. ಬೀಜಗಳನ್ನು ಬಿತ್ತುವಾಗ

ರೈತರು ಹೊಲದಲ್ಲಿ ಬೀಜಗಳನ್ನು ಬಿತ್ತಲು ಹೋಗುವಾಗ, ಹೋಗುವ ಮುನ್ನ, ಬಿತ್ತುವ ಕೂರಿಗೆಗೆ ಸೀರೆ ಉಡಿಸಿ, ಉಡಿ ತುಂಬಿ, ನೈವೇದ್ಯ ಮಾಡಿ ಪೂಜೆ ಮಾಡುವ ಸಂಪ್ರದಾಯವಿದೆ. ಪಡಿಯಮ್ಮನ ಸೀಮೆಯ ರೈತರು ಕೂರಿಗೆಗೆ ಪೂಜೆ ಮಾಡುವ ಪೂರ್ವದಲ್ಲಿಯೇ ಪಡಿಯಮ್ಮನ ಬೆಟ್ಟಕ್ಕೆ ಹೋಗಿ ತಾಯಿಗೆ ಉಡಿ ತುಂಬುತ್ತಾರೆ. ಉಡಿ ತುಂಬಿ ಬಂದ ನಂತರವೇ ಕೂರಿಗೆಗೆ ಪೂಜೆ ಮಾಡಿ ಉಡಿ ತುಂಬಿ ನಂತರ ಬಿತ್ತುವ ಕಾಯಕ್ಕೆ ಮುಂದಾಗುತ್ತಾರೆ. ತಾಯಿಗೆ ಉಡಿ ತುಂಬಿದರೆ ಅವಳು ನಮ್ಮ ಮನೆಯು ದವಸ ಧಾನ್ಯಗಳಿಂದ ತುಂಬುವ ಹಾಗೆ ಮಾಡುತ್ತಾಳೆ ಎಂಭ ನಂಬಿಕೆ ಇವರದು.

. ಸೀಗೆ ಹುಣ್ಣಿಮೆ ಎಳ್ಳಮವಾಸ್ಯೆ ಚರಗ

ಸೀಗೆ ಹುಣ್ಣಿಮೆ ಎಳ್ಳ ಅಮವಾಸ್ಯೆಯ ಹೊತ್ತಿಗೆ ರೈತರು ಬಿತ್ತಿದ ಬೀಜಗಳು ಮೊಳಕೆ ಒಡೆದು ಬೆಳೆದು ತೆನೆ ತುಂಬಿಕೊಂಡು ನಿಂತಿರುತ್ತವೆ. ತೆನೆ ತುಂಬಿ’ ನಿಂತ ಬೆಳೆಗಳಿಂದ ಭೂತಾಯಿ ತುಂಬು ಗರ್ಭಿಣಿಯಂತೆ ಶೋಭಿಸುತ್ತಾಳೆ. ಈ ಸಂದರ್ಭದಲ್ಲಿ ಚರಗೆ ಚಲ್ಲುವ ಮೂಲಕ ರೈತರು ಭೂತಾಯಿಗೆ ಪೂಜೆ ಸಲ್ಲಿಸುತ್ತಾರೆ. ವಿವಿಧ ಬಗೆಯ ಪಕ್ವಾನಗಳನ್ನು ಮಾಡಿಕೊಂಡು ಹೊಲಕ್ಕೆ ಹೋಗಿ ಬನ್ನಿ ಗಿಡದ ಕೆಳಗೆ ಪೂಜೆ ಮಾಡಿ ಹೊಲಕ್ಕೆಲ್ಲ ಚರಗ ಚಲ್ಲುತ್ತಾರೆ. ಸುತ್ತಮುತ್ತಲ ಕಪ್ಪರ ಪಡಿಯಮ್ಮನ ಸೀಮೆಯ ಜನ ಹಾಗೆ ಚೆರಗು ಚೆಲ್ಲುವ ಪೂರ್ವದಲ್ಲಿ ಚರಗಕ್ಕೆ ಮಾಡಿದ ಎಲ್ಲ ಬಗೆಯ ಪಕ್ವಾನಗಳನ್ನು ನೈವೇದ್ಯ ಮಾಡಿಕೊಂಡು ಬಂದು ಮೊದಲು ತಾಯಿಗೆ ಅರ್ಪಿಸುತ್ತಾರೆ. ತಾಯಿಗೆ ನೈವೇದ್ಯ ಅರ್ಪಿಸಿ ಕಾಯಿ ಒಡೆದ ನಂತರವೇ ತಾವು ತಮ್ಮ ತಮ್ಮ ಹೊಲಗಳಿಗೆ ಚರಗ ಚಲ್ಲಲು ಹೊರಡುತ್ತಾರೆ.

. ಬೆಳೆ ಕಟಾವು ಮಾಡುವಾಗ

ರೈತರು ತಾವು ಬೆಳೆದ ಬೆಳೆಯನ್ನು ಕಟಾವು ಮಾಡುವ ಪೂರ್ವದಲ್ಲಿ ತಾಯಿಗೆ ಪೂಜೆ ಸಲ್ಲಿಸಬೇಕು. ತಾವು ಬೆಳೆಯನ್ನು ಕಟಾವು ಮಾಡುವ ಪೂರ್ವದಲ್ಲಿಯೇ ಒಂದು ಮಂಗಳವಾರವನ್ನು ಗೊತ್ತುಪಡಿಸಿರುತ್ತಾರೆ. ಅವತ್ತು ಮುತ್ತೈದೆಯರನ್ನು ಕರೆದುಕೊಂಡು ತಾಯಿಯ ಸನ್ನಿಧಿಗೆ ಹೋಗಿ ತಾಯಿಗೆ ಉಡಿ ತುಂಬಿ ಆರತಿ ಮಾಡಿ ನೈವೇದ್ಯ ಕಾಯಿ ಅರ್ಪಿಸುತ್ತಾರೆ. ನಂತರ ತಾವು ಕರೆದುಕೊಂಡು ಹೋದ ಮುತ್ತೈದೆಯರಿಗೂ ಉಡಿ ತುಂಬಿ ಆರತಿ ಮಾಡಿ ತಮ್ಮ ಹೊಲಕ್ಕೆ ಕರೆದುಕೊಂಡು ಬರುತ್ತಾರೆ.

ಪ್ರತಿಯೊಬ್ಬರು ತಮ್ಮ ಹೊಲದಲ್ಲಿಯೂ ಸಹ ಪಡಿಯಮ್ಮನನ್ನು ಸ್ಥಾಪಿಸಿರುತ್ತಾರೆ. ಹಾಗೆ ಅವರು ಹೊಲಕ್ಕೆ ಬಂದು ಹೊಲದಲ್ಲಿರುವ ಪಡಿಯಮ್ಮನಿಗೂ ಮತ್ತು ತಾವು ಕರೆದುಕೊಂಡು ಬಂದ ಮುತ್ತಯದೆಯರಿಗೂ ಉಡಿ ತುಂಬಿ ಮುತ್ತೈದೆಯರಿಗೆ ಪ್ರಸಾದ(ಊಟ) ಮಾಡಿಸುತ್ತಾರೆ. ತಾಯಿಗೆ ಹೀಗೆ ಉಡಿ ತುಂಬುವ ಕಾರ್ಯ ಮುಗಿದ ನಂತರವೇ ರೈತರು ತಾವು ಬೆಳೆದ ಬೆಳೆಗಳನ್ನು ಕಟಾವು ಮಾಡುವುದು.

. ರಾಶಿ ಮಾಡುವಾಗ

ರೈತರು ಹೊಲಗಳಲ್ಲಿ ರಾಶಿ ಮಾಡುವಾಗ ರಾಶಿಯಾದ ತಕ್ಷಣ ತಮ್ಮ ಮನೆ ದೇವರಿಗೆ, ಊರ ದೇವರಿಗೆ, ಮನೆ ಗುರುವಿಗೆ ಎಂದು ರಾಶಿಯ ಮೊದಲಿನ ಭಾಗವನ್ನು ಮೀಸಲಿಡುವ ಸಂಪ್ರದಾಯವಿದೆ. ಹಾಗೆ ಇಲ್ಲಿಯ ರೈತರು ರಾಶಿ ಮಾಡುವಾಗ ರಾಶಿಯ ಮೊದಲ ಭಾಗವನ್ನೇ ತೆಗೆಯುವುದು ಪಡಿಯಮ್ಮನಿಗೆ ರೈತರು ಹೆಚ್ಚು ಬೆಳೆಯಲಿ, ಕಡಿಮೆ ಬೆಳೆಯಲಿ, ತಾವು ಬೆಳೆದ ಒಂದು ಬೆಳೆಯ ಪಾಲು ತಾಯಿಗೆ ಸಲ್ಲಿಸಲೇಬೇಕು. ಹೀಗೆ ಮೀಸಲು ತೆಗೆದ ಧಾನ್ಯವನ್ನು ದಿಗಂಬರೇಶ್ವರ ಮಠಕ್ಕೆ ತಂದು ಕೊಡಲಾಗುತ್ತಯದೆ. ಈ ಧಾನ್ಯಗಳು ಮಠದ ದಾಸೋಹಕ್ಕೆ ಬಳಕೆಯಾಗುತ್ತವೆ.

. ವಾಣಿಜ್ಯ ಬೆಳೆಗಳು ಬಂದಾಗ

ಇತ್ತೀಚೆಗೆ ಕೃಷ್ಟ್ಣಾ ಮೇಲ್ದಂಡೆ ಯೋಜನೆಯಿಂದ ಪಡಿಯಮ್ಮನ ಸೀಮೆಯ ಸುತ್ತಮುತ್ತಲಿನ ಸೀಮೆಯ ಹೊಲಗಳು ಹೆಚ್ಚಾಗಿ ನೀರಾವರಿ ಸೌಲಭ್ಯ ಪಡೆದುಕೊಂಡಿವೆ. ಹೀಗಾಗಿ ಈ ಭಾಗದ ರೈತರೆಲ್ಲರು ಹೆಚ್ಚಾಗಿ ಕಬ್ಬು, ದ್ರಾಕ್ಷಿ, ಬಾಳೆಹಣ್ಣು ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಈ ಬೆಳೆಗಳು ಬೆಳದಾಗಲೂ ಸಹ ರೈತರು ಮೊದಲ ಅರ್ಪಿಸುವುದು ಪಡಿಯಮ್ಮನಿಗೆ. ಬಾಳೆಯ ಮೊದಲು ಗೊನೆ ಸಲ್ಲಿಸುವುದು. ಕಡಿದ ಮೊದಲ ಕಬ್ಬು ಸಲ್ಲುವುದು ಪಡಿಯಮ್ಮ ಮತ್ತು ದಿಗಂಬರೇಶ್ವರ ಸ್ವಾಮಿಗಳಿಗೆ ನಂತರವೇ ಮನೆಯವರ ಬಳಕೆ ಮತ್ತು ವ್ಯಾಪಾರ ಮಾಡುವುದು.

. ಭಾವಿ ತೋಡಿಸಿದಾಗ

ಪಡಿಯಮ್ಮನ ಸೀಮೆಯ ರೈತರು ನೀರಿಗಾಗಿ ತಮ್ಮ ಹೊಲದಲ್ಲಿ ಭಾವಿ ತೋಡಿಸುವಾಗ ಭಾವಿಯಲ್ಲಿ ನೀರು ಬಂದ ತಕ್ಷಣ ಮೊದಲ ನೀರನ್ನೇ ಎತ್ತಿಕೊಂಡು ಆ ದಿನ ತಾಯಿಯ ಅಭಿಷೇಕಕ್ಕೆ ಕಳಿಸುತ್ತಾರೆ. ನೀರು ಭೂಮಿ ತಾಯಿಯನ್ನು ಸೇರುವ ಮುನ್ನ ಅದು ಪಡಿಯಮ್ಮ ತಾಯಿಗೆ ಸಲ್ಲಬೇಕು. ಇತ್ತೀಚೆಗೆ ಭಾವಿ ತೋಡುವ ಪದ್ಧತಿ ಹೋಗಿವೆ. ಆಧುನಿಕ ತಂತ್ರಜ್ಞಾನದಿಂದ ಕೊಳವೆ ಬಾವಿ ಕೊರೆಸುತ್ತಿದ್ದಾರೆ. ಆದರೂ ಈ ಪದ್ಧತಿ ನಿಂತಿಲ್ಲ. ವಿದ್ಯುತ್‌ ಗುಂಡಿ ಒತ್ತಿ ಕೊಳವೆಯಿಂದ ನೀರು ಬಂದ ತಕ್ಷಣ ನೀರು ಭೂಮಿಯನ್ನು ಮುಟ್ಟುವ ಪೂರ್ವದಲ್ಲಿಯೇ ಹಿಡಿದು ತಾಯಿಗೆ ಅರ್ಪಿಸಿರುತ್ತಾರೆ.

ಪಡಿಯಮ್ಮನಿಗೆ ಸಂಬಂಧಿಸಿದಂತೆ ಬೀಜ ಬಿತ್ತುವಾಗ, ಮನೆಯಲ್ಲಿ ಪ್ರಾಣಿಗಳು ಕರು ಹಾಕಿದಾಗ, ಬೆಳೆಗಳು ಬಂದಾಗ, ಭಾವಿ ತೋಡಿಸುವಾಗ ಆಚರಿಸುವ ಸಂಪ್ರದಾಯಗಳು, ಶ್ರಮಸಂಸ್ಕೃತಿ ಪರಂಪರೆಯಿಂದ ಆಚರಿಸಿಕೊಂಡು ಬಂದ ಪದ್ಧತಿಗಳಾಗಿವೆ. ವಾಹನ ತಂದಾಗ ಪೂಜೆ ಮಾಡುವುದು. ವ್ಯಾಪಾರ ಆರಂಭಿಸಿದರೆ ಪೂಜೆ ಮಾಡುವುದು ಇತ್ತೀಚಿನ ನಾಗರೀಕತೆ ಬೆಳೆದಂತೆ ಹುಟ್ಟಿಕೊಂಡ ಸಂಪ್ರದಾಯಗಳಾಗಿವೆ. ಜನಪದ ಸಂಸ್ಕೃತನಗರ ಸಂಸ್ಕೃತಿ ಎರಡು ಹಂತಗಳಲ್ಲಿಯೂ ಪಡಿಯಮ್ಮನ ಆರಾಧನೆ ನಡೆಯುತ್ತದೆ. ೨ ಸಂಸ್ಕೃತಿಗಳಿಗೂ ಪಡಿಯಮ್ಮ ಪೂಜನೀಯವಾಗಿದ್ದಾಳೆ.

  1. ಪಡಿಯಮ್ಮನಿಗೆ ಸಂಬಂಧಿಸಿದಂತೆ ಭಕ್ತರು ಹೊರುವ ಹರಕೆಗಳು

ತಮಗೆ ಒಳ್ಳೆಯದಾಗಲೆಂದು ಭಕ್ತರು ಬಯಸಿ ಹರಕೆ ಹೊತ್ತುಕೊಳ್ಳುವುದು ಎಲ್ಲ ಕಡೆ ಕಂಡುಬರುವ ಪದ್ಧತಿ. ಹಾಗೆ ಕಪ್ಪರ ಪಡಿಯಮ್ಮನಿಗೂ ಹರಕೆ ಹೊರುತ್ತಾರೆ. ನೌಕರಿ, ಮಕ್ಕಳು, ಮದುವೆ, ಹೊಲಬೆಳೆ, ಕೋರ್ಟ್ ಕಛೇರಿ ಹೀಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ತಮಗೆ ತೊಂದರೆಗಳು ಬಂದಾಗ ಭಕ್ತರು ತಾಯಿಗೆ ಹರಕೆ ಹೊರುವ ಮೂಲಕ ತಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳುತ್ತಾರೆ. ಕೆಲವೊಂದು ಹರಕೆಗಳು ಎಲ್ಲ ಕಡೆಗಳಲ್ಲಿ ಕಂಡುಬರುವ ಹರಕೆಗಳಾದರೆ ಕೆಲವೊಂದು ಇಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಹರಕೆಗಳಾಗಿವೆ.

. ಮುತ್ತೈದೆಯರಿಗೆ ಮಾಡುವುದು

ಇದು ಪಡಿಯಮ್ಮನಿಗೆ ಬಹುತೇಕ ಜನರು ಹೊರುವ ಹರಿಕೆಯಾಗಿದೆ. ತಮಗೆ ಏನಾದರೂ ಒಳಿತಾಗಬೇಕಾದರೆ ಅವರು ತಾಯಿ ಸನ್ನಿಧಿಗೆ ಹೋಗಿ ತಾಯಿ ತಮಗೆ ಈ ಕೆಲಸವನ್ನು ಮಾಡಿಕೊಡು ನಾವು ನಿನಗೆ ಮುತ್ತೈದೆಯರಿಗೆ ಮಾಡುತ್ತೇವೆಂದು ಹರಕೆ ಹೊರುತ್ತಾರೆ. ತಾವು ಕೇಳಿದ ವರವನ್ನು ತಾಯಿ ಈಡೇರಿಸಿದರೆ ತಾಯಿಗೆ ಹರಕೆ ತೀರಿಸುತ್ತಾರೆ.

ಮುತ್ತೈದೆಯರಿಗೆ ಮಾಡುವವರು ತಾಯಿಗೆ ಹಸಿರು ಸೀರೆ, ಹಸಿರು ಖಣ, ಹಸಿರು ಬಳೆ, ಹೂವಿನ ದಂಡೆಗಳು, ಕುಡಿಯಾದ ಎಲೆ, ಮಕ್ಕಳಿರುವ ಅರಿಶಿನ ಬೇರು, ಅಡಿಕೆ, ಬಾಳೆಹಣ್ಣು, ನಿಂಬೆಹಣ್ಣು, ನೆನಗಡಲೆ, ಅಕ್ಕಿ, ಕೊಬ್ಬರಿ, ಕಾರೀಕು ಮುಂತಾದ ಉಡಿ ತುಂಬುವ ಸಾಮಾನುಗಳನ್ನು ತೆಗೆದುಕೊಂಡು ಐದು ಜನ ಮುತ್ತೈದೆಯರನ್ನು ಬೇಕಾದ ಬಂದುಬಳಗವನ್ನು ಕರೆದುಕೊಂಡು ತಾಯಿಯ ಸನ್ನಿಧಿಗೆ ಹೋಗುತ್ತಾರೆ. ಅರ್ಚಕರಿಗೆ ಮೊದಲೆ ತಾವು ತಾಯಿಯ ಸನ್ನಿಧಿಗೆ ಬರುವುದಾಗಿ ತಿಳಿಸಿರುತ್ತಾರೆ. ತಾವು ಅಲ್ಲಿಗೆ ಹೋಗಿ ತಾಯಿಗೆ ಅಭಿಷೇಕ ಮಾಡಿಸಿ ಹಸಿರು ಸೀರೆ, ಹಸಿರು ಖಣ ಉಡಿಸಿ ಹಸಿರು ಬಳೆ ತೊಡಿಸಿ ದಂಡೆಯನ್ನು ಕಟ್ಟುತ್ತಾರೆ. ನಂತರ ಉಡಿ ತುಂಬಿ ಆರತಿ ಮಾಡಿ ನೈವೇದ್ಯ ಅರ್ಪಿಸುತ್ತಾರೆ. ನಂತರ ತಾವು ಕರೆದುಕೊಂದು ಬಂದ ಮುತ್ತೈದೆಯರಿಗೆ ಅರಿಶಿನ ಕುಂಕುಮ ಹಚ್ಚಿ ದಂಡೆ ಕಟ್ಟಿ, ಉಡಿ ತುಂಬಿ ಆರತಿ ಮಾಡುತ್ತಾರೆ. ಅಲ್ಲಿಗೆ ಎಲ್ಲ ಊಟದ ಪದಾರ್ಥಗಳನ್ನು ಒಯ್ದಿದ್ದರೆ ಮುತ್ತೈದೆಯರಿಗೆ ಅಲ್ಲಿ ಊಟ ಮಾಡಿಸಿ ನಂತರ ತಾವು ಊಟ ಮಾಡಿ ಬರುತ್ತಾರೆ. ಇಲ್ಲದಿದ್ದರೆ ಅವರನ್ನು ಮನೆಗೆ ಕರೆದುಕೊಂಡು ಬಂದು ಊಟ ಮಾಡಿಸಿ ದಕ್ಷಿಣೆ ಕೊಟ್ಟು ಕಳುಹಿಸುತ್ತಾರೆ. ಅದೇ ಊರಿನವರಾದರೆ ಹೆಚ್ಚಾಗಿ ಮನೆಗೆ ಕರೆದುಕೊಂಡು ಬರುತ್ತಾರೆ. ಪರ ಊರಿನವರಾದರೆ ಊಟದ ಪದಾರ್ಥಗಳನ್ನು ಕಟ್ಟೆಕೊಂಡು ಬಂದು ತಾಯಿಯ ಎದುರಿನಲ್ಲಿಯೇ ಊಟ ಮಾಡುತ್ತಾರೆ. ಇಷ್ಟು ಮಾಡಿದರೆ ಅವರು ತಾಯಿಗೆ ಮಾಡಿಕೊಂಡ ಹರಕೆ ತೀರಿದಂತೆ. ಈ ಹರಕೆಯನ್ನು ಹೆಚ್ಚಾಗಿ ತೀರಿಸುವುದು ಮಂಗಳವಾರದಂದೆ.

. ‘ದೀಡ ನಮಸ್ಕಾರ (ದೀರ್ಘ ದಂಡ ನಮಸ್ಕಾರ)

ತಮಗೆ ತಾಯಿಂದ ಒಳ್ಳೆಯ ಕಾರ್ಯವಾಗಬೇಕಾದಾಗ ಅವರು ತಾಯಿಗೆ ದೀರ್ಘ ದಂಡ ನಮಸ್ಕಾರ ಹಾಕುವುದಾಗಿ ಹರೆ ಹೊರುತ್ತಾರೆ. ಬೇಡಿಕೆ ಈಡೇರಿದ ನಂತರ ತೀರಿಸುತ್ತಾರೆ.

ಹರಕೆ ಹೊತ್ತವರು ಹಳೆಯ ಬಟ್ಟೆಯನ್ನು ಧರಿಸಿ ನೀರು ಹಾಕಿಕೊಂಡು ಬಟ್ಟೆಯನ್ನು ಒದ್ದೆಗೊಳಿಸಿಕೊಂಡು ಧೀರ್ಘ ದಂಡ ನಮಸ್ಕಾರವನ್ನು ಹಾಕುತ್ತಾರೆ. ಧೀರ್ಘ ದಂಡ ನಮಸ್ಕಾರವನ್ನು ಒದ್ದೆ ಬಟ್ಟೆಯಲ್ಲಿಯೆ ಹಾಕಬೇಕು. ನಂತರ ಒಂದು ಎಲೆ ಸುತ್ತಿದ ದಂಟನ್ನು ಹಿಡಿದುಕೊಳ್ಳುತ್ತಾರೆ. ತಾಯಿಯ ಪಾದಗಟ್ಟೆಗೆ ನಮಸ್ಕಾರ ಮಾಡಿ ತಾಯಿಯ ಸನ್ನಿಧಿಯವರೆಗೆ ಪೂರ್ಣ ಬೆನ್ನು ಮೇಲಾಗಿ ಮಲಗಿ ನಮಸ್ಕಾರ ಹಾಕುತ್ತಾ ಹೋಗುತ್ತಾರೆ. ತಾವು ಬೆನ್ನು ಮೇಲ್ಮಾಡಿ ಮಲಗಿ ಕೈಯನ್ನು ಉದ್ದಕ್ಕೆ ಚಾಚಿ ತಾವು ಹಿಡಿದ ದಂಟಿನಿಂದ ಮುಂದೆ ಉದ್ದಕೆ ಗೆರೆ ಎಳೆಯುತ್ತಾರೆ. ಎಲ್ಲಿ ಗೆರೆ ಮೂಡಿರುತ್ತದೆಯೋ ಅಲ್ಲಿಂದ ಮತ್ತೇ ನಮಸ್ಕಾರ ಹಾಕಬೇಕು. ದಂಟ(ದಂಟ)ವನ್ನು ಹಿಡಿದು ದೀರ್ಘವಾಗಿ ನಮಸ್ಕಾರ ಹಾಕುವುದರಿಂದ ಇದನ್ನು ದೀರ್ಘ ದಂಡ ನಮಸ್ಕಾರ ಎನ್ನುವರು. ಗ್ರಾಮೀಣರ ಬಾಯಲ್ಲಿ ಇದು ದೀಡ ನಮಸ್ಕಾಋವಾಗಿದೆ. ತಮ್ಮದು ಪೂರ್ಣ ತಾವು ಹಿಡಿದ ದಂಟಿನದು ಅರ್ಥ ನಮಸ್ಕಾರ ಇರುವುದರಿಂದ ಇದು ದೀಡ(ಒಂದುವರೆ) ನಮಸ್ಕಾರವಾಗುವುದರಿಂದ ಈ ಪದವು ಒಪ್ಪುತ್ತದೆ.

ತಾಯಿಯ ಸನ್ನಿಧಿಯನ್ನು ಮುಟ್ಟಿದ ನಂತರ ಬೀಗರಾಗುವವರು ಅವರ ಹಳೆ ಬಟ್ಟೆಯನ್ನು ಬದಲಾಯಿಸಿ ಹೊಸ ಬಟ್ಟೆ ತೊಡಿಸಿ ಆರತಿ ಮಾಡುತ್ತಾರೆ. ಇದನ್ನು ಮೈಲಿಗೆ ಕಳೆಯುವುದು ಎನ್ನುತ್ತಾರೆ.

. ಪ್ರಾಣಿಬಲಿ (ಬ್ಯಾಟಿ)

ತಾಯಿಗೆ ಪ್ರಾಣಿಬಲಿ (ಬ್ಯಾಟಿ ಕೊಡುವ) ಮಾಡುವ ಹರಕೆಯನ್ನು ಜನ ಹೊತ್ತುಕೊಳ್ಳುತ್ತಾರೆ. ಈ ಹರಕೆ ಮಾಂಸಹಾರಿಗಳಲ್ಲಿ ಹೆಚ್ಚಾಗಿ ಕಂಡುಬಂದರು, ಸಸ್ಯಹಾರಿಗಳು ಇದನ್ನು ಹೊರುತ್ತಾರೆ. ಈ ಹರಕೆ ಹೊತ್ತವರು ತಾಯಿಯ ಹರಕೆಯನ್ನು ತೀರಿಸಲು ಒಂದು ಹೋತವನ್ನು ಖರೀದಿಸಿ ಅದನ್ನು ತಾಯಿಯ ಸನ್ನಿಧಿಗೆ ಒಯ್ದು ಅವಳ ಪಾದಗಟ್ಟೆಯ ಹತ್ತಿರ ಅದರ ಕೊರಳಿಗೆ ಚೂರಿಯಿಂದ ಮೊದಲನೆ ಏಟು ಹಾಕುತ್ತಾರೆ. ನಂತರ ಪಕ್ಕದಲ್ಲಿರುವ ಬಯಲು ಸ್ಥಳಕ್ಕೆ ಒಯ್ದು ಅದನ್ನು ಅಡುಗೆ ಮಾಡಿ ನೈವೇದ್ಯ ಮಾಡಿ ತಾಯಿಗೆ ಅರ್ಪಿಸುತ್ತಾರೆ. ನಂತರ ತಾವು ಕರೆತಂದ ಬಂಧು ಬಳಗದ ಜೊತೆ ಪ್ರಸಾದ ಸ್ವೀಕರಿಸುತ್ತಾರೆ. ಇನ್ನು ಸಸ್ಯಹಾರಿಗಳಾದವರು ತಮಗೆ ಆಪತ್ತುಗಳು ಬಂದಾಗ ಅದನ್ನು ನಿವಾರಿಸಲು ಕೋರಿ ಪಡಿಯಮ್ಮನಿಗೆ ಈ ಹರಕೆ ಹೊರುತ್ತಾರೆ. ಅವರ ಬೇಡಿಕೆಗಳು ಈಡೇರಿದ ನಂತರ ತಾವು ಅಡಿಗೆ ಮಾಡುವುದಿಲ್ಲವಾದ್ದರಿಂದ ತಮಗೆ ಆಪ್ತರಾದ ಮಾಂಸಾಹಾರಿಗಳಿಗೆ ಪಡಿಯಮ್ಮನಿಗೆ ಬೇಟೆ ಹರಕೆ ಮಾಡಲು ತಿಳಿಸಿ, ಅದಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಖರೀದಿಸಿ ಅವರಿಗೆ ನೀಡುತ್ತಾರೆ. ಅವರು ಇವರ ಪರವಾಗಿ ಹರಕೆ ತೀರಿಸಿ ಊಟ ಮಾಡುತ್ತಾರೆ.

ತಾಯಿಗೆ ಪ್ರಾಣಿಬಲಿ ಕೊಡುವುದು ಮುಂಚೆ ಇರಲಿಲ್ಲ. ಅದು ಇತ್ತೀಚೆಗೆ ಪ್ರಾಣಿಬಲಿ ಹರಕೆ ಹೊರುವವರಿಂದ ಪ್ರಾರಂಭವಾಗಿದೆ. ಪಡಿಯಮ್ಮನಿಗೆ ಬೇಟೆ ಮಾಡಿದರು. ಬೇಟೆ ಕಾರ್ಯ ಅವಳ ಗುಡಿ ಹತ್ತಿರ ನಡೆಯುವುದಿಲ್ಲ. ಅದು ನಡೆಯುವುದು ದೇವಿ ಪಾದಗಟ್ಟೆಯ ಹತ್ತಿರ. ಇನ್ನು ದೇವಿಗೆ ಮಾಡಿದ ನೈವೇದ್ಯವನ್ನು ಸ್ವಾಮಿಗಳು ತೆಗೆದುಕೊಳ್ಳುವುದಿಲ್ಲ. ಇತ್ತೀಚೆಗೆ ದೇವಿಯ ಮಾಂಸಾಹಾರದ ನೈವೇದ್ಯವನ್ನು ತೆಗೆದುಕೊಳ್ಳಲು ಯುಗಾದಿ ಅಮವಾಸ್ಯೆಯ ದಿನ ದೇವಿಯ ಗುಡಿಯಲ್ಲಿ ಒಬ್ಬರು ಕುಳಿತುಕೊಳ್ಳುತ್ತಾರೆ. ಅವರೆ ಮಾಂಸಹಾರದ ನೈವೇದ್ಯ ತೆಗೆದುಕೊಳ್ಳುತ್ತಾರೆ. ಆದರೆ ಅವರು ಮಠದ ಸ್ವಾಮಿಗಳು ಅಲ್ಲ ಹಾಗೂ ಸ್ವಾಮಿಗಳಿಂದ ಪೂಜೆಗಾಗಿ ನೇಮಿಸಿದ ಅರ್ಚಕರು ಅಲ್ಲ. ಹಾಗಾಗಿ ಪಡೆಯಮ್ಮ ಸಸ್ಯಹಾರಿ ದೇವತೆ ಎಂದು ಹೇಳುತ್ತಾರೆ. ಸರಕಾರದಿಂದ ಪ್ರಾಣಿಬಲಿ ಕೊಡಬಾರದೆಂಬ ಕಾಯ್ದೆ ಇದ್ದರೂ, ದಿಗಂಬರೇಶ್ವರ ಮಠದ ಸ್ವಾಮಿಗಳು ಇದನ್ನು ಬೇಡವೆಂದು ಹೇಳುತ್ತಿದ್ದರು. ಹರಕೆ ಹೊತ್ತವರು ಇದನ್ನು ಆಚರಿಸಿಯೇ ತೀರುತ್ತಾರೆ.

. ಪಡಿಯಮ್ಮನಿಗೆ ಒಡವೆ ಅರ್ಪಿಸುವ ಹರಕೆ

ತಮ್ಮ ಕಷ್ಟಗಳ ನಿವಾರಣೆಗಾಗಿ ಪಡಿಯಮ್ಮನಿಗೆ ಒಡವೆ ಅರ್ಪಿಸುವ ಹರಕೆಯನ್ನು ಭಕ್ತರು ಹೊರುತ್ತಾರೆ. ತಮ್ಮ ಬೇಡಿಕೆಗಳು ಈಡೇರಿದ ನಂತರ ತಾಯಿಗೆ ಪೂಜೆ ಮಾಡಿಸಿ ಒಡವೆಗಳನ್ನು ಅರ್ಪಿಸುತ್ತಾರೆ. ತಾಯಿಗೆ ಹರಕೆ ಹೊರುವ ಒಡವೆಗಳಲ್ಲಿ ಬಂಗಾರದ ಮಂಗಳ ಸೂತ್ರ, ಬಂಗಾರದ ನತ್ತು(ಮೂಗುತಿ), ಬೆಳ್ಳಿಯ ಕಣ್ಣುಬಟ್ಟು, ಬೆಳ್ಳಿಯ ಕೋರೆಮೀಸೆ, ಬೆಳ್ಳಿಯ ಹಸ್ತ, ಬೆಳ್ಳಿಯ ಕೈಕಡಗ ಮುಂತಾದವು ಸೇರುತ್ತದೆ. ತಾಯಿಯ ಮೇಲೆ ಒಂದು ಜೊತೆ ಒಡವೆ ಹಾಕಿ ಹೆಚ್ಚಿಗೆ ಸೇರಿದ ಒಡವೆಗಳನ್ನು ಮಠದ ಸುರ್ಪದ್ಧಿಗೆ ತೆಗೆದುಕೊಳ್ಳಲಾಗುತ್ತದೆ.

. ದೇವಿಯ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ಬರುವ ಹರಕೆ

ಕಾಲ್ನಡಿಗೆ ಪಡಿಯಮ್ಮನ ಸನ್ನಿಧಾನಕ್ಕೆ ಬರುವ ಹರಕೆಯನ್ನು ಭಕ್ತರು ಹೊರುತ್ತಾರೆ. ತಮ್ಮ ಬೇಡಿಕೆ ಈಡೇರಿದ ನಂತರ ತಮ್ಮ ತಮ್ಮ ಗ್ರಾಮಗಳಿಂದ ದೇವಿಯ ದೇವಸ್ಥಾನದವರೆಗೂ ಕಾಲ್ನಡಿಗೆಯಲ್ಲಿ ಹೋಗಿ ಅಲ್ಲಿ ತಾಯಿಗೆ ನೈವೇದ್ಯ ಕಾಯಿ ಅರ್ಪಿಸಿ ಈ ಹರಕೆ ತೀರಿಸುತ್ತಾರೆ. ಇನ್ನು ನಾಗರಾಳದ ಗ್ರಾಮಸ್ಥರು ಮಂಗಳವಾರ, ಶುಕ್ರವಾರ, ಅಮವಾಸ್ಯೆ, ಶ್ರಾವಣ ಮಾಸದಲ್ಲಿ ತಪ್ಪದೆ ಕಾಲ್ನಡಿಗೆಯಲ್ಲಿಯೇ ದೇವಿಯ ಸನ್ನಿಧಾನಕ್ಕೆ ತೆರಳುತ್ತಾರೆ. ಇವತ್ತು ಬಸ್ಸು, ಕಾರು, ಸೈಕಲ್ಲು ಮುಂತಾದ ಆಧುನಿಕ ಸೌಲಭ್ಯಗಳಿದ್ದರೂ ಭಕ್ತರು ಅವೆಲ್ಲವನ್ನು ಬಿಟ್ಟು ಕಾಲ್ನಡಿಗೆಯಲ್ಲಿ ತೆರಳುವುದಕ್ಕೆ ತಾಯಿಯ ಮೇಲಿಟ್ಟಿರುವ ನಂಬಿಕೆಯೇ ಕಾರಣ.

. ತೇರಿನ ಮೇಲಿಂದ ಮಕ್ಕಳನ್ನು ಎಸೆಯುವ ಹರಕೆ

ಇದು ನಾಗರಾಳದ ಕಪ್ಪರ ಪಡಿಯಪ್ಪನ ಜಾತ್ರೆಯಲ್ಲಿ ಕಂಡುಬರುವುದು. ಇದು ಇಲ್ಲಿ ಮಾತ್ರ ಕಂಡುಬರುವ ಕೌತುಕಮಯವಾದ ವಿಶಿಷ್ಠವಾದ ಹರಕೆ. ಈ ಹರಕೆಯನ್ನು ಹೊರುವವರು ಮಕ್ಕಳಿಲ್ಲದವರು, ಮದುವೆ ಆಗಿ ಬಹಳ ವರ್ಷಗಳವರೆಗೂ ಮಕ್ಕಳಾಗದಿದ್ದರೆ, ಈ ಭಾಗದ ಜನ ಮೊರೆ ಹೋಗುವುದು ಪಡಿಯಮ್ಮ ತಾಯಿಯನ್ನೇ. ಅದಕ್ಕಾಗಿ ಆಸ್ಪತ್ರೆಯ ಕದ ತಟ್ಟಿದರೂ ಸಹ ಅದಕ್ಕೂ ಪೂರ್ವದಲ್ಲಿ ತಾಯಿಯಲ್ಲಿ ಬೇಡಿಕೊಳ್ಳುವುದು ಸಾಮಾನ್ಯ. ಇಂತವರು ತಾಯಿಯ ಹತ್ತಿರ ಬಂದು ‘ನಮಗೆ ಮಕ್ಕಳ ಭಾಗ್ಯವನ್ನು ಕೊಡು ತಾಯಿ ನಮಗೆ ಹುಟ್ಟಿದ ಮಗುವನ್ನು ಬರುವ ನಿನ್ನ ಜಾತ್ರೆಯಲ್ಲಿ ತೇರಿನ ಮೇಲಿಂದ ಹಾರಿಸುತ್ತೇವೆ’ ಎಂದು ಹರಕೆ ಹೊರುತ್ತಾರೆ. ಹೀಗೆ ಹರಕೆ ಹೊತ್ತವರಿಗೆ ತಾಯಿಯ ಆಶೀರ್ವಾದದಿಂದ ಮಕ್ಕಳಾದಾಗ ಅವರು ಮಗು ಹುಟ್ಟಿದ ವರ್ಷ ಬರುವ ಜಾತ್ರೆಗೆ ಮಗುವನ್ನು ಕರೆತರುತ್ತಾರೆ. ತೇರಿನ ದಿವಸ ತೇರಿಗೆ ಸೀರೆ ಉಡಿಸಿ ಅಲಂಕಾರ ಮಾಡಿದ ನಂತರ ತೇರಿನಲ್ಲಿ ದಿಗಂಬರೇಶ್ವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ತೇರಿನಲ್ಲಿ ದಿಗಂಬರೇಶ್ವರ ಮಠದ ಸ್ವಾಮಿಗಳು ಕುಳಿತಿರುತ್ತಾರೆ. ತೇರಿಗೆ ಏಣಿಯನ್ನು (ನುಚ್ಚಣಿಕೆ) ಹಚ್ಚಿ ಅದರ ಮೇಲೆ ನಾಲ್ಕೈದು ಜನ ಸಾಲಾಗಿ ನಿಲ್ಲುತ್ತಾರೆ. ಕೆಳಗೆ ನಾಲ್ಕು ಜನ ಕರಿ ಕಂಬಳಿಯನ್ನು ಹಿಡಿದುಕೊಂಡು ನಿಂತಿರುತ್ತಾರೆ. ಮಕ್ಕಳ ಹರಕೆ ಹೊತ್ತವರು ಏಣಿಯ ಮೇಲೆ ನಿಂತಿರುವವರ ಕೈಯಲ್ಲಿ ತಮ್ಮ ಮಗುವನ್ನು ಕೊಡುತ್ತಾಋಎ. ಅವರು ಮುಂದೆ ಒಬ್ಬರ ಕೈಗೆ ಒಬ್ಬರು ಕೊಡುತ್ತಾ ಅದನ್ನು ಸ್ವಾಮಿಗಳ ಕೈಗೆ ತಲುಪಿಸುತ್ತಾರೆ. ಸ್ವಾಮಿಗಳು ಆ ಮಗುವನ್ನು ತಾಯಿಯ ಮೂರ್ತಿಗೆ ನಮಸ್ಕರಿಸಿ ಅದನ್ನು ತೇರಿನ ಮೇಲಿಂದ ಹಾರಿಸುತ್ತಾಎ. ಕೆಳಗೆ ಕಂಬಳಿ ಹಿಡಿದುಕೊಂಡು ನಿಂತವರು ಮಗುವನ್ನು ಕಂಬಳಿಯಲ್ಲಿ ಹಿಡಿದುಕೊಂಡು ಮಗುವನ್ನು ತಂದೆ ತಾಯಿಗಳಿಗೆ ಒಪ್ಪಿಸುತ್ತಾರೆ. ಇಲ್ಲಿ ತೇರಿನಿಂದ ಹಾರಿಸಿದ ಮಗುವಿಗೆ ಏನು ಆಗದಿದ್ದರು. ಈ ನೋಟ ಜಾತ್ರೆಗೆ ಸೇರಿದ ಜನರ ಮೈ ಜುಮ್ಮೆನಿಸುತ್ತದೆ.

ಸರ್ಕಾರ ಇತ್ತೀಚೆಗೆ ಇಂತಹ ಭಯಾನಕ ಕಾರ್ಯಕ್ರಮಗಳನ್ನು ನಡೆಸಬಾರದೆಂದು ನಿರ್ಭಂಧ ವಿಧಿಸಿದೆ. ಆದರೂ ಮಕ್ಕಳಿಗಾಗಿ ಹರಕೆ ಹೊತ್ತವರು ಈ ಹರಕೆಯನ್ನು ಚಾಚು ತಪ್ಪದೆ ತೀರಿಸುತ್ತಾರೆ. ಜೊತೆಗೆ ಈ ಸೀಮೆಯ ಜನ ಹರಕೆ ಹೊರದಿದ್ದರೂ ಮಗು ಹುಟ್ಟಿದ ನಂತರ ಬರುವ ವರ್ಷ ಜಾತ್ರೆಯಲ್ಲಿ ತಪ್ಪದೆ ತೇರಿನ ಮೇಲಿಂದ ಮಗುವನ್ನು ಹಾರಿಸುತ್ತಾರೆ. ಇದಕ್ಕೆ ಯಾವುದೇ ಜಾತಿ ಮತಗಳ ಭೇದವಿಲ್ಲ. ಹೀಗಾಗಿ ಪ್ರತಿವರ್ಷ ಪಡಿಯಮ್ಮನ ಜಾತ್ರೆಯಲ್ಲಿ ತೇರಿನಿಂದ ಮಕ್ಕಳನ್ನು ಹಾರಿಸುವ ಪದ್ಧತಿ ನಡೆದೆ ನಡೆಯುತ್ತದೆ.

. ಮಕ್ಕಳಿಗೆ ದೇವಿಯ ಹೆಸರಿಡುವ ಹರಕೆ

ಇದು ಸಹ ಮಕ್ಕಳಿಲ್ಲದವರು ಹೊರುವ ಹರಕೆಯೇ ಆಗಿದೆ. ಮಕ್ಕಳಿಲ್ಲದವರು ‘ತಾಯಿ ಮಕ್ಕಳನ್ನು ಕೊಟ್ಟರೆ ನಮಗೆ ಹುಟ್ಟುವ ಮಗುವಿಗೆ ನಿನ್ನ ಹೆಸರನ್ನೀಡುತ್ತೇವೆ’ ಎಂದು ಹರಕೆ ಹೊರುತ್ತಾರೆ. ಜೊತೆಗೆ ಗರ್ಭೀಣಿ ಮಹಿಳೆಗೆ ಹೆರಿಗೆ ಸಂದರ್ಭದಲ್ಲಿ ಏನಾದರೂ ತೊಂದರೆಗಳಾದರೆ ಅವರ ಹೆರಿಗೆ ಸುಸೂತ್ರವಾಗಿ ಆಗಿ ತಾಯಿ ಮಗುವಿಗೆ ಯಾವುದೆ ತೊಂದರೆ ಇರದೆ ಆರೋಗ್ಯದಿಂದರೆ ಹುಟ್ಟುವ ಮಗುವಿಗೆ ನಿನ್ನ ಹೆಸರಿಡುತ್ತೇವೆಂದು ಹರಕೆ ಹೊರುತ್ತಾರೆ. ಹೀಗೆ ಹರಕೆಯಿಂದ ಹುಟ್ಟಿದ ಮಗು ಹೆಣ್ಣಿರಲಿ ಗಂಡಿರಲಿ ಅದಕ್ಕೆ ಯಾವುದೇ ಬೇಧವಿರದೆ ‘ಪಡಿಯವ್’, ‘ಪಡಿಯಪ್ಪ’ ಎಂದು ತಪ್ಪದೆ ತಾಯಿಯ ಹೆಸರನ್ನೇ ಇಡುತ್ತಾರೆ.

. ದೇವಿಯ ಸನ್ನಿಧಿಯಲ್ಲಿ ತೊಟ್ಟಿಲು ಕಟ್ಟುವ ಹರಕೆ

ಇದು ಸಹ ಮಕ್ಕಳಿಲ್ಲದವರು ಹೊರುವ ಮತ್ತೊಂದು ಹರಕೆಯಾಗಿದೆ. ಮಕ್ಕಳಿಲ್ಲದವರು ಪಡಿಯಮ್ಮನ ಸನ್ನಿಧಿಗೆ ಹೋಗಿ ‘ನನ್ನ ಮನೆಯಲ್ಲಿ ತೊಟ್ಟಿಲು ಕಟ್ಟು ಹಾಗೆ ಮಾಡು, ನಾನು ನಿನ್ನ ಸನ್ನಿಧಿಗೆ ಬಂದು ತೊಟ್ಟಿಲು ಕಟ್ಟುತ್ತೇನೆ’ ಎಂದು ಹರಕೆ ಹೊರುತ್ತಾರೆ. ಮಕ್ಕಳಾಗಿ ಮನೆಯಲ್ಲಿ ತೊಟ್ಟಿಲು ಕಟ್ಟೆದಾಗ ಬೇಡಿಕೊಂಡವರು ಮರದ ಚಿಕ್ಕ ತೊಟ್ಟಿಲನ್ನು ಮಾಡಿಸುತ್ತಾರೆ. ಜೊತೆಗೆ ಅದಕ್ಕೆ ಹೊಂದುವಂತೆ ಚಿಕ್ಕ ಚಿಕ್ಕ ೪ ಕುಂಚಿಗೆ (ಮಕ್ಕಳ ತಲೆಗೆ ಹಾಕುವ ಕುಲಾಯಿ) ಹೊಲಿಸಿ ಅದನ್ನು ದೇವಿಯ ಸನ್ನಿಧಿಗೆ ತೆಗೆದುಕೊಂಡು ಹೋಗಿ ದೇವಿಯ ಮುಂದೆ ಇಟ್ಟು ನಮಸ್ಕರಿಸಿ ಅಲ್ಲಿರುವ ಮರಕ್ಕೆ ಕಟ್ಟುತ್ತಾರೆ. ಇತ್ತೀಚೆಗೆ ದೇವಿಯ ಮುಂದೆ ಕಟ್ಟಲು ಅನುಕೂಲವಾಗುವಂತೆ ಆಚೀಚೆ ಎರಡು ಕಂಬ ನಡೆಸಿ ನಡುವೆ ಒಂದು ಕಂಬ ಹಾಕಿ ತೊಟ್ಟಿಲು ಕಟ್ಟುವ ವ್ಯವಸ್ಥೆ ಮಾಡಿದ್ದಾರೆ.

. ತಾಯಿಯ ರಥಕ್ಕೆ ಸೀರೆ ಉಡಿಸುವ ಹರಕೆ

ಪಡಿಯಮ್ಮನ ಜಾತ್ರೆಯಲ್ಲಿ ಎಳೆಯುವ ಅವಳ ರಥಕ್ಕೆ ಸೀರೆಯನ್ನು ಉಡಿಸುವ ಹರಕೆಯನ್ನು ಸಹ ಭಕ್ತರು ಹೊರುತ್ತಾರೆ. ಜಾತ್ರೆಯ ರಥೋತ್ಸವದ ದಿನ ಈ ಹರಕೆಯನ್ನು ತೀರಿಸುತ್ತಾರೆ. ರಥಕ್ಕೆ ಉಡಿಸುವ ಸೀರೆಯು ಸಹ ಪಡಿಯಮ್ಮನಿಗೆ ಉಡಿಸುವಂತೆ ಹಸಿರು ಸೀರೆಯಾಗಿರುತ್ತದೆ.

ತಾಯಿ ಎಂಬ ಪದವೇ ಕ್ರಿಯಾಶೀಲತೆ ಮತ್ತು ರಕ್ಷಣೆಯ ಪ್ರತಿರೂಪ. ಪಡಿಯಮ್ಮಳು ಸಹ ಒಬ್ಬ ಕ್ರಿಯಾಶೀಲ, ರಕ್ಷಣಾತ್ಮಕ ಶಕ್ತಿಯಾಗಿದ್ದಾಳೆ. ಪಡಿಯಮ್ಮನ ಬಗ್ಗೆ ನಂಬಿಕೆ ಇಟ್ಟು ಜನತೆ ಆಚರಿಸುವ ಸಂಪ್ರದಾಯಗಳು ಒಂದು ಕ್ರಿಯಾತ್ಮಕ ಸಂಸ್ಕೃತಿಯನ್ನು ರೂಪಿಸಿವೆ. ಉಪಭೋಗವನ್ನು ನಿರಾಕರಿಸುವ ಸಾಮುದಾಯಿಕತೆಯನ್ನು ಪ್ರೀತಿಸುವ ಪಡಿಯಮ್ಮನ ಹೆಸರಿನಲ್ಲಿ ರೂಪಗೊಂಡ ಸಂಸ್ಕೃತಿ ಎಂದೂ ನಾಶವನ್ನು ಹೊಂದದೆ ಸದಾ ಪರಿವರ್ತನಾಶೀಲವಾಗಿದೆ. ಜಾತಿ, ಮತ ವರ್ಗವಮನ್ನು ಮೀರಿ ಸಹೋರರಂತೆ ಬಾಳುವ ಜನಪದರ ಮನಸ್ಸನ್ನು ಬೆಸೆಯುವ ಕೊಂಡಿ ಪಡಿಯಮ್ಮಳಾಗಿದ್ದಾಳೆ. ಪಡಿಯಮ್ಮನ ಬಗ್ಗೆ ಇಟ್ಟುಕೊಂಡು ಒದಗಿಸುವುದರೊಂದಿಗೆ ಅವರು ನೀತಿ ಮಾರ್ಗದಲ್ಲಿ ನಡೆಸುತ್ತದೆ. ಹೀಗೆ ಪಡಿಯಮ್ಮ ಜನತೆಯನ್ನು ಕ್ರಿಯಾಶೀಲರನ್ನಾಗಿ ಮಾಡುವುದರೊಂದಿಗೆ ಅವರ‍ ರಕ್ಷಣೆಯನ್ನು ಮಾಡುತ್ತಿದ್ದಾಳೆ.