಕಾರ ಶಾಸ್ತ್ರದ ವಿಚಾರಗಳೂ ಕನ್ನಡ ಕವಿಗಳಲ್ಲಿ ಅನುರಣಿತವಾಗಿದೆ. ಆದರೆ, ಈ ಹಿನ್ನೆಲೆಯಿದ್ದೂ ನಮ್ಮ ಕವಿಗಳು ತಮ್ಮದೇ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು, ಮತ್ತು ಕಾವ್ಯಗಳ ಬಗೆಗೆ ತಮ್ಮದೇ ಆದ ಧೋರಣೆಗಳನ್ನಿರಿಸಿಕೊಳ್ಳಲು ಸಾಧ್ಯವಾಗಿದೆ. ಇದು ನಮ್ಮ ಕವಿಗಳ ಕಾವ್ಯಾರಂಭದ ಪೀಠಿಕಾಪ್ರಕರಣಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಈ ಪೀಠೀಕೆಗಳ ಮುಖ್ಯ ಲಕ್ಷಣ ಇದು : ದೇವತಾಸ್ತುತಿ; ಪೂರ್ವಕವಿಗಳ ಸ್ಮರಣೆ; ಸ್ವಕಾವ್ಯದ ಅಗ್ಗಳಿಕೆ; ತಮ್ಮ ಕಾವ್ಯದ ವಿಶೇಷತೆ, ವಸ್ತುರೀತಿ ಇತ್ಯಾದಿಗಳನ್ನು ಕುರಿತು; ಕುಕವಿ ಅಥವಾ ದುರ್ಜನರನ್ನು ಕುರಿತ ನಿಂದೆ, ಇವು ವಿಷಯಗಳು.

ದೇವತಾಸ್ತುತಿ ಮುಖ್ಯವಾಗಿ ತಮ್ಮ ಇಷ್ಟ ದೇವತೆಗಳನ್ನು ಕುರಿತದ್ದು. ಪುರಾಣಗಳಾದರೆ, ಜೈನರು ಜಿನನನ್ನೂ, ಶೈವರು ಶಿವನನ್ನೂ, ವೈಷ್ಣವರು ವಿಷ್ಣುವನ್ನೂ ಸ್ತುತಿಸುತ್ತಾರೆ. ವಿಘ್ನೇಶ್ವರ, ಸರಸ್ವತಿ ಇವರಂತೂ ಎಲ್ಲಾ ಕವಿಗಳ ಸ್ತುತಿಗೆ ಪಾತ್ರರಾದವರು. ತಮ್ಮ ಕಾವ್ಯವನ್ನು ಇವರು ನಿರ್ವಿಘ್ನವಾಗಿ ನಡೆಸಲಿ ಎಂಬ ಕೋರಿಕೆ ಸಾಮಾನ್ಯವಾದ ಅಂಶ. ಆದರೆ ಪಂಪನು ಮಾತ್ರ ಸರಸ್ವತಿಯನ್ನು ಕುರಿತು, ‘ಪರಮ ಜಿನೇಂದ್ರವಾಣಿಯೆ ಸರಸ್ವತಿ, ಬೇರೆ ಅದು ಪೆಣ್ಣರೂಪಮಂ ಧರಿಯಿಸಿ ನಿಂದುದು ಅಲ್ತು’ – ಎಂದು ಹೊಸ ಬಗೆಯಿಂದ ವ್ಯಾಖ್ಯಾನಿಸಿದ್ದಾನೆ. ಎಂದರೆ ‘ಸರಸ್ವತಿ’ ಎಂದರೆ, ಜ್ಞಾನಿಗಳು (ಜಿನೇಂದ್ರ – ತನ್ನನ್ನು ತಾನು ಗೆದ್ದುಕೊಂಡವನು) ಆಡುವ ಮಾತು. ಅದು ಹೆಣ್ಣ ರೂಪವನ್ನು ಧರಿಸಿ ನಿಂದದ್ದಲ್ಲ – ಎಂಬ ವಿರವಣೆಯಿಂದ ಚಿರಪರಿಚಿತವಾದ ಸರಸ್ವತಿಯ ಕಲ್ಪನೆಯನ್ನೆ ಬದಲಾಯಿಸಿದ್ದಾನೆ. ಹಾಗೆಯೇ ತನ್ನ ಲೌಕಿಕ ಕೃತಿಯಾದ ‘ವಿಕ್ರಮಾರ್ಜುನ ವಿಜಯ’ದಲ್ಲಿ ತನ್ನ ರಾಜನಾದ ಅರಿಕೇಸರಿಯನ್ನೂ, ನಾರಾಯಣನನ್ನೂ ಒಟ್ಟಿಗೆ ಅಭಿನ್ನಗೊಳಿಸಿ ಸ್ತುತಿ ಮಾಡಿ, ತನ್ನ ದೊರೆ ದೇವದೇವನಾದ ನಾರಾಯಣನಿಗಿಂತಲೂ ಉದಾತ್ತನೆಂದು ಹೇಳುತ್ತಾನೆ. ಹಾಗೆಯೆ ಮುಂದಿನ ಪದ್ಯದಲ್ಲಿ ಈಶ್ವರನನ್ನೂ ಅರಿಕೇಸರಿಯನ್ನೂ ಒಟ್ಟಿಗೆ ಸ್ತುತಿಮಾಡಿ, ‘ಉದಾರ ಮಹೇಶ್ವರ’ನೆಂಬ ಬಿರುದನ್ನು ಪಡೆದಿದ್ದ ತನ್ನ ರಾಜನಾದ ಅರಿಕೇಸರಿ, ಮಹೇಶ್ವರನಿಗಿಂತಲೂ ಮಿಗಿಲು ಎಂಬುದನ್ನು ಸೂಚಿಸಿದ್ದಾನೆ. ರನ್ನನೂ ತನ್ನ ಗದಾಯುದ್ಧದಲ್ಲಿ ಪಂಪನ ತಂತ್ರವನ್ನೆ ಅನುಸರಿಸಿದ್ದಾನೆ. ತಮ್ಮ ತಮ್ಮ ಆಶ್ರಯದಾತರಾದ ರಾಜರ ಸ್ತುತಿಯೂ, ತಮ್ಮ ಇಷ್ಟದೇವತಾ ಸ್ತುತಿಯಲ್ಲಿ ಕಾಣಿಸಿಕೊಳ್ಳುವಂತೆ ಇನ್ನು ಹಲವರು ಕವಿಗಳು ತಂದಿದ್ದರೂ, ಪಂಪನ ಇಷ್ಟದೇವತಾಸ್ತುತಿ ಮಾತ್ರ ವಿಲಕ್ಷಣವಾಗಿದೆ ಎಂಬ ಕಾರಣಕ್ಕೆ ಅದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಸಾಮಾನ್ಯವಾಗಿ ಕಾವ್ಯಾರಂಭದಲ್ಲಿ ನಮ್ಮ ಕವಿಗಳು ತಮಗಿಂತ ಹಿಂದಿನ ಕವಿಗಳನ್ನು ಸ್ಮರಿಸುತ್ತಾರೆ. ಮತ್ತು ಹಿಂದಿನ ಆಯಾ ಕೃತಿಗಳಲ್ಲಿರುವ ಒಳ್ಳೆಯ ಲಕ್ಷಣಗಳು ತಮ್ಮ ಕಾವ್ಯದಲ್ಲಿ ನೆಲಸಿ ಅಥವಾ ಮಾರ್ಗದರ್ಶನ ಮಾಡಿಸಲಿ ಎನ್ನುತ್ತಾರೆ. ಪೂರ್ವಸ್ಮರಣೆಯ ಪಟ್ಟಿಯಲ್ಲಿ ಸಂಸ್ಕೃತ, ಪ್ರಾಕೃತ, ಕನ್ನಡ ಕವಿಗಳ ಉಲ್ಲೇಖ ಬರುತ್ತದೆ. ಕನ್ನಡದ ಮೊದಲ ಕವಿ ಪಂಪನು ತನ್ನ ‘ವಿಕ್ರಮಾರ್ಜುನ ವಿಜಯ’ವನ್ನು ಬರೆಯುವಾಗ :

ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನೀಸುವೆಂ, ಕವಿ
ವ್ಯಾಸನೆನ್ ಎಂಬ ಗರ್ವಂ ಎನಗಿಲ್ಲ     (೧-೧೩)

ಮಹರ್ಷಿ ವ್ಯಾಸರ ವಿಸ್ತಾರವಾದ ವಚನ ಸಮುದ್ರವನ್ನು, ಎಂದರೆ ಮಹಾಭಾರತವನ್ನು ಈಜಿ ದಾಟುತ್ತೇನೆ, ನಾನೂ ಒಬ್ಬ ವ್ಯಾಸನೇ ಎನ್ನುವ ಗರ್ವ ನನಗಿಲ್ಲ ಎನ್ನುತ್ತಾನೆ. ರನ್ನ ತನ್ನ ‘ಗದಾಯುದ್ಧ’ದಲ್ಲಿ ವ್ಯಾಸ, ವಾಲ್ಮೀಕಿಗಳನ್ನು ಸ್ಮರಿಸಿದ್ದರ ಜತೆಗೆ

ಪದ್ಯ ರಚನೆಯೊಳ್ ಕಾಳಿದಾಸನುಂ
ಗದ್ಯ ರಚನೆಯೊಳ್ ಬಾಣನುಂ, ಮುಂ ಕವಿಗಳಿರ್ವರುಂ
ನೆಗಳ್ದರ್ ಅದರಿಂ ಸತ್ಕವಿಗಳಿರ್ವರುಮ್ ಎನಗೆ ಅಭಿವಂದ್ಯರ್    (೧-೯)

ಎನ್ನುತ್ತಾನೆ. ತನಗೆ ತೀರಾ ಸಮೀಪಕಾಲದವನಾದ ಪಂಪನ ‘ವಿಕ್ರಮಾರ್ಜುನ ವಿಜಯ’ವೇ ಅವನ ಋಣದ ಗಣಿಯಾಗಿರುವಾಗ, ಅವನ ಹೆಸರನ್ನೇ ಎತ್ತದೆ, ಕವಿ ರನ್ನ, ಕಾಳಿದಾಸಾದಿ ಸಂಸ್ಕೃತ ಕವಿಗಳನ್ನು ಸ್ತುತಿಸಿದ್ದು ವಿಲಕ್ಷಣವಾಗಿದೆ. ನಯಸೇನನಂಥ ಕವಿ,  ಪ್ರೌಢವಾದ ರಚನೆಗೆ ವಿರೋಧಿಯಾದರೂ, ಅಂಥ ಪ್ರೌಢಕಾವ್ಯಗಳನ್ನು ತನಗಿಂತ ಹಿಂದೆ ರಚನೆ ಮಾಡಿದ ಪಂಪ, ಪೊನ್ನ, ರನ್ನ ಮೊದಲಾದ ಕವಿಗಳನ್ನು ಸ್ಮರಿಸಿ, ಈ ಕೆಲವು ಕವಿಗಳ ವಿಶಿಷ್ಟಗುಣ ಲಕ್ಷಣಗಳು ತನ್ನ ಕಾವ್ಯದಲ್ಲಿ ನೆಲಸಲಿ ಎನ್ನುತ್ತಾನೆ. ಸ್ವತಂತ್ರಯುಗದ ಹರಿಹರ ತನ್ನ ‘ಚಂಪೂಕಾವ್ಯ’ವಾದ ‘ಗಿರಿಜಾ ಕಲ್ಯಾಣ’ದಲ್ಲಿ ಕಾಳಿದಾಸ, ಬಾಣ, ಮಯೂರ, ಹಲಾಯುಧ, ಉದ್ಭಟಯ್ಯ ಮೊದಲಾದ ಶೈವ ಕವಿಗಳನ್ನು ಸ್ಮರಿಸಿದ್ದಾನೆ. ಹರಿಹರ – ರಾಘವಾಂಕರ ಅನಂತರ, ಅನೇಕ ವೀರಶೈವ ಕವಿಗಳು, ಹರಿಹರ – ರಾಘವಾಂಕರನ್ನು ವಿಶೇಷವಾಗಿ ಸ್ಮರಿಸುತ್ತಾರೆ. ಕುಮಾರವ್ಯಾಸ, ಲಕ್ಷಿ ಶ, ರತ್ನಾಕರರಲ್ಲಿ ಪೂರ್ವ ಕವಿಸ್ತುತಿ ಕಾಣಿಸದಿರುವುದು ವಿಶೇಷದ ಸಂಗತಿ. ಆದರೆ ಹದಿನಾರನೆಯ ಶತಮಾನದ ಸಾಂಗತ್ಯದ ಕವಿಯಾದ ನಂಜುಂಡನು, ತನ್ನ ‘ರಾಮನಾಥ ಚರಿತ’ದಲ್ಲಿ ಪಂಪ, ನೇಮಿಚಂದ್ರ, ಜನ್ನ, ಗಜಗ, ಗುಣನಂದಿ, ‘ಗಿರಿಜಾ ಕಲ್ಯಾಣ’ವನ್ನು ಬರೆದ ಹರಿಹರ, ಬಾಣ, ಕಾಳಿದಾಸ – ಹೀಗೆ ಪ್ರೌಢ ಕಾವ್ಯ ರಚನೆ ಮಾಡಿದವರನ್ನೆಲ್ಲ ನೆನೆದಿರುವುದು ಏಕಿರಬಹುದು ಎನ್ನುವುದು ಅರ್ಥವಾಗುವುದಿಲ್ಲ; ಬಹುಶಃ ಅವರ ಮೇಲಿನ ಗೌರವದಿಂದ ನೆನೆದಿದ್ದಾನೆಂದು ಭಾವಿಸಬಹುದು. ಅಥವಾ ದೇಸೀ ಛಂದಸ್ಸಿನಲ್ಲಿ ‘ವೀರ ಕಾವ್ಯ’ವೊಂದನ್ನು ರಚಿಸಲು ಅವನು, ಈ ಕೆಲವು ಕವಿಗಳಿಂದ ಪ್ರೇರಣೆ ಪಡೆದಿರಬಹುದು, ಒಟ್ಟಿನಲ್ಲಿ ಈ ಪೂರ್ವಕವಿಸ್ತುತಿಯ ಒಂದು ಸಂಪ್ರದಾಯದಿಂದ ಅನೇಕ ಸಂಗತಿಗಳು ನಿಷ್ಪನ್ನವಾಗುತ್ತವೆ: ಮೊದಲನೆಯದಾಗಿ ಇದು ನಮ್ಮ ಕವಿಗಳು ಯಾವ ಒಂದು ಪರಂಪರೆಯಲ್ಲಿ ನಿಂತು ಕೆಲಸ ಮಾಡುತ್ತಿದ್ದರು ಎಂಬುದನ್ನು ಸೂಚಿಸುತ್ತದೆ, ಮತ್ತು ಆ ಪರಂಪರೆಯ ಉತ್ತಮವಾದ ಅಂಶಗಳಿಂದ ತಾವು ಪುಷ್ಟರಾದವರು ಎಂಬ ಸಂಗತಿಯನ್ನು ಈ ಪೂರ್ವ ಕವಿಸ್ತುತಿ ತೋರಿಸುತ್ತದೆ.[1] ಹಿಂದಿನ ಕವಿಗಳನ್ನು ಹೀಗೆ ಸ್ಮರಿಸುವಲ್ಲಿ, ತಾವು ಆಯಾ ಕವಿಗಳ ಕೃತಿಗಳನ್ನು ಓದಿದ್ದಿರಬಹುದು, ಅಥವಾ ಓದದೆಯೂ ಇರಬಹುದು. ಇದರಿಂದ ಸಾಹಿತ್ಯ ಚರಿತ್ರೆಯನ್ನು ಬರೆಯುವವರಿಗಂತೂ, ಕವಿಗಳ ಕಾಲ ನಿರ್ಣಯ ಮಾಡುವ ದಿಕ್ಕಿನಲ್ಲಿ ವಿಶೇಷ ಸಹಾಯ ಒದಗುತ್ತದೆ. ಮತ್ತೊಂದು ವಿಶೇಷವೆಂದರೆ, ಪೂರ್ವ ಕವಿಗಳನ್ನು ಸ್ಮರಿಸುವಾಗ, ಕೆಲವು ಕವಿಗಳು ಆ ಹಿಂದಿನ ಕವಿಗಳ ಕಾವ್ಯದ ವಿಶೇಷಾಂಶವನ್ನು ಎತ್ತಿ ಹೇಳುತ್ತಾರೆ. ಉದಾಹರಣೆಗೆ ‘ಪಂಪನ ದೇಸಿ’, ‘ಅಸಗನ ದೇಸಿ’, ‘ಕವಿರತ್ನನ ಓಜೆ’ ಇತ್ಯಾದಿ ಮಾತುಗಳು ಗಂಭೀರವಾದ ವಿಮರ್ಶೆಯ ಮಾತುಗಳೆಂದು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲವಾದರೂ, ಒಂದು ರೀತಿಯ ಪ್ರಾಸಂಗಿಕ ವಿಮರ್ಶೆಯ ಮಾತುಗಳೂ ಆಗುತ್ತವೆ.

ಕಾವ್ಯವನ್ನು ಬರೆಯುವಾತ ಕವಿ. ಅವನೂ ಒಬ್ಬ ಮನುಷ್ಯ. ಅವನಿಗೂ ಕಾವ್ಯದ ಮೂಲಕ ವ್ಯಕ್ತಪಡಿಸುವ ತನ್ನದೇ ಆದ ಭಾವನೆಗಳಿವೆ. ಆದುದರಿಂದ ಆತ ತಾನಾಗಿ ಕಾವ್ಯವನ್ನು ಬರೆಯುತ್ತಾನೆ; ಹೀಗೆ ಬರೆಯುವಲ್ಲಿ ಅನ್ಯ ಪ್ರೇರಣೆಗಳೂ ಕಾರಣವಿರಬಹುದು – ಎನ್ನುವುದು ಒಂದು ನಿಲುವು. ಕವಿ ಎನ್ನುವವನು ಕೇವಲ ಉಪಕರಣ; ದೈವೀ ಕೃಪೆಯೊಂದರ ಉಪಕರಣ ಅಥವಾ ಮಾಧ್ಯಮ. ಈ ಮಾಧ್ಯಮದ ಮೂಲಕ ಅತೀತವಾದ ಶಕ್ತಿಯೊಂದು ಕಾವ್ಯವನ್ನು ರಚಿಸುತ್ತದೆ. ಇದು ಇನ್ನೊಂದು ನಿಲುವು. ಕನ್ನಡ ಕಾವ್ಯ ಪರಂಪರೆಯಲ್ಲಿ ಈ ಎರಡು ನಿಲುವುಗಳನ್ನೂ ಕಾಣಬಹುದು, ಈ ಎರಡು ನಿಲುವುಗಳಲ್ಲದೆ ಕೃತಿರಚನೆ ಮಾಡಿದವರನ್ನೂ ಕಾಣಬಹುದು. ಮೊದಲ ನಿಲುವು ಮುಖ್ಯವಾಗಿ ಮಾರ್ಗ ಕವಿಗಳಲ್ಲಿ ಕಾಣಿಸುತ್ತದೆ; ಎರಡನೆಯದು ಭಾಗವತ ಪರಂಪರೆಯ ಕವಿಗಳಲ್ಲಿ ಮತ್ತು ಅದರಿಂದ ಪ್ರಭಾವಿತವಾದ ಇತರ ಧರ್ಮದವರಲ್ಲೂ ಕಾಣುತ್ತದೆ. ಮೂರನೆಯದು, ಹರಿಹರ – ರಾಘವಾಂಕರಲ್ಲಿ ಕಾಣುತ್ತದೆ.

ಮಾರ್ಗಕಾವ್ಯ ಪರಂಪರೆಯ ಜೈನ ಕವಿಗಳೆಲ್ಲರೂ, ಪುರಾಣಗಳನ್ನು ಅಥವಾ ಜೈನ ಧರ್ಮಕ್ಕೆ ಸಂಬಂಧಪಟ್ಟ ಕೃತಿಗಳನ್ನು ಬರೆಯುವಾಗ ‘ಅಪರಿಮಿತ ಭಕ್ತಿಯಿಂ ವಿರಚಿಸುವೆಂ’ ಎನ್ನುತ್ತಾ ಬರೆದರೇ ವಿನಾ ಸಾಕ್ಷಾತ್ ಅರ್ಹಂತನ ಕೈಯ ಉಪಕರಣವಾಗಿ, ಬರೆದಂತೆ ಹೇಳಿಕೊಂಡಿಲ್ಲ. ಅವರು ಧರ್ಮಶ್ರದ್ಧೆಯಿಂದಲೂ, ಮತ್ತೆ ಕೆಲವು ವೇಳೆ, ಜಿನ ಧರ್ಮದ ಮಹಾ ವ್ಯಕ್ತಿಗಳ ಕೋರಿಕೆಯಂತೆಯೂ (ಅತ್ತಿಮಬ್ಬೆ ರನ್ನನಿಂದ ಅಜಿತ ಪುರಾಣವನ್ನು ಬರೆಯಿಸಿದಂತೆ) ಬರೆದಿದ್ದಾರೆ. ಆದರೆ ಇವರು ‘ಲೌಕಿಕ ಕಾವ್ಯ’ಗಳನ್ನು ಬರೆಯುವಾಗಲಂತೂ, ತಾವೇ ಸ್ವಂತ ಇಚ್ಛೆಯಿಂದಲೂ, ಮತ್ತು ತಮ್ಮ ಆಶ್ರಯದಾತರಾದ ರಾಜರುಗಳ ಕೋರಿಕೆಯಿಂದಲೂ ಬರೆದಿದ್ದಾರೆ. ‘ಗುಣಾರ್ಣವನ ಒಳ್ಪು ಮನ್ಮನೋವಾಸಮನ್ ಎಯ್ದೆ ಪೇಳ್ದಪೆನ್’, ರಾಜನಾದ ‘ಗುಣಾರ್ಣವ’ನೆಂಬ ಹೆಸರಿಗೆ ಅರ್ಹನಾದ ಅರಿಕೇಸರಿಯ ಒಳ್ಳೆಯತನ ನನ್ನ ಮನಸ್ಸನ್ನು ತುಂಬಿದ್ದರಿಂದ ನಾನು ಈ ಕೃತಿಯನ್ನು ಬರೆಯುತ್ತಿದ್ದೇನೆಂದು ಪಂಪ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ. ಪಂಪನ ಸ್ನೇಹಿತನಾದ ಅರಿಕೇಸರಿ

…………………….. ಸಂ
ಪ್ರೀತಿಯೆ ಬಳಿಯಟ್ಟಿ ಪಿರಿದನಿತ್ತು ನಿಜಾಭಿ
ಖ್ಯಾತಿಯನ್ ಇಳೆಯೊಳ್ ನಿರಿಸಲ್ಕೆ
ಈ ತೆರದ ಇತಿಹಾಸ ಕಥೆಯನ್ ಒಪ್ಪಿಸೆ ಕುರಿತಂ.

(ವಿಕ್ರಮಾರ್ಜುನ ವಿಜಯಂ ೧೪-೧೫)

ಅತ್ಯಂತ ಪ್ರೀತಿಯಿಂದ ಪಂಪನನ್ನು ಬರಮಾಡಿಕೊಂಡು, ಹಿರಿದಾಗಿ ಸತ್ಕಾರ ಮಾಡಿ, ತನ್ನ ಖ್ಯಾತಿಯನ್ನು ಈ ಲೋಕದಲ್ಲಿ ನಿಲ್ಲಿಸು ಎಂದು ಕೇಳಿಕೊಂಡದ್ದರಿಂದ, ಪಂಪನು ಈ ರೀತಿಯ ಇತಿಹಾಸ ಕತೆಯನ್ನು ರಚಿಸಲು ಮನಸ್ಸು ಮಾಡಿದನಂತೆ. ಅಂತೂ, ರಾಜನಿಗಾಗಿಯೋ, ಧರ್ಮಕ್ಕಾಗಿಯೋ ತಾವು ಕಾವ್ಯ ಬರೆಯುತ್ತೇವೆ ಎಂದು ಈ ಕವಿಗಳು ಅಂದುಕೊಳ್ಳುತ್ತಾರೆ. ಹಾಗೆ ಬರೆಯುವಾಗ ಪಂಪನಂಥವನ ನಿಲುವು, ಎರಡು ಕಾವ್ಯಗಳ ಮಟ್ಟಿಗೆ ಬೇರೆ ಬೇರೆಯಾಗುತ್ತದೆ. ‘ಲೌಕಿಕ ಕೃತಿ’ಯನ್ನು ಬರೆಯುವಾಗ, ಅರಿಕೇಸರಿಯಿಂದ ದೊರೆಯುವ ಸನ್ಮಾನ, ಗೌರವಗಳು ಪ್ರಿಯವಾದರೂ, ಆದಿಪುರಾಣದಂಥ ಆಗಮಿಕ ಕಾವ್ಯವನ್ನು ಬರೆಯುವ ಕಾಲಕ್ಕೆ ಈ ಲೋಕದ ಕೀರ್ತಿಪ್ರತಿಷ್ಠೆಗಳೂ ಅಲ್ಪವಾಗಿ ತೋರಿ ‘ಪೆರರ್ ಈವುದೇಂ, ಪೆರರ ಮಾಡುವುದೇಂ, ಪೆರರಿಂದ ಅಪ್ಪುದೇಂ’ (ಬೇರೆಯವರಿಂದ ಆಗುವುದೇನು, ಬೇರೆಯವರು ಏನು ಕೊಟ್ಟಾರು, ಬೇರೆಯವರಿಂದ ಆಗಬೇಕಾದದ್ದೇನಿದೆ) ಎನ್ನುವ ನಿಲುವನ್ನು ಪಂಪ ಪ್ರಕಟಿಸಿದ್ದಾನೆ. ಪಂಪನಿಂದ ಧಾರ್ಮಿಕ ಪುರಾಣ ರಚನೆಯ ಕಾಲದಲ್ಲಿ ಪ್ರಾಸಂಗಿಕವಾಗಿ ಪ್ರಕಟವಾದ ಈ ನಿಲುವೇ ವೀರಶೈವ ಕವಿಗಳಲ್ಲಿ ಸ್ಥಾಯಿಯಾದ ಮನೋಧರ್ಮವಾದದ್ದು ಗಮನಿಸಬೇಕಾದ ಸಂಗತಿಯಾಗಿದೆ. ರಾಜಾಸ್ಥಾನಗಳ ಹಂಗನ್ನು ಹರಿದುಕೊಂಡು ಕೇವಲ ಧರ್ಮಶ್ರದ್ಧೆಯ ನಿಲುವಿನಲ್ಲಿ ನಿಂತ ಹರಿಹರನಲ್ಲಿ ಮತ್ತು ಹರಿಹರನ ಸಂಪ್ರದಾಯದಲ್ಲಿ, ಈ ನಿಲುವು ಕಾವ್ಯರಚನೆಯ ಬುನಾದಿಯಾದದ್ದು ಸಹಜವಾಗಿದೆ. ಆದರೂ ಅಲ್ಲಿ ಬರೆಯುವ ಕವಿ ತಾನು ಭಕ್ತನೆಂದು, ಕವಿಯೆಂದು, ಪಂಡಿತನೆಂದು ಅಂದುಕೊಂಡರೂ, ತನ್ನನ್ನು ಶಿವನೋ ಮತ್ತೊಂದೊ ದೈವೀಶಕ್ತಿ ಹಿಡಿದು ಕೃತಿ ರಚನೆ ಮಾಡಿಸುತ್ತಿದೆ ಎಂಬ ಭಾವನೆ ಅಷ್ಟು ಮುಖ್ಯವಾಗಲಿಲ್ಲ. ಕವಿ, ಕಾವ್ಯವನ್ನು ಬರೆಯುವವನು ತಾನಲ್ಲವೆ ಅಲ್ಲ, ತಾನೇನಿದ್ದರೂ ದೈವೀಕೃಪೆಯ ಒಂದು ಉಪಕರಣ ಎನ್ನುವ ಭಾವನೆ ಗಟ್ಟಿಗೊಂಡದ್ದು ಕುಮಾರವ್ಯಾಸನಿಂದಲೇ :

ವೀರನಾರಾಯಣನೆ ಕವಿ ಲಿಪಿ
ಕಾರ ಕುವರವ್ಯಾಸ…….
(ಕುಮಾರವ್ಯಾಸ ಭಾರತ ೧-೭)

ಎನ್ನುವ ಘೋಷಣೆಯೆ ಇದಕ್ಕೆ ಮೂಲ. ಕುಮಾರವ್ಯಾಸನಂತೆ ಹರಿಹರನೂ ಹಂಪೆಯ ವಿರೂಪಾಕ್ಷನ ದೇವಸ್ಥಾನದಲ್ಲಿದ್ದುಕೊಂಡು ಕೃತಿರಚನೆ ಮಾಡಿದ ಭಕ್ತ ಕವಿ. ಆತ ‘ಹಿಂದಿನ ಕವಿಗಳೆಲ್ಲ (ತಮಗೆ ಆಶ್ರಯಕೊಟ್ಟ ರಾಜರನ್ನು) ಇಂದ್ರ ಚಂದ್ರ ದೇವೇಂದ್ರನೆಂದು ಹೊಗಳಿ ಕೆಟ್ಟುಹೋದರು, ಆದ್ದರಿಂದ ನಮ್ಮ ನೆಚ್ಚಿನ ಪಂಪಾವತಿಯನ್ನು ನೆನೆ ಹೊಗಳು’ – ಎಂದುಕೊಂಡವನು. ಕಾವ್ಯವೇ ಭಕ್ತಮನೋಧರ್ಮಕ್ಕೆ ಮಾಧ್ಯಮವಾಯಿತೇ ಹೊರತು, ಕವಿಯೇ, ಕುಮಾರವ್ಯಾಸನು ಹೇಳುವಂತೆ ‘ಲಿಪಿಕಾರ’ ನಾಗಲಿಲ್ಲ ಹರಿಹರನಲ್ಲಿ. ಕುಮಾರವ್ಯಾಸನ ಈ ನಿಲುವು ಲಕ್ಷ್ಮೀಶನಲ್ಲಿ ಅನುರಣಿತವಾಗಿದೆ :

………………………. ಗೀ
ರ‍್ವಾಣಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾನಿಪುಣನು
ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ
ವಾಣಿಯಿಂ ಕವಿತೆಯಂ ಪೇಳಿಸಿದನು…………….
(ಜೈಮಿನಿಭಾರತ ೧-೮)

ಎನ್ನುವಲ್ಲಿ, ತಾನು ಸಾಕ್ಷಾತ್ ಲಕ್ಷ್ಮೀರಮಣನ ಕೈಯ್ಯಲ್ಲಿರುವ ವೀಣೆ, ತನ್ನ ಕಾವ್ಯವೇನಿದ್ದರೂ, ಆ ಮಹಾಶಕ್ತಿಯ ವೀಣಾಗಾನ ಎಂಬ ನಿಲುವು ಇಲ್ಲಿದೆ. ಈ ಭಾಗವತ ಕವಿಗಳು, ತಾಳಿದ ಈ ನಿಲುವನ್ನು ಇತರ ಧರ್ಮದವರು ಅನುರಣಿಸಿದ್ದಾರೆಂಬುದಕ್ಕೆ, ಚಾಮರಸ ಮತ್ತು ರತ್ನಾಕರ ಇವರ ಉಕ್ತಿಗಳನ್ನು ನೋಡಿದರೆ ಸಾಕು. ಕುಮಾರವ್ಯಾಸನ ಸಮೀಪಕಾಲೀನನಾದ ವೀರಶೈವ ಕವಿ ಚಾಮರಸನು, ತನ್ನ ‘ಪ್ರಭುಲಿಂಗಲೀಲೆ’ಯಲ್ಲಿ, ದೇವಸ್ಥಾನದ ಒಳಗೆ ಕೂತು ನುಡಿದರೆ, ಆ ಪ್ರತಿಶಬ್ದದಿಂದ, ದೇವಸ್ಥಾನವೇ ಮಾತಾಡಿದಂತೆ ಹೊರಗಿನ ಜನಕ್ಕೆ ಕೇಳುತ್ತದೆಯಲ್ಲವೆ. ಹಾಗೆಯೇ,

ಲಾಗಿನಿಂದಲಿ ಗುರುಗುಹೇಶ್ವರ
ನಾಗಳೆನ್ನನು ನುಡಿಸಿದಡೆ ನುಡಿದು
ಆಗು ಮಾಡಿಯೆ ಪೇಳ್ದೆನೀ ಪ್ರಭುಲಿಂಗಲೀಲೆಯನು
(ಪ್ರ. ಲೀ. ಸಂಗ್ರಹ ೧-೩)

ತನ್ನಲ್ಲಿ ಗುರುಗುಹೇಶ್ವರ ನುಡಿಸಿದಂತೆ, ತಾನು ನುಡಿದು ಈ ಪ್ರಭುಲಿಂಗಲೀಲೆಯನ್ನು ಬರೆದಿದ್ದೇನೆ ಎನ್ನುತ್ತಾನೆ. ರತ್ನಾಕರನು, ಕುಮಾರವ್ಯಾಸ, ಲಕ್ಷ್ಮೀಶ, ಚಾಮರಸರಂತೆ ‘ರೂಪಕ’ ವಿಧಾನದಲ್ಲಿ ಇದೇ ನಿಲುವನ್ನು ಪ್ರಕಟಿಸದಿದ್ದರೂ, ತಾನು ಭರತೇಶ ವೈಭವವನ್ನು, ಪುರುಪರಮೇಶ್ವರ ಪ್ರಥಮ ಜಿನೇಶನ ಆಜ್ಞಾನುಸಾರವಾಗಿ ಹೇಳಿರುವುದಾಗಿ ತಿಳಿಸುತ್ತಾನೆ. ಇದೇ ನಿಲುವನ್ನು ಕುವೆಂಪು, ಬೇಂದ್ರೆಯಂತಹ ಹೊಸಗನ್ನಡದ ನವೋದಯ ಕವಿಗಳಲ್ಲಿಯೂ ಗುರುತಿಸಬಹುದು.

ಕನ್ನಡ ಕವಿಗಳ ಪೀಠಿಕಾ ಪ್ರಕರಣದಲ್ಲಿ ಕಂಡುಬರುವ ಇನ್ನೊಂದು ಅಂಶವೆಂದರೆ, ಕಾವ್ಯಸ್ವರೂಪವನ್ನು ಕುರಿತ ವರ್ಣನೆ. ಎಲ್ಲಾ ಕವಿಗಳೂ ಈ ಒಂದು ವಿಷಯವನ್ನು ಕುರಿತು ಹೆಚ್ಚೂಕಡಿಮೆ ಒಂದೇ ವಿಧವಾಗಿ ಹೇಳಿದ್ದಾರೆ. ಕಾವ್ಯ ಎನ್ನುವುದು ಕವಿಯ ಪ್ರತಿಭೆಯಿಂದ ಹುಟ್ಟುತ್ತದೆ; ಈ ಪ್ರತಿಭೆ ಜನ್ಮಾಂತರ ಸಂಸ್ಕಾರ ವಿಶೇಷ; ಕೇವಲ ಪ್ರತಿಭೆಯೊಂದಿದ್ದರೆ ಸಾಲದು, ಜತೆಗೆ ವಿದ್ವತ್ತೂ ಬೇಕು; ಹಾಗೆಯೆ ಪ್ರತಿಭೆಯಿಲ್ಲದೆ, ವಿದ್ವತ್ತಿನಿಂದ ಕಾವ್ಯ ಹುಟ್ಟಲಾರದು, ಇವು ಸಾಮಾನ್ಯವಾಗಿ ಅನುರಣಿತವಾಗುವ ವಿಚಾರಗಳು. ಈ ವಿಚಾರಗಳಲ್ಲಿ ಹೊಸತೇನೂ ಇಲ್ಲ, ಸಂಸ್ಕೃತ ಅಲಂಕಾರಶಾಸ್ತ್ರಗಳಲ್ಲಿ ಹೇಳುತ್ತ ಬಂದವುಗಳು ಇವು. ಆದರೆ ಕನ್ನಡ ಕವಿಗಳು, ‘ಕನ್ನಡ’ದಲ್ಲಿ ಹೇಳಿದ್ದಾರೆ, ಅಷ್ಟೇ. ಹೀಗೆ ಮೊದಲು ಕನ್ನಡದಲ್ಲಿ ಹೇಳಿದ್ದು, ‘ಕವಿರಾಜಮಾರ್ಗ’ದಲ್ಲಿ. ನಯಸೇನನ ‘ಧರ್ಮಾಮೃತ’ದಲ್ಲಿ, ಕಾವ್ಯಮಯವಾಗಿ, ‘ಕಾವ್ಯಮೀಮಾಂಸೆ’ಯನ್ನು ಹೇಳಲಾಗಿದೆ :

ಮಳೆಯಿಲ್ಲದೆ ಪೊಯ್ನೀರಿಂ
ಬೆಳಗುಮೆ ಧರೆ? ಮರುಗಿ ಕುದಿದು ಶಾಸ್ತ್ರದ ಬಲದಿಂದ
ಅಳಿಪಿಮ್, ಪೇಳ್ವೊಡೆ, ಅದು ಕೋ
ಮಳಂ ಅಕ್ಕುಮೆ, ಸಹಜಮಿಲ್ಲದಾತನ ಕಬ್ಬಂ?
(ಧರ್ಮಾಮೃತಂ ೧-೪೯)

ಮಳೆಯಿಲ್ಲದೆ ಕೇವಲ ಕೈನೀರೆರೆದರೆ ನೆಲಕ್ಕೆ ಜೀವಕಳೆ ಬಂದೀತೆ? ಹಾಗೆಯೆ ಕಸಿವಿಸಿ ಪಟ್ಟುಕೊಂಡು, ಕುದಿದು, ತನಗಿರುವ ಶಾಸ್ತ್ರ ಅಥವಾ ವಿದ್ವತ್ತಿನ ಬಲದಿಂದ, ಆಸೆಪಟ್ಟು ಹೇಳಿದರೆ, ಅಂಥ ಕಾವ್ಯ ಸುಂದರವಾದೀತೆ? ಆಗುವುದಿಲ್ಲ. ಯಾಕೆಂದರೆ ಅದು ಸಹಜವಾಗಿ ಹುಟ್ಟಿದ ಕಾವ್ಯವಲ್ಲ. ನಯಸೇನನ ಈ ಮಾತಿನಲ್ಲಿ ‘ಪ್ರತಿಭೆ’ ಎಂಬುದು, ಮುಗಿಲಿಂದಿಳಿದು ಮಳೆನೀರಿನಂತೆ ಸಹಜವಾದದ್ದು; ವಿದ್ವತ್ತಿನ ಕೃತಕವಾದ ಕೈನೀರೆರೆದರೆ ಬೆಳೆ ಹುಲುಸಾಗಲಾರದು ಎಂಬ ಸಂಗತಿ ರಮ್ಯವಾಗಿದೆ. ಷಡಕ್ಷರಿಯ ಪ್ರಕಾರ, ಶಾಸ್ತ್ರವೆಂಬ ರೋಹಣಗಿರಿಯನ್ನು ಯಾರು ಬೇಕಾದರೂ ಏರಬಹುದು; ಆದರೆ ಕವಿತೆಯೆಂಬ ಚಿಂತಾರತ್ನ ದೊರೆಯುವುದು ದೈವಕೃಪೆಯಿದ್ದ ಕೆಲವರಿಗೆ ಮಾತ್ರ. ಇಂಥ ಕಾವ್ಯ ಶಕ್ತಿಯ ಆಗ್ಗಳಿಕೆಯನ್ನು  ಕುರಿತು ನೇಮಿಚಂದ್ರ ಮುಕ್ತಕಂಠನಾಗಿ ಪ್ರಶಂಸಿಸಿದ್ದಾನೆ :

ಕಟ್ಟುಗೆ, ಕಟ್ಟದೆ ಇರ್ಕೆ ಕಡಲಂ ಕಪಿಸಂತತಿ; ವಾಮನಕ್ರಮಂ
ಮುಟ್ಟುಗೆ ಮುಟ್ಟದೆ ಇರ್ಕೆ ಮುಗಿಲಂ ; ಹರನಂ ನರನ್ ಒತ್ತಿ ಗಂಟಲಂ
ಮೆಟ್ಟುಗೆ ಮೆಟ್ಟದೆ ಇರ್ಕೆ; ಕವಿಗಳ್ ಕೃತಿಬಂಧದೊಳ್ ಅಲ್ತೆ ಕಟ್ಟಿದರ್
ಮುಟ್ಟಿದರ್ ಒತ್ತಿ ಮೆಟ್ಟಿದರ್ ; ಇದೇನ್ ಅಳವು ಅಗ್ಗಳಮೋ ಕವೀಂದ್ರರಾ

(ಲೀಲಾವತೀ ಪ್ರಬಂಧಂ ೧-೧೧)

ಸಮುದ್ರಕ್ಕೆ ಕಪಿಗಳು ಸೇತುವೆಯನ್ನು ಕಟ್ಟಿದರೋ ಬಿಟ್ಟರೋ, ವಾಮನನು ತ್ರಿವಿಕ್ರಮನಾಗಿ ಆಕಾಶವನ್ನು ಮುಟ್ಟಿದನೋ ಇಲ್ಲವೋ, ಅರ್ಜುನನು ಸಾಕ್ಷಾತ್ ಪರಮೇಶ್ವರನ ಗಂಟಲನ್ನು, ಯುದ್ಧಮಾಡುವಾಗ ಮೆಟ್ಟಿದನೋ ಮೆಟ್ಟಲಿಲ್ಲವೋ, ಇದನ್ನು ಕಂಡವರು ಯಾರು? ಆದರೆ ಕಾವ್ಯಗಳಲ್ಲಿ ಮಾತ್ರ, ರಾಮಾಯಣದಲ್ಲಿ ಕಪಿಗಳು ಸೇತುವೆಯನ್ನು ಕಟ್ಟಿಯೇ ಕಟ್ಟಿದರು; ವಾಮನ ಬೆಳೆದು ತ್ರಿವಿಕ್ರಮನಾಗಿ ಮುಗಿಲನ್ನು ಮುಟ್ಟಿದನು; ಪಾಶುಪತಾಸ್ತ್ರ ಸಂಪಾದನೆಯ ಕಾಲಕ್ಕೆ ಕಿರಾತನಾಗಿ ಕದನಕ್ಕೆ ಬಂದ ಶಿವನನ್ನು ಅರ್ಜುನ ಇಕ್ಕಿ – ಮೆಟ್ಟಿಯೇ ಮೆಟ್ಟಿದನು – ಎನ್ನುವಂತೆ ಕವಿಗಳು ಚಿತ್ರಿಸಿದ್ದಾರಲ್ಲ. ಅವರ ಸಾಮರ್ಥ್ಯ ಎಷ್ಟು ಅತಿಶಯವಾದದ್ದು! ಕವಿ ಇಂಥ ಸಾಮರ್ಥ್ಯದಿಂದ ಉತ್ತಮವಾದ ಕಾವ್ಯವನ್ನು ರಚಿಸಬೇಕು. ಕವಿಯ ಕಾವ್ಯ, ನಾಗವರ್ಮನು ಹೇಳುವ ಹಾಗೆ ‘ಕಾಡಿನಲ್ಲಿ ನುಗ್ಗಿ ಮೊರೆಯುವ ಪ್ರವಾಹದಂತೆ ಇರಬೇಕು…. ಹಾಗಲ್ಲದೆ ಒಗಟನ್ನು ಹೇಳಿ, ಅದನ್ನು ಅರ್ಥಮಾಡಿಕೊಳ್ಳಲು, ಟೀಕೆ ಬೇಕು, ಟಿಪ್ಪಣಿ ಬೇಕು, ವ್ಯಾಖ್ಯಾನ ಬೇಕು  ಎನ್ನುವಂತಿರಬಾರದು’ (ಕಾವ್ಯಾವಲೋಕನ : ೨೯೯). ರನ್ನನ ಮಾತಿನಲ್ಲಿ ಹೇಳುವುದಾದರೆ ‘ರಸಾಂತರಂಗಳಂ ಮುಟ್ಟೆ ನುಡಿದು ರಂಜಿಸಬೇಡಾ?’. ನಿಜವಾದ ಕಾವ್ಯ ಸುಮ್ಮನೆ ಸಂಭವಿಸುವುದಿಲ್ಲ, ನೇಮಿಚಂದ್ರ ಹೇಳುತ್ತಾನೆ :

ಬೆಲೆಯಿಂದ ಅಕ್ಕುಮೆ ಕೃತಿ ಗಾ
ವಿಲ್ಲ; ಭುವನದ ಭಾಗ್ಯದಿಂದ ಅಕ್ಕುಂ ; ನೋಳ್ಪಂ
ಬೆಲೆಗೊಟ್ಟು ತಾರ ಮಧುವಂ
ಮಲಯಾನಿಲನಂ, ಮನೋಜನಂ, ಕೌಮುದಿಯಂ

(ನೇಮಿನಾಥಪುರಾಣಂ ೧-೪೫)

‘ನಿಜವಾದ ಒಂದು ಕಾವ್ಯವನ್ನು ಕೇವಲ ಬೆಲೆಗೊಟ್ಟು, ಅಂದರೆ ಹಣಕೊಟ್ಟು ತಯಾರುಮಾಡಿಸಲು ಬರುವುದಿಲ್ಲ, ಅದು ಈ ಭುವನದ ಭಾಗ್ಯದಿಂದ ಹುಟ್ಟಿಕೊಳ್ಳುತ್ತದೆ. ಮಧುಮಾಸವನ್ನು ಮಲಯಮಾರುತವನ್ನು, ಬೆಳದಿಂಗಳನ್ನು ಬೆಲೆಕೊಟ್ಟು, ಹಣತೆತ್ತು ಕೊಂಡುಕೊಂಡು ಬಾ ನೋಡೋಣ. ಕಾವ್ಯ ಹುಟ್ಟುವುದು, ಕವಿಗೆ ಒದಗುವ ರಾಜಾಶ್ರಯದಿಂದ ಲಭಿಸುವ ಧನಕನಕ ಗೌರವಾದಿಗಳಿಂದ ಅಲ್ಲ, ಈ ಲೋಕದ ಪುಣ್ಯದಿಂದ ಎನ್ನುವುದು ನೇಮಿಚಂದ್ರನ ಈ ಮಾತಿನ ಅರ್ಥ.

ಕಾವ್ಯದ ಪೀಠಿಕಾ ಪ್ರಕರಣಗಳಲ್ಲಿ ಕಂಡುಬರುವ ಮತ್ತೊಂದು ವಿಶೇಷವೆಂದರೆ, ಆಯಾ ಕೃತಿಗಳನ್ನು ಬರೆದ ಕವಿಗಳ ಸ್ವಕೀಯ ವಿಷಯ ಮತ್ತು ತಮ್ಮ ಕಾವ್ಯದ ವಸ್ತು, ರೀತಿ ಇತ್ಯಾದಿಗಳನ್ನು ಕುರಿತ ಸಂಗತಿ. ಎಷ್ಟೋ ಕವಿಗಳು ಸ್ವವಿಷಯವನ್ನು ಹೇಳಿಕೊಂಡಿದ್ದಾರೆ, ಮತ್ತಿನ್ನೆಷ್ಟೋ ಕವಿಗಳು ಈ ಬಗ್ಗೆ ತಟಸ್ಥರಾಗಿದ್ದಾರೆ. ಇದ್ದುದರಲ್ಲಿ ಮಾರ್ಗಕಾವ್ಯವನ್ನು ಬರೆದ ಜೈನ ಕವಿಗಳಲ್ಲಿ ಬಹುಮಂದಿ ಅತ್ಯಂತ ಹೆಮ್ಮೆಯಿಂದ, ನಿಸ್ಸಂಕೋಚವಾಗಿ ತಮ್ಮ ಸ್ವವಿಷಯವನ್ನು ಹೇಳಿಕೊಂಡಿದ್ದಾರೆ. ಸ್ವವಿಷಯವನ್ನು ಹೇಳಿಕೊಂಡವರಿಗೂ, ಹೇಳಿಕೊಳ್ಳದವರಿಗೂ, ಸ್ವಕಾವ್ಯದ ಅಗ್ಗಳಿಕೆಯನ್ನು ಹೇಳಿಕೊಳ್ಳುವುದರಲ್ಲಿ ಮಾತ್ರ ಸಮಾನವಾದ ಆಸಕ್ತಿ. ಈ ಅಗ್ಗಳಿಕೆಗಳಲ್ಲಿ, ಆತ್ಮಾಭಿಮಾನ, ಆತ್ಮಪ್ರತ್ಯಯಗಳು ಅಹಂಕಾರದ ನೆಲೆಗೂ ಏರುವುದುಂಟು. ಪಂಪನಂಥ ಕವಿಯೇ, ‘ಮುಂ ಸಮಸ್ತ ಭಾರತಮನ್ ಅಪೂರ್ವಮಾಗೆ ಪೇಳ್ದ ಕವೀಶ್ವರರ್ ಇಲ್ಲ’ – ತನ್ನ ಹೊರತು, ಎನ್ನುತ್ತಾನೆ. ತನ್ನ ಕಾವ್ಯ ಹಿಂದಿನ ಕವಿಗಳ ಕಾವ್ಯವನ್ನೆಲ್ಲ ಇಕ್ಕಿ ಮೆಟ್ಟಿದುವು ಎಂದು ಘೋಷಿಸುತ್ತಾನೆ. ರನ್ನನಂತೂ,

ಆರಾತೀಯ ಕವೀಶ್ವರರ್
ಆರುಂ ಮುನ್ನಾರ್ತರಿಲ್ಲ, ವಾಗ್ದೇವಿಯ ಭಂ
ಡಾರದ ಮುದ್ರೆಯನ್ ಒಡೆದಂ
ಸಾರಸ್ವತಮ್ ಎನಿಪ ಕವಿತೆಯೊಳ್ ಕವಿರನ್ನಂ
(ಗದಾಯುದ್ಧಂ ೧-೩೮)

ವಿದ್ವತ್ ಪೂರ್ಣವಾದ ಕವಿತೆಯನ್ನು ಬರೆಯುವಲ್ಲಿ ರನ್ನ ಸರಸ್ವತಿಯ ಭಂಡಾರದ ಮುದ್ರೆಯನ್ನೇ ಒಡೆದನಂತೆ; ಇಂತಹ ಕೆಲಸವನ್ನು ಮಾಡಲು ಹಿಂದಿನ ಕವೀಶ್ವರರಾರಿಗೂ ಸಾಧ್ಯವೇ ಆಗಲಿಲ್ಲವಂತೆ. ಆದ್ದರಿಂದ ಇಂಥ ಕವಿಯ ಕಾವ್ಯವನ್ನು ಪರೀಕ್ಷೆ ಮಾಡುವವರಿಗೆ, ಆದಿಶೇಷನ ಹೆಡೆಮಣಿಯ ರತ್ನ ಪರೀಕ್ಷೆ ಮಾಡುವವನಿಗಿರುವಂತೆ ಎಂಟೆದೆಯೇ ಬೇಕಂತೆ. ತಮ್ಮ ಕಾವ್ಯ :

ಇನಿಯಳ ಸೋಂಕಿನಂತೆ, ಪೊಸಮಾವಿನ ಜೊಂಪದಂತೆ, ಚಂ
ದನ ರಸದ ಅಣ್ಪಿನಂತೆ, ನನೆಯೇರಿದ ಮಲ್ಲಿಗೆಯಂತೆ, ಪೂರ್ಣ ಚಂ
ದ್ರನ ಸಿರಿಯಂತೆ, ಬಂದು ಎಸೆಪ ತಂಬೆಲರಂತೆ ………

(ಜಗನ್ನಾಥ ವಿಜಯಂ ೧-೧೬)

ಓದಿದವರ ಚಿತ್ತವನ್ನು ಸೂರೆಗೊಳ್ಳುವುದೆಂಬ ನಂಬಿಕೆಯನ್ನು ಎಲ್ಲಾ ಕವಿಗಳೂ ವ್ಯಕ್ತಪಡಿಸಿದ್ದಾರೆ. ಬರೆದ ಕವಿಗಳಿಗೆ ಅಂಥ ವಿಶ್ವಾಸ. ಕೆಲವು ವೇಳೆ, ಅಹಂಕಾರ ಕೂಡ.

………………….. ಇದಂ ಪೇಳ್ದಾತನು ಆರು ಎಂದೊಡೆ
ಚತುರ ಕವಿರಾಯ ಹಂಪೆಯ ಹರೀಶ್ವರನ ವರ
ಸುತನ್, ಉಭಯಕವಿ ಕಮಲ ರವಿ ರಾಘವಾಂಕ ಪಂ

ಡಿತನ್ ಎಂದೊಡೆ, ಈ ಕಥಾರಸದ ಲಹರಿಯನು ಬಣ್ಣಿಸದರ್ ಆರು ಈ   ಜಗದೊಳ್? (ಹರಿಶ್ಚಂದ್ರ ಕಾವ್ಯಂ ೧-೧೫)

ಎನ್ನುವ ಕೆಚ್ಚು ಕವಿಗಳಿಗೆ, ಇವರಲ್ಲೆಲ್ಲಾ ನಾರಣಪ್ಪನಿಗೆ ನಾಲ್ಕು ಅಗ್ಗಳಿಕೆಗಳು :

‘ಹಲಗೆ ಬಳಪವ ಪಿಡಿಯದ ಒಂದು ಅ
ಗ್ಗಳಿಕೆ, ಪದವಿಟ್ಟು ಅಳುಪದ ಒಂದು ಅ
ಗ್ಗಳಿಕೆ, ಪರರ ಒಡ್ಡವದ ರೀತಿಯ ಕೊಳ್ಳದ ಅಗ್ಗಳಿಕೆ,
ಬಳಸಿ ಬರೆಯಲು ಕಂಠ ಪತ್ರದ
ಉಲುಹು ಕೆಡದ ಅಗ್ಗಳಿಕೆ ಎಂಬ ಈ
ಬಲುಹು ಗದುಗಿನ ವೀರ ನಾರಾಯಣನ ಕಿಂಕರಗೆ

(ಕುಮಾರವ್ಯಾಸ ಭಾರತ ೧-೧೫)

ನಾರಣಪ್ಪ, ಕಾವ್ಯ ಬರೆಯುವ ಮುನ್ನ ಉಳಿದ ಕವಿಗಳಂತೆ, ಹಲಗೆಯ ಮೇಲೆ ಬಳಪದಲ್ಲಿ ಬರೆದು ಅನಂತರ ಓಲೆಗರಿಯ ಮೇಲೆ ಪ್ರತಿ ಮಾಡುವ ಅಭ್ಯಾಸದವನಲ್ಲ. ಹೀಗೆ ಹಲಗೆ – ಬಳಪವನ್ನು ಹಿಡಿಯದಿದ್ದದ್ದು ಒಂದು ಅತಿಶಯ; ಒಂದು ಪದವನ್ನು ಇಟ್ಟಮೇಲೆ ಅದನ್ನು ಅಳಿಸಿ ಬರೆಯುವ ಅಗತ್ಯವೇ ಅವನಿಗೆ ಇರಲಿಲ್ಲ. ಇದು ಎರಡನೆಯ ಅತಿಶಯತೆ; ಇನ್ನೊಬ್ಬರು ಬರೆದ ರೀತಿಯನ್ನು ಅನುಕರಿಸದೆ ಇರುವ ಅತಿಶಯತೆ, ಮೂರನೆಯದು; ಓಲೆಗರಿಯ ಮೇಲೆ ಬರೆಯಲೆಂದು ಕಂಠ (ಲೆಕ್ಕಣಿಗೆ) ವನ್ನಿಟ್ಟನೆಂದರೆ, ಬರೆಯುವ ಉಲುಹು ಅಥವಾ ಶಬ್ದ, ಒಂದಿಷ್ಟೂ ಕೆಡದೆ ಇರುತ್ತಿತ್ತು ಅಥವಾ ಬರವಣಿಗೆ ನಿರರ್ಗಳವಾಗಿ ಸಾಗುತ್ತಿತ್ತು, ಇದು ನಾಲ್ಕನೆಯ ಅಗ್ಗಳಿಕೆ. ಹೀಗೆ ಒಂದೊಂದೇ ಅಗ್ಗಳಿಕೆಯನ್ನು ಘೋಷಿಸಿಕೊಂಡ ಈ ಅಹಂಕಾರ, ‘ಈ ಬಲುಹು ವೀರ ನಾರಾಯಣನ ಕಿಂಕರಗೆ’ ಎನ್ನುವ ವಿನಯದಲ್ಲಿ ತಟಕ್ಕನೆ ಅವನತವಾಗುವ ರೀತಿ ತೀರಾ ವಿಸ್ಮಯಕಾರಕವಾಗಿದೆ. ರನ್ನನಲ್ಲಿ ಕಂಡುಬರುವ ಅಹಂಕಾರಮೂಲವಾದ ಆತ್ಮಪ್ರತ್ಯಯಕ್ಕೂ ನಾರಣಪ್ಪನ ದೈವೀಶ್ರದ್ಧೆಯಿಂದ ಮೇಲೆದ್ದು ಮತ್ತು ಅದರಲ್ಲೇ ಮರೆಯಾಗುವ ಈ ಅಹಂಕಾರಕ್ಕೂ ವ್ಯತ್ಯಾಸವನ್ನು ಗುರುತಿಸಬಹುದು. ನಮ್ಮ ಕವಿಗಳಂತೂ, ತಮಗೆ ನಿಜವಾದ ಕವಿತಾ ಸಾಮರ್ಥ್ಯವಿರಲಿ, ಇಲ್ಲದಿರಲಿ, ಅವರಲ್ಲಿ ಪ್ರತಿಷ್ಠೆಗೇನೂ ಕೊರತೆಯಿರಲಿಲ್ಲ ಅನ್ನಿಸುತ್ತದೆ, ಅವರ ಸ್ವಕಾವ್ಯಪ್ರಶಂಸೆಗಳನ್ನು ಓದಿದಾಗ.

ಈ ಕವಿಗಳಿಗೆ, ಕೀರ್ತಿ, ಪೂಜೆ, ಲಾಭ ಹಾಗೂ ಆಧ್ಯಾತ್ಮಿಕವಾದ ಒಂದು ಸಂತೃಪ್ತಿ ಇವುಗಳೆ ಕಾವ್ಯದಿಂದ ದೊರೆಯುವ ಪ್ರಯೋಜನ ಎಂಬ ಅರಿವಿದ್ದರೂ, ಇವೆಲ್ಲಕ್ಕಿಂತ ಮುಖ್ಯವಾದದ್ದು ಸಹೃದಯರ ಅಥವಾ ಓದುಗರ ಮನಃ ಪ್ರೀತಿಯೆ ತಮ್ಮ ಕಾವ್ಯದ ಮುಖ್ಯ ಲೌಕಿಕ ಪ್ರಯೋಜನವೆಂದು ಭಾವಿಸಿದ್ದು ಕಂಡುಬರುತ್ತದೆ. ಈ ಸಹೃದಯರು ಎರಡು ಬಗೆ. ಒಂದು ಆಯಾ ಕವಿಗಳು ಇದ್ದ ರಾಜಾಸ್ಥಾನದ ಪಂಡಿತ ಮಂಡಲಿ, ಇನ್ನೊಂದು ಕವಿಯ ಕಾವ್ಯವನ್ನು ಓದುವ, ಮೆಚ್ಚುವ ಇತರರು. ‘ಹಿಂದಿನ ಕವಿಗಳೇ ತುಂಬ ಶಕ್ತರು, ಈಗ ಸತ್ಕವಿಗಳಿಲ್ಲ ಎನ್ನುತ್ತಾರಲ್ಲ; ವಿದ್ವಾಂಸರು ಹಿಂದಿನ ಕವಿಗಳ ಮತ್ತು ಇಂದಿನ ಕವಿಗಳ ಕಾವ್ಯಗಳನ್ನು ಒರೆಗೆ ಹಚ್ಚಿ ಪರೀಕ್ಷಿಸಲಿ’ (ಗದಾಯುದ್ಧಂ : ೧-೪೭) ಎಂದು ಕವಿ ರನ್ನ ಆಹ್ವಾನಿಸುತ್ತಾನೆ. ‘ಮಾಲೆಗಾರ ಹೂವಿನ ಹಾರವನ್ನು ಕಟ್ಟಬಹುದು, ಆದರೆ ಮುಡಿವ ಭೋಗಿಗಳಿಲ್ಲದೆ ಅದು ಬಾಡಿಹೋಗುತ್ತದೆ. ಹಾಗೆಯೆ ಎಷ್ಟು ಕೂಗಿ ಹೇಳುವ ಕವಿ ಏನು ತಾನೇ ಮಾಡುತ್ತಾನೆ, ಅದನ್ನು ಮೆಚ್ಚಬಲ್ಲವರು ಇಲ್ಲದಿದ್ದರೆ’ – ಎನ್ನುತ್ತಾನೆ ಜನ್ನ (ಅನಂತನಾಥ ಪುರಾಣಂ : ೧-೪೫). ಕವಿ ಅಧಿಕನಿರ್ದೊಡೇಂ ಕೇಳ್ವರಿಲ್ಲ ದೊಡೆ’ (ಹರಿಶ್ಚಂದ್ರ ಕಾವ್ಯ : ೧-೨೫) ಎನ್ನುತ್ತಾನೆ ರಾಘವಾಂಕ. ತಮ್ಮ ಕಾವ್ಯ ‘ಸಜ್ಜನರ್ಗೆ ಸೇವ್ಯಮದು ಆದೊಡೆ ತಾನೆ ಸಾಲದೆ’ (ಸೂಕ್ತಿ ಸುಧಾರ್ಣವ : ಪೀಠಿಕಾ ಪ್ರಕರಣ ೬೨) – ಎಂಬ ಕೊರಗು ಅನೇಕ ಕವಿಗಳದು. ಕವಿಗಳ ಕಾವ್ಯಾರಂಭದ ಪೀಠಿಕಾ ಪ್ರಕರಣದಲ್ಲಿ ಈ ಹಂಬಲು ತುಂಬಿಕೊಂಡಿದೆ. ಹಾಗೆಯೆ ತಮ್ಮ ಕಾವ್ಯಗಳನ್ನು ಮೆಚ್ಚಲಾರದ ಅರಸಿಕರನ್ನು ಅಥವಾ ದುರ್ಜನರನ್ನು ಕುರಿತ ತಿರಸ್ಕಾರವೂ ವಿಶೇಷವಾಗಿ ಪ್ರಕಟವಾಗುತ್ತದೆ. ಇದನ್ನು ‘ಕುಕವಿ’ ಅಥವಾ ‘ಕುಜನ’ ನಿಂದೆ ಎಂದು ಕರೆಯಬಹುದು. ಈ ‘ಕುಕವಿ ನಿಂದೆ’ಯ ಭಾಗವೇ, ಈ ಪೀಠಿಕಾ ಪ್ರಕರಣಗಳಲ್ಲಿ ತೀರಾ ಅರ್ಥವತ್ತಾದದ್ದು. ಯಾಕೆಂದರೆ ಈ ಭಾಗದಲ್ಲಿ, ಕಣ್ಣಿಟ್ಟು ನೋಡಿದರೆ, ಅಂದಂದಿನ ಸಮಕಾಲೀನವಾದ ಓದುಗರ ಕ್ರಿಯೆ-ಪ್ರತಿಕ್ರಿಯೆಗಳ ಒಂದು ಚಿತ್ರವನ್ನು ಕಾಣುವುದರ ಜತೆಗೆ, ಒಂದು ರೀತಿಯ ವಿಡಂಬನ ಕಾವ್ಯವೂ ಇಲ್ಲಿ ಬೆಳೆದುಕೊಂಡು ಬಂದಿದೆ ಎನ್ನುವುದು ಸ್ವಾರಸ್ಯದ ಸಂಗತಿಯಾಗಿದೆ. ಮತ್ತು ಕುಕವಿ ನಿಂದೆಯಲ್ಲಿರುವ ಕಾವ್ಯದ ಕಾವು ವಿಶೇಷ ರೀತಿಯದಾಗಿದೆ.

ಕುಕವಿನಿಂದೆ ಅಥವಾ ‘ಕುಜನ’ ನಿಂದೆಯಲ್ಲಿ ಎರಡು ಬಗೆಯ ಓದುಗರನ್ನು ಕುರಿತ ಸಂಗತಿ ಇದೆ : ಒಂದು, ಆಯಾ ಕಾಲದ ಕವಿಗಳ ಕೃತಿಗಳನ್ನರ್ಥಮಾಡಿಕೊಳ್ಳಲಾರದ ನೀರಸರು; ಅರ್ಥಮಾಡಿಕೊಳ್ಳಲು ಬಯಸದ ಅಸೂಯಾಪರರು, ಅರ್ಥಮಾಡಿಕೊಂಡರೂ ಅದನ್ನು ಮೆಚ್ಚಲಾರದೆ, ಕೇವಲ ದೋಷಗಳನ್ನೆ ಎತ್ತಿ ತೋರಿಸುವ ‘ದುರ್ಜನರು’. ಎರಡನೆಯದು, ಅಂದಂದಿನ ಪರಿಸರದಲ್ಲಿ ಅಂಥ ಯಾವ ಸಾಮರ್ಥ್ಯವೂ ಇಲ್ಲದೆ, ಕೆಟ್ಟ ಕಾವ್ಯಗಳನ್ನು ಬರೆದು, ಕೆಲವು ವೇಳೆ ಕವಿಗಳಿಗೆ ಸ್ಪರ್ಧಿಯಾಗಿ ಅಂದಿನ ಸಾಹಿತ್ಯದ ವಾತಾವರಣವನ್ನು ಕಲುಷಿತಗೊಳಿಸಿದ ‘ಅಕವಿ ‘ಕು-ಕವಿ’ಗಳ ಸಮುದಾಯ. ಆಗಲೇ ಹೇಳಿದಂತೆ ಮುಖ್ಯವಾಗಿ ಕವಿಗಳಿಗೆ ಬೇಕಾದದ್ದು ತಮ್ಮ ಕಾವ್ಯವನ್ನು ಓದಿ ಮೆಚ್ಚಬೇಕಾದ ಸಜ್ಜನರು. ಪಂಪ ರನ್ನರಂಥ ಆಸ್ಥಾನ ಕವಿಗಳು, ರಾಜಾಸ್ಥಾನದ ಪಂಡಿತ ಮಂಡಳಿಯ ಮುಂದೆ ಕಾವ್ಯವನ್ನು ಒಪ್ಪಿಸುವಾಗ ತೀರಾ ಬೇಸರದ ಅನುಭವಗಳೂ ಆಗಿರಬಹುದು. ಇಲ್ಲದಿದ್ದರೆ :

ಕೋಗಿಲೆಯ ಸರಂ ಅರಣ್ಯದೊಳ್ ಏ
ಗೆಯ್ವುದೋ, ಮೂರ್ಖ ಜಡ ಜನಾರಣ್ಯದೊಳ್, ಇಂ
ಪೋಗಡಿಸಿದ ಕವಿಶಬ್ದಂ ಅ
ದೇಗೆಯ್ದುದು, ಅರಣ್ಯರುದಿತಂ ಅದು ಬಗೆವಾಗಳ್
(ಆದಿಪುರಾಣಂ ೧-೨೩)

ಯಾರು ಕೇಳದಿರುವ ಅರಣ್ಯದಲ್ಲಿ ಕೋಗಿಲೆಯ ಶಬ್ದ ಹೇಗೆ ‘ಅರಣ್ಯರೋದನ’ ವಾಗುತ್ತದೋ ಹಾಗೆ, ಕವಿಯ ಕಾವ್ಯ ಕೂಡ ‘ಮೂರ್ಖ ಜಡಜನಾರಣ್ಯ’ದಲ್ಲಿ  ಏನು ತಾನೇ ಪರಿಣಾಮಕಾರಿಯಾದೀತು ಎಂದು ಕೊರಗುತ್ತಿರಲಿಲ್ಲ. ‘ಶುಷ್ಕ ವಯ್ಯಾಕರಣಿಗಳು, ಶುಷ್ಕ ತಾರ್ಕಿಕರು, ಮೂರ್ಖರು-ಇಂಥವರಿಗೆ, ಕಾವ್ಯ ಆಸ್ವಾದದ ವಿಷಯವಾಗಲಾರದು’ (ಆದಿಪುರಾಣಂ ೧-೨೪) ಎಂದು ಪಂಪ ಹೇಳುತ್ತಾನೆ. ಇನ್ನು ಕೆಲವರಿದ್ದಾರೆ, ಅವರಿಗೆ ಗುಣಗಳನ್ನು ಗ್ರಹಿಸಲು ಬಾರದು.

ಪೊಸದೇಸೆಯಂ ಬೆಡಂಗಂ
ರಸ ಪುಷ್ಟಿಯನ್ ಅರ್ಥದೃಷ್ಟಿಯಂ, ಬಗೆವರೆ, ಭಾ
ವಿಸುವರೆ, ಸಾರಣೆಯಂತಿರೆ
ಕಸಮನೆ ಪಿಡಿವರ್ ಕೆಲರ್ ಮಹಾಪುರುಷರ್ಕಳ್

(ಅಜಿತಪುರಾಣಂ., ೧-೯೧)

ರನ್ನ ಹೇಳುತ್ತಾನೆ, ಕೆಲವರು ಮಹಾಪುರುಷರಿದ್ದಾರಂತೆ, ಅವರು ಕವಿಯ ಕಾವ್ಯದ ಹೊಸ ದೇಶೀಯತೆಯನ್ನಾಗಲಿ, ಬೆಡಗನ್ನಾಗಲಿ, ರಸಪುಷ್ಟಿಯನ್ನಾಗಲಿ, ಅರ್ಥ ದೃಷ್ಟಿಯನ್ನಾಗಲಿ, ಮನಸ್ಸಿಗೆ ತಂದುಕೊಳ್ಳುತ್ತಾರೆಯೆ, ತಂದುಕೊಂಡು ಅದನ್ನು ಅನುಭವಿಸುತ್ತಾರೆಯೆ? ಇಲ್ಲ, ಇದೊಂದೂ ಅವರಿಗೆ ಬಾರದು. ಅವರೇನಿದ್ದರೂ ಜರಡಿಯ ಹಾಗೆ ಕೇವಲ ಕಸವನ್ನು ಮಾತ್ರ ಹಿಡಿಯುತ್ತಾರಂತೆ! ಕವಿಯ ಕಷ್ಟ ಏನು, ಅವನ ಸಾಮರ್ಥ್ಯ ಏನು ಎಂಬುದನ್ನರಿಯದ ಇಂಥ ‘ಮಹಾಪುರುಷರ್ಕಳ್’ ಉದ್ದಕ್ಕೂ ಎಲ್ಲ ಕಾಲದ ಕವಿಗಳ ತಲೆನೋವಿಗೆ ಕಾರಣರಾಗಿದ್ದಾರೆ. ಕಾವ್ಯದಲ್ಲಿ ದೋಷಗಳಿರಬಹುದು, ಆದರೆ ‘ಕಡೆತನಕ ಹಾದು ಬರುವ ಉತ್ತಮಾಂಶ’ಗಳಿರುತ್ತವೆ. ಆದುದರಿಂದ ‘ಎಡೆವಾಯ್ದು ಬಂದ ತಪ್ಪಂ ಹಿಡಿದು ಸಾಧಿಸದೆ, ಕಡೆತನಕ ಬಂದ ಲೇಸಿಂಗೆ ತಲೆದೂಗೆ, ತಲೆ ಒಡೆವುದೇ? ಬೇನೆಯರಿಯದ ನೀರಸರನ್ ಏಕೆ ಪುಟ್ಟಿಸಿದನ್ ಅಬುಜ ಭವನು? (ಹರಿಶ್ಚಂದ್ರ ಕಾವ್ಯಂ, ೧-೨೩) ಎನ್ನುತ್ತಾನೆ ರಾಘವಾಂಕ. ಕೆನೆ ಹಾಲನ್ನು ಕಡೆದು ನವನೀತವನ್ನು ತೆಗೆದು ಬಾಯಿಗೆ ರುಚಿಯಾಗುವಂತೆ ಸವಿಯದೆ, ಹಾಲಲ್ಲಿ ಹುಳಿ ಹಿಂಡಿ ರಸವನ್ನೆ ಕೆಡಿಸಿದರೆ, ಕರೆದ ಕಾಮಧೇನುವಿಗೆ ಆ ದೋಷ ತಟ್ಟುತ್ತದೆಯೆ (ಜೈಮಿನಿಭಾರತ, ೧-೭) ಎಂದು ಪ್ರಶ್ನಿಸುತ್ತಾನೆ ಲಕ್ಷಿ ಶ. ಇಂಥ ಅರಸಿಕರನ್ನು, ದುರ್ಜನರನ್ನು ಕುರಿತು, ಕವಿಗಳು ಬಹು ಕಟುವಾಗಿ ಟೀಕಿಸಿದ್ದಾರೆ. ಬೈಗುಳದ ಭಂಡಾರದಿಂದ ಉಪಮಾ ಸಾಮಗ್ರಿಯನ್ನು ಸೂರೆ ಮಾಡಿದ್ದಾರೆ. ಅವರನ್ನು ಕುರಿತು ‘ಚಂದ್ರಕಾಂತಂ ಒಸರ್ವಂತಿರೆ ಗೋರಿಕಲ್ಲು ಒಸರ್ಗುಮೇ ಬೆಳ್ದಿಂಗಳೊಳ್’, ‘ನವ ಚೂತಂ ತಳಿರ್ವಂದದೊಳ್ ತಳಿರ್ಗುಮೇ ಸ್ಥಾಣೂತ್ಕರಂ’, ಬೆಳುದಿಂಗಳಲ್ಲಿ ಚಂದ್ರಕಾಂತ ಶಿಲೆ ಕರುಗುವಂತೆ ಗೋರಿಕಲ್ಲು ಕರಗುತ್ತದೆಯೇ, ಹೊಸ ಮಾವಿನ ಚಿಗುರು ವಸಂತದಲ್ಲಿ ಹೊಮ್ಮುವಂತೆ, ಮೋಟುಮರ ಚಿಗುರೀತೇ’ – ಎನ್ನುತ್ತಾನೆ ರುದ್ರಭಟ್ಟ (ಜಗನ್ನಾಥವಿಜಯಂ, ೧-೧೩). ಹರಿಹರನಂತೂ ಇಂಥ ದುರ್ಜನರನ್ನು, ಗೂಗೆಗಳಿಗೆ ಹೋಲಿಸುತ್ತಾನೆ. ಕೆಲವರಂತೂ ಕಾವ್ಯಾರಂಭದಲ್ಲಿ ಇಂಥ ‘ದುರ್ಜನ ಪರಮೇಶ್ವರರ‍್ಗೆ ಅರಿದು ಕೈ ಮುಗಿವೆಂ ಬಲಗೊಂಡು ಭಕ್ತಿಯಿಂ’ (ಧರ್ಮಾಮೃತಂ, ೧-೫೧) ಎನ್ನುತ್ತಾರೆ. ಇನ್ನು ಕೆಲವರು,

ಚೋರ ನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯ ರೋಗಿ ಹಳಿದಡೆ,
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು?

(ಕುಮಾರವ್ಯಾಸ ಭಾರತ, ೧-೨೨)

ಎಂಬ ನಿರ್ಲಕ್ಷ್ಯತೆಯನ್ನು ತಾಳಿದ್ದಾರೆ. ಎಲ್ಲ ಕಾಲದಲ್ಲೂ ಕವಿ ತಾಳಬೇಕಾದ ನಿಲುವು ಇದೇ. ಕವಿಗಳಿಗೆ ಮನಸ್ಸನ್ನು ಕಲಕಿದ್ದು, ಈ ‘ದುರ್ಜನ’ ‘ಅರಸಿಕ’ರ ಜತೆಗೆ, ‘ಅಕವಿ’ ‘ಕುಕವಿ’ಗಳ ರಚನೆ ಮತ್ತು ಅದರ ಪ್ರಭಾವಗಳು. ಅಂಥವರಿಗೂ ತಮ್ಮದೇ ಆದ ಪೋಷಕವೃಂದವೂ, ಸಹೃದಯರೂ ಇದ್ದಿರಬೇಕು-

ಆನುಂ ಬುಧರೊಡನೆ ನೃಪಾ
ಸ್ಥಾನದೊಳ್ ಇರ್ದಪ್ಪೆನ್ ಎಂದು ಕುಕವಿ ಕದಂಬಂ
ಬಾನುದ್ದ ಅಪ್ಪುದೇಕೆ?
ದ್ಯಾನದೊಳ್ ಒಡನೆ ಇರವೆ, ಕಾಗೆಯುಂ ಕೋಗಿಲೆಯುಂ?
(ಲೀಲಾವತಿ, ೧-೨೬)

ನಾನೂ ವಿದ್ವಾಂಸರೊಡನೆ ರಾಜರ ಆಸ್ಥಾನದಲ್ಲಿದ್ದೇನೆ, ಎಂದು ಕೆಟ್ಟ ಕವಿಗಳ ಸಮೂಹ ಮುಗಿಲೆತ್ತರ ಏರುವುದೇಕೆ? ಉದ್ಯಾನದಲ್ಲಿ ಕಾಗೆಯೂ ಕೋಗಿಲೆಯೂ ಜತೆ ಜತೆಗೆ ಇರುವುದಿಲ್ಲವೆ? ಎನ್ನುತ್ತಾನೆ ನೇಮಿಚಂದ್ರ. ಇಂಥವರು ಸುತ್ತಣ ಪರಿಸರದಲ್ಲಿ ಸೇರಿಕೊಂಡು ಕೆಟ್ಟ ಕಾವ್ಯವನ್ನು ಬರೆದು, ‘ಅಬಲೆಯಾದ ಸರಸ್ವತಿಯ ಕೊರಳು ಮುರಿದು ನೋಯಿಸುವ ಪಾತಕರು, ಸರಸ್ವತೀ ದ್ರೋಹಿಗಳು’ (ರನ್ನ : ಅಜಿತ ಪುರಾಣಂ, ೧-೮೯). ಇವರಿಗೆ ಸ್ವಂತ ಬರೆಯುವುದಕ್ಕೆ ಬಾರದು. ಆದುದರಿಂದ ‘ಪರರ ಕಾವ್ಯಾರ್ಥಗಳನ್ನು ಛಿದ್ರಿಸುತ್ತಾರೆ’; ಒಂದು ವೇಳೆ ಬರೆದರೂ ಅದು ‘ಓದಿದೊಡೆ ಕಲ್ಲ ಮಾಲೆಯ ನಾದಂ, ಕರ್ಬೊನ್ನ ಕಡಲೆ’ (ಕಲ್ಲನ್ನು ಡಬ್ಬದಲ್ಲಿ ಹಾಕಿ ಅಲ್ಲಾಡಿಸಿದಂತೆ ಶಬ್ದ : ಕಬ್ಬಿಣದ ಕಡಲೆ : ಗಿರಿಜಾ ಕಲ್ಯಾಣಂ, ೧-೨೨)

ಅರಿಯದೆ ಪದವಿನ್ಯಾಸಮಂ,
ಅರಿಯದೆ ಸ್ವಾರಸ್ಯಮನ್, ವರ ಪ್ರತಿಭೆಯ ಗುಣ್ಪು
ಅರಿಯದೆ, ತಾಮುಂ ಕೆಮ್ಮಗೆ
ಡುರುಕ್ ಎಂಬುವು ಕುಕವಿ ಕೂಪ ಮಂಡೂಕಂಗಳ್

(ಜನ್ನ : ಅನಂತನಾಥ ಪುರಾಣಂ, ೧-೪೬)

ಏನೇನೂ ತಿಳಿಯದ, ‘ಕುಕವಿ ಕೂಪ ಮಂಡೂಕಗಳು’ ; ಇಂಥವರು ದುಷ್ಟ ವಿಮರ್ಶಕರಾಗಿದ್ದು, ‘ಉಡುಗಿದುದು ಈಗಳಿನ ಕಬ್ಬದೊಳ್ ಒಟ್ಟಜೆ, ಈಗಡಿನ ಕವಿವ್ರಜಕ್ಕೆ ಪದಸಂಚಯಂ ಅಚಿರಮಾದುದು’ (ಪೊನ್ನ : ಶಾಂತಿಪುರಾಣಂ, ೧೨-೭೯). ಇವತ್ತಿನ ಕಾವ್ಯದಲ್ಲಿ ಒಟ್ಟಂದವೇ ಇಲ್ಲವಾಗಿದೆ, ಈಗಿನ ಕವಿಗಳಲ್ಲಿ ಪದ ಸಂಪತ್ತಿಯೇ ಇಲ್ಲ; ‘ಪುರಾಣ ಕವಿ ಪುಂಗವರ್ ಒಳ್ಳಿದರ್, ಈಗಳಿಲ್ಲ ಸತ್ಕವಿಗಳ್’ (ರನ್ನ : ಗದಾಯುದ್ಧಂ, ೧-೪೭). ಹಿಂದಿನ ಕವಿ ಪುಂಗವರೆ ಒಳ್ಳೆಯವರು, ಈಗಂತೂ ಒಳ್ಳೆಯ ಕವಿಗಳೇ ಇಲ್ಲ – ಎಂದು ಸಮಕಾಲೀನ ಕವಿಗಳನ್ನು ಹಾಸ್ಯ ಮಾಡುತಿದ್ದುದೂ ಉಂಟು. ‘ಕವಿಯನ್ನು ಕಂಡರೆ, ಇವನಿಗೆ ಶಾಸ್ತ್ರಜ್ಞಾನವೇ ಇಲ್ಲ ಎಂದು ಅಬ್ಬರಿಸುತ್ತಾರೆ, ಶಾಸ್ತ್ರಜ್ಞಾನವುಳ್ಳ ಕವಿಯನ್ನು, ನೀನು ಕೇವಲ ಪಂಡಿತ, ಕವಿಯಲ್ಲ ಅನ್ನುತ್ತಾರೆ’ (ಸೂಕ್ತಿ ಸುಧಾರ್ಣವ : ಪೀಠಿಕಾ ಪ್ರಕರಣಂ, ೩೭) ಅಷ್ಟೇ ಅಲ್ಲ,

ತಲೆಯಂ ತೂಗುವನ್ ಒರ್ವನ್, ಉರ್ಬಿ ಕೆಲದೊಳ್ ಕಾಳ್ಕಬ್ಬಮಂ ಕಟ್ಟಿ ಕೋ
ಟಲೆಗೊಂಡು ಊಳ್ವನ್ ಒಬ್ಬ, ಒಲ್ದು ಅವರ ಚಾತುರ್ಯಕ್ಕೆ ಕೈವಾರಮಂ
ಪೂಲೆಗಟ್ಟು ಈವವನ್ ಒಬ್ಬ………
(ಲೀಲಾವತಿ, ೧-೪೦)

ಒಂದು ಕಾವ್ಯಗೋಷ್ಠಿ ನಡೆದಿದೆ. ಕೆಟ್ಟ ಕಾವ್ಯವನ್ನು ರಚಿಸಿ ಕೆಟ್ಟ ಕೆಟ್ಟದಾಗಿ ಅರಚುತ್ತಾನಂತೆ (ಊಳ್ವನ್) ಒಬ್ಬ. ಅವನ ಪಕ್ಕದಲ್ಲಿ ಆಹಾ ಎಂದು ಮೆಚ್ಚಿ ತಲೆದೂಗುತ್ತಾನಂತೆ ಒಬ್ಬ. ಅವನ ಚಾತುರ್ಯಕ್ಕೆ ಮೆಚ್ಚಿ ಅತಿಯಾಗಿ ಹೊಗಳುತ್ತಾನಂತೆ ಇನ್ನೊಬ್ಬ. ಇದು ಅಂದಿನ ಕಾವ್ಯ ಪರಿಸರದ ಚಿತ್ರ. ಅಷ್ಟೇ ಅಲ್ಲ, ಸ್ವಲ್ಪ ವಿಮರ್ಶೆ ಮಾಡಿದರೆ ಸಾಕು, ಮೇಲೆ ಬೀಳುತ್ತಾರೆ ಕೆಲವರು –

ಛಂದಂ ಇದಾವುದು ಎಂದೊಡೆ ಇರಿವರ್, ಪದಬಂಧದೊಳ್ ಈ ಪ್ರಯೋಗಂ ಎಂ
ತು ಎಂದೊಡೆ ಬಯ್ವರ್, ಆವ ಕವಿಮಾರ್ಗಮಿದು ಎಂದೊಡೆ ಪೊಯ್ವರ್,
ಅರ್ಥಮೇನ್
ಎಂದೊಡೆ ತೊಂಡುಭಂಡುಗೆಡೆದು ಉಟ್ಟುದನ್ ಇಕ್ಕುವರ್, ಆವ ನೀತಿ ಪೇಳ್
ಎಂದೊಡೆ ಕೊಲ್ವರ್ ಈಗಳಿನ ದೇಸಿಗೆ ಬಿಳ್ದ ಮಹಾಕವೀಶ್ವರರ್

(ಸೂಕ್ತಿಸುಧಾರ್ಣವಂ. ಪೀಠಿಕಾ ಪ್ರಕರಣಂ, ೩೫)

ಇದರ ಛಂದಸ್ಸು ಯಾವುದಪ್ಪ ಎಂದರೆ, ಮೇಲೆ ಬಿದ್ದು ಇರಿಯುತ್ತಾರೆ; ಪದಬಂಧದಲ್ಲಿ ಈ ಪ್ರಯೋಗ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರೆ ಬಯ್ಯುತ್ತಾರೆ; ಇದು ಯಾವ ಕವಿಯ ಮಾರ್ಗ ಅಥವಾ ಕ್ರಮ ಎಂದರೆ ಹೊಡೆಯುತ್ತಾರೆ. ಇದರ ಅರ್ಥವೇನು ಎಂದು ಕೇಳಿದರೆ ಬಾಯಿಗೆ ಬಂದ ಹಾಗೆ ಬಯ್ದು ಮೈಮೇಲಿರುವ ಬಟ್ಟೆಯನ್ನು ಕಸಿದುಕೊಳ್ಳುತ್ತಾರೆ. ಹೀಗೆ ಮಾಡಬಹುದೇ ಇದೆಂಥ ನೀತಿ, ಅಂದರೆ, ಕೊಲ್ಲುತ್ತಾರೆ, ಇವತ್ತಿನ ಕಾವ್ಯ ಪದ್ಧತಿಗೆ ಬಿದ್ದ ಮಹಾಕವಿಗಳು! ಅಜ್ಞಾತ ಕವಿಯಿಂದ ದೊರೆತ ಈ ಪದ್ಯ, ಅಂದಿನ ಪುಢಾರಿ ಕವಿಪುಂಗವರ ನಡವಳಿಕೆಯನ್ನು ಚಿತ್ರಿಸುತ್ತದೆ. ಹೇಳಿರುವ ವಿಷಯದಲ್ಲಿ ಸಾಕಷ್ಟು ಉತ್ತ್ರೇಕ್ಷೆ ಇರುವುದೆಂಬುದು ಖಂಡಿತ; ಆದರೆ ಒಂದು ಬಗೆಯ ಒರಟುತನವನ್ನು ಬೆಳೆಸಿಕೊಂಡು ಮೆರೆಯುವ ಕವಿಗಳು, ಈ ಕವಿತೆ ಹುಟ್ಟಿಕೊಂಡ ಪರಿಸರದಲ್ಲಿದ್ದರೆಂಬುದು ಮಾತ್ರ ಸ್ಪಷ್ಟ[2]. ಇಂಥ ಪರಿಸರದಲ್ಲಿ ಕವಿಗೆ ಕವಿ ಮುನಿದ, ಸಂಘರ್ಷಿಸಿದ, ಪ್ರತಿಷ್ಠೆಗೆ ಹೋರಾಡಿದ ಒಂದು ಚಿತ್ರವನ್ನು ‘ಕುಕವಿ ನಿಂದೆ’ಯ ಪದ್ಯಗಳು ಸ್ಪಷ್ಟಪಡಿಸುತ್ತವೆ. ಇಡೀ ಪೀಠಿಕಾ ಪ್ರಕರಣದಲ್ಲಿ, ಕಾವ್ಯಸ್ವರೂಪವನ್ನು ಕುರಿತ ಮಾತುಗಳಲ್ಲಿ ಅಂಥ ಹೊಸತನವೇನೂ ಇಲ್ಲ; ಸ್ವಕಾವ್ಯದ ಅಗ್ಗಳಿಕೆಯಲ್ಲಿ ಕವಿಗಳ ಅಭಿಮಾನ, ಆತ್ಮಪ್ರತ್ಯಯಗಳು ತಾನೇತಾನಾಗಿ ಪ್ರಕಟವಾಗಿವೆ. ತಮ್ಮ ಕಾವ್ಯದಲ್ಲಿ ಏನೇನು ಗುಣಗಳಿವೆ ಎಂದು ಹೇಳಿಕೊಳ್ಳುತ್ತಾರೋ ಅವೆಲ್ಲ ಎಷ್ಟೋ ವೇಳೆ ಇರುವುದಿಲ್ಲವೆನ್ನುವುದು ಓದುಗರಿಗೆ ವೇದ್ಯವಾಗುತ್ತದೆ; ಆದರೆ ಈ ಎಲ್ಲ ಲಕ್ಷಣಗಳು ತಮ್ಮ ಕಾವ್ಯದಲ್ಲಿರಬೇಕೆಂದು ಕವಿಗಳು ಆಶಿಸುತ್ತಾರೆಂಬುದು ಮಾತ್ರ ಇಂಥ ಅಗ್ಗಳಿಕೆಗಳಿಂದ ಸ್ಪಷ್ಟ, ರನ್ನನಂಥ, ಕುಮಾರವ್ಯಾಸನಂಥ ಕವಿಗಳು ತಮ್ಮ ಅಗ್ಗಳಿಕೆಯನ್ನು ಕೊಂಚ ಗಟ್ಟಿಯಾಗಿಯೆ ಹೇಳಿಕೊಂಡರೂ, ಅವರು ಅದಕ್ಕೆ ಅರ್ಹರಾಗಿದ್ದಾರೆ ಎಂಬುದನ್ನು ಅವರ ಕೃತಿಗಳು ಸಾದರಪಡಿಸುತ್ತವೆ. ಈ ಭಾಗದಲ್ಲಿ ನಿಜವಾಗಿಯೂ, ಕನ್ನಡಕ್ಕೆ ವಿಶಿಷ್ಟವಾದದ್ದು ‘ಕುಕವಿ ನಿಂದೆ’ಯನ್ನು ಕುರಿತ ಪದ್ಯಗಳು. ಇವುಗಳು ಮಾರ್ಗ ಸಂಪ್ರದಾಯದ ಕವಿಗಳಲ್ಲಿಯಷ್ಟು ವಿಸ್ತಾರವಾಗಿ, ದೇಸೀ ಕವಿಗಳಲ್ಲಿ ಕಾಣಿಸುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ‘ಕುಕವಿ ನಿಂದೆ’ಯ ಪದ್ಯಗಳು, ಕನ್ನಡ ಕಾವ್ಯ ಪರಂಪರೆಯಲ್ಲಿನ ಅಂದಂದಿನ ಸಮಕಾಲೀನ ಸಾಹಿತ್ಯ ಪರಿಸರವನ್ನೂ ಅಲ್ಲಿನ ಸಂಘರ್ಷವನ್ನೂ ಕೊಡುವುದರ ಜತೆಗೆ ಕನ್ನಡ ವಿಮರ್ಶೆಯ ಬೆಳವಣಿಗೆಯನ್ನು ಕುರಿತು ಅಭ್ಯಾಸ ಮಾಡತಕ್ಕವರಿಗೆ, ಹಲವು ಸ್ವಾರಸ್ಯವಾದ ಸಂಗತಿಗಳನ್ನು ಒದಗಿಸುತ್ತವೆ.

ಕಾವ್ಯದ ಪ್ರಯೋಜನ ಅಥವಾ ಗುರಿ ‘ರಸಾನುಭವ’ ಎಂದು ಆಲಂಕಾರಿಕರು ಹೇಳಿದರೂ, ಕವಿಗಳು ಮಾತ್ರ ಅದನ್ನು ಅಷ್ಟಾಗಿ ಲೆಕ್ಕಕ್ಕೆ ತೆಗೆದುಕೊಂಡಂತೆ ತೋರುವುದಿಲ್ಲ. ಅದರಲ್ಲೂ ಕನ್ನಡ ಕವಿಗಳು ಈ ಹೇಳಿಕೆಗೆ ವಿಶೇಷ ಸಮರ್ಥನೆಯನ್ನು ಒದಗಿಸುತ್ತಾರೆ. ಕನ್ನಡದಲ್ಲಿ, ಕೆಲವೇ ಕೆಲವು ‘ಲೌಕಿಕ’ವೆಂದು ಕರೆಯಬಹುದಾದ ಕೃತಿಗಳಿವೆ; ‘ವಿಕ್ರಮಾರ್ಜುನ ವಿಜಯ’, ‘ಪಂಚತಂತ್ರ,’ ‘ಲೀಲಾವತಿ’ ಇಂಥವುಗಳು. ಇವುಗಳನ್ನು ಬಿಟ್ಟರೆ ಉಳಿದುವೆಲ್ಲ ಧಾರ್ಮಿಕ ಕಾವ್ಯಗಳೋ, ಧಾರ್ಮಿಕ ದೃಷ್ಟಿಯನ್ನುಳ್ಳ ಕಾವ್ಯಗಳೋ ಆಗಿವೆ. ಇವುಗಳಲ್ಲಿ ಈ ಕಾವ್ಯಗಳನ್ನು ಓದಿದವರಿಗೆ ಇವು ಮೆಚ್ಚಿಗೆಯಾಗಬೇಕೆಂಬ ಮಾತು ಇದ್ದರೂ, ಈ ಕಾವ್ಯಗಳನ್ನು ಓದುವವರಿಗೆ ಏನೇನು ಲಭಿಸುತ್ತದೆಂದು ಕವಿಗಳು ಆಶ್ವಾಸನೆ ಕೊಡುತ್ತಾರೋ, ಅದೇ ಕಾವ್ಯದ ಪರಮ ಪ್ರಯೋಜನ ಎಂಬಂತೆ ಎದ್ದು ಕಾಣುತ್ತದೆ. ಪಂಪನೇನೋ ತನ್ನ ವಿಕ್ರಮಾರ್ಜುನ ವಿಜಯದಲ್ಲಿ, ತನ್ನ ಈ ಕಾವ್ಯವನ್ನು ಓದುವ, ಪ್ರತಿಮಾಡಿಕೊಳ್ಳಲೆಂದು ಬರೆಯುವ ಮತ್ತು ಕೇಳುವ ಓದುಗರಿಗೆ, ತಮತಮಗೆ ಇಷ್ಟವಾದ ರೀತಿಯಲ್ಲಿ ಅಭ್ಯುದಯವಾಗುತ್ತದೆ; ಧೃತಿ, ತುಷ್ಟಿ, ಪುಷ್ಟಿ, ವಿಭವ, ಸೌಭಾಗ್ಯ, ತಮಗೆ ಇಷ್ಟವಾದ ಹೆಣ್ಣಿನ ಜತೆ ಸಂಭೋಗ, ಇತ್ಯಾದಿಗಳು (೧೪-೬೫) ಉಂಟಾಗುತ್ತವೆ ಎನ್ನುತ್ತಾನೆ. ಪಂಪನು ಹೇಳಿದ ಈ ‘ಕಾವ್ಯ ಪ್ರಯೋಜನ’ವನ್ನು ಇನ್ನಾರೂ ಹೇಳುವುದಿಲ್ಲ. ‘ಲೀಲಾವತಿ’ಯನ್ನು ಬರೆದ ನೇಮಿಚಂದ್ರ ತನ್ನ ಕೃತಿ ಕರ್ಣರಸಾಯನವೆಂದೂ, ಬುಧಜನಕ್ಕೆ ಪ್ರಿಯವೆಂದೂ ಹೇಳುತ್ತಾನೆ. ಇಂಥ ಒಂದೆರಡು ನಿದರ್ಶನಗಳನ್ನು ಬಿಟ್ಟರೆ, ಕಾವ್ಯಪ್ರಯೋಜನದ ಮಾತೆಲ್ಲಾ ಮುಖ್ಯವಾಗಿ ಅಧ್ಯಾತ್ಮವನ್ನೆ ಒತ್ತಿ ಹೇಳುತ್ತದೆ. ಆದಿಪುರಾಣದಲ್ಲೇ ಪಂಪ, ತನ್ನ ಪುರಾಣವನ್ನು ಕೇಳಿದವರಿಗೆ ಸ್ವರ್ಗಾಪವರ್ಗ ಸುಖಗಳು ಲಭಿಸುತ್ತವೆಂದು ಹೇಳುತ್ತಾನೆ. ಹರಿಹರ ತನ್ನ ಕೃತಿಯಿಂದ ಓದುಗರಿಗೆ ‘ಪುಣ್ಯ ಭೋಗಚಯಮಂ, ನಿತ್ಯಾಯುಮಂ ಶ್ರೀಯುಮಂ ನಂದೀಶಗಣದೊಡೆಯಂ ಪಂಪಾಪುರಾಧೀಶ್ವರ’ ಮಾಡುವನು ಎನ್ನುತ್ತಾನೆ. ಕವಿ ಜನ್ನ ತನ್ನ ಯಶೋಧರ ಚರಿತ್ರೆಯನ್ನು ಓದುವವರಿಗೆ ‘ದುರಿತವೆಂಬ ಕತ್ತಲೆ ಹರಿದು ಅಮಳ ದೃಷ್ಟಿಯೆಂಬ ಕನ್ನೈದಿಲೆ ಅರಳುತ್ತದೆ ಯಶೋಧರ ಚರಿತೆ ಎಂಬ ಚಂದ್ರೋದಯದಿಂದ’ ಎನ್ನುತ್ತಾನೆ. ನಾರಣಪ್ಪ ‘ವೇದ ಪಾರಾಯಣದ ಫಲ, ಗಂಗಾದಿತೀರ್ಥಸ್ನಾನ ಫಲ, ಕೃಚ್ಛ್ರಾದಿ ತಪಸಿನ ಫಲ ಇತ್ಯಾದಿಗಳು ಆಗುತ್ತವೆ, ‘ಆದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ’ – ಎನ್ನುತ್ತಾನೆ. ರತ್ನಾಕರ ‘ಈ ಜಿನಕಥೆಯನು ಕೇಳಿದವರ ಪಾಪಬೀಜನಿರ್ನಾಶನವಹುದು’ ಎನ್ನುತ್ತಾನೆ. ಒಟ್ಟಿನಲ್ಲಿ ನಮ್ಮ ಕವಿಗಳಿಗೆ ಕಾವ್ಯದಿಂದ ದೊರೆಯುವ ಅಧ್ಯಾತ್ಮಿಕ ಪ್ರಯೋಜನವೇ, ಅದು ಸಹೃದಯರಿಗೆ ಕೊಡುವ ಪ್ರಯೋಜನಗಳಲ್ಲಿ ಶ್ರೇಷ್ಠವಾದದ್ದು.

ಈ ಹಿನ್ನೆಲೆಯಲ್ಲಿ ಬರೆದ ಕವಿಗಳು ಮುಖ್ಯವಾಗಿ ಓದುಗರನ್ನು ಕುರಿತು ತಾಳಿದ ಧೋರಣೆಯೇನೆಂಬುದು ಸ್ಪಷ್ಟವಾಗಿದೆ. ಅದನ್ನು ಎರಡು ವಿಧಗಳೆಂದು ಗುರುತಿಸಬಹುದು. ಒಂದು ಮಾರ್ಗಕವಿಗಳ ಧೋರಣೆ, ಮತ್ತೊಂದು ದೇಸೀಕವಿಗಳ ಧೋರಣೆ. ಇಬ್ಬರಿಗೂ ತಾವು ಬರೆದ ಕಾವ್ಯ ಸಹೃದಯರಿಗೆ ಮೆಚ್ಚುಗೆಯಾಗಬೇಕು ಎನ್ನುವ ಉದ್ದೇಶವಿದ್ದರೂ, ಮಾರ್ಗಕವಿಗಳ ಗಮನ, ಮುಖ್ಯ ಗಮನ ಪಂಡಿತ ಮಂಡಲಿಯ ಕಡೆಗೆ, ಮತ್ತು ಅವರನ್ನು ಮೆಚ್ಚಿಸುವುದರ ಮೂಲಕ ರಾಜರುಗಳಿಂದ ಬರುವ ಗೌರವ-ಬಿರುದು-ಸನ್ಮಾನಗಳ ಕಡೆಗೆ. ತಮ್ಮ ಕಾವ್ಯದಲ್ಲಿ ‘ನಾಡನುಡಿಯ ಬೆಡಂಗು ಇರಬೇಕು, ದೇಸಿ ಮಾರ್ಗದಲ್ಲಿ ಒಡಂಬಡುವಂತಿರಬೇಕು’ ಎನ್ನುವ ಧೋರಣೆಗಳಿದ್ದರೂ, ಅವು ‘ಕಾವ್ಯ ಪ್ರಯೋಗ ಪರಿಣತಮತಿ’ಯ ನಿಲುವುಗಳೆ ಹೊರತು, ದೇಸಿಯನ್ನು ತಂದು ತಮ್ಮ ಕಾವ್ಯವನ್ನು ಆಸ್ಥಾನದ ಪಂಡಿತಮಂಡಲಿಗಳಾಚೆಯ ಜನಸಾಮಾನ್ಯಕ್ಕೆ ತಲುಪಿಸಬೇಕೆಂಬುದಾಗಿತ್ತು ಎಂದು ಹೇಳಲುಬಾರದು. ಹತ್ತನೆಯ ಶತಮಾನದ ಪಂಪನಿಂದ ಹಿಡಿದು, ಹದಿನೈದನೆಯ ಶತಮಾನದ ಮಧುರ ಕವಿಯವರೆಗೂ ಈ ಧೋರಣೆ ಚಾಚಿಕೊಂಡಿದೆ. ಮಧುರ ತನ್ನ ಧರ್ಮನಾಥ ಪುರಾಣದಲ್ಲಿ :

ಪಂಡಿತರುಂ ವಿವಿಧ ಕಳಾ
ಮಂಡಿತರುಂ ಕೇಳತಕ್ಕ ಕೃತಿಯಂ, ಕ್ಷಿತಿಯೊಳ್
ಕಂಡರ್ ಕೇಳ್ವೊಡೆ ಗೊರವರ
ಡುಂಡುಚಿಯೇ ಬೀದಿವರೆಯೇ ಬೀರನ ಕತೆಯೇ

(ಧರ್ಮನಾಥ ಪುರಾಣಂ, ೧-೫೭)

ಪಂಡಿತರೂ, ವಿವಿಧಕಳಾ ಮಂಡಿತರೂ ಕೇಳಲು ಅರ್ಹವಾದ ಕಾವ್ಯವನ್ನು ಕಂಡಕಂಡವರು ಕೇಳುವುದಕ್ಕೆ ಅದೇನು ಗೊರವರು ‘ಡುಂಡುಂ’ ಎಂದು ಬಾರಿಸುವ ಚರ್ಮದ ವಾದ್ಯವೇ, ಬೀದಿಯಲ್ಲಿ ಬಾರಿಸುವ ತಮಟೆಯೇ, ಅಥವಾ ಗ್ರಾಮೀಣವಾದ ಕತೆಗಳೇ-ಎಂದು ಪ್ರಶ್ನಿಸುವ ಧಾಟಿ, ಈ ಒಂದು ಧೋರಣೆಯನ್ನು ಪ್ರತಿನಿಧಿಸುತ್ತದೆ. ಮಾರ್ಗಕಾವ್ಯ ದೇಸೀ ಕಾವ್ಯವಾಗಿ ಪರಿವರ್ತಿತವಾಗುವಲ್ಲಿನ ಸಂಕ್ರಮಣ ಕಾಲದ ವಚನ ಸಾಹಿತ್ಯದಲ್ಲಿ, ಅದರಲ್ಲೂ ಬಸವಣ್ಣನವರ ವಚನದ ಒಂದು ಮಾತು, ಅದುವರೆಗು ಕನ್ನಡ ಪರಂಪರೆಯಲ್ಲಿ ಇಲ್ಲದ ಹೊಸ ಧೋರಣೆಗೆ ಸಾಕ್ಷಿಯಾಗಿದೆ. ‘ಓಜೆ ಬಜಾವಣೆ ಲೆಕ್ಕವನರಿಯೆ’ ಎಂದು ಆರಂಭವಾಗುವ ಆ ವಚನದಲ್ಲಿ, ‘ಆನು ಒಲಿದಂತೆ ಹಾಡುವೆ’ ಎಂಬ ವ್ಯಕ್ತಿನಿಷ್ಠ ಉದ್‌ಘೋಷವೊಂದಿದೆ. ‘ಆನು ಒಲಿದಂತೆ ಹಾಡುವೆ’ – ಎಂಬ ಮಾತು ತೀರಾ ಮಹತ್ವದ್ದು. ಅದುವರೆಗಿನ ಕವಿಗಳಿಗೆ ಸಾಧ್ಯವಲ್ಲದ ಈ ಮಾತು, ನಮಗೆ ಆಧುನಿಕ ಸಾಹಿತ್ಯದ ಧೋರಣೆಯನ್ನು ಹನ್ನೆರಡನೆಯ ಶತಮಾನದಲ್ಲಿಯೆ ಆಕಸ್ಮಿಕವಾಗಿ ಪ್ರಕಟಿಸುತ್ತದೆ. ದೇಸೀ ಯುಗದ ಪ್ರಾರಂಭದಿಂದಾಗಿ, ಕಾವ್ಯದ ಧೋರಣೆ ಬದಲಾಯಿತು. ‘ಕಾವ್ಯಮಂ ಕೇಳ್ದು ಜನ ಬದುಕಬೇಕೆಂದು ಪೇಳ್ದನ್ ಅನಪೇಕ್ಷೆಯಿಂದ’ – ಎಂದ ರಾಘವಾಂಕನ ಈ ಮಾತು, ದೇಸೀ ಕಾವ್ಯದ ಧೋರಣೆಯಾಗಿದೆ. ‘ಕಾವ್ಯಮಂ ಕೇಳ್ದು ಜನ ಬದುಕಬೇಕು’ ಎನ್ನುವುದನ್ನು ರಾಘವಾಂಕ ‘ಅನಪೇಕ್ಷೆ’ ಎಂದು ಕರೆದದ್ದು ವಿಶೇಷದ ಸಂಗತಿ. ಯಾಕೆಂದರೆ ಕಾವ್ಯದಿಂದ ತಾನು ಬದುಕಬೇಕು, ಪ್ರಶಸ್ತಿ, ಗೌರವಗಳು ದೊರಕಬೇಕು ಎಂಬುದು ‘ಅಪೇಕ್ಷೆ’ಯಿಂದ ಕಾವ್ಯ ಬರೆಯುವ ರೀತಿ; ಆದರೆ ‘ಕಾವ್ಯಮಂ ಕೇಳ್ದು ಜನ ಬದುಕಬೇಕು’ ಎಂಬುದು, ಕವಿಯ ‘ಅಪೇಕ್ಷೆ’ ಯಾದರೂ, ಅದು ಬಹುಜನ ಹಿತವನ್ನು ಕೋರುವ ಕಾರಣ ಅದು ‘ಅನಪೇಕ್ಷೆ’ ಎನ್ನುತ್ತಾನೆ ರಾಘವಾಂಕ. ಈ ‘ಅನಪೇಕ್ಷೆ’ಯೆ ಕವಿಯ ಸಂಪತ್ತು.


[1] ಆಧುನಿಕ ಕವಿ ಕುವೆಂಪು ಅವರ ತಮ್ಮ ‘ಶ್ರೀರಾಮಾಯಣ ದರ್ಶನಂ’ ಮಹಾ ಕಾವ್ಯದಲ್ಲಿ –

ಹೋಮರಗೆ ವರ್ಜಿಲಗೆ ದಾಂಟೆ ಮೇಣ್ ಮಿಲ್ಟನಗೆ
ನಾರಣಪ್ಪಂಗೆ ಮೇಣ್ ಪಂಪನಿಗೆ, ಋಷಿ ವ್ಯಾಸ
ಭಾಸ ಭವಭೂತಿ ಮೇಣ್ ಕಾಳಿದಾಸಾದ್ಯರಿಗೆ,
ನರಹರಿ ತುಲಸಿದಾಸ ಮೇಣ್ ಕೃತ್ತಿವಾಸಾದಿ
ನನ್ನಯ್ಯ ಫಿರ್ದೂಸಿ ಕಂಬಾರವಿಂದರಿಗೆ,
ಹಳಬರಿಗೆ ಹೊಸಬರಿಗೆ ಹಿರಿಯರಿಗೆ ಕಿರಿಯರಿಗೆ,
ಕಾಲ ದೇಶದ ನುಡಿಯ ಜಾತಿಯ ವಿಭೇದಮಂ
ಲೆಕ್ಕಿಸದೆ ಜಗತೀ ಕಲಾಚಾರ್ಯರೆಲ್ಲರ್ಗೆ,
ಜ್ಯೋತಿಯಿರ್ಪೆಡೆಯಲ್ಲಿ ಭಗವದ್ ವಿಭೂತಿಯಂ
ದರ್ಶಿಸುತೆ, ಮುಡಿಬಾಗಿ ಮಣಿದು ಕೈ ಜೋಡಿಸುವೆನಾಂ.
(ಕವಿಕ್ರತು ದರ್ಶನಂ : ಪಂ ೧೪೧-೧೫೦)

ಎಂದು ಪೂರ್ವ ಕವಿಸ್ಮರಣೆ ಮಾಡಿದ್ದಾರೆ. ಈ ‘ಪೂರ್ವಕವಿ’ಗಳ ಸ್ಮರಣೆ ‘ಕಾಲದೇಶದ ನುಡಿಯ ಜಾತಿಯ ವಿಭೇದ’ವಿಲ್ಲದ ಒಂದು ವ್ಯಾಪಕತ್ವವನ್ನು ಪಡೆದಿರುವುದು, ಆಧುನಿಕ ಯುಗದ ಮಹಾಕವಿಗೆ ಸಹಜವೂ, ಉಚಿತವೂ ಆಗಿದೆ.

[2] ಇದರಲ್ಲಿ, ಮಾರ್ಗಕಾವ್ಯದ ಕವಿಗಳು, ದೇಸೀ ರೀತಿಯ ಕಾವ್ಯವನ್ನು ಬರೆಯುವ ಕವಿಗಳನ್ನು ಅಪಹಾಸ್ಯ ಮಾಡಿರುವಂತೆ ತೋರುತ್ತದೆ. ‘ಈಗಳಿನ ದೇಸಿಗೆ ಬಿಳ್ದ ಮಹಾ ಕವೀಶ್ವರ್’ ಎಂಬ ವ್ಯಂಗ್ಯೋಕ್ತಿ ಇದೇ ಅಭಿಪ್ರಾಯವನ್ನು ದೃಢಪಡಿಸುತ್ತದೆ. ಅಂದರೆ ಮಾರ್ಗ ಕಾವ್ಯ ಬರೆಯುವ ಪರಿಸರದಲ್ಲಿ ದೇಸೀ ಅಥವಾ ಆಡುನುಡಿಯ ಕಾವ್ಯವನ್ನು ಬರೆದಾಗ ನಡೆದ ಒಂದು ಸಂಘರ್ಷ ಇಲ್ಲಿದೆಯೇ, ವಿಚಾರಮಾಡಬೇಕು.