ವರ್ಷಾದ್ಯಂತ ಕಮರಾಕ್ಷಿ ಅಷ್ಟಿಷ್ಟು ಹಣ್ಣು ಸಿಗುತ್ತಿರುತ್ತವೆಯಾದರೂ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದು ಕೆಲವು ತಿಂಗಳುಗಳಲ್ಲಿ ಮಾತ್ರವೇ. ದಕ್ಷಿಣ ಭಾರತದಲ್ಲಿ ಜನವರಿ-ಫೆಬ್ರವರಿ ಮತ್ತು ಸೆಪ್ಟೆಂಬರ್-ಅಕ್ಟೋಬರ್ ಪ್ರಧಾನ ಕೊಯ್ಲು ಕಾಲಗಳಾದರೆ ಉತ್ತರ ಭಾರತದಲ್ಲಿ ನವೆಂಬರ್-ಡಿಸೆಂಬರ್ ಮತ್ತು ಫೆಬ್ರವರಿ-ಮಾರ್ಚ ಪ್ರಧಾನ ಕೊಯ್ಲು ಕಾಲಗಳಾಗಿರುತ್ತವೆ.

ಪಕ್ವಗೊಂಡ ನಂತರ ಅವು ಕೇವಲ ಒಂದು ವಾರದವರೆಗೆ ಮಾತ್ರ ರೆಂಬೆಗಳಿಗೆ ಅಥವಾ ಮರಕ್ಕೆ ಅಂಟಿಕೊಂಡಿರುವುದು. ಅದರ ನಂತರ ಅವು ಕಳಚಿ ಬೀಳುತ್ತವೆ. ಆದ್ದರಿಂದ ಪಕ್ವಗೊಂಡ ಕೂಡಲೇ ಅವುಗಳನ್ನು ಜೋಪಾನವಾಗಿ ಬಿಡಿಸಿ ತೆಗೆಯಬೇಕು. ಹಣ್ಣುಗಳ ಸಿಪ್ಪೆಯು ಶೇ. ೭೫ ರಷ್ಟು ಹಳದಿ ಇದ್ದಾಗ ಅವುಗಳನ್ನು ಬಿಡಿಸಿ ತೆಗೆಯುವುದು ಸೂಕ್ತ ಎನ್ನಲಾಗಿದೆ.

ಮಲೇಷ್ಯಾದ ಪೆಂಗ್‌ಫ್ಯಾಟ್ಟ್‌ ಮತ್ತು ಹಸ್ಸನ್‌ ಎಂಬ ತಜ್ಞರು ಒಂದು ಬಣ್ಣದ ಪಠವನ್ನು ತಯಾರಿಸಿದ್ದು ಅದರಲ್ಲಿ ಇದ್ದಂತೆ ನೋಡಿಕೊಂಡು ಹಣ್ಣುಗಳನ್ನು ಬಿಡಿಸಿ ತೆಗೆಯಲು ಸಲಹೆ ಮಾಡಿದ್ದಾರೆ. ಅವರು ಸೂಚಿಸಿರುವ ಕೊಯ್ಲು ಸೂಚಿಯ ವಿವರಗಳನ್ನು ಕೋಷ್ಟಕ ೨.೧೦ರಲ್ಲಿ ಕೊಟ್ಟಿದೆ.

ಕೋಷ್ಟಕ .೧೦: ಕಮರಾಕ್ಷಿ ಹಣ್ಣುಗಳನ್ನು ಕೊಯ್ಲುಮಾಡಲು ಸೂಚಿ.

ಹಣ್ಣಗಳ ವೃದ್ಧಿಯ ಹಂತ ಸಿಪ್ಪೆಯ ಬಣ್ಣ
ಹಸರು
ಶೇ. ೨೫ ಭಾಗ ಹಳದಿ ಛಾಯೆಯಿಂದ ಕೂಡಿರುತ್ತದೆ.
ಶೇ. ೨೫ ರಿಂದ ೭೫ರಷ್ಟು ಹಳದಿ ಇರುತ್ತದೆ.
ಶೇ. ೭೫ ರಿಂದ ೧೦೦ರಷ್ಟು ಹಳದಿ ಇರುತ್ತದೆ.
ಸಂಪೂರ್ಣವಾಗಿ ಹಳದಿ ಕಿತ್ತಳೆ ಬಣ್ಣದ್ದಿರುತ್ತದೆ.

ಮರದ ಮೇಲೆ ಹತ್ತಿ ಕೀಳುವುದಾಗಲೀ ಇಲ್ಲವೇ ರೆಂಬೆಗಳನ್ನು ಅಲುಗಾಡಿಸಿ ಕೆಳಕ್ಕೆ ಬೀಳಿಸುವುದಾಗಲೀ ಮಾಡಬಾರದು. ಅದರ ಬದಲಾಗಿ ಮಡಚುವ ಏಣಿಗಳ ಮೇಲೆ ಹತ್ತಿ, ಗೊಂಚಲುಗಳಲ್ಲಿ ಪಕ್ವಗೊಂಡ ಹಣ್ಣುಗಳನ್ನು ಮಾತ್ರವೇ ಲಘುವಾಗಿ ಹಿಡಿದು ತಿರುವಿದಲ್ಲಿ ಅವು ಕಳಚಿ ಬರುತ್ತವೆ.

ಹೀಗೆ ಬಿಡಿಸಿದ ಹಣ್ಣುಗಳನ್ನು ಜೋಪಾನವಾಗಿ ಭುಜಕ್ಕೆ ತೂಗುಹಾಕಿದ ಚೀಲ ಅಥವಾ ಬುಟ್ಟಿಗಳಲ್ಲಿ ತುಂಬಿ ಕೆಳಕ್ಕಿಳಿಸಿಕೊಳ್ಳಬೇಕು. ಹಣ್ಣುಗಳ ತೂಕದಲ್ಲಿ ವ್ಯತ್ಯಾಸವಿರುತ್ತದೆ. ಹಣ್ಣು ಪಕ್ವಗೊಳ್ಳುವ ಹಂತಗಳಲ್ಲಿ ಅವುಗಳ ಬಣ್ಣದ ಬದಲಾವಣೆಗಳಿಗೆ ಹಲವಾರು ವರ್ಣದ್ರವ್ಯಗಳು ಕಾರಣವಿರುತ್ತವೆ. ಅದೇ ರೀತಿ ಅವಗಳ ತಿರುಳಿನಲ್ಲಿನ ರಾಸಾಯನಿಕ ವಸ್ತುಗಳಲ್ಲಿ ಸಹ ವ್ಯತ್ಯಾಸ ಕಂಡುಬರುತ್ತದೆ. ಹಸಿರುಹಣ್ಣುಗಳಲ್ಲಿ ಆಕ್ಸಾಲಿಕ್‌ ಮತ್ತು ಟಾರ್ಟಾರಿಕ್‌ ಆಮ್ಲ ಸ್ವಲ್ಪ ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿ ಇರುತ್ತವೆ. ಆದರೆ ಒಟ್ಟು ಕರಗಿದ ಘನ ಪದಾರ್ಥಗಳ ಪ್ರಮಾಣ ಹೆಚ್ಚುತ್ತದೆ.

ಹಣ್ಣುಗಳ ಬಣ್ಣಕ್ಕೆ ಫೈಟೋಪ್ಲೋಯೆನ್‌, ಬೀಟಕೆರೋಟಿನ್‌ ಮತ್ತು ಮ್ಯುಟಾ ಕ್ಸಾಂಥಿನ್‌ ಸಂಯುಕ್ತ ವಸ್ತುಗಳು ಕಾರಣವಿರುವುದಾಗಿ ತಿಳಿದುಬಂದಿದೆ. ಹಣ್ಣುಗಳು ಮೃದುಗೊಳ್ಳಲು ಎಕ್ಸೊಪಾಲಿಗ್ಯಾಲಕ್ಟುರೋನೇಸ್‌ ಎಂಬ ಕಿಣ್ವ ಕಾರಣವಿರುತ್ತದೆ. ಕಮರಾಕ್ಷಿ ಹಣ್ಣುಗಳಲ್ಲಿನ ಕೆರೋಟಿನಾಯ್ಡಗಳ ಪ್ರಮಾಣವನ್ನು ಕೋಷ್ಟಕ ೨.೧೧ರಲ್ಲಿ ಕೊಟ್ಟಿದೆ.

ಕೋಷ್ಟಕ .೧೧: ಕಮರಾಕ್ಷಿ ಹಣ್ಣುಗಳಲ್ಲಿನ ಕೆರೋಟಿನಾಯ್ಡಗಳ ಪ್ರಮಾಣ.

ಕೆರೋಟಿನಾಯ್ಡಗಳ ಬಗೆ

ಶೇ. ಒಟ್ಟು ಕೆರೋಟಿನಾಯ್ಡಗಳು

ಅಪಕ್ವಹಣ್ಣು

ಪಕ್ವಗೊಂಡ ಹಣ್ಣು

ಫೈಟೋಪ್ಲೋಯೆನ್‌ ೮.೦ ೧೬.೭  
ಬೀಟ- ಕೆರೋಟಿನ್‌ ೦.೮ ೦.೬
ಆಲ್ಪ- ಕೆರೋಟಿನ್‌ ೧೪.೯ ೨೫.೩
ನ್ಯೂರೊ ಸ್ಟೊರೇನ್‌ ೦.೨
ಬೀಟ- ಅಫೊ -೮- ಕೆರೋಟಿನಾಲ್‌ -ಸ್ವಲ್ಪ- ೧.೦
ಬೀಟ- ಕ್ರಿಪ್ಟೊಕ್ಯಾಂಥಿನ್‌ ೧.೫ ೧.೩
ಬೀಟ- ಕ್ರಿಪ್ಟೊ ಪ್ಲೇವಿನ್‌ ೩೭.೦ ೩೪.೨
ಬೀಟ- ಕ್ರಿಪ್ಟೊಪ್ಲೇವಿನ್‌ ೨.೭ ೨.೮
ಗುರುತುಹಿಡಿಯಲಾಗದ ವರ್ಣ್‌ದ್ರವ್ಯಗಳ ಮಿಶ್ರಣ ೫.೩
ಲುಟೇಯಿನ್‌ ೨.೪ ೧.೩
ಮ್ಯುಟಲೊಕ್ಸಾಂಥಿನ್‌ ೨೧.೧ ೧೩.೯
ಒಟ್ಟು ಕೆರೋಟಿನಾಯ್ಡಗಳು (೧ ಗ್ರಾಂ ಹಣ್ಣಿಗೆ ಮೈ.ಗ್ರಾಂ) ೧೫.೦ ೨೨.೦

ಹಣ್ಣುಗಳ ಇಳುವರಿಯು ತಳಿ, ಗಿಡಗಳ ವಯಸ್ಸು ಮುಂತಾಗಿ ವ್ಯತ್ಯಾಸಗೊಳ್ಳುತ್ತವೆ. ಅವುಗಳ ವಯಸ್ಸು ಹೆಚ್ಚಾದಂತೆಲ್ಲಾ ಹಣ್ಣುಗಳ ಇಳುವರಿ ಸಹ ಹೆಚ್ಚಾತ್ತಾ ಹೋಗುತ್ತದೆ. ಪ್ರಾಯದ ಕಮರಾಕ್ಷಿ ಮರವೊಂದಕ್ಕೆ ಸರಾಸರಿ ೧೦೦ ಕಿ.ಗ್ರಾಂ. ಹಣ್ಣು ಸಂದೇಹವಿಲ್ಲ. ನಮಲ್ಲಿನ ಇಳುವರಿ ಕಡಿಮೆ ಎನ್ನಬಹುದು. ಉದಾಹರಣೆಗೆ ದಕ್ಷಿಣ ಆಫ್ರಿಕಾದಲ್ಲಿ ಐದು ವರ್ಷ ವಯಸ್ಸಿನ ಗಿಡವೊಂದರಲ್ಲಿ ವರ್ಷಕ್ಕೆ ೫೦ ಕಿ.ಗ್ರಾಂ ಹಣ್ಣು ಮತ್ತು ಎಂಟು ವರ್ಷವಯಸ್ಸಿನ ಮರವೊಂದಕ್ಕೆ ೧೦೦ ರಿಂದ ೧೫೦ ಕಿ.ಗ್ರಾಂ. ಹಣ್ಣು ಸಿಕ್ಕಿವೆ. ಕ್ಯಾನರಿ ದ್ವೀಪಗಳಲ್ಲಿ ಹನ್ನೆರಡು ವರ್ಷ ವಯಸ್ಸಿನ ಮರಗಳಲ್ಲಿನ ಇಳುವರಿ ತಳಿಯನ್ನನುಸರಿಸಿ ಬಿ೧೬ ತಳಿಯಲ್ಲಿ ಸರಾಸರಿ ೮೪.೨ ಕಿ.ಗ್ರಾಂ ಹಣ್ಣು ಲಭಿಸಿದ್ದರೆ. ಆರ್ಕಿನ್‌ ತಳಿಯ ಮರಗಳಲ್ಲಿ ಸರಾಸರಿ ೧೯೭ ಕಿ.ಗ್ರಾಂ ಹಣ್ಣುಲಭಿಸಿದ್ದಾಗಿ ವರದಿಯಾಗಿದೆ. ಅವುಗಳ ವಿವರಗಳನ್ನು ಕೊಷ್ಟಕ ೨.೧೨ ರಲ್ಲಿ ಕೊಟ್ಟಿದೆ.

ಕೊಷ್ಟಕ .೧೨: ಕ್ಯಾನರಿ ದ್ವೀಪಗಳಲ್ಲಿ ಕಮರಾಕ್ಷಿ ಮರಗಳನ್ನು ನೆಟ್ಟು ೧೨ನೇ ವರ್ಷದಲ್ಲಿ ಲಭಿಸಿದ ಮರದ ಇಳುವರಿ

ತಳಿಯ ಹೆಸರು

ಮರದ ಇಳುವರಿ (ಕಿ.ಗ್ರಾಂಗಳಲ್ಲಿ)

ಆರ್ಕಿನ್‌ ೧೯೭.೮
ಬಿ೬ ೧೮೫.೦
ಬಿ೧೦ ೧೪೬.೦
ಬ೧೬ ೮೪.೨
ಬಿ೧೭ ೧೬೩.೯
ಫ್ವಾಂಗ್‌ಟುಂಗ್‌ ೯೯.೯
ಹಾರ್ಟ್ ೯೯.೫
ಜಂಗಲ್ ಗೋಲ್ಡ್‌ ೧೩೨.೩
ಕಾರಿ ೧೦೮.೧
ಮಹಾ ೮೯.೨
ಶ್ರೀಕೆಂಬಂಗನ್‌ ೧೦೫.೦
ಥಾಯ್‌ನೈಟ್‌ ೧೫೯.೫

ಪ್ರಾಯದ ಹಾಗೂ ಉತ್ತಮನಿರ್ವಹಣೆ ಇರುವ ಮರಗಳಲ್ಲಿ ಹೆಕ್ಟೇರಿಗೆ ಸರಾಸರಿ ೧೨ ರಿಂದ ೨೦ ಟನ್‌ ಹಣ್ಣನ್ನು ನಿರೀಕ್ಷಿಸಬಹುದು.

ಹಣ್ಣನ್ನು ತುಂಬುವುದು, ಸಂಗ್ರಹಣೆ ಮತ್ತು ಮಾರಾಟ: ಇವುಗಳ ಹಣ್ಣು ಬಲುಮೃದು. ಅವುಗಳನ್ನು ಹೆಚ್ಚುಕಾಲ ಸಂಗ್ರಹಿಸಿಡಲು ಆಗುವುದಿಲ್ಲ. ಕೊಠಡಿಯ ಉಷ್ಣತಯಲ್ಲಿ ಒಂದು ವಾರದವರೆಗೆ ಜೋಪಾನ ಮಾಡಬಹುದು ಶೈತ್ಯಗಾರದಲ್ಲಿ ೨º – ೩º ಸೆ. ಉಷ್ಣತೆಯಲ್ಲಿ ಮತ್ತು ಶೇ. ೮೫-೯೦ರಷ್ಟು ಸಾಪೇಕ್ಷ ಆರ್ದ್ರತೆ ಇದ್ದಾಗ ಅವು ೩-೪ ವಾರಗಳವರೆಗೆ ಸುಸ್ಥಿತಿಯಲ್ಲಿ ಇರಬಲ್ಲವು.

ಹಣ್ಣುಗಳನ್ನು ಒರಟಾಗಿ ಸುರಿಯಬಾರದು. ಬಿಡಿಹಣ್ಣುಗಳನ್ನು ತೆಳು ಕಾಗದದಲ್ಲಿ ಸುತ್ತಿ, ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿ ಪದರ ಪದರವಾಗಿ ಜೋಡಿಸಿಟ್ಟಲ್ಲಿ ಅವು ಬತ್ತಿ ಇಲ್ಲವೇ ಜಜ್ಜಿ ಹಾಳಾಗವುದು ತಪ್ಪುತ್ತದೆ. ಮರದ ಹಲಗೆಯಿಂದ ಮಾಡಿದ ಪೆಟ್ಟಿಗೆ ಗಳಲ್ಲಿಯೂ ಹಣ್ಣುಗಳನ್ನು ಮೃದುವಾದ ಮೆತ್ತೆಕೊಟ್ಟು ತುಂಬುವುದುಂಟು. ಮೆತ್ತನೆಯ ಒಣಹುಲ್ಲು, ಕಾಗದದ ಚೂರು ಅಥವಾ ಕಟ್ಟಿಗೆಯಜೋಲು ಹರಡಿ ಮೆತ್ತೆ ಕೊಟ್ಟರೆ ಅವು ಜಜ್ಜವುದಿಲ್ಲ.

ಹೀಗೆ ಕೊಯ್ಲುಮಾಡಿದ ಹಣ್ಣನ್ನು ಹಣ್ಣು ಬೆಳೆಗಾರರ ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ಇಲ್ಲವೇ ಸಹಕಾರ ಸಂಘಗಳ ಮೂಲಕ ಮಾರಾಟ ಮಾಡಿದರೆ ಹೆಚ್ಚಿನ ಲಾಭಸಾಧ್ಯ.

ಅಂದಾಜು ಖರ್ಚು ಮತ್ತು ಆದಾಯ

ಕಮರಾಕ್ಷಿ ಹಣ್ಣಿನ ಬೆಳೆಯನ್ನು ವಾಣಿಜ್ಯ ಮಟ್ಟದಲ್ಲಿ ಬೆಳೆಯಲು ಉದ್ದೇಶಿಸಿದ್ದೇ ಆದಲ್ಲಿ ಪ್ರಾರಂಭದ ಮೂರು ನಾಲ್ಕು ವರ್ಷಗಳಲ್ಲಿ ಹೆಚ್ಚಿನ ಖರ್ಚು ಇರುತ್ತದೆ. ಈ ಅವಧಿಯಲ್ಲಿ ಸೂಕ್ತ ಅಂತರ ಬೆಳೆಗಳನ್ನು ಬೆಳೆದು ಖರ್ಚಿನ ಸ್ವಲ್ಪ ಭಾಗವನ್ನು ಸರಿಹೊಂದಿಸಬಹುದು. ನೀರಾವರಿ ಸೌಲಭ್ಯವಿದ್ದರೆ ಹೆಚ್ಚಿನ ಬೆಲೆ ಬಾಳುವ ತರಕಾರಿ, ಹೂವು ಮುಂತಾದ ಅಂತರ ಬೆಳೆಗಳನ್ನು ಬೆಳೆಯಬಹುದು. ಒಂದು ವೇಳೆ ಅದು ಮಳೆ ಆಸರೆಯ ಬೆಳೆಯಾದರೆ ಅಂತರ ಬೆಳೆಗಳನ್ನೇನಿದ್ದರೂ ಮಳೆಗಾಲದ ಪ್ರಾರಂಬದಲ್ಲಿ ಬಿತ್ತಿ ಮಳೆಗಾಲ ಮುಗಿಯುವ ಹೊತ್ತಿಗೆ ಅವುಗಳ ಕಟಾವು ಆಗಬೇಕು.

ಕಮರಾಕ್ಷಿ ಗಿಡಗಳ ಸಾಲುಗಳ ನಡುವೆ ಪಪಾಯ, ಅಂಜೂರ, ದಾಳಿಂಬೆ, ಸೀತಾಫಲ, ಸೀಬೆ, ಫಾಲ್ಸ, ನುಗ್ಗೆ, ಕರಿಬೇವು ಮುಂತಾಗಿ ಬೆಳೆದು ಮುಖ್ಯ ಬೆಳೆ ವಾಣಿಜ್ಯ ಫಸಲು ಕೊಡಲು ಪ್ರಾರಂಭಿಸಿದಾಗ ಕಿತ್ತುಹಾಕಬಹುದು. ವಾಣಿಜ್ಯ ಫಸಲು ಬಿಡಲು ಏಳೆಂಟು ವರ್ಷಬೇಕು.

ಈ ಹಣ್ಣುಗಳಿಗೆ ಒಳ್ಳೆಯ ಬೇಡಿಕೆ ಇದೆ. ಅವುಗಳ ಪದಾರ್ಥಗಳಿಗೂ ಸಹ ಉತ್ತಮ ಮಾರಕಟ್ಟೆ ಇದೆ. ಕಮರಾಕ್ಷಿಯ ಬೇಸಾಯಕ್ಕೆ ಬೇಸಾಯಕ್ಕೆ ತಗಲುವ ಅಂದಾಜು ಖರ್ಚು ಮತ್ತು ನಿರೀಕ್ಷಿತ ಆದಾಯಗಳನ್ನು ಕೋಷ್ಟಕ ೨.೧೩ರಲ್ಲಿ ಕೊಟ್ಟಿದೆ.

ಕೋಷ್ಟಕ .೧೩: ಒಂದು ಹೆಕ್ಟೇರ್ ಕಮರಾಕ್ಷಿ ಬೇಸಾಯಕ್ಕೆ ತಗಲುವ ಅಂದಾಜು ಖರ್ಚು ಮತ್ತು ನಿರೀಕ್ಷಿಸಬಹುದಾದ ಆದಾಯ (ರೂ. ಗಳಲ್ಲಿ)