ಭಾರತ ಸಂಪ್ರದಾಯ, ಸಂಸ್ಕೃತಿಗಳ ಬೀಡು. ದೇವಸ್ಥಾನ ಭಕ್ತರ ನೆಲವೀಡು. ಭಾರತದ ಹಳ್ಳಿ ಹಳ್ಳಿಗಳಲ್ಲಿಯೂ ದೇವಸ್ಥಾನಗಳು, ದೇವತಾರಾಧಕರಿದ್ದಾರೆ. ಭಾರತದಾದ್ಯಂತ ಪೂಜಿಸಲ್ಪಡುವ ದೇವರುಗಳಲ್ಲಿ ಕೆಲವೊಂದು ಪ್ರಖ್ಯಾತ ದೇವರುಗಳು ದೇಶವ್ಯಾಪಿಯಾಗಿ ಪೂಜಿಸಲ್ಪಡುತ್ತಿದ್ದರೆ, ಕೆಲವೊಂದು ದೇವರುಗಳು ಕೆಲವೊಂದು ಮತಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಅಂತೆಯೇ ಪ್ರತಿಯೊಂದು ಗ್ರಾಮಕ್ಕೂ ಒಬ್ಬ ದೇವ, ದೇವತೆಯರು ಪ್ರಖ್ಯಾತರಾಗಿದ್ದು, ಅವರು ಗ್ರಾಮದೇವಗೆಗಳೆಂದೆ ಕರೆಯಲ್ಪಡುತ್ತಾರೆ. ಇಡೀ ಗ್ರಾಮಸ್ಥರಿಮದ ಆರಾಧನೆಗೊಳಗಾಗುತ್ತಿರುತ್ತಾರೆ. ಇಂತಹ ಗ್ರಾಮದೇವತೆಗಳು ಪವಾಡ ಪುರುಷರು, ಶಕ್ತಿವಂತರು ಆಗಿದ್ದರೆ ಅವರು ಗ್ರಾಮದ ಸೀಮೆಯನ್ನು ಮೀರಿ ಅವರ ಸುತ್ತಮುತ್ತಲ ಗ್ರಾಮಗಳ ಜನರಿಂದ ಪೂಜಿಸಲ್ಪಡುತ್ತಾ, ಅವರಿಂದ ಹಬ್ಬಹರಿದಿನಗಳನ್ನು, ಜಾತ್ರೆಗಳನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಾ ಸೀಮಾತೀತ ದೇವತೆಗಳಾಗಿ ಪ್ರಖ್ಯಾತಿಯನ್ನು ಪಡೆಯುತ್ತಾರೆ. ಅಂತಹ ಸೀಮಾತೀತ ದೇವತೆಗಳಲ್ಲಿ ನಾಗರಾಳದ “ಕಪ್ಪರ ಪಡಿಯಮ್ಮ”ಳು ಒಬ್ಬಳಾಗಿದ್ದಾಳೆ.

. ಪಡಿಯಮ್ಮನ ವಾಸಸ್ಥಾನ

ಕಪ್ಪರ ಪಡಿಯಮ್ಮ ನೆಲಸಿರುವುದು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ನಾಗರಾಳ ಬೆಟ್ಟದಲ್ಲಿ. ತಾಲೂಕಾ ಕೇಂದ್ರ ಬೀಳಗಿಯಿಂದ ೫ ಕಿ.ಮೀ. ಸಿದ್ದಾಪೂರದಿಂದ ೪ ಕಿ.ಮೀ. ಅರಕೇಯಿಂದ ೨ ಕಿ.ಮೀ, ನಾಗರಾಳದಿಂದ ೩ ಕಿ.ಮೀ. ಅಂತರದಲ್ಲಿ ನಾಗರಾಳ ಮತ್ತು ಸಿದ್ದಾಪುರ, ೨ ಗ್ರಾಮಗಳ ಸೀಮೆಗೆ ಸೇರಿದ ಕಡಿದಾದ ಬೆಟ್ಟದ ಪಡಿಯಲ್ಲಿ ದೇವಿ ಕಪ್ಪರ ಪಡಿಯಮ್ಮನ ದೇವಸ್ಥಾನವಿದೆ.

ಪಡಿಯಮ್ಮನ ದರ್ಶನಕ್ಕೆ ಹೋಗಬೇಕಾದರೆ ವಾಹನದಲ್ಲಿ ಬರುವವರು ತಾಲೂಕಾ ಕೇಂದ್ರ ಬೀಳಗಿಯಿಂದಲೂ ಹಾಗೂ ಸಿದ್ದಾಪೂರ ಗ್ರಾಮದಿಂದಲೂ ಬಂದವರು ನಾಗರಾಳ ಕ್ರಾಸಿನಲ್ಲಿಯೇ ಇಳಿದುಕೊಳ್ಳಬೇಕು. ನಾಗರಾಳ ಕ್ರಾಸಿನಿಂದ ದಕ್ಷಿಣಕ್ಕೆ ಮುಖಮಾಡಿ ಬೆಟ್ಟದ ಕಡೆ ೨ ಕಿ.ಮೀ. ಹೋಗಬೇಕು. ದೇವಾಲಯಕ್ಕೆ ತೆರಳಲು ಮೊದಲು ದೊಡ್ಡದೊಡ್ಡ ಮರಗಳು ಎತ್ತರವಾದ ಕಂಟಿಗಳ ನಡುವೆ ಕಾಲು ಹಾದಿಯೇ ಇತ್ತು. ಈಗ ಅವನ್ನೆಲ್ಲ ಕಡಿದು ಖಡಿ, ಗರಸು ಹಾಕಿ ಸಮತಟ್ಟಾದ ರಸ್ತೆಯನ್ನು ಮಾಡಲಾಗಿದೆ.

. ಪಡಿಯಮ್ಮನ ಪಾದಗಟ್ಟೆ

ಪಡಿಯಮ್ಮನ ದರ್ಶನಕ್ಕೆ ಹೋಗಬೇಕಾದರೆ ನಮಗೆ ಮೊದಲು ಸಿಗುವುದೆ ಪಡಿಯಮ್ಮನ ಪಾದಗಟ್ಟಿ. ಇಲ್ಲಿ ಎತ್ತರವಾದ ಕಟ್ಟೆಯ ಮೇಲೆ ದೇವಿಯ ಪಾದಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದು ದೇವಿಯ ಪಾದಗಳಿರುವ ಕಟ್ಟೆಯಾದ್ದರಿಂದ ಇದಕ್ಕೆ ಪಡಿಯಮ್ಮನ ಪಾದಗಟ್ಟೆ ಎಂದೇ ಕರೆಯುತ್ತಾರೆ. ಇಲ್ಲಿ ಕಟ್ಟೆಯ ಮೇಲೆ ದೇವಿಯ ಪಾದಗಳ ಹಿಂದೆ ದೇವಿಯೆಂದೆ ಒಂದು ಆಯತಾಕಾರದ ಪಡಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಿಗೂ ಹಸಿರು ಸೀರೆ, ಖಣ, ಹಸಿರು ಬಳೆಗಳನ್ನು ಉಡಿಸಿರುತ್ತಾರೆ. ಜೊತೆಗೆ ಕೊರಳಲ್ಲಿ ತಾಳಿ, ಕಾಲಲ್ಲಿ ಕಾಲುಂಗುರಗಳನ್ನು ಹಾಕಲಾಗಿದೆ. ಇಲ್ಲಿರುವ ಮೂರ್ತಿಗೂ ಪಾದಗಟ್ಟಿಗೂ ನಿತ್ಯ ಪೂಜೆ ನಡೆಯುತ್ತದೆ.

ದೇವಿಗೆ ಹರಕೆ ಹೊತ್ತವರು ಇಲ್ಲಿಂದಲೆ ದೀರ್ಘದಂಡ ನಮಸ್ಕಾರ ಪ್ರಾರಂಭಿಸಿ ದೇವಿಯ ಸನ್ನಿಧಾನದವರೆಗೂ ಹಾಕುತ್ತಾರೆ. ಇನ್ನು ದೇವಿಗೆ ಪ್ರಾಣಿಬಲಿ ನಡೆಯುವುದು ಇಲ್ಲಿಯೇ. ದೇವಿಗೆ ಬಲಿಕೊಡಲು ತಂದ ಪ್ರಾಣಿಯನ್ನು ದೇವಿಯ ಪಾದಗಟ್ಟಿಯ ಹತ್ತಿರವೇ ತಂದು ಅದಕ್ಕೆ ಮೊದಲ ಏಟನ್ನು ಹಾಕಲಾಗುತ್ತದೆ. ನಂತರ ಆ ಪ್ರಾಣಿಯನ್ನು ದೂರದ ಹೊಲಗಳಲ್ಲಿ ಒಯ್ದು ಅಲ್ಲಿಯೇ ಅದನ್ನು ಕಡಿದು. ಅಡಿಗೆ ಮಾಡಿ ನಂತರ ತಾಯಿಗೆ ನೈವೇದ್ಯ ಮಾಡಲಾಗುತ್ತದೆ. ಪಡಿಯಮ್ಮನ ಗುಡ್ಡದಲ್ಲಿ ಜೇನು ಹುಳುಗಳು ಎದ್ದ ಸಂದರ್ಭದಲ್ಲಿ ದೇವಿಯ ದರ್ಶನಕ್ಕೆ ಬಂದ ಭಕ್ತರು ಈ ಪಾದಗಟ್ಟೆಯಲ್ಲಿರುವ ದೇವಿಗೆ ಪೂಜೆ ಸಲ್ಲಿಸಿ ನೈವೇದ್ಯ, ಕಾಯಿ ಅರ್ಪಿಸಿ ಇಲ್ಲಿಯೇ ತಮ್ಮ ಸೇವೆ ಸಲ್ಲಿಸಿ ಹೋಗುತ್ತಾರೆ.

. ಪರಸನ ಕಟ್ಟೆ

ಪಾದಗಟ್ಟೆಯ ಹತ್ತಿರವಿರುವುದೇ ಪರಸನ ಕಟ್ಟೆ. ಇದು ‘ಪರಸಪ್ಪ’ ಎಂಬ ವ್ಯಕ್ತಿಯ ಸಮಾಧಿ ಸ್ಥಳ. ಭಕ್ತರ ಆಗ್ರಹದಿಂದ ದಿಗಂಬರೇಶ್ವರರು ನಾಗರಾಳದಲ್ಲಿ ನೆಲೆಸಿದರು. ದೇವಿ ಸ್ಥಿರವಾಗಿ ನೆಲೆನಿಂತಿದ್ದು ನಾಗರಾಳದ ಗುಡ್ಡದಲ್ಲಿ. ಭಕ್ತರ ಒತ್ತಾಯಕ್ಕಾಗಿ ದಿಗಂಬರೇಶ್ವರರು ನಾಗರಾಳಕ್ಕೆ ಬಂದರು ನಿತ್ಯವೂ ತಾಯಿಯ ದರ್ಶನಕ್ಕೆ ಹೋಗುವುದನ್ನು ತಪ್ಪಿಸಲಿಲ್ಲ. ಅದಕ್ಕಾಗಿ ನಿತ್ಯವೂ ಗುಡ್ಡದಲ್ಲಿರುವ ತಾಯಿಯ ದರ್ಶನಕ್ಕಾಗಿ ತೆರಳುತ್ತಿದ್ದರು. ಗುಡ್ಡ ಇರುವುದು ನಾಗರಾಳ ಗ್ರಾಮದಿಂದ ೩ ಕಿ.ಮಿ. ಅಂತರದಲ್ಲಿ. ಹಾಗಾಗಿ ಸ್ವಾಮಿಗಳು ದಿನನಿತ್ಯ ಬೆಟ್ಟಕ್ಕೆ ನಡೆದುಕೊಂಡು ಹೋಗಿ ಬರುವುದು ಕಷ್ಟವೆಂದು ತಿಳಿದ ಗ್ರಾಮಸ್ಥರು ಸ್ವಾಮಿಗಳಿಗೆ ನಿತ್ಯ ದೇವಿಯ ದರ್ಶನಕ್ಕೆ ಹೋಗಿಬರಲು ಅನುಕೂಲವಾಗಲೆಂದು ಒಂದು ಕುದುರೆಯನ್ನು ಹಾಗೂ ಸ್ವಾಮಿಗಳನ್ನು ಕುದುರೆಯ ಮೇಲೆ ಕೂಡಿಸಿಕೊಂಡು, ಕುದುರೆಯನ್ನು ಹಿಡಿದುಕೊಂಡು ಹೋಗಲು ಒಬ್ಬ ವ್ಯಕ್ತಿಯನ್ನು ಗೊತ್ತು ಮಾಡಿದರು. ಆ ಕುದುರೆಯನ್ನು ಹಿಡಿದುಕೊಂಡು ಹೋಗಲು ಗೊತ್ತಾದ ವ್ಯಕ್ತಿಯೇ ‘ಪರಸಪ್ಪ’.

ಪರಸಪ್ಪ ಸ್ವಾಮಿಗಳ ನಿಷ್ಟಾವಂತ ಭಕ್ತ, ಸೇವಕ. ಸ್ವಾಮಿಗಳು ದಿನನಿತ್ಯವೂ ಇವನ ಜೊತೆ ಪಡಿಯಮ್ಮನ ಗುಡ್ಡಕ್ಕೆ ಹೋಗುತ್ತಿದ್ದರು. ಆದರೆ ದೇವಿಯ ಹತ್ತಿರ ಹೋಗುವಾಗ ಕುದುರೆಯ ಜೊತೆ ಪರಸಪ್ಪನನ್ನು ಬಿಟ್ಟು ತಾವು ಮಾತ್ರ ಏಕಾಂಗಿಯಾಗಿ ಪಡಿಯಮ್ಮನ ದರ್ಶನಕ್ಕೆ ಹೋಗುತ್ತಿದ್ದರು. ಹೀಗೆ ಏಕಾಂಗಿಯಾಗಿ ಹೋದ ದಿಗಂಬರೇಶ್ವರರು ತಾಯಿಯ ಪೂಜೆ ಮಾಡಿದ ನಂತರ ತಾಯಿಯ ಜೊತೆ ಮಾತುಕತೆ ನಡೆಸುತ್ತಿದ್ದರು. ತನ್ನನ್ನು ದಿನವೂ ಕೆಳಗಡೆ ಬಿಟ್ಟು ತಾವೂ ಮಾತ್ರ ಏಕಾಂಗಿಯಾಗಿ ಯಾಕೆ ಪಡಿಯಮ್ಮನ ದರ್ಶನಕ್ಕೆ ಹೋಗುತ್ತಾರೆಂದು ತಿಳಿಯದ ಪರಸಪ್ಪ ಯೋಚಿಸುತ್ತಾನೆ. ಉತ್ತರ ಹೊಳೆಯದಾದಾಗ ಕೊನೆಗೊಂದು ದಿನ ಸ್ವಾಮಿಗಳನ್ನು ಕೇಳಿಯೇ ಬಿಡುತ್ತಾನೆ. ಆಗ ದಿಗಂಬರೇಶ್ವರ ಸ್ವಾಮಿಗಳು ತಾವು ಪಡಿಯಮ್ಮನ ಜೊತೆ ಏಕಾಂತವಾಗಿ ಮಾತನಾಡುವ ವಿಷಯವನ್ನು ತಿಳಿಸುತ್ತಾರೆ. ಹಾಗೆಯೇ ತಾಯಿ ಮಗನ ಏಕಾಂತ ಮಾತುಕತೆಗೆ ಭಂಗ ಬರಬಾರದೆಂದು ನಿನ್ನನ್ನು ಇಲ್ಲಿಯೇ ಬಿಟ್ಟು ಹೋಗುತ್ತೇನೆಂದು ತಿಳಿಸುತ್ತಾರೆ. ಪಡಿಯಮ್ಮನನ್ನು ದಿಗಂಬರೇಶ್ವರ ಸ್ವಾಮಿಗಳು ಪ್ರತ್ಯಕ್ಷವಾಗಿ ನೋಡುತ್ತಾರೆ, ಅವಳ ಜೊತೆ ಮಾತನಾಡುತ್ತಾರೆ ಎಂಬ ವಿಷಯವನ್ನು ತಿಳಿದು ಪರಸಪ್ಪ ಆಶ್ಚರ್ಯಗೊಳ್ಳುತ್ತಾನೆ. ಹಾಗೆಯೇ ತಾನು ಒಮ್ಮೆಯಾದರೂ ಆ ದೇವಿಯ ಪ್ರತ್ಯಕ್ಷ ದರ್ಶನ ಮಾಡಬೇಕೆಂಬ ಆಸೆ ಆತನಲ್ಲಿ ಮೊಳಕೆಯೊಡೆಯುತ್ತದೆ.

ಸ್ವಾಮಿಗಳನ್ನು ದೇವಿಯ ಹತ್ತಿರ ಕರೆದುಕೊಂಡು ಹೋಗುವಾಗ ಪರಸಪ್ಪ ತಾನೂ ದೇವಿಯ ಪ್ರತ್ಯಕ್ಷ ದರ್ಶನ ಮಾಡಬೇಕೆಂಬ ತನ್ನ ಮನದಿಂಗಿತವನ್ನು ತಿಳಿಸುತ್ತಾನೆ. ತನ್ನ ಮತ್ತು ಪಡಿಯಮ್ಮನ ಏಕಾಂತ ಮಾತುಕತೆಗೆ ಭಂಗವಾದೀತೆಂದು ಸ್ವಾಮಿಗಳು ಪರಸಪ್ಪನ ಮಾತುಗಳನ್ನು ನಿರಾಕರಿಸುತ್ತಾರೆ. ಆದರೆ ತಾಯಿಯ ದರ್ಶನ ಮಾಡಬೇಕೆಂಬ ಪರಸಪ್ಪನ ಆಸೆಯ ಕುಡಿ ದಿನ ದಿನವೂ ಚಿಗುರುತ್ತದೆ. ದಿನನಿತ್ಯವೂ ದಿಗಂಬರೇಶ್ವರರು ಪಡಿಯಮ್ಮನ ದರ್ಶನಕ್ಕೆ ಹೋಗುವಾಗ ಪರಸಪ್ಪ ತಾನೂ ಬರುವುದಾಗಿ ವಿನಂತಿಸಿಕೊಳ್ಳುತ್ತಾನೆ. ಅವರು ಬೇಡವೆಂದು ನಿರಾಕರಿಸುತ್ತಾರೆ. ಇದು ಎಷ್ಟೋ ದಿನಗಳವರೆಗೂ ನಡೆಯುತ್ತದೆ.

ಎಷ್ಟೋ ದಿನ ಹೀಗೆ ಬೇಡಿಕೊಂಡ ಪರಸಪ್ಪ ಕೊನೆಗೊಂದು ದಿನ ಸ್ವಾಮಿಗಳನ್ನು ನೀವು ನನಗೆ ಒಮ್ಮೆಯಾದರೂ ತಾಯಿಯ ಪ್ರತ್ಯಕ್ಷ ದರ್ಶನ ಮಾಡಿಸಬೇಕೆಂದು ವಿನಮ್ರವಾಗಿ ಬೇಡಿಕೊಳ್ಳುತ್ತಾನೆ. ಅವನ ಆ ವಿನಮ್ರ ಬೇಡಿಕೆಯನ್ನು ನಿರಾಕರಿಸಲಾಗದೆ ಸ್ವಾಮಿಗಳೂ ಕೊನೆಗೂ ಒಪ್ಪುತ್ತಾರೆ. ‘ಆಯ್ತು ನಡೆ’ ಎಂದು ಅವನನ್ನು ತಾಯಿಯ ದರ್ಶನಕ್ಕೆ ಕರೆದುಕೊಂಡು ಹೋಗುತ್ತಾರೆ. ಪಡಿಯಮ್ಮನ ಸನ್ನಿಧಾನಕ್ಕೆ ಇಬ್ಬರೂ ಸೇರಿಯೇ ಹೋಗುತ್ತಾರೆ. ದೇವಿಯ ಹತ್ತಿರ ಹೋಗಿ ನೋಡಿದಾಗ ಇದುವರೆಗೆ ಶಾಂತಮೂರ್ತಿಯಾಗಿ ತಾಯಿಯ ಸ್ವರೂಪದಲ್ಲಿ ದರ್ಶನ ನೀಡುತ್ತಿದ್ದ ಪಡಿಯಮ್ಮ ತನ್ನ ಮಗ ತನ್ನ ಜೊತೆಗೆ ಮತ್ತೊಬ್ಬ ವ್ಯಕ್ತಿಯನ್ನು ತನ್ನ ಅನುಮತಿ ಇಲ್ಲದೆ ಕರೆದುಕೊಂಡು ಬಂದು ತಮ್ಮ ತಾಯಿ – ಮಗನ ಏಕಾಂತ ಭೇಟಿಗೆ ಮಾತುಕತೆಗೆ ಭಂಗ ತಂದನೆಂದು ಭಾವಿಸಿ ಕ್ರೋಧಗೊಂಡ ಪಡಿಯಮ್ಮ ಕೆಂಡದುಂಡೆಗಳನ್ನು ಉಗಳುತ್ತಾ, ಬುಸಗುಟ್ಟುತ್ತಾ ಕರಾಳ ಸರ್ಪದ ರೂಪದಲ್ಲಿ ಅವರಿಗೆ ದರ್ಶನ ನೀಡುತ್ತಾಳೆ. ಇದನ್ನು ಕಂಡ ದಿಗಂಬರೇಶ್ವರರು ತಾಯಿಯ ಕೋಪ, ಕೋಪದ ಕಾರಣ ತಿಳಿದು, ಹತ್ತಿರದಲ್ಲಿದ್ದ ಪರಸಪ್ಪನನ್ನು ಕುರಿತು. “ತಾಯಿಯನ್ನು ನೋಡಿದ್ಯಾ ಪರಸ್ಯಾ” ಎಂದು ಕೇಳುತ್ತಾರೆ. ‘ಬುದ್ಧಿ ನೋಡಿದೆ’ ಎನ್ನುತ್ತಾನೆ. ಪರಸಪ್ಪ. ತಾಯಿಯನ್ನು ಆ ರೂಪದಲ್ಲಿ ನೋಡಿ ಗಾಬರಿಗೊಂಡಿದ್ದ ಪರಸಪ್ಪ ಮೂರ್ಛೆಹೋಗಿ ಬೆಟ್ಟದಿಂದ ಉರುಳಿ ಬೀಳುತ್ತಾನೆ. ಹಾಗೆಯೇ ಬೆಟ್ಟದಿಂದ ಉರುಳುತ್ತಾ ಬಂದ ಪರಸಪ್ಪನ ತಲೆ ಬೆಟ್ಟದಡಿಯಲ್ಲಿದ್ದ ಒಂದು ಕಲ್ಲಿಗೆ ಬಡಿದು ಆತ ಅಲ್ಲಿಯೇ ಮರಣಹೊಂದುತ್ತಾನೆ.

ಪರಸಪ್ಪ ಮರಣ ಹೊಂದಿದ ಸ್ಥಳದಲ್ಲಿ ಒಂದು ‘ತುಗಲಿ’ ಗಿಡವಿದೆ. ಆತ ಮರಣ ಹೊಂದಿದೆ ತುಗಲಿತಿಡದ ಸುತ್ತಲೂ ಒಂದು ಕಟ್ಟೆಯನ್ನು ಕಟ್ಟಲಾಗಿದೆ. ಇದನ್ನು ‘ಪರಸನ ಕಟ್ಟೆ’ ಎಂದೆ ಕರೆಯುತ್ತಾರೆ. ಪ್ರತಿ ಅಮವಾಸ್ಯೆ, ಹಬ್ಬಹರಿದಿನಗಳಲ್ಲಿ ಪರಸನ ಕಟ್ಟೆಗೂ ಪೂಜೆ ನಡೆಯುತ್ತದೆ. ಪಡಿಯಮ್ಮನ ದರ್ಶನಕ್ಕೆ ಹೋಗುವವರು ಮೊದಲು ಪರಸನ ಕಟ್ಟೆಯ ದರ್ಶನವನ್ನು ಮಾಡಿಕೊಂಡೆ ಹೋಗುತ್ತಾರೆ. ಹಾಗೆಯೇ ಹೊಲಕ್ಕೆ ಹೋಗುವವರಿಗೆ, ಆಡು ದನ ಕಾಯುವವರಿಗೆ, ದಾರಿ ಹೋಕರಿಗೆ ಈ ಪರಸನ ಕಟ್ಟೆ ವಿಶ್ರಾಂತಿಯನ್ನು ಪಡೆಯುವ ಸ್ಥಳವೂ ಆಗಿದೆ.

ಪರಸನ ಕಟ್ಟೆ ದಾಟಿದ ನಂತರ ಗುಡ್ದದ ಏರು ಪ್ರಾರಂಭವಾಗುತ್ತದೆ. ಮುಂಚೆ ಇಲ್ಲಿ ದೊಡ್ಡ ದೊಡ್ಡ ಕಲ್ಲುಗಳಿದ್ದವು. ಇತ್ತೀಚೆಗೆ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ, ಅನುಕೂಲವಾಗಲೆಂದು ಕಲ್ಲುಗಳನ್ನು ತೆಗೆದು ಬಡಿ, ಗರಸು, ಸಿಮೆಂಟನ್ನು ಹಾಕಿ ರಸ್ತೆ ನಿರ್ಮಿಸಲಾಗಿದೆ. ಗುಡ್ಡವನ್ನು ಏರುತ್ತಾ ೦.೫ ಕಿ.ಮೀ. ಸಾಗಿದರೆ ನಮಗೆ ದೊರೆಯುವುದೆ ದೇವಿ ನೆಲೆಸಿರುವ ಜಾಗ.

. ಪಡಿಯಮ್ಮನ ದೇಗುಲ

ದೇವಿ ನೆಲೆಸಿರುವ ಬೆಟ್ಟವು ಎತ್ತರವಾದ ಗೋಡೆಯನ್ನು ಕಟ್ಟೆದಂತೆ ಏಕಾಕಾರವಾಗಿ ನಿಂತಿದೆ. ಈ ಬೆಟ್ಟವನ್ನು ಏರುವುದು ದುಸ್ಸಾಧ್ಯವೇ ಸರಿ. ಈ ಬೆಟ್ಟ ಸುತ್ತಲೂ ನೆಟ್ಟಗೆ ನಿಂತಿದ್ದರೂ ದೇವಿ ಪ್ರತಿಷ್ಠಾಪನೆಗೊಂಡಿರುವ ಮತ್ತು ಅವಳ ಎಡಬಲದ ಸ್ಥಳದಲ್ಲಿ ಮಾತ್ರ ದೇವಿಗೆ ಮೇಲ್ಛಾವಣಿ ಹಾಕಿದಂತೆ ಸ್ವಲ್ಪ ಬಾಗಿದೆ. ಇದರಿಂದ ಎಷ್ಟೇ ಮಳೆ, ಬಿಸಿಲು, ಚಳಿಯಿದ್ದರೂ ಗುಡ್ಡದ ಈ ಮೇಲ್ಛಾವಣಿಯಿಂದ ಪಡಿಯಮ್ಮನಿಗೆ ತಟ್ಟುವದೆ ಇಲ್ಲ. ಇದು ದೇವಿಗೆ ಪ್ರಕೃತಿಯೇ ಒದಗಿಸಿದ ರಕ್ಷಣೆ. ಈ ಕಡಿದಾದ ಗುಡ್ಡದಲ್ಲಿ ಮಳೆಗಾಲದಲ್ಲಿ ಜೋರಾಗಿ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿದ್ದರೆ, ಮಳೆಗಾಲ ಕಳೆದ ನಂತರ ಕೆಲವು ದಿನಗಳ ಕಾಲ ನೀರು ಸಣ್ಣಗೆ ಜಿನಗುತ್ತಿರುತ್ತದೆ. ದೇವಿಯ ಸುತ್ತಮುತ್ತಲೂ ಹರಿಯುವ ಈ ನೀರು ದೇವಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ತಾಯಿಗೆ ಪ್ರಕೃತಿಯೇ ಹಾಕಿರುವ ಛಾವಣಿಯ ಮೇಲೆ ಯಾವಾಗಲೂ ಹೆಜ್ಜೇನುಗಳು ಗೂಡು ಕಟ್ಟಿಕೊಂಡಿರುತ್ತವೆ. ಮಳೆಗಾಲದಲ್ಲಿ ನೀರು ಅವುಗಳ ಮೇಲೆ ಬೀಳುವುದರಿಂದ ಅವುಗಳ ಪ್ರಮಾಣ ಸ್ವಲ್ಪ ಕಡಿಮೆಯಿದ್ದರು ಉಳಿದ ಕಾಲದಲ್ಲಿ ಅವು ಹೆಚ್ಚಿರುತ್ತವೆ. ಹೊಗೆಗೆ ಇವು ಮೇಲೆ ಏಳುವುದರಿಂದ ಅವು ಕಚ್ಚಬಹುದೆಂಬ ಕಾರಣಕ್ಕೆ ದೇವಸ್ಥಾನಕ್ಕೆ ಬಂದ ಭಕ್ತರ್ಯಾರು ದೇವಿಗೆ ಊದಿನ ಕಡ್ಡಿ, ಕರ್ಪೂರ ಹಚ್ಚುವುದಿಲ್ಲ. ಹಚ್ಚಿದರೂ ಎಲ್ಲರೂ ದೂರಹೋದ ಮೇಲೆ ಕೊನೆಗೆ ಒಬ್ಬರೆ ಮಾತ್ರ ಉಳಿದು ಊದಿನ ಕಡ್ಡಿ, ಕರ್ಪೂರ ಹಚ್ಚಿದವರೆ ಅಲ್ಲಿಂದ ಸ್ಥಳ ಖಾಲಿ ಮಾಡುತ್ತಾರೆ. ಜಾತ್ರೆಯ ಕಾಲದಲ್ಲಿ ಬಂದ ಭಕ್ತರಿಗೆ ತೊಂದರೆಯಾಗಬಾರೆಂಬ ಕಾರಣಕ್ಕೆ ಅವನ್ನು ಅಲ್ಲಿಂದ ಪಂಜುಹಚ್ಚಿ ಎಬ್ಬಿಸಿರುತ್ತಾರೆ.

ಬೆಟ್ಟದ ಛಾವಣಿಯ ಕೆಳಗಡೆ ಸುಮಾರು ಒಂದು ಗೇಣು ಅಗಲ, ಅರ್ಧ ಮೊಳದಷ್ಟು ಎತ್ತರವಾದ, ಆಯತಾಕಾರದ ಪಡಿಯ ರೂಪದಲ್ಲಿ ಇರುವವಳೆ ತಾಯಿ ಪಡಿಯಮ್ಮ. ಇದೇ ಪಡಿಯಮ್ಮನ ಮೂಲರೂಪ. ಮೊದಲು ಇದೇ ರೀತಿಯಿದ್ದ ತಾಯಿಗೆ ಪೂಜೆ ಸಲ್ಲುತ್ತಿತ್ತು. ಇತ್ತೀಚೆಗೆ ಅಲಂಕಾರ ಮಾಡುವುದಕ್ಕಾಗಿ ಪಡಿಯ ರೂಪದಲ್ಲಿದ್ದ ದೇವಿಗೆ ಕಣಬಟ್ಟು ಮತ್ತು ಮೂಗಿನ ರೂಪದ ಆಕೃತಿ ಮಾಡಿದ್ದಾರೆ. ಅದರ ಮೇಲೆ ದೇವಿಗೆ ಬೆಳ್ಳಿಯ ಕಣ್ಣುಬಟ್ಟು, ನತ್ತು ಹಾಕಿರುತ್ತಾರೆ. ನತ್ತಿನ ಕೆಳಗಡೆ ತಾಯಿಗೆ ಬೆಳ್ಳಿಯ ಕ್ವಾರಿ ಮೀಸೆಯನ್ನು ಹಾಕಿರುತ್ತಾರೆ. ಹರಕೆ ಹೊತ್ತ ಭಕ್ತರು, ದೇವಿಗೆ ಬೆಳ್ಳಿಯ ಹಸ್ತ ಕೈ ಕಡಗವನ್ನು ಕೊಟ್ಟಿದ್ದಾರೆ. ಅವನ್ನು ಹಾಕುವುದಕ್ಕಾಗಿ ಇತ್ತೀಚೆಗೆ ಕಟ್ಟೆಗೆ ಕೈಗಳನ್ನು ಮಾಡಿಸಿ ದೇವಿಯ ಮೂರ್ತಿಗೆ ಅಳವಡಿಸಲಾಗಿದೆ. ಆ ಕೈಗಳಿಗೆ ಬೆಳ್ಳಿಯ ಹಸ್ತವನ್ನು ಜೋಡಿಸಿ ಅದಕ್ಕೆ ಬೆಳ್ಳಿಯ ಕೈ ಕಡಗಳನ್ನು, ಹಸಿರು ಬಳೆಗಳನ್ನು ಉಡಿಸಿದ್ದಾರೆ. ಒಂದು ಕಟ್ಟಿಗೆಯ ಚೌಕಕ್ಕೆ ದೇವಿಯ ಬೆಳ್ಳಿಯ ಪಾದಗಳನ್ನು ಜೋಡಿಸಿ ಅವನ್ನು ದೇವಿಯ ಪಾದದ ಬಳಿ ಪ್ರತಿಷ್ಠಾಪಿಸಲಾಗಿದೆ. ಹೀಗೆ ಪಡಿಯ ರೂಪದಲ್ಲಿದ್ದ ಪಡಿಯವ್ವ ಮೂರ್ತರೂಪ ತಳಿದಿದ್ದಾಳೆ.

ಹೀಗೆ ಮೂರ್ತರೂಪ ಪಡೆದ ಪಡಿಯವ್ವನಿಗೆ ಹಸಿರು ಸೀರೆ, ಹಸಿರು ಖಣ ಉಡಿಸಿ, ಹಸಿರು ಬಳೆ ತೊಡಿಸಲಾಗುತ್ತದೆ. ನಂತರ ತಾಯಿಗೆ ಹೂವು ಏರಿಸಿ, ಹಾರ ಹಾಕಿ ಅಲಂಕಾರ ಮಾಡಲಾಗುತ್ತದೆ. ಕುಂಕುಮವನ್ನು ಎರಡು ಸಾಲುಗಳಾಗಿ ಹಚ್ಚಲಾಗುತ್ತದೆ. ಆ ಎರಡು ಸಾಲುಗಳ ಮಧ್ಯದಲ್ಲಿ ಅರಿಶಿನ(ಬಂಡಾರ)ವನ್ನು ಹಚ್ಚುತ್ತಾರೆ. ಇದು ಬಟ್ಟಿನ ರೂಪದಲ್ಲಿ (ದುಂಡಗೆ) ಇರದೆ ವಿಭೂತಿ ಹಚ್ಚುವ ಹಾಗೆ ಅಡ್ಡಕ್ಕೆ ಗೆರೆರೂಪದಲ್ಲಿರುತ್ತದೆ. ಪಾದಗಟ್ಟೆಯಲ್ಲಿರುವ ದೇವಿಗೂ ಇದೇ ರೀತಿಯಲ್ಲಿ ಹಚ್ಚಲಾಗುತ್ತದೆ. ಹೀಗೆ ಅಲಂಕೃತಗೊಂಡ ದೇವಿಗೆ ಉಡಿತುಂಬಿ, ದೀಪಬೆಳಗಿ ಪೂಜೆ ನೆರೆವೇರಿಸಲಾಗುತ್ತದೆ. ದಟ್ಟವಾದ ಕಾನನದ ಸುಂದರ ಪರಿಸರ ಮಧ್ಯ ಹೀಗೆ ಅಲಂಕೃತಗೊಂಡ ದೇವಿಯನ್ನು ನೋಡಿ ಎಂತಹ ನಾಸ್ತಿಕರಿರಾದರೂ ಒಂದು ಕ್ಷಣ ಭಕ್ತಿ ಹುಟ್ಟಿ ದೇವಿಯ ಮೂರ್ತಿಗೆ ಕೈಮುಗಿಯದೆ ಹೋಗುವುದಿಲ್ಲ.

ಪಡಿಯಮ್ಮ ದೇವಿಯನ್ನು ಮೊದಲು ಚಿಕ್ಕ ಕಟ್ಟೆಯ ಮೇಲೆ ದಿಗಂಬರೇಶ್ವರರು ಪ್ರತಿಷ್ಠಾಪಿಸಿದರು. ಸುಮಾರು ಮೂವತ್ತು ವರ್ಷದ ಹಿಂದೆ ಶಾಲಿವಾಹನಶಕೆ ೧೯೦೨ (೧೯೮೦ ಫೆಬ್ರವರಿ ೧೭)ರಲ್ಲಿ ದೇವಿಗೆ ಎತ್ತರವಾದ ಸುಂದರವಾದ ಕಟ್ಟೆಯನ್ನು ಕಟ್ಟೆ ಆ ಕಟ್ಟೆಯ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಕಟ್ಟೆಯ ಮೇಲೆ ದೇವಿಯ ಹಿಂದುಗಡೆ ಒಂದು ಎತ್ತರವಾದ ಕಲ್ಲನ್ನು ದೇವಿಯ ಆಧಾರಕ್ಕೆ ಹಾಕಲಾಗಿದೆ. ದೇವಿಯ ಮುಂದೆ ಅದೇ ಕಟ್ಟೆಯ ಮೇಲೆ ಕಮಾನಿನ ಆಕಾರದಲ್ಲಿ ಸಿಮೆಂಟ್‌ ಕಂಬಗಳನ್ನು ನಿಲ್ಲಿಸಿ ದೇವಿಗೆ ಮಂಟಪವನ್ನು ನಿರ್ಮಿಸಲಾಗಿದೆ. ಕಟ್ಟೆಯ ಮೇಲೆ ಟೈಲ್ಸ್‌ ಜೋಡಿಸಲಾಗಿದೆ. ಕಟ್ಟೆಗೆ ಪೇಂಟ್‌ ಹಚ್ಚಿ ಚಿತ್ರಬಿಡಿಸಿ ಅಲಂಕಾರಗೊಳಿಸಲಾಗಿದೆ. ಕಟ್ಟೆಯ ಕೆಳಗಡೆ ನುಣುಪುಗಲ್ಲು ಜೋಡಿಸಲಾಗಿದೆ. ಆದರೆ ಗುಡ್ಡದ ಮೇಲೆ ಬಿದ್ದ ಧಾರಾಕಾರ ನೀರಿನಿಂದ ಬಹುತೇಕ ಅವು ಹಾಳಾಗಿವೆ. ತಾಯಿಯ ಎದುರಿಗೆ ಎತ್ತರವಾದ ದೀಪದ ಕಂಬವಿದ್ದು ಅಲ್ಲಿ ದೊಡ್ಡದಾದ ಹಣತೆಯನ್ನಿಡಲಾಗಿದೆ. ತಾಯಿಯ ಪಕ್ಕದಲ್ಲಿರುವ ನಂದಾದೀಪ ಮತ್ತು ದೀಪದ ಕಂಬ ಎರಡು ಕಡೆಗಳಲ್ಲಿಯೂ ದೇವಿಗೆ ದೀಪವನ್ನು ಹಚ್ಚಲಾಗುತ್ತದೆ.

ಈಗ ಪಡಿಯಮ್ಮನಿಗೆ ನಿತ್ಯವು ಕೃಷ್ಣಾನದಿಯ ನೀರಿನಿಂದ ಅಭಿಷೇಕ ನಡೆಯುತ್ತದೆ. ಅಭಿಷೇಕಕ್ಕೆ ಮುನ್ನ ಕೊಬ್ಬರಿಎಣ್ಣೆ ಮತ್ತು ಸೀಗೆಕಾಯಿಯಿಂದ ದೇವಿಗೆ ಮಜ್ಜನ ನಡೆಯುತ್ತದೆ. ನಂತರ ಪಂಚಾಮೃತ ಅಭಿಷೇಕ ನಡೆಯುತ್ತದೆ. ಈಗ ಪ್ರತಿ ಅಮವಾಸ್ಯೆಯಂದು ಪಡಿಯಮ್ಮನಿಗೆ ರುದ್ರಾಭಿಷೇಕ ನಡೆಯುತ್ತದೆ. ನಾಗರಾಳದ ೧೨ ಮನೆತನದವರು ಅಮವಾಸ್ಯೆಗೆ ದೇವಿಯ ರುದ್ರಾಭಿಷೇಕದ ಜವಾಬ್ದಾರಿ ಹೊತ್ತಿದ್ದಾರೆ. ನಿರ್ದಿಷ್ಟ ಅಮವಾಸ್ಯೆಗೆ ನಿರ್ದಿಷ್ಟ ಮನೆತನದವರಿಂದಲೇ ಅಭಿಷೇಕ ನಡೆಯುತ್ತದೆ.

ಪಡಿಯಮ್ಮನ ಎಡ ಭಾಗದಲ್ಲಿರುವವನೇ ಕಂಬೋಗಿ ಹಣಮಂತ ದೇವರು. ಯೋಗಿಕೊಳ್ಳದಿಂದ ಆರಾಧ್ಯದೇವಿಯನ್ನು ಕರೆದುಕೊಂಡು ಬಂದು ಪ್ರತಿಷ್ಠಾಪಿಸಿದವರು ದಿಗಂಬರೇಶ್ವರರು. ಆರಾಧ್ಯದೇವಿಯ ದರ್ಶನ ನಿತ್ಯವಾಗುವಂತೆ ತಮ್ಮ ಮನೆ ದೇವರಾದ ಕಂಬೋಗಿ ಹಣಮಂತದೇವರ ನಿತ್ಯ ದರ್ಶನವಾಗಬೇಕೆಂದು ಬಯಸುತ್ತಾರೆ. ಅದಕ್ಕಾಗಿ ದೇವಿಯ ಪಕ್ಕದಲ್ಲಿ ಹಣವಂತ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಪಡಿಯಮ್ಮನ ಪಕ್ಕದಲ್ಲಿರುವ ಎತ್ತರವಾದ ಬಂಡೆಯಲ್ಲಿ ಹಣಮಂತದೇವರು ಮೂರ್ತಿರೂಪ ಪಡೆದಿದ್ದಾನೆ. ಇಲ್ಲಿ ತಾಯಿಯ ಜೊತೆಗೆ ಹಣಮಂತದೇವರಿಗೂ ನಿತ್ಯಪೂಜೆ ನಡೆಯುತ್ತದೆ. ಹಣಮಂತ ದೇವರನ್ನು ದಾಟಿ ಮುಂದೆ ಹೋದರೆ ನಮಗೆ ಸಿಗುವವಳೆ ಹೊಳೆ ಗಂಗವ್ವ ಅವಳು ಪಡಿಯಮ್ಮನಂತೆ ಪಡಿಯಲ್ಲಿಯೇ ರೂಪಗೊಂಡಿದ್ದಾಳೆ. ಅವಳಿಗೂ ನಿತ್ಯಪೂಜೆ ಸಲ್ಲುತ್ತದೆ.

ಪಡಿಯಮ್ಮನ ಬೆಟ್ಟದ ಮೇಲೆ ನಿಂತು ನೋಡಿದರೆ ನಮಗೆ ಕೃಷ್ಣಾ ನದಿಯ ದರ್ಶನವಾಗುತ್ತದೆ. ನಮ್ಮ ಕಣ್ಣಿನ ದೃಷ್ಟಿ ಹೋದಷ್ಟು ದೂರವು ಕೃಷ್ಟ್ಣಾ ನಿದಯನ್ನು, ಕೃಷ್ಟ್ಣೆಯ ಹೊರಳುವಿಕೆಯ ಅಂಕುಡೊಂಕನ್ನು ಕಾಣಬಹುದು. ಪಡಿಯಮ್ಮನ ಸೀಮೆಗೆ ಸೇರುವ ಎಲ್ಲಾ ಗ್ರಾಮಗಳು ಈ ಬೆಟ್ಟದ ಮೇಲೆ ನಿಂತರೆ ಗೋಚರವಾಗುತ್ತವೆ.

ಬೆಟ್ಟದ ಮೇಲಿರುವ ಪರಿಸರವು ತಪಸ್ಸು ಮಾಡುವವರಿಗೆ ಹೇಳಿಮಾಡಿಸಿದಂತಹ ಸ್ಥಳ. ಈ ಸ್ಥಳಕ್ಕೆ ಮಾರುಹೋಗಿ ದಿಗಂಬರೇಶ್ವರರು ತಪಸ್ಸು ಮಾಡಲು ಈ ಸ್ಥಳ ಆರಿಸಿಕೊಂಡರು. ಅವರನ್ನು ಸೆಳೆದಂತೆಯೇ ಅನುಷ್ಠಾನ ಮಾಡುವ ಸ್ವಾಮಿಗಳನ್ನು ಈ ಬೆಟ್ಟ ತನ್ನತ್ತ ಸೆಳೆಯುತ್ತದೆ. ಹೀಗಾಗಿ ಅನೇಕ ಜನ ಸ್ವಾಮಿಗಳಿಗೆ, ಇಲ್ಲಿಗೆ ಬಂದು ಅನುಷ್ಠಾನ ಮಾಡುತ್ತಾರೆ. ಅಂತವರಿಗೆ ಅನುಕೂಲವಾಗಲೆಂದು ಇಲ್ಲಿ ಹಣಮಂತ ದೇವರ ಪಕ್ಕದಲ್ಲಿ ಒಂದು ಕೋಣೆಯನ್ನು ನಿರ್ಮಿಸಲಾಗಿದೆ. ಅದರಲ್ಲಿಯೇ ಸ್ವಾಮಿಗಳು ಅನುಷ್ಠಾನ ಕೈಗೊಳ್ಳುತ್ತಾರೆ. ಅನುಷ್ಠಾನ ಮಾಡುವ ಸ್ವಾಮಿಗಳು ಬರುವ ಭಕ್ತರಿಗೆ ಅನುಕೂಲವಾಗಲೆಂದು ದಿಗಂಬರೇಶ್ವರ ಮಠದ ಹಿಂದಿನ ಶೇಷಪ್ಪಯ್ಯ ಸ್ವಾಮಿಗಳು ಅಲ್ಲಿ ಭಾವಿಯನ್ನು ತೋಡಿಸಿದರು. ಆದರೆ ಅಲ್ಲಿ ನೀರು ಬರಲಿಲ್ಲ. ಈಗ ಭಕ್ತರ ಅನುಕೂಲಕ್ಕಾಗಿ ಪಾದಗಟ್ಟಿಯ ಹತ್ತಿರ ಕೊಳವೆ ಭಾವಿ(ಬೋರ್ವೆಲ್‌) ಹಾಕಲಾಗಿದೆ. ಪಡಿಯಮ್ಮನ ದೇವಸ್ಥಾನದ ಹತ್ತಿರ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಪಾದಗಟ್ಟಿಯ ಹತ್ತಿರದ ಕೊಳವೆ ಬಾವಿಯಿಂದ ಕೊಳವೆಗಳ ಮೂಲಕ ಟ್ಯಾಂಕ್‌ಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಮೊದಲು ದೇವಾಲಯದ ಹತ್ತಿರ ನೀರಿನ ವ್ಯವಸ್ಥೆ ಇಲ್ಲದ್ದರಿಂದ ಭಕ್ತರು ನಾಗರಾಳ ಗ್ರಾಮದಿಂದಲೇ ನೀರನ್ನು ಹೊತ್ತುಕೊಂಡು ಹೋಗಬೇಕಾಗಿತ್ತು. ಅಲ್ಲಿ ಉಪಹಾರ, ಪ್ರಸಾದ ಮಾಡಲು ಪ್ರಶಸ್ತವಾದ ಸ್ಥಳವಿದ್ದರೂ ನೀರಿನ ತೊಂದರೆಯಿಂದ ಭಕ್ತರು ಉಪಹಾರ, ಪ್ರಸಾದ ಮಾಡಲು ಹಿಂಜರೆಯುತ್ತಿದ್ದರು. ಆದರೆ ಈಗ ಅಲ್ಲಿ ನೀರಿನ ಇರುವುದರಿಂದ ಭಕ್ತರು ಬುತ್ತಿಕಟ್ಟಿಕೊಂಡು ಬಂದು ಪ್ರಸಾದ ಮುಗಿಸಿಯೇ ಹೋಗುತ್ತಾರೆ. ಇವತ್ತು ಪಡಿಯಮ್ಮನ ದೇವಸ್ಥಾನ ಭಕ್ತರ ಪಾಲಿಗೆ ವನ ಭೋಜನದ ಸ್ಥಳವಾಗಿದೆ.

. ಕಪ್ಪರ ಪಡಿಯಮ್ಮನ ಮೂಲ

ಪಡಿಯಮ್ಮನ ಮೂಲ ಸ್ಥಳ ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲೂಕಿನ ಯೋಗಿಕೊಳ್ಳ. ಅವಳ ಮೂಲ ಹೆಸರು ಲಕ್ಷ್ಮಿದೇವಿ. ಗೋಕಾಕ್‌ ನಗರದ ಪಶ್ಚಿಮ ಘಟ್ಟಗಳ ಮಧ್ಯ ಅಂಕುಡೊಂಕಾಗಿ ಹರಿಯುವ ಮಾರ್ಕಂಡೇಯ ನದಿಯ ಕೊಳ್ಳ ಪ್ರದೇಶವು ಧ್ಯಾನವನ್ನು ತಪಸ್ಸನ್ನು ಮಾಡುವ ಸಾಧಕರಿಗೆ ಹೇಳಿ ಮಾಡಿಸಿದ ಸ್ಥಳ. ಇಂತಹ ನಿರ್ಜನವಾದ ಸ್ಥಳದಲ್ಲಿ ದಿಗಂಬರೇಶ್ವರ ಯೋಗಿಗಳು ತಮ್ಮ ಶಿಷ್ಯರಾದ ನಿರ್ವಾಣೇಶ್ವರ ಮತ್ತು ಮಲ್ಲಿಕಾರ್ಜುನನೊಂದಿಗೆ ತಪಸ್ಸು ಮಾಡಿದರು. ಹೀಗೆ ಈ ಯೋಗಿಗಳು ಇಲ್ಲಿ ತಪಸ್ಸು ಮಾಡಿದ್ದರಿಂದ ಈ ಕೊಳ್ಳಕ್ಕೆ ಯೋಗಿಕೊಳ್ಳ ಎಂಬ ಹೆಸರು ಬಂತು. ಇಂತಹ ನಿರ್ಜನವಾದ ಪ್ರದೇಶದಲ್ಲಿ ಗೂಗೆಗಳು ಹೆಚ್ಚಾಗಿದ್ದು ರಾತ್ರಿಯೆಲ್ಲಾ ಕೂಗಿ ಒಂದು ರೀತಿಯ ಭಯಾನಕತೆಯನ್ನು ಉಂಟುಮಾಡುತ್ತಿದ್ದವು. ಹಾಗಾಗಿ ಗೂಗೆಗಳು ಇಲ್ಲಿ ಹೆಚ್ಚಾಗಿ ವಾಸಿಸುವುದರಿಂದ ಈ ಪ್ರದೇಶವನ್ನು ‘ಗೂಗಿಕೊಳ್ಳ’ವೆಂದು ಸಹ ಕರೆಯುತ್ತಾರೆ.

ಅಂತಹ ಯೋಗಿಕೊಳ್ಳದಲ್ಲಿ ನೆಲೆಸಿರುವ ತಾಯಿಯೇ ಲಕ್ಷ್ಮೀದೇವಿ. ಲಕ್ಷ್ಮೀದೇವಿಯು ಇಲ್ಲಿ ತಪಸ್ಸು ಮಾಡುತ್ತಿದ್ದ ದಿಗಂಬರೇಶ್ವರ ಸ್ವಾಮಿಗಳಿಗೆ ಒಲಿದು ಅವರೊಂದಿಗೆ ನಾಗರಾಳಕ್ಕೆ ಬಂದು ನೆಲೆಸಿದ ನಂತರ ಅವಳೇ ಕಪ್ಪರ ಪಡಿಯಮ್ಮನೆಂದು ಹೆಸರು ಗಳಿಸುತ್ತಾಳೆ. ಹಾಗಾಗಿ ನಾಗರಾಳದ ಕಪ್ಪರ ಪಡಿಯಮ್ಮ ಮೂಲತಃ ಯೋಗಿಕೊಳ್ಳದ ಲಕ್ಷ್ಮೀದೇವಿಯೇ ಆಗಿದ್ದಾಳೆ ಎಂಬುದು ಪಡಿಯಮ್ಮನ ಭಕ್ತರ ನಂಬಿಕೆ. ದಿಗಂಬರೇಶ್ವರ ಮಠಗಳಿರುವಲೆಲ್ಲಾ ದೇವಿಯ ಗುಡಿಗಳಿವೆ. ನಾಗರಾಳ ಮತ್ತು ಸಿದ್ದಾಪೂರವನ್ನು ಹೊರತುಪಡಿಸಿದರೆ ಇತರೆ ಕಡೆಗಳಲ್ಲಿ ದಿಗಂಬರೇಶ್ವರ ಮಠದಲ್ಲಿರುವ ದೇವಿಯನ್ನು ಲಕ್ಷ್ಮಿದೇವಿ ಎಂಬ ಹೆಸರಿನಿಂದಲೇ ಕರೆಯುತ್ತಾರೆ. ಹಾಗೆಯೇ ಸವದತ್ತಿ ಎಲ್ಲಮ್ಮ, ಚಿಂಚಲಿ ಮಾಯಮ್ಮ, ಸಿರಸಿ ಮಾರಿಕಾಂಬಾ, ಪಡಿಯಮ್ಮನ ಸೋದರಿಯರೆಂದು ಹೇಳಲಾಗುತ್ತದೆ. ಎಲ್ಲ ದೇವತೆಗಳಿಗೂ ಪ್ರಕೃತಿಯ ಮೂಲ. ಇವರೆಲ್ಲರೂ ಪ್ರಕೃತಿ ಮಾತೆಯ ಮಕ್ಕಳಾದುದರಿಂದ ಇವರೆಲ್ಲರು ಸಹೋದರಿಯರೆಂಬ ನಂಬಿಕೆ ಇರಬಹುದು.

. ಕಪ್ಪರ ಪಡಿಯಮ್ಮ ನಾಗರಾಳ ಗ್ರಾಮದಲ್ಲಿ ನೆಲೆನಿಂತದ್ದು

ಯೋಗಿಕೊಳ್ಳದೆ ಲಕ್ಷ್ಮೀದೇವಿ ನಾಗರಾಳ ಗ್ರಾಮದಲ್ಲಿ ಕಪ್ಪರ ಪಡಿಯಮ್ಮ ಎಂಬ ಹೆಸರಿನಿಂದ ನೆಲೆಸುವ ಮೂಲಕ ಸಾರ್ವಜನರಿಂದ ಪೂಜೆ ಪಡೆಯುತ್ತಾಳೆ. ಅವಳು ಯೋಗಿಕೊಳ್ಳದಿಂದ ದೂರದ ನಾಗರಾಳಕ್ಕೆ ಬಂದು ನೆಲೆನಿಲ್ಲುವುದಕ್ಕು ಒಂದು ಹಿನ್ನೆಲೆ ಇದೆ.

ಅವಧೂತ ಪರಂಪರೆಗೆ ಸೇರಿದ ದಿಗಂಬರೇಶ್ವರರು ನಿರ್ಜನ ಪ್ರದೇಶವಾದ ಯೋಗಿಕೊಳ್ಳದಲ್ಲಿ ತಪಸ್ಸನ್ನು ಆಚರಿಸುತ್ತಾರೆ. ಅವರ ಉಗ್ರ ಮತ್ತು ಕಠೋರವಾದ ತಪಸ್ಸು, ದೃಢ ಮತ್ತು ನಿಶ್ಚಲವಾದ ಭಕ್ತಿಯನ್ನು ಮೆಚ್ಚಿ ಯೋಗಿಕೊಳ್ಳದೆ ಅಧಿದೇವತೆಯಾದ ಲಕ್ಷ್ಮೀದೇವಿ ಅವರಿಗೆ ಪ್ರತ್ಯಕ್ಷವಾಗುತ್ತಾಳೆ. ಸ್ವಾಮಿಗಳು “ತಾಯಿ ಆಶೀರ್ವಾದ ಮಾಡು” ಎಂದು ಬೇಡಿದಾಗ, ಅವರ ಭಕ್ತಿಯನ್ನು ಮೆಚ್ಚಿದ ಲಕ್ಷ್ಮೀ”ದೇವಿ “ನಾ ಸದಾ ನಿನ್ನ ಜೊತೆಯಲ್ಲಿಯೇ ಇರುತ್ತೇನೆ. ನೀನು ಎಲ್ಲಿಯೇ ಹೋದರು ನಾನು ನಿನ್ನ ಜೊತೆಯೇ ಆಗಮಿಸುತ್ತೇನೆ” ಎಂದು ಅಭಯದ ಮಾತನ್ನಾಡುತ್ತಾಳೆ. ಹೀಗೆ ದಿಗಂಬರೇಶ್ವರ ಸ್ವಾಮಿಗಳಿಗೆ ಲಕ್ಷ್ಮೀದೇವಿಯ ಸಾಕ್ಷಾತ್ಕಾರವಾಗುತ್ತದೆ.

ಸಾಂಕೇತಿಕವಾಗಿ ನೋಡಿದರೆ ಲಕ್ಷ್ಮೀ ಎಂದರೆ ಸಂಪತ್ತು. ಎಲ್ಲಿ ಸನ್ಯಾಸಿಗಳು, ಸ್ವಾಮಿಗಳು, ಸಾಧು, ಸತ್ಪುರುಷರು ಇರುತ್ತಾರೋ ಅಲ್ಲಿ ಸಂಪತ್ತಿಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಭಕ್ತರು ಅವರಿಗೆ ಬೇಕಾದ ಆಹಾರ ಧಾನ್ಯ, ವಸ್ತ್ರ ಮುಂತಾದ ಅಗತ್ಯ ವಸ್ತುಗಳನ್ನು ಪೂರೈಸುತ್ತಾರೆ. ಹಾಗೆಯೇ ಹಣವನ್ನು ದಕ್ಷಿಣೆ ಎಂಬ ಹೆಸರಿನಿಂದ ಕಾಣಿಕೆಯಾಗಿ ಸಲ್ಲಿಸುತ್ತಾರೆ. ಇದು ಇವತ್ತಿಗೂ” ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಲೋಕಕಲ್ಯಾಣಕಾರ್ಯ ಮಾಡುವ ಸ್ವಾಮಿಗಳಿಗೆ ದಕ್ಷಿಣ ನೀಡಿದರೆ, ಆ ಕಲ್ಯಾಣ ಕಾರ್ಯದಲ್ಲಿ ತಾವೂ ಭಾಗಿಯಾದ ಹಾಗೆ ಆಗುತ್ತದೆ ಎಂದು ನಂಬಿರುವ ಭಕ್ತರು ಇವತ್ತಿಗೂ ಸಾಧು ಸಂತರಿಗೆ ದಕ್ಷಿಣೆಯನ್ನು ನೀಡುತ್ತಾರೆ. ಹಾಗಾಗಿ ಅವರಿದ್ದಲ್ಲಿ ಭಕ್ತರಿಂದ ಯಾವುದೇ ರೀತಿಯಾದ ಹಣದ ಕೊರತೆ ಇರುವುದಿಲ್ಲ. ಹಾಗೆಯೇ ಮಹಾಪುರುಷರಿಂದ ದಿಗಂಬರೇಶ್ವರ ಸ್ವಾಮಿಗಳು ನೆಲೆಸಿರುವಲ್ಲಿ ಭಕ್ತರ ಕಾಣಿಕೆಯಿಂದ ಯಾವುದೇ ರೀತಿಯಲ್ಲಿ ಹಣದ ಕೊರತೆ ಇರಲಿಲ್ಲ. ಅವರಿದ್ದಲ್ಲಿ ಸಂಪತ್ತು ಹೇರಳವಾಗಿದ್ದಿತು. ಅದನ್ನು ನಮ್ಮ ಜನಪದರು ಲಕ್ಷ್ಮೀದೇವಿ ಆ ರೀತಿ ವರಕೊಟ್ಟಳೆಂದು ಅವರ ಜೊಇತೆ ಸದಾ ಸಂಚರಿಸಿದಳೆಂದು ನಂಬಿರಲುಬಹುದು ಎಂದು ಗ್ರಾಮದ ವಿದ್ವಾಂಸರು ಹೇಳುತ್ತಾರೆ.

ಈವರೆಗೂ ನಾಗರಾಳದ ದಿಗಂಬರೇಶ್ವರ ಮಠ ಸಂಪದ್ಭರಿತ ಮಠವಾಗಿದೆ. ಅದು ಸರಕಾರದಿಂದ ಯಾವ ಸಹಾಯ ಸೌಲಭ್ಯವನ್ನು ಪಡೆದಿಲ್ಲ. ಈ ಮಠ ನಿಂತಿರುವುದು ಭಕ್ತರು ನೀಡುವ ಕಾಣಿಕೆಗಳಿಂದ. ಇತ್ತೀಚೆಗೆ ರಾಜಕಾರಣಿಗಳೊಬ್ಬರು ಮಠಕ್ಕೆ ಹಣದ ನೀಡಲು ಬಂದಾಗ, ಮಠ ಅದನ್ನು ಸ್ವೀಕರಿಸದೆ ಆ ಹಣವನ್ನು ಗ್ರಾಮದಲ್ಲಿ ಅವಶ್ಯಕತೆ ಇರುವ ಇತರ ಕಾರ್ಯಗಳಿಗೆ ಬಳಸಲು ತಿಳಿಸಿತು. ಇದನ್ನು ನೋಡಿದಲ್ಲಿ ದಿಗಂಬರೇಶ್ವರ ಮಹಾಸ್ವಾಮಿಗಳಿದ್ದಲ್ಲಿ ಲಕ್ಷ್ಮೀ (ಸಂಪತ್ತು) ನೆಲೆಸಿದ್ದಳೆಂದು ಒಪ್ಪಲೇಬೇಕಾಗುತ್ತದೆ ಎಂಬುದು ಗ್ರಾಮಸ್ಥರ ನಿಲುವು.

ಆದರೆ ಶ್ರಮಸಂಸ್ಕೃತಿಯು ಸಂಪತ್ತಿನ ಕ್ರೋಢೀಕರಣದ ವಿರೋಧಿಯಾಗಿದೆ. ಉಪಭೋಗ ಸಂಸ್ಕೃತಿಯಲ್ಲಿ ಸಂಪತ್ತಿನ ಕ್ರೋಢೀಕರಣವನ್ನು ಕಂಡರೆ ಶ್ರಮಸಂಸ್ಕೃತಿಯು ಸಂಪತ್ತಿನ ಕ್ರೋಢೀಕರಣವನ್ನು ಕಂಡರೆ ಶ್ರಮಸಂಸ್ಕೃತಿಯು ಸಂಪತ್ತಿನ ಕ್ರೋಢೀಕರಣವನ್ನು ಮಹಾಪಾಪ ಎನ್ನುತ್ತದೆ. ಎಲ್ಲಿ ಸಂಪತ್ತಿನ ಕ್ರೋಢೀಕರಣವಾಗುತ್ತದೋ, ಅಲ್ಲಿ ಉಪಭೋಗಕ್ಕೆ ಅವಕಾಶವಿರುತ್ತದೆ. ಸಂಪತ್ತು ಎನ್ನುವುದು ಕ್ರೋಢೀಕರಣವಾಗಿ ವ್ಯಕ್ತಿಕೇಂದ್ರಿತವಾದಾಗ ಅದು ದುರುಪಯೋಗವಾಗುತ್ತದೆ. ಆ ಸಂಪತ್ತು ಸಾಮುದಾಯಿಕವಾದಾಗ ಅಲ್ಲಿ ಅದರ ಸದುಪಯೋಗವಾಗುತ್ತದೆ.

ನಾಗರಾಳ ದಿಗಂಬರೇಶ್ವರ ಮಠದಲ್ಲಿ ಸಂಪತ್ತಿನ ಕ್ರೋಢೀಕರಣ ಕಾಣುವುದಿಲ್ಲ. ಅಲ್ಲಿ ಸಂಪತ್ತಿನ ಸಾಮುದಾಯಿಕತೆಯನ್ನು ಕಾಣುತ್ತೇವೆ. ಅಲ್ಲಿ ಭಕ್ತರು ತಮ್ಮಲ್ಲಿದ್ದುದನ್ನು ಅರ್ಪಿಸುತ್ತಾರೆ. ಅದು ಅಲ್ಲಿಗೆ ಬಂದ ಭಕ್ತರ ಸಲುವಾಗಿಯೇ ಬಳಕೆಯಾಗುತ್ತದೆ. ಅರ್ಪಣೆ ದುರಪಯೋಗವಾಗುವ ಸಾಧ್ಯತೆ ಇಲ್ಲಿ ಇಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಭಕ್ತರಿಂದ ಬಂದದ್ದನ್ನು ಭಕ್ತರಿಗಾಗಿಯೇ ವಿನಿಯೋಗಿಸಲಾಗುತ್ತದೆ. ಅವಧೂತ ಪರಂಪರೆಯಲ್ಲಿ ಸಂಪತ್ತಿನ ಕ್ರೋಢೀಕರಣ ಇಲ್ಲದಿರುವುದರಿಂದ ಇಲ್ಲಿ ಲಕ್ಷ್ಮೀ ಎಂದರೆ ಸಂಪತ್ತು ಎಂದು ಭಾವಿಸುವುದು ಅಷ್ಟು ಸೂಕ್ತವಲ್ಲವೇನೋ ಎನಿಸುತ್ತದೆ.

ಜೊತೆಗೆ ಹೆಣ್ಣು ಅರಿವಿನ ಪ್ರತಿರೂಪವಾಗಿದ್ದಾಳೆ. ಅರಿವನ್ನು ಹೆಣ್ಣಿಗೆ ಹೋಲಿಸುವ ಪರಂಪರೆಯು ನಮ್ಮ ಶ್ರಮಸಂಸ್ಕೃತಿಯಲ್ಲಿದೆ. ದಿಗಂಬರೇಶ್ವರಿಗೆ ಯೋಗಿಕೊಳ್ಳದಲ್ಲಿರುವಾಗ ಜ್ಞಾನ ಜಾಗೃತವಾಯಿತು. ಅವರ ಆ ಜ್ಞಾನದ ಜಾಗೃತಿಯನ್ನು ಲಕ್ಷ್ಮೀ ಸಾಕ್ಷಾತ್ಕಾರವೆಂದು ಭಾವಿಸಿರಬಹುದು. ಅರಿವಿನ ಸಾಕ್ಷಾತ್ಕಾರ ಮಾಡಿಕೊಂಡ ದಿಗಂಬರೇಶ್ವರರು ಸಮಾಜದ ಕಲ್ಯಾಣಕ್ಕಾಗಿ ದೇಶ ಸಂಚಾರ ಮಾಡಿದರು. ‘ದೇಶ ಸುತ್ತು ಕೋಶ ಓದು’ ಎನ್ನುವ ಮಾತಿನಂತೆ ದೇಶ ಸಂಚಾರ ಮಾಡುತ್ತಾ ಬಂದಂತೆ ಅವರ ಜ್ಞಾನ ಅರಿವುಗಳು ವಿಸ್ತಾರವಾಗುತ್ತಾ ಬಂದಿವೆ. ಕೊನೆಗೆ ನಾಗರಾಳಕ್ಕೆ ಬಂದಾಗ ಅವರು ಪರಿಪೂರ್ಣ ಜ್ಞಾನಿಗಳಾಗಿದ್ದಾರೆ. ಪರಿಪೂರ್ಣತೆಯನ್ನು ಮುಟ್ಟಿದ ಯಾವುದೇ ವಸ್ತುವಾದರೂ ಅದು ತಟಸ್ಥಗೊಳ್ಳುತ್ತದೆ. ಆದರೆ ಅದು ನಾಶವಾಗುವುದಿಲ್ಲ. ನಂತರ ಅದು ಮತ್ತೊಂದು ರೂಪದಲ್ಲಿ ಮರುಜನ್ಮ ಪಡೆಯುತ್ತದೆ. ಶ್ರಮಸಂಸ್ಕೃತಿಯಲ್ಲಿ ನಾಶ ಎನ್ನುವುದೇ ಇಲ್ಲ. ಒಂದರ ಅಂತ್ಯ ಮತ್ತೊಂದರ ಆದಿ. ಹಾಗೆಯೇ ಪರಿಪೂರ್ಣತೆಯನ್ನು ಮುಟ್ಟಿದ ಅವರ ಜ್ಞಾನ ತಟಸ್ಥವಾದುದನ್ನು ಲಕ್ಷ್ಮೀಯು ಅಲ್ಲಿಯೇ ನೆಲೆನಿಂತಳು ಎಂದು ಭಾವಿಸಿರುವ ಸಾಧ್ಯತೆಗಳಿವೆ. ತಟಸ್ಥ ಹೊಂದಿದ್ದು ಮರುಹುಟ್ಟು ಪಡೆಯುವಂತೆ ಪಡಿಯಮ್ಮನಿಂದ ಒಂದು ಸಂಸ್ಕೃತಿ ಹುಟ್ಟಿಕೊಂಡಿದೆ.

ದೇವಿಯ ಸಾಕ್ಷಾತ್ಕಾರವಾದ ನಂತರ ಮತ್ತೇ ಕೆಲವು ದಿನಗಳವರೆಗೆ ಅಲ್ಲಿಯೇ ನೆಲಸಿದ್ಧ ದಿಗಂಬರೇಶ್ವರರು, ತಮ್ಮ ಶಿಷ್ಯರು ಸಂಪೂರ್ಣ ಸಿದ್ಧಿಯನ್ನು ಪಡೆದ ನಂತರ ಅವರನ್ನು ಅಲ್ಲಿಯೇ ಬಿಟ್ಟು ಲೋಕ ಕಲ್ಯಾಣಕ್ಕಾಗಿ ಲೋಕ ಸಂಚಾರ ಹೊರಡುತ್ತಾರೆ. ದಿಗಂಬರೇಶ್ವರ ಸ್ವಾಮಿಗಳು ಯೋಗಿಕೊಳ್ಳವನ್ನು ಬಿಟ್ಟು ಹೊರಟಾಗ “ನೀನು ಎಲ್ಲಿಯೇ ಹೋದರು ನಾನು ಸದಾ ನಿನ್ನೊಂದಿಗೆ ಆಗಮಿಸುತ್ತೇನೆ” ಎಂದು ಮಾತು ಕೊಟ್ಟಿರುವ ಲಕ್ಷ್ಮೀದೇವಿಯು ಅವರೊಂದಿಗೆ ಹೊರಡುತ್ತಾಳೆ. ಆಗ ದಿಗಂಬರೇಶ್ವರರು ಬೇಡವೆಂದು ನಿರಾಕರಿಸಿದಾಗ ಹಠಹಿಡಿದ ಲಕ್ಷ್ಮೀದೇವಿ ‘ನೀನು ಎಲ್ಲಿ ಕೂಡಿಸ್ತಿಯೋ ಅಲ್ಲಿಯೇ ಕೂಡ್ತೀನಿ’ ಎಂದು ಅವರನ್ನು ಒಪ್ಪಿಸಿ ಅವರೊಂದಿಗೆ ಲೋಕ ಸಂಚಾರಕ್ಕೆ ಹೊರಡುತ್ತಾಳೆ. ಭಕ್ತ ಪರಾಧೀನೆಯಾದ ತಾಯಿ ನನ್ನನ್ನು ನಂಬಿದವರನ್ನು, ತನ್ನನ್ನು ಭಕ್ತಿಯಿಂದ ಆರಾಧಿಸುವವರನ್ನು ಕೈಬಿಡದೆ ಸದಾಕಾಲ ಅವರ ಬೆನ್ನ ಹಿಂದೆ ನಿಂತು ಅವರನ್ನು ರಕ್ಷಿಸುತ್ತಾಳೆ ಎನ್ನುವುದಕ್ಕೆ ಈ ಘಟನೆ ಸಾಕ್ಷೀಕರಿಸುತ್ತದೆ.

ಲೋಕ ಸಂಚಾರವನ್ನು ಕೈಗೊಂಡ ದಿಗಂಬರೇಶ್ವರರು ಲಕ್ಷ್ಮೀಯೊಂದಿಗೆ ಸಂಚರಿಸುತ್ತಾ ಹೋದ ಕಡೆಗಳಲ್ಲೆಲ್ಲ ಜನಹಿತ ಕಾರ್ಯಗಳನ್ನು ಪವಾಡಗಳನ್ನು ಮಾಡುತ್ತಾ ತೆರಳುತ್ತಾರೆ. ಯೋಗಿಕೊಳ್ಳದಿಂದ ಹೊರಟ ದಿಗಂಬರೇಶ್ವರರು ಶಿವಾಪೂರ, ಕುಚನೂರು, ಮರೆಗುದ್ದಿ ಮುಂತಾದ ಕಡೆಗಳಲೆಲ್ಲ ಸಂಚಾರ ಮಾಡಿ ಅಲ್ಲಿ ಅನೇಕ ಪವಾಡಗಳನ್ನು ಮೆರೆಯುತ್ತಾರೆ. ಮತ್ತೇ ತಮ್ಮ ಸಂಚಾರ ಮುಂದುವರೆಸಿ ಮರೆಗುದ್ದಿಯಿಂದ ಹೊರಟ ದಿಗಂಬರೇಶ್ವರ ಸ್ವಾಮಿಗಳು ಬಂದದ್ದು ಬೀಳಗಿ ತಾಲೂಕಿನ ಯಡಹಳ್ಳಿ ಮೂಲಕ ಸಿದ್ದಾಪೂರ ಗ್ರಾಮಕ್ಕೆ.

ಸಿದ್ಧಾಪೂರಕ್ಕೆ ಬಂದ ದಿಗಂಬರೇಶ್ವರರು, ಬಹಳ ದಿನಗಳ ಕಾಲ ಅಲ್ಲಿಯೇ ನೆಲೆನಿಂತು ಅಲ್ಲಿಯೂ ತಮ್ಮ ಲೋಕ ಕಲ್ಯಾಣ ಕಾರ್ಯ ಪವಾಡಗಳನ್ನು ಮುಂದುವರೆಸುತ್ತಾರೆ. ಅನೇಕ ಜನರ ಕಷ್ಟಗಳನ್ನು ಪರಿಹರಿಸುತ್ತಾರೆ. ಪವಾಡ ಪುರುಷರಾದ ದಿಗಂಬರೇಶ್ವರ ಸ್ವಾಮಿಗಳ ಜನಹಿತ ಕಾರ್ಯಗಳನ್ನು ಮೆಚ್ಚಿದ ಅನೇಕ ಜನ ಇವರ ಭಕ್ತರಾಗುತ್ತಾರೆ. ಯಾವಾಗಲೂ ಇವರ ಸುತ್ತ ಜನ ನೆರೆಯಲು ಪ್ರಾರಂಭವಾಗುತ್ತದೆ. ಯೋಗಿಗಳು ಲೋಕಹಿತಕ್ಕಾಗಿ ಮತ್ತೆ ತಪಸ್ಸನ್ನು ಮಾಡಲು ಬಯಸುತ್ತಾರೆ. ಆದರೆ ಜನನಿಬಿಡಾದ ಗ್ರಾಮ, ಜೊತೆಗೆ ನಿತ್ಯವು ಅವರ ದರ್ಶನಕ್ಕೆ ಬರುವ ಭಕ್ತ ಸಮೂಹದ ನಡುವೆ ಸ್ವಾಮಿಗಳಿಗೆ ಸಿದ್ದಾಪೂರದಲ್ಲಿ ತಪಸ್ಸು ಮಾಡುವುದು ಅಸಾಧ್ಯವಾಗುತ್ತದೆ. ಹೀಗಾಗಿ ನಿರ್ಜನವಾದ ಸ್ಥಳದಲ್ಲಿ, ಏಕಾಂತವಾಗಿ ಕುಳಿತು ತಪಸ್ಸನ್ನು ಆಚರಿಸಲು ನಿರ್ಧರಿಸುತ್ತಾರೆ. ತಮ್ಮ ತಪಸ್ಸಿಗಾಗಿ ಶಾಂತಸ್ಥಳ ಹುಡುಕಲು ಪ್ರಾರಂಭಿಸುತ್ತಾರೆ. ಅವರಿಗೆ ಆಗ ದೊರತದ್ದೇ ನಾಗರಾಳದ ಬೆಟ್ಟ.

ಸಿದ್ದಾಪೂರ ಮತ್ತು ನಾಗರಾಳ ಎರಡು ಗ್ರಾಮಗಳ ಸೀಮೆಗೆ ಸೇರಿದ್ದೆ ಈ ನಾಗರಾಳದ ಬೆಟ್ಟ. ನಾಗರಾಳದ ಗುಡ್ಡವೆಂದೇ ಕರೆಸಿಕೊಳ್ಳುವ ಇದು ದಟ್ಟವಾದ ಕಾನನದ ನಡುವೆ ಇದೆ. ಕಿಕ್ಕಿರಿದು ಬೆಳೆದ ಮರಗಳು, ಸಣ್ಣದಾಗಿ ಹರಿಯುವ ಹಳ್ಳ, ಸದಾ ಹಸಿರಿನಿಂದ ಕಂಗೊಳಿಸುವ ಬೆಟ್ಟ, ಹಕ್ಕಿಗಳ ಕಲರವ, ಜನವಸತಿ ಇಲ್ಲದೆ ಶಾಂತವಾದ, ಮನೋಹರವಾದ ಸ್ಥಳ ನೋಡಿ ಮಾರುಹೋದ ದಿಗಂಬರೇಶ್ವರರು ತಾವು ತಪಸ್ಸನ್ನಾಚರಿಸಲು ಸಿದ್ಧಿಯನ್ನು ಪಡೆಯಲು ಇದೆ ಸೂಕ್ತ ಸ್ಥಳ ಎಂದು ನಿರ್ಧರಿಸುತ್ತಾರೆ. ಆಗ ಸಿದ್ದಾಪೂರವನ್ನು ತೊರೆದು ಈ ಪ್ರಕೃತಿ ದೇವಿಯ ಮಡಿಲಲ್ಲಿ ಬಂದು ನೆಲೆ ನಿಲ್ಲುತ್ತಾರೆ.

ಅಲ್ಲಿಗೆ ಬಂದು ತಪಸ್ಸನ್ನು ಪ್ರಾರಂಭಿಸಿದ ಯತಿಗಳು ಅಲ್ಲಿಯೂ ತಮ್ಮ ಆರಾಧ್ಯದೇವಿ ಲಕ್ಷ್ಮೀದೇವಿಯ ಪೂಜೆಗೆ ಸಿದ್ಧರಾಗುತ್ತಾರೆ. ಆಗ ಅವರಿಗೆ ತಾಯಿ ತಮ್ಮೊಂದಿಗೆ ಬರುವಾಗ ನೀನು ಎಲ್ಲಿ ಕೂಡಸ್ತಿಯೋ ಅಲ್ಲಿಯೇ ಕೂಡ್ತೀನಿ ಎಂದ ಮಾತು ನೆನಪಾಗುತ್ತದೆ. ನಿತ್ಯ ಹಸಿರಿನಿಂದ ಕಂಗೊಳಿಸುವ ಕಾಡು, ಕಡಿದಾದ ಬೆಟ್ಟ, ಹಕ್ಕಿಗಳ ಇಂಚರ, ಹೇಗೆ ರುದ್ರ ರಮಣೀಯವಾದ ಪ್ರದೇಶ ಕಂಡು ತಾಯಿ ನೆಲೆಗೊಳ್ಳಲು ಇದೇ ಸೂಕ್ತ ಸ್ಥಳವೆಂದು ನಿರ್ಧರಿಸುತ್ತಾರೆ. ಅಲ್ಲಿಯೇ ತಾಯಿಯನ್ನು ಪ್ರತಿಷ್ಠಾಪಿಸುತ್ತಾರೆ. ಹೀಗೆ ದಿಗಂಬರೇಶ್ವರರು ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿದ ನಂತರ ಅವಳು ನಾಗರಾಳದ ಆ ಬೆಟ್ಟದಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತಾಳೆ.