ಭಾರತ ವ್ಯವಸಾಯ ಪ್ರಧಾನ ದೇಶ. ಪ್ರಜೆಗಳ ಕಲ್ಯಾಣ ವ್ಯವಸಾಯದಿಂದಲೇ ಆಗಿರುವುದ ರಿಂದ ಅದಕ್ಕೆ ಆದ್ಯತೆ. ಆದರೆ ಈ ದೇಶದಲ್ಲಿ ಪ್ರತಿ ವರ್ಷವು ಒಂದಿಲ್ಲೊಂದು ಭಾಗವು ಅನಾವೃಷ್ಟಿ, ಅಕಾಲ ವೃಷ್ಟಿ ಹಾಗೂ ಅನಿಶ್ಚಿತ ವೃಷ್ಟಿಗೆ ಬಲಿಯಾಗುತ್ತದೆ. ರಾಮಾಯಣ ಮತ್ತು ಮಹಾಭಾರತಗಳ ಕಾಲದಲ್ಲಿ ಇದರ ಬಗೆಗೆ ಉಲ್ಲೇಖನಗಳಿವೆ. ಅವುಗಳ ನಿವಾರಣೆಗಾಗಿ ಅರಸರು ಹಾಗೂ ಅಧಿಕಾರಿಗಳು ಕೈಗೆತ್ತಿಕೊಂಡ ಕ್ರಮಗಳ ಬಗೆಗೂ ಉಲ್ಲೇಖನಗಳಿವೆ. ಈ ಬಗೆಯ ನಿವಾರಣಾ ಕ್ರಮಗಳಲ್ಲಿ ಪ್ರಮುಖವಾದದ್ದು ನೀರಾವರಿ. ಆದುದರಿಂದ ನಿರಾವರಿ ಕಾರ್ಯಕ್ರಮಗಳಿಗೆ ರಾಜರೂ ಮತ್ತು ಪ್ರಜೆಗಳು ಹೆಚ್ಚು ಪ್ರಧಾನ್ಯತೆಯನ್ನು ನೀಡುತ್ತಾ ಬಂದಿದ್ದಾರೆ.

ನಮ್ಮ ದೇಶದಲ್ಲಿ ಅದರಲ್ಲಿಯೂ ದಕ್ಷಿಣ ಭಾರತದಲ್ಲಿಯ ಭೌಗೋಳಿಕ ಪರಿಸ್ಥಿತಿಯಿಂದ ಮತ್ತು ಮಳೆಯ ಮೇಲೆಯೇ ಬೇಸಾಯ ಆಧಾರವಾಗಿರುವುದರಿಂದ ಇಲ್ಲಿನ ನೀರಾವರಿ ಬೇಸಾಯ ಕ್ರಮಗಳು ಮುರು ತೆರನಾಗಿವೆ. ಕೆರೆಯ ನೀರಾವರಿ ಕ್ರಮ, ಬಾವಿ ಬೇಸಾಯಕ್ರಮ ನದಿ ನೀರಾವರಿ ಹೀಗೆ ತಿಳಿಸಿದ ಮೂರು ವಿಧಾನಗಳು ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಬಳಕೆಯಲ್ಲಿವೆ. ಎಂ. ಸತ್ಯಶ್ರವ ಎಂಬುವರು ತಮ್ಮ ಭಾರತದ ನೀರಾವರಿಯ ವ್ಯವಸ್ಥೆ ಎಂಬ ಗ್ರಂಥದಲ್ಲಿ ಅಥರ್ವವೇದದಲ್ಲಿ ನದಿಯಿಂದ ಕಾಲವೆಗಳನ್ನು ತೋಡಿ ನೀರನ್ನು ಬೇಕಾದ ಸ್ಥಳಕ್ಕೆ ಹರಿಸಿಕೊಳ್ಳುತ್ತಿದ್ದುದನ್ನು ಪ್ರಸ್ತಾಪಿಸಿದ್ದಾರೆ. ಕೌಟಿಲ್ಯನ ಅರ್ಥಶಾಸ್ತ್ರವೂ ನೀರಾವರಿ ಕಾರ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡಿದೆ. ಮೌರ್ಯಚಂದ್ರಗುಪ್ತ ಗಿರಿನಾರ (ಗುಜರಾತಿ)ನ ಬಳಿ “ಸುದರ್ಶನ”ವೆಂಬ ಕೆರೆಯನ್ನು ನಿರ್ಮಿಸಿದ. ಅದು ಇಂದಿಗೂ ಕಾರ್ಯ ಮಾಡುತ್ತಲಿದೆ.

ಚರಿತ್ರೆಯ ಮಧ್ಯಯುಗದಲ್ಲಿ ಕರ್ನಾಟಕದವರೇ ಆದ ಬಾದಾಮಿಯ ಚಾಲುಕ್ಯರು ರಾಷ್ಟ್ರಕೂಟರು, ಕಲ್ಯಾಣಿ ಚಾಳುಕ್ಯರು, ಹೊಯ್ಸಳರು ನೀರಾವರಿ ಬೇಸಾಯಕ್ಕೆ ಆದ್ಯತೆ ನೀಡಿ ಕೆರೆ, ಬಾವಿ ಹಾಗೂ ಆಣೆಕಟ್ಟುಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ ದಕ್ಷಿಣ ಭಾರತವು ಅತಿ ಪುರಾತನ ಕಾಲದಿಂದಲೂ ನೀರಾವರಿ ಕ್ರಮಗಳನ್ನು ಅನುಸರಿಸುತ್ತಲೇ ಬಂದಿದೆ.

ವಿಜಯನಗರದ ಅರಸರಂತೂ ಈ ನೀರಾವರಿ ಕಾರ್ಯಗಳಿಗೆ ವಿಶೇಷ ಪ್ರೋತ್ಸಾಹ ನೀಡಿದರು. ಇದಕ್ಕೆ ಅನೇಕ ಉದಾಹರಣೆಗಳಿವೆ. ನಮ್ಮವರೇ ಆದ ಸಿ.ಟಿ.ಎಮ್. ಕೊಟ್ರಯ್ಯ ಅವರು “ವಿಜಯನಗರ ಸಾಮ್ರಾಜ್ಯದಲ್ಲಿಯ ನೀರಾವರಿ ಪದ್ದತಿಗಳು” ಎಂಬ ಗ್ರಂಥವನ್ನೇ ಪ್ರಕಟಿಸಿದ್ದಾರೆ. “ಕರ್ನಾಟಕದಲ್ಲಿಯು ಕೆರೆಗಳು” ಎಂಬ ಒಂದು ಪುಸ್ತಕವನ್ನು ಪ್ರಕಟಿಸಲಾಗಿದೆ. ಹೀಗೆ ವಿಜಯನಗರದ ಅರಸರ ಕಲದಲ್ಲಿ, ಅರಸರೂ, ಅರಸಿಯರೂ, ಅಧಿಕರಿಗಳು, ದೇವಾಲಯಗಳೂ, ಮಠದವರೂ ಜನಸಾಮಾನ್ಯರೂ ಈ ಬಗೆಯ ಕಾರ್ಯಗಳನ್ನು ಕೈಗೆತ್ತಿ ಕೊಂಡ ಅನೇಕ ದಾಖಲೆಗಳಿವೆ. ಅದರಂತೆಯೇ ಶಿಲಾಶಾಸನಗಳು ಗ್ರಂಥಗಳು, ಸಾಹಿತ್ಯ ಜನಪದ ಲಾವಣಿಗಳೂ ದೊರೆಯುತ್ತವೆ. ನನಗೆ “ಕನ್ನೀರಮ್ಮನ ಕಥೆ”ಯ ಒಂದು ಹಸ್ತಪ್ರತಿ ದೊರೆತಿದ್ದು. ಅದು ಹೊಸಪೇಟೆ ತಾಲೂಕಿನ ಢಣಾಯಕನ ಕೆರೆಯನ್ನು ನಿರ್ಮಿಸಿದ್ದ, ಮುದ್ದಣ್ಣ ಢಣನಾಯಕನಿಗೆ ಸೇರಿದ್ದು ಎಂದು ಹೇಳಲಾಗಿದೆ. ಈ ಹಳ್ಳಿಯಲ್ಲಿಯ ಒಂದು ಉತ್ಸವದಲ್ಲಿ ಅಲ್ಲಿನ ಹೆಂಗಳಿಯರು ಇಂದಿಗೂ ಈ ಪದ್ಯವನ್ನು ಹಾಡುತ್ತಾರೆ. ಇದರಲ್ಲಿ ಅವನೇ ಕಟ್ಟಿದನೆಂದು ಹೇಳಲಾದ ಕೆರೆ ಮತ್ತು ಅವನ ಜೀವನ ಚರಿತ್ರೆಯನ್ನು ಕಾಣಬಹುದು.

ಈ ಕನ್ನೀರಮ್ಮನ ಕಥೆಯಲ್ಲಿ ಬರುವ ಬಲಿದಾನದ ಬಗೆಗೆ, ಅದರಲ್ಲಿಯೂ ವಿಜಯ ನಗರದ ಆಡಳಿತ ಅವಧಿಯಲ್ಲಿದ್ದ ಸಂಪ್ರದಾಯಗಳ ಬಗ್ಗೆ ದೊರೆತ ವಿವರಗಳನ್ನು ಮನ್ಯ ಸಿ.ಟಿ.ಎಮ್. ಕೊಟ್ರಯ್ಯನವರು ತಮ್ಮ ಗ್ರಂಥದಲ್ಲಿ ಆಧಾರಗಳಿಂದ ಉದಾಹರಿಸಿದ್ದಾರೆ. ಅವರ ಗ್ರಂಥ ಹಾಗೂ ಇತರ ಮೂಲಗಳಿಂದ ಬಲಿದಾನ, ಆಹುತಿ, ಕೆರೆಗಳ ನಿರ್ಮಾಣಕ್ಕೆ ಸಂಬಂಧಿಸಿದವನ್ನು ವಾಚಕರು ಗಮನಿಸಬೇಕೆಂಬ ಉದ್ದೇಶದಿಂದ ಪ್ರಸ್ತಾಪಿಸಿರುವೆ. ಈ ದಿಶೆಯಲ್ಲಿ  ಮುದ್ದಣ್ಣ ಢಣನಾಯಕನಿಗೆ ಸಂಬಂಧಿಸಿದವನ್ನು ಮಾತ್ರ ಪ್ರಸ್ತಾಪಿಸಿರುವೆ.

ಪರಂಪರೆಯ ಪ್ರಕಾರದ ಹೇಳಿಕೆಯಂತೆ, ವಿಜಯನಗರದ ಕೃಷ್ಣ ದೇವರಾಯನ ಕಾಲದಲ್ಲಿ ಮುದ್ದಣ್ಣ ದಣ್ಣಾಯಕ ಅಥವಾ ದಂಢನಾಯಕ ನಿದ್ದು ಅವನೇ ವಿಜಯನಗದ ಪಟ್ಟಣದ ಸುತ್ತಮುತ್ತಲಿನ ಅನೇಕ ನೀರಾವರಿ ಕಾರ್ಯಗಳನ್ನು ನಿರ್ಮಿಸಿದನಂತೆ. ಈ ಮುದ್ದಣ್ಣನು ಮೊದಲು ದನಕಾಯುವ ಬಾಲಕನಾಗಿ ಬಿದರಹಳ್ಳಿಯ ಜಕ್ಕಪ್ಪಾಚಾರ್ಯರ ಮನೆಯಲ್ಲಿ ಬೆಳೆದು ಬಂದಂತೆ ಈ ಸಾಂಗತ್ಯದಲ್ಲಿ ಹೇಳಲಾಗಿದೆ. ಮುಂದೆ ಇವನು ಮುದ್ದರಾಜನಾಗಿ ಕೆರೆ, ಆಣೆಕಟ್ಟುಗಳನ್ನು ನಿರ್ಮಿಸುವ ತಾಂತ್ರಿಕ ಕುಶಲತೆಯನ್ನು ಪಡೆದು ಮಹಾಜಲ ತಂತ್ರಜ್ಞನಾಗಿ ಮೆರೆದ. ಹೊಸಪೇಟೆಯ ಬಳಿ ಇರುವ ರಾಯರಕೆರೆ, ಅಲ್ಲಿಂದ ಮುಂದೆ ಹೋದರೆ ಸಿಗುವ ಢಣ್ಣಾಯಕನ ಕೆರೆ, ಹಡಗಲಿ ಬಳಿ ಇರುವ ಮೊದಲಗಟ್ಟೆ, ಈಗ ತುಂಗಭದ್ರಾ ಜಲಾಶರಯದಲ್ಲಿ ಮುಳುಗಿ ಹೋದ ವಲ್ಲಭಾಪುರದ ಆಣೆಕಟ್ಟು, ಗೌರಿಪು, ನಾರಾಯಣ ದೇವರ ಕೆರೆ, ಹಂಪನಕಟ್ಟೆಯ ಕೆರೆಗಳನ್ನು ಮತ್ತು ಇತರ ಆಣೆಕಟ್ಟುಗಳನ್ನು ಇವನೇ ನಿರ್ಮಿಸಿದನೆಂದೇ ಹೇಳಾಗಿದೆ. ಈ ಪರಂಪರಾನುಗತ ಹೇಳಿಕೆಯಲ್ಲದೆ, ಹೊಸಪೇಟೆಯ ಬಳಿಯಲ್ಲಿರುವ ಮುದ್ದಾಪುರ, ಮುದ್ಲಾಪುರದ ಹೆಸರಿನಹಳ್ಳಿಗಳಿಂದ, ಮುದ್ದಣ್ಣನೆಂಬ ಓರ್ವ ಅಧಿಕಾರಿ ಇದ್ದನೆಂದು ಧಾರಾಳವಾಗಿ ಹೇಳಬಹುದು. ಅವನು ಜಲ ಪ್ರತಿಬಂಧನ ಕಾರ್ಯಗಳಲ್ಲಿ ನುರಿತವನೂ ಇದ್ದಿರಬೇಕೆಂದೂ ಹೇಳಲು ಅಪಾರ ಅವಕಾಶವಿದೆ.

ಅಂದಿನ ಕಾಲದಲ್ಲಿ ಕೈಗೆತ್ತಿಕೊಂಡ ನೀರಾವರಿ ಕಾರ್ಯಗಳ ಅಂಗವಾಗಿ ಕೆರೆ, ಬಾವಿ, ಕೋಡಿ, ಮದಗ, ತುಂಬುಗಳು ಆಹುತಿ ಬೇಡಿದ ಬಗೆಗೆ ಅನೇಕ ಶಿಲಾಶಾಸನಗಳಲ್ಲಿ ದಾಖಲಿಸಲಾಗಿದೆ. ಅದರೆ ಹೆಚ್ಚಿನ ವಿವರಗಳನ್ನು ನೀಡದೆ ಕೆಲವನ್ನು ಇಲ್ಲಿ ಉದಾಹರಿಸುವೆ. ರಾಯರ ಕೆರೆ ನಿಲ್ಲದೆ ಹೋದಾಗ ಆಹುತಿಯನ್ನು ನೀಡಲಾಯಿತು. ಢಣಾಯಕನ ಕೆರೆಗೆ ಸಂಬಂಧಿಸಿದಂತೆ ಈ ಸಾಂಗತ್ಯವೇ ವಿವರಿಸುತ್ತದೆ. ಬಳ್ಳಾರಿ ಜಿಲ್ಲೆಯ ಹನ್ಸಿಕೆರೆಯ ಏರಿಯ ಬಳಿಯಲ್ಲಿರುವ ಕನ್ಯಾವೀರಮ್ಮನ ವಿಗ್ರಹ ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಕ್ಲಿನಕೇರಿ ಮಲ್ಲನಗೌಡರ ಮಗಳಾದ ಭಾಗೀರಥಿ ಕನ್ಯೆಯನ್ನು ಬಲಿ ನೀಡಿದ ಉದಾಹರಣೆ ಇದೆ. ಹಂಪಿಯಲ್ಲಿಯೇ ಇರುವ ಸಾರ್ವಜನಿಕ ಸ್ನಾನಗೃಹದ ತಳದಲ್ಲಿ ಬಲಿನೀಡಿದವರ ಎಲುಬುಗಳು ದೊರೆತಿವೆ. ಇದನ್ನು ಅಲೆಕ್ಸಾಂಡರ್  ಎಂಬುವರು ತಮ್ಮ ೧೯೦೪ರ ಒಂದು ವರದಿಯಲ್ಲಿ ಹೇಳಿದ್ದಾರೆ. ಪುಂಗನೂರು ಮದನಪಲ್ಲಿ ತಾಲೂಕಿನಲ್ಲಿದೆ. ಅಲ್ಲಿಯೆ ಕೆರೆಗೆ ಪುಂಗಮ್ಮನನ್ನು ಬಲಿಕೊಟ್ಟಿದ್ದು ವೆಲ್ಲೂರಿನ ಗೆಜಿಟಿಯರಲ್ಲಿ ನೋಡಬಹುದು.

ರಾಯಲ ಚೆರುವು ಎಂಬ ಹಳ್ಳಿಯ ಕೆರೆಗೆ ಕೃಷ್ಣದೇವರಾಯನು ತನ್ನ ಒಬ್ಬ ಮಗಳನ್ನೇ ನೀಡಿದ್ದನೆಂಬ ಕಥೆ ಪ್ರಚಾರದಲ್ಲಿದೆ. ಈ ಎಲ್ಲಾ ಉದಾಹರಣೆಗಳಿಂದ ನಾವು ಅರಿಯಬೇಕಾದ ವಿಷಯ ಎಂದರೆ, ಅಂದಿನ ಸಂಪ್ರದಾಯದಂತೆ ಕೆರೆ, ಕೋಡಿ, ಆಣೆಕಟ್ಟುಗಳಿಗೆ ಮಾನವರ ಮತ್ತು ಪ್ರಾಣಿಗಳ ಬಲಿದಾನ ನೀಡುವ ಪದ್ಧತಿ ಚಾರಿಯಲ್ಲಿತ್ತು. ಈ ಒಂದು ಹಿನ್ನೆಲೆಯಲ್ಲಿ ವಾಚಕರ ಅನುಕೂಲಕ್ಕೆಂದೇ ಕನ್ನೀರಮ್ಮನ ಕಥೆಯನ್ನು ಸ್ಥೂಲವಾಗಿ ವಿವರಿಸಿ, ಮುಂದೆ ಅದರ ಪಾಠವನ್ನು ಮುದ್ರಿಸಲಾಗಿದೆ. ಇದು ನನಗೆ ದೊರೆತ ೧೯೩೦ರ ಒಂದು ಹಸ್ತಪ್ರತಿಯ ನೆರಳಚ್ಚೇ ಎಂದು ತಿಳಿಯಬೇಕು. ಸಹೃದಯರು ಅದನ್ನು ಓದಿ ಆನಂದಿಸುವರೆಂದೇ ನಂಬಿರುವೆ.

ಈ ಬರಹಕ್ಕೆ ಸಂಬಂಧಿಸಿದಂತೆ ಬಿದರಹಳ್ಳಿ ಗ್ರಾಮದ ಪೂರ್ವಚರಿತ್ರೆ ಹಾಗೂ ಢಣಾಕಮುದ್ದನ ಬಗೆಗೆ ಅರಿಯುವ ಉದ್ದೇಶದಿಂದ ಅದರ ಹಲವಾರು ವಿವರಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದು ಅದನ್ನು ಸ್ಥೂಲವಾಗಿ ಇಲ್ಲಿ ವಿವರಿಸಲಾಗಿದೆ. ಈ ಸಾಂಗತ್ಯದಲ್ಲಿ ಹೇಳಿದಂತೆ ಮುದ್ದನು, ಈ ಬಿದರಹಳ್ಳಿ ನಿವಾಸಿಗಳಾದ ಜಕ್ಕಪ್ಪಾಚಾರ್ಯರ ಮನೆಯಲ್ಲಿ ಬೆಳೆದವನು. ಬಿದರಹಳ್ಳಿ ಗ್ರಾಮಕ್ಕೆ ಅಪರ ಇತಿಹಾಸವಿದೆ. ಒಂದು ದಾಖಲೆಯ ಹೇಳಿಕೆಯಂತೆ ಶ್ರೀ ಹಂಪಿ ವಿರೂಪಾಕ್ಷ ದೇವಸ್ಥಾನದ ಮಹಾದ್ವಾರವನ್ನು ಕಟ್ಟಿದವರೇ ಜಕ್ಕಪ್ಪಾಚಾರ್ಯರಂತೆ. ಈ ಮಹಾಶಿಲ್ಪಿ ಬದರಹಳ್ಳಿಯ ತುಂಗಾತೀರದಲ್ಲಿ ಅನುಷ್ಠಾನ ಮಾಡಿದ್ದು  ಅವರ ಆರಾಧ್ಯ ದೇವತೆ, ಪಂಚಲೋಹದ ಮಹಾಲಿಂಗೇಶ್ವರ ಮೂರ್ತಿ ಇಂದಿಗೂ ವಿಠಲಾಪುರದಲ್ಲಿದೆ ಎಂದೇ ಹೇಳುತ್ತಾರೆ. ಜಕ್ಕಪ್ಪಯ್ಯನವರ ಅಳಿ ಯಂದಿರ ಮನೆ ವಿಠಲಾಪುರದಲ್ಲಿದೆ. ಪ್ರತಿವರ್ಷವೂ ಜಕ್ಕಪ್ಪನವರ ಆರಾಧನೆ ನಡೆಸುತ್ತಾರೆ. ಈ ಆರಾಧನೆ ಫಲಪೂಜಾ ಹುಣ್ಣಿಮೆ ದಿನ ನಡೆಯುತ್ತದೆ. ಅಂದು ಅನ್ನ ಸಂತರ್ಪಣೆ ಕೂಡಾ ಜರಗುತ್ತದೆ. ಈ ವಂಶಸ್ಥರು ಇಂದೂ ಇದ್ದಾರೆ ಎಂದೇ ಬಲ್ಲ ಮೂಲ ಗಳಿಂದ ತಿಳಿದುಬರುತ್ತದೆ.

ಆದರೆ “ಅಪ್ರಶಿದ್ದಗ್ರಾಮದ ಸುಪ್ರಸಿದ್ದ ನದೀತೀರ” ಎಂಬಗಾದೆ ಮಾತಿನಂತೆ ಈ ಬಿದರಹಳ್ಳಿಯ ಪರಿಸ್ಥಿತಿ. ಈ ಗ್ರಾಮಕ್ಕೆ ಹಿಂದೆ “ವೇಣಪುರಿ” ಎಂದೇ ಕರೆಯುತ್ತಿದ್ದರು. ಸ್ಕಂದಪುರಾಣ, ಶ್ರೀ ರೇಣಕಾಂಬೆ ಮಹಾತ್ಮೆ, ಹಾಗೂ ತೀರ್ಥಪ್ರಬಂಧಗಳಲ್ಲಿ ಈ ಊರನ್ನು ಪ್ರಸ್ತಾಪಿಸಲಾಗಿದೆ.

ಶ್ರೀ ಶ್ರೀ ವಾದಿರಾಜತೀರ್ಥರು ತೀರ್ಥಸಂಚಾರ ಮಾಡುತ್ತಾ ಈ ಊರಿಗೆ ಬಂದಿದ್ದು, ಕಾಶೀಬದರಿಗಳಿಗೆ ಹೋಗದೇ ಇದ್ದರೂ ಯಾವ ಪ್ರಯಾಸವಿಲ್ಲದೇ ಈ “ವೇಣಪುರಿಗೆ” ಹೋಗಿ ಸಕಲ ಸಿದ್ಧಿಗಳನ್ನು ಪಡೆಯಬಹುದು ಎಂದಿದ್ದಾರೆ.

ವಾರನಶ್ಯಾಂ ಖಲುವೇಣಪುರಿ |
ವಿಶ್ವೇಶರಾಜೋಖಲು ಸೋಮನಾಥಾಃ ||
ಗಂಗೇವ ಸಾಕ್ಷಾತ್ ವರ ತುಂಗಭದ್ರಃ |
ಮುಕ್ತಿ ಪ್ರದೋಯಂಖಿಲು ತೀರ್ಥರಾಜಾಃ ||

ಈಚಿನ ದಿನಗಳಲ್ಲಿ ಶ್ರೀ ಬ್ರಹ್ಮಾನಂದ ಮಹಾರಾಜರು ಹಾಗೂ ಶ್ರೀ ಸಚ್ಚಿದಾನಂದ ಸರಸ್ವತಿಗಳು ಇಲ್ಲಿಯೇ ಸಾಧನೆ ಮಾಡಿ ಜಲಸಮಾಧಿ ಹೊಂದಿದರು. ಶ್ರೀ ಗೋದಾವಲೇಕರ, ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಆದೇಶದಂತೆ ಶ್ರೀ ಬ್ರಹ್ಮಾನಂದರು, ಈ ಸ್ಥಳದಲ್ಲಿ “ಶ್ರೀ ರಾಮನಾಮತೇರಾಕೋಟಿ” ಯಜ್ಞಮಾಡಿ ಪೂರೈಸಿದರು. ಇಂದು ಬಿದರಹಳ್ಳಿಯಲ್ಲಿ ಶ್ರೀವೇಣಿಗೋಪಾಲಸ್ವಾಮಿಯ ಗುಡಿಯಲ್ಲದೆ, ಸ್ಕಂದ ಪುರಾಣದಲ್ಲಿ ವಿವರಿಸಿದ ಹಲವಾರು ಶಿಥಿಲಗೊಂಡ ದೇವಸ್ಥಾನಗಳನ್ನು ಕಾಣಬಹುದು : ೧) ಶ್ರೀ ರೇಣಕದೇವಿ ದೇವಸ್ಥಾನ (ಪರಶು ರಾಮನ ತಪಸ್ಸಿನ) ೨) ಅಶ್ವಥ್ ನಾರಾಯಣ  ದೇವಸ್ಥಾನ (ಅಂಬರಿಷನತಪ್ಪನ್ಸಿನ) ೩) ಶ್ರೀ ಮಲ್ಲಿಕಾರ್ಜುನ ದೇವಸ್ಥಾನ (ಅರ್ಜುನೇಶ್ವರನ ತಪಸ್ಸಿನ) ೪) ಶ್ರೀ ಸೋಮೇಶ್ವರ ದೇವಸ್ಥಾನ (ಭಾರ್ಗವಲಿಂಗ) ೫) ಶ್ರೀ ಶಂಕರಲಿಂಗನ ದೇವಸ್ಥಾನ. ಇವುಗಳಲ್ಲದೆ ವಿಠಲಾಪುರ, ರಂಗಾಪುರ, ಧರ್ಮೇಶ್ವರಗಳಲ್ಲಿ ಪುರಾತನ ದೇವಸ್ಥಾನಗಳಿವೆ.

ಶ್ರೀ ವೇಣಪುರಿ ಅಥವಾ ಬಿದರಹಳ್ಳಿ ತುಂಗಾ ತೀರದಲ್ಲಿಯ ತೀರ್ಥಗಳು ೧) ಶ್ರೀ ಅಶ್ವಥ್‌ ನಾರಾಯಣ ತೀರ್ಥ ೨) ಶ್ರೀ ಸೋಮೇಶ್ವರ ತೀರ್ಥ ೩) ಶ್ರೀ ಮಲ್ಲಿಕಾರ್ಜುನತೀರ್ಥ ೪) ಶ್ರೀ ಶಂಕರತೀರ್ಥ ೫) ಶ್ರೀವಿಠಲತೀರ್ಥ ೬) ಶ್ರೀ ನರಸಿಂಹತೀರ್ಥ ೭) ಶ್ರೀ ಪ್ರಯಾಗ ತೀರ್ಥ ೮) ಶ್ರೀ ಪ್ರೇತಪರ್ವತ ತೀರ್ಥ

ಶ್ರೀ ವೇದೇಶ್ ತೀರ್ಥರ ಪ್ರಶಿಷ್ಯರೂ, ಶ್ರೀ ಯಾದವಾರ್ಯರ ಶಿಷ್ಯರೂ ಆಗಿದ್ದ ಶ್ರೀ ಶ್ರೀನಿವಾಸ ತಿರ್ಥರ ಆಶ್ರಮವೂ ಇಲ್ಲಿದೆ. ಈಚಿಗೆ ತುಂಗಭದ್ರಾ ಯೋಜನೆಯಲ್ಲಿ ಮುಳಿಗಿ ಹೋದ ನಾರಾಯಣ ದೇವರಕೆರೆಯಲ್ಲಿದ್ದ ಮಧ್ವಾಚಾರ್ಯರರ ಕರಿಕಲ್ಲಿನ ಮೂರ್ತಿಯನ್ನು ಶ್ರೀ ಪ್ರಹಲ್ಲಾದ ಅವರು ಕೊಂಡು ಹೋಗಿ ಇಲ್ಲಿ ಮರುಪ್ರತಿಷ್ಠಾಪಿಸಿದ್ದಾರೆ. ಶ್ರೀ ವಿ.ಹೆಚ್. ದೇಶಾಯಿ ಸುಪ್ರಶಿದ್ದ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ, ಹೈದರಾಬಾದಿ ನಲ್ಲಿಯ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿದ್ದವರು, ಇವರ ಮೂಲಪುರಷರು ಈ ಊರಿನವರೇ ಆಗಿದ್ದರು. ಹೀಗೆ ಬಿದರಹಳ್ಳಿಗೆ ಅಪಾರ ಇತಿಹಾಸವಿರುವುದು ಹೆಮ್ಮೆಯ ಸಂಗತಿಯಾಗಿದೆ.

ಒಂದು ಹೇಳಿಕೆಯಂತೆ ಇಂದಿನ ಢಣಾಯಕನ ಕೆರೆ ಗ್ರಾಮಕ್ಕೆ ಬಿದಹಳ್ಳಿ ಎಂದೇ ಕರೆಯುತ್ತಿದ್ದರಂತೆ. ಈ ಢಣಾಯಕನ ಕೆರೆ ಗ್ರಾಮಕ್ಕೆ ಸಂಬಂಧಿಸಿದ ಹೇಳಿಕೆಯಂತೆ ಕೂಡ್ಲಿಗೆ ಗ್ರಾಮದ ಬಳಿ ಇರುವ ಜರಮಲೆಯಲ್ಲಿ ಬರಬಿತ್ತಂತೆ. ಆಗ ಅಲ್ಲಿಯ ಭಾಂಕೇರರ ಹೆಣ್ಣುಮಗಳಾದ ಗಂಗಮ್ಮ ತನ್ನ ಎಳೆರಯ ಮಗನಾದ ಮುದ್ದನೊಂದಿಗೆ ಈ ಊರಿಗೆ ಬಂದಳಂತೆ. ಆಗ ಬಿದರಹಳ್ಳಿಯಲ್ಲಿದ್ದ ಜಕ್ಕಪ್ಪಾಚಾರ್ಯ ಮತ್ತು ಅವನ ಮಡದಿ ಜಯಲಕ್ಷ್ಮಮ್ಮ ಇವರು ಮುದ್ದನಿಗೆ ಹಾಗೂ ಅವನ ತಾಯಿಗೆ ಆಶ್ರಯ ನೀಡಿದರಂತೆ. ದನಕಾಯುಲು ಹೋದ ಮುದ್ದ ಅಲ್ಲಿ ನಿದ್ದೆ ಹೋದಾಗ ಅವನಿಗೆ ಕನಸಿನಲ್ಲಿ ಸರ್ಪಕಾಣಿಸಿ ಕೊಂಡು ನಿಧಿ ಇರುವ ಎಳು ಸ್ಥಳಗಳನ್ನು ತೋರಿಸಿದನಂತೆ. ಇದು ಅರಸನ ಗಮನಕ್ಕೆ ಬರಲು ಅವನನ್ನು ದಂಡನಾಯಕನೆಂದು ನೇಮಿಸಿದನಂತೆ. ಬಿದರ್ ಹಳ್ಳಿಯಲ್ಲಿ ದಂಡನಾಯಕನಾದ ಮುದ್ದನು ಒಂದು ಕೆರೆ ನಿರ್ಮಿಸಿದ. ಅಂದಿನಿಂದ ಬಿದರಹಳ್ಳಿಯನ್ನು ಢಣಾಯಕನ ಕೆರೆ ಎಂದೇ ಕರೆಯತೊಡಗಿದರಂತೆ.

ಈ ಸಾಂಗತ್ಯದಲ್ಲಿ ಅಚ್ಚುತ ದೇವರಾಯನ ಬಗೆಗೆ ಹೇಳಲಾಗಿದೆ. ಅಚ್ಚುತ ದೇವರಾಯ ಕಟ್ಟಿಸಿರಬಹುದಾದ ಕೆರೆ ಯಾವುದು ಎಂಬುದರ ಬಗೆ ಖಚಿತ ದಾಖಲೆಗಳಿಲ್ಲ. ಆದರೆ ಅಚ್ಚುತದೇವರಾಯ ವಡ್ಡರಿಗೆ ನೀಡಿದ ಮಾತಿನಂತೆ ಕೂಲಿ ಕೊಡದೇ ಹೋದಾಗ ವಡ್ಡರು ಅವನನ್ನು ಶಪಿಸುತ್ತಾರೆ. ಇದರ ಫಲವೇ ಬರ. ಈ ಬರ ಪರಿಹಾರಕ್ಕೆ ರಾಜನಾದ ಅಚ್ಚುತದೇವರಾಯ ೧೨ ವರ್ಷ ತೀರ್ಥಯಾತ್ರೆಗೆ ಹೊರಡುವಂತೆ ರಾಜ ಪುರೋಹಿತರು ಸಲಹೆ ನೀಡುತ್ತಾರೆ. ಆಗ ಅವನು ಢಣಾಯಕ ಮುದ್ದನಿಗೆ ರಾಜ್ಯ ಒಪ್ಪಿಸಿ ಯಾತ್ರೆಗೆ ಹೊರಡುತ್ತಾನೆ. ಈ ಸಮಯದಲ್ಲಿ ಮುದ್ದನು ಕೆರೆ ಬಾವಿಗಳನ್ನು ನಿರ್ಮಿಸುತ್ತಾನೆ. ಆದರೆ ಕಿಡಿಗೇಡಿಗಳು ಮುದ್ದ ರಾಜ್ಯದ ಬೊಕ್ಕಸವನ್ನು ದುರುಪಯೋಗ ಮಾಡಿದ್ದಾನೆ ಎಂದು ಅಪಾದಿಸುತ್ತಾರೆ. ಇದನ್ನು ಸಹಿಸದೇ ಹೋದ ಮುದ್ದಣ್ಣ ವಿಷ ಸೇವಿಸಿ ಪ್ರಾಣ ತೊರೆಯುತ್ತಾನೆ. ಈ ವಿಷಯದ ಬಗೆಗೆ ಅಧಿಕ ಸಂಶೋಧನೆಯಾಗಬೇಕು. ಏಕೆಂದರೆ ಹೊಸಪೇಟೆಯಿಂದ ಹರಿಹರಕ್ಕೆ ಹೋಗುವ ಮಾರ್ಗದಲ್ಲಿನ ರಾಯರ ಕೆರೆಯ ಬಳಿ ಜೋಳದರಾಶಿ ಗುಡ್ಡವಿದೆ. ಹಳೆತಲೆಮಾರಿನವರು ಹೇಳುವಂತೆ ವಡ್ಡರ ಶಾಪದಿಂಧಾಗಿ ಈ ಗುಡ್ಡವಾಗಿದಂತೆ ಅಲ್ಲದೆ ರಾಯರ ಕೆರೆಯ ನೀರು ನಿಲ್ಲದೆ ಹರಿದು ಹೋಗುವಂತೆ ಕೂಡಾ ವಡ್ಡರು ಶಪಿಸಿದರಂತೆ.

ಢಣಾಯಕನ ಕೆರೆಯಿಂದ ರಾಯರ ಕೆರೆಗೆ ಗುಡ್ಡದಡಿಯಲ್ಲಿ ಒಂದು ತೂಬನ್ನು ಕೆರೆದಿದ್ದು ಅದರಿಂದ ರಾಯರ ಕೆರೆಗೆ ನೀರು ಹರಿಯಲು ಬಿಡುತ್ತಿದ್ದರೆಂದೂ, ಕಾಲಕ್ರಮೇಣ ದುರವಸ್ಥೆಗೀಢಾಗಿ ಆ ತೂಬು ಮುಚ್ಚಿ ಹೋದುದರಿಂದ ರಾಯರ ಕೆರೆ ಬಂಜೆ ಕರೆಯಾತಂತೆ.

ಈ ಎಲ್ಲ ವಿಷಯಳನ್ನು ಗಮನಿಸಿದಾಗ ಈ ಪ್ರಾಂತದಲ್ಲಿ ನೀರಾವರಿ ತಜ್ಞರಿಗೆ ಕೊರತೆ ಇರಲಿಲ್ಲ ಎಂಬ ಅಂಶ ಖಚಿತ. ಹೀಗಾಗಿ ಈ ಬಗೆಗೆ ಅಂದರೆ Hydraclic Enginching ಬಗೆಗೆ ಅಧಿಕ ಸಂಶೋಧನೆ ನಡೆಸಿದ್ದಲ್ಲಿ  ಇಂದು ನೀರಿಗಾಗಿ ಕಚ್ಚಾಡುತ್ತಿರುವ ರಾಜ್ಯಗಳಿಗೆ ಪರಿಹಾರ ಒದಗಿಸಬಹುದಲ್ಲವೇ.?

ಢಣಾಯಕ ಮುದ್ದನ ಬಗೆಗೆ ದಾಖಲೆಗಳು

ಪರಂಪರೆಯ ಹೇಳಿಕೆಯಂತೆ ಇಂದಿನ ಬಳ್ಳಾರಿ ಜಿಲ್ಲೆಯಲ್ಲಿ ಕಾಣಿಸಬಹುದಾದ ಅನೇಕ ನೀರಾವರಿ ಕಾರ್ಯಗಳನ್ನು, (ಕೆರೆ, ಕುಂಟ, ಆಣೆಕಟ್ಟು, ಕಾಲುವೆಗಳು) ವಿಜಯನಗರದ ಅರಸರಾಗಿದ್ದ ಪ್ರೌಢದೇವರಾಯ ಹಗೂ ಶ್ರೀ ಕೃಷ್ಣ ದೇವರಾಯರಿಂದ ನಿರ್ಮಿತವಾದವು. ಶ್ರೀ ಕೃಷ್ಣ ದೇವರಾಯನಲ್ಲಿ ಅಧಿಕಾರಿಯಾಗಿದ್ದ ಢಣಾಯಕನೇ ಈ ಅನೇಕ ಕಾರ್ಯಗಳಿಗೆ ಕಾರಣ ಪುರಷನಾಗಿದ್ದ, ಇವನಿಂದಾದ ಕಾರ್ಯಗಳು ಎಂದರೆ: ಢಣಾಯಕನ ಕೆರೆ, ರಾಯರ ಕೆರೆ, ವಲ್ಲಭಾಪುರದ ಆಣೆಕಟ್ಟು, ಮೊದಲಗಟ್ಟೆ, ಮುಂತಾದವು.

ಬಳ್ಳಾರಿ ಮ್ಯಾನುಯಲ್ ೧೯೦೪ ಪೇಜಿ ೯೦ – ೯೧ರಲ್ಲಿ ಹೇಳಲಾದಂತೆ ಈ ನೀರಾವರಿ ಕಾರ್ಯಗಳಿಮದ ಹೊಸಪೇಟೆ ತಾಲೂಕಿನಲ್ಲಿ ೧೩,೨೦೦ ಎಕ್ರೆ, ಬಳ್ಳಾರಿ ತಾಲೂಕಿನಲ್ಲಿ ೨,೩೦೦ ಎಕ್ರೆ ಅದೋನಿ ತಾಲೂಕಿನಲ್ಲಿ ೯೦೦ ಎಕ್ರೆ ಜಮೀನು ಸಾಗುವಳಿಯಾಗುತ್ತಿತ್ತು. ಇಂದು ತುಂಗಭದ್ರಾ ಪ್ರಾಜೆಕ್ಟ ನದಿಯಲ್ಲಿ ಇನ್ನೂ ಅಧಿಕ ಸಾಗುವಳಿ ನಡೆದಿದೆ.

ಕ್ರಿ.ಶ ೧೯೧೬ರ ಒಂದು ಶಾಸನದಲ್ಲಿ ಸೋಗಿಯ ಒಂದು ದೇವಸ್ಥಾನದ ಖರ್ಚು ವೆಚ್ಚಕ್ಕೆ ಧರ್ಮದ ಏತಕಾರ್ಯಕ್ಕೆ  ಢಣಾಯಕಪುರದ ಆದಾಯದಿಂದ ದಾನ ನೀಡಾಲಾಗುತ್ತಿದ್ದಂತೆ ತಿಳಿದುಬಂದಿದೆ. ಶ್ರೀ ಸಿ.ಟಿ.ಎಂ.ಕೊಟ್ರಯ್ಯ ನವರು ತಮ್ಮ “ವಿಜಯ ನಗರದ ಅವಧಿಯಲ್ಲಿಯ ನೀರಾವರಿ ಕಾರ್ಯಗಳ” ಎಂಬ ಪುಸ್ತಕದಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ.

ಮುದ್ದಣನಾಯಕನಿಗೆ ಶ್ರೀ ಕೃಷ್ಣದೇವರಾಯನಿಂದ ದೊಂಡಾವತಿ ಎಂಬ ಗ್ರಾಮ ಉಂಬಳಿಯಾಗಿ ನೀಡಲಾಗಿತ್ತು. ಆದರೆ ಆಗ್ರಾಮ್ಕಕೆ ನೀರಾವರಿ ಸೌಕರ್ಯಗಳು ಇರಲಿಲ್ಲ. ಇದರ ಬಗೆಗೆ ಹಳ್ಳಿಗರು ದೂರು ನೀಡಿದರು. ಆಗ ಅರಸನು ಗುಂಡಪ್ಪನ ಮಗನಾದ ಮಲೆಶಾನಿ ಎಂಬವನಿಗೆ ಕೆರೆಯನ್ನು ನಿರ್ಮಿಸುವಂತೆ ಆದೇಶ ನೀಡಿದ. ಅದರಂತೆ ಅವನು ಕೆರೆಯ ನಿರ್ಮಾಣಕಾರ್ಯವನ್ನು ಪೂರೈಸಿದ್ದಕ್ಕಾಗಿ, ಬಳ್ಳಾರಿ ಜಿಲ್ಲೆಯ ಹಾವಿನಾಳು ವೀರಾಪುರದ ಬಳಿ ಭೂಮಿಯನ್ನು ಪೂರೈಸಿದ್ದಕ್ಕಾಗಿ, ಬಳ್ಳಾರಿ ಜಿಲ್ಲೆಯ ಹಾವಿನಾಳು ವೀರಾಪುರದ ಬಳಿ ಭೂಮಿಯನ್ನು ಪಡೆದಂತೆ ಕ್ರಿ.ಶ. ೧೫೨೯ರ ಒಂದು ಶಾಸನ ಸೂಚಿಸುತ್ತದೆ. S.ii Vol.IX pt II No. 528 ARSI ೧೯೧೩ No. ೧೯೪

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಢಣಾಯಕನ ಕೆರೆ ಎಂಬ ಒಂದು ಹಳ್ಳಿ ಇದೆ. ಆ ಹಳ್ಳಿಗೆ ಸೇರಿದಂತೆ ಒಂದು ದೊಡ್ಡ ಕೆರೆ ಇದೆ. ಪರಂಪರೆಯ ಹೇಳಿಕೆಯಂತೆ ಈ ಕೆರೆಯನ್ನು ಮುದ್ದಣ್ಣ ಢಣನಾಯಕನು ನಿರ್ಮಿಸಿದನಂತೆ. ಇದಲ್ಲದೆ ಅವನು ಅನೇಕ ಕೆರೆಗಳನ್ನು, ಆಣೆಕಟ್ಟುಗಳನ್ನು ನಿರ್ಮಿಸಿದ್ದನಂತೆ. ಈ ಕೆರೆಯು, ೪೮ ಚ.ಮೈ ಜಲಯನ ಪ್ರದೇಶದಲ್ಲಿ ನಿರ್ಮಿಸಲಾದ ಸರಣಿ ಕೆರೆಗಳಲ್ಲಿ ಕೊನೆಯದಾಗಿತ್ತು. ಈ ಕೆರೆಯಲ್ಲದೆ, ಮೇಲುಗಡೆಯಲ್ಲಿ ನಾಲ್ಕು ಕೆರೆಗಳಿದ್ದು ಅದರಲ್ಲಿ ನಾಲ್ಕನೆಯದು ಢಣಾಯಕನಕೆರೆ. ಈ ಕೆರೆಗೆ ಅಧಿಕವಾದ ನೀರು ಗೌರೀಪುರದ ಹಳ್ಳವಾಗಿ ಹರಿದು ಮುಂದೆ ನದಿ ಸೇರುತ್ತಿತ್ತು. ಆದರೆ ಈಗ ಗೌರಿಪುರದ ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆ ಹೊಂದಿದೆ. ಆದರೆ ಈಚಿನ ಸರ್ವೆಯ ದಾಖಲಯಂತೆ ಈ ಕೆರೆಯ ಜಲಾಯನ ಪ್ರದೇಶವು ೭೨ ಚ.ಮೈ ಹಾಗೂ ೧೫ ಕೆರೆಗಳಿಂದ ಕೂಡಿದ್ದವು ಎಂದು ತಿಳಿದುಬಂದಿದೆ. (ಹೊಸಪೇಟೆ ಪಿ.ಡಬ್ಲೂ.ಡಿ ಕಾರ್ಯಲಯದಂತೆ.)

ವಿಜಯನಗರದ ಆಡಳಿತ ಅವಧಿಯಲ್ಲಿ ನಿರ್ಮಿಸಲಾದ ಢಣಾಯಕನ ಕೆರೆಯು ಇಂದಿಗೂ ಕಾರ್ಯ ಮಾಡುತ್ತಿದೆ. ಈ ಕೆರೆಯನ್ನು ಮುದ್ದಣನು ನಿರ್ಮಿಸಿದ. ನಂತರ ಅವನು ಮಂತ್ರಿಯಾದ ಈ ಕೆರೆ ೪೭.೭೭ಚ.ಮೈ ಜಲಾಯನ ಪ್ರದೇಶ ಹೊಂದಿದೆ. ಈ ಕೆರೆಯ ಆಯಕಟ್ಟಿನಲ್ಲಿ ೧೫೦೭.೫ ಎಕ್ರೆ ಜಮೀನು ನೀರಾವರಿಯಾಗುತ್ತದೆ. ಈ ಕೆರೆಯ ವಿರುದ್ದ ದಿಕ್ಕಿನಲ್ಲಿ ೧೫ ಸರಣಿ ಕೆರೆಗಳಿದ್ದು, ಈ ಕೆರೆಯ ಒಡ್ಡು ೭.೯೬ ಮೀ. ಅಗಲವಿದೆ. ಸ್ವಲ್ಪ ಕಡೆ ೪.೫೭ ಮೀ ಅಗಲವಿದ್ದು ಬಂಡಿಮಾರ್ಗವನ್ನು ಹೊಂದಿದೆ. ಈ ಕೆರೆಗೆ ಎರಡು ಕಾಲುವೆಗಳಿವೆ. ಈ ಕಾಲುವೆಗಳ ಉದ್ದ ೨೧೦೦ ಮೀಟರಿನಷ್ಟಿದ್ದು ಎಡ ಹಾಗೂ ಬಲದಂಡೆ ಗುಂಟ ಇವೆ. ಈ ಕೆರೆಗೆ ಎರಡು ತುಂಬುಗಳಿವೆ. ಅವು ಪಿಷ್ಟನ್ ಪ್ಲಗ್ ಮಾದರಿಯಾಗಿವೆ. ಅವುಗಳ ತಳದ ಮಟ್ಟವು ಬೇರೆ ಬೇರೆಯಾಗಿವೆ. ನೀರಿನ ಸಮರ್ಥ ಬಳಕೆಗೆಂದೇ ಈ ಮಟ್ಟಗಳನ್ನು ನಿರ್ಮಿಸಲಾಗಿದೆ. ನೀರು ವ್ಯರ್ಥವಾಗಿ ಹೋಗದಂತೆ ರಕ್ಷಿಸಲಾಗಿದೆ. ಒಡ್ಡಿನ ಹೊರ ಬದಿಯಲ್ಲಿ ಎರಡೂ ತಂಬುಗಳನ್ನು ಒಂದು ಹರಿಗಾಲುವೆಯಿಂದ ಜೋಡಣೆ ಮಾಡಿದೆ.

ಢಣಾಯಕನ ಕೆರೆ, ದೇವಾಪುರ, ಮರಿಯಮ್ಮನಹಳ್ಳಿ, ಢಣಾಪುರ, ಮತ್ತು ಗುಂಡಾ ಪ್ರದೇಶಗಳ ಭೂಮಿಗೆ ಈ ಕೆರೆ ನೀರುಣಿಸುತ್ತದೆ. ಒಂದಕ್ಕಿಂತ ಸಾಮಾನ್ಯವಾಗಿ ಹೆಚ್ಚು ತುಂಬುಗಳನ್ನು ನಿರ್ಮಿಸಲಾಗುವುದು. ಇದು ಕೆರೆಯ ಗಾತ್ರ ಹಾಗೂ ನೀರನ್ನು ಶೇಖರಿಸು ಪ್ರಮಾಣ ಅವಲಂಬಿಸಿದೆ. ಇದು ಅಂದಿನವರ ಜಲತಂತ್ರಜ್ಞಾನಕ್ಕೆ ಉದಾಹರಣೆ. ಎಕೆಂದರೆ ಕೆರೆಯಲ್ಲಿ ಸಂಗ್ರಹಿಸಲಾದ ನೀರಿನ ಒತ್ತಡದಿಂದ ಕೆರೆಯ ಒಡ್ಡು ಒಡೆದು ಹೋಗಬಾರದೆಂದೇ ಎರಡು ತುಂಬುಗಳನ್ನು ನಿರ್ಮಿಸುತ್ತಾರೆ. ಇದಕ್ಕೆ ಢಣಾಯಕನ ಕೆರೆ ಉತ್ತಮ ನಿದರ್ಶನವಾಗಿದೆ. ಈ ಕೆರೆಯಲ್ಲಿ ಎರಡು ತುಂಬುಗಳಿವೆ ಅವುಗಳ ನಡುವಿನ ಅಂತರ ೨೦ ಅಡಿ.

ಕ್ರಿ.ಶ ೧೯೦೪ರಲ್ಲಿ ಪ್ರಕಟಿಸಲಾದ “ಬಳ್ಳಾರಿ ಮ್ಯಾನ್ಯುಯಲ್” ಫ್ರಾನ್ಸಿಸ್ ಅವರಿಂದ ಪ್ರಕಟನೆಗೊಂಡಿದ್ದು ಅದರ ೨೯ನೆಯ ಪುಟದಲ್ಲಿ ಢಣಾಯಕನ ಕರೆಯ ಬಗೆಗೆ ಹೇಳಲಾಗಿದೆ. ಅವರು ಹೇಳುವಂತೆ ಬಳ್ಳಾರಿ ಜಿಲ್ಲೆಯ ಹಲವು ಪ್ರದೇಶಗಳು ಪಶ್ಚಿಮ ಚಾಲುಕ್ಯರ ಅರಸನಾದ ಎರಡನೆ ತೈಲಪನ ಆಡಳಿತಕ್ಕೆ ಒಳಪಟ್ಟಿರಬೇಕು. ಹಾಗೂ ಅದನ್ನು ಅಂದು ಕುಂತಲನಾಡೆಂದು ಕರೆಯುತ್ತಿದ್ದರು. ಇಂದಿನ ಹಂಪೆ ಮತ್ತು ಕುರುಗೋಡು ಬಾಗಳಿಗಳ ಶಿಲಾಶಾಸನಗಳಲ್ಲಿ ಈ  ಬಗ್ಗೆ ವಿವರಗಳನ್ನು ಕಾಣಬಹುದು. ಒಂದು ಹೇಳಿಕೆಯಂತೆ ಎರಡನೆಯ ಜಯಸಿಂಹ ೧೦೧೮ – ೪೨ರ ಅವಧಿಯಲ್ಲಿ ‘ಪೂಟ್ಟಲ ಕೆರೆ’ ಅವನ ಉಪರಾಜಧಾನಿಯಾಗಿತ್ತು. ಇಂದಿನ ಹೊಸಪೇಟೆ ತಾಲೂಕಿನಲ್ಲಿರುವ ಢಣಾಯಕನ ಕೆರೆ (ಢಾಣಾಪುರ) ಪೊಟ್ಟಲಕೆರೆ ಎಂದು ಅನೇಕ ವಿದ್ವಾಂಸರ ಅಭಿಪ್ರಾಯ.

ಮನ್ರೋ ಅವರ ಹೇಳಿಕೆಯಂತೆ ಕೊಯಂಬತ್ತೂರು ಜಿಲ್ಲೆಯ ನಂತರ, ಬಳ್ಳಾರಿ ಜಿಲ್ಲೆ ಅಧಿಕ ಕೆರೆಗಳನ್ನು ಹೊಂದಿದ್ದು ಅವುಗಳ ಸಂಖ್ಯೆ ಒಟ್ಟಾರೆ ೨೮೦, ಆದರೆ ಇದರಲ್ಲಿ ಕೇವಲ ಎರಡೇ ಕೆರೆಗಳಿಗೆ ನದಿಯಿಂದ ನೀರು ಹರಿದು ಬಂದು ೫೦೦ ಎಕ್ರೆಗೆ ಅಧಿಕವಾದ ನೀರಾವರಿ ಕಾರ್ಯನಡೆಯುತ್ತಿದೆ. ಆ ಕೆರೆಗಳೆಂದರೆ ಕಮಲಾಪುರ ಮತ್ತು ಕಣೆಕಲ್ಲು ಕೆರೆಗಳು, ಮುಂದು ವರಿದು ಈ ದಿಶೆಯಲ್ಲಿ ಉದಾಹರಿಸಬಹುದಾದ ದೊಡ್ಡ ಕೆರೆಗಳೆಂದರೆ: ದರೋಜಿ, ಢಣಾಯಕನ ಕೆರೆ, ಚಿನ್ನತುಂಬಳ ಹಾಗೂ ಕಣೇಕಲ್ಲು ಏಳು ಸರಪಳಿ ಕೆರೆಗಳಲ್ಲಿ ಢಣಾಯಕನ ಕೆರೆ ಕೊನೆಯದು. ಇದರ ಮೇಲ್ಬಾಗದಲ್ಲಿಯ ಮೂಉರ ಕೆರೆಗಳು ಸುಮಾರು ೩೦ ಚ.ಮೈ ಜಲಾಯನ ಪ್ರದೇಶ ಹೊಂದಿದ್ದು ೩೫೪ ಎಕ್ರೆ ಜಮೀನಿಗೆ ನೀರಣೀಸಿ ಸುಮಾರು ರೂ.ಲ ೧,೭೯೬ ಆದಾಯವನ್ನು ಸರಕಾರದ ಬೊಕ್ಕಸಕ್ಕೆ ನೀಡುತ್ತಿದ್ದವೆಂದು ೨೮೫೧ರ ಒಂದು ವರದಿಯಲ್ಲಿ ಹೇಳಲಾಗಿದೆ. ಈ ಕೆರೆಗಳ ಅಧಿಕ ನೀರು ಢಣಾಯಕನ ಕರೆಗೆ ಹರಿದು ಬಂದು ೧೮ ಚ.ಮೈ ವಿಸ್ತಾರವನ್ನು ಅಧಿಕಗೊಳಿಸಿವೆ. ಈ ಢಣಾಯಕನ ಕೆರೆಗೆ ಹರಿದು ಬಂದು ೧೮ ಚ.ಮೈ ವಿಸ್ತಾರವನ್ನು ಅಧಿಕಗೊಳಿಸಿವೆ. ಈ ಢಣಾಯಕನ ಕೆರೆ ತುಂಬಿದ ಮೇಲೆ ಉಳಿಯುವ ಆದಿಕ ನೀರು ಗೌರೀಪುದ ಹಳ್ಳದ ಮೂಲಕ ತುಂಗಭದ್ರೆಗೆ ಸೇರುತ್ತದೆ. (ಈಗ ಈ ಊರು ಮುಳುಗಿದೆ) ಬಳ್ಳಾರಿ ಮ್ಯಾನ್ಯುಯೆಲ್ ಪೇಜಿ.೮೯.

ಕನ್ನೀರಾಂಬೆಯ ಕಥೆಯನ್ನು ಕುರಿತಂತೆ: ಇದನ್ನು ಸಾಂಗತ್ಯದಲ್ಲಿ ಬರೆಯಲಾಗಿದೆ. ಆದರೆ ಈ ಸಾಂಗತ್ಯವನ್ನು ಯಾರು ರಚಿಸಿದರು ಎಂಬುದನ್ನು ಈ ಬರವಣಿಗೆಯಲ್ಲಿ ಕಂಡು ಬಂದಿಲ್ಲ. ಈ ಹಸ್ತಲಿಖಿನ ಹೊತ್ತಿಗೆಯ ಮುಖಪುಟದ ಮೇಲೆ ಕನ್ನೀರಾಂಬೆಯ ಕಥೆ ೧೯೩೧ ಸಂವತ್ಸರ ಜನವರಿ ತಿಂಗಳಲ್ಲಿ ತಯಾರಿಸಿದ್ದು ಢಣಾಯಕನ ಕೇರಿ ತಾಲೂಕಾ ಹೊಸಪೇಟೆ ಜಿಲ್ಲಾ ಬಳ್ಳಾರಿ ಎಂದಿಷ್ಟೇ ಬರೆಯಲಾಗಿದೆ. ಈ ಕೈಬರಹ ನಾನು ‘ನಾರಯಣ ದೇವರು ಕೆರೆ’ ಎಂಬ ಪುಸ್ತಕವನ್ನು ಬರೆದ ಸಮಯದಲ್ಲಿ ನನ್ನ ಕೈಗೆ ಸೇರಿತು. ಆದರೆ ಅದನ್ನು ಯಾರು ನಿಡಿದರು ಎಂಬುದು ಜ್ಞಾಪಕವಿಲ್ಲ. ಇದರ ರಚನೆ ಸರಳ ಹಾಗೂ ಅರ್ಥವಾಗುವ ರೀತಿಯಲ್ಲಿದೆ. ಆದುದರಿಂದ ಅದರ ಬಗೆಗೆ ಹೆಚ್ಚು ನಾನೇನೂ ವಿವರಿಸ ಬೇಕಾಗಿಲ್ಲ. ಈ ಸಾಂಗತ್ಯವು ಕೇವಲ ಕನ್ನಿರಾಂಬೆ ಎಂಬ ಕನ್ಯೆಯ ಬಲಿದಾನಕ್ಕೆ ಸೀಮಿವಾಗಿರದೇ; ಸುಪ್ರಶಿದ್ದ ಜಲತಂತ್ರ ಜ್ಞಾನಿಯಾಗಿದ್ದ ಢಣಾಯಕ ಮುದ್ದಣ್ಣನ ಬಗೆಗೂ ಪ್ರಸ್ತಾಪಿಸಿದೆ. ಮತ್ತೊಂದು ವಿಷಯವೆಂದರೆ ಅಚ್ಚುತದೇವರಾಯ ಹಾಗೂ ಆನೆಗೊಂದಿಯ ಬಗೆಗೂ ಇದರಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಷಯಗಳು ಪ್ರಸ್ತಾಪಿಸಿರುವುದು ಕುತೂಹಲಕಾರಿಯಾಗಿದೆ ಎಂದೇ ಹೇಳಬಯಸುವೆ. ಏಕೆಂದರೆ ನಾನು ಮುದ್ದಣ್ಣ ಢಣನಾಯಕನ ಬಗೆಗೆ ಸಂಗ್ರಹಿಸಿದೆ ದಾಖಲೆಗಳಲ್ಲಿ ಈ ವಿಷಯ ಪ್ರಸ್ತಾಪಕ್ಕೆ ಬಂದಿಲ್ಲ.

ಢಣಾಕಮುದ್ದನ ಬಗೆಗೆ ಇನ್ನೂ ವಿವರಗಳನ್ನು ಹುಡುಕಬೇಕು. ಏಕೆಂದರೆ ಅವನು ಒಬ್ಬ ಅಸಾಮಾನ್ಯ, ಸುಪ್ರಶಿದ್ಧ ಜಲತಂತ್ರಜ್ಞಾನಿ (Hydaulic Engineer) ಯಾಗಿದ್ದಂತೆ ತೋರುತ್ತದೆ. ಪರಂಪರೆಯಂತೆ, ಹಡಗಲಿ ತಾಲೂಕಿನಲ್ಲಿಯು ಮೊದಲಕಟ್ಟೆ ಹಗೂ ‘ವಲ್ಲ ಭಾಪರ’ದ ಆಣೆಕ್ಟುಗಳನ್ನು ಅವನಿಂದಲೇ ನಿರ್ಮಾಗೊಂಡಿವೆ. ಅಲ್ಲದೆ ಈ ಬಗ್ಗೆ ಬ್ರಿಟಿಷ್ ಆಡಳಿತಗಾರರೂ, ದಾಖಲಿಸಿದ್ದಾರೆ. ಹೀಗಾಗಿ ಅವನ ಬಗೆಗೆ ಹೆಚ್ಚಿನ ಸಂಶೋಧನೆ ಆಗಭೆಕು. ಈಗ ತುಂಗಭದ್ರಾ ಜಲಾಶಯದಲ್ಲಿ ಮುಳಿಗಿ ಹೋದ ‘ವಲ್ಲಭಾಪುರ’ ಹಾಗೂ ನಾರಾಯಣ ದೇವರಕೆರೆಯಲ್ಲಿ ಹಲವಾರು ಶಿಲಾಶಾನಗಳಿದ್ದು ಅವು ಎಲ್ಲಿ ಸೇರಿವೆ ಎಂಬುದು ತಿಳಿಯದಾಗಿದೆ ನಾನು ಈ ಬಗ್ಗೆ ಪ್ರಯತ್ನ ಮುಂದುವರಿಸಿದ್ದರೂ ಫಲಕರಿಯಾಗಿಲ್ಲ.

ಈ ಸಾಂಗತ್ಯದಲ್ಲಿ ಚೋಳರಾಯನ ದಂಡಯಾತ್ರೆಯ ಬಗೆಗೆ ಪ್ರಸ್ತಾಪಿಸಿದೆ. ಇದರ ಬಗೆಗೂ ಹೆಚ್ಚು ಚರ್ಚೆಯಾಗಬೇಕು. ನಾನು ಈಗಾಗಲೇ ಹೇಳಿದಂತೆ ಅಚ್ಚುತದೇವರಾಯನ ಬಗ್ಗೆ ಹೇಳಬಹುದಾದರೆ, ರಾಯರಕೆರೆ ನಿರ್ಮಾಣವನ್ನು ಕ್ರಿಷ್ಣ ದೇವರಾಯನ ಬಗ್ಗೆ ಹೇಳಬಹುದಾದರೆ, ರಾಯರಕೆರೆ ನಿರ್ಮಾಣವನ್ನು ಕರಷ್ಣ ದೇವರಾಯನ ಆಡಳಿತ ಸಮಯದಲ್ಲಿಯೇ ಕೈಗೆತ್ತಿಕೊಂಡಿದ್ದು, ಅದು ಅಚ್ಚುತದೇವರಾಯನ ಅವಧಿಯಲ್ಲಿ ಮುಂದು ವರಿದಿರಬೇಕು. ಏಕೆಂದರೆ ಈ ಸಾಂಗತ್ಯದಲ್ಲಿ ತಿಳಿಸಿದಂತೆ ವಡ್ಡರೊಂದಿಗಿನ ಮನಸ್ತಾಪದ ಬಗೆ ಇಂದಿಗೂ ಈ ಪ್ರಾಂತದ ಜನರು ‘ಜೋಳದರಾಶಿ’ ಗುಡ್ಡದ ಶಾಪದ ಬಗೆಗೆ ಹೇಳುತ್ತಲೇ ಇದ್ದಾರೆ. ಆದರೆ ಈ ಬಗ್ಗೆ ಚರಿತ್ರೆಯಲ್ಲಿ ಯಾವ ದಾಖಲೆಗಳೂ ಕಣ್ಣಿಗೆ ಬಿದಿಲ್ಲ. ಈ ಎಲ್ಲ ವಿಷಯಗಳ ಬಗೆಗೆ ವಿದ್ಯಾಂಸರು ಪರಿಶೋಧನೆ ನಡೆಸಿದ್ದಲ್ಲಿ ಅಧಿಕ ವಿವರಗಳು ದೊರೆಯುತವ ಸಾಧ್ಯತೆಗಳಿವೆ. ಹೀಗೆ ಕನ್ನಿರಾಂಬೆಯ ಕಥೆಯಲ್ಲಿ ಹಲವಾರು ವಿಷಯಗಳು ಅಡಕವಾಗಿವೆ. ಬಿದರಹಳ್ಳೀಯ ಬಗೆಗೂ ಅದಿಕ ವಿವರಗಳನ್ನು ಸಂಗ್ರಹಿಸಿದರೆ ನಮ್ಮ ಹಿಂದಿನ ಚರಿತ್ರೆಯ ಮೇಲೆ ಬೆಳಕು ಚೆಲ್ಲಬಹುದು.

ಇನ್ನು ಈ ಸಾಂಗತ್ಯದಲ್ಲಿನ ಹಲವಾರು ವಿಷಯಗಳೆಂದರೆ: ಜಕ್ಕಪ್ಪಾಚಾರ್ಯ ಹಾಗೂ ಅವರ ಮಡದಿ ಮಹಾಲಕ್ಷ್ಮಿ ಅವರಿಗೆ ಮಕ್ಕಳ ಬಗೆಗೆ ಇದ್ದ ಮಮತೆ ಮಂದಿ ಮಕ್ಕಳನ್ನು ಮುದ್ದಿಸುವ ವಿಶಾಲ ಹೃದಯ ಈ ದಂಪತಿಗಳದು. ಆದರೆ ಮುಂದೆ ಒಂದು ದಿನ ತಮ್ಮ ಏಕೈಕ ಪುತ್ರಿಯನ್ನೇ ಸಾರ್ವಜನಿಕ ಹಿತಕ್ಕಾಗಿ ಬಲಿಕೊಡಬೇಕಾದ ಪರಿಸ್ಥಿತಿ ಬಂದರೂ ಧೃತಿಗೆಡೆದೆ ಹೆತ್ತ ಮಗಳನ್ನೇ ಬೀಳ್ಕೊಟ್ಟ ಪ್ರಸಂಗ ಯಾರ ಕರುಳನ್ನಾದರೂ ಮಿಡಿಯಬಲ್ಲದು.

ಚೋಳರಾಯನ ತ್ಯಾಗ, ಯರಳೆಯ ಪರಿದಾಟ, ಋಷಿಯ ಪ್ರೀತಿ ಈ ಎಲ್ಲವೂ ನಮ್ಮ ಸಮಾಜದ ವಿವಿಧ ಮುಖಗಳನ್ನು ಸುಂದರವಾಗಿ ಪ್ರತಿಬಿಂಬಿಸಿವೆ. ಈ ಸಾಂಗತ್ಯದಲ್ಲಿನ ಮುದ್ದನ ಹಾಗೂ ಸರ್ಪದ ಸಂಗತಿ ನಮ್ಮ ಜಾನಪದದ ಜೀವಾಳ. ಇದನ್ನು ಕೇವಲ ಮೂಢನಂಬಿಕೆ ಎಂದು ಜರಿಯದೆ ಅದರ ಹಿಂದೆ ಮಿಡಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಅರಿಯ ಬೇಕು. ವಿಜ್ಞಾನ ಹಾಗೂ ತಂತ್ರಜ್ಞಾನದ ಬೆನ್ನೇರಿ ಇಂದು ನಾವು ಯಾವ ಹಂತಕ್ಕೆ ತಲುಪಿದ್ದೇವೆ ಎಂದು ನೋಡಿಕೊಂಡಾಗ, ನಮಗೆ ನಮ್ಮ ಹಿಂದಿನ ತಲೆಮಾರಿನವರು ಉಂಬಳಿಯಾಗಿ ಬಿಟ್ಟು ಹೋಗಿರುವ ಸಾಂಸ್ಕೃತಿಕ ಮೌಲ್ಯಗಳ ಅರಿವಾಗಬಹುದು.

ಮುದ್ದಕೆರೆಯನ್ನು ನಿಲ್ಲಿಸಬೇಕು, ಹೀಗಾಗಿ ಅದು ಬೇಡಿದ ಬಲ ನೀಡಬೇಕು. ಆದರೆ ಆ ಬಲಿ ಬೇರೆಯಾರೂ ಆಗಿರದೆ ತಾನು ಅನ್ನ ಉಂಡ ಮನೆಯ ಮಾಲಿಕನ ಏಕೈಕ ಪ್ರೀತಿಯ ಪುತ್ರಿ. ತನ್ನೊಡನೆ ಸಹೋದರಭಾವನೆ ಹೊಂದಿದವಳು. ಅವಳನ್ನು ಬಲಿಕೊಡು ಎಂದು ಹೇಗೆ ಕೇಳುವುದು ಆಗ ನೆರೆದವರ ಮುಂದೆ ಮುದ್ದನ ಮಾತನ್ನು ಕೇಳಿ:

ಏನು ಹೇಳಲಿ ತಾತ ಮೌನವಾಯಿತು ಈಗ
ಹೀನವಾಗಿದೆ ಯನ್ನೆಮನಕೆ
ನಾನು ಹೇಳಿದ ಮಾತಿಗೆ ನಂಬುತೀಯೋ ಮುತ್ಕಾ
ಹೀನ ಗುಣದವನ್ನೆನ್ನ ಬೇಡ

ಆಗ ಒಳಗಿದ್ದ ಜಕ್ಕಪ್ಪಾಚಾರ್ಯರ ಮಗಳು ತನ್ನ ಸಹೋದರ ಬಂದಿರುವುದನ್ನು ಕಂಡು ಊಟಕ್ಕೆ ಕರೆಯುವ ದೃಶ್ಯ ಯಾರ ಕಣ್ಣಲ್ಲಿಯಾದರೂ ನೀರು ಬರುವಂತೆ ಮಾಡುತ್ತದೆ. ಇದು ಭಾರತೀಯ ಸಂಸ್ಕೃತಿಯ ಜೀವಾಳದ ಒಂದು ನೋಟ. ಅಣ್ಣತಂಗಿಯರ ಸಂವಾದ ಕರುಳು ಮಿಡಿಯುವಂತಿದೆ. ಅಣ್ಣನು ಬಲಿಗೆಂದೇ ಬಂದಿರುವೆನೆಂದು ಕೇಳಿ ತಂಗೀ ತಾನು ಬಲಿಯಾಗಲು ಸಿದ್ದ ಎಂದೇ ಹೇಳಿ ತ್ಯಾಗಮಯಿ ಜೀವನ ಬೀಗುತ್ತಾಳೆ. ಅವಳು ಒಪ್ಪಿದ ಮೇಲೆ ಜನರು ಜಯಘೋಷದಿಂದ ಅವಳನ್ನು ಬಂಗಾರದ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಕರೆ ತರುವ ಚಿತ್ರ ಕಣ್ಣಿಗೆ ಕಟ್ಟುವಂತದ್ದಾಗಿದೆ.

ಜಾನಪದ ಜೀವಾಳವನ್ನೇ ಈ ಕೆಳಗಿನ ಪದ್ಯ ಎತ್ತಿ ತೋರಿಸುತ್ತದೆ.

ಆಹುತಿ ಕೊಟ್ಟರೆ ದೇವತೆಗಳಾಗುವರು
ಸಣ್ಣಕೋಡಿಗೆ ಬಾರಿಕೆರೆ ವರವುಡು ಚೆಲ್ಲಮ್ಮ
ನಿಜ ಮಡಿವಾಳರ ಮಗಳ ಚೆನ್ನಮ್ಮ ನಿಜವಾಗಿ ಸಣ್ಣ ತುಂಬಿನಲಿ
ಬಾಲ ಬ್ಯಾಡರ ಮಗಳೂ ಸೂಲ ಹಾಕಿದರು ಸೂಲದರಾಮಯ್ಯರೆಂದು
ಗೊಲ್ಲರ ಕುವರಿ ಬಲ್ಲಿದಾತಾಯೆಂದು ಗೊಲ್ಲ ತ್ಯಾಮಂದು ಅಲ್ಲಿಡಲು
ನೀರಿನ ನದಿಯೆಂದು ನಾರಿ ಮಾದಿಗ ಮಗಳನಾಂ ವರ್ಮವ್ವಯಂದತಲೂ
ಲಿಂಗವಾಳರ ಮಗಳು ಹಿಂಗ್ಹಾದಿರೇ ತುಂಬಿನೋಳ್ ಗಂಗಾಂಬೆಯನೇಮಿಸಿದಾ
ಸೋಸಿದ ಚಿನ್ನ ದಂತಿರುವಬ್ಬ ಬ್ರಾಹ್ಮಣರೂ, ಬಾನಿಗಂಗಳ ಕಟ್ಟುವರೂ ಘಾಸಿಯಾಗಿದೆ
ಹಿರೇಕೋಡಿವೊಳಿಟ್ಟರು, ಬಾಸಿಂಗ ರಾಯನೆಂದೆನಿಸಿ.

ಹೀಗೆ ಬಲಿ ಆಹುತಿ ನೀಡಿ ಮದಗದೆಡಿಗೆ ಬರಲು ಮದಗವು ಏಳು ವರ್ಷದ ಬ್ರಾಹ್ಮಣ ಬಾಲಕನ್ಯೆಯನ್ನು ಆಹುತಿಯಾಗಿ ಬೇಡಿತು.

ವಡ್ಡರಿಗೆ ಕೂಲಿ ಕೊಡುವ ವರ್ಣನೆ ಯಾರನ್ನಾದರೂ ಚಕಿತಗೊಳಿಸುತ್ತದೆ. ನಾವು ಕರೆಯ ಕೆರೆಯ ಕಟ್ಟುತ್ತೇವೆ ಆದರೆ ನಮಗೆ ಕೊಡುವ ಕೂಲಿ ಏನು ಎಂದಾಗ ಮುದ್ದನು ಹೀಗೆ ಹೇಳುತ್ತಾನೆ.

ಹಿರಿಯರಿಗೆಲ್ಲಾ ಧರಣಾವಕೊಡುವೆ
ಕಿರಿಯರಿಗೆಲ್ಲಾ ಚೌಲದುಗುಲವ ಕೊಡುವೆ
ವರಗರ್ಭಣಿಯರಿಗೆ ವರಹವ ಕೊಡುವೆ ಎಂದೇ ಸಾರಿದ.

ಹೀಗೆ ಹಲವಾರು ಕುತೂಹಲಕಾರಿ ವಿಷಯಗಳಿಂದ ಈ ಸಾಂಗತ್ಯ ಕೂಡಿದೆ. ಇದರ ಬಗೆಗೆ ಹೆಚ್ಚು ಬರೆದಲ್ಲಿ ಓದುಗರ ಕುತೂಹಲಕ್ಕೆ ಭಂಗವಾಗಬಹುದು. ಒಟ್ಟಾರೆ ಇದೊಂದು ಉತ್ತಮ ಸಾಂಗತ್ಯ. ಓದುಗರಿಕೆ ಇಂಪಾಗಿರಲಿ ಎಂದೇ ವಿವಿಧ ರಾಗಗಳನ್ನೂ ಅದರ ಧಾಟಿಗಳನ್ನು ಇದರ ಕತೃವು ವಿವರಿಸಿದ್ದಾನೆ. ಹಾಡಿದಲ್ಲಿ ಇದರ ಸ್ವಾರಸ್ಯ ಇನ್ನೂ ಅಧಿಕ. ನಾನು ಕವಿಯಲ್ಲ ಕಾದಂಬರಿಕಾರನೂ ಅಲ್ಲ ಆದರೆ ಪುರಾತನ ಕಾಲದ ಜನ – ಜೀವನದಲ್ಲಿ ಅಧಿಕ ಆಸಕ್ತಿ ಹೊಂದಿರುವನು. ಹೀಗಾಗಿ ಈ ಸಾಹಸಕ್ಕೆ ಕೈಹಾಕಿರುವೆ. ಆದುದರಿಂದ ನನ್ನ ಈ ಕಾರ್ಯದಲ್ಲಿ ಅನೇಕ ಲೋಪದೋಷಗಳಿರಬಹುದು. ಸಹೃದಯರು ಮನ್ನಿಸಬೇಕು.

ನನಗೆ ಇದನ್ನು ಪ್ರಕಾಶ ಪಡಿಸಲು ಆಸ್ಪದ ನೀಡಿದ ಅಂದಿನ ಕುಲಪತಿಗಳಾದ ಡಾ. ಎಂ. ಎಂ. ಕಲಬುರ್ಗಿಯವರಿಗೆ ನಾನು ಋಣಿಯಾಗಿದ್ದೇನೆ. ಅಲ್ಲದೆ ಇಂದಿನ ಕುಲಪತಿಗಳಾದ ಡಾ. ಎಚ್. ಜೆ. ಲಕ್ಕಪ್ಪಗೌಡರು ಆಸಕ್ತಿವಹಿಸಿ ಮುದ್ರಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅವರ ಈ ಸಹೃದಯತೆಯನ್ನು ಸ್ಮರಿಸದೇ ಇರಲಾರೆ. ಈ ಸಾಂಗತ್ಯದ ಹಸ್ತಪ್ರತಿಯ ಸುಂದರ ಪ್ರತಿಯನ್ನು ಸಿದ್ಧಮಾಡಿ ಕೊಟ್ಟ ಬಿ.ಎಂ. ಶ್ರೀ ಪ್ರತಿಷ್ಠಾನದ ಶ್ರೀ ಹೆಚ್. ರಾಮಸ್ವಾಮಿ ಹಾಗೂ ಸಂಪಾದನೆ ಕಾರ್ಯದಲ್ಲಿ ಸೂಚನೆ ನೀಡಿ ಸಹಕರಿಸಿದ ಡಾ. ಗೀತಾಚಾರ್ಯರಿಗೆ, ಮುಖಮಟಕ್ಕೆ ಛಾಯಾಚಿತ್ರವನ್ನು ನೀಡಿದ ಶ್ರೀ ಶ್ರೀನಿವಾಸರಾವ್ ಅವರಿಗೆ ನನ್ನ ವಂದನೆಗಳು.

ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿಯವರನ್ನು ನಾನು ತುಂಬಾ ಕಾಡಿರುವೆ. ನನ್ನ ಕಾಡವನ್ನು ನಗುತ್ತಲೇ ಸಹಿಸಿ ಕರಡುಪ್ರತಿಯನ್ನು ಮುದ್ರಣದ ಹಂತದವರೆಗೂ ತರುವಲ್ಲಿ ನನಗೆ ಸಹಕರಿಸಿದ್ದಾರೆ. ಅವರ ಉಪಕಾರವನ್ನು ಸ್ಮರಿಸುವೆ.

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ. ಚಿ. ಬೋರಲಿಂಗಯ್ಯ ಅವರು ಇದನ್ನು ಅಚ್ಚುಕಟ್ಟಾಗಿ ಪ್ರಕಟಿಸಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ. ಸಹೃದಯರು ಓದಿ ಪ್ರತಿಕ್ರಿಯೆಸಿದರೆ ನನ್ನ ಶ್ರಮ ಸಾರ್ಥಕ.

ಪ್ರೊ. ಎಂ. ಧ್ರುವನಾರಾಯಣ