ಮದುವೆಯ ದಿಬ್ಬಣ ಹಿಂತಿರುಗಿ ಬರುತ್ತಿತ್ತು. ವರನ ಹೆಸರು ನೀರೂ. ಲಹರ್‌ತಾರಾ ಎಂಬ ಕುಂಟೆಯ ಬಳಿ ಬಂದಾಗ ಆತನ ಕಣ್ಣಿಗೆ ಒಂದು ಮಗು ಕಾಣಿಸಿತು. ಓಡಿ ಹೋಗಿ ನೋಡಿದ. ಜೊಂಡಿನ ಮಧ್ಯದಲ್ಲಿ ಚಿಂದಿಯಲ್ಲಿ ಸುತ್ತಿಟ್ಟ ಮುದ್ದು ಹಸುಳೆ ನಿದ್ರಿಸುತ್ತಿದೆ. ಅದನ್ನು ಎತ್ತಿ ತಂದು ಎಲ್ಲರಿಗೂ ತೋರಿಸಿದ. ದಯಾಳುವಾದ ಅವನ ಅದನ್ನು ಸಾಕುವುದಕ್ಕೆ ತೊಡಗಿದ. ಅವನ ಹೆಂಡತಿ ನೀಮಾ. ಗಂಡನ ಇಚ್ಛೆಯಂತೆ ಆ ಮಗುವನ್ನು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವೆಂದೇ ಭಾವಿಸಿ ಸಾಕಿದಳು. ಆ ಮಗುವಿಗೆ ಕಬೀರ ಎಂದು ಹೆಸರಿಟ್ಟರು. ತಂದೆ ತಾಯಿ ಇವರೇ. ಇವರು ಮುಸ್ಲಿಮರು. ನೈಯ್ಗೆ ಇವರ ಕುಲ ಕಸುಬು. ಈ ಕಸುಬನ್ನೇ ಕಬೀರನು ಕಲಿತನು. ಕಬೀರದಾಸ ಎಂದು ಪ್ರಸಿದ್ಧನಾದನು.

ಇದು ಕಬೀರನ ವಿಷಯ ಒಂದು ಕಥೆ. ಇದರಲ್ಲಿ ನಂಬಲಾರದ ಅಂಶವೇನೂ ಇಲ್ಲ. ಆದರೆ ಇದು ಸತ್ಯ ಎನ್ನುವಷ್ಟು ಆದಾರವಿಲ್ಲ. ಯಾರೂ ಹುಟ್ಟುವಾಗಲೇ ದೊಡ್ಡವಾರಾಗಿರುವುದಿಲ್ಲ. ದೊಡ್ಡವರಾಗಿ ಅವರು ಲೋಕಪ್ರಸಿದ್ಧಿಯನ್ನು ಪಡೆದ ಮೇಲೆ ಶ್ರದ್ಧಾಳುಗಳು ಸವಕಲು ಸಂಗತಿಗೆ ಮೆರಗು ಕೊಟ್ಟು ಹೇಳಲು ಹೊರಡುತ್ತಾರೆ. ಅನೇಕ ಚಮತ್ಕಾರಗಳು ಸೇರಿ ಹೋಗುತ್ತವೆ. ಕಬೀರದಾಸರ ಹುಟ್ಟು, ಬೆಳವಣಿಗೆ ಹಾಗೂ ಜೀವನದ ಬಗ್ಗೆ ದಂತಕಥೆಹಗಳೇ ಆಧಾರ.

ಇವರು ಹುಟ್ಟಿದ್ದು ೧೩೯೮ನೆಯ ಇಸವಿ ಅಥವಾ ವಿಕ್ರಮ ಸಂವತ್ಸರ ೧೪೫೬.

ಕಬೀರನ ಬಾಲ್ಯದ ಬಗ್ಗೆ ಏನೊಂದೂ ತಿಳಿಯದು. ಆದರೆ ಅವನು ಅಕ್ಷರಾಭ್ಯಾಸವನ್ನು ಮಾಡಿದವನಲ್ಲ. ಓದು ಬರಹ ಬಾರದಿದ್ದರೂ ಬುದ್ಧಿ ಚುರುಕಾಗಿತ್ತು. ಪ್ರತಿಭೆ ಹಿರಿಯದಾಗಿತ್ತು. ಸಾರವಾದುದನ್ನು ಗ್ರಹಿಸಿ, ಅಸಾರವಾದುದನ್ನು ಬಿಟ್ಟು ಬಿಡುವ ವಿವೇಕ ಬೆಳೆದು ಬಂದಿತು. ಕಾಶಿಯಲ್ಲಿ ಸತ್ಸಂಗಕ್ಕೇನೂ ಕೊರತೆ ಇರಲಿಲ್ಲ. ಆ ಸತ್ಸಂಗವೇ ಕಬೀರನ ಕಲಿಕೆಯ ಶಾಲೆಯಾಯಿತು.

ಗುರುಗಳು

ಆಗ ಪ್ರಸಿದ್ಧರಾಗಿದ್ದ ಮಹಾತ್ರು ರಾಮಾನಂದರು. ಅವರು ಭಕ್ತಿಯ ಹೊನಲನ್ನೇ ಹರಿಸಿದ್ದರು. ಗಂಗೆಯ ಪಾವನ ದಡದಲ್ಲಿ-ಭಕ್ತಿಗಂಗೆಯ್ನನು ಹರಿಸಿ ಪಾವನ ತಮವನ್ನಾಗಿಸಿದ್ದರು. ಅವರ ಶಿಷ್ಯರಲ್ಲಿ ಎಲ್ಲ ಜಾತಿಯವರೂ ಇದ್ದರು. ಎಲ್ಲರೂ ಭಕ್ತಿಯ ನೆರಳಲ್ಲಿ ಒಂದೇ ಎಂಬ ಉದಾತ್ತ ನಿಲುವ ಅವರದಾಗಿತ್ತು.

ರಾಮಾನಂದರ ಪ್ರಭಾವವನ್ನು ಕುರಿತು ಅನೇಕ ಘಟನೆಗಳನ್ನು ಹೇಳುತ್ತಾರೆ. ತೈಮೂರಲಂಗನು ದಾಳಿ ಮಾಡಿ ನರಹತ್ಯೆ ನಡೆಸಿದ್ದ. ಲಕ್ನೋದಲ್ಲಿ ಹಿಂದುಗಳ ಮೇಲೆ ಮುಸ್ಲಿಂರ ಬಲವಾದ ಆಕ್ರಮಣ ನಡೆದಿತ್ತು. ಇದರಿಂದ ಕಂಗೆಟ್ಟ ಜನ ಕಾಶಿಗೆ ಓಡಿ ಬಂದರು. ಮಹಾತ್ಮ ರಾಮಾನಂದರ ಮೊರೆ ಹೊಕ್ಕರು. ’ಧೈರ್ಯವಾಗಿರಿ. ಕಷ್ಟ ಕಾಲ ಬಂದಿದೆ ನಿಜ. ಅದು ದೂರವಗುವುದರಲ್ಲಿ ಸಂದೇಹವಿಲ್ಲ” ಎಂದು ಅವರು ಉಪದೇಶಿಸಿದರು.

ಅವರ ತಪಸ್ಸಿನ ಪ್ರಭಾವವಂತೆ. ಯಾವ ಮುಸಿಂ ಮುಲ್ಲಾ ಪ್ರಯತ್ನಪಟ್ಟರೂ ನಮಾಜಿನ ಹೊತ್ತಿಗೆ ಸ್ವರವೇ ಹೊರಡುತ್ತಿರಲಿಲ್ಲ. ಇಬನ್ನೂರ್ ಮತ್ತು ಮಿರ್ ತಕೀ ಎಂಬುವರು, “ಇದು ಯಾರೋ ಮಹಾತ್ಮರ ಪ್ರಬಾವದಿಂದಾಗಿದೆ. ಇಲ್ಲವಾದಲ್ಲಿ ಇಡೀ ದೇಶದಲ್ಲಿ, ಎಲ್ಲೆಲ್ಲೂ ನಮಾಜ್ ಹೊತ್ತಿನಲ್ಲಿ ಮಾತ್ರ ಹೀಗಾಗಲು ಕಾರಣವಿಲ್ಲ” ಎಂದು ನಿರ್ಣಯಿಸಿ ಕೊನೆಗೆ ರಾಮಾನಂದರ ಆಶ್ರಮಕ್ಕೆ ಬಂದರು. ಮುಸ್ಲಿಮರಿಗೆ ಸ್ವಾಮಿಗಳು ಉಪದೇಶಿಸಿದರು.

“ದೇವರು ಹಿಂದುಗಳಿಗೂ ಒಬ್ಬನೇ, ಮುಸ್ಲಿಮರಿಗೂ ಒಬ್ಬನೇ. ಹೀಗಿರುವಾಗ ಪರಸ್ಪರ ದ್ವೇಷವೇಕೆ? ನಿಮ್ಮ ನಮ್ಮ ಪೂಜೆಯ ವಿಧಾನ ಬೇರೆ ಬೇರೆಯದಿರಬಹುದು. ಅದಕ್ಕೆ ಒಬ್ಬರನ್ನೊಬ್ಬರು ಕೊಲ್ಲುವುದೇ? ಹಿಂಸೆ ಖಂಡಿತ ಕೂಡದು. ಪರಸ್ಪರ ಸ್ನೇಹದಿಂದ ಇರುವುದನ್ನು ಕಲಿಯಿರಿ. ಅಹಿಂಸೆ, ದಯೆ, ಸ್ನೇಹ ಇದು ಪರಮಾತ್ಮನತ್ತ ಕರೆದೊಯ್ಯುವ ಮಾರ್ಗ.”

ಈ ಉಪದೇಶವು ಮುಸ್ಲಿಮರ ಮೇಲೆ ಪರಿಣಾಮಕಾರಿಯಾಯಿತು. ಆಗ ಒಂದು ಒಪ್ಪಂದವೂ ನಡೆಯಿತು. ಅದರ ಪ್ರತಿಯನ್ನು ಹಿರಿಯ ಮುಲ್ಲಾಗಳ ಪ್ರತಿನಿಧಿಗಳು ಬಾದಶಾಹ ಗಯಾಸುದ್ದೀನ್ ತುಘಲಖ್‌ಗೆ ತಲುಪಿಸಿದರು ಮತ್ತು ಈ ಒಪ್ಪಂದದ ನಂತರ “ಮಹಾತ್ಮಾರಾಮಾನಂದರು ಶಂಖವನ್ನು ಊದಿದರು; ನಮಾಜು ಮಾಡಲು ನಮಗಾಗುತ್ತಿದ್ ತೊಂದರೆ ದುರವಾಯಿತು” ಎಂದೂ ತಿಳಿಸಿದರು. ಬಾದಶಾಹನು ತನಿಖೆ ನಡೆಸಿ ವಿವರಗಳು ಸರಿ ಎಂದು ರುಜುವಾತಾಗಲು ರಾಜಾಜ್ಞೆಯನ್ನು ಹೊರಡಿಸಿದ. ಅದು ಆ ಒಪ್ಪಂದವನ್ನು ಒಳಗೊಂಡಿತ್ತು. ಅದರ ಪ್ರಕಾರ (೧) ಹಿಂದುಗಳ ಮೇಲೆ ಹೇರಿದ್ದ ಜಜಿಯಾ ತೆರಿಗೆ ಹೋಗಬೇಕು. (೨) ಹಿಂದುಗಳು ಯಾವ ಅಡ್ಡಿ ಆತಂಕಗಳೂ ಇಲ್ಲದೆ ದೇವಸ್ಥಾನಗಳನ್ನು ಕಟ್ಟಿಕೊಳ್ಳಬಹುದು ಮತ್ತು ಪೂಜಾ ಪದ್ಧತಿಯನ್ನು ಅನುಸರಿಸಬಹುದು (೩) ಯಾರ ಮೇಲೂ ಒತ್ತಡ ತಂದು ಇಲ್ಲವೇ ಬಲಾತ್ಕಾರ ಮಾಡಿ ಮತಾಂತರಗೊಳಿಸಬಾರದು. (೪) ಗೋಹತ್ಯೆ ನಿಲ್ಲಬೇಕು. (೫) ರಾಮನಾಮ ಪ್ರಚಾರಕ್ಕೆ ಅಡ್ಡಿ ಇರಕೂಡದು. (೬) ಒಂದು ಮತದವರು ಇನ್ನೊಂದು ಮತದವರ ಮನಸ್ಸನ್ನು ನೋಯಿಸುವಂತಹದು ಏನನ್ನೂ ಮಾಡಬಾರದು. (೭) ಸ್ತ್ರೀಯರ ಮಾನರಕ್ಷಣೆಯ ಹೊಣೆಗಾರಿಕೆ ಎರಡೂ ಮತದವರಿಗೆ ಸೇರಿದ್ದು. (೮) ಧರ್ಮಗುರುಗಳು ಎಲ್ಲರಿಗೂ ತಮ್ಮ ತಮ್ಮ ಧರ್ಮದಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳುವಂತೆ ಉಪದೇಶ ಮಾಡಬೇಕು ಹಾಗೂ ವ್ಯಕ್ತಿಯ ಶೀಲಸಂಪನ್ನತೆಯು ಹೆಚ್ಚುವಂತೆ ನೋಡಿಕೊಳ್ಳಬೇಕು- ಮೊದಲಾಗಿ ತೀರ್ಮಾನವಾಯಿತು. ಈ ಒಪ್ಪಂದವು ರಾಜಮುದ್ರೆ ಬಿದ್ದ ಕಾರಣ ಶಾಸನವಾಯಿತು. ಡಂಗುರ ಹೊಡೆದು ಇದನ್ನು ಪ್ರಚುರಪಡಿಸಲಾಯಿತು.

ಇದರಿಂದ ಮಹಾತ್ಮಾ ರಾಮಾನಂದರ ಕೀರ್ತಿ ಹರಡಿತು. ಹಿಂದುಗಳು ಮಾತ್ರವಲ್ಲ, ಮುಸ್ಲಿಮರೂ ಸಹ ಅವರ ಶಿಷ್ಯರಾಗಲು ಬರತೊಡಗಿದರು. ಆದರೆ ರಾಮಾನಂದರು ಧರ್ಮೋಪದೇಶ ಮಾಡುವಾಗ ಮತಾಂತರಕ್ಕೆ ಅವಕಾಶ ಕೊಡುತ್ತಿರಲಿಲ್ಲ.

ಇಂಥ ಮಹಾತ್ಮರನ್ನು ತನ್ನ ಗುರುವಾಗಿ ಪಡೆಯಬೇಕೆಂಬ ಹಿರಿಯಾಸೆ ಬಾಲಕ ಕಬೀರನದಾಗಿತ್ತು. ಅವನು ಹೋಗಿ ಕೇಳಿಕೊಂಡ. ರಾಮಾನಂದರು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಒಪ್ಪಲಿಲ್ಲ.

ಆದರೆ ಕಬೀರ ಹಟವಾದಿ. ನಿರಾಸೆ ಪಡಲಿಲ್ಲ. ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳಲು ಒಂದು ಹಂಚಿಕೆಯನ್ನು ಹೂಡಿದ.

ಗುರೂಪದೇಶ

ಬೆಳಗಿನ ಝಾವ. ರಾಮಾನಂದರು ಸ್ನಾನಕ್ಕೆ ಹೋಗುತ್ತಿದ್ದರಷ್ಟೇ. ಕಬೀರ ಅವರ ದಾರಿ ಯಾವುದೆಂದು ಅರಿತುಕೊಂಡ. ಒಂದು ದಇನ ಪಂಚಗಂಗಾ ಘಾಟಿನ ಆ ದಾರಿಯಲ್ಲಿ, ಗಂಗೆಯ ದಡದ ಮೇಲೆ, ಮೆಟ್ಟಿಲಿನ ಮೇಲೆ ಮಲಗಿದ. ರಾಮಾನಂದರು ಅದೇ ದಾರಿಯಲ್ಲಿ ಬಂದರು. ಕಾಲಿಟ್ಟರು – ನೇರವಾಗಿ ಕಬೀರನ ಎದೆಯ ಮೇಲೆ ಏನೋ ತುಳಿದಂತಾಯಿತು. ’ರಮ ರಾಮ’ ಎಂದು ಪಶ್ಚಾತ್ತಾಪದ ದನಿ ಬಯಿಯಿಂದ ಹೊರಬಿತ್ತು. ಕಾಲನ್ನು ಹಿಂದಕ್ಕೆ ತೆಗೆದುಕೊಂಡರು.

ಕಬೀರ ಮೇಲೆದ್ದು ನಮಸ್ಕರಿಸಿದ. ತನ್ನ ಹೆಸರನ್ನು ಹೇಳಿಕೊಂಡ. ತನ್ನಹಂಚಿಕೆಯನ್ನೂ ತಿಳಿಸಿದ. ಗುರೂಪದೇಶವಾಯಿತೆಂಬ ಸಂತೋಷದ ಭರದಲ್ಲಿ ಭಕ್ತಭಾವದಿಂದ ನಮಸ್ಕರಿಸಿದ. ಗುರುಗಳು ಅವಾಕ್ಕಾದರು.

ಕಬೀರನು ಅಂದಿನಿಂದ ಕಬೀರದಾಸನೆಂದು ಪ್ರಸಿದ್ಧನಾದ. ರಾಮಾನಂದರೇ ತನ್ನ ಗುರುಗಳೆಂದೂ ಅವರಿಂದ ರಾಮನಾಮ ಉಪದೇಶವಾಯಿತೆಂದೂ ಹಿರಿಹಿರಿ ಹಿಗ್ಗಿ, ಹೆಮ್ಮೆಯಿಂದ ಹೇಳಿಕೊಂಡು ಕುಣಿಯತೊಡಗಿದೆ.

’ಹೀರಾ ಪಾಯೋ ಗಾಂಠಿ ಗಠಿಯಾಯೋ’- ವಜ್ರ ಸಿಕ್ಕಿತು; ಗಂಟು ಕಟ್ಟಿಟ್ಟುಕೊಂಡೆ. ’ಬಾರ್ ಬಾರ್ ವಾಕೋ ಕ್ಯೋಂ ಖೋಲೆ’ – ಪುನಃ ಪುನಃ ಅದನ್ನು ತೆರೆದು ಏಕೆ ನೋಡಲಿ? ’ಮನ ಮಸ್ತ ಹುವಾತೋ ಕ್ಯೋಂ ಡೋಲೆ’ – ಮನಸ್ಸು ಮಸ್ತಿಯಲ್ಲಿರುವಾಗ, ಆನಂದದ ಪಾರಮ್ಯವನ್ನು ಅನುಭವಿಸುತ್ತಿರುವಾಗ ಅಲೆದಾಟವೇಕೆ? ಚಂಚಲತೆ ಏಕೆ?

ಈ ಕಥೆಯನ್ನು ಸತ್ಯ ಸಂಗತಿ ಎಂದಿಟ್ಟುಕೊಂಡರೆ ರಾಮಾನಂದರ ಉಪದೇಶದಿಂದ ಕೃತಕೃತ್ಯತೆಯನ್ನು ಪಡೆದ ಕಬೀರ-ಕಬೀರದಾಸನಾದ. ಜನತೆಗೆ ದಾರಿ ತೋರುವ ಕೈದೀವಿಗೆಯಾದ.

ರಾಮಾನಂದರು ಕಾಲಿಟ್ರು- ನೇರವಾಗಿ ಕಬೀರನ ಎದೆಯ ಮೇಲೆ

ಸಂಸಾರಿ

ಕಬೀರದಾಸರಿಗೆ ಮದುವೆಯಾಗಿತ್ತೆ? ಆಗಿತ್ತು ಅನ್ನುವವರಿದ್ದಾರೆ. ’ಲೋಈ’ ಎಂದು ಸಂಬೋಧಿಸಿ ಹಾಡಿರುವ ಗೀತೆಗಳಲ್ಲಿ ಬರುವ ಲೋಈ ಕಬೀರರ ಹೆಂಡತಿ ಎಂದು ವಾದಿಸುತ್ತಾರೆ. ಕಬೀರರಿಗೆ ಮದುವೆ ಆಗಿರಲಿಲ್ಲ ಎನ್ನುವವರೂ ಇದ್ದಾರೆ. ಸತ್ಯ ಸಂಗತಿ ತಿಳಿಯದು.

ಆದರೆ ಕಬೀರದಾಸರು ಗೃಹಸ್ಥ ಜೀವನವನ್ನು ನಡೆಸುತ್ತಿದ್ದುದು ಸತ್ಯ.

“ಸ್ವಾಮೀ, ಇಷ್ಟು ಕೊಡು ಸಾಕು. ನನ್ನ ಪರಿವಾರದ ಪೋಷಣೆಯಾಗಲಿ. ನಾನೂ ಹಸಿದಿರಬಾರದು; ಮನೆಗೆ ಬಂದ ಸಾಧುಗಳಿಗೆ ಅನ್ನ ನೀಡುವಷ್ಟು ಇರಬೆಕು.” ಇಷ್ಟು ಭಿಕ್ಷೆ ಬೇಡ ಕೂಡದೆಂದು ಹೇಳಿದ್ದಾರೆ. “ಸತ್ತರೂ ಚಿಂತೆ ಇಲ್ಲ. ದೇಹಕ್ಕಾಗಿ ಬೇಡುವುದಿಲ್ಲ. ಅನ್ಯರ ಹಿತಕ್ಕಾಗಿ ಬೇಡುವುದಾದರೆ ನನಗೇನೂ ನಾಚಿಕೆಯಿಲ್ಲ’ ಎಂಬ ಅವರ ಮಾತನ್ನು ಗಮನಿಸಿದಾಗ ಅವರು ಹೇಗೆ ಸಂಸಾರ ಮಾಡಿದರು ಎಂದು ಅರ್ಥವಾಗುತ್ತದೆ.

ಕಬೀರದಾಸರ ಮಗ ಕಮಾಲ್, ಮಗಳು ಕಮಾಲೀ ಎಂದು ಕೆಲವರು ಹೇಳುತ್ತಾರೆ. ಈ ಕಮಾಲನೂ ಸಹ ಬಹು ಪ್ರಸಿದ್ಧಿಯನ್ನು ಪಡೆದ ’ಸಾಧು’ವಾಗಿದ್ದ. ಕಮಾಲಿಯ ಹೆಸರನ್ನು ಹೇಳುವ ಕಬೀರದಾಸರ ಭಜನೆಗಳೂ ಇವೆ.

ಕೊನೆಯುಸಿರು

ಕಬೀರದಾಸರು ಮರಣ ಕಾಲದಲ್ಲಿ ಕಾಶಿಯನ್ನು ಬಿಟ್ಟು ’ಮಗಹರ’ಕ್ಕೆ ಹೋದರು ಎನ್ನುವುದು ಬಹುಜನರ ನಂಬಿಕೆ. ಕಬೀರದಾಸರ ನಿಷ್ಠುರವಾದ ವಾದಸರಣಿಯಿಂದ ಅಸೂಯಾಪರರಾದವರು ಕಾಶಿಯನ್ನು ಬಿಟ್ಟು ಓಡಿಹೋಗುವವರೆಗೂ ಸತಾಯಿಸಿದರೆಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಕಬೀರದಾಸರೇ ಜನರ ಕುರುಡು ನಂಬಿಕೆಯನ್ನು ತೊಡೆದು ಹಾಕಲು ಕಾಶಿಯಿಂದ ಹೊರಟು ಹೋದರೆನ್ನುತ್ತಾರೆ. ಕಾಶಿಯಲ್ಲಿ ಸತ್ತರೆ ಕೈಲಾಸ ಎಂಬುದು ಜನರ ನಂಬಿಕೆ. ಕಾಶಿಯಲ್ಲಿ ಸಾಯುವುದು ಕೈಲಾಸ ಅಥವಾ ಮುಕ್ತಿಗೆ ಹೇಗೆ ಕಾರಣವಾದೀತು? ಭಕ್ತಿಯೇ ಮುಕ್ತಿಗೆ ಸಾಧನೆ. ತನ್ನ ಭಕ್ತಿಯ ಬಲದ ಮೇಲೆ ಈ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳಲು ಕಬೀರರು ಕಾಶಿಯಿಂದ ಮಗಹರಕ್ಕೆ ಹೋದರು ಎಂದು ಕೆಲವರು ಹೇಳುತ್ತಾರೆ. ಈ ಅರ್ಥ ಬರುವ ಒಂದು ಭಜನೆ ಇದೆ.

ಮಗಹರ್‌ನಲ್ಲಿ ಕಬೀರದಾಸರು ತಮ್ಮ ಕೊನೆಯ ಉಸಿರೆಳೆಯುತ್ತಿದ್ದಾಗ ಅವರ ಶಿಷ್ಯರೆಲ್ಲರೂ ನೆರೆದಿದ್ದರು. ಹಿಂದುಗಳು ಮತ್ತು ಮುಸ್ಲಿಮರು ತಮ್ಮ ಗುರುಗಳ ಅಂತ್ಯಕ್ರಿಯೆಯ ಬಗ್ಗೆ ವಿಚಾರ ಮಾಡತೊಡಗಿದರು. ವಿಚಾರವು ವಿವಾದಕ್ಕು ಕಾರಣವಾದೀತೆಂಬ ಪರಿಸ್ಥಿತಿ ಬಂದದೊಗಿತು. ಮತದ ಹೆಸರಿನಲ್ಲಿ ಕಾದಾಡುವುದು  ತಪ್ಪಂದೂ, ಹಿದುಗಳೂ ಮುಸಲ್ಮಾನರೂ ಭೇದ ಭಾವವನ್ನು ಬಿಟ್ಟು, ಸ್ನೇಹದಿಂದ ಬಾಳಬೇಕೆಂದೂ ಕಬೀರರು ಬೋಧಿಸಿದ್ದರು. ಆದರೆ ಕಬೀರರ ಶವವನ್ನು ಸುಡಬೇಕು ಎಂದು ಹಿಂದುಗಳೂ, ಹೂಳಬೇಕೆಂದು ಮುಸ್ಲಿಮರೂ ಆಗ್ರಹಪೂರ್ವಕ ವಾದಿಸತೊಡಗಿದರು. ಕಬೀರರ ಶವದ ಮೇಲಿದ್ದ ಹೊದಿಕೆಯನ್ನು ಸರಿಸಿ ನೋಡಿದಾಗ ಅಲ್ಲಿ ಶವವೇ ಇರಲಿಲ್ಲ! ಕೇವಲ ಹೂವಿನ ರಾಶಿ ಬಿದ್ಧಿತ್ತು!! ಹೂವನ್ನು ಹಿಂದುಗಳು ಸುಡುವಂತಿಲ್ಲ. ಮುಸ್ಲಿಮರು ಹೂಳುವಂತಿಲ್ಲ! ಎಲ್ಲರೂ ಪ್ರಸಾದವೆಂದು ಹೂವನ್ನು ಹಂಚಿಕೊಂಡು ಹೋದರು.

ಹೀಗೆ ಅವರ ಅವಸಾನದ ಕಥೆ. ನಂಬಿದರೆ ನಂಬಬೇಕು, ಇಲ್ಲವೇ ಬಿಡಬೇಕು. ಕಬೀರದಾಸರ ಗೋರಿಯಾಗಲೀ, ಇಂಥ ಕಡೆ ಅಂತ್ಯೇಷ್ಟಿ ಮಾಡಲಾಯಿತೆಂದಾಗಲೀ ಹೇಳುವಂತಿಲ್ಲ. ಆದರೆ ಕಾಶಿಯಲ್ಲಿ ’ಕಬೀರ ಚೌರಾ’ ಎಂಬಲ್ಲಿ ಕಬೀರನ ಗದ್ದಿಗೆ ಇದೆ. ಅಲ್ಲೇ ಗೋರಿ ಇದೆ ಎಂಬುವವರಿದ್ದಾರೆ.

ಇದು ನಡೆದದ್ದು ಯಾವಾಗ? ೧೪೪೭ನೇ ಇಸವಿ ಎಂದು ಕೆಲವರು, ೧೫೧೭ನೇ ಇಸವಿ ಎಂದು ಹಲವು; ೧೪೯೪ನೇ ಇಸವಿ ಎಂದು ಉಳಿದವರು. ಹೀಗೆ ಸತ್ತ ತಿಥಿಯೂ ಖಚಿತವಾಗಿ ಗೊತ್ತಿಲ್ಲ.

ಕಬೀರದಾಸರ ಸಾಹಿತ್ಯ

ಕಬೀರದಾಸರಿಗೆ ಓದುಬರಹ ಬಾರದೆಂದು ಹೇಳಿದೆಯಷ್ಟೇ. ಅಂದ ಮೇಲೆ ಕಬೀರದಾಸರ ರಚನೆ ಎಂದು ಪ್ರಸಿದ್ಧಿಗೆ ಬಂದಿರುವ ಸಾಹಿತ್ಯವನ್ನು ಅವರು ಬರೆದಿಟ್ಟಿಲ್ಲ. ಅದನ್ನು ಬರೆದಿಟ್ಟವರು ಅವರ ಅನುಯಾಯಿಗಳು.

ಅವರು ಆ ಸಾಹಿತ್ಯವನ್ನು ಮೂರು ವರ್ಗಗಳಾಗಿ ವಿಂಗಡಿಸಿದ್ದಾರೆ. ದೋಹಾಗಳು ಅಥವಾ ಸೋರಠಾಗಳು ಎಂಬ ಚಿಕ್ಕ ಛಂದಸ್ಸಿನ ಬರೆದಿರುವ ಸೂಕ್ತಿಗಳನ್ನು ’ಸಾಖೀ’ ಎಂದಿದ್ದಾರೆ. ’ಸಾಖೀ’ ಕಬೀರದಾಸರು ಕಂಡು, ಕೇಳಿ, ಅನುಭವಿಸಿದ್ದರ ಬಗ್ಗೆ ತಮ್ಮ ನಿಲುವೇನೆಂದು ಹೇಳಿರುವ ಸಾಕ್ಷಿಯ ಮಾತುಗಳು.

ಎರಡನೆಯ ವರ್ಗದ ಸಾಹಿತ್ಯಕ್ಕೆ ’ಸಬದ’ ಎಂದು ಹೆಸರಿಸಿದ್ದಾರೆ. ಇವು ಹಾಡುಗಬ್ಬಗಳು. ಆದರೆ ಹಿಂದು, ಮುಸ್ಲಿಮರ ಭೇದವನ್ನೂ ಬಾಹ್ಯಾಡಂಬರವನ್ನು ಖಂಡಿಸುವ ಪದಗಳೇ ಇಲ್ಲಿ ಹೆಚ್ಚು.

ಮೂರನೆಯ ವರ್ಗದ ಸಾಹಿತ್ಯ ’ರಮೈನೀ’. ಇಲ್ಲಿ ಬೆಳಕು ಕಂಡಿದೆ ಕಬೀರನ ಪ್ರತಿಭೆ. ಭಕ್ತನ ಹೃದಯ ಭಾವಪರವಶವಾಗಿ ಹಾಡಿದಂತಿದೆ ಈ ಭಜನೆಗಳು. ಇದನ್ನು ಕೇಳಿ ತಲೆದೂಗದವರಿಲ್ಲ. ಈ ರಮೈನಿಗಳು ಬಹು ಒಳ್ಳೆಯ ಸಾಹಿತ್ಯ ಕೃತಿಗಳು.

ಗುರುಶಿಷ್ಯ

ಕಬೀರದಾಸರ ಉಪದೇಶ ಸರಣಿ ನೇರ ಮತ್ತು ಪ್ರಭಾವ ಪೂರ್ಣ. ಗುರು ದೊಡ್ಡವನು. ಗುರುವಿನ ಗುಲಾಮನಾಗಬೇಕು. ಆದರೆ ಗುರು ಹೇಗಿರಬೇಕು? ಗುರು ಶಿಷ್ಯನ ಮನಸ್ಸಿನ ಸಂಶಯವನ್ನು ತೊಡೆದು ಹಾಕಬೇಕು. ಶಿಷ್ಯನ ಮನಸ್ಸಿನಲ್ಲಿ ಅಹಂಕಾರವಿರದಂತೆ ಮಾಡಬೇಕಾದವನು ಗುರು. ಗುರು ಉಪದೇಶ ಮಾಡಿಯೂ ಸಹ ನಾನು ದೊಡ್ಡವನು ಅಥವಾ ಇದು ನನ್ನದು ಎಂಬ ಭಾವನೆಗಳು ಶಿಷ್ಯನಲ್ಲಿದ್ದರೆ ಅಲ್ಲಿ ಗಉರು ಶಿಷ್ಯರ ಸಂಬಂಧವೆಲ್ಲಿ? ಇಂತಹ ಭಾವನೆಗಳೂ ಜ್ಞಾನವೂ ಒಟ್ಟಿಗೆ ಮನಸ್ಸಿನಲ್ಲಿ ಇರುವ ಹಾಗಿಲ್ಲ. ಒಂದೇ ಒರೆಯಲ್ಲಿ ಎರಡು ಖಡ್ಗಗಳು ಇರಲು ಸಾಧ್ಯವೆ?

ಜ್ಞಾನವಿರುವವನು ನಿಜವಾದ ಗುರು, ಗುರುವಿಗೆ ಜ್ಞಾನವಿಲ್ಲದಿದ್ದರೆ ಕುರುಡು. ಶಿಷ್ಯನಿಗೇನು ಜ್ಞಾನ ಬಂದೀತು? ಅವನು ಮತ್ತಷ್ಟು ಕುರುಡು. ಇಂಥ ಗುರು ಶಿಷ್ಯ ಮಂಡಳಿಯೇ ಅಧಿಕ. ಕುರುಡರು ಕುರುಡರನ್ನು ತಳ್ಳಿಕೊಂಡು ಹೋಗಿ ಹಾಳು ಭಾವಿಗೆ ಬಿದ್ದಂತಿರುತ್ತದೆ ಅವರ ಜೊತೆ.

ನಿಜವಾದ ಗುರು ಭಾಗ್ಯವಶಾತ್ ಸಿಕ್ಕರೆ ಅದೃಷ್ಟವೇ ಅದೃಷ್ಟ ಪ್ರೇಮದ ಒಂದೆರಡು ಮಾತೇ ಸಾಕು. ಶಿಷ್ಯನ ಉದ್ಧಾರವಾದಂತೆ. ಅಂಥ ಗುರುವಿಗೆ ಮೊದಲ ನಮಸ್ಕಾರ.

ಶಿಷ್ಯ ಒಳ್ಳೆಯದನ್ನು ಆರಿಸಿಕೊಳ್ಳುವ ಶಕ್ತಿ ಪಡೆದಿರಬೇಕು. ಕೇರುವ ಮೊರ ಅಸಾರವಾದ ಹೊಟ್ಟು ತೌಡು ಮುಂತಾದವನ್ನು ಹಾರಿಸಿಬಿಡುತ್ತದೆ. ಸಾರವಾದ ಕಾಳನ್ನು ಹಾರಿಸುವುದಿಲ್ಲ. ಅದೇ ವಂದರಿಯಲ್ಲಿ ಕಲ್ಲು ಮಣ್ಣು ಮೇಲೆ ಉಳಿದುಬಿಡುತ್ತದೆ, ಸಾರವಾದುದು ಕೆಳಗೆ ಬೀಳುತ್ತದೆ. ಶಿಷ್ಯನಾದವನು ವಂದರಿಯಾಗಬಾರದು, ಕೇರುವ ಮೊರವಾಗಬೇಕು.

“ಒಮ್ಮೆ ಗುರು ಹೇಳಿದ, ’ಕಬೀರ್, ಯಾವುದಾದರೂ ಒಂದು ಅತಿ ಕೆಟ್ಟ ಪದಾರ್ಥವನ್ನು ತಂದುಕೊಡು’ ಎಂದು. ಆಗ ಹೊರಟೆ. ಪರರ ದೋಷಗಳನ್ನು ನೋಡಿ ನಗುತ್ತಾ ನಗುತ್ತಾ ಕಾಲ ಕಳೆಯುತ್ತಿದ್ದೆ. ನನ್ನಲ್ಲಿಯೇ ಅನಂತ ದೋಷಗಳಿವೆ ಎಂದು ತಿಳಿದಿರಲಿಲ್ಲ. ಗುರುವಿನ ಮಾತಿನಂತೆ ಅತಿ ಕೆಟ್ಟ ವಸ್ತುವನ್ನು ಹುಡುಕಿಕೊಂಡು ಹೊರಟೆ. ಎಲ್ಲೂ ಸಿಕ್ಕಲಿಲ್ಲ. ಒಂದಲ್ಲ ಒಂದು ಒಂದು ಗುಣ ಪ್ರತಿ ವಸ್ತುವಿನಲ್ಲೂ ತೋರುತ್ತದೆ. ಆಗ ನನ್ನಲ್ಲಿಯೇ ಏನೇನು ದೋಷಗಳಿವೆ ನೋಡೋಣ ಎಂದು ಹುಡುಕತೊಡಗಿದೆ. ಅದೆಷ್ಟು ದೋಷ ತುಂಬಿದೆ! ಗುರುವಿಗೆ ನಮಸ್ಕರಿಸಿ ಹೇಳಿದೆ- ’ಗುರುವೇ, ನನಗಿಂತಲೂ ಕೆಟ್ಟವರು ಬೇರೆ ಇಲ್ಲ’ ಎಂದು. ಗುರು ನಕ್ಕು ಪ್ರೇಮದಿಂದ ಹೇಳಿದ- ’ಕಬೀರ, ದುಂಬಿಯನ್ನು ನೋಡಿದ್ದೀಯಾ? ಅದು ಎಲ್ಲೂ ಅವಗುಣವನ್ನು ದೋಷವನ್ನು- ನೋಡುವುದಿಲ್ಲ. ಎಲ್ಲಿದ್ದರೂ ವಧುವನ್ನು ಅಂದರೆ ಗುಣವನ್ನು ಗ್ರಹಿಸಿ ಸಂಗ್ರಹಿಸುತ್ತದೆ. ಅದರಂತೆ ನೀನೂ ಸಹ ಮಾಯೆಯ ವಿಕಾರವಾದ ಈ ಜಡ ಪದಾರ್ಥಗಳಲ್ಲಿ ವಿಕಾರವನ್ನು ನೋಡಿ ಮೋಸ ಹೋಗಬೇಡ. ಎಲ್ಲದರಲ್ಲು ಪರಮಾತ್ಮನಿದ್ದಾನೆ. ಅವನನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೋ.”

“ಕಬೀರ ಹೊರಟ. ನೋಡಿದ ಕಣ್ತೆರೆದು, ಜಗತ್ತಿನಲ್ಲಿ ಎಲ್ಲಿ ನೋಡಿದರೂ ಗಿಡ ಮರ ಬಳ್ಳಿಗಳಿವೆ. ನಾನಾ ಬಗೆಯ ಹೂವುಗಳು. ಅಸಂಖ್ಯಾತವಾಗಿ ಅರಳಿವೆ. ಯಾವ ಹೂವನ್ನೂ ಹಳಿಯಬೇಕಿಲ್ಲ, ಕೀಳಲೂ ಬೇಕಿಲ್ಲ. ತನಗೆ ಬೇಕಾದ ಸುವಾಸನೆಯನ್ನು ಪಡೆಯಲು ಏನೂ ಅಡ್ಡಿಯಾಗಲಿಲ್ಲ” – ಇದು ಶಿಷ್ಯನ ಸ್ವಭಾವಕ್ಕೆ ಕೈಗನ್ನಡಿ.

ಇದರಂತೆ ಸರಳವಾದ ದೃಷ್ಟಾಂತಗಳನ್ನು ಕೊಟ್ಟು ಉಪದೇಶಿಸುವುದು ಕಬೀರದಾಸರ ಹಿರಿಮೆ.

ಯೋಗ್ಯತೆಆಶೆ

ಮಾನವನ ಯೋಗ್ಯತೆಗೆ ಒಂದು ಮಿತಿ ಇದೆ. ಆದರೆ ಆಸೆಗೆ? ಆಸೆಗೆ ಮಿತಿ ಇಲ್ಲ.

ಒಂದು ಇರುವೆ ಹೋಗುತ್ತಿತ್ತು. ಬಾಯಲ್ಲಿ ಒಂದು ಅಕ್ಕಿಯ ನುಚ್ಚಿತ್ತು. ದಾರಿಯಲ್ಲಿ ಬೇಳೆ ಕಾಣಿಸಿತು. ಆಶೆಯಾಯಿತು. ಅದಕ್ಕೆ ಅಕ್ಕಿಯೂ ಬೇಕು. ಬೇಳೆಯೂ ಬೇಕು. ಎರಡೂ ಒಟ್ಟಿಗೆ! ಇದನ್ನೊಮ್ಮೆ ಮುಟ್ಟುತ್ತೆ. ಅದನ್ನೊಮ್ಮೆ ಮುಟ್ಟುತ್ತೆ. ಆದರೆ ಎರಡನ್ನೂ ಹೊರಲಾರದು. ಆಗ ಮುರುಕಗೊಂಡು ಕಬೀರದಾಸರು ಹೇಳಿದರು, ಒಂದನ್ನು ಎತ್ತಿಕೊ ಇನ್ನೊಂದನ್ನು ಬಿಟ್ಟು ಬಿಡು ಎಂದು. ಇದೊಂದು ಕಬೀರರ ಅನ್ಯೋಕ್ತಿಗೆ ಉದಾಹರಣೆ, ಇರುವೆಯಂತೆ ಆಶೆಬುರುಕ ಅಲ್ಪ ಯೋಗ್ಯತೆಯ ಮನುಷ್ಯರಿಗೆ ಕೊಟ್ಟ ಉಪದೇಶವಿದು.

ಕಬೀರರು ನಿರ್ವಿಕಾರವಾಗಿ ಎಲ್ಲರೊಡನೆ ಯಥೋಚಿತವಾಗಿ ನಕ್ಕು ಮಾತನಾಡುತ್ತಿದ್ದರು

ಸ್ಪಷ್ಟೋಕ್ತಿ

ಕಬೀರದಾಸರು ಬಹು ಪ್ರಭಾವಶಾಲಿಯಾದ ಉಪದೇಶಕರು. ಅವರು ಪುಸ್ತಕವನ್ನು ಓದಿ ಪಡೆದ ಜ್ಞಾನವನ್ನು ಉಪದೇಶಿಸಲಿಲ್ಲ. ಸಾಧು ಸಜ್ಜನರ ಸತ್ಸಂಗದಿಂದ ಲಭಿಸಿದ ಜ್ಞಾನವನ್ನು ಅನುಭವದ ಮೂಸೆಯಲ್ಲಿ ಕರಗಿಸಿದರು. ಜೀವನದಲ್ಲಿ ಪುಟವಿಟ್ಟರು; ಆತ್ಮದ ಉದ್ಧಾರಕ್ಕೆ ಅರ್ಹವಾದುದೆಂದೂ ಸಹಜ ಧರ್ಮದ ಒರೆಗಲ್ಲ ಮೇಲೆ ಉಜ್ಜಿದಾಗ ಚೊಕ್ಕ ಚಿನ್ನವೆಂದೂ ತೋರಿದುದನ್ನು ಮಾತ್ರ ಉಪದೇಶಿಸಿದ್ದಾರೆ. ಹಾಗೆ ಉಪದೇಶ ಮಾಡುವಾಗ ಒಮ್ಮೊಮ್ಮೆ “ಲೋಈ”ಯನ್ನು ಸಂಭೋಧಿಸಿದ್ದಾರೆ. ಒಮ್ಮೆ ತಮ್ಮ ಮನಸ್ಸನ್ನೇ ಸಂಬೋಧಿಸಿದ್ದಾರೆ. ಕೆಲವೊಮ್ಮೆ “ಸುನೋ ಭಾಈ ಸಾಧೋ” ಎಂದು ತಮ್ಮೊಡನೆ ಸತ್ಸಂಗಕ್ಕೆ ಬಂದವರನ್ನು ಉದ್ದೇಶಿಸಿ ಉಪದೇಶ ಮಾಡಿರುವುದುಂಟು.

ತೀರ್ಥಯಾತ್ರೆಯನ್ನು ಕೈಗೊಂಡು ಸಾಫಲ್ಯವಾಗಬೇಕೆಂದು ಹಾತೊರೆಯುವ ಮನಸ್ಸನ್ನು ಸಂಭೋಧಿಸಿ ಹೇಳುತ್ತಾರೆ.

“ಎಲೆ ಮನಸ್ಸೆ, ಎಲ್ಲಿಯೂ ಅಲೆಯಲು ಹೋಗಬೇಡ. ಹೃದಯ ಸರೋವರದಲ್ಲಿ ಅವಿನಾಶಿ ಇದ್ದಾನೆ. ಈ ಕಾಯದೊಳಗೇ ಕೋಟಿ ತೀರ್ಥಗಳಿವೆ. ಕಾಯದೊಳಗೆ ಕಾಶಿ ಇದೆ. ಕಾಯದಲ್ಲಿಯೇ ಕಮಲಾಪತಿ ಇದ್ದಾನೆ. ಕಾಯದಲ್ಲಿಯೇ ವೈಕುಂಠವಾಸಿಯೂ ಇದ್ದಾನೆ.”

ಇನ್ನೊಂದು “ಪದ”ದಲ್ಲಿ ಸಾಧು ಸಜ್ಜನರನ್ನು ಸಂಬೋಧಿಸಿ ಹೇಳುತ್ತಾರೆ- “ದೇವರೇ ಹೀಗೆ ಹೇಳಿದ್ದಾನೆ: “ಅಯ್ಯಾ ಭಕ್ತ, ನನ್ನನ್ನು ಎಲ್ಲಿ ಹುಡುಕುತ್ತಿದ್ದೀಯೆ? ನಾನು ನಿನ್ನ ಬಳಿಯೇ ಇದ್ದೇನೆ. ನಾನು ದೇವಸ್ಥಾನದಲ್ಲಿಲ್ಲ. ಮಸೀದಿಯಲ್ಲೂ ನಾನಿಲ್ಲ. ಕಾಬಾ ಅಥವಾ ಕೈಲಾಸದಲ್ಲಿಲ್ಲ. ನಿಜವಾಗಿಯೂ ನನ್ನನ್ನು ನೀನು ಹುಡುಕುತ್ತಿದ್ದರೆ ಅರೆ ನಿಮಿಷದೊಳಗೇ ಸಿಕ್ಕುತ್ತಿದ್ದೆ. “ಕಬೀರ ಹೇಳುತ್ತಾನೆ: “ಸಾಧುಗಳೇ ಕೇಳಿ, ನಮ್ಮ ಉಸಿರಿನ ಪ್ರತಿ ಕಣದಲ್ಲೂ ಅವನಿದ್ದಾನೆ.”

ಎಲ್ಲೆಲ್ಲೂ ಅವನೇ

ಆ ಪ್ರಿಯತಮ ಎಲ್ಲ ದೇಹದಲ್ಲೂ ಇದ್ದಾನೆ. ನಮ್ಮಲ್ಲಿ, ನಿಮ್ಮಲ್ಲಿ, ಎಲ್ಲೆಲ್ಲೂ. ಆದರೆ ಒಂದು ಬುರಕಿ ಅಡ್ಡವಾಗಿದೆ. ಆದ್ದರಿಂದ ಒಳಗಿರುವ ಪ್ರಿಯ ಕಾಣಿಸುತ್ತಿಲ್ಲ.

ಹೂವಿನಲ್ಲಿ ಸುಗಂಧವಿರುವಂತೆ, ಕನ್ನಡಿಯಲ್ಲಿ ಪ್ರತಿಬಿಂಬವಿರುವಂತೆ ತನುವಿನಲ್ಲಿ, ಮನದಲ್ಲಿ, ಕಣ್ಣಿನಲ್ಲಿ ಎಲ್ಲೆಲ್ಲೂ ಅವನು – ಆ ರಾಮನು ಇದ್ದಾನೆ.

ಎಲ್ಲಿಯವರೆಗೂ ನಾನು – ನನ್ನದು, ನೀನು-ನಿನ್ನದು ಎಂಬ ಬುದ್ಧಿ ಇರುತ್ತದೆಯಾ, ಅಲ್ಲಿಯವರೆಗೆ ಹುಟ್ಟುವುದು ಸಾಯುವುದು ತಪ್ಪಿದ್ದಲ್ಲ. ಜಗತ್ತೆಲ್ಲ ಅವನೇ – ರಾಮನೇ ಆಗಿರುವಾಗ, ನೋಡುವ ನೋಟ ಅವನದು, ಆಡುವ ಮಾತು ಅವನದು. ಹೀಗಿರುವಾಗ ಈ ಭೇದ ಬುದ್ದಿ ಸರಿಯಲ್ಲ. ಇದು ಭ್ರಮೆ. ಈ ಭೇದ ಬುದ್ಧಿ ಇರುವವರೆಗೆ ಎಷ್ಟು “ರಾಮ-ರಹೀಮ” ಎಂದು ಜಪಿಸಿದರೇನು?

ಗಡಿಗೆಗಳಿವೆ, ಮಣ್ಣಿನದು. ನದಿಯಲ್ಲಿ ಮುಳುಗಿದ ಗಡಿಗೆಯದು ಒಂದೊಂದು ಆಕಾರ. ಇದು ಬೇರೆ, ಅದು ಬೇರೆ ಎಂದು ಕಾಣಿಸುತ್ತದೆ. ಅದರಲ್ಲಿರುವ ನೀರೂ ಸಹ ಅದೇ ಆಕಾರದಲ್ಲಿ ತೋರುತ್ತದೆ. ಆದರೆ ಗಡಿಗೆ ಒಡೆದು ಹೋಯಿತೆನ್ನಿ, ಆಗ? ನೀರು ನೀರಿನಲ್ಲಿ ಸೇರಿ ಹೋಗುತ್ತದೆ. “ಬೂಂದು ಸಮಾನೀ ಸಮುದ ಮೇ” ಅಂದರೆ ಒಂದು ಹನಿ ಹೋಗಿ ಸಮುದ್ರದಲ್ಲಿ ಸೇರಿದಂತೆ. ಆ ಹನಿಯನ್ನು ಸಮುದ್ರದಿಂದ ಬೇರ್ಪಡಿಸಲು ಸಾಧ್ಯವೋ? ಜೀವಾತ್ಮನು-ಗಡಿಗೆಯಲ್ಲಿರುವ ನೀರಿನಂತೆ. ಅಲ್ಪ ಭಿನ್ನವಾಗಿ ತೋರುವ ಒಂದು ಹನಿ. ನೀರ ಮೇಲಣ ಗುಳ್ಳೆ. ಗಡಿಗೆ ಒಡೆದಾಗ-ಮುಕ್ತನಾದಾಗ – ಹನಿ ಸಮುದ್ರದಲ್ಲಿ ಬೆರೆತು ಹೋದಂತೆ ಐಕ್ಯನಾಗುತ್ತಾನೆ.

ನಾಮ ಹಲವು

ದೇವನೊಬ್ಬ ನಾಮ ಹಲವು ಎಂಬುದನ್ನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದಾರೆ. ಕಬೀರದಾಸರೂ ಸಹ ಅದನ್ನೇ ಒತ್ತಿ ಹೇಳಿದರು. “ಹಂಮಾರೈ ರಾಂಮ ರಹೀಮ ಕರೀಮಾ ಕೇಸೋ ಅಲಹ (ಅಲಖ) ರಾಂಮ ಸತಿ (ಸತ್ಯ) ಸೋಈ” ಎಂಬ ಪದದಲ್ಲಿ ವಿಶ್ವವ್ಯಾಪಕನು ಒಬ್ಬನೇ, ಎಲ್ಲರ ದೇವರೂ ಒಬ್ಬನೇ ಎಂದು ಹೇಳುತ್ತಾರೆ. ಈ ಮರ್ಮವನ್ನು ತಿಳಿಯದೆ ವೇದ ಓದಿದರೇನು? ಖುರಾನ್‌ಹೇಳಿದರೇನು? ಎಲ್ಲಿಯವರೆಗೆ ಹಿಂಸೆಯನ್ನು ಬಿಟ್ಟು, ಶಾಂತಿಯಿಂದ ಬಾಳುವುದನ್ನು ಕಲಿಯುವುದಿಲ್ಲವೋ ಅಲ್ಲಿಯವರೆಗೆ “ರಾಮ ರಾಮ” ಎಂದು ಜಪಿಸುತ್ತಿರಬಹುದು. ಆದರೆ ಅದು ಜಪವಲ್ಲ. ಅದರಿಂದ ಪ್ರಯೋಜನವಿಲ್ಲ. ವೇದವನ್ನು ಸರಿಯಾಗಿ ಓದಿದರೆ ಎಲ್ಲ ದೇಹಗಳಲ್ಲಿಯೂ ರಾಮ ಕಾಣಿಸಬೇಕು.

ಹಿಂಸೆ ಕೂಡದು

ಇದರಂತೆ ಹಿಂದು ಮುಸ್ಲಿಮರಲ್ಲಿ ಭೇದ ಬುದ್ಧಿಗೆ ಇಂಬು ಕೊಟ್ಟು ಹಿಂಸೆಯನ್ನು ಪ್ರಚೋದಿಸುವ ಮುಲ್ಲಾಗಳನ್ನೂ ಕೂಡ ಕಬೀರದಾಸರು ಖಂಡ ತುಂಡಾಗುವಂತೆ ಖಂಡಿಸಿದ್ದಾರೆ. ಮಾತನಾಡುವಾಗ ಕಬೀರದಾಸರಿಗೆ ದಾಕ್ಷಿಣ್ಯವಿಲ್ಲ. ಸತ್ಯವನ್ನು ನುಡಿಯುವಾಗ ಪಕ್ಷಪಾತವಿಲ್ಲ.

ಒಂದು ಪದದಲ್ಲಿ ಕಬೀರದಾಸರು ಮುಲ್ಲಾನನ್ನು ಕುರಿತು ಹೇಳುತ್ತಾರೆ.

“ಮಸೀದಿಯ ಮೇಲೆ ನಿಂತು ಅರಚುತ್ತಿದ್ದೀಯೆ, ಮುಲ್ಲಾ, ನಿನಗೆ ಮಸೀದಿ ಎಂದರೇನು ಗೊತ್ತಿದೆಯೇ? ಇಲ್ಲಿ ನೋಡು, ಹತ್ತು ಬಾಗಿಲ ಒಂದು ಮಸೀದಿ ಇದೆ.”  ಅಂದರೆ ಈ ದೇಹವೇ ಮಸೀದಿ ಎಂದು ಕಬೀರದಾಸರು ಹೇಳಲು ಹೊರಟಿದ್ದಾರೆ. “ನೋಡು ಕಾಜೀ, ಈ ಮನಸ್ಸೇ ಮಕ್ಕಾ, ಜೀವ (ದೇಹೀ) ಕಬಿಲಾ (ಪವಿತ್ರವಾದ ಕಲ್ಲು), ಇಲ್ಲಿ ಮಾತನಾಡುವವನು ಜಗತ್ತಿಗೆ ಗುರುವಾಗ ಅವನು (ಮಹಮ್ಮದ). ಅಂದ ಮೇಲೆ ಇಲ್ಲೆಲ್ಲಿ ಬಂತು ನರಕ? ಇಲ್ಲೆಲ್ಲಿ ಬಂತು ಸ್ವರ್ಗ?”

ಸುಧಾರಕ

ಕಬೀರದಾಸರು ಒಳ್ಳೆಯ ಸುಧಾರಕರು. ಅವರು ಎಲ್ಲವನ್ನೂ ಸುಧಾರಿಸಲು ಯತ್ನಿಸಿದರು. ಎಲ್ಲ ಸುಧಾರಣೆಯ ಗುರಿ ಜೀವನ ಹಸನಾಗಬೇಕು. ಇಲ್ಲಿ ನೆಮ್ಮದಿ ಇರಬೇಕು. ಅಲ್ಲಿ ಮುಕ್ತಿ ಸಿಕ್ಕಬೇಕು ಎಂಬುದಾಗಿತ್ತು. ಆದ್ದರಿಂದ ಜೀವನದ ಹಾಸುಹೊಕ್ಕಾಗಿರುವ ಎಲ್ಲ ಅಂಶಗಳನ್ನೂ ಸುಧಾರಿಸಬೇಕಾಗಿ ಅವರಿಗೆ ಕಾಣಿಸಿತು.

ಸಮಾಜದಲ್ಲಿ ಅತೃಪ್ತಿಯೇ ಸರ್ವ ಗೊಂದಲಕ್ಕೂ ಕಾರಣ. ಇದನ್ನು ಮೊದಲು ಖಂಡಿಸಿದರು. ಅತೃಪ್ತಿ ಸಕಲ ದುರ್ಗುಣಕ್ಕೂ ಮೂಲ. ಆಸೆ ಇದ್ದಲ್ಲಿ ಅತೃಪ್ತಿ. ಆಸೆ ಇಲ್ಲವಾದಲ್ಲಿ, ತೃಪ್ತಿ ಬರುತ್ತದೆ. ಅಂಥವನ ಬಾಳು ಸಾರ್ಥಕ.

ಸಾಧಕನಿಗೆ ಬೇಕಾದ್ದು ಭಕ್ತಿ, ಧನವಲ್ಲ. ಇಂದು ಐಶ್ವರ್ಯವಿದೆ. ಬಾಗಿಲಿನಲ್ಲಿ ಮಂಗಳವಾಧ್ಯ ಮೊಳಗುತ್ತಿದೆ. ಸಂಗೀತ ಸಾಹಿತ್ಯ ಸುಧೆ ತೊರೆಯಾಗಿ ಹರಿಯುತ್ತದೆ. ಕಾಲ ಬದಲಾಯಿತು. ಅಲ್ಲಿ ಜನ ಬರುವುದು ಕಡಿಮೆಯಾಯಿತು. ವೈಭವ ಅಳಿಯಿತು. ಅದೇ ಪಟ್ಟಣ, ಅದೇ ಗಲ್ಲಿ, ಅದೇ ಮನೆ. ಕಾಗೆ ಗೂಗೆಗಳು ವಾಸ ಮಾಡಲು ಪ್ರಾರಂಭಿಸುತ್ತವೆ. ಇವೆಲ್ಲ ಎಲ್ಲರೂ ನೋಡಿದ್ದೆ. ಅದನ್ನು ಜ್ಞಾಪಿಸುತ್ತವೆ ಕಬೀರದಾಸರ ವಚನಗಳು. ಸುತ್ತಲೂ ಸಮುದ್ರ, ಮಧ್ಯದಲ್ಲಿ ಲಂಕೆ. ಸುವರ್ಣ ಭೂಮಿ, ಲಕ್ಷಾಂತರ ಬಂಧು ಬಾಂಧವರು ಸ್ವತಃ ಹತ್ತು ತಲೆ, ಇಪ್ಪತ್ತು ಭುಜಗಳು. ಆದರೆ ಇಂದು ಆ ರಾವಣನ ಮನೆತನದಲ್ಲಿ ದೀಪ ಹಚ್ಚುವವರಾರು ಉಳಿದಿದ್ದಾರೆ?

ಹೀಗೆ ತೃಪ್ತಿಯ ಬಾಳುವೆಯ ಹಿರಿಮೆಯನ್ನು ಕೊಂಡಾಡಿದ ಕಬೀರದಾಸರು ಆಲಸ್ಯವನ್ನು ಸಮರ್ಥಿಸಿಲ್ಲ. ಭಿಕ್ಷೆ ಬೇಡುವುದನ್ನು ಖಂಡಿಸಿದ್ದಾರೆ. ನ್ಯಾಯವಾದ ಮಾರ್ಗದಲ್ಲಿ ಜೀವನ ನಡೆಸಲು ಹೇಳಿದ್ದಾರೆ. ಹಣದ ಮಹತ್ವವನ್ನು ಅರಿತಿದ್ದಾರೆ. ಅದರ ಸದುಪಯೋಗದ ದಾರಿ ತೋರಿದ್ದಾರೆ. ಜೀವನದ ದೋಣಿ ಸಾಗಬೇಕಾಗಿದ್ದರೆ ಧನವೆಂಬ ಜಲ ಬೇಕು. ಅದು ಬಿಟ್ಟು ಆ ಜಲ ದೋಣಿಯಲ್ಲೇ ಬಂದರೆ? ಲೋಭಿಯಾದವನು ಮೂರ್ಖನಾಗಿ ಮುಳುಗಿ ಹೋಗುತ್ತಾನೆ. ಸಾಧು ಎರಡೂ ಕೈಗಳಿಂದ ಹಂಚಿ ತೃಪ್ತಿ ಪಡುತ್ತಾನೆ.

ಮಾತು, ಕೃತಿ

ಕಬೀರದಾಸರಿಗೆ ಉಪದೇಶಕರನ್ನು ಕಂಡರೆ ಆಗದು. ತಾವು ಮಾಡಲಾರದ್ದನ್ನು ಆಡುವುದೆಂದರೆ ಅವರಿಗೆ ಮೈ ಎಲ್ಲ ಉರಿಯುತ್ತಿತ್ತು. ಕಬೀರದಾಸರು ಹೇಳಿದರು: ಇತರರ ದೋಷವನ್ನು ಕಂಡು ನಗುವಿರ? ನನ್ನ ಅನುಭವ ಕೇಳಿ- “ಮುಝು ಸಾ ಬುರಾ ನ ಕೋಈ”. ನನಗಿಂತ ಕೆಟ್ಟದ್ದು ಬೇರೆ ಯಾವ ವಸ್ತುವೂ ಇಲ್ಲ. ಈ ದೃಷ್ಟಿ ಇಲ್ಲವಾದರೆ ತನ್ನ ದೋಷಗಳನ್ನು ಮರೆಮಾಚುವ ಹೀನವೃತ್ತಿ ಬೆಳೆಯುತ್ತದೆ. ತನ್ನ ಅಲ್ಪ ಗುಣಗಳ ಬಗ್ಗೆ ಅಹಂಕಾರವೂ ಬೆಳೆಯುತ್ತದೆ. ಆತನಿಂದ ಈ ಜಗತ್ತಿಗೆ ಮತ್ತಷ್ಟು ಹಾನಿ. ಏಕೆಂದರೆ ಅಂಥವನ ಮಾತು ಕಲ್ಲು ಸಕ್ಕರೆಯಂತೆ ಸವಿಯಾಗಿದ್ದರೆ, ಕೃತಿ ವಿಷದ ಜ್ವಾಲೆಯಂತಿರುತ್ತದೆ. ಮಾತು ಆಡದೆ ಕೃತಿಯನ್ನು ಮಾತ್ರ ತೋರಿದರೆ ವಿಷವೂ ಕೂಡ ಅಮೃತವಾಗುವುದು. ಅಂದರೆ ಕೆಟ್ಟವನು ಕೆಟ್ಟತನವನ್ನು ಮರೆಮಾಚದಿದ್ದರೆ ಜಗತ್ತು ಅವನ ಕೆಟ್ಟತನದಿಂದ ಪಾಠ ಕಲಿತು ಬದುಕುವ ದಾರಿ ಕಾಣಬಹುದು. ಆಚರಣೆಗೆ ತರದೆ ಉಪದೇಶಿಸುವವನಿಂದ ಜಗತ್ತು ಹಾಳಾಗಿ ಹೋಗುವುದು.

ಒಮ್ಮೆ ಒಬ್ಬ ಸಂಸಾರದಲ್ಲಿ ಬೆಂದು ಬೇಸತ್ತವ ಕಬೀರರ ಬಳಿಗೆ ಬಂದ. ಸತ್ಸಂಗ ನಡೆದಿತ್ತು. ಬಹಳ ಹೊತ್ತಿನವರೆಗೂ ದಾರಿ ಕಾಯುತ್ತಿದ್ದ. ಬಂದ ಸಾಧು ಸಜ್ಜನರೂ ಸಾಧಕರೂ ಎದ್ದು ಹೋದರು. ಆತ ಒಬ್ಬನೇ ಉಳಿದ.

ಕಬೀರದಾಸರು ಕೇಳಿದರು: “ಏಕಪ್ಪ ಒಬ್ಬನೇ ಕುಳಿತಿದ್ದೀಯೆ? ಏನು ಬೇಕು? ಏನೋ ಯೋಚಿಸುತ್ತಿರುವಂತೆ ತೋರುತ್ತಿದೆ.”

“ನನ್ನ ಸಮಸ್ಯೆ” ಆತ ಹೇಳಿದ – “ಅಷ್ಟು ಮಹತ್ತ್ವದ್ದಲ್ಲ. ಆದರೂ ನನ್ನ ಬಾಳಿಗೆ ಉತ್ತರ ಅಗತ್ಯವಾಗಿದೆ. ಜೀವನ ರೋಸಿ ಹೋಗಿದೆ.”

ಕಬೀರದಾಸರು ಸಹಾನುಭೂತಿಯಿಂದ, “ಏನಪ್ಪ, ನಿಸ್ಸಂಕೋಚವಾಗಿ ಹೇಳು, ರಾಮ ದಾರಿ ತೋರಿಸುತ್ತಾನೆ” ಎಂದು ಆಶ್ವಾಸನೆಯನ್ನಿತ್ತರು.

ಅಷ್ಟು ಹೊತ್ತಿಗಾಗಲೇ ದೀಪ ಹಚ್ಚುವಷ್ಟು ಹೊತ್ತಾಗಿತ್ತು. ಬೆಳಿಗ್ಗೆ ನಸು ಬೆಳಕಿನಲ್ಲಿ ಕುಳಿತ ಕಬೀರ ಇನ್ನೂ ಎದ್ದಿರಲಿಲ್ಲ. ಬರುವವರು ಬರುತ್ತಿದ್ದರು, ಹೋಗುವವರು ಹೋಗುತ್ತಿದ್ದರು. ಹಿಂದುಗಳು, ಮುಸ್ಲಿಮರು, ಜ್ಞಾನಿಗಳು, ಅಜ್ಞಾನಿಗಳು, ಸಾಧುಗಳು, ಕಪಟಿಗಳು, ಕಬೀರರು ಮಾತ್ರ ನಿರ್ಮಿಕಾರವಾಗಿ ಎಲ್ಲರೊಡನೆ ಯಥೋಚಿತವಾಗಿ ನಕ್ಕು ಮಾತನಾಡುತ್ತಿದ್ದರು. ಊಟಕ್ಕೆ ಎದ್ದಿರಲಿಲ್ಲ. ಕಬೀರದಾಸರ ಹೆಂಡತಿಗಂತೂ ಈ ಜನಜಂಗುಳಿಯಿಂದ ರೋಸಿ ಹೋಗಿತ್ತು. ನಿತ್ಯ ಇದ್ದದ್ದೇ. ಊಟಕ್ಕೂ ಬಿಡುವು ಸಿಕ್ಕಿದ, ಕಾಸಿನ ಪ್ರಯೋಜನವಿಲ್ಲದ ಈ ಹರಟೆ ಚಾವುಡಿಯನ್ನು “ಸತ್ಸಂಗ” ಎಂದು ಕರೆಯುವುದೇ ಎಂದು. ಅದಕ್ಕೇ ಬಂದು ಊಟಕ್ಕೆ ಎಬ್ಬಿಸಿರಲಿಲ್ಲ. ಎಬ್ಬಿಸಿವುದೂ ಕಷ್ಟವಾಗಿತ್ತು. ಊಟಕ್ಕೆ ಕರೆದರೆ ಅಲ್ಲಿರುವವರನ್ನೆಲ್ಲಾ “ಏಳಿ ಊಟಕ್ಕೆ” ಎಂದು ಉಪಚರಿಸಿ ಕರೆಯುವುದು ಕಬೀರದಾಸರ ಸ್ವಭಾವ. “ಸಾಧು ನ ಭೂಖಾ ಜಾಇ” – ಸಾಧುಗಳು ಊಟದ ಹೊತ್ತಿನಲ್ಲಿ ಹಸಿದು ಮರಳುವಂತಾಗಬಾರದು. ಆದರೆ ಮನೆಯಲ್ಲೋ ಕಾಳಿಲ್ಲ, ಕಡ್ಡಿ ಇಲ್ಲ. ಇಂಥ ಬಾಳುವೆ ಹೇಗೆ ನಡೆಯುವುದೆಂಬ ಚಿಂತೆ ಮಡದಿಗೆ. ಕಬೀರನಿಗಿಲ್ಲ. ಆದ್ದರಿಂದಲೇ ಅವಳು ಊಟಕ್ಕೆ ಏಳಿ ಅಂದಿರಲಿಲ್ಲ. ಆದರೆ ಹೆಂಡತಿಯಲ್ಲವೆ? ಮಮತೆಯ ಮೂರ್ತಿಯಲ್ಲವೆ? ಗಂಡ ಎಷ್ಟು ಹೊತ್ತು ಉಪವಾಸವಿರುವುದನ್ನು ಸಹಿಸಿಯಾಳು? ಆದರೆ ಸಿಟ್ಟು ಇನ್ನೊಂದೆಡೆ. ಅಂದಿನ ಸತ್ಸಂಗದ ಕೊನೆಯ ಮಾತು: “ಅಯ್ಯೋ ಈ ಜಗತ್ತು ಅಸಾರವಾದದ್ದು. ಈ ಕ್ಷಣ ಉಪ್ಪು, ಮರುಕ್ಷಣದಲ್ಲಿ ಸಿಹಿ. ಇದನ್ನು ನಂಬದೆ ಹಿಗ್ಗದೆ ಕುಗ್ಗದೆ ಸಮಚಿತ್ತನಾಗಿರಬೇಕು.” ಕಬೀರರ ಹೆಂಡತಿಯು “ಪರೀಕ್ಷೆ ಮಾಡಿ ನೋಡೋಣ” ಎಂದು ಎರಡು ಕುಡಿಕೆ ಹಾಲು ತಂದು ಇಬ್ಬರ ಮುಂದೂ ಇಟ್ಟು ಹೋದಳು.

ಆತ ಹೇಳಿದ – “ನನಗೆ ಸತ್ಸಂಗ ಮಾಡಬೇಕೆಂಬ ಆಸೆ. ನನ್ನ ಹೆಂಡತಿ ಅರೆಕ್ಷಣವೂ ನನಗೆ ಅವಕಾಶ ಕೊಡುವುದಿಲ್ಲ. ಮನೆಯ ಹತ್ತಿರ ಒಬ್ಬರಿಗೂ ಸುಳಿಯಲು ಬಿಡುವುದಿಲ್ಲ.”

ಕಬೀರದಾಸರು ಮುಗುಳುನಗೆ ನಗುತ್ತಿದ್ದರು. ಆತ ಮಾತು ಮುಂದುವರಿಸಿದ – “ಅವಳ ಮಾತನ್ನು ಕೇಳದಿದ್ದರೆ ಸರಿ, ನನ್ನ ಹೆಣ ಮಲಗಿಸಿ ಬಿಡುತ್ತಾಳೆ. ಚಂಡಿ ಚಾಮುಂಡಿಯಂತೆ ಆಡುತ್ತಾಳೆ.”

ಕಬೀರದಾಸರು ನಗುತ್ತಲೇ. “ಹಾಗೋ, ಏನಡ್ಡಿಯಿಲ್ಲ. ರಾಮ ದಾರಿ ತೋರಿಸುತ್ತಾನೆ. ಯೋಚಿಸಬೇಡ, ಹಾಲು ಕುಡಿ” ಎಂದರು.

ಕಬೀರದಾಸರು ಕೊಂಚವೂ ಮುಖವನ್ನು ಕೊಂಕಿಸದೆ ಕುಡಿಯುತ್ತಿದ್ದರು.

ಸಂಕೋಚದಿಂದ ಕುಡಿಕೆಯನ್ನು ಎತ್ತಿಕೊಂಡ. ತುಟಿಗೆ ತಗುಲಿಸಿದ. “ಅಬ್ಬ, ಏನು ಕಹಿ” ಅಂದುಕೊಂಡ.

ಇತ್ತ ಕಬೀರದಾಸರು ಕೊಂಚವೂ ಮುಖವನ್ನು ಕೊಂಕಿಸದೆ ಸ್ವಲ್ಪ ಸ್ವಲ್ಪವಾಗಿ ಕುಡಿಯುತ್ತಿದ್ದರು. ಏನು ಮಾಡಿದರೂ ಆ ಹಾಲಿನಲ್ಲಿ ಒಂದು ಗುಟುಕು ಕುಡಿಯುವುದೂ ಸಾಧ್ಯವಿಲ್ಲದೇ ಹೋಯಿತು ಆಗಂತುಕನಿಗೆ. ಕಬೀರದಾಸರ ಹೆಂಡತಿ ಬಂದಳು. “ಕುಡಿದಾಯಿತೆ? ಸಕ್ಕರೆ ಸಾಕಾಗಿತ್ತೋ, ಬೇಕಾಗಿತ್ತೋ?” ಎಂದು ತಿರಸ್ಕಾರದ ನಗು ನಗುತ್ತಾ ಕೇಳಿದಳು.

ಕಬೀರದಾಸರು, “ಸಕ್ಕರೆಯೆ? ಸಾಕಾಗಿತ್ತು. ಅವರನ್ನು ಕೇಳು” ಎಂದು ಆಗಂತುಕನ ಕಡೆ ತೋರಿಸಿದರು. ಆತ ಏನೂ ಹೇಳಲಾರ. “ನನಗೊಂದು ಅವರಿಗೊಂದು ತಂದಿಟ್ಟಳೆ? ಇಬ್ಬರಿಗೂ ಒಂದೇ ತಂದುಕೊಟ್ಟಳ? ಕಬೀರದಾಸರಂತೂ ಕುಡಿದು ಬಿಟ್ಟರು. ಮುಖದಲ್ಲಿ ಸಿಹಿಯೋ ಕಹಿಯೋ ಏನೂ ತೋರುವಂತಿರಲಿಲ್ಲ. ನನಗಂತೂ ಕುಡಿಯಲಾಗುತ್ತಿಲ್ಲ. ಏನು ಹೇಳಿ?” ಎಂದು ಯೋಚಿಸುತ್ತಿದ್ದ. ಕೇಳಿದರೂ ಕೇಳದಂತೆ ಇದ್ದ.

“ಸಕ್ಕರೆ ಸಾಕೆ?” ಕಬೀರರ ಪತ್ನಿಯೇ ಕೇಳಿದಳು.

“ಹೂ” ಎಂದ.

ಒಳಗೆ ಹೋಗಿ ಒಂದು ಹಿಡಿ ಉಪ್ಪು ತಂದು ಅದಕ್ಕೆ ಹಾಕಿದಳು.

ಕಬೀರದಾಸರು ನಕ್ಕರು.

“ಈ ಪುಂಡು ಪೋಕರಿಗಳಿಗೆ, ಹೆಂಡತಿಯೊಡನೆ ಬಾಳುವೆ ಮಾಡಲಾರದ ಧಾಂಡಿಗರಿಗೆ ಈ ಮನೆಯೊಂದು ಮಠವಾಗಿದೆ. ಯಾರು ಉಂಡರೇನು ತಿಂದರೇನು? ಇವರಿಗೆ ಇಲ್ಲಿ ನಡೆಯಬೇಕು ಉಪಚಾರ” ಎಂದು ಕಬೀರರ ಹೆಂಡತಿ ಬಾಯಿಗೆ ಬಂದಂತೆ ಮೂದಲಿಸಿ ಹೊರಟು ಹೋದಳು.

ಕಬೀರರು ಆಗಲೂ ನಗುತ್ತಿದ್ದರು. ಆತ ಬೇಸರದಿಂದ ಮೇಲೆದ್ದ.

“ನಿನ್ನ ಸಮಸ್ಯೆಗೆ ಉತ್ತರ ದೊರೆಯಿತೆ?” ಕಬೀರದಾಸರು ಕೇಳಿದರು. ಮಾತನ್ನು ಮುಂದುವರಿಸಿ-“ಜೀವನದಲ್ಲಿ ಇವೆಲ್ಲ ಇದ್ದದ್ದೆ. ಇದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಅದೇ ದಾರಿ. ಸರಿಯಾದ ದಾರಿ. ಜೀವನ ಸುಗಮವಾಗಿ ಸಾಗಬೇಕಾಗಿದ್ದರೆ ತಾಳ್ಮೆ ಬೇಕು” ಎಂದು ಹೇಳಿದರು.

ಅಂದರೆ ಕಬೀರರು ಆಡಿದಂತೆ ಮಾಡುವ, ನುಡಿದಂತೆ ನಡೆವ ಮಹನೀಯರಾಗಿದ್ದರೆಂಬುದು ಈ ಕಥೆಯ ಸಾರ.

ನಿರ್ದಾಕ್ಷಿಣ್ಯದ ಸತ್ಯ

ಕಬೀರದಾಸರ ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಅನ್ಯಾಯ, ಅನೀತಿ ನಡೆಯುತ್ತಿತ್ತು. ಇದನ್ನು ಖಂಡಿಸಿದರು. ವೇಷ ಭೂಷಣಗಳ ಬೂಟಾಟಿಕೆಯು ಹೆಚ್ಚಾಗಿತ್ತು. ಅಂಧವಿಶ್ವಾಸಕ್ಕೆ ಇಂಬು ಕೊಡುವವರನ್ನು ಖಂಡ ತುಂಡಾಗಿ ಖಂಡಿಸುವಾಗ ಕಬೀರದಾಸರಿಗೆ ದಾಕ್ಷಿಣ್ಯವೇ ಇಲ್ಲ.

ಕಾಜಿಯನ್ನು ಕುರಿತು ಕಬೀರದಾಸರು ಹೇಳಿದ ಮಾತಿದು – “ಕಾಜೀ, ಪುಸ್ತಕ ಓದಿ ಏನು ಪ್ರಯೋಜನ? ಒಂದಕ್ಷರವೂ ನಿನಗೆ ತಿಳಿಯಲಿಲ್ಲ. ಈ ಪುಸ್ತಕ (ಖುರಾನ್)ವನ್ನು ಎಸೆದುಬಿಟ್ಟು ಒಂದೇ ಮನಸ್ಸಿನಿಂದ ರಾಮನನ್ನು ಸ್ಮರಿಸು. ಖುದಾನಲ್ಲಿ ಭಕ್ತಿ ಮಾಡು. ಮನಸ್ಸಿನಲ್ಲೇ ನರಕವನ್ನು ತುಂಬಿಟ್ಟುಕೊಂಡು ಸ್ವರ್ಗಕ್ಕೆ ಹಾತೊರೆಯುತ್ತಿರುವೆಯಲ್ಲ?”

ಮುಸ್ಲಿಮರನ್ನು ಖಂಡಿಸುವಾಗ ಇದ್ದಷ್ಟೇ ಹರಿತವಾಗಿದೆ ನಾಲಿಗೆ ಹಿಂದುಗಳ ಬಾಹ್ಯಾಡಂಬರವನ್ನು ಖಂಡಿಸುವಾಗ.

ಮಡಿವಂತಿಕೆಯನ್ನು ಖಂಡಿಸುತ್ತಾ ಕಬೀರದಾಸರು ಹೇಳುತ್ತಾರೆ.

“ಕಹು ಪಾಂಡೇ ಸುಚಿ ಕವನ ಠಾಂಉ?”

“ಏ ಪಾಂಡೇ (ಬ್ರಾಹ್ಮಣ), ನನಗೊಂದು ಮಡಿಯಾದ ಜಾಗ ಹೇಳು. ಅಲ್ಲಿ ನಾನು ಊಟ ಮಾಡಬೇಕು ಅಂತ ಇದ್ದೇನೆ. ಅಥವಾ ಮಡಿ ಮಾಡಿಕೊಳ್ಳುವ ಕ್ರಮವನ್ನಾದರೂ ತಿಳಿಸು.”

“ಸಾರಿಸಿ ಗುಡಿಸಿ ಮಡಿ ಮಾಡುವುದೆ? ಸಂತೋಷ. ಹಳೆಯ ಮಣ್ಣಿನ ಮೇಲೆ ಹೊಸ ಮಣ್ಣು ಬಳಿದರೆ ಮಡಿಯೆ? ಪ್ರತ್ಯೇಕ ಅಡಿಗೆ ಮಾಡಿಕೊಳ್ಳುವುದು ಮಡಿಯೆ? ಅದೇ ಗಾಲಿ, ಅದೇ ಬೆಂಕಿ, ಅದೇ ನೀರು. ಎಲ್ಲರಿಗೂ ಒಂದೇ ಅಲ್ಲವೆ? ಅಯ್ಯೋ ಕಪಟಿ! ಆ ಬ್ರಹ್ಮನಿಗೆ ಮೋಸವೆ? ಮನಸ್ಸೇ ಮಡಿಯಾಗದೆ ಇರುವಾಗ ಹೊರಗಿನಿಂದ ಮಡಿ ಬಂದಿತೇನು? ಎಲ್ಲಿ ನೋಡಿ ಎಂಜಲು. ಗಾಳಿ ಎಂಜಲು, ನೀರು ಎಂಜಲು, ತಿನ್ನುವ ಅನ್ನ ಎಂಜಲು, ನಿಂತಿರುವ ನೆಲೆ ಎಂಜಲು, ಈಗ ನೀನಾಡುವ ಮಾತು ಎಂಜಲು. ಈ ಎಂಜಲನ್ನು ಕಳೆದುಕೊಂಡು “ಮಡಿ” ಆಗುವುದಾದರೆ ಹುಟ್ಟಲೇಬಾರದು ನೋಡು”.

ಧರ್ಮಗ್ರಂಥಗಳನ್ನು ಅವರು ಖಂಡಿಸಲಿಲ್ಲ. ಅವುಗಳ ಅರ್ಥವನ್ನು ಮರ್ಮವನ್ನು ತಿಳಿಯದ ಧರ್ಮಾನುಯಾಯಿಗಳಿಗೆ ಮಾತ್ರ ಅವರ ಮಾತು ಅನ್ವಯಿಸುತ್ತದೆ. ಸ್ಪಷ್ಟವಾಗಿ ಕಬೀರದಾಸರು ಹೇಳಿದ್ದಾರೆ-

“ವೇದ ಕತೇಬ ಕಹೌ ಕ್ಯೂಂ ಝೂಠಾ,
ಝೂಠಾ ಜೌ ನ ವಿಚಾರೈ”

“ವೇದಾದಿ ಶಾಸ್ತ್ರಗಳು ಸುಳ್ಳಲ್ಲ. ವಿಚಾರ ಮಾಡದೇ ಇರುವವರು ಸುಳ್ಳು ಹೇಳುತ್ತಾರೆ.

ಧರ್ಮ ಸರಳ

ಕಬೀರದಾಸರು ಬೋಧಿಸಿದ ಧರ್ಮ ಸರಳವಾದದ್ದು.

“ಸಾಈಂ ಸೇತೀ ಸಾಂಚ್‌ಚಲಿ
ಔರಾಸೂಂ ಸದ್ ಭಾವ್‌”

“ಸ್ವಾಮಿಯಲ್ಲಿ ಸತ್ಯದಿಂದ ನಡೆದುಕೋ. ಅನ್ಯರಲ್ಲಿ ಸದ್ಭಾವನೆ ಇರಲಿ” – ಇದು ಎಲ್ಲ ಧರ್ಮಗಳ ಮರ್ಮ. ಜಟ್ಟು-ಗಡ್ಡ ಇವೆಲ್ಲ ಧರ್ಮಕ್ಕೆ ಸಂಬಂಧಪಟ್ಟದ್ದಲ್ಲ. ಬೇಕಾದರೆ ತಲೆಯ ಮೇಲೆ ಜುಟ್ಟು ಬೆಳೆಸಲಿ ಅಥವಾ ಬೋಳಿಸಿಬಿಡು.

“ಧರ್ಮಕ್ಕೆ ಮೂಲ ಒಂದು-ದಯೆ, ಇನ್ನೊಂದು-ಜಗದ್ರಕ್ಷಕನಲ್ಲಿರುವ ಭಕ್ತಿ. ಮಿಕ್ಕೆಲ್ಲವೂ ಆಡಂಬರ, ಕಪಟ, ಇವು ಇದ್ದರೇನು? ಇಲ್ಲದಿದ್ದರೇನು?”

ಹಿಂಸೆಯ ದಾರಿಯನ್ನು ತುಳಿದಿರುವ ಧಾರ್ಮಿಕರನ್ನು ಕಂಡರೆ ಕಬೀರದಾಸರಿಗೆ ಸಿಟ್ಟೋ ಸಿಟ್ಟು-

“ದಿನವೆಲ್ಲಾ ಉಪವಾಸವಿರುವುದು, ರಾತ್ರಿ ಪಶುವನ್ನು ಕೊಲ್ಲುವುದು? ಒಂದೆಡೆ ಖೂನಿಯಂತೆ ಕ್ರೂರಿ, ಇನ್ನೊಂದೆಡೆ ಭಕ್ತನಂತೆ ತೋರುವಿ. ದೇವರು ಯಾವುದನ್ನು ನಿನ್ನ ಸ್ವರೂಪವೆಂದು ತಿಳಿಯಬೇಕು!”

“ಕುರಿ ಸೊಪ್ಪು ತಿನ್ನುತ್ತದೆ. ಆ ಅಪರಾಧಕ್ಕಾಗಿ ಅದರ ತಲೆ ಕತ್ತರಿಸುತ್ತೀಯೆ. ಆ ಕುರಿಯನ್ನೇ ತಿನ್ನುವ ನಿನಗೆ ಏನು ಮಾಡಬೇಕು?”

“ದೇಹ ಬೆಳೆದಿದೆ. ಭಜನೆ ಮಾಡು. ಹಣ ಹೆಚ್ಚಾಗಿದೆ, ದಾನ ಮಾಡು. ಬುದ್ಧಿವಂತನಾದರೆ ಅನ್ಯರಿಗೆ ಉಪಚಾರ ಮಾಡುವುದು ಹೇಗೆಂದು ಯೋಚಿಸು. ಇದು ಬಾಳಿದ್ದಕ್ಕೆ ಸಾರ್ಥಕ.”

“ಹಿಂಸೆಗೆ ಮೂಲ ಅಸೂಯೆ. ಅದನ್ನು ಬಿಡಬೇಕು. ಹುಟ್ಟಿದ್ದಕ್ಕೆ ಬದುಕಬೇಕು. ಬದುಕುವುದಕ್ಕೆ ತಿನ್ನಬೇಕು. ಇನ್ನೊಬ್ಬರಿಗೆ ಇರುವ ಐಶ್ವರ್ಯವನ್ನು ನೋಡಿ ಬಯಸಿದರೇನು ಬಂತು! ಸಂತೋಷವಾಗಿರುವುದನ್ನು ಕಲಿಯಬೇಕು.”

ಆಡಂಬರವನ್ನು ಹಳಿಯುವುದರಲ್ಲಿ, ಕಪಟತನವನ್ನು ಬಯಲಿಗೆಳೆಯುವುದರಲ್ಲಿ ಕಬೀರದಾಸರ ಹರಿತವಾದ ಮಾತು ಕೇಳಿದರೆ ಇವರೆಂಥ ಗರ್ವಿಷ್ಠರು, ತಾವೇ ಎಲ್ಲ ಬಲ್ಲವರೆಂದು ಅಹಂಕಾರ ತುಂಬಿದೆ ಇವರಲ್ಲಿ. ತಾವು ಹೇಳಿದ್ದೇ ನಿಜ ಎಂಬ ದುರಭಿಮಾನವೆಷ್ಟು? ಹೇಳುವುದರಲ್ಲಿ ನಯ ನಾಜೂಕು ಬೇಡವೇ? ಎನ್ನಿಸಬಹುದು.

ಭಕ್ತ

ಆದರೆ ಕಬೀರದಾಸರು ಭಕ್ತರು, ಸತ್ಯಾನ್ವೇಷಿಗಳು, ಸರಳ ಜೀವನವನ್ನು ನಡೆಸಿದ ಹಿರಿಯ ವಿಚಾರಕರು, ಸಾಧುಗಳು, ವಿನಯಶೀಲರು.

ಅವರೆಂಥ ವಿನಯಮೂರ್ತಿ ಎಂಬುದನ್ನು ನೋಡಿ “ಯಾರು ಪಾಖಂಡ (ಕಪಟಿ) ಅಭಿಮಾನವನ್ನು ಬಿಟ್ಟು ದಾರಿಯಲ್ಲಿ ಬಿದ್ದು ಹುದುಗಿರುವ ಕಲ್ಲಿನಂತಿರುತ್ತಾರೋ ಅಂಥವರಿಗೆ ಮಾತ್ರ ಭಗವಂತನ ಸಿಗುತ್ತಾನೆ” ಎಂದು ಹೇಳಿದರು ಕಬೀರದಾಸರು. ತಾವು “ಸಂತರ ಚೇಲಾ. ದಾಸರ ದಾಸರ ದಾಸ, ಕಬಿರ ಹೇಗೆ ಬಾಳುತ್ತಿದ್ದಾನೆಂದರೆ ತಾನು ಎಲ್ಲರ ಕಾಲು ಕೆಳಗಿರುವ  ಹುಲ್ಲಿನಂತೆ.” ಅಂದರೆ ತುಳಿಯುವವರು ತುಳಿಯಲಿ. ತಿನ್ನುವವರು ತಿನ್ನಲಿ. ಪರಮಾತ್ಮನ ಕೃಪೆಯ ಹನಿಯ ಬಲದ ಮೇಲೆ ಸದಾ ಹಸುರಾಗಿರುವ ಚೇತನ ಅವರದಾಗಿತ್ತು.

ಕಬೀರದಾಸರು ಹೊಸದನ್ನೇನೂ ಹೇಳಿಲ್ಲ. ಆದರೆ ತಾವು ಸತ್ಸಂಗದಿಂದ ಕಲಿತದ್ದನ್ನು ಅನುಭವಕ್ಕೆ ತಂದುಕೊಂಡು ಅನ್ಯರಿಗೂ ಉಪದೇಶಿಸಿದರು.

ಕಬೀರರ ರಾಮ ದಾಶರಥಿಯಲ್ಲ

ಕಬೀರದಾಸರು ತಮ್ಮ ಪರಮಾತ್ಮನನ್ನು “ರಾಮ” ಎಂದೇ ಹೇಳಿಕೊಂಡಿದ್ದಾರೆ. ಈ ರಾಮನಾಮವನ್ನು ಅವರು ಗುರೂಪದೇಶದಿಂದ ಪಡೆದರು. ಆದರೆ ಕಬೀರದಾಸರ ರಾಮನಿಗೆ ಇಂತಹಗುಣ, ಇಂತಹ ರೂಪ ಎಂದು ಹೇಳುವ ಹಾಗಿಲ್ಲ. ದಶರಥನ ಮಗನಾಗಿ ಹುಟ್ಟಿ ಲಂಕೇಶ ರಾವಣನನ್ನು ಸಂಹಾರ ಮಾಡಿದವನಲ್ಲ.

“ನಾ ದಶರಥ ಘರಿ ಅವತರಿ ಆಯಾ
ನಾ ಲಂಕಾ ಕಾ ರಾಮ್ ಸತಾಯಾ”
“ದಶರಥ ಸುತ ಕಹುಂ ಲೋ ಬಖಾನಾ
ರಾಮನಾಮ ಕಾ ಮರಮ ಹೈ ಆನಾ”

“ಸರಗುನ (ಸಗುಣ) ನಿರಗುನ (ನಿರ್ಗುಣ) ತೇಂಪರೇ ರಾಮ” – ಇವು ಕಬೀರರ ಮಾತುಗಳು.

ಆದರೆ ರಾಮನಿಗೆ ಆಕಾರವನ್ನೂ ಗುಣವನ್ನೂ ಒಪ್ಪದ ಕಬೀರರ ಅನೇಕ ಅನಂತ ನಾಮಗಳನ್ನು ಒಪ್ಪಿದ್ದಾರೆ. ಉಪಯೋಗಿಸಿದ್ದಾರೆ. “ಹರಿ, ಭಗವಾನ್, ಕಮಲಾಕಾಂತ, ನಾರಾಯಣ ಮುರಾರೀ, ಮಾಧವ, ಕೇಶವ, ಜಗನ್ನಾಥ, ರಘುನಾಥ, ಸಾರಂಗಪಾನೀ, ನರಹರಿ, ಕೃಷ್ಣ, ಗೋಪಾಲ, ಗೋವಿಂದ, ಸಮರಥ (ಸಮರ್ಥ), ಕರತಾರ (ಕರ್ತಾರ), ಸಾಹಿಬ, ಸಾಈಂ, ಅಲಖ, ನಿರಂಜ, ಅಲ್ಲಾಹ್, ಖುದಾ, ಖುದಾಇ, ರಹೀಂ, ಕರೀಮೆ” ಇತ್ಯಾದಿ ಹೆಸರುಗಳು ಅವರ ಕೃತಿಯಲ್ಲಿ ಬರುತ್ತವೆ. ಒಟ್ಟಿನಲ್ಲಿ ಕಬೀರದಾಸರ ರಾಮಸರ್ವ ಶಬ್ದಗಳಿಂದಲೂ ಕರೆಯಲಾಗುವ ಒಬ್ಬನೇ ಆದ ಈಶ್ವರ.

ಭಕ್ತನಿಗೆ ವೈರಾಗ್ಯ ಸಹಜವಾಗಿರುತ್ತದೆ. ಆದರ್ಶ ಭಕ್ತ ಸಂತೋಷದ ಮೂರ್ತಿ. ಸತ್ಯಾನ್ವೇಷಕ, ಆಸೆ, ಕೋಪ ಮುಂತಾದವು ಅವನ ಹತ್ತಿರ ಸುಳಿಯಲಾರವು. ಎಲ್ಲರನ್ನೂ ಸಮದೃಷ್ಟಿಯಿಂದ ನೋಡುವ ಉದಾರಿ. ದಯಾಮೂರ್ತಿ. ವಿನಮ್ರ, ಅಹಾಂಕಾರ ಮಮಕಾರಗಳನ್ನು ಬಿಟ್ಟು ಸರಳಜೀವಿ. ಗುರುವಿನ ಗುಲಾಮ. ಸಾಧುಸಂತರ ಸಂಗಡಿಗ. ಅವನಿಗೆ ಇವರು ಹೆಚ್ಚು, ಅವರು ಕಡಿಮೆ ಎಂದೇ ತೋರದು. ಕುಲಗೋತ್ರದ ಮಹತ್ವ ಕಾಣಿಸದು. ಎಲ್ಲೆಲ್ಲೂ ತೋರದು. ಕುಲಗೋತ್ರದ ಮಹತ್ವ ಕಾಣಿಸದು. ಎಲ್ಲೆಲ್ಲೂ ತನ್ನ ಪ್ರಿಯತಮ ಪರಮಾತ್ಮನನ್ನೇ ನೋಡುವ ಸ್ವಭಾವ ಅವನದು. ಈ ಜಗತ್ತಿನಲ್ಲಿ ಭಕ್ತನಿಗೆ ಆಸಕ್ತಿ ಇಲ್ಲ. ಇಲ್ಲಿ ಅವನ ಕಣ್ಣು ಯಾವಾಗಲೂ ಪ್ರಿಯತಮ ಪರಮಾತ್ಮನನ್ನೇ ಹುಡುಕುತ್ತಿರುತ್ತದೆ. ಅದರ ಸಾಕ್ಷಾತ್ಕಾರ ಒಮ್ಮೆ ಆಯಿತೆಂದರೆ ಮತ್ತೆ ಚಿಂತೆ ಇಲ್ಲ. ನಿಶ್ಚಿಂತೆ. ಆಗ ಅವನು ಸದಾ ಆತ್ಮಾನುಭವದ ಆನಂದದಲ್ಲಿ ಲೀನವಾಗಿರುತ್ತಾನೆ. ಅವನ ಮಾತು ಮೂಕವಾಗುತ್ತದೆ.

ಕಬೀರದಾಸರು ಈ ಹಂತವನ್ನು ಮುಟ್ಟಿದ ಪುಣ್ಯಜೀವಿ. ಈ ಹಂತದಲ್ಲಿ ಕಬೀರದಾಸರು ತಮ್ಮ ಹಾಗೂ ಪರಮಾತ್ಮನ ಸಂಬಂಧವನ್ನು ತಿಳಿಸಲು ಯತ್ನಿಸಿದ್ದಾರೆ. ಮಾತಿಗೆ ನಿಲುಕದ ಅನುಭವವನ್ನು ಕುರಿತು ತಿಳಿಸುವ ಕಲೆ ಕಬೀರದಾಸರಿಗೆ ಪಳಗಿ ಬಂದಿರುವುದು. ಅವರ ಈ ಬಗೆಯ ರಚನೆಯನ್ನು ನೋಡಿ ಕಬೀರದಾಸರನ್ನು “ರಹಸ್ಯವಾದಿ”ಗಳೆನ್ನುತ್ತಾರೆ.

ಇಂದಿಗೂ ಕಬೀರನನ್ನು ಅನುಸರಿಸುವವರು ಸಾವಿರಾರು ಜನ. ಅವರು ಪ್ರಪಂಚವನ್ನು ಬಿಟ್ಟ ದಿನ ಪ್ರತಿ ವರ್ಷ ನೂರಾರು ಹಿಂದುಗಳು. ತಮ್ಮ ಮನೆಯ ತೀರಿಕೊಂಡ ಹಿರಿಯರಿಗೆ ಮಾಡುವ ಹಾಗೇ ಶ್ರಾದ್ಧಕರ್ಮ ಮಾಡುತ್ತಾರೆ. ನೂರಾರು ಮಂದಿ ಮುಸ್ಲಿಮರು “ಸೀದಾ” (ತೀರಿಕೊಂಡವರಿಗಾಗಿ ದಾನ” ಕೊಡುತ್ತಾರೆ. ಆಡಂಬರವಿಲ್ಲದ, ಜಾತಿ ವ್ಯತ್ಯಾಸವಿಲ್ಲದ, ನಿರ್ಮಲ ಭಕ್ತಿಯ ಮಾರ್ಗದಲ್ಲಿ ನಡೆದು ಇತರರಿಗೆ ದಾರಿದೀಪವಾದ ದಿವ್ಯ ಚೇತನ ಅವರು.