ಕಮರಾಕ್ಷಿ ತೋಟ ಎಬ್ಬಿಸುವಲ್ಲಿ ಕಾಲಕಾಲಕ್ಕೆ ಮಾಡಬೇಕಾದ ಕೆಲವೊಂದು ಬೇಸಾಯ ಕ್ರಮಗಳ ಬಗ್ಗೆ ತಿಳಿದಿರುವುದು ಬಹುಮುಖ್ಯ. ಅವುಗಳನ್ನು ಸಕಾಲದಲ್ಲಿ ಮಾಡಿದ್ದೇ ಆದರೆ ಅನಗತ್ಯ ಖರ್ಚು ಉಳಿತಾಯವಾಗುವಂತೆ ಮಾಡಬಹುದು ಹಾಗೂ ಉತ್ತಮ ಗುಣಮಟ್ಟದ ಹೆಚ್ಚಿನ ಫಸಲನ್ನು ಪಡೆದುಕೊಳ್ಳಬಹುದು. ಆಯಾ ತಿಂಗಳುಗಳಲ್ಲಿ ನಿರ್ವಹಿಸಬೇಕಾದ ಕಾರ್ಯಗಳನ್ನು ಈ ಮುಂದೆ ಕೊಟ್ಟಿದೆ.

ಜೂನ್: ಹೊಸದಾಗಿ ತೋಟ ಎಬ್ಬಿಸಬೇಕೆಂದಿರುವವರು ಸಿದ್ಧಗೊಳಿಸಿದ ಗುಂಡಿಗಳಲ್ಲಿ ತಲಾ ಒಂದರಂತೆ ದೃಢವಾದ ಕಸಿಗಿಡಗಳನ್ನು ಸಂಜೆಯ ಇಳಿಹೊತ್ತಿನಲ್ಲಿ ಅಥವಾ ಮೋಡಮುಚ್ಚಿದ ದಿನ ಹೆಪ್ಪು ಸಮೇತ ನೆಟ್ಟು, ಕೋಲು ಸಿಕ್ಕಿಸಿ ಕಟ್ಟಿ, ಕೈ ನೀರು ಕೊಡಬೇಕು. ಪಾತಿಗಳನ್ನು ವಿಸ್ತರಿಸಿ ಪ್ರತಿ ಪಾತಿಯ ಅಗಲಕ್ಕೆ ೫೦ ಗ್ರಾಂ. ಹೆಪ್ಟಾಕ್ಲೋರ್ ಪುಡಿ ಇಲ್ಲವೇ ೧೦೦ ಗ್ರಾಂ. ಬೇವಿನ ಹಿಂಡಿಯನ್ನು ಉದುರಿಸಿದರೆ ಗೆದ್ದಲು, ಗೊಣ್ಣೆಹುಳು ಮುಂತಾಗಿ ಬಾಧೆ ಇರುವುದಿಲ್ಲ.

ಈಗಾಗಲೇ ಸ್ತಿರಗೊಂಡಿರುವ ತೋಟಗಳಲ್ಲಿ ಚೌಕಾಕಾರದ ಬದುಗಳನ್ನು ಮತ್ತಷ್ಟು ದುರಸ್ತಿಮಾಡಿ, ಅವುಗಳ ಮೇಲೆ ಹುಲ್ಲನ್ನು ನೆಟ್ಟು ಬೆಳೆಸಬೇಕು. ಮೊದಲ ಕಂತಿನ ಗೊಬ್ಬರಗಳನ್ನು ಕೊಡಲು ಸಕಾಲ. ಗಿಡಮರಗಳ ಸಾಲುಗಳ ನಡುವೆ ವಾರ್ಷಿಕ ಬೆಳೆಗಳು ಇಲ್ಲವೇ ಹಸಿರು ಗೊಬ್ಬರದ ಬೆಳೆಗಳನ್ನು ಬಿತ್ತಬಹುದು. ಫಸಲು ವೃದ್ಧಿಯ ವಿವಿಧ ಹಂತಗಳಲ್ಲಿ ಇರುತ್ತದೆ. ಕೀಟ ಮತ್ತು ರೋಗಗಳ ಹತೋಟಿಗೆ ಸಸ್ಯ ಸಂರಕ್ಷಣೆ ಕ್ರಮಗಳನ್ನು ಕೈಗೊಳಬೇಕು. ಈ ತಿಂಗಳು ಸಾಮೀಪ್ಯ ಕಸಿಮಾಡಲು ಸೂಕ್ತವಿರುತ್ತದೆ.

ಜುಲೈ: ಮುಂಗಾರು ಮಳೆಗಳು ಚೆನ್ನಾಗಿ ಅಗು ಸಮಯ. ಬಿದ್ದ ಮಳೆಯ ನೀರು ಜಮೀನಿನಿಂದ ಆಚೆ ಹೋಗದಂತೆ ತಡೆದು ಅಲ್ಲಿಯೇ ಹಿಂಗುವಂತೆ ಮಾಡಬೇಕು. ಗಿಡಗಳನ್ನು ನೆಡುವ, ಪಾತಿಗಳನ್ನು ಹಿಗ್ಗಿಸುವ, ಹಸುರುಗೊಬ್ಬರದ ಬೆಳೆಗಳನ್ನು ಬಿತ್ತುವ, ಕಳೆ ತೆಗೆಯುವ ಹಾಗೂ ಮೊದಲ ಕಂತಿನ ಗೊಬ್ಬರಗಳನ್ನು ಕೊಡುವ ಕೆಲಸಗಳನ್ನು ಮುಂದುವರಿಸಬಹುದು. ಹುಳಹುಪ್ಪಟೆಗಳಿಗೆ ಕಣ್ಣಾಡಿಸಬೇಕು. ಗಿಡಗಳ ಆಕಾರ ರೂಪಿಸುವತ್ತ ಗಮನ ಹರಿಸಬೇಕು. ಕಾಯಿ ಮತ್ತು ಹೀಚು ವೃದ್ಧಿಯ ವಿವಿಧ ಹಂತಗಳಲ್ಲಿ ಇರುತ್ತವೆ. ಅಲ್ಲಲ್ಲಿ ಕೆಲವು ದೋರೆಗಾಯಿಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಹಣ್ಣಿನ ನೊಣ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಸೂಕ್ತ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು. ಬಲಿತ ರೆಂಬೆಗಳಲ್ಲಿ ಗೂಟಿ ಕಟ್ಟಬಹುದು. ಪಾತಿಗಳಲ್ಲಿ ಹೊದೆಕೆ ಹರಡಬೇಕು.

ಅಗಸ್ಟ್: ಮೆಳೆ ಇಲ್ಲದಿದ್ದರೆ ಹೊಸದಾಗಿ ನೆಟ್ಟ ಗಿಡಗಳಿಗೆ ಕೈನೀರು ಕೊಡಬೇಕು. ಅವುಗಳಲ್ಲಿ ಹೂವು ಹೀಚುಗಳಿದ್ದರೆ ಅವುಗಳನ್ನು ಕಿತ್ತುಹಾಕಬೇಕು. ಕಸಿ ಗಿಡಗಳ ಬೇರುಸಸಿಯಲ್ಲಿ ಚಿಗುರೇನಾದರೂ ಕಂಡುಬಂದರೆ ಅದನ್ನು ಸವರಿ ತೆಗೆಯ ಬೇಕು. ಫಸಲಿನ ಹೆಚ್ಚು ಭಾಗ ಪಕ್ವಗೊಳ್ಳುವ ಸಮಯ. ಫಸಲಿನ ಭಾರಕ್ಕೆ ರೆಂಬೆಗಳು ನೆಲಕ್ಕೆ ಬಗ್ಗುವುದುಂಟು ಅವುಗಳಿಗೆ ಆಸರೆ ಒದಗಿಸಿ ಎತ್ತಿ ಕಟ್ಟಬೇಕು.

ಸೆಪ್ಟೆಂಬರ್: ಮಳೆಗಾಲ ಚೆನ್ನಾಗಿ ಆಗುವ ಸಮಯ. ಪಾತಿಗಳನ್ನು ಬಲಗೊಳಿಸಿ ಎರಡನೇ ಕಂತಿನ ಗೊಬ್ಬರಗಳನ್ನು ಕೊಡುವುದರ ಜೊತೆಗೆ ಹಸಿರು ಹೊಬ್ಬರದ ಬೆಳೆಗಳನ್ನು ಉಳುಮೆ ಮಾಡಿ ಮಣ್ಣಿಗೆ ಸೇರಿಸಬೇಕು. ಅಂತರ ಬೇಸಾಯ ಹಗುರವಾಗಿರಬೇಕು ಮತ್ತು ಇಳಿಜಾರಿಗೆ ಅಡ್ಡಲಾಗಿರಬೇಕು. ಪಕ್ವಗೊಂಡ ಫಸಲನ್ನು ಜೋಪಾನವಾಗಿ ಕಿತ್ತು ಮಾರಾಟಮಾಡಬಹುದು. ಈ ಅವಧಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸಬಾರದು. ಬೇರು ಬಿಟ್ಟ ಗೂಟಿರೆಂಬೆಗಳನ್ನು ಮತ್ತು ಚೆನ್ನಾಗಿ ಬೆಸೆದ ಕಸಿಗಿಡಗಳನ್ನು ಬೇರ್ಪಡಿಸುವ ಕೆಲಸಕ್ಕೆ ಈ ತಿಂಗಳು ಸೂಕ್ತ. ಅವುಗಳನ್ನು ಭಾಗಶಃ ನೆರಳಿನಲ್ಲಿಟ್ಟು, ನೀರು ಕೊಟ್ಟು ಕಾಪಾಡಬೇಕು.

ಅಕ್ಟೋಬರ್: ಇನ್ನೂ ಮಳೆಗಳಾಗುತ್ತಿರುತ್ತವೆಯಾದ್ದರಿಂದ ಎರಡನೇ ಕಂತಿನ ಗೊಬ್ಬರಗಳನ್ನು ಕೊಡುವ ಕೆಲಸವನ್ನು ಮುಂದುವರೆಸಬಹುದು. ಪಾತಿಗಳ ಮಣ್ಣನ್ನು ಸಡಿಲಗೊಳಿಸಿ ಕಸಕಡ್ಡಿ, ಕೂಳೆಗಳು, ತರಗು ಮುಂತಾಗಿ ಮಂದವಾಗಿ ಹರಡಿ ಹೊದಿಕೆ ಕೊಡಬೇಕು. ಹಣ್ಣುಗಳ ಕೊಯ್ಲು ಭರದಿಂದ ಸಾಗಿರುತ್ತದೆ. ಎಳೆಯ ಗಿಡಗಳು ಆಕಾರದತ್ತ ಗಮನಹರಿಸಬೇಕು. ಸಾಮೀಪ್ಯಕಸಿ ಮಾಡುವ ಕೆಲಸವನ್ನು ಮುಂದುವರೆಸಬಹುದು. ಹುಳು ಹುಪ್ಪಟೆಗಳ ಬಗ್ಗೆ ಕಣ್ಣಾಡಿಸುತ್ತಾ ಇರಬೇಕು. ಉದುರಿ ಬಿದ್ದ ಹಣ್ಣುಗಳನ್ನು ಸಂಗ್ರಹಿಸಿ, ಹೂತಿಡಬೇಕು. ಅವುಗಳಲ್ಲಿ ಹಣ್ಣಿನ ನೊಣದ ಮೊಟ್ಟಗಳಿರುವ ಸಾಧ್ಯತೆ ಇರುತ್ತದೆ.

ನವೆಂಬರ್: ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭಗೊಳ್ಳುವ ಸಮಯ. ಎಳೆಯ ಗಿಡಗಳಿಗೆ ಕೈನೀರು ಕೊಡುವುದನ್ನು ಮುಂದುವರಿಸಬೇಕು. ಗೆದ್ದಲಿನ ಹಾವಳಿ ಬಹಳಿಷ್ಟಿರತ್ತದೆ. ಪ್ರತಿಗಿಡದತ್ತ ಕಣ್ಣಾಡಿಸಬೇಕು. ಹಣ್ಣುಗಳ ಕುಯ್ಲು ಮುಗಿಯುವ ಸಮಯ. ಅಗತ್ಯವಿದ್ದಲ್ಲಿ ಎಳೆಯ ಗಿಡಗಳಿಗೆ ಚಳಿಯಿಂದ ರಕ್ಷಣೆ ಒದಗಿಸಬೇಕು. ತೀರಾ ನೆಲಕ್ಕೆ ಇಳಿಬಿದ್ದಿರುವ ರೆಂಬೆಗಳನ್ನು ಮೇಲಕ್ಕೆತ್ತಿ ಕಟ್ಟಬೇಕು.

ಡಿಸೆಂಬರ್: ಚಳಿಗಾಲ ತೀವ್ರಗೊಳ್ಳುವ ಸಮಯ. ಎಳೆಯ ಗಿಡಗಳಿಗೆ ಕೈ ನೀರು ಕೊಡುವುದನ್ನು ಮುಂದುವರೆಸಬಹುದು. ಪುನಃ ಹಣ್ಣು ಬಲಿಯುವ ಸಮಯ. ತೋಟದಲ್ಲಿನ ಮಣ್ಣನ್ನು ಹಗುರವಾಗಿ ಸಡಿಲಿಸಬೇಕು. ಅದೇ ರೀತಿ ಕಳೆಗಳಿದ್ದರೆ ಕಿತ್ತು ತೆಗೆಯಬೇಕು. ಕೀಟಳಿಗಾಗಿ ಕಣ್ಣಾಡಿಸಬೇಕು. ಬೇಗ ಪಕ್ವಗೂಂಡು ಉದುರಿಬಿದ್ದು ಹಣ್ಣುಗಳನ್ನು ಆರಿಸಿ ಹೂತಿಡಬೇಕು. ವಾರ್ಷಿಕ ಬೆಳೆಗಳನ್ನು ಕಟಾವು ಮಾಡಬಹುದು.

ಜನವರಿ: ಪಕ್ವಗೊಂಡ ಫಸಲನ್ನು ಕೊಯ್ಲುಮಾಡಿ ಮಾರಾಟಕ್ಕೆ ಬಿಡಬಹುದು. ಹಣ್ಣಿನ ನೊಣದ ಬಾಧೆ ಕಂಡುಬಂದಲ್ಲಿ ವಿಷಮಿಶ್ರಿತ ಬೆಲ್ಲದ ಪಾನಕವನ್ನು ಅಲ್ಲಲ್ಲಿ ಇಟ್ಟರೆ ಹಣ್ಣಿನ ನೊಣಗಳು ಅದನ್ನು ಕುಡಿದು ಸಾಯುತ್ತವೆ. ಇದು ಕಸಿಮಾಡಲು ಒಳ್ಳೆಯ ಸಮಯ. ಚಳಿ ಬಹಳಷ್ಟಿರುತ್ತದೆ. ಎಳೆಯ ಗಿಡಗಳ ಆರೈಕೆಯತ್ತ ಹೆಚ್ಚಿನ ಗಮನ ಹರಿಸಬೇಕು.

ಫೆಬ್ರವರಿ: ಪಕ್ವಕ್ಕೆ ಬಂದಿರುವ ಫಸಲನ್ನು ಕೊಯ್ಲುಮಾಡುವ ಕೆಲಸವನ್ನು ಮುಂದುವರಿಸಬೇಕು. ಎಳೆಯಗಿಡಗಳಿಗೆ ಕೈನೀರು ಕೊಡುವುದನ್ನು ತಪ್ಪಿಸಬಾರದು. ಗೆದ್ದಲಿನ ಬಾಧೆ ಇರುತ್ತದೆ. ಹಾಗೆಯೇ ಇತರ ಕೀಟಗಳಿಗಾಗಿ ಕಣ್ಣಾಡಿಸಬೇಕು. ಉದುರಿಬಿದ್ದ ಹಣ್ಣುಗಳನ್ನು ಆರಿಸಿ ಹೂತಿಡಬೇಕು.

ಕಸಿ ಮತ್ತು ಗೂಟಿಗಿಡಗಳನ್ನು ನೀರು ಕೊಟ್ಟು ಜೋಪಾನ ಮಾಡಬೇಕು. ಬಿಸಿಲು ಏರುವ ದಿನಗಳದ್ದರಿಂದ ಎಳೆಯ ಗಿಡಗಳಿಗೆ ನೆರಳನ್ನು ಒದಗಿಸಬೇಕು. ಪಾತಿಗಳ ಮಣ್ಣು ಹಸಿಯಾಗೆದೆಯೇ ಅಥವಾ ಇಲ್ಲವೇ ಎಂಬುದನ್ನು ಕೆದಕಿ ನೋಡಬೇಕು.

ಮಾರ್ಚ್: ಹಣ್ಣು ಮುಗಿಯುವ ಸಮಯ. ತೋಟ ಸ್ವಚ್ಚವಾಗಿರುವಂತೆ. ನೋಡಿಕೊಳ್ಳಬೇಕು. ಗೊಬ್ಬರ ಗೋಡುಗಳನ್ನು ಸಂಗ್ರಹಿಸಿಡುವ ಸಮಯ. ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಎಳೆಯ ಗಿಡಗಳಿಗೆ ಬಿಸಿಲನಿಂದ ರಕ್ಷಣೆ ಅಗತ್ಯ. ಪಾತಿಗಳ ಮಣ್ಣು ಹಸಿಯಾಗಿರುವಂತೆ ನೋಡಿಕೊಳ್ಳಬೇಕು.

ಏಪ್ರಿಲ್: ಬಿಸಿಲಿನ ಝಳ ಜಾಸ್ತಿ ಆಗುತ್ತಾ ಹೋಗುತ್ತದೆ. ಹೂವು- ಹೀಚು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಎಳೆಯ ಗಿಡಗಳನ್ನು ಹೋಪಾನವಾಗಿ ರಕ್ಷಿಸಬೇಕು. ಈ ಅವಧಿಯಲ್ಲಿ ಇನ್ನೂಂದೆರಡು ಮಳೆಗಳಾಗುವ ಸಂಭವ ಇರುತ್ತವೆ. ತೇವಾಂಶ ಸಾಕಷ್ಟಿದ್ದರೆ ಸಾಲುಗಳ ಮತ್ತು ಪಾತಿಗಳ ಮಣ್ಣನ್ನು ಹಗುರವಾಗಿ ಸಡಿಲಿಸಿ ಕಸಕಡ್ಡಿ ಮುಂತಾಗಿ ಮಣ್ಣೊಳಕ್ಕೆ ಸೇರುವಂತೆ ಮಾಡಬಹುದು. ಅದರಿಂದ ತೇವಾಂಶ ಸಂರಕ್ಷಣೆಯಾಗುತ್ತದೆ ಮತ್ತು ಹುಳಹುಪ್ಪಟೆಗಳು ಬಿಸಿಲಿಗೆ ಸಿಕ್ಕಿ ಇಲ್ಲವೇ ಹಕ್ಕಿಗಳು ತಿಂದು ನಾಶಗೊಳ್ಳುತ್ತವೆ. ಹೀಚು ವೃದ್ಧಿಹೊಂದುವ ಸಮಯ. ಗೊಬ್ಬರ ಗೋಡುಗಳನ್ನು ಸಂಗ್ರಹಿಸಿ, ದಾಸ್ತಾನು ಮಾಡಲು ಸಕಾಲ.

ಮೇ: ಅತೀ ಹೆಚ್ಚು ಬಿಸಿಲು ಇರುವ ಸಮಯ ಇದಾಗಿದೆ. ಹೊಸದಾಗಿ ತೋಟ ಎಬ್ಬಿಸ ಬೇಕೆಂದಿರುವವರು ಉತ್ತಮ ದರ್ಜೆಯ ಗಿಡಗಳಿಗಾಗಿ ಖಾತರಿ ಇರುವ ನರ್ಸರಿಗಳಲ್ಲಿ ಕಾದಿರಿಸಬೇಕು. ತಜ್ಞರ ನಿರವಿನಿಂದ ಜಾಗವನ್ನು ಪರೀಕ್ಷಿಸಿ, ವಿವರಗಳನ್ನು ಬರೆದಿಡಬೇಕು. ಮಣ್ಣು ಮತ್ತು ನೀರುಗಳನ್ನು ಪರೀಕ್ಷೆ ಮಾಡಿಸುವುದು ಸೂಕ್ತ. ಅಗತ್ಯವಿದ್ದಲ್ಲಿ ಗಾಳಿಯ ತಡೆಯ ಗಿಡಗಳನ್ನು ಸುತ್ತ ನೆಟ್ಟು ಬೆಳಸಬಹುದು. ಗುಂಡಿಗಳನ್ನು ತೋಡಿ, ಬಿಸಿಲಿಗೆ ಬಿಟ್ಟು ನಂತರ ಮೇಲ್ಮಣ್ಣು ಮತ್ತು ಗೊಬ್ಬರಗಳ ಮಿಶ್ರಣ ತುಂಬಬಹುದು. ಹಸಿರು ಗೊಬ್ಬರದ ಬೀಜವನ್ನು ತಂದಿಟ್ಟುಕೊಳ್ಳಬೇಕು. ಒಮ್ಮೆ ಉಳುವೆ ಮಾಡುವುದು ಸೂಕ್ತ. ಎಳೆಯ ಗಿಡಗಳಿಗೆ ನೀರು ಮತ್ತು ನೆರಳು ಕೊಟ್ಟು ಕಾಪಾಡಬೇಕು.