ಆ ದಿನ……

1983ರ ಮೇ 19, ಮದುವೆಯಾಗಿ ಒಂಭತ್ತು ವರ್ಷಗಳು. ಆ ವಾರ್ಷಿಕ ದಿನ ದಂದು ಹೊಸ ಸೀರೆ ಉಟ್ಟು ಮಕ್ಕಳು ಯಜಮಾನರೊಡನೆ ದೇವಸ್ಥಾನಕ್ಕೆ ಹೋಗಿ ಸಿಹಿ ತಿನ್ನುವುದು ಪ್ರತಿವರ್ಷದ ರೂಡಿ. ಅಂದೂ ಎಂದಿನಂತೆ ದೇವಸ್ಥಾನಕ್ಕೆ ಹೋಗಿ ಕಚೇರಿಗೆ ಬಂದಾಗ ಆತ್ಮೀಯ ಸ್ನೇಹಿತೆಯರಿಂದ ಶುಭಾಶಯ ಸ್ವೀಕರಿಸಿ ಕಚೇರಿ ಕೆಲಸಕ್ಕೆ ತೊಡಗಿದೆ. ಹನ್ನೆರಡುವರೆ ಗಂಟೆಯ ಹೊತ್ತಿಗೆ ಜವಾನ ಬಂದು ‘ಮೇಡಮ್ ನಿಮಗೆ ಟ್ರಂಕಾಲ್ ಬಂದಿದೆ’ ಎಂದಾಗ ನಾನು ಗಾಬರಿ-ಉದ್ವೇಗಗಳಿಂದ ಓಡಿಹೋದೆ.

ಆಳದಿಂದ ಬಂದಿತ್ತು ತಮ್ಮನ ದನಿ. ‘‘ಅಪ್ಪನಿಗೆ ತುಂಬಾ ಸೀರಿಯಸ್. ಅಣ್ಣನಿಗೂ ತಿಳಿಸು. ತಕ್ಷಣ ಹೊರಡು. ಭಾವನಿಗೂ ತಿಳಿಸು. ನಾನೂ ಪ್ರಯತ್ನಿಸುತ್ತೇನೆ. ನೀನೂ ಹೇಳು.’’

ಅವನ ಉದ್ವೇಗದ ನುಡಿ, ಪುನರಾವರ್ತನೆ, ಕೇಳುತ್ತಲೆ ಕೈಕಾಲು ಕುಸಿಯಿತು. ಗಂಟಲು ಕಟ್ಟಿತು. ಏನೂ ಅನಾಹುತ ಆಗದಿರಲಿ ಎಂಬ ಮನಸ್ಸಿನ ಹಾರೈಕೆಯೊಡನೆ ಅಪ್ಪ, ಕಳೆದ ವಾರ ಇದೇ ದಿನ ನಮ್ಮ ಜತೆಯಲ್ಲಿದ್ದುದನ್ನು, ಆರೋಗ್ಯವಾಗಿ ಓಡಾಡಿಕೊಂಡಿದ್ದುದನ್ನು ನೆನಪಿಸಿ ಕೊಂಡು, ಈಗೇನಾಯಿತೋ ಎಂಬ ಭಯದಲ್ಲಿ ತತ್ತರಿಸಿದೆ.

ಅಲ್ಲಿದ್ದವರು ‘ಗಾಬರಿಯಾಗಬೇಡಿ. ನಿಧಾನವಾಗಿ ಕೇಳಿ’ ಎಂದರು. ‘ಗಾಬರಿಯಾಗದಿರುವುದು ಹೇಗೆ? ನಿಧಾನಿಸುವುದು ಹೇಗೆ?’ ಎಂದು ಮನಸ್ಸಿನಲ್ಲೇ ಅಂದುಕೊಂಡು ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಸಿದೆ. ರಿಸೀವರ್ ಇನ್ನೂ ಕೈಯಲ್ಲೇ ಇತ್ತು. ಮತ್ತೆ ತಮ್ಮನ ಅದೇ ದನಿ ‘ತಕ್ಷಣ ಹೊರಡು. ತುಂಬಾ ಸೀರಿಯಸ್.’ ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ? ಹಾಗಾಗದಿರಲಿ. ಆದರೂ ಹೇಗೆ ನಂಬಲಿ? ಹೇಗೆ ನಂಬದಿರಲಿ?

ಅಂದು ಗುರುವಾರ. ಅದರ ಹಿಂದಿನ ಗುರುವಾರ ನಮ್ಮ ಮನೆಯಲ್ಲಿದ್ದರು ಅಪ್ಪ. ತಂಗಿಯ ಹೆರಿಗೆಗೆಂದು ಅಪ್ಪ ಅಮ್ಮ ಇಬ್ಬರೂ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದರು. ಅಮ್ಮ ತಂಗಿಯ ಬಳಿಯಲ್ಲಿ, ಅಪ್ಪ ನಮ್ಮಲ್ಲಿ. 69ನೆ ವಯಸ್ಸನ್ನು ಹಿಂದಿನ ತಿಂಗಳಲ್ಲೇ ಮುಗಿಸಿ 70ನೇ ವಯಸ್ಸಿಗೆ ಅಡಿಯಿಟ್ಟಿದ್ದರು. ಆದರೂ ಚಟುವಟಿಕೆಗೆ ವಯಸ್ಸು ಅಡ್ಡ ಬಂದಿರಲಿಲ್ಲ. ನನ್ನ ಮಕ್ಕಳೊಡನೆ, ಪತಿಯೊಡನೆ, ನನ್ನೊಡನೆ ಆತ್ಮೀಯವಾಗಿ, ಪ್ರೀತಿಯಿಂದ ಮಾತುಕತೆ ಯಾಡಿದ, ಬರಹ, ಸಾಹಿತ್ಯ, ಸಿನಿಮಾ, ಆಧುನಿಕ ಸಾಹಿತ್ಯ – ಇತ್ಯಾದಿ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಿದ ಆರೋಗ್ಯವಂತರಾಗಿದ್ದ ಅಪ್ಪನಿಗೆ ಅಷ್ಟು ಬೇಗ ಏನಾಯಿತು?

ತಲೆ ಸಿಡಿಯತೊಡಗಿತು. ಮನಸ್ಸಿನಲ್ಲಿ ಉಮ್ಮಳ. ಕಳವಳ. ಮನಸ್ಸು ಯಾವಾಗಲೂ ಹಾಗೆ. ಬೇಡದ್ದನ್ನೇ ಯೋಚಿಸುತ್ತದೆ. ಆದರೂ ಏನೂ ಆಗಿರಲಾರದು ಅಂತ ಮನಸ್ಸಿನ ಮೂಲೆಯಲ್ಲಿ ಸಮಾಧಾನ. ಆದರೂ ಬೇಡಬೇಡವೆಂದರೂ ಅಳು ಒತ್ತರಿಸಿ ಬರುತ್ತಿತ್ತು.

ಬೆಂಗಳೂರಿನಿಂದ ಪುತ್ತೂರಿಗೆ ಇರುವ ದೂರ ಕಡಿಮೆಯೇನಲ್ಲ. ಟಾಕ್ಸಿ ದೊರೆಯಲಿಲ್ಲ. ಕಷ್ಟ ಪಟ್ಟು ಲಂಚ ಕೊಟ್ಟು ಬಸ್ಸಿನ ಟಿಕೆಟು ಪಡೆದಾಯಿತು.

ಬಸ್ಸಿನಲ್ಲಿ ನರಕಯಾತನೆ! ಯಾವುದೇ ಚಿಂತೆಯಿಲ್ಲದೆ ನಿದ್ರಿಸುತ್ತಿರುವ ಪ್ರಯಾಣಿಕರು. ಆದರೆ ನನ್ನ ಬಳಿ ನಿದ್ರೆ ಸುಳಿಯದು. ಮನಸ್ಸಿನಲ್ಲಿ ಸಂಕಟ. ವಿಚಿತ್ರ ಆಲೋಚನೆಗಳು. ಸಾವಿರಾರು ಕಲ್ಪನೆಗಳು. ಅಪ್ಪನ ಜತೆಯಲ್ಲಿ ಹಿಂದಿನ ವಾರ ಓಡಾಡಿದ ನೆನಪುಗಳು. ಅವರ ಚಿತ್ರ ಮತ್ತೆ ಮತ್ತೆ ಕಣ್ಣ ಮುಂದೆ ತೇಲಾಡಿದ ಹಾಗೆ! ಕಣ್ಣಿಗೆ ಕಟ್ಟುವಂತೆ ಒಂದಕ್ಕೊಂದು ಸಂಬಂಧವಿಲ್ಲದ ದೃಶ್ಯಾವಳಿ ಗಳು! ತಲೆಸಿಡಿದು ಹೋಳಾದಂಥ ಅನುಭವ!

ಅಯ್ಯೊ! ಅಪ್ಪಾ! ಅಮ್ಮಾ! ಎಂದು ನರಳಿದೆ. ಸಂಕಟವರಿತ ಜತೆಯಲ್ಲಿ ಹೊರಟ ಡಾಕ್ಟರು ಮಾತ್ರೆಯೊಂದನ್ನು ಕೊಟ್ಟಾಗ ನಾನೇ ತೇಲಿಹೋದಂತೆ ಅನುಭವ!

ರಾತ್ರಿ 10.00ಕ್ಕೆ ಹೊರಟ ಬಸ್ಸು ಮುಂಜಾನೆ 5.00 ಗಂಟೆಗೆ ಪುತ್ತೂರು ತಲಪಿತು. ಕ್ಷಣವೊಂದು ಯುಗವಾಗಿ ಕಾಣುತ್ತಿತ್ತು. ಅಂತೂ ಬಸ್ಸಿನಿಂದ ಇಳಿದಾಗ, ಕತ್ತಲಲ್ಲಿ ದೀಪ ಹಿಡಿದು ಕೊಂಡು ಬಂದ ದೊಡ್ಡಪ್ಪನ ಮಗನ ಮುಖ ನೋಡಿದಾಗ ‘ಎಲ್ಲ ಮುಗಿದು ಹೋಯಿತು’ ಎನ್ನುವ ಭಾವ.

ದಿಗ್ಭ್ರಮೆ! ನೂರು ನೋವುಗಳ ಮುತ್ತಿಗೆ. ಒಂದು ಕ್ಷಣ ಎಲ್ಲ ಸ್ತಬ್ಧ. ಸ್ಥಗಿತ. ಮನಸ್ಸಿನ ಸಾವಿರ ಸಾವಿರ ಆಲೋಚನೆಗಳಿಗೆ ಒಂದು ದುರಂತ ಪೂರ್ಣವಿರಾಮ. ಶೋಕ ಅಲೆ ಅಲೆಯಾಗಿ ಭೋರ್ಗರೆಯಿತು. ಮನೆಯತ್ತ ಎಲ್ಲರೂ ಧಾವಿಸಿದೆವು.

ಚಿರನಿದ್ರೆಯಲ್ಲಿರುವ ಅಪ್ಪ. ಶಾಂತಮುಖ. ಇಳಿಬಿಟ್ಟ ಶ್ವೇತಕೇಶ. ಅನಾರೋಗ್ಯದ ದಿನಗಳಲ್ಲಿ ತೆಗೆಯದೆ ಉಳಿದ ಗಡ್ಡ. ದೈನಂದಿನ ಶ್ವೇತ ವಸ್ತ್ರಾಚ್ಛಾದಿತ ಶರೀರ. ಮುಚ್ಚಿದ ಕಣ್ಣೆವೆಗಳು. ಮುಚ್ಚಿದ ತುಟಿಗಳು. ಉಸಿರಿಲ್ಲ ಎಂದು ಹೇಳಲಸಾಧ್ಯವಾದ, ನಂಬಲಾಗದ ಆ ನಿದ್ರಾಭಾವ.

ನಾನು ಹಣೆ ಮುಟ್ಟಿ ನೋಡಿದೆ. ತಣ್ಣಗೆ ಕೊರೆಯುತ್ತಿತ್ತು.

ಅಪ್ಪ ಇನ್ನಿಲ್ಲ!

ಇನ್ನು ಮುಂದೆ ಅಪ್ಪನ ಮಾತು ಕೇಳುವಂತಿಲ್ಲ.

ಅಪ್ಪನನ್ನು ನೋಡುವಂತಿಲ್ಲ.

ಜತೆಯಲ್ಲಿ ಕುಳಿತು ಮಾತಾಡುವಂತಿಲ್ಲ.

ಪ್ರೀತಿಯ ಪತ್ರವನ್ನು ನಿರೀಕ್ಷಿಸುವಂತಿಲ್ಲ.

ಎಲ್ಲವೂ ಇನ್ನು ನೆನಪು.

ಬರಿಯ ನೆನಪೇ.!

ಹುಟ್ಟು ಆಕಸ್ಮಿಕ. ಸಾವು ನಿಶ್ಚಿತ. ಆದರೆ ಹೀಗೆ ಕರೆಯದೆ ಬಂದು ನೋವಿನ ಕಡಲಲ್ಲಿ ಮುಳುಗಿಸಿ, ನೋವು ನೋವನ್ನೇ ಅನುಭವಿಸುವವರ ‘ಚಂದ’ ನೋಡುವ ‘ಸಾವು’ ನಿಜವಾಗಿಯೂ ಮನುಷ್ಯ ಶಕ್ತಿಗೆ ಮೀರಿದ ವಿಕರಾಳ, ಘೋರ ಸಮಸ್ಯೆ! ಈ ಸಾವಿನ ಹಿಂದಿನ ನೋವು ಬರಹಕ್ಕೆ ಮೀರಿದ್ದು. ಕಲ್ಪನೆಗೆ ನಿಲುಕದ್ದು.

ಜನನ – ಬಾಲ್ಯ – ವಿದ್ಯಾಭ್ಯಾಸ

ಮಲೆನಾಡಿನ ಗುಣಧರ್ಮ, ಬೆಟ್ಟದ ಹವಾಮಾನ, ಕರಾವಳಿಯ ಸುಖ-ಸೊಗಸಿನ ತ್ರಿವೇಣಿ ಸಂಗಮವಾದ ಹಾಗೂ ಮನಮೋಹಕವಾದ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ. ಮೋಡಗಳನ್ನು ಮುತ್ತಿಡುವ ಪರ್ವತಮಾಲೆ; ಗಗನಚುಂಬಿತ ವೃಕ್ಷಗಳು, ಗುಡ್ಡಬೆಟ್ಟಗಳು, ನದೀ-ನದಗಳು, ಕಣಿವೆ – ಕಂದರಗಳು, ತೆಂಗು-ಕಂಗು, ತಾಳೆ-ಬಾಳೆ, ಮಾವು-ಹಲಸುಗಳ ಫಲಭರಿತ ವೃಕ್ಷಗಳು, ಸದಾ ಹಸುರು ಮೈ ತುಂಬಿದಂತಿರುವ ಪ್ರಕೃತಿ, ಇಂಥ ಸೊಬಗಿನ ಜಿಲ್ಲೆಯಲ್ಲಿರುವ ಊರು ಮಂಗಳೂರು. ಪಡುಗಡಲ ತಡಿಯಲ್ಲಿರುವ ಈ ಊರು ಚೆಲುವಾದ ಊರು. ಮೂಡಣದ ಬೆಡಗಿನ ಕೊಡಗಿಗೆ ಹೋಗುವಾಗ ಮೂವತ್ತು ಮೈಲುಗಳ ಪೂರ್ವಕ್ಕೆ ಒಳನಾಡು ಪ್ರದೇಶದ ಮಲೆನಾಡಿನಲ್ಲಿ ಮೆರೆಯುವ ಸಣ್ಣ ಪಟ್ಟಣ ಪುತ್ತೂರು. ಬಹಳ ಹಿಂದಿನ ಕಾಲದಿಂದಲೂ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳ ತವರು. ‘‘ಹತ್ತೂರು ಕೊಟ್ಟರೂ ಪುತ್ತೂರು ಬಿಡೆ’’ ಎಂಬ ಮಾತು ಅದರ ವೈಶಿಷ್ಟ್ಯಕ್ಕೆ ಸಾಕ್ಷಿ.

ಇಂಥ ಪುತ್ತೂರಿನಲ್ಲಿ 15ನೇ ಶತಮಾನದ ಕಾಲದ್ದೆಂದು ಹೇಳಲಾದ ಧಾರ್ಮಿಕ ಇತಿಹಾಸವನ್ನು ಹೊಂದಿರುವ ಮಹಾಲಿಂಗೇಶ್ವರ ದೇವಸ್ಥಾನ ಭಕ್ತಾದಿಗಳನ್ನು ಆಕರ್ಷಿಸುವ ಪವಿತ್ರ ಕೇಂದ್ರ. ಈ ದೇವಸ್ಥಾನದ ದಕ್ಷಿಣಕ್ಕೆ ನಾಲ್ಕು ಫರ್ಲಾಂಗುಗಳ ಅಂತರದಲ್ಲಿದೆ ಚಿಕ್ಕಪುತ್ತೂರು.

ಸುಮಾರು 1900ನೇ ಇಸವಿಯ ಕಾಲಕ್ಕೆ ಚಿಕ್ಕಪುತ್ತೂರಲ್ಲಿ ಏಳೆಂಟು ಮನೆಗಳು ಇದ್ದುವು. ಇದ್ದ ಮನೆಗಳ ಪೈಕಿ ಹುಲ್ಲಿನ ಮನೆಯಾದರೂ ಮಹಡಿ ಮನೆ. ‘ಬೋದಿಗೆ’ ವೃಕ್ಷದ ಕಂಬಗಳು. ಕಂಬಗಳಲ್ಲಿ ಕೆತ್ತಿದ ಚಿತ್ತಾರಗಳು. ಸುಮಾರು ನಲುವತ್ತು, ಐವತ್ತು ಜನ ಕುಳಿತುಕೊಳ್ಳು ವಷ್ಟು ವಿಶಾಲವಾದ ಹಜಾರ. ಪೂರ್ವದಿಕ್ಕಿಗೆ ಮನೆಯ ಮುಖ. ಮನೆಯ ಬಲಬದಿಗೆ ಹತ್ತು ಮೆಟ್ಟಲು ಏರಿದ ಮೇಲೆ ಇರುವ ಜಾಗದಲ್ಲಿ ದೈವಸ್ಥಾನ. ಅದಕ್ಕೆ ಎದುರಾಗಿ ಮನೆಯ ಮುಂದೆ ತುಳಸಿಕಟ್ಟೆ. ದೈವಸ್ಥಾನದ ಬಲಭಾಗದ ಮುಂಭಾಗದಲ್ಲಿ ನಾಗದ ಬನ. ಬಿದಿರ ಮೆಳೆ ಸುತ್ತುವರಿದಿದೆ ಅಲ್ಲಿ. ಬಕುಳ (ರಂಜೆ) ವೃಕ್ಷಗಳು. ಅಲ್ಲದೆ ದೈವಸ್ಥಾನದಿಂದ ಕೆಳಗಿಳಿದು ಬಂದರೆ ಮತ್ತೆ ಬಲಭಾಗದಲ್ಲಿ ಹತ್ತು ಮೆಟ್ಟಿಲಷ್ಟು ಕೆಳಗಿಳಿದರೆ ಅಲ್ಲಿ ಒಂದು ತೋಟ. ಅಲ್ಲಿ ತೆಂಗು, ಮಾವು, ಹಲಸು, ಸಾಗುವಾನಿ, ಚಿಕ್ಕು, ಪೇರಳೆ, ಬಾಳೆ, ಅಡಿಕೆ ಮರಗಳು. ಅಡಿಕೆ ಮರಗಳು ಆಗ ಕಡಿಮೆ ಇದ್ದುವು. ಈಗ ಇಪ್ಪತ್ತೈದಕ್ಕೂ ಹೆಚ್ಚು ಇವೆ. ಅಷ್ಟೆ ಅಲ್ಲ ಹೆಬ್ಬಲಸು, ರಾಮಫಲ, ಸೀತಾಫಲದ ಮರಗಳು ಅಂದೂ ಇದ್ದುವು. ಈಗಲೂ ಇವೆ.

ಈ ಮಹಡಿ ಮನೆಯ ಯಜಮಾನರು ಶ್ರೀಮಾನ್ ಕರಿಯಪ್ಪನವರು. ಚಿಕ್ಕಪುತ್ತೂರಿಗೇ ಬೇಕಾದ ವ್ಯಕ್ತಿ. ಚಿಕ್ಕಪುತ್ತೂರಿನ ಸಣ್ಣ ಸಣ್ಣಪುಟ್ಟ ಗದ್ದಲ, ಗಲಾಟೆಗಳ ಸಂಧಾನ, ಸಮಾಧಾನದ ಹೊಣೆ ಇವರದ್ದೆ. ಜತೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆಲಸ. ಅದಕ್ಕಾಗಿ ದೇವಸ್ಥಾನದ ಉಂಬಳಿಯಾಗಿ ಎರಡು ಮುಡಿ ಗದ್ದೆಯನ್ನು ಅವರ ಮನೆತನಕ್ಕೆ ಬಿಡಲಾಗಿತ್ತು. ಓಟದ ಕೋಣವನ್ನು ಸಾಕುತ್ತಿದ್ದವರು ಅವರು ಎಂದ ಮೇಲೆ ಅರ್ಥವ್ಯವಸ್ಥೆ ಚೆನ್ನಾಗಿಯೇ ಇದ್ದಿತೆಂದು ಬೇರೆ ಹೇಳಬೇಕಾಗಿಲ್ಲ. ಅವರ ಹೆಂಡತಿ ಲಕ್ಷ್ಮಮ್ಮ ಗಂಡನಿಗೆ ಅನಕೂಲೆಯಾದ ಸತಿ. ಊರಿನ ‘ಪಂಚಾಯತಿ’ ಸೇರಿದ ಸಂದರ್ಭದಲ್ಲಿ ಸೇರಿದವರ ಊಟದ ಖರ್ಚು, ಕುಟುಂಬದ ದೈವ ದೇವರುಗಳ, ಪೂಜೆ ಪುರಸ್ಕಾರಗಳ ಖರ್ಚು-ವೆಚ್ಚ ಎಲ್ಲವೂ ಇವರ ಪಾಲಿಗೆ. ಅಷ್ಟೇ ಅಲ್ಲ ಸಹಾಯ ಹಸ್ತ ಚಾಚಿದವರಿಗೆಲ್ಲ ಇವರದು ವರದ ಹಸ್ತ. ಆ ಕಾರಣದಿಂದಲೇ ಉತ್ಪತ್ತಿ ಸಂಪಾದನೆ ಕಡಿಮೆಯಾಗಿ ದಾನಧರ್ಮ ಮಾತ್ರ ಎಂದಿನಂತೆ ನಡೆದಾಗ ಗದ್ದೆ ಕೈ ಬಿಟ್ಟಿತು. ಓಟದ ಕೋಣಗಳ ಮಾರಾಟವಾಯಿತು. ಆರ್ಥಿಕವಾಗಿ ಸೋತು ಹೋದಾಗ ಮಾನಸಿಕ ಅಸ್ವಸ್ಥತೆ ಸಹಜ ತಾನೆ? ಅದೇ ಕೊರಗು ಪ್ರಾಣವನ್ನೇ ಕಸಿದುಕೊಂಡಿತು.

ಶ್ರೀ ಕರಿಯಪ್ಪ – ಲಕ್ಷ್ಮಿ ದಂಪತಿಗಳ ಮೂರನೆ ಮಗನೇ ದಿ| ಪಿ.ಕೆ. ನಾರಾಯಣ ಅವರು. ಮೊದಲ ಮಗ ದಿ| ಲಕ್ಷ್ಮಣ ಅವರು. ಎರಡನೆ ಮಗಳು ದಿ| ಗೌರಿ ಅವರು.

ತಂದೆ ಸಾಯುವಾಗ ಹಿರಿಯ ಮಗ ಲಕ್ಷ್ಮಣ ಅವರಿಗೆ ಹದಿನೈದು ವರ್ಷ ಪ್ರಾಯ. ಮಗಳಿಗೆ ಆಗ ತಾನೆ ಮದುವೆ ಮಾಡಿಕೊಟ್ಟಿದ್ದರು. ಕೊನೆಯ ಮಗ ನಾರಾಯಣರಿಗೆ ಹನ್ನೊಂದು ವರ್ಷ.

ಆ ಹೊತ್ತಿಗಾಗಲೇ ಸಂಪಾದನೆ ಶೂನ್ಯವಾಗಿತ್ತು. ಬಡತನ ಮನೆಯಲ್ಲಿ ತಾಂಡವವಾಡುತ್ತಿತ್ತು. ಅಣ್ಣ ಲಕ್ಷ್ಮಣನಿಗೆ ಓದಿನಲ್ಲಿ ನಿರಾಸಕ್ತಿ. ಯಾವುದೋ ನಾಟಕ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರೂ ಮನೆಗೆ ಯಾವುದೇ ರೀತಿಯ ಆರ್ಥಿಕ ಸಹಾಯವಿಲ್ಲ.

ಎಳೆಯ ಪ್ರಾಯದಲ್ಲೇ ತಂದೆಯವರಿಗೆ ಓದಿನೆಡೆ ತುಂಬಾ ಆಸಕ್ತಿ. ಮನೆಯ ಬಡತನದ ಸಲುವಾಗಿ ಹಗಲು ಶಾಲೆಗೆ ಸೇರುವ ಅವಕಾಶ ದೊರೆಯದಾಗ ರಾತ್ರಿ ಶಾಲೆಯ 1ನೆ ತರಗತಿಗೆ 1921ರಲ್ಲಿ ಸೇರಿದರು. ಆಗ ಅವರಿಗೆ ಏಳು ವರ್ಷ. ಅವರು ಇರುಳು ಶಾಲೆಯಿಂದ ಹಗಲು ಶಾಲೆಗೆ ಸೇರುವ ಅವಕಾಶ ದೊರೆಯಲು ಕಾರಣ ಶ್ರೀ ಮೊಳಹಳ್ಳಿ ಶಿವರಾಯರು. ಆ ಬಗ್ಗೆ ತಂದೆಯವರು ಹೇಳಿರುವುದು ಹೀಗೆ – ಶ್ರೀ ಮೊಳಹಳ್ಳಿ ಶಿವರಾಯರ ಮೊದಲ ದರ್ಶನ ನನಗಾದುದು ರಾತ್ರಿ ಶಾಲೆಯಲ್ಲಿ. ಮೊಳಹಳ್ಳಿ ಶಿವರಾಯರ ಮನೆಯ ಎದುರಿಗೆ (ಈಗ ಬಸ್‌ನಿಲ್ದಾಣವಿರುವಲ್ಲಿ ಎರಡು ಕೋಣೆಗಳ ಒಂದು ಅಂಗಡಿಯಿತ್ತು. ಒಂದರಲ್ಲಿ ಹರಿಜನರ ಸಂಘದ ಕಚೇರಿಯಿತ್ತು. ಇನ್ನೊಂದರಲ್ಲಿ ರಾತ್ರಿಶಾಲೆ ನಡೆಯುತ್ತಿತ್ತು. ಒಂದು ದಿನ ರಾತ್ರಿ ಶಿವರಾಯರು ಆ ಶಾಲೆಯನ್ನು ನೋಡಲು ಬಂದರು. ವಿದ್ಯಾರ್ಥಿಗಳಾದ ನಾವೆಲ್ಲ ಎದ್ದು ನಿಂತು ನಮಸ್ಕಾರ ಮಾಡಿದೆವು. ಆಗ ನಮ್ಮ ಉಪಾಧ್ಯಾಯರಾದ ಹಿರಿಯಪ್ಪ ಮಾಸ್ಟ್ರು ಶಿವರಾಯರಿಗೆ ನನ್ನ ಪರಿಚಯ ಮಾಡಿ ಚೆನ್ನಾಗಿ ಕಲಿಯುತ್ತಾನೆಂದು ಹೇಳಿದರು. ‘ಅವನು ನಾಳೆಯಿಂದಲೇ ಹಗಲು ಶಾಲೆಗೆ ಹೋಗಲಿ’ ಎಂದು ಶಿವರಾಯರು ಹೇಳಿದರು. ನಾನಾಗ ಶಿವರಾಯರನ್ನು ಕಣ್ಣು ತುಂಬಾ ನೋಡಿ ಮನದಲ್ಲೇ ವಂದಿಸಿದೆನು. ಆಗ ಅವರು ದೊಡ್ಡ ಕಪ್ಪು ಕೋಟು ಧರಿಸಿದ್ದರು. ಖಾದಿ ಟೊಪ್ಪಿ ಧರಿಸಿದ್ದರು. ದೊಡ್ಡ ಮೀಸೆಯಿಂದ ಮುಖದಲ್ಲೊಂದು ಭವ್ಯತೆ ಕಾಣುತ್ತಿತ್ತು.

ಮರುದಿನವೇ ನಾನು ಬೋರ್ಡು ಹಾಯರ್ ಎಲಿಮೆಂಟರಿ ಶಾಲೆಯ ಒಂದನೇ ತರಗತಿಗೆ ಸೇರಿದೆ. ಅದೇ ಶಾಲೆಯಲ್ಲಿ ಐದನೆಯ ತರಗತಿಯಲ್ಲಿರುವಾಗ ನಾನು ವಾಚನಾಲಯದ ಕಾರ್ಯದರ್ಶಿಯಾದೆ. ಆದ್ದರಿಂದ ದಿನಾ ಸಂಜೆ ಶಿವರಾಯರ ಮನೆಗೆ ಹೋಗಿ ಅಲ್ಲಿರುವ ಪತ್ರಿಕೆಗಳನ್ನು ಶಾಲೆಗೆ ತರುತ್ತಿದ್ದೆ. ಇದರಿಂದಾಗಿ ನಾನು ಅವರ ಮನೆಯಲ್ಲಿ ಸಲಿಗೆಯ ಹುಡುಗನಾದೆ. ಆದರೆ ಶಿವರಾಯರನ್ನು ಕಂಡಾಗೆಲ್ಲ ಭಯಭಕ್ತಿಗಳಿಂದ ಮೌನವಾಗಿ ನಿಲ್ಲುತ್ತಿದ್ದೆ.

ಶ್ರೀ ಶಿವರಾಮ ಕಾರಂತರ ‘ನಿಶಾಮಹಿಮೆ’ ಎಂಬ ನಾಟಕದಲ್ಲಿ ನನಗೆ ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ್ ಆಗಿ ಬಂದ ಸುಗುಣಚಂದ್ರನ ಪಾತ್ರ. ನಾಟಕವಾದ ಮೇಲೆ ವಿಮರ್ಶೆ. ‘ಇಂಗ್ಲೆಂಡ್ ರಿಟರ್ನ್‌ಡ್ ಸುಗುಣಚಂದ್ರನಿಗೆ ಹೆಂಗಸರಂತೆ ಕೂದಲು ಇರಬಾರದು ಎಂದು ಶಿವರಾಯರ ಟೀಕೆ. ಉಳಿದೆಲ್ಲ ವಿಷಯಗಳಿಗೆ ಪ್ರಶಂಸೆ. ಇದರ ಫಲವೇ ಬೆಳ್ಳಾರೆಯಲ್ಲಾದ ಮತ್ತಿನ ಪ್ರಯೋಗದೊಳಗೆ ನನ್ನ ಕೂದಲಿಗೆ ಕತ್ತರಿ ಪ್ರಯೋಗ.

ಅಸ್ಪೃಶ್ಯತಾ ನಿವಾರಣೆ ಮತ್ತು ಪಾನ ನಿರೋಧ ಪ್ರಚಾರಕ್ಕಾಗಿ ನಮ್ಮ ತಂಡವು ಎಣ್ಮೂರು ಪಂಜಕ್ಕೆ ಹೋದಾಗ ಶಿವರಾಯರೂ ನಮ್ಮ ಜತೆಗಿದ್ದರು.

ಹಾಯರ್ ಎಲಿಮೆಂಟರಿ ಶಾಲೆಯಲ್ಲಿ ನನ್ನ ಓದು ಮುಗಿಸಿದೊಡನೆ ಪುತ್ತೂರು ಬೋರ್ಡು ಹೈಸ್ಕೂಲು ಸೇರಿದೆ. ಆಗ ಶಿವರಾಯರು ನನಗೆ ಸರ್ಕಾರದ ವಿದ್ಯಾರ್ಥಿ ವೇತನ ದೊರೆಯುವಂತೆ ಮಾಡಿದ್ದರು.

1932ನೆ ಇಸವಿಯೆಂದು ತೋರುತ್ತದೆ. ಅಂದು ಪುತ್ತೂರು ತಾಲೂಕು ಕಚೇರಿಯಲ್ಲಿ ಗುತ್ತಿಗೆಗಳ ಹರಾಜು. ನಾವು ಕೆಲವರು ವಿದ್ಯಾರ್ಥಿಗಳು ಪ್ರೇಕ್ಷಕರಾಗಿ ಹೋಗಿದ್ದವರು ಮಾರ್ಗದ ಬದಿಯಲ್ಲಿ ನಿಂತು ನೋಡುತ್ತಿದ್ದೆವು. ಪುತ್ತೂರಿನ ರಾಮ ನಾಯಕ ಎಂಬವರು ಘೋಷಣೆ ಮಾಡುತ್ತ ಕಚೇರಿ ಪ್ರವೇಶಿಸಿದಾಗ ಅವರನ್ನು ಪೊಲೀಸರು ಹೊಡೆದರು. ಅವರು ಕೆಳಗೆ ಬಿದ್ದರು. ಕೆಳಗೆ ಬಿದ್ದ ಅವರ ಕಾಲುಗಳನ್ನು ಹಿಡಿದು ಪೊಲೀಸರು ದರದರನೆ ಎಳೆದು ತಂದರು. ಅವರ ಬೆನ್ನಿಂದ ರಕ್ತ ಸುರಿಯತೊಡಗಿತು. ಅದನ್ನು ನೋಡಿದ ವಿದ್ಯಾರ್ಥಿ ವೃಂದ ಆವೇಶಗೊಂಡು ಪಾನನಿರೋಧ ಘೋಷಣೆ ಹೇಳುತ್ತ ಕಚೇರಿಯೊಳಗೆ ನುಗ್ಗಿತು. ಪೊಲೀಸರು ಬೆತ್ತದ ಛಡಿ ಕೊಡುತ್ತ ಸಿಕ್ಕಿದವರನ್ನೆಲ್ಲ ಬಸ್ಸಿನಲ್ಲಿ ತುಂಬಿಸಿ ಸ್ಟೇಷನಿಗೊಯ್ದರು. ಅಲ್ಲಿ ನಾವು ಸಂಜೆವರೆಗೆ ಘೋಷಣೆ ಕೂಗುತ್ತಿದ್ದೆವು. ಸಂಜೆ ನಮ್ಮೆಲ್ಲರ ಬಿಡುಗಡೆಯಾಯಿತು.

ನಾನು ಸ್ಟೇಷನಿನಿಂದ ಹೊರಬರುವಾಗ ಗೇಟಿನ ಬಳಿ ಶಿವರಾಯರ ಮನೆಯ ಕೆಲಸದಾಳು ನಿಂತಿದ್ದ. ನನ್ನನ್ನು ಕರೆಯುತ್ತಾರೆಂದು ಹೇಳಿದ. ನಾನು ಅವರೊಂದಿಗೆ ಶಿವರಾಯರ ಮನೆಗೆ ಹೋದೆ. ಅವರು ತಮ್ಮ ವಕೀಲ ಚಾವಡಿಯಲ್ಲಿದ್ದರು. ಅವರ ಹಿಂದೆ ಹೋಗಿ ನಿಂತೆ. ಯಾವಾಗಲೂ ಹಿಂದೆ ನಿಂತವನೊಡನೆ, ಅವರು ಕುಳಿತಲ್ಲಿಂದ ನನಗೆ ಹೇಳುವುದನ್ನು ಹೇಳಿ ಕಳುಹಿಸುತ್ತಿದ್ದರು. ಅಂದು ಮಾತ್ರ ಬಳಿಗೆ ಕರೆದು ಬೆಂಚಿನ ಮೇಲೆ ಕುಳಿತುಕೊಳ್ಳುವಂತೆ ಸಂಜ್ಞೆ ಮಾಡಿದರು. ನಾನು ಭಯದಿಂದ ಮುದುಡಿ ಹೋಗಿದ್ದೆ. ಅವರು ಅಷ್ಟು ಗಂಬೀರವಾಗಿ ನನಗೆ ಕಾಣುತ್ತಿದ್ದರು. ಅವರು ನನ್ನನ್ನೇ ಒಮ್ಮೆ ದಿಟ್ಟಿಸಿ ಹೀಗೆ ಹೇಳಿದರು –

‘‘ಇದು ನಿನ್ನಂಥವರು ಮಾಡುವ ಕೆಲಸವಲ್ಲ. ನೀನು ಮಾಡದಿದ್ದರೂ ಮಾಡುವ ಹಲವು ಮಂದಿ ಇದ್ದಾರೆ. ಆದರೆ ನೀನು ನಿನ್ನ ತಾಯಿಗೆ ಸಹಾಯ ಮಾಡುತ್ತ ವಿದ್ಯಾವಂತನಾಗಿ ಆಕೆಗೆ ಅನ್ನ ಕೊಡುವವನಾಗಬೇಕು. (ಆಗ ನಮ್ಮ ತಂದೆಯವರು ನಿಧನರಾಗಿ ಆರೇಳು ವರ್ಷಗಳಾಗಿದ್ದವು.) ದೇಶಭಕ್ತಿಯಿರಬೇಕು. ಅದಕ್ಕಾಗಿ ಮೌನವಾಗಿ ಎಷ್ಟೋ ಕೆಲಸಗಳನ್ನು ಮಾಡಬಹುದು. ಅಂಥವುಗಳನ್ನು ಮಾಡು. ಇನ್ನು ಮುಂದೆ ಇಂಥ ಚಳುವಳಿಗೆ ಇಳಿಯಬೇಡ.’’

ಅವರ ಮಾತುಗಳನ್ನು ಭಯಭಕ್ತಿಯಿಂದ ಕೇಳಿ ‘ಆಯ್ತು’ ಮಾಡುತ್ತೇನೆಂದು ಮಾತು ಕೊಟ್ಟು ನಮಸ್ಕಾರ ಮಾಡಿದೆ. ‘ಹೋಗು’ ಎಂದು ಬೆನ್ನು ತಟ್ಟಿದರು. ಆಗ ನನಗೆ, ನನ್ನ ಅಭ್ಯುದಯದಲ್ಲಿ ಅವರಿಗೆಷ್ಟು ಆಸಕ್ತಿಯಿತ್ತೆಂಬುದರ ಅರಿವಾಯ್ತು. ಅವರ ಮಾತುಗಳನ್ನೇ ಮೆಲುಕು ಹಾಕುತ್ತ ಮನೆ ಸೇರಿದೆ.

ನಾನು ಏಳನೇ ತರಗತಿಯಲ್ಲಿರುವಾಗ ‘ವಿದ್ಯಾದಾಯಿನಿ’ ಎಂಬ ಹಸ್ತಾಕ್ಷರಿ ಮಾಸಪತ್ರಿಕೆ ಯನ್ನು ತಯಾರಿಸಿದೆ. ಸಂಪಾದಕನಾದ ನಾನೇ ಸಂಪಾದಕೀಯ ಮತ್ತು ಇತರ ಬರಹಗಳನ್ನು ತುಂಬಿಸುತ್ತಿದ್ದೆ. ನನ್ನ ಸಹಪಾಠಿ ಕೆ. ಮಹಮ್ಮದ್ ಬ್ಯಾರಿ ಐತಿಹಾಸಿಕ ಕಥೆಗಳನ್ನು ಬರೆಯುತ್ತಿದ್ದರು. ಇನ್ನು ಒಬ್ಬಿಬ್ಬರು ಕವನ, ಒಗಟುಗಳನ್ನು ಬರೆಯುತ್ತಿದ್ದರು. ಪ್ರಥಮ ಸಂಚಿಕೆಯನ್ನು ತಯಾರಿಸಿ ಶಿವರಾಯರ ಮುಂದಿಟ್ಟೆ. ಅವರು ಅದನ್ನು ಸಂತೋಷದಿಂದ ತೆಗೆದುಕೊಂಡರು.

ಆಮೇಲೆ ಕೆಲವು ದಿನಗಳ ಬಳಿಕ ಆ ಪತ್ರಿಕೆಯು ಪ್ರೋತ್ಸಾಹಕರ ಅಬಿಪ್ರಾಯದೊಡನೆ ಮರಳಿ ಶಾಲೆಗೆ ಬಂತು. ಮುಖ್ಯೋಪಾಧ್ಯಾಯರು ಅದನ್ನು ಪ್ರೋತ್ಸಾಹಿಸಬೇಕೆಂದು ಶಿವರಾಯರು ಸೂಚಿಸಿದ್ದರು. ‘ವಿದ್ಯಾದಾಯಿನಿ ಹಲವು ವರ್ಷಗಳವರೆಗೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಮುಂದೆ ನಿಂತು ಹೋಯಿತು.’’1

ನನ್ನ ತಂದೆಯವರು ತಾವು ಓದುತ್ತಿದ್ದ ಶಾಲೆಯ ಚಟುವಟಿಕೆಗಳ ಕೇಂದ್ರ ವ್ಯಕ್ತಿಯಾಗಿದ್ದ ರಲ್ಲದೆ ಪುತ್ತೂರಲ್ಲಿ ನಡೆಯುತ್ತಿದ್ದ ಸಾಹಿತ್ಯಿಕ ಸಾಂಸ್ಕೃತಿಕ, ಚಟುವಟಿಕೆಗಳ ಸಕ್ರಿಯ ಪಾಲುಗಾರರೂ ಆಗಿದ್ದರು. ಆ ಬಗ್ಗೆ ಅವರ ಸಹಪಾಠಿ ಹಾಗೂ ಆತ್ಮೀಯ ಗೆಳೆಯರಾಗಿದ್ದ ಎಂ.ಎಂ.ಸಿ. ಭಂಡಾರಿ ಅವರು ತಮ್ಮ ಗೆಳೆಯನ ಬಗ್ಗೆ ತಿಳಿಸಿದ್ದು ಈ ರೀತಿ ಇದೆ – ‘‘1921 ರಿಂದ 1934ರವರೆಗಿನ ಅವಧಿಯಲ್ಲಿ ಅಂದರೆ ಪುತ್ತೂರಿನ ಎಲಿಮೆಂಟರಿ ಶಾಲೆಯ ಹಾಗೂ ಬೋರ್ಡು ಹೈಸ್ಕೂಲುಗಳಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಲ್ಲಾ ಉಪಾಧ್ಯಾಯರ ನಿಕಟ ಸಂಪರ್ಕವನ್ನು ಪಿ.ಕೆ. ಹೊಂದಿದ್ದರು. ಅವರಲ್ಲಿ ಸಾಹಿತ್ಯದತ್ತ ಒಲವು ಮೂಡಿಸಿದವರು ಮತ್ತು ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವಲ್ಲಿ ಪ್ರೋತ್ಸಾಹ ನೀಡಿದವರು ಮುಖ್ಯೋಪಾಧ್ಯಾಯರಾಗಿದ್ದ ಪಾಂಡುರಂಗ ರಾಯರು, ರಾಮಪ್ಪಯ್ಯ ಮಾಸ್ತರರು, ಸ್ಕೌಟು ಮಾಸ್ಟರ್ ಆಗಿದ್ದ ಮುಕುಂದ ಬಾಳಿಗರು, ಡ್ರಾಯಿಂಗ್ ಮಾಸ್ಟರ್ ಬಾಬು ಅವರು, ಕನ್ನಡ ಕಲಿಸುತ್ತಿದ್ದ ಹರಿಯಪ್ಪ ಮಾಸ್ಟ್ರು, ರುಕ್ಮಯ ಗೌಡರು ಮೊದಲಾದವರು. ಸ್ಕೌಟಿಂಗ್, ವ್ಯಾಯಾಮ, ನಾಟಕ, ಬರವಣಿಗೆ, ಚಿತ್ರಕಲೆ, ಚರ್ಚೆ, ಭಾಷಣ, ಪ್ರಬಂಧ – ಹೀಗೆ ಎಲ್ಲಾ ವಿಚಾರಗಳಲ್ಲೂ ಭಾಗವಹಿಸಿ ಮುಂದೆ ಬಂದವರು ಅವರು. ಅವರ ಮೇಲ್ಪಂಕ್ತಿಯನ್ನು ಅನುಸರಿಸಿಕೊಂಡು ಹೋದವ ನಾನು. ಶಿವರಾಮ ಕಾರಂತರು ಬಂದ ಮೇಲಂತು ಪಿ.ಕೆ.ಗೆ ಕಾರಂತರಿಂದ ಕರೆ ಬರುತ್ತಲೇ ಇತ್ತು.

ಕನ್ನಡ ಕಲಿಸುತ್ತಿದ್ದ ಹಾಗೂ ಸಂಸ್ಕೃತ ಕಲಿಸುತ್ತಿದ್ದ ಶಂಭು ಶರ್ಮರಿಂದಲೇ ತಾವು ಕನ್ನಡ ಪಂಡಿತರಾಗಬೇಕೆಂಬ ಆಸೆ ಪಿ.ಕೆ.ಗೆ ಉಂಟಾದುದು. ರಾಮನ್ ನಂಬಿಯಾರರ ಪ್ರೋತ್ಸಾಹದ ಫಲವಾಗಿ ಪಿ.ಕೆ., ಎಸ್.ಎಸ್.ಎಲ್.ಸಿ. ಮುಗಿದೊಡನೆ ಅಧ್ಯಾಪನ ತರಬೇತಿಗಾಗಿ ಮಂಗಳೂರಿಗೆ ಬಂದರು. 1934ರಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ದ್ವಿತೀಯ ದರ್ಜೆಯಲ್ಲಿ ಪಿ.ಕೆ. ಉತ್ತೀರ್ಣರಾದರು. ಕನ್ನಡದಲ್ಲಿ 76 ಅಂಕಗಳನ್ನು ಪಡೆದುದು ಕನ್ನಡದ ಬಗ್ಗೆ ಅವರಿಗಿದ್ದ ಆಸಕ್ತಿಯನ್ನು ತೋರಿಸುತ್ತದೆ.

ಮಂಗಳೂರಿನ ಅಧ್ಯಾಪನ ತರಬೇತಿಯ ಸಂದರ್ಭದಲ್ಲಿ ಕನ್ನಡ ಪಂಡಿತರಾಗಬೇಕೆಂಬ ಅಬಿಲಾಷೆ, ಅದು ಮೊದಲಿಂದಲೂ ಇದ್ದುದು, ಈಗ ತೀವ್ರವಾಯಿತು. 1937ರಲ್ಲಿ ಅಧ್ಯಾಪನ ತರಬೇತಿ ಮುಗಿಸಿದ ಅವರು ಮಂಗಲ್ಪಾಡಿ ಹಾಯರ್ ಎಲಿಮೆಂಟರಿ ಶಾಲೆಯಲ್ಲಿ ಮೂರು ತಿಂಗಳು ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಮೊಳಹಳ್ಳಿ ಶಿವರಾಯರ ಸೂಚನೆಯಂತೆ ಮೂರುವರ್ಷ ಮಂಚಿಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮೊಳಹಳ್ಳಿ ಶಿವರಾಯರ ಆದರ್ಶ ಇವರಲ್ಲಿ ಪಡಿ ಮೂಡಿತ್ತು.’’2

ಮೊಳಹಳ್ಳಿ ಶಿವರಾಯರ ಆದರ್ಶ ಪಿ.ಕೆ.ಯವರಲ್ಲಿ ಹೇಗೆ ದುಡಿದುಕೊಳ್ಳುತ್ತಿತ್ತು? ಅವರ ಮಾತುಗಳಲ್ಲೇ ಕೇಳಬಹುದು. ‘‘ನಾನು ಮಂಚಿಯಲ್ಲಿ ಉಪಾಧ್ಯಾಯನಾಗಿದ್ದಾಗ ಹರಿಜನರ ಕೇರಿಗಳಿಗೆ ಹೋಗುವುದು, ಅವರ ಮಕ್ಕಳು ಶಾಲೆಗೆ ಬರುವಂತೆ ಹೇಳುವುದು, ಶಾಲೆಗಳಲ್ಲಿ ಮಹಾಪುರುಷರ ದಿನಗಳನ್ನಾಚರಿಸಿ ಊರವರಿಗೂ ತಿಳುವಳಿಕೆ ನೀಡುವ ಕೆಲಸ ಮಾಡುತ್ತಿದ್ದೆ.’’3

ಹುಮ್ಮಸ್ಸಿನ ಬಿಸಿರಕ್ತದ ಹರೆಯ. ದೇಶದಲ್ಲಿ ದೇಶಭಕ್ತಿಯ ಉದಯದ ಕಾಲ.
ಗಾಂಧೀಜಿಯವರ ಸತ್ಯ, ಅಹಿಂಸೆ, ಖಾದಿ ಪ್ರಚಾರ, ಹರಿಜನೋದ್ಧಾರ, ಮಧ್ಯಪಾನ ನಿಷೇಧ ಮುಂತಾದ ಧ್ಯೇಯಗಳು ಇಂಥ ಆದರ್ಶ ಯುವಕರನ್ನು ತನ್ನತ್ತ ಸೆಳೆದುಕೊಂಡು ಅವುಗಳಿಗೆ ಬದ್ದರಾಗಿಸುವ ಕಾಲ. ಅದರ ಪರಿಣಾಮ ಹಲವರಿಗೆ ಹಲವಾರು ತೆರ. ತಂದೆಯವರ ಆಗಿನ ಚಟುವಟಿಕೆ ಬಗ್ಗೆ ತಿಳಿಸಿದವರು ಎಂ.ಎಂ.ಸಿ. ಭಂಡಾರಿ ಅವರು – ‘‘1934ನೇ ಇಸವಿ. ಪುತ್ತೂರಿನ ಅಡ್ಯರ ಕಟ್ಟೆ (ಈಗಿನ ಗಾಂದಿಕಟ್ಟೆ)ಯಲ್ಲಿ ಮಹಾತ್ಮಾ ಗಾಂಧೀಜಿಯವರ ಭಾಷಣ. ಕಿಕ್ಕಿರಿದ ಜನ. ದೇಶಭಕ್ತಿ ಧಮನಿ ಧಮನಿಯಲ್ಲಿ ಉಕ್ಕಿಸುವಂತಹ ಭಾಷಣ. ಅದರ ಪರಿಣಾಮ ನೆರೆದ ಜನ ತಮ್ಮಲ್ಲಿದ್ದ ಹಣ, ಒಡವೆ ಇತ್ಯಾದಿಗಳನ್ನು ತಮ್ಮ ದೇಶಾಬಿಮಾನದ ದ್ಯೋತಕವಾಗಿ ಗಾಂಧೀಜಿಯವರಿಗೆ ಸ್ಥಳದಲ್ಲೇ ನೀಡಿದರು. ಆಗ ಪಿ.ಕೆ.ಯವರ ಕೈಯ್ಯಲ್ಲಿ ಒಂದು ಚಿನ್ನದ ಉಂಗುರವಿತ್ತು. ಅವರು ಅದನ್ನು ತೆಗೆದು ಗಾಂಧೀಜಿಯವರಿಗೆ ಅರ್ಪಿಸಿದರು. ಗಾಂಧೀವಾದ ಗಳನ್ನು ಪಾಲಿಸುವೆನೆಂದು ಶಪಥ ಮಾಡಿದರು.’’ ಅಂದಿನಿಂದ ತಂದೆಯವರು ಅಪ್ಪಟ ಗಾಂಧೀ ವಾದಿಗಳಾದರು. ಸ್ವಚ್ಛ ಶುಭ್ರ ಬಿಳಿಯ ಕಚ್ಚೆ, ಅದರ ಮೇಲೆ ಬಿಳಿಯ ಖಾದಿ ಜುಬ್ಬಾ, ಭುಜದ ಮೇಲೊಂದು ಹಸುರಂಚಿನ ಖಾದಿ ಶಾಲು – ಇದು ಅವರ ನಿತ್ಯದ ಉಡುಗೆ. ಕೊನೆಯುಸಿರು ಇರುವವರೆಗೂ ತೊಡುಗೆಯಲ್ಲಿ ವ್ಯತ್ಯಾಸವಿಲ್ಲ. ತಂದೆಯವರಿಗೆ ಸಂಶೋಧನೆ, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲೆಲ್ಲ ಅಪಾರ ಆಸಕ್ತಿ. ತಾರುಣ್ಯದಲ್ಲಿ ಅವರ ಕ್ರಿಯಾಶೀಲತೆ ಎಲ್ಲರೂ ಗಮನಿಸಿದ ಮುಖ್ಯ ಅಂಶ. ಸಾಹಿತ್ಯದ ಸಂಶೋಧನೆಯನ್ನು ಹೊರತು ಪಡಿಸಿದ ಅನ್ಯ ಸಂಶೋಧನೆಗಳಲ್ಲೂ ಇವರಿಗೆ ಅಷ್ಟೆ ಉತ್ಸಾಹವಿತ್ತು ಎಂಬುದನ್ನು ಇದೊಂದು ಉದಾಹರಣೆ.

ಕಂಚಿನಡ್ಕ ಗುಡ್ಡದ ಅದ್ಭುತ ಗುಹೆ

2-7-39 ಕಂಚಿನಡ್ಕ :- ಮಂಗಳೂರು ತಾಲೂಕು ಕಂಚಿನಡ್ಕ ಪದವಿನಲ್ಲಿ (ಮಂಚಿ – ಇರಾ ಸಮೀಪ ಮೂಡು ಮತ್ತು ಪಡು ಗ್ರಾಮಗಳ ನಡುವೆ) ಒಂದು ದೊಡ್ಡ ಗುಹೆಯಿದ್ದಂತೆ ಕಂಡುಬಂದಿದೆ.

ಮಂಚಿ ಪಂಚಾಯತ್ ಶಾಲೆಯ ಅಧ್ಯಾಪಕರಾದ ಶ್ರೀ ಪಿ.ಕೆ. ನಾರಾಯಣ ಇವರು ಮಂಚಿ ಪಟೇಲ ಶಂಕರನಾರ್ಣಪ್ಪಯ್ಯ, ಶ್ರೀ ಪತ್ತುಮುಡಿ ರಾಮಕೃಷ್ಣ ರಾವ್, ಶ್ರೀ ಪತ್ತುಮುಡಿ ವಾಸುದೇವ ರಾವ್, ಶ್ರೀ ವೆಂಕಟ ರಾವ್, ಶ್ರೀ ನೂಜಿಬೈಲು ಶಂಕರಭಟ್ಟ, ಶ್ರೀ ನೂಜಿಪಾಡಿ ಸಂಕಣ್ಣಯ್ಯ, ಶ್ರೀ ಪತ್ತುಮುಡಿ ಗೋಪಾಲ ರಾವ್ – ಇವರೊಡನೆ ಕೆಲಕಾಲದ ಹಿಂದೆ ಆ ಗುಹೆಯನ್ನು ಪರೀಕ್ಷಿಸಲೋಸುಗ ಟಾರ್ಚ್‌ದೀಪಗಳನ್ನು ಹಿಡಿದುಕೊಂಡು ಹೋದರು. ಗುಹೆ ಯನ್ನು ಪ್ರವೇಶಿಸಿದಂತೆ ಒಬ್ಬ ಮನುಷ್ಯನು ಮಾತ್ರ ನಡೆದುಕೊಂಡು ಹೋಗುವಂತಿತ್ತು. ಒಳಗೆ ಒಂದು ಕೊಳವೂ ಇತ್ತು.

ಗುಹೆಯಲ್ಲಿ ಒಂದೊಂದು ಫರ್ಲಾಂಗಿಗೆ ಅಲ್ಲಲ್ಲಿ ಅಡ್ಡವಾಗಿ ಮಣ್ಣನ್ನು ಮುಚ್ಚಿಡಲಾಗಿತ್ತು. ಅದರೊಳಗೆ ಕಾಣುವ ಚಿಕ್ಕ ತೂತನ್ನು ಇವರು ಕೊರೆದು ಸಾಹಸದಿಂದ ಮುಂದುವರೆದರು.

ಗುಹೆಯು ನೈಸರ್ಗಿಕವಾದುದೇನೂ ಅಲ್ಲ. ಮಾನವ ನಿರ್ಮಿತ. ಆದರೆ ಇದನ್ನು ಯಾರು ಯಾವ ಕಾಲದಲ್ಲಿ ಕೊರೆದರು, ಇದರ ಉಪಯೋಗವೇನಿತ್ತು, ಅದೆಲ್ಲ ಮುಂದೆ ಬೆಳಕಿಗೆ ಬರಬೇಕಾಗಿದೆ.’’1

1928ರಿಂದ 1940ರ ವರೆಗೆ ಪುತ್ತೂರು ಕಾರಂತರ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳ ಕಾರಣಗಳಿಂದಾಗಿ ಮಂಗಳೂರು, ಮೈಸೂರು, ಬೆಂಗಳೂರಿನ ಸಾಹಿತಿಗಳನ್ನು ಆಕರ್ಷಿಸುವ ಕೇಂದ್ರವಾಗಿತ್ತಲ್ಲದೆ ಆಯಾ ಊರುಗಳ ಮಹಾನ್ ಸಾಹಿತಿಗಳ ಭಾಷಣ, ಕವಿಗೋಷ್ಠಿ ಮೊದಲಾದುವುಗಳೂ ಸಾಹಿತ್ಯ ರಸಿಕರಿಗೆ ಸಾಹಿತ್ಯಾಬಿಮಾನಿಗಳಿಗೆ ಒಂದು ಆಪ್ಯಾಯಮಾನವಾಗಿತ್ತು. ಮೊಳಹಳ್ಳಿ ಶಿವರಾಯ ಹಾಗೂ ಶಿವರಾಮ ಕಾರಂತರ ನೇತೃತ್ವದಲ್ಲಿ ನಡೆದ ಈ ಚಟುವಟಿಕೆಗಳ ಬಗ್ಗೆ ಸ್ವತಃ ತಂದೆಯವರು ದೀರ್ಘವಾದ ಪ್ರಬಂಧ ಬರೆದಿದ್ದಾರೆ. ಸ್ವಭಾವತಃ ಸಂಕೋಚ ಪ್ರಕೃತಿಯವರಾದ ತಂದೆಯವರು ಕಾರಂತರ ಚಟುವಟಿಕೆಗಳಿಗೆ ಪ್ರಾಮುಖ್ಯತೆವಿತ್ತರಲ್ಲದೆ ತಮ್ಮ ಪಾತ್ರದ ಬಗ್ಗೆ ತುಂಬಾ ಸೀಮಿತವಾಗಿ ಹೇಳಿಕೊಂಡಿದ್ದಾರೆ.

‘‘ಆಗ ಮೊಳಹಳ್ಳಿ ಶಿವರಾಯರು ಪುತ್ತೂರು ತಾಲೂಕು ಬೋರ್ಡಿನ ಅಧ್ಯಕ್ಷರಾಗಿದ್ದರು. ಅವರ ಪ್ರೋತ್ಸಾಹದಿಂದ ಆ ತಾಲೂಕಿನ ಎಲ್ಲ ಹಿರಿಯ ಪ್ರಾಥಮಿಕ ಶಾಲೆಗಳು, ಕೆಲ ಪ್ರಾಥಮಿಕ ಶಾಲೆಗಳೂ ವಿವಿಧ ರೀತಿಯ ಚಟುವಟಿಕೆಗಳ ಕೇಂದ್ರಗಳಾಗಿದ್ದವು. ಶ್ರೀ ಮುಕುಂದ ಬಾಳಿಗರೇ ಮೊದಲಾದವರು ಸೇರಿ ಏಪ್ರಿಲ್ ಮೇ ತಿಂಗಳುಗಳ ರಜಾ ಕಾಲದಲ್ಲಿ ನಾಟಕಗಳನ್ನಾಡುತ್ತಿದ್ದರು. ಶಿವರಾಮ ಕಾರಂತರ ನಾಟಕಗಳನ್ನು ಅಬಿನಯಿಸುವಾಗ ಕಾರಂತರೇ ಬಂದು ನಾಟಕಗಳ ತರಬೇತು ಮಾಡುತ್ತಿದ್ದರು. ಶ್ರೀ ವಿ. ಸೀತಾರಾಮಯ್ಯನವರ ‘‘ಸೋಹ್ರಾಬ್-ರುಸ್ತುಮ್’’ ನಾಟಕ ವನ್ನು ಅಲ್ಲಿನ ಯುವಕರು ಅಬಿನಯಿಸಿದಾಗ ಕಾರಂತರು ಬಂದು ಒಂದೆರಡು ಸಲ ತರಬೇತಿ ಗಳನ್ನು ಕೊಟ್ಟಿದ್ದರು. ಇದರಲ್ಲಿ ಪಡುಕೋಣೆ ರಮಾನಂದ ರಾಯರು (ರುಸ್ತುಮ್) ಪಡುಕೋಣೆ ಸೀತಾದೇವಿ (ತಾಹಮಿನೆ) ಪಿ.ಕೆ. ನಾರಾಯಣ (ಸೋಹ್ರಾಬ್) ಮುಂತಾಗಿ ಹಲವರು ಪಾತ್ರ ವಹಿಸಿದ್ದರು. ಕಾರಂತರು ಬರೆದ ‘ನಿಶಾಮಹಿಮೆ’ ಎಂಬು ಕುಡುಕುತನದ ಕೆಡುಕನ್ನು ತೋರಿಸುವ ದುರಂತ ನಾಟಕವನ್ನು ಶಾಲಾ ವಿದ್ಯಾರ್ಥಿಗಳೇ ಅಬಿನಯಿಸಿದ್ದರು.

ಪ್ರತಿದಿನ ಭಾಷಣಗಾರರ ಪರಿಚಯವನ್ನು ಕಾರಂತರೇ ಮಾಡುತ್ತಿದ್ದರು. ಅನಂತರ ಗ್ರೀನ್ ರೂಮಿಗೆ ಬಂದು ಪಾತ್ರಗಳಿಗೆ ಬಣ್ಣ ಹಾಕುವ ಉಡಿಗೆ-ತೊಡಿಗೆ ಅಳವಡಿಸಿಕೊಡುವ ಕೆಲಸ ಮಾಡುತ್ತಿದ್ದರು. ಅಂದಂದಿನ ನಾಟಕಾದಿಗಳಿಗೆ ಬೇಕಾದ ಹಾಗೆ ರಂಗಭೂಮಿಯ ವ್ಯವಸ್ಥೆ ಮಾಡಬೇಕಾಗಿತ್ತು. ಅದನ್ನು ಕಾರಂತರ ನಿರ್ದೇಶನದಂತೆ ಪಿ. ಮಾಲಿಂಗ ಮತ್ತು ಪಿ.ಕೆ. ನಾರಾಯಣರು ಮಾಡುತ್ತಿದ್ದರು.

ಕಾರಂತರು ಶೇಕ್ಸ್‌ಪಿಯರ್ ಮಹಾಕವಿಯ ‘ಹೆಮ್ಲೆಟ್’ ನಾಟಕವನ್ನು ‘ಹೇಮಂತ’ ಎಂಬ ಹೆಸರಿಂದ ಭಾಷಾಂತರಿಸಿದ್ದರು. ಅದರ ಕೆಲವು ದೃಶ್ಯಗಳನ್ನು ದಸರಾ ಉತ್ಸವದಲ್ಲಿ ಒಮ್ಮೆ ಪ್ರದರ್ಶಿಸಿದ್ದರು. ಸ್ವತಃ ಕಾರಂತರೇ ಹೇಮಂತನ ಪಾತ್ರ ವಹಿಸಿದ್ದರು. ಪಡುಕೋಣೆ ರಮಾನಂದ ರಾಯರು ಚಿಕ್ಕತಂದೆಯ ಪಾತ್ರವಹಿಸಿದ್ದರು. ನನಗೆ ಹೇಮಂತನ ತಾಯಿಯ ಪಾತ್ರ ಬಂದಿತ್ತು. ಆ ನಾಟಕದ ತರಬೇತಿ ಹಾಗೂ ಪ್ರಯೋಗಗಳಲ್ಲಿ ನಮಗೆ ತುಂಬ ಅನುಭವಗಳಾದುವು.

ಕಾರಂತರು ಬರೆದ ಹೆಚ್ಚಿನ ನಾಟಕಗಳೆಲ್ಲ ದಸರಾ ಮಹೋತ್ಸವಗಳಲ್ಲಿ ಬರೆದ ಪ್ರಯೋಗ ಗೊಂಡಿವೆ. ಕೆಲವು ಸಲ ಆಶುನಾಟಕಗಳನ್ನು ಆಡಿದ್ದುಂಟು. ಆ ನಾಟಕದಲ್ಲಿ ಭಾಗವಹಿಸು ವವರನ್ನು ಕಾರಂತರು ರಾತ್ರಿ ಒಟ್ಟುಗೂಡಿಸಿ ಅದರ ಕಥೆಯನ್ನು ಹೇಳಿ ಪಾತ್ರಗಳನ್ನು ನಮಗೆಲ್ಲ ಹಂಚುತ್ತಿದ್ದರು. ಆಗಲೇ ಒಂದು ರಿಹರ್ಸಲ್ ಆಗುತ್ತಿತ್ತು. ಇಂಥ ಆಶುನಾಟಕಗಳಲ್ಲಿ ಕಾರಂತರೇ ಪ್ರಮುಖ ಪಾತ್ರವಹಿಸಿ ನಾವು ನಮ್ಮ ಪಾತ್ರಗಳನ್ನು ಉತ್ತಮವಾಗಿ ಅಬಿನಯಿಸುವಂತೆ ಮಾಡುತ್ತಿದ್ದರು.

ಕಾರಂತರು ಬರೆದು ನಿರ್ದೇಶಿಸಿದ ಹಲವು ನಾಟಕಗಳಲ್ಲಿ ಪಾತ್ರವಹಿಸುವ ಭಾಗ್ಯ ನನಗೆ ದೊರೆತಿತ್ತು. ಕಾರಂತರಿಂದ ಹೇಳಿಸಿಕೊಳ್ಳುವುದು ಸುಲಭವಲ್ಲ. ಅವರು ಕಲಿಸುವಾಗ ನಗಿಸಿ, ಅಳಿಸಿ, ನಮ್ಮನ್ನು ತಿದ್ದುತ್ತಿದ್ದರು. ಕಾರಂತರಿಗೆ ಎಷ್ಟು ಬೇಗ ಸಿಟ್ಟು ಬರುತ್ತಿತ್ತೋ ಅಷ್ಟೇ ಬೇಗ ಅದು ಮಾಯವಾಗಿ ಅವರ ಪ್ರೀತಿಯ ನಗೆ, ಮುಖದಲ್ಲಿ ಮೂಡಿ ಬರುತ್ತಿತ್ತು. ಆದರೆ ತನ್ನೊಡನೆ ಕೆಲಸ ಮಾಡಿದ ದೊಡ್ಡವರ, ಸಣ್ಣವರ ನೆನಪು ಅವರಿಗಿರುತ್ತದೆ.’’1

ಪ್ರಾರಂಭದಲ್ಲಿನ ಅವರ ಬರವಣಿಗೆ ಆಸಕ್ತಿ, ಶ್ರೀಗಳಾದ ಶಿವರಾಮ, ಶಿವರಾಯರ ನೇತೃತ್ವದಲ್ಲಿ ನಡೆಯುತ್ತಿದ್ದ ಸಾಹಿತ್ಯ ಚಟುವಟಿಕೆಗಳ ಪ್ರಭಾವ, ಸಾಹಿತಿಗಳ ಸಂಪರ್ಕ, ಸಾಹಿತ್ಯದ ಮೇಲಿನ ಒಲವು – ಅವರು ಕನ್ನಡ ಪಂಡಿತರಾಗಲು ಒತ್ತಾಸೆ ನೀಡಿದವು. ಅದರ ಪರಿಣಾಮ 1939ರಲ್ಲಿ ಮದ್ರಾಸು ವಿಶ್ವವಿದ್ಯಾನಿಲಯದ ಕನ್ನಡ ವಿದ್ವಾನ್ ಪರೀಕ್ಷೆಯನ್ನು ಮುಗಿಸಿದರು. ತಂದೆಯವರ ಜತೆಯಲ್ಲಿ ಹಿರಿಯ ಸಾಹಿತಿ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹಾಗೂ ಶ್ರೀ ಜಿ.ಪಿ. ರಾಜರತ್ನಂ ಅವರು ವಿದ್ವಾನ್ ಪರೀಕ್ಷೆಗೆ ಕಟ್ಟಿದ್ದರು. ಕಾರ್ಕಳದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಜಿ.ಪಿ. ರಾಜರತ್ನಂ ಅಧ್ಯಕ್ಷತೆ ವಹಿಸಿದ್ದರು. ತಂದೆಯವರ ಜತೆಯಲ್ಲಿ ನಾನೂ ಸಮ್ಮೇಳನಕ್ಕೆ ಹೋಗಿದ್ದೆ. ರಾಜರತ್ನಂ ಅವರ ಹಸ್ತಾಕ್ಷರ ಪಡೆಯಲು ಹೋದಾಗ ಅವರು, ‘‘ನನ್ನ ಒಂದು ಪುಸ್ತಕ ಖರೀದಿಸಿಕೊಂಡು ಬನ್ನಿ. ಅದರಲ್ಲಿ ಸಹಿಹಾಕುವೆ’’ ಎಂದು ಹೇಳಿದರು. ನಾನು ಒಂದು ಪುಸ್ತಕ ಖರೀದಿಸಿ ತಂದೆಯವರ ಜತೆ ಹೋದಾಗ ಅವರಿಗೆ ನನ್ನ ಪರಿಚಯವನ್ನು ತಂದೆಯವರು ಮಾಡಿಕೊಟ್ಟರು. ಆಗ ಅವರು, ‘‘ಏನಮ್ಮ ನಾನು ಪಿ.ಕೆ.ಯವರ ಮಗಳು ಎಂದು ಹೇಳಬಾರದೆ? ಪಿ.ಕೆ.ಯವರಲ್ಲಿ ನನ್ನ ಹಲವಾರು ಪುಸ್ತಕಗಳಿವೆ’’ ಹೇಳಿದರು. ನಾನು ಮೌನವಾಗಿ ಅವರ ಹಸ್ತಾಕ್ಷರ ಪಡೆದೆ. ತರುವಾಯ 1978ರಲ್ಲಿ ಬೆಂಗಳೂರಲ್ಲಿ ನನ್ನ ಮದುವೆಯಾದಾಗ ಜಿ.ಪಿ. ರಾಜರತ್ನಂ ಅವರು ಮದುವೆಗೆ ಬಂದು ತಾನು ಬರೆದ ‘‘ಹತ್ತು ವರುಷ’’ ಮತ್ತು ‘‘ಶೃಂಗಾರವಲ್ಲರಿ’’ ಪುಸ್ತಕಗಳನ್ನು ಉಡುಗೊರೆಯಿತ್ತು ಆಶೀರ್ವಾದ ಮಾಡಿ ಹೋದರು.

ಗೊರೂರು ಅವರು ಮದುವೆಗೆ ಬರಲಾಗಲಿಲ್ಲವೆಂದು ಪತ್ರ ಬರೆದಿದ್ದರು. ತರುವಾಯ ನನ್ನ ತಂದೆಯವರು ದಿವಂಗತರಾದಾಗ ನಾನು ಹೊರತಂದ ‘ಸ್ಫಟಿಕ ಮಂಜೂಷ’ (ಪಿ.ಕೆ.ನಾ. ಸ್ಮರಣ ಗ್ರಂಥ)ಕ್ಕೆ ‘ಕಿರಿಯ ಮಿತ್ರನ ಕಣ್ಮರೆ’ ಎಂಬ ಸೊಗಸಾದ ಲೇಖನ ಕಳುಹಿಸಿದ್ದರು.

ವೃತ್ತಿ – ವಿವಾಹ ಜೀವನ

ಶ್ರೀ ಶಿವರಾಮ ಕಾರಂತರ ಶಿಫಾರಸ್ಸಿನ ಮೇಲೆ ತಂದೆಯವರು 1941ರ ಜುಲೈ 18ರಂದು ಮಂಗಳೂರಿನ ಬೆಸೆಂಟ್ ಎಲಿಮೆಂಟರಿ ಶಾಲೆಯಲ್ಲಿ ಕನ್ನಡ ಪಂಡಿತರಾಗಿ ಕೆಲಸಕ್ಕೆ ಸೇರಿದರು. ಅದಕ್ಕೆ ಮೊದಲು ಮಂಗಲ್ಪಾಡಿಯ ಹಾಯರ್ ಎಲಿಮೆಂಟರಿ ಶಾಲೆಯಲ್ಲಿ ಮೂರು ತಿಂಗಳು ಅಧ್ಯಾಪಕರಾಗಿ ಕೆಲಸ ಮಾಡಿದ್ದರಲ್ಲದೆ ಮಂಚಿಯ ಹಾಯರ್ ಎಲಿಮೆಂಟರಿ ಶಾಲೆಯಲ್ಲಿ ಮೂರು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಬೆಸೆಂಟ್ ಎಲಿಮೆಂಟರಿ ಶಾಲೆಯು ಹೈಸ್ಕೂಲು ಆಗಿ ವಿಸ್ತತವಾದಾಗ ತಂದೆಯವರು ಪ್ರೌಢಶಾಲೆಯ ಕನ್ನಡ ಪಂಡಿತರಾದರು. ಶಾಲೆಯಲ್ಲಿ ಅಧ್ಯಾಪನದೊಂದಿಗೆ ಶಾಲೆಯ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ವ್ಯಕ್ತಿ ಆದರು. ಆಗಿನ ಗುರು-ಶಿಷ್ಯ ಸಂಬಂಧ ಆತ್ಮೀಯ ಭಕ್ತಿಭಾವ ಬಂಧ.

1942ರ ಫೆಬ್ರವರಿ 15ರಂದು ಅವರು ವಿವಾಹ ಬಂಧನಕ್ಕೆ ಒಳಗಾದರು. ಮೊದಲ ಮಗು ಹೆಣ್ಣು. ಒಂದು ವರ್ಷ ಎಂಟು ತಿಂಗಳಲ್ಲೇ ವಿದಿವಶವಾದಾಗ ತಂದೆ ತಾಯಿಗಳಿಗೆ ಆಘಾತ. ಸ್ನೇಹಿತರ-ವಿದ್ಯಾರ್ಥಿನಿಯರ ಸಾಂತ್ವನ. ಆಗ ಅಲ್ಲಿ ಸೇರಿದ್ದ ಆತ್ಮೀಯ ಸ್ನೇಹಿತರು ಶ್ರೀಯುತರಾದ ನಿರಂಜನ, ರಾಮಪ್ಪ, ಸದಾಶಿವ, ಮಹಾಲಿಂಗ, ಮದನಪ್ಪ ಮೊದಲಾದವರು. ಇವರು ತಂದೆಯವರ ಜೀವನದ ಕೊನೆಯವರೆಗೂ ಸ್ನೇಹವನ್ನುಳಿಸಿಕೊಂಡು ಬಂದವರು. ಇವರಷ್ಟೇ ಅಲ್ಲ ಸಾಹಿತಿಗಳ, ರಾಜಕೀಯ ಪುಡಾರಿಗಳ, ಶಿಕ್ಷಣ ತಜ್ಞರ, ಪತ್ರಕರ್ತರ – ಹೀಗೆ ಹಲವು ಕ್ಷೇತ್ರಗಳ ಉನ್ನತ ವ್ಯಕ್ತಿಗಳ ಸ್ನೇಹವೂ ಅವರಿಗಿತ್ತು.

ಡಾ| ಶಿವರಾಮ ಕಾರಂತ, ನಿರಂಜನ, ಕಯ್ಯರ ಕಿಂಞ್ಞಣ್ಣ ರೈ, ಜಿ.ಪಿ. ರಾಜರತ್ನಂ, ಮಾಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್.ವಿ. ಪರಮೇಶ್ವರ ಭಟ್ಟ, ಮುಳಿಯ ತಿಮ್ಮಪ್ಪಯ್ಯ, ಹುರುಳಿ ಬೀಮರಾಯರು, ಮ.ವಿ. ಹೆಗ್ಡೆ, ಕೀಕಾನ ರಾಮಚಂದ್ರ, ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟ, ಬೋಳಂತಕೋಡಿ ಈಶ್ವರ ಭಟ್ಟ, ಬಿ.ವಿ. ಬಾಳಿಗಾ, ಸೇವ ನಮಿರಾಜ ಮಲ್ಲ, ಎ.ಬಿ. ಶೆಟ್ಟಿ, ಕೆ.ಕೆ. ಶೆಟ್ಟಿ, ಅಮ್ಮೆಂಬಳ ನಾವಡ ಸಹೋದರರು, ಬಿ.ಎಂ. ಇದಿನಬ್ಬ, ಪಂಜೆ ರಾಮರಾಯರು, ರಾಷ್ಟ್ರಕವಿ ಗೋವಿಂದ ಪೈ, ಶ್ರೀ ಡಿ. ಪುಟ್ಟಸ್ವಾಮಿ, ಏರ್ಯ ಲಕ್ಷ್ಮಿನಾರಾಯಣ ಆಳ್ವ, ಚಂದ್ರಭಾಗಾದೇವಿ, ಕೆದಂಬಾಡಿ ಜತ್ತಪ್ಪ ರೈ, ಡಾ| ಹಂಪನಾ, ಕಲ್ಲೆ ಶಿವೋತ್ತಮರಾವ್, ಕೊಂಡಾಣ ವಾಮನ, ಕುಡ್ಪಿ ವಾಸುದೇವ ಶೆಣೈ – ಹೀಗೆ ಬರೆಯುತ್ತ ಹೋದರೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಅಷ್ಟೇ ಅಲ್ಲ ಮೈಸೂರು, ಬೆಂಗಳೂರಿನ ಸಾಹಿತಿಗಳ ಸ್ನೇಹವೂ ಅವರಿಗಿದ್ದಿತು. ಇವರೆಲ್ಲರೊಡನೆ ಮುಖತಃ, ಭೇಟಿಗಳ ಜತೆಯಲ್ಲಿ ಪತ್ರ ವ್ಯವಹಾರವೂ ಇತ್ತು.

ತಂದೆಯವರಿಗೂ ಧರ್ಮಸ್ಥಳಕ್ಕೂ ಅಂಟಿದ ನಂಟು ತುಂಬಾ ಹಳೆಯದು. ದಿ| ಮಂಜಯ್ಯ ಹೆಗ್ಗಡೆಯವರ ಕಾಲದಿಂದ ಧರ್ಮಸ್ಥಳದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನಕ್ಕೆ ಅವರು ಪ್ರತಿವರ್ಷ ಹಾಜರಾಗುತ್ತಿದ್ದರು. ತರುವಾಯ ದಿ| ರತ್ನವರ್ಮ ಹೆಗ್ಗಡೆಯವರ ಕಾಲದಲ್ಲೂ ಅವರು ಧರ್ಮಸ್ಥಳದಲ್ಲಿ ನಡೆಯುವ ಈ ಉತ್ಸವಕ್ಕೆ ತಪ್ಪದೆ ಬರುತ್ತಿದ್ದರು. ಆ ನಂತರ ಡಿ. ವೀರೇಂದ್ರ ಹೆಗ್ಗಡೆ ಅವರ ಕಾಲದಲ್ಲೂ ಅವರ ಹಾಜರಿ ಆ ಸಂದರ್ಭದಲ್ಲಿ ಇದ್ದೇ ಇರುತ್ತಿತ್ತು. ಅವರು ಕೊನೆಯದಾಗಿ ಧರ್ಮಸ್ಥಳಕ್ಕೆ ಹಾಜರಾದುದು 1982ರ ನವಂಬರ್‌ನಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ. ನನಗೆ ತಿಳಿದಂತೆ ಈ ಅವಧಿ ಸುಮಾರು ಐದು ದಶಕಗಳು!

ಕಾಲ ಕಳೆದಂತೆ ಅವರವರ ಸಂಸಾರಸುಖನಿಮಗ್ನರಾದ ಸ್ನೇಹಿತರು ಅವರವರ ಭವಿಷ್ಯದ ದೃಷ್ಟಿಯಿಂದ ದೂರವಾದರೂ ಪತ್ರ ಸಂಪರ್ಕ ಸ್ನೇಹಕ್ಕೆ ಸೇತುವೆಯಾಗಿದ್ದಿತು. ತಂದೆಯವರಿಗೆ ಏಳು ಮಕ್ಕಳು. (ನಾಲ್ವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು.) ಜೀವನದಲ್ಲಿ ಹೋರಾಟವಿದ್ದರೂ ತೃಪ್ತಿಯಿತ್ತು. ನೆಮ್ಮದಿಯಿತ್ತು. ಅಧ್ಯಾಪನದ ಜತೆಯಲ್ಲಿ ಪತ್ರಕರ್ತರೂ ಆಗಿದ್ದರು. ಲೇಖನಗಳೂ ಪ್ರಕಟವಾಗುತ್ತಿದ್ದುವು. ಶ್ರೀಮಂತಿಕೆಯ ಜೀವನವಿಲ್ಲದಿದ್ದರೂ ಮಧ್ಯಮ ವರ್ಗದ ಜೀವನ ನಮ್ಮದಾದರೂ ಹೃದಯ ಶ್ರೀಮಂತಿಕೆ ತಂದೆಯವರಲ್ಲಿ ಧಾರಾಳವಾಗಿತ್ತು. ಹಿರಿಯ ಮಗ ಇಂಜಿನಿಯರಿಂಗ್ ಕಾಲೇಜಿಗೆ ಪದಾರ್ಪಣ ಮಾಡಿದಾಗ ಮನೆಯಲ್ಲಿ ಆರ್ಥಿಕ ಅಡಚಣೆ. ಆದರೂ ಮೌನವಾಗಿ ಅನುಭವಿಸಿದವರು ತಂದೆಯವರು. ಮನೆಯ ಉಳಿದವರೂ ಅದರಲ್ಲಿ ಸಹಭಾಗಿಗಳು. ಅದೇ ಸಮಯದಲ್ಲಿ ಪತ್ರಿಕಾ ಪ್ರತಿನಿಧಿತ್ವ ಅನ್ಯಾಯದಿಂದ ಪರರ ವಶವಾದಾಗಲೂ ಸಮಚಿತ್ತದಿಂದ ಇದ್ದವರು ಅವರು. ಕಸಿದುಕೊಂಡ ಆ ವ್ಯಕ್ತಿಯ ಬಗ್ಗೆ ಕಿಂಚಿತ್ತೂ ಕೆರಳದವರು ಅವರು. ನಂಜುಂಡು ನಗೆ ಚೆಲ್ಲುವ ಮನೋಭಾವದವರು ಅವರು. ಹೀಗಿದ್ದರೂ ಅಧ್ಯಾಪನದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಿಂದ ವಿದ್ಯಾರ್ಥಿನಿಯರ (ಬೆಸೆಂಟ್ ಶಾಲೆ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತ) ಮನ ಗೆದ್ದವರು. ಸಹೋದ್ಯೋಗಿಗಳಿಗೆ ಆತ್ಮೀಯರು. ಶಾಲೆಯ ಆಡಳಿತ ವರ್ಗದವರಿಗೂ ಮೆಚ್ಚಿನವರು. ಅವರು ನಿವೃತ್ತರಾದಾಗ ಆ ಸಮಾರಂಭದಲ್ಲಿ ಸೇರಿದ ಜನಸಂಖ್ಯೆ, ನೀಡಿದ ಗೌರವ-ಸನ್ಮಾನ ಅದಕ್ಕೆ ಸಾಕ್ಷಿ.

ಆ ಸಮಾರಂಭದಲ್ಲಿ ನಾನೂ ಭಾಗಿಯಾಗಿದ್ದೆ. 1972ರಲ್ಲಿ ಕನ್ನಡ ಎಂ.ಎ. ಪಾಸು ಮಾಡಿದ ನನಗೆ ನಾನು ಓದಿದ ಶಾಲೆಯಲ್ಲಿ (ಬೆಸೆಂಟ್ ಶಾಲೆ) ಜೂನಿಯರ್ ಕಾಲೇಜು ಆರಂಭ ವಾಗಿ, ನಾನು ಅಲ್ಲಿ ಕನ್ನಡ ಉಪನ್ಯಾಸಕಿಯಾಗಿ ನೇಮಕಗೊಂಡೆ. ಅಪ್ಪ ಹೈಸ್ಕೂಲಿಗೆ ಕನ್ನಡ ಪಂಡಿತರು. ಮಗಳು ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿ. ಸೋದರಿ ನನ್ನ ವಿದ್ಯಾರ್ಥಿನಿ. ಇಂಥ ಸುಯೋಗ ಎಷ್ಟು ಮಂದಿಗೆ ಲಭ್ಯವಾದೀತು? ನಾವು ಮೂವರೂ ಒಟ್ಟಿಗೆ ಬರುತ್ತಿದ್ದೆವು. ನಾನು ಒಳ್ಳೆಯ ಉಪನ್ಯಾಸಕಿ ಎಂಬ ಹೆಸರು ಪಡೆಯಲು ತಂದೆಯವರೇ ಕಾರಣ ಹಾಗೂ ಮುಂದೆ ನಾನೊಬ್ಬಳು ಲೇಖಕಿಯಾಗಿ ಪ್ರಸಿದ್ಧಿಗೆ ಬರಲೂ ಅವರೇ ಕಾರಣ. ನಾನು ಪಂಜೆ ಮಂಗೇಶರಾಯರ ಬಗ್ಗೆ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟು ಪಡೆಯಲೂ ಅವರೇ ಕಾರಣರು.

ತಂದೆಯವರು ಕನ್ನಡ ನಾಡು, ನುಡಿಯ ಸೇವೆ, ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷ ಗಿರಿಯಿಂದ ಹಿಡಿದು ಕಾರ್ಯದರ್ಶಿ, ಉಪಾಧ್ಯಕ್ಷ, ಸದಸ್ಯ, ಸಂಚಾಲಕ, ಆಗಿ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡಿದ ಮಹಾಚೇತನ! ಅವರ ಸೇವೆ ದುಡಿತಗಳಿಂದಾಗಿ ದಕ್ಷಿಣ ಕನ್ನಡದಲ್ಲಿ ಪ್ರತಿಯೊಬ್ಬರಿಗೂ ಪರಿಚಿತ ವ್ಯಕ್ತಿಯಾಗಿದ್ದರು ಅವರು. ತುಂಬು ಬಾಳನ್ನು ಅವರು ಬಾಳಿದರೂ ಬಂದ ಸಮಸ್ಯೆಗಳಿಗೆ ನೋಯದೆ ಧೈರ್ಯದಿಂದ ಹೋರಾಡುತ್ತಲೇ ಬದುಕನ್ನು ಮುಕ್ತಾಯಗೊಳಿಸಿದ ದೀಮಂತ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಸುತ್ತಮುತ್ತ ಊರುಗಳಲ್ಲಿ ಅವರು ಭಾಗವಹಿಸದ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೇ ಇಲ್ಲ ಎಂದರೆ ಅದು ಅತಿಶಯೋಕ್ತಿ ಅಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಕನ್ನಡ ನುಡಿಯ ಸೇವೆ, ಮಂಗಳೂರಿನ ಗಾಂಧೀ ಪ್ರತಿಷ್ಠಾನದ ಸಕ್ರಿಯ ಸದಸ್ಯರಾಗಿ ಕಾರ್ಯಕರ್ತರಾಗಿ ಸೇವೆ, ಅಲ್ಲಿ ನಡೆಯುತ್ತಿದ್ದ ತರಬೇತಿ ಶಿಬಿರಗಳಿಗೆ ತನ್ನ ಮಕ್ಕಳನ್ನೂ ಕರೆದೊಯ್ದು ಆ ಅಹಿಂಸಾ ಮಂತ್ರವನ್ನು ಗಾಂಧೀಜಿಯವರ ತತ್ತ್ವಗಳನ್ನು ಮಕ್ಕಳಿಗೂ, ದೊರೆಯುವಂತೆ ಮಾಡಿದ ಕಾರ್ಯ, ತನ್ನ ಸಮಾಜದ ಸಂಘದ ಅಧ್ಯಕ್ಷರಾಗಿ ಮೂರು ದಶಕಗಳ ಕಾಲ ಮಾಡಿದ ಪ್ರಗತಿಪರ ಸೇವೆ, ಉಷಾ ಉಪಾಧ್ಯಾಯರ ಸಂಘ, ಕನ್ನಡ ಪಂಡಿತರ ಸಂಘಗಳಲ್ಲಿ ಪದಾದಿಕಾರಿಯಾಗಿ, ಸದಸ್ಯರಾಗಿ ಮಾಡಿದ ಸೇವೆ ಅನನ್ಯವಾದುದು. ನಾನು ಕಂಡಂತೆ ತಿಳಿದಂತೆ ಅವರು ಸರಳಜೀವಿ. ಮೃದು ಮಾನಸ, ಭಾವುಕ ಮನಸ್ಸಿನ ಸಾತ್ವಿಕ. ಸ್ಫಟಿಕದಂತೆ ಪರಿಶುದ್ಧ, ಸಂಭಾವಿತ. ‘‘ಮಾಫಲೇಷು ಕದಾಚನ’’ ಎಂಬುದಕ್ಕೆ ಅನ್ವರ್ಥವಾಗಿತ್ತು ಅವರ ಸೇವೆ!

ಸಾಹಿತಿಯಾಗಿ

ಪ್ರತಿಭೆ, ಕವಿತಾ ರಚನೆ, ಸೃಜನೆ ಇತ್ಯಾದಿ ಒಂದು ಗುಂಪಿನ, ಒಂದು ಜನಾಂಗದ, ಒಂದು ವರ್ಗದ ಮೀಸಲು ಸ್ವತ್ತು ಅಲ್ಲ. ಅದಕ್ಕೆ ಜಾತಿ ಭೇದವಿಲ್ಲ. ಲಿಂಗಭೇದವೂ ಇಲ್ಲ. ಅದು ದೈವಕೃಪೆ. ಇಪ್ಪತ್ತನೆ ಶತಮಾನದ ಆರಂಭದಲ್ಲಿ ‘ಪಂಡಿತರು ಕಳಾಮಂಡಿತರು’ ಕನ್ನಡ ಡಿಂಡಿಮ ಬಾರಿಸುತ್ತಿದ್ದ ಆ ಕಾಲದಲ್ಲಿ, ಬಡಕುಟುಂಬದಲ್ಲಿ ಜನಿಸಿ, ಪ್ರತಿಭಾವಂತ ವಿದ್ಯಾರ್ಥಿಯಾಗಿ, ಆ ದೆಸೆಯಲ್ಲೇ ಬರವಣಿಗೆ ಆರಂಭಿಸಿ, ಅದಕ್ಕೆ ಪರಿಸರ ಪ್ರೋತ್ಸಾಹ ಸಾಕಷ್ಟಿಲ್ಲದಿದ್ದರೂ ಸ್ವಂತಿಕೆಯಿಂದ ಮುಂದೆ ಬಂದು ವೃತ್ತಿಯಲ್ಲಿ ಕನ್ನಡ ಪಂಡಿತರಾಗಿ, ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಕೊನೆಯುಸಿರು ಇರುವವರೆಗೂ ಏನಾದರೂ ಬರೆಯುತ್ತಲೇ ಇದ್ದ ಸಾಹಿತಿ ಪಿ.ಕೆ. ನಾರಾಯಣ ಅವರು ದಕ್ಷಿಣ ಕನ್ನಡ ಜಿಲ್ಲೆಯವರು. ನನ್ನ ತಂದೆಯವರು.

ದಾಕ್ಷಿಣ್ಯ, ಸಂಕೋಚ ಸ್ವಭಾವಗಳಿಂದಾಗಿ ಎಲೆಯ ಮರೆಯ ಹೂವಂತೆ ಆಡಂಬರ – ಗದ್ದಲವಿಲ್ಲದೆ ಸಾಹಿತ್ಯ ವ್ಯವಸಾಯ ಮಾಡಿದವರು ಅವರು. 1928ರಿಂದ 1983ರ ವರೆಗೆ ಅಂದರೆ ಐದೂವರೆ ದಶಕಗಳ ದೀರ್ಘಾವದಿಯವರೆಗಿನ ಅವರ ಬರವಣಿಗೆಯನ್ನು ಗಮನಿಸಿದರೆ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅಪಾರವೇ. ಅವರ ರಚನೆಗಳು ಪ್ರಕಟವಾದವು ಕಡಿಮೆ. ಆದರೂ ಅವರ ಪ್ರತಿಭೆಗೆ ರುಜುವಾತು ಆಗಿ ಉಳಿದಿವೆ, ಅಪ್ರಕಟಿತ ಬರಹಗಳು. ಅವು ಸಾವಿರಾರು ಪುಟಗಳಷ್ಟಿವೆ. ಅವರು ಕವಿಯಾಗಿ, ನಾಟಕಕಾರರಾಗಿ, ಅನುವಾದಕರಾಗಿ, ಲೇಖಕ ರಾಗಿ, ಸಂಪಾದಕರಾಗಿ, ಸಂಶೋಧಕರಾಗಿ, ಕನ್ನಡ ಸಾಹಿತ್ಯದ ಬೊಕ್ಕಸವನ್ನು ತುಂಬಿದ್ದಾರೆ ನ್ನುವುದು ದಕ್ಷಿಣ ಕನ್ನಡದ ಬರಹಗಾರರೆಲ್ಲರಿಗೂ ತಿಳಿದ ವಿಷಯ.

ಕವಿಯಾಗಿ

ಏಳನೆಯ ತರಗತಿಯಲ್ಲಿರುವಾಗಲೇ ತಂದೆಯವರಿಗೆ ಬರವಣಿಗೆಯಲ್ಲಿ ಆಸಕ್ತಿ. ಅದನ್ನು ಅವರ ಮಾತಿನಲ್ಲೇ ಕೇಳಬಹುದು. ‘‘ನಾನು ಏಳನೆಯ ತರಗತಿಯಲ್ಲಿರುವಾಗಲೇ ವಿದ್ಯಾದಾಯಿನಿ ಎಂಬ ಹಸ್ತಾಕ್ಷರಿಯನ್ನು ತಯಾರಿಸಿದೆ. ಸಂಪಾದಕನಾದ ನಾನೇ ಸಂಪಾದಕೀಯ ಮತ್ತು ಇತರ ಬರೆಹಗಳನ್ನು ತುಂಬಿಸುತ್ತಿದ್ದೆ. ನನ್ನ ಸಹಪಾಠಿ ಕೆ. ಮಹಮ್ಮದ್ ಬ್ಯಾರಿ ಐತಿಹಾಸಿಕ ಕಥೆಗಳನ್ನು ಬರೆಯುತ್ತಿದ್ದರು. ಇನ್ನು ಒಬ್ಬಿಬ್ಬರು ಕವನ-ಒಗಟುಗಳನ್ನು ಬರೆಯುತ್ತಿದ್ದರು. ಪ್ರಥಮ ಸಂಚಿಕೆಯನ್ನು ತಯಾರಿಸಿ ಶಿವರಾಯರ ಮುಂದಿಟ್ಟೆ. ಅವರು ಸಂತೋಷದಿಂದ ತೆಗೆದುಕೊಂಡರು.’’

‘ಪುನಾಕ’ ಕಾವ್ಯನಾಮದಿಂದ ಅವರು ಕವನ ರಚನೆ ಆರಂಭಿಸಿದ್ದು 1935ನೆ ಇಸವಿ ಯಲ್ಲಿ ಎಂದರೆ ತಮ್ಮ 21ನೇ ವಯಸ್ಸಿನಲ್ಲಿ. ಹರೆಯದ ಹುಮ್ಮಸ್ಸು, ಸೌಂದರ್ಯ ಕಂಡಾಗ ಅರಳುವ ಮನಸ್ಸು. 1935ರಿಂದ ಆರಂಭವಾಗಿ 1981ರ ವರೆಗೆ ಅವರು ಬರೆದ ಪ್ರೇಮ ಗೀತೆಗಳು, ಪ್ರಕೃತಿ ಗೀತೆಗಳು, ದೇಶಭಕ್ತಿ ಗೀತೆಗಳು, ಕಥನ ಕವನಗಳು, ನೀಳ್ಗವನಗಳು, ನೂರಾರು ವಿಷಯಗಳಿಗೆ ಸಂಬಂಧಿಸಿದ ಪದ್ಯಗಳು, ಸ್ವಾಗತ ಗೀತೆಗಳು, ಪ್ರಾರ್ಥನಾ ಪದ್ಯಗಳು, ಎಲ್ಲವೂ ಸೇರಿ ಸುಮಾರು ಇನ್ನೂರಕ್ಕೂ ಹೆಚ್ಚು ಇವೆ. ಮೂವತ್ತಕ್ಕೂ ಹೆಚ್ಚು ಅಷ್ಟಷಟ್ಪದಿಗಳಿವೆ. ಸುಮಾರು ಮೂವತ್ತಕ್ಕೂ ಹೆಚ್ಚು ಚುಟುಕುಗಳಿವೆ. ಇಪ್ಪತ್ತಕ್ಕೂ ಹೆಚ್ಚು ವಚನಗಳಿವೆ. ಇಪ್ಪತ್ತಕ್ಕೂ ಹೆಚ್ಚು ಕೀರ್ತನೆಗಳಿವೆ. ಎರಡು ಕಥನ ಕವನಗಳು ರಗಳೆಯ ಛಂದಸ್ಸಿನಲ್ಲಿವೆ. ನೂರಐವತ್ತು ದ್ವಿಪದಿಗಳಲ್ಲಿ ‘ಮೂಲ ರಾಮಾಯಣ’ ಎಂಬ ಕಾವ್ಯವಿದೆ. ಅವಲ್ಲದೆ ಸಾಂಗತ್ಯ ಛಂದಸ್ಸಿನಲ್ಲಿ ‘ಶ್ರೀ ಮಹಾವೀರವಾಣಿ’ ಶೀರ್ಷಿಕೆಯಡಿಯಲ್ಲಿ 220 ಪದ್ಯಗಳನ್ನು ರಚಿಸಿದ್ದಾರೆ. ಇವೆಲ್ಲವನ್ನು ‘ಪಿ.ಕೆ. ನಾ ಸಮಗ್ರ ಕಾವ್ಯ’ ಎಂದು ಪ್ರಕಟಿಸಿದರೆ ಅದೊಂದೆ ಬೃಹತ್ ಸಂಪುಟವಾಗಬಹುದು. ಇವೆಲ್ಲ ಹಸ್ತಪ್ರತಿಯಲ್ಲೇ ಇವೆ.

ಅವರು ಬರೆದ ಪ್ರೇಮಗೀತೆಗಳ ನಾಲ್ಕು ಸಾಲು ಇಲ್ಲಿದೆ.

ಇದು ಅಪ್ರಕಟಿತ ಕವನ –

ಹರಿವ ನದಿಯ ದಂಡೆಯಲ್ಲಿ
ತೀಡುವೆಲರ ತಂಪಿನಲ್ಲಿ
ಕೂಡುತಿರುವ ವೇಳೆಯಲ್ಲಿ
ಮನವ ನಿನ್ನ ನೆನಪಿನಲ್ಲಿ
ತಪವನೆಸಗಿ ಕಾದೆನಲ್ಲ
ಎಂದು ಬರುವೆಯೆನ್ನ ನಲ್ಲ
(ಶೀರ್ಷಿಕೆ – ಎಂದು ಬರುವೆಯೆನ್ನ ನಲ್ಲ)

ಪ್ರಕೃತಿ ಕವನಕ್ಕೆ ಉದಾಹರಣೆ :

ಬಣ್ಣದ ಓಕುಳಿಯಾಡುವ ದಿನಪನ
ರಾಗದ ರಸವೆ ಈ ಸಂಜೆ
ಬಣ್ಣಿಪ ಕವಿಯಲಿ ಸ್ಫೂರ್ತಿಯನುಕ್ಕಿಪ
ಭಾವದ ರಸವೆ ಈ ಸಂಜೆ
ತೆರೆಗಳ ಮಸಗುತ ನೊರೆನೊರೆ ಸೇಸೆಯ
ನಿಕ್ಕುವ ರತ್ನಾಕರನಿಲ್ಲಿ
ನೊರೆಯಲಿ ಹೊನ್ನಿನ ಕರಗಳನದ್ದುತ
ರತುನವ ತೋರುವ ರವಿಯಿಲ್ಲಿ||
(ಶೀರ್ಷಿಕೆ – ಪಡುಗಡಲೆಡೆಯ ಈ ಸಂಜೆ)

ದೇಶಭಕ್ತಿ ಕವನಕ್ಕೆ ಉದಾ:

ಭವ್ಯಭಾರತ ದಿವ್ಯಭಾರತ ವಿದೇಳುತಿದೆ|
ತಪಸಿನಲಿ ನಿಂದು, ಸ್ವಾತಂತ್ರ್ಯ ಪಡೆದು||
ವೀರರನು ಬಲಿತೆತ್ತು ಜೈಲಿನಲ್ಲಿ ನವೆದುದಕೆ
ಗುಂಡಿಗೆದೆ ಕೊಟ್ಟು ಧೈರ್ಯದಲಿ ನಿಂದುದಕೆ
ಬಡತನದ ಸಂಕಷ್ಟಗಳ ಸಹಿಸಿ ನೋಂತುದಕೆ
ವಿಜಯವಿದು ಸ್ವಾತಂತ್ರ್ಯ – ಭಾರತಕೆ ವಿಜಯ!
(ಶೀರ್ಷಿಕೆ – ಜಯಘೋಷ)

ಅಷ್ಟಷಟ್ಪದಿಯ ಆರು ಸಾಲುಗಳು :

ಭೋರ್ಗರೆವ ಪಡುಗಡಲ ಮಧ್ಯದಿಂ ಪಡೆಗಟ್ಟಿ
ಕಾರ್ಮೋಡ ಮೇಲೇರಿ ಸಾಗುತಿದೆ ವಹಿಲದಲಿ,
ಮೂಡಣದ ಬೆಟ್ಟಗಳ ಕಡೆಹಾಯ್ವ ರಭಸದಲಿ
ಆರ್ಭಟಿಸಿ ಕೋಲ್ಮಿಂಚುಗಳ ಮಸಗಿ ನೆಲಮುಟ್ಟಿ
ಭೂವ್ಯೋಮಗಳ ಕವಿದ ಕತ್ತಲೆಯ ಮಬ್ಬಿನಲಿ
ಮುಸಲಧಾರೆಯಲಿ ತಿರೆಗಿಳಿಯುತಿದೆ ಮುಂಗಾರು
ತೊರೆತೋಡು ನೆರೆಯೇರಿ ಬಯಲೆಲ್ಲ ಬಲು ನೀರು
(ಶೀರ್ಷಿಕೆ – ಮುಂಗಾರು)

ಚುಟುಕು – ಒಂದು ಉದಾಹರಣೆ :

ಭಾರತದ ಪೇಟೆಯಲಿ ಮಾರಾಟ ವಸ್ತುವೆನೆ
ಶಾಸಕರ ಕೊಳ್ಳುವಾ ಕಾಲ ಬಂದಿಹುದು.
ರಾಜ್ಯಗಳಲೀಗ ಈ ವ್ಯಾಪಾರ ಹೆಚ್ಚಾಗೆ
ಕೆಲದಲ್ಲಿ ಭಯವು – ಬೆಲೆಯಿಳಿವುದೇನೆಂದು?

ಇನ್ನೊಂದು ಉದಾಹರಣೆ :

ಭಾರತದ ಜನಕೋಟಿಯೆನ್ನೆಲುಬು ರಕ್ತವದು
ಎಂದಂತೆ ನುಡಿದು ನಡೆದರಾ ಗಾಂದಿ
ಆ ರಕ್ತ ಮತ್ತೆಲುಬು ತಮಗೆಂದು ತಿನ್ನುವರು
ಶಿಷ್ಯರೆನಿಸಿದ ಮಂತ್ರಿ ಜನವು ಸುಖವೊಂದಿ    (1971)

ಮೇಲಿನ ಚುಟುಕಲ್ಲಿ ಹೇಳಿರುವ ವಿಷಯ ಸುಮಾರು 28 ವರ್ಷಗಳ ಹಿಂದಿನದು. ಆಗ ಶಾಸಕರ ಮಾರಾಟ ಆರಂಭವಾಗಿತ್ತು. ಈಗಂತೂ ರಾಜಾರೋಷವಾಗಿ ಈ ವ್ಯಾಪಾರ ನಡೆಯುತ್ತಿದೆ!!

1935ರ ಅವಧಿಯಲ್ಲಿ ಅವರು ‘ಶ್ರೀಮುಕ್ತಾ ಪುರಾದೀಶ್ವರಾ’ ಎಂಬ ಅಂಕಿತದಲ್ಲಿ 25 ವಚನಗಳನ್ನು ಬರೆದಿರುವುದು ಹಸ್ತಪ್ರತಿಯಲ್ಲಿ ದೊರೆತಿದೆ. ಈ ವಚನಗಳ ಪ್ರಕಟಣೆ ಬಗ್ಗೆ ಮಾಹಿತಿ ಇಲ್ಲ. ಆದರೆ ಆ ವಚನಗಳಲ್ಲೂ ಅಂದಿನ ಸಾಮಾಜಿಕ ವಿಚಾರ, ಕಟಕಿ, ವ್ಯಂಗ್ಯ ಇವೆ. ಅನ್ಯಾಯದ ಬಗ್ಗೆ ಪ್ರತಿಭಟನೆ ಇದೆ. ನೋವಿನ ಬಗ್ಗೆ ಕಳಕಳಿ ಇದೆ. ಕೆಲವೊಂದು ವಚನಗಳಲ್ಲಿ ಅಸಹಾಯಕತೆ, ಇನ್ನು ಕೆಲವಲ್ಲಿ ಭಕ್ತಿ-ಸಮರ್ಪಣಾ ಭಾವಗಳಿವೆ. ಉದಾಹರಣೆಯಾಗಿ ಒಂದು ವಚನ –

ಮುನಿಸಿಂ ಮಣ್ಣು ಮುಕ್ಕಿಹುದಯ್ಯ ಈ ಲೋಕ
ಅರಿವಿಲ್ಲದ ಮಾಂಸದ ಮುದ್ದೆಯೂ ಕಿರಿಚುವುದಯ್ಯ
ಕೋಪದಿಂ ಕಿಡಿಕಿಡಿಯಾಗಿ
ಮುನಿಸಿನ ಮೂರ್ತಿಯೇ ಎಂದು ತೋರುವುದಯ್ಯ
ಸಾಮವೇ ಪ್ರಧಾನ ಗುಣವಾಗಿರ್ಪ ಬಾಲ ಬಾಲೆಯರೂ
ಕೋಪದ ಕೂಪದೊಳು ಬಿದ್ದಿಹರಯ್ಯ
ಅದ ಕೇಳಿ, ಇದಬಿಟ್ಟು ಕೊನೆಗೆ ಹೊರಳುವರಯ್ಯ ಗರ ಹೊಡೆದಂತೆ
ಕೋಪ ಬೆಂಬತ್ತಿ ಬರೆ ಇವ ಸುತ, ಈಕೆ ಕುಮಾರಿ, ಆಕೆ ಅರ್ಧಾಂಗಿ
ಅವಳು ಹೆತ್ತತಾಯಿ, ಅದು ಏನೂ ಅರಿಯದ ಪಶು –
ಎಂಬುದನು ಅರಿಯರಯ್ಯ.
ಆವೇಶದಲಿ ಆರ್ಭಟಿಸಿ ಮಾಡದನು ಮಾಡುವರಯ್ಯ
ಮಡಿವ ಕಾಲಕ್ಕೂ ಕೋಪ ಕಾಣಯ್ಯ
ಎನ್ನೊಡೆಯ ಮುಕ್ತಾ ಪುರಾದೀಶ್ವರಾ    05-06-1935

25-05-1935ರಿಂದ 27-4-1938ರ ವರೆಗಿನ ಅವಧಿಯಲ್ಲಿ ತಾವು ಬರೆದ ವಚನಗಳ ಅಡಿಯಲ್ಲಿ ದಿನಾಂಕಗಳನ್ನು ಸೂಚಿಸಿದ್ದಾರೆ. ತರುವಾಯ ಅವರು ರಚಿಸಿದ ವಚನಗಳು 1981ರ ‘‘ಹೊಳೆ’’ ಎಂಬ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಮಂಚಿಯಲ್ಲಿ ಅವರು ಅಧ್ಯಾಪಕರಾಗಿದ್ದಾಗ 18-06-38ರಂದು ಗೆಳೆಯನಿಗೆ ಬರೆದ ನಾಲ್ಕು ಪುಟಗಳ ದೀರ್ಘ ಪತ್ರದಲ್ಲಿ ಇತ್ತೀಚೆಗೆ ನಾನು ಹೆಚ್ಚು ಬರೆಯಲಿಲ್ಲ. ‘‘ನಾ ಕಂಡ ಬಯಲಾಟಂ’’ ಎಂದು ಒಂದು ರಗಳೆಯನ್ನು ಬರೆದಿದ್ದೇನೆ. ಅಲಂಕಾರ ವರ್ಣನೆಗಳು ಅಲ್ಲಲ್ಲಿ ಇವೆ….. 152 ಚರಣಗಳಿವೆ. ‘ರಾಣಿ ಚಾಂದಬೀಬಿ’ ಎಂಬೊಂದು ಕಥೆಯನ್ನು ರಗಳೆಯಲ್ಲಿ ಬರೆಯಲನುಮಾಡಿ ಪೂರ್ಣ ಬರೆಯದೇ ಉಳಿದಿದೆ….. ನಾಳೆ ಊರಿಗೆ ಹೋದವನು ಪೂರ್ಣ ಮಾಡುತ್ತೇನೆ’’ ಎಂದು ತಿಳಿಸಿದ್ದಾರೆ.

ಈ ರೀತಿ ಹಲವು ಪತ್ರಗಳಲ್ಲಿ ಅವರು ತಮ್ಮ ಆಸಕ್ತಿಯ ವಿಷಯಗಳನ್ನು (ಅಂಚೆಗೆ ಹಾಕದಿರುವ ಪತ್ರಗಳಲ್ಲಿ) ಹೇಳಿಕೊಂಡಿದ್ದಾರೆ. ಅವು ಅವರ ಬಗ್ಗೆ ಬರೆಯಲು ಸಹಾಯಕವಾಗಿವೆ.

‘‘ನಾ ಕಂಡ ಬಯಲಾಟಂ’’ ಆರಂಭದ ಮುನ್ನ ಹಸ್ತಪ್ರತಿಯ ಮೊದಲಲ್ಲಿ ‘‘ಮುಮ್ಮಾತು’’ ಬರೆದಿದ್ದಾರೆ. ಅದು ಹೀಗಿದೆ:

‘‘ಅಚ್ಚು ಶಾಲೆಗಳುಂಟು, ವೆಚ್ಚಕ್ಕೆ ಹಣವುಂಟು’’
ಎಂದು ಬರೆದಿಹ ರಗಳೆಗಳಿವಲ್ಲ | ಮುನಿಯುಂಟು
ಕಾಗದವದುಂಟು | ನಾನುಂಟು ಬರೆಯಲವ
ಕಾಶವುಂಟೆಂದು ಬರೆದೆನೀ ರಗಳೆಗಳನು.
ಅಭ್ಯಾಸ ಕವಿತೆಗಳಿವಹುದು | ಆಭಾಸವಾ
ಗಿಹ ಕವಿತೆಗಳಿವು | ನನ್ನಂತಿರುವ ಉಂಡಾಡಿ
ಗಳಿದನ್ನು ನಾನೋದೆ ಮುದಗೊಂಡಿಹರಿದರಲಿ.
ಒಲವಿಂದ ಅಂಧರಾಗಿಹ ಮತವಂತಿಹುದು
ಸರಸತಿಯ ಪಾದಪಂಕೇರುಹಕಿದು ಪರಿಮಳ
ಮಂ ಬೀರುತಿಹ ಸಂಪಗೆಯೋಮೇಣ್ ಮಲ್ಲಿಗೆಯೊ
ಮಾಗಿ ದೇವಿಗಿದು ಒಪ್ಪಿತಮಾದೊಡೆನಗಿಷ್ಟಂ.

‘‘ನಾ ಕಂಡ ಬಯಲಾಟಂ’’ನಿಂದ ನಾಲ್ಕು ಸಾಲುಗಳನ್ನು ಇಲ್ಲಿ ಉದಾಹರಿಸಿದೆ :

….. ಆನಂದದಿಂ ನಿದ್ದೆಯನು ನೀಗಿ
ತಿರುಗುತಿರೆ ಹಳ್ಳಿಗರ ನೆರೆ ನೋಡೆ ದೂರದಲಿ
ನಯನವೊ! ಕಮಲವೊ! ನಾಸಿಕವೊ! ಸಂಪಗೆಯೊ!
ಚೆಂದಳಿರೊ, ಚೆಂದುಟಿಯೋ! ಕದಪೊ ಗುಲಾಬಿಯೋ!
ಎಂಬೊಂದು ಭ್ರಾಂತಿಯಂ ಪುಟ್ಟಿಪಾ ತೆರದಲ್ಲಿ
ಸೌಂದರ್ಯದದಿದೇವತೆಯೆನಿಪ್ಪ ರತಿಯನ್ನು
ಪೋಲುತಿಹ ಹಳ್ಳಿಯಾ ಬೆಡಗಿಯಂ ಕಂಡೆನಾಂ
ಮಿಸುನಿ ಬಣ್ಣದ ದೇಹ ! ಅದನಾವರಿಸಿ ಬಳಸಿ
ಬಂದಿಹಾ ಪಸುರು ಬಣ್ಣದ ಸೀರ ! …..

– ರಗಳೆ ಹೀಗೆ ಕುತೂಹಲದಿಂದ ಮುಂದುವರೆಯುತ್ತದೆ. ಭಾಷೆಯಲ್ಲಿ ಭಾವದಲ್ಲಿ ಹೊಂದಾಣಿಕೆಯ ನಡೆಯಲ್ಲಿ ಬಯಲಾಟದ ವರ್ಣನೆ ಸೊಗಸಾಗಿ ಬಂದಿದೆ. ‘ಚಾಂದಬೀಬಿ’ಯು 194 ಚರಣಗಳಿಂದ ಕೂಡಿದ್ದರೂ ಅಪೂರ್ಣವಾಗಿದೆ. ತಮ್ಮ ಸಣ್ಣ ವಯಸ್ಸಲ್ಲೇ ಕಾವ್ಯದ ಬಗ್ಗೆ ಅವರಿಗಿದ್ದ ಮಹದಾಸಕ್ತಿ ಇಲ್ಲಿ ವ್ಯಕ್ತವಾಗುತ್ತದೆ.

ವಚನಗಳನ್ನು ಬರೆದಂತೆ ತಂದೆಯವರು ಕೀರ್ತನೆಗಳನ್ನೂ ಬರೆದಿದ್ದಾರೆ. ಪುರಂದರ ದಾಸರ ಕೀರ್ತನೆಯಂತೆ ಇರುವ ಹನ್ನೆರಡು ಕೀರ್ತನೆಗಳಿವೆ. ಅವುಗಳಲ್ಲಿ ಹೆಚ್ಚಿನವು ಸಮರ್ಪಣ ಭಾವದವು. ತಪ್ಪುಗಳ ಮನ್ನಿಸೆಂದು ಬೇಡುವ ಅಂತರಂಗದ ಅಳಲು ಇಲ್ಲಿವೆ. ‘‘ಮುಕ್ತ ಪುರನಾಥ’’, ‘ಮುಕ್ತ ಪುರದರಸ’ ಎಂಬ ಅಂಕಿತಗಳು ಕೊನೆಯಲ್ಲಿ ಇವೆ. ಉದಾಹರಣೆ –

ಮನ್ನಿಸೋ
ಮನ್ನಿಸೋ | ನಾ ಮಾಡಿದಪರಾಧವನು ದೇವ |
ಕುನ್ನಿ ನಾನರಿಯದೇ ಮಾಡಿದೆನಲ್ಲಾ ||ಪ||
ಬಪ್ಪುದದು ತಪ್ಪದೆಂಬಾ ಒಪ್ಪು ಮಾತಿನಲಿ |
ಅಪ್ಪ, ನಿಜವಿಹುದನ್ನು ಕಂಡೆನೋ ನಾನು ||
ತಪ್ಪುಗಳ ಮಾಡಿದೆನು | ಮನದಲ್ಲಿ ಮರುಗಿದೆನು |
ಬಪ್ಪೆಲ್ಲ ಕಷ್ಟಗಳ ಪರಿಹರಿಸೋ ನೀನು ||
ಸೇವೆಯಲಿ ತನುವಿದುವು ಸವೆವಂತೆ ಮಾಡೊಡೆಯ |
ನೋವಿಗಂಜದ ತೆರದಿ ಶಕ್ತಿ ನೀಡೊಡೆಯ||
‘‘ಕಾವದೊರೆ! ನಾನಿಹೆನು! ಅಂಜದಿರು ನೀನೆನುತ |’’
ದೇವ! ನೀ ಪೊರೆಯೆನ್ನ ಮುಕ್ತ ಪುರನಾಥ ||                 10-8-38

ಉಳಿದ ಕೆಲವು ಕೀರ್ತನೆಗಳು ಭಾವಗೀತಾತ್ಮಕವಾಗಿವೆ. ತಂದೆಯವರ ಕಾವ್ಯಪ್ರೇಮ ಅವರ ಪ್ರತಿಯೊಂದು ಪದ್ಯದಲ್ಲಿ, ರಗಳೆಯಲ್ಲಿ, ಕೀರ್ತನೆಯಲ್ಲಿ ಕಾವ್ಯದಲ್ಲಿ ಸುಸ್ಪಷ್ಟವಾಗಿದೆ.

ಅವರು ‘ಮಹಾವೀರ ವಾಣಿ’ ಎಂಬ ಒಂದು ಸಾಂಗತ್ಯ ಕೃತಿಯನ್ನು ಬರೆದಿದ್ದು ಅದು ಹಸ್ತಪ್ರತಿಯಲ್ಲೇ ಇದೆ. ‘ಮಂಗಲಸೂತ್ರ’, ‘ಧರ್ಮಸೂತ್ರ’ – ಹೀಗೆ 20 ಅಧ್ಯಾಯಗಳಲ್ಲಿ ‘ಮಹಾವೀರ ವಾಣಿ’ಯು ವಿಸ್ತತಗೊಂಡಿದೆ. ಒಟ್ಟು 220 ಸಾಂಗತ್ಯಗಳು ಇವೆ ಇದರಲ್ಲಿ.

9-12-1965ರಲ್ಲಿ ರಚಿತವಾಗಿರುವ ಸಾಂಗತ್ಯ ಛಂದೋಬದ್ಧವಾದ ಈ ಕೃತಿಯ ಬಗ್ಗೆ ಹೇಳುವುದಾದರೆ ಸಾಂಗತ್ಯದ ಲಾಲಿತ್ಯ ಒಂದೊಂದು ಸಾಂಗತ್ಯದಲ್ಲೂ ಎದ್ದು ಕಾಣುವ ಅಂಶ. ‘ಧರ್ಮಸೂತ್ರ’ದಲ್ಲಿ ಬರುವ ಒಂದು ಸಾಂಗತ್ಯ ಹೀಗಿದೆ :

ಮುಪ್ಪು ಮೂಡದ ಮುನ್ನ, ರೋಗವಡರದ |
ಬಲಗುಂದಿ ಚಿಂದಿಯಾಗದ ಮುನ್ನ, ಮನುಜ
ಧರ್ಮವನಾಚರಿಪುದೆಲ್ಲ ||
‘ಅಪ್ರಮಾದ ಸೂತ್ರ’ದಲ್ಲಿ
ವೃಕ್ಷದೆಲೆಗಳು ಶಿಶಿರದಲ್ಲುದುರುವಂತೆ
ಆಯುಷ್ಯ ಮುಗಿದಾಗ ನರನ ||
ಜೀವನ ಕೊನೆಗೊಂಬುದನು ತಿಳಿದೆಸಗಲು
ಬಾರದು ಹುಸಿ ತಪ್ಪುಗಳನು ||
‘ಕಾಮಸೂತ್ರ’ದಲ್ಲಿ
ಕಾಮಭೋಗದ ಸುಖ ಕ್ಷಣಕಾಲ ಮಾತ್ರವು |
ಫಲದಲ್ಲಿ ದುಃಖವೆ ಚಿರಕಾಲ ||
ಕಾಮಭೋಗವು ಸುಖಕಾಗಿದೆ ಶತ್ರುವು |
ತಿಳಿದಿದೆ ಸಾದಿಸೆ ಸಫಲ ||
‘ಆತ್ಮಸೂತ್ರ’ದಲ್ಲಿ
ಸಂಸಾರ ಸಾಗರದಲಿ ದೇಹವೆಂಬುವ
ನಾವೆಯೊಳಗಿಹನಾತ್ಮನು ||
ಹಿಂಸೆಯ ತೊರೆದಿಹ ವರಯೋಗಿಗಳು ಮಾತ್ರ
ದಾಟುವ ರೀ ಸಮುದ್ರವನು ||

ತಂದೆಯವರ ಮೇಲೆ ಜೈನಧರ್ಮದ ಪ್ರಭಾವ ತುಂಬಾ ಬೀರಿತ್ತು. ಹೊಂಬುಜ ಕ್ಷೇತ್ರಕ್ಕೆ ಅವರು ಹಲವಾರು ಬಾರಿ ಭಾಷಣ ಮಾಡಲು ಹೋಗುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ಧರ್ಮಸ್ಥಳಕ್ಕೂ ಅವರಿಗೂ ಇರುವ ನಂಟು ಐದು ದಶಕಗಳಷ್ಟೆಂಬುದನ್ನು ಈ ಹಿಂದೆಯೇ ತಿಳಿಸಿದ್ದೇನೆ. ಅಲ್ಲದೆ ಶ್ರೀ ಡಿ. ಪುಟ್ಟಸ್ವಾಮಿಯವರು ಹೊರಡಿಸುತ್ತಿದ್ದ ‘‘ವಿವೇಕಾಭ್ಯುದಯ’’ದಲ್ಲಿ, ಅವರು ಮಾಡಿದ ರತ್ನಾಕರವರ್ಣಿಯ ‘ಭರತೇಶ ವೈಭವ’ದ ಗದ್ಯಾನುವಾದ ಈ ಮಾಸಿಕದ ಪ್ರತಿ ಸಂಚಿಕೆಯಲ್ಲೂ ಧಾರಾವಾಹಿಯಾಗಿ ಬರುತ್ತಿತ್ತು. ಅಲ್ಲದೇ ಆ ಪತ್ರಿಕೆಗೆ ಜೈನಧರ್ಮಕ್ಕೆ ಸಂಬಂಧಿಸಿದ ವಿಶೇಷ ಲೇಖನಗಳನ್ನು ಅವರು ಬರೆಯುತ್ತಿದ್ದರು. ‘‘ಸಮ್ಮೇದ ಶೈಲ ಮಹಾತ್ಮೆ’’ ಎಂಬ ಕೃತಿಯನ್ನು ಅವರು ಸಂಪಾದಿಸಿದ್ದಾರೆ.

ಅವರು ಬರೆದ ‘‘ಶ್ರೀಮೂಲ ರಾಮಾಯಣ’’ ಎಂಬ ದ್ವಿಪದಿಯಲ್ಲಿ ರಚಿಸಿದ ಕಾವ್ಯವೊಂದು ದೊರೆತಿದೆ. 132 ದ್ವಿಪದಿಗಳಲ್ಲಿ ಸಂಪೂರ್ಣ ರಾಮಾಯಣ ಸಂಕ್ಷಿಪ್ತವಾಗಿದೆ. ಅದು ಆರಂಭವಾಗುವುದು ಹೀಗೆ :

ತಪಸಿನೊಳಿರುವಾ ನಾರದರ ಕುರಿತೊಂದು
ಪ್ರಶ್ನೆ ಕೇಳಿದರು ವಾಲ್ಮೀಕಿ ಮುನಿಯಂದು ||1||
ಈ ಲೋಕದೊಳಗಿಂದು ವೀರಗುಣಯುತನು
ಪ್ರಾಣಿಗಳ ಹಿತನು, ಧರ್ಮಜ್ಞನಾರಿಹನು? ||2||
ವಿದ್ವಾಂಸ, ಸಚ್ಚರಿತ ಸತ್ಯವಂತನಾರು?
ಕಾರ್ಯದಲಿ ದಕ್ಷನಹ ಸುಂದರನು ಯಾರು? ||3||
ಮತ್ಸರವದಿಲ್ಲದವ ಯುದ್ಧದಲಿ ಮುನಿಯೆ
ದೇವಾಸುರರು ಹೆದರುವರೊ? ಹೇಳು ತಿಳಿಯೆ ||5||

ನಾರದರು ಉತ್ತರಿಸುತ್ತಾರೆ :

ಇಕ್ಷಾವಕು ವಂಶದಲಿ ಜನಿಸಿ ಬಂದಿಹನು
ಶ್ರೀರಾಮ ನಾಮದಲಿ ತಾನು ಮೆರೆದಿಹನು ||10||
ವೀರ್ಯದಲಿ ವಿಷ್ಣು, ಧೈರ್ಯದಲಿ ಹಿಮವಂತ,
ಆನಂದವೀವಲ್ಲವನು ಸೋಮನಂತೆ ||22||
ಕೋಪದಲಿ ಕಾಲಾಗ್ನಿ ಕ್ಷಮೆಯಲ್ಲಿ ಭೂದೇವಿ
ಆ ಕುಬೇರನಂತಿಹನ ದಾನದಲಿ ಓವಿ ||23||
ಸತ್ಯದಲಿ ಧರ್ಮದೇವತೆಯಂತಿರುವನು |
ದಶರಥನ ಜ್ಯೇಷ್ಠಸುತ ಶ್ರೀರಾಮನಿವನು ||24||

ಕಥೆ ಮುಂದುವರಿಯುತ್ತದೆ :

ಪತ್ನಿ ಕೈಕೇಯಿ ದಾಸಿಯಿಂದರಿಯೆ |
ಪತಿಯಿತ್ತ ವರವ ಬೇಡಿದಳು ಜಗವರಿಯೆ ||23||
ರಾಮನಿಗೆ ವನವಾಸ ವರವೊಂದರಲ್ಲಿ |
ಭರತನಿಗೆ ರಾಜ್ಯವದು ವರವೆರಡರಲ್ಲಿ||24||
ಸ್ನೇಹಾದಿ ವಿನಯ ಗುಣ ಸಂಪನ್ನನಾದ ||
ಸುಮಿತ್ರಾಸುತ ಲಕ್ಷ್ಮಣನಿದ ಕೇಳಿ ನೊಂದ ||31||
ಚಂದ್ರನೊಡನಿಹ ರೋಹಿಣಿಯ ತೆರದಿ ಅವಳು ||
ರಾಮಚಂದ್ರನ ಬಿಡದೆ ವನಕೆ ಸೀತೆ ನಡೆದಿಹಳು ||35||
ಇತ್ತ ದಶರಥ ರಾಜನಾ ಪುತ್ರಶೋಕ|
ಸಂತಪ್ತನಾಗುತ್ತ ಸೇರಿದನು ನಾಕ ||43||

ಭರತ ಚಿತ್ರಕೂಟಕ್ಕೆ ಆಗಮಿಸುತ್ತಾನೆ :

ಶ್ರೀರಾಮನಾಗ ತನ್ನ ಪ್ರತಿನಿಧಿಯಾಗಿ |
ಪಾದುಕೆಗಳನು ನೀಡುತೆಂದ ಭರತನಿಗೆ ||50||
ನೀನಾಳು ರಾಜ್ಯವನು ಬರುವನಕ ನಾನು
ಹದಿನಾಲ್ಕು ವರ್ಷಗಳು ಕಳೆವೊಳಗೆ ಬಹೆನು ||51||

ದಂಡಕಾರಣ್ಯಕ್ಕೆ ಶ್ರೀರಾಮ ಲಕ್ಷ್ಮಣರು ಬರುತ್ತಾರೆ. ಶೂರ್ಪನಖಿಯ ಕಿವಿ ಮೂಗು ಗಳನ್ನು ಲಕ್ಷ್ಮಣ ಕತ್ತರಿಸುತ್ತಾನೆ. ಕುಪಿತರಾದ ಖರದೂಷಣರೊಡನೆ ಯುದ್ಧ. ರಾಕ್ಷಸರ ಸಾವು. ರಾವಣ ಬರುತ್ತಾನೆ :

ಅದಕಾಗಿ ಮಾರೀಚನೆಡೆಗೆ ಬಂದಿಹನು |
ಮನದಿಚ್ಛೆಯನು ಮಾವನಿಗೆ ತಿಳಿಸಿಹನು ||65||
ಎನಿತೊಂದು ಹಿತವಚನ ನುಡಿಯ ಮಾರೀಚ |
ಕಾಲಗತಿ! ಖತಿಗೊಂಡ ರಾವಣನು ನೀಚ ||63||

ಸೀತಾಪಹರಣವಾಗುತ್ತದೆ. ಜಟಾಯುವಿಗೆ ಮೋಕ್ಷವೊದಗುತ್ತದೆ. ಶಬರಿಯ ಭೇಟಿ, ಹನುಮಂತ-ಸುಗ್ರೀವರ ಸ್ನೇಹವಾಗುತ್ತದೆ ರಾಮನಿಗೆ. ವಾಲಿವಧೆ, ಜನಕಜೆಯನ್ನು ಹುಡುಕಲಿಕ್ಕೆ ಸುಗ್ರೀವನ ಸೇನೆ ಹೊರಡುತ್ತದೆ :

ಸಂಪಾತಿಯಿಂದ ಸೀತೆಯಿರವನರಿಯುತ |
ದಶಯೋಜನ ಶರದಿಯ ಜಿಗಿದ ಹನುಮಂತ ||90||
ರಾವಣನ ರಕ್ಷೆಯಲಿರುವ ಲಂಕೆಯಲ್ಲಿ |
ಜನಕಜೆಯಿರುವಳಾ ರಾಮಧ್ಯಾನದಲಿ ||92||
ಮೈಥಿಲಿಯನುಳಿದು ಲಂಕೆಯನು ಅಗ್ನಿಗಾ |
ಹುತಿ ಮಾಡಿ, ಹಿಂದಿರುಗಿದಂಜನೆಯಣುಗಾ ||98||
……  ಶ್ರೀರಾಮ ಲಂಕೆಯನು ಸೇರಿ |
ರಾವಣಾದಿಗಳ ತರಿದನು ಶೌರ್ಯ ತೋರಿ ||102||

ಪತಿಯ ಬಿರುನುಡಿ, ನಿಂದನೆ ಕೇಳಿ ಸೀತೆ ಅಗ್ನಿಪ್ರವೇಶ ಮಾಡುತ್ತಾಳೆ. ಅಗ್ನಿದೇವ ‘‘ಸತ್ಯವದು ಕಾವುದು’’ ಎಂದು ಸೀತೆಯನ್ನು ಒಪ್ಪಿಸುತ್ತಾನೆ. ಮತ್ತೆ ಶ್ರೀರಾಮ ಸೀತಾ ಲಕ್ಷ್ಮಣರ ಸಹಿತ ಅಯೋಧ್ಯೆಗೆ ಮರಳುತ್ತಾನೆ.

ಬಳಿಕಾಯ್ತು ಸಂಭ್ರಮದ ಪಟ್ಟಾಬಿಷೇಕ |
ಶ್ರೀರಾಮನಿಗೆ! ಸತ್ಯಕಾಯ್ತು ಜಯವೇಕ ||117||
ರಾಮರಾಜ್ಯದಲ್ಲಿ ದಾರಿದ್ರ್ಯವಿನಿತಿಲ್ಲ |
ಧರ್ಮದಲಿ ಕರ್ಮದಲಿ ಸಂತುಷ್ಟರೆಲ್ಲ ||118||
ಬಿರುಗಾಳಿಯಿಲ್ಲ | ಕಳ್ಳಕಾಕರು ಇಲ್ಲ |
ರೋಗತಾಪಗಳ ಭಯವೆಂಬುದಿನಿತಿಲ್ಲ ||122||
ಹಸಿವಿನಿಂ ಬಳಲುವಾ ಜನರಿಲ್ಲ ಅಲ್ಲಿ |
ಸುಖಸಂತಸ ಶಾಂತಿ ಜನಕೆಲ್ಲ ಅಲ್ಲಿ ||125||
ವರ್ಷಗಳು ಹನ್ನೊಂದು ಸಾವಿರದ ವರೆಗೆ |
ಶ್ರೀರಾಮ ನಿಜರಾಜ್ಯವಾಳಿಹನು ಕೊನೆಗೆ ||127||
ಪಠಿಸಿದ ಮೂಲ ರಾಮಾಯಣವಿದನು |
ಇಹಪರದಿ ನರ ಸತತ ಸುಖವ ಪೊಂದುವನು ||130||
ಪುತ್ತೂರು ಕರಿಯಪ್ಪನಾ ಸುತನಾದ ನಾನು |
ನಾರಾಯಣಾಖ್ಯನಿದನಿಂತು ರಚಿಸಿಹೆನು ||131||
ನೀಡುವುದು ಶಾಂತಿಯನು ಶ್ರೀದೇವ ಮನಕೆ |
ಜಯ ನಿತ್ಯ ಶುಭಮಂಗಲವು ಜಗಕೆ ||132||

132 ದ್ವಿಪದಿಗಳಲ್ಲಿ ರಚಿತವಾದ ಈ ಮೂಲ ರಾಮಾಯಣ ಸರಳ ಸುಂದರವಾಗಿ ನಿರೂಪಿತವಾಗಿದೆ. ಇದನ್ನು ಬರೆದ ವರ್ಷ ದೊರೆತಿಲ್ಲ. ಇದನ್ನು ಓದುತ್ತಿದ್ದರೆ ಕೇವಲ ಕೆಲವು ತಾಸುಗಳಲ್ಲಿ ರಚಿಸಿದಂತೆ ತೋರುತ್ತದೆ. ಉಪಯೋಗಿಸಿದ ಮಸಿಯಲ್ಲಿ  (ಶಾಯಿ) ಕಿಂಚಿತ್ತು ಬದಲಾವಣೆ ಇಲ್ಲ. ಅನಾಯಾಸವಾಗಿ, ಸುಲಲಿತವಾಗಿ ದ್ವಿಪದಿಯ ನಡೆಯಲ್ಲಿ ರಾಮಾಯಣ ಸಾಗಿದೆ. ಇಲ್ಲಿ ನಾನು ವಿಮರ್ಶೆ ಮಾಡುತ್ತಿಲ್ಲ. ಕವಿಯ ಸಾಮರ್ಥ್ಯದ ಬಗ್ಗೆ ಹೇಳುತ್ತಿದ್ದೇನೆ. ಎರಡು ಮೂರು ಸಾಲುಗಳಲ್ಲಿ ಮಾತ್ರ ಪದವಿಟ್ಟು  ಅಳಿಸಿದುದನ್ನು ಬಿಟ್ಟರೆ ಸರಾಗವಾದ ಓಟದಲ್ಲಿ ಈ ರಚನೆ ಮುಗಿದಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಸಾಂಗತ್ಯದಲ್ಲಿ ರಚಿಸಿದ ‘‘ಮಹಾವೀರ ವಾಣಿ’’ಯಲ್ಲೂ ಇದೇ ರೀತಿಯ ಅನುಭವ ವಾಗುತ್ತದೆ. ಸಾಂಗತ್ಯದ ನಡೆಯಲ್ಲಿ ಅವರು ಎಲ್ಲೂ ಎಡವಿಲ್ಲ. ಅಡಚಣೆ ಅವರಿಗೆ ಆಗಿಲ್ಲ. ನಿಪುಣ ಬರಹದ ಓಟ ಮಾತ್ರ ಗಮನಾರ್ಹವಾದುದು. ಅಕ್ಷರ ಹಾಗೂ ಬಳಸಿರುವ ಕಾಗದ ಗಳನ್ನು ಗಮನಿಸಿದರೆ ಸುಮಾರು 1946ರಲ್ಲೆ ಅವರು ಈ ಮಹಾವೀರ ವಾಣಿಯನ್ನು ರಚಿಸಿರುವರೆಂದು ಊಹಿಸಬಹುದಾಗಿದೆ.

ತಂದೆಯವರು ‘ಪುನಾಕ’ ಎಂಬ ಕಾವ್ಯನಾಮದಲ್ಲಿ ಬರೆದ ಕವನಗಳನ್ನು ಆ ಕಾಲದ ಪತ್ರಿಕೆಗಳಿಗೆ ಕಳುಹಿಸುತ್ತಿದ್ದು ಅವುಗಳೆಲ್ಲವೂ ಪ್ರಕಟವಾಗಿವೆ. 1953ರಲ್ಲಿ ಅವರ ಮೊದಲ ಕವನ ಸಂಕಲನ ‘ಮೊದಲ ಮೊಗ್ಗೆ’ ಪ್ರಕಟವಾಯಿತು. ಸಂಕಲನದ ಅರಿಕೆಯಲ್ಲಿ ಕವಿ ಹೀಗೆ ಹೇಳಿದ್ದಾರೆ. ‘‘ಈ ಸಂಕಲನದ ಕವನಗಳು ಸಂಕಲನದಲ್ಲಿ ಅಚ್ಚಾಗುವ ಮುನ್ನ ಕರ್ಮವೀರ, ಕನ್ನಡ ನುಡಿ, ಪ್ರಭಾತ, ಪ್ರಜಾಮತ, ನವಯುಗ, ಬಾಲಚಂದ್ರ, ಉಷಾ, ಸುಬೋಧ – ಮುಂತಾದ ಪತ್ರಿಕೆ ಗಳಲ್ಲಿ ಬೆಳಕು ಕಂಡಿವೆ.’’

ಈ ಸಂಕಲನದಲ್ಲಿ ಒಟ್ಟು 34 ಕವನಗಳಿವೆ. ಇವು ರಮ್ಯ ಪ್ರಕಾರಕ್ಕೆ ಸೇರುವ ಕವನಗಳು. ಇವುಗಳಲ್ಲಿ ಪ್ರೇಮ ಕವನಗಳಿವೆ. ನಾಡು-ನುಡಿ ಕುರಿತವು, ದೇಶಭಕ್ತಿ ಕುರಿತ ಕವನಗಳಿವೆ. ಪ್ರಕೃತಿ ಕುರಿತ ಕವನಗಳಿವೆ. ಕವನಗಳಲ್ಲಿ ಗೇಯಗುಣ ಪ್ರಧಾನವಾಗಿದೆ. ಪ್ರಾಸದ ಬಗ್ಗೆ ಕಟ್ಟು ಇಲ್ಲದಿದ್ದರೂ ಒಲವು ಇದೆ.

‘‘ಚೈತ್ರೆ ಬಂದಳು’’ ಕವನದ ಸಾಲುಗಳು ಹೀಗಿವೆ :

ಭುವಿಯು ಚೆಲುವ ಸೂಸುತಿರಲು
ಕವಿಯ ಭಾವ ಬೆಳೆಯುತಿರಲು
ಸವಿಯ ಹೊನಲು ಹರಿಯುತಿರಲು
ಚೈತ್ರೆ ಬಂದಳು
ಜೀವ ತಂದಳು

ಅವಳಾರು, ಕನಸೆಲ್ಲ ನನಸು, ಕ್ರಾಂತಿಗಳಾಗಲಿ ಜಯವು, ಬೆಳೆಯುತಿದೆ ಜನಶಕ್ತಿ, ಜಯಘೋಷ, ವಂದನವೀ ಧ್ವಜವಂದನ, ಗಣರಾಜ್ಯಗೀತೆ, ಆಹ್ವಾನ – ಕವನಗಳಲ್ಲಿ ದೇಶಭಕ್ತಿಯ ಕೆಚ್ಚು ಕೆರಳಿದೆ. ಸ್ವಾತಂತ್ರ್ಯದ ಬಗ್ಗೆ ಒಲವು ಚಿಮ್ಮಿದೆ.

‘ಕ್ರಾಂತಿವಾಗಲಿ ಜಯವು’ ಕವನದ ಸಾಲುಗಳನ್ನು ನೋಡಿ :

ವರ್ಗಕುಲಭೇದ ವಳಿಯುತ್ತಲೀ ಭೂಮಿಯಲಿ
ಸ್ವರ್ಗಸುಖ ಸಂಪತ್ತು ಸಮಭಾವ ಬೆಳೆದು
ಜನಶಕ್ತಿ ತಾನೆದ್ದು ಹೊರಶಕ್ತಿ ಹೊರನಡೆದು
ಘನವಾದ ಜನರಾಜ್ಯ ತಾ ಬೆಳೆ ಬೆಳೆದು
ಕ್ರಾಂತಿಗಾಗಲಿ ಜಯವು, ಕ್ರಾಂತಿಗಾಗಲಿ ಜಯವು

‘ಎಂದು ಬರುವೆ ಎನ್ನ ನಲ್ಲ’ ಕವನದಲ್ಲಿ ನಲ್ಲೆಯ ಕಾತರ, ತಳಮಳ, ಕಾಯುವಿಕೆ ನವಿರಾಗಿ ಮೂಡಿದೆ.

ಅಗಲಿದ ಕಂದನನ್ನು ಕುರಿತ ‘ವಿಜಯಾ’ ಹಾಗೂ ‘ತಂಗಿಯಾ ನೆನಪು’ – ಶೋಕ ಗೀತೆಗಳು. ಓದುಗರ ಮನವನ್ನು ಅವು ಕಲಕುತ್ತವೆ.

‘ಕನ್ನಡ ನುಡಿ’ ಮತ್ತು ‘ಆಹ್ವಾನ’ – ಕನ್ನಡ ನುಡಿಯ ಕುರಿತಾದ ಕವನಗಳು. ‘ಆಹ್ವಾನ’ ಕವನದ ಸಾಲುಗಳು ಹೀಗಿವೆ –

ಕನ್ನಡದ ತಾಯವ್ವ ಕರೆಯುವಳು ಕಂದರನು
ಸ್ವಾತಂತ್ರ್ಯ ಸುಗ್ಗಿಯಲಿ ಓ ಎನ್ನಿಯೆನ್ನಿ |
ಸಾಹಿತ್ಯ ಹಬ್ಬದಲಿ ಕನ್ನಡದ ಕಬ್ಬದಲಿ
ಏಳೋಣ ಬಾಳೋಣ ಓ ಬನ್ನಿ ಬನ್ನಿ ||1||

ಪಂಪನಾ ಪೆಂಪನ್ನು ಕಂತಿಯಾ ಕಾಂತಿಯನು
ರನ್ನನಾ ರಸಪಾಕವನು ಸವಿದು ಬನ್ನಿ
ನಾಗಚಂದ್ರನ ಜಾಣ್ಮೆ ರಾಘವಾಂಕನ ಧೈರ್ಯ
ನಾರಣಪ್ಪನಾ ಭಕ್ತಿಯನು ತಿಳಿದು ಬನ್ನಿ ||2||

ಕಾವೇರಿ ಗೋದೆಯರು, ಕೃಷ್ಣೆ ವರ ಬೀಮೆಯರು
ಸೀತೆ ನೇತ್ರಾವತಿ ಪಯಸ್ವಿನಿಯರೆಲ್ಲ
ಕಲಕಲನೆ ನಲಿನಲಿದು ನೊರೆಯೇರಿ ಹರಿಯುತಿಹ
ಸೊಬಗನ್ನು ಸಿರಿಯನ್ನು ಬಣ್ಣಿಸುತ ಬನ್ನಿ ||4||

ತೆರೆಮಸಗಿ ಭೋರ್ಗರೆವ ಕಡಲಿನಾ ಸಿರಿಯನ್ನು
ಮಾರ್ವಲೆತು ನಿಂದ ಸಹ್ಯಾದ್ರಿ ಬೆಡಗನ್ನು
ಹೊಂಬಾಳೆ ರಸದಾಳಿ ಮಾಮರದ ಬಯಲನ್ನು
ಮಲ್ಲಿಗೆಯ ಕಂಪನ್ನು ಬಣ್ಣಿಸುತ ಬನ್ನಿ ||5||

ಜಾತಿ ಮತದಲಿ ಭಾಷೆ ರೀತಿಯಲಿ ಪುಟಿಯಾದ
ಕನ್ನಡವನೊಂದಾಗಿ ಕಟ್ಟಲಿಕೆ ಬನ್ನಿ
ಕನ್ನಾಡು ಭಾರತವು| ಭಾರತವೆ ಕನ್ನಾಡು
ಯೆಂದೆಂಬ ಮಂತ್ರವನ್ನು ಜಪಿಸುತ್ತ ಬನ್ನಿ ||10||

ತಂತ್ರ್ಯ ಕ್ರಾಂತಿಗಳ ಜನದ ಸುಖ ಶಾಂತಿಗಳ
ಚಿತ್ರಿಸುತ ಹಾಡಲಿಕೆ ಬನ್ನಿ ನೀವ್ ಓಡಿ
ಹಿಂದಿನಾ ಸಂಸ್ಕೃತಿಯ ಮುಂದಿನಾ ಫಲಶ್ರುತಿಯ
ಎಲ್ಲವನು ತಿಳಿಯುತ್ತೆ ನವಕಾವ್ಯ ಹಾಡಿ ||11||

ಈ ಕವನದಲ್ಲಿ 11 ಪದ್ಯಗಳಿವೆ. ಇಷ್ಟು ಪದ್ಯಗಳಲ್ಲಿ ಕನ್ನಡ ನಾಡಿನ ಪೂರ್ಣ ಚಿತ್ರಣ, ಇತಿಹಾಸ, ಕಲೆ, ಕವಿ, ಕಾವ್ಯ, ನೆಲ, ನದ, ಜೀವನ -ಎಲ್ಲವೂ ಸಮರ್ಥವಾಗಿ ಬಿಂಬಿತವಾಗಿವೆ. ಕವಿಯ ಕನ್ನಡ ನಾಡು ಕುರಿತ ಅಭಿಮಾನ, ಕಳಕಳಿ, ಆಶಯ ಎಲ್ಲವೂ ಇಲ್ಲಿ ಸುಸ್ಪಷ್ಟವಾಗಿವೆ.

ದೇಶಭಕ್ತಿಯು ಚಿಮ್ಮುವ ಈ ಮುಂದಿನ ಕವನದ ಶೀರ್ಷಿಕೆ ಗಣರಾಜ ಗೀತೆ. ಈ ಗೀತೆ ಆರಂಭವಾಗುವುದು ಹೀಗೆ :

ಜಯ ಜಯ ಭಾರತ, ಜಯ ಜಯ ಭಾರತ ಜಯ ಭಾರತವೆಂದೆನ್ನಿ ||
ದಾಸ್ಯವನೋಡಿಸಿ, ಬಿಡುಗಡೆಯಾಡಿಸಿ
ಲಾಸ್ಯವ ಜನಮನಕೊದಗಿಸುತೀಗ

ಮೂಡಿತು ಭಾರತ ಗಣರಾಜ್ಯ!
ಹಾಡಿರಿ ಜನತೆಯ ಸಾಮ್ರಾಜ್ಯ!

ಋಷಿಗಳ ತಪಸು, ಕವಿಗಳ ಕನಸು
ಯೋಧರ ನೆನಸು, ಭಾರತ ಸೊಗಸು

ನವೀನ ಭಾರತ ಗಣರಾಜ್ಯ!
ಸುವೀರ ಚರಿತೆಯ ಸಾಮ್ರಾಜ್ಯ!

ಕೃಷ್ಣನ ಯೋಗವು ಬುದ್ಧನ ತ್ಯಾಗವು
ಗಾಂದಿಯ ಸತ್ಯವು ಅಹಿಂಸೆಯೆಲ್ಲವು

ಬೆರೆತಿಹ ಭಾರತ ಗಣರಾಜ್ಯ!
ಮೆರೆಯಲಿ ಧರ್ಮದ ಸಾಮ್ರಾಜ್ಯ!

ಸಮರದ ಯಾತನೆ ಜಗದಿಂ ತೊಲಗಿಸಿ
ಸಮತೆಯ ನೀತಿಯ ಜಗದಲಿ ಹಬ್ಬಿಸಿ

ಆಳಲಿ ಭಾರತ ಗಣರಾಜ್ಯ!
ಬಾಳಲಿ ಶಾಂತಿಯ ಸಾಮ್ರಾಜ್ಯ!

ಇಲ್ಲಿನ ಮಾತ್ರಾಲಯಗಳು ಗೇಯ ಪ್ರಧಾನವಾಗಿದ್ದು ಓದುಗರಲ್ಲಿ ದೇಶಭಕ್ತಿ ಹೊಮ್ಮು ವಂತೆ ಮಾಡುತ್ತವೆ. ಬಾಲ್ಯದಲ್ಲಿಯೇ ತಂದೆಯವರಿಗೆ ದೇಶದ ಮೇಲೆ ಭಕ್ತಿ ಹೆಚ್ಚು. ಯೌವನದ ಆರಂಭದಲ್ಲೇ ಸ್ವಾತಂತ್ರ್ಯದ ಹೋರಾಟದಲ್ಲಿ ಧುಮುಕಿ ಜೈಲಿಗೆ ಹೋದವರು ಅವರು. ಮೊಳಹಳ್ಳಿ ಶಿವರಾಯರ ಉಪದೇಶದಿಂದಾಗಿ, ಕುಟುಂಬದ ರಕ್ಷಣೆಗಾಗಿ ಅನಂತರ ಬಾಹ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಬಿಟ್ಟರೂ ಆ ಕಾಲದಲ್ಲಿ ರಚಿತವಾದ ಅವರ ಕವನಗಳಲ್ಲಿ, ಮಾಡಿದ ಭಾಷಣ ಗಳಲ್ಲಿ, ಬರೆದ ಲೇಖನಗಳಲ್ಲಿ ‘ದೇಶಭಕ್ತಿ’ ಎದ್ದು ಕಾಣುವ ಅಂಶವಾಗಿತ್ತು. ಗಾಂಧೀಜಿ, ನೆಹರೂ, ಅನ್ನಿಬೆಸೆಂಟ್ ಮೊದಲಾದ ರಾಷ್ಟ್ರನಾಯಕರನ್ನು ಕುರಿತ ಭಾಷಣಗಳನ್ನು, ಪ್ರಜಾಪ್ರಭುತ್ವ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆಗಳಂಥ ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಅವರ ಭಾಷಣಗಳನ್ನು ಕೇಳುವ ಸುಯೋಗ ನನ್ನದಾಗಿತ್ತು. ದೇಶಭಕ್ತಿಯ ಕೆಚ್ಚು, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸಾಮಾನ್ಯರ ತ್ಯಾಗ – ಬಲಿದಾನಗಳನ್ನು ಹೇಳುವಾಗ ಅವರು ತುಂಬ ಭಾವುಕರಾಗುತ್ತಿದ್ದರು.

ಕವಿಯಾದ ತಂದೆಯವರನ್ನು ಇರುಳು ಶಾಲೆಯಿಂದ ಬಿಡಿಸಿ ಹಗಲು ಶಾಲೆಗೆ ಸೇರಿಸಿದ ಮೊಳಹಳ್ಳಿ ಶಿವರಾಯರನ್ನು ಕೃತಜ್ಞತೆಯಿಂದ ನೆನೆಯುವ ಕವನ ‘ಹಾರೈಕೆ’ – ಅಷ್ಟಷಟ್ಪದಿಯಲ್ಲಿ ರಚಿತವಾದ ಪದ್ಯ ಅದು.

ಇನ್ನೊಂದು ಅಷ್ಟಷಟ್ಪದಿಯಲ್ಲಿ ರಚಿತವಾದುದು-‘‘ಬೀದಿಯಲ್ಲಿ ಬಿದ್ದಿದ್ದ ಚೆಂಗುಲಾಬಿಯ ಕಂಡು’’ ಇದು ಧ್ವನಿಪೂರ್ಣವಾದ ಪದ್ಯ. ಸಾಲು ಸಾಲುಗಳು ಅರ್ಥ ಗರ್ಬಿತವಾಗಿವೆ.

ತಾಯ್ಗಿಡದೊಳಿದ್ದ ಬೆಡಗಿನಿತಿಲ್ಲ | ಚೆಂಬಣ್ಣ
ಮಣ್ಣು ಪಾಲಾಗಿಹುದು | ಮುಚ್ಚಿಹುದು ಸಿರಿಗಣ್ಣು
ಬಣ್ಣಿಸುತ ಪಿಡಿದೆತ್ತಿ ಸೂಡುವವರಿಲ್ಲೆನುತ
ಬಾಯ್ಬಿಟ್ಟು ಒರಲುತಿದೆ  – ಎದೆ ಬಿಚ್ಚಿ ಕೊರಗುತ್ತ !
ಬಸಿರಿನೊಳು ಹುದುಗಿದ್ದ ಬಯಕೆಗಳೆನಿತೊ ! ಆರು
ಬಲ್ಲರಾ ಒಡಲ ಬೇಗೆಯನು? ನವ ಯೌವನವು
ಮೆಲ್ಲಮೆಲ್ಲಡಿಯಿಡುವ ಗಾಡಿಯ ಬೆಡಗನಾವ
ಈಶ್ವರನಿಗರ್ಪಿಸಲು ಬಯಸಿದೆಯೊ! ಬಲ್ಲರಾರ್?

ಅರಳುತಿಹ ಮೊಗದಿಂದ ಪರಿಮಳಿಪ ನಿನ್ನನ್ನು
ಕೊರಳು ಕೊಯ್ದೀ ಬೀದಿಗೆಸೆದ ನರ ರಕ್ಕಸನೆ!
ಅರುಹಲಂಜುವೆಯೇಕೆ ದುರುಳನಾ ಹೆಸರನ್ನು
ಅರೆಚಣದ ಸುಖಕ್ಕಾಗಿ ನಿನ್ನತುಳ ಸೌಂದರ್ಯ
ಸಿರಿಯನ್ನು ಮುರಿದಿರಿವ ನರನಲ್ಲಿ ಔದಾರ್ಯ
ವಿನಿತಿಲ್ಲ! ಗುಡಿಗಟ್ಟಿಹುದು ಸ್ವಾರ್ಥದಾ ಕ್ರೌರ್ಯ!

ದೌರ್ಜನ್ಯಕ್ಕೊಳಗಾದ ಹೆಣ್ಣಿನ ಬಗ್ಗೆ ಇದನ್ನು ಬರೆದಿರುವ ಹಾಗಿದೆ. ರೂಪಕ ಅನ್ವರ್ಥ ವಾಗಿದೆ. ಹೆಣ್ಣಿನ ಶೋಷಣೆ, ಗಂಡಿನ ಕ್ರೌರ್ಯ ಮನ ಕಲಕುವಂತಿದೆ.

ಒಂದು ಕೃತಿಯ ಮೌಲ್ಯ ನಿರ್ಣಯ ಮಾಡಬೇಕಾದರೆ ಆ ಕೃತಿಯು ರಚಿತವಾದ ಕಾಲ, ಪರಿಸರ, ಆ ಕಾಲದ ಸಾಹಿತ್ಯದ ಅಧ್ಯಯನ – ಇವೆಲ್ಲಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಇದು ವಿಮರ್ಶೆ ಅಲ್ಲ. ಪರಿಚಯ ಮಾತ್ರ. ಒಟ್ಟಿನಲ್ಲಿ ಈ ಕವನ ಸಂಕಲನ ತನ್ನ ಕವನಗಳಿಂದ ಓದುಗರ ಮನ ಸೆಳೆಯುವಲ್ಲಿ ಪರಿಣಾಮಕಾರಿಯಾಗಿದೆ. ‘ಮೊದಲ ಮೊಗ್ಗೆ’ ಶೀರ್ಷಿಕೆಯೂ ಸೊಗಸಾಗಿದೆ.

ನಾಟಕಕಾರರಾಗಿ

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗಲೇ ನಾಟಕದಲ್ಲಿ, ಅದರಲ್ಲೂ ಕಾರಂತರು ಬರೆದು ನಿರ್ದೇಶಿಸಿದ ನಾಟಕಗಳಲ್ಲಿ ನಟಿಸಿದ ಶ್ರೇಯಸ್ಸು ಅವರದು. ಈ ಮೊದಲೇ ಅವರ ಪರಿಚಯ ತಿಳಿಸುವ ಸಂದರ್ಭದಲ್ಲಿ ಆ ಪ್ರಸ್ತಾವನೆ ಬಂದಿದೆ.

ತಂದೆಯವರ ನಾಟಕ ನೋಡಿದ ಪ್ರಗತಿಶೀಲ ಸಾಹಿತಿ, ಕಾದಂಬರಿಕಾರ ಶ್ರೀ ನಿರಂಜನ ಅವರ ಬಗ್ಗೆ ‘ಸ್ಫಟಿಕ ಮಂಜೂಷ’ದಲ್ಲಿ ಬರೆದಿರುವುದು ಇಲ್ಲಿದೆ – ‘‘ನಾನಾಗ ಒಂಭತ್ತರ ಹರೆಯದ ಹುಡುಗ (1932). ಊರಿನ ಹೆಸರು ಕಾವು. ಅಲ್ಲಿನ ಪ್ರಾಥಮಿಕ ಶಾಲೆಯಲ್ಲಿ ನಾನು ವಿದ್ಯಾರ್ಥಿ. ಒಂದು ಸಂಜೆ ಅಲ್ಲಿ ಗದ್ದಲ. ಕಾರಂತರ ತಂಡದವರು ನಾಟಕ ಆಡುತ್ತಾರೆ ಎಂಬ ಸಂಭ್ರಮ. ಹಿರಿತನ ಊರಿನ ಪಟೇಲರದು. ಶಾಲೆಯ ಜಗಲಿ ರಂಗಸ್ಥಳ. ಅಂಗಳವೇ ಪ್ರೇಕ್ಷಾಗೃಹ. ಡೊಮಿಂಗೊ ಎಂಬ ಏಕಾಂಕ ನಾಟಕ ಮುಗಿಯಿತು. ವಿರಾಮದ ಬಳಿಕ ಇನ್ನೊಂದು ಏಕಾಂಕ ಶುರುವಾಗಬೇಕು. ಬಿಳಿ ಅಂಗಿ ತೊಟ್ಟಿದ್ದ ಒಬ್ಬ ಯುವಕ ರಂಗಸ್ಥಳದ ಮರೆಯಿಂದ ಬಂದು ನಮ್ಮೊಡನೆ ಕುಳಿತರು. ಅದೇ ಆಗ ಮುಗಿದಿದ್ದ ನಾಟಕದಲ್ಲಿ ಸ್ತ್ರೀ ಪಾತ್ರ ವಹಿಸಿದ್ದ ವ್ಯಕ್ತಿ! ಹತ್ತಿರ ಹತ್ತಿರ ಸರಿದೆ. ಕೈ ಚಾಚಿದೆ. ಅವರ ಕೈಯಲ್ಲಿ ಹತ್ತಾರು ಪುಸ್ತಿಕೆಗಳಿದ್ದುವು. ಒಂದನ್ನು ಕೊಟ್ಟರು.. ! ‘ಡೊಮಿಂಗೊ’.

ಮುಂದೆ ಎರಡು ಮೂರು ವರ್ಷಗಳ ಬಳಿಕ ಪುತ್ತೂರಿಗೆ ಹೋದೆ. ಕಾರಂತರ ನೇತೃತ್ವದಲ್ಲಿ ನಡೆಯುತ್ತಿದ್ದ ನಾಡಹಬ್ಬ ನೋಡಲು. ಅಲ್ಲಿ ನನ್ನ ಡೊಮಿಂಗೊ ಮಿತ್ರರಿದ್ದರು. ನನ್ನ ಹಿಂದಿನ ಭೇಟಿಯನ್ನು ಪ್ರಸ್ತಾಪಿಸಿ ಅವರ ಹೆಸರು ಕೇಳಿದೆ. ಪಿ.ಕೆ. ನಾರಾಯಣ ಅಂದರು. ತಮಗಿಂತ ಒಂದು ದಶಕ ಕಿರಿಯನ ಜತೆ ಸ್ನೇಹಭಾವದಿಂದಲೇ ನಡೆದುಕೊಂಡರು.’’

ಶಿವರಾಮ ಕಾರಂತರ ಹೆಚ್ಚು ಕಡಿಮೆ ಎಲ್ಲ ನಾಟಕಗಳಲ್ಲಿ ಅವರು ಸ್ತ್ರೀ ಪಾತ್ರವನ್ನೇ ಮಾಡುತ್ತಿದ್ದರು. ‘ಸೊಹ್ರಾಬ್ – ರುಸ್ತುಮ್’ನಲ್ಲಿ ಅವರದು ಸೋಹ್ರಾಬ್ ಪಾತ್ರ. ಕಾರಂತರು ‘ಚೋಮನ ದುಡಿ’ ಸಿನಿಮಾ ಮಾಡುವಾಗ ‘ಚೋಮ’ನ ಪಾತ್ರಕ್ಕೆ ತಂದೆಯವರನ್ನು ಆಯ್ಕೆ ಮಾಡಿದ್ದರು. ಆದರೆ ಅನಾರೋಗ್ಯದ ಕಾರಣ ತಂದೆಯವರು ಆ ಪಾತ್ರ ಮಾಡಲಾಗಲಿಲ್ಲ.

ಕಾರಂತರ ಜತೆಯಲ್ಲಿ ಪಳಗಿದ ಅವರು ಕನ್ನಡ ಪಂಡಿತರಾಗಿ ಮಂಗಳೂರಿನ ಬೆಸೆಂಟ್ ಶಾಲೆಗೆ ಸೇರಿದ ಮೇಲೆ ತಮ್ಮ ನಾಟಕ ರಚನೆ, ನಿರ್ದೇಶನಗಳನ್ನು ಒರೆಗೆ ಹಚ್ಚುವ ಅವಕಾಶ ದೊರೆಯಿತು. ತಮ್ಮ ನಿವೃತ್ತಿಯವರೆಗೂ ಶಾಲಾ ವರ್ಧಂತ್ಯುತ್ಸವಗಳಲ್ಲಿ ತಾವೇ ಸ್ವತಃ ನಾಟಕ ಬರೆದು ನಿರ್ದೇಶಿಸಿ ಊರಿನ ಪ್ರೇಕ್ಷಕರಿಂದ ಯಶಸ್ವೀ ನಾಟಕಕಾರ – ಯಶಸ್ವೀ ನಿರ್ದೇಶಕ ಎಂಬ ಪ್ರಶಂಸೆಗೆ ಪಾತ್ರರಾದವರು ಅವರು. ಅವರ ಅಧ್ಯಾಪನದ ಅವಧಿಯಲ್ಲಿ ಅಂದರೆ 33 ವರ್ಷಗಳ ಸೇವಾವದಿಯಲ್ಲಿ ಅದಕ್ಕೂ ಹೆಚ್ಚಿನ ನಾಟಕಗಳನ್ನು, ರೂಪಕಗಳನ್ನು, ಛಾಯಾ ರೂಪಕಗಳನ್ನು, ನೃತ್ಯ – ಗೀತ ರೂಪಕಗಳನ್ನು ಬರೆದು ನಿರ್ದೇಶಿಸಿದವರು ಅವರು. ಇತರ ಸಂಘ ಸಂಸ್ಥೆ ಗಳಿಗಾಗಿಯೂ ನಾಟಕ ಬರೆದು ನಿರ್ದೇಶನ ಮಾಡಿದ ಶ್ರೇಯಸ್ಸು ಅವರದು. ದೌರ್ಭಾಗ್ಯದ ವಿಷಯವೆಂದರೆ ಅವರ ಎರಡು ನಾಟಕಗಳನ್ನು ಬಿಟ್ಟರೆ ಉಳಿದ ಯಾವ ನಾಟಕಗಳಿಗೂ ಪ್ರಕಟಣೆಯ ಭಾಗ್ಯ ಲಬಿಸಲಿಲ್ಲ. ಅವು ಹಸ್ತಪ್ರತಿಯಲ್ಲೇ ಉಳಿದಿವೆ.

ಶ್ರೀಯತರ ನಾಟಕಗಳಲ್ಲಿ ಹತ್ತು ಪೌರಾಣಿಕ ನಾಟಕಗಳು, ಏಳು ಐತಿಹಾಸಿಕ ನಾಟಕ ಗಳು. ಅವುಗಳಲ್ಲಿ ಎರಡು ಅಪೂರ್ಣವಾಗಿವೆ. ಐದು ಪೌರಾಣಿಕ ಗೀತ ರೂಪಕಗಳು. ಏಳು ಐತಿಹಾಸಿಕ ಗೀತ ರೂಪಕಗಳು. ಅಂದರೆ ಒಟ್ಟು 29 ನಾಟಕ ರೂಪಕಗಳನ್ನು ಅವರು ಬರೆದಿದ್ದಾರೆ. ಪ್ರಕಟವಾಗಿರುವುದು ಸೇರಿದರೆ 31 ನಾಟಕಗಳಾಗುತ್ತವೆ. ಈ ಅಪ್ರಕಟಿತ ನಾಟಕಗಳ ಪಟ್ಟಿಯನ್ನು ಅನುಬಂಧದಲ್ಲಿ ಕೊಡಲಾಗಿದೆ.

ಅವರ ಅಪ್ರಕಟಿತ ನಾಟಕ – ರೂಪಕಗಳ ಪಾತ್ರಗಳಲ್ಲಿನ ಕೆಲವು ಮಾತುಗಳನ್ನು ಇಲ್ಲಿ ಉದಾಹರಿಸಿದ್ದೇನೆ.

ಅಂಬೆ : ಗತಕಾಲದ ಕನ್ನಡಿಯಲ್ಲವೆ ವರ್ತಮಾನದ ವರ್ತನೆಗೆ ದಾರಿ ತೋರುವುದು? ಗತವೈಭವವೆ ಭವಿಷ್ಯತ್ತಿನ ಮೂಲವಲ್ಲವೆ? (ಪ್ರತೀಕಾರದ ಪ್ರತಿಜ್ಞೆ)

ಕೃಷ್ಣ : ವಿಶ್ವವೆಂಬೀ ಕಮಲದಲ್ಲಿ ಅದಿಷ್ಠಿತನಾಗಿರುವ ನಾರಾಯಣನೇ ವಿಶ್ವೇಶ್ವರನು. ಅವನ ಕೈಯಲ್ಲಿರುವ ಪಾಂಚಜನ್ಯವೇ ಜ್ಞಾನ ಸ್ವರೂಪವು. ಈ ಸುದರ್ಶನವೇ ನೀತಿ ಸ್ವರೂಪ. ನೀತಿಯ ಉಲ್ಲಂಘನೆಯಾದರೆ ಈ ಗದೆಯಿಂದ ಅದಕ್ಕೆ ಶಾಸನವಾಗುತ್ತದೆ. ಪಾಲನೆ-ಪೋಷಣೆಗಳ ಪ್ರತೀಕದಂತಿರುವುದೇ ಪದ್ಮವು… ಮಾನವರೆಲ್ಲ ಒಂದೇ ಜಾತಿ… ಅವರಿಗಿರುವುದೊಂದೇ ವೇದ…

(ಗೋಕುಲಾನಂದ)

ದ್ರೌಪದಿ : ನನ್ನ ಮನಸ್ಸೇಕಿಂತು ಉಯ್ಯಲೆಯಾಡುತ್ತಿದೆ? ಸ್ಥಿರತೆಯ ಆ ಕೊನೆಯಿಂದ ಅಸ್ಥಿರತೆಯ ಈ ಕೊನೆಯನ್ನು ಮುಟ್ಟುವುದೇಕೆ?

(ಸತೀಮಣಿ ದ್ರೌಪದಿ ದೇವಿ)

ರಾಮ : ಅಮ್ಮಾ ಪಿತನಾಜ್ಞೆ ನನಗೆ ಧರ್ಮ. ಧರ್ಮಿಷ್ಠನಾದವನು ಮಾತಾಪಿತೃಗಳ ಮಾತನ್ನು ಮನ್ನಿಸಲೇ ಬೇಕು. ಅಲ್ಲದೆ ಇದು ವಿದಿ ನಿಯಮವೆಂದೇಕೆ ನೀನು ತಿಳಿಯಬಾರದು? ನಮ್ಮೆಲ್ಲರನ್ನು ಪ್ರೀತಿಸುವ ಕೇಕಯಾ ರಾಣಿಗೆ ವಿದಿಯೇ ಪ್ರೇರೇಪಿಸಿ ಇಂತಾಡಿಸುತ್ತಿದೆಂಯೆಂದು ನಂಬು.  (ಪಿತ್ಮವಾಕ್ಯ ಪರಿಪಾಲನ)

ಚಿತ್ರಾ: … ಆಗ ನಾನೊಂದು ಹೂವೆಂದೇ ಭಾವಿಸಿದೆನು. ಆ ಹೂವಿಗಿರುವುದು ತ್ವರಿತವಾಗಿ ಕಳೆದುಹೋಗುವ ಕೆಲವೇ ತಾಸಿನ ಜೀವನ! ಆಗ ಅದು ಪ್ರಶಂಸೆಯ ಝೇಂಕಾರವನ್ನು ಕೇಳುವುದು. ಕಾನನದ ಪಿಸುಮಾತುಗಳನಾಲಿಸುವುದು. ಆ ಮೇಲೆ ಗಗನಕ್ಕೆತ್ತಿದ ತನ್ನ ಕಣ್ಣುಗಳನ್ನು ಕೆಳಗಿಳಿಸುವುದು. ಒಂದೇ ಉಸಿರಿನಲ್ಲಿ ಒಂದಷ್ಟು ದುಃಖವಿಲ್ಲದೆ ತನ್ನನ್ನು ಬಲಿ ನೀಡುವುದು ಧೂಳಿಗೆ. ಈ ರೀತಿಯಲ್ಲಿ ಭೂತಭವಿಷ್ಯತ್ತುಗಳಿಲ್ಲದ ಪರಿಪೂರ್ಣತೆಯ ಕಿರುಗತೆಯು ಕೊನೆಗೊಳ್ಳುವುದು.

(ಚಿತ್ರಾಂಗದಾ)

ಶಕುಂತಲೆ (ದುಃಖದಿಂದ)

ಎದೆಯ ತುಂಬಿದೊಲವಿನಲ್ಲಿ ವಿಷವು ಇಂದು ಬಂದಿತೇ?

ಕಾವನಿಂದ ಕಾವರಿಲ್ಲವೆಂಬ ಸ್ಥಿತಿಯ ತಂದಿತೆ?

(ಪುನರ್ಮಿಲನ – ಗೀತರೂಪಕ)

ಕವಿ : ವಿಶ್ವ ಸೋದರತೆಯನು ಜಗಕ್ಕೆಲ್ಲ ಬಿತ್ತರಿಸೆ

ಜಗವೆಲ್ಲ ಅಲೆದಿಹಳು ಹತ್ತೆಂಟು ಬಾರಿ

ಸೋದರತೆ ಸಾರಲ್ಕೆ ಚರಪಥ ಮಿಗಿಲೆಂದು

ಭಾರತಕೆ ತಾನೊಂದು ಸಂಘ ರಚಿಸಿದಳು

(ಎನಿಬೆಸೆಂಟ್ ದರ್ಶನ – ಗೀತರೂಪಕ)

ಎಲ್ಲ ನಾಟಕಗಳಿಂದ ಉದಾಹರಿಸಲು ಸ್ಥಳಾಭಾವ. ಅವರು ಬರೆದ ಈ ಎಲ್ಲ ನಾಟಕ ಗಳಲ್ಲಿ ಸಂಭಾಷಣೆಯೇ ಹೆಚ್ಚು ಪರಿಣಾಮ ರಮಣೀಯವಾದುದು. ಅವರು ಬಳಸುವ ಪದಪುಂಜಗಳಲ್ಲಿ ಅರ್ಥ ಬಾಹುಳ್ಯವಿದೆ. ಧ್ವನಿಯಿದೆ. ಒಮ್ಮೊಮ್ಮೆ ತೀರಾ ಸರಳವಾದರೂ ಅದು ಬೀರುವ ಪರಿಣಾಮ ಅಗಾಧ. ಕೆಲವೊಂದೆಡೆ ಮೌನವೇ ಭಾಷೆಯಾಗಿ ಉಳಿದು ಗಂಬೀರವಾದ ಪ್ರಭಾವ ಬೀರಿದೆ. ಅವರ ಅಪ್ರಕಟಿತ ನಾಟಕಗಳೆಲ್ಲ ಬೆಸೆಂಟ್ ಶಾಲೆಯ ರಂಗದಲ್ಲಿ ಅದ್ಭುತ ಯಶಸ್ಸನ್ನು ಕಂಡವುಗಳು. ಗೀತ-ನೃತ್ಯ ರೂಪಕ, ಛಾಯಾ ರೂಪಗಳಲ್ಲಿ ಸಂಗೀತದ ಅಧ್ಯಾಪಕ ಶ್ರೀ ಶ್ರೀನಿವಾಸ ಉಡುಪರ ಕೊಡುಗೆಯೂ ಮಹತ್ವಪೂರ್ಣವಾದುದು. ನೃತ್ಯ ರೂಪಕದಲ್ಲಿ ಶ್ರೀ ರಾಜನ್ ಅಯ್ಯರ್, ಅವರ ತರುವಾಯ ಶ್ರೀ ಮುರಲೀಧರ್ ಅವರು ಜತೆಗೂಡಿದ್ದರು. ಶಾಲೆಯ ಹೊರಗೆ ನಡೆದ ಗೀತ ನೃತ್ಯ ರೂಪಕಗಳಲ್ಲಿ ಮಾಸ್ಟರ್ ವಿಠಲ್ ಜತೆಯಿರುತಿತ್ತು. ಒಟ್ಟಿನಲ್ಲಿ ಆ ದಿನಗಳು ಮಾತ್ರ ಸ್ಮರಣೀಯ ದಿನಗಳು. ತಂದೆಯವರು ನಿರ್ದೇಶಿಸಿದ ಕೆಲವು ನಾಟಕಗಳಲ್ಲಿ ನಾನೂ ಅಬಿನಯಿಸಿದ್ದೇನೆ. ಅವರ ಕೈಯಿಂದಲೇ ಮೇಕಪ್ ಮಾಡಿಸಿಕೊಂಡಿದ್ದೇನೆ ಎಂಬುದು ನನಗೆ ಹೆಮ್ಮೆಯ ಸಂಗತಿ.

ಪ್ರಕಟವಾದ ನಾಟಕಗಳಲ್ಲಿ 1956ರಲ್ಲಿ ಹೊರಬಂದ ನಾಟಕ ‘ಮಹಾತ್ಯಾಗಿ ಶ್ರೀ ಪುರಂದರ ದಾಸರು’. ಇನ್ನೊಂದು 1960ರಲ್ಲಿ ಪ್ರಕಟವಾದ ನಾಟಕ ‘ಪ್ರಿಯದರ್ಶಿ’.

ದಾಸಕೂಟದ ಶ್ರೇಷ್ಠದಾಸರಾದ, ದಾಸ ಸಾಹಿತ್ಯಕ್ಕೆ ಮಾತ್ರವಲ್ಲ ಸಂಗೀತಕ್ಕೆ ತನ್ನ ಅಮೂಲ್ಯ ವಾದ ಕೊಡುಗೆ ನೀಡಿದ ಶ್ರೀ ಪುರಂದರದಾಸರ ಜೀವನದ ಮೊದಲ ಭಾಗದ ಕಥಾವಸ್ತುವನ್ನು ಹೊಂದಿದ ನಾಟಕ ‘ಮಹಾತ್ಯಾಗಿ ಶ್ರೀ ಪುರಂದರ ದಾಸರು’, ಆಗರ್ಭ ಶ್ರೀಮಂತ, ಪರಮಲೋಬಿ ಶ್ರೀನಿವಾಸ ನಾಯಕ ಭಗವತ್ ಲೀಲೆಯಿಂದ ಸರ್ವವನ್ನು ಪರಿತ್ಯಜಿಸಿ, ಮಹಾತ್ಯಾಗಿಯಾಗಿ ಪಂಡರಾಪುರ, ವಿಜಯನಗರಗಳಿಗೆ ಹೋಗಿ ಅಲ್ಲಿ ಶ್ರೀ ವ್ಯಾಸರಾಯರಿಂದ ದೀಕ್ಷೆ ಪಡೆಯುವವರೆಗಿನ ಕಥಾಭಾಗ ಈ ನಾಟಕದ್ದಾಗಿದೆ.

ನಾಟಕದಲ್ಲಿ ಅವಶ್ಯಕವಾಗಿ ಇರಬೇಕಾದ ಕ್ರಿಯೆ ಇಲ್ಲಿ ಇದೆ. ಪಾತ್ರಗಳ ಬೆಳವಣಿಗೆ, ಅದಕ್ಕೆ ಪೂರಕವಾಗಿ ಪುರಂದರ ದಾಸರ ಕೀರ್ತನೆಗಳ ಅಳವಡಿಸುವಿಕೆ, ಕಥೆಯ ಬೆಳವಣಿಗೆಯಲ್ಲಿ ಕಲ್ಪನೆ-ಪ್ರತಿಭೆ-ಇತಿಹಾಸಗಳು ಒಗ್ಗೂಡಿ ನಾಟಕ ಪ್ರಯೋಗ ಯೋಗ್ಯವಾಗಲು ಹೆಚ್ಚಿನ ಒತ್ತುಕೊಟ್ಟಿವೆ. ನಾಟಕದ ಸಾರ್ಥಕ್ಯ ಇರುವುದು ಅದನ್ನು ರಂಗದ ಮೇಲೆ ಪ್ರಯೋಗಿಸಿದಾಗ. ನಾಟಕಕಾರರು ‘ಮೊದಲ ಮಾತು’ವಿನಲ್ಲಿ ‘‘ಈ ನಾಟಕವನ್ನು 1953ರಲ್ಲಿ ಬೆಸೆಂಟ್ ಪಾಠಶಾಲೆಯ ವಿದ್ಯಾರ್ಥಿಗಳೂ 1954ರಲ್ಲಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ನರ್ಸಸ್ ಕ್ಲಬ್‌ನವರೂ ಯಶಸ್ವಿಯಾಗಿ ಅಬಿನಯಿಸಿದ್ದಾರೆ’’ ಎಂದು ಹೇಳಿರುವುದನ್ನು ಗಮನಿಸಿದರೆ, ನಾಟಕದ ಯಶಸ್ಸಿನ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಅಲ್ಲದೇ ಈ ನಾಟಕ ಮದ್ರಾಸು ಸರ್ಕಾರವು 1954ರಲ್ಲಿ ಏರ್ಪಡಿಸಿದ ಕನ್ನಡ ಗ್ರಂಥಗಳ ಸ್ಪರ್ಧೆಯಲ್ಲಿ ನಾಟಕ ವಿಭಾಗದ ಬಹುಮಾನ ಗಳಿಸಿತ್ತು.

ನಾಟಕದಲ್ಲೂ ಸಂಭಾಷಣೆಯ ಸಹಜತೆ, ನಾಟಕೀಯತೆ, ವಾಸ್ತವವಾಗಿ ಬಂದಿದೆ ಯಲ್ಲದೆ ಎಲ್ಲೂ ಆಡಂಬರ ಅಬ್ಬರಗಳಿಲ್ಲ. ಒಟ್ಟಿನಲ್ಲಿ ಪ್ರೇಕ್ಷಕರನ್ನು ತನ್ಮಯರನ್ನಾಗಿಸುವ ರೀತಿಯಲ್ಲಿ ನಾಟಕದ ಓಘವಿದೆ. ಬ್ರಾಹ್ಮಣನ ಪ್ರವೇಶದ ತರುವಾಯ ನಾಟಕ ಚುರುಕುಗೊಳ್ಳುತ್ತದೆ.

ಬ್ರಾಹ್ಮಣ : ಶ್ರೀನಿವಾಸ! ಮಾಧವ! ವಿಠಲ!

ನಾಯಕ : (ಹಣ ಎಣಿಕೆಯಲ್ಲಿ ಮಗ್ನನಾಗಿರುವನು)

ಬ್ರಾಹ್ಮಣ : ಸ್ವಾಮೀ! ನಾಯಕರೆ

ನಾಯಕ : _ _ _ _ _ _ಏನಂತೆ ?

ಬ್ರಾಹ್ಮಣ : ನಾನೊಬ್ಬ ದೇಶಾವರದವ ದೇವರು. ವಂಶೋದ್ಧಾರಕ ಮಗನಿದ್ದ. ಅವನದೊಂದು ಮಗುವಿದೆ ಸ್ವಾಮೀ. ಅವನಿಗೊಂದು ಉಪನಯನವಾಗಬೇಕು. ನಾಯಕರು ದೊಡ್ಡ ಮನಸ್ಸು ಮಾಡಿ ಏನಾದರೂ ದಾನಧರ್ಮ ಮಾಡಬೇಕು.

ನಾಯಕ : ಇದು ಅಂಗಡಿ ಸ್ವಾಮಿ! ದಾನಧರ್ಮವೆಲ್ಲ ಮನೆಯಲ್ಲಿ, ಮುತ್ತೈದೆ ಯರಿರುವಲ್ಲಿ. ಇಲ್ಲೇನಿದೆ ಬರೇ ವ್ಯಾಪಾರ, ವ್ಯವಹಾರ.

ಬ್ರಾಹ್ಮಣ : ನಮ್ಮದೂ ವ್ಯವಹಾರವೆ ಸ್ವಾಮಿ. ನಿಮ್ಮದು ಅಂಗಡಿ ವ್ಯವಹಾರವಾದರೆ ನಮ್ಮದು ಲೋಕದ ವ್ಯವಹಾರ ನಾಯಕರೆ! ನಾಲ್ಕೂರು ವ್ಯವಹಾರ.

ನಾಯಕ : ಹೌದೌದು. ನೀವು ನಾಲ್ಕೂರಲ್ಲ-ಹದಿನಾಲ್ಕು ಲೋಕಗಳ ವ್ಯವಹಾರವನ್ನು ಮಾಡೀರಿ. ಆದರೆ ಕೊಡುವವರು ಬೇಕಲ್ಲ?

ಬ್ರಾಹ್ಮಣ : ಹೌದು ನಾಯಕರೆ, ನೀವು ಸತ್ಯ ಹೇಳಿದಿರಿ. ಈ ಬ್ರಾಹ್ಮಣನ ಹೊಟ್ಟೆಂಯೆಂದರೆ ಹದಿನಾಲ್ಕು ಲೋಕದ ವ್ಯವಹಾರ! ಹದಿನಾಲ್ಕು ಲೋಕ! ಅದಕ್ಕಾಗಿ ರಾತ್ರಿ ಹಗಲು ಒದ್ದಾಡುತ್ತಿದ್ದೇನೆ ನಾಯಕರೆ.

ನಾಯಕ : ಏನಯ್ಯ ದೊಡ್ಡ ಮಾತು ಹೇಳುತ್ತಿರುವುದು? ಹದಿನಾಲ್ಕು ಲೋಕಗಳನ್ನು ಉದರದಲ್ಲಿಟ್ಟು ಪೋಷಿಸುವ ಭಗವಂತನ ಹಾಗೆ….

ಬ್ರಾಹ್ಮಣ : …………………

ನಾಯಕ : ………………..

ಬ್ರಾಹ್ಮಣ : ಹಾಗಂದರೆ ಹೇಗೆ ನಾಯಕರೆ? ಮಡಿಲಲ್ಲಿ ಅಕ್ಕಪಕ್ಕದಲ್ಲಿ ನಗನಾಣ್ಯ ತುಂಬಿರುವಾಗ, ಲಕ್ಷ್ಮಿಯೇ ನನ್ನನ್ನು ನೋಡಿ ಕುಲುಕುಲು ನಗುತ್ತಿರುವಾಗ ನೀವು ಹೀಗೆನ್ನುವುದು ಸರಿಯೆ?

ನಾಯಕ : ಹೌದು! ಲಕ್ಷ್ಮಿಯು ನಿಮ್ಮನ್ನು ನೋಡಿ ನಗುತ್ತಾಳೆ. ಹೌದಯ್ಯ ನೀವು ವೈಕುಂಠದೊಡೆಯರು. ಅದನ್ನು ಬಿಟ್ಟು ಇಲ್ಲಿಗೆ ದೇಶಾವರಕ್ಕೆ ಬಂದದ್ದು ಅಲ್ಲವೆ? ಕುಲುಕುಲು ನಗುವ ಲಕ್ಷ್ಮಿಯ ಪತಿದೇವರು! ನಡೀರಿ ಇಲ್ಲಿಂದ.

ಬ್ರಾಹ್ಮಣ : ನಾನು ಹಾಗೆ ಹೇಳಿಲ್ಲ ನಾಯಕರೆ. ಮನುಷ್ಯ ದೇವರೇ ಅಂತ ನಮ್ಮಪ್ಪ ಹೇಳುತ್ತಿದ್ದ. ಮನುಷ್ಯ ಮನುಷ್ಯನನ್ನೇ ದೇವರೆಂದರಿಯಬೇಕಂತೆ. ಅದರಂತೆ ನಡಿಯಬೇಕಂತೆ. ನಾನು ನಿಮಗೆ ವೈಕುಂಠ ಪತಿಯಾದರೆ ಲಕ್ಷ್ಮೀ ಪ್ರಿಯ ನಾರಾಯಣನಾದರೆ ಅದು ನಿಮ್ಮ ಭಾಗ್ಯ!

ನಾಯಕ : ಭಾಗ್ಯವೋ….. ಭೋಗ್ಯವೋ….. ಹೊರಡಿ ಇಲ್ಲಿಂದ.

ಬ್ರಾಹ್ಮಣ : ಹೌದು ನಾಯಕರೆ ಲೋಕದಲ್ಲಿ ಭೋಗ ಹೆಚ್ಚಾಗಿದೆಂಯೆಂದೂ ನಮ್ಮಪ್ಪ ಹೇಳುತ್ತಿದ್ದರು. ಈಗದರ ಸತ್ಯ ಕಾಣುತ್ತದೆ.

ನಾಯಕ : ನಿಮ್ಮಪ್ಪನೋ…… ನಿಮ್ಮ ಮಗನೋ…… ಕೆಳಗಿಳಿಯಿರಿ.

ಬ್ರಾಹ್ಮಣ : ಹೌದು ನಾಯಕರೆ! ನಮ್ಮಪ್ಪನೇ ನಮಗೆ ಮಗನಾದ. ಹಾಗೆಂದೇ ಅಪ್ಪನ ಹೆಸರನ್ನು ಮಗನಿಗೆ ಇಟ್ಟೆ. ಅಪ್ಪನನ್ನು ಮಗನಲ್ಲಿ ಕಂಡೆ. ನೀವು ಮಾತ್ರ ಅಪ್ಪನಂತಹ ಮಗನಲ್ಲ. ಕಾಣಬೇಕು ರಾಯರೆ, ಮಗನಲ್ಲಿ ಅಪ್ಪನನ್ನು ಕಾಣಬೇಕು. ಲೋಕದಲ್ಲಿ ಕಣ್ಣಿದ್ದೂ ಕುರುಡರಾಗಬಾರದು. ಎದುರಿಗಿದ್ದವರನ್ನು ಅರಿಯುವ ಮತಿ ಬೇಕು – ನಾಯಕರೆ.

ನಾಯಕ : ಆ ಎಲ್ಲ ಅರಿವು ನಮಗಿದೆ. ಎದುರಿಗಿದ್ದವರನ್ನು ಅರಿತಿರುವುದರಿಂದಲೇ ಹೀಗಿದ್ದೇವೆ.

ಬ್ರಾಹ್ಮಣ : ಅದು ಅರಿವಲ್ಲ ಸ್ವಾಮೀ, ಅರಿವಿನಂತೆ ತೋರುವ ಮಾಯೆ!

ಹೀಗೆ ಸಂಭಾಷಣೆ ಮುಂದುವರಿಯುತ್ತದೆ. ನಾಯಕನ ಮನಃ ಪರಿವರ್ತನೆಗೆ ಪೂರಕವಾಗಿ ಪರೋಕ್ಷವಾಗಿ ಅರ್ಥವತ್ತಾಗಿ ಬ್ರಾಹ್ಮಣ ಮಾತನಾಡಿದರೂ ಮಾಯೆ ಮುಸುಕು ಸರಿಯದ ನಾಯಕ ಉತ್ತರಿಸುತ್ತಾನೆ. ಮುಂದೆಯೂ ಇಂಥ ಚುರುಕಾದ ಸಂಭಾಷಣೆ ಮುಂದುವರಿಯುತ್ತದೆ. ಬ್ರಾಹ್ಮಣ ಮನೆಗೆ ಬಂದು ನಾಯಕನ ಮಡದಿ ಸರಸ್ವತಿಯನ್ನು ಬೇಡುತ್ತಾನೆ. ಅಷ್ಟರಲ್ಲಿ ಅವಳ ಮಕ್ಕಳು ಅಮ್ಮನನ್ನು ಅರಸಿಕೊಂಡು ಬರುತ್ತಾರೆ. ಆ ಮಾತುಕತೆ ಬ್ರಾಹ್ಮಣನಿಗೆ ಆಪ್ಯಾಯಮಾನವಾಗಿ ಕೇಳಿಸುತ್ತದೆ. ಸರಸ್ವತಿಯ ಮಗ ವರದಪ್ಪ –

ವರದಪ್ಪ : ಅಬೀಃ….. ಬೇಗ ಬಾ, ಅಬೀ…..

ಬ್ರಾಹ್ಮಣ : ಅಬೀಃ….. ಎಂಥ ಪ್ರಣವ ಮಂತ್ರವಿದು! ಈ ಮಂತ್ರ ನನ್ನನೆಲ್ಲಿಗೋ ಒಯ್ಯುತ್ತಿದೆಯಲ್ಲ! ಮತ್ತೆ ಮತ್ತೆ ಚೇತನಗೊಳಿಸುವೀ ಮಂತ್ರ ನಾಯಕರ ಸುಪ್ತ ಚೇತನವನ್ನು ಬಡಿದೆಬ್ಬಿಸದಿರುವುದು ಅಚ್ಚರಿಯೇ ಸರಿ. ಅಬೀಃ ಅಬೀಃ ಅಬೀಃ ನನ್ನ ಅಂಗಾಂಗಳೇ ಚೇತನ ಸಂಚಾರದಿಂದ ಪುಳಕಿತವಾಗುತ್ತಿವೆ.

ಸರಸ್ವತಿಯಿಂದ ನತ್ತನ್ನು ದಾನವಾಗಿ ಪಡೆದ ಬ್ರಾಹ್ಮಣ ನಾಯಕನ ಬಳಿಗೆ ಬಂದು ಅದನ್ನಿಟ್ಟು ಹಣವನ್ನು ಕೇಳುತ್ತಾನೆ. ನಾಯಕ ಅದನ್ನು ಪೆಟ್ಟಿಗೆಯಲ್ಲಿಟ್ಟು ಮನೆಗೆ ಬರುತ್ತಾನೆ. ಮಡದಿಯನ್ನು ನತ್ತು ತರಲು ಹೇಳುತ್ತಾನೆ. ಬ್ರಾಹ್ಮಣನ ದೆಸೆಯಿಂದ ಸರಸ್ವತಿಯ ಭಕ್ತಿಯಿಂದ ನಾಯಕ ಎಲ್ಲವನ್ನು ತ್ಯಾಗ ಮಾಡಿ ದೇಶಾವರ ಹೊರಡುತ್ತಾನೆ. ಸಂಸಾರವೂ ಅವನೊಂದಿಗೆ ಹೊರಡುತ್ತದೆ. ಪಂಡರಾಪುರ, ವಿಜಯನಗರಗಳಿಗೆ ಬಂದು ಶ್ರೀ ವ್ಯಾಸರಾಯರಿಂದ ದೀಕ್ಷೆ ಪಡೆಯುವಲ್ಲಿಗೆ ನಾಟಕ ಅಂತ್ಯವಾಗುತ್ತದೆ.

ಸಂಭಾಷಣೆಯ ಸೊಗಸು ಇಲ್ಲಿ ಗಮನಾರ್ಹವಾದದ್ದು. ಸರಳವಾದರೂ ನೇರವಾದ ಮಾತುಗಳು ಸಹೃದಯರ ಹೃದಯವನ್ನು ನೇರವಾಗಿ ತಟ್ಟುವಂತಿವೆ. ಕುತೂಹಲವನ್ನು ಕಾಯ್ದುಕೊಂಡು ಹೋಗುವಲ್ಲಿ ನಾಟಕ ಯಶಸ್ವಿಯಾಗಿದೆ.

ನಾನು 9ನೇ ತರಗತಿಯಲ್ಲಿರುವಾಗ ಶ್ರೀ ಪುರಂದರ ದಾಸರು ನಾಟಕವನ್ನು ಮತ್ತೆ ತಮ್ಮ ವಿದ್ಯಾರ್ಥಿನಿಯರಿಂದ ತಂದೆಯವರು ಆಡಿಸಿದ್ದರು. ಆಗ ನಾನು ಬ್ರಾಹ್ಮಣನ ಪಾತ್ರವನ್ನು ವಹಿಸಿದ್ದೆ. ಈಗ ಬ್ರಾಹ್ಮಣನ ಮಾತುಗಳನ್ನು ಓದುತ್ತಿರುವಾಗ ನನಗೆ ಅಂದು ಅಬಿನಯಿಸಿದ ಇಡೀ ಪುರಂದರದಾಸರು ನಾಟಕ ಕಣ್ಣಿಗೆ ಕಟ್ಟಿದಂತಾಯಿತು.

1960ರಲ್ಲಿ ಪ್ರಕಟವಾದ ‘ಪ್ರಿಯದರ್ಶಿ’ ಮೂರು ಅಂಕಗಳ ಐತಿಹಾಸಿಕ ನಾಟಕ. ಮಗಧದ ಮಹಾರಾಜ ಅಶೋಕವರ್ಧನನ ಜೀವನ ಸಂದೇಶವನ್ನು ಕುರಿತ ನಾಟಕ ಇದು. ಕಳಿಂಗದ ಯುದ್ಧವೇ ಅವನ ಜೀವನವನ್ನು ಮಾರ್ಪಡಿಸಿದ ಘಟನೆ. ಯುದ್ಧದ ಘೋರವನ್ನು ಕಂಡು ಬುದ್ಧನ ಅಹಿಂಸೆಗೆ ತನ್ನ ಜೀವನವನ್ನು ಧಾರೆಯೆರೆದ ಅಶೋಕನ ಆಗಿನ ಮನಸ್ಸಿನ ಉಬ್ಬರವಿಳಿತವನ್ನು, ಹೊಯ್ದಟವನ್ನು ಪೃಥಕ್ಕರಿಸಲು ಈ ನಾಟಕದಲ್ಲಿ ಪ್ರಯತ್ನಿಸಿದ್ದೇನೆ ಎಂದು ಮೊದಲ ಮಾತಲ್ಲಿ ನಾಟಕಕಾರರು ಹೇಳಿದ್ದಾರೆ. ಈ ನಾಟಕವೂ ಯಶಸ್ವೀ ಪ್ರಯೋಗ ಹೊಂದಿ ಹಿರಿಯರ ಪ್ರಶಂಸೆಗೆ ಪಾತ್ರವಾಯಿತೆಂದೂ ನಾಟಕಕಾರರ ಹೇಳಿಕೆ.

ಇತಿಹಾಸ ಹಾಗೂ ಸನ್ನಿವೇಶಕ್ಕೆ ತಕ್ಕ ಕಲ್ಪನೆಯಿಂದ ಈ ನಾಟಕ ಜೀವಂತವಾಗಿವೆ. ಇಲ್ಲಿಯ ಪಾತ್ರಗಳ ನಮ್ಮ ಕಣ್ಣಮುಂದೆ ಓಡಾಡುತ್ತಿರುವಂತೆ ಭಾಸವಾಗುವ ರೀತಿಯಲ್ಲಿ ಈ ನಾಟಕದ ರಚನೆ ಇದೆ.

ಕಳಿಂಗ ಸೈನ್ಯದ ನಾಶ, ಕಳಿಂಗದಲ್ಲಿ ಬೆಂಕಿ, ಬಿಕ್ಷು ಉಪಗುಪ್ತನ ಸಾಂತ್ವನ, ಅಶೋಶನ ಮನಃ ಪರಿವರ್ತನೆ, ಪಶ್ಚಾತ್ತಾಪ, ನನೆಗುದಿ – ಎಲ್ಲವೂ ಹೃದಯ ಸ್ಪರ್ಶಿಯಾಗಿವೆ.

ತಾನು ಗೈದ ಹಿಂಸೆಗೆ ತೀವ್ರವಾಗಿ ಪಶ್ಚಾತ್ತಾಪ ಪಡುವ ಅಶೋಕನ ದಾರುಣ ಸ್ಥಿತಿ ಓದುಗರ ಹಾಗೂ ನೋಡುಗರ ಮನ ಮಿಡಿಯುವಂತಿದೆ. ಕರುಣ ರಸವೇ ಹರಿದಿದೆ ಇಲ್ಲಿ!

ಉಪಗುಪ್ತ : ಈ ದರ್ಶನದಿಂದ ಯುದ್ಧದ ಘೋರವೆಷ್ಟೆಂದು ಮಹಾರಾಜರು ಮನಗಂಡಿರಬಹುದು.

ಅಶೋಕ : ಮನಗಂಡೆನೇ? ಮನಗಂಡುದನ್ನು ಮಾತಿನಲ್ಲಿ ಉಸುರುವೆನೆ?….. ಉಪಗುಪ್ತ, ಮೊದಲು ನೀನು ನನ್ನ ಬಂಧು. ಮತ್ತೆ ನೀನಾದುದು ಬಿಕ್ಷು. ಕಿರಿಯನಾದರೂ ನನಗೆ ನೀನೀಗ ಹಿರಿಯ ಗುರುವಾಗಿರುವೆ. ಆದ್ದರಿಂದ ನಿನ್ನೆದುರಿಗೆ ನನ್ನ ಮನಸ್ಸನ್ನು ಬಿಚ್ಚಿ ತೋರಿಸ ಬೇಕೆನಿಸುತ್ತದೆ… ಆದರೆ ಆಯಾಸದಿಂದ ನಾ ನುಡಿಯಲಾರೆ. ಧೈರ್ಯ ಉತ್ಸಾಹಗಳ ಅಶೋಕ ನಿಂದು ನಿರ್ಬಲನಾಗಿದ್ದಾನೆ. ಮನಸ್ಸನ್ನು ಮಂಕು ಕವಿಯುತ್ತಿದೆ. ದೇಹ ಕಂಪಿಸುತ್ತಿದೆ.

ಉಪಗುಪ್ತ : ಮಹಾರಾಜರು ಇಂದಿರುಳು ಶಿಬಿರದಲ್ಲಿ ವಿಶ್ರಾಂತಿಗೊಳ್ಳಬೇಕು. ನಿದ್ರೆ ಯಿಂದ ಎಚ್ಚೆತ್ತಾಗ ಎಲ್ಲವೂ ಸರಿಯಾದೀತು.

ಅಶೋಕ : ನಿದ್ರೆ! ನನಗೆ ನಿದ್ರೆ ಬರುವುದೆಂದೆಣಿಸುವೆಯಾ?……

ಅಶೋಕ : ಉಚಿತಾನುಚಿತಗಳೆಂದರೇನು ಉಪಗುಪ್ತ? ಒಬ್ಬನಿಗೆ ಉಚಿತವಾದರೆ ಇನ್ನೊಬ್ಬನಿಗೆ ಅನುಚಿತವಲ್ಲವೆ? ಅಶೋಕನಿಗೆ ಉಚಿತವೆನಿಸಿದ್ದು ಮಹಾಸ್ಥವಿರರಿಗೆ ಉಚಿತ ವೆನಿಸೀತೆ? ಅಶೋಕನು ಉಚಿತವೆಂದು ಮಾಡಿದ ನಿರ್ಣಯದಿಂದ ಕಳಿಂಗರಿಗೇನಾಯ್ತು? ಅದು ಉಚಿತವೆ? ಅಂ್ಯುೋ!… ನನಗೀಗ ಏಕಾಂತ ಬೇಕಾಗಿದೆ! ಹೋಗಿ ಬಾ ಉಪಗುಪ್ತ. ಚೈತನ್ಯ ವಿಲ್ಲದ ಈ ದೇಹ ಕುಸಿಯುತ್ತಿರುವಾಗ ಚಿತ್ತದಲ್ಲೇನೋ ಆಗುತ್ತಿರುವುದಲ್ಲ? ಸಾಗರದಲ್ಲಿ ಅಲೆಗಳ ಏರಿಳಿತದಿಂದುಂಟಾಗುವ ಮಹಾಚೇತನವೊಂದು ನನ್ನ ಚಿತ್ತದಲ್ಲಿ ಉಂಟಾಗುತ್ತಿದೆಯಲ್ಲ!

ಕಂಚುಕಿ : (ಓಡಿ ಬಂದು) ಪ್ರಭೋ ಬೆಂಕಿ ಬೆಂಕಿ! ಅಲ್ಲಿ ನೋಡಿರಿ ಬೆಂಕಿ ಬೆಂಕಿ!

ಅಶೋಕ : ನೋಡುತ್ತಿರುವೆನು. ಕಳಿಂಗ ರಾಜಧಾನಿಯು ಉರಿಯುತ್ತಿರುವುದನ್ನು ನೋಡುತ್ತಿರುವೆನು… ಅಂ್ಯುೋ! ನಾನಿದನ್ನು ನೋಡಲಾರೆ. ಕಣ್ಣನ್ನೆ ಕುಕ್ಕುತ್ತಿರುವ ಈ ಪ್ರಳಯಾಗ್ನಿ ಯನ್ನು ನಾನಿನ್ನು ನೋಡಲಾರೆ. ಅಯ್ಯೊ! ಈ ಭಯಂಕರ ಅಗ್ನಿಗೇನು ಕಾರಣವಾಯಿತೋ? (ಯೋಚಿಸುವನು.)……

ನಾನೀಗ ಕಂಡ ಅಗ್ನಿಗೆಷ್ಟು ಮನೆ ಆಹುತಿಯಾಯಿತೋ? ಜೀವಂತ ಮಾನವರೆಷ್ಟು ಮಂದಿ ಉರಿದುರಿದು ಮಡಿದರೋ? ಇದಕ್ಕೆಲ್ಲ ಕಾರಣ?

ಹಾಯ್! ಯುದ್ಧದ ಘೋರವೆ? ನನ್ನ ಸಾಮ್ರಾಜ್ಯದಾಹ ಕಳಿಂಗದ ಸ್ವಾತಂತ್ರ್ಯವನ್ನು ಸೂರೆಗೊಂಡಿತು.

ಅಯುೋ! ಮಾನವ, ನೀ ದಿನ ಹೋದಂತೆ ದಾನವನಾದೆ. ಮಾನವತೆಯ ನಿಸರ್ಗ ದೆದುರಲ್ಲಿ ಕರಾಳ ಕರ್ಕಶ ಘೋರಗಳ ತೋರಿದೆ. ಅಂಥ ರಾಕ್ಷಸರ ಸಾಲಿಗೆ ನಾನೂ ಸೇರಿದೆನಲ್ಲ? ನನಗಾಗಿ, ನನ್ನ ಸಾಮ್ರಾಜ್ಯದಾಹಕ್ಕಾಗಿ, ನನ್ನ ತೃಷ್ಣೆಗಾಗಿ ಎಷ್ಟು ಮಂದಿ ಮಡಿದರೊ! ಎಷ್ಟು ಮಂದಿಯ ಬಂಧನವಾಯಿತೋ! ಎಷ್ಟು ಮಂದಿ ನೊಂದು ನೊಂದು ನರಳುವರೋ!

ಅಯುೋ! ನನ್ನ ಹೃದಯವೇಕಿಂತು ಬಡಿದುಕೊಳ್ಳುತ್ತಿದೆ? ಒಡಲಲ್ಲಿ ತಡೆಯಲಾರದ ಸಂಕಟವಾಗುತ್ತಿದೆಯಲ್ಲ! (ಕುಸಿಯುವನು.)

ಹೀಗೆ ಅಶೋಕನ ಸ್ವಗತ ಮುಂದುವರಿಯುತ್ತದೆ. ಚುರುಕಾದ ಸಂಭಾಷಣೆ, ಐತಿಹಾಸಿಕ ವಸ್ತುವಿಗೆ ತಕ್ಕ ಗಂಬೀರವಾದ ಭಾಷೆ, ಶೈಲಿ, ವಿವರಣೆ, ಈ ನಾಟಕ, ಪ್ರೇಕ್ಷಕರ ಮನಗೆಲ್ಲುವುದಕ್ಕೆ ಪೂರಕವಾಗಿವೆ.

ತಂದೆಯವರು ನಾಟಕದ ಹಲವು ಪ್ರಭೇದಗಳನ್ನು ರಚಿಸಿದುದೇ ಅಲ್ಲದೆ ಪ್ರಯೋಗ ಗಳೂ ಯಶಸ್ವಿಯಾಗುವಂತೆ ನಿರ್ದೇಶಿಸಿದವರು. ಅವರ ಈ ಎಲ್ಲ ನಾಟಕಗಳು, ರೂಪಕಗಳು ಪ್ರಕಟಗೊಂಡಿದ್ದರೆ ಈ ಪ್ರಕಾರ ಶ್ರೀಮಂತಗೊಳ್ಳುತ್ತಿತ್ತು ಎಂಬುದರಲ್ಲಿ ಅನುಮಾನವಿಲ್ಲ.

ನನ್ನ ತಂದೆಯವರು ಮಂಚಿಯಲ್ಲಿರುವಾಗ ಬಿ.ವಿ. ಕಾರಂತರು ಅವರ ವಿದ್ಯಾರ್ಥಿ. ತಂದೆಯವರು ನಿರ್ದೇಶಿಸಿದ ‘ನನ್ನ ಗೋಪಾಲ’ದಲ್ಲಿ ಬಿ.ವಿ. ಕಾರಂತರದೊಂದು ಪುಟ್ಟ ಪಾತ್ರ. ಅವರು ದೊಡ್ಡವರಾಗಿ ನಾಟಕ ನಿರ್ದೇಶನಕ್ಕಿಳಿದಾಗ, ‘‘ನನ್ನ ಮೊದಲ ಗುರು ಪಿ.ಕೆ. ನಾರಾಯಣ’’ ಎಂದು ಹೇಳಿಕೊಂಡಿದ್ದಾರೆ. 1975ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವ ಸಮಾರಂಭದಲ್ಲಿ ನನ್ನ ತಂದೆಯವರಿಗೆ ಸನ್ಮಾನವಿತ್ತು. ಆಗ ಬಿ.ವಿ. ಕಾರಂತರಿಗೂ ಸನ್ಮಾನವಿತ್ತು. ವೇದಿಕೆಗೆ ಬಂದ ಕಾರಂತರು ತಂದೆಯವರ ಕಾಲಿಗೆ ನಮಸ್ಕರಿಸಿದ್ದಕ್ಕೆ  ಆ ಕಾರ್ಯಕ್ರಮದ ಪ್ರೇಕ್ಷಕಿಯಾಗಿ ನಾನು ಸಾಕ್ಷಿಯಾಗಿದ್ದೇನೆ.

ಅನುವಾದಕರಾಗಿ

ತಂದೆಯವರು ಉತ್ತಮ ಅನುವಾದಕರೂ ಹೌದು.

ಹಲವು ವರ್ಷಗಳ ಕಾಲ ಮಂಗಳೂರಲ್ಲಿ ಶ್ರೀ ಲೋಬೋ ಪ್ರಭುಗಳು ನಡೆಸುತ್ತಿದ್ದ ‘Insight’ ಎಂಬ ಪಾಕ್ಷಿಕ ಪತ್ರಿಕೆಯ ಕನ್ನಡ ಅನುವಾದವನ್ನು ಮಾಡುತ್ತಿದ್ದು ಅದು ‘ಗಾಂವ್ ಸೇವಕ’ ಎಂಬ ಹೆಸರಿನಿಂದ ಪಾಕ್ಷಿಕವಾಗಿ ಪ್ರಕಟವಾಗುತ್ತಿತ್ತು. ಪೂರ್ಣ ಪತ್ರಿಕೆಯನ್ನು ತಂದೆ ಯವರೇ ಇಂಗ್ಲೀಷ್‌ನಿಂದ ಕನ್ನಡಕ್ಕೆ ಅನುವಾದಿಸುತ್ತಿದ್ದರು. ಇದು ಅವರು ಆಂಗ್ಲಭಾಷೆಯಲ್ಲೂ ನೈಪುಣ್ಯ ಪಡೆದಿದ್ದರೆಂಬುದಕ್ಕೆ ಸಾಕ್ಷಿ. ಇದಲ್ಲದೆ ಒಂದೆರಡು ಇಂಗ್ಲೀಷ್ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಅವರು ಅನ್ಯಭಾಷೆಯಿಂದ ಕನ್ನಡಕ್ಕೆ ಅನುವಾದ ಮಾತ್ರ ಮಾಡಿದುದಲ್ಲ. ಮಹಾಕವಿ, ಶೃಂಗಾರ ಕವಿ, ಅಧ್ಯಾತ್ಮ ಕವಿ ರತ್ನಾಕರವರ್ಣಿಯ ‘ಭರತೇಶ ವೈಭವ’ದ ಸಮಗ್ರ ಅನುವಾದವನ್ನು ಕನ್ನಡಿಗರಿಗೆ ನೀಡಿದ ಪ್ರಥಮ, ಏಕೈಕ ಅನುವಾದಕರು ಅವರು.

‘ಭರತೇಶ ವೈಭವ’ಎಂದರೆ ಪಿ.ಕೆ. ನಾ.ರಿಗೆ ಅಂಗೈ ಮೇಲಿನ ನೆಲ್ಲಿಕಾಯಿ. ಪ್ರೊ|| ಜಿ. ಬ್ರಹ್ಮಪ್ಪನವರಿಗಿಂತ ಮೊದಲು ರತ್ನಾಕರವರ್ಣಿಯ ಸಮಗ್ರ ಕಾವ್ಯವನ್ನು ತಿಳಿಗನ್ನಡದಲ್ಲಿ ಅನುವಾದಿಸಿ ಉಪಕರಿಸಿದವರು ಪಿ.ಕೆ. ನಾರಾಯಣ ಅವರು. ಅವರು ಸೊಗಸಾಗಿ ಬರೆದು ‘ವಿವೇಕಾಭ್ಯುದಯ’ದಲ್ಲಿ ಪ್ರಕಟಿಸಿದ ಈ ಲೇಖನ ಮಾಲೆಯನ್ನು ಮುಂದೆ ಬೆಂಗಳೂರಿನ ಸಹಕಾರಿ ಪ್ರಕಾಶನದವರು ಮೂರು ಸಂಪುಟಗಳಲ್ಲಿ ‘ಭರತೇಶನ ದಿನಚರಿ’ ಎಂಬ ಹೆಸರಿನಲ್ಲಿ ‘ಸರಸದ ದಿನಗಳು’, ‘ವಿಜಯದ ದಿನಗಳು’ ಮತ್ತು ‘ತಪಸಿನ ದಿನಗಳು’ ಎಂಬುದಾಗಿ ಪ್ರಕಟಿಸಿದರು. ಈ ಕೆಲಸ ನಮ್ಮ ಹಿರಿಯ ಕವಿಯೊಬ್ಬನಿಗೆ ಆಧುನಿಕ ಲೇಖಕರೊಬ್ಬರು ಸಲ್ಲಿಸಿದ ಸಾಹಿತ್ಯ ಗೌರವವೆಂದು ಹೇಳಬಹುದು.’’1

ಹದಿನೈದನೆಯ ಶತಮಾನದ ನಡುಗನ್ನಡ ಭಾಷೆಯಲ್ಲಿನ ಸಾಂಗತ್ಯದ ಲಲಿತ ಸುಂದರ ನಡೆಯಲ್ಲಿ ರಚಿತವಾದ ‘ಭರತೇಶ ವೈಭವ’ದ ಹೊಸಗನ್ನಡ ಗದ್ಯಾನುವಾದ ‘ಭರತೇಶನ ದಿನಚರಿ’. ಅನುವಾದಕ್ಕೆ ಈ ಹೆಸರಿರಿಸುವ ಬಗ್ಗೆ ಅನುವಾದಕರು ‘ಒಂದು ಮಾತು’ವಿನಲ್ಲಿ ಹೀಗೆ ಹೇಳಿದ್ದಾರೆ. ‘‘ಭರತೇಶ ವೈಭವವು ಪುರುದೇವ ಕುಮಾರ ಭರತಚಕ್ರಿಯ ದಿನಚರಿಯಂತಿದೆ. ಅಷ್ಟು ವಿವರವಾದ ಚಕ್ರವರ್ತಿಯ ದಿನದಿನದ ಆಗುಹೋಗುಗಳನ್ನು ಬಿತ್ತರಿಸಿದ್ದಾನೆ ಮಹಾಕವಿ. ಆ ಕವಿಯ ಶೈಲಿಯೇ ಗದ್ಯದಲ್ಲಿಳಿದು ಬರುವಂತೆ ಪ್ರಯತ್ನಿಸಿದ್ದೇನೆ.’’

ಅನುವಾದಕರು ಈ ಬೃಹತ್ ಕಾವ್ಯದ ಅನುವಾದವನ್ನು ಮೂರು ಭಾಗಗಳಲ್ಲಿ ಸಹೃದಯ ಓದುಗನಿಗೆ ನೀಡಿದ್ದಾರೆ. ಭರತೇಶ ವೈಭವದ ಮೊದಲ ಭಾಗವಾದ ಭೋಗ ವಿಜಯದ ಭಾಗ ‘‘ಸರಸದ ದಿನಗಳು’’. ದಿಗ್ವಿಜಯವೇ ‘ವಿಜಯದ ದಿನಗಳು’, ಯೋಗ ವಿಜಯ, ಮೋಕ್ಷ ವಿಜಯ, ಅರ್ಕಕೀರ್ತಿ ವಿಜಯಗಳೇ ‘ತಪಸ್ಸಿನ ದಿನಗಳು’. ಎಂಭತ್ತಾರು ಸಂದಿಗಳ ಮಹಾಕಾವ್ಯವನ್ನು ಗದ್ಯಾನುವಾದ ಮಾಡುವಲ್ಲಿ ಎಂಭತ್ತಾರು ಹೆಸರುಗಳನ್ನು ಆಯಾ ಭಾಗಗಳ ಅಧ್ಯಾಯಗಳಲ್ಲಿ ಉಳಿಸಿಕೊಂಡಿದ್ದಾರೆ. ಮೂರು ಸಂಪುಟಗಳಲ್ಲಿ 800 ಪುಟಗಳಷ್ಟು ವಿಸ್ತಾರವಾಗಿದೆ ಇದು.

ಭರತೇಶನ ದಿನಚರಿ ಸೊಗಸಾದ ಕಾದಂಬರಿಂಯೆಂಬಂತೆ ಓದಿಸಿಕೊಂಡು ಹೋಗುತ್ತದೆ. ತಪಸಿನ ದಿನಗಳಲ್ಲಿ ಬರುವ ಹಂಸಕಲೆ, ಅಧ್ಯಾತ್ಮ ವಿಚಾರಗಳನ್ನೂ ಅರ್ಥವಾಗುವಂತೆ ಸರಳೀಕರಿಸಿದ್ದಾರೆ ಅನುವಾದಕರು. ಈ ಅನುವಾದದಲ್ಲಿ ಮಧುರ ಪದ ರಚನೆಯಿದೆ. ಲಲಿತ ಪ್ರಸನ್ನ ಶೈಲಿಯಿದೆ. ಕುತೂಹಲವಿದೆ. ಅಲ್ಲಲ್ಲಿ ದಕ್ಷಿಣ ಕನ್ನಡದಲ್ಲಿ ಬಳಕೆಯಿರುವ ನುಡಿಗಟ್ಟುಗಳು, ಗಾದೆಗಳು, ವಿಶಿಷ್ಟ ಪದಗಳು ಪ್ರಾದೇಶಿಕ ವರ್ಣನೆ ವಿವರಗಳಿಗೆ ಸಾಕ್ಷಿಯಾಗಿವೆ. ತುಳುಭಾಷೆಯ ಪ್ರಭಾವ ಇಲ್ಲಿ ದಟ್ಟವಾಗಿದೆ.

ಈ ಅನುವಾದದ ಬಗ್ಗೆ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ‘ಉದಯವಾಣಿ’ಯ ವಿಮರ್ಶೆಯಲ್ಲಿ ಹೀಗೆ ಬರೆದಿದ್ದಾರೆ: ‘‘ರತ್ನಾಕರವರ್ಣಿಯ ಭರತೇಶ ವೈಭವ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ಸಾಹಿತ್ಯದ ಸೊಬಗನ್ನು ಜನಕ್ಕೂ ತಿಳಿಯುವಂತೆ ತಿಳಿಗನ್ನಡದಲ್ಲಿ ನೀಡಿದ ಪಿ.ಕೆ. ನಾರಾಯಣ ಅವರ ಪ್ರಯತ್ನ ಶ್ಲಾಘ್ಯ. ಅನುವಾದ ಲಲಿತವಾಗಿ ಬಂದಿದೆ. ಮೂಲಕೃತಿಯ ಸೊಬಗನ್ನು ಉಳಿಸುವಲ್ಲಿ ಸಾಕಷ್ಟು ಸಫಲವಾಗಿದೆ.’’

‘ಕರ್ಮವೀರ’ದಲ್ಲಿ ವಿಮರ್ಶೆ ಮಾಡುತ್ತ ಶ್ರೀ ಸೇವ ನಮಿರಾಜ ಮಲ್ಲರು ಹೇಗೆ ಬರೆದಿದ್ದಾರೆ : ಲೇಖಕ ಪಿ.ಕೆ. ನಾರಾಯಣ ಅವರು ಸಾಹಿತ್ಯವನ್ನು, ಅದರಲ್ಲೂ ಜೈನ ಸಾಹಿತ್ಯ ವನ್ನು ವಿಸ್ತಾರವಾಗಿ ಅಭ್ಯಸಿಸಿದವರು. ಜೈನ ವಾಙ್ಮಯದ ಬಗ್ಗೆ ಅಭ್ಯಾಸ ಪೂರ್ಣವಾದ ಲೇಖನ ಗಳನ್ನು ಬರೆದವರು. ರತ್ನಾಕರವರ್ಣಿಯ ಭರತೇಶ ವೈಭವ ಅವರಿಗೆ ಕರತಲಾಮಲಕವಾಗಿದೆ ಎನ್ನುವುದು ಇದನ್ನೋದುವಾಗ ತಿಳಿಯುತ್ತದೆ. ಮೂಲ ಕೃತಿಗೆ ಅಪಚಾರವನ್ನು ಮಾಡಿಲ್ಲ. ಒಣ ಪಾಂಡಿತ್ಯವನ್ನು ಪ್ರದರ್ಶಿಸಿಲ್ಲ. ಬದಲಾಗಿ ಅಭಿಮಾನ ಪೂರ್ವಕವಾಗಿ ಮೂಲ ಕೃತಿಗೆ ಒಂದು ಹೊಸ ತೊಡಿಗೆ ತೊಡಿಸಿದ್ದಾರೆನ್ನಬಹುದು. ಅದೂ ಭೂಷಣಪ್ರಾಯವೆಂದು ತಲೆದೂಗ ಬಹುದಾದ ತೊಡಿಗೆ.’’

ಕನ್ನಡದ ಕವಿಗಳೂ, ಪಂಡಿತರೂ ಆದ ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ಕೃತಿಯ ಕುರಿತು ಲೇಖಕರಿಗೆ ಬರೆದ ಪತ್ರದ ವಿಷಯ ಇದು : ನಿಮ್ಮ ಆ ಪುಸ್ತಕಗಳನ್ನು ಓದಿದ್ದರ ಮೇಲಿಂದ ಹೇಳುವುದಾದರೆ ನೀವೊಂದು ಒಳ್ಳೆಯ ಕೆಲಸವನ್ನೇ ಮಾಡಿದ್ದೀರಿ. ನಿಮ್ಮ ಬರವಣಿಗೆ ಆಡಂಬರ ವಿಲ್ಲದೆ ಸಹಜವಾಗಿದೆ. ನಿಮ್ಮ ಸ್ವಭಾವದ ಸರಳತೆ ಸ್ವಚ್ಛತೆಗಳು ಬರವಣಿಗೆಯಲ್ಲೂ ಬಂದಿವೆ. ನಿಮಗೆ ನನ್ನ ಧನ್ಯವಾದಗಳು.’’

ಅಬಿನವ ಕಾಳಿದಾಸರೆಂದು ಖ್ಯಾತಿ ಪಡೆದ ಪ್ರೊ| ಎಸ್.ವಿ. ಪರಮೇಶ್ವರ ಭಟ್ಟರು ಈ ಕೃತಿಯ ಬಗ್ಗೆ, ‘‘ಶ್ರೀಯುತರು ಕನ್ನಡದ ಮಹಾಕವಿಗಳಲ್ಲಿ ಒಬ್ಬನಾದ ರತ್ನಾಕರವರ್ಣಿಯ ಭರತೇಶ ವೈಭವವನ್ನು ಆ ಸಾಂಗತ್ಯದ ಪದ್ಯ ಕಾವ್ಯವನ್ನು ಸೊಗಸಾಗಿ, ಸ್ವಾರಸ್ಯ ಕೆಡದ ಹಾಗೆ ಸುಂದರವಾದ ವಚನ ರೂಪದಲ್ಲಿ ಅಳವಡಿಸಿಕೊಟ್ಟಿದ್ದಾರೆ. ತಮ್ಮ ಬಹುದಿನಗಳ ವಾಙ್ಮಯ ತಪಸ್ಸಿನ ಬಹುಭಾಗವನ್ನು ವ್ಯಯಿಸಿ ಈ ಸುಂದರವಾದ ಕೃತಿಯನ್ನು ಕನ್ನಡ ನುಡಿಯ ಬೊಕ್ಕಸಕ್ಕೆ ತಮ್ಮದೊಂದು ಕಾಣಿಕೆಯಾಗಿ ಅರ್ಪಿಸಿ ನಮ್ಮ ಸಾಹಿತ್ಯದ ಸಿರಿಸಂಪತ್ತನ್ನು ಹೆಚ್ಚಿಸಿದ್ದಾರೆ. ಇದಕ್ಕಾಗಿ ಕನ್ನಡಿಗರೆಲ್ಲ ನಾರಾಯಣ ಅವರಿಗೆ ಋಣಿಯಾಗಿರಬೇಕು.’’

ಆತ್ಮಕಲೆಯೂ ಸೇರಿದಂತೆ ಸಕಲ ಕಲಾಕೋವಿದನಾದ ಭರತೇಶನ ಆಸ್ಥಾನ, ಮುನಿಗಳಿಗೆ ಆತ ನೀಡುವ ನಿತ್ಯ ದಾನ, ಅವನ ಆರೋಗಣೆ, ರಾಣಿಯರೊಡನೆ ಅವನ ಸರಸ ಸಲ್ಲಾಪ, ಅವನ ಪ್ರೇಮದ ರಾಣಿ ಕುಸುಮಾಜಿ ಯಾರಿಗೂ ತಿಳಿಯದಂತೆ ತನ್ನ ಸಾಕುಗಿಳಿಯೊಡನೆ ತನ್ನ ನಲ್ಲನ ಗುಣ ಸೌಂದರ್ಯ ವರ್ಣನೆ ಮಾಡುವಾಗ ಮತ್ತಿಬ್ಬರು ರಾಣಿಯರು ಅದನ್ನು ಕಾವ್ಯ ವನ್ನಾಗಿ ಮಾಡಿ ರಾಜನೆದುರು ಪ್ರಕಟಿಸಿದ ಸನ್ನಿವೇಶ, ರಾಜನ ಸನ್ಮಾನ, ಮನ್ನಣೆ, ನಾದಿನಿ ಮಕರಂದಾಜಿಯೊಡನೆ ಭರತೇಶನ ಸಲ್ಲಾಪ, ಪೂರ್ವನಾಟಕ, ಉತ್ತರ ನಾಟಕ, ತಾಂಡವ ವಿನಯಗಳಲ್ಲಿ ಬರುವ ನೃತ್ಯ ವರ್ಣನೆ – ಇವೆಲ್ಲ ರಮ್ಯ ಮಧುರವೂ ಸರಸ ಸುಂದರವೂ ಆಗಿ, ಶೃಂಗಾರ ರಸಭಾವಗಳು ಹಿತಮಿತವಾಗಿ ಅನುವಾದದಲ್ಲಿ ಬಂದಿರುವುದು ಅನುವಾದಕರ ಪ್ರತಿಭೆಗೆ ಸಾಕ್ಷಿಯಾಗಿದೆ.

ಅದೇ ರೀತಿಯಲ್ಲಿ ವಿಜಯದ ದಿನಗಳಲ್ಲಿ ಚಕ್ರರತ್ನದ ಉದಯ, ಷಟ್ಖಂಡ ಧರೆಯನ್ನು ಸೋಲಿಸಿ ಬರುವಾಗ ಚಕ್ರರತ್ನ ನಿಂತುದು, ಭರತ-ಬಾಹುಬಲಿಯರ ಮುಖಾಮುಖಿ, ಭರತೇಶನ ವಾತ್ಸಲ್ಯ ಪೂರ್ಣ ಉಪದೇಶ, ಬಾಹುಬಲಿಯ ಅಹಂಕಾರ ಸೋರಿ ಹೋಗಿ ತಪಸ್ಸಿಗೆ ನಡೆದುದು, ಇತ್ಯಾದಿ ಅನುವಾದದಲ್ಲಿ ಸೊಗಸಾಗಿ, ಹೃದಯ ಸ್ಪರ್ಶಿಯಾಗಿ ಬಂದಿದೆ.

ತಪಸಿನ ದಿನಗಳಲ್ಲಿ ಸೋದರರು, ಪುತ್ರರು, ಪತ್ನಿಯರು ಎಲ್ಲರೂ ದೀಕ್ಷೆ ವಹಿಸಿದ್ದು, ಕೊನೆಯಲ್ಲಿ ಭರತೇಶನ ದೀಕ್ಷೆ, ಮುಕ್ತಿ ಕಾಂತೆಯೊಡನೆ ಸಂಗಮ ಮೊದಲಾದ ವಿಷಯಗಳ ಜತೆ ಯಲ್ಲೆ ಮುನಿಗಳ ಉಪದೇಶ, ಅಧ್ಯಾತ್ಮ ತತ್ತ್ವ ವಿಚಾರಗಳು ಅಷ್ಟೇ ಗಂಬೀರವಾಗಿ ಅನುವಾದ ದಲ್ಲಿ ಬಂದಿವೆ. ರತ್ನಾಕರವರ್ಣಿಯ ತತ್ತ್ವಜ್ಞಾನ ನಿಜಕ್ಕೂ ಅಮೋಘವಾದುದು. ಅಂಥ ವಿಷಯವನ್ನು ತಿಳಿಗನ್ನಡದಲ್ಲಿ ಹೇಳುವುದು ಸುಲಭದ ಕಾರ್ಯವಲ್ಲ. ಆದರೆ ಇಲ್ಲಿ ಅನುವಾದಕರ ಅರಿವಿಗೆ ನಿಜಕ್ಕೂ ತಲೆಬಾಗಬೇಕಾಗಿದೆ. ಅಷ್ಟು ಸಮರ್ಪಕವಾಗಿ ಅನುವಾದ ಬಂದಿದೆ.

ಮೂಲತತ್ತ್ವಗಳಾದ ರಸಧ್ವನಿ, ಪಾತ್ರರಚನೆ, ಕಥನ ಕ್ರಿಯೆಗಳಿಗೆ ಪ್ರತಿಬಂಧಕವಾಗದಂತೆ ವರ್ಣನೆಗಳು ಔಚಿತ್ಯ ಮೀರದಂತೆ ಅನುವಾದದಲ್ಲಿ ಬಂದಿದ್ದು ಓದುಗರ ಗಮನ ಸೆಳೆಯುವಲ್ಲಿ ಪರಿಣಾಮಕಾರಿಯಾಗಿದೆ. ಮೂಲದಲ್ಲಿರುವ ಮಧುರ ಪದಬಂಧ, ಆ ಶೈಲಿ ಅನುವಾದದ ಆರಂಭದಿಂದ ಕೊನೆಯವರೆಗೂ ಏಕರೂಪವಾಗಿದ್ದು, ಎಲ್ಲೂ ಅಂತರವಾಗದೇ ಅನುವಾದ ಒಂದು ಗದ್ಯ ಕಾವ್ಯದಂತಿರುವುದು ಪ್ರಶಂಸನೀಯ ಸಂಗತಿ.

ಸಂಪಾದಕರಾಗಿ

ತಂದೆಯವರು ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ‘ಸಂಪಾದನೆ’ ಕಾರ್ಯ ಸುಲಭವಾದುದಲ್ಲ. ತುಂಬಾ ಜವಾಬ್ದಾರಿಯುತವಾದ ಕಾರ್ಯ ಅದು.

‘ಆಯ್ದಮುತ್ತುಗಳು’ – ಕಥಾಸಂಗ್ರಹ, ‘ಸಮ್ಮೇದ ಶೈಲ ಮಹಾತ್ಮೆ’ – ಜೈನಗ್ರಂಥ, ‘ಗಾಂಧಿಜನ್ಮಶತಾಬ್ಧಿ ಕವಿತಾಂಜಲಿ’-ಈ ಮೊದಲಾದುವುಗಳನ್ನು ತಾವೊಬ್ಬರೇ ಸಂಪಾದಿಸಿದ್ದಾರೆ. ಇತರರೊಂದಿಗೆ ಅನೇಕ ಸಂಸ್ಮರಣ ಗ್ರಂಥಗಳನ್ನು, ಅಬಿನಂದನ, ಗೌರವ ಗ್ರಂಥಗಳನ್ನು ಸಂಪಾದಿಸಿದ್ದಾರೆ. ‘ತೆಂಕನಾಡು’ ಕಾಸರಗೋಡು ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟವಾದ ಗ್ರಂಥ. ದಿ| ಎನ್.ಎಸ್. ಕಿಲ್ಲೆಯವರ ಸ್ಮಾರಕ ಗ್ರಂಥ – ‘ಕಿಲ್ಲೆ ಸ್ಮಾರಕ ಗ್ರಂಥ’. ಕಾರ್ಕಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ ‘ದಿಬ್ಬಣ’. ಶ್ರೀ ಡಿ. ಪುಟ್ಟಸ್ವಾಮಿ ಅವರಿಗೆ ಅರ್ಪಿಸಿದ ಗ್ರಂಥ ‘ಮಧುರ ಸ್ಮ ೃತಿ’. ಧರ್ಮವೀರ ಚಕ್ರವು ಮಂಗಳೂರಿಗೆ ಬಂದ ಸಂದರ್ಭದಲ್ಲಿ ಪ್ರಕಟವಾದ ಗ್ರಂಥ ‘ಮಹಾವೀರ ವಾಣಿ’. ಡಿ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದ ಹೆಗ್ಗಡೆ ಯವರಾಗಿ ಪಟ್ಟಾಬಿಷೇಕ ಹೊಂದಿದ ಸಂದರ್ಭದಲ್ಲಿ ಪ್ರಕಟವಾದ ಗ್ರಂಥ – ‘ಆರೋಹಣ’.
ಕೆ.ಕೆ. ಶೆಟ್ಟಿಯವರ ಸನ್ಮಾನ ಸಂದರ್ಭದ ಸಂಚಿಕೆ ‘ತುಂಬಿದ ಕೊಡ’. ಪಂಜೆ ಮಂಗೇಶರಾಯರ ಶತಮಾನೋತ್ಸವ ಗ್ರಂಥ ‘ತೆಂಕಣ ಗಾಳಿ’. ಮೊಳಹಳ್ಳಿ ಶಿವರಾಯರ ಶತಮಾನೋತ್ಸವ ಕೃತಿ ‘ನೂರರ ಮೇರು’. ‘ಸ್ಫೂರ್ತಿ’ ಎಸ್. ಮುಕುಂದ ರಾಯರ ಅಬಿನಂದನ ಗ್ರಂಥ. ಹೀಗೆ ಅನೇಕ ಗ್ರಂಥಗಳಿಗೆ ಸಂಪಾದಕ, ಉಪಸಂಪಾದಕ, ಸಹಸಂಪಾದಕ, ಸಂಪಾದಕ ಮಂಡಳಿ ಸದಸ್ಯ, ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದೇ ಅಲ್ಲದೆ ಆ ಎಲ್ಲ ಗ್ರಂಥಗಳಲ್ಲೂ, ಲೇಖನ, ಪದ್ಯಗಳನ್ನು ಬರೆದ ಲೇಖಕರೂ ಅವರಾಗಿದ್ದಾರೆ. ಅಷ್ಟೇ ಅಲ್ಲ ಆ ಕಾಲದ ಪ್ರಸಿದ್ಧ ಪತ್ರಿಕೆಗಳಾದ ಕಂಠೀರವ, ಸರ್ವೋದಯ, ಪ್ರಭಾತ, ಉಷಾ, ಜಗದರ್ಶಿ, ರಾಷ್ಟ್ರಬಂಧು, ನವಭಾರತ, ಕರ್ಮವೀರ ಪತ್ರಿಕೆ, ಉದಯವಾಣಿ, ಸಂಯುಕ್ತ ಕರ್ನಾಟಕ, ಪ್ರಜಾಮತ, ಮೊದಲಾದ ಪತ್ರಿಕೆಗಳಲ್ಲಿ ಲೇಖನಗಳು, ಕವನಗಳು ಪ್ರಕಟವಾಗಿವೆ.

ಸಂಶೋಧಕರಾಗಿ

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡದ ಬೆಳವಣಿಗೆ’ ಸಾಹಿತ್ಯ ಚರಿತ್ರೆ, ‘ದಕ್ಷಿಣ ಕನ್ನಡದಲ್ಲಿ ಸ್ವಾತಂತ್ರ್ಯದ ಹೋರಾಟ’ ಸ್ವಾತಂತ್ರ್ಯ ಹೋರಾಟ ಹಾಗೂ ಹೋರಾಟಗಾರರ ಪರಿಚಯಾತ್ಮ ಕೃತಿ. ಇವುಗಳನ್ನು ಗಮನಿಸಿದರೆ ತಂದೆಯವರು ಸಂಶೋಧಕರೂ ಆಗಿದ್ದರೆಂದು ತಿಳಿದು ಬರುತ್ತದೆ. ಕ್ರಿ.ಶ.ದ ಆರಂಭದ ದಿನಗಳಿಂದ ತೊಡಗಿ 1972ರ ವರೆಗಿನ ಅವಧಿಯ ಕನ್ನಡದ ಬೆಳವಣಿಗೆಯನ್ನು, ಕನ್ನಡದ ಮುನ್ನಡೆಯನ್ನು ನಿರೂಪಿಸುವ ಪ್ರಯತ್ನ ‘ದ.ಕ. ಜಿಲ್ಲೆಯಲ್ಲಿ ಕನ್ನಡದ ಬೆಳವಣಿಗೆ’. 1972ರಲ್ಲಿ ಕಾರ್ಕಳದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಜರಗಿದಾಗ ವಿಸ್ತಾರವಾಗಿ 16 ಲೇಖನಗಳ ಮಾಲೆಯಾಗಿ ‘ನವಭಾರತ’ದಲ್ಲಿ ಧಾರಾವಾಹಿಯಾಗಿ ಹರಿದು ಬಂತು.

‘‘ತೆಂಕುಮೂಲೆಯಲ್ಲಿರುವ ದಕ್ಷಿಣ ಕನ್ನಡದಲ್ಲಿನ ಕನ್ನಡದ ಬೆಳವಣಿಗೆಯ ಜಾಡನ್ನು ಕಂಡುಹಿಡಿಯುವುದು, ಮುಖ್ಯವಾಗಿ ಹೊಸಗನ್ನಡ ಸಾಹಿತ್ಯದ ಬೆಳವಣಿಗೆಗೆ ಈ ತೆಂಕನಾಡು ಸಲ್ಲಿಸಿದ ಸೇವೆಯನ್ನು ಅಖಿಲ ಕರ್ನಾಟಕದ ಕನ್ನಡಿಗರ ಮುಂದಿಡುವುದು ಈ ಬರೆಹದ ಆಶಯವಾಗಿದೆ’’ ಎಂಬುದು ಅವರ ಹೇಳಿಕೆ.

‘ಕನ್ನಡ ಸಾಹಿತ್ಯ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಸ್ತಾವನೆ ಮಾಡಿ ತರುವಾಯ, ಪ್ರಾಚೀನ ಕವಿಗಳು, ಹಾಡುಗಬ್ಬದ ಕಬ್ಬಿಗಳು, ಜನಪ್ರಿಯ ಛಂದಸ್ಸು, ತುಂಡು ಪದಗಳು, ಯಕ್ಷಗಾನ, ಹೊಸಗನ್ನಡದ ಶುಭೋದಯ, ನವಯುಗದ ಮೊದಲು, ಹೊಸಗನ್ನಡ ಕವನಗಳು, ಇಪ್ಪತ್ತು ವರ್ಷಗಳ ಬೆಳಸು, ಕವಿಯೆ ಸ್ವಾತಂತ್ರ್ಯ ಮಧು ಕುಡಿವ ಮಧುಕರನು ಅನುವಾದಗಳು, ನಾಟಕದಲ್ಲಾದ ಕ್ರಾಂತಿ, ನವೀನ ನಾಟಕಗಳು, ಕಾದಂಬರಿಗಳು, ಸಣ್ಣಕತೆಗಳು, ಹರಟೆಗಳು ಮತ್ತು ವ್ಯಂಗ್ಯ ಬರಹಗಳು, ಇತರ ಸಾಹಿತ್ಯ ರೀತಿಗಳು – ಎಂಬ ಶೀರ್ಷಿಕೆಗಳಡಿಯಲ್ಲಿ ವಿಸ್ತಾರವಾಗಿ ಆಯಾ ವಿಷಯ ಕುರಿತು ಬರೆದಿದ್ದಾರೆ.

ಈ ಲೇಖನಮಾಲೆಯ ಕೊನೆಯ ಪ್ಯಾರಾ ಗಮನಾರ್ಹವಾಗಿದೆ – ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಎಂದು ಮಾರ್ಗದರ್ಶನ ಮಾಡಿದ ಮುದ್ದಣನು ಹುಟ್ಟಿದ ಜಿಲ್ಲೆಯಲ್ಲಿ ಗದ್ಯ ಸಾಹಿತ್ಯವು ಹಲವು ಮುಖಗಳಲ್ಲಿ ಬೆಳೆದಿರುತ್ತದೆ. ಇದರೊಂದಿಗೆ ಪತ್ರಿಕಾ ಸಾಹಿತ್ಯವೂ ಬೆಳೆದಿದೆ. ವಾಙ್ಮಯದಲ್ಲಿ ಪ್ರತಿಯೊಬ್ಬರದೂ ಒಂದೊಂದು ಮಾರ್ಗ, ಒಂದೊಂದು ಶೈಲಿಂಯೆಂಬುದೇ ಸಮಂಜಸವು. ಆದರೂ ಈ ಜಿಲ್ಲೆಯಲ್ಲಿ ಬೆಳೆದು ಬಂದ ಗದ್ಯವನ್ನೀಕ್ಷಿಸಿದರೆ ನಾಲ್ಕು ಮಂದಿ ಸಾಹಿತಿಗಳಲ್ಲಿ ನಾಲ್ಕು ರೀತಿಯ ಶೈಲಿ ಮೈಗೂಡಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಬಹುಮುಖ ಸಾಹಿತಿ ಕಾರಂತರ ಕಲಾಪೂರ್ಣ ಶೈಲಿಯೊಂದು, ಸಾಹಿತಿಯೂ ಪತ್ರಿಕೋದ್ಯಮಿಯೂ ಆದ ಕಡೆಂಗೋಡ್ಲು ಶಂಕರಭಟ್ಟರ ವ್ಯಂಗ್ಯ ಧ್ವನಿಯುಳ್ಳ ಗಂಬೀರ ಶೈಲಿಯೊಂದು, ಕವಿಯೂ ಸಂಶೋಧಕರೂ ಆದ ಗೋವಿಂದ ಪೈಗಳ ಸಂಸ್ಕೃತ ಭೂಯಿಷ್ಟವಾದ ಸಂಶೋಧಕ ಶೈಲಿಯೊಂದು, ಪಂಡಿತರೂ ಹಳೆಗನ್ನಡದ ದೇಸಿಗೆ ಮಾರು ಹೋದವರಾದ ಮುಳಿಯ ತಿಮ್ಮಪ್ಪಯ್ಯರ ತಿರುಳ್ಗನ್ನಡ ಘನಶೈಲಿಯೊಂದು – ಹೀಗಿರುವ ನಾಲ್ಕು ರೀತಿಯ ಗದ್ಯಶೈಲಿಯು ನಮ್ಮ ಸಾಹಿತಿಗಳ ಕೊಡುಗೆಯಾಗಿದೆ.’’

ಈ ಕೃತಿಯಲ್ಲಿ ಸಾಹಿತ್ಯ, ಕೃತಿ, ಕೃತಿಕಾರರು, ಕೃತಿ ಪರಿಚಯ, ಸಮೀಕ್ಷೆಯನ್ನು ಓದುಗರಿಗೆ ನೀಡಿದ್ದಾರೆ ಲೇಖಕ – ಸಂಶೋಧಕ ಪಿ.ಕೆ. ಅವರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯದ ಹೋರಾಟ

ಇದು ಅತ್ಯಂತ ಮಹತ್ವಪೂರ್ಣವಾದ ಗ್ರಂಥ. ಇಂಥ ಒಂದು ಆಕರ ಗ್ರಂಥವನ್ನು ಬರೆದ ಪಿ.ಕೆ. ನಾರಾಯಣ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ ಸದಾ ಋಣಿಯಾಗಿರಬೇಕು.

ಈ ಕೃತಿ ದಕ್ಷಿಣ ಕನ್ನಡ ಜಿಲ್ಲೆಯ ಕುರಿತ ಪೌರಾಣಿಕ – ಚಾರಿತ್ರಿಕ ಹಿನ್ನೆಲೆಯಿಂದ ಪ್ರಾರಂಭವಾಗುತ್ತದೆ. ದ.ಕ. ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರೆಲ್ಲರ ಪರಿಚಯ ಹಾಗೂ ಅಪೂರ್ವ ಭಾವಚಿತ್ರಗಳನ್ನೊಳಗೊಂಡ ಈ ಗ್ರಂಥ ಡೆಮಿ 1/8 ಆಕಾರದ 370 ಪುಟಗಳ ಬೃಹತ್ ಗ್ರಂಥ. ಗಾತ್ರದಲ್ಲೂ ಪಾತ್ರದಲ್ಲೂ ಮಹತ್ವ ಪೂರ್ಣವಾದುದು. ಸ್ವಾತಂತ್ರ್ಯ ಹೋರಾಟಗಾರರೆಲ್ಲರ ಹೆಸರುಗಳನ್ನು ಕಲೆಹಾಕಿ, ಅವರುಗಳು ಇರುವ ಊರುಗಳಿಗೆ ಹೋಗಿ, ಅವರಿಂದ ವಿಷಯ ಸಂಗ್ರಹಿಸಿ, ಬದುಕಿಲ್ಲದಿದ್ದಲ್ಲಿ, ಬದುಕಿದ್ದವರ ಬಾಯಿಂದ ವಿಷಯ ತಿಳಿದು, ಸಂಬಂಧ ಪಟ್ಟವರ ಮಕ್ಕಳಿಂದ, ಸ್ನೇಹಿತರಿಂದ ವಿಷಯ ಕಲೆಹಾಕಿ ಬರೆದ ಉದ್ಗ್ರಂಥ ಇದು.

ಭಾರತದಲ್ಲಿ ನವೋದಯ, ಜಿಲ್ಲೆಯಲ್ಲಿ ಅದರ ಪ್ರಭಾವ, ಭಾರತ ರಾಷ್ಟ್ರೀಯ ಕಾಂಗ್ರೆಸ್, ದಕ್ಷಿಣ ಕನ್ನಡ ಜಿಲ್ಲೆಗೆ ಗಾಂಧೀಜಿ ಭೇಟಿ, ಕಾರ್ನಾಡು ಸದಾಶಿವ ರಾವ್, ದ.ಕ.ದಲ್ಲಿ ಸ್ವಾತಂತ್ರ್ಯದ ಹೋರಾಟ, ಬ್ರಿಟಿಷರ ಆಳ್ವಿಕೆಯಲ್ಲಿ ದಕ್ಷಿಣ ಕನ್ನಡ, ಕಲ್ಯಾಣಪ್ಪನ ಕಾಟಕಾಯಿ – ಈ ಶೀರ್ಷಿಕೆಗಳಡಿಯಲ್ಲಿ ಅವರು ಬರೆದ ವಿವರಗಳಲ್ಲಿ ಸಂಶೋಧನೆಗೇ ಆದ್ಯತೆ.

ಸರಳವಾಗಿ ಆದರೆ ನೇರವಾಗಿ ಹೇಳುವ ಆ ರೀತಿ, ಇತಿಹಾಸವನ್ನು ಹೇಳುವಲ್ಲಿನ ಖಚಿತತೆ, ಹೋರಾಟಗಾರರ ಪರಿಚಯ, ಆತ್ಮೀಯವಾದ ಶೈಲಿ, ಪೂರಕವಾಗಿ ಮಧ್ಯೆ ಮಧ್ಯೆ ಬರುವ ಸ್ವಾತಂತ್ರ್ಯ ಹೋರಾಟದ ಕಥೆ ಲೇಖಕರ ಪಾಂಡಿತ್ಯಕ್ಕೆ ಪ್ರತಿಭೆಗೆ, ಸಂಶೋಧನೆಗೆ ದ್ಯೋತಕವಾಗಿದೆ.

ಪತ್ರಕರ್ತರಾಗಿ

1941ರಂದು ಶ್ರೀ ನಿರಂಜನರು ಮಂಗಳೂರು ಬಿಟ್ಟು ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಮತ್ತು ರಾಷ್ಟ್ರಬಂಧುವಿನ ಬಾತ್ಮೀದಾರ, ಪ್ರತಿನಿಧಿ ಹುದ್ದೆಯನ್ನು ತಂದೆಯವರಿಗೆ ಒಪ್ಪಿಸಿದರು. ಪತ್ರಿಕಾರಂಗದಲ್ಲಿ ಹೀಗೆ ಆರಂಭವಾದ ಅವರ ಕೆಲಸ 30 ವರ್ಷಗಳವರೆಗೂ ಮುಂದುವರಿಯಿತು. ತರುವಾಯ ತಾಂತ್ರಿಕ ಪ್ರತಿನಿಧಿಯಾಗಿ ಕೆಲಸ ಬಿಟ್ಟರೂ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ ಮಾತ್ರ ತಪ್ಪಲಿಲ್ಲ. ಜೈನ ಮಾಸಪತ್ರಿಕೆ ವಿವೇಕಾಭ್ಯುದಯದಲ್ಲಿ ಜೈನಧರ್ಮಕ್ಕೆ ಸಂಬಂಧಪಟ್ಟ ಲೇಖನಗಳನ್ನು ಅವರು ಬರೆಯುತ್ತಿದ್ದು ದಲ್ಲದೆ ರತ್ನಾಕರವರ್ಣಿಯ ಭರತೇಶ ವೈಭವದ ಗದ್ಯಾನುವಾದ ಬಹಳಷ್ಟು ವರ್ಷಗಳವರೆಗೆ ಧಾರಾವಾಹಿಯಾಗಿ ಸಂಪೂರ್ಣವಾಗಿ ಪ್ರಕಟವಾಗಿ ಓದುಗರ ಪ್ರಶಂಸೆಗೆ ಪಾತ್ರವಾಯಿತು. ಈ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗಮನಿಸಿ ಕರ್ನಾಟಕ ಸರ್ಕಾರವು 1-11-1981ರಿಂದ ತಿಂಗಳಿಗೆ 250 ರೂಪಾಯಿಗಳ ಗೌರವಧನ ನೀಡಿ ಗೌರವಿಸಿತು.

ಇತರ ಬರವಣಿಗೆಗಳು

ತಂದೆಯವರು ಮಕ್ಕಳಿಗಾಗಿ ಸರಳ ಕನ್ನಡದಲ್ಲಿ ‘ಶ್ರೀ ವಾಲ್ಮೀಕಿ ರಾಮಾಯಣದ ಕಥೆ’ಯನ್ನು ಬರೆದಿದ್ದರು. ಮಂಗಳೂರಿನ ಬಾಲಸಾಹಿತ್ಯ ಮಂಡಲವು ಅದನ್ನು 1953ರಲ್ಲಿ ಪ್ರಥಮಾವೃತ್ತಿಯಾಗಿ ಪ್ರಕಟಿಸಿತು. ತರುವಾಯ 1962ರಿಂದ ಮೂರು ವರ್ಷಗಳ ಅವಧಿಯವರೆಗೆ ಮೈಸೂರು ರಾಜ್ಯದ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪ್ರಾಥಮಿಕ ಶಾಲೆಗಳ VII ಸ್ಟಾಂಡರ್ಡ್‌ಗೆ ಉಪಪಠ್ಯ (ಸಪ್ಲಿಮೆಂಟರಿ ರೀಡರ್)ವಾಗಿ ಆಯ್ಕೆ ಮಾಡಿತ್ತು.

ಇದು ಡೆಮಿ 1/8 ಆಕಾರದ 75 ಪುಟಗಳ ಪುಸ್ತಕವಾಗಿದೆ.

ಮೊಳಹಳ್ಳಿ ಶಿವರಾವ್ : ಇದು ಒಂದು ಕಿರುಪುಸ್ತಿಕೆ. ಮೊಳಹಳ್ಳಿ ಶಿವರಾಯರ ವ್ಯಕ್ತಿತ್ವ, ಕೌಟುಂಬಿಕ ವಿಚಾರ, ಸಹಕಾರ ಸಂಸ್ಥೆಯ ಜನಕರಾಗಿ ಅವರ ಕಾರ್ಯಗಳು, ವೃತ್ತಿಯಲ್ಲಿ ವಕೀಲರಾಗಿ ಅವರ ಸೇವೆ, ದೇಶಭಕ್ತರಾಗಿ ಅವರ ಸೇವೆ – ಇತ್ಯಾದಿ ವಿಚಾರಗಳನ್ನು ಸಂಕ್ಷಿಪ್ತವಾದರೂ ಸಮಗ್ರವಾಗಿ ಈ ಪುಸ್ತಿಕೆಯಲ್ಲಿ ತಿಳಿಸಿದ್ದಾರೆ. ಮೊಳಹಳ್ಳಿಯವರನ್ನು ಅರಿಯಬೇಕೆಂದು ಬಯಸುವವರಿಗೆ ಈ ಪುಸ್ತಿಕೆ ಕೈಗನ್ನಡಿಯಾಗಿದೆ.

‘ಕನ್ನಡ ಪರೀಕ್ಷಾರ್ಥಕ’ ಎಂಬುದು ಇವರ ಇನ್ನೊಂದು ಪರಿಶ್ರಮದ ಕೃತಿಯಾಗಿದೆ.

ಗಾಂಧೀವಾದಿ

ತಂದೆಯವರು ಗಾಂಧೀವಾದಿಯಾಗಿದ್ದರು. ಗಾಂಧೀಜಿಯವರು ಪುತ್ತೂರಿಗೆ ಬಂದಾಗ ಸ್ವದೇಶೀ ವಸ್ತು ಬಳಕೆ ಬಗೆಗಿನ ಗಾಂಧೀಜಿಯವರ ಭಾಷಣದ ಪ್ರಭಾವಕ್ಕೊಳಗಾದ ತಂದೆ ಯವರು ಅಂದಿನಿಂದ ಜೀವನದ ಕೊನೆಯವರೆಗೂ ಖದ್ದರ್‌ಧಾರಿಗಳಾದರು. ಮಂಗಳೂರಿನ ಗಾಂಧೀ ಪ್ರತಿಷ್ಠಾನದ ಸಕ್ರಿಯ ಸದಸ್ಯರಾದರು.

ದ.ಕ. ಜಿಲ್ಲೆಯ ಸ್ಥಳೀಯ ಹಾಗೂ ಗ್ರಾಮೀಣ ಶಾಲೆಗಳಲ್ಲಿ ಗಾಂಧೀಜಿ ತತ್ತ್ವಗಳ ಕುರಿತ ಭಾಷಣ ಮಾಡಿದರು. ಮಂಗಳೂರಿನ ಜಿಲ್ಲಾ ಜೈಲಿನಲ್ಲಿದ್ದ ಕೈದಿಗಳಿಗೆ ನೈತಿಕ ಮತ್ತು ಧಾರ್ಮಿಕ ವಿಚಾರಗಳ ಕುರಿತು ಹಾಗೂ ಗಾಂಧೀಜಿಯವರ ತತ್ತ್ವಗಳ ಕುರಿತು 1933ರಲ್ಲಿ ಪ್ರತಿ ಭಾನುವಾರ ಭಾಷಣ ಮಾಡಿದ್ದರು. ಗಾಂಧೀಜಿ ಮತ್ತು ಜಾತ್ಯತೀತ ಧರ್ಮ, ಗಾಂಧೀಜಿ ಮತ್ತು ಕಲಾಸತ್ಯ, ಗಾಂಧೀಜಿ ಮತ್ತು ಅವರ ದತ್ತು ಪುತ್ರಿ ಲಕ್ಷ್ಮಿ, ಗಾಂಧೀಜಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು, ಲೋಕಮಾನ್ಯ ತಿಲಕ್ ಮತ್ತು ಮಹಾತ್ಮಾಗಾಂದಿ, ಜಲಿಯನ್ ವಾಲಾಭಾಗ್ ಘಟನೆ ಮತ್ತು ಗಾಂಧೀಜಿಯವರ ಮೇಲೆ ಅದರ ಪ್ರಭಾವ, ಗಾಂಧೀಜಿಯವರು ಮಹಾತ್ಮ ರಾದುದು ಹೇಗೆ? ಗಾಂಧೀವಾದದ ವೈಶಿಷ್ಟ್ಯ, ಗಾಂಧೀಜಿ ಮತ್ತು ಗುಡಿ ಕೈಗಾರಿಕೆಗಳು, ಗಾಂಧೀಜಿಯವರ ದೃಷ್ಟಿಯಲ್ಲಿ ರಾಮರಾಜ್ಯ, ಬಾಪೂಜಿ ಬಡತನವನ್ನು ಸ್ವೀಕರಿಸಿದ್ದು ಹೇಗೆ? ಗಾಂಧೀಜಿ ಮತ್ತು ಆರ್ಥಿಕ ಸುಧಾರಣೆ, ಗಾಂಧೀಜಿ ಮತ್ತು ಆರ್ಥಿಕ ಸಮಾನತೆ, ಗಾಂಧೀಜಿಯವರ ದೃಷ್ಟಿಯಲ್ಲಿ ಸತ್ಯಾಗ್ರಹ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರು, ಗಾಂಧೀಜಿಯವರ ಆದರ್ಶ – ಮಕ್ಕಳಿಗೆ ಮಾರ್ಗದರ್ಶನ – ಇವು ಇಷ್ಟು ವಿಷಯಗಳನ್ನು ಕುರಿತು ಮಂಗಳೂರಿನ ಆಕಾಶವಾಣಿಯಲ್ಲಿ ಅವರು ಮಾಡಿದ ಭಾಷಣಗಳು.

ನನ್ನ ತಂದೆಯವರು ಅರ್ಥಧಾರಿಗಳೂ ಆಗಿದ್ದರು. ಅವರ ಸ್ನೇಹಿತರಾದ ಕೆದಂಬಾಡಿ ಜತ್ತಪ್ಪ ರೈ ಮತ್ತು ಕೊಂಡಾಣ ವಾಮನ ಅವರು ಈ ಬಗ್ಗೆ ಉಲ್ಲೇಖಿಸಿದ್ದಾರೆ. ‘‘ಮಂಗಳೂರಲ್ಲಿ ಒಡೆಯರ ಬಳಗ ಎಂಬ ನಮ್ಮ ಯಕ್ಷಗಾನ ಕೂಟವೊಂದು ತಾಳಮದ್ದಳೆಗಳನ್ನು ನಿರ್ವಹಿಸುತ್ತಿದ್ದ ಸಂದರ್ಭಗಳು ಕೆಲವು ಶ್ರೀ ನಾರಾಯಣರ ನೇತೃತ್ವದಲ್ಲಿ ಅವರ ಹೈಸ್ಕೂಲಲ್ಲೂ ಯಕ್ಷಗಾನ ಕಾರ್ಯಕ್ರಮ ವೊಂದು ಜರಗಿತ್ತು. ಪಿ.ಕೆ. ಯವರು ಅಂದು ನಡೆದ ಕಥೆಯ ಸಂಕ್ಷಿಪ್ತ ರೂಪ ಭಾಷಣವೊಂದನ್ನು ಮಾಡಿ ನಮ್ಮ ಕೂಟದ ವಿದ್ವಾಂಸರ ಪ್ರಶಂಸೆಗೆ ಅರ್ಹರಾದರು. ಒಂದೆರಡು ಸಲ ನಮ್ಮೊಂದಿಗೆ ಯಕ್ಷಗಾನ ಅರ್ಥವನ್ನು ಹೇಳಿ ಉತ್ತಮ ಅರ್ಥಧಾರಿಂಯೆಂಬ ಮೆಚ್ಚುಗೆಯನ್ನೂ ಪಡೆದಿರುವರು. ನಾನು ಓದಿ ಶ್ರೀ ಪೊಳಲಿ ಶಂಕರನಾರಾಯಶಾಸ್ತ್ರಿ, ತಲ್ಲಂಗಡಿ ಪರಮೇಶ್ವರಿಯಮ್ಮ, ಕೆಡ್ಯ ಕೃಷ್ಣಮಲ್ಲಿ, ವಿ.ಜಿ. ಬಂಗೇರ ಮೊದಲಾದವರು ಅರ್ಥ ವಿವರಣೆ ನೀಡುತ್ತಿದ್ದ ಪುರಾಣ ವಾಚನ ಕಾರ್ಯಕ್ರಮಗಳ ಸಮಾರಂಭಕ್ಕೆ ಶ್ರೀ ಪಿ.ಕೆ. ನಾರಾಯಣರನ್ನು ಉಪನ್ಯಾಸಕರಾಗಿ ಕರೆದ ಸಂದರ್ಭಗಳು ಹಲವು. ಆ ಸಂದರ್ಭಗಳಲೆಲ್ಲ ಅವರು ಉತ್ತಮ ರಸಜ್ಞ ವಾಗ್ಮಿಗಳೆಂದು ಜನಮನ್ನಣೆ ಗಳಿಸಿರುವರು. ಅವರಿಗೆ ಚಿತ್ರಕಲೆ, ರಂಗೋಲಿ ರಚನೆಗಳಲ್ಲೂ ಪರಿಣತಿಯಿತ್ತು.’’1

ವಾಗ್ಮಿ

ಅವರು ಉತ್ತಮ ವಾಗ್ಮಿಯಾಗಿದ್ದರು. ಆಕಾಶವಾಣಿಯಲ್ಲಿ ಅವರು ಮಾಡಿದ ಭಾಷಣ ಗಳ ಬಗ್ಗೆ ಈಗ ತಾನೆ ಹೇಳಿದೆ. 1942ರಲ್ಲಿ ಕಾಸರಗೋಡು ಯುವಜನ ಸಂಘದಲ್ಲಿ ಆಧುನಿಕ ಕನ್ನಡ ಕವಿತೆಗಳ ಬಗ್ಗೆ ಅವರು ಭಾಷಣ ಮಾಡಿದ್ದರು. ಅದಕ್ಕೆ ಅವರು ಉಲ್ಲೇಖ ಮಾಡಿಕೊಂಡ ಟಿಪ್ಪಣಿಗಳು ಹಾಗೂ ವಿಷಯ ಮುಖ್ಯಾಂಶಗಳನ್ನು ಸ್ಥೂಲವಾಗಿ ಬರೆದಿರಿಸಿದ ಹಾಳೆಗಳು ಈಗಲೂ ಇವೆ. ಪ್ರಗತಿಪಂಥ ರಾಜ್ಯಮಟ್ಟದ ಪ್ರಥಮ ಸಮ್ಮೇಳನ ದಾವಣಗೆರೆಯಲ್ಲಿ, ಪುತ್ತೂರಲ್ಲಿ ನಡೆದಾಗ 2ನೆ ವಿಚಾರಗೋಷ್ಠಿಯ ಭಾಷಣಕಾರರಾಗಿದ್ದರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಆಸುಪಾಸಿನ ಊರುಗಳಲ್ಲಿ ನೂರಾರು ಕಾರ್ಯಕ್ರಮಗಳಲ್ಲಿ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ, ಗಾಂಧಿವಿಚಾರ ಕುರಿತು ಭಾಷಣಗಳನ್ನು ಮಾಡಿದ್ದಾರೆ. ಭಾಷಣ ಮಾಡುವ ಸಂದರ್ಭದಲ್ಲಿ ವಿಷಯಗಳನ್ನು ಮನವರಿಕೆ ಮಾಡಿಕೊಂಡು, ಟಿಪ್ಪಣಿ ತಯಾರಿಸಿಕೊಂಡು ವಿಷಯಾನುಸಾರ ವಾಗಿ ವಿಚಾರ ಮಂಡಿಸುವ ರೀತಿ ಉತ್ತಮ ವಾಗ್ಮಿಯಲ್ಲಿರಬೇಕಾದ ಗುಣ. ಅದು ಅವರಲ್ಲಿತ್ತು. 1974ರಲ್ಲಿ ಮಣಿಪಾಲದ ಕನ್ನಡ ಸಂಘದಲ್ಲಿ ರತ್ನಾಕರವರ್ಣಿಯ ನೃತ್ಯಪ್ರಜ್ಞೆ ಕುರಿತು ಭಾಷಣ ಮಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ, ಕನ್ನಡ ಸಂಘದ ಕಾರ್ಯಕ್ರಮ ಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ, ಕನ್ನಡ ಪಂಡಿತರ ಸಮ್ಮೇಳನಗಳಲ್ಲಿ ಪ್ರಬಂಧಕಾರರಾಗಿ, ಭಾಷಣಕಾರರಾಗಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಕಾರ್ಯಕರ್ತರಾಗಿ ಇತರ ಸಂಘ ಸಂಸ್ಥೆಗಳಲ್ಲೂ ಭಾಷಣಗಳ ಮೂಲಕ ತಮ್ಮ ಸಲಹೆಗಳನ್ನಿತ್ತಿದ್ದಾರೆ.

ನಾನು ತುಂಬಾ ಚಿಕ್ಕವಳಿರುವಾಗಲೇ ನನ್ನ ತಂದೆಯವರ ಬಾಯಿಂದ ಪಂಜೆ ಮಂಗೇಶ ರಾಯರು, ಮುಳಿಯ ತಿಮ್ಮಪ್ಪಯ್ಯನವರು, ಎಂ.ಎನ್. ಕಾಮತರು, ಎನ್.ಎಸ್. ಕಿಲ್ಲೆ ಯವರು, ಹುರುಳಿ ಬೀಮರಾಯರು, ಶಿವರಾಮ ಕಾರಂತರು ಪಡುಕೋಣೆ ರಮಾನಂದ ರಾಯರು – ಮೊದಲಾದವರ ಹೆಸರುಗಳನ್ನು ಕೇಳಿದ್ದೆ. ಇನ್ನೂ ಹಲವರ ಹೆಸರುಗಳನ್ನು ಆರಂಭ ದಲ್ಲಿ ನೆನಪಿಸಿದ್ದೇನೆ. ಇವರೆಲ್ಲರ ಸಾಹಚರ್ಯ ನನ್ನ ತಂದೆಯವರಿಗಿತ್ತು. ಹುರುಳಿ ಬೀಮ ರಾಯರು ನಮ್ಮ ಮನೆಗೆ ಬಂದುದು ನನಗೆ ಚೆನ್ನಾಗಿ ನೆನಪಿದೆ. ನನ್ನ ತಂದೆಯವರು 1938ರಲ್ಲಿ ಮಂಜೇಶ್ವರ ಗೋವಿಂದ ಪೈಗಳಿಗೆ ಕೈಕಾಗದ ಬರೆದಿದ್ದಕ್ಕೆ ಗೋವಿಂದ ಪೈಗಳ ಉತ್ತರಿಸಿದ ಪತ್ರ ಈಗಲೂ ಇದೆ. ಪಂಜೆಯವರ ತೂಕಡಿಸದೆ ಕುಳಿತಿಹೆಯೇಕೆ? ಪದ್ಯದ ಪೂರ್ಣ ಪಾಠವನ್ನು ನನ್ನ ತಂದೆಯವರಿಗೆ ಪೈಗಳು ಕಳುಹಿಸಿಕೊಟ್ಟಿದ್ದರು.

ನಾನು ದೊಡ್ಡವಳಾಗುತ್ತಿದ್ದಂತೆ ಇನ್ನೂ ಸಾಹಿತಿಗಳ ಹೆಸರುಗಳು ನನ್ನ ಕಿವಿಯ ಮೇಲೆ ಬೀಳುತ್ತಿದ್ದುವು. ಅಷ್ಟೇ ಅಲ್ಲ ಅವರ ಜತೆಯಲ್ಲಿ ಕನ್ನಡ ಸಂಘದ ಕಾರ್ಯಕ್ರಮಗಳಿಗೆ, ಕನ್ನಡ ಪರಿಷತ್ತಿನ ಕಾರ್ಯಕ್ರಮಗಳಿಗೆ, ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಸರ್ವಧರ್ಮ ಸಮ್ಮೇಳನಗಳಿಗೆ ಅವರ ಜತೆಯಲ್ಲಿ ಹೋಗಿ ಆ ಮಹಾಸಾಹಿತಿಗಳನ್ನು ಕಾಣುವ, ಅವರ ಮಾತುಗಳನ್ನು ಕೇಳುವ ಒಂದು ಸುಯೋಗ ನನಗೆ ದೊರಕಿದುದನ್ನು ಈಗ ನೆನಪಿಸಿಕೊಂಡರೆ ನಿಜಕ್ಕೂ ಬೆರಗು ಮೂಡುತ್ತಿದೆ. ತಂದೆಯವರ ಸಾಹಿತಿ ಬಳಗದಲ್ಲಿ ಹಲವರನ್ನು ಕಣ್ಣಾರೆ ಕಾಣುವ, ಕಂಡು ಮಾತನಾಡುವ ಜತೆಗೆ ಸಾಹಚರ್ಯ ಕೂಡಾ ಲಬಿಸಿರುವುದು ನಿಜವಾಗಿಯೂ ನನ್ನ ಅದೃಷ್ಟ.

ಶಿವರಾಮ ಕಾರಂತರಂಥ ಬಹುಮುಖ ಪ್ರತಿಭೆಯ ದೀಮಂತ ಚೇತನವನ್ನು, ಪಡುಕೋಣೆ ರಮಾನಂದರಾಯರಂಥ ಲಲಿತ ಪ್ರಬಂಧ ರಚಕರನ್ನೂ ತಂದೆಯವರಿಂದ ಪರಿಚಯಿಸಿಕೊಂಡು ಮಾತನಾಡಿದುದನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ.

ಒಬ್ಬ ಕನ್ನಡ ಪಂಡಿತರಾಗಿದ್ದು ತನ್ನ ಮನೆಯಲ್ಲಿ ಅಮೂಲ್ಯವಾದ ಪುಸ್ತಕ ಭಂಡಾರವನ್ನಿರಿಸಿಕೊಂಡವರು ನನ್ನ ತಂದೆಯವರು. ಊಟದ ಕೋಣೆ, ಅಡುಗೆ ಕೋಣೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಕೋಣೆಗಳಲ್ಲಿ, ಕಪಾಟುಗಳಲ್ಲಿ, ಮೇಜುಗಳಲ್ಲಿ, ಕುರ್ಚಿಗಳಲ್ಲಿ, ಕೊನೆಗೆ ಸೋಫಾದ ಮೇಲೂ – ಮನೆ ತುಂಬಾ ಪುಸ್ತಕಗಳು. ಅವರು ಪುಸ್ತಕಗಳನ್ನು ಹಣ ಕೊಟ್ಟುಕೊಂಡು ಕೊಳ್ಳುತ್ತಿದ್ದರು. ಮಾತ್ರವಲ್ಲ ಓದುತ್ತಿದ್ದರು ಕೂಡಾ. ಕೆಲವೊಮ್ಮೆ ರಸ್ತೆಯಲ್ಲಿ ಹೋಗುವಾಗಲೂ ಅವರು ಓದುತ್ತಿದ್ದುದು ನನಗೆ ನೆನಪಿದೆ.

ನಾನು ಎಂ.ಎ. ತರಗತಿಗೆ ಸೇರಿದಾಗ ಯಾವುದೇ ಪಠ್ಯಪುಸ್ತಕಗಳನ್ನು  ಕೊಂಡುಕೊಳ್ಳ ಲಿಲ್ಲ. ಪಂಪನ ವಿಕ್ರಮಾರ್ಜುನ ವಿಜಯ, ಆದಿಪುರಾಣಗಳು ನಮ್ಮ ಮನೆಯಲ್ಲೇ ಇದ್ದುವು. ಇನ್ನಿತರ ಪಠ್ಯಗಳಷ್ಟೇ ಅಲ್ಲ ಪೂರಕ ಪಠ್ಯಗಳ ಪುಸ್ತಕಗಳೂ, ಆಕರ ಗ್ರಂಥಗಳೂ ನಮ್ಮ ಮನೆಯಲ್ಲೇ ಇದ್ದುವು. ನನಗೆ ಶಾಸನ ಒಂದು ಪಠ್ಯ ವಿಷಯವಾಗಿತ್ತು. ಹಲ್ಮಿಡಿ ಶಾಸನದ ಬಗ್ಗೆ ಬೇಕಾದ ಮಾಹಿತಿ ಪ್ರಬುದ್ಧ ಕರ್ಣಾಟಕದ ಒಂದು ಹಳೆಯ ಸಂಚಿಕೆಯಲ್ಲಿತ್ತು. ಅದೂ ನಮ್ಮಲ್ಲಿತ್ತು. ತಂದೆಯವರು ಪ್ರಬುದ್ಧ ಕರ್ಣಾಟಕ ಸಂಚಿಕೆಗೆ ಚಂದಾದಾರರಾಗಿದ್ದರು. ಅದರಲ್ಲಿ ಪ್ರಬುದ್ಧ ಲೇಖನ ಗಳು, ಸಂಶೋಧನಾತ್ಮಕ ಬರಹಗಳೇ ಇರುತ್ತಿದ್ದುವು. ತಂದೆಯವರು ಅದನ್ನು ತರಿಸುತ್ತಿದ್ದು ದರಿಂದ ನಾನು 10ನೆಯ ತರಗತಿಯಲ್ಲಿರುವಾಗಲೇ ಅದನ್ನು ಓದಲಾರಂಬಿಸಿದ್ದೆ. ಆದ್ದರಿಂದಲೇ ಏನೋ ನನಗೂ ಸಾಹಿತ್ಯದಲ್ಲಿ ಆಸಕ್ತಿ. ತಂದೆಯವರ ಆಶೀರ್ವಾದ ಪ್ರೋತ್ಸಾಹಗಳೂ ನನಗೆ ದೊರೆತಿದ್ದವು. ತಂದೆಯವರ ನಿಧನದ ತರುವಾಯ ನಾನು ‘ಪಂಜೆಯವರ ಕೃತಿಗಳು – ಒಂದು ಅಧ್ಯಯನ’ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ| ಹಂಪನಾ ಅವರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ. ಅಧ್ಯಯನ ಮಾಡುವಾಗ ಎಲ್ಲೂ ದೊರೆಯದ ಪಂಜೆ ಯವರ ಹೆಚ್ಚು ಕಡಿಮೆ ಎಲ್ಲ ಕೃತಿಗಳೂ ನಮ್ಮ ಮನೆಯ ಗ್ರಂಥ ಭಂಡಾರದಿಂದಲೇ ಲಭ್ಯವಾದುವು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ. ಅಷ್ಟೇ ಅಲ್ಲ ಪಂಜೆಯವರ ದೊಡ್ಡ ಮಗಳಾದ ಅನಸೂಯ ಆರೂರು, ಕಿರಿಯ ಮಗಳಾದ ಶಾಂತಾ ರಾಮೇಶ್ವರರಾವ್ ಅವರ ವಿಳಾಸಗಳನ್ನು ನೀಡಿ ಸಹಕರಿಸಿದ್ದರು. ನನ್ನ ತಂದೆಯವರು ಪಂಜೆಯವರ ಸೊಸೆ ವರದಾ ಆರ್. ಪಂಜೆಯವರ ಮನೆಗೆ (ಬೆಂಗಳೂರು) ಮೊದಲು ನನ್ನನ್ನು ಕರೆದುಕೊಂಡು ಹೋಗಿ ನನ್ನ ಪರಿಚಯ ಮಾಡಿಸಿದ್ದರು. ನಾನು ಮೂರು ವರ್ಷಗಳ ಅವಧಿಯಲ್ಲಿ ನನ್ನ ಮಹಾಪ್ರಬಂಧ ಮಂಡಿಸಲು ತಂದೆಯವರ ಪ್ರೇರಣೆ – ಆಶೀರ್ವಾದಗಳೇ ಕಾರಣ.

ನನ್ನ ತಂದೆಯವರು ನಾಡು-ನುಡಿಗೆ ಸಲ್ಲಿಸಿದ ಸೇವೆಗೆ, ಅಧ್ಯಾಪನ ಸೇವೆಗೆ, ಸಮಾಜ ಸೇವೆಗೆ ಗಣ್ಯ ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿವೆ. ಅಧ್ಯಾಪಕ ವೃತ್ತಿಯಿಂದ ನಿವೃತ್ತರಾಗುವ ಸಂದರ್ಭದಲ್ಲಿ ಬೆಸೆಂಟ್ ಶಾಲೆಯ ಪೋಷಕ ಮತ್ತು ಹಳೇ ವಿದ್ಯಾರ್ಥಿ ಸಂಘವು ಅವರನ್ನು ಸನ್ಮಾನಿಸಿ, ಶಾಲು ಹೊದೆಸಿ, ನೆನಪಿನ ಕಾಣಿಕೆ ನೀಡಿ ಧನ ಕಾಣಿಕೆಯನ್ನೂ ಅರ್ಪಿಸಿ ಗೌರವಿಸಿತು. (1974) 30-4-1974ರಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಸಂಸ್ಥೆಯು ಉತ್ತಮ ಅಧ್ಯಾಪಕರುಗಳನ್ನು ಸನ್ಮಾನಿಸುವ ಸಂದರ್ಭದಲ್ಲಿ ಅವರನ್ನೂ ಸನ್ಮಾನಿಸಿ ಗೌರವಿಸಿತು. ಶ್ರೀ ಗುಂಡೂರಾವ್ ಸರ್ಕಾರದ ಪ್ರಥಮ ವಾರ್ಷಿಕೋತ್ಸವದಂದು 1-1-1981ರಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರುಗಳನ್ನು ಸನ್ಮಾನಿಸಿದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಗಣ್ಯರಾಗಿ ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಪುರಸ್ಕೃತರಾದರು. 26-1-1981ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಡಾ| ಹಂಪನಾ ಅವರ ಅಧ್ಯಕ್ಷತೆಯಲ್ಲಿ ಇವರನ್ನು ಗೌರವಿಸಿ, ಶಾಲು ಹೊದಿಸಿ ಸನ್ಮಾನ ಮಾಡಿತು. 29-3-1983ರಂದು ಪುತ್ತೂರು ಕರ್ನಾಟಕ ಸಂಘವು ತ್ರಿದಶಮಾನೋತ್ಸವ ಸಮಾರಂಭ ದಂದು ‘‘ಅಧ್ಯಾಪಕ, ಲೇಖಕ, ಕವಿ, ಪತ್ರಕರ್ತ, ಪಂಡಿತ ಶ್ರೀ ಪಿ.ಕೆ. ನಾರಾಯಣ’’ ಎಂದು ಅಬಿನಂದಿಸಿ ಗೌರವಿಸಿತು. ಇನ್ನೂ ಹಲವಾರು ಸಂಘ ಸಂಸ್ಥೆಗಳು ಅವರನ್ನು ಅಬಿನಂದಿಸಿ ಗೌರವಿಸಿವೆ.

ಸ್ಫಟಿಕ ಮಂಜೂಷ

ಬಲ್ಲವರ ಮನದಲ್ಲಿ ನೀವಾದಿರಿ ನಿಶ್ಚಲ ಪಾತ್ರ
ಧವಳಶುದ್ಧಿ ಶುಭ್ರ ಶ್ವೇತ ಖಾದಿ ವಸನ ಧಾರಿ
ಸರಳ ಸಜ್ಜನ ಸಹನಾ ಮೂರ್ತಿ ನಿರ್ವಿಕಾರಿ
ಕವಿ ಸಾಹಿತಿ ಪತ್ರಕರ್ತ ಗಾಂಧೀವಾದಿ ಸನ್ಮಿತ್ರ

ಜನನ ಪುತ್ತೂರು ಕಾರ್ಯಕ್ಷೇತ್ರಕೆ ತಾಣ ಮಂಗಳೂರು
ತೇಜಸ್ವಿ, ಉತ್ಸಾಹಿ, ಮುನಿಸು ಕಾಣದ ಮಗು ಮಾನಸ
ಮೃದು ಭಾಷೆ, ಸಂಭಾವಿತ, ಮೊಗದಲ್ಲಿ ನಿತ್ಯ ಮಂದಹಾಸ
ಸಾಂಸ್ಕೃತಿಕ ಸಾಮಾಜಿಕ ಸೇವಾಧರ್ಮ ಜೀವನದುಸಿರು

ವಿದ್ಯಾರ್ಥಿ ಹೃನ್ಮನಕೆ ಎರೆದಿರಿ ನೀವು ವಿದ್ಯಾಪೀಯೂಷ
ಬೆಳೆಸಿಕೊಂಡಿರಿ ಜ್ಞಾನ ಪಡೆದುಕೊಂಡಿರಿ ಸನ್ಮಾನ
ಬಯಸಲಿಲ್ಲ ಕೀರ್ತಿ ಪ್ರತಿಷ್ಠೆ ಅಬಿದಾನ
ನಿಮ್ಮ ಹೃದಯ ಶ್ರೀಮಂತಿಕೆ ಪ್ರಾಮಾಣಿಕತೆಗೆ ನಮ್ಮ ನಮನ
ಸಾತ್ವಿಕತೆಯ ಸಾಕಾರ ನಿರಹಂಕಾರ ನಿರುಪಮಾನ
ತೀರ್ಥರೂಪರು ನೀವು ನಿಜಕು ಸ್ಫಟಿಕ ಮಂಜೂಷ!        – ವರದಾ ಶ್ರೀನಿವಾಸ