ಕಮರಾಕ್ಷಿ ಮರಗಳನ್ನು ಪೀಡಿಸುವ ಕೀಟ ಮತ್ತು ರೋಗಗಳು ಕಡಿಮೆ. ಆದಾಗ್ಯೂ ಕೆಲವೂಂದು ಅಲ್ಪಸ್ವಲ್ಪ ನಷ್ಟವನ್ನು

ಉಂಟುಮಾಡುತ್ತವೆ. ಅವುಗಳಲ್ಲಿ ಮುಖ್ಯ ಕೀಟ ಮತ್ತು ರೊಗಗಳು ಹಾಗು ಅವುಗಳ ಹತೋಟಿ ಕ್ರಮಗಳನ್ನು ಈ ಮುಂದೆ ನೀಡಲಾಗಿವೆ.

ಕೀಟಗಳು

. ಹಣ್ಣಿನ ನೊಣ: ಡೆಕಸ್‌ ಪ್ರಭೇದದ ನೊಣಗಳು ಹಣ್ಣುಗಳಿಗೆ ಹಾನಿಮಾಡುವುದುಂಟು ಬೇರೆ ಬೇರೆ ದೇಶಗಳಲ್ಲಿ ಡೇಕಸ್ ಉಪವರ್ಗದ ಬೇರೆ ಬೇರೆ ಪ್ರಭೇದಗಳು ವರದಿ ಮಾಡಲ್ಪಟ್ಟಿವೆ. ಉದಾಹರಣೆಗೆ ಕ್ಯಾರಿಬ್ಬೀನ್  ದ್ವೀಪಗಳಲ್ಲಿ ಕ್ಯಾರಿಬ್ಬೀನ್ ಹಣ್ಣಿನ ನೊಣ (ಅನಾಸ್ಟ್ರೆಫ್ ಸಸಟೆನ್ಸ್), ಕ್ಯಾನರಿ ದ್ವೀಪಗಳಲ್ಲಿ ಮೆಡಿಟರೇನಿಯನ್‌ ಹಣ್ಣಿನ ನೊಣ (ಸೆರಟೈತಿಸ್ ಕ್ಯಾಪಿಟೇಟ), ಹವಾಯಿಯಲ್ಲಿ ಕುಂಬಳ ಜಾತಿಯ ತರಕಾರಿಗಳಿಗೆ ಹಾನಿಮಾಡುವ ಹಣ್ಣಿನ ಹೊಣ (ಡೇಕಸ್ ಕುಕುರ್ಬಿಟೇ), ಮಲೇಷ್ಯಾದಲ್ಲಿ ಡೇಕಸ್ ಡಾರ್ಸಾಲಿಸ್ ಮತ್ತು ಆಸ್ಟ್ರೇಲಿಯಾದಲ್ಲಿ ಕ್ವೀನ್ಸ್‌ ಲ್ಯಾಂಡ್‌ ಹಣ್ಣಿನ ನೊಣ (ಡೇಕಸ್ ಟ್ರಯೋನಿ) ಮುಂತಾಗಿ ಮುಖ್ಯವಾದವು. ಇವುಗಳ ಪೈಕಿ ಒಂದಲ್ಲ ಒಂದು ಪ್ರಭೇದವು ನಮ್ಮ ದೇಶದಲ್ಲಿ ಕಂಡುಸಿಗುತ್ತದೆ.

ಪ್ರಾಯದ ಹೆಣ್ಣು ನೊಣಗಳು ಹಣ್ಣುಗಳಲ್ಲಿ ತಮ್ಮ ಅಂಡನಾಳವನ್ನು ಚುಚ್ಚಿ ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿಹುಳುಗಳು ತಿರುಳನ್ನು ತಿಂದು ಆ ಭಾಗ ಕೊಳೆಯುವಂತೆ ಮಾಡುತ್ತವೆ. ಹೀಗೆ ಹಾನಿಗೀಡಾದ ಹಣ್ಣು ಉದುರಿಬೇಳುತ್ತವೆ.

ಹತೋಟಿ: ಹಾನಿಗೀಡಾದ ಹಣ್ಣುಗಳನ್ನೆಲ್ಲಾ ಸಂಗ್ರಹಿಸಿ ಆಳವಾಗಿ ಹೂತಿಡಬೇಕು ಇಲ್ಲವೇ ಸುಡಬೇಕು. ತೋಟದಲ್ಲಿ ಸ್ವಚ್ಚತೆ ಇರುವುದು ಅಗತ್ಯ. ಬೆಳೆಯ ಮೇಲೆ ಸೂಕ್ತ ಕೀಟ ನಾಶಕವನ್ನು ಕೊಯ್ಲಿಗೆ ಒಂದು ತಿಂಗಳ ಮುಂಚೆ ಕನಿಷ್ಠ ಎರಡು ಸಾರಿಯಾದರೂ ಸಿಂಪಡಿಸಬೇಕು. ಆದರ ಜೊತೆಗೆ ಕೀಟನಾಶಕದೊಂದಿಗೆ ಮೀಥೈಲ್‌ಯೊಜೆನಾಲ್‌ ಮತ್ತು ಬೆಲ್ಲದ ಪಾನಕಗಳನ್ನು ಬೆರೆಸಿ ಇಟ್ಟಲ್ಲಿ ಅವು ಕುಡಿದು ಸಾಯುತ್ತವೆ. ಹತ್ತು ಲೀ. ನೀರಿಗೆ ೧೦ ಮೀ.ಲೀ. ಮ್ಯಾಲಾಥಿಯಾನ್ ಇಲ್ಲವೇ ಡೈಮೆಥೊಯೇಟ್‌ ಕೀಟನಾಶಕ ಬೆರೆಸಿ ಸಿಂಪಡಿಸಿದಲ್ಲಿ ಉತ್ತಮ.

ಅಮೇರಿಕಾ, ಜಪಾನ್‌ ಮುಂತಾದ ದೇಶಗಳಿಗೆ ಹಣ್ಣನ್ನು ರಫ್ತು ಮಾಡುವುದಿದ್ದಲ್ಲಿ ೪೭º ಸೆಂ. ± ೦.೨ºಗಳಷ್ಟು ಬಿಸಿಗಾಳಿಗೆ ಗುರಿಪಡಿಸಿ ಕ್ವಾರಂಟೀನ್‌ ಉಪಚಾರ ಮಾಡಬೇಕಾಗುತ್ತದೆ.

. ಹಣ್ಣು ಕೊರೆಯುವ ಹುಳು (ಎನ್ಕೊಎನೆಜೆನೆಸ್ ಪ್ರಭೇದ ಮತ್ತು ಕ್ರಪ್ಟೋಪ್ಲೆಬಿಯ ಯ್ಂಭ್ರೊಡೆಲ್ಟ): ತೈವಾನ್‌ ದೇಶದಲ್ಲಿ ಇದು ಬಲು ಗುರುತರ ಕಿಟಪೀಡೆಯಾಗಿರುವುದಾಗಿ ವರದಿಯಾಗಿದೆ. ಆಗಸ್ಟ್‌ ತಿಂಗಳಲ್ಲಿ ಇದರ ಹಾವಳಿ ಜಾಸ್ತಿ.

ಹತೋಟಿ: ಇದರ ಹತೋಟಿಗೆ ೧೦ ಲೀ. ನೀರಿಗೆ ೨೦ ಮಿ.ಲೀ. ಮಾನೊಕ್ರೋಟೋಫಾಸ್‌ ಅಥವಾ ಮ್ಯಾಲಾಥಿಯಾನ್‌ ಬೆರೆಸಿ ಸಿಂಪಡಿಸಬೇಕು.

. ಹಣ್ಣಿನ ರಸ ಹೀರುವ ಪತಂಗ (ಒಥ್ರೆಯಿಸ್ ಫುಲ್ಲೋನಿಕ ಮತ್ತು ಒಥ್ರೆಯಿಸ್ ಜೋರ್ಡಾನಿ): ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಸುಮಾರು ಎಂಟು ಪ್ರಭೇದಗಳಿಗೆ ಸೇರಿದ ಪತಂಗಗಳಿದ್ದು ಅವುಗಳ ಪೈಕಿ ಇವೆರಡೂ ಬಹು ಮುಖ್ಯವಾದವುಗಳಾಗಿವೆ. ಇವು ಜನವರಿ-ಫೆಬ್ರುವರಿ ಹಾಗೂ ಏಪ್ರಲ್‌-ಜೂನ್‌ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಇವು ರಾತ್ರಿ ಹೊತ್ತಿನಲ್ಲಿ ಹಾರಾಡಿ, ಹಣ್ಣುಗಳನ್ನು ತಮ್ಮ ಉದ್ದದ ಸೊಂಡಿಲಿನಿಂದ ಚುಚ್ಚಿ, ರಸಹೀರುತ್ತವೆ. ಆ ಭಾಗಗಳು ಕೊಳೆತು, ಅಂತಹ ಹಣ್ಣು ಉದುರಿ ಬೀಳುತ್ತವೆ.

ಹತೋಟಿ: ಮರಗಳ ಮೇಲೆ ೧೦ ಮೀ.ಮೀ. ಗಾತ್ರದ ಕಿಂಡಿಗಳಿರುವ ನೈಲಾನ್‌ ಪರದೆಯನ್ನು ಇಳಿಬಿಟ್ಟು ಬುಡದಲ್ಲಿ ಸುತ್ತಿಕಟ್ಟಬೇಕು. ಹಾನಿಗೀಡಾಗಿ ಉದುರಿಬಿದ್ದ ಹಣ್ಣುಗಳನ್ನೆಲ್ಲಾ ಆರಿಸಿ ತೆಗೆದು ಆಳವಾಗಿ ಹೂತಿಡಬೇಕು. ಇಲ್ಲವೇ ಸುಡಬೇಕು. ತೋಟದಲ್ಲಿ ಸ್ವಚ್ಛತೆ ಬಹುಮುಖ್ಯ.

. ಸಸ್ಯ ಹೇನು: ಇವು ಮೆತು ಶರೀರದ ಸಣ್ಣಗಾತ್ರದ ಕೀಟಗಳಿದ್ದು ಸಸ್ಯಭಾಗಗಳನ್ನು ಮುತ್ತಿ ರಸಹೀರುತ್ತವೆ. ಅದರಿಂದಾಗಿ ಚಿಗುರು ಕುಡಿಗಳು, ಹೂಗೊಂಚಲು ಮುಂತಾಗಿ ನಿಸ್ತೇಜಗೊಳ್ಳತ್ತವೆ ಹಾಗೂ ನಶಿಸುತ್ತವೆ.

ಹತೋಟಿ: ಇವುಗಳ ಹತೋಟಿಗೆ ೧೦ ಲೀ. ನೀರಿಗೆ ೧೦ ಮಿ.ಲೀ. ಮ್ಯಾಲಾಥಿಯಾನ್‌ ಕೀಟನಾಶಕವನ್ನು ಬೆರೆಸಿ ಸಿಂಪಡಿಸಬೇಕು.

. ಬೂಷ್ಟು ತಿಗಣೆ: ಇದಕ್ಕೆ ಹಿಟ್ಟು ತಿಗಣೆ, ಮೀಲಿಬಗ್ ಮುಂತಾದ ಹೆಸರುಗಳಿವೆ. ಇವುಗಳೂ ಸಹ ಮೆತು ಶರೀರದ ಕೀಟಗಳಿದ್ದು ಸಸ್ಯಭಾಗಗಳನ್ನು ಮುತ್ತಿ ರಸ ಹೀರುತ್ತವೆ. ಇವುಗಳ ಮೈಮೇಲೆಲ್ಲಾ ಹತ್ತಿಯಂತಹ ಪುಡಿ ಅಂಟಿಕೊಂಡಿರುತ್ತದೆ. ಮೊಟ್ಟಯೊಡೆದು ಹೊರಬಂದ ಎಳಿಯ ಕೀಟಗಳು ಮರದ ಮೇಲೆಲ್ಲಾ ಹರಿದಾಡುವುದರ ಜೊತೆಗೆ ಬುಡದ ಪಾತಿಯಲ್ಲಿನ ಮಣ್ಣಿನಲ್ಲೂ ಸಹ ಜಾಗ ಮಾಡಿಕೊಳ್ಳತ್ತವೆ. ಈ ಕೀಟಗಳು ವಿಸರ್ಜಿಸುವ ಸಿಹಿ ಆಂಟನ್ನು ತಿನ್ನಲು ಇರುವೆಗಳು ಮುತ್ತುತ್ತವೆ. ಹಾನಿ ತೀವ್ರವಿದ್ದಾಗ ಮರದ ಬೆಳವಣಿಗೆ ಹಾಗೂ ಕಾಯಿಗಳ ವೃದ್ಧಿ ಕುಂಠಿತಗೊಳ್ಳತ್ತವೆ.

ಹತೋಟಿ: ಪಾತಿಗಳಲ್ಲಿನ ಮಣ್ಣನ್ನು ಹಗುರವಾಗಿ ಅಗೆತಮಾಡಿ ಸಡಲಿಸಬೇಕು. ಇವುಗಳ ಮೈಮೇಲೆ ಮೇಣದ ಹೊದಿಕೆ ಇರುವ ಕಾರಣ ಯಾವುದೇ ಕೀಟನಾಶಕವನ್ನು ಸಿಂಪಡಿಸಿದಾಗ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡಲಾರದು. ಆದ್ದರಿಂದ ಮೊದಲು ನೀರನ್ನು ಜೋರಾಗಿ ಸಿಂಪಡಿಸಿ ಅವುಗಳ ಮೈಮೇಲಿನ ಹೊದಿಕೆ ತೊಳೆದು ಹೋಗುವಂತೆ ಮಾಡಿ ಅದರ ನಂತರ ಕೀಟನಾಶಕವನ್ನು ಸಿಂಪಡಿಸಬೇಕು. ೧೦ ಲೀ. ನೀರಿಗೆ ೨೦ ಮಿ.ಲೀ. ಲಿಬೇಸಿಡ್‌ ಕೀಟನಾಶಕ ಬೆರಸಿ ಎರಡು ಮೂರು ಸಾರಿ ಸಿಂಪಡಿಸಿದರೆ ಹತೋಟಿಯಾಗುತ್ತವೆ.

. ಶಲ್ಕ: ಇವು ತೆಳು ಶರೀರದ ಕೀಟಗಳಿದ್ದು ಚಿಗುರು ರೆಂಬೆಗಳು, ಹೂಗೊಂಚಲು, ಹೀಚು ಮುಂತಾಗಿ ಮುತ್ತಿ ರಸಹೀರುತ್ತವೆ. ಹಾನಿಗೀಡಾದ ಭಾಗಗಳು ಸತ್ವ ಕಳೆದುಕೊಳ್ಳತ್ತವೆ.

ಹತೋಟಿ: ಇವುಗಳನ್ನು ಹತೋಟಿ ಮಾಡಲು ೧೦ ಲೀ. ನೀರಿಗೆ ೨೦ ಮಿ.ಲೀ. ಮೆಟಾಸಿಸ್ಸಾಕ್ಸ್‌ ಇಲ್ಲವೇ ಮಾನೊಕ್ರೋಟೊಫಾಸ್‌ ಅನ್ನು ಬೆರೆಸಿ ಸಿಂಪಡಿಸಬೇಕು.

ರೋಗಗಳು

. ಎಲೆಚುಕ್ಕೆ: ಇದು ಸರ್ಕೊಸ್ಟೋರ ಪ್ರಭೇದದ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಪ್ರಾರಂಭಕ್ಕೆ ಎಲೆಗಳ ಮೇಲೆಲ್ಲಾ ಸಣ್ಣ ಗಾತ್ರದ ಚುಕ್ಕೆಗಳು ಕಾಣಿಸಿಕೊಂಡು ದಿನಗಳೆದಂತೆ ಅವು ಗಾತ್ರದಲ್ಲಿ ಹಿಗ್ಗಿ, ಒಂದರಲ್ಲೊಂದು ವಿಲೀನಗೊಳ್ಳುತ್ತವೆ. ಹಾನಿ ತೀವ್ರವಿದ್ದಲ್ಲಿ ಅಂತಹ ಎಲೆಗಳು ಉದುರಿ ಬೀಳುತ್ತವೆ. ಮಳೆಗಾಲದಲ್ಲಿ ಇದರ ಹಾವಳಿ ಜಾಸ್ತಿ.

ಹತೋಟಿ: ೧೦ ಲೀ. ನೀರಿಗೆ ೨೦ ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್‌ ಅನ್ನು ಬೆರೆಸಿ ಸಿಂಪಡಿಸಬೇಕು. ಹದಿನೈದು ದಿನಗಳ ಅಂತರದಲ್ಲಿ ಎರಡು ಸಿಂಪರಣೆಗಳನ್ನು ಕೊಟ್ಟಲ್ಲಿ ಸಾಕು.

. ಚಿಬ್ಬು ರೋಗ (ಕೊಲ್ಲೆಟೋಟ್ರೈಕಂ ಗ್ಲೋಯಿಯೋ ಸ್ಟೋರಿಯಾಯೈಸ್) ಇದೂ ಸಹ ಶಿಲೀಂಧ್ರ ರೋಗವೇ. ಎಲೆ, ಹೂವು, ಹೀಚು ಮತ್ತು ಕಾಯಿಗಳ ಮೇಲೆ ಕಳೆಗುಂದಿದ ಚುಕ್ಕೆಗಳು ಕಾಣಿಸಿಕೊಂಡು ಆ ಭಾಗ ಕೊಳೆತು ಕುಸಿಯುತ್ತದೆ. ಎಲೆಗಳಲ್ಲಿ ರಂಧ್ರಗಳುಂಟಾಗುತ್ತವೆ.

ಹತೋಟಿ: ಇದರ ಹತೋಟಿಗೆ ೧೦ ಲೀ. ನೀರಿಗೆ ೨೦ ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್‌ ಅನ್ನು ಬೆರೆಸಿ ಸಿಂಪಡಿಸಬೇಕು.

. ಹಣ್ಣುಗಳ ಕೊಯ್ಲೋತ್ತರ ಕೊಳೆತ: ಇದಕ್ಕೆ ಹಲವಾರು ರೊಗಾಣುಗಳು ಕಾರಣವಿರುತ್ತವೆ. ಅವುಗಳಲ್ಲಿ ಸರಟಾವೊಸಿಸ್ಟಸ್‌ ಕೊಲ್ಲೆಟೋಟ್ರೈಕಂ, ಡೋಥಿರಿಯೆಲ್ಲ ಪ್ರಭೇದ, ಫೋಮಾಪ್ಸಿಸ್‌ ಪ್ರಭೇದ ಮುಮತಾದವು ಮುಖ್ಯವಾದವು.

ಕೊಯ್ಲು ಮಾಡುವಾಗ ಹಾಗೂ ಹಣ್ಣನ್ನು ತುಂಬಿ ಸಾಗಿಸುವಾಗ ಅವುಗಳಿಗೆ ಪೆಟ್ಟಾಗದಂತೆ ಅಥವಾ ಜಜ್ಜದಂತೆ ನೋಡಿಕೊಳ್ಳಬೇಕು. ಮಳೆ ಅಥವಾ ಇಬ್ಬನಿ ಸುರಿಯುವಾಗ ಹಣ್ಣನ್ನು ಕೊಯ್ಲುಮಾಡಿದಲ್ಲಿ ಇಂತಹ ಹಾನಿ ಹೆಚ್ಚು, ಕೊಯ್ಲು ಮಾಡುವ ಒಂದೆರಡು ವಾರ ಮುಂಚಿತವಾಗಿ ಯಾವುದಾದರೂ ತಾಂಮ್ರಯುಕ್ತ ಶಿಲೀಂಧ್ರನಾಶಕವನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ತೋಟದಲ್ಲಿ ಶುಚಿತ್ವ ಅಗತ್ಯ. ಚಿನ್ನಾಗಿರುವ ಹಣ್ಣುಗಳನ್ನು ಮಾತ್ರವೇ ಆರಿಸಿ, ತುಂಬಬೇಕು. ಅವುಗಳ ನಡುವೆ ಗಾಳಿಯಾಡುವಂತಿರಬೇಕು.