. ಲಕ್ಷ್ಮೀದೇವಿ ನಾಗರಾಳದ ಕಪ್ಪರ ಪಡಿಯಮ್ಮನಾದದ್ದು

ಅತ್ಯಂತ ಸುಂದರವಾದ ರಮಣೀಯವಾದ ಪ್ರದೇಶವು ತನ್ನ ತಾಯಿಗೆ ಸಿಕ್ಕಿದ್ದರಿಂದ ಸಂತೋಷಗೊಂಡ ದಿಗಂಬರೇಶ್ವರರು ‘ಎಂತಹ ಅಮೋಘವಾದ ಸ್ಥಳವನ್ನು ಪಡೆದೆಯವ್ವಾ’ ಎಂದು ಭಾವೋದ್ವೇಗಕ್ಕೊಳಗಾಗಿ ಉದ್ಘರಿಸುತ್ತಾರೆ. ಹಾಗೇ ಅವರು ಉದ್ಘಾರವೆತ್ತಿ ‘ಪಡೆದೆಯವ್ವ’ ಎಂದು ಹೇಳಿದ ಪದ ನಂತರ ಜನರ ಬಾಯಿಯಲ್ಲಿ ‘ಪಡದವ್ವ’ ‘ಪಡೆಯವ್ವ’ ಆಗಿ ನಂತರ ‘ಪಡಿಯವ್ವ’, ‘ಪಡಿಯಮ್ಮಕ’ ಎಂದು ರೂಪಾಂತರ ಹೊಂದಿತು. ಲಕ್ಷ್ಮೀದೇವಿ ಪಡಿಯಮ್ಮಳಾದಳು.

ಜೊತೆಗೆ ದೇವಿಯ ದೇವಸ್ಥಾನ ಇರುವುದು ಬೆಟ್ಟದ ಹಾಸು ಪಡೆಗಳ ನಡುವೆ – ಲಕ್ಷ್ಮೀದೇವಿ ಇರುವದು ಪಡೆಯ ರೂಪದಲ್ಲಿ ಹಾಸು ಪಡೆಗಳ ಮಧ್ಯ ಪಡಿಯ ರೂಪದಲ್ಲಿ ಈ ತಾಯಿ ನೆಲೆ ನಿಂತಿರುವುದರಿಂದ ಅವಳನ್ನು ಪಡಯಲ್ಲಿರುವ ಅವ್ವ – ‘ಪಡಿಯವ್ವ, ಪಡಿಯಲ್‌ಇರುವ ಅಮ್ಮ – ಪಡಿಯಮ್ಮ ಎಂದೂ ಸಹ ಕರೆದಿರುವ ಸಾಧ್ಯತೆಗಳಿವೆ. “ಹಾಸುಪಡೆಗಳ ಮಧ್ಯ ಇರುವುದರಿಂದ ಪಡಿಯಮ್ಮನೆಂದು ಹೆಸರುಪಡೆ” ಎಂದು ದಿಗಂಬರೇಶ್ವರರು ತಾಯಿಗೆ ಹೇಳಿದ್ದರೆಂದು ಜನತೆ ಹೇಳುತ್ತಾರೆ.

ಅದಲ್ಲದೆ ‘ಪಡಿ’ ಎನ್ನುವುದಕ್ಕೆ ‘ಅಕ್ಕಿ, ತರಕಾರಿ ಮುಂತಾದ ರೂಪದಲ್ಲಿ ಕೊಡುವ ಭತ್ಯೆ’ ಎಂಬ ಅರ್ಥವು ನಿಘಂಟಿನಲ್ಲಿದೆ. ಹಿಂದೆ ಮಾಂಸಾಹಾರಿಗಳಾದವರು ಕೆಳಜಾತಿಗೆ ಸೇರಿದವರು ದೇವರಿಗೆ ಏನಾದರೂ ಹರಕೆ ಹೊತ್ತು ಸಿದ್ಧಿಸಿದಾಗ ದೇವಿಗೆ ಸೀರೆ, ಖಣದ ಜೊತೆ ನೈವೇದ್ಯವನ್ನು ಕೊಡದೆ ನೈವೇದ್ಯ ಮಾಡಲು ಬೇಕಾದ ಪದಾರ್ಥಗಳನ್ನು ಕಾಳುಕಡಿ ರೂಪದಲ್ಲಿ ದೇವಸ್ಥಾನದ ಪೂಜಾರಿಗಳಿಗೆ ನೀಡಿ ನೀವೆ ಅಡುಗೆ ತಯಾರಿಸಿ ನೈವೇದ್ಯ ಮಾಡಿರಿ ಎಂದು ಕೊಡುವ ಪದ್ಧತಿ ಇತ್ತು. ಹಾಗೆಯೇ ಈ ದೇವಿಗೂ ದವಸ ಧಾನ್ಯಗಳನ್ನು ಕೊಡುವ ಪದ್ಧತಿ ಇದ್ದಿರಬಹುದು. ಹಾಗೆ ಪಡಿಯನ್ನು ಪಡಿಯುವ ಅವ್ವ ಪಡಿಯವ್ವ ಆಗಿರಲೂಬಹುದು.

ಉತ್ತರ ಕರ್ನಾಟಕದಲ್ಲಿ ಈಗಲೂ ಕೆಲವು ದೇವಸ್ಥಾನಗಳಲ್ಲಿ ಕೆಳಜಾತಿಯವರು ಪಡಿ ಕೊಡುವ ಪದ್ಧತಿ ಇದೆ. ಹಾಗೆಯೇ ಕೆಳಜಾತಿಯವರು ಮಾಂಸಹಾರಿಗಳು ತಮ್ಮ ಮನೆಯಲ್ಲೇನಾದರೂ ಶುಭಕಾರ್ಯವಾದಾಗ ತಮ್ಮ ಮನೆಯಲ್ಲಿ ಊಟಮಾಡದ ಮೇಲ್ಜಾತಿಯವರು ತಮಗೆ ಅತ್ಯಂತ ಬೇಕಾದವರು, ಆಪ್ತರು ಆಗಿದ್ದರೆ ಅವರು ತಮ್ಮ ಮನೆಯ ಕಾರ್ಯದಲ್ಲಿ ಭಾಗಿಯಾದ ಹಾಗೆ ಆಗಲೆಂದು ಅವರ ಮನೆಗೆ ದವಸ ಧಾನ್ಯಗಳನ್ನು ಮರದಲ್ಲಿ ತುಂಬಿಕೊಡುವ ಪದ್ಧತಿ ಈಗಲೂ ಇದೆ. ಹೀಗೆ ಕೊಡುವಾಗ ಬೀಸದ ನೀರು ಹಾಕದ ಒಣ ಪದಾರ್ಥಗಳನ್ನು ಎಣ್ಣೆ ಹಚ್ಚಿದ ಮರದಲ್ಲಿ ತುಂಬಿಕೊಡಲಾಗುತ್ತದೆ. ಕಡಲೆ ಬೇಳೆ, ಬೆಲ್ಲ, ಅಕ್ಕಿ, ರವೆ ಮುಂತಾದವು ಈ ಮರದಲ್ಲಿ ಸೇರಿರುತ್ತವೆ. ಜೊತೆಗೆ ಎಣ್ಣೆ, ಬೆಣ್ಣೆ ಕೊಳ್ಳಲು ಮೇಲೆ ದುಡ್ಡನ್ನು ಕೊಡಲಾಗುತ್ತದೆ. ಇದನ್ನು ‘ಸೀದಾ ಕೊಡುವುದು’, ‘ಉಲುಪಿ ಕೊಡುವುದು’ ಎಂದು ಕರೆಯಲಾಗುತ್ತದೆ. ಕೆಲವೊಂದು ಹಳ್ಳಿಗಳಲ್ಲಿ ಈ ಪದ್ಧತಿ ಇನ್ನೂ ಅಸ್ತಿತ್ವದಲ್ಲಿದೆ. ಈ ಪದ್ಧತಿಯು ಹಿಂದೆ ದೇವಿಗೂ ಇದ್ದಂತೆ ಕಂಡುಬರುತ್ತದೆ.

ಈ ಪದ್ಧತಿ ಪಡಿಯಮ್ಮ ದೇವಿ ಆಚರಣೆಯಲ್ಲಿ ಇದೆ ಎಂದು ಹೇಳುವುದಕ್ಕೆ ಇನ್ನೊಂದು ಕಾರಣವಿದೆ. ಈಗಲೂ ಈ ದೇವಿಗೆ ಪ್ರಾಣಿಗಳ ಬಲಿ ಕೊಟ್ಟರೂ ಆ ಬಲಿಯಿಂದ ಮಾಡಿದ ನೈವೇದ್ಯವನ್ನು ಮಾಡಿದವರ ತಾಯಿಗೆ ನೈವೇದ್ಯ ಮಾಡಿಕೊಂಡು ಹೋಗುತ್ತಾರೆ ಹೊರತು ಆ ನೈವೇದ್ಯವನ್ನು ಪೂಜಾರಿಗಳು ದೇವಿಗೆ ಹಿಡಿಯುವುದು (ಎಡೆ ತೋರಿಸುವುದು) ಇಲ್ಲ ಮತ್ತು ತಾವು ತೆಗೆದುಕೊಳ್ಳುವುದು ಇಲ್ಲ. ಆದರೆ ಸಸ್ಯಹಾರಿಗಳು ತಂದ ನೈವೇದ್ಯವನ್ನು ತಾಯಿಗೆ ತಮ್ಮ ಕೈಯಾರೆ ಅರ್ಪಿಸಿ ಅದನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ದೇವಿಗೆ ಪಡಿಕೊಡುವ ಪದ್ಧತಿ ಇದ್ದಿರಬಹುದು. ಅದರಿಂದಲೂ ಈ ದೇವಿಗೆ ಈ ಹೆಸರು ಬಂದಿರಲೂ ಬಹುದೆಂದು ಹೇಳಬಹುದು.

ಆದರೆ ಪಡಿಯಮ್ಮನಿಗೆ ಪಡಿ ಕೊಡುವ ಪದ್ಧತಿ ಪ್ರಾರಂಭದಿಂದಲೇ ಇತ್ತೆಂದು ಹೇಳುವ ಹಾಗಿಲ್ಲ. ದಿಗಂಬರೇಶ್ವರ ಮಹಾಸ್ವಾಮಿಗಳು ಅವಧೂತ ಪರಂಪರೆಗೆ ಸೇರಿದವರು. ಅವಧೂತರು ಶಕ್ತಿದೇವತೆ ಆರಾಧನೆ ಜೊತೆಗೆ ಸುರಾಪಾನ, ಮಾಂಸಾಹಾರ ಸೇವಿಸುವ ಪರಂಪರೆಯನ್ನು ರೂಢಿಸಿಕೊಂಡು ಬಂದವರು. ತಾವು ಸೇವಿಸುವ ಆಹಾರವನ್ನು ದೇವರಿಗೆ ನೈವೇದ್ಯ ತೋರಿಸಿಯೇ ಸ್ವೀಕರಿಸುತ್ತಾರೆ. ಅಸಾಮಾನ್ಯರ ದೇವತೆ ಯಾವಾಗಲೂ ಶಾಂತಿ ಸ್ವರೂಪಿಯಾಗಿರಲು ಸಾಧ್ಯವೇ ಇಲ್ಲ. ಅವಧೂತರು ತಾವು ಆರಾಧಿಸುವ ದೇವತೆಗೆ ಪ್ರಾಣಿಬಲಿಕೊಡುವ ಪದ್ಧತಿ ಇದೆ. ಹೀಗಾಗಿ ಅವಧೂತರ ಆರಾಧ್ಯ ದೇವತೆಯಾದ ಪಡಿಯಮ್ಮನಿಗೂ ಮೊದಲು ಬಲಿಕೊಡುವ ಪದ್ಧತಿ ಇದ್ದಿರಲೂಬಹುದು. ಆದರೆ ಪಡಿಯಮ್ಮ ಯಾವಾಗ ಶಿಷ್ಟ ದೇವತೆಯಾಗಿ ಮಾರ್ಪಟ್ಟಳೋ ಆಗ ಈ ಬಲಿಕೊಡುವ ಪದ್ಧತಿ ಕಡಿಮೆಯಾಗಿ ಕೆಳಜಾತಿಯವರು ಪಡಿಕೊಡುವ ಪದ್ಧತಿ ರೂಢಗೊಂಡಿರುವ ಸಾಧ್ಯತೆಗಳು ಇವೆ. ಈಗಲೂ ಅವಳ ಪಾದಗಟ್ಟೆಯ ಹತ್ತಿರ ಬಲಿಕೊಡುವುದನ್ನು ನೋಡಿದರೆ ಈ ಪರಿವರ್ತನೆ ಆಗಿರಬಹುದೆನಿಸುತ್ತದೆ. ಜನಪದ ದೇವತೆಯಾದ ಪಡಿಯಮ್ಮ ಯಾವಾಗ ಶಿಷ್ಟ ಆರಾಧಕರ ಕೈವಶವಾದಳೋ ಆವಾಗ ಅವಳ ಪೂಜೆ ನೈವೇದ್ಯ ಕ್ರಮದಲ್ಲಿ ವ್ಯತ್ಯಾಸಗಳಾಗಿರಬಹುದು.

ಜನಪದರಿಗೆ ದೇವರು ಶ್ರೇಷ್ಠ. ಆದರೆ ದೇವರ ಪೂಜೆಗಗಿ ತಮ್ಮ ಕರ್ತವ್ಯಗಳನ್ನು ಮರೆಯುವವರಲ್ಲ. ಅವರೇನಿದ್ದರೂ ತಮ್ಮ ಕಾಯಕಕ್ಕೆ ಪ್ರಾಧಾನ್ಯತೆ ಕೊಟ್ಟವರು. ತಮ್ಮ ಕಾಯಕದ ನಂತರ ತಮಗೆ ಸಮಯ ಸಿಕ್ಕಾಗಲೇ ಅವರು ದೇವರ ಪೂಜೆ ಧ್ಯಾನ ಮಾಡುವವರು. ಜನಪದ ಗರತಿಯೊಬ್ಬಳು “ಸರಿಹೊತ್ತಿನಲ್ಲಿ ನಿನ್ನ ನೆನದೇನ” ಎಂದು ತಮಗೆ ಬಿಡುವಾದಾಗಲೇ ನಿನ್ನ ನೆನೆಯುತ್ತೇನೆ. ನಿನಗೆ ಬರುತ್ತೇನೆಂದು ದೇವರಿಗೆ ಹೇಳುತ್ತಾಳೆ.

ಅಂತೆಯೇ ಜನಪದ ದೇವತೆಯಾದ ಪಡಿಯಮ್ಮನಿಗೂ ನಿತ್ಯ ಪೂಜೆಯೇನು ಇರಲಿಲ್ಲ. ಭಕ್ತರು ತಮಗೆ ವೇಳೆ ಸಿಕ್ಕಾಗಲೇ, ಹೋಗಬೇಕೆನಿಸಿದಾಗ ಮಾತ್ರ ಪಡಿಯಮ್ಮನಿಗೆ ಹೋಗುತ್ತಿದ್ದರು. ಆದರೆ ಈಗ ಪಡಿಯಮ್ಮನಿಗೂ ಶಿಷ್ಟ ದೇವತೆಯಂತೆ ನಿತ್ಯ ಪೂಜೆ ನಡೆಯುತ್ತದೆ. ಆದ್ದರಿಂದ ಜನಪದ ದೇವತೆ ಶಿಷ್ಟ ದೇವತೆಯಾದ ನಂತರವೇ ಈ ಬದಲಾವಣೆಗಳಾಗಿರುವ ಸಾಧ್ಯತೆಗಳಿವೆ.

ಪಡಿಮವ್ವ ಪಡಿಯಮ್ಮ ಎಂಬುದು ಲಕ್ಷ್ಮೀದೇವಿಗೆ ಬಂದ ಹೆಸರಾದರೆ ‘ಕಪ್ಪರ’ ಎನ್ನುವುದು ಅವಳ ಹೆಸರಿಗೆ ಸೇರಿರುವ ವಿಶೇಷಣ. ಕಪ್ಪರ ಎಂಬ ಪದಕ್ಕೆ ನಿಘಂಟಿನಲ್ಲಿ ಒಂದು ಜಾತಿಯ ಗಿಡ. ಕಪ್ಪೂರ ಬಳ್ಳಿ, ಕರ್ಪೂರದ ಪರಿಮಳವುಳ್ಳ ವೀಳ್ಯೆದೆಲೆ ಎಂಬ ಅರ್ಥಗಳಿವೆ. ಕಪ್ಪುರ ಎನ್ನುವುದು Larency ಎಂಬ ಜಾತಿಯ Cinnamum Campher ಎಂಬ ವೈಜ್ಞಾನಿಕ ಹೆಸರುಳ್ಳ ಗಿಡ, ಔಷಧಿಯ ಗುಣವುಳ್ಳ ವೃಕ್ಷ ಎಂಬ ಮಾಹಿತಿಯು ದೊರೆಯುತ್ತದೆ. ಅಂದು ದಿಗಂಬರೇಶ್ವರರು ಇಲ್ಲಿ ಬಂದು ನೆಲೆಸಿದ್ದ ಕಾಲದಲ್ಲಿ ಇಲ್ಲಿ ಅಪಾರವಾದ ವೃಕ್ಷ ಸಂಪತ್ತಿತ್ತು. ಆ ವೃಕ್ಷಗಳಲ್ಲಿ ಕಪ್ಪೂರ ಮರಗಳು ಅಥವಾ ಕಪ್ಪುರ ಪರಿಮಳವಿರುವ ವೀಳ್ಯದೆಲೆ ಬಳ್ಳಿಗಳು ಈ ಸ್ಥಳದಲ್ಲಿ ಅಪಾರವಾಗಿ ಇರಬಹುದು. ಆದ್ದರಿಂದ ಕಪ್ಪೂರ ಮರಗಳಿರುವ ಅಥವಾ ಕಪ್ಪುರ ಪರಿಮಳದ ವಿಳ್ಯೇದೆಲೆ ಬಳ್ಳಿಗಳಿರುವ ಸ್ಥಳದಲ್ಲಿ ಪಡಿಯವ್ವ ತಾಯಿ ನೆಲೆಸಿರುವುದರಿಂದ ಪಡಿಯಮ್ಮ ಕಪ್ಪುರ ಪಡಿಯಮ್ಮಳು ಆಗಿರಬಹುದು.

ಜೊತೆಗೆ ಕರ್ಪೂ ಎಂಭ ಪದಕ್ಕೆ ಕರಿ, ಕತ್ತಲೂ ಎಂಬ ಅರ್ಥಗಳು ನಿಘಂಟಿನಲ್ಲಿ ದೊರೆಯುತ್ತವೆ. ಹಿಂದೆ ಈ ಪ್ರದೇಶದಲ್ಲಿ ದಟ್ಟವಾದ ಕಾಡು ಇದ್ದುದರಿಂದ ಆ ಪ್ರದೇಶ ಯಾವಾಗಲೂ ಕಗ್ಗತ್ತಲಿನಿಂದ ತುಂಬಿರಬಹುದು. ಅಂತಃ ಕತ್ತಲಿನಲ್ಲಿರುವ ಅಮ್ಮ ಎಂಬ ಕಾರಣಕ್ಕೆ ಕರ್ಪೂ ಪಡಿಯಮ್ಮ ಆಗಿರಬಹುದು. ನಂತರ ಆ ಕರ್ಪೂ ಕಪ್ಪರವಾಗಿ ತಾಯಿಗೆ ಕಪ್ಪರ ಪಡಿಯಮ್ಮ ಎಂಬ ಹೆಸರು ಶಾಶ್ವತವಾಗಿರಲೂಬಹುದು. ಇವೆರಡು ಕಾರಣಗಳಿಂದ ದೇವಿ ಹೆಸರಿನ ಜೊತೆಗೆ ಕಪ್ಪರ ಎಂಬ ಪದ ಸೇರಿಕೊಂಡಿರುವ ಸಾಧ್ಯತೆ ಇದೆ.

ಇವೆಲ್ಲ ಸಾಧ್ಯತೆಗಳಿಂದ ಯೋಗಿಕೊಳ್ಳದ ಲಕ್ಷ್ಮೀದೇವಿ ನಾಗರಾಳದ ಕಪ್ಪರ ಪಡಿಯಮ್ಮನಾಗಿದ್ದಾಳೆ.

. ವೀರಸಿಂಧೂರ ಲಕ್ಷ್ಮಣನ ಆರಾಧ್ಯದೇವಿ

ಸಮಾನತೆಗಾಗಿ ಶ್ರೀಮಂತರ ವಿರುದ್ಧ, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸಿಂಧೂರ ಲಕ್ಷ್ಮಣನ ಆರಾಧ್ಯದೇವಿಯು ಈ ಕಪ್ಪರ ಪಡಿಯಮ್ಮನೇ. ಇಂತಹ ಸಿಂದೂರ ಲಕ್ಷ್ಮಣ ಹತನಾದದ್ದು ಪಡಿಯಮ್ಮನ ಹೆಸರಿನಲ್ಲಿಯೇ. ಅದು ಪಡಿಯಮ್ಮ ದೇವಿಯ ಸನ್ನಿಧಾನದಲ್ಲೇ.

ಬರಗಾಲದಲ್ಲಿ ಕಳ್ಳತನ ಮಾಡಿ ಬಂದ ಸೋದರಳಿಯರ ವಿರುದ್ಧ ಲಕ್ಷ್ಕಣನು ಸಿಟ್ಟಿಗೆದ್ದರೂ, ‘ಭೂಮಿಯ ಮೇಲೆ ವಾಸಿಸುವ ಎಲ್ಲರಿಗೂ ಉಣ್ಣುವ, ಬದುಕುವ ಹಕ್ಕಿದೆ’ ಅವರು ಮಾಡಿದ್ದು ತಪ್ಪಲ್ಲ ಎಂದು ತಿಳಿಹೇಳುವ ತಾಯಿ ಮತ್ತು ಹೆಂಡತಿಯ ಮಾತನ್ನು ಕೇಳಿದ ಲಕ್ಷ್ಮಣ ತನ್ನ ಧೋರಣೆಯನ್ನು ಬದಲಾಯಿಸಿಕೊಳ್ಳುತ್ತಾನೆ. ಸಮಾನತೆಗಾಗಿ ಶ್ರೀಮಂತರ ವಿರುದ್ಧ ಹೋರಾಟಕ್ಕಿಳಿಯುತ್ತಾನೆ. ಉಳ್ಳವರಿಂದ ಇಲ್ಲದವರಿಗೆ ಹಂಚುವುದಕ್ಕಾಗಿ ಲಕ್ಷ್ಮಣ ಶ್ರೀಮಂತರ ಮನೆಯ ದರೋಡೆಗಿಳಿಯುತ್ತಾನೆ. ಅದಕ್ಕಾಗಿ ಬ್ರಿಟೀಷರಿಂದ ಬಂಧನಕ್ಕೊಳಗಾಗುತ್ತಾನೆ. ಬಂಧನದಿಂದ ತಪ್ಪಿಸಿಕೊಂಡು ಬರುವಾಗ ಬ್ರಿಟಿಷರೊಂದಿಗೆ ನಡೆದ ಹೋರಾಟದಲ್ಲಿ ಲಕ್ಷ್ಮಣನ ಸೋದರಳಿಯನಿಂದ ಬ್ರಿಟಿಷ್‌ ಕಮೀಷನರ್ ಮೋಹನ ಕಲಾಲನ ಹತ್ಯೆಯಾಗುತ್ತದೆ. ಆಗ ಕ್ರೋಧಗೊಂಡ ಬ್ರಿಟಿಷರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಲಕ್ಷ್ಮಣ ಬಂದದ್ದು ಕಪ್ಪರ ಪಡಿಯಮ್ಮ ನೆಲೆಸಿರುವ ನಾಗರಾಳ ಬೆಟ್ಟಕ್ಕೆ.

ಹೀಗೆ ಬ್ರಿಟಿಷರಿಂದ ತಪ್ಪಿಸಿಕೊಂಡು ಬಂದ ಲಕ್ಷ್ಮಣನಿಗೆ ಆಶ್ರಯ ನೀಡಿದ್ದು, ನಾಗರಾಳದ ಬೆಟ್ಟ ಮತ್ತು ಪಡಿಯಮ್ಮದೇವಿ. ನಾಗರಾಳದ ಬೆಟ್ಟ ಮತ್ತು ದಟ್ಟಕಾಡು ಲಕ್ಷ್ಮಣನಿಗೆ ಶತ್ರುಗಳಿಂದ ರಕ್ಷಣೆ ನೀಡಿದರೆ, ಪಡಿಯಮ್ಮದೇವಿ ಅವನಿಗೆ ಮಾನಸಿಕ ಧೈರ್ಯವನ್ನು ತುಂಬಿದಳು. ಹಾಗೆಯೇ ಇವನ ವಿಷಯ ತಿಳಿದ ತೆಗ್ಗಿಯ ವೆಂಕನಗೌಡರು ಇವನು ಜಡಗಾಬಾಲರ ನಂತರ ಬಂದ ‘ಬೇಡರ ಕುಲದ ಭಂಟ’ನೆಂದು ತಿಳಿದು ಅವನ ಸಹಾಯಕ್ಕೆ ಮುಂದಾಗುತ್ತಾರೆ. ಅವನಿಗೆ ನಿತ್ಯ ಬುತ್ತಿ ವ್ಯವಸ್ಥೆ ಕಲ್ಪಿಸಿಕೊಡುತ್ತಾರೆ. ಜೊತೆಗೆ ಗೌರಿ ಎಂಬ ನಾಗರಾಳದ ಹೆಣ್ಣುಮಗಳು ಅವನಿಗೆ ಸಹೋದರಿಯ ಪ್ರೀತಿಯನ್ನು ನೀಡುತ್ತಾಳೆ. ಹೀಗೆ ಅನ್ನ, ನೀರು, ಪ್ರೀತಿ, ಶತ್ರುಗಳ ರಕ್ಷಣೆಯಿಂದ ಪಡಿಯಮ್ಮನ ಬೆಟ್ಟ ಲಕ್ಷ್ಮಣನಿಗೆ ತಾಯಿಯಂತೆ ರಕ್ಷಣೆ ನೀಡುತ್ತದೆ. ಹಾಗಾಗಿ ಪಡಿಯಮ್ಮ ಲಕ್ಷ್ಮಣನ ಆರಾಧ್ಯದೇವಿಯಾಗುತ್ತಾಳೆ. ಲಕ್ಷ್ಮಣ ಅವಳ ಪರಮ ಭಕ್ತನಾಗುತ್ತಾನೆ.

ಆದರೆ ಲಕ್ಷ್ಮಣ ಇಲ್ಲಿ ಇರುವುದು, ತೆಗ್ಗಿಯ ವೆಂಕನಗೌಡರಿಂದ ಅವನಿಗೆ ಸಹಾಯವಾಗುವುದನ್ನು ತಿಳಿದುಕೊಂಡ ಬ್ರಿಟಿಷರು ವೆಂಕನಗೌಡರಿಗೆ ಅವನನ್ನು ಹಿಡಿದುಕೊಡಲು ಒತ್ತಾಯಿಸುತ್ತಾರೆ. ಒಪ್ಪದಾಗ ದೇಸಗತಿ ಕಸಿದುಕೊಳ್ಳುವಂತಹ ಅನೇಕ ಬೆದರಿಕೆಗಳನ್ನು ಬ್ರಿಟಿಷರು ಅವರಿಗೆ ಹಾಕುತ್ತಾರೆ. ವೆಂಕನಗೌಡರು ಬ್ರಿಟಿಷರ ಬೆದರಿಕೆಗೆ ಹೆದರದಿದ್ದರೂ ಪಾಮಲಿ ಸೋಮ ಮತ್ತು ಗಡಗಿ ಶಿವ್ಯಾನ ಬಲವಂತಕ್ಕೆ ಕಟ್ಟುಬಿದ್ದು ಅವನ ಹತ್ಯೆಗೆ ಮುಂದಾಗುತ್ತಾರೆ.

ಹೀಗೆ ಒಪ್ಪಿದ ವೆಂಕನಗೌಡರು ಲಕ್ಷ್ಮಣನನ್ನು ಮುಗಿಸಲು ಹೂಡಿದ ಸಂಚು ತಾಯಿಯ ಪ್ರಸಾದಕ್ಕೆ ಬರಬೇಕೆಂಬ ಆಹ್ವಾನದ ಮೂಲಕ, ಪಡಿಯಮ್ಮನಿಗೆ ಬೇಟೆಯ ಹರಕೆ ತೀರಿಸುತ್ತಿದ್ದೇನೆ, ಅದಕ್ಕಾಗಿ ತಾಯಿಯ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ, ಬರಬೇಕೆಂಬ ಆಹ್ವಾನ ನೀಡುತ್ತಾರೆ. ತಾಯಿಯ ಪ್ರಸಾದವೆಂದಾಗ ಒಪ್ಪಿದ ಲಕ್ಷ್ಮಣ ಪಡಿಯಮ್ಮನ ಸನ್ನಿಧಾನಕ್ಕೆ ತೆರಳುತ್ತಾನೆ. ಮೊದಲೇ ಸಂಚು ರೂಪಿಸಿದ್ದರ ಪ್ರಕಾರ ಪಾಮಲಿಸೋಮ ಗುಂಡು ಹಾರಿಸಿ ಹತ್ಯೆ ಮಾಡುತ್ತಾನೆ. ಹೀಗೆ ತಾಯಿಯ ಸನ್ನಿಧಿಯಲ್ಲೇ ಲಕ್ಷ್ಮಣನ ಹತ್ಯೆ ನಡೆಯುತ್ತದೆ.

ಎಲ್ಲಿ ಭಕ್ತಿ, ನಂಬಿಕೆ, ಆತ್ಮವಿಶ್ವಾಸ ಇರುತ್ತದೆಯೋ ಅಲ್ಲಿ ಯಾವಾಗಲೂ ಧೈರ್ಯ ಇರುತ್ತದೆ. ಸಿಂಧೂರ ಲಕ್ಷ್ಮಣನಿಗೆ ದೇವಿಯ ಬಗ್ಗೆ ನಂಬಿಕೆ ಇತ್ತು. ಶ್ರಮ ಸಂಸ್ಕೃತಿಯಲ್ಲಿ ಬೆಳೆದ ಲಕ್ಷ್ಮಣ ಸ್ತ್ರೀಯರ ಬಗ್ಗೆ ಅತ್ಯಂತ ಗೌರವವನ್ನಿಟ್ಟುಕೊಂಡ ವ್ಯಕ್ತಿ. ತನ್ನ ತಾಯಿ ಹೆಂಡತಿ ಮಾತಿಗೆ ಬೆಲೆಕೊಟ್ಟು ಪರೋಪಕಾರಿ ಕಾರ್ಯಕ್ಕೆ ಮುಂದಾದ ಪರನಾರಿಯನ್ನು ಸಹೋದರಿಯಂತೆ ಗೌರವಿಸಿದ. ಹೆಣ್ಣಿನ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಲಕ್ಷ್ಮಣ, ಹೆಣ್ಣು ಯಾವಾಗಲೂ ನಂಬಿದವರ ಕೈಬಿಡುವುದಿಲ್ಲ. ಕಾಯುತ್ತಾಳೆ ಎಂದು ನಂಬಿಕೆ ಇಟ್ಟುಕೊಂಡಿದ್ದ. ತಾನು ನಂಬಿರುವ ಹೆಣ್ಣುದೇವತೆಯು ತಾಯಿಯಂತೆ ನನ್ನನ್ನು ಕಾಯುತ್ತಾಳೆ, ರಕ್ಷಿಸುತ್ತಾಳೆ ಎಂಬ ನಂಬಿಕೆ ಅವನಲ್ಲಿತ್ತು. ಪರೋಪಕಾರಿ ಕಾರ್ಯ ಮಾಡುವ ತಾನು ಮಾಡುವ ಕಾರ್ಯಗಳಾವುವು ತಪ್ಪಲ್ಲ. ತಪ್ಪು ಮಾಡದವ ಭಯಗೊಳ್ಳುವ ಅವಶ್ಯಕತೆಯು ಇಲ್ಲ. ಹೀಗಾಗಿ ದೇವತೆ, ಸಮಾಜದ ಬೆಂಬಲ ನನಗಿರುತ್ತದೆಂಬ ಆತ್ಮವಿಶ್ವಾಸ ಅವನಲ್ಲಿತ್ತು. ಹೀಗಾಗಿ ಪಡಿಯಮ್ಮನ ಪರಿಸರ ಅವನಲ್ಲಿ ಧೈರ್ಯ ತುಂಬಿತ್ತು.

ಆದರೆ ಅತಿಯಾದ ಭಕ್ತಿ, ನಂಬಿಕೆ, ವಿಶ್ವಾಸಗಳು ಕೆಲವೊಮ್ಮೆ ವಿನಾಶಕ್ಕೂ ಕಾರಣವಾಗುತ್ತವೆ. ಲಕ್ಷ್ಮಣನ ಜೀವನದಲ್ಲಿ ಆದದ್ದೂ ಅದೇ. ಲಕ್ಷ್ಮಣ ಒಬ್ಬ ಭಾವಜೀವಿ. ದೇವಿಯನ್ನು ಅತಿಯಾಗಿ ನಂಬಿದ್ದ. ಆದರೆ ಅವನ ಭಾವನಾತ್ಮಕತೆಯನ್ನು ವಿರೋಧಿಗಳು ದುರುಪಯೋಗ ಮಾಡಿಕೊಂಡರು. ಅವನು ತಾಯಿಯ ಬಗ್ಗೆ ಇಟ್ಟ ಅತಿಯಾದ ನಂಬಿಕೆಯನ್ನು ಶತ್ರುಗಳು ದೌರ್ಬಲ್ಯವಾಗಿ ಬಳಸಿಕೊಂಡರು. ತಾಯಿ ಎಂಬ ಹೆಸರು ಕೇಳಿದರೆ ಎಲ್ಲಿದ್ದರೂ ಬರುತ್ತಾನೆ ಎಂಬುದಕ್ಕೆ ಅರಿತ ಶತ್ರುಗಳು ಅವನ ಕೊಲೆಗೆ ತಾಯಿಯ ಹೆಸರನ್ನೇ ತಂತ್ರವಾಗಿ ಬಳಸಿದರು. ತನಗೆ ಅಲ್ಲಿಗೆ ಹೋಗುವುದು ಅಪಾಯ ಎಂದು ಲಕ್ಷ್ಮಣನಿಗೆ ಗೊತ್ತಿದ್ದರೂ, ಅಳಿಯಂದಿರು ಲಕ್ಷ್ಮಣನಿಗೆ ಆಗುವ ಅಪಾಯದ ಮುನ್ಸೂಚನೆ ಕೊಟ್ಟರೂ, ಲಕ್ಷ್ಮಣ ತಾಯಿಯ ಮೇಲಿನ ನಂಬಿಕೆಯಿಂದ ಹೋಗಿ ಶತ್ರುಗಳ ಗುಂಡಿಗೆ ಬಲಿಯಾಗುತ್ತಾನೆ. ಅತಿಯಾದ ಲಕ್ಷ್ಮಣನ ನಂಬಿಕೆ, ಆತ್ಮಾವಿಶ್ವಾಸಗಳೇ ಅವನ ಸಾವಿಗೆ ಕಾರಣವಾಗುತ್ತದೆ.

ಪಡಿಯಮ್ಮನ ಗುಡ್ಡ, ಪಡಿಯಮ್ಮದೇವಿ ಲಕ್ಷ್ಮಣನಿಗೆ ರಕ್ಷಣೇ ನೀಡಿದರೆ ದೇವಿಯ ಮೇಲಿನ ಅವನ ಅಪಾರವಾದ ನಂಬಿಕೆ ಅವನನ್ನು ಮೋಸಗೊಳಿಸುವವರಿಗೆ ಉಪಾಯವಾಗಿ ತೋರುತ್ತದೆ. ತಾಯಿಯನ್ನು ನಂಬಿದ್ದ ಲಕ್ಷ್ಮಣನು ತಾಯಿಯ ಸನ್ನಿಧಿಯಲ್ಲಿ ಕಳೆಬರವಾಗುತ್ತಾನೆ.

. ಸರ್ವಜನ ಪೂಜಿತ

ಕಪ್ಪರ ಪಡಿಯಮ್ಮ ಭಾವೈಕ್ಯತೆಯ ದೇವಿಯಾಗಿದ್ದಾಳೆ. ಹಿಂದೂ ಮುಸ್ಲಿಂ, ಕ್ರೈಸ್ತ, ಮೇಲ್ವರ್ಗ, ಕೆಳವರ್ಗ, ಮೇಲ್ಜಾತಿ, ಕೆಳಜಾತಿ ಎಂಬ ಯಾವ ಭೇದಭಾವವಿಲ್ಲದೆ ಜನ ಪಡಿಯಮ್ಮನನ್ನು ಆರಾಧಿಸುತ್ತಾರೆ. ಪಡಿಯಮ್ಮನ ದೇವಾಲಯ, ಜಾತ್ರೆ ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತದೆ.

ಪಡಿಯಮ್ಮನ ಭಕ್ತ ದಿಗಂಬರೇಶ್ವರರ ಮಠ ನಿರ್ಮಾಣವಾದದ್ದು ಮುಸ್ಲಿಂ ಶೈಲಿಯ ವಾಸ್ತುಶಿಲ್ಪದಲ್ಲಿ ದಿಗಂಬರೇಶ್ವರರ ಮಠದ ಸ್ವಾಮಿಗಳು ಮರಾಠ ಜನಾಂಗಕ್ಕೆ ಸೇರಿದವರು ಇವರಿಗೆ ದೀಕ್ಷೆ ನೀಡುವ ಸ್ವಾಮಿಗಳು ವೀರಶೈವ ಸ್ವಾಮಿಗಳು ಬೆಟ್ಟದಲ್ಲಿರುವ ಕಪ್ಪರ ಪಡಿಯಮ್ಮನನ್ನು ಈಗ ಪೂಜೆ ಮಾಡುವವರು, ಹಾಲುಮತದವರು ಪಡಿಯಮ್ಮನ ಜಾತ್ರೆಯಲ್ಲಿ ರಥದ ಉಸ್ತುವಾರಿ ನೋಡಿಕೊಳ್ಳುವವರು ಬೋವಿ ಜನಾಂಗದವರು.

ರಥಕ್ಕೆ ಎಣ್ಣೆ ಕೊಡುವುದು, ರಥೋತ್ಸವದ ದಿನ ಬಂದ ಭಕ್ತರಿಗೆ ಬೆಲ್ಲದ ನೀರು ಹಂಚುವವರು, ಮಾರವಾಡಿಗಳು, ಜಾಗಟೆ ಬಾರಿಸುವವರು ತಳವಾರರು. ಪಡಿಯಮ್ಮ ಗೋಡೆಯಲ್ಲಿ ಹೋಗಿ ನೆಲೆಸಿರುವುದು ಲಿಂಗಾಯತರ ಮನೆಯಲ್ಲಿ. ಬೇಡ ಕುಲದ ಭಂಠ ಸಿಂಧೂರ ಲಕ್ಷ್ಮಣ ತಾಯಿಯ ಆರಾಧಕ ಯುಗಾದಿ ದಿನ ತಾಯಿಯ ಜಾತ್ರೆ ಮಾಡುವವರು ಹೆಚ್ಚಾಗಿ ಬೇಡ ಮತ್ತು ಬಂಜಾರಾ ಜನಾಂಗದವರು. ವಾರ ಹಿಡಿದಾಗ ನೀರು ಹಾಕುವುದು, ರಥೋತ್ಸವದ ದಿನ ಮಕ್ಕಳನ್ನು ಹಾರಿಸುವುದು ಜಾತಿಮತ ಬೇಧವಿಲ್ಲದೆ ಎಲ್ಲ ಜನಾಂಗದವರು.

ಹೀಗೆ ಪಡಿಯಮ್ಮ ನಮ್ಮ ನಾಡಿನಲ್ಲಿರುವ ಸರ್ವ ಜನಾಂಗದ ಜನರಿಂದ ಪೂಜೆಗೊಳ್ಳುತ್ತಾಳೆ. ಎಲ್ಲರೂ ಯಾವುದೇ ಮತಭೇದವಿಲ್ಲದೆ ತಾಯಿಯ ಆರಾಧನೆ, ಪೂಜೆ, ಜಾತ್ರೆ, ಉತ್ಸವಗಳನ್ನು ಆಚರಿಸುತ್ತಾರೆ. ಜಾತಿಮತದ ಅಂತರವನ್ನು ತೊಡೆದು ಹಾಕಲು ನಮ್ಮಲ್ಲಿರುವ ಭಾವೈಕ್ಯತೆಯನ್ನು ಮತ್ತಷ್ಟು ಬಲಗೊಳಿಸಲು ಪಡಿಯಮ್ಮನಂತಹ ಸರ್ವಜನ ಪೂಜಿತ ದೇವಿಯ ಪೂಜೆ, ಜಾತ್ರೆಯ ಅವಶ್ಯಕತೆ ನಮಗಿಂದಿದೆ.

II ಪಡಿಯಮ್ಮನ ಆಚರಣೆ ಹಾಗೂ ಸಂಪ್ರದಾಯಗಳು

ಕಪ್ಪರ ಪಡಿಯಮ್ಮ ದೇವಿಗೆ ಸಂಬಂಧಿಸಿದಂತೆ ಎಲ್ಲ ಆಚರಣೆಗಳು ನಡೆಯುವುದು ದಿಗಂಬರೇಶ್ವರ ಮಠದ ಮೂಲಕವೇ. ದೇವಿಯ ಪೂಜೆ, ಪುನಸ್ಕಾರ, ಹಬ್ಬ, ಹರಿದಿನ, ಜಾತ್ರೆ, ಉತ್ಸವಗಳೆಲ್ಲವು ದಿಗಂಬರೇಶ್ವರ ಮಠದ ಸ್ವಾಮಿಗಳಿಂದಲೇ ನಡೆಯುತ್ತವೆ. ದಿನನಿತ್ಯ ದೇವಿಗೆ ಪೂಜೆ ಸಲ್ಲಿಸುವವರು ದಿಗಂಬರೇಶ್ವರ ಮಠದ ಪೀಠಾಧಿಪತಿಗಳೇ. ನವರಾತ್ರಿಯಲ್ಲಿ ನಡೆಯುವ ದೇವಿಯ ಪೂಜೆ ಮತ್ತು ದೇವಿ ಮಹಾತ್ಮೆಯ ಪಾರಾಯಣ ನಡೆಯುವುದು ಸ್ವಾಮಿಗಳಿಂದಲೇ. ಇನ್ನೂ ಜಾತ್ರೆ ದೇವಿಯದಾದರೂ ಜಾತ್ರೆ ನಡೆಯುವುದು ದಿಗಂಬರೇಶ್ವರ ಮಠದ ಆವರಣದಲ್ಲಿಯೇ, ಮಠದಿಂದಲೇ, ಸ್ವಾಮಿಗಳ ನೇತೃತ್ವದಲ್ಲಿ ಸ್ವಾಮಿಗಳ ಮುಂದಾಳತ್ವದಲ್ಲಿಯೇ ದೇವಿಗೆ ಸಂಬಂಧಿಸಿದ ಎಲ್ಲ ಆಚರಣೆಗಳು ನಡೆಯುತ್ತವೆ.

. ಪಡಿಯಮ್ಮನ ಪೂಜೆ

ದಿಗಂಬರೇಶ್ವರ ಸ್ವಾಮಿಗಳು ನಾಗರಾಳದಲ್ಲಿ ನೆಲಸಿದಾಗಿನಿಂದಲೂ ತಾವೇ ಸ್ವತಃ ಕುದುರೆ ಮೇಲೆ ತಾಯಿ ಸನ್ನಿಧಿಗೆ ತೆರಳು ಪೂಜೆ ಮಾಡಿ ಬರುತ್ತಿದ್ದರು. ಅವರ ನಂತರ ಬಂದ ಸ್ವಾಮಿಗಳೆಲ್ಲರೂ ಸ್ವಾಮಿಗಳಂತೆಯೇ ಕುದುರೆ ಮೇಲೆ ಗುಡ್ಡಕ್ಕೆ ತೆರಳಿ ಪೂಜೆ ಮಾಡಿ ಬರುತ್ತಿದ್ದರು. ಆದರೆ ಈಗ ಮಠದ ಕಾರ್ಯಭಾರಗಳು ಹೆಚ್ಚಾಗಿರುವುದರಿಂದ, ಸ್ವಾಮಿಗಳಿಗೂ ನಿತ್ಯವೂ ಬೆಟ್ಟಕ್ಕೆ ಹೋಗಿಬರುವುದು ಅಸಾಧ್ಯ. ಅದಕ್ಕಾಗಿ ಮಠದ ಹಿಂದೆಯೇ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ತಮಗೆ ಯಾವಾಗ ದೇವಿಯನ್ನು ನೋಡಬೇಕೆನಿಸುತ್ತದೆಯೋ, ಯಾವಾಗ ದರ್ಶನ ಮಾಡಬೇಕೆನಿಸುತ್ತದೆಯೋ, ಆಗ ಬೆಟ್ಟಕ್ಕೆ ತೆರಳಿ ಪಡಿಯಮ್ಮನಿಗೆ ಪೂಜೆ ಸಲ್ಲಿಸುತ್ತಾರೆ.

ಗುಡ್ಡದ ಮೇಲಿರುವ ತಾಯಿಗೆ ಪೂಜೆ ನಿಲ್ಲಿಸಿಲ್ಲ. ಅದಕ್ಕಾಗಿ ಒಬ್ಬ ವ್ಯಕ್ತಿಯನ್ನು ಗುರುತು ಮಾಡಿದ್ದಾರೆ. ಆತ ದಿನನಿತ್ಯವೂ ಹಿರಿಹೊಳೆ (ಕೃಷ್ಟ್ಣಾನದಿ)ಯಿಂದ ಪೂಜೆಗೆ ನೀರು ತಂದು ತಾಯಿ ಸನ್ನಿಧಿಗೆ ತೆರಳಿ, ತಾಯಿಗೆ ಅಭಿಷೇಕ ಮಾಡಿ, ಸೀರೆ ಉಡಿಸಿ, ಅಲಂಕಾರ ಮಾಡಿ, ನೈವೇದ್ಯ ಮಾಡಿ ಬರುತ್ತಾನೆ. ಹಾಗೆ ಕೃಷ್ಟ್ಣಾ ನದಿಯಿಂದ ತಂದ ನೀರನ್ನು ದಿಗಂಬರೇಶ್ವರನಿಗೂ ನೀಡುತ್ತಾನೆ. ಹೀಗೆ ತಾಯಿಗೆ ನಿತ್ಯವು ಕೃಷ್ಷ್ಣೆಯ ನೀರಿನಿಂದಲೇ ಪೂಜೆ ನಡೆಯುತ್ತದೆ. ಹಾಗೆಯೇ ಸುತ್ತಮುತ್ತಲಿನ ಗ್ರಾಮದವರು ಏನಾದರೂ ಶುಭ ಕಾರ್ಯಗಳಿದ್ದಾಗ ದೇವಿಗೆ ಅಭಿಷೇಕ, ಪೂಜೆ, ನೈವೇದ್ಯ ಮಾಡುವವರಿದ್ದರೆ, ಅವರು ಮೊದಲೇ ಪೂಜಾರಿಗೆ ತಿಳಿಸುತ್ತಾರೆ. ಅವರು ಬರುವವರೆಗೂ ಪೂಜಾರಿ ಅಲ್ಲಿದ್ದು ಪೂಜಾ ಕಾರ್ಯವನ್ನು ಮುಗಿಸಿ ಬರುತ್ತಾರೆ. ಈಗ ತಾಯಿಯ ಪೂಜಾ ಕಾರ್ಯಗಳನ್ನು ನೆರವೇರಿಸುವ ಲಚ್ಚಪ್ಪ ಕರಿಗಾರ ಹಾಲುಮತಕ್ಕೆ ಸೇರಿದವರಾಗಿದ್ದಾರೆ. ದೇವಿಯ ಪೂಜೆಯ ಕಾರ್ಯಗಳೆಲ್ಲವೂ ಇವರಿಂದಲೇ ನಡೆಯುತ್ತವೆ.

ಸಿದ್ದಾಪುರದ ದಿಗಂಬರ ಮಠದಲ್ಲಿಯು ಪಡಿಯಮ್ಮ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲಿಯ ನಿತ್ಯ ಪೂಜಾ ಕಾರ್ಯಗಳು ನಡೆಯುತ್ತವೆ. ಆದರೂ ಶ್ರಾವಣಮಾಸದಲ್ಲಿ ಅವರು ತಪ್ಪದೆ ನಾಗರಾಳ ಬೆಟ್ಟದ ಪಡಿಯಮ್ಮನಿಗೆ ಪೂಜೆ ಸಲ್ಲಿಸುತ್ತಾರೆ. ಸಿದ್ದಾಪೂರದ ಸ್ವಾಮಿಗಳು ಶ್ರಾವಣ ಮಾಸ ಪರ್ಯಂತ ತಾಯಿಗೆ ಕೃಷ್ಟ್ಣಾ ನದಿ ನೀರಿನ ಅಭಿಷೇಕ ಮಾಡುತ್ತಾರೆ. ಸ್ವಾಮಿಗಳು ಕೃಷ್ಣ ನದಿಯಲ್ಲಿ ಮಿಂದು ಅಲ್ಲಿಂದ ಕೊಡದಲ್ಲಿ ನೀರನ್ನು ತರುತ್ತಾರೆ. ಹಾಗೇ ಬರುವಾಗ ಅವರು ಕುದುರೆಯನ್ನೇರಿ ಬರುತ್ತಾರೆ. ಹೆಗಲ ಮೇಲೆ ತಾಯಿಯ ಒಗೆದ ಮಡಿ ಸೀರೆಯನ್ನು ಹಾಕಿಕೊಂಡಿರುತ್ತಾರೆ. ತಾಯಿಗೆ ಅಭಿಷೇಕ ಮಾಡಿ ಸೀರೆ ಉಡಿಸಿ ಅಲಂಕಾರ ಮಾಡಿ ತಾಯಿಯ ಹಿಂದಿನ ದಿನದ ಸೀರೆಯನ್ನು ಹೆಗಲ ಮೇಲೆ ಹಾಕಿಕೊಂಡು ಹೋಗುತ್ತಾರೆ. ಆ ಸೀರೆಯನ್ನ ಮತ್ತೆ ಕೃಷ್ಟ್ಣಾ ನದಿಯಲ್ಲಿ ಒಗೆದು ಮಡಿಗೊಳಿಸಿರುತ್ತಾರೆ. ದಿಗಂಬರೇಶ್ವರ ಸ್ವಾಮಿಗಳು ತಾಯಿಗೆ ಕುದುರೆ ಮೇಲೆ ಪೂಜೆಗೆ ಬರುತ್ತಿದ್ದ ಸಂಪ್ರದಾಯವನ್ನು ಸಿದ್ದಾಪುರದ ದಿಗಂಬರೇಶ್ವರ ಮಠದ ಸ್ವಾಮಿಗಳು ಈಗಲೂ ಮುಂದುವರೆಸಿಕೊಂಡು ಹೊರಟಿದ್ದಾರೆ.

ಶ್ರಾವಣ ಮಾಸದಲ್ಲಿ ಸಿದ್ದಾಪೂರದ ಸ್ವಾಮಿಗಳು ತಾಯಿಗೆ ಪೂಜೆ ಸಲ್ಲಿಸುತ್ತಾರೆ. ಇವರು ನಾಗರಾಳದ ಸ್ವಾಮಿಗಳಿಗಿಂತ ಮುಂಚೆಯೇ ಪೂಜೆ ಸಲ್ಲಿಸಿಹೋಗಿರುತ್ತಾರೆ. ನಂತರ ಬಂದ ನಾಗರಾಳದ ಸ್ವಾಮಿಗಳು ಅವರು ಉಡಿಸಿದ ಸೀರೆಯ ಮೇಲೆಯೇ ತಾಯಿಗೆ ಸೀರೆ ಉಡಿಸಿ ಪೂಜೆ ಸಲ್ಲಿಸುತ್ತಾರೆ. ಒಂದು ವೇಳೆ ನಾಗರಾಳದವರು ಮುಂಚೆ ಬಂದಿದ್ದರೆ ಸಿದ್ದಾಪುರದವರು ಅವರು ಉಡಿಸಿದ ಸೀರೆ ಮೇಲೆ ಸೀರೆ ಉಡಿಸಿ ಪೂಜೆ ಸಲ್ಲಿಸುತ್ತಾರೆ. ಶ್ರಾವಣ ಮಾಸದಲ್ಲಿ ಎರಡು ಮಠಗಳ ಸ್ವಾಮಿಗಳಿಂದ ಪೂಜೆ ಪಡೆಯುವ ಭಾಗ್ಯ ತಾಯಿಯದು.

. ನವರಾತ್ರಿಯಲ್ಲಿ ದೇವಿ ಮಹಾತ್ಮೆಯ ಪಾರಾಯಣ

ನವರಾತ್ರಿ ಹಬ್ಬ ಶಕ್ತಿದೇವತೆಯ ಆರಾಧನೆಯ ಕಾಲ. ಹಾಗೆಯೇ ನವರಾತ್ರಿಯಲ್ಲಿ ದಿಗಂಬರೇಶ್ವರ ಮಠದಲ್ಲಿಯೂ ಮಠದ ಅಧಿದೇವತೆ ಪಡಿಯಮ್ಮನ ಆರಾಧನೆ ನಡೆಯುತ್ತದೆ. ನವರಾತ್ರಿಯ ಒಂಭತ್ತು ದಿನಗಳ ಕಾಲ ಮಠದಲ್ಲಿ ಚಿದಾನಂದ ಅವಧೂತರಿಂದ ರಚಿತವಾದ ದೇವಿಮಹಾತ್ಮೆಯ ಪಾರಾಯಣ ನಡೆಯುತ್ತದೆ. ದೇವಿಗೆ ಒಂಭತ್ತು ದಿನಗಳ ಕಾಲ ಒಂಭತ್ತು ಬಗೆಯ ಸಿಹಿ ಭಕ್ಷಗಳೊಂದಿಗೆ ನಿತ್ಯವು ಹೋಳಿಗೆಯ ನೈವೇದ್ಯ ಅರ್ಪಿತವಾಗುತ್ತದೆ.

ಒಂಭತ್ತು ದಿನಗಳ ಕಾಲ ಸಾಯಂಕಾಲ ಮಠದಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿದಿನವು ಒಂದೊಂದು ಮಠದಿಂದ ಒಬ್ಬೊಬ್ಬರು ಸ್ವಾಮಿಗಳನ್ನು ಆಹ್ವಾನಿಸಿ ಅವರಿಂದ ಭಕ್ತರಿಗೆ ಆಶೀರ್ವಚನ ನೀಡಿಸುತ್ತಾರೆ. ಹಾಗೆಯೇ ಗಣ್ಯವ್ಯಕ್ತಿಗಳನ್ನು ಕರೆಯಿಸಿ ಅವರಿಂದ ಉಪನ್ಯಾಸ ಏರ್ಪಡಿಸಿರುತ್ತಾರೆ. ಹಾಗೆಯೇ ಕ್ರೀಡೆ, ಸಾಹಿತ್ಯ, ಪತ್ರಿಕಾರಂಗ, ಸಮಾಜಸೇವೆ ಮುಂತಾದವುಗಳಲ್ಲಿ ಸಾಧನೆ ಮಾಡಿದವರನ್ನು ಆಹ್ವಾನಿಸಿ ಕಾರ್ಯಕ್ರಮದಲ್ಲಿ ಅವರಿಗೆ ಗೌರವದ ಸನ್ಮಾನ ಮಾಡುತ್ತಾರೆ. ನಂತರ ಬಂದವರೆಲ್ಲರಿಗೂ ಪ್ರಸಾದ ವ್ಯವಸ್ಥೆ ಇರುತ್ತದೆ. ಭಕ್ತರು ಧರ್ಮ ಮಾರ್ಗದಲ್ಲಿ ನಡೆಯಬೇಕು, ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು, ಸಾಧನೆ ಮಾಡುವವರಿಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ನಡಿಸುತ್ತಾರೆ.

೩. ಪಡಿಯಮ್ಮನ ಕುದುರೆಗೆ ಪೂಜೆ

ದಿಗಂಬರೇಶ್ವರ ಸ್ವಾಮಿಗಳು ನಾಗರಾಳ ಗ್ರಾಮದಲ್ಲಿ ನೆಲಸಿದ ತಕ್ಷಣ ಅವರು ನಿತ್ಯವು ಪಡಿಯಮ್ಮನ ಪೂಜೆ ದರ್ಶನಕ್ಕೆ ಹೋಗಲು ಅನುಕೂಲವಾಗಲೆಂದು ಸ್ವಾಮಿಗಳಿಗೆ ಒಂದು ಕುದುರೆ ಮತ್ತು ಅದನ್ನು ಹಿಡಿದುಕೊಂಡು ಹೋಗಲು ಒಬ್ಬ ವ್ಯಕ್ತಿಯನ್ನು ಭಕ್ತರು ಗೊತ್ತುಪಡಿಸಿದರು. ಅಂದಿನಿಂದ ಇವತ್ತಿನವರೆಗೂ ಮಠದಲ್ಲಿ ಸದಾ ಕುದುರೆ ಇದೆ. ಇದನ್ನು ಮಠದ ಪಟ್ಟದ ಕುದುರೆ ಎನ್ನಲಾಗುತ್ತದೆ. ಇದು ಹೆಣ್ಣು ಕುದುರೆಯೇ ಆಗಿರುತ್ತದೆ. ತಾವು ಆರಾಧಿಸುವ ದೇವಿ ಹೆಣ್ಣು. ಹಾಗೆಯೇ ತಾವು ಹತ್ತುವ ಕುದುರೆ ಹೆಣ್ಣಾಗಿರಲೆಂದು ದಿಗಂಬರೇಶ್ವರರು ಬಯಸಿದರು. ಆ ಕುದುರೆ ತಮ್ಮ ಜೊತೆಗಿದ್ದರೆ ಪಡಿಯಮ್ಮ ತಾಯಿ ಅವರ ಜೊತೆಗಿದ್ದಂತೆ ಎಂದು ಅವರು ಭಾವಿಸಿದರು. ಇವತ್ತಿಗೂ ಮಠದಲ್ಲಿ ಆ ಪರಂಪರೆ ಮುಂದುವರೆದಿದೆ.

ತಾಯಿಗೆ ಸಂದಂತೆ ಪಟ್ಟದ ಕುದುರೆಗೂ ಪೂಜೆ ಸಲ್ಲುತ್ತದೆ. ಹೆಣ್ಣುಮಕ್ಕಳಿಗೆ ಹಾಕುವಂತೆ ಕುದುರೆಯ ಕಾಲಲ್ಲಿ ಬೆಳ್ಳಿಯ ಕಡಗವನ್ನು ಹಾಕಲಾಗಿದೆ. ಬೀಳಗಿಯಲ್ಲಿ ನೆಲೆಸಿರುವ ತುಮ್ಮರಮಟ್ಟಿ ಗೌಡರು ಪ್ರತಿವರ್ಷ ಪಡಿಯಮ್ಮನ ಜಾತ್ರೆಯ ಪೂರ್ವದಲ್ಲಿ ಪಟ್ಟದ ಕುದುರೆಯನ್ನು ತಮ್ಮ ಮನೆಗೆ ಆಹ್ವಾನಿಸುತ್ತಾರೆ. ಬಂದ ಕುದುರೆಗೆ ಪಾದ ಪೂಜೆ ಮಾಡಿ ಅದಕ್ಕೆ ಹಸಿರು ಸೀರೆ, ಖಣ, ಬಳೆ, ಉಡಿತುಂಬುವ ಸಾಮಾನುಗಳನ್ನು ಬಾಗೀನ ರೂಪದಲ್ಲಿ ಕೊಟ್ಟು ಕಳಿಸುತ್ತಾರೆ. ಕುದುರೆ ತಾಯಿಯ ಪ್ರತಿರೂಪ ಕುದುರೆಗೆ ಸಲ್ಲಿಸಿದ್ದು ತಾಯಿಗೆ ಮುಟ್ಟುತ್ತದೆ ಎಂಬ ನಂಬಿಕೆ ಇದಕ್ಕೆ ಕಾರಣ.

ನಾಗರಾಳ ಮಠಕ್ಕೆಪಟ್ಟದ ಕುದುರೆಯನ್ನು ಕೊಡುವವರು ಗೂಗಿಹಾಳದ ಗೌಡರು ಇದು ತಲೆಮಾರುಗಳಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಕುದುರೆ ಲಿಂಗೈಕ್ಯವಾದ ತಕ್ಷಣ ಮಠಕ್ಕೆ ಕುದುರೆಯನ್ನು ಕೊಡುವ ಪದ್ಧತಿಯನ್ನು ಗೌಡರು ಇಟ್ಟುಕೊಂಡುಬಂದಿದ್ದಾರೆ. ಸ್ಥಿತಿವಂತರಾದ ಗೌಡರು ಮಠಕಕೆ ಸ್ವಾಮಿಗಳು ಏನೇ ಕೇಳಿದರು ತಕ್ಷಣವೇ ಪೂರೈಸುವುದಕ್ಕೆ ಸದಾ ಸಿದ್ಧರಾಗಿರುತ್ತಾರೆ. ಕುದುರೆ ಲಿಂಗೈಕ್ಯವಾದಾಗ ಅದಕ್ಕೆ ಸಂಪ್ರದಾಯದ ರೀತಿಯಲ್ಲಿ ಮಠದ ಹೊಲದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

ದಿಗಂಬರೇಶ್ವರ ಸ್ವಾಮಿಗಳ ನಂತರ ಬಂದ ಸ್ವಾಮಿಗಳೆಲ್ಲರೂ ಪಡಿಯಮ್ಮನ ದರ್ಶನಕ್ಕೆ ಕುದುರೆಯ ಮೇಲೆಯೇ ಹೋಗುತ್ತಿದ್ದರು. ತಾವು ಎಲ್ಲಿಯೇ ಹೋದರು ಕುದುರೆಯ ಮೇಲೆಯೇ ಹೋಗುತ್ತಿದ್ದರು. ಆದರೆ ಈಗಿನ ಸ್ವಾಮಿಗಳು ಕುದುರೆಯನ್ನು ಅಷ್ಟಾಗಿ ಬಳಸುವುದಿಲ್ಲ. ಆದರೆ ಜಾತ್ರೆಗೆ ಪಟ್ಟಿಗೆ ಹೋಗುವ ಸಂದರ್ಭದಲ್ಲಿ ತಪ್ಪದೇ ಕುದುರೆಯನ್ನು ಬಳಸುತ್ತಾರೆ. ನಾಗರಾಳದ ಸುತ್ತಮುತ್ತಲಿನ ಹಳ್ಳಿಗಳಿಗೆ ಪಟ್ಟಿಗೆ ಹೋದಾಗ ಮೊದಲು ಒಬ್ಬ ವ್ಯಕ್ತಿಯೊಂದಿಗೆ ಕುದುರೆಯನ್ನು ಕಳಿಸಲಾಗುತ್ತದೆ. ನಂತರ ಸ್ವಾಮಿಗಳು ಹೋಗಿ ಪಟ್ಟಿಯನ್ನು ಸಂಗ್ರಹಿಸುತ್ತಾರೆ. ಸ್ವಾಮಿಗಳು ಆ ಗ್ರಾಮದಲ್ಲಿ ಇರದಿದ್ದರೂ ಊರ ಪಟ್ಟಿ ಕೆಲಸ ಮುಗಿಯುವವರೆಗೂ ಕುದುರೆ ಆ ಊರಲ್ಲಿಯೇ ಇರುತ್ತದೆ. ಕುದುರೆ ಇದ್ದರೆ ಸ್ವಾಮಿಗಳು ಪಡಿಯಮ್ಮ ಇದ್ದ ಹಾಗೆಯೇ ಎಂದು ಜನ ಭಾವಿಸುತ್ತಾರೆ.

ಪಡಿಯಮ್ಮನ ಕುದುರೆ ಭವಿಷ್ಯವನ್ನು ಹೇಳುತ್ತದೆ. ಯಾರಾದರೂ ಪ್ರತಿಷ್ಠಿತ ವ್ಯಕ್ತಿಗಳು ಬಂದಾಗ ಅವರಿಗೆ ಮುಂದೆ ಆಗುವ ಶುಭ ಅಶುಭಗಳನ್ನು ಕುದುರೆ ತನ್ನ ಕೂಗು ಮತ್ತು ಕಾಲೆತ್ತುವ ಮೂಲಕ ತಿಳಿಸುತ್ತದೆ. ಅದು ಹೇಳಿದ ರೀತಿಯಲ್ಲಿ ಘಟನೆಗಳು ಜರುಗುತ್ತವೆ. ಈಗ ಮಂತ್ರಿಯಾಗಿರುವ ಮುರುಗೇಶ ನಿರಾಣಿಯವರು ಚುನಾವಣೆಗೆ ನಿಲ್ಲುವ ಪೂರ್ವದಲ್ಲಿ ಮಠಕ್ಕೆ ಭೇಟಿ ಕೊಟ್ಟಿದ್ದರು. ಆಗ ಅವರು ಬರುವಾಗ ಕುದುರೆ ಜೋರಾಗಿ ಹೂಂಕರಿಸಿ ಕಾಲನ್ನು ಮೇಲೆ ಎತ್ತಿತಂತೆ. ಆಗ ಅವರಿಗೆ ಒಳ್ಳೆಯದಾಗುತ್ತದೆಂದು ಭಾವಿಸಲಾಯಿತು. ಅವರು ಚುನಾವಣೆಗೆ ನಿಂತು ಎರಡು ಭಾರಿ ವಿಧಾನಸಭೆಗೆ ಆರಿಸಿಬಂದರು. ಜೊತೆಗೆ ಮಂತ್ರಿಯು ಆದರು. ಪಡಿಯಮ್ಮನ ಕುದುರೆ ನುಡಿದ ಭವಿಷ್ಯ ನಿಜವಾಯಿತೆಂದು ಜನ ನಂಬುತ್ತಾರೆ.

ಈ ಕುದುರೆಯನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ವ್ಯಕ್ತಿಯನ್ನು ನಿಗದಿಪಡಿಸಲಾಗಿದೆ. ಆ ವ್ಯಕ್ತಿಯನ್ನು ಕುದುರೆ ಮುತ್ತ್ಯಾ ಎಂದೇ ಗುರುತಿಸಲಾಗುತ್ತದೆ. ಕುದುರೆ ನೋಡಿಕೊಳ್ಳುವ ಮನೆತನಕ್ಕೆ ಮಠದಿಂದ ಜಮೀನನ್ನು ಉಂಬಳಿಯಾಗಿ ನೀಡಲಾಗಿದೆ.

ಹೆಣ್ಣು ಸದಾ ಚಲನಶೀಲವಾದವಳು, ಕ್ರಿಯಾಶೀಲವಾದವಳು. ಹಾಗೆಯೇ ಕುದುರೆ ಸಹ ಚಲನಶೀಲವಾದದ್ದು. ಅದರಿಂದಲೇ ಹೆಣ್ಣು ಮತ್ತು ಕುದುರೆಯಲ್ಲಿ ಸಾಮ್ಯತೆಯನ್ನು ಭಾವಿಸಿರಬಹುದು. ಅದಕ್ಕಾಗಿ ಜಾಗೃತಳಾದ ದೇವಿಯ ಅಸ್ತಿತ್ವಕ್ಕೆ ಚಲನಶೀಲವಾದ ಕುದುರೆಯಲ್ಲಿ ಪರಿಭಾವಿಸಿರಬಹುದು. ಅದಕ್ಕಾಗಿ ಇಲ್ಲಿ ದೇವಿಗೆ ಸಲ್ಲುವ ಎಲ್ಲ ರೀತಿಯ ಪೂಜೆ ಪುನಸ್ಕಾರಗಳು ಚಲನಶೀಲವಾದ ಅವಳ ಹೆಸರಿನ ಕುದುರೆಗೂ ಸಲ್ಲುತ್ತವೆ..ಭಕ್ತರು ಕುದುರೆಯಲ್ಲಿಯೇ ತಾಯಿಯನ್ನು ಸಾರ್ಪತ್ಕರಿಸಿಕೊಳ್ಳುತ್ತಾರೆ.

. ಪಡಿಯಮ್ಮನಿಗೆ ದೀಪ ಹಾಕುವುದು

ನವರಾತ್ರಿಯಲ್ಲಿ ಕೆಲವೊಂದು ಮನೆಗಳಲ್ಲಿ ದೀಪ ಹಾಕುವಂತೆ ಇಲ್ಲಿಯೂ ಪಡಿಯಮ್ಮ ದೇವಿಗೆ ದೀಪ ಹಾಕಲಾಗುತ್ತದೆ. ಈ ದೀಪವನ್ನು ಹಾಕುವ ಉದು ಮಠದ ಹಿಂದಿರುವ ಕಪ್ಪರ ಪಡಿಯಮ್ಮನ ದೇವಸ್ಥಾನದಲ್ಲಿ ಶಿವರಾತ್ರಿಯ ದಿನ ಮಠದಲ್ಲಿರುವ ಪಡಿಯಮ್ಮನಿಗೆ ದೀಪ ಹಾಕಲಾಗುತ್ತದೆ. ಅಂದು ಹಾಕಿದ ದೀಪ ಜಾತ್ರೆ ರಥೋತ್ಸವದ ದಿನದವರೆಗೂ ಇರುತ್ತದೆ. ಅಲ್ಲಿಯವರೆಗೆ ತಾಯಿಯ ಮುಂದೆ ಸದಾ ದೀಪ ಬೆಳಗುತ್ತಿರಬೇಕು.

ದೇವಿಗೆ ದೀಪ ಹಾಕಿದ ದಿನದಿಂದ ರಥೋತ್ವಸದ ದಿನಗಳವರೆಗೂ ದಿಗಂಬರೇಶ್ವರ ಮಠದ ಸ್ವಾಮಿಗಳು ಉಪವಾಸ ಮಾಡುತ್ತಾರೆ. ಆ ಸಮಯದಲ್ಲಿ ನಿತ್ಯವೂ ಒಂದೇ ಹೊತ್ತು ಪ್ರಸಾದ ಸ್ವೀಕರಿಸುತ್ತಾರೆ. ಹಾಗೆಯೇ ಭಕ್ತರೂ ಉಪವಾಸ ಮಾಡುತ್ತಾರೆ. ಕೆಲವೊಂದು ಭಕ್ತರು ತಾಯಿಯ ದೀಪ ಹಾಕಿದ ದಿನದಿಂದ ತಾಯಿಯ ರಥೋತ್ಸವದ ದಿನದವರೆಗೂ ಕಾಲಲ್ಲಿ ಚಪ್ಪಲಿಗಳನ್ನು ಹಾಕದೆ ಬರಿಗಾಲಲ್ಲಿ ಅಡ್ಡಾಡುತ್ತಾರೆ. ಹೊಲಗಳಿಗೆ ಹೋದರೂ ಸಹ ಬರಿಗಾಲಲ್ಲಿಯೇ ಹೋಗುತ್ತಾರೆ. ಅದು ತಾಯಿಗೆ ಮಾಡುವ ಪದ್ಧತಿ, ಹೀಗಾಗಿ ನಮ್ಮ ಕಾಲುಗಳಿಗೆ ಏನೂ ಆಗುವುದಿಲ್ಲವೆಂಬ ಅಭಿಮತ ಭಕ್ತರದು.

. ಪಡಿಯಮ್ಮನ ಜಾತ್ರೆ

ಕಪ್ಪರ ಪಡಿಯಮ್ಮನ ಜಾತ್ರೆ ಈ ಭಾಗದಲ್ಲಿ ನಡೆಯುವ ಬಹುದೊಡ್ಡ ಮತ್ತು ವೈಭವಯುತ ಜಾತ್ರೆ. ಇದು ಪಡಿಯಮ್ಮನ ಜಾತ್ರೆಯಾದರೂ ನಡೆಯುವುದು ದಿಗಂಬರೇಶ್ವರರ ಮಠದ ಆವರಣದಲ್ಲಿಯೇ. ಮಠದ ಸ್ವಾಮಿಗಳ ನೇತೃತ್ವದಲ್ಲಿಯೇ ಎಲ್ಲಾ ಜಾತ್ರಾ ಕಾರ್ಯಕ್ರಮಗಳು ನಡೆಯುತ್ತವೆ. ಜಾತ್ರೆಗೆ ಬಂದ ಎಲ್ಲ ಭಕ್ತರಿಗೂ ಪ್ರಸಾದ ವ್ಯವಸ್ಥೆ ಮಾಡುವುದು ದಿಗಂಬರೇಶ್ವರರ ಮಠವೇ. ದೇವಿಯ ಜಾತ್ರೆ ಭಕ್ತನ ಮಠದಲ್ಲಿ ನಡೆಯುವುದು ಇಲ್ಲಿಯ ವೈಶಿಷ್ಟವಾಗಿದೆ. ಮುಖ್ಯವಾಗಿ ಜಾತ್ರೆ ನಡೆಯುವುದು ಯುಗಾದಿ ಅಮವಾಸ್ಯೆಯಿಂದ ದವನದ ಹುಣ್ಣಿಮೆವರೆಗೂ ಪ್ರತಿದಿನವೂ ಒಂದೊಂದು ರೀತಿಯ ಕಾರ್ಯಕ್ರಮಗಳು ಜರುಗುತ್ತವೆ. ಇದಕ್ಕೂ ಪೂರ್ವದಲ್ಲಿಯೇ ಜಾತ್ರೆಯ ಪಟ್ಟಿ ಮಾಡುವ ಕಾರ್ಯ ಪ್ರಾರಂಭವಾಗಿರುತ್ತದೆ.

. ಪಡಿಯಮ್ಮನ ಜಾತ್ರೆ ಪಟ್ಟಿ ಎತ್ತುವುದು

ಇದು ಜಾತ್ರೆ ಪ್ರಾರಂಭವಾಗುವ ಮುನ್ನವೇ ನಡೆಯುವ ಕೆಲಸ. ಜಾತ್ರೆಯ ಖರ್ಚಿಗಾಗಿ ಭಕ್ತರಿಂದ ಹಣ ಸಂಗ್ರಹಿಸಿ ಪಟ್ಟಿ ಮಾಡಲಾಗುತ್ತದೆ. ಮಠವು ಶ್ರೀಮಂತವಾಗಿದ್ದು, ಜಾತ್ರೆಯನ್ನು ಮಾಡಲು ಮಠಕ್ಕೆ ಅಸಾಧ್ಯವಾದ ಕೆಲಸವೇನಲ್ಲ. ಆದರೆ ಇದು ಪರಂಪರೆಯಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಅದಕ್ಕಾಗಿ ಮಠವು ಪಡಿಯಮ್ಮನ ಜಾತ್ರೆಗಾಗಿ ಭಕ್ತರಿಂದ ಪಟ್ಟಿಯನ್ನು ಎತ್ತುತ್ತದೆ.

ಜಾತ್ರೆಗೆ ತಿಂಗಳು ಮುಂಚೆಯೇ ಅಂದರೆ ಶಿವರಾತ್ರಿಯಿಂದಲೇ ನೆರೆಯ ಗ್ರಾಮಗಳಿಗೆ ಪಟ್ಟಿಯನ್ನು ಮಾಡಲು ತೆರಳಲಾಗುತ್ತದೆ. ಪಟ್ಟಿಗೆ ಮಠದ ಸ್ವಾಮಿಗಳು, ಮಠದಲ್ಲಿರುವವರು, ಮಠದ ಭಕ್ತರೂ ಹೋಗುತ್ತಾರೆ. ಸ್ವಾಮಿಗಳು ಪಟ್ಟಿಮಾಡಲು ತೆರಳುವ ಮುಂಚೆಯೇ ಗ್ರಾಮಕ್ಕೆ ಒಬ್ಬ ವ್ಯಕ್ತಿ ಕುದುರೆಯನ್ನು ತೆಗೆದುಕೊಂಡು ಹೋಗಿರುತ್ತಾನೆ. ನಂತರ ಸ್ವಾಮಿಗಳು ಹೋಗುತ್ತಾರೆ. ಸ್ವಾಮಿಗಳು ಒಮ್ಮೆ ಗ್ರಾಮಕ್ಕೆ ತೆರಳು ಭೇಟಿ ಕೊಟ್ಟರಾಯಿತು. ಗ್ರಾಮದ ಜನ ಬಂದವರ ಕೈಯಲ್ಲಿ ಪಟ್ಟಿಯನ್ನು ಸಂಗ್ರಹಿಸಿ ಕಳುಹಿಸಿ ಕೊಡುತ್ತಾರೆ. ಆದರೆ ಪಟ್ಟಿಕಾರ್ಯ ಮುಗಿಯುವವರೆಗೂ ಮಠದ ಪಟ್ಟದ ಕುದುರೆ ಮಾತ್ರ ಗ್ರಾಮದಲ್ಲಿಯೇ ಇರಬೇಕು. ಒಂದು ವೇಳೆ ಸ್ವಾಮಿಗಳು ಅನಿವಾರ್ಯತೆಯಿಂದ ಗ್ರಾಮಕ್ಕೆ ತೆರಳದಿದ್ದರೂ ಪಟ್ಟದ ಕುದುರೆ ಹೋದರೆ ಸಾಕು ಜನ ಪಟ್ಟಿ ಮಾಡಿ ಕಳಿಸುತ್ತಾರೆ. ಭಕ್ತರು ಹಣ ಅಥವಾ ತಮ್ಮ ಹೊಲಗಳಲ್ಲಿ ಬೆಳೆದ ದವಸ ಧಾನ್ಯಗಳನ್ನು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದೇವಿಯ ಜಾತ್ರೆಗೆ ನೀಡುತ್ತಾರೆ. ಹಣವನ್ನು ಜಾತ್ರೆಯ ಇತರ ಖರ್ಚುಗಳಿಗೆ ಬಳಸಿದರೆ, ಧಾನ್ಯಗಳನ್ನು ಜಾತ್ರೆಗೆ ಬರುವ ಭಕ್ತರ ಪ್ರಸಾದಕ್ಕಾಗಿ ಬಳಸಲಾಗುತ್ತದೆ.

ನಾಗರಾಳದಲ್ಲಿ ಮಾತ್ರ ರಥೋತ್ಸವದ ಮುನ್ನಾದಿನ ಪಟ್ಟಿಯನ್ನು ಮಾಡಲಾಗುತ್ತದೆ. ಇಡೀ ಊರಿನ ಪಟ್ಟಿಯನ್ನು ಒಂದೇ ದಿನದಲ್ಲಿ ಮಾಡಲಾಗುತ್ತದೆ. ಮಠದ ಸ್ವಾಮಿಗಳು ಕೆಲವೊಂದು ಸೀಮಿತ ಮನೆಗಳಲ್ಲಿ ಹೋಗಿ ಕುಳಿತುಕೊಂಡು ಸ್ವಾಮಿಗಳು ಪಟ್ಟಿಗೆ ಬಂದಿದ್ದಾರೆಂದು ಭಕ್ತರಿಗೆ ಹೇಳಿಕಳಿಸುತ್ತಾರೆ. ಆಗ ಭಕ್ತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣ ದವಸಧಾನ್ಯಗಳನ್ನು ತೆಗೆದುಕೊಂಡು ಬಂದು ಸ್ವಾಮಿಗಳಿಗೆ ಅರ್ಪಿಸುತ್ತಾರೆ. ಹೀಗೆ ದಿಗಂಬರೇಶ್ವರ ಮಠದ ಸ್ವಾಮಿಗಳ ಮೂಲಕ ಪಡಿಯಮ್ಮನ ಜಾತ್ರೆಯ ಪಟ್ಟಿಯನ್ನು ಎತ್ತಲಾಗುತ್ತದೆ.