. ಯುಗಾದಿ ಅಮವಾಸ್ಯೆ

ಯುಗಾದಿ ಅಮವಾಸ್ಯೆ ದಿನ ಬೆಟ್ಟದಲ್ಲಿರುವ ಕಪ್ಪರ ಪಡಿಯಮ್ಮನಿಗೆ ಜಾತ್ರೆ ನಡೆಯುತ್ತದೆ. ಇದು ಚಿಕ್ಕ ಪ್ರಮಾಣದಲ್ಲಿ ನಡೆಯುತ್ತದೆ. ಜಾತ್ರೆಯ ದಿನ ಮಠದ ಸ್ವಾಮಿಗಳು ಮತ್ತು ಊರ ಜನರು, ವಾದ್ಯವೈಭವಗಳೊಂದಿಗೆ ಬೆಟ್ಟಕ್ಕೆ ಹೋಗಿ ದೇವಿಗೆ ಅಭಿಷೇಕ ಮಾಡಿ ಸೀರೆ, ಖಣ ಉಡಿಸಿ, ಉಡಿತುಂಬಿ ಕಾಯಿ, ಕರ್ಪೂರ ನೈವೇದ್ಯ ಅರ್ಪಿಸಿ ಬರುತ್ತಾರೆ. ಇದು ಗ್ರಾಮದ ಜನ ಮತ್ತು ಮಠದಿಂದ ನಡೆಯುವ ಜಾತ್ರೆ.

ಇನ್ನು ಬೇಟೆಯ ಹರಕೆ ಹೊತ್ತವರು ಹರಕೆ ತೀರಿಸುವುದು ಬಹುತೇಕ ಇದೇ ದಿನ. ಅವತ್ತು ಪ್ರಾಣಿ ಬಲಿ ಹರಕೆ ಹೊತ್ತವರೆಲ್ಲರೂ ತಾಯಿಯ ಪಾದಗಟ್ಟಿಯ ಹತ್ತಿರ ಪ್ರಾಣಿಬಲಿ ಕೊಟ್ಟು ಪಕ್ಕದ ಹೊಲಗಳಲ್ಲಿ ಅಡುಗೆ ಮಾಡಿ ತಾಯಿಗೆ ನೈವೇದ್ಯ ಅರ್ಪಿಸುತ್ತಾರೆ. ಬಹುತೇಕ ಆ ದಿನ ಬಂಜಾರ ಮತ್ತು ವಾಲ್ಮೀಕಿ ಜನಾಂಗದವರೇ ಹೆಚ್ಚಾಗಿ ಅಲ್ಲಿ ನೆರೆದು ಬೇಟೆಯ ಜಾತ್ರೆ ಮಾಡುತ್ತಾರೆ. ಆ ಸಮುದಾಯದವರು ಉದ್ಯೋಗಕ್ಕಾಗಿ ಎಲ್ಲಿಯೇ ಹೋಗಿ ನೆಲಸಿದ್ದರೂ ಆ ದಿನ ತಪ್ಪದೆ ಜಾತ್ರೆಗೆ ಆಗಮಿಸುತ್ತಾರೆ.

. ಸಪ್ತಾಹ

ಇದು ಜಾತ್ರೆಯ ರಥೋತ್ಸವಕ್ಕೆ ೫ ದಿನಗಳ ಮುಂಚೆ ನಡೆಯುವ ಕಾರ್ಯಕ್ರಮ ಚೈತ್ರ ಶುದ್ಧ ಪಂಚಮಿಯಿಂದ ನವಮಿಯವರೆಗೆ ೫ ದಿನಗಳ ಕಾಲ ಸಪ್ತಾಹ ನಡೆಯುತ್ತದೆ. ಸಪ್ತಾಹದ ದಿನಗಳಲ್ಲಿ ಮಠದಲ್ಲಿ ಭಜನೆ ನಡೆಯುತ್ತದೆ. ೫ ದಿನಗಳ ಕಾಲ ಹಗಲು ರಾತ್ರಿಯೆನ್ನದೆ ಅವ್ಯಾಹತವಾಗಿ ಹಿಡಿದ ತಂಬೂರಿಯನ್ನು ಕೆಳಗಿಡದೆ ಭಜನಾ ಮೇಳದವರು ಭಜನೆಯನ್ನು ಮಾಡುತ್ತಾರೆ. ನಾಗರಾಳ, ಕೊಂತಿಕಲ್ಲ ಗ್ರಾಮದವರು ಮತ್ತು ನಾಗರಾಳ ತಾಂಡಾದವರು ಈ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಪಡಿಯಮ್ಮನ ರಥೋತ್ಸವ

ಚೈತ್ರಶುದ್ಧ ದಶಮಿಯ ದಿನ ಪಡಿಯಮ್ಮನ ರಥೋತ್ಸವ ನಡೆಯುತ್ತದೆ. ಪಡಿಯಮ್ಮನದು ಎತ್ತರವಾದ ಕಟ್ಟಿಗೆಯ ರಥವಿದೆ. ಈ ರಥಕ್ಕೆ ಹಿಂದಿನ ದಿನವೇ ಒಳ್ಳೆಣ್ಣೆಯನ್ನು ಹಚ್ಚಿ ರಥ ಮಿರಗುವ ಹಾಗೆ ಸಿದ್ಧಮಾಡಿರುತ್ತಾರೆ. ರಥಕ್ಕೆ ಹಚ್ಚುವ ಒಳ್ಳೆಣ್ಣೆಯನ್ನು ಬಾಗಲಕೋಟೆಯ ಮಾರವಾಡಿ ಮನೆತನದವರು ನೀಡುತ್ತಾರೆ. ರಥವನ್ನು ಎಳೆಯುವ ಸ್ಥಳಕ್ಕೆ ರಥವನ್ನು ತಂದು ನಿಲ್ಲಿಸುವುದು ಮತ್ತು ರಥವನ್ನು ಎಳೆಯುವಾಗ ಅದು ಸುರಕ್ಷಿತವಾಗಿ ನಡೆಯುವಂತೆ ನೋಡಿಕೊಳ್ಳುವ ಕೆಲಸ ಬೀಳಗಿಯ ಭೋವಿಒ ಜನಾಂಗದವರು. ಆವತ್ತು ರಥಕ್ಕೆ ಮಾಡುವ ನೈವೇದ್ಯ, ಒಡೆಯ ಕಾಯಿಯನ್ನು ತೆಗೆದುಕೊಳ್ಳುವ ಹಕ್ಕಿರುವುದು ಸಹ ಅವರಿಗೆಯೇ.

ರಥೋತ್ಸವದ ದಿನ ಬಾಳೆಗಿಡ, ಮಾವಿನ ತಳಿರು, ಟೆಂಗಿನಗರಿ ಕಬ್ಬು, ಹೂಹಾರಗಳಿಂದ ರಥವನ್ನು ಅಲಂಕರಿಸಲಾಗುತ್ತದೆ. ರಥಕ್ಕೆ ಹಸಿರು ಸೀರೆಯನ್ನು ಉಡಿಸಲಾಗುತದೆ. ರಥದಲ್ಲಿ ದಿಗಂಬರೇಶ್ವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತತದೆ. ದಿಗಂಬರೇಶ್ವರರ ಮಠದ ಸ್ವಾಮಿಗಳು ಸಹ ರಥದಲ್ಲಿ ಕುಳಿತುಕೊಳ್ಳುತ್ತಾರೆ. ಮಠದಿಂದ ಮಠದ ಹತ್ತಿರವಿರುವ ಪಾದಗಟ್ಟಿಯವರೆಗೆ ರಥವನ್ನು ಎಳೆಯಲಾಗುತ್ತದೆ. ಭಕ್ತರು ರಥಕ್ಕೆ ಉತ್ತತ್ತಿ, ಬೆಂಡು, ಬೆತ್ತಾಸು ಎಸೆಯುತ್ತಾರೆ. ರಥೋತ್ಸವಕ್ಕೆ ಪೂರ್ವದಲ್ಲಿಯೇ ಹರಕೆ ಹೊತ್ತವರ ಮಕ್ಕಳನ್ನು ಪಡಿಯಮ್ಮನ ರಥದ ಮೇಲಿಂದ ಹಾರಿಸಲಾಗುತ್ತದೆ. ಹಾಗೆಯೇ ರಥಕ್ಕೆ ಸೀರೆ ಉಡಿಸುವ ಹರಕೆ ಹೊತ್ತವರು ರಥಕ್ಕೆ ಸೀರೆ ಉಡಿಸುತ್ತಾರೆ.

ಇಲ್ಲಿ ರಥವಿರುವುದು ಪಡಿಯಮ್ಮದೇವಿಯದಾದರೆ ರಥದಲ್ಲಿರುವ ಉತ್ಸವಮೂರ್ತಿ ದಿಗಂಬರೇಶ್ವರರದು. ಇಲ್ಲಿ ದಿಗಂಬರೇಶ್ವರರ ಮೂರ್ತಿಯಿದೆಯೆಂದು ಇದನ್ನು ದಿಗಂಬರೇಶ್ವರರ ರಥವೆಂದು ಹೇಳಲು ಬರುವುದಿಲ್ಲ. ಇಲ್ಲಿ ರಥಕ್ಕೆ ಉಡಿಸಿರುವ ಸೀರೆಯು ಮತ್ತು ದಿಗಂಬರೇಶ್ವರರ ಉತ್ಸವಮೂರ್ತಿ ಸಂಕೇತಿಸುವುದು ಪಡಿಯಮ್ಮ ಮತ್ತು ದಿಗಂಬರೇಶ್ವರರ ನಡುವೆ ಇರುವ ತಾಯಿ ಮಗನ ಸಂಬಂಧವನ್ನು ರಥವು ಸೀರೆ ಉಟ್ಟು ಪಡಿಯಮ್ಮನಾದರೆ ರಥದಲ್ಲಿ ಕುಳಿತಿರುವವರು ದಿಗಂಬರೇಶ್ವರರು. ದಿಗಂಬರೇಶ್ವರರು ಪಡಿಯಮ್ಮನ ಮಡಿಲಲ್ಲಿ ಕುಳಿತಿದ್ದಾರೆ. ಅವರಿಗೆ ತಾಯಿ ಮಡಿಲು ರಕ್ಷಣೆಯನ್ನು ನೀಡುತ್ತದೆಂಬುದನ್ನು ಹಿಂದೆ ದಿಗಂಬರೇಶ್ವರರನ್ನು ತಾಯಿ ಪಡಿಯಮ್ಮ ರಕ್ಷಣೆ ಮಾಡಿರುವುದನ್ನು ತಿಳಿಸುವ ರೀತಿಯಲ್ಲಿ ಈ ರಥ ರೂಪಗೊಂಡಿದೆ.

ಈ ರಥೋತ್ಸವದ ಇನ್ನೊಂದು ವೈಶಿಷ್ಟ್ಯವೆಂದರೆ ಬಾದಾಮಿಯ ಬನಶಂಕರಿಯ ಜಾತ್ರೆ ಯಾವ ವಾರ ನಡೆಯುತ್ತದೆಯೋ ಅದೇ ವಾರ ಪಡಿಯಮ್ಮನ ರಥೋತ್ಸವ ಜರುಗುತ್ತದೆ. ಅಂದರೆ ಬನದ ಹುಣ್ಣಿಮೆ ಯಾವ ವಾರ ಆಗುತ್ತದೆಯೋ ಅದೇ ದಿನ ಚೈತ್ರಶುದ್ಧ ದಶಮಿ ತಿಥಿ ಬರುತ್ತದೆ.

. ಹಾಲೋಕಳಿ

ಇದು ರಥೋತ್ಸವದ ಮರುದಿನ, ಅಂದರೆ ಚೈತ್ರಶುದ್ಧ ಏಕಾದಶಿಯಂದು ನಡೆಯುತ್ತದೆ.

ಉತ್ತರ ಕರ್ನಾಟಕದಲ್ಲಿ ಒಂದೊಂದು ಗ್ರಾಮದಲ್ಲಿ ಒಂದೊಂದು ರೀತಿಯ ಓಕುಳಿಗಳ ಸಂಪ್ರದಾಯವಿದೆ. ಮಹಿಳೆಯರಿಗೆ ಪುರುಷರು ನೀರು ಚೆಲ್ಲಿ ಮೋಜು ನೋಡುವ ಹನುಮಂತದೇವರ ಓಕುಳಿ, (ಇತ್ತೀಚೆಗೆ ಈ ಓಕುಳಿ ನಿಲ್ಲಿಸಲಾಗಿದೆ) ಮಹಿಳೆಯರೆ ಎರಡು ಗುಂಪುಗಳಲ್ಲಿ ನಿಂತು ಪರಸ್ಪರ ಸಗಣಿ ಎರಚಿಕೊಳ್ಳುವ ಚೆಂಗಳಿಕೆವ್ವನ ಓಕುಳಿ ಮುಂತಾದವು. ಆದರೆ ಇವೆಲ್ಲ ಓಕುಳಿಗಿಂತ ಭಿನ್ನವಾಗಿ ನಿಲ್ಲುವುದೇ ನಾಗರಾಳದ ಪಡಿಯಮ್ಮನ ಜಾತ್ರೆಯಲ್ಲಿ ನಡೆಯುವ ಹಾಲೋಕುಳಿ.

ರಥೋತ್ಸವಕ್ಕೆ ೨ ದಿನ ಪೂರ್ವದಲ್ಲಿಯೇ ಹಾಲೋಕಳಿಯ ಸಿದ್ಧತೆ ನಡೆಯುತ್ತದೆ. ಮಠದ ಪಕ್ಕದಲ್ಲಿ ಹರಿಯುವ ಹಳ್ಳದಲ್ಲಿ ಗುಂಡಿಯನ್ನು ತೋಡಲಾಗುತ್ತದೆ. ಆ ಗುಂಡಿಯಲ್ಲಿ ೪೦ ಅಡಿ ಎತ್ತರ, ಮೂರು ಕಾಲು ಅಡಿ ಸುತ್ತಳತೆಯ ಕಂಬವನ್ನು ೮ ದಿಕ್ಕುಗಳಿಂದ ಹಗ್ಗವನ್ನು ಬಿಗಿದು ನಿಲ್ಲಿಸಲಾಗುತ್ತದೆ. ಇದಕ್ಕೆ ಮೇಲೆ ಅಟ್ಟಣಿಗೆಯನ್ನು ಕಟ್ಟಲಾಗುತ್ತದೆ. ಹೀಗೆ ನಿಲ್ಲಿಸಿದ ಕಂಬಕ್ಕೆ ಹಾಲೋಕಳಿಯ ದಿನ ಗೋಧಿಹಿಟ್ಟು ಮತ್ತು ಹುಣಸೆ ಬೀಜದ ಜಿಗುಟನ್ನು ಸವರಲಾಗುತ್ತದೆ. ಜಿಗುಟನ್ನು ಸವರಿದ ನಂತರ ಒಬ್ಬ ವ್ಯಕ್ತಿ ಹಗ್ಗದ ಮೂಲಕ ಅಟ್ಟಣಿಗೆಯನ್ನು ತಲುಪುತ್ತಾನೆ. ಅಟ್ಟಣಿಗೆ ತಲುಪಿದ ವ್ಯಕ್ತಿಗೆ ಹಗ್ಗದ ಮೂಲಕ ಹಾಲು, ಮೊಸರು, ಬೆಣ್ಣೆ, ತುಪ್ಪ ಮುಂತಾದವುಗಳನ್ನು ಬಿಂದಿಗೆಯಲ್ಲಿ ತುಂಬಿ, ಆ ಬಿಂದಿಗೆಗಳನ್ನು ಅಟ್ಟದ ಮೇಲೆ ಕಳಿಸುತ್ತಾರೆ. ಜೊತೆಗೆ ಅಟ್ಟಣಿಗೆ ಅಲಂಕಾರಕ್ಕೆ ಬೇಕಾದ ಹೂ, ತಳಿರುಗಳನ್ನು ಹಗ್ಗದ ಮೂಲಕ ಕಳಿಸುತ್ತಾರೆ. ಅವೆಲ್ಲ ಅಟ್ಟಣಿಗೆ ಮುಟ್ಟಿ ಅಟ್ಟಣಿಗೆ ಅಲಂಕಾರಗೊಂಡ ನಂತರ ದಿಗಂಬರೇಶ್ವರ ಮಠದ ಸ್ವಾಮಿಗಳು ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಹಾಲೋಕಳಿಗೆ ವಿದ್ಯುಕ್ತವಾಗಿ ಚಾಲನೆ ನೀಡುತ್ತಾರೆ.

ಸ್ವಾಮಿಗಳು ಚಾಲನೆ ಕೊಟ್ಟ ನಂತರ ಯುವಕರು ನೀರಿಗೆ ಧುಮುಕಿ ಕಂಬವನ್ನು ಏರಲು ಪ್ರಾರಂಭಿಸುತ್ತಾರೆ. ಅದೇ ವೇಳೆಗೆ ಅಟ್ಟಣಿಗೆಯಲ್ಲಿ ಕುಳಿತ ವ್ಯಕ್ತಿ ಅಲ್ಲಿಂದ ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನು ಧಾರಾಕಾರವಾಗಿ ಸುರಿಯಲು ಪ್ರಾರಂಭಿಸುತ್ತಾನೆ. ಮೊದಲೇ ಚಿಗುಟು ಸವರಿದ ಕಂಬ, ಜೊತೆಗೆ ಧಾರಕಾರವಾಗಿ ಸುರಿಯುತ್ತಿರುವ ಹಾಲು ತುಪ್ಪಗಳಿಂದ ಕಂಬ ಏರಲು ಹೊರಟ ಯುವಕರು ಕಂಬ ಜಾರಿ ಕಂಬದ ಮೇಲಿಂದ ಕೆಳಗಿರುವ ಹಳ್ಳಕ್ಕೆ ಬೀಳುತ್ತಾರೆ. ಮತ್ತೇ ಬಿಡದೆ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಾರೆ. ಇನ್ನೇನು ಅ‌ಟ್ಟಣಿಗೆಯನ್ನು ಮುಟ್ಟಿದ ಎನ್ನುತ್ತಿರುವಾಗಲೇ ಮತ್ತೇ ಕಂಬದ ಮೇಲಿಂದ ಜಾರಿ ಹಳ್ಳಕ್ಕೆ ಬೀಳುತ್ತಾರೆ. ಹಾಗೇ ಬೀಳುವ ವ್ಯಕ್ತಿ ತಾನು ಬೀಳುವುದರೊಂದಿಗೆ ತನ್ನ ಕೆಳಗಿದ್ದವರನ್ನು ತನ್ನ ಜೊತೆಯೇ ಹಳ್ಳಕ್ಕೆ ಬೀಳಿಸುತ್ತಾನೆ. ಈ ದೃಶ್ಯ ನೋಡುಗರನ್ನು ನಗಿಸಿ ಅವರ ಹೊಟ್ಟ ಹುಣ್ಣಾಗಿಸುತ್ತದೆ. ಮೇಲೇರುವ ಕೆಳಗೆ ಬೀಳಲುವ ಈ ಆಟ ಎಷ್ಟೋ ಹೊತ್ತಿನವರೆಗೆ ನಡೆಯುತ್ತದೆ.

ಕೊನೆಗೆ ಧೀರ ಗಟ್ಟಿಗನಾದವನು ತೋಳ್ಬಲ ಪ್ರದರ್ಶಿಸಿ ಕಂಬ ಏರುತ್ತಾನೆ. ಕಂಬ ಏರಿದ ಆ ವೀರನಿಗೆ ಮಠದಿಂದ ಬೆಳ್ಳಿ ಕಡಗ, ರೇಷ್ಮೆ ರುಮಾಲು, ಧೋತರಗಳ ಉಡುಗೊರೆಯನ್ನು ನೀಡಲಾಗುತ್ತದೆ. ಈ ಹಾಲೋಕುಳಿ ಯುವಕರ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗುವವರ ಜೊತೆಗೆ ನೋಡುಗರಿಗೆ ಮನರಂಜನೆಯನ್ನು ಒದಗಿಸುತ್ತದೆ. ಈ ಹಾಲೋಕಳಿಯಲ್ಲಿ ಭಾಗವಹಿಸುವುದಕ್ಕಾಗಿ ಯುವಕರು ಒಂದು ವಾರದಿಂದಲೇ ತಯಾರಿ ನಡೆಸಿರುತ್ತಾರೆ. ಕಂಬಗಳಿರುವಲ್ಲಿ ಯುವಕರು ಗುಂಪು ಸೇರಿ ಕಂಬವನ್ನು ಏರಲು ಪ್ರಯತ್ನಿಸುತ್ತಿರುತ್ತಾರೆ. ಜೊತೆಗೆ ಮುಂಚೆ ನಾಗರಾಳಕ್ಕೆ ಭೇಟಿ ಕೊಟ್ಟರೆ ಈ ದೃಶ್ಯ ನಮಗೆ ನೋಡಲು ಸಿಗುತ್ತದೆ.

. ಜಂಗಿಕುಸ್ತಿ

ಹಾಲೋಕಳಿಯ ಮರುದಿನ ನಾಗರಾಳದಲ್ಲಿ ಜಂಗಿಕುಸ್ತಿ ಏರ್ಪಡುತ್ತದೆ. ಈ ನಾಡಿನ ಸುಪ್ರಸಿದ್ಧ ಕುಸ್ತಿ ಪೈಲ್ವಾನರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಗೆದ್ದ ಫೈಲ್ವಾನನಿಗೆ ಮಠದ ವತಿಯಿಂದ ಉಡುಗೊರೆಗಳು ಸಲ್ಲುತ್ತವೆ.

. ಜಾನುವಾರುಗಳ ಜಾತ್ರೆ

ಜಂಗಿಕುಸ್ತಿಯ ಮರುದಿನವೇ ಜಾನುವಾರುಗಳ ಜಾತ್ರೆ ನಡೆಯುತ್ತದೆ. ಉತ್ತರ ಕರ್ನಾಟಕದ ದೊಡ್ಡ ಜಾನುವಾರುಗಳ ಜಾತ್ರೆಯಲ್ಲಿ ಇದು ಒಂದಾಗಿದೆ. ವಿವಿಧ ಜಾತಿಯ ಸುಮಾರು ೨೦ ರಿಂದ ೨೫ ಸಾವಿರದಷ್ಟು ಜಾನುವಾರುಗಳು ಈ ಜಾತ್ರೆಯಲ್ಲಿ ಸೇರುತ್ತವೆ. ನಾಗರಾಳದ ಜಾನುವಾರು ಜಾತ್ರೆಗೆ ಸುಮಾರು ಅರ್ಧ ಶತಮಾನದ ಇತಿಹಾಸವಿದೆ. ಈ ಜಾತ್ರೆಯನ್ನು ಪ್ರಾರಂಭಿಸಿದವರು ಮುಂಚಿನ ಶೇಷಪ್ಪಯ್ಯ ಸ್ವಾಮಿಗಳು. ರೈತರು ಜಾನುವಾರುಗಳನ್ನು ಕೊಳ್ಳಲು, ಮಾರಲು ಅನುಕೂಲವಾಗಲೆಂದು ಈ ಜಾತ್ರೆಯನ್ನು ಪ್ರಾರಂಭಿಸಿದರು. ಆಗ ಅನುಕೂಲವಿದಲ್ಲದ ಕಾಲದಲ್ಲಿ ಜಾನುವಾರುಗಳನ್ನು ತಂದವರಿಗೆ ಯಾವುದೇ ತೊಂದರೆ ಆಗಬಾರದೆಂದು ಒಣಮೇವು ಖರೀದಿ ಮಾಡಿ, ಬಾವಿ ತೋಡಿಸಿ ನೀರಿನ ವ್ಯವಸ್ಥೆ ಮಾಡಿ ಜಾತ್ರೆ ಪ್ರಾರಂಭಿಸಿದರು. ಇಂದು ಈ ಜಾತ್ರೆ ಅತ್ಯಂತಗ ಸುವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿದೆ. ಇದರಿಂದ ಜಾನುವಾರುಗಳನ್ನು ಮಾರುವ, ಕೊಳ್ಳುವ ಈ ಭಾಗದ ರೈತರಿಗೆ ಅತ್ಯಂತ ಅನುಕೂಲವಾಗಿದೆ.

ಈ ಜಾನುವಾರುಗಳ ಜಾತ್ರೆಯಲ್ಲಿ ರಾಸುಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಪಶುವೈದ್ಯಕೀಯ ಉಸ್ತುವಾರಿಯಲ್ಲಿ ಉತ್ತಮ ರಾಸುಗಳ ಪೋಷಕರಿಗೆ ಮಠದಿಂದ ಬಹುಮಾನ ಕೊಡಲಾಗುತ್ತದೆ.

. ಕಳಸ ಇಳಿಯುವುದು

ರಥೋತ್ಸವದ ೫ನೇ ದಿನಕ್ಕೆ ಕಳಸವನ್ನು ಇಳಿಯಲಾಗುತ್ತದೆ. ಇದು ಜಾತ್ರೆಯ ಅಂತಿಮ ದಿನವಾಗಿದ್ದು, ಕಳಸ ಇಳಿಯುವುದರೊಂದಿಗೆ ೧೫ ದಿನಗಳಿಂದ ನಡೆದುಕೊಂಡು ಬಂದ ಪಡಿಯಮ್ಮನ ಜಾತ್ರೆಗೆ ತೆರೆ ಬೀಳುತ್ತದೆ. ಕಳಸ ಇಳಿಯುವುದು ಬಹುತೇಕವಾಗಿ ದವನದ ಹುಣ್ಣಿಮೆಯ ದಿನವೇ ಬರುತ್ತದೆ. ರಥದ ಮೇಲಿರುವ ಕಳಸವನ್ನು ಇಳಿಯುವ ಮೂಲಕ ಜಾತ್ರೆ ಮುಕ್ತಾಯವಾಗುತ್ತದೆ. ರಥೋತ್ಸವದಿಂದ ೫ ದಿನಗಳ ಕಾಲ ಜನರಿಂದ ಗಿಜಿಗುಡುತ್ತಿದ್ದ ನಾಗರಾಳ ಗ್ರಾಮ ಆವತ್ತಿನಿಂದ ಭಣ ಗುಡಲು ಪ್ರಾರಂಭಿಸುತ್ತದೆ.

. ಜನಪದ ಕಲೆಗಳ ಪ್ರದರ್ಶನ

ಪಡಿಯಮ್ಮನ ಜಾತ್ರೆ ಜನಪದ ಕಲೆಗಳ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆಯಾಗಿದೆ. ರಥೋತ್ಸವದಿಂದ ಕಳಸದವರೆಗಿನ ೫ ದಿನಗಳು ನಿತ್ಯವು ವಿವಿಧ ರೀತಿಯ ಜನಪದ ಮನರಂಜನಾ ಕಾರ್ಯಕ್ರಮಗಳು ಜರುಗುತ್ತವೆ. ಭಜನೆ, ಲೇಝಿಮ್‌, ಪಾರಿಜಾತ, ಬಯಲಾಟ, ಗೀಗಿಪದ, ಹಲಗಿ ಮದಲಾಸಿ, ಕರಡಿ ಮಜಲು ಮುಂತಾದ ಜನಪದ ಕಲೆಗಳ ಪ್ರದರ್ಶನ ಇಲ್ಲಿ ನಡೆಯುತ್ತದೆ. ಜನಪದ ಕಲಾತಂಡಗಳು ರಾತ್ರಿಯಿಡಿ ತಮ್ಮ ಪ್ರದರ್ಶನ ನೀಡುತ್ತವೆ. ಇಲ್ಲಿಯ ಜಾತ್ರೆಯಲ್ಲಿ ಪಾರಿಜಾತ, ಬಯಲಾಟಗಳಂತು ಖಡ್ಡಾಯವಾಗಿ ನಡೆಯಲೇಬೇಕು. ಹೀಗಾಗಿ ನಾಗರಾಳದ ಕಪ್ಪರ ಪಡಿಯಮ್ಮನ ಜಾತ್ರೆ ಜನಪದ ಕಲಾತಂಡಗಳಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು, ಬೆಳೆಸಿಕೊಳ್ಳಲು, ಪ್ರೋತ್ಸಾಹ ನೀಡುವುದರೊಂದಿಗೆ, ಮರೆತು ಹೋಗುತ್ತಿರುವ ಈ ಕಲೆಗಳನ್ನು ನೋಡಲು ಜನತೆಗೆ ಅವಕಾಶ ಮಾಡಿಕೊಡುತ್ತದೆ. ೫ ದಿನಗಳ ಕಾಲ ಜನತೆ ಸಮೂಹ ಮಾಧ್ಯಮಗಳಿಂದ ಹೊರಬಂದು ಪಾರಂಪರಿಕ ಕಲಾಲೋಕದ ದರ್ಶನ ಮಾಡುತ್ತಾರೆ.

. ಕ್ರೀಡಾ ಕಾರ್ಯಕ್ರಮಗಳು

ಪಡಿಯಮ್ಮನ ಜಾತ್ರೆ ದೇಹ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರೀಡೆಗಳಿಗೂ ಅವಕಾಶ ಮಾಡಿಕೊಡುತ್ತದೆ. ಜಾತ್ರೆಯಲ್ಲಿ ಒಂದು ದಿನ ಕುಸ್ತಿ ಕಾರ್ಯಕ್ರಮವಂತು ಖಡ್ಡಾಯ. ಜೊತೆಗೆ ಓಟದ ಸ್ಪರ್ಧೆ, ಸೈಕಲ್‌ ರೇಸ್‌, ಸಂಗ್ರಾಣಿಕಲ್ಲು ಎತ್ತುವುದು, ಗುಂಡುಕಲ್ಲು ಎತ್ತುವುದು ಮುಂತಾದ ಗ್ರಾಮೀಣ ಕ್ರೀಡೆಗಳು ಜಾತ್ರೆಯ ೫ ದಿನಗಳು ನಡೆಯುತ್ತವೆ. ಇತ್ತೀಚೆಗೆ ಕ್ರಿಕೆಟ್‌, ವ್ಹಾಲಿಬಾಲ್‌, ಕಬ್ಬಡ್ಡಿ ಮುಂತಾದ ಆಧುನಿಕ ಆಟಗಳು ಅವಕಾಶವನ್ನು ಗಿಟ್ಟಿಸಿಕೊಂಡಿವೆ.

ಕಪ್ಪರ ಪಡಿಯಮ್ಮನ ಜಾತ್ರೆ ಕೇವಲ ಒಂದು ಸಂಪ್ರದಾಯ ಮಾತ್ರವಾಗಿಲ್ಲ. ಜಾತ್ರೆ ಗ್ರಾಮ ಜನರನ್ನು ಒಗ್ಗಟ್ಟುಗೊಳಿಸುವ ಕೆಲಸವನ್ನು ಮಾಡುತ್ತದೆ. ಯುವಕರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿದರೆ, ಹೊಲಗಳಲ್ಲಿ ದುಡಿಯುವ ಗ್ರಾಮೀಣ ಜನರಿಗೆ ಮನರಂಜನೆ ನೀಡಿ ಅವರ ದಣಿವನ್ನು ನಿವಾರಿಸುತ್ತದೆ. ಎಷ್ಟೋ ದಿನಗಳಿಂದ ದೂರವಿದ್ದ ಬಂಧುಗಳನ್ನು ಸೇರಿಸಿ ಅವರ ನೋವು ನಲಿವುಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಪಡಿಯಮ್ಮನ ಜಾತ್ರೆ ಕೇವಲ ಜಾತ್ರೆಯಾಗಿರದೆ ನಮ್ಮ ಗ್ರಾಮೀಣ ಸಂಸ್ಕೃತಿಯ ಮೂರ್ತರೂಪವಾಗಿದೆ.

III. ಪಡಿಯಮ್ಮನಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಆಚರಿಸುವ ಸಂಪ್ರದಾಯಗಳು

ಭಕ್ತರು ನಂಬಿರುವುದು ದೇವರನ್ನು ತಮಗಾದ ಒಳಿತು ಕೆಡುಕುಗಳಿಗೆಲ್ಲಾ ದೇವರೆ ಕಾರಣಿಕರ್ತ ಎಂಬುದು ಅವರ ಅಚಲವಾದ ನಂಬಿಕೆ. ನಾವು ದೇವರಿಗೆ ಸರಿಯಾಗಿ ನಡೆದುಕೊಂಡರೆ ದೇವರು ಯಾವಾಗಲೂ ನಮ್ಮನ್ನು ಕಾಯುತ್ತಾರೆ, ರಕ್ಷಿಸುತ್ತಾರೆ. ನಾವು ತಪ್ಪಾಗಿ ನಡೆದುಕೊಂಡರೆ ನಮಗೆ ಶಿಕ್ಷೆ ಕೊಡದೆ ಬಿಡುವುದಿಲ್ಲ ಎಂದು ನಂಬಿರುವ ಭಕ್ತರು ಅದಕ್ಕಾಗಿ ದೇವರಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾದ ಕೆಲವು ಸಂಪ್ರದಾಐಗಳನ್ನು ರೂಢಿಸಿಕೊಂಡಿರುತ್ತಾರೆ. ಅವನ್ನು ತಪ್ಪದೆ ಆಚರಿಸುತ್ತಾರೆ. ಹಾಗೆಯೇ ತಮಗೆನಾದರೂ ಕೆಟ್ಟದ್ದಾದರೆ ಅದಕ್ಕೆ ತಮ್ಮ ತಪ್ಪು ನಡುವಳಿಕೆ ಕಾರಣವೆಂದು ತಿಳಿದು ಅದರಿಂದ ಪಾರಾಗಲು ಮೊರೆ ಹೋಗುವುದು ಆ ದೇವರಿಗೆ. ಆ ಕೆಡುಕುಗಳಿಂದ ತಮ್ಮನ್ನು ರಕ್ಷಿಸಿದರೆ ನಿನಗೆ ಈ ರೀತಿಯಾಗಿ ಮಾಡುತ್ತೇವೆಂದು ದೇವರಿಗೆ ಹರಕೆ ಹೋಗುತ್ತಾರೆ. ಹಾಗೆಯೇ ತಮಗೇನಾದರೂ ಒಳ್ಳೆಯದಾಗಬೇಕಾದರೂ ಹರಕೆ ಹೋರುವುದು ಆ ದೇವರಿಗೇನೆ. ಪ್ರತಿಯೊಬ್ಬ ದೇವರಿಗೆ ಸಂಬಂಧಿಸಿದಂತೆ ಈ ಹರಕೆ ಸಂಪ್ರದಾಯಗಳನ್ನು ಕಾಣಬಹುದು. ಆದರೆ ಇವು ದೇವರಿಂದ ದೇವರಿಗೆ ಭಿನ್ನವಾಗಿರುತ್ತದೆ. ಹಾಗೆಯೇ ಪಡಿಯಮ್ಮನಿಗೆ ಸಂಬಂಧಿಸಿದಂತೆ ಕೆಲವೊಂದು ವಿಶಿಷ್ಟವಾದ ಸಂಪ್ರದಾಯ, ಹರಕೆಗಳು ಇವೆ.

. ಪಡಿಯಮ್ಮನ ಸೀಮೆಯಲ್ಲಿರುವ ಮನೆಗಳ ಜನರು ಆಚರಿಸುವ ಸಂಪ್ರದಾಯಗಳು

ಪಡಿಯಮ್ಮ ನೆಲೆಸಿರುವ ನಾಗರಾಳ ಮತ್ತು ಅವಳ ಸೀಮೆಯಲ್ಲಿ ಬರುವ ಸಿದ್ದಾಪುರ, ಸೊನ್ನ, ಢವಳೇಶ್ವರ ಗ್ರಾಮಗಳ ಜನತೆ ಪಡಿಯಮ್ಮನಿಗೆ ಸಂಬಂಧಿಸಿದಂತೆ ಇರುವ ಸಂಪ್ರದಾಯಗಳನ್ನು ಚಾಚೂ ತಪ್ಪದೆ ನಿತ್ಯವೂ ಪಾಲಿಸುತ್ತಾರೆ. ಹಾಗೆ ಮಾಡುವುದರಿಂದ ದೇವಿ ನಮ್ಮನ್ನು ಸದಾ ಕಾಯುತ್ತಾಳೆಂಬ ನಂಬಿಕೆ ಅವರದು. ಪಡಿಯಮ್ಮನ ಸೀಮೆಯಲ್ಲಿ ಬರುವ ಮನೆಗಳಲ್ಲಿ ಯಾವುದೇ ಶುಭಕಾರ್ಯಗಳಲ್ಲಿ ನಡೆದರೂ ಆಗ ಅವರು ಮೊದಲು ನಮಿಸುವುದು, ಪೂಜೆ ಸಲ್ಲಿಸುವುದು ಪಡಿಯಮ್ಮಳಿಗೆ. ಶುಭಕಾರ್ಯಗಳಲ್ಲಿ ಇದೆ. ರೀತಿ ನಡೆದುಕೊಳ್ಳಬೇಕೆಂಬ ಸಂಪ್ರದಾಯಗಳನ್ನು ಹಾಕಿಕೊಂಡಿದ್ದಾರೆ. ಹಾಗೆಯೇ ಪಾಲಿಸುತ್ತಾರೆ.

. ಮದುವೆ ಕಾರ್ಯ

ಪಡಿಯಮ್ಮನ ಸೀಮೆಯ ಸರಹದ್ದಿನಲ್ಲಿ ಬರುವ ಮನೆಗಳಲ್ಲಿ ಏನಾದರೂ ಮದುವೆಗಳು ನಡೆದರೆ ಆ ಮನೆಯ ಮದುಮಗ ಮದುವೆಗೆ ಮುಂಚೆ ತಪ್ಪದೆ ಪಡಿಯಮ್ಮನಿಗೆ ದೀರ್ಘದಂಡ ನಮಸ್ಕಾರ(ದೀಡನಮಸ್ಕಾರ) ಹಾಕಬೇಕು. ಬೇಕಾದರೆ ಜೊತೆಗೆ ಅವರ ತಂದೆತಾಯಿಗಳು ಹಾಕಬಹುದು. ದೀರ್ಘದಂಡ ನಮಸ್ಕಾರ ಹಾಕಿದ ನಂತರ ಪಡಿಯಮ್ಮನಿಗೆ ಸೀರೆ ಖಣ ದಂಡೆ ಉಂಡಿತುಂಬುವ ಸಾಮಾನುಗಳನ್ನು ಅರ್ಪಿಸಿ ನೈವೇದ್ಯವನ್ನು ಸಲ್ಲಿಸಬೇಕು. ಹಾಗೆಯೇ ದಿಗಂಬರೇಶ್ವರ ಸ್ವಾಮಿಗಳ ಮಠಕ್ಕೂ ಕಾಯಿ ನೈವೇದ್ಯವನ್ನು ಅರ್ಪಿಸಬೇಕು ಹಾಕುವವರು ದಿಗಂಬರೇಶ್ವರನಿಗೂ ದೀರ್ಘದಂಡನಮಸ್ಕಾರ ಹಾಕುತ್ತಾರೆ. ಹೀಗೆ ಪಡಿಯಮ್ಮನನ್ನು ದಿಗಂಬರೇಶ್ವರ ಸ್ವಾಮಿಗಳನ್ನೂ ಸಂತೃಪ್ತಿಗೊಳಿಸಿದ ನಂತರವೇ ಮನೆಯಲ್ಲಿ ಮುಂದಿನ ಮಂಗಳಕಾರ್ಯಗಳನ್ನು ಮಾಡುವದು ಅಲ್ಲಿಯವರೆಗೆ ಮನೆಯಲ್ಲಿ ಯಾವುದೇ ಕಾರಣಗಳನ್ನು ಮಾಡುವಂತಿಲ್ಲ. ಊರಿನ ಜನ ಎಷ್ಟೇ ಕಲಿತರೂ ವಿದ್ಯಾವಂತರಾಗಿದ್ದರೂ ದೇವಿಗೆ ದೀರ್ಘದಂಡ ನಮಸ್ಕಾರ ಹಾಕುವ ಈ ಸಂಪ್ರದಾಯವನ್ನು ಬಿಟ್ಟಿಲ್ಲ.

ಮದುವೆಯಾಗಿ ಸೊಸೆಯನ್ನು ಮನೆ ತುಂಬಿಸಿಕೊಳ್ಳುವಾಗ ಸೊಸೆಯನ್ನು ಪಡಿಯಮ್ಮ ದಿಗಂಬರೇಶ್ವರ ಮಠಕ್ಕೆ ಕರೆದುಕೊಂಡು ಹೋಗಿ ಅವರಿಗೆ ಕಾಯಿ, ಕರ್ಪೂರ ಅರ್ಪಿಸಿದ ನಂತರವೇ ಸೊಸೆಯಿಂದ ಗೃಹಪ್ರವೇಶ ಕಾರ್ಯಕ್ರಮ ನಡೆಯುವುದು. ಹಾಗೆಯೇ ಮನೆಮಗಳನ್ನು ಸೀರೆ ಉಡಿಸಿ ಮಡಿಲು ತುಂಬಿ ಪತಿಮನೆಗೆ ಕಳಿಸುವಾಗ ತಾಯಿಗೆ ಕಾಯಿ ಕರ್ಪೂರ ಅರ್ಪಿಸಿದ ನಂತರವೇ ಅವಳನ್ನು ಕಳುಹಿಸಿ ಕೊಡುವುದು.

. ಸೀಮಂತ ಕಾರ್ಯ

ಮನೆಯಲ್ಲಿ ಹೆಣ್ಣುಮಗಳು ಗರ್ಭಿಣಿಯಾದಗ ಅವಳಿಗೆ ಉಡಿತುಂಬುವ ಮೂಲಕ ಸೀಮಂತ(ಕುಬಸ) ಕಾರ್ಯವನ್ನು ಮಾಡಲಾಗುತ್ತದೆ. ಪಡಿಯಮ್ಮನ ಭಕ್ತರು ಗರ್ಭಿಣಿ ಹೆಣ್ಣುಮಗಳಿಗೆ ಸೀಮಂತಕಾರ್ಯ ಮಾಡುವ ಪೂರ್ವದಲ್ಲಿ ಪಡಿಯಮ್ಮನಿಗೆ ಸೀರೆ, ಖಣ, ಬಳಿ ಊಡಿತುಂಬುವ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಉಡಿತುಂಬಿ ಬರುತ್ತಾರೆ. ತಾಯಿಗೆ ಉಡಿತುಂಬಿದ ನಂತರವೇ ಗರ್ಭಿಣಿ ಹೆಣ್ಣುಮಗಳಿಗೆ ಉಡಿತುಂಬಿ ಸೀಮಂತ ಕಾರ್ಯ ಮಾಡುವುದು. ಯಾವುದೇ ಕಾರಣಕ್ಕೂ ದೇವಿಗೆ ಉಡಿತುಂಬದೆ ಗರ್ಭಿಣಿ ಹೆಣ್ಣುಮಕ್ಕಳಿಗೆ ಉಡಿತುಂಬುವಂತಿಲ್ಲ. ಹಾಗೆಯೇ ದಿಗಂಬರೇಶ್ವರ ಸ್ವಾಮಿಗಳಿಗೂ ತಪ್ಪದೆ ತಾಯಿ, ಕರ್ಪೂರ, ನೈವೇದ್ಯ ಸಲ್ಲಿಸಬೇಕು.

. ಮಕ್ಕಳ ಜನನ

ಮನೆಯಲ್ಲಿ ಮಗು ಜನಿಸಿದ ತಕ್ಷಣ ತಾಯಿ ಕರ್ಪೂರವನ್ನು ಪಡಿಯಮ್ಮನಿಗೆ ಅರ್ಪಿಸುತ್ತಾರೆ. ಹಾಗೆಯೇ ದಿಗಂಬರೇಶ್ವರ ಸ್ವಾಮಿಗಳಿಗೂ ಸಲ್ಲಿಸಬೇಕು. ಇನ್ನೂ ಹೆರಿಗೆಯಾದ ಒಂದು ತಿಂಗಳಿನಲ್ಲಿ ಶೆಟ್ಟಿಗೆವ್ವಗೆ ಮಾಡಿದ ನಂತರ ಹೆರಿಗೆಯಾದ ಹೆಣ್ಣುಮಗಳನ್ನು ದೇವರಿಗೆ ಕರೆದುಕೊಂಡು ಹೋಗುವ ಪದ್ಧತಿ ಇದೆ. ಇಲ್ಲಿಯ ಜನ ಹಾಗೆ ಹೆರಿಗೆಯಾದ ಹೆಣ್ಣುಮಗಳನ್ನು ಮಗುವನ್ನು ಕರೆದುಕೊಂಡು ಹೋಗುವದು ಪಡಿಯಮ್ಮ ಮತ್ತು ದಿಗಂಬರೇಶ್ವರ ಸನ್ನಿಧಿಗೆ ಅಲ್ಲಿ ಹೋಗಿ ಎಣ್ಣೆಕಾಯಿ, ಕರ್ಪೂರ ಅರ್ಪಿಸಿ ಬರುತ್ತಾರೆ. ಇನ್ನು ತವರಲ್ಲಿ ಹೆರಿಗೆ ಮುಗಿಸಿಕೊಂಡು ಸೊಸೆ ತೊಟ್ಟಿಲು ಬಟ್ಟಲಿನೊಂದಿಗೆ ಬಂದಾಗ ದೇವಿಗೆ ಕಾಯಿ, ಕರ್ಪೂರ, ಅರ್ಪಿಸಿ ನಂತರವೇ ತೊಟ್ಟಿಲು ಸಮೇತ ಮಗುವನ್ನು ಒಳಗೆ ಕರೆದುಕೊಳ್ಳುವುದು.

. ಮಗುವಿನ ನಾಮಕರಣ

ಮಗು ಹುಟ್ಟಿದ ೧೨, ೧೩ನೇ ದಿನಗಳಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮ ನಡೆಯುತ್ತದೆ. ಮಗುವಿನ ನಾಮಕರಣ ಮಾಡುವವಳು ಮಗುವಿನ ಸೋದರತ್ತೆ..ಅವಳು ಮಗುವಿಗೆ ನಾಮಕರಣ ಮಾಡುವಾಗ ದೇವರ ಹೆಸರು, ಜನ್ಮಹೆಸರು, ಕರೆಯುವ ಹೆಸರು ಎಂದು ಮುಂತಾಗಿ ಐದು (೫) ಹೆಸರುಗಳನ್ನು ಇಡುತ್ತಾಳೇ. ಪಡಿಯಮ್ಮನ ಸೀಮೆಯ ಮನೆಗಳಲ್ಲಿ ಹಾಗೆ ಹೆಸರಿಡುವಾಗ ಅತ್ತೆ ಕರೆಯುವ ಮೊಟ್ಟಮೊದಲನೆಯ ಹೆಸರು ಹೆಣ್ಣುಮಗುವಾಗಿದ್ದರೆ. ಪಡಿಯಮ್ಮ ಗಂಡುಮಗುವಾಗಿದ್ದರೆ ಪಡಿಯಪ್ಪಾ ಎಂದೇ ಆಗಿರುತ್ತದೆ. ಗ್ರಾಮಗಳ ಪ್ರತಿಯೊಂದು ಮನೆಯಲ್ಲಿಯೂ ಪಡಿಯವ್ವಾ, ಪಡಿಯಪ್ಪಗಳು ಇದ್ದೇ ಇರುತ್ತಾರೆ. ಗ್ರಾಮದಲ್ಲಿ ಎಲ್ಲಾದರೂ ಸ್ವಲ್ಪ ಜನ ಗುಂಪುಗೂಡಿ ನಿಂತಾಗ ಪಡಿಯವ್ವಾ ಅಥವಾ ಪಡಿಯಪ್ಪಾ ಎಂದು ಕೂಗಿದರೆ ಸಾಕು ಕನಿಷ್ಠ ಹತ್ತಾರೂ ಜನರಾದರೂ ನಮ್ಮತ್ತ ತಿರುಗಿ ನೋಡದೆ ಇರುವುದಿಲ್ಲ. ಹೀಗೆ ಗ್ರಾಮ ಪಡಿಯವ್ವಾ ಪಡಿಯಪ್ಪಗಳಿಂದ ತುಂಬಿದೆ. ಇನ್ನೂ ನಾಮಕರಣದ ದಿನ ತಪ್ಪದೆ ಪಡಿಯಮ್ಮ ದಿಗಂಬರೇಶ್ವರಿಗೆ ಕಾಯಿ, ಕರ್ಪೂರ ನೈವೇದ್ಯಗಳು ಸಲ್ಲುತ್ತವೆ.

. ಮಕ್ಕಳ ಜವಳ

ಮಗು ಹುಟ್ಟಿದ ೫,೬,೧೧ನೇ ತಿಂಗಳಲ್ಲಿ ಮಗುವಿನ ಜವಳವನ್ನು ತೆಗೆಯುತ್ತಾರೆ. ಈ ಸೀಮೆಯಲ್ಲಿರುವ ಬಹುತೇಕ ಜನರು ತಮ್ಮ ಮಕ್ಕಳ ಜವಳವನ್ನು ತೆಗೆಯುವುದು ಪಡಿಯಮ್ಮನ ಮುಂದೆಯೇ ಅವತ್ತಿನ ದಿನ ಮಗುವಿನ ತಂದೆ ತಾಯಿಗಳು ದೇವಿಗೆ ದೀರ್ಘದಂಡ ನಮಸ್ಕಾರ ಹಾಕಿ ತಾಯಿಗೆ ಸೀರೆ, ಖಣ, ದಂಡೆ, ಉಡಿತುಂಬುವ ಸಾಮಾನು,ಕಾಯಿ, ಕರ್ಪೂರ ಅರ್ಪಿಸಿ ಪಡಿಯಮ್ಮನ ಮುಂದೆ ಜವಳ ತೆಗೆಯುವ ಕಾರ್ಯ ನೆರವೇರಿಸುತ್ತಾರೆ. ಒಂದು ವೇಳೆ ಮನೆದೇವರಿಗೆ ಮಕ್ಕಳ ಜವಳವನ್ನು ತೆಗೆಸಿಕೊಂಡು ಬಂರೆ ತಕ್ಷಣ ತಾಯಿಯ ಹತ್ತಿರ ಮಗುವನ್ನು ಕರೆದುಕೊಂಡು ಹೋಗಿ ತಾಯಿಗೆ ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿ ತಾಯಿಯ ಮುಂದೆ ಮಗುವನ್ನು ಮಲಗಿಸಿ ಆರ್ಶೀವಾದ ಪಡೆದುಕೊಂಡು ಬರುತ್ತಾರೆ. ನಂತರ ದಿಗಂಬರೇಶ್ವರ ಮಠಕ್ಕೂ ಹೋಗಿ ಸ್ವಾಮಿಗಳ ಗದ್ದುಗೆ, ಈಗಿರುವ ಸ್ವಾಮಿಗಳಿಗೆ ನಮಸ್ಕರಿಸಿ ಆರ್ಶಿವಾದ ಪಡೆದುಕೊಂಡು ಬರುತ್ತಾರೆ. ಇನ್ನೂ ಮಗು ಹುಟ್ಟಿದ ನಂತರ ಬರುವ ಜಾತ್ರೆಯಲ್ಲಿ ಮಗುವನ್ನು ಪಡಿಯಮ್ಮನ ರಥದ ಮೇಲಿಂದ ಹಾಲಿಸಲಾಗುತ್ತದೆ. ಹಾಗೆ ಮಾಡಿದರೆ ದೇವಿಯ ಆರ್ಶೀವಾದ ರಕ್ಷಣೆ ಮಗುವಿಗೆ ಸದಾಕಾಲ ಇರುತ್ತದೆಂಬ ನಂಬಿಕೆ ಭಕ್ತರದು.

. ಮಕ್ಕಳ ಆರೋಗ್ಯಕ್ಕಾಗಿ

ಚಿಕ್ಕ ಮಕ್ಕಳಿಗೆ ಏನಾದರೂ ಗೊಬ್ಬರ, ತಟ್ಟು, ಗಣಜಿಲೆಗಳು ಎದ್ದರೆ ಆಗ ಭಕ್ತರು ಮಕ್ಕಳ ಆರೋಗ್ಯಕ್ಕಾಗಿ ಮೊರೆ ಹೋಗುವುದು ಪಡಿಯಮ್ಮಳಿಗೆ ಮಗುವಿಗೆ ಐದು(೫) ದಿನ ಒಳ್ಳೆಣ್ಣೆ(ಗಾನದೆಣ್ಣೆ) ಹಚ್ಚಿ ಸ್ನಾನ ಮಾಡುತ್ತಾರೆ. ಏನಾದರೂ ಕರಿದು ಕಮರು ಪದಾರ್ಥಗಳನ್ನು ಮಗುವಿಗೆ ತಿನ್ನಿಸುತ್ತಾರೆ. ೫ನೇ ದಿನ ಮೊಸರನ್ನದ ನೈವೇದ್ಯವನ್ನು ತೆಗೆದುಕೊಂಡು ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗಿ ಅರ್ಪಿಸಿ ಬರುತ್ತಾರೆ. ಮತ್ತೆ ಮಂಗಳವಾರವು, ಶುಕ್ರವಾರವೂ ಬೇಳೆಗೆ ಹಾಕಿ ಕರಿಗಡಬು, ಮಾಡಿ ತುಂಬಿದ ನೈವೇದ್ಯದೊಂದಿಗೆ ಎಣ್ಣೆಕಾಯಿಯನ್ನು ದೇವಿಗೆ ಅರ್ಪಿಸಿ ಬರುತ್ತಾರೆ. ತಾಯಿಗೆ ಹೀಗೆ ಮಾಡುವುದರಿಂದ ಮಕ್ಕಳಿಗೆ ಬಂದ ರೋಗಗಳು ಗುಣವಾಗುತ್ತವೆಂಬ ನಂಬಿಕೆ ಭಕ್ತರದ್ದು.

. ಹಬ್ಬಹರಿದಿನಗಳಲ್ಲಿ

ಅಮವಾಸ್ಯೆ, ಹುಣ್ಣಿಮೆ, ಹಬ್ಬಹರಿದಿನಗಳಿದ್ದಾಗ ಭಕ್ತರ ಮನೆಯಿಂದ ತಪ್ಪದೆ ಪಡಿಯಮ್ಮನಿಗೆ ಕಾಯಿ, ಕರ್ಪೂರ, ನೈವೇದ್ಯ, ಸಲ್ಲಲೇಬೇಕು. ಹಬ್ಬದ ಅಡುಗೆಯನ್ನು ಮಾಡಿದ ಹೆಣ್ಣುಮಕ್ಕಳು ಅಡುಗೆಯಾದ ತಕ್ಷಣ ಅಡುಗೆ ಮಾಡಿದ ಪಾತ್ರೆಗಳ ಹೆಗಲುದೊಳೆದು(ನೀರಿನಿಂದ ಪಾತ್ರೆಯ ಸುತ್ತಲೂ ಕೈಯಾಡಿಸಿ) ಪಾತ್ರೆಗಳಿಗೆ ವಿಭೂತಿ, ಕುಂಕುಮ ಹಚ್ಚಿ ಪೂಜೆ ಮಾಡುತ್ತಾರೆ. ನಂತರ ಕಾರ್ಯವೇ ದೇವರುಗಳಿಗೆ ನೈವೇದ್ಯ ಮಾಡುವುದು. ಹಾಗೆ ಮಾಡುವ ನೈವೇದ್ಯಗಳಲ್ಲಿ ಮೊದಲು ಮಾಡುವ ನೈವೇದ್ಯವೇ ಪಡಿಯಮ್ಮನದು. ನಂತರ ದಿಗಂಬರೇಶ್ವರನಿಗೂ, ಹೊಲಗಳಿಗೂ, ಸುತ್ತಮುತ್ತಲಿನ ದೇವರುಗಳಿಗೂ ಮಾಡಲಾಗುತ್ತದೆ. ಹೀಗೆ ಹಬ್ಬಹರಿದಿನಗಳಲ್ಲಿ ಎಲ್ಲ ಭಕ್ತರ ಮನೆಯಿಂದಲೂ ದೇವಿಗೆ ನೈವೇದ್ಯ, ಕಾಯಿ ಅರ್ಪಿತವಾಗುತ್ತವೆ.

. ಹೊಸದಾಗಿ ಉದ್ಯೋಗ ಆರಂಭಿಸಿದರೆ, ವಾಹನ ತಂದರೆ

ಈ ಭಾಗದ ಜನರು ಏನಾದರೂ ವ್ಯಾಪಾರ ಉದ್ಯೋಗ ಆರಂಭಿಸಿದರೆ ಮೊದಲು, ಪಡಿಯಮ್ಮನಿಗೆ ಪೂಜೆ ಮಾಡಿಸಿ, ಉಡಿ ತುಂಬಿ ನಂತರವೇ ತಮ್ಮ ಉದ್ಯೋಗ ಆರಂಭಿಸುವುದು. ವಾಹನಗಳನ್ನು ಖರೀದಿಸಿದಾಗ ಮೊದಲು ಅವನ್ನು ಪಡಿಯಮ್ಮನ ಸನ್ನಿಧಿಗೆ ಒಯ್ದು ತಾಯಿಗೆ ಪೂಜೆ ಮಾಡಿ ಕಾಯಿಕರ್ಪೂರ ಸಲ್ಲಿಸಿ ನಂತರ ತಾವು ತಂದ ವಾಹನಕ್ಕೆ ಅಲ್ಲಿಯೇ ಪೂಜೆ ಮಾಡಿಸಿಕೊಂಡು ಬರುತ್ತಾರೆ. ನಂತರ ದಿಗಂಬರೇಶ್ವರನಿಗೆ ಪೂಜೆ ಮಾಡಿಸಿ ಮಠದ ಮುಂದೆಯು ವಾಹನದ ಪೂಜೆ ಮಾಡಿಸುತ್ತಾರೆ. ನಂತರವೇ ವಾಹನ ತಂದವರ ಮನೆ ಸೇರುವುದು. ಭಾರಿ ವಾಹನಗಳನ್ನು ತಂದರೆ ದೇವಿಗೆ ಮುತ್ತೈದೆಯರಿಗೆ ದಿಗಂಬರೇಶ್ವರನಿಗೆ ಅಭಿಷೇಕವನ್ನು ಮಾಡಿಸುವುದು ಖಡ್ಡಾಯ ಎನ್ನುವಂತೆ ಭಕ್ತರು ಪಾಲಿಸುತ್ತಾರೆ.

ಮನೆಯಲ್ಲಿ ಆಡು ಗಂಡುಮರಿ ಹಾಕಿದಾಗ

ಇಲ್ಲಿ ಮನೆಗಳಲ್ಲಿ ಸಾಕಿದ ಆಡುಗಳು ಮೊದಲನೇ ಸಾರಿ ಗಂಡುಮರಿ(ಹೋತಮರಿ) ಹಾಕಿದಾಗ ಆ ಮರಿ ಸಲ್ಲುವುದು ಪಡಿಯಮ್ಮನಿಗೆ ಆ ಮರಿಯನ್ನು ಪಡಿಯಮ್ಮನ ಬೇಟೆಗಾಗಿ ಮೀಸಲಿಡಲಾಗುತ್ತದೆ. ಅದನ್ನು ಮಾರುವಂತಿಲ್ಲ ಅದನ್ನು ಪಡಿಯಮ್ಮನಿಗೆ ಬಿಟ್ಟದ್ದು ಎಂದು ಹೇಳಲಾಗುತ್ತದೆ. ಅದು ದೊಡ್ಡದಾದ ನಂತರ ಅದನ್ನು ಪಡಿಯಮ್ಮನಿಗೆ ಬೇಟೆ ಮಾಡಿ ನೈವೇದ್ಯ ಮಾಡಲಾಗುತ್ತದೆ.

. ಸಾಕು ಪ್ರಾಣಿಗಳು ಕರು ಹಾಕಿದಾಗ

ಮನೆಯಲ್ಲಿರುವ ಆಕಳು, ಎಮ್ಮೆ, ಮುಂತಾದ ಸಾಕುಪ್ರಾಣಿಗಳು ಕರುಹಾಕಿದಾಗ ಆ ಪ್ರಾಣಿಯ ಗಿಣ್ಣುಹಾಲನ್ನು ತಪ್ಪದೆ ಪಡಿಯಮ್ಮನಿಗೆ ಕಳುಹಿಸಿ ನೈವೇದ್ಯ ಮಾಡುತ್ತಾರೆ. ಕರು ಹಾಕಿದ ನಂತರ ಆ ಹಾಲಿನಿಂದ ಮೊದಲನೇ ಸಲ ತುಪ್ಪ ತಯಾರಿಸಿದಾಗ ಅದನ್ನು ಮನೆ ದೇವರಿಗೆ ಇಷ್ಟದೇವರಿಗೆ ಮೀಸಲಿಡುವ ಪದ್ಧತಿ ಗ್ರಾಮೀಣರಲ್ಲಿದೆ ಆ ತುಪ್ಪದಿಂದ ದೇವರಿಗೆ ದೀಪ ಬೆಳಗಿಸುತ್ತಾರೆ. ಅದನ್ನು ಮೀಸಲು ತುಪ್ಪ ಎಂದೆ ಕರೆಯುತ್ತಾರೆ. ಹಾಗೆಯೇ ಇಲ್ಲಿ ಮೀಸಲಿಟ್ಟ ತುಪ್ಪ ಸಲ್ಲುವುದು ಪಡಿಯಮ್ಮ ಮತ್ತು ದಿಗಂಬರೇಶ್ವರರ ದೀಪಕ್ಕೆ.

. ಸಾಕುಪ್ರಾಣಿಗಳಿಗೆ ರೋಗರುಜಿನಗಳು ಬಂದಾಗ

ಇಲ್ಲಿಯ ಜನರು ತಾವು ಸಾಕಿದ ಸಾಕುಪ್ರಾಣಿಗಳಿಗೆ ಏನಾದರೂ ರೋಗ – ರುಜಿನುಗಳು ಬಂದರೆ ಅವರು ಮೊರೆ ಹೋಗುವುದು ಪಡಿಯಮ್ಮಳಿಗೆ ಹೆಚ್ಚಾಗಿ ಅವರು ಪಶು ಆಸ್ಪತ್ರೆಗಳಿಗೆ ಭೇಟಿ ಕೊಡುವುದಿಲ್ಲ. ಅಲ್ಲಿಗೆ ಹೋದರೂ ಅವರು ಮೊದಲು ದೇವಿಯ ಸನ್ನಿಧಿಗೆ ಹೋಗಿ ತಾಯಿಯ ಹತ್ತಿರ ತಮ್ಮ ಪ್ರಾಣಿಗಳಿಗೆ ಒಳ್ಳೆಯದು ಮಾಡೆಂದು ಬೇಡಿಕೊಂಡು ಬರುತ್ತಾರೆ. ಬರುವಾಗ ತಾಯಿಯ ಪ್ರಸಾದ (ಅಂಗಾರ)ವನ್ನು ತೆಗೆದುಕೊಂಡು ಬರುತ್ತಾರೆ. ಜೊತೆಗೆ ದಿಗಂಬರೇಶ್ವರರ ಮಠಕ್ಕೂ ಭೇಟಿಕೊಟ್ಟು ಅಲ್ಲಿಂದಲೂ ತೀರ್ಥ ಪ್ರಸಾದವನ್ನು ತರುತ್ತಾರೆ. ತಂದ ಪ್ರಸಾದವನ್ನು ಮೈಗೆಲ್ಲ ಸವರುತ್ತಾರೆ. ಜೊತೆಗೆ ಅದರ ಬಾಯಿಯಲ್ಲಿ ತೀರ್ಥ ಪ್ರಸಾದವನ್ನು ಹಾಕುತ್ತಾರೆ. ಹಾಗೆ ಮಾಡುವುದರಿಂದ ಖಂಡಿತವಾಗಿಯೂ ಪ್ರಾಣಿಗಳ ಖಾಯಿಲೆ ಗುಣವಾಗುತ್ತದೆಂಬ ನಂಬಿಕೆ ಅದರದು. ಖಾಯಿಲೆ ಗುಣವಾದ ನಂತರ ತಾಯಿಗೆ ನೈವೇದ್ಯ ಕಾಯಿ ಅರ್ಪಿಸುತ್ತಾರೆ.

. ಪಡಿಯಮ್ಮನ ಸೀಮೆಗಳಲ್ಲಿರುವ ಹೊಲಗಳ ಜನರು ಆಚರಿಸುವ ಸಂಪ್ರದಾಯಗಳು
ಪಡಿಯಮ್ಮನ ಸೀಮೆಯ ಸರಹದ್ದಿನಲ್ಲಿ ಬರುವ ಹೊಲಗಳ ಜನರು ತಾವು ಹೊಲಕ್ಕೆ ಸಂಬಂಧಿಸಿದಂತೆ ಉತ್ತುವ, ಬಿತ್ತುವ ಕಾರ್ಯಗಳನ್ನು ಮಾಡುವಾಗ ಪಡಿಯಮ್ಮನಿಗೆ ಸಂಬಂಧಿಸಿದ ಹಾಗೆ ಕೆಲವೊಂದು ಸಂಪ್ರದಾಯಗಳನ್ನು ಆಚರಿಸುತ್ತಾರೆ.

. ವಾರ ಹಿಡಿಯುವುದು

ಇದು ಮಳೆಗಾಲ ಆರಂಭವಾಗುವ ಮುನ್ನ ರೈತರು ಆಚರಿಸುವ ಸಂಪ್ರದಾಯ. ಮಳೆಗಾಲ ಆರಂಭವಾಗುವ ಮುನ್ನ ಅಂದರೆ ರೋಹಿಣಿ ಮಳೆ ಪ್ರಾರಂಭವಾಗುವ ಮುನ್ನ ವಾರಗಳು ಮುಗಿಯುವ ಹಾಗೆ ಹಿರಿಯರು ಸೇರಿ ವಾರ ಹಿಡಿಯುವ ದಿನವನ್ನು ಗೊತ್ತುಪಡಿಸುತ್ತಾರೆ. ವಾರ ಹಿಡಿಯುವ ಹಿಂದಿನ ದಿನ ನಾಳೆಯಿಂದ ವಾರ ಹಿಡಿಯಲಾಗುತ್ತದೆ, ಎಲ್ಲರೂ ವಾರದ ನಿಯಮವನ್ನು ಪಾಲಿಸಬೇಕೆಂದು ಡಂಗುರವನ್ನು ಸಾರಲಾಗುತ್ತದೆ. ವಾರದ ದಿನ ಮನೆಯಲ್ಲಿ ಬೀಸುವುದು, ಕುಟ್ಟುವುದು, ರೊಟ್ಟಿ ಮಾಡುವುದು, ಕರಿಯುವುದು ಮುಂತಾದ ಕಾರ್ಯಗಳನ್ನು ಮಾಡುವಂತಿಲ್ಲ. ಹಾಗೆಯೇ ಯಾವುದೇ ಯಂತ್ರಗಳನ್ನು ಪ್ರಾರಂಭಿಸುವಂತಿಲ್ಲ ಹೀಗೆ ೩ ಮಂಗಳವಾರ ೨ ಶುಕ್ರವಾರ ಈ ರೀತಿ ಮಾಡಲಾಗುತ್ತದೆ. ೩ನೇ ಮಂಗಳವಾರವನ್ನೂ ಕಡೇವಾರ ಎಂದು ಕರೆಯಲಾಗುತ್ತದೆ. ಅವತ್ತು ಊರ ಜನರಿಂದ ಗ್ರಾಮದೇವತೆಗಳಿಗೆ ಅಭಿಷೇಕ ಸೀರೆ, ಖಣ, ದಂಡೆ, ಅರ್ಪಿಸಿ, ಉಡಿ ತುಂಬುವ ಕಾರ್ಯವನ್ನು ನೆರವೇರಿಸಲಾಗುತ್ತದೆ. ಆ ದಿನ ಗ್ರಾಮದ ಎಲ್ಲ ಮನೆಗಳಲ್ಲಿ ಬೇಳೆ ಹಾಕಿ ಕುದಿಸಿದ ಹೂರಣಗಡಬು (ಕುಚಗಡುಬು) ತಯಾರಿಸಿ ಎಲ್ಲಾ ಗ್ರಾಮದೇವತೆಗಳಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಇತರ ಗ್ರಾಮಗಳಲ್ಲಿ ಹೀಗೆ ಗ್ರಮದೇವತೆಗಳಿಗೆ ವಾರ ಮಾಡಿ ಉಡಿ ತುಂಬಿದರೆ ರೈತರ ಉತ್ತುವ ಬಿತ್ತುವ ಕಾರ್ಯಕ್ಕೆ ಅನುಮತಿ ದೊರೆತಂತೆಯೇ.

ಆದರೆ ನಾಗರಾಳ ಗ್ರಾಮದಲ್ಲಿ ಇಲ್ಲಿಗೆ ವಾರ ಮಾಡುವ ಸಂಪ್ರದಾಯ ಮುಗಿಯುವುದಿಲ್ಲ. ಅವರು ಕಡೆ ವಾರ ಮುಗಿದ ನಂತರ ಬರುವ ಮಂಗಳವಾರವನ್ನು ಪಡಿಯಮ್ಮನ ವಾರವೆಂದು ಆಚರಿಸುತ್ತಾರೆ. ಹಿಂದಿನ ದಿನವೇ ಊರಿಗೆಲ್ಲ ಡಂಗುರ ಹೊಡೆಯುತ್ತಾರೆ. ಆವತ್ತು ಯಾರು ಕೆಲಸಕಾರ್ಯಗಳಿಗೆ ಹೋಗುವುದಿಲ್ಲ. ಆ ವಾರದ ದಿನ ಚಿಕ್ಕಮಕ್ಕಳಾದಿಯಾಗಿ ಊರಿನ ಗಂಡುಮಕ್ಕಳೆಲ್ಲ ಕೊಡಗಳನ್ನು ಹಿಡಿದುಕೊಂಡು ಕೃಷ್ಣಾ ನದಿಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಸ್ನಾನಮಾಡಿ ಮಡಿ ನೀರು ತುಂಬಿಕೊಂಡು ಗುಡ್ಡದ ಪಡಿಯಮ್ಮನ ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿ ದೇವಿಗೆ ಮತ್ತು ದೇವಿಯ ಮುಂದೆ ಇರುವ ಚಿಕ್ಕ ಪಾದಗಟ್ಟಿಗೆ ತಾವು ಒಯ್ದಿರುವ ನೀರಿನಿಂದ ಅಭಿಷೇಕ ನೆರವೇರಿಸುತ್ತಾರೆ. ನಂತರ ಕೆಳಗಡೆಯ ಪಾದಗಟ್ಟೆಯ ಹತ್ತಿರ ಬಂದು ನುಚ್ಚು (ಜೋಳದ ರವೆಯಿಂದ ತಯಾರಿಸಿದ ಪದಾರ್ಥ) ಮತ್ತು ಸಾರನ್ನು ಮಾಡಿ ಎಲ್ಲರೂ ಅಲ್ಲಿಯೇ ಊಟ ಮಾಡುತ್ತಾರೆ. ಹೀಗೆ ಮಾಡಿ ಅವರು ಸಾಯಂಕಾಲ ಮನೆಗೆ ತೆರಳುತ್ತಾರೆ. ಅವರು ಸಾಯಂಕಾಲ ಮನೆಗೆ ಬರುವುದರೊಳಗಾಗಿ ಸ್ವಲ್ಪವಾದರೂ ಮಳೆ ಆಗಿಯೇ ತೀರುತ್ತದೆ. ಹೀಗೆ ತಾಯಿ ಮುಂದಿನ ಬಿತ್ತುವ ಕಾರ್ಯಕ್ಕೆ ಮಳೇಯ ಮೂಲಕ ಅನುಮತಿ ನೀಡುತ್ತಾಳೆಂಬುದು ಭಕ್ತರ ನಂಬಿಕೆ. ಅದು ತಪ್ಪುವುದಿಲ್ಲವೆಂಬುದು ಅವರ ಭಾವನೆ. ಪಡಿಯಮ್ಮನ ವಾರ ಮುಗಿದ ನಂತರ ನಾಗರಾಳದ ರೈತರು ಬಿತ್ತುವ ಕಾರ್ಯಕ್ಕೆ ಮುಂದಾಗುತ್ತಾರೆ.

ಈ ವರ್ಷ ಸರಿಯಾಗಿ ಮಳೆ ಬರಲಿ, ಬೆಳೆಗಳು ಸರಿಯಾಗಿ ಬೆಳೆಯಲಿ ಎಂಬ ಕಾರಣಕ್ಕಾಗಿ ಈ ಸಂಪ್ರದಾಯ ಪಾಲಿಸುತ್ತಾರೆ. ವಾರ ಮುಗಿಯುವುದರೊಳಗಡೆ ಮಳೆಗಾಲ ಪ್ರಾರಂಭವಾಗಿ ಮಳೆಯಾಗಿ ಜನ ಬಿತ್ತಲು ಪ್ರಾರಂಭಿಸುತ್ತಾರೆ. ಒಂದು ವೇಳೆ ಎಲ್ಲ ಮಳೆಗಳು ಕೈಕೊಟ್ಟರೆ ಆಗ ತಾಯಿಗೆ ಕೋಪವೆಂದು ವಾರ ಸರಿಯಾಗಿ ಆಗಿಲ್ಲವೆಂದು ಮತ್ತೆ ವಾರ ಹಿಡಿಯುವ ಪದ್ಧತಿಯಿದೆ.