ಮದುವೆ

ಮಹಿಳೆಗೆ ಮದುವೆ ಒಂದು ಜವಾಬ್ದಾರಿಯುತ ತಿರುವು. ಇವರಲ್ಲಿ ಅಪರೂಪಕ್ಕೆ ಬಾಲ್ಯವಿವಾಹವು ಕಂಡುಬರುತ್ತದೆ. ಇನ್ನಿತರ ಹೊಲಯ ಪಂಗಡಗಳಲ್ಲಿ ಇರುವಂತೆ ಇವರಲ್ಲಿ ಕುಲ ಅಥವಾ ಬಳಿಗಳು ಇರುವುದಿಲ್ಲ. ಹೆಣ್ಣು ಹೆತ್ತವರಿಗೆ ತೆರಕೊಟ್ಟು ಮದುಮಗಳನ್ನು ತರುವ ಇವರು ದೂರದ ಸಂಬಂಧಗಳನ್ನು ಬೆಳೆಸದೆ ತಮ್ಮ ಸೋದರಮಾನವ ಕಡೆಯ ಸಂಬಂಧಗಳನ್ನೇ ಹೆಚ್ಚು ಬೆಳೆಸುತ್ತಿದ್ದರು. ಈ ವಿಷಯದಲ್ಲಿ ಈಗೀಗ ಬದಲಾವಣೆಯಾಗುತ್ತಿದೆ. ತಮ್ಮ ಜನಾಂಗವಿರುವ ದೂರದ ಊರುಗಳಿಗೂ ಹೆಣ್ಣನ್ನು ಕೊಡುವ ಪ್ರಯತ್ನಗಳು ನಡೆಯುತ್ತಿವೆ.

ತಮ್ಮ ಮಗನಿಗೆ ಮದುವೆ ಮಾಡಲು ಬಯಸಿನ ಗಂಡಿನ ತಂದೆ ತಾಯಿಗಳು ಹೆಣ್ಣು ಮಕ್ಕಳಿರುವ ಮನೆಗೆ ಹೋಗಿ, ಹುಡುಗಿಯನ್ನು ನೋಡಿ ಅವರ ತಂದೆತಾಯಿಯನ್ನು ವಿಚಾರಿಸುತ್ತಾರೆ. ಒಪ್ಪಿಗೆ ದೊರೆತರೆ ಮದುವೆಯ ಮುಂದಿನ ಕೆಲಸಗಳು ಆರಂಭಗೊಳ್ಳುತ್ತವೆ. ಹುಡುಗನ ಕಡೆಯ ತಂದೆ ತಾಯಿಗಳು ಒಪ್ಪಿಕೊಂಡ ಬಳಿಕ ಸಾಮಾನ್ಯವಾಗಿ ಹುಡುಗಿಯ ಕಡೆಯವರು ಯಾವುದೇ ಕಾರಣಕ್ಕೂ ಮದುವೆ ಕಾರ್ಯವನ್ನು ನಿಲ್ಲಿಸುವುದಿಲ್ಲ. ಅಂದೇ, ಹೆಣ್ಣಿನ ಮನೆಗೆ ತೆರವಾಗಿ ಏನು ಕೊಡಬೇಕು? ಹೂ ಮುಡಿಸಲು ಯಾವಾಗ ಬರುವುದೆಂದೂ ನಿರ್ಧರಿಸಲಾಗುತ್ತದೆ. ತನ್ನ ತಂದೆ ತಾಯಿಯನ್ನು ಹೊರತುಪಡಿಸಿ ಹುಡುಗಿ ತನ್ನ ಮದುವೆಯ ವಿಷಯದಲ್ಲಿ ತನ್ನದೆಯಾದ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಇರುವುದಿಲ್ಲ. ಒಪ್ಪಿಗೆಯಾದರೆ ಸಾಮ,ವಾರಿಯ ಎಂಬ ತಮ್ಮದೆ ಜಾತಿಯ ಹಿರಿಯ ಯಜಮಾನರುಗಳ ನೇತೃತ್ವದಲ್ಲಿ ಹುಡುಗನ ಕಡೆಯವರು ಹುಡುಗಿಯ ಮನೆಗೆ ಬರುತ್ತಾರೆ. ಇದನ್ನು ಮೊದಲ ಶಾಸ್ತ್ರ, ಹೂ ಮುಡಿಸುವ ಶಾಸ್ತ್ರ ಮತ್ತು ಅರಿಶಿನ ಬಾಳೆ ಹಣ್ಣಿನ ಶಾಸ್ತ್ರವೆಂದೂ ಕರೆಯುತ್ತಾರೆ. ಹುಡುಗಿಯ ತಾಯಿಯು ಹುಡುಗನ ಕಡೆಯವರು ತಂದಿರುವ ಸೀರೆಯನ್ನು ಉಡಿಸಿ ಹಸಮಣೆ ಮೇಲೆ ಕೂರಿಸುತ್ತಾಳೆ. ಈ ಸಮಯದಲ್ಲಿ ಹುಡುಗಿಯ ಸೋದರ ಮಾವನೂ ಕಡ್ಡಾಯವಾಗಿ ಇಲ್ಲಿ ಉಪಸ್ಥಿತನಿರಬೇಕು. ಹುಡುಗಿ ಕೂರಿಸಿದ ಹಸೆಮಣೆ ಮುಂದೆ ಗಂಡಿನ ಮನೆಯವರು ತಂದಿರುವ ಐದು ತೆಂಗಿನಕಾಯಿ, ಒಂದು ಚಿಪ್ಪು ಬಾಳೆಹಣ್ಣು, ಎರಡು ಕಟ್ಟು ವೀಳ್ಯೆದೆಲೆ, ಎರಡು ಪಾವು ಅಡಿಕೆ, ಹೂವು, ಅರಿಶಿನ,ಕುಂಕುಮ, ಈ ಎಲ್ಲವನ್ನು ಐದು ಪ್ರತ್ಯೇಕ ತಟ್ಟೆಗಳಲ್ಲಿ ಜೋಡಿಸಿಡುತ್ತಾರೆ. ಜೊತೆಗೆ ಗಂಧದ ನೀರು, ಅರಿಶಿನ ನೀರು ಹಾಗು ಅಕ್ಕಿಗೆ ಅರಿಶಿನ ಹಚ್ಚಿದ ಅಕ್ಷತೆ ಕಾಳಿನ ಶಾಸ್ತ್ರವನ್ನು ಮೊಟ್ಟಮೊದಲು ಹುಡುಗಿಯ ತಾಯಿಯೂ ನಂತರ ಹುಡುಗಿ ಸೋದರ ಮಾವನೂ ಅನಂತರ ಹುಡುಗಿ ತಂದೆಯೂ ಮಾಡುತ್ತಾರೆ.ಹುಡುಗನ ಕಡೆಯಿಂದ ಬಂದಿರುವ ಮುತ್ತೈದೆಯರು (ಸಾಮಾನ್ಯವಾಗಿ ಕನಿಷ್ಠ ಐದು ಜನ, ಗರಿಷ್ಠ ಏಳು ಜನ ಮಹಿಳೆಯರು ಹೊಗಿರುತ್ತಾರೆ) ಅರಿಶಿನ, ಗಂಧದ ನೀರುಗಳಲ್ಲಿ ಆರತಿ ಮಾಡಿ, ಆ ನೀರನ್ನು ತಮ್ಮ ಹೆಬ್ಬೆರಳಿನಿಂದ ತೆಗೆದುಕೊಂಡು ಹುಡುಗಿಯ ಹಣೆಗೆ ಹಚ್ಚುತ್ತಾರೆ. ಬಳಿಕ ಬಂದಿರುವವರೆಲ್ಲರೂ ಒಬ್ಬೊಬ್ಬರಾಗಿ ಶಾಸ್ತ್ರಮಾಡುತ್ತಾರೆ. ಇದು ಮುಗಿದ ಬಳಿಕ ಹೆಣ್ಣಿನ ಕಡೆಯವರೂ ಗಂಡನ ಕಡೆಯವರೂ ಎದುರು ಬದುರು ಕುಳಿತು ವೀಳ್ಯವನ್ನು ಬದಲಾಯಿಸಿಕೊಳ್ಳುತ್ತ ಪರಸ್ಪರ ’ನಿಮ್ಮ ಹುಡುಗ ನಮಗೆ ಒಪ್ಪಿಗೆ’ ’ನಿಮ್ಮ ಹುಡುಗಿ ನಮ್ಮಗೆ ಒಪ್ಪಿಗೆ’ ’ಮದುವೆ ದಿನ ನಿರ್ಧರಿಸಬಹುದು’ ಎಂದು ಹೇಳಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿಯೇ ಹೆಣ್ಣಿನ ಕಡೆಯವರಿಗೆ ಗಂಡಿನವರು ಜನಾಂಗದ ಹಿರಿಯರಾದ ಸಾಂಬ, ವಾರಿಯ ಎಂಬ ಯಜಮಾನರುಗಳ ಮೂಲಕ ತೆರ ಎಂಬ ವಧುದಕ್ಷಿಣೆಯನ್ನು ಕೊಡುತ್ತಾರೆ. ಎರಡು ತಲೆಮಾರುಗಳ ಹಿಂದೆ ತೆರದ ರೂಪದಲ್ಲಿ ಒಂದು ಕಾಲು ರೂಪಾಯಿ ಹಾಗೂ ತಮ್ಮಪರಿಸರದಲ್ಲಿ ಸಿಗುವ ಒಂದೊಂದು ಸೇರು ಆಹಾರಧಾನ್ಯಗಳನ್ನು ಕೊಡುತ್ತಿದ್ದರಂತೆ, ಈಗ ತೆರವಾಗಿ ಐವತ್ತೊಂದು ರೂಪಾಯಿಂದ ಹಿಡಿದು ಸಾವಿರದ ಒಂದು ರೂಪಾಯಿ ತನಕ ಅವರವರ ಅನುಕೂಲಕ್ಕೆ ತಕ್ಕಂತೆ ಹಣ ನೀಡುತ್ತಾರೆ. ಅದು ಧಾನ್ಯ ನೀಡುವ ಪದ್ಧತಿಗೆ ಈಗ ಉಳಿದಿಲ್ಲ. ಒಪ್ಪಂದ ಶಾಸ್ತ್ರವಾದ ಈ ದಿನದಂದೆ, ಸಾಧ್ಯವಾದರೆ ಯಜಮಾನರುಗಳ ನಿರ್ಧಾರದಂತೆ ಮದುವೆ ದಿನಾಂಕವನ್ನು ನಿಶ್ಚಯಿಸುತ್ತಾರೆ. ಈಗೀಗ ಕೆಲವರು ಹೊರಗಿನ ಪುರೋಹಿತರ ಮೂಲಕ ದಿನಾಂಕ ನಿರ್ಧರಿಸುತ್ತಾರೆ. ನಂತರ ಹೆಣ್ಣಿನವರು ಗಂಡಿನವರಿಗೆ ಸಿಹಿ ಊಟ ಮಾಡಿಸುವ ಮೂಲಕ ಬೀಳ್ಕೊಡುತ್ತಾರೆ.

ಮದುವೆ ನಿರ್ಧಾರವಾದ ಬಳಿಕ ಹುಡುಗಿಯ ಅಣ್ಣ ಅಥವಾ ತಮ್ಮ ಹುಡುಗನ ಮನೆಗೆ ಬಂದು, ತನ್ನ ಸೋದರಿಯನ್ನು ಮದುವೆಯಾಗುವ ಭಾವನೊಟ್ಟಿಗೆ ಆತನ ಮನೆಯ ಮುಂದೆ ಐದು ಚದರ ಅಳತೆಯ ಮಣ್ಣಿನ ಹಸೆಯನ್ನು ನಿರ್ಮಿಸುತ್ತಾನೆ. ನಂತರ ಮದುವೆಯ ಹಿಂದಿನ ದಿನ ಚುಜ್ಜಲ ಮರದ ಒಂದು ಕವೆ ಹಾಗೂ ಬೆಪ್ಪಾಲದ ಮರದ ಮೂರು ಕವೆಯುಳ್ಳ ಒಂದು ಕೊಂಬೆಯನ್ನು ತರುತ್ತಾನೆ. ಅದನ್ನು ತಂದ ಬಳಿಕ ಗಂಡಿನ ಮನೆಯಲ್ಲಿ ಹಸಿರು ಚಪ್ಪರ ಹಾಕಲಾಗುತ್ತದೆ. ನಂತರ ಹುಡುಗಿಯ ಸೋದರ ಈಗಾಗಲೇ ನಿರ್ಮಿಸಿರುವ ಹಸೆಯ ಮೂಲೆಯಲ್ಲಿ ಹಳ್ಳ ತೆಗೆಯುತ್ತಾನೆ. ನಂತರ ಭಾವನೊಟ್ಟಿಗೆ ತಂದಿರುವ ಕೊಂಬೆಗಳನ್ನು ಆ ಹಳ್ಳದಲ್ಲಿ ನೆಟ್ಟು ಅದನ್ನು ಹಿಡಿದುಕೊಂಡು ನಿಲ್ಲಬೇಕು. ಆಗ ಈ ಜನಸಮುದಾಯ ಯಜಮಾನರಾದ ಸಾಮ, ವಾರಿಯ ಅವರ ಮೂಲಕ ಆ ಕೊಂಬೆಗಳಿಗೆ ವಿಭೂತಿ, ಅರಿಶಿನ, ಕುಂಕುಮ ಹಚ್ಚಿ, ಕೊಂಬೆಯ ಬುಡದಲ್ಲಿ ಸಗಣಿ ಗಣಪನ ಇರಿಸಿ ಗಂಧದ ಕಡ್ಡಿಯಿಂದ ಪೂಜೆ ಮಾಡುವರು.ಕೆಲವೊಮ್ಮೆ ತೆಂಗಿನಕಾಯಿಯನ್ನೂ ಒಡೆಯುವರು. ಹುಡುಗಿಯ ಸೋದರನಿಗೆ ಮಂಗಳಾರತಿ ಮಾಡುವರು. ನಂತರ ಆತ ತನ್ನ ಊರಿಗೆ ಹೋಗುತ್ತಾನೆ.

ಈತ ಬಂದ ಬಳಿಕ ಹೆಣ್ಣಿನ ಮನೆಯಲ್ಲಿ ಅಂದೇ ಚಪ್ಪರವನ್ನು ಹಾಕುತ್ತಾರೆ.ಹುಡುಗಿಯ ಸೋದರ ಮಾವಂದಿರು, ದೊಡ್ಡಪ್ಪ ಚಿಕ್ಕಪ್ಪನವರ ಮನೆಗಳವರು ಒಂದು ವಾರದಿಂದಲೂ ಒಬ್ಬೊಬ್ಬರಂತೆ ತಮ್ಮ ಮನೆಗಳಲ್ಲಿ ಮಧ್ಯಾಹ್ನ ಅಥವಾ ರಾತ್ರಿ ಹುಡುಗಿಗೆ ಅರಿಶಿನ ನೀರಿನ ಶಾಸ್ತ್ರ ಮಾಡಿ ಸ್ನಾನ ಮಾಡಿಸಿ ಕೋಳಿಮಾಂಸದ ಊಟವನ್ನು ಹಾಕುತ್ತಿರುತ್ತಾರೆ.ಹುಡುಗಿ ಮನೆಯಲ್ಲಿ ಚಪ್ಪರ ಕಟ್ಟಿದ ನಂತರ ಅಂದರೆ ಸಂಜೆ ಹುಡುಗಿಯನ್ನು ಹಸೆಮಣೆ ಮೇಲೆ ಕೂರಿಸಿ, ಹುಡುಗಿಯ ತಾಯಿ ಹಾಗೂ ಮುತ್ತೈದೆಯರು ಅರಿಶಿಣದ ನೀರಿನಿಂದ ಮಂಗಳಾರತಿ ಮಾಡಿ ಹುಡುಗಿಯ ಕೈ, ಕಾಲು,ಮುಖಕ್ಕೆಲ್ಲ ಅರಿಶಿನವನ್ನು ಹಚ್ಚುತ್ತಾರೆ. ಅಷ್ಟರಲ್ಲಿ ಬಿಸಿನೀರು ಕಾಯಿಸಿರುತ್ತಾರೆ. ಮೊದಲು ತಾಯಿತಂದೆ ಆಕೆಯ ತಲೆಗೆ ಬಿಸಿನೀರು ಹಾಕುತ್ತಾರೆ. ಅನಂತರ ಸೋದರಮಾನವರೂ, ಹುಡುಗಿಯ ಅಕ್ಕತಂಗಿ, ಅಣ್ಣತಮ್ಮಿಂದರೂ, ಬಳಿಕ ದೊಡ್ಡಪ್ಪ ಚಿಕ್ಕಪ್ಪನ ಸಂಬಂಧಿಗಳು ಒಂದೊಂದು ಚೆಂಬು ನೀರನ್ನು ಹಾಕುತ್ತಾರೆ. ನಂತರ ತಾಯಿ ಹಾಗೂ ಅಲ್ಲಿ ಸೇರಿರುವ ಮುತ್ತೈದೆಯರು ಹುಡುಗಿಯ ತಲೆ, ಮುಖ, ಕೈಕಾಲುಗಳನ್ನು ಅರಿಶಿನದಿಂದ ಉಜ್ಜಿ ಸ್ನಾನ ಮಾಡಿಸುತ್ತಾರೆ. ಸ್ನಾನ ಮಡಿಸಿದ ಬಳಿಕ ಮತ್ತೆ ಹಸೆಮಣೆ ಮೇಲೆಕೂರಿಸಿ ಆಕೆಯ ಮುಂದೆ ಅರಿಶಿನ ನೀರು, ಗಂಧದ ನೀರು, ಅಕ್ಷತೆ ಕಾಳುಗಳ ತಟ್ಟೆಗಳನ್ನು ಇಟ್ಟು ತಾಯಿಯನ್ನು ಮೊದಲುಗೊಂಡು ಎಲ್ಲರೂ ಶಾಸ್ತ್ರಮಾಡುತ್ತಾರೆ.ಮದುವೆಯ ಹುಡುಗನ ಮನೆ ದೂರದ ಊರಾಗಿದ್ದರೆ ಇಂದು ಸಂಜೆಯೇ ಗಂಡಿನ ಕಡೆಯವರು ಊರಿಗೆ ಹೆಣ್ಣನ್ನು ಕರೆದುಕೊಂಡು ಹೋಗಲು ಬರುತ್ತಾರೆ. ದೂರವಿಲ್ಲದಿದ್ದರೆ ಮುಂಜಾನೆಯೆ ಹೊರಡುತ್ತಾರೆ.ಮದುಮಗಳನ್ನು ಆಕೆಯ ತವರಿನಿಂದ ಕರೆದುಕೊಂಡು ಹೋಗಲು ಗಂಡಿನ ಮನೆ ಕಡೆಯಿಂದ ಕಡ್ಡಾಯವಾಗಿ ಬರಲೇಬೇಕು. ಗಂಡಿನ ಮನೆಯಲ್ಲೆ ಮದುವೆ ನೆರವೇರುವುದು.

ಹುಡುಗಿಯನ್ನು ಆಕೆಯ ತವರೂರಿನಿಂದ ಕರೆದುಕೊಂಡು ಬಂದೊಡನೆ ಹುಡುಗನ ಮನೆಗೆ ಕರೆತರಲಾಗುತ್ತದೆ. ಹುಡುಗಿಯನ್ನು ಮನೆ ಪ್ರವೇಶಿಸುವ ಮೊದಲು ಹೊಸ್ತಿಲಿನಲ್ಲೆ ನಿಲ್ಲಿಸಿ ಹುಡುಗನ ತಾಯಿ ಅರಿಶಿನದ ನೀರಿನಲ್ಲಿ ಹುಡುಗಿಗೆ ಆರತಿ ಮಾಡಿ ಎಡದ ಕೈ, ಎಡದ ಕಾಲಿನ ಹೆಬ್ಬೆರಳಿಗೆ ಹಾಗೂ ಎಡ ಕಣ್ಣಿನ ಉಬ್ಬಿನ ಮೇಲೆ ಅರಿಶಿನದ ನೀರನ್ನು ತನ್ನ ಬಲಗೈನ ಹೆಬ್ಬೆಟ್ಟಿನಿಂದ ಹಾಕುವಳು. ನಂತರ ಆ ತಟ್ಟೆಯ ನೀರನ್ನು ಅಕ್ಕಪಕ್ಕದಲ್ಲಿ ಮೂರುಕಡೆ ಸುರಿದು ತಟ್ಟಿ ದಬ್ಬಾಕಿ ಇಡುವಳು. ಹುಡುಗಿಯು ಅದನ್ನು ದಾಟಿಮುಂದೆ ಬರುತ್ತಾಳೆ. ಕೂಡಲೇ ಆಕೆಯ ನಾದಿನಿ ಹುಡುಗಿಯ ಹಣೆಗೆ ವಿಭೂತಿ ಹಚ್ಚುವಳು. ಹುಡುಗನ ತಂದೆ ಆಗ ಹುಡುಗಿಗೆ ಮಂಗಳಾರತಿ ಮಾಡಿ ಮನೆಯ ಒಳಗೆ ಬರಹೇಳುವನು. ಆಕೆಯನ್ನು ಹೊಸ ಚಾಪೆ ಮೇಲೆ ಕೂರಿಸಿದ ನಂತರ ತಾನು ಮಾಡಿರುವ ಪೊಂಗಲನ್ನು ಬಾಳೆ ಎಲೆಯ ಮೇಲೆ, ಏಳು ಕಡೆ ಹಾಕಿ ಅದಕ್ಕೆ ಕಾಯಿ-ಬಾಳೆಹಣ್ಣು-ಕಲ್ಲುಸಕ್ಕರೆ-ತುಪ್ಪ ಮಿಶ್ರಣ ಮಾಡಿದ ಪಂಚಾಮೃತವನ್ನು ಇಟ್ಟು ಪೂಜಿಸುವನು. ಮನೆಯ ಒಳಗೆ ಕೂರಿಸಿದ ಕೂಡಲೆ ಹುಡುಗನ ತಂದೆ ತಾನೆ ತಯಾರಿಸಿದ ಸಿಹಿ ಪೊಂಗಲನ್ನು ಹುಡುಗಿಗೆ ನೀಡಬೇಕಾಗಿರುತ್ತದೆ. ಗಂಡಿನ ತಂದೆ ಮುಂಜಾನೆಯ ಸ್ನಾನ ಮಾಡಿ, ಪ್ರತ್ಯೇಕ ಒಲೆವೊಡ್ಡಿ ಇದನ್ನು ಮಾಡಿರುತ್ತಾನೆ. ಇದು ಈ ಜನಾಂಗದ ವಿಶೇಷ ಆಚರಣೆಯೂ ಆಗಿದೆ. ನಂತರ ಅದನ್ನು ಆಕೆಯ ಜೊತೆ ಬಂದಿರುವವರಿಗೆ ಕೊಡಲಾಗುತ್ತದೆ. ಇದು ನೆರವೇರಿದ ನಂತರ ಹುಡುಗಿಯ ಕಡೆಯವರಿಂದ ಒಂದು ಟವಲನ್ನು (’ವಲ್ಲಿ’ ಎಂದು ಕರೆಯುತ್ತಾರೆ) ಪಡೆದು ಅದರಲ್ಲಿ ಒಂದು ತೆಂಗಿನಕಾಯಿ, ಒಂದು ಬಾಳೆಹಣ್ಣು, ಒಂದು ಎಲೆ, ಒಂದು ಅಡಿಕೆ ಹಾಕಿ ಅದನ್ನು ಹುಡುಗಿಯ ಮಡಿಲಿಗೆ ಕಟ್ಟುವರು. ಚಾಪೆಯ ಮೇಲೆ ಹಸೆಮಣೆ ಹಾಕಿ ಹುಡುಗಿಯನ್ನು ಕೂರಿಸಿ, ಅಲ್ಲಿ ಸೇರಿರುವ ಸಂಬಂಧಿಕ ಮುತ್ತೈದೆಯರು ಅರಿಶಿನ ಹಾಗೂ ಗಂಧದ ಆರತಿ ಮಾಡಿ, ನೀರು ತುಂಬಿದ ಕಂಚಿನ ಚೆಂಬನ್ನು ತೆಗೆದುಕೊಂಡು ಹುಡುಗಿಯ ತಲೆಯ ಮೇಲೆ ಮೂರು ಸುತ್ತು ಹಾಕಿ ಕೆಳಕ್ಕೆ ಇಡುವರು. ನಂತರ ಹುಡುಗಿಯನ್ನು, ಹುಡುಗನು ಮಾವನೆಂದು ಕರೆಯುವ ಯಾವುದಾದರು (ಸ್ವಂತ ಸೋದರಮಾವನೆ ಆಗಬೇಕೆಂದಿಲ್ಲ) ಮನೆಗೆ ಕಳಿಸಲಾಗುತ್ತದೆ.

ಅನಂತರ ಎಲ್ಲರೂ ಊಟ ಮಾಡಿ ಹುಡುಗಿಯ ಹಾಗು ಹುಡುಗನ ಕಡೆಯವ ಕೆಲವರು (ಇಲ್ಲೂ ಇಬ್ಬರಾದರೂ ಹೆಂಗಸರು ಇರಬೇಕೆಂಬುದು ಕಡ್ಡಾಯ), ಮಡಕೆ, ತಾಲಿ, ಕರಗ, ದೀಪ, ಮೊಗೆ, ತೂಕಲ್, ಬಾಚಿಂಗ ಮುಂತಾದ ಸಾಮಾನುಗಳನ್ನು ತರಲು ಹೋಗುತ್ತಾರೆ. ಈ ಸಮಯದಲ್ಲಿ ಮದುವೆ ಹುಡುಗಿ ತನನ್ ನಾದಿನಿಯ ಜೊತೆ, ಗಂಡಿನ ಮನೆಯ ಮುಂದೆ ಮಣ್ಣಿನಿಂದ ನಿರ್ಮಿಸಿರುವ ಹಸೆಕಟ್ಟೆಯನ್ನು ತೊಪ್ಪೆಯಿಂದ ಸಾರಿಸುವಳ. ನಂತರ ಜಾತಿಯ ಯಜಮಾನನಾದ ಸಾಂಬನು ಅಕ್ಕಿ ಹಿಟ್ಟಿನಲ್ಲಿ ಅಲ್ಲಿ ರಂಗೋಲಿ ಬಿಡಿಸುವನು. ಹೊಸಮಡಕೆಗಳನ್ನು ತಂದ ಬಳಿಕ ಅವುಗಳಿಗೆ ಹುಡುಗನ ತಾಯಿ ಅಥವಾ ಇದೇ ಮನೆಯ ಹೆಣ್ಣುಮಕ್ಕಳು ಪ್ರತಿಯೊಂದು ಮಡಕೆಗಳ ಒಳಗೆ ಕ್ರಮವಾಗಿ ಬಾಳೆಹಣ್ಣು, ಎಲೆ ಅಡಿಕೆ, ತೆಂಗಿನಕಾಯಿ ಹಾಗೂ ಆ ಪರಿಸರದಲ್ಲಿ ಬೆಳೆಯುವ ಧಾನ್ಯಗಳನ್ನು ಹಾಕುತ್ತಾರೆ. ಅವನ್ನು ಗಂಡಿನ ಮನೆಯ ಮಡಕೆ ಮತ್ತು ಹೆಣ್ಣಿನ ಮನೆಯ ಮಡಕೆ ಎಂಬುದಾಗಿ ಒಟ್ಟು ಹನ್ನೆರಡು ಮಡಕೆಗಳನ್ನು ಒಂದರ ಮೇಲೆ ಒಂದನ್ನು ಜೋಡಿಸುತ್ತಾರೆ. ಇದೇ ಸಮಯಕ್ಕೆ ಮದುವೆಯ ಹೆಣ್ಣು ಮತ್ತು ಗಂಡು ಹೊಸಬಟ್ಟೆ ಧರಿಸಿ, ಸಾಂಬನ ಜೊತೆಗೂಡಿ ಹಸೆಕಟ್ಟೆ ಬಳಿಗೆ ಬರುತ್ತಾರೆ.ನಂತರ ಹಸೆಕಟ್ಟಿ ಮೇಲೆ ತೆಂಗಿನಕಾಯಿ ಎಲೆಅಡಿಕೆ, ಬಾಳೆಹಣ್ಣು ಹಾಗೂ ಧಾನ್ಯಗಳನ್ನು ಹಾಕಿರುವ ಮಡಕೆಗಳನ್ನು (ಇವನ್ನು ’ಕರಗ’ ಎಂದೂ ಕರೆಯುತ್ತಾರೆ) ಹುಡುಗ-ಹುಡುಗಿ-ಸಾಂಬಾನ್ ಈ ಮೂವರೂ ಒಂದೊಂದಾಗಿ ತೆಗೆದು ಹಸಕಟ್ಟೆಗೂ ಅದರ ಮೂಲೆಯಲ್ಲಿ ನೆಟ್ಟಿರುವ ಚುಜ್ಜಲ ಕೊಂಬೆಗೂ ಸೇರಿದಂತೆ, ಒಂದರ ಮೇಲೆ ಒಂದರಂತೆ ಜೋಡಿಸುವರು. ಒಂದೊಂದನ್ನು ಈ ಸ್ಥಳಕ್ಕೆ ಇಡುವಾಗಲೂ ಮೂವರೂ ಅರಿಶಿನ, ಕುಂಕುಮ, ವಿಭೂತಿ, ಅಕ್ಷತೆ ಕಾಳನ್ನು ಹಚ್ಚಿ ಗಂಧದಕಡ್ಡಿಯಿಂದ ಪೂಜಿಸುತ್ತಾರೆ. ಈ ಆಚರಣೆಯು ಸುಮಾರು ಮಧ್ಯರಾತ್ರಿಯವರೆಗೂ ನಡೆಯುತ್ತದೆ. ಕೊನೆಗೆ ಒಂದರ ಮೇಲೊಂದು ಜೋಡಿಸಿರುವ ಮಡಕೆಗಳ ಸುತ್ತ ಮೂರು ಬಿದಿರ ಗಳುಗಳನ್ನು ಭದ್ರವಾಗಿ ನೆಟ್ಟು ಎಲ್ಲವನ್ನೂ ಸೇರಿಸಿ ಹಗ್ಗದಿಂದ ಕಟ್ಟುವರು. ಅದಕ್ಕೆ ಅರಿಶಿನದ ದಾರದಿಂದ ಮತ್ತೆ ಕಟ್ಟಿ, ಆ ದಾರಕ್ಕೆ ಅರಿಶಿನದ ಕೊಂಬನ್ನೂ ಕಟ್ಟುವರು. ಅನಂತರ ಹುಡುಗಿ ಹಾಗು ಹುಡುಗ ಹಸೆಕಟ್ಟೆಯ ಮೇಲೆ ನಿಂತು ಜೋಡಿಸಿರುವ ಮಡಿಕೆಗಳಿಗೆ ಸಾಂಬನ ನೇತೃತ್ವದಲ್ಲಿ ಪೂಜೆ ಸಲ್ಲಿಸುವರು. ಇದಾದ ನಂತರ ಹಸೆಕಟ್ಟೆಯ ಮುಂದೆ ಎರಡು ಮಣ್ಣಿನ ಬಾನಿಯನ್ನು ಇರಿಸಿ ಅವಕ್ಕೂ ಅರಿಶಿನದಾರ ಕಟ್ಟಿ ಶಾಸ್ತ್ರ ಮಾಡಲಾಗುವುದು.ಇದೇ ಸಂದರ್ಭದಲ್ಲಿ ಮದುವೆ ಹೆಣ್ಣು ಹಾಗೂ ಆಕೆಯ ನಾದಿನಿ,ಮದುವೆ ಗಂಡು ಮತ್ತು ಆತನ ಭಾವಮೈದುನ ಈ ನಾಲ್ವರಿಗೂ ಅವರ ಬಲದ ಕೈಗಳಿಗೆ ಕಂಕಣ ಕಟ್ಟುವರು.ಮದುವೆಗಂಡಿಗೆ ಕಾಲಿನ ಹೆಬ್ಬರಳಿನ ಪಕ್ಕದ ಬೆರಳಿಗೆ ಕಾಲುಂಗುರವನ್ನು ಹಾಕುವರು. ಇದನ್ನು ಮಾಡುವ ವೇಳೆಗೆಮುಂಜಾವು ಐದು ಗಂಟೆಯಾಗಿರುತ್ತದೆ. ನಂತರ ತಮ್ಮಕೇರಿಯ ಬಾವಿ, ಬಾವಿ ಇಲ್ಲದಿದ್ದರೆ ನೀರಿರುವ ಹಳ್ಳವೊಂದಕ್ಕೆ ಹೋಗಿ ಪೂಜಿಸಿ ಹೊಸನೀರು ತರುವರು. ಇದನ್ನು ದೇವರುತರುವ ಕಾರ್ಯವೆಂದು ಹೇಳುತ್ತಾರೆ. ಈ ದೇವರು ತರುವವರು ಒಬ್ಬ ಮದುವೆ-ಯಾಗದ ಹುಡುಗನನ್ನು ಹೊರತುಪಡಿಸಿ ಉಳಿದಂತೆ ಎಲ್ಲರೂ ಹೆಂಗಸರೇ, ಒಟ್ಟು ಐದು ಅಥವಾಏಳು ಜನ ಇರುತ್ತಾರೆ. ಹೆಣ್ಣಿನ ಕಡೆಯವರು ಮತ್ತು ಗಂಡಿನ ಕಡೆಯವರು ಪ್ರತ್ಯೇಕವಾಗಿ ಹೊಸನೀರು ತರುತ್ತಾರೆ. ಇಲ್ಲಿ ಗಂಡಿನ ಕಡೆಯವರ ಜೊತೆ ಮದುವೆ ಗಂಡು ಹೆಣ್ಣಿನ ಕಡೆಯವರ ಜೊತೆ ಮದುವೆ ಹೆಣ್ಣು ಇದ್ದೆ ಇರುತ್ತಾರೆ. ತಂದ ಹೊಸನೀರಿನಿಂದ ಅಡುಗೆ ಹಾಗೂ ಸಿಹಿಪೊಂಗಲನ್ನು ಮಾಡುತ್ತಾರೆ.

ಈಗಾಗಲೇ ಬೆಳಿಗ್ಗೆ ಆಗಿರುವುದರಿಂದ ಮದುವೆ ಹುಡುಗ ಮತ್ತು ಹುಡುಗಿಯನ್ನು ಸ್ನಾನ ಮಾಡಿಸಿ ಹೊಸಬಟ್ಟೆ, ತೊಡುಗೆಗಳನ್ನು ಹಾಕಿ ಅಲಂಕರಿಸಿ ಹಸೆಕಟ್ಟೆಯ ಬಳಿಗೆ ಕರೆದುಕೊಂಡು ಬರಲಾಗುತ್ತದೆ. ಆಗು ಹುಡುಗ ಹುಡುಗಿ ಇಬ್ಬರಿಗೂ ಪ್ರತ್ಯೇಕವಾಗಿ ಶಾಸ್ತ್ರಗಳನ್ನು ಮಾಡುತ್ತಾರೆ. ಅದೇ ವೇಳೆಗೆ ಎರಡು ಬಾಳೆ ಎಲೆಯಲ್ಲಿ ಹೊಸನೀರಿನಿಂದ ತಯಾರಿಸಿದ ಪೊಂಗಲ್, ಬಾಳೆಹಣ್ಣು, ಸಕ್ಕರೆ, ತುಪ್ಪ ಇವಿಷ್ಟನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ.ಇದಾದ ಬಳಿಕ ಒಂದು ಬಾಳೆ ಎಲೆಯನ್ನು ಮದುವೆಗಂಡು ಹಾಗೂ ಆತನ ಭಾವಮೈದುನ ಕೈಲಿ ಕೊಟ್ಟು ಮನೆಯ ಒಳಗೆ ಹೋಗಲು ಹೇಳುತ್ತಾರೆ. ಇನ್ನೊಂದು ಎಲೆಯನ್ನು ಮದುವೆ ಹೆಣ್ಣಿಗೂ ಮತ್ತು ಆಕೆಯ ನಾದಿನಿಗೂ ಕೊಟ್ಟು ಮನೆಯೊಳಗೆ ಕಳಿಸುತ್ತಾರೆ. ಬಾಳೆ ಎಲೆಯಲ್ಲಿ ಇರುವುದನ್ನು ಹುಡುಗ ತನ್ನ ಬಾಮೈದನ ಜೊತೆಗೂ ಹುಡುಗಿ ತನ್ನ ನಾದಿನಿಯ ಜೊತೆಗೂ ತಿಂದು ಖಾಲಿ ಮಾಡಲೇಬೇಕು.

ಇದೇ ವೇಳೆಗೆ ಸಾಂಬನು ಹಸೆಕಟ್ಟೆಯ ಮುಂದೆ ಹಸೆಮಣೆಯನ್ನು ಇರಿಸಿ ಅದಕ್ಕೆ ವಿಭೂತಿ, ಅರಿಶಿನ, ಕುಂಕುಮ, ಅಕ್ಷತೆ ಕಾಳುಗಳನ್ನು ಹಚ್ಚಿ ಪೂಜೆ ಮಾಡುವನು. ಆಗ ಮದುಮಗನ್ನು ಆಕೆಯ ಸೋದರಮಾವ ಎರಡು ಕೈಗಳಿಂದಲೂ ಎತ್ತಿಕೊಂಡು ಬಂದು ಹಸೆಯನ್ನು ಮೂರು ಸುತ್ತು ಬಳಸಿ ಹಸೆಮಣೆ ಮೇಲೆ ಕೂರಿಸುವನು. ಹೊರಲು ಸಾಧ್ಯವಾಗದಿದ್ದರೆ ಆಕೆಯ ಕೈಯನ್ನು ಹಿಡಿದು ಹಸೆಯ ಸುತ್ತ ಸುತ್ತಿಸುವನು. ಒಂದು ವೇಳೆ ಸೋದರಮಾನ ಇಲ್ಲದಿದ್ದರೆ ಈ ಆಚರಣೆ ಆಕೆಯ ತಾಯಿಯದಾಗಿರುತ್ತದೆ. ಮದುವೆಹೆಣ್ಣು ಕುಳಿತ ನಂತರ ಮದುವೆ ಗಂಡನ್ನು ಆಕೆಯ ಪಕ್ಕದಲ್ಲಿ ಬಲಗಡೆ ಕೂರಿಸಲಾಗುತ್ತದೆ. ನಂತರ ಇವರಿಬ್ಬರ ಮುಂದೆ ತೆಂಗಿನಕಾಯಿ, ಮಾವಿನ ಎಲೆಗಳಿಂದ ಅಲಂಕರಿಸಿದ ಕಳಸವನ್ನು ಇಟ್ಟು, ಅದರ ಪಕ್ಕ ತಾಳಿಯನ್ನು ಇಡುವರು. ಸಾಂಬನು ಬಾಳೆ ಎಲೆಯ ಮೇಲೆ ಕರ್ಪೂರವನ್ನು ಹಚ್ಚಿ ಮದುವೆ ಗಂಡಿಗೆ ಹಿಡಿಯುವನು. ಆಗ ಮಂಗಳಾರತಿ ತೆಗೆದುಕೊಂಡ ಹುಡುಗನು ಅದರೊಟ್ಟಿಗೇ ಇರುವ ವಿಭೂತಿ ತೆಗೆದುಕೊಂಡು ಅಲ್ಲಿ ನೆರೆದಿರುವ ಎಲ್ಲರಿಗೂ ಕಾಣುವಂತೆ ಕೈ ಮೇಲಕ್ಕೆ ಎತ್ತಿ ಮೂರು ಬಾರಿ ತೋರಿಸಿ ತನ್ನ ಬಲಗೈ ಹೆಬ್ಬೆರಳಿನಿಂದ ವಿಭೂತಿ ತೆಗೆದುಕೊಂಡು ಮದುವೆ ಹೆಣ್ಣಿನ ಹಣೆಗೆ ಹಚ್ಚುವನು. ಆಗ ಸಾಂಬನು ತನ್ನ ಕೈಯಾರೆ ತಾಳಿಗೆ ಮೂರು ಸಾರಿ ಕೈಮುಗಿದು ಮದುವೆಗಂಡಿಗೆ ಕೊಡುತ್ತಾನೆ. ಮದುವೆಗಂಡು ಎದ್ದುನಿಂತು ಮದುವೆ ಹೆಣ್ಣಿನ ಎಡದ ತೊಡೆಯ ಮೊಳಸಂದಿಯ ಮೇಲೆ ತನ್ನ ಬಲಗಾಲನ್ನು ಇಟ್ಟುಕೊಂಡು ತಾಳಿಯನ್ನು ಕಟ್ಟುತ್ತಾನೆ. ತಾಳಿ ಕಟ್ಟಿದ ಕೂಡಲೆ ಸಾಂಬನು ಮೂರು ಬಾರಿ ನವದಂಪತಿಗಳಿಗೆ ಅರಿಶಿನದ ಅಕ್ಕಿಕಾಳನ್ನು ಎರಚಿ ಒಳ್ಳೆಯದಾಗಲಿ ಎಂದು ಹಾರೈಸಿ ಹುಡುಗಿಯನ್ನು ಎದ್ದು ನಿಲ್ಲಲ್ಲು ಹೇಳುತ್ತಾನೆ. ನಂತರ ಮದುವೆ ಹೆಣ್ಣು ಮೂರು ಸಾರಿ, ಹಾಗೆಯೇ ಮದುವೆ ಗಂಡು ಮೂರು ಸಾರಿ ಉಪ್ಪನ್ನು ತಮ್ಮ ಬೊಗಸೆಯಲ್ಲಿ ತುಂಬಿಕೊಂಡು ಒಬ್ಬರ ಬೊಗಸೆಯಿಂದ ಇನ್ನೊಬ್ಬರ ಬೊಗಸೆಗೆ ಸುರಿಯುತ್ತಾರೆ. ಹೀಗೆ ಸುರಿಯುವಾಗ ಇಬ್ಬರೂ ’ನನಗೆ ನೀನು ಒಲುಮೆ’ ’ನನಗೆ ನೀನು ಒಲುಮೆ’ ಎಂದು ಮೂರು ಸಾರಿ ಹೇಳಲೇಬೇಕು. ಇದಾದ ಬಳಿಕ ಹೆಣ್ಣು ಮತ್ತು ಗಂಡು ಪೀಕಿ ಎಲೆಯ ಹಾರವನ್ನು ಪರಸ್ಪರ ಒಬ್ಬರಿಗೆ ಒಬ್ಬರು ಹಾಕುತ್ತಾರೆ. ನಂತರ ಇಬ್ಬರ ಬಲಗೈ ಕಿರುಬೆರಳನ್ನು ಸಾಂಬನು ಹಿಡಿಸಿ ಗಂಡಿನ ಪಂಚೆ ತುದಿ ಮತ್ತು ಹೆಣ್ಣಿನ ಸೆರಗಿನ ತುದಿಯನ್ನು ಸೇರಿಸಿ ಗಂಟು ಹಾಕುವರು. ನಂತರ ಚಾಪೆಯ ಮೇಲೆ ಇಬ್ಬರನ್ನೂ ಕೂರಿಸುವರು. ಆವಾಗ ಮೊದಲು ಹೆಣ್ಣಿನ ತಂದೆತಾಯಿ ಸೋದರಮಾವ ಮತ್ತು ಸಂಬಂಧಿಕರು ಅನಂತರ ಗಂಡಿನ ತಂದೆಕಾಯಿ, ಸೋದರಮಾವ ಹಾಗೂ ಸಂಬಂಧಿಗಳು ಹಾಲನ್ನು ತುಂಬಿರುವ ಚೆಂಬನ್ನು ತೆಗೆದುಕೊಂಡು, ಹುಲ್ಲಿನಗರಿಕೆಯಿಂದ ಧಾರೆ ಎರೆಯುವರು. ನಂತರ ಯಜಮಾನ ಸಾಂಬನು ಅರಿಶಿನದ ನೀರನ್ನು ಹಾಕಿ ಇಬ್ಬರ ಕಿರುಬೆರಳನ್ನು ಬಿಡಿಸುತ್ತಾನೆ. ಇಲ್ಲಿಗೆ ಮದುವೆ ಮುಗಿಯುತ್ತದೆ. ಇವರು ಇದೇ ಸಂದರ್ಭದಲ್ಲಿ ’ಬೋದ ಕಳತ್ತ ಸೋರು’ (ರಾಕ್ಷಸ ತಿನ್ನುವ ಅನ್ನ) ಎಂಬ ಆಚರನೆಯನ್ನು ಮಾಡುತ್ತಾರೆ. ಅದು ಹೀಗಿದೆ; ದೊಡ್ಡ ಬಾಳೆ ಎಲೆಯಲ್ಲಿ, ಅನ್ನ, ಬೆಲ್ಲ, ಬಾಳೆಹಣ್ಣು, ಅಡಿಗೆ ಎಣ್ಣೆ ಹಾಕಿ ಸಾಂಬನು ಚೆನ್ನಾಗಿ ಕಲಸುವನು. ಅದನ್ನು ಸರದಿಯಂತೆ ನೆಂಟರಿಷ್ಟರು ಸಾಮೂಹಿಕವಾಗಿ ಅಥವಾ ಇಬ್ಬಿಬ್ಬರಂತೆ ಮುಗಿಯುವವರೆಗೆ ತಿನ್ನುತ್ತಾರೆ. ನಂತರ ಎಲ್ಲರಿಗೂ ಊಟ ಏರ್ಪಡಿಸಲಾಗುತ್ತದೆ.

ಇದಾದ ನಂತರ ಇನ್ನು ನಿಗಧಿತ ದಿನದಲ್ಲಿ ಬೀಗರೂಟ ಮಾಡುತ್ತಾರೆ. ಅಂದು ಮಾಂಸಾಹಾರವೇ ವಿಶೇಷ. ಹೆಣ್ಣಿನ ಮನೆಯವರು ಆ ದಿನಕ್ಕೆ ಬೇಕಾದಷ್ಟು ಮಾಂಸವನ್ನು ತರುತ್ತಾರೆ. (ದನದ ಮಾಂಸವೆ ಹೆಚ್ಚು ಜೊತೆಗೆ ಕೋಳಿ ಮಾಂಸ). ಈ ಸಂದರ್ಭದಲ್ಲಿ ಗಂಡಿನ ಮನೆಯವರು ಹೆಣ್ಣಿನ ಮನೆಯವರಿಗೆ ಅಡಿಗೆಗೆ ಬೇಕದ ಹನ್ನೆರಡು ಪಡಿ (ಆರು ಸೇರು) ಅಕ್ಕಿ, ಒಂದು ಪಡಿ ಬೇಳೆ (ಅರ್ಧ ಸೇರು), ಕಾರದಪುಡಿ (ಮೆಣಸಿನ ಪುಡಿ), ಉಪ್ಪು, ಹುಣಸೇಹಣ್ಣು, ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆ, ಎಣ್ಣೆ ಮುಂತಾದ ಸಾಮಾನುಗಳನ್ನು ತಂದುಕೊಡುತ್ತಾರೆ. ಇವು ಗಂಡಿನ ಮನೆಯವರ ಅನುಕೂಲಕ್ಕೆ ತಕ್ಕಂತೆ ಹೆಚ್ಚು – ಕಡಿಮೆ ಯಾಗುತ್ತದೆ. ಹೆಣ್ಣಿನ ಮನೆಯವರು ಇವುಗಳನ್ನು ಬಳಸಿ ಅಡುಗೆ ಸಿದ್ಧಪಡಿಸುತ್ತಾರೆ. ಅಡುಗೆ ನಡೆಯುತ್ತಿರುವ ಸಂದರ್ಭದಲ್ಲೆ ಹೆಣ್ಣಿನ ಮನೆಗೆ ಬೀಗರೂಟಕ್ಕೆ ಬಂದಿರುವ ಎಲ್ಲರ ತಲೆಗೂ ಹರಳೆಣ್ಣೆಯನ್ನು (ಹೆಣ್ಣಿನ ಮನೆಯವರು) ಹಚ್ಚುತ್ತಾರೆ. ಕೆಲವರು ಸ್ನಾನ ಮಾಡುತ್ತಾರೆ. ಮದುವೆ ಗಂಡು ಮತ್ತು ತಾಯಿ ತಂದೆ ಈ ಸಂದರ್ಭದಲ್ಲಿ ಸ್ನಾನ ಮಾಡುವುದು ಕಡ್ಡಾಯ.

ಗಂಡಿನ ಕಡೆಯವರು ಇಚ್ಛಿಸಿದರೆ ತಾವು ಸಹ ಹೆಣ್ಣಿನ ಮನೆಯವರಿಗೆ ಬೀಗರೂಟವನ್ನು ಮಾಡಿಸಬಹುದು. ಇದು ಕಡ್ಡಾಯವಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಇದನ್ನು ಮಾಡುವುದು – ಬಿಡುವುದು ಗಂಡಿನ ಕಡೆಯವರಿಗೇ ಸೇರಿದುದಾಗಿದೆ. ಇಷ್ಟು ಆಚರಣೆಗಳೊಟ್ಟಿಗೆ ಮದುವೆ ಕಾರ್ಯ ಮುಗಿಯುತ್ತದೆ.

ದಂಪತಿಗಳ ತಾಯಿತಂದೆಗಳ ಸಮ್ಮುಖದಲ್ಲಿ ಸಾಂಬ ಹಾಗೂ ವಾರಿಯ ಅವರು ಒಸಗೆಗೆ ಒಂದು ದಿನವನ್ನು ನಿರ್ಧಾರ ಮಾಡುತ್ತಾರೆ. ಇದು ಹೆಣ್ಣಿನ ತಾಯಿಯ ಮನೆಯಲ್ಲೆ ನಡೆಯುವ ಕಾರ್ಯವಾಗಿದೆ. ಅಂದು ಸಂಜೆಯ ವೇಳೆಗೆ ಗಂಡು ಹಾಗೂ ಆತನ ತಾಯಿತಂದೆ ಒಂದು ಬಿದರಬುಟ್ಟಿಯಲ್ಲಿ ಹಣ್ಣುಗಳು, ಸ್ಥಳೀಯವಾಗಿ ಸಿಗುವ ಸಿಹಿತಿಂಡಿಗಳು, ಕರಿದ ಖಾದ್ಯಗಳು, ಹೂವು, ಅರಿಶಿನ, ಕುಂಕುಮ ಇವುಗಳನ್ನು ತರುತ್ತಾರೆ. ಅವರು ಬಂದ ಬಳಿಕ ಹಸೆಮಣೆಯ ಮೇಲೆ ದಂಪತಿಗಳನ್ನು ಕೂರಿಸಿ ಮುತ್ತೈದೆಯರೆಲ್ಲರೂ ಮಂಗಳಾರತಿ ಮಾಡಿ, ಅಕ್ಷತೆಯನ್ನು ಅವರ ಹಣೆಗೆ ಹಚ್ಚಿ ತಲೆಮೇಲೆ ಮೂರುಮೂರು ಸಾರಿ ಎರಚಿ ಶಾಸ್ತ್ರ ಮಾಡುತ್ತಾರೆ. ನಂತರ ಐದು ತಟ್ಟೆಗಳಲ್ಲಿ ತಿನ್ನುವ ಸಿಹಿ ಹಾಗೂ ಖಾರ ತಿನಿಸುಗಳನ್ನು ಇಟ್ಟು, ಹೆಣ್ಣಿಗೆ ಕೊಟ್ಟು ತನ್ನ ಗಂಡನಿಗೆ ನೀಡಲು ಹೇಳಿ ಅವರನ್ನು ಏಕಾಂತವಾಗಿ ಬಿಡುತ್ತಾರೆ. ಈ ಆಚರಣೆ ಮುಗಿದ ಬಳಿಕ ಗಂಡನ ಮನೆಗೆ ಹೆಣ್ಣನ್ನು ಕಳಿಸುತ್ತಾರೆ. ಹೊಸ ದಾಂಪತ್ಯ ಹೀಗೆ ಈ ಸಮುದಾಯದಲ್ಲಿ ಆರಂಭಗೊಳ್ಳುತ್ತದೆ.

ಕಪ್ಪೆ ಹೊಲಯ ಜನಾಂಗದಲ್ಲಿ ವಿಧವೆ ಮರುಮದುವೆ ಆಗಲು ಅವಕಾಶವಿದೆ. ಇದಕ್ಕೆ ಕೂಡಾವಳಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ವಯಸ್ಸು ನಲವತ್ತರ ಗಡಿದಾಟದ ವಿಧವೆಯಾಗಿರುವ ಹೆಣ್ಣು ತಾನು ಬಯಸಿದರೆ, ಗಂಡೊಂದು ಒಪ್ಪಿದರೆ ಇಬ್ಬರ ಮನೆಯವರ ಒಪ್ಪಿಗೆ ಮೇರೆಗೇ ಮದುವೆ ಮಾಡಲಾಗುತ್ತದೆ. ಮೊದಲ ಮದುವೆಯಂತೆ ಆಚರಣೆ ಹಾಗೂ ವಿಜೃಂಭಣೆಯಿಂದ ವಿಧವಾ ವಿವಾಹ ನಡೆಯುವುದಿಲ. ಅಲ್ಲದೆ ತೆರಕೊಡುವುದೂ ಇರುವುದಿಲ್ಲ. ಆದರೆ ತುಂಬು ಸಂತೋಷದಿಂದಲೆ ಹೆಣ್ಣು ಗಂಡು ಇಬ್ಬರ ಮನೆಯವರೂ ಒಪ್ಪಿ ಮದುವೆಯಲ್ಲಿ ಭಾಗಿಯಾಗುತ್ತಾರೆ. ಒಂದು ಮನೆಯಲ್ಲಿ ಅಣ್ಣ ಮದುವೆಯಾಗಿದ್ದು ಆತ ಆಕಸ್ಮಿಕವಾಗಿ ತೀರಿಹೋದರೆ ಆಕೆಯನ್ನು ಆತನ ತಮ್ಮನೇ ಮದುವೆಯಾಗುವ ಸಂದರ್ಭವೂ ಇದೆ. ಮೊದಲ ಗಂಡನಿಂದ ಮಕ್ಕಳಿದ್ದರೂ ಸಹ ವಿಧವಾ ವಿವಾಹ ನೆರವೇರುತ್ತದೆ. ಈ ಮದುವೆ ತುಂಬಾ ಸರಳವಾಗಿದೆ. ಜಾತಿಯ ಹಿರೀಕರಾದ ಸಾಮ- ವಾರಿಯ ಎಂಬ ಯಜಮಾನರುಗಳು ಇಬ್ಬರ ಮನೆಯವರ ಅಭಿಪ್ರಾಯವನ್ನು ತಿಳಿದುಕೊಂಡಿರುತ್ತಾರೆ. ತಾವೇ ನಿರ್ಧರಿಸಿದ ಒಂದು ದಿನಾಂಕದಂದು ಗಂಡಿನ ಮನೆಯಲ್ಲಿ ಸಂಜೆ ವೇಳೆ ಆ ಮನೆಯ ದೇವರ ಪಟಗಳ ಮುಂದೆ ಎಲ್ಲರ ಎದುರಿಗೆ ಗಂಡಿನಿಂದ ಹೆಣ್ಣಿಗೆ ಅರಿಶಿನದ ದಾರವನ್ನು ಕಟ್ಟಿಸುತ್ತಾರೆ. ಇಷ್ಟೆ ಮದುವೆ. ನಂತರ ಎಲ್ಲರೂ ಕೂಡಿ ಸಸ್ಯಾಹಾರ ಅಥವಾ ಮಾಂಸಾಹಾರದ ಊಟವನ್ನೂ, ಜೊತೆಗೆ ಪಾಯಸ ಅಥವಾ ಸಿಹಿ ಪೊಂಗಲ್ ತಿನಿಸನ್ನೂ ತಿಂದು ದಾಂಪತ್ಯಕ್ಕೆ ಶುಭವನ್ನು ಹಾರೈಸುತ್ತಾರೆ.

ಮದುವೆಯಾಗಲು ಇಚ್ಚಿಸದ ವಿಧವೆಯರು ಮಕ್ಕಳಿದ್ದರೆ ತನ್ನ ಅತ್ತೆಮಾವನವರ ಒಟ್ಟಿಗೆ, ಮಕ್ಕಳಿಲ್ಲದಿದ್ದರೆ ತನ್ನ ತಾಯಿ ತಂದೆಯರ ಜೊತೆಗೆ ಇರಬಹುದು. ಇದೂ ಸಹ ಕಡ್ಡಾಯವೇನಲ್ಲ. ಹಾಗೆಯೇ ಮದುವೆಯಾದ ಗಂಡ ಹೆಂಡಿರಲ್ಲಿ ಒಟ್ಟಿಗೇ ಬದುಕಲು ಸಾಧ್ಯವಾಗದಂತಹ ಮೈಮನಸ್ಸು ಬಂದರೆ, ಯಜಮಾನರುಗಳಾದ ಸಾಂಬವಾರಿಯರು ಇಬ್ಬರ ಮನೆತನದವರೊಟ್ಟಿಗೆ ದಂಪತಿಗಳಲ್ಲಿ ಸಾಮರಸ್ಯ ಮೂಡಿಸಲು ಕೂತು ಮಾತನಾಡುತ್ತಾರೆ. ಆಗಲೂ ವಿರೋಧ ವ್ಯಕ್ತವಾದರೆ ಗಂಡಿನ ಕಡೆಯವರು, ಹೆಣ್ಣಿನ ನಿಶ್ಚಿತಾರ್ಥದ ಸಮಯದಲ್ಲಿ ತಾವು ನೀಡಿದ್ದ ತೆರವನ್ನೂ ತಾಳಿಯನ್ನು ವಾಪಸ್ಸು ಪಡೆದುಕೊಂಡು ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಹೀಗೆ ಗಂಡನಿಂದ ದೂರವಾದ ಹೆಣ್ಣುಗಳೂ ಸಹ ಪುನರ್ವಿವಾಹ ವಾಗಲು ಅವಕಾಶಗಳು ಇವೆ.

ಇವರಲ್ಲಿ ಪ್ರೆಮವಿವಾಹಗಳು ಹೆಚ್ಚಾಗಿ ನಡೆಯುತ್ತವೆ. ಅಂದರೆ ತಮ್ಮ ದುಡಿಮೆಯ ಕಾರಣಕ್ಕೆ ಗುಳೆ ಹೊರಡುವ ಈ ಜನತೆಯ ಯುವಕ ಯುವತಿಯರು ಅಲ್ಲೆ ಪರಸ್ಪರ ಆಕರ್ಷಿತರಾಗುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಊರಿಗೆ ಬಂದ ನಂತರ ಇಬ್ಬರ ಮನೆಗಳವರ ಮಾತುಕತೆ, ಒಪ್ಪಂದದ ಮೂಲಕ ಸಾಂಬವಾರಿಯ ನೇತೃತ್ವದಲ್ಲಿ ಎಲ್ಲ ಆಚರಣೆಗಳೊಟ್ಟಿಗೆ ಮದುವೆಯನ್ನು ನಡೆಸಲಾಗುತ್ತದೆ.

ಹೆಣ್ಣು ಬೇರೆಯದೆ ಜಾತಿಯಾಗಿದ್ದು ಗಂಡು ಆಕೆಯನ್ನು ಇಷ್ಟಪಟ್ಟು ತನ್ನೊಟ್ಟಿಗೆ ಕರೆದುಕೊಂಡು ಬಂದಿದ್ದರೆ, ಊರಿನ ಹಿರೀಕರು, ಸಾಂಬ=-ವಾರಿಯ, ಗಂಡಿನ ತಾಯಿ ತಂದೆ ಎಲ್ಲರನ್ನೂ ಕೇರಿಯ ಅರಳಿಕಟ್ಟೆ ಬಳಿ ಸೇರಿಸಿ ಪರಸ್ಪರ ಚರ್ಚೆ ನಡೆಸುತ್ತಾರೆ. ಬಂದಿರುವ ಹೆಣ್ಣಿನ ಅಭಿಪ್ರಾಯವನ್ನು ಎಲ್ಲರ ಮುಂದೆ ಕೇಳುತ್ತಾರೆ. ಆಕೆ ಒಪ್ಪಿಕೊಂಡರೆ ಅಂದು ಅಥವಾ ಮಾರನೆ ದಿನವೆ ಕಾಳಿಯಮ್ಮನ ಗುಡಿಯ ಮುಂದೆ ಗಂಡಿನಿಂದ ಅರಿಶಿನದ ಕೊಂಬನ್ನು ಅರಿಶಿನದ ದಾರಕ್ಕೆ ಕಟ್ಟಿ ಅದನ್ನೆ ಹೆಣ್ಣಿನ ಕೊರಳಿಗೆ ಕಟ್ಟಿಸಿ ಮದುವೆ ಮುಗಿಸುತ್ತಾರೆ. ಅನೈತಿಕ ಸಂಬಂಧ ಏರ್ಪಟ್ಟು ಹೆಣ್ಣು ಗರ್ಭ ಧರಿಸಿದ್ದರೆ ಅದಕ್ಕೆ ಕಾರಣನಾದ ಗಂಡು ಮದುವೆಯಾಗಲೇಬೇಕಿರುವುದು ಕಡ್ಡಾಯ. ಇಂತಹ ಸಂದರ್ಭದಲ್ಲಿ ಊರಿನ ಜಾತಿಮುಖಂಡರು, ಸಾಂಬವಾರಿಯ ಊರ ಹೊರಗಿರುವ ಎಕ್ಕದ ಗಿಡದ ಬಳಿಗೆ ಅನೈತಿಕ ಸಂಬಂಧ ಬೆಳೆಸಿದ ಈ ಹೆಣ್ಣುಗಂಡನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಇಬ್ಬರಿಂದಲೂ ’ನಾನು ಒಪ್ಪಿದ್ದೇನೆ’ ಎಂದು ಹೇಳಿಸಿ ಅರಿಶಿನ ದಾರಕ್ಕೆ ಎಕ್ಕದ ಕಾಯಿಯನ್ನು ಕಟ್ಟಿ, ಅದನ್ನು ಗರ್ಭಿಣಿ ಹೆಂಗಸಿಗೆ ಗಂಡಿನಿಂದ ಕಟ್ಟಿಸುತ್ತಾರೆ.

ಹೆರಿಗೆ

ತಮ್ಮ ಮಗಳಿಗೆ ಏಳು ತಿಂಗಳು ತುಂಬಿರುವ ವಿಷಯ ಆಕೆಯ ಗಂಡನ ಮನೆಯಿಂದ ತವರಿಗೆ ತಿಳಿಯುತ್ತಿದ್ದಂತೆ, ಅಡಿಗೆ ಸಾಮಾನುಗಳನ್ನು ತೆಗೆದುಕೊಂಡು ಪಾಯಸ, ಮುದ್ದೆ, ಅನ್ನ, ಸಾರು, ಕಜ್ಜಾಯ, ಹುಳಿಯನ್ನ ಮುಂತಾದವನ್ನು – ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ – ಮಾಡಿಕೊಂಡು ಒಂದು ಬಿದಿರ ಬುಟ್ಟಿಯಲ್ಲಿ ತುಂಬಿಕೊಂಡು, ತಾಯಿ ತಂದೆಯನ್ನು ಒಳಗೊಂಡಂತೆ ಒಟ್ಟು ಒಂಭತ್ತು ಅಥವಾ ಹನ್ನೆರಡು ಮಂದಿ ಹೋಗುತ್ತಾರೆ. ಜೊತೆಗೆ ಗರ್ಭಿಣಿಗೆ ಹೊಸ ಸೀರೆ, ಬಳೆ, ಹೂವು, ಎಲೆ ಅಡಿಕೆ, ತೆಂಗಿನಕಾಯಿ, ಹಣ್ಣು ಹಂಪಲುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಒಂದು ವೇಳೆ ಗಂಡಿನ ಮನೆ ತೀರಾ ಹತ್ತಿರವಿದ್ದರೆ ಅಡುಗೆ ಸಾಮಾನುಗಳನ್ನು ತೆಗೆದುಕೊಂಡು ಬಂದು ಇಲ್ಲೇ ಅಡುಗೆಯನ್ನು ಮಾಡಿ, ಗಂಡಿನ ಮನೆಯ ಎಲ್ಲರಿಗೂ ಒಟ್ಟಿಗೇ ಕೂರಿಸಿ ಊಟ ಬಡಿಸಿ ಉಪಚರಿಸುತ್ತಾರೆ. ಅವರ ಊಟವಾದ ಬಳಿಕ ಬಂದಿರುವ ಹೆಣ್ಣಿನ ಕಡೆಯವರನ್ನೆಲ್ಲ ಕೂರಿಸಿ ಗಂಡಿನ ಕಡೆಯವರು ಊಟಕ್ಕೆ ಬಡಿಸುತ್ತಾರೆ. ನಂತರ ಒಂದು ಟವಲನ್ನು ತೆಗೆದುಕೊಂಡು ಅದಕ್ಕೆ ಹೊಸಸೀರೆ, ಬಳೆ, ಹೂವು, ತೆಂಗಿನಕಾಯಿ, ಹಣ್ಣುಹಂಪಲು, ವೀಳ್ಯದೆಲೆ, ಅಡಿಕೆಯನ್ನಿಟ್ಟು ಅದನ್ನು ಗರ್ಭಿಣಿಯ ಮೊರಳಿಗೆ (ಮಡಿಲಿಗೆ) ಕಟ್ಟುತ್ತಾರೆ. ಕೆಲವರು ಹಸೆಮಣೆ ಮುಂದೆ ಹಣ್ಣುಗಳು ಜಾಸ್ತಿ ಇದ್ದರೆ ತಟ್ಟೆಗಳಲ್ಲಿ ಅವುಗಳನ್ನು ಜೋಡಿಸಿ ಇಡುತ್ತಾರೆ. ನಂತರ ಹಸಮಣೆ ಮೇಲೆ ಕೂರಿಸಿ ಅರಿಶಿನದ ನೀರಿನಿಂದ ಮುತ್ತೈದೆಯರು ಆರತಿ ಶಾಸ್ತ್ರ ಮಾಡುತ್ತಾರೆ. ಬಳಿಕ ತಾವು ತಂದಿರುವ ಬಳೆಗಳನ್ನು ತೊಡಿಸಿ ಮುಖಕ್ಕೆ ಅರಿಶಿನ ಹಚ್ಚಿ ಅಕ್ಷತೆ ಕಾಳುಗಳನ್ನು ಆಕೆಯ ತಲೆಯ ಮೇಲೆ ಎರಚುತ್ತಾರೆ. ಈ ಸಂದರ್ಭದಲ್ಲಿ ಅನೇಕರು ಉಡುಗೊರೆಗಳನ್ನು ಕೊಟ್ಟು ಗರ್ಭಿಣಿಗೆ ಹಾರೈಸುತ್ತಾರೆ. ಅನಂತರ ಹಸೆಮಣೆಯಿಂದ ಏಳಿಸಿ ತವರಿಗೆ ಕರೆದುಕೊಂಡು ಹೋಗಲು, ಅಲ್ಲಿರುವ ಬಟ್ಟೆಬರೆಗಳನ್ನು ತೆಗೆದುಕೊಂಡು ಹೊರಡಲು ಸಿದ್ಧವಾಗುತ್ತಾರೆ. ಆವಾಗ ಗರ್ಭಿಣಿಯು ತನ್ನ ಅತ್ತೆ, ಮಾವ, ಗಂಡ ಹಾಗೂ ಅಲ್ಲಿ ನೆರೆದಿರುವ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವಳು. ತವರಿಗೆ ಹೊರಡುವಾಗ, ಮನೆಯ ಎಲ್ಲರೂ, ಬಂಧುಬಳಗವೂ, ನೆರೆಹೊರೆಯವರು ತಮ್ಮ ಊರ ಹೊರಗಿನವರೆಗೂ ಬಂದು ಬೀಳ್ಕೊಡುವರು.

ತವರಿನಲ್ಲಿ ತಮ್ಮ ಪರಿಸರದಲ್ಲಿ ಸಿಗುವ ಸೊಪ್ಪು, ಗೆಡ್ಡೆಗೆಣಸನ್ನು ನೀಡಿ ಗರ್ಭಿಣಿಯನ್ನು ಆರೈಕೆ ಮಾಡುವರು. ಹೆರಿಗೆ ಮಾಡುವವರು ಇದೇ ಜನಾಂಗದ ಅನುಭವೀ ಮಹಿಳೆಯರಾಗಿದ್ದಾರೆ. ಈಗ ಕೆಲವರು ತಮ್ಮ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಹೆರಿಗೆ ನೋವು ಕಾಣಿಸಿಕೊಂಡೊಡನೆ ಕರೆದೊಯ್ಯುತ್ತಾರೆ. ಈ ಪರಿಸರದಲ್ಲಿ ಹೆರಿಗೆ ಮಾಡುವ ಕಪ್ಪೆ ಹೊಲಯ ಸೂಲಗಿತ್ತಿಯರಲ್ಲಿ ರುಕ್ಕಮ್ಮ (೭೦ ವರ್ಷ), ಪಳನಿಯಮ್ಮ (೬೫ ವರ್ಷ) ತಾಯಮ್ಮ (೫೭ ವರ್ಷ) ಪ್ರಸಿದ್ಧರಾಗಿದ್ದಾರೆ. ಹೆರಿಗೆಯಾದ ಮೇಲೆ ಮಗು ಹೆಣ್ಣಾಗಿರಲಿ, ಗಂಡಾಗಿರಲಿ ಆಕೆಯ ಸೋದರ ಮಾವ ಮಗುವಿಗೆ ಬಟ್ಟೆ, ಕಿವಿ ಓಲೆ, ಕಾಲುಗೆಜ್ಜೆ, ತೊಟ್ಟಿಲನ್ನು ಉಡುಗೊರೆಯಾಗಿ ಕೊಡುತ್ತಾನೆ. ನಂತರ ಸುಮಾರು ಎರಡು ಅಥವಾ ಮೂರು ತಿಂಗಳುಗಳ ಬಳಿಕ ಮಗುವಿನೊಟ್ಟಿಗೆ ಮಗಳನ್ನು ಗಂಡನ ಮನೆಗೆ ಹೊಸಬಟ್ಟೆ, ಹಣ್ಣುಹಂಪಲುಗಳನ್ನು ಕೊಟ್ಟು ಕಳುಹಿಸುತ್ತಾರೆ. ಕರೆದುಕೊಂಡು ಹೋಗಲು ಗಂಡು, ಗಂಡಿನ ತಾಯಿ ತಂದೆ ಅವರ ಕೆಲವು ಆಪ್ತರು ಬಂದಿರುತ್ತಾರೆ.

ಮರಣ

ಇವರಲ್ಲಿ ಯಾವುದೇ ಸಾವು ಸಂಭವಿಸಿದರೂ ಸತ್ತ ವ್ಯಕ್ತಿಯ ಮನೆಯವರು ಅಥವಾ ಸಂಬಂಧಿಕರು ತಮ್ಮ ಕಳ್ಳು – ಬಳ್ಳಿ ಸಂಬಂಧದ ಪರವೂರುಗಳಲ್ಲಿ ವಾಸಿಸುತ್ತಿರುವವರಿಗೆ ಸಾವಿನ ಸುದ್ದಿ ಮುಟ್ಟಿಸಲು ತೆರಳುತ್ತಾರೆ. ಶವವನ್ನು ಮನೆಯ ಹೊರಗೆ ಚಾಪೆ ಹಾಸಿ ಮಲಗಿಸಿ ಮನೆಮುಂದೆ ನಾಲ್ಕೈದು ಕಟ್ಟಿಗೆಗಳಿಂದ ಬೆಂಕಿ ಹಾಕುತ್ತಾರೆ. ಶವದ ಪಕ್ಕದಲ್ಲಿ ಒಂದು ಕನ್ನಡಿಯನ್ನು ಇಟ್ಟು, ಅಲ್ಲಿ ಹರಳೆಣ್ಣೆ ಹಾಕಿದ ಹಣತೆಯೊಂದನ್ನು ಹಚ್ಚಿಡುತ್ತಾರೆ. ಸತ್ತವರ ಮನೆಯ ಮುಂದೆ ಸಾಮಾನ್ಯವಾಗಿ ಕೇರಿಯಲ್ಲಿರುವ ಎಲ್ಲರೂ ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು, ಹಿಂದಿನ ದ್ವೇಷಭಾವನೆಗಳನ್ನು ಮರೆತು ಬಂದು ಸೇರುತ್ತಾರೆ. ಹೆಂಗಸರಂತು ಸಾವನ್ನಪ್ಪಿದ ವ್ಯಕ್ತಿಯ ಗುಣಗಾನ ಮಾಡುತ್ತ ರಾಗವಾಗಿ ದುಃಖದಿಂದ ಅಳುತ್ತಾರೆ. ಕೆಲವರು ಶವದ ಮೈತೊಳೆದು ಬಿಳಿಬಟ್ಟೆಯನ್ನು ಸುತ್ತುತ್ತಾರೆ. ನಂತರ ಆಪ್ತರು, ನೆಂಟರಿಷ್ಟರು, ಸಂಬಂಧಿಗಳು ಒಬ್ಬೊಬ್ಬರಾಗಿ ಅದಕ್ಕೆ ಪೂಜಿಸುತ್ತಾರೆ. ನಂತರ ಬಿದಿರಿನಿಂದ ತಯಾರಿಸಿದ ಚಟ್ಟದಲ್ಲಿ ಹೊತ್ತೊಯ್ಯುತ್ತಾರೆ. ಈ ಸಂದರ್ಭದಲ್ಲಿ ತಾವು ಹೋಗುವ ದಾರಿಯುದ್ದಕ್ಕೂ ಪುರಿಯನ್ನು ಎರಚುತ್ತಾರೆ. ಇವರಲ್ಲಿ ಶವವನ್ನು ಹೂಳುವ ಸ್ಥಳಕ್ಕೆ ಹೆಂಗಸರು ಯಾರೂ ಹೋಗುವಂತಿಲ್ಲ. ಹೂಳುವ ಸ್ಥಳಕ್ಕಿಂತ ತುಂಬಾ ಹಿಂದೆಯೇ ಶವವನ್ನು ಇರಿಸುತ್ತಾರೆ. ಆ ಸ್ಥಳಕ್ಕೆ ಇವರು ಪಾಡಮತ್ತಿ ಎಂದು ಕರೆಯುತ್ತಾರೆ. ಇಲ್ಲಿ ಶವದ ಮುಖವನ್ನು ನೋಡಿ ಕೈಮುಗಿದುಕೊಂಡು ಹೆಂಗಸರೆಲ್ಲ ಮನೆಗಳಿಗೆ ಹಿಂದಿರುಗುತ್ತಾರೆ. ಗಂಡ ತೀರಿಹೋಗಿದ್ದರೆ ಶವವನ್ನು ಆಕೆಯೊಟ್ಟಿಗೆ ಕೂರಿಸಿ ಹೆಂಡತಿಯ ಬಳೆಯನ್ನು ಈ ಸ್ಥಳದಲ್ಲಿ ಒಡೆಯಲಾಗುತ್ತದೆ. ತಾಳಿಯನ್ನು ಸಹ ಇಲ್ಲೆ ಬಿಚ್ಚಿಸಿ ಅಲ್ಲಿಂದಲೆ ಇನ್ನಿತರ ಹೆಂಗಸರೊಟ್ಟಿಗೆ ಆಕೆಯನ್ನೂ ವಾಪಸ್ಸು ಮನೆಗೆ ಕಳಿಸುತ್ತಾರೆ.

ಹೆಂಗಸರು ಸತ್ತರೆ ಆಕೆಯ ಸೋದರ ಮವನು ಶವದ ಬಿಳಿಬಟ್ಟೆಯನ್ನು ತರಬೇಕು. ನಂತರ ಗಂಡ, ತಾಯಿ, ತಂದೆ, ಸೋದರರು ಆಕೆಗೆ ಕೊನೆಯ ಸ್ನಾನವನ್ನು ಮಾಡಿಸುತ್ತಾರೆ. ಸಂಬಂಧಿಗಳೆಲ್ಲರೂ ಒಂದೊಂದು ಚೆಂಬು ನೀರನ್ನು ಹಾಕಿ ಸೋದರ ಮಾವ ತಂದಿರುವ ಬಿಳಿಬಟ್ಟೆಯನ್ನು ಉಡಿಸುತ್ತಾರೆ. ಒಂದು ಕಡೆ ಕೂರಿಸಿ ಅರಿಶಿನ, ಕುಂಕುಮ, ವಿಭೂತಿ ಹಚ್ಚಿ ಏಗಾಳಿ (ಪಾಟಪ್ಪ) ಪೂಜೆ ಮಾಡುತ್ತಾನೆ. ಅನಂತರ ನೆಂಟರಿಷ್ಟರು, ಆ ಊರಿನ ಬಹುಪಾಲು ಎಲ್ಲರೂ ಪೂಜಿಸುತ್ತಾರೆ. ಪೂಜೆ ನಂತರ ಈಗಾಗಲೇ ಸಿದ್ಧಪಡಿಸಿದ ಬಿದಿರಿನ ಚಟ್ಟದಲ್ಲಿ ಮಲಗಿಸಿ, ಆಕೆಯ ಗಂಡ ಮತ್ತು ರಕ್ತಸಂಬಂಧಿಗಳು ಒಟ್ಟು ನಾಲ್ಕು ಜನ ಹೊತ್ತುಕೊಂಡು ಪಾಡಮತಿ ಎನ್ನುವ ನಿಗಧಿತ ಸ್ಥಳಕ್ಕೆ ಬಂದು ಶವವನ್ನು ಕೆಳಗಿಳಿಸುವರು. ಅಲ್ಲಿ ಬಂದಿರುವ ಎಲ್ಲಾ ಹೆಂಗಸರು ಶವದ ಮುಖನೋಡಿ ವಂದಿಸಿ ವಾಪಸ್ಸಾಗುತ್ತಾರೆ. ಹೂಳುವ ಸ್ಥಳಕ್ಕೆ ಕೊಂಡೊಯ್ದ ಬಳಿಕ ಅಲ್ಲಿ ದುಪ್ಪಟಿಯಂತಹ ಇನ್ನೊಂದು ಬಟ್ಟೆಯಲ್ಲಿ ತೊಟ್ಟಿಲಿನಂತೆ ಮಾಡಿ ಇಬ್ಬರು ಮೂರು ಸಾರಿ ಹಳ್ಳದ ಒಳಗೆ ಬಿಟ್ಟು ಮೇಲಕ್ಕೆ ಎತ್ತುವರು. ನಂತರ ಸೋದರ ಮಾವ ಹಳ್ಳಕ್ಕೆ ಇಳಿದು ಶವವನ್ನು ತಾನು ಮಣ್ಣಿನಲ್ಲಿ ಇರಿಸುತ್ತಾನೆ. ನಂತರ ತಾಳಿಯನ್ನು ಕಾಲುಂಗುರವನ್ನು ಬಿಚ್ಚಿ ಮೇಲಕ್ಕೆ ಕೊಡುತ್ತಾನೆ. ಆತ ಮೇಲೆ ಬಂದ ನಂತರ ಆ ಹೆಂಗಸಿನ ತಂದೆ ಅಥವಾ ಗಂಡ ಶವದ ಹಳ್ಳದ ಕಡೆಗೆ ಬೆನ್ನು ಮಾಡಿ ತನ್ನ ಕೈಗಳಿಂದ ಮೂರು ಸಾರಿ ಮಣ್ಣನ್ನು ತಳ್ಳುತ್ತಾನೆ. ಅನಂತರ ನೆರೆದಿರುವವರೆಲ್ಲರೂ ಮೂರು ಹಿಡಿ ಮಣ್ಣನ್ನು ಹಾಕಿ ಸಂಪೂರ್ಣ ಹಳ್ಳವನ್ನು ತುಂಬಿಸುತ್ತಾರೆ. ನಂತರ ಸ್ವಲ್ಪ ಎತ್ತರಕ್ಕೆ ಶವದ ಹಳ್ಳಕ್ಕೆ ಸಮನಾಗಿ ಮಣ್ಣಿನ ಕಟ್ಟೆಯನ್ನು ಕಟ್ಟಿ, ತಲೆಯ ಭಾಗಕ್ಕೆ ಅವರ‍್ಕೆ ಹೂವು (ಆವರಂ ಪೂವು), ಕಾಲಿನ ಭಾಗಕ್ಕೆ ಬೆಳ್ಳಚುಳ್ಳ ಮುಳ್ಳು (ವೆಲ್ಲಪುಳಾ ಮುಳ್ಳು) ಮತ್ತು ಮಧ್ಯಭಾಗಕ್ಕೆ ಪಾಪಸುಕಳ್ಳಿ ಮುಳ್ಳನ್ನು (ಪಡಕಲಿಮುಳ್ಳು) ತಲಾ ಒಂದೊಂದರಂತೆ ಇಟ್ಟು ಅದರ ಮೇಲೆ ಮೂರು ದಪ್ಪದಪ್ಪ ಕಲ್ಲಿನ ದಿಂಡುಗಳನ್ನು ಇಡುವರು. ಅನಂತರ ಎಲ್ಲರೂ ಕೈಮುಗಿದು ಪಾಡುಮತಿ ಬಳಿ ಹೋಗಿ ಕುಳಿತುಕೊಳ್ಳುತ್ತಾರೆ. ಏಗಾಳಿ (ಪಾಟಪ್ಪನು) ಆಗ ಒಂದು ಟವಲ್ಲನ್ನು ಹಾಸುವನು ಅದಕ್ಕೆ ಎಲ್ಲರೂ ತಮ್ಮಿಂದ ಆಗುವಷ್ಟು ಕಾಸನ್ನು ಹಾಕುವರು. ಅದು ಆತನಿಗೇ. ನಂತರ ಎಲ್ಲರೂ ಸಾವಿನ ಮನೆಗೆ ಹೋಗಿ ಅಲ್ಲಿ ಸತ್ತ ಸ್ಥಳದಲ್ಲಿ ಹಚ್ಚಿಡಲಾದ ದೀಪ ಹಾಗೂ ಕನ್ನಡಿಯಲ್ಲಿ ತಮ್ಮ ಮುಖ ನೋಡಿ ಕೈ ಮುಗಿದು ಮನೆ ಮುಂದೆ ಹಾಕಿದ ಸೆಗಣಿಯನ್ನು ಕಾಲಿನಿಂದ ತುಳಿದು ಅಲ್ಲೆ ಆಸುಪಾಸಿನಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದು ಯಾರಿಗೂ ಹೇಳದೆ ತಮ್ಮ ತಮ್ಮ ಮನೆಗಳಿಗೆ, ಊರುಗಳಿಗೆ ತೆರಳಿ ಸ್ನಾನ ಮಾಡಿ ಮನೆ ಒಳಗೆ ಹೋಗುತ್ತಾರೆ.

ಐದು ವರ್ಷದ ಒಳಗಿನ ಹೆಣ್ಣುಮಕ್ಕಳು ತೀರಿಕೊಂಡರೆ ಮಗುವಿನ ಸೋದರ ಮಾವನನ್ನು ಕರೆಸುತ್ತಾರೆ. ಆತ ಬಂದ ಬಳಿಕ ಮನೆಯ ಹೊಸ್ತಿಲ ಹೊರಗೆ ನಿಂತುಕೊಳ್ಳುತ್ತಾನೆ. ಆಗ ಮೃತ ಮಗುವಿನ ತಾಯಿ ಮನೆಯ ಒಳಗೆ ಹೊಸ್ತಿಲಿನ ಹಿಂದೆ ನಿಂತು ಶವವನ್ನು ಮೂರು ಸಾರಿ ಆತನಿಗೆ ಕೊಟ್ಟು ಮೂರು ಸಾರಿ ಪಡೆದು ನಂತರ ಸೋದರ ಮಾವನಿಗೆ ನೀಡುತ್ತಾಳೆ. ಶವವನ್ನು ಹೊರಗೆ ಮನೆ ಮುಂದೆ ಒಂದು ಸ್ಥಳದಲ್ಲಿ ಕೂರಿಸಿ, ತಾಯಿ ತಂದೆ ಬಂಧು ಬಾಂಧವರು ಪೂಜಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳು ತೀರಿಕೊಂಡರೆ ಮನೆಯ ಹಿಂದೆಯೆ ಹೂಳುವುದರಿಂದ ಮೃತ ಮಗುವಿನ ತಂದೆ ಅಥವಾ ತಾಯಿ ಮೂರು ಸಾರಿ ಅಗೆದು ಆ ಹಾರೆಯನ್ನು ಮೃತಳ ಸೋದರ ಮಾವನಿಗೆ ಕೊಡುತ್ತಾರೆ. ಆತ ಇತರರ ಸಹಾಯವನ್ನು ಪಡೆದು ಹಳ್ಳವನ್ನು ತೆಗೆಯುವನು. ಆ ಹಳ್ಳಕ್ಕೆ ತಾಯಿ ತಂದೆ ಕಾಯಿ  ಹೊಡೆದು ಅದರ ಎಳನೀರನ್ನು ಅಲ್ಲಿಗೆ ಚಿಮುಕಿಸಿ ವಿಭೂತಿ ಹಚ್ಚಿ ಗಂಧದ ಕಡ್ಡಿಯಿಂದ ಪೂಜಿಸುತ್ತಾರೆ. ಅನಂತರ ಸೋದರಮಾವ ಹಳ್ಳದ ಬಳಿಗೆ ಶವವನ್ನು ತಂದು ಬೆಳಚುಳ್ಳಿ ಮುಳ್ಳನ್ನು ತೆಗೆದುಕೊಂಡು ಅದರಿಂದ ಮೃತ ಮಗುವಿನ ಬಲಗೈ, ಬಲಗಾಲು ನಂತರ ಎಡಗೈ, ಎಡಗಾಲು, ಮೂಗು ಬೊಟ್ಟು ಇಡುವಲ್ಲಿ ಮತ್ತು ಕಿವಿಗಳಿಗೆ ಓಲೆ ಹಾಕುವ ಸ್ಥಳಗಳಿಗೆ ಗೀಚುವನು. ಒಮ್ಮೊಮ್ಮೆ ಇದನ್ನು ಹುಡುಗಿಯ ತಾಯಿ ಅಥವಾ ತಂದೆ ಮಾಡುತ್ತಾರೆ. ನಂತರ ಒಂದು ಬಟ್ಟೆಯಲ್ಲಿ ಹೂಳುವ ಹಳ್ಳದೊಳಗೆ ಶವವನ್ನು ಇಳಿಸಿ ಮೂರು ಸಾರಿ ಇಳಿಸಿ ಎತ್ತುತ್ತಾರೆ. ನಂತರ ಸೋದರಮಾವ ಶವವನ್ನು ಇಳಿಸಿ ಮಣ್ಣಿಗೆ ಹಾಕಿ ಮೇಲಕ್ಕೆ ಬರುತ್ತಾನೆ. ಅನಂತರ ದೊಡ್ಡವರು ಸತ್ತಾಗ ಸಮಾಧಿಯಲ್ಲಿ ಮಾಡುವ ಆಚರಣೆಗಳನ್ನೇ ಇದಕ್ಕೂ ಮಾಡಲಾಗುತ್ತದೆ.

ಶವವನ್ನು ಹೂಳಿದ ರಾತ್ರಿ ’ಉಪ್ಪಾರಿಪಾಟ್ಟು’ ಎಂಬ, ಸತ್ತಾಗ ಹಾಡುವ ಹಾಡನ್ನು ಬೆಳಗಿನವರೆಗೂ ಹೇಳಿಸುವರು. ಹಾಡು ಹೇಳುವವರಿಗೆ ಎರಡು ಪಾವು ಕಂಬು, ಜೋಳ ಅಥವಾ ರಾಗಿಯನ್ನು ಕೊಡುವರು. ಅವರು ಹಾಡುವ ಸಂದರ್ಭದಲ್ಲಿ ಕೇರಿಯ ಇತರರೂ ತಮ್ಮ ಮನೆಯಲ್ಲಿ ಈಗಾಗಲೇ ತೀರಿಕೊಂಡಿರುವವರ ಹೆಸರನ್ನು ಹೇಳಿ ಅವರ ಪರವಾಗಿಯೂ ಹಾಡಿಸುವರು. ಆಗ ತಮ್ಮ ಕೈಲಾದಷ್ಟು ಹಣವನ್ನು ಹಾಡುವವರಿಗೆ ನೀಡುವರು.

ಸಾವಿನ ಮುಟ್ಟು ಕಳೆಯಲು ತೀಟ್ಟು ಕಳಕಿರದು, ತಿಥಿ ಮಾಡುವುದೆಂದು ಹೇಳುತ್ತಾರೆ. ಇದು ಅವ ಬಂಧುಬಳಗದವರು ಮಾತನಾಡಿಕೊಂಡಂತೆ ಮೂರು, ಏಳು, ಒಂಭತ್ತು ಅಥವಾ ಹನ್ನೊಂದನೆ ದಿನ ನೆರವೇರಿಸುವ ಆಚರಣೆ. ತಿಥಿಗೆ ಹಿಂದಿನ ದಿನ – ಮನೆಯನ್ನು ಗುಡಿಸಿ ಸಾರಿಸಿ ಮನೆಯವರೆಲ್ಲ ಸ್ನಾನ ಮಾಡುವರು. ಸತ್ತ ಮಹಿಳೆಯ ಕುಟುಂಬದ ಹಿರಿಯ ಮಗ ಅಥವಾ (ಮದುವೆಯಾಗದ ಚಿಕ್ಕವಯಸ್ಸಿನ ಮಗಳು ಸತ್ತಿದ್ದರೆ) ತಾಯಿ ಬೆಳಿಗ್ಗೆ ಏನೂ ತಿನ್ನದೆ ಉಪವಾಸವಿದ್ದು ಸಂತೆಗೆ ಹೋಗಿ ಪೂಜೆ ಸಾಮಾನುಗಳು, ತೆಂಗಿನ ಕಾಯಿ, ಅಕ್ಕಿ, ಸತ್ತಾಕೆ ತಿನ್ನುತ್ತಿದ್ದ ತಿಂಡಿ ತಿನಿಸುಗಳು ಹಾಗೂ ಕುಂಬಾರನ ಬಳಿ ಮೊಂದೆ (ಗಡಿಗೆ), ಸಟ್ಟ (ಮಡಕೆ) ಅಡಸಟ್ಟೆ (ಪಾಸಾಲ), ಕಳಯ (ಮುಚ್ಚಳ) ಇವಿಷ್ಟನ್ನು ತರುತ್ತಾರೆ. ನಂತರ ತಮ್ಮ ಕೇರಿಯಲ್ಲಿ ಇರುವ ಬಾವಿ ಅಥವಾ ಹಳ್ಳದಿಂದ ಹೊಸನೀರನ್ನು ತಂದು, ಕಲ್ಲಿನಿಂದ ಒಲೆಯನ್ನು ಒಡ್ಡಿ ಆ ನೀರನ್ನು ಕಾಯಿಸಲಾಗುತ್ತದೆ. ಅಡುಗೆ ಮಾಡುವ ಹಿರಿಯಮಗ ಅಥವಾ ತಾಯಿ ಈ ಸಂದರ್ಭದಲ್ಲಿ ಬಾಯಿಗೆ ಬಿಳಿಯ ಬಟ್ಟೆಯನ್ನು ಕಟ್ಟಿಕೊಂಡಿರುತ್ತಾರೆ. ಆಗ ಒಂದು ಹೊಸ ಮಡಕೆಯಲ್ಲಿ ಪೊಂಗಲ್ ಸಿದ್ಧಪಡಿಸುವರು. ಅದನ್ನು ಪೂಜಿಸಿ ನಂತರ, ಕಪ್ಪು ಹೆಣ್ಣು ಕೋಳಿಯನ್ನು ಕೊಯ್ದು ಅದರ ಸ್ವಲ್ಪವೇ ರಕ್ತ ಮತ್ತು ಮಾಂಸವನ್ನು ತೆಗೆದುಕೊಂಡು ಅದನ್ನು ಅವತಕೀರೆ ಸೊಪ್ಪಿನ ಜೊತೆಗೆ ಹೊಸದಾಗಿ ತಂದಿರುವ ಪಾಸಾಲೆ (ಅಡಸಟ್ಟಿ) ಯಲ್ಲಿ ಹಾಕಿ ಬೇಯಿಸಬೇಕು. ಬೇಯಿಸುವಾಗ ಅದಕ್ಕೆ ಉಪ್ಪು ಹಾಕದೆ ಕೇವಲ ಕಾರದಪುಡಿ ಮತ್ತು ನೀರನ್ನು ಮಾತ್ರ ಹಾಕುತ್ತಾರೆ. ಬೇರೆ ಯಾವುದೆ ಪದಾರ್ಥಗಳನ್ನು ಹಾಕುವುದಿಲ್ಲ. ಇದೆಲ್ಲ ಮುಗಿದ ಕೂಡಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ಗೋಡೆಗೆ ವಿಭೂತಿ ಕುಂಕುಮ ಹಚ್ಚಿ ಪೂಜೆ ಮಾಡುವರು. ನಂತರ ಪೂಜಿಸಿದ ಸ್ಥಳದ ನೆಲದಲ್ಲಿ ಏಳು ಬಾಳೆ ಎಲೆಗಳನ್ನಿಟ್ಟು ನಾಲ್ಕರಲ್ಲಿ ಪೊಂಗಲ್ ಮಾತ್ರ ಎಡೆಹಾಕಿ. ಉಳಿದ ಮೂರು ಎಲೆಗೆ ಪೊಂಗಲ್ ಮತ್ತು ಈಗ ಅವತಕೀರೆಸೊಪ್ಪಿನ ಜೊತೆ ತಯಾರಿಸಿದ ಮಾಂಸದ ಸಾರನ್ನು ಹಾಕುತ್ತಾರೆ. ಅನಂತರ ಎರಡಕ್ಕೂ ಪೂಜೆ ಮಾಡುತ್ತಾರೆ. ಆವಾಗ ಐದು ತೆಂಗಿನಕಾಯಿಯನ್ನು ಒಡೆಯಲಾಗುತ್ತದೆ. ಈ ಎಡೆಯಲ್ಲಿ ಪೊಂಗಲ್ ಹಾಕಿದ ಎಡೆ ದೇವರಿಗೂ, ಮಾಂಸಾಹಾರದ ಎಡೆ ಸತ್ತವರಿಗೂ, ಮಾಂಸದ ಎಡೆಯಲ್ಲಿ ಒಂದನ್ನು ತಮ್ಮ ಮನೆಯ ಮೇಲೂ ಇಡುತ್ತಾರೆ.

ಮನೆಯ ಈ ಆಚರಣೆಯ ಬಳಿಕ ಒಂದು ದೊಡ್ಡ ಬಿದಿರಬುಟ್ಟಿಯಲ್ಲಿ ಮಾಡಿರುವ ಅಡುಗೆ, ತಂದಿರುವ ತಿಂಡಿ ತಿನಿಸುಗಳು, ಹಣ್ಣುಹಂಪಲುಗಳನ್ನು ತೆಗೆದುಕೊಂಡು, ಹೊಸ ಗಡಿಗೆಯೊಂದರಲ್ಲಿ ನೀರನ್ನು ತುಂಬಿಕೊಂಡು ಸಮಾಧಿಯತ್ತ ಹೊರಡುವರು. ಏಗಾಳಿಯು (ಪಾಟಪ್ಪನು) ಅವರ ಹಿಂದೆ ಒಂದು ಹಿತ್ತಾಳೆಯ ಹರಿವಾಣವನ್ನು ಎಡದ ಕೈಯಲ್ಲಿ ಹಿಡಿದುಕೊಂಡು, ಬಲದ ಕೈಯಲ್ಲಿ ಒಂದು ಕಡ್ಡಿಯಿಂದ ಅದನ್ನು ಬಡಿದು ಶಬ್ದ ಮಾಡುತ್ತ ಹೋಗುವನು. ಸಮಾಧಿಗೆ ಹೋಗುವಾಗ ಪಾಡಮತ್ತಿಯಲ್ಲಿ ಒಂದು ಎಡೆ ಇಡಲಾಗುವುದು. ಆಗ ಅಲ್ಲೊಬ್ಬನನ್ನು ಕಾವಲಿಗೆ ಕೂರಿಸಲಾಗುತ್ತದೆ. ಹೆಂಗಸರೂ ಕೂಡ ಈಗ ಸಮಾಧಿಯ ಬಳಿ ಹೋಗಬಹುದು. ಸಮಾಧಿಗೆ ಹೋಗಿ ಒಂದು ದೊಡ್ಡ ಬಾಳೆಎಲೆಯನ್ನು ಹಾಕಿ ಅದಕ್ಕೆ ಪೊಂಗಲ್, ಮಾಂಸದ ಸಾರು, ತಿಂಡಿ ತಿನಿಸು, ಹಣ್ಣುಹಂಪಲುಗಳನ್ನು ಹಾಕಿ ಗಡಿಗೆಯೊಂದರಲ್ಲಿ ನೀರಿಟ್ಟು ಪಾಟಪ್ಪ ಪೂಜೆ ಮಾಡಿದ ಬಳಿಕ ಎಲ್ಲರೂ ಪೂಜೆ ಮಾಡುವರು. ನಂತರ ಎಲ್ಲರೂ ಒಂದಷ್ಟು ದೂರ ಹೋಗಿ ಕುಳಿತುಕೊಳ್ಳುವರು. ಕಾಗೆಯೊಂದು ಬಂದು ತಿಂದ ಬಳಿಕ ಸಮಾಧಿ ಮೇಲೆ ಹಾಕಿರುವ ಬಾಳೆ ಎಲೆಯಲ್ಲಿನ ಸ್ವಲ್ಪ ಎಡೆಯನ್ನು ತೆಗೆದುಕೊಂಡು ಪಾಡಮತಿಗೆ ಬಂದು ಅಲ್ಲಿ ಕುಳಿತಿರುವವನಿಗೆ, ಕಾಗೆ ಬಂದಿತ್ತಾ ಎಂದು ಕೇಳಿ, ಅಲ್ಲಿ ಹಾಕಿರುವ ಎಡೆಯನ್ನು ಅಲ್ಲೆ ಬಿಟ್ಟು ಎಲ್ಲರೂ ಮನೆಗೆ ಬರುವರು. ಬಂದ ನಂತರ ಈಗಾಗಲೇ ಗೋಡೆಯ ಮುಂದೆ ಹಾಕಿರುವ ಎಡೆಯಲ್ಲಿ ಬರೀ ಪೊಂಗಲ್ ಇರುವ ಒಂದು ಎಡೆಯನ್ನು ಮೃತಳ ಹಿರಿಯ ಮಗ, ಅವನಿಲ್ಲದಿದ್ದರೆ ಸೋದರಮಾವ ಅಥವಾ ತಾಯಿ ತಿನ್ನಬೇಕು. ಪೊಂಗಲಿಗೆ, ಅವರಕೀರೆ ಸೊಪ್ಪಿನ ಜೊತೆ ಬೇಯಿಸಿರುವ ಕೋಳೀಮಾಂಸದ ಸಾರು ಉಳಿದಿದ್ದರೆ ಅದನ್ನು ಹಾಕಿಕೊಂಡು ತಿಂದು ಮುಗಿಸಬೇಕ. ನಂತರ ತೆಂಗಿನಕಾಯಿಯ ಅರ್ಧ ಹೋಳನ್ನು ತುರಿದು, ಬೆಲ್ಲ ಬಾಳೆಹಣ್ಣಿನ ಮಿಶ್ರಣ ಮಾಡಿ ಮೃತಳ ಭಾವ-ಬಾಮೈದ ಮತ್ತು ಅತ್ತಿಗೆ ನಾದಿನಿಯರಿಗೆ ಕೊಡಲಾಗುತ್ತದೆ. ಸ್ವಂತ ಅಣ್ಣತಮ್ಮಂದಿರ ಮಕ್ಕಳಿ ಬಾಳೆ ಎಲೆಯಲ್ಲಿ ಬರಿ ಪೊಂಗಲನ್ನು, ಸಿಹಿ ಪದಾರ್ಥಗಳನ್ನು ಕೊಡುತ್ತಾರೆ.

ಮನೆಯ ಹೊರಗಡೆ ಬಂದಿರುವ ನೆಂಟರಿಷ್ಟರಿಗೆ ಹಾಗೂ ಊರ ಬಂಧುಬಳಗಕ್ಕೆ ರಾಗಿಮುದ್ದೆ. ಅನ್ನ, ಬೇಳೆ ಅಥವಾ ಅವರೇಕಾಳು-ಬದನೇಕಾಯಿ ಸಾರನ್ನು ಮಾಡುತ್ತಾರೆ. ಅದು ಸಿದ್ಧಗೊಂಡ ಕೂಡಲೇ ಜನಾಂಗದ ಯಜಮಾನರಾದ ಸಾಂಬ, ವಾರಿಯ ಮತ್ತು ಏಗಾಳಿ (ಪಾಟಪ್ಪ)ನನ್ನು ಕರೆದು ಮೊದಲು ಊಟ ಕಾಕುತ್ತಾರೆ. ನಂತರ ನೆರೆದಿರುವ ಎಲ್ಲಾ ಪುರುಷರಿಗೂ ಅನಂತರ ಮಹಿಳೆಯರಿಗೂ ಪ್ರತ್ಯೇಕ ಪಂಕ್ತಿಯಲ್ಲಿ ಕೂರಿಸಿ ಸಾಮೂಹಿಕವಾಗಿ ಊಟ ಮಾಡಿಸುತ್ತಾರೆ. ಬಳಿಕ ಮನೆಯವರೆಲ್ಲರೂ ಊಟ ಮಾಡುವ ಮೂಲಕ ಈ ತಿಥಿಯ ಆಚರಣೆ ಕೊನೆಗೊಳ್ಳುತ್ತದೆ.

ಈ ಸಮುದಾಯದಲ್ಲಿ ವಿಧವೆಯರು ಸತ್ತಾಗ ಮಾತ್ರ, ತಿಥಿಯ ದಿನ ಸಮಾಧಿಗೆ ಹೋಗಿ ಸಮಾಧಿಯ ಮೇಲೆ ಬಾಳೆಎಲೆಯಲ್ಲಿ ಎಡೆ ಹಾಕುವ ಮೊದಲು ಮೂರು ಜನ ವಿಧವೆಯರು ಸಮಾಧಿಯ ಮೇಲೆ ’ಕುಂದಣೀ’ ಹಾಕಿ (ಕುಂದಣಿ: ಭತ್ತ, ರಾಗಿ ಕುಟ್ಟುವಾಗ ಹೊರಳುಕಲ್ಲಿನ ಮೇಲೆ ಇಡುವ ಮರದ ಸಲಕರಣೆ) ಸಮಾಧಿಯನ್ನು ಮೂರು ಅಥವಾ ಏಳುಬಾರಿ ಸಮಾಧಿ ಸುತ್ತುತ್ತ ಬಾಯಿ ಬಡಿದುಕೊಂಡು ರಾಗವಾಗಿ ಹಾಡುತ್ತಾರೆ. ಉಳಿದಂತೆ ಈ ಜನತೆಯಲ್ಲಿ ಸಾವು ಹಾಗೂ ತಿಥಿಗೆ ಸಂಬಂಧಿಸಿದ ಎಲ್ಲ ಆಚರಣೆಗಳು ಒಂದೇ ರೀತಿ ಇರುತ್ತವೆ.

ವಿದ್ಯೆ, ಉದ್ಯೋಗ

ತಮ್ಮ ಬದುಕನ್ನು ಪೊರೆಯುವ ಕಾರಣಕ್ಕಾಗೇ ಅರೆಅಲೆಮಾರಿಗಳಾಗಿರುವ ಈ ಜನಾಂಗ ಅಕ್ಷರದ ಬಗ್ಗೆ ಇಂದಿಗೂ ಅಷ್ಟಾಗಿ ಒಲವನ್ನು ತೋರಿಸುತ್ತಿಲ್ಲ. ಇನ್ನು ಹೆಣ್ಣುಮಕ್ಕಳ ಶೈಕ್ಷಣಿಕ ಸ್ಥಿತಿಯಂತು ಇನ್ನೂ ಅತ್ಯಂತ ಧಾರುಣವಾಗಿದೆ. ತಮ್ಮೊಟ್ಟಿಗೆ ತಮ್ಮ ಮಕ್ಕಳು ಮರಿಗಳನ್ನು ಊರ ಹೊರಗಿನ ರಸ್ತೆ ಕೆಲಸಕ್ಕೆ, ಕೂಲಿಕಂಬಳಕ್ಕೆ ಕರೆದೊಯ್ಯುವ ಇವರು ಮನೆಯ ಆದಾಯಕ್ಕಾಗಿ ತಮ್ಮ ಮಕ್ಕಳಣ್ನೂ ಬಾಲಕೂಲಿಕಾರ್ಮಿಕರಾಗಿ ದುಡಿಸುತ್ತಾರೆ. ಓದಿನಿಂದ ಏನೆಲ್ಲ ಆಗಬಹುದೆಂಬ ಅರಿವು ಈ ಜನಾಂಗದ ಹೆಣ್ಣಿಗೂ ಇಲ್ಲ ಗಂಡಿಗೂ ಇಲ್ಲ. ಹೀಗಿದ್ದ ಇ ಜನಾಂಗದ ನಾಲ್ವರು ಪುರುಷರು ಮಾತ್ರ ಹೆಚ್ಚಿನ ವ್ಯಾಸಂಗವನ್ನು ಮಾಡಿದ್ದಾರೆ. ಅವರಲ್ಲಿ ಗೋಪಿನಾಥಶೆಟ್ಟಿಯೂರಿನ ರಾಜಗೋಪಾಲ ಎಂಬುವವರು ಕೇರಳದ ಕಣ್ಣಾನೂರಿನಲ್ಲಿ ವೈದ್ಯರಾಗಿದ್ದಾರೆ. ಪಳನಿಮೇಡಿನ ಮಹದೇವಸ್ವಾಮಿ ಅವರು ಮೈಸೂರಿನಲ್ಲಿ ಇಂಜಿನಿಯರ-ರಾಗಿದ್ದಾರೆ. ಪಳನಿಮೇಡಿನ ರವಿ ಎಂಬುವವರು ಎಂ.ಎ.ಜೊತೆಗೆ ಬಿ.ಎಡ್.ವ್ಯಾಸಂಗಮಾಡಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಗೆಜ್ಜಲನಾಥದ ಪಳನಿ ಅವರು ಎಂ.ಎ ಓದಿದ್ದಾರೆ. ಆದರೆ ಮಹಿಳೆಯರಿಗೆ ಉನ್ನತ ಓದು, ಉದ್ಯೋಗ ಇನ್ನು ಸಾಧ್ಯವಾಗಿಲ್ಲ. ಊರಿನಲ್ಲೆ ವಾಸಿಸುತ್ತ, ಹೊಲಗದ್ದೆಗಳಲ್ಲಿ ಕೂಲಿಕಾರರಾಗಿ ದುಡಿಯುವವರು ಮಾತ್ರ ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಹೆಚ್ಚೆಂದರೆ ಹತ್ತನೆ ತರಗತಿಗೇ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಕೊನೆಗೊಳ್ಳುತ್ತದೆ. ಅನಂತರ ಬಹುಪಾಲು ಮದುವೆ ಮಾಡುವುದರಿಂದ ಹೆಣ್ಣುಮಕಕ್ಳು ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅನೇಕರು ತಮಗೆ ಓದಲು ಅಪಾರ ಆಸಕ್ತಿ ಇರುವ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಮನೆಯ ಪರಿಸ್ಥಿತಿ, ಬಡತನದ ಹಿನ್ನೆಲೆ ಅವರನ್ನು ಕಂಗೆಡಿಸಿದೆ. ಸದಾ ಇಂದು ಮತ್ತು ನಾಳೆಯ ಒಂದು ಒಂದು ಹೊತ್ತಿನ ಅವರನ್ನು ಕಂಗೆಡಿಸಿದೆ. ಸದಾ ಇಂದು ಮತ್ತು ನಾಳೆಯ ಒಂದು ಹೊತ್ತಿನ ಊಟಕ್ಕಾಗಿಯೂ ಯೋಚಿಸಬೇಕಾದ ಈ ಜನಾಂಗವು ತಮ್ಮ ಮಕ್ಕಳನ್ನು ದುಡಿಮೆಗೆ ಕಳಿಸಲು ಬಯಸುತ್ತಾರೆ. ತಮ್ಮ ದುಡಿಮೆ ಜೊತೆ, ತಮ್ಮ ಮಕ್ಕಳ ಶ್ರಮದಿಂದ ಸಿಗುವ ಅಷ್ಟಿಷ್ಟು ಬಿಡಿಗಾಸು ಸಹ ತಮ್ಮ ಜೀವನವನ್ನು ಸ್ವಲ್ಪಮಟ್ಟಿಗಾದರೂ ಸುಧಾರಿಸಲು ನೆರವಾಗಬಹುದು ಎಂಬ ದೂರದ ಕನಸು ಈ ಸಮುದಾಯದ ಮಹಿಳೆ ಮತ್ತು ಪುರುಷರದಾಗಿದೆ. ಊರನಲ್ಲೆ ಇರುವ ಹತ್ತನೆ ತರಗತಿ-ಯರವರೆಗೆ ಓದಿದ ಕೆಲವು ಮಹಿಳೆಯರು ಅಂಗನವಾಡಿ ಕಾರ್ಯಕರ್ತೆಯರಾಗಿ ದುಡಿಯುತ್ತಿದ್ದಾರೆ. ಕೆಲವು ಸ್ತ್ರೀಶಕ್ತಿ ಸಂಘದ ಸದಸ್ಯರಾಗಿದ್ದಾರೆ. ಆದರೂ ಅವುಗಳ ಬಗೆಗೂ ಹೆಚ್ಚಿನ ತಿಳುವಳಿಕೆ ಇಲ್ಲವಾಗಿದೆ.

ಇಡೀ ಜನಸಮುದಾಯಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಏಳಿಗಾಗಿ ಇರುವ ಸಮಾಜ ಕಲ್ಯಾಣ ಇಲಾಖೆಯ ಬಗೆಗೆ, ಸರ್ಕಾರದ ಸವಲತ್ತುಗಳ ಕುರಿತು, ಶೈಕ್ಷಣಿಕ ಮತ್ತು ಔದ್ಯೋಗಿಕ ಸೌಕರ್ಯಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಅಸ್ಪೃಶ್ಯತೆ, ಕೀಳರಿಮೆ, ಅನಕ್ಷರತೆ, ಕಡುಬಡತನ, ಅರಿವಿನ ಕೊರತೆ, ತಮ್ಮ ಸ್ಥಿತಿಗತಿಯ ಬಗೆಗೆ ವಿಧಿ ಮತ್ತು ಹಣೆಬರಹದ ನಂಬಿಕೆ ಈ ಮುಂತಾದವು ಅವರನ್ನು ಹೊಸಬದುಕಿಗೆ ತೆರೆದುಕೊಳ್ಳದಂತೆ ಮಾಡಿವೆ.

ರಾಜಕಾರಣ

ಈ ಜನಾಂಗದವರಿಗೆ ರಾಜಕಾರಣ ಹಾಗೂ ಅದರಿಂದ ಉಂಟಾಗುವ ಬದಲಾವಣೆಗಳ ಬಗ್ಗೆ ತಿಳುವಳಿಕೆ ಇಲ್ಲ. ಮಹಿಳೆರಿಗಂತು ಈ ವಿಷಯದ ಜ್ಞಾನ ಇಲ್ಲವೇ ಇಲ್ಲ. ಆದರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾಕಾರಗೊಳಿಸಲು ರೂಪುಗೊಂಡ ಗ್ರಾಮಾಡಳಿತ ವ್ಯವಸ್ಥೆ ಇವರನ್ನು ರಾಜಕೀಯವಾಗಿ ತೊಡಗಿಸಿಕೊಳ್ಳಲು ಕಾರಣವಾಗಿದೆ. ಕಡ್ಡಾಯವಾಗಿ ಮೀಸಲಾತಿಯನ್ನು ಸ್ಥಳೀಯ ಆಡಳಿತದಲ್ಲಿ ಪರಿಪಾಲಿಸುತ್ತಿರುವುದರಿಂದ ಈ ಜನಾಂಗದ ಪುರುಷರಂತೆ ಕೆಲವು ಮಹಿಳೆರಯರಿಗೂ ಗ್ರಾಮ ಪಂಚಾಯಿತಿ ಸದಸ್ಯರಾಗಲು ಅವಕಾಶ ದೊರೆತಿದೆ. ಅವರಲ್ಲಿ ಅಯ್ಯಮ್ಮ (ಓದಿಲ್ಲ), ಅಂಕಮ್ಮ (ನಾಲ್ಕನೆ ತರಗತಿ), ಚೆಂಡಿ(ಓದಿಲ್ಲ), ರುಕ್ಮಿಣಿ(ಏಳನೇತರಗತಿ) ಇವರುಗಳು ಗ್ರಾಮಪಂಚಾಯಿತಿ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಆದರೆ ಆಡಳಿತದ ಮಹತ್ವ, ಗುರಿ, ಜವಾಬ್ದಾರಿ, ಅನುಕೂಲಗಳು ಹಾಗೂಕಾರ್ಯರೂಪದ ಬಗೆಗೆ ತಿಳುವಳಿಕೆಯ ಕೊರತೆ ಇದೆ. ಹೀಗಾಗಿ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲೂ ಇವರಿಗೆ ಸಾಧ್ಯವಾಗಿಲ್ಲ.

ಗ್ರಾಮಾಡಳಿತ ಚುನಾವಣೆಯ ಮೀಸಲಾತಿ ವಿಭಾಗದಿಂದ ಈ ಜನಾಂಗದ ಮಹಿಳೆ ಆಯ್ಕೆಯಾದರೂ ಬಹುಪಾಲು ಪುರುಷರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅಲ್ಲದೆ ಗ್ರಾಮ ಪಂಚಾಯಿತಿಯ ಸಭೆ(ಮೀಟಿಂಗ್) ಗಳಲ್ಲಿ ಮಹಿಳಾ ಸದಸ್ಯರನ್ನು, ಈ ಜನಾಂಗದಿಂದ ಆಯ್ಕೆಗೊಂಡ ಪುರುಷರನ್ನೂ ಮೇಲ್ಜಾತಿಯ ಗ್ರಾಮಪಂಚಾಯಿತಿ ಸದಸ್ಯರು ಕಡೆಗಣಿಸಿ ತಾವೇ ಪ್ರಮುಖ ನಿಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಿರ್ಣಯಕ್ಕೆ ಸಹಿಹಾಕುವ ಅಥವಾ ಹೆಬ್ಬೆಟ್ಟು ಒತ್ತುವುದಷ್ಟೇ ಇವರ ಕಾಯಕವಾಗಿರುತ್ತದೆ. ಕಪ್ಪೆಹೊಲಯ ಪುರುಷರಲ್ಲಿ ಮುತ್ತಮಾದನ್ ಎಂಬುವವರು ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದಾಗ ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಕಂಡುಬರುತ್ತದೆ.

ಸ್ವಲ್ಪವಾದರೂ ಗ್ರಾಮಾಭಿವೃದ್ಧೀ, ಸಾಮಾಜಿಕ ನ್ಯಾಯ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಳಜಿಗಳು ಸ್ವಲ್ಪ ಓದಿದ ಮಹಿಳಾ ಸದಸ್ಯರಿಗಿದ್ದರೂ ನಿರ್ಧರಿಸುವ ನಿರ್ಣಾಯಕ ವರ್ಗ ಬೇರೆಯವರೇ ಆದ್ದರಿಂದ ಚುನಾಯಿತರಾಗಿಯೂ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಇವರು ವಿಫಲರಾಗುತ್ತಿದ್ದಾರೆ.

ಉಪಸಂಹಾರ

ಅಸ್ಪೃಶ್ಯತೆ, ಬಡತನ, ಅನಕ್ಷರತೆ, ಮೌಡ್ಯದ ಜೊತೆಗೆ ಪುರುಷಪ್ರಧಾನ ವ್ಯವಸ್ಥೆಯ ಸಂಪರ್ಕ, ಹುಸಿ, ಆಧುನಿಕತೆ, ಜಾಗತೀಕರಣ ಇವುಗಳ ಪರಿಧಿಯೊಳಗೆ ಸಿಕ್ಕಿಕೊಂಡು ಈ ಇನ್ನಷ್ಟು ಗೋಜಲು ಗೊಂದಲಗಳ ನಡುವೆ ಭದ್ರತೆಯಿಲ್ಲದೆ ಬದುಕುತ್ತಿರುವ ಜನಸಮೂಹ-ವಿದು. ಹಿಂದಿನಿಂದ ತಾವು ಕಾಪಿಟ್ಟುಕೊಂಡು ಬಂದ ಮಹಿಳಾ ಪ್ರಾಧಾನ್ಯದ ಎಲ್ಲ ಬಗೆಯ ಮೂಲ ಸಂಸ್ಕೃತಿಗಳು ಇಂದು ನಿಧಾನಕ್ಕೆ ಪಲ್ಲಟಗೊಳ್ಳುತ್ತಿವೆ. ಹೀಗಾಗಿ ಪುರುಷ ಇಂದು ಮಂದಗತಿಯಲ್ಲಿ ಈ ಸಮೂಹದ ಕುಟುಂಬದೊಳಗೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಹೆಣಗುತ್ತಿದ್ದಾನೆ. ಈ ಕಾರಣಕ್ಕೆ ಈಗಾಗಲೇ ಪ್ರಸ್ತಾಪಿಸಿದಂತೆ ಕುಟುಂಬದೊಳಗೂ ಈ ಸಮುದಾಯದ ಸಾಮಾಜಿಕ ಪರಿಸರದಲ್ಲೂ ತಲ್ಲಣಗಳು, ಗೊಂದಲಗಳು ಆರಂಭವಾಗಿವೆ. ಕುಡಿತದ ದೌರ್ಬಲ್ಯಕ್ಕೆ ಬಲಿಯಾದ ಪುರುಷನ ಕುಟುಂಬದಲ್ಲಂತು ಮಹಿಳೆ ಹಿಂಸೆಗೆ ಒಳಗಾಗುತ್ತಾರೆ. ಮಹಿಳೆ ಪ್ರತಿಭಟಿಸದೆ ಇರುವಲ್ಲಿ ಇಡೀ ಕುಟುಂಬ ಅನಾಭಿವೃದ್ಧಿಯತ್ತ ಸಾಗುತ್ತಿದೆ. ಇದರ ಜೊತೆಗೇ ಈಗ ರಸ್ತೆ ಕೆಲಸಕ್ಕಾಗಿ ಬಂದಿರುವ ಆಧುನಿಕವಾದ ದೊಡ್ಡದೊಡ್ಡ ಯಂತ್ರಗಳು ಇವರ ಕೂಲಿಗಳನ್ನು ಕಿತ್ತುಕೊಂಡಿವೆ. ಹೀಗಾಗಿ ಬದಲಾದ ಕಾಲದಲ್ಲಿ ಮತ್ತಷ್ಟು ಆರ್ಥಿಕ ತೊಂದರೆಗಳಲ್ಲಿ ಇವರು ಸಿಲುಕಿದ್ದಾರೆ.

ಮಹಿಳಾ ಸಬಲೀಕರಣ, ಸ್ವಾಭಿಮಾನ, ಅಕ್ಷರದ ಅರಿವು, ಆರ್ಥಿಕ ಸುಧಾರಣೆ, ಬದುಕಿನ ಭದ್ರತೆ, ಸ್ವ ಉದ್ಯೋಗ, ಸಂಘಟನೆ, ಗೃಹ ಕೈಗಾರಿಕೆ, ಮಾತೃ ಪ್ರಧಾನ ಸಂಸ್ಕೃತಿಯ ಮೌಲ್ಯಗಳ ಕುರಿತು ಅವರಲ್ಲಿ ಅರಿವು ಮೂಡಿಸಿ ಪ್ರೋತ್ಸಾಹಿಸುವ ಪ್ರಾಮಾಣಿಕ ಪ್ರಯತ್ನಗಳು ಸರ್ಕಾರ, ಅದರ ಸಂಘಸಂಸ್ಥೆಗಳು, ಅಕಾಡೆಮಿಗಳಿಂದ ನಡೆದರೆ ನಿಜಕ್ಕೂ ಈ ಕಂಗೆಟ್ಟ ಸಮುದಾಯವು ನಿಧಾನಕ್ಕಾಗಿಯಾದರು ಹೊಸದಿಕ್ಕಿಗೆನೆಡೆಗೆ ಸಾಗುವುದರಲ್ಲಿ ಅನುಮಾನವಿಲ್ಲ. ಇಂತಹ ಅಭಿವೃದ್ಧೀ ಕೆಲಸಗಳು ಇನ್ನಾದರೂ ಸಮರೋಪಾದಿಯಲ್ಲಿ ನಡೆಯಬೇಕಿವೆ.

 

ಮಾಹಿತಿಗಳು

೧.   ಕಪ್ಪೆ ಹೊಲೆಯರ ಸಂಸ್ಕೃತಿ, ೧೯೯೩
(ಉಪಸಂಸ್ಕೃತಿ ಅಧ್ಯಯನ)
ಲೇಖಕ: ಕೇಶವ ಪ್ರಸಾದ್
ಪ್ರಕಟಣೆ: ರಿಜಿಸ್ಟ್ರಾರ‍್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

೨.   ತಂಗಮ್ಮ, ೭೫ ವರ್ಷ
ಪಳನಿಮೇಡು

೩.    ಚಿನ್ನಮ್ಮ, ೬೮ ವರ್ಷ
ಪಳನಿಮೇಡು

೪.   ಸೀರಿ ರಂಗಮ್ಮ, ೭೦ ವರ್ಷ
ಗೋಪಿನಾಥಶೆಟ್ಟಿಯೂರು

೫.   ರಾಧಾ. ೫೦ ವರ್ಷ
ಗೋಪಿನಾಥಶೆಟ್ಟಿಯೂರು

೬.   ಚೆಂಡಿ, ೭೦ ವರ್ಷ
ಗೆಜ್ಜಲನಾಥ

೭.   ಮಾದಮ್ಮ, ೭೫ ವರ್ಷ
ಗೆಜ್ಜಲನಾಥ

೮.   ಮೆಣಸಿಯಮ್ಮ, ೭೫ವರ್ಷ
ಗೆಜ್ಜಲನಾಥ

೯.    ಪೆರಿಯಾಂಡ್ಸಿ, ೭೦ ವರ್ಷ
ಪಳನಿಮೇಡು

೧೦.         ಭಗವತಿ, ೪೦ ವರ್ಷ
ಪಳನಿಮೇಡು

೧೧.         ವಿ.ಮುತ್ತುಮಾದನ್, ೬೫ ವರ್ಷ
ಪಳನಿಮೇಡು

೧೨. ಕಂದಸ್ವಾಮಿ, ೬೦ ವರ್ಷ
ಪಳನಿಮೇಡು

೧೩. ಚಿನ್ನತಂಬಿ, ೫೦ ವರ್ಷ
ಗೆಜ್ಜಲನಾಥ

ವಿಶೇಷ ಕೃತಜ್ಞತೆಗಳು
ಎಂ.ಚಂದ್ರಶೇಖರ ತುಬಾರ, ಉಪನ್ಯಾಸಕರು, ಚಾಮರಾಜನಗರ, ಸುರೇಶ್‌. ಮಾ. ಪತ್ರಕರ್ತರು, ಕೊಳ್ಳೇಗಾಲ