ಕಪ್ಪೆಹೊಲಯರು ಪರಿಶಿಷ್ಟಜಾತಿಗೆ ಸೇರಿದ ಅಸ್ಪೃಶ್ಯ ಜನಸಮುದಾಯ. ಇವರು ಹೊಲಯರಲ್ಲೆ ಇರುವ – ಕನ್ನಡ ಹೊಲಯ, ಕೆಂಬಟ್ಟಿ ಹೊಲಯ, ಕಪ್ಪೆ ಹೊಲಯ, ಗಟ್ಟಿ ಹೊಲಯ, ಕೊಂಗೊಲಯ, ಕೂಡಸಾಲಿ ಹೊಲಯ, ಚಂಗಹೊಲಯ, ತೆಲುಗು ಹೊಲಯ, ಗಂಗಡಕಾರ, ಹೊಲಯ, ಸಾಮ ಹೊಲಯ, ಉರ‍್ಮೆ ಹೊಲಯ, ಮನ್ನಾ ಹೊಲಯ ಎಂಬ ಹನ್ನೆರಡು ಪಂಗಡಗಳ್ಲಿ ಒಂದು. ಕೆಂಬಟ್ಟಿ ಹೊಲಯರನ್ನು ಹೊರತುಪಡಿಸಿ ಇನ್ನಿತರ ಹೊಲಯ* ಜನಾಂಗಗಳ-ಒಳವಿವರಗಳ ಬಗೆಗೆ ಅಧ್ಯಯನಗಳು ನಡೆದಿಲ್ಲ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಉಪಸಂಸ್ಕೃತಿ ಮಾಲಿಕೆಗಾಗಿ ನಡೆಸಿದ ಸಂಸ್ಕೃತ ಅಧ್ಯಯನದ ಹಿನ್ನೆಲೆಯಲ್ಲಿ ಕೇಶವನ್ ಪ್ರಸಾದ್ ಅವರು ಕಪ್ಪೆ ಹಲಯರ ಬದುಕು, ಸಂಸ್ಕೃತಿ, ಆಚರಣೆಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಇದನ್ನು ಅಕಾಡೆಮಿಯು ೧೯೯೩ ರಲ್ಲಿ ’ಕಪ್ಪೆ ಹೊಲಯರ ಸಂಸ್ಕೃತಿ’ ಎಂಬ ಶೀರ್ಷಿಕೆಯ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಈ ಕೃತಿಯನ್ನು ಹೊರತುಪಡಿಸಿ ಕಪ್ಪೆ ಹಲಯರ ಬಗೆಗೆ ಯಾವುದೇ ಸಮಗ್ರ ಅಧ್ಯಾಯನಗಳು ಆಗಿಲ್ಲ. ಈ ಜನಾಂಗದ ಮಹಿಳೆಯನ್ನು ಕುರಿತು ಈ ಕೃತಿಯಲ್ಲಿ ಸ್ವಲ್ಪ ಮಾಹಿತಿಯಷ್ಟೆ ಸಿಗುತ್ತದೆ. ಅಲ್ಲದೆ ಪ್ರತ್ಯೇಕವಾಗಿ ಕಪ್ಪೆಹೊಲಯರ ಮಹಿಳಾ ಜಗತ್ತನ್ನು ಕುರಿತ ಯಾವುದೇ ದಾಖಲೆಗಳು ಇಲ್ಲವೇ ಇಲ್ಲವೆದು ಹೇಳಬಹುದು. ’ಕಪ್ಪೆಹೊಲಯರ ಸಂಸ್ಕೃತಿ’ ಕೃತಿಯಲ್ಲಿ ಇರುವ ವಿಷಯಗಳು ಮತ್ತೆ ಪುನರಾವರ್ತನೆಯಾಗದಂತೆ ಹಾಗೂ ಕ್ಷೇತ್ರಾಧ್ಯಯನ ಕಾಲದಲ್ಲಿ ಈ ಸಮುದಾಯದ ವಕ್ತೃಗಳಿಂದ ಪಡೆದ ವಿವರಗಳನ್ನು ನಾನಿಲ್ಲಿ ದಾಖಲಿಸಿದ್ದೇನೆ. ನೆಲೆ ಹಾಗೂ ಹಿನ್ನೆಲೆ

ಕಪ್ಪೆ ಹೊಲಯ ಸಮುದಾಯವು ಚಾಮರಾಜನಗರ ಜಿಲ್ಲೆಗೆ ಸೇರಿದ ಕರ್ನಾಟಕ – ತಮಿಳುನಾಡಿನ ಗಡಿಭಾಗದ ಆಸುಪಾಸಿನ ಹಳ್ಳಿಗಾಡು, ಬೆಟ್ಟಗುಡ್ಡ ಹಾಗೂ ಬಯಲು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರು ತಮ್ಮ ಮೂಲನೆಲೆಯನ್ನು ಕುರಿತು ತಮಿಳುನಾಡಿನ ಸೇಲಂ, ಸಂದೈದಾನ ಮಟ್ಟಿ, ಕಯಮತ್ತೂರು ಜಿಲ್ಲೆಗೆ ಸೇರಿದ ತಾಂಡಪಟ್ಟಿ ಎಂದು ಹೇಳುತ್ತಾರೆ. ಭಾಷಾವಾರು ವಿಂಗಡಣೆಗೂ ಮೊದಲು, ಕೊಳ್ಳೇಗಾಲ ಹಾಗೂ ಇವರು ವಾಸವಿರುವ ಸ್ಥಳಗಳು ತಮಿಳುನಾಡಿಗೆ ಸೇರಿದ್ದರಿಂದ ಆಗ ತಮಿಳುನಾಡಿನವರಾಗಿದ್ದು ಈಗ ಕರ್ನಾಟಕದವರಾಗಿದ್ದಾರೆ. ಕೆಲವರು ಮೆಟ್ಟೂರು ಡ್ಯಾಮನ್ನು ಕಟ್ಟುವಾಗ ತಮ್ಮ ಭೂಮಿ, ಮನೆ ಒತ್ತುವರಿಯಾದ ಕಾರಣ ಈಗ ನೆಲೆಸಿರುವ ಸ್ಥಳಗಳಿಗೆ ತಮ್ಮ ಹಿರೀಕರು ಬಂದು ನೆಲೆಸಿದರೆಂದು ಹೇಳುತ್ತಾರೆ. ಇಂದಿಗೂ ಇವರ ಮನೆಭಾಷೆ ಗ್ರಾಮೀನ ತಮಿಳು. ಆದರೆ ತಾವು ವಾಸಿಸುತ್ತಿರುವ ಪರಿಸರ ಹಾಗೂ ತಮ್ಮ ವ್ಯವಹಾರದ ಕಾರಣಕ್ಕಾಗಿ ಕನ್ನಡವನ್ನು ಮಾತನಾಡುತ್ತಾರೆ. ಈಗೀಗ ತಮ್ಮ ಮನೆಯ ಮತ್ತು ಕೇರಿಯ ಆತ್ಮೀಯ ಕ್ಷಣಗಳನ್ನು ಹೊರತುಪಡಿಸಿದರೆ ಕನ್ನಡವೇ ಇವರು ಹೆಚ್ಚು ಬಳಸುವ ಭಾಷೆಯಾಗಿದೆ ಎಂದರೆ ತಪ್ಪಲ್ಲ.

ಕೊಳ್ಳೇಗಾಲ ತಾಲೂಕಿನಲ್ಲಿ ಇವರು ವಾಸಿಸುವ ಊರುಗಳೆಂದರೆ ಗೆಜ್ಜಲನಾಥ, ಗೋಪಿಶೆಟ್ಟಿವೂರು (ಅಂಬೇಡ್ಕರ್‌ನಗರ), ಪಳಮೇಡು, ಅಂಬಿಗಮೇಡು, ದೊಮ್ಮನಗದ್ದೆ, ಕೀರಪಾತ್ತಿ, ಸಂಗನದೊಡ್ಡಿ, ಮಾವಿನಮರದ ದೊಡ್ಡಿ, ಮಾರ್ಟಳ್ಳಿ, ನಲ್ಲೂರು, ಜೆಲ್ಲಿಪಾಳ್ಯ, ಮಂಚಾಪುರ, ದಿನ್ನಳ್ಳಿ ದಂಡಳ್ಳಿ, ಭದ್ರಯ್ಯನ ಹಳ್ಳಿ, ಒಡ್ಡರದೊಡ್ಡಿ, ಗೋವಿಂದರಾಜನಗರ, ಪೊ‌ನ್ನಾಚಿ, ಹಾಗೆಯೇ ತಮಿಳುನಾಡಿಗೆ ಸೇರಿದ, ಈ ಊರುಗಳ ಅಕ್ಕಪಕ್ಕದಲ್ಲೆ ಇರುವ ನಾಗಮರೈ, ಮೇಚೂರು, ಮಳ್ಳಿಕುಂದಂ, ಕೊಲ್ಲಪಾಳ್ಯಂ, ಯಾಮನೂರು, ಒತ್ತಲಪಟ್ಟಿ, ಪೂರಲ – ಕೋಟೈ, ಕಿಡುಕ್ಕಾನಮಟ್ಟಿ, ವನವಾಸಿ, ಕುಳಿಯಪಟ್ಟಿ, ಆಂಡಿಪಟ್ಟಿ, ಸಚ್ಚನಹಪಟ್ಟಿ, ಸೊಕ್ಕನಾಥರ ಮಲೈ, ಪುದೂರು, ಸಂದೈದಾನ ಮಟ್ಟಿ, ತಾಂಡಪಟ್ಟಿ, ಸೇಲಂ ಈ ಊರುಗಳಲ್ಲಿ ಇನ್ನಿತರ ಜನಾಂಗಗಳೊಡನೆ ಆದರೆ ಪ್ರತ್ಯೇಕ ಕೇರಿಗಳಲ್ಲಿ ಹೆಚ್ಚಾಗಿ ಇವರು ವಾಸಿಸುತ್ತಿದ್ದಾರೆ.

ಭಾರತೀಯ ಸಾಮಾಜಿಕ ಹಿನ್ನೆಲೆಯ ಎಲ್ಲ ಜನಸಮುದಾಯಗಳೂ ತಮ್ಮನ್ನು ಗುರುತಿಸಿಕೊಳ್ಳಲು ತಮ್ಮದೇಯಾದ ಪುರಾಣ ಪ್ರಜ್ಞೆಯನ್ನು ಸೃಷ್ಟಿಸಿಕೊಂಡಿರುವಂತೆ. ಕಪ್ಪೆ ಹೊಲಯರೂ ತಮ್ಮ ಹಿನ್ನೆಲೆ ಕುರಿತು ಮೂರು ಬಗೆಯ ಪುರಾಣಕತೆಯನ್ನು ಹೇಳುತ್ತಾರೆ. ಅವು ಈ ಕೆಳಗಿನಂತಿವೆ:

೧. ಒಂದಾನೊಂದು ಕಾಲದಲ್ಲಿ ಹೊಲಯನೊಬ್ಬ ಇದ್ದನು. ಆತನಿಗೆ ಇಬ್ಬರು ಹೆಂಡತಿ-ಯರಿದ್ದರು. ಒಮ್ಮೆ ಈತ ಕಪ್ಪೆಗಳನ್ನು ಹಿಡಿದುಕೊಂಡು ತನ್ನ ಮನೆಗೆ ಬಂದ. ತನ್ನ ಹೆಂಡತಿಯರನ್ನು ಕರೆದು ಇಬ್ಬರಿಗೂಕಪ್ಪೆಗಳನ್ನು ಸಮನಾಗಿ ಹಂಚಿ ಅಡುಗೆ ಮಾಡಲು ಹೇಳಿದ. ಕಿರಿಯ ಹೆಂಡತಿ ಮಡಕೆಯನ್ನು ಒಲೆಯ ಮೇಲೆ ಇಟ್ಟು, ಮಡಕೆ ಚೆನ್ನಾಗಿ ಕಾದಮೇಲೆ ಕಪ್ಪೆಗಳನ್ನು ಅದಕ್ಕೆ ಸುರಿದಳು. ಬಿಸಿತಾಗಿದ ಕಪ್ಪೆಗಳು ಮಡಕೆಯಿಂದ ಕುಪ್ಪಳಿಸಿ ಕುಪ್ಪಳಿಸಿ ಹೊರಟುಹೋದವು. ಗಂಡನಿಗೆ ಈ ವಿಷಯ ತಿಳಿಸಿದಳು. ಅದೇ ಸಮಯಕ್ಕೆ ಹಿರಿಯ ಹೆಂಡತಿ ಪಾತ್ರೆಯಲ್ಲಿ ನೀರು ಹಾಕಿ ಚೆನ್ನಾಗಿ ಕುದಿಸಿ, ಕುದಿಸಿದ ನೀರಿಗೆ ಕಪ್ಪೆಗಳನ್ನು ಸುರಿದಳು. ಅವು ಸತ್ತ ನಂತರ ಬೇಡವಾದ ಭಾಗಗಳನ್ನು ತೆಗೆದುಹಾಕಿ, ಸುದ್ದಮಾಡಿ, ಅದನ್ನು ಬೇಯಿಸಿ ರುಚಿರುಚಿಯಾದ ಸಾರನ್ನು ಮಾಡಿ ಗಂಡನಿಗೆ ಊಟಕ್ಕೆ ಬಡಿಸಿದಳು. ಕಪ್ಪೆ ಸಾರನ್ನು ಮಾಡಿದ ಹಿರಿಯ ಹೆಂಡತಿಯಲ್ಲಿ ಹುಟ್ಟಿದವರು ಕಪ್ಪೆ ಹೊಲಯರೆಂದೂ, ಕಪ್ಪೆ ಸಾರನ್ನು ಮಾಡಲಾಗದ ಕಿರಿಯ ಹೆಂಡತಿಯಲ್ಲಿ ಗಟ್ಟಿ ಹೊಲಯರೂ ಒಬ್ಬನೇ ತಂದೆಯಿಂದ ಆದರೆ ಬೇರೆ ಬೇರೆ ತಾಯಿಯಿಂದ ಹುಟ್ಟಿದ್ದರಿಂದ ಇಬ್ಬರೂ ಪರಸ್ಪರ ಸೋದರರೂ, ದಾಯಾದಿಗಳು ಆಗಿದ್ದಾರೆ. ಹಾಗಾಗಿ ಇವರ ನಡುವೆ ಕೊಡುತರುವ ಸಂಬಂಧಗಳು ಇರುವುದಿಲ್ಲ – ಎಂದು ತಿಳಿಸುತ್ತಾರೆ.

೨. ಒಮ್ಮೆ ಇಂದ್ರನ ಆಸ್ಥಾನದಲ್ಲಿ ಹರಿ, ಹರ, ಬ್ರಹ್ಮರು ಯಾಗ ಮಾಡುತ್ತಿದ್ದರು. ಆಗ ಭೂಲೋಕದಿಂದ ಬಾರಿ ಕಿರುಚಾಟದ ಸದ್ದು ಕೇಳಿಸತೊಡಗಿತು. ಈ ಕಿರುಚಾಟದ ಜೋರಿನಿಂದ ಅವರು ಮಾಡುತ್ತಿರುವ ಯಾಗಕ್ಕೆ ತೊಂದರೆಯಾಗತೊಡಗಿತು. ಇದರಿಂದ ಕುಪಿತಗೊಂಡ ತ್ರಿಮೂರ್ತಿಗಳು ’ಈ ಸದ್ದು ಯಾವುದ’ ಎಂದು ಸೇವಕರನ್ನು ಕೇಳಿದರು. ಸೇವಕರು ’ಅದು ಕಪ್ಪೆಯ ಕಿರುಚಾಟ ಎಂದು ತಿಳಿಸಿದರು. ಇದನ್ನು ತಿಳಿದ ತ್ರಿಮೂರ್ತಿಗಳು ಒಬ್ಬ ಸೇವಕನಿಗೆ ಆ ಕಪ್ಪೆಯನ್ನು ಹಿಡಿದು ತಿನ್ನುವಂತೆ ಹೇಳಿದರು. ಆಗ ಸೇವಕನು ’ಆ ಕಪ್ಪೆಯು ಬಹಳ ದಪ್ಪದೂ ಹಿಡಿದು ತಿನ್ನುವುದು ಸಾಧ್ಯವಿಲ್ಲ’ ಎಂದು ಪ್ರತ್ಯುತ್ತರಿಸಿದನು. ಆವಾಗ ತ್ರಿಮೂರ್ತಿಗಳು ’ನೀನು ಮುಟ್ಟಿದೊಡನೆ ಅದು ತುಂಬ ಸಣ್ಣಗಾಗುವುದು’ ಎಂದು ಹೇಳಿದರು. ಅವರ ಆಜ್ಞೆಯಂತೆ ಆ ಸೇವಕ ಭೂಮಿಗೆ ಹೋಗಿ ಕಿರುಚುತ್ತಿದ್ದ ದಪ್ಪ ಕಪ್ಪೆಯನ್ನು ಮುಟ್ಟಿದನು. ಕೂಡಲೇ ಆ ಕಪ್ಪೆಯು ಸಣ್ಣಗಾಯಿತು. ಆಗ ಆ ಸೇವಕನು ಅದನ್ನು ತಿಂದು ಅದರ ಸದ್ದನ್ನು ನಿಲ್ಲಿಸಿದನು. ಆಗ ದೇವೇಂದ್ರನ ಆಸ್ಥಾನದಲ್ಲಿ ಯಾಗ ಸುಗಮವಾಗಿ ನಡೆಯಿತು. ಕಪ್ಪೆಯನ್ನು ತಿಂದು ಸಂಹರಿಸಿದ ಸೇವಕನಿಂದ ಕಪ್ಪೆ ಹೊಲಯರ ಜನಾಂಗ ಅವತರಿಸಿತು.

೩. ಮೂರನೇ ಕಥೆಯು ಸ್ವಲ್ಪ ವ್ಯತ್ಯಾಸದೊಂದಿಗೆ ಎರಡನೇ ಕಥೆಯನ್ನೆ ಹೋಲುತ್ತದೆ.

ಒಂದು ಸಾರಿ ಮಾದೇಶ್ವರ ಪೂಜೆಗೆ ಹೋಗಲು ಸ್ನಾನ ಮಾಡುತ್ತಿರುತ್ತಾನೆ. ಈ ಗಳಿಗೆಯಲ್ಲಿ ಕಪ್ಪೆ ಕಿರುಚಾಟ ಜೋರಾಗುತ್ತದೆ. ಮಾದೇಶ್ವರನಿಗೆ ಇದರಿಂದ ಮಾನಸಿಕ ಕಿರಿಕಿರಿಯಾಗತೊಡಗುತ್ತದೆ. ಕೂಡಲೇ ತನ್ನ ಭಕ್ತರಲ್ಲಿ ಒಬ್ಬನಿಗೆ ಕಪ್ಪೆ ಹಿಡಿಯಲು ಹೇಳುತ್ತಾನೆ. ಆದರೆ ಆತ ಮುಂದೆ ಬರುವುದಿಲ್ಲ. ಇನ್ನೊಬ್ಬ ಭಕ್ತ ’ನಾನು ಕಪ್ಪೆ ಹಿಡಿಯುತ್ತೇನೆ’ ಎಂದು ಕೂಡಲೆ ಹೋಗಿ, ತಕ್ಷಣ ವಾಪಸ್ಸುಬರುತ್ತಾನೆ. ಮಾದೇಶ್ವರ ’ಏನು? ಯಾಕೆ ವಾಪಸ್ಸು ಬಂದೆ?’ ಎಂದು ಕೇಳುತ್ತಾನೆ. ಅದಕ್ಕೆ ಭಕ್ತ ’ಸ್ವಾಮಿ, ಕಪ್ಪೆ ದಪ್ಪವಾಗಿದ್ದು ಹಿಡಿಯಲು ಆಗುತ್ತಿಲ್ಲ’ ಎಂದು ತಿಳಿಸುತ್ತಾನೆ. ಇದನ್ನು ಕೇಳಿದ ಮಾದೇಶ್ವರ ತನ್ನ ಮಾಯ್ಕಾರ ಶಕ್ತಿಯಿಂದ ಆ ಕಪ್ಪೆ ಸಣ್ಣಗಾಗುವಂತೆ ಮಾಡುತ್ತಾನೆ ಹಾಗೂ ಭಕ್ತನಿಗೆ ’ಈಗ ಆ ಕಪ್ಪೆಯನ್ನು ಹಿಡಿ’ ಎಂದು ಸೂಚಿಸುವನು. ಕೂಡಲೆ ಭಕ್ತ ಆ ಕಪ್ಪೆಯನ್ನು ತಾನು ತಿನ್ನುವ ಮೂಲಕ ಸಂಹರಿಸಿ ಮಾದೇಶ್ವರನ ಸ್ನಾನ ಹಾಗೂ ಪೂಜೆಗೆ ಕಾರಣನಾಗುತ್ತಾನೆ. ಆತನಿಂದ ಬೆಳೆದ ವಂಶವೇ ಕಪ್ಪೆ ಹೊಲಯರು.

ಕಪ್ಪೆ ಹೊಲಯ ಜನಸಮುದಾಯವನ್ನು ಕುರಿತಾದ ಈ ಮಿಥ್‌ಗಳು ಏನೇ ಇರಲಿ, ಇವರ ಬದುಕಿನ ಹಿನ್ನೆಲೆಯಿಂದ ಕಂಡುಬರುವ ಅಂಶವೆಂದರೆ ಹೊಲಯರ ಒಂದು ಪಂಗಡವಾದ ಇವರು ತಮ್ಮ ಆಹಾರಪದ್ಧತಿಯಲ್ಲಿ ಕಪ್ಪೆಯನ್ನು ತಿನ್ನುತ್ತಿದ್ದ ಕಾರಣದಿಂದಲೇ ಕಪ್ಪೆ ಹೊಲಯರೆಂದು ಹೆಸರು ಬರಲು ಕಾರಣವಾಯಿತು ಎಂದು ಖಚಿತವಾಗಿ ಹೇಳಬಹುದು.

ಇವರು ತಮ್ಮ ಆಹಾರಕ್ಕಾಗಿ ಎಲ್ಲಾ ಬಗೆಯ ಕಪ್ಪೆಗಳನ್ನು ತಿನ್ನುವುದಿಲ್ಲ. ಬದಲಿಗೆ ಮುಂಗಾರು ಮಳೆಯ ಸಂದರ್ಭದ ಮೊಟ್ಟ ಮೊದಲ ಮಳೆಯಲ್ಲಿ ಕಂಡುಬರುವ ಒಂದು ಜಾತಿಯ ಕಪ್ಪೆಗಳನ್ನು ಮಾತ್ರ ಬೇಟೆಯಾಡಿ ತಿನ್ನುತ್ತಿದ್ದರೆಂದು ತಿಳಿದುಬರುತ್ತದೆ. ಇದನ್ನು ಅವರು ತವಳೈ, ದವಳೈ, ತಾವಳೈ ಎಂದು ಕರೆಯುತ್ತಾರೆ. ಈ ಕಪ್ಪೆಗೆ ನಾಗರಹಾವಿನ ರೀತಿ ಮುಖವೆಂದೂ ಇದು ಬೆಳಗ್ಗೆ ಕಾಣಿಸದೆ ರಾತ್ರಿ ಮಾತ್ರ ಕಾಣುತ್ತದೆಂದು ಅಲ್ಲದೆ ಇದು ಮುಂಗಾರು ಮಳೆ ಬಿದ್ದ ಮೊದಲ ದಿನದಲ್ಲಿ ಹುಟ್ಟಿ ಒಂದೇ ದಿನದಲ್ಲಿ ಸಾಯುತ್ತದೆ. ಹಾಗಾಗಿ ಆ ರಾತ್ರಿಯೇ ಈ ಜನಾಮಂದ ಹೆಣ್ಣು ಗಂಡುಗಳು ಪೆಂಜು, ದೊಂದಿ ಅಥವಾ ಬ್ಯಾಟರಿಯನ್ನು ತೆಗೆದುಕೊಂಡು ಹೋಗಿ ಈ ಕಪ್ಪೆಗಳನ್ನು ಬೇಟೆಯಾಡಿ ಬರುತ್ತಿದ್ದರೆಂದು ಹಳೆಯ ತಲೆಮಾರಿನವರು ನೆನಪಿಸಿ ಕೊಳ್ಳುತ್ತಾರೆ. ಈ ಕಪ್ಪೆಯನ್ನು ಇವರು ಆಹಾರವಾಗಿ ಬಳಸುವುದೇ ಅಲ್ಲದೆ, ಈ ಕಪ್ಪೆಯಿಂದ ತೆಗೆದ ಕೊಬ್ಬನ್ನು ಮಂಡಿನೋವು, ಕೀಲುನೋವು, ಬೆನ್ನುನೋವು, ಉಳುಕು, ನರಹಿಡಿದುಕೊಂಡ ಸಂದರ್ಭಗಳಲ್ಲಿ ಮುಲಾಮಿನಂತೆ ಹಚ್ಚುತ್ತಿದ್ದರೆಂದು ಹಾಗೂ ಇವರಿಂದ ಬೇರೆಯವರೂ ಸಹ ಇದನ್ನು ಕೊಂಡು ಹೋಗುತ್ತಿದ್ದರೆಂದು ಹೇಳುತ್ತಾರೆ.

ಈಗಿರುವ ಸುಮಾರು ೬೦ ವರ್ಷದ ದಾಟಿದ ಹಿಂದಿನ ತಲೆಮಾರು ತಾವು ಇಂತಹ ಕಪ್ಪೆಯನ್ನು ನೋಡಿರುವುದಾಗಿ, ಹಿಡಿದಿರುವುದಾಗಿ ಮತ್ತು ತಿಂದಿರುವುದಾಗಿ ಹೇಳುತ್ತಾರೆ. ಆದರೆ ಇಂದು ಅವರಲ್ಲಿ ಈ ಕಪ್ಪೆಯನ್ನು ಹಿಡಿಯುವವರು ಹಾಗೂ ತಿನ್ನುವವರು ಯಾರೂ ಇಲ್ಲವೆಂದೇ ಹೇಳಬಹುದು.

ಆದರೂ ಹಿಂದಿನಿಂದ ಇವರನ್ನು ಕಪ್ಪೆಹೊಲಯರೆಂದೇ ಕರೆಯುತ್ತಿದ್ದ ಕಾರಣ ಈಗಲೂ ಅದೇ ಹೆಸರಿನಿಂದ ಈ ಜನಾಂಗವನ್ನು ಗುರುತಿಸಲಾಗುತ್ತಿದೆ.

ವೃತ್ತಿ ಬದುಕು ಮತ್ತು ಕುಟುಂಬ ನಿರ್ವಹಣೆ

ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವ ಮೂಲಭೂತ ಸೌಕರ್ಯ, ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿರುವ ಮತ್ತು ಇಂದಿಗೂ ಅಸ್ಪೃಶ್ಯತಾ ಆಚರಣೆಗೆ ಒಳಗಾಗಿ ಅತ್ಯಂತ ನಿಕೃಷ್ಟಕ್ಕೆ ಈಡಾಗಿರುವ ಜನಾಂಗವಿದು. ತಮ್ಮ ದಿನನಿತ್ಯದ ಹೊಟ್ಟೆಪಾಡಿನ ಕಾರಣಕ್ಕೆ ಅಲೆಮಾರಿತನವನ್ನು ರೂಢಿಸಿಕೊಂಡಿರುವ ಇವರು ಕಡುಶ್ರಮಜೀವಿಗಳು. ಈ ಜನಾಂಗದ ಮಹಿಳೆ ಪುರುಷನಷ್ಟೆ ಪ್ರಮಾಣದಲ್ಲಿ ಎಲ್ಲಾ ಬಗೆಯ ಕೆಲಸಗಳಲ್ಲೂ ತೊಡಗುತ್ತಾಳೆ. ಹೊರಗಿನ ದುಡಿತದ ಜೊತೆಗೇ ಆಕೆಗೆ ತನ್ನ ಗಂಡ, ಮಕ್ಕಳು ಹಾಗೂ ಮನೆಯ ನಿರ್ವಹಣೆಯ ಹೊಣೆಗಾರಿಕೆ ಇರುತ್ತದೆ. ಸೌದರೆ ತರುವುದು, ಅಡಿಗೆ ಮಾಡುವುದೇ ಅಲ್ಲದೆ ತನ್ನ ಮಕ್ಕಳಿಗೂ ಬದುಕಿನ ಜವಾಬ್ದಾರಿ ಕುರಿತಾದ ಮೂಲಪಾಠಗಳನ್ನು ಕಲಿಸುವವಳೂ ಆಕೆಯೆ. ಹೀಗಾಗಿ ಈ ಜನಸಮುದಾಯದಲ್ಲಿ ಹೆಚ್ಚಿನ ಶ್ರಮಜೀವಿ ಮಹಿಳೆಯೇ ಆಗಿದ್ದಾಳೆ.

ಇವರಿಗೆ ತಮ್ಮ ನೆಲೆಯನ್ನು ಗುರುತಿಸಿಕೊಳ್ಳಲು ಅವರದೇಯಾದ ಒಂದು ಊರು ಇದ್ದರೂ ಬಹುಪಾಲು ಕುಟುಂಬಗಳು ಗುತ್ತಿಗೆದಾರರ ಬಳಿ ತನ್ನ ಗಂಡ ಅಥವಾ ತಾಯಿ ತಂದೆ, ಅತ್ತೆಮಾವರೊಡನೆ ಕೂಲಿನಾಲಿ ಅರಸುತ್ತ – ರಸ್ತೆ ಕೆಲಸ, ಜಲ್ಲಿಕಲ್ಲು ಹೊಡೆಯುವುದು, ಡಾಂಬರು ಹಾಕುವ ಕಾಯಕಗಳನ್ನು ಮಾಡುತ್ತ ತಮ್ಮ ಊರಿಂದ ಹೊರಗೆ ಇರುವುದೇ ಹೆಚ್ಚು. ತಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲವೆಂದು ವಯಸ್ಸಾದವರು, ತುಂಬು ಗರ್ಭಿಣಿಯರು, ಅಲ್ಪಸ್ವಲ್ಪ ಜಮೀನು ಇರುವವರು ಮಾತ್ರ ಊರುಗಳಲ್ಲಿ ಇರುತ್ತಾರೆ. ವರ್ಷದ ಒಂಭತ್ತು ತಿಂಗಳು ಊರಿನಿಂದ ದೂರವೇ ಇರುವ ಕುಟುಂಬಗಳು ತಮ್ಮ ಸಂಪಾದನೆಯೊಟ್ಟಿಗೆ, ಸಂಕ್ರಾಂತಿಯ ಹೊತ್ತಿಗೆ ಸುಮಾರು ಮೂರು ತಿಂಗಳು ಬಿಡುವು ಮಾಡಿಕೊಂಡು ತಮ್ಮ ನೆಲೆಗಳಿಗೆ ಹಿಂದಿರುಗುತ್ತಾರೆ. ಇಂತಹ ಸಂದರ್ಭದಲ್ಲೇ ತಮ್ಮ ಜನಾಂಗದ ಯುವಕ – ಯುವತಿಯರಿಗೆ ಮದುವೆಯಂತಹ ಪವಿತ್ರ ಸಂಬಂಧಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗುತ್ತಾರೆ.

ದ್ರಾವಿಡ ಸಂಸ್ಕೃತಿಯ ಅನನ್ಯತೆಯ ಅಂಶಗಳಲ್ಲಿ ಒಂದಾದ ಮಾತೃ ಪ್ರಧಾನ್ಯತೆಯನ್ನು ಈ ಸಮುದಾಯವು ತನ್ನೊಳಗೆ ಗರ್ಭೀಕರಿಸಿಕೊಂಡಿದೆ ಕುಟುಂಬದ ಜವಾಬ್ದಾರಿ ಹಾಗೂ ನಿರ್ವಹಣೆ ಮನೆಯ ಹಿರಿಯಾಕೆಯದಾಗಿರುತ್ತದೆ. ಕುಟುಂಬದಲ್ಲಿ ತಾಯಿ  ಬದುಕಿದ್ದರೆ ಮನೆ ಒಡೆತನ ಆಕೆಯದೆ, ಬದುಕಿಲ್ಲದಿದ್ದರೆ ಆ ಮನೆಯ ಸೊಸೆಯದಾಗಿರುತ್ತದೆ. ಗಂಡು ತಾನು ದುಡಿದು – ಶ್ರಮಿಸಿ, ಗಳಿಸಿದ ಹಣವನ್ನು ತನ್ನ ತಾಯಿಗೆ ಅಥವಾ ಮನೆಯಾಕೆಗೆ ನೀಡಿ ತನ್ನ ಸ್ವಂತ ಖರ್ಚಿಗೆ ಹಣವನ್ನು ಪಡೆದುಕೊಳ್ಳಬಹುದು. ಹಾಗೆಯೇ ಈ ಜನತೆಯ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿಗೆ ಪ್ರಾಧಾನ್ಯ ಇರುವುದರಿಂದ ತಮಗೆ ಎಷ್ಟೇ ಗಂಡು ಮಕ್ಕಳಿದ್ದರು ಒಂದಾದರೂ ಹೆಣ್ಣು ಮಗು ಬೇಕೇಬೇಕೆಂದು ಹಂಬಲಿಸುತ್ತಾರೆ. ಹೆಣ್ಣು ಮಗುವಿದ್ದರೆ ಮನೆಗೆ ಒಳ್ಳೆಯದೆಂಬ ಗುಣಾತ್ಮಕ ಆಶಯ ಇವರಲ್ಲಿದೆ.

ಆದರೆ ಈಗೀಗ ತಮ್ಮ ಅನಿವಾರ್ಯ ಅಲೆಮಾರಿತನದಿಂದ ದೊರೆತ ಪುರುಷ ಪ್ರಧಾನ ಸಮಾಜದ ಸಂಪರ್ಕ ಇವರ ಮೂಲ ಸಂಸ್ಕೃತಿಯನ್ನು ಪಲ್ಲಟಗೊಳಿಸುವಲ್ಲಿ ಪ್ರಭಾವ ಬೀರಿದೆ. ಈಗ ಗಂಡು ಮಂದಗತಿಯಲ್ಲಿ ತನ್ನ ಅಧೀನಕ್ಕೆ ಹೆಣ್ಣನ್ನು ಒಳಪಡಿಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ಕುಟುಂಬದ ನಿರ್ವಹಣೆ ಮನೆಯ ಯಜಮಾನನದು ಎನಿಸಿದೆ. ಗಂಡು ತನ್ನ ದರ್ಪದ ಮೂಲಕ ಹೆಣ್ಣನ್ನು ನಿಯಂತ್ರಿಸಲು ತವಕಿಸುತ್ತಾನೆ. ಈ ಕಾರಣದಿಂದ ಕುಟುಂಬದೊಳಗೇ ಸಂಘರ್ಷದ ಗಾಳಿ ಬೀಸುತ್ತಿದೆ. ಇದು ತಿಕ್ಕಾಟಕ್ಕೂ ಕಾರಣವಾಗುತ್ತಿದೆ. ಆದರೂ ಗಳಿಸಿದ ಹಣವನ್ನು ತನ್ನ ದುಶ್ಚಟಗಳಿಗೆ, ಅತಿಯಾದ ಕಡಿತ, ಜೂಜು ಮುಂತಾದವಕ್ಕೆ ದುರ್ವ್ಯಯ ಮಾಡುವ ಪುರುಷ ಹಾಗೂ ಸೋಮಾರಿಯಾಗಿರುವ ವ್ಯಕ್ತಿ ಇಲ್ಲಿ ನಗಣ್ಯಕ್ಕೆ ಗುರಿಯಾಗುತ್ತಾನೆ. ಆತನ ತಾಯಿ ಅಥವಾ ಹೆಂಡತಿ ಈ ಕಾರಣಕ್ಕಾಗಿ ಇಂತಹ ಪುರುಷರಿಗೆ ಸಾರ್ವಜನಿಕವಾಗಿ ಬಯ್ಯುವುದು ಕೆಲವೊಮ್ಮೆ ಹೊಡೆಯುವುದೂ ಇದೆ.

ಈ ಜನಸಮುದಾಯದ ಹೆಚ್ಚಿನ ಕುಟುಂಬಗಳು ರಸ್ತೆ ಕೆಲಸಗಳಿಗೆ ತೊಡಗಿಕೊಂಡಿರುವುದರಿಂದ ತಮ್ಮ ಕುಲಕಸುಬು ರಸ್ತೆ ಕೆಲಸವೆಂದೇ ಹೇಳುತ್ತಾರೆ. ಆದರೆ ಅನೇಕರು ನಾನಾ ಕಾರಣಗಳಿಗಾಗಿ ಬಹುಹಿಂದೆಯೆ ತಮಗಿದ್ದ ಭೂಮಿಯನ್ನು ಕಳೆದುಕೊಂಡಿರುವುದಾಗಿಯೂ ತಿಳಿಸುತ್ತಾರೆ. ಭೂ ಒಡೆತನದಿಂದ ವಂಚಿತರಾಗಿದ್ದ ಇವರಲ್ಲಿ ಕೆಲವರಿಗೆ ಕಾಲಾನಂತರ ಉಳುವವನೆ ಭೂಮಿಯ ಒಡೆಯ ಕಾನೂನಿನ ಕಾರಣವಾಗಿ ಹಾಗೂ ಭರಾಕಸ್ತು ಭೂಮಿಯೂ ಸಿಕ್ಕಿದೆ. ಆದರೆ ಈ ಜನಾಂಗದವರಲ್ಲಿ ಭೂಮಿ ಹೊಂದಿದವರ ಸಂಖ್ಯೆ ತೀರಾ ವಿರಳ, ಬೆರಳೆಣಿಕೆಯಷ್ಟು, ಹೊಂದಿರುವ ಭೂಮಿಯ ಪ್ರಮಾಣವೂ ಬಹಳ ಕಡಿಮೆ.

ಭೂಮಿ ಇರುವವರು ತಾವೇ ತಮ್ಮ ಕುಟುಂಬ ಸದಸ್ಯರ ಅವಲಂಬನೆಯಲ್ಲಿ ವ್ಯವಸಾಯ ಮಾಡುತ್ತಾರೆ. ಮಳೆ ಆಶ್ರಿತವಾದುದರಿಂದ ವರ್ಷಕ್ಕೆ ಒಂದೆ ಬೆಳೆ ಇವರದು. ಇಲ್ಲೂ ಸಹ ಮಹಿಳೆ ಗಂಡಿಗೆ ಸರಿಸಮನಾಗಿ ವ್ಯವಸಾಯದ ಪ್ರತಿಯೊಂದು ಸಂದರ್ಭದಲ್ಲಿಯೂ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ. ಭೂಮಿಗೆ ಬಿತ್ತನೆ ಹಾಕುವುದರಿಂದ ಒಳಗೊಂಡು ನಾಟಿಹಾಕುವುದು, ಕಳೆ ಕೀಳುವುದು, ಕೊನೆಗೆ ಫಸಲು ಬಿಡಿಸುವ ಕೆಲಸವನ್ನೂ ಮಾಡುತ್ತಾಳೆ. ಇವರಲ್ಲಿ ಭೂಮಿಗೆ ಬಿತ್ತನೆ ಹಾಕುವಾಗ ಮಹಿಳೆಯದೆ ಪ್ರಮುಖ ಪಾತ್ರ ಬಿತ್ತನೆ ಹಾಕುವ ದಿನ, ಬಿತ್ತನೆ ಬೀಜಗಳನ್ನು ತುಂಬಿದ ಚೀಲಗಳಿಗೆ ಕಡ್ಡಾಯವಾಗಿ ಆ ಮನೆಯ ಹೆಣ್ಣುಮಗಳು ಅಥವಾ ಮುತ್ತೈದೆ ವಿಭೂತಿ, ಅರಿಶಿನ, ಕುಂಕುಮ ಹಚ್ಚಿ ಗಂಧದ ಕಡ್ಡಿಯಿಂದ ಪೂಜಿಸಿ ನಂತರ ಆಕೆ ಅವುಗಳನ್ನು ಮುಟ್ಟಿ ನಮಿಸಲೇಬೇಕು. ಅನಂತರ ಹದಗೊಳಿಸಿದ ಭೂಮಿಗೆ ಬಿತ್ತನೆ ಬೀಜಗಳನ್ನು ಹಾಕಲಾಗುತ್ತದೆ. ಶ್ರಮಸಂಸ್ಕೃತಿಯೇ ಪ್ರಧಾನವಾದ ಆದಿಮ ಜನಾಂಗಗಳು ಫಲವಂತಿಕೆಯ ಪಾವಿತ್ರ‍್ಯ ಹಾಗೂ ಮಹತ್ತ್ವದ ಕಾರಣಕ್ಕೆ ಮಹಿಳೆಗೇ ಮೊದಲ ಆದ್ಯತೆ ನೀಡಿರುವುದನ್ನು ಇಲ್ಲಿ ಗಮನಿಸಬಹುದು.

ಬೆಳೆ ಫಸಲಿಗೆ ಬಂದ ನಂತರವೂ ಮಹಿಳೆಗೇ ಪ್ರಧಾನ್ಯತೆ ನೀಡಲಾಗಿದೆ. ಬೆಳೆ ಕಟಾವಿಗೆ ಬಂದ ಹದಿನೈದು ದಿನಕ್ಕೂ ಮೊದಲೆ ಮನೆಯ ಹೆಣ್ಣು ಮಗಳು ಅಥವಾ ಮುತ್ತೈದೆ ಗದ್ದೆಗೆ ಹೋಗಿ ಪೂಜಿಸಿ ಬರುತ್ತಾರೆ. ಅನಂತರ ಒಂದು ವಾರದ ಬಳಿಕ ’ಮುನಿಮಾಡುವುದು’ ಎಂಬ ಭೂಮಿ ಪೂಜೆಯನ್ನು ಆಚರಿಸುತ್ತಾರೆ. ಈ ಆಚರಣೆಯಲ್ಲಿ ಮಾತ್ರ ಪುರುಷ ಪ್ರಮುಖ ಪಾತ್ರವಹಿಸುತ್ತಾನೆ. ಹೊಲದ ಒಡೆಯ ತಮ್ಮ ಜನಾಂಗದ ಮುಖ್ಯ ಕುಲದೈವವಾದ ಕಾಳಿಯಮ್ಮನಿಗೆ ಅಕ್ಕಿ, ಬೆಲ್ಲ, ಒಂದು ಕಾಲು ರೂಪಾಯಿ, ಬಾಳೆಹಣ್ಣು, ಧೂಪ, ಕರ್ಪೂರ ಸಲ್ಲಿಸುತ್ತಾನೆ. (ಇಲ್ಲಿಯೂ ಮಾತೃಪ್ರಧಾನ ಕುಲದೈವವೆ ಇರುವುದನ್ನು ಗಮನಿಸಬಹುದು) ನಂತರ ಮನೆಯ ಹಿರೀಕ ಫಸಲು ಹತ್ತಿರ ಬಂದ ಶುಕ್ರವಾರ ಅಥವಾ ಶನಿವಾರ ಮುನಿ ಮಾಡುತ್ತಾನೆ. ಗದ್ದೆಗೆ ಹೊಸ ಮಡಕೆಯನ್ನು ತೆಗೆದುಕೊಂಡು ಹೋಗಿ, ಅಲ್ಲೆ ಕಲ್ಲನ್ನು ಒಡ್ಡಿ ಪೊಂಗಲ್ ಮಾಡಿ, ಏಳು ಚಿಕ್ಕ ಚಿಕ್ಕ ಕಲ್ಲುಗಳಿಗೆ ಎಡೆಯಿಟ್ಟು, ಬೆಳೆದ ಬೆಳೆಯನ್ನು ಒಂದು ಹಿಡಿಯಷ್ಟು ಕೊಯ್ದು ಅದಕ್ಕೂ ಪೂಜೆಯನ್ನು ಸಲ್ಲಿಸುತ್ತಾನೆ. (ಹೆಚ್ಚಿನ ವಿವರಕ್ಕೆ ’ಕಪ್ಪೆ ಹೊಲಯರ ಸಂಸ್ಕೃತಿ’ ಕೃತಿಯನ್ನು ಗಮನಿಸಬಹುದು) ಹೀಗೆ ವ್ಯವಸಾಯಕ್ಕೆ ಸಂಬಂಧಿಸಿದ ಆಚರಣೆಯಲ್ಲಿ ಹೆಣ್ಣು – ಗಂಡು ಇಬ್ಬರಿಗೂ ಸಮಾನತೆ ಇರುವುದನ್ನಿಲ್ಲಿ ನೋಡಬಹುದು.

ಭೂಮಿ ಇಲ್ಲದವರು ಹಾಗೂ ರಸ್ತೆ ಕೆಲಸಕ್ಕೆ ಹೋಗದ ಮಹಿಳೆಯರು ತಮ್ಮ ಗಂಡ ಹಾಗೂ ಮಕ್ಕಳೊಟ್ಟಿಗೆ ಉಳ್ಳವರ ಹೊಲಗದ್ದೆಗಳಲ್ಲಿ ನಾಟಿ ಹಾಕುವುದು, ಕಳೆ ಕೀಳುವುದು, ಭತ್ತ ಬಡಿಯುವುದು, ರಾಗಿ ತೆನೆ ಕುಯ್ಯುವುದು, ಫಸಲನ್ನು ಬಿಡಿಸುವುದು ಅಥವಾ ಕುಯ್ಯುವುದು ಇವೆ ಮುಂತಾದ ಅಯಾ ಪ್ರದೇಶಗಳ ಬೆಳೆಗಳಿಗೆ ಅನುಗುಣವಾಗಿ ತಮ್ಮನ್ನು ಶ್ರಮಕ್ಕೆ ತೊಡಗಿಸಿಕೊಳ್ಳುತ್ತಾರೆ ಹಿಂದೆ ಕಪ್ಪೆಹೊಲಯರ ಕೆಲವು ಪುರುಷರು ಅಥವಾ ಇಡೀ ಕುಟುಂಬವೆ ಜೀತಕ್ಕೆ ಇದ್ದ ಪ್ರಕರಣಗಳೂ ಇವೆ. ಆದರೆ ಈಗ ಕಂಡುಬರುತ್ತಿಲ್ಲ. ಅಲ್ಲದೆ ಜೀತಕ್ಕೆ ಇರುವುದಕ್ಕಿಂತ ರಸ್ತೆ ಕೆಲಸಕ್ಕೆ ಹೋಗುವುದೇ ಉತ್ತಮವೆಂಬ ನಂಬಿಕೆ ಈ ಸಮುದಾಯದ ಈಗಿನ ಹೆಣ್ಣು ಹಾಗೂ ಗಂಡು ಇಬ್ಬರ ಖಚಿತ ಅಭಿಪ್ರಾಯ.

ಕಪ್ಪೆ ಹೊಲಯ ಜನಾಂಗದ ಮಹಿಳೆಯು ಪುರುಷನಷ್ಟೆ ಸರಿಸಮನಾಗಿ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಿದರೂ – ರಸ್ತೆ ಕೆಲಸ ಮತ್ತು ವ್ಯವಸಾಯಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ – ಪುರುಷನಿಗಿಂತ ಅಕೆಗೆ ಕಡಿಮೆ ಕೂಲಿ ಸಿಗುತ್ತದೆ. ಅಂದರೆ ಗಂಡಿಗೆ ಕೂಲಿ ಐವತ್ತು ರೂಪಾಯಿ ಇದ್ದರೆ ಹೆಣ್ಣಿಗೆ ಮೂವತ್ತು ರೂಪಾಯಿ ಇರುತ್ತದೆ. ಗಂಡಿಗೆ ನೂರು ರೂಪಾಯಿ ಇದ್ದರೆ ಹೆಣ್ಣಿಗೆ ಎಪ್ಪತ್ತು ರೂಪಾಯಿ ಕೂಲಿ ನೀಡಲಾಗುತ್ತದೆ. ’ಸಮಾನ ಕೆಲಸಕ್ಕೆ ಸಮಾನ ಕೂಲಿ’ ಎಂಬುದನ್ನು ಈ ಪರಿಸರದ ಗುತ್ತಿಗೆದಾರರು, ಜಮೀನುದಾರರು ಹಾಗೂ ಮೇಲಿನ ಜಾತಿಯವರು ಪರಿಪಾಲಿಸುವುದಿಲ್ಲ. ಅಲ್ಲದೆ ಇವರು ವಾಸಿಸುವ ಗ್ರಾಮಗಳಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿ ಇದ್ದು ಹೋಟೇಲು, ದೇವಾಲಯ ಮುಂತಾದೆಡೆ ಈ ಜನಾಂಗಕ್ಕೆ ಪ್ರವೇಶ ಇರುವುದಿಲ್ಲ. ವಿಚಿತ್ರವೆಂದರೆ ಈ ಪರಿಸರದ ಇನ್ನಿತರ ಹೊಲಯ ಸಮುದಾಯದವರೂ ಕಪ್ಪೆಹೊಲಯರನ್ನು ತಮಗಿಂತ ಕೀಳು ಎಂದು ಭಾವಿಸಿದ್ದಾರೆ.

ಇನ್ನು ಇವರ ವೇಷಭೂಷಣಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಇವರು ಕಡುಬಡವರೂ ಕಠಿಣಶ್ರಮಜೀವಿಗಳೂ ಆದುದರಿಂದ ಹಾಗೂ ಹೆಚ್ಚು ಬಿಸಿಲಿನಲ್ಲೆ ಕೆಲಸ ಮಾಡುವುದರಿಂದ ಹಳೆಯ ತಲೆಮಾರಿನ ಮಹಿಳೆಯರು ಕಡಿಮೆ ಬೆಲೆಯ ಮಾಮೂಲಿ ಸೀರೆಯನ್ನು ಧರಿಸುತ್ತಾರೆ. ಇವರಲ್ಲಿ ನೆರಿಗೆಯನ್ನು ಹಿಂದಕ್ಕೆ ಹಾಕುವುದಲ್ಲದೆ, ಸೆರಗನ್ನೆ ಮೇಲಿನ ಹೊದಿಕೆಯಾಗಿ ಸುತ್ತಿಕೊಳ್ಳುತ್ತಾರೆ. ಸೀರೆಯನ್ನು ಮೊಣಕಾಲು ಮಟ್ಟಕ್ಕೆ ಉಟ್ಟುಕೊಳ್ಳುವ ಇವರು ರವಿಕೆಯನ್ನು ಧರಿಸುವುದಿಲ್ಲ. ತಮ್ಮ ಕೆಲಸಗಳಿಗೆ ಈ ರೀತಿ ಸೀರೆ ಉಡುವುದು ಅನುಕೂಲಕರವೆಂದು ಹೇಳುವ ಇವರು, ಇದಕ್ಕೆ ತಮ್ಮ ಕಡುಬಡತನವೂ ಕಾರಣವಾಗಿತ್ತು ಎಂದು ಹೇಳುವುದನ್ನು ಮರೆಯುವುದಿಲ್ಲ. ಸುಮಾರು ೬೦ ವರ್ಷ ದಾಟಿದ ಮಹಿಳೆಯರು ಮಾತ್ರ ಈಗಲೂ ಈ ರೀತಿಯೇ ಸೀರೆ ಉಡುವುದನ್ನು ಉಳಿಸಿಕೊಂಡಿದ್ದಾರೆ. ಈಗ ಹೊಸ ತಲೆಮಾರಿನ ಹೆಂಗಸರು ಮದುವೆಯಾದವರು ಸಮಾಜದ ಇನ್ನಿತರರಂತೆ ಸೀರೆ, ರವಿಕೆ, ಧರಿಸುತ್ತಾರೆ. ಇನ್ನುಳಿದ ಹೆಣ್ಣುಮಕ್ಕಳು ದಾವಣಿ, ಲಂಗ-ರವಿಕೆ, ಚೂಡಿದಾರ, ನೈಟಿ ಧರಿಸುತ್ತಾರೆ.

ಮಹಿಳೆ ಧರಿಸುವ ಆಭರಣಗಳು ಹಿತ್ತಾಳೆಯವೂ ಹೆಚ್ಚೆಂದರೆ ಬೆಳ್ಳಿಯವು ಆಗಿರುತ್ತವೆ. ಇದಕ್ಕೂ ಆರ್ಥಿಕ ಸ್ಥಿತಿಯೇ ಕಾರಣವೆನ್ನಬಹುದು. ಕಿವಿಗೆ ಮತ್ತು ಮೂಗಿಗೆ ಧರಿಸುವ ಓಲೆ ಹಾಗೂ ಮೂಗುತಿ ಹಿತ್ತಾಳೆಯದು. ಕಾಲುಂಗುರ, ಕಾಲಿಗೆ ಹಾಕುವ ಗೆಜ್ಜೆ ಮತ್ತು ಕೈಬಳೆ ಬೆಳ್ಳಿಯದಾಗಿದೆ. ಮದುವೆಯ ಹೆಣ್ಣಿಗೆ ಹಿಂದೆ ಅರಿಶಿಣದ ಕೊಂಬನ್ನು ಕಟ್ಟಿದ ದಾರ ಅಥವಾ ಹಿತ್ತಾಳೆಯ ತಾಳಿಯನ್ನು ಕಟ್ಟಿಕೊಳ್ಳುತ್ತಿದ್ದರಂತೆ. ಈಗ ಬದಲಾವಣೆಯಾಗಿದ್ದು ಚಿನ್ನದ ತಾಳಿ ಯನ್ನು ಕೆಲವರು ಹಾಕಿಕೊಳ್ಳುತ್ತಿದ್ದಾರೆ. ಮದುವೆ ಸಂದರ್ಭದಲ್ಲಿ ಮಾತ್ರ ಅಲಂಕಾರಕ್ಕಾಗಿ ಮದುಮಗಳು ಹಣೆಯ ಮೇಲೆ ಜೋತಾಡುವ ಹಿತ್ತಾಳೆಯ ವಾಕ್‌ಚಂಗ್ಲಿ ಎಂಬ ಸರವನ್ನು ಧರಿಸುವಳು. ಇಷ್ಟನ್ನು ಹೊರತುಪಡಿಸಿ ಇನ್ನಿತರ ಜನಾಂಗಗಳಿಗಿಂತ ವಿಶೇಷ ಎನ್ನಬಹುದಾದ ಯಾವ ಆಭರಣಗಳನ್ನೂ ಇವರು ಧರಿಸುವುದಿಲ್ಲ. ಹೊಸ ತಲೆಮಾರಿನ ಹೆಣ್ಣು ಮಕ್ಕಳು ಮಾತ್ರ ಹೊರಗಿನ ಪರಿಸರದ ಪ್ರಭಾವದಿಂದ ಆಧುನಿಕವಾಗಿರುವ ಬಳೆಗಳನ್ನೂ, ಓಲೆಗಳನ್ನೂ, ಉಂಗುರಗಳನ್ನೂ ತಲೆಪಿನ್ನುಗಳನ್ನೂ ಧರಿಸುವುದುಂಟು.

ಕಪ್ಪೆ ಹೊಲಯ ಜನಸಮುದಾಯವು ತಮ್ಮ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಮತ್ತು ಊರಿಂದ ಹೊರಭಾಗಗಳಲ್ಲೆ ಹೆಚ್ಚು ದುಡಿಯುವವರಾದ್ದರಿಂದ ಅಲ್ಲಿ ಆಭರಣಗಳ ಕಳುವು ಆಗಬಹುದು ಎಂಬ ಹಿನ್ನೆಲೆಯಲ್ಲಿ ಚಿನ್ನದ ಆಭರಣಗಳಿಂದ ಬಹುದೂರವೇ ಉಳಿದಿದ್ದಾರೆ.

ರಾಗಿಮುದ್ದೆ ಇವರ ಪ್ರಮುಖ ಆಹಾರ. ತಾವು ವಾಸವಿರುವ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಿಗುವ ಸೊಪ್ಪುಗಳು, ಬಿದಿರು, ಗೆಡ್ಡೆಗೆಣಸುಗಳನ್ನು ಇವರು ದಿನನಿತ್ಯ ಬಳಸುತ್ತಾರೆ. ಮೂರು ಹೊತ್ತು ಮುದ್ದೆ-ಸೊಪ್ಪಿನ ಸಾರು ಇವರ ಊಟವಾಗಿದ್ದು ಹಬ್ಬ, ಮದುವೆ ಮುಂತಾದ ಸಂದರ್ಭಗಳಲ್ಲಿ ಮಾತ್ರ ತಮ್ಮ ಅನುಕೂಲಕ್ಕೆ ತಕ್ಕ ವಿಶೇಷ ಅಡುಗೆಗಳನ್ನು ಮಾಡುತ್ತಾರೆ.

ಕುಲದೈವಗಳು ಹಾಗೂ ಹಬ್ಬ

ಮಾತೃಸಂಸ್ಕೃತಿ ಈ ಜನವರ್ಗದ ಬದುಕಿನಲ್ಲಿ ಆದಿಮ ಕಾಲದಿಂದಲೂ ಹಾಸುಹೊಕ್ಕಾಗಿ ಇರುವುದರಿಂದ ಬಹುಪಾಲು ಇವರ ಕುಲದೈವಗಳೂ ಮಹಿಳಾ ನೆಲೆಯವೆ ಆಗಿವೆ. ಇವರು ನಡೆದುಕೊಳ್ಳುವ, ಪೂಜಿಸುವ ದೈವಗಳೆಂದರೆ ಕಾಳಿಯಮ್ಮ, ಮಾರಿಯಮ್ಮ, ಕಾಳಿಕಾಂಬ, ಅಂಕಾಳಮ್ಮ, ಯೋಗೀಶ್ವರಿ. ಗಂಡುದೈವಗಳಲ್ಲಿ ಮುತ್ತುಮುನಿ. ಇದನ್ನು ಊತುಂಕಾರಿ ಮುನಿಯಪ್ಪ, ಮುನೀಶ್ವರ ಎಂದೂ ಕರೆಯುತ್ತಾರೆ. ಇವರು ಆರಾಧಿಸುವ ಈ ಮುನೇಶ್ವರ ಪ್ರಕೃತಿ ದೈವವಾಗಿದೆ. ಈ ದೇವರ ಬಗೆಗೆ ಭಯದಿಂದ ನಡೆದುಕೊಳ್ಳುತ್ತಾರೆ. ತಮ್ಮ ಶ್ರಮಿಕ ಕೆಲಸಗಳಿಗೆ, ತಾವು ಬೆಳೆದ ಬೆಳೆಗಳಿಗೆ ತಮ್ಮ ಮಕ್ಕಳು ಮರಿಗೆ ಕೆಡುಕನ್ನು ಉಂಟು ಮಾಡದೆ ಒಳಿತನ್ನು ಮಾಡಲಿ ಎಂಬ ಕಾರಣಕ್ಕಾಗಿ ಇದನ್ನು ಆರಾಧಿಸುತ್ತಾರೆ. ಪ್ರಕೃತಿ ವಿಕೋಪಗಳಿಗೆ ಮತ್ತು ಮನುಷ್ಯರಿಗೆ ರೋಗರುಜಿನ ಬರಲು ಮುತ್ತುಮುನಿ ಕಾರಣವೆಂಬ ನಂಬಿಕೆ ಈ ಸಮುದಾಯದ್ದಾಗಿದೆ. ಇವರ ಕೇರಿಯ ಒಳಗಿನ ಈ ಯಾವ ದೈವಗಳೂ ವಿಗ್ರಹರೂಪದಲ್ಲಿ ಇಲ್ಲ. ಬದಲಿಗೆ ಕೆತ್ತನೆ ಇಲ್ಲದ ಸಹಜ ಕಲ್ಲಗಳನ್ನು, ಕೆಲವೊಮ್ಮೆ ತಾವೇ ತಯಾರಿಸಿದ ಮಣ್ಣಿನ ಅಥವಾ ಮರದ ಪ್ರತಿಮೆಗಳನ್ನು ಇವರು ಪೂಜಿಸುತ್ತಾರೆ. ಹಿಂದೆ ಈ ದೇವರುಗಳು ಕೇರಿಯ ಒಳಗೆ ಬಯಲಿನಲ್ಲೆ ಇರುತ್ತಿದ್ದು, ಈಗ ಅಲ್ಲಲ್ಲಿ ಸಣ್ಣಪುಟ್ಟ ದೇವಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ದೇವಾಲಯಗಳ ಮುಂದೆ ಅರಳಿಮರ ಮತ್ತು ಬೇವಿನ ಮರಗಳನ್ನು ಬೆಳೆಸಿದ್ದು ಆ ಮರಗಳೂ ದೇವತೆಗಳೆಂದು ನಂಬುತ್ತಾರೆ. ಕೇರಿಯ ನ್ಯಾಯಪಂಚಾಯಿತಿ ನಡೆಯುವುದು ಈ ಮರಗಳ ಬುಡಗಳಲ್ಲೆ. ಯಾವುದೆ ಕಾರಣಕ್ಕೂ ಈ ಮರಗಳನ್ನೂ ಕಡಿಯುವಂತಿಲ್ಲ. ತಮ್ಮ ಕುಲದೈವಗಳನ್ನು ಪೂಜಿಸುವಂತೆ ಈ ಮರಗಳನ್ನು ಪೂಜಿಸುತ್ತಾರೆ. ಪೂಜಿಸಲು ಹೆಣ್ಣು ಅಥವಾ ಗಂಡು ಎಂಬ ನಿರ್ಬಂಧವಿಲ್ಲ. ಯಾರು ಬೇಕಾದರೂ ಮುಕ್ತವಾಗಿ ಪೂಜಿಸಬಹುದು. ಹೆಣ್ಣುಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಹೊರತುಪಡಿಸಿ ಉಳಿದ ದಿನಗಳಲ್ಲಿ ಆರಾಧಿಸಬಹುದು.

ತಮ್ಮ ಹೊಟ್ಟೆಪಾಡಿಗಾಗಿ ದೂರದ ಹಳ್ಳಿ-ನಗರ-ಪಟ್ಟಣಗಳ ರಸ್ತೆ ಕೆಲಸದಲ್ಲಿ ನಿರತ-ರಾಗುವ ಇವರು ತಾವು ಎಲ್ಲಿ ಡೇರೆ ಅಥವಾ ಟೆಂಟುಗಳನ್ನು ಕಟ್ಟಿಕೊಂಡು ವಾಸಿಸುತ್ತಾರೋ ಅಲ್ಲೆ ಒಂದು ಕರಿಯಕಲ್ಲನ್ನು ಭೂಮಿಗೆ ನೆಟ್ಟು, ಅದಕ್ಕೆ ಕಲ್ಲುಗಳಿಂದಲೇ ಗೂಡು ನಿರ್ಮಿಸಿ ಅದನ್ನು ಪೂಜಿಸಿ ಗೌರವಿಸುತ್ತಾರೆ. ಹೀಗೆ ಪೂಜಿಸುವ ಕಲ್ಲನ್ನು ಅವರು ’ರೋಡು ಮಾರಿಯಮ್ಮ’ ಎಂದು ಕರೆಯುವುದು ವಿಶೇಷವಾಗಿದೆ.

ಇವರು ಆಚರಿಸುವ ಹಬ್ಬಗಳು ಮುನೇಶ್ವರ ಹಬ್ಬ, ಅಂಕಾಳಮ್ಮನ ಹಬ್ಬ ಹಾಗೂ ಸಂಕ್ರಾಂತಿ. ಈ ಎಲ್ಲ ಹಬ್ಬಗಳೂ ಇವರು ಬಿಡುವು ಮಾಡಿಕೊಂಡು ಊರಿಗೆ ಬರುವ ಜನವರಿ, ಫೆಬ್ರವರಿ ಮತ್ತು ಮಾರ್ಚ್‌ತಿಂಗಳ ಒಳಗೇ ನಡೆಯುತ್ತವೆ. ಈ ಹಬ್ಬದ ಸಂದರ್ಭಗಳಲ್ಲಿ ಮಹಿಳೆಗೇ ಹೆಚ್ಚು ಕೆಲಸಗಳು ಇರುತ್ತವೆ. ಮನೆಯನ್ನು ಚೊಕ್ಕಟಗೊಳಿಸುವುದು, ತೊಪ್ಪೆಯಿಂದ ನೆಲ ಸಾರಿಸುವುದು, ಗೋಡೆಗೆ ಸುಣ್ಣ ಹೊಡೆಯುವುದು, ಮನೆ ಬಾಗಿಲ ಅಕ್ಕಪಕ್ಕ ಹಾಗೂ ಮನೆಯ ಒಳಗೆ ಕೆಮ್ಮಣ್ಣಿನ ನೀರಿನಿಂದ ಚಿತ್ತಾರ ಬಿಡಿಸುವ ಕೆಲಸ ಆಕೆಯದೆ. ಈ ಸಂದರ್ಭಗಳ್ಲಿ ತಮ್ಮ ಅನುಕೂಲಕ್ಕೆ ಅನುಗುಣವಾಗಿ ತಂಬಿಟ್ಟು, ಪಾಯಸ, ಕಜ್ಜಾಯ, ವಡೆ, ಸಿಹಿಪೊಂಗಲ್, ಖಾರಪೊಂಗಲ್ ಮುಂತಾದವನ್ನು ತಯಾರಿಸುತ್ತಾಳೆ.

ಮುನೇಶ್ವರ ಹಬ್ಬ ಚೈತ್ರಮಾಸದಲ್ಲಿ ನಡೆಯುವ ಹಬ್ಬ. ಸುಮಾರು ಎಂಟು ದಿನಗಳ ಕಾಲ ಈ ಹಬ್ಬ ನಡೆಯುತ್ತದೆ. ಈ ಮಾಸದ ಯಾವುದಾದರು ಶುಕ್ರವಾರ ಈ ಹಬ್ಬವು ಆರಂಭಗೊಳ್ಳುತ್ತದೆ. ಮುನೇಶ್ವರ ದೈವವನ್ನು ತಮ್ಮ ಕುಲದೇವರನ್ನಾಗಿ ಹೊಂದಿರುವ ಮನೆಯ ಪುರುಷನೊಬ್ಬ, ಮುನೇಶ್ವರನ ಪಾದಕ್ಕೆ ಹುಗ್ನೆ ಹೂವನ್ನು ಹಾಕುವ ಮೂಲಕ ಹಬ್ಬ ಶುರುವಾಗುತ್ತದೆ. ಇಂದಿನಿಂದ ಏಳು ದಿನಗಳು ಯಾವುದೇ ಬಗೆಯ ಮಾಂಸಾಹಾರವನ್ನು ಈ ಜನರು ಬಳಸುವಂತಿಲ್ಲ. ಎಂಟನೆಯ ದಿನಕ್ಕೆ ಮಹಿಳೆಯರು, ಪುರುಷರೊಡನೆ ಕಾಳಿಯಮ್ಮನ ಗುಡಿಯಿಂದ ಮುನೇಶ್ವರ ಗುಡಿಗೆ ತಮಟೆ ವಾದ್ಯದೊಟ್ಟಿಗೆ ಮೆರವಣಿಗೆಯಲ್ಲಿ ಬರುವರು. ತಾವು ತಂದಿರುವ ಹೊಸ ಮಡಿಕೆಯಲ್ಲಿ ಆ ಗುಡಿಯ ಆಸುಪಾಸಿನಲ್ಲೆ ಒಲೆಗಳನ್ನು ಒಡ್ಡಿ ಪೊಂಗಲ್ ತಯಾರಿಸಿ, ಒಂದು ಬಿಳಿಯ ಬಟ್ಟೆಯಿಂದ ಮಡಿಕೆಯ ಬಾಯಿ ಕಟ್ಟುವರು. ಮುನೇಶ್ವರ ಒಕ್ಕಲಿನ ಪೂಜಾರಿಯು ನೂರೊಂದು ಪೂಜೆಯನ್ನು ಮಾಡಿ, ಪ್ರತಿಯೊಂದು ಮಡಕೆಯಲ್ಲಿಯ ಸ್ವಲ್ಪಸ್ವಲ್ಪ ಪೊಂಗಲ್ ತೆಗೆದುಕೊಂಡು ದೊಡ್ಡ ಬಾಳೆ ಎಲೆಯಲ್ಲಿ ಮುನೇಶ್ವರನಿಗೆ ಎಡೆ ಹಾಕುವರು. ನಂತರ ಮಹಿಳೆಯರೆಲ್ಲರೂ ಪೂಜಾರಿಗೆ ತೆಂಗಿನಕಾಯಿ, ಬಾಳೇಹಣ್ಣು ಕೊಟ್ಟು ಪೂಜೆ ಮಾಡಿಸಿ ಮನೆಗೆ ಹೊರಡುವರು. ಮನೆಗಳಲ್ಲಿ ಅಂದು ರಾತ್ರಿ ಮಾಂಸದ ಊಟ. ಪ್ರತೀ ಮನೆಯವರೂ ಕಡ್ಡಾಯವಾಗಿ ಅವರವರ ಭಾವ, ಮೈದುನರನ್ನು ಕರೆದು ಉಪಚರಿಸುವರು.

ಅಂದು ಊಟವಾದ ನಂತರ ಈ ಸಮುದಾಯದ ಮಹಿಳೆ ಮತ್ತು ಪುರುಷರೆಲ್ಲರೂ ಮುನೇಶ್ವರನ ಗುಡಿ ಮುಂದೆ ಸೇರುವರು. ತಮ್ಮ ಕುಲದೈವಗಳಿಗೆ ಸಂಬಂಧಿಸಿದ ’ಕುಮ್ಮಪಾಟ್ಟು’ ಎಂಬ ಹಾಡನ್ನು ಹೆಣ್ಣುಗಂಡು ಎಲ್ಲರೂ ಸಾಮೂಹಿಕವಾಗಿ ಹಾಡುತ್ತ ಕುಣಿಯುವರು. ಹಾಡು-ಕುಣಿತದ ನಡುನಡುವೆಹೋ ಹೊಯ್ ಎಂಬುದಾಗಿ ಕೇಕೆ ಹಾಕುತ್ತಾರೆ. ಈ ಸಂದರ್ಭದಲ್ಲಿ ಮನೆಗೊಬ್ಬರಂತೆ ಮಹಿಳೆ ಪುರುಷರು ಒಟ್ಟುಗೂಡಿ ವೃತ್ತಾಕಾರವಾಗಿ ಕುಣಿಯುವುದು ವಾಡಿಕೆ. ಇದಕ್ಕೆ ಮಾರಿಕುಣಿತ ಎಂದು ಹೆಸರು. ಹಾಡು ಮತ್ತು ಕುಣಿತಕ್ಕೆ ಹಿನ್ನೆಲೆಯಾಗಿ ತಮಟೆಯನ್ನು ಬಡಿಯಲಾಗುತ್ತದೆ.

ಸಂಕ್ರಾಂತಿಯು ಜನವರಿ ತಿಂಗಳಿನಲ್ಲೆ ಬರುವ ಹಬ್ಬವಾಗಿದೆ. ಇದನ್ನು ಅಡಿಹಬ್ಬ ಎಂಬುದಾಗಿ ಕರೆಯುತ್ತಾರೆ. ಇದು ಸುಮಾರು ಹದಿನೆಂಟು ದಿನಗಳು ನಡೆಯುವ ಹಬ್ಬ. ಈ ಸಂದರ್ಭದಲ್ಲೂ ಸಹ ಮಹಿಳೆಗೆ ಸಾಕಷ್ಟು ಕೆಲಸ. ಮನೆಯನ್ನು ಸಾರಿಸಿ, ಬೇವಿನ ಸೊಪ್ಪು, ಅಣೆಸೊಪ್ಪು, ಉತ್ರಾಣಿ ಸೊಪ್ಪು ತಂದು ಅದನ್ನು ಪೂಜಿಸಿ ತಮ್ಮ ಮನೆಯ ಮುಂದಿನ ಸೂರಿಗೆ ಸಿಕ್ಕಿಸುತ್ತಾರೆ. ಇದನ್ನು ’ಕಾಪ್‌ಕಟ್ಟುವುದು’ ಎಂದು ಕರೆಯುತ್ತಾರೆ. ಮೊದಲ ದಿನ ಮಾಂಸಾಹಾರ ನಿಷಿದ್ಧವಾಗಿರುವುದರಿಂದ ಮಹಿಳೆಯರು ದೋಸೆ; ಇಡ್ಲಿ ಮುಂತಾದ ತಿಂಡಿಗಳನ್ನು ಮಾಡುತ್ತಾರೆ. ಎರಡನೇ ದಿನವೂ ಇದೇ ರೀತಿ. ಮೂರನೆ ದಿನ, ಸತ್ತಿರುವ ತಮ್ಮವರು ತಿನ್ನುತ್ತಿದ್ದ, ಕುಡಿಯುತ್ತಿದ್ದ ಆಹಾರ ಪದಾರ್ಥಗಳನ್ನು ಒಂದು ಬುಟ್ಟಿಯಲ್ಲಿ ತುಂಬಿಕೊಂಡು ಮನೆಯ ಹೆಂಗಸರು, ಗಂಡಸರು ಮಕ್ಕಳೆಲ್ಲರೂ ಸತ್ತಿರುವವರು, ಸಮಾಧಿಗಳ ಬಳಿ ಹೋಗಿ ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಕೆಲವರು ಮನೆಗಳಲ್ಲೇ ಈ ರೀತಿ ಎಡೆ ಹಾಕಿ ಪೂಜೆ ಮಾಡುತ್ತಾರೆ. ರಾತ್ರಿ ಮಾಂಸದೂಟ. ಇನ್ನು ಉಳಿದಂತೆ ೧೪ನೇ ದಿನದ ತನಕ ವಿಶೇಷವಾದುದು ಏನೂ ಇಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ದನ, ಕುರಿ ಹಾಗೂ ಕೋಳಿ ಮಾಂಸದ ಊಟೋಪಚಾರಗಳು ನಡೆಯುತ್ತವೆ. ಹೆಚ್ಚಾಗಿ ಇವರು ಬಳಸುವುದು ಗೋಮಾಂಸವನ್ನೆ. ೧೮ನೇ ದಿನಕ್ಕೆ ’ಸೂರ್ಯಪೊಂಗಲ್’. ಅಂದು ಮುಂಜಾನೆಯೇ ಕಾಳಿಯಮ್ಮನಿಗೆ ಪೂಜೆ ಸಲ್ಲಿಸಿ ಕೋಳಿಯನ್ನು ಕೊಯ್ದು ಅಡಿಗೆ ಮಾಡುವರು. ಇದು ಈ ಸಮುದಾಯದ ಎಲ್ಲರ ಮನೆಯ ಮುಂದೆಯೂ ನಡೆಯುತ್ತದೆ. ಅಂದು ಸಾಯಂಕಾಲ ಸೂರ್ಯ ಮುಳುಗುತ್ತಿದ್ದಂತೆ ಮೊದಲೆ ಗುರುತಿಸಲ್ಪಟ್ಟ ಹಳ್ಳ ಒಂದರ ಬಳಿಗೆ ಹೋಗುವರು. ಅಲ್ಲಿ ಒಬ್ಬರು ಬೇವಿನ ಸೊಪ್ಪಿನ ಚಿಕ್ಕ ಹಸಿರು ಚಪ್ಪರವನ್ನುಹಾಕಿ, ಅದರ ಒಳಗೆ ಮಾರಿ ಕರಗ (ಕಳಸ) ಇಟ್ಟು ಅದಕ್ಕೆ ಕಾಳಿಯಮ್ಮನ ಮನೆತನದ ವ್ಯಕ್ತಿ  ಪೂಜೆ ಸಲ್ಲಿಸುವನು. ಅಲ್ಲಿ ಆ ರಾತ್ರಿ ಒಂದು ಅಗ್ನಿಕುಂಡವನ್ನು ನಿರ್ಮಿಸಿ ಅದರ ಸುತ್ತಲೂ ಹೆಣ್ಣು-ಗಂಡು ಇಬ್ಬರೂ ತಮಟೆಯ ಗತಿಗೆ ಅನುಗುಣವಾಗಿ ಕುಣಿಯುತ್ತ ಹಾಡುತ್ತಾರೆ. ಇದೇ ಸಮಯಕ್ಕೆ ಐದಾರು ಮೊಳದಷ್ಟು ಉದ್ದಕ್ಕೆ, ಕಾಡು ಸೌದೆಯನ್ನು ಉರಿಸಿ ಕೆಂಡ ಮಾಡಲಾಗುವುದು. ದೇವರ ಆವೇಷ ಬಂದ ಪೂಜಾರಿ ಆ ಕೊಂಡ ಹಾಯುವನು. ಇದಾದ ನಂತರ ಕೋಣವನ್ನು ಬಲಿ ಕೊಡಲಾಗುವುದು. ಅದರ ಮಾಂಸವನ್ನು ಎಲ್ಲ ಮನೆಯವರಿಗೂ ಪಾಲುಹಾಕಿ ಹಂಚಲಾಗುವುದು. ಅಂದು ರಾತ್ರಿಯೇ ಅದನ್ನು ತೆಗೆದುಕೊಂಡು ಹೋಗಿ ಅವರವರ ಮನೆಗಳಲ್ಲಿ ಅಡುಗೆ ಸಿದ್ಧಪಡಿಸಿ ಊಟ ಮಾಡುವರು.

ಕಪ್ಪೆಹೊಲಯರು ಆಚರಿಸುವ ಇನ್ನೊಂದು ಹಬ್ಬ ಅಂಕಾಳಮ್ಮನ ಹಬ್ಬ. ಇದನ್ನು ಪೆರಿಯಾಂಡ್ಸಿ ಹಬ್ಬವೆಂದೂ ಕರೆಯುತ್ತಾರೆ. ಇದು ಐದು ವರ್ಷಕ್ಕೆ ಒಮ್ಮೆ ನಡೆಸುವುದಾಗಿದೆ. ಇದು ಸಾಮಾನ್ಯವಾಗಿ ಫೆಬ್ರವರಿ ಕೊನೆಗೆ ಅಥವಾ ಏಪ್ರಿಲ್ ತಿಂಗಳಿನ ಯಾವುದಾದರೂ ಮಂಗಳವಾರ ನಡೆಯುವ ಆಚರಣೆ. ಮೂರು ದಿನಗಳು ಈ ಹಬ್ಬವನ್ನು ಆಚರಿಸುತ್ತಾರೆ. ಇದರಲ್ಲೂ ಕೂಡ ಹೆಂಗಸರಿಗೆ ಹೆಚ್ಚು ಕೆಲಸವಿರುತ್ತದೆ. ಮೊದಲ ದಿನ ಸಿಹಿ ಊಟವನ್ನು ಮಾಡುತ್ತಾರೆ. ಎರಡನೇ ದಿನವೂ ಅಷ್ಟೆ. ಮೂರನೇ ದಿನಕ್ಕೆ ಕಾಳಿಯಮ್ಮನ ದೇವಾಲಯದಿಂದ ಅಂಕಾಳಮ್ಮನ ದೇವಾಲಯಕ್ಕೆ ಹೆಣ್ಣು ಮಕ್ಕಳು ಹಾಗೂ ಮುತ್ತೈದೆಯರು ತಂಬಿಟ್ಟನ್ನು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಪೂಜಾರಿಗೆ ಕೊಟ್ಟು ಪೂಜೆ ಮಾಡಿಸಿ ಮನೆಗೆ ಕೊಂಡೊಯ್ಯುತ್ತಾರೆ. ತಮ್ಮ ಅಭಿಲಾಷೆಗಳ ಈಡೇರಿಕೆಗಾಗಿ ಹರಕೆ ಹೊತ್ತುಕೊಂಡಿರುವ ಹೆಂಗಸರು ಹಾಗೂ ಗಂಡಸರು ಬೆಳಗಿನಿಂತ ಉಪವಾಸವಿದ್ದು ಮಧ್ಯಾಹ್ನದ ವೇಳೆಗೆ ಪೂಜಾರಿಯಿಂದ ಬಾಯಿಗೆ ಬೀಗ ಹಾಕಿಸಿಕೊಳ್ಳುತ್ತಾರೆ. ಸಂಜೆಯ ಸಮಯದಲ್ಲಿ ಅಂಕಾಳಮ್ಮನ ಗುಡಿಯ ಮುಂದೆ ಮಹಿಳೆಯರ ಹೆಚ್ಚಾಗಿ ನೆರೆದು ಪೂಜಾರಿ ಮೂಲಕ ಪೂಜೆ ಮಾಡಿಸುತ್ತಾರೆ. ರಾತ್ರಿ ಮಾಂಸದ ವಿಶೇಷ ಅಡುಗೆ. ಊಟದ ನಂತರ ಎಲ್ಲಾ ಹಬ್ಬಗಳಂತೆಯೇ ಇಲ್ಲೂ ಸಹ ಹೆಣ್ಣು-ಗಂಡುಗಳು ತಮಟೆಯ ಸದ್ದಿನೊಂದಿಗೆ ಸಾಮೂಹಿಕವಾಗಿ ಹಾಡುತ್ತಾ ಕುಣಿಯುತ್ತಾರೆ.

ವರ್ಷದ ಒಂಭತ್ತು ತಿಂಗಳು ಕಠಿಣ ಶ್ರಮದಿಂದ ದುಡಿಯುವ ಈ ಸಮುದಾಯ ಹಬ್ಬದ ಇಂತಹ ಸಂದರ್ಭದಲ್ಲಿ ನಿರಾಳರಾಗುತ್ತಾರೆ. ಮತ್ತೆ ತಮ್ಮ ಶ್ರಮ ಬದುಕಿಗೆ ಹಿಂದಿರುಗಲು ಉತ್ಸಾಹವನ್ನು ತುಂಬಿಕೊಳ್ಳುತ್ತಾರೆ. ಇನ್ನೊಂದೆಡೆ ಈ ಹಬ್ಬಗಳ ದೀರ್ಘಾವಧಿ ಆಚರಣೆಗಳ ಕಾರಣದಿಂದ ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬುದೂ ಕಂಡುಬರುತ್ತದೆ. ಅನೇಕ ಮಹಿಳೆಯರು ಈ ಕುರಿತಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಯಾವುದಾದರೂ ಒಂದು ಹಬ್ಬವನ್ನು ಆಚರಿಸಿದರೆ ಉತ್ತಮ ಎಂಬ ಅಭಿಪ್ರಾಯ ಅವರದು. ಆದರೆ ಹಿಂದಿನಿಂದ ರೂಢಿಸಿಕೊಂಡು ಬಂದ ಸಂಪ್ರದಾಯ ಹಾಗೂ ಅವುಗಳನ್ನು ನಿಲ್ಲಿಸಿದರೆ ಏನಾದರೂ ಅಪಾಯ ಸಂಭವಿಸಹುದೆಂಬ ಭಯವೂ ಅವರಿಗಿದೆ. ಅನುಕೂಲಸ್ಥರು ಸ್ವಲ್ಪ ಆಡಂಬರದಿಂದಲೂ, ಕಡುಬಡವರು ಸಾಲಸೋಲ ಮಾಡಿಯೂ ಈ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಹಬ್ಬಗಳ ಆಚರಣೆಗಳಲ್ಲಿಯೂ ಹೆಣ್ಣು-ಗಂಡು ಇಬ್ಬರು ಸರಿಸಮನಾಗಿ ಭಾಗವಹಿಸುವುದನ್ನು ಇವರಲ್ಲಿ ಕಾಣಬಹುದು.

ಮಹಿಳಾ ಸಂಬಂಧಿ ಆಚರಣೆಗಳು

ಈಗಾಗಲೇ ತಿಳಿಸಿದಂತೆ ಮಹಿಳಾ ಪ್ರಾಧಾನ್ಯತೆ ಈ ಜನಾಂಗದ ಮುಖ್ಯ ಲಕ್ಷಣ. ಹಾಗಾಗಿ ಹೆಣ್ಣು ಮೈನೆರೆಯುವುದು, ಮದುವೆ, ಹೆರಿಗೆಯ ಸಂದರ್ಭಗಳನ್ನು ಉತ್ಸಾಹದಿಂದ ಆಚರಿಸುತ್ತಾರೆ. ಮನೆಗೆ ಹೆಣ್ಣು ಮಗು ಬರುವುದು ಭಾಗ್ಯವೆಂಬ ನಂಬಿಕೆ ಈ ಜನತೆಯ ಮಹಿಳೆ- ಪುರುಷ ಇಬ್ಬರಲ್ಲೂ ಇದೆ.

ಮಹಿಳಾ ಸಂಬಂಧಿಯಾದ ಆಚರಣೆಗಳು ಹೀಗಿವೆ;

ಮೈನೆರೆಯುವುದು

ಋತುಮತಿಯಾಗುವುದು ಹೆಣ್ಣಿನ ಬದುಕಿನ ಪ್ರಮುಖ ಘಟ್ಟ. ಇದನ್ನು ಇವರು ಹೆಣ್ಣು ದೊಡ್ಡವಳಾದಳು ಎಂತಲೂ ಮೈನೆರೆದಳು ಎಂತಲೂ ಕರೆಯುತ್ತಾರೆ. ಮದುವೆಗಿಂತಲೂ ಮಹತ್ವಪೂರ್ಣವಾಗಿ ಈ ಸಂದರ್ಭವನ್ನು ಆಚರಿಸುತ್ತಾರೆ. ಇದನ್ನು ಸೀರು ಮಾಡುವುದೆಂದೂ ಕರೆಯುತ್ತಾರೆ. ಮನೆಯ ಮಗಳು ಮೈನೆರೆದ ವಿಷಯ ಗೊತ್ತಾಗುತ್ತಿದ್ದಂತೆ, ಆಕೆಯ ಸೋದರ ಮಾವನಿಗೆ ತಿಳಿಸಲಾಗುತ್ತದೆ. ಆತ ಬರುವಾಗ ತನ್ನ ಜೊತೆಗೆ ಕನ್ನಡಿ, ಬಾಚಣಿಗೆ, ಟೇಪು, ಹರಳೆಣ್ಣೆ, ಉದ್ದು, ಬೆಲ್ಲ, ಎಳ್ಳು, ಉರಿಗಡಲೆಯನ್ನು ತರುತ್ತಾನೆ. ಅವುಗಳನ್ನು ಮನೆಗೆ ಕೊಟ್ಟು ದೊಡ್ಡವಳಾದ ಹೆಣ್ಣಿನ ಮನೆಯ ಮುಂದೆ ಅಂಚಿಹುಲ್ಲು ಹಾಗೂ ಬೇವಿನಸೊಪ್ಪಿನ ಗುಳ್ಳನ್ನು (ಗುಡಿಸಲು) ಹಾಕುತ್ತಾನೆ. ದೊಡ್ಡವಳಾದ ಹೆಣ್ಣುಮಗಳು ಆ ಗುಡಿಸಲಿನಲ್ಲೆ ಒಟ್ಟು ಹತ್ತು ದಿನ ಇರಬೇಕು. ರಾತ್ರಿಯೂ ಕೂಡ ಆಕೆಯನ್ನು ಅಲ್ಲಿಯೇ ಮಲಗಿಸಲಾಗುತ್ತದೆ. ಆಕೆಗೆ ಪ್ರತ್ಯೇಕವಾದ ಚಾಪೆ, ರಗ್ಗು, ತಟ್ಟೆ, ಲೋಟ, ಚೆಂಬನ್ನು ಕೊಟ್ಟಿರುತ್ತಾರೆ. ರಾತ್ರಿ ವೇಳೆ ತಲೆಗೆ ಮನೆಯ ಕಸಬರಿಕೆಯನ್ನು ತಲೆದಿಂಬಾಗಿ ಹಾಕಿಕೊಂಡು ಮಲಗಬೇಕು.  ಈ ಸಮಯದಲ್ಲಿ ಗುಡಿಲ ಹೊರಗೆ ಕುಡುಗೋಲನ್ನು ಇಡಲಾಗುತ್ತದೆ.

ಸೋದರ ಮಾವ ಪ್ರತೀ ಮೂರು, ಐದು, ಏಳು ಹಾಗೂ ಒಂಭತ್ತು ದಿನಗಳಿಗೆ ಒಮ್ಮೆ ಹಳೆಯ ಗುಡಿಸಲನ್ನು ಬೇಯಿಸಿ ಅದೇ ಸ್ಥಳದಲ್ಲಿ ಅಂಚಿಹುಲ್ಲು ಮತ್ತು ಬೇವಿನಸೊಪ್ಪಿನ ಹೊಸ ಗುಡಿಸಲನ್ನು ಕಟ್ಟುತ್ತಾನೆ. ಹನ್ನೊಂದನೆ ದಿನ ಆತ ಗುಡಿಸಲನ್ನು ಬೇಯಿಸಿದ ನಂತರ, ಹೆಣ್ಣಿಗೆ ಸ್ನಾನ ಮಾಡಿಸಿ ಸೋದರ ಮಾವ ತಂದಿರುವ ಹೊಸಬಟ್ಟೆಯನ್ನು ಆಕೆಗೆಹಾಕಲಾಗುತ್ತದೆ. ಅಂದು ಸಂಜೆ ಮನೆ ಮುಂದೆ ನಾಲ್ಕು ಚದರಕ್ಕೆ ಅರ್ಧ ಅಡಿ ಎತ್ತರದ ಒಂದು ಸಮತಟ್ಟಾದ ಮಣ್ಣಿನ ವೇದಿಕೆ ಕಟ್ಟುತ್ತಾರೆ. ಆ ವೇದಿಕೆಯನ್ನು ಸೆಗಣಿಯಲ್ಲಿ ಸಾರಿಸಿ ರಂಗೋಲಿ ಹಾಕಿ ಅದರ ಮೇಲೆ ಸೋದರ ಮಾವ ತಂದಿರುವ ಹೊಸ ಚಾಪೆ ಹಾಕುವರು. ಆಗ ಹೆಣ್ಣಿನ ಸೋದರಮಾವ ಆಕೆಯನ್ನು ತನ್ನ ಎರಡು ಕೈಗಳಿಂದಲೂ ಎತ್ತಿಕೊಂಡು ವೇದಿಕೆಯನ್ನು ಮೂರು ಸುತ್ತು ಸುತ್ತಿ ಚಾಪೆಯ ಮೇಲೆ ಕೂರಿಸುತ್ತಾನೆ. ತನ್ನಿಂದ ಹೊರಲು ಸಾಧ್ಯವಾಗದ್ದಿದ್ದರೆ ಕೈಹಿಡಿದುಕೊಂಡು ಮೂರು ಸುತ್ತ ಸುತ್ತಿಸಿ ಕೂರಿಸಲಾಗುತ್ತದೆ. ಒಂದು ವೇಳೆ ಹುಡುಗಿಗೆ ಸೋದರ ಮಾವ ಇಲ್ಲದಿದ್ದರೆ ಮೈನೆರೆದ ಹೆಣ್ಣಿನ ತಾಯಿಯೇ ಈ ಎಲ್ಲಾ ಆಚರಣೆಗಳನ್ನು ಮಾಡಬೇಕಾಗುತ್ತದೆ. ಅನಂತರ ಆಕೆಯ ಮುಂದೆ ಅರಿಶಿನ ನೀರು, ಗಂಧದ ನೀರು, ಅರಿಶೀನ ನೀರು, ಗಂಧದ ನೀರು, ಅರಿಶಿನ ಹಚ್ಚಿದ ಅಕ್ಕಿಯನ್ನು ಹಾಕಿದ ಮೂರು ತಟ್ಟೆಗಳನ್ನು ಇಡುವರು. ಹಾಗೆಯೇ ನೆಂಟರಿಷ್ಟರು ಕೊಟ್ಟ ಹಣ್ಣುಗಳನ್ನು, ಉಡುಗೊರೆಗಳನ್ನು ಪ್ರತ್ಯೇಕ ತಟ್ಟೆಗಳಲ್ಲಿ ಜೋಡಿಸಿ ಇಡುವರು. ನಂತರ ಮುತ್ತೈದೆಯರು ಒಬ್ಬೊಬ್ಬರಾಗಿ ತಟ್ಟೆಯಲ್ಲಿರುವ ಅರಿಶಿನದ ಅಕ್ಕಿಯನ್ನು ತೆಗೆದುಕೊಂಡು ಆಕೆಯ ಎರಡುತೊಡೆ, ಎರಡು ಭುಜ ಹಾಗೂ ತಲೆಗೆ ಹಾಕಿ ನಂತರ ಮೂರು ಸಾರಿಗೆ ಆಕೆಗೆ ಎರಚುತ್ತಾರೆ. ಇದು ಮುಗಿದ ನಂತರ, ಇಬ್ಬಿಬ್ಬರುಗಂಧದ ನೀರಿನ ತಟ್ಟೆಯಿಂದಲೂ ಅರಿಶಿನದ ನೀರಿನ ತಟ್ಟೆಯಿಂದಲು ಆಕೆಗೆ ಆರತಿ ಮಾಡಿ ಆ ನೀರನ್ನು ಹಣೆಗೆ ಹಚ್ಚುವರು. ವೇದಿಕೆಯಿಂದ ಹೆಣ್ಣು ಇಳಿಯುವಾಗ ಅರಿಶಿನದ ನೀರನ್ನು ಸುರಿದು, ಚೆಲ್ಲಿದ ನೀರನ ಮೇಲೆ ತಟ್ಟೆಯನ್ನು ದಬ್ಬಾಕಿ ಇಡಲಾಗುತ್ತದೆ. ಅದನ್ನು ದಾಟಿಕೊಂಡು ಹೆಣ್ಣು ಮನೆಯ ಒಳಗೆ ಹೋಗುತ್ತಾಳೆ.

ಅಂದು ಸಿಹಿ ಅಡುಗೆ ಮಾಡಿಸಿ ತಮ್ಮ ನೆಂಟರಿಷ್ಟರಿಗೆ ಊಟವನ್ನು ಹಾಕುತ್ತಾರೆ. ಅಂದು ಹೆಣ್ಣಿನ ಸೋದರಮಾವನಿಗೂ ಮನೆಯವರಿಗೂ ಮಾಂಸದ ಊಟ. ಕೋಳಿ ಮಾಂಸ ಅಥವಾ ದನದ ಮಾಂಸ ಅಂದಿನ ವಿಶೇಷವಾಗಿರುತ್ತದೆ. ಅನೇಕ ಸಿಹಿತಿಂಡಿಗಳನ್ನು ಈ ಸಂದರ್ಭದಲ್ಲಿ ಮಾಡುತ್ತಾರೆ. ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಸಂದರ್ಭದಲ್ಲಿ ಆಚರಣೆಗಳನ್ನು, ಊಟೋಪಚಾರವನ್ನು ಮಾಡುತ್ತಾರೆ.

ಈ ಜನಾಂಗದಲ್ಲಿ ಮೊಟ್ಟ ಮೊದಲು ಮೈನೆರೆದ ಹೆಣ್ಣು ಮಗಳು ಹನ್ನೊಂದು ದಿನಗಳ ಕಾಲ ಪ್ರತಿದಿನ ಬದಲಾಯಿಸುವ ಬಟ್ಟೆಗಳನ್ನು ಇದೇ ಜನಾಂಗದ ’ಏಗಾಳಿ’ ಎಂಬಾತ ತೊಳೆದು ಒಣಗಿಸಿಕೊಡುತ್ತಾನೆ. ಏಗಾಳಿ ಎಂದರೆ ಮಡಿವಾಳನೆಂದು ಹೇಳುತ್ತಾರೆ. ಏಗಾಳಿ ಎಂದರೆ ಮಡಿವಾಳನೆಂದು ಹೇಳುತ್ತಾರೆ. ಏಗಾಳಿಗೆ ಪಾಟಪ್ಪ ಎಂತಲೂ ಕರೆಯುತ್ತಾರೆ. ಈ ಕರ್ತವ್ಯ ಆತನಿಗೆ ವಂಶಪಾರಂಪರ್ಯವಾಗಿದ್ದು ಇಂದಿಗೂ ಮುಂದುವರೆಯುತ್ತಿದೆ.

ಒಂದು ವೇಳೆ ತಮ್ಮ ದುಡಿಮೆಯ ಕಾರಣಕ್ಕೆ ಊರ ಹೊರಗೆ ಇರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಮೈನೆರೆದರೆ, ತಾಯಿಯು ತಾವು ಇರುವ ಡೇರೆಗಳಲ್ಲಿಯೇ ಸಿಹಿಯನ್ನು ಮಾಡಿ ತಮ್ಮೊಟ್ಟಿಗೆ ಇರುವ ಜಾತಿಬಾಂಧವರಿಗೆ ಊಟವನ್ನು ಹಾಕುತ್ತಾಳೆ. ಸ್ವಂತ ಊರಿಗೆ ಹೋದ ಬಳಿಕ ತಮ್ಮ ಕುಟುಂಬ ವರ್ಗ ಹಾಗೂ ಸೋದರ ಮಾವನಿಗೆ ತಿಳಿಸಿ, ಮುತ್ತೈದೆಯರನ್ನು ಕರೆಸಿ ಅರಿಶಿನ ಹಚ್ಚಿದ ಅಕ್ಕಿ, ಗಂಧದ ನೀರು, ಅರಿಶಿನ ನೀರಿನಿಂದ ಶಾಸ್ತ್ರವನ್ನು ಮಾಡಿಸುತ್ತಾರೆ. ಅನಂತರ ಎಲ್ಲರೂ ಮಾಂಸಹಾರದ ಊಟವನ್ನು ಮಾಡುತ್ತಾರೆ.*      ವಾಸ್ತವವಾಗಿ ಈ ಜನಸಮುದಾಯವನ್ನು ಹೊಲಯ ಎಂದು ಕರೆಯುವುದೇ ಸೂಕ್ತವಾದುದು. ನಮ್ಮ ನೆಲದ ವಿಕಾರ ಮನಸ್ಸುಗಳಿಂದ ಹಾಗೂ ಹುಸಿ ಚರಿತ್ರೆಯ ಕಾರಣದಿಂದ ಹೊಲೆಯ ಎಂಬ ಪದ ಪ್ರಚಲಿತವಾಗಿರುವ ಸಾಧ್ಯತೆಯೇ ಹೆಚ್ಚು. ಚರಿತ್ರೆಯ ಮೂಲದಲ್ಲಿ ಬುಡಕಟ್ಟು ಸಮುದಾಯವಾಗಿ ಅನಂತರ ಕೃಷಿ ಸಂಬಂಧಿ ಹೊಲದ ಒಡನಾಟದಲ್ಲಿ ಬಾಳಿ ಬದುಕಿದ ಜನವರ್ಗವಿದು. ಅಸ್ಪೃಶ್ಯರೆಂದು ಕರೆಯಲ್ಪಡುವ ಹೊಲಯ ಜನಾಂಗ ಕೃಷಿಕಾರ್ಮಿಕ ವರ್ಗವಾಗಿ, ಮಾದಿಗ ಜನಾಂಗ ಕುಶಲಕರ್ಮಿ ವರ್ಗವಾಗಿ ಇದ್ದರೆಂಬುದಕ್ಕೆ ಈ ಜನಾಂಗಗಳ ಸ್ಮೃತಿಗಳಾಗಿ ಈಗಲೂ ಉಳಿದಿರುವ ಅನೇಕ ಸಂಸ್ಕೃತಿಯಾಚರಣೆಗಳು, ಕಥೆ-ಕಾವ್ಯಗಳು, ಮಿಥ್‌ಗಳೇ ಅಲ್ಲದೆ ಸಿರುವ ಅಷ್ಟಿಷ್ಟು ಲಿಖಿತ ದಾಖಲೆಗಳೂ ಸ್ಪಷ್ಟಪಡಿಸುತ್ತವೆ. ಅದರಲ್ಲೂ ಪ್ರಮುಖವಾಗಿ ಈ ಅಸ್ಪೃಶ್ಯ ಸಮುದಾಯಗಲಿಗೆ ಮಾನವಹಕ್ಕುಗಳನ್ನು ದೊರಕಿಸಿಕೊಡಲು ದಣಿವರಿಯದೆ ಹೋರಾಡಿದ, ಇಡೀ ಬದುಕನ್ನೆ ತೆತ್ತುಕೊಂಡ ಡಾ. ಬಿ. ಆರ‍್. ಅಂಬೇಡ್ಕರ‍್ ಅವರು ತಮ್ಮ ಸಂಶೋಧನಾತ್ಮಕ ಲೇಖನ ಹಾಗೂ ಕೃತಿಗಳ್ಲಿ ಹೊಲಯರು ಭೂಮಿಯ ನಿರಂತರ ಸಂಪರ್ಕದಲ್ಲಿ ಬದುಕು ಸಾಗಿಸಿದ ಬಗೆಗೆ ಖಚಿತ ಸಾಕ್ಷ್ಯಾಧಾರಗಳನ್ನು ನೀಡುತ್ತಾರೆ. ಅಲ್ಲದೆ ಈ ಅಸ್ಪೃಶ್ಯ ಸಮುದಾಯಗಳು ಮೂಲಬೌದ್ಧರಾಗಿದ್ದರೆಂಬ ಬಗ್ಗೆಯೂ ಮಾಹಿತಿ ನೀಡುತ್ತಾರೆ (ಈ ಬಗೆಗೆ ಅಂಬೇಡರ‍್ಕ ಅವರ ’ಅಸ್ಪೃಶ್ಯರು ಯಾರು?’ ಎಂಬ ಕೃತಿಯನ್ನು ಗಮನಿಸಬಹುದು). ದ್ರಾವಿಡ ಹಿನ್ನೆಲೆಯ ಈ ಜನಸಮುದಾಯ ವೈದಿಕಶಾಹಿ ಸೃಷ್ಟಿಸಿದ ಅಸ್ಪೃಶ್ಯತೆ, ಜಾತಿಪದ್ಧತಿ, ಚಾತುರ್ವರ್ಣ ವ್ಯವಸ್ಥೆ ಹಾಗೂ ಮನುಸ್ಮೃತಿಗಳಂತಹ ಅಮಾನವೀಯ ಹೊಡೆತಗಳಿಗೆ ಸಿಕ್ಕಿ ಕಾಲಕ್ರಮೇಣ ಅನಭಿವೃದ್ಧಿ ವಿಸ್ಮೃತಿಯ ಪಾತಾಳಕ್ಕೆ ದೂಡಲ್ಪಟ್ಟವರು. ಆದರೂ ಇವರದೇ ಆದ ಸಾಂಸ್ಕೃತಿಕ ಅನನ್ಯತೆ, ಈ ಸಂಬಂಧವಾದ ಆದಿಮ ನೆನಪುಗಳು ಇವರು ಮೂಲ ಕೃಷಿಕರೆಂಬುದನ್ನು ನಿಖರವಾಗಿ ಹೇಳುತ್ತವೆ. ಇಂತಹ ಚಾರಿತ್ರಿಕ ಕುರುಹುಗಳನ್ನು ಹಿಡಿದು ಇನ್ನಾದರೂ ’ಹೊಲೆಯರು’ ಎಂಬ ಪದಕ್ಕೆ ಬದಲಾಗಿ ಈ ಜನಾಂಗವನ್ನು ’ಹೊಲಯರು’ ಎಂದು ಬಳಸುವ ಪ್ರಕ್ರಿಯೆ ರೂಢಿಗೊಳ್ಳಬೇಕಿದೆ. ಇಂತಹ ಹಿನ್ನೆಲೆಯಲ್ಲೆ ನಾನಿಲ್ಲಿ ಹೊಲೆಯರು ಎಂಬುದಕ್ಕೆ ಬದಲಾಗಿ ಹೊಲೆಯರು ಎಂಬ ಪದವನ್ನು ಬಳಸಿದ್ದೇನೆ.