ಈಗ ಬೆಳೆಯುತ್ತಿರುವ ಕಬ್ಬಿನ ಪ್ರಮಾಣದ ಹಿನ್ನೆಲೆಯಲ್ಲಿ ಗಮನಿಸಿದರೆ ಮುಂದಿನ ದಿನಗಳಲ್ಲಿ ವಿಶ್ವದ ಜನಸಂಖ್ಯೆಗೆ ಅವಶ್ಯವೆನಿಸುವಷ್ಟು ಸಕ್ಕರೆ ಪೂರೈಸುವುದು ದುಸ್ತರವಾಗಲಿದೆ. ಸುಧಾರಿತ ಕಬ್ಬಿನ ತಳಿಗಳು ಇಲ್ಲದೇ ಇರುವುದು, ಉತ್ತಮ ಇಳವರಿ ದೊರಕದಿರುವುದು, ಕಾರ್ಮಿಕರ ಕೊರತೆ, ಒಂದು ಬಾರಿ ಕಬ್ಬು ಬೆಳೆದು ಕೈ ಸುಟ್ಟುಕೊಂಡ ರೈತ ಮತ್ತೆ ಕಬ್ಬಿನ ಕಡೆಗೆ ಆಸಕ್ತಿ ತೋರದಿರುವುದು…

ಇಂತಹ ಅನೇಕ ಕಾರಣಗಳಿಂದಾಗಿ ಈಗಾಗಲೇ ಬೇಡಿಕೆಗೆ ತಕ್ಕಂತೆ ಸಕ್ಕರೆಯ ಉತ್ಪಾದನೆಯ ಪ್ರಮಾಣ ಕುಸಿದಿದೆ. ಹಾಗಾಗಿಯೇ ಜನಸಾಮಾನ್ಯನ ಕೈಗೆಟುಕದಂತೆ ಸಕ್ಕರೆ ಬೆಲೆ ಗಗನಕ್ಕೇರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಸಕ್ಕರೆಯ ಬೆಲೆ ಯಾವ ಸ್ಥಿತಿಗೆ ತಲುಪಬಹುದು ಎಂದುಕೊಂಡರೆ ಚಿಂತೆ ಕಾಡುತ್ತದೆಯಲ್ಲವೆ?

ಮುಂದೆ ಬರಲಿರುವ ಇಂತಹ ಸವಾಲುಗಳನ್ನು ಎದುರಿಸಲು ಇರುವ ಪರ್ಯಾಯ ದಾರಿಗಳಲ್ಲಿ ಕಬ್ಬಿನಂತೆಯೇ ಸಕ್ಕರೆಯ ಉತ್ಪಾದಿಸುವ ‘ಸಕ್ಕರೆ ಗಡ್ಡೆ’ ಬೆಳೆ ಕೂಡ ಒಂದು. ಈಗಾಗಲೇ ಜಗತ್ತಿನ ಹಲವು ದೇಶಗಳಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಸಿಂಹಪಾಲು ಹೊಂದಿರುವ ಈ ಸಕ್ಕರೆ ಗಡ್ಡೆ ತಡವಾಗಿಯಾದರೂ ಭಾರತದ ನೆಲದಲ್ಲಿ ಬೇರೂರುತ್ತಿದೆ. ಭಾರತದಲ್ಲಿ ಕೆಲವು ಕಾರ್ಖಾನೆಗಳು ಈಗಾಗಲೇ ಸಕ್ಕರೆ ಗಡ್ಡೆಯಿಂದ ಸಕ್ಕರೆ ಸಂಸ್ಕರಿಸುವ ಕಾರ್ಯ ಆರಂಭಿಸಿದ್ದು, ಕರ್ನಾಟಕದಲ್ಲಿ ಇನ್ನೂ ಇಂತಹ ಕಾರ್ಖಾನೆಗಳು ಆರಂಭಗೊಂಡಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಕೇವಲ ಬೆಳೆಯ ಪ್ರಯೋಗ ಆರಂಭವಾಗಿದೆ.

ಏನಿದು ಸಕ್ಕರೆ ಗಡ್ಡೆ

`ಚನೋಪೋಡಿಯಾಸ್’ ಕುಟುಂಬಕ್ಕೆ ಸೇರಿದ ಈ ಸಸ್ಯ ನಮ್ಮಲ್ಲಿ ಬೆಳೆಯುವ ಮೂಲಂಗಿ ತರಹವೇ ರಚನೆ ಹೊಂದಿದೆ. ಪಾಲಕ್ ಸಸ್ಯದ ರೀತಿಯ ಎಲೆ ಹೊಂದಿದ ಈ ಗಡ್ಡೆ ತನ್ನ ಒಡಲಲ್ಲಿ ಸಕ್ಕರೆಯ ಖನಿಯನ್ನೇ ಹೊಂದಿದ್ದು, ಯುರೋಪ್ ಮೂಲದ ಸಸ್ಯವಾಗಿದೆ. ಅಗಲವಾದ ಹಸಿರು ಎಲೆ, ಕೈಗೆ ಹಿಡಿಯಲು ಸಾಧ್ಯವಾಗದಷ್ಟು ದೊಡ್ಡ ಗಾತ್ರದ ಗಡ್ಡೆ ಹೊಂದಿ ಕಬ್ಬ್ಬಿಗಿಂತಲೂ ಅಧಿಕ ಸಕ್ಕರೆ ಅಂಶ ನೀಡುವ ಸಾಧಾರಣ ಸಸ್ಯ.

ಉಷ್ಣವಲಯವೇ ಇರಲಿ, ಸಮಶೀತೋಷ್ಣ ವಲಯವೇ ಇರಲಿ, ಕ್ಷಾರ ಮಣ್ಣಿರಲಿ, ಸವುಳು ಮಣ್ಣೇ ಆಗಿರಲಿ ಬೆಳೆಯಲು ಹಿಂಜರಿಯದ ಈ ಗಡ್ಡೆ ಬೀಜ ಊರಿದ ಜಾಗದಲ್ಲಿ ಹಿರಿ-ಹಿರಿ ಹಿಗ್ಗುತ್ತಾ ಎರಡರಿಂದ ಮೂರು ಕೆ.ಜಿಯವರೆಗೆ ಗಡ್ಡೆ ಬೆಳೆಸುತ್ತದೆ. ಬಿತ್ತನೆಯಾಗಿ ಆರನೇ ತಿಂಗಳಿಗೆ ಸಕ್ಕರೆ ಒದಗಿಸುವ ಈ ಬೆಳೆ, ಆಧುನಿಕ ಜಗತ್ತಿನ ಸಕ್ಕರೆ ಕಣಜವಾಗಿದೆ. ಬಹು ಹಿಂದಿನಿಂದಲೂ ಯುರೋಪಿನಲ್ಲಿ ಈ ಸಕ್ಕರೆ ಗಡ್ಡೆ ಬೆಳೆಯಲಾಗುತ್ತಿತ್ತು.

ಆದರೆ, ಹಳೆಯ ಕಾಲದ ತಳಿಯಾಗಿದ್ದ ಅದು ಆ ಸಮಯದಲ್ಲಿ ತರಕಾರಿ ಬೆಳೆಗಳ ಸಾಲಿಗೆ ಸೇರಿತ್ತು. 15ನೇ ಶತಮಾನದವರೆಗೆ ಅದರಲ್ಲಿ ಸುಕ್ರೋಸ್ ಪ್ರಮಾಣವಿರಲಿಲ್ಲ. 18ನೇ ಶತಮಾನದ ಹೊತ್ತಿಗೆ ಅದರಲ್ಲಿ ಕ್ರಮೇಣ ಸಕ್ಕರೆಯ ಅಂಶ ತುಂಬಿಕೊಂಡಿತು. ಆ ಹೊತ್ತಿಗಾಗಲೇ ಅಮೆರಿಕಾವರೆಗೆ ಹಬ್ಬಿದ್ದರಿಂದ ಅಲ್ಲಿ ಮತ್ತಷ್ಟು ಸುಧಾರಣೆಗೊಂದು ಬೀಟಾ ಶುಗರ್ ಆಗಿ ಪರಿಚಯವಾಗಿ, ಈಗ ಬೀಟ್ ಶುಗರ್ ಆಗಿ ಮಾರುಕಟ್ಟೆಗೆ ಬಂದಿದೆ.

1995ರಲ್ಲಿ ಅಧಿಕೃತವಾಗಿ ಇಂತಹ ಗಡ್ಡೆಗಳಿಂದ ಸಕ್ಕರೆ ಉತ್ಪಾದನೆ ಆರಂಭವಾಯಿತು. ಸದ್ಯ ಹತ್ತಾರು ರಾಷ್ಟ್ರಗಳಲ್ಲಿ ಮಾತ್ರ ತಯಾರಾಗುವ ಸಕ್ಕರೆಯಲ್ಲಿ ಗಣನೀಯ ಪಾಲು ಈ ಗಡ್ಡೆಯಿಂದ ಉತ್ಪಾದನೆಯಾಗಿರುವ ಸಕ್ಕರೆ ಎಂಬುದನ್ನು ಮರೆಯುವಂತಿಲ್ಲ. ವಿಶ್ವದಲ್ಲಿ ಆಹಾರಕ್ಕಾಗಿ ಹಾಗೂ ಇತರೆ ಚಟುವಟಿಕೆಗಳಿಗಾಗಿ ಬಳಕೆಯಾಗುವ ಸಕ್ಕರೆಯಲ್ಲಿ ಶೇಕಡಾ 45ರಷ್ಟು ಸಕ್ಕರೆ ಈ ಗಡ್ಡೆಯಿಂದಲೇ ಬಂದದ್ದು. ಕಡಿಮೆ ನೀರು ಪಡೆದು, ಕಬ್ಬಿಗಿಂತ ಕಡಿಮೆ ಅವಧಿಯಲ್ಲಿ ಬೆಳೆಯುವ ಈ ಸಕ್ಕರೆ ಗಡ್ಡೆ ರಾಸಾಯನಿಕ ಗೊಬ್ಬರದ ಅಬ್ಬರವಿಲ್ಲದೆ ಬೆಳೆಯುವ ಬೆಳೆಯಾಗಿದೆ.

ಸಕ್ಕರೆಗಡ್ಡೆ ಬೆಳೆ

ವಿಶ್ವವ್ಯಾಪಿ ಬೆಳೆ

ಸಕ್ಕರೆಯ ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲು ಹೊರಟಿರುವ ಈ ಸಕ್ಕರೆ ಗಡ್ಡೆಯನ್ನು ಈಗಾಗಲೇ ರಷ್ಯಾ, ಅಮೆರಿಕಾ, ಫ್ರಾನ್ಸ್, ಜರ್ಮನಿ, ಇಟಲಿ, ಪೋಲ್ಯಾಂಡ್, ಟರ್ಕಿ, ಬ್ರೆಜಿಲ್, ಜಕೋಸ್ಲೋವಿಯಾ, ಇರಾನ್, ಇರಾಕ್, ಅಲ್ಜೀರಿಯಾ, ಇಸ್ರೇಲ್, ಪಾಕಿಸ್ತಾನ ಸೇರಿದಂತೆ 14 ದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ನಮ್ಮಲ್ಲಿ ಕಬ್ಬಿನಿಂದ ಸಕ್ಕರೆ ತಯಾರಿಸುವ ಸಕ್ಕರೆ ಕಾರ್ಖಾನೆಯಂತೆ ಅಲ್ಲೀಗ ಸಕ್ಕರೆ ಗಡ್ಡೆಯಿಂದ ಸಕ್ಕರೆ ತಯಾರಿಸುವ ಬೃಹತ್ ಘಟಕಗಳು ಕಾರ್ಯಾರಂಭ ಮಾಡಿವೆ. ಕಡಿಮೆ ಕರ್ಚಿನಲ್ಲಿ ಬೆಳೆಯುವ ಜೊತೆಗೆ ಬೆಳೆಗಾರರಿಗೆ ಕೈತುಂಬ ಕಾಸು ತಂದು ಕೊಡುವ ಬೆಳೆ ಇದಾಗಿರುವುದರಿಂದ ಬೆಳೆ ಬಗ್ಗೆ ಅಲ್ಲಿನ ರೈತರೂ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.

ಭಾರತದತ್ತ ಸಕ್ಕರೆ ಗಡ್ಡೆ
ಈ ಎಲ್ಲ ವಿಚಾರವನ್ನು ಮನಗಂಡ ಭಾರತದ ಕೃಷಿ ವಿಜ್ಞಾನಿಗಳು, ನಮ್ಮಲ್ಲೂ ಏಕೆ ಈ ಸಕ್ಕರೆ ಗಡ್ಡೆ ಬೆಳೆಯಬಾರದು? ನಮ್ಮಲ್ಲಿನ ಮಣ್ಣು, ನೀರು ಹಾಗೂ ಹವಾಮಾನ ಈ ಬೆಳೆ ಬೆಳೆಯಲು ಸೂಕ್ತವಾಗಿದೆಯೇ? ಎಂದು ಪ್ರಾಯೋಗಿಕವಾಗಿ ನಾಲ್ಕಾರು ವರ್ಷಗಳಿಂದ ಬೆಳೆಯುತ್ತಿದ್ದಾರೆ.

ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಈಗ ಪ್ರಾಯೋಗಿಕ ಬೆಳೆ ಯಶಸ್ವಿಯಾಗಿ, ಕೆಲವು ಕಾರ್ಖಾನೆಗಳ ವ್ಯಾಪ್ತಿಯಲ್ಲಿ ರೈತರು ಕೂಡ ಬೆಳೆಯತೊಡಗಿದ್ದಾರೆ. ಮಹಾರಾಷ್ಟ್ರದ ಜಾಲ್ನಾದಲ್ಲಿ ಈ ಗಡ್ಡೆಯಿಂದ ಸಕ್ಕರೆ ತಯಾರಿಸುವ ಘಟಕವೂ ಆರಂಭವಾಗಿದೆ. ಭಾರತದಲ್ಲೀಗ ಈ ಗಡ್ಡೆಯಿಂದ ಸಕ್ಕರೆ ಉತ್ಪಾದಿಸುವ ಐದು ಘಟಕಗಳಿವೆ.

ಕರ್ನಾಟಕದಲ್ಲಿ ಕಳೆದ ಒಂದೆರಡು ವರ್ಷದಿಂದ ಪ್ರಾಯೋಗಿಕ ಬೆಳೆ ತೆಗೆಯಲಾಗಿದ್ದು, “ಈ ಬಾರಿ ಬೆಳಗಾವಿಯ ಸಕ್ಕರೆ ಸಂಸ್ಥೆ, ಬೆಳೆಯ ಪ್ರಯೋಗ ಮಾಡಿದ್ದು, ಅದೀಗ ಯಶಸ್ವಿಯಾಗಿದೆ. ಬೆಳೆ ಬೆಳೆಯಲೇನೂ ಅಡ್ಡಿ ಇಲ್ಲ. ಆದರೆ, ಬೆಳೆ ಬೆಳೆಯುವುದಕ್ಕಿಂತ ಮೊದಲು ಗಡ್ಡೆಯಿಂದ ಸಕ್ಕರೆ ಉತ್ಪಾದಿಸುವ ಸಂಸ್ಕರಣಾ ಘಟಕ ನಮ್ಮಲ್ಲಿ ಸ್ಥಾಪನೆಯಾಗಬೇಕಾಗಿದೆ. ನಂತರ ರೈತರ ಜಮೀನಿಗೆ ಈ ಗಡ್ಡೆ ನೀಡಬಹುದು” ಎಂದು ಸಕ್ಕರೆ ಸಂಸ್ಥೆಯ ವಿಜ್ಞಾನಿ ಡಾ. ಆರ್.ಬಿ. ಖಂಡಗಾವೆ ಹೇಳುತ್ತಾರೆ.

ಡಿಮೆ ನೀರಿನ ಬೆಳೆ

ಸಾಮಾನ್ಯವಾಗಿ ಎಲ್ಲ ಋತುಗಳಲ್ಲೂ, ಎಲ್ಲ ಪ್ರದೇಶದಲ್ಲೂ ಬೆಳೆಯಬಹುದಾದ ಈ ಸಕ್ಕರೆ ಗಡ್ಡೆ ಗರಿಷ್ಠ ಎಂದರೆ ಆರು ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಪ್ರತಿ ಹೆಕ್ಟೇರಿಗೆ 30ರಿಂದ 40 ಟನ್ ಇಳವರಿ ನೀಡುತ್ತದೆ. ಉಷ್ಣತೆ ಸಹಿಸುವ ಸಾಮರ್ಥ್ಯ ಹೊಂದಿರುವ ಬೆಳೆ ಇದಾಗಿದೆ. ಕಬ್ಬಿನ ಹಾಗೆ ಅಧಿಕ ನೀರಿನ ಅವಶ್ಯಕತೆ ಇಲ್ಲದೆ, ಕಡಿಮೆ ನೀರಿನಲ್ಲಿ ಬೆಳೆದು ಅಧಿಕ ಇಳವರಿ ನೀಡುತ್ತದೆ. ಕೆಲವು ಬೆಳೆಗಳಿಗೆ ಸೂಕ್ತವೆನಿಸದ ಕ್ಷಾರ ಹಾಗೂ ಸವಳು ಮಣ್ಣಿನಲ್ಲೂ ಈ ಗಡ್ಡೆ ಬೆಳೆಯುತ್ತದೆ. ಜೊತೆಗೆ ಆ ಮಣ್ಣಿನಲ್ಲಿರುವ ಕ್ಷಾರ ಹಾಗೂ ಸವಳು ಅಂಶವನ್ನು ಕಡಿಮೆ ಮಾಡುತ್ತದೆ.

ಸಕ್ಕರೆ ಗಡ್ಡೆ ಬೆಳೆದ ನಂತರ ರೈತರು ಇನ್ನಾವುದೇ ಬೆಳೆಯನ್ನು ಆ ಭೂಮಿಯಲ್ಲಿ ಬೆಳೆಯಲೂ ಅಡ್ಡಿಯಿಲ್ಲ. ಗರಿಷ್ಠ ಎಕರೆಗೆ 8,000 ರೂಪಾಯಿ ವೆಚ್ಚ ತಗಲುತ್ತದೆ. ಆದರೆ, ಆರು ತಿಂಗಳಲ್ಲಿ ಸುಮಾರು 20,000 ರೂಪಾಯಿ ಲಾಭ ಪಡೆಯಬಹುದು ಎಂದು ಡಾ. ಖಂಡಗಾವೆ ಅಂದಾಜಿಸುತ್ತಾರೆ. ಸರಳ ಕೃಷಿ ಹಾಗೂ ಸುಲಭ ಕೊಯ್ಲು ನಡೆಸಬಹುದಾದ ಕಬ್ಬಿನೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯಬಹುದಾದ ಬೆಳೆ ಇದಾಗಿದೆ.

ವ್ಯತ್ಯಾಸವೇನು?

ಸಕ್ಕರೆ ಉತ್ಪಾದಿಸುವ ಕಬ್ಬು ಹಾಗೂ ಸಕ್ಕರೆ ಗಡ್ಡೆಯ ನಡುವೆ ಕೆಲವೊಂದು ವ್ಯತ್ಯಾಸಗಳಿವೆ. ಕಬ್ಬು 12ರಿಂದ 13 ತಿಂಗಳ ಬೆಳೆಯಾದರೆ, ಸಕ್ಕರೆ ಗಡ್ಡೆ 5ರಿಂದ 6 ತಿಂಗಳ ಬೆಳೆ. ಕಬ್ಬಿಗೆ ವರ್ಷಪೂರ್ತಿ ಪೂರ್ಣ ಪ್ರಮಾಣದ ನೀರಿನ ಅಗತ್ಯವಿದ್ದರೆ, ಸಕ್ಕರೆ ಗಡ್ಡೆಗೆ ಕಬ್ಬಿಗೆ ಒದಗಿಸುವ ನೀರಿನ 1/3 ಭಾಗ ಮಾತ್ರ ಸಾಕಾಗುತ್ತದೆ. ಕಬ್ಬು ಒಂದು ಎಕರೆಗೆ 25ರಿಂದ 30 ಟನ್ ಇಳವರಿ ಬಂದರೆ, ಸಕ್ಕರೆ ಗಡ್ಡೆ 40ರಿಂದ 50 ಟನ್ ಇಳವರಿ ನೀಡುತ್ತದೆ.

ಕಬ್ಬಿಗೆ ಜೇಡಿ ಮಣ್ಣು ಅಥವಾ ಜಿಗುಟು ಮಣ್ಣು ಅವಶ್ಯವಾದರೆ, ಸಕ್ಕರೆ ಗಡ್ಡೆ ಉಸುಕು ಮಿಶ್ರಿತ ಯಾವ ಮಣ್ಣಿನಲ್ಲೂ ಬೆಳೆಯುತ್ತದೆ. ಕಬ್ಬಿನ ರಸದಲ್ಲಿ ಶೇಕಡ 10 ರಿಂದ 11ರಷ್ಟು ಸಕ್ಕರೆ ಅಂಶವಿದ್ದರೆ, ಸಕ್ಕರೆ ಗಡ್ಡೆಯಲ್ಲಿ ಶೇಕಡ 14 ರಿಂದ 16ರಷ್ಟು ಸಕ್ಕರೆ ಅಂಶವಿರುತ್ತದೆ. ಅಲ್ಲದೇ ಒಂದು ಟನ್ ಸಕ್ಕರೆ ಗಡ್ಡೆಯಿಂದ 90 ಲೀಟರ್ ಎಥೆನಾಲ್ ಹಾಗೂ ಶೇಕಡ 15 ರಷ್ಟು ಸುಕ್ರೋಸ್ ಪಡೆಯಬಹುದು ಎಂದು ಎಂ.ಕೆ. ಹುಬ್ಬಳ್ಳಿಯ ಸಕ್ಕರೆ ಸಹಕಾರಿ ಸಂಘದ ಕಬ್ಬು ಅಭಿವೃದ್ಧಿ ಅಧಿಕಾರಿ ವಿ.ಎಸ್. ಹಂಜಿ ಹೇಳುತ್ತಾರೆ.

ಬೆಳೆ ವಿಧಾನ

ಸಕ್ಕರೆ ಗಡ್ಡೆಯ ಬೀಜಗಳನ್ನು ಭೂಮಿಯಲ್ಲಿ ಊರುವುದರ ಮೂಲಕ ಈಗ ಸಕ್ಕರೆ ಗಡ್ಡೆ ಬೆಳೆಯಲಾಗುತ್ತಿದೆ. ಅಕ್ಟೋಬರ್- ನವೆಂಬರ್ ನಿಂದ ಮಾರ್ಚ- ಮೇ ತಿಂಗಳವರೆಗೆ ಬೀಜ ಊರಲು ಸೂಕ್ತ ಸಮಯ. ಬೀಜ ಮೊಳಕೆಯೊಡೆಯಲು ಕನಿಷ್ಠ 20ರಿಂದ 25 ಡಿಗ್ರಿ ಉಷ್ಣಾಂಶ ಬೇಕಾಗುತ್ತದೆ. ಸಸ್ಯದ ಬೆಳವಣಿಗೆ ಅವಧಿಯಲ್ಲಿ 30-35 ಡಿಗ್ರಿ ಉಷ್ಣಾಂಶ ಬೇಕು. ಗಡ್ಡೆಯಲ್ಲಿ ಸಕ್ಕರೆಯ ಅಂಶ ತುಂಬಿಕೊಳ್ಳಲು 25 ಡಿಗ್ರಿಯಿಂದ 35 ಡಿಗ್ರಿ ವರೆಗೆ ಉಷ್ಣಾಂಶದ ಅವಶ್ಯಕತೆ ಇರುತ್ತದೆ. ಆಯಾ ಪ್ರದೇಶದಲ್ಲಿನ ಹವಾಮಾನಕ್ಕೆ ತಕ್ಕಂತೆ ಆಯಾ ಸಂದರ್ಭದಲ್ಲಿ ಈ ಪ್ರಮಾಣದ ಉಷ್ಣತೆ ದೊರಕುವ ಸಮಯ ನೋಡಿಕೊಂಡು ರೈತರು ವ್ಯವಸಾಯ ಮಾಡಬಹುದು.

ಪ್ರತಿ ಹೆಕ್ಟೇರಿಗೆ 3.6 ಕೆ.ಜಿ ಬೀಜ ಬೇಕಾಗುತ್ತವೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆಯ ಪ್ರಕಾರ ಇಷ್ಟು ಬೀಜಕ್ಕೆ 5,700 ರೂಪಾಯಿ ಬೆಲೆ ಇದೆ. 50X20 ಸೆ.ಮೀ ಅಳತೆಗೆ ತಕ್ಕಂತೆ ಬೀಜ ನಾಟಿ ಮಾಡಬೇಕು. ಒಂದು ಹೆಕ್ಟೇರಿಗೆ ಸುಮಾರು 1 ಲಕ್ಷದಿಂd 1.2 ಲಕ್ಷ ಸಸಿಗಳು ಬೇಕಾಗುತ್ತವೆ.

ಕಬ್ಬಿನ ನಡುವೆ ಮಿಶ್ರಬೆಳೆಯಾಗಿ ಸಕ್ಕರೆಗಡ್ಡೆ

ರೋಗಬಾಧೆ

ಸಕ್ಕರೆ ಗಡ್ಡೆಯ ಸಸ್ಯಗಳಲ್ಲಿ ಹಲವಾರು ತಳಿಗಳಿವೆ. ಇತರೆ ಬೆಳೆಗಳಂತೆ ಸಕ್ಕರೆ ಗಡ್ಡೆಗೂ ಕೀಟಬಾಧೆ ಹಾಗೂ ರೋಗಬಾಧೆಗಳಿದ್ದು ಉಪಶಮನ ಕ್ರಮಕೈಗೊಳ್ಳದಿದ್ದಲ್ಲಿ ಇಡೀ ಬೆಳೆಯೇ ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ಅದರಲ್ಲಿ ಕ್ಲೋಸರ್, ಸ್ಪೋಡೊಮರ್, ಎಲೆ ತಿನ್ನು ಹುಳು, ಬೇರು ಕೊಳೆ ರೋಗ, ಸೊರಗು ರೋಗದಂತಹ ಬಾಧೆಗಳು ಕಂಡು ಬರುತ್ತವೆ.

ಬೀಜ ಬಿತ್ತಿದ ನಂತರ ಆರು ತಿಂಗಳ ಅವಧಿಯಲ್ಲಿ ಬಹುತೇಕ ಬೆಳೆ ಕೊಯ್ಲಿಗೆ ಬಂದಿರುತ್ತದೆ. ಗಡ್ಡೆಗಳ ಮೇಲಿನ ಹಸಿರು ಎಲೆಯನ್ನು ಕಿತ್ತು ಹಾಕಿ ಗಡ್ಡೆಗಳನ್ನು ಕೀಳುವ ಮೂಲಕ ಬೇರ್ಪಡಿಸಬಹುದು. ವಿದೇಶಗಳಲ್ಲಿ ನೂರಾರು ಎಕರೆಯಲ್ಲಿ ಬೆಳೆಯುತ್ತಿರುವ ಈ ಎಲೆ ಕೊಯ್ಯಲು ಹಾಗೂ ಗಡ್ಡೆ ಕಿತ್ತಲು ಕಾರ್ಮಿಕರ ಅಭಾವದ ಹಿನ್ನೆಲೆಯಲ್ಲಿ ಗಡ್ಡೆಯನ್ನು ಮಣ್ಣಿನಿಂದ ಬೇರ್ಪಡಿಸಲು ಯಂತ್ರ ಬಳಸಲಾಗುತ್ತದೆ. ಯಂತ್ರಗಳು ಸಕ್ಕರೆ ಗಡ್ಡೆಯ ಮೇಲೆ ಹಾದು ಹೋಗುತ್ತಿದ್ದಂತೆ ಹಸಿರು ತಪ್ಪಲ ಒಂದೆಡೆಯಾಗುತ್ತ, ಗಡ್ಡೆಗಳು ಮತ್ತೊಂದೆಡೆ ಸಂಗ್ರಹವಾಗುತ್ತವೆ. ಇಂತಹ ಯಂತ್ರಗಳ ಮೂಲಕ ಗಂಟೆಗೆ ಸುಮಾರು 20 ಎಕರೆಯಷ್ಟು ಸಕ್ಕರೆ ಗಡ್ಡೆ ಕೊಯ್ಲು ಮಾಡಬಹುದಾಗಿದೆ.

ಸಂಸ್ಕರಣಾ ವಿಧಾನ

ಯಾಂತ್ರಿಕ ಸಹಾಯದಿಂದಲೇ ಮೊದಲು ಸಕ್ಕರೆ ಗಡ್ಡೆಗಳನ್ನು ತೊಳೆಯಲಾಗುತ್ತದೆ. ನಂತರ ಗಡ್ಡೆಗಳನ್ನು ಚೂರು-ಚೂರಾಗಿ ಕತ್ತರಿಸಲಾಗುತ್ತದೆ. ಚಿಪ್ಸ್ ರೀತಿ ಕತ್ತರಿಸಿದ ಮೇಲೆ ಅವುಗಳನ್ನೆಲ್ಲ ವಿಶೇಷವಾಗಿ ಡಿಫ್ಯೂಜರ್

[Difuser] ಘಟಕದಲ್ಲಿ ರುಬ್ಬಿ ಅದರಿಂದ ಜ್ಯೂಸ್ ಪಡೆಯಲಾಗುತ್ತದೆ. ಕಬ್ಬಿನ ರಸಕ್ಕಿಂತ ಸಕ್ಕರೆ ಗಡ್ಡೆಯ ರಸ ತೆಳುವಾಗಿರುವುದರಿಂದ ಕಾಯಿಸಲು ಕೊಂಚ ಹೆಚ್ಚಿನ ಸಮಯ ಹಿಡಿಯುತ್ತದೆ. ನಂತರ ಕಬ್ಬಿನ ರಸ ಹೇಗೆ ಸಕ್ಕರೆಯ ರೂಪ ತಾಳುತ್ತದೆಯೋ ಹಾಗೇ ವಿಶೇಷ ಘಟಕಗಳ ಮೂಲಕ ಈ ಗಡ್ಡೆಯ ರಸ ಸಕ್ಕರೆ ರೂಪ ತಾಳುತ್ತದೆ.

“ಕಬ್ಬಿನ ರಸ ಕಾಯಿಸಲು ಕಬ್ಬಿನ ಕಬ್ಬಿನ ಸಿಪ್ಪೆ(ಬಯೋಮಾಸ್) ಬಳಕೆಯಾಗುತ್ತದೆ. ಆದರೆ, ಸಕ್ಕರೆ ಗಡ್ಡೆಯಿಂದ ಅಂತಹ ಯಾವುದೇ ಬಯೋಮಾಸ್ ಬರದಿರುವುದರಿಂದ ಅನಿವಾರ್ಯವಾಗಿ ಇತರೆ ಇಂಧನಮೂಲ ಅಥವಾ ವಿದ್ಯುತ್ ಬಳಸಬೇಕಾಗುತ್ತದೆ. ಆದರೆ ಕಬ್ಬಿನಿಂದ ಸಕ್ಕರೆ ತಯಾರಿಸುವ ಘಟಕದಲ್ಲಿಯೇ ಸಕ್ಕರೆ ಗಡ್ಡೆಯ ಸಂಸ್ಕರಣಾ ಘಟಕ ನಿರ್ಮಿಸಿದ,ರೆ ಕಬ್ಬಿನ ಸಿಪ್ಪೆಯನ್ನೇ ಈ ಗಡ್ಡೆ ರಸ ಕಾಯಿಸಲೂ ಬಳಸಬಹುದು” ಎಂದು ಎಂ.ಕೆ. ಹುಬ್ಬಳ್ಳಿ (ಬೆಳಗಾವಿ) ಮಲಫ್ರಭಾ ಸಕ್ಕರೆ ಘಟಕದ ಮುಖ್ಯ ರಾಸಾಯನಿಕ ತಜ್ಞ ಸಿ.ಬಿ. ಪಾಟೀಲ ಹೇಳುತ್ತಾರೆ.

ಸರ್ಕಾರ ಮುಂದಾಗಲಿ

ಕಡಿಮೆ ಅವಧಿಯಲ್ಲಿ ಬೆಳೆದು ಹೆಚ್ಚಿನ ಲಾಭ ತಂದು ಕೊಡುವ ಈ ಬೆಳೆಯನ್ನು ರೈತರಿಗೆ ಬೆಳೆಯಲು ಹೇಳುವುದಕ್ಕೆ ಮೊದಲು ಸರ್ಕಾರ ಸಕ್ಕರೆ ಗಡ್ಡೆಯಿಂದ ಸಕ್ಕರೆ ಸಂಸ್ಕರಿಸುವ ವಿಶೇಷ ಘಟಕಗಳನ್ನು ಸ್ಥಾಪಿಸಬೇಕಾದದ್ದು ಅವಶ್ಯ. ಈಗಾಗಲೇ ನಮ್ಮ ಕರ್ನಾಟಕದಲ್ಲೂ ಈ ಬೆಳೆ ಬೆಳೆಯಲು ಸೂಕ್ತ ವಾತಾವರಣವಿದೆ ಎಂದು ಪ್ರಾಯೋಗಿಕವಾಗಿ ತಿಳಿದಿದೆ.

ಹಾಗಾಗಿ ರೈತರು ಬೆಳೆ ಬೆಳೆದು ಸಂಸ್ಕರಣ ಘಟಕಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
ಅಲ್ಲದೆ ಈಗಿರುವ ಕಬ್ಬು ನುರಿಸುವ ಘಟಕಗಳಲ್ಲಿಯೇ ಸಕ್ಕರೆ ಗಡ್ಡೆ ಸಂಸ್ಕರಿಸುವ ಯಂತ್ರ/ಘಟಕಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ. ಮಹಾರಾಷ್ಟ್ರದ ಜಾಲ್ನಾದಲ್ಲಿ ಇದೇ ರೀತಿ ಘಟಕ ಸ್ಥಾಪಿಸಿ ಕಬ್ಬಿನ ಜೊತೆಗೆ ಕಬ್ಬಿನ ಗಡ್ಡೆ ಸಂಸ್ಕರಣೆ ಮಾಡಿ ಸಕ್ಕರೆ ಉತ್ಪಾದಿಸುತ್ತಿದ್ದಾರೆ. ಕೇವಲ ನಾಲ್ಕಾರು ತಿಂಗಳು ಕಾರ್ಯ ನಿರ್ವಹಿಸಿ ಕಬ್ಬಿಲ್ಲದೇ ಕಾರ್ಯ ಸ್ಥಗಿತಗೊಳಿಸುವ ಸಕ್ಕರೆ ಕಾರ್ಖಾನೆಗಳು ಕೇವಲ ಅರೆ ವರ್ಷದ ಕಾರ್ಖಾನೆಗಳಾಗಿವೆ.

ಕೆಲವೊಂದು ಘಟಕಗಳು ರೈತರು ಈ ಗಡ್ಡೆ ಬೆಳೆಯುವಲ್ಲಿ ಯಾವ ರೀತಿ ಆಸಕ್ತಿ ತೋರುತ್ತಾರೆ ಎಂಬುದನ್ನು ಕಾದು ನೋಡಿ ನಂತರ ಅಂತಹ ವಿಶೇಷ ಘಟಕ ಹಾಕಿಕೊಳ್ಳಲು ಯೋಚಿಸುತ್ತಿವೆ. ಒಟ್ಟಿನಲ್ಲಿ ಸಕ್ಕರೆಗಾಗಿ ಕೇವಲ ಕಬ್ಬನ್ನೇ ನೆಚ್ಚಿ ಕುಳಿತುಕೊಳ್ಳುವ ಬದಲಿಗೆ ಸಕ್ಕರೆಯಷ್ಟೇ ಶಕ್ತಿ ಹೊಂದಿರುವ ಸಕ್ಕರೆ ಗಡ್ಡೆ ಬೆಳೆಯಲು, ಬೆಳೆಸಲು, ಅದರ ಮೇಲೆ ಇನ್ನೂ ಹೆಚ್ಚಿನ ಪ್ರಯೋಗ ಮಾಡಿ ರೈತರಿಗೆ ವಿಶ್ವಾಸ ಮೂಡಿಸಬೇಕಾದ ಗುರುತರ ಜವಾಬ್ದಾರಿ ಸರ್ಕಾರ ಹಾಗೂ ಕೃಷಿ ವಿಜ್ಞಾನಿಗಳ ಹೆಗಲ ಮೇಲಿದೆ.