‘‘1930ರ ಸುಮಾರಿಗೆ ಪುತ್ತೂರಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕನ್ನಡ ನಾಟಕಗಳು ಒಂದು ಪ್ರಧಾನ ಅಂಗವಾಗಿದ್ದವು. ಆ ಸಮಯದಲ್ಲಿ ಈ ಮೂರು ಮಕ್ಕಳ (ಮದನಪ್ಪ, ನಾರಾಯಣ, ಮಹಾಲಿಂಗ) ಮುಖವನ್ನು ನಿತ್ಯ ಕಾಣುತ್ತಿದ್ದೆವು. ಆದ್ದರಿಂದಲೇ ನಾರಾಯಣ ನನಗೆ ಇನ್ನಷ್ಟು ಚೆನ್ನಾಗಿ ಗೊತ್ತು. ಅವನಿಗೆ ಸ್ತ್ರೀ ಭೂಮಿಕೆ ತಪ್ಪಿದ್ದಲ್ಲ. ಆತನ ಒಂದು ಭೂಮಿಕೆ ನನಗೆ ಚೆನ್ನಾಗಿ ನೆನಪಿದೆ. ನಾನು ಅನುವಾದಿಸಿದ ಗಡ್ಕರಿಯ ‘ಎಕ್‌ಚ ಪಾಲಾ’ ಯಾನೆ ‘ನಿಶಾಮಹಿಮೆ’ ನಾಟಕದಲ್ಲಿ ಆತ ಮುಖ್ಯ ಸ್ತ್ರೀ ಪಾತ್ರ ವಹಿಸುತ್ತಿದ್ದ… ಆತನ ಒಂದು ದೊಡ್ಡ ಗುಣ ಯಾವ ಕೆಲಸವನ್ನು ವಹಿಸಿಕೊಂಡರೂ ಒಂದಿಷ್ಟು ಆಲಸ್ಯವಿಲ್ಲದೆ ದುಡಿಯತಕ್ಕ ಬುದ್ಧಿ. ಅದರಿಂದ ಆತನ ವಿದ್ವತ್ತು ಬೆಳೆದಿದೆ. ತಿಳುವಳಿಕೆಯೂ ಬೆಳೆದಿದೆ. ಪ್ರತಿಷ್ಠೆಯೂ ಹೆಚ್ಚಿದೆ. ಅದೊಂದರಿಂದಲೂ ಅಹಂಕಾರ ಮಾತ್ರ ಹುಟ್ಟಲಿಲ್ಲ. ನಾನು ಆತನನ್ನು ಕಂಡಂದಿನಿಂದ ತನ್ನ ಕೊನೆಯ ಗಳಿಗೆಯವರೆಗೂ ವಿನಯ ಸಂಪನ್ನನಾಗಿ ಬಾಳಿದವ ಪಿ.ಕೆ. ನಾರಾಯಣ.’’
ಡಾ| ಶಿವರಾಮ ಕಾರಂತ

ಪಿ.ಕೆ.ಯವರ ನೆನಪಾದಾಗಲೆಲ್ಲ ಆ ಸದ್ಗುಣ ಸಂಪನ್ನ ಇನ್ನಿಲ್ಲ ಎಂದು ಖಿನ್ನನಾಗುತ್ತೇನೆ. ಆದರೆ ಮರುಕ್ಷಣವೇ ಅಂಥವರು ಈ ನಾಡಿನಲ್ಲಿ ಇದ್ದರು. ಅವರ ಸಾಹಚರ್ಯ ನನಗಿತ್ತು ಎಂದು ಹೆಮ್ಮೆ ಪಡುತ್ತೇನೆ.

1943-44 ಮಂಗಳೂರಿನಲ್ಲಿ ಬಹುವಿಧ ಚಟುವಟಿಕೆಯ ವರ್ಷಗಳು. ಪ್ರಗತಿಶೀಲ ಲೇಖಕ ಸಂಘ, ಜನತಾ ರಂಗಭೂಮಿ, ಪತ್ರಿಕೋದ್ಯೋಗಿಗಳ ಸಂಘ, ಮಕ್ಕಳ ಸಮ್ಮೇಳನ, ಉಡುಪಿಯಲ್ಲಿ ಕಿರಿಯರ ಸಮ್ಮೇಳನ, ಮಂಗಳೂರಲ್ಲಿ ಕರ್ನಾಟಕ ಪತ್ರಿಕೋದ್ಯೋಗಿಗಳ ಸಮ್ಮೇಳನ – ಈ ಎಲ್ಲ ಚಟುವಟಿಕೆಗಳಲ್ಲೂ ಪಿ.ಕೆ. ಪಾಲ್ಗೊಂಡರು.
ನಿರಂಜನ

‘‘ಪುತ್ತೂರಿನ ಚಾರಿತ್ರಿಕ ದಸರಾ ಮಹೋತ್ಸವದ ಕಾಲದಲ್ಲಿ ಶ್ರೀ ಪಿ.ಕೆ. ಅವರನ್ನು ಮೊದಲ ಸಲ ಕಂಡೆ. ಕಂಡು ಅವರ ಕಡೆ ಆಕರ್ಷಿತನಾದೆ. ಅಪೂರ್ವ ವ್ಯಕ್ತಿತ್ವದ ಮನುಷ್ಯ ಯಾರನ್ನಾದರೂ ಆಕರ್ಷಿಸುವುದು ವಿಶೇಷವಲ್ಲ… ಸಾಹಿತ್ಯಿಕ, ಸಾಂಸ್ಕೃತಿಕ, ಅಧ್ಯಾಪನ, ಪತ್ರಿಕೋದ್ಯೋಗಗಳಲ್ಲಿ ನನ್ನ ಜತೆ ದುಡಿದವರು ಪಿ.ಕೆ…. ಅರ್ಧ ಶತಕದವರೆಗೆ ಬೇರೆ ಬೇರೆ ಪತ್ರಿಕೆಗಳಲ್ಲಿ ಬರೆದ ಅವರ ಲೇಖನಗಳು ಮೇಲ್ತರಗತಿಯವುಗಳು. ಅವು ಒಟ್ಟು ಒಂದೇ ಗ್ರಂಥವಾಗಿ ಸಂಗ್ರಹೀತವಾದರೆ ಸಾವಿರಾರು ಪುಟಗಳ ಉದ್ಗ್ರಂಥವಾಗಬಹುದು… ದಕ್ಷಿಣ ಕನ್ನಡದ ಸುಪ್ರಸಿದ್ಧ ಕನ್ನಡ ಪಂಡಿತರುಗಳಾದ ಶ್ರೀಯುತರು ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣಭಟ್ಟ – ಇಂತಹ ಉನ್ನತ ಪರಂಪರೆಯ ಕನ್ನಡದ ಆಚಾರ್ಯ ಮಾಲೆಯಲ್ಲಿ ಶ್ರೀ ಪಿ.ಕೆ. ವಿರಾಜಮಾನರಾಗತಕ್ಕ ಕೊನೆಯ ಕೊಂಡಿಯಾಗಿ ಶೋಬಿಸುತ್ತಾರೆ.’’
ಕಯ್ಯರ ಕಿಂಞ್ಞಣ್ಣ ರೈ

‘‘ಸಾಹಿತ್ಯ ಸಂಸ್ಕೃತಿಗಳ ಯಾವುದೇ ಕಾರ್ಯಗಳೂ ಅವರ ಜೀವನದ ಉಸಿರು. ಅಂಥ ಸಂದರ್ಭಗಳಲ್ಲಿ ಅವರು ಹಾಜರಾಗಿರುತ್ತಿದ್ದರು. ಅವರಿಗೆ ಕಡೆಂಗೋಡ್ಲು ಶಂಕರಭಟ್ಟರು, ಪಂಜೆ ಮಂಗೇಶರಾಯರು, ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಹುರುಳಿ ಬೀಮರಾಯರೂ ಎಲ್ಲರೂ ಪರಿಚಯ… ಸೇವೆಗಾಗಿಯೇ ಅವರು ಸೇವೆ ಮಾಡುತ್ತಿದ್ದರು. ಅವರ ನಿಧನದಿಂದ ದ.ಕ. ಜಿಲ್ಲೆಯ ಸಾಹಿತ್ಯ, ಸಮಾಜಸೇವೆ, ಸಭ್ಯ ಜೀವನ, ಸಂಸ್ಕೃತಿ- ಇವುಗಳಿಗೆಲ್ಲ ತುಂಬಲಾಗದ ಅರಕೆಯುಂಟಾಗಿದೆ. ನನ್ನನ್ನು ಜೀವಮಾನವೆಲ್ಲ ತುಂಬ ಪ್ರೀತಿಸಿದ, ದಾಕ್ಷಿಣ್ಯ ಪ್ರವೃತ್ತಿಯ ಒಬ್ಬ ಕಿರಿಯನನ್ನು ಕಳೆದುಕೊಂಡು ನಾನು ಬಡವಾಗಿದ್ದೇನೆ.’’
ಗೊರೂರು ರಾಮಸ್ವಾಮಿ ಅಯ್ಯಂಗಾರ್

‘‘… ಅವರು ಅಜಾತ ಶತ್ರು. ನಮ್ಮ ಐವತ್ತು ವರ್ಷಗಳ ಮೈತ್ರಿಯಲ್ಲಿದ್ದುದು ಸಮರಸ ಭಾವನೆ ತಿಳಿ ಸ್ನೇಹ ಮಾತ್ರ, ಅದು ಒಮ್ಮೆಯಾದರೂ ಕದಡಿದುದಿಲ್ಲ. ಅವರ ವ್ಯಕ್ತಿತ್ವ ಎಂಥ ಸಂದರ್ಭ, ಸನ್ನಿವೇಶದಲ್ಲೂ ಕಹಿ ಭಾವನೆಗೆ ಎಡೆ ಕೊಡುವಂತಹುದಾಗಿರಲಿಲ್ಲ. ಅಂಥ ಮಿತ್ರರು ಅತ್ಯಾಪರೂಪ.’’
ಮ.ವಿ. ಹೆಗ್ಡೆ

ಶ್ರೀ ನಾರಾಯಣರು ಒಳ್ಳೆಯ ಶಿಕ್ಷಕರು, ಒಳ್ಳೆಯ ಬರಹಗಾರರು, ಒಳ್ಳೆಯ ನಾಟಕಕಾರರು, ಒಳ್ಳೆಯ ದೇಶಭಕ್ತರು, ನಿಸ್ವಾರ್ಥ ಬುದ್ಧಿಯ ಪ್ರಾಮಾಣಿಕ ಸೇವೆ ಸಲ್ಲಿಸುವಂತಹ ಆಕರ್ಷಕ ಮನೋಧರ್ಮ ಅವರಲ್ಲಿದ್ದಿತು. ಮನಸ್ಸೊಂದಿದ್ದರೆ ಒಬ್ಬ ವ್ಯಕ್ತಿ ಎಷ್ಟೆಲ್ಲ ಕೆಲಸಗಳನ್ನು ಮಾಡಬಲ್ಲರು ಎಂಬುದಕ್ಕೆ ನಾರಾಯಣ ಅವರೇ ನಿದರ್ಶನ. ಶ್ರೀಯುತರು ಬಿಟ್ಟು ಹೋಗಿರುವ ಬರಹಗಳನ್ನೆಲ್ಲ ಒಟ್ಟುಗೂಡಿಸಿ ಸಮಗ್ರ ನಾರಾಯಣ ಸಂಪುಟವೊಂದನ್ನು ಬೆಳಕಿಗೆ ತರುವುದಾದರೆ ಎಷ್ಟು ಚಂದ!
ಎಸ್.ವಿ. ಪರಮೇಶ್ವರ ಭಟ್ಟ

‘‘ಸೌಮ್ಯ ಸ್ವಭಾವದ ಸರಳ ಜೀವಿ ಪಿ.ಕೆ. ಅವರು. ಪಿ.ಕೆ. ಅವರಂಥ ಒಳ್ಳೆಯ ಮನೋವೃತ್ತಿಯವರು ಸಮಾಜದಲ್ಲಿ ಈಗ ಇರುವ, ಹಿಂದೆ ಇದ್ದ ಜನರಲ್ಲಿ, ಮತ್ತು ಇನ್ನು ಹುಟ್ಟುವವರಲ್ಲಿ ಎಷ್ಟು ಎಂದು ಒಟ್ಟು ಲೆಕ್ಕ ಹಾಕಿದರೂ ಹೆಚ್ಚು ಸಂಖ್ಯೆಯಾಗದು.’’
ಕಲ್ಯಾಣಿ ಡಿ. ಶೆಟ್ಟಿ

‘‘ಪಿ.ಕೆ. ನಾರಾಯಣ ಪುತ್ತೂರಲ್ಲಿ ಡಾ| ಕೋಟ ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದವರು. ಆದ್ದರಿಂದಲೇ ಕಲೆ, ಸಾಹಿತ್ಯ, ಬರಹ, ಭಾಷಣ, ಈ ಎಲ್ಲ ಕ್ಷೇತ್ರಗಳಲ್ಲಿ ಅವರಂತೆ ಸವ್ಯಸಾಚಿಯಾಗಿ ಮೆರೆದರು.’’
ಬಿ.ವಿ. ಬಾಳಿಗಾ

‘‘ಪಿ.ಕೆ.ನಾ ಅವರು ಜೀವನದ ಕಡೆಯ ದಿನಗಳವರೆಗೂ ಸಾಹಿತ್ಯದ ಶ್ರದ್ಧಾವಂತ ವಿದ್ಯಾರ್ಥಿಯಾಗಿದ್ದರು. ಜೈನ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಪ್ರೊ| ಜಿ. ಬ್ರಹ್ಮಪ್ಪ ಅವರಿಗಿಂತ ಮೊದಲು ರತ್ನಾಕರ ವರ್ಣಿಯ ಸಮಗ್ರ ಕಾವ್ಯವನ್ನು ತಿಳಿಗನ್ನಡದಲ್ಲಿ ಅನುವಾದಿಸಿ, ಉಪಕರಿಸಿದವರು ಅವರು. ಹಿರಿಯ ಕವಿಯೊಬ್ಬನಿಗೆ ಆಧುನಿಕ ಲೇಖಕರೊಬ್ಬರು ಸಲ್ಲಿಸಿದ ಸಾಹಿತ್ಯ ಗೌರವ ಇದು. ಅವರು ದ.ಕ. ಜಿಲ್ಲೆಯ ಸುರಪುತ್ರರಲ್ಲೊಬ್ಬರು.’’
ಡಾ| ಹಂ.ಪ. ನಾಗರಾಜಯ್ಯ

ಯಾವ ಪಕ್ಷ ರಾಜಕಾರಣಕ್ಕೂ ಗುಂಪುಗಾರಿಕೆಗೂ ಒಳಗಾಗದೆ ಸದ್ದಿಲ್ಲದೆ ನಿರಹಂಕಾರೀ ಜೀವನವನ್ನು ನಡೆಸಿದವರು ಅವರು. ಪಂಡಿತರು, ಲೇಖಕರು ಮುಂತಾದವರಲ್ಲಿರುವ ದರ್ಪ ಮತ್ತು ಸ್ವಾರ್ಥಲಾಲಸೆ ಅವರಲ್ಲಿರಲಿಲ್ಲ. ನಯವಿನಯಗಳು ಅವರ ನಗುಮೊಗದಿಂದ ಸದಾ ಹೊರಸೂಸುತ್ತಿದ್ದುವು.
ಸೇವ ನಮಿರಾಜ ಮಲ್ಲ

ಮಂಗಳೂರಿನ ಸಾಹಿತ್ಯ ವಲಯದಲ್ಲಿ ಶ್ರೀಮಾನ್ ನಾರಾಯಣ ಅವರದು ಎಂದಿಗೂ ಮಾಸಿ ಹೋಗದ ಹಚ್ಚಹಸುರಾದ ಹೆಸರು.
ಅಮ್ಮೆಂಬಳ ಶಂಕರನಾರಾಯಣ ನಾವಡ

‘‘ಪಿ.ಕೆ. ನಾರಾಯಣ ಅವರು ಆಳ ಅಭ್ಯಾಸಗಾರ. ಉತ್ತಮ ವಾಗ್ಮಿ. ಪ್ರಸಿದ್ಧ ಪತ್ರಿಕೋದ್ಯೋಗಿ. ಉತ್ತಮ ಸಾಹಿತಿ. ಗಾಂಧೀವಾದಿ. ಪಿ.ಕೆ. ಅವರು ನಮ್ಮಿಂದ ಅಗಲಿದ್ದರೂ ಅವರ ಸ್ನೇಹ, ಒಡನಾಟ, ಹಿತನುಡಿಗಳು ಸದಾ ಸ್ಮರಣೀಯ.’’
ಬಿ.ಎಮ್. ಇದಿನಬ್ಬ

ಅವರು ಆದರಣೀಯ ಮಾನವರು. ನೈತಿಕ ಗುಣ ಸಂಪನ್ನರು. ಅವರು ಸಾಹಿತಿಯಾಗಿ ಕಾರಂತರ ಗರಡಿಯಲ್ಲಿ ಬೆಳೆದರು. ಮಾನವರಾಗಿ ಗಾಂಧೀತತ್ತ್ವದಲ್ಲಿ ಅರಳಿದರು. ಅವರ ಸಂಪರ್ಕ ಬಂದವರ ಹೃದಯದಲ್ಲಿ ಅವರು ಚಿರಂಜೀವಿ – ಅವರ ದೊಡ್ಡ ಮನಸ್ಸಿನಿಂದ, ಸರಳ ನಡೆಯಿಂದ, ಕಳಂಕರಹಿತ ಚಾರಿತ್ಯ್ರದಿಂದ.
ಏರ್ಯ ಲಕ್ಷ್ಮೀನಾರಾಯಣ ಆಳ್ವ

ನಾರಾಯಣರು ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳ ಬಹುಮಾನಕ್ಕೆ ಅರ್ಹರಾಗಿದ್ದರು. ಪರಿಷತ್ತಿಗೆ ನಾಮಕರಣಗೊಳ್ಳಲಿಕ್ಕೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲಿಕ್ಕೂ ಅರ್ಹರಾಗಿದ್ದರು. ಅವರಿಗೆ ದೇವಪಿತೃಗಳಿರಲಿಲ್ಲ. ಆದ್ದರಿಂದ ಅವು ಅವರಿಗೆ ದೊರೆಯಲಿಲ್ಲ.
ಕಲ್ಲೆ ಶಿವೋತ್ತಮ ರಾವ್