ಹವಾ ಮತ್ತು ಭೂಗುಣ

ಕಮರಾಕ್ಷಿ ಉಷ್ಣ ಹಾಗೂ ಸಮಶೀತೋಷ್ಣವಲಯಗಳ ಹಣ್ಣಿನ ಬೆಳೆಯಾಗಿದೆ. ಹಿಮರಹಿತ ಪ್ರದೇಶಗಳಾದಲ್ಲಿ ಸೂಕ್ತ. ಇದಕ್ಕೆ ಬೆಚ್ಚಗಿನ ಹಾಗೂ ಆರ್ದ್ರತೆಯಿಂದ ಕೂಡಿದ ಹವಾಗುಣ ಬಹುವಾಗಿ ಹಿಡಿಸುತ್ತದೆ. ದಿನದ ಹೆಚ್ಚುಸಮಯ ಬಿಸಿಲು-ಬೆಳಕುಗಳು ಲಭಿಸುವಂತಿರಬೇಕು. ವರ್ಷದಲ್ಲಿ ೨೦೦೦ಕ್ಕೂ ಮೇಲ್ಪಟ್ಟು ತಾಸುಗಳ ಬಿಸಿಲು ಬೆಳಕುಗಳು ಅಗತ್ಯವಿರುವುದಾಗಿ ತಿಳಿದುಬಂದಿದೆ. ಉಷ್ಣತೆ ೨೧º – ೩೨º ಸೆ. ಇದ್ದಲ್ಲಿ ಅತ್ಯಂತ ಸೂಕ್ತ. ಹೆಚ್ಚು ಸಮಯ ಹೆಪ್ಪುಗಟ್ಟುವ ಉಷ್ಣತೆ ಇದ್ದರೆ ಹಾನಿಖಂಡಿತ. ವರ್ಷದಲ್ಲಿ ೧೮೦ – ೨೫೦ ಸೆಂ.ಮೀ. ಮಳೆ ಆಗುವಂತಿದ್ದರೆ ಮರಗಳ ಬೆಳವಣಿಗೆ ಮತ್ತು ಹಣ್ಣಿನ ಗುಣಮಟ್ಟ ಅತ್ಯುತ್ತಮವಿರುತ್ತವೆ.

ಸಮುದ್ರ ಮಟ್ಟದಿಂದ ೧೨೦೦ ಮೀ. ಎತ್ತರದವರೆಗೆ ಚಿನ್ನಾಗಿ ಫಲಿಸಬಲ್ಲವು. ಕರಾವಳಿ ಹಾಗೂ ಮೈದಾನ ಪ್ರದೇಶಗಳಲ್ಲಿ ಮತ್ತು ಬೆಟ್ಟಗುಡ್ಡಗಳಲ್ಲಿ ಚೆನ್ನಾಗಿ ಫಲಿಸಬಲ್ಲುದು. ಬಲವಾದ ಗಾಳಿ ಬೀಸುವ ಪ್ರದೇಶಗಳಲ್ಲಿ ರಕ್ಷಣೆ ಒದಗಿಸಬೇಕು. ಎಳೆಯ ಗಿಡಗಳಿಗೆ ಒಂದೆರಡು ವರ್ಷಗಳವರೆಗೆ ಅಧಿಕ ಚಳಿ ಮತ್ತು ಸುಡು ಬಿಸಿಲುಗಳಿಂದ ರಕ್ಷಣೆ ಒದಗಿಸುವುದನ್ನು ಮರೆಯಬಾರದು.

ಇದರ ಬೇಸಾಯಕ್ಕೆ ಇಂತಹುದೇ ಭೂಮಿ ಇರಬೇಕು ಎಂಬ ನಿಯಮವಿಲ್ಲ ಆದಾಗ್ಯೂ ಸಹ ನೀರು ಬಸಿಯುವ ಮರಳು ಮಿಶ್ರಿತ ಜೇಡಿಗೋಡು ಮಣ್ಣು ಇಲ್ಲವೇ ಸಾಧಾರಣ ಕಪ್ಪು ಗೋಡಮಣ್ಣು ಹೆಚ್ಚು ಸೂಕ್ತ. ಮಣ್ಣು ಫಲವತ್ತಾಗಿದ್ದು ಆಳವಾಗಿರಬೇಕು. ಅಂತಹ ಭೂಮಿಯಲ್ಲಿ ಮರಗಳ ಬೆಳವಣಿಗೆ ತೀವ್ರವಿರುತ್ತದೆ. ಫಸಲು ಸಹ ಅಧಿಕವಿರುತ್ತದೆ. ಮಣ್ಣಿನ ತಳ ಪದರಗಳಲ್ಲಿ ಕಲ್ಲುಬಂಡೆ, ಗರಜು, ಸುಣ್ಣಕಲ್ಲು ಮುಂತಾಗಿ ಇರಬಾರದು. ನೀರು ನಿಂತಲ್ಲಿ ಇವುಗಳಿಗೆ ಆಗದು. ಪ್ರಾಯದ ಮರಳಗಳಿಗೆ ಬರಗಾಲವನ್ನು ಸಮರ್ಥವಾಗಿ ತಡೆದುಕೊಳ್ಳಬಲವು. ಮಣ್ಣಿನ ರಸಸಾರ ೫.೨ – ೬.೨ ಇದ್ದಲ್ಲಿ ಉತ್ತಮ. ಮಲೇಷ್ಯಾದಲ್ಲಿ ೪.೫ ರಸಸಾರ ಇರುವ ಮಣ್ಣುಗಳಲ್ಲಿಯೂ ಸಹ ಇವುಗಳನ್ನು ಬೆಳೆಯಲಾಗುತ್ತಿದೆ. ಮರಳು ಮಣ್ಣಿನ ಭೂಮಿಯಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆ ಕಂಡುಬರವುದುಂಟು.

ಭೂಮಿಯನ್ನು ಸಿದ್ಧಗೊಳಿಸಿ, ಸಸಿಗಳನ್ನು ನೆಡುವುದು: ಗಿಡಗಳನ್ನು ನೆಡುವ ಒಂದೆರಡು ತಿಂಗಳುಗಳ ಮುಂಚೆ ಭೂಮಿಯನ್ನು ಒಂದೆರಡು ಸಾರಿ ಆಳವಾಗಿ ಉಳುಮೆಮಾಡಿ ಮುಳ್ಳುಗಿಡಗಳು, ಕುರುಚಲು ಗಿಡಗಳು ಮುಂತಾಗಿ ತೆಗೆದು ಸಮಮಾಡಬೇಕು. ಒಂದು ವೇಳೆ ಜಮೀನು ಇಳಿಜಾರಿನಿಂದ ಕೂಡಿದ್ದರೆ ಸೂಕ್ತ ಅಂತರದಲ್ಲಿ ಸಮಪಾತಳಿ ಬದುಗಳನ್ನು ಇಲ್ಲವೇ ಸಮಪಾತಳಿ ಜಗಲಿ ಪಾತಿಗಳನ್ನು ನಿರ್ಮೀಸಬೇಕು. ತೋಟದ ಸುತ್ತ ಎತ್ತರಕ್ಕೆ ಬೆಳೆದು ಬಿರುಗಾಳಿಯಿಂದ ರಕ್ಷಣೆ ಒದಗಿಸುವ ಸಜೇವ ಗಾಳಿ ತಡೆ ಇರುವುದು ಅಗತ್ಯ. ಈ ಉದ್ದೇಶಕ್ಕೆ ಒಂದು ಇಲ್ಲವೇ ಎರಡು ಸಾಲಿನ ಸರ್ವೆ, ಸಿಲ್ವರ್ಓಕ್‌, ನೇರಳೆ ಮುಂತಾದವುಗಳ ಬೀಜ ಸಸಿಗಳನ್ನು ೨-೩ ಮೀ. ಅಂತರದಲ್ಲಿ ನೆಟ್ಟು ಬೆಳೆಸಬೇಕು. ಅದರಿಂದಾಚೆಗೆ ಸುತ್ತ ಬಲವಾದ ಬೇಲಿ ಇದ್ದಲ್ಲಿ ಪೋಲಿದನಗಳು, ಕುರಿಮೇಕೆ ಹಾಗೂ ದಾರಿಹೋಕರು ಒಳನುಗ್ಗಿ ಗಿಡಗಳನ್ನು ಹಾಳುಮಾಡುವುದು ತಪ್ಪುತ್ತದೆ.

ಮೇ- ಜೂನ್ ತಿಂಗಳಿನಲ್ಲಿ ೧ ಘನ ಮೀಟರ್ ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು. ದಕ್ಷಿಣ ಭಾರತದಲ್ಲಿ ಸಾಲುಗಳ ಹಾಗೂ ಸಸಿಗಳ ನಡುವೆ ೬ ಮೀ. ಅಂತರ ಕೊಟ್ಟರೆ ಉತ್ತರ ಭಾರತದಲ್ಲಿ ೯ ಮೀ. ಅಂತರ ಕೊಡುತ್ತಾರೆ. ಈ ಅಂತರದಲ್ಲಿ ಹೆಕ್ಟೇರಿಗೆ ೧೨೩ ರಿಂದ ೨೭೭ ಗಿಡಗಳ ಹಿಡಿಸುತ್ತವೆ.

ಒಂದೆರಡು ವಾರಗಳ ನಂತರ ಗುಂಡಿಗಳಿಗೆ ಸಮಪ್ರಮಾಣದ ಮೇಲ್ಮಣ್ಣು ಮತ್ತು ಕೊಳೆತ ತಿಪ್ಪೆಗೊಬ್ಬರ ಇಲ್ಲವೇ ಹಸಿರೆಲೆ ಗೊಬ್ಬರಗಳ ಮಿಶ್ರಣ ಹರಡಿ ತುಂಬಬೇಕು. ಗುಡ್ಡ ಹಾಗೂ ಇಳಿಜಾರು ಪ್ರದೇಶಗಳಲ್ಲಿ ಚರಂಡಿಗಳನ್ನು ಮಾಡಬಹುದು. ಒಂದೆರಡು ಮಳೆಗಳಾದರೆ ಮಣ್ಣು ಮತ್ತು ಗೊಬ್ಬರಗಳ ಮಿಶ್ರಣ ಚೆನ್ನಾಗಿ ಕುಸಿಯುತ್ತದೆ. ಮಳೆಯಾಗದೇ ಇದ್ದಲ್ಲಿ ತೆಳ್ಳಗೆ ನೀರು ಕೊಡಬೇಕು.

ಗಿಡಗಳನ್ನು ನೆಡಲು ಮುಂಗಾರಿನ ಪ್ರಾರಂಭ ಅತ್ಯಂತ ಸೂಕ್ತ. ಜೂನ್ – ಜುಲೈನಲ್ಲಿ ನೆಟ್ಟಿದ್ದೇ ಆದರೆ ಅವು ಮಳೇಗಾಲ ಮುಗಿಯುವ ಹೊತ್ತಿಗೆ ಚೆನ್ನಾಗಿ ಬೇರು ಬಿಟ್ಟು ಸ್ಥಿರಗೊಳಬಲ್ಲವು. ಗಿಡಗಳನ್ನು ಹೆಪ್ಪುಸಮೇತ ನೆಡಬೇಕು. ಪ್ರತಿ ಗುಂಡಿಯ ಮಧ್ಯಭಾಗದಲ್ಲಿ ಹೆಪ್ಪು ಹಿಡಿಸುವುದಷ್ಟೇ ಗಾತ್ರದ ತಗ್ಗು ತೆಗೆದು, ಅದರಲ್ಲಿ ಗಿಡವನ್ನು ನೆಟ್ಟಗೆ ನಿಲ್ಲಿಸಿ, ಬೇರುಗಳ ಸುತ್ತ ಹಸಿಮಣ್ಣನ್ನು ಹರಡಿ, ಚೆನ್ನಾಗಿ ಅದುಮಿ ಆನಂತರ ತುಳಿಯಬೇಕು. ಗಿಡಗಳನ್ನು ದಿನದ ತಂಪು ಹೊತ್ತಿನಲ್ಲಿ ಅಂದರೆ ಸಂಜೆಯ ಇಳಿಹೊತ್ತಿನಲ್ಲಿ ನೆಟ್ಟಿದ್ದೇ ಆದರೆ ಆವು ಬಾಡುವುದಿಲ್ಲ ಒಂದು ವೇಳೆ ಮೋಡಕವಿದ ವಾತಾವರಣವಿದ್ದಲ್ಲಿ ದಿನದ ಯಾವ ಹೊತ್ತಿನಲ್ಲಾದರೂ ನೆಡಬಹುದು ಕಸಿಗಿಡಗಳಾದಲ್ಲಿ ಕಸಿಗಂಟು ನೆಲಮಟ್ಟದಿಂದ ೧೫.೨೨ ಸೆಂ.ಮೀ. ಎತ್ತರದಲ್ಲಿರುವುದು ಅಗತ್ಯ.

ನೆಟ್ಟ ನಂತರ ಪಾತಿಯನ್ನು ಸರಿಪಡಿಸಿ  ಗಿಡಗಳಿಗೆ ಆಸರೆ ಕೋಲು ಸಿಕ್ಕಿಸಿ ಕಟ್ಟಬೇಕು. ಹಾಗೆ ಮಾಡುವುದರಿಂದ ಗಿಡಗಳು ಗಾಳಿಗೆ ಅಲುಗಾಡುವುದಿಲ್ಲ. ಗೆದ್ದಲಿನ ಬಾಧೆ ಇದಲ್ಲಿ ಪ್ರತಿ ಗುಂಡಿಯ ಪಾತಿಯ ಅಗಲಕ್ಕೆ ೫೦ ಗ್ರಾಂ ಹೆಪ್ಟಾಕ್ಲೋರ್ ಪುಡಿ ಇಲ್ಲವೇ ೧೦೦ ಗ್ರಾಂ ಬೇವಿನ ಹಿಂಡಿಯನ್ನು ಉದುರಿಸಬೇಕು. ನೆಟ್ಟ ನಂತರ ನೀರು ಹನಿಸುವ ಡಬ್ಬಿಯಿಂದ ನೀರು ಕೊಡಬೇಕು. ಬಿಸಿಲು ಬಹಳಷ್ಟಿದ್ದರೆ ಗಿಡಗಳಿಗೆ ಸ್ವಲ್ಪ ನೆರಳನ್ನು ಒದಗಿಸುವುದು ಅಗತ್ಯ.

ಗೊಬ್ಬರ

ಈ ಹಣ್ಣಿನ ಮರಗಳು ಹೆಚ್ಚಿನ ಫಲವತ್ತತೆಯನ್ನು ಬಯುಸುತ್ತವೆ. ಗಿಡಗಳು ಎಳೆಯವಿರುವಾಗ ಬೇರು ಸಮೂಹ ಅಷ್ಟೊಂದು ವ್ಯಾಪಕವಾಗಿ ಹರಡಿರುವುದಿಲ್ಲ. ಆದ್ದರಿಂದ ಕಡಿಮೆ ಪ್ರಮಾಣದ ಗೊಬ್ಬರಗಳನ್ನು ಕೊಟ್ಟು ದಿನಕಳೆದಂತೆ ಅವುಗಳ ಪ್ರಮಾಣವನ್ನು

ಹೆಚ್ಚಿಸಬೇಕಾಗುತ್ತದೆ. ಒಂದು ಟನ್ ಹಣ್ಣು ಉತ್ಪಾದಿಸುವಲ್ಲಿ ೧.೨೮ ಕಿ.ಗ್ರಾಂ. ಸಾರಜನಕ, ೦.೧೨ ಕಿ.ಗ್ರಾಂ. ರಂಜಕ, ೧.೫೮ ಕಿ.ಗ್ರಾಂ. ಪೊಟ್ಯಾಷ್‌, ೦.೧೦ ಕಿ.ಗ್ರಾಂ. ಮೆಗ್ನೀಷಿಯಂ, ೦.೧೩ ಕಿ.ಗ್ರಾಂ. ಗಂಧಕ, ೦.೦೫ ಕಿ.ಗ್ರಾಂ. ಸುಣ್ಣ, ೫.೪ ಕಿ.ಗ್ರಾಂ. ಕಬ್ಬಿಣ, ೦.೩೯ ಕಿ.ಗ್ರಾಂ. ತಾಮ್ರ, ೦.೩೯ ಕಿ.ಗ್ರಾಂ. ಮ್ಯಾಗನೀಸ್‌, ೧.೧೯ ಗ್ರಾಂ. ಸತು, ೦.೬೩ ಗ್ರಾಂ. ಬೋರಾನ್‌, ೨೭.೪ ಗ್ರಾಂ.  ಸೋಡಿಯಂ ಮತ್ತು ೩.೨೫ ಗ್ರಾಂ. ಅಲ್ಯೂಮಿನಿಯಂ ಪೋಷಕಾಂಶಗಳು ಬಳಸಲ್ಪಡುವುದಾಗಿ ವರದಿಯಾಗಿದೆ.

ಗಿಡಗಳು ವಯಸ್ಸನ್ನು ಅನುಸರಿಸಿ ಗೊಬ್ಬರವನ್ನು ಕೊಡಬೇಕಾಗುತ್ತದೆ. ಸಾವಯವ ಗೊಬ್ಬರದ ಜೊತೆಗೆ ಸೂಕ್ತಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನೂ ಸಹ ಕೊಡಬೇಕು. ಅವುಗಳನ್ನು ಪ್ರತಿ ವರ್ಷ ಕ್ರಮಬದ್ದವಾಗಿ ಕೊಡುವ ಸಂಪ್ರದಾಯ ನಮ್ಮ ದೇಶದಲ್ಲಿ ಇಲ್ಲ. ಗಿಡಗಳನ್ನು ನೆಡುವ ಮುಂಚೆ ಪ್ರತಿ ಗುಂಡಿಗೆ ಕನಿಷ್ಟಪಕ್ಷ ೧೦ ಕಿ.ಗ್ರಾಂ. ಗಳಷ್ಟು ಕೊಳೆತ ತಿಪ್ಪೆಗೊಬ್ಬರ ಕೊಡಬೇಕು. ಅನಂತರ ಪ್ರತೀ ವರ್ಷ ಅದರ ಪ್ರಮಾಣವನ್ನು ೧೦ ಕಿ.ಗ್ರಾಂಗಳಂತೆ ೧೦ ವರ್ಷಗಳವರೆಗೆ ಹೆಚ್ಚಿಸುತ್ತಾ ಹೋಗಬೇಕು. ಅದರ ನಂತರ ಪ್ರತಿವರ್ಷ ೧೦೦ ಕಿ.ಗ್ರಾಂ.ಗಳಂತೆ ಹಾಕಬೇಕು. ನಮ್ಮ ದೇಶದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕೊಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ. ಈ ಗೊಬ್ಬರವನ್ನು ಎರಡು ಸಮ ಕಂತುಗಳಾಗಿ ಮಾಡಿ ಒಂದು ಕಂತನ್ನು ಜೂನ್‌-ಜುಲೈನಲ್ಲಿಯೂ ಮತ್ತು ಎರಡನೇ ಕಂತನ್ನು ಸೆಪ್ಟಂಬರ್-ಅಕ್ಟೋಬರ್‌ನಲ್ಲಿಯೂ ಕೊಡವುದು ಲಾಭದಾಯಕ. ಅವುಗಳನ್ನು ಹಾಕುವ ಕಾಲಕ್ಕೆ ಮಣ್ಣು ಹಸಿಯಾಗಿರುವುದು ಅಗತ್ಯ. ಪ್ರಾರಂಭದ ವರ್ಷಗಳಲ್ಲಿ ಬೇರು ತೀರಾ ಹತ್ತಿರದಲ್ಲಿರುತ್ತವೆಯಾದ್ದರಿಂದ ಗೊಬ್ಬರಗಳನ್ನು ಗಿಡಗಳ ಬುಡದಿಂದ ೬೦-೯೦ ಸೆಂ.ಮೀ. ದೂರದಲ್ಲಿ ಹಾಕಿದರೆ ಸಾಕು. ಬೇರು ಸಮೂಹ ದೂರ ದೂರಕ್ಕೆ ಹಾಕಬೇಕು. ಅವುಗಳನ್ನು ಬುಡದಿಂದ ೧-೧.೫ ಮೀ. ದೂರದಲ್ಲಿ ೧೫ ಸೆಂ.ಮೀ. ಅಗಲ ಮತ್ತು ೧೫ ಸೆಂ.ಮೀ. ಆಳ ಇರುವಂತೆ ಉಂಗುರಾಕಾರದ ತಗ್ಗುಕಾಲುವೆ ಮಾಡಿ ಅದರಲ್ಲಿ ಗೊಬ್ಬರಗಳನ್ನು ಸಮನಾಗಿ ಹರಡಿ ಮಣ್ಣು ಮುಚ್ಚಬೇಕು.

ಕ್ವೀನ್ಸ್‌ ಲ್ಯಾಂಡ್‌, ಮಲೇಷ್ಯಾ ಮುಂತಾದ ದೇಳಗಳಲ್ಲಿ ಕ್ರಮಬದ್ಧವಾಗಿ ನಿಗದಿತ ಪ್ರಮಾಣಗಳಲ್ಲಿ ಗೊಬ್ಬರಗಳನ್ನು ಕೊಡುತ್ತಾರೆ. ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್‌ ಲ್ಯಾಂಡ್‌ನಲ್ಲಿ ಕೊಡುತ್ತಿರುವ ಗೊಬ್ಬರಗಳ ಪ್ರಮಾಣ ಮತ್ತು ಸಮಯಗಳನ್ನು ಕೋಷ್ಟಕ ೨.೬ರಲ್ಲಿ ಕೊಟ್ಟಿದೆ.

ಕೋಷ್ಟಕ .: ಉತ್ತರ ಕ್ವೀನ್ಸ್ ಲ್ಯಾಂಡ್ನಲ್ಲಿ ಕಮರಾಕ್ಷಿ ಮರಗಳಿಗೆ ಶಿಫಾರಸು ಮಾಡಿರುವ ರಾಸಾಯನಿಕ ಗೊಬ್ಬರಗಳ ಪ್ರಮಾಣ

ವಯಸ್ಸು

ಮರವೂಂದಕ್ಕೆ ಕೊಡುತ್ತಿರುವ ೧೦:೧೨:೧೭ ಎನ್ಪಿಕೆ ಮಿಶ್ರಣ (ಕಿ.ಗ್ರಾಂ)

(ವರ್ಷ)

ಏಪ್ರಿಲ್

ಜೂನ್

ಸೆಪ್ಟಂಬರ್

ಜನವರಿ

೦.೧ ೦.೧ ೦.೧ ೦.೧
೦.೨ ೦.೨ ೦.೨ ೦.೨
೦.೪ ೦.೪ ೦.೪ ೦.೪
೦.೫ ೦.೫ ೦.೫ ೦.೫
೦.೭ ೦.೭ ೦.೭ ೦.೭
೧.೦ ೧.೦ ೧.೦ ೧.೦
೧.೨ ೧.೨ ೧.೨ ೧.೨
೮ ಮತ್ತು ನಂತರ ೧.೫ ೧.೫ ೧.೫ ೧.೫

ಆ ದೇಶದಲ್ಲಿ ಮೊದಲನೇ ವರ್ಷ ಗಿಡವೊಂದಕ್ಕೆ ೦.೪ ಕಿ.ಗ್ರಾಂಗಳಷ್ಟು ಎನ್‌ಪಿಕೆ ಮಿಸ್ರಣವನ್ನು ಕೊಟ್ಟು ಅದರ ಪ್ರಮಾಣವನ್ನು ಪ್ರತಿವರ್ಷ ಹೆಚ್ಚಿಸುತ್ತಾ ಹೋಗುತ್ತಾರೆ. ಗಿಡಗಳು ಎಂಟು ವರ್ಷ ವಯಸ್ಸಿನವಿದ್ದಾಗ ತಲಾ ೬ ಕಿ.ಗ್ರಾಂ. ಗಳಷ್ಟು ಎನಪಿಕೆ ಮಿಶ್ರಣವನ್ನು ನಾಲ್ಕು ಸಮಕಂತುಗಳಲ್ಲಿ ಕೊಟ್ಟು ಅದರ ಮುಂದಿನ ವರ್ಷಗಳಲ್ಲಿ ಅದೇ ಪ್ರಮಾಣವನ್ನು ಮುಂದುವರಿಸುತ್ತಾ ಹೊಗುತ್ತಾರೆ. ಈ ಗೊಬ್ಬರಗಳನ್ನು ಗಿಡಗಳ ಬುಡದ ಪಾತಿಯಲ್ಲಿ ಒಂದು ಮೀಟರ್ ದೂರದಲ್ಲಿ ಕೊಟ್ಟು ಹನಿ ನೀರಾವರಿ ಒದಗಿಸುತ್ತಾರೆ.

ಮಲೇಷ್ಯಾದಲ್ಲಿ ಸಾವಯವ ಗೊಬ್ಬರದ ಜೊತೆಗೆ ಎನ್‌ಪಿಕೆ ರಾಸಾಯನಿಕ ಗೊಬ್ಬರಗಳನ್ನು ಕೊಡುತ್ತಾರೆ. ಅಲ್ಲಿ ಕಮರಾಕ್ಷಿ ಮರಗಳಿಗೆ ಶಿಫಾರಸು ಮಾಡಿರುವ ಗೊಬ್ಬರಗಳ ಪ್ರಮಾಣವನ್ನು ಕೋಷ್ಟಕ ೨.೭ರಲ್ಲಿ ಕೊಟ್ಟಿದೆ. ಕೆಲವಡೆಗಳಲ್ಲಿ ಸತುವಿನ ಕೊರತೆ ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಅದನ್ನು ಸರಿಪಡಿಸಲು ೧೦ ಲೀಟರ್ ನೀರಿಗೆ ೨೦ ಗ್ರಾಂ ಸತುವಿನ ಸಲ್ಫೇಟ್‌ ಅನ್ನು ಬೆರೆಸಿ ಎಲೆಗಳ ಮೇಲೆ ಸಿಂಪಡಿಸಬೇಕು. ವರ್ಷದಲ್ಲಿ ಮೂರು-ನಾಲ್ಕು ಸಿಂಪರಣೆಗಳಾದಲ್ಲಿ ಸಾಕಾಗುತ್ತದೆ.

ಕೋಷ್ಟಕ .: ಮಲೇಷ್ಯಾದಲ್ಲಿ ಕಮರಾಕ್ಷಿ ಮರಗಳಿಗೆ ಶಿಫಾರಸು ಮಾಡಿರುವ ಗೊಬ್ಬರಗಳ ಪ್ರಮಾಣ

ಮರಗಳ ವಯಸ್ಸು (ವರ್ಷಗಳಲ್ಲಿ)

ಗೊಬ್ಬರಗಳು ಸಾವಯವ / ಎನ್ಪಿಕೆ / ಮಿಗ್ನೀಷಿಯಂ

೧೫:೧೫:೧೫
ಸಾವಯವ+೧೨:೧೨:೧೭:೨
ಸಾವಯವ+೧೨:೧೨:೧೭:೨
ಸಾವಯವ+೧೨:೧೨:೧೭:೨
ಸಾವಯವ+೧೨:೧೨:೧೭:೨
ಸಾವಯವ+೧೨:೧೨:೧೭:೨
೭ ಮತ್ತು ಅದರಿಂದಾಚೆಗೆ ಸಾವಯವ+೧೨:೧೨:೧೭:೨

ಸುಣ್ಣಕಲ್ಲುಗಳಿಂದ ಕೂಡಿದ ತಳಪದರ ಇರುವ ಭೂಮಿಯಲ್ಲಿ ಮರಗಳ ಬೆಳವಣಿಗೆ ಸಮರ್ಪಕವಾಗಿರುವುದಿಲ್ಲ. ಅಂತಹ ಪರಿಸ್ಥಿತಿಗಳಲ್ಲಿ ಸೂಕ್ತಪ್ರಮಾಣದ ಗಿಪ್ಸ್‌ಂ ಅನ್ನು ಮಣ್ಣಿಗೆ ಸೇರಿಸಬೇಕು. ಪೋಷಕಾಂಶಗಳ ಮ್ರಮಾಣವನ್ನು ನಿಖರವಾಗಿ ತಿಳಿಯುವಲ್ಲಿ ಎಲೆಗಳ ರಾಸಾಯನಿಕ ವಿಶ್ಲೇಷಣೆ ನೆರವಾಗುತ್ತದೆ. ಈ ಉದ್ದೇಶಕ್ಕೆ ಫಸಲು ಇರದಂತಹ ರೆಂಬೆಗಳಲ್ಲಿನ ಎಲೆಗಳನ್ನು ಆರಿಸಿಕೊಂಡು ಬಳಸಲು ಸೂಚಿಸಿದೆ. ಸಿಲ್ವ ಮತ್ತು ಅವರ ಸಂಗಡಿಗರು (೧೯೮೪) ವಿಶ್ಲೇಷಿಸಿ ದಾಖಲು ಮಾಡಿದ ವಿವಿಧ ಪೋಷಕಾಂಶಗಳ ಪ್ರಮಾಣವನ್ನು ಕೋಷ್ಟಕ ೨.೮ರಲ್ಲಿ ಕೊಟ್ಟಿದೆ.

ಕೋಷ್ಟಕ .: ಕಮರಾಕ್ಷಿ ಎಲೆಗಳನ್ನು ವಿಶ್ಲೇಷಿಸಿದಾಗ ಕಂಡುಬಂದ ವಿವಿಧ ಪೋಷಕಾಂಶಗಳ ಶೇಕಡಾ ಪ್ರಮಾಣ

ಕ್ರಮ ಸಂ. ಪೋಷಕಾಂಶ ಶೇ. ಪ್ರಮಾಣ
ಸಾರಜನಕ ೧.೪೦
ರಂಜಕ ೦.೧೨
ಪೊಟ್ಯಾಷ್‌ ೦.೧೨
ಸುಣ್ಣ ೦.೯೮
ಮೆಗ್ನೀಷಿಯಂ ೦.೬೪
ಗಂಧಕ ೦.೨೪
ಕಬ್ಬಿಣ ೧೭೦ ಪಿಪಿಎಂ
ತಾಮ್ರ ೫ ಪಿಪಿಎಂಗಿಂತ ಕಡಿಮೆ
ಮ್ಯಾಗನೀಸ್‌ ೭೫  ಪಿಪಿಎಂ
೧೦ ಸತು ೨೦  ಪಿಪಿಎಂ
೧೧ ಬೋರಾನ್‌ ೫೧  ಪಿಪಿಎಂ
೧೨ ಸೋಡಿಯಂ ೮೭೫  ಪಿಪಿಎಂ
೧೩ ಅಲ್ಯೂಮಿನಿಯಂ ೧೯೮  ಪಿಪಿಎಂ

ನೀರಾವರಿ

ಕಮರಾಕ್ಷಿ ಮರಗಳಿಗೆ ಹದವರಿತು ನೀರು ಕೊಡಬೇಕು. ಅವು ವಾರವೊಂದಕ್ಕೆ ೩೦ ರಿಂದ ೭೫ ಸೆಂ.ಮೀ. ಗಳಷ್ಟು ತೇವಾಂಶವನ್ನು ಅಪೇಕ್ಷಿಸುವುದಾಗಿ ತಿಳಿದುಬಂದಿದೆ. ಫಸಲು ಬಿಡುತ್ತಿರುವ ಮರಗಳಿಗೆ ಮಳೆಯಿಲ್ಲದ ದಿನಗಳಲ್ಲಿ ತಲಾ ೨೦೦ ಲೀ. ನೀರನ್ನು ಕೊಡುವುದು ಅಗತ್ಯವೆನ್ನಲಾಗಿದೆ. ಗಿಡಗಳು ಎಳೆಯವಿರುವಾಗ ಕೈನೀರು ಕೊಡಬಹುದು. ಗೊಬ್ಬರ ಹಾಕಲು ಮಾಡಿದ ಉಂಗುರದ ಕಾಲುವೆಯಲ್ಲಿ ನೀರನ್ನು ಹಾಯಿಸುವುದು ಒಳ್ಳೆಯದು. ಹಾಯಿಸಿದ ನೀರು ಗಿಡಗಳ ಕಾಂಡಕ್ಕೆ ತಾಗದಂತೆ ಬುಡದ ಸುತ್ತ ಸ್ವಲ್ಪ ದಿಬ್ಬಮಾಡಿದಲ್ಲಿ ಉತ್ತಮ. ಒಣಾವಧಿ ಇದ್ದಾಗ ವಾರಕ್ಕೊಮ್ಮೆ ನೀರು ಹಾಯಿಸಿದರೆ ಸಾಕಾಗುತ್ತದೆ. ಹನಿ ನೀರಾವರಿ ಸೌಲಭ್ಯವಿದ್ದರೆ ನೀರಿನ ಉಳಿತಾಯ ಸಾಧ್ಯ. ಪ್ರಾಯದ ಮರಗಳಿಗೆ ಅಷ್ಟೂಂದು ನೀರು ಬೇಕಾಗಿರುವುದಿಲ್ಲ. ಹೂವುಬಿಟ್ಟು ಕಾಯಿಕಚ್ಚುವ ದಿನಗಳಲ್ಲಿ ಮಣ್ಣು ಸಾಕಷ್ಟು ಹಸಿಯಾಗಿಲ್ಲದಿದ್ದಲ್ಲಿ ಅವುಗಳ ಬಹುಪಾಲು ಉದುರಿಬೀಳುತ್ತವೆ.

ತೋಟದ ಜಮೀನಿನಲ್ಲಿ ಬಿದ್ದಂತಹ ಮಳೆಯನೀರು ಅಲ್ಲಿಯೇ ಹಿಂಗುವಂತೆ ಮಾಡಬೇಕು. ಈ ಉದ್ದೇಶಕ್ಕೆ ಹಲವಾರು ತಾಂತ್ರಿಕತೆಗಳನ್ನು ಅನುಸರಿಸಬಹುದು. ಅವುಗಳೆಂದರೆ ತೋಟದ ಸುತ್ತಂಚಿನಲ್ಲಿ ಎತ್ತರದ ಹಾಗೂ ದಟ್ಟವಿರುವ ಗಾಳಿ ತಡೆಯನ್ನು ಎಬ್ಬಸುವುದು, ಜಮೀನನ್ನು ತಾಕುಗಳನ್ನಾಗಿ ವಿಂಗಡಿಸಿ, ಬದುಗಳನ್ನು ನಿರ್ಮಿಸುವುದು, ಬದುಗಳ ಮೇಲೆ ಹುಲ್ಲನ್ನು ಬೆಳೆಸುವುದು, ನೀರು ಹರಿಯುವ ದಾರಿಗಳಲ್ಲಿ ಸೂಕ್ತ ಗಾತ್ರದ ಗುಂಡಿಗಳನ್ನು ತೋಡುವುದು, ಸಾಲುಗಳ ನಡುವಣ ಹಾಗೂ ಪಾತಿಗಳ ಮಣ್ಣನ್ನು ಮೇಲ್ಮೇಲೆ ಸಡಲಿಸುವುದು, ಪಾತಿಗಳನ್ನು ಹಿಗ್ಗಿಸುವುದು, ಇಳಿಜಾರಿಗೆ ಅಡ್ಡಲಾಗಿ ಸಮಪಾತಳಿ ಬದುಗಳನ್ನು ಹಾಕುವುದು. ಜಗಲಿ ಪಾತಿಗಳನ್ನು ಮಾಡುವುದು, ಅರ್ಧಚಂದ್ರಾಕಾರದ ಬದುಗಳನ್ನು ಹಾಕುವುದು, V ಆಕಾರದಲ್ಲಿ ಕಂದಕ ತೋಡುವುದು, ಗುಂಡಿಗಳಲ್ಲಿ ಬೇರು ಸಸಿಗಳನ್ನು ಎಬ್ಬಿಸಿ ಅನಂತರ ಕಸಿ ಮಾಡುವುದು, ಪಾತಿಗಳ ಅಗಲಕ್ಕೆ ಹೊದಿಕೆ ಹರಡುವುದು, ಮುಂಗಾರಿನ ಪ್ರಾರಂಭದಲ್ಲಿ ಗಿಡಗಳನ್ನು ನೆಡುವುದು, ಮಡಕೆ ನೀರಾವರಿ ಪದ್ಧತಿಯನ್ನು ಅಳವಡಿಸುವುದು ಮುಂತಾದವು.

ಅಂತರ ಬೇಸಾಯ ಮತ್ತು ಕಳೆ ಹತೋಟಿ

ಅಂತರ ಬೇಸಾಯ ತೀರಾ ಆಳವಿರಬಾರದು. ಸಾಲುಗಳ ನಡುವಣ ಹಾಗೂ ಪಾತಿಗಳಲ್ಲಿನ ಮಣ್ಣನ್ನು ಮೇಲ್ಮೇಲೆ ಸಡಲಿಸಿ, ಕಳೆಗಳನ್ನು ಕಿತ್ತರೆ ಸಾಕು. ವರ್ಷದಲ್ಲಿ ಎರಡು ಸಾರಿ ಅಂತರಬೇಸಾಯ ಮಾಡಲು ಸೂಚಿಸಿದೆ. ಮುಂಗಾರಿನ ಪ್ರಾರಂಭದಲ್ಲಿ ಒಮ್ಮೆ ಮತ್ತು ಮಳೆಗಾಲದ ಕಡೆಯಲ್ಲಿ ಮತ್ತೂಮ್ಮೆ ಹರಗಿದರೆ ಮೇಲ್ಮಣ್ಣು ಸಡಿಲಗೊಂಡು ತೇವಾಂಶ ಬುಹುಕಾಲ ಇರುವಂತೆ ಮಾಡುವುದು. ಪ್ರಾರಂಭದಲ್ಲಿ ಕಳೆಗಳ ಹಾವಳಿ ಜಾಸ್ತಿ. ಅವು ಹೂವು ಬಿಟ್ಟು ಬೀಜೋತ್ಪತ್ತಿ ಮಾಡುವವರೆಗೆ ಕಾಯಬಾರದು. ಕಳೆಗಳು ವಿಜೃಂಭಿಸಿದ್ದೇ ಆದರೆ ಅವು ಮಣ್ಣಿನಲ್ಲಿನ ಪೋಷಕಾಂಶಗಳನ್ನು ಮತ್ತು ತೇವಾಂಶವನ್ನು ಬಳಸಿಕೊಳ್ಳುತ್ತವೆಯಲ್ಲದೆ ಕೀಟ ಮತ್ತು ರೋಗಾಣುಳಿಗೆ ಆಸರೆಯನ್ನೊಂದಗಿಸುತ್ತವೆ. ಅವುಗಳನ್ನು ಕೈಯಿಂದ ಕಿತ್ತು ಇಲ್ಲವೆ ಕೃಷಿ ಉಪಕರಣಗಳನ್ನು ಬಳಸಿ ನಾಶಗೊಳಿಸಬಹುದು ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಕಳೆನಾಶಕಗಳು ಬಳಕೆಗೆ ಬಂದಿವೆ. ಆದರೆ ಅವುಗಳನ್ನು ಬಳಸುವ ಮುಂಚೆ ತಜ್ಞರ ಸಲಹೆ ಪಡೆಯುವುದು ಸೂಕ್ತ. ಒಂದು ವೇಳೆ ಅವುಗಳನ್ನು ಸಿಂಪಡಿಸುವಾಗ ಅಜಾಗರೂಕತೆಯಿಂದ ಗಿಡಗಳ ಮೇಲೆ ಬಿದ್ದಿದ್ದೇ ಆದರೆ ಹಾನಿ ಖಂಡಿತ. ಕಳೆಗಳ, ಬೀಜ ಮೊಳೆಯುವ ಮೊದಲು ಬಳಸುವ ಕಳೆನಾಶಕಗಳು ಮತ್ತು ಮೊಳೆತ ನಂತರ ಬಳಸುವ ಕಳೆನಾಶಕಗಳು ಎಂಬುದಾಗಿ ಎರಡು ಬಗೆಯ ಕಳೆನಾಶಕಗಳಿವೆ. ಶೇ. ೮೦ ಕ್ರಿಯಾಸಾಮಗ್ರಿ (active ingredient) ಇರುವ ಡೈಯೂರಾನ್‌ ಮತ್ತು ಪ್ಯಾರಾಕ್ವಾಟ್‌ಗಳನ್ನು ೧.೫ ಕಿ.ಗ್ರಾಂನಂತೆ ೪೦೦ ಲೀ. ನೀರಿಗೆ ಬೆರೆಸಿ ಒಂದು ಹೆಕ್ಟೇರ್ ಮಿಸ್ತೀರ್ಣಕ್ಕೆ ಸಿಂಪಡಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಸಾವಯುವ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.

ಅಂತರ ಬೆಳೆಗಳು

ಕಮರಾಕ್ಷಿಯನ್ನು ಏಕಬೆಳೆಯಾಗಿ ಬೆಳೆಯುವುದರ ಬದಲಾಗಿ ಅವು ವಾಣಿಜ್ಯ ಫಸಲು ಬಿಡುವ ತನಕ ಸಾಲುಗಳ ನಡುವಣ ಖಾಲಿ ಜಾಗವನ್ನು ಲಾಭದಾಯಕವಾಗಿ ಬಳಸಿಕೊಳ್ಳಲು ಅಂತರ ಬೆಳೆಗಳು ನೆರವಾಗುತ್ತವೆ. ಈ ಉದ್ದೇಶಕ್ಕೆ ರಾಗಿ, ತೊಗರಿ, ಜೋಳ, ಅವರೆ, ನೆಲಗಡಲೆ, ತರಕಾರಿ, ಹೂವಿನ ಬೆಳೆಗಳು ಮುಂತಾಗಿ ಬೆಳಯಬಹುದು. ಒಂದು ವೇಳೆ ನೀರಾವರಿ ಅನುಕೂಲಗಳಿಲ್ಲದಿದ್ದಲ್ಲಿ ಅವುಗಳನ್ನು ಮಳೆಗಾಲದಲ್ಲಿ ಬಿತ್ತಿ ಬೆಳೆಯಬಹುದು. ಅವುಗಳನ್ನು ಮುಂಗಾರಿನಲ್ಲಿ ಬಿತ್ತಿದ್ದೇ ಆದರೆ ಮಳೆಗಾಲ ಮುಗಿಯುವ ಹೊತ್ತಿಗೆ ಕೊಯ್ಲಿಗೆ ಬರುತ್ತವೆ. ಹೀಗೆ ಮಾಡುವುದರಿಂದ ಕಳೆಗಳೂ ಸಹ ಅಷ್ಟೂಂದು ಹಾನಿ ಮಾಡಲಾರವು. ಈ ಬೆಳೆಗಳನ್ನು ಸಾಲುಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಬಿತ್ತಿ ಬೆಳೆಯಬೇಕು. ಈ ಅಂತರ ಬೆಳೆಗಳು ಮುಖ್ಯ ಬೆಳೆಯೂಂದಿಗೆ ತೇವಾಂಶ, ಪೋಷಕಾಂಶಗಳು ಹಾಗೂ ಬೆಳಕುಗಳಿಗೆ ಸ್ಪರ್ಧಿಸಬಾರದು. ಅದೇ ರೀತಿ ಅವು ಕೀಟ ಮತ್ತು ರೋಗಾಣುಗಳಿಗೆ ಅಸರೆ ಒದಗಿಸಬಾರದು.

ಮಿಶ್ರ ಬೆಳೆಗಳು

ವಾರ್ಷಿಕ ಬೆಳೆಗಳ ಬದಲಾಗಿ ಸಾಲುಗಳ ನಡುವೆ ಕಡಿಮೆ ಅವಧಿಯ ಬೆಳೆಗಳಾದ ಸೀಬೆ, ಸೀತಾಫಲ, ಅಂಜೂರ, ಫಾಲ್ಸ, ದಾಳಿಂಬೆ, ಪಪಾಯ, ಬಾಳೆ, ನುಗ್ಗೆ, ಕರಿಬೇವು, ದಾಲ್ಚಿನ್ನಿ, ಕಾಕಡ, ಮಲ್ಲಿಗೆ, ಕನಕಾಂಬರ, ಮುಳ್ಳುಜಾಜಿ, ಸಿಟ್ರೊನೆಲ್ಲ ಮುಂತಾದವು ಬೆಳೆದು ಲಾಭ ಹೊಂದುಬಹುದು. ಕಮರಾಕ್ಷಿ ವಾಣಿಜ್ಯ ಇಳುವರಿ ಕೊಡಲು ಏಳೆಂಟು ವರ್ಷ ಬೇಕು. ಅವುಗಳ ರೆಂಬೆಗಳು ಹರಡಿ ದಟ್ಟ ನೆರಳನ್ನು ಮಾಡವ ಸಮಯದಲ್ಲಿ ಮಿಶ್ರ ಬೆಳಗಳನ್ನು ಕೈ ಬಿಡಬಹುದು. ಹೀಗೆ ಮಾಡುವುದರಿಂದ ಬೆಳೆಗಾರನಿಗೆ ಒಂದಿಷ್ಟು ಆದಾಯ ಸಿಗುವಂತಾಗುತ್ತದೆ.

ಹಸಿರುಗೊಬ್ಬರದ ಬೆಳೆಗಳು

ಮಣ್ಣಿನ ಫಲವತ್ತತೆ ಸುಧಾರಿಸಲು ಈ ಬೆಳಗಳು ನೆರವಾಗುತ್ತವೆ. ಈ ಉದ್ದೇಶಕ್ಕೆ ಅಪ್ಸಣಬು / ಡೈಯಂಚ, ಅವರೆ, ಹುರುಳಿ, ಅಲಸಂದೆ, ಉದ್ದು, ಹೆಸರು ಮುಂತಾಗಿ ಮುಂಗಾರಿನಲ್ಲಿ ಬಿತ್ತಿ ಅವು ಹೂವು ಬಿಡುವ ಮುಂಚೆ ಕಿತ್ತು ಮಣ್ಣಿಗೆ ಸೇರಿಸಬೇಕು. ಈ ಬೆಳೆಗಳನ್ನು ಸಾಲುಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಮತ್ತು ಗಿಡಗಳ ಬುಡದ ಪಾತಿಯಲ್ಲಿ ಬಿತ್ತಬೇಕು. ದ್ವಿದಳ ಬೆಳೆಗಳಾದ್ದರಿಂದ ಅವುಗಳ ಬೇರುಗಳಲ್ಲಿನ ಗಂಟುಗಳು ವಾತಾವರಣದಲ್ಲಿನ ಸಾರಜನಕವನ್ನು ಹೀರಿ ಮಣ್ಣಿನಲ್ಲಿ ಹಿಡಿದಿಡುತ್ತವೆ. ಈ ಬೆಳೆಗಳ ಗಿಡಗಳನ್ನು ಮಣ್ಣಿಗೆ ಸೇರಿಸಿದಾಗ ಅವು ಕೊಳೆತು ಗೊಬ್ಬರವಾಗುತ್ತವೆ. ಅದರಿಂದ ಬಿದ್ದ ಮಳೆಯ ನೀರು ಅಲ್ಲಿಯೇ ಹಿಂಗಲು ಅನುಕೂಲವಾಗುವುದರ ಜೊತೆಗೆ ಮಣ್ಣು ಕೊಚ್ಚಿ ಹೋಗುವುದಿಲ್ಲ. ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳು ಸುಧಾರಿಸುತ್ತವೆ. ಇವೆಲ್ಲಾ ಲಾಭಗಳ ಜೊತೆಗೆ ಕಳೆಗಳೂ ಸಹ ಹತೋಟಿಗೊಳ್ಳುತ್ತವೆ.

ಹೊದಿಕೆ ಬೆಳೆಗಳು ಮತ್ತು ಹೊದಿಕೆ ಹರಡುವುದು

ಸಾಲುಗಳ ನಡುವೆ ದಟ್ಟ ಹೊದಿಕೆ ಇದ್ದದ್ದೇ ಆದರೆ ಮಳೆಯಿಂದ ಮಣ್ಣು ಕೊಚ್ಚಿ ಹೊಗುವುದಿಲ್ಲ ಮತ್ತು ಬಿದ್ದಂತ ಮಳೆಯ ನೀರು ಅಲ್ಲಲ್ಲಿಯೇ ತಡೆಯಲ್ಪಟ್ಟು ಅದರ ಹೆಚ್ಚಿನ ಬಾಗ ಮಣ್ಣಿನಲ್ಲಿ ಹಿಂಗುತ್ತದೆ. ಅಲಸಂದಿ, ಸ್ಟೈಲೊಸಾಂಥಸ್ ಹಮಟ, ಸ್ಟೈಲೊಸಾಂಥಸ್ ಸ್ಕ್ಯಾಬ್ರ ಮುಂತಾದವುಗಳನ್ನು ಒತ್ತಾಗಿ ಬಿತ್ತಿದಲ್ಲಿ ದಟ್ಟ ಹೊದಿಕೆ ಲಭಿಸುತ್ತದೆ. ಅವುಗಳನ್ನು ಮಳೆಗಾಲದ

ಪ್ರಾರಂಭದಲ್ಲಿ ಬಿತ್ತಿ, ಮಳೆಗಾಲದ ಕಡೆಯಲ್ಲಿ ಮಣ್ಣಿಗೆ ಸೇರಿಸಬಹುದು.

ಮಣ್ಣಿನಲ್ಲಿ ತೇವ ಹೆಚ್ಚುಕಾಲ ಉಳಿಯುವಂತೆ ಮಾಡಲು ಸಾಲುಗಳ ನಡುವೆ ಹಾಗೂ ಪಾತಿಗಳ ಅಗಲಕ್ಕೆ ತ್ಯಾಜ್ಯ ವಸ್ತುಗಳನ್ನು ಮಂದವಾಗಿ ಹರಡಬಹುದು. ಈ ಉದ್ದೇಶಕ್ಕೆ ಒಣಹುಲ್ಲು, ತರಗೆಲೆಗಳು, ಕೊಳೆಗಳು, ಕಸಕಡ್ಡಿ, ಕಣದಲ್ಲಿನ ಹೊಟ್ಟು, ನೆಲೆಗಡಲೆ ಸಿಪ್ಪೆ, ತೆಂಗಿನ ನಾರಿನಪುಡಿ ಮುಂತಾಗಿ ಉಪಯುಕ್ತ. ಇವುಗಳ ಬಳಕೆಯಿಂದ ಕಳೆಗಳೂ ಸಹ ಹತೋಟಿಗೊಳ್ಳುತ್ತವೆ. ಅವು ದಿನಗಳೆದಂತೆ ಕೊಳೆತು ಗೊಬ್ಬರವಾಗುತ್ತವೆ.

ಹೊರದೇಶಗಳಲ್ಲಿ ಈ ಉದ್ದೇಶಕ್ಕೆ ಕಪ್ಪುಪ್ಲಾಸ್ಟಿಕ್‌ ಹಾಳೆಯನ್ನು ನೆಲದ ಮೇಲೆ ಹರಡುವುದಂಟು. ಈ ವಸ್ತು ಕೊಳೆಯುವುದಿಲ್ಲ ಆದರೆ ಬೆಲೆ ದುಬಾರಿ ಇರುತ್ತದೆ.

ಆಕಾರ ಮತ್ತು ಸವರುವಿಕೆ

ಗಿಡಗಳನ್ನು ಹಾಗೆಯೇ ಬೆಳೆಯಲು ಬಿಟ್ಟರೆ ಅವು ಪೊದೆಯಂತಾಗಿ ಲಾಭದಾಯಕ ಇಳುವರಿಯನ್ನು ಕೊಡಲಾರವು. ಅವುಗಳಿಗೆ ಒಳ್ಳೆಯ ಆಕಾರವನ್ನು ಒದಗಿಸಬೇಕು. ಈ ಕೆಲಸವನ್ನು ಅವು ಎಳೆಯವಿರುವಾಗಲೇ ಪ್ರಾರಂಭಿಸಬೇಕು. ಕಾಂಡ ನೆಟ್ಟಗಿದ್ದು, ದೃಢವಾಗಿ, ಬಲಿಷ್ಠವಾಗಿರಬೇಕು. ಅದೇ ರೀತಿ ಚೌಕಟ್ಟು ಬಲವಾಗಿರಬೇಕು ಮತ್ತು ನೆತ್ತಿ ಸಮೋತಲನವಾಗಿರಬೇಕು. ರೆಂಬೆಗಳು ನೆಲಮಟ್ಟಕ್ಕೆ ತೀರಾ ಹತ್ತಿರವಿದ್ದಲ್ಲಿ ದಟ್ಟ ನೆರಳುಂಟಾಗಿ ಬೇಸಾಯ ಕೆಲಸಗಳಿಗೆ ಅಡ್ಟಿಯನ್ನುಂಟು ಮಾಡುತ್ತವೆ. ಮರದ ಎಲ್ಲಾ ರೆಂಬೆಗಳಿಗೆ ಸಾಕಷ್ಟು ಬಿಸಿಲು ಬೆಳಕು ಸಿಗುವಂತೆ ಮಾಡಬೇಕು. ಪ್ರಧಾನಕಾಂಡ ನೆಲಮಟ್ಟದಿಂದ ಸುಮಾರು ೧ ಮೀ ಎತ್ತರದವರೆಗೆ ನಯವಾಗಿದ್ದು, ಪಕ್ಕರೆಂಬೆಗಳಿಂದ ಕೂಡಿರಬಾರದು. ಅದಕ್ಕಾಗಿ ಗಿಡಗಳನ್ನು ನೆಟ್ಟನಂತರ ಅಗಾಗ್ಗೆ ಕೆಳಭಾಗದ ಪಕ್ಕರೆಂಬೆಗಳನ್ನು ಸವರಿ ತೆಗೆಯಬೇಕು. ಅದೇ ರೀತಿ ತೀರಾ ಒತ್ತಾದ ರೆಂಬೆಗಳನ್ನು ಸವರಬೇಕು. ಕೆಲವೊಮ್ಮೆ ಬೇರು ಸಸಿಯಲ್ಲಿ ಕಸಿ ಗಂಟಿನ ಕೆಳಗೆ ಚಿಗುರು ಬರುತ್ತಿರುತ್ತವೆ. ಅವುಗಳನ್ನು ಚಿವುಟಿಹಾಕಬೇಕು. ಗಿಡಗಳನ್ನು ನೆಟ್ಟ ಒಂದೆರಡು ವರ್ಷಗಳವರೆಗೆ ಹೂವು-ಹೀಚುಗಳಿದ್ದಲ್ಲಿ ಕಿತ್ತು ಹಾಕಬೇಕು. ನೀರ್ಚಿಗುರು ಇದ್ದಲ್ಲಿ ಅದನ್ನೂ ಸಹ ಕಿತ್ತು ತೆಗೆಯುವುದು ಅಗತ್ಯ.

ಬಹಳಷ್ಟು ಕೀಟ ಪೀಡಿತ ರೆಂಬೆಗಳಿದ್ದಲ್ಲಿ ಅಥವಾ ರೋಗ ಪೀಡಿತ ಇಲ್ಲವೇ ಒಣಗಿ ಸತ್ತ ಅಥವಾ ಮುರಿದ ರೆಂಬೆಗಳಿದ್ದಲ್ಲಿ ಅವುಗಳನ್ನು ಸವರುಗತ್ತರಿಯಿಂದ ಕತ್ತರಿಸಿ ತೆಗೆದು ಸವರುಗಾಯಗಳಿಗೆ ತಾಮ್ರಯುಕ್ತ ಶಿಲೀಂಧ್ರನಾಶಕದ ಸರಿಯನ್ನು ಹಚ್ಚಬೇಕು, ಗಿಡದ ನೆತ್ತಿಯಲ್ಲಿ ನಾಲ್ಕರಿಂದ ಐದು ಪಕ್ಕರೆಂಬೆಗಳನ್ನು ಸುತ್ತಹರಡಿ ಬೆಳೆಯುವಂತೆ ಮಾಡಿ, ಸುಳಿಯನ್ನು ಚಿವುಟಿ ಹಾಕಬೇಕು. ಆಗ ಅದು ಸಮತೋಲನ ನೆತ್ತಿಯಾಗಬಲ್ಲದು. ಈ ಮರಗಳಲ್ಲಿ ಕ್ರಮಬದ್ಧವಾಗಿ ಪ್ರತಿವರ್ಷ ಸವರುವ ಅಗತ್ಯವಿಲ್ಲ. ಪೂರ್ಣ ಬೆಳೆದ ಮರಗಳ ನೆತ್ತಿ ಗೋಲಾಕಾರ ಇಲ್ಲವೇ ಬಿಚ್ಚಿ ಹರಡಿದ ಛತ್ರಿಯಂತೆ ಕಾಣುವುದು.

ಕಾಯಿಕಚ್ಚುವಿಕೆ ಮತ್ತು ಹಣ್ಣುಗಳ ವೃದ್ಧಿ

ಬೀಜ ಸಸಿಗಳಲ್ಲಿ ಹೂವು ಬಿಟ್ಟು ಕಾಯಿಕಚ್ಚಲು ಏಳೆಂಟು ವರ್ಷಗಳ ಅವಧಿ ಬೇಕಾಗುತ್ತದೆ. ಆದರೆ ನಿರ್ಲಿಂಗ ವಿಧಾನದಲ್ಲಿ ವೃದ್ಧಿಮಾಡಿ ಬೆಳೆ ಗಿಡಗಳಲ್ಲಿ ನೆಟ್ಟ ಒಂದೆರಡು ವರ್ಷಗಳಲ್ಲಿಯೇ ಫಸಲನ್ನು ಕಾಣಬಹುದು. ಮೊದಲ ಒಂದೆರಡು ವರ್ಷಗಳಲ್ಲಿ ಬಿಟ್ಟಂತಹ ಹೂಗಳನ್ನು ಕಿತ್ತುಹಾಕಿದರೆ, ಗಿಡಗಳು ಕಸುವಿನಿಂದ ಬೆಳೆಯುತ್ತವೆ.

ಕಮರಾಕ್ಷಿಯಲ್ಲಿ ಹೂವು ಎಲೆರಹಿತ ರೆಂಬೆಗಳಲ್ಲಿ, ಕಾಂಡದ ಬೊಡ್ಡೆಯಲ್ಲಿ ಚಿಗುರು ರೆಂಬೆಗಳಲ್ಲಿ ಮುಂತಾಗಿ ಬಿಡುತ್ತವೆ. ಸಿಹಿ ಬಗೆಗಳಲ್ಲಿ ಅವು ಕವಲು ರೆಂಬೆಗಳ ತುದಿಯಲ್ಲಿ ಬಿಡುವುದುಂಟು. ಹೂವು ಎಲೆ ತೊಟ್ಟಿನ ಕಂಕುಳಲ್ಲಿ ಬಿಡುತ್ತವೆ. ಗೊಂಚಲನ್ನು ಕಾಲಿಫ್ಲೋರಸ್‌ ಅಥವಾ ಅಡ್ವೆಂಟಿಷಿಯಸ್‌ ಎನ್ನುತಾರೆ.

ದಕ್ಷಿಣ ಭಾರತದಲ್ಲಿ ಹೂವು ವರ್ಷಾದ್ಯಂತ ಬಿಡುತ್ತಿರುತ್ತವೆ. ಅದಾಗ್ಯೂ ಮೂರು ಋತುಮಾನಗಳು ಮುಖ್ಯವಾದವು. ಅವುಗಳೆಂದರೆ: ಏಪ್ರಿಲ್-ಮೇ, ಜುಲೈ-ಅಗಸ್ಟ್‌ ಮತ್ತು ಸೆಪ್ಟಂಬರ್‌ –  ಅಕ್ಟೋಬರ್ ತಿಂಗಳುಗಳು. ಇವುಗಳ ಪೈಕಿ ಎರಡು ಮತ್ತು ಮೂರನೇ ಋತುಮಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೂವು ಬಿಟ್ಟು ಕಾಯಿ ಕಚ್ಚುತ್ತವೆ.

ಆಸ್ಟ್ರೇಲಿಯಾದ ದಕ್ಷಿಣ ಕ್ವೀನ್ಸ್‌ ಲ್ಯಾಂಡ್‌ನಲ್ಲಿ ಡಿಸೆಂಬರ್ – ಫೆಬ್ರವರಿಯಲ್ಲಿ ಮತ್ತು ಏಪ್ರಿಲ್-ಮೇ ತಿಂಗಳುಗಳು ಪ್ರಧಾನ ಹೂವು ಬಿಡುವ ಋತುಮಾನಗಳಾಗಿದ್ದರೆ ಉತ್ತರ ಕ್ವೀನ್ಸ್‌ ಲ್ಯಾಂಡ್‌ನಲ್ಲಿ ಫೆಬ್ರವರಿ – ಏಪ್ರಿಲ್ ಮತ್ತು ಸೆಪ್ಟೆಂಬರ್ – ನವೆಂಬರ್ ಪ್ರಮುಖ ಹೂವು ಬಿಡುವ ಋತುಮಾನಗಳೆಂಬುದಾಗಿ ತಿಳಿದು ಬಂದಿದೆ. ಹೂಗೊಂಚಲು ಬಲುಗಿಡ್ಡ. ಹುಳಿಬಗೆಗಳಲ್ಲಿ ಕಡಿಮೆ ಸಂಖ್ಯೆಯ ಹೂವು ಮತ್ತು ಸಿಹಿಬಗೆಗಳಲ್ಲಿ ಅಧಿಕ ಸಂಖ್ಯೆಯ ಹೂವು ಬಿಟ್ಟಿದ್ದಾಗಿ ಅಧ್ಯಯನಗಳಿಂದ ತಿಳಿದುಬಂದಿದೆ.

ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ನಡೆಸಿದ ಆಧ್ಯಯನಗಳಲ್ಲಿ ಸಿಹಿಬಗೆಗಳ ಹೂಗೂಂಚಲುಗಳಲಿ ಸರಾಸರಿ ಶೇ.೩೮ ಹೂವು ಮತ್ತು ಹುಳಿಬಗೆಗಳ ಹೂಗೊಂಚಲುಗಳಲ್ಲಿ ಸರಾಸರಿ ಶೇ.೧೭ ಹೂವು ಇದ್ದುದಾಗಿ ದಾಖಲು ಮಾಡಲಾಗಿದೆ.

ಹೂವು ಅರಳುವುದು ಬೆಳಿಗ್ಗೆ ೭.೩೦ ರಿಂದ ೧೦ರವರೆಗೆ. ಹೂವು ಬಿರಿದ ಕೂಡಲೇ ಪರಾಗಕೋಶಗಳೂ ಸಹ ಬಿರಿದು ಪರಾಗವನ್ನು ಹೊರಹಾಕುತ್ತವೆ. ಈಗಾಗಲೇ ಹೇಳಿದಂತೆ ಇವು ಅನ್ಯ- ಪರಾಗಸ್ಪರ್ಶದ ಹಣ್ಣಿನ ಬೆಳೆಗಳಾಗಿವೆ.

ಕಮರಾಕ್ಷಿಯಲ್ಲಿ ಗಿಡ್ಡ ಶಲಾಕೆಯ ಮತ್ತು ಉದ್ದ ಶಲಾಕೆಯ ಬಗೆಗಳಿದ್ದು ಅವು ಪರಾಗಸ್ಪರ್ಶಕಾರ್ಯಕ್ಕೆ ಅಡ್ಡಿಯುಂಟುಮಾಡಬಲ್ಲವು. ಗಿಡ್ಡಶಲಾಖೆಯ ತಳಿಯ ಹೂಗಳಿಗೆ ಇನ್ನೊಂದು ಗಿಡ್ಡ ಶಲಾಕೆಯ ಹೂಗಳ ಪರಾಗ ಉಪಯುಕ್ತವಿರುವುದಿಲ್ಲ. ಅದೇ ರೀತಿ ಉದ್ದ ಮತ್ತು ಗಿಡ್ಡ ಶಲಾಕೆಗಳ ತಳಿಗಳ ಪರಾಗ ಉಪಯುಕ್ತವಿರುವುದಿಲ್ಲ. ಅಂದರೆ ಪರಾಗಸ್ಪರ್ಶವೆಸಗಲು ಅಸಮರ್ಥವಿರುತ್ತವೆ. ಆದರೆ ಗಿಡ್ಡ ಮತ್ತು ಉದ್ದ ಶಲಾಕ ಬಗೆಗಳು ಸಮಂಜಸವಿರುತ್ತವೆ. ಈ ಸಮಸ್ಯೆಗೆ ‘ಗೋಲ್ಡನ್‌ ಸ್ಟಾರ್’ ಹೊರತಾಗಿದೆ. ಜೇನುಹುಳು, ನೊಣಗಳು ಮುಂತಾಗಿ ಪರಾಗಸ್ಪರ್ಶ ಕಾರ್ಯದಲ್ಲಿ ನೆರವಾಗುತ್ತವೆ. ಪರಾಗನಳಿಕೆಯ ವೃದ್ಧಿಯಲ್ಲಿ ಉಷ್ಣತೆ ಪ್ರಭಾವ ಬೀರಬಲ್ಲದು. ಒಂದು ವೇಳೆ ನಿರೀಕ್ಷಿತ ಪ್ರಮಾಣದಲ್ಲಿ ಪರಾಗಸ್ಪರ್ಶವಾಗದೇ ಇದ್ದಲ್ಲಿ ಇಲ್ಲವೇ ಪರಾಗನಳಿಕೆಯ ವೃದ್ಧಿಯಲ್ಲಿ ಉಷ್ಣತೆಯಿಂದ ಅಡ್ಡಿಯುಂಟಾದಲ್ಲಿ ಹಣ್ಣು ಮಾಮೂಲು ಆಕಾರವಿರದೆ ವಕ್ರವಕ್ರವಾಗುವುದುಂಟು. ಅಂತಹ ಹಣ್ಣು ಪ್ಯಾಕ್‌ ಮಾಡಲು ಸೂಕ್ತವಿರುವುದಿಲ್ಲ ಮತ್ತು ಅವುಗಳನ್ನೇನಿದ್ದರೂ ಸ್ಥಳೀಯವಾಗಿ ಮಾರಾಟ ಮಾಡಲು ಇಲ್ಲವೇ ಸಂಸ್ಕರಣೆಗೆ ಬಳಸಬಹುದಷ್ಟೇ. ಕ್ವೀನ್ಸ್‌ ಲ್ಯಾಂಡ್‌ನಲ್ಲಿ ಬೇಸಾಯದಲ್ಲಿನ ಗಿಡ್ಡ ಹಾಗೂ ಉದ್ದ ಶಲಾಕೆಗಳ ತಳಿಗಳನ್ನು ಕೋಷ್ಟಕ ೨.೯ರಲ್ಲಿ ಕೊಟ್ಟಿದೆ.

ಕೋಷ್ಟಕ .: ಕ್ವೀನ್ಸ್ ಲ್ಯಾಂಡ್ನಲ್ಲಿ ಬೇಸಾಯದಲ್ಲಿರುವ ಗಿಡ್ಡ ಹಾಗೂ ಉದ್ದ ಶಲಾಕೆ ತಳಿಗಳು

ಗಿಡ್ಡ ಶಲಾಕೆ ತಳಿಗಳು ಉದ್ದ ಶಲಾಕೆ ತಳಿಗಳು
ಬಿ೨ ಬಿ೧
ಬಿ೮ ಬಿ೬
ಬಿ೧೦ ಬಿ೧೧
ಫ್ವಾಂಗ್‌ಟುಂಗ್‌ ಬಿ೧೬
ಲುಥೊ ಸ್ಟಾರ್‌ಕಿಂಗ್
ವೀಲರ್ ಮಹಾ
ಕೆಂಬಂಗನ್‌ ಆರ್ಕಿನ್‌
ಪ್ಯಾಟ್‌ಚುಂಗ್‌ ೧೧-೧(ಕ್ಯಾರಿ)
೯-೪  
೮-೧ (ಕಾರ)  

ಬಿಟ್ಟ ಹೂವೆಲ್ಲಾ ಕಾಯಿಕಚ್ಚಿ, ಹಣ್ಣಾಗುವುದಿಲ್ಲ. ಅವುಗಳ ಬಹುಪಾಲು ವಿವಿಧ ಹಂತಗಳಲ್ಲಿ ಉದುರಿಬೀಳುತ್ತವೆ. ಒಂದು ಅಧ್ಯಯನದಲ್ಲಿ ಶೇ. ೮೪ರಷ್ಟು ಹೂವು ಮತ್ತು ಹೀಚು ಉದುರಿಬಿದ್ದು ಕಡೆಗೆ ಕೇವಲ ಶೇ.೧೬ರಷ್ಟು ಮಾತ್ರ ಕೊಯ್ಲಿಗೆ ಬಂದಿದ್ದಾಗಿ ತಿಳಿದುಬಂದಿದೆ. ಮೊದಲೆರಡು ವಾರಗಳಲ್ಲಿ ಶೇ. ೧೭ರಷ್ಟು ಹೂವು ಹೀಚುಗಳು ಉದುರಿದರೆ ಏಳು ಮತ್ತು ಎಂಟು ವಾರಗಳ ಹಂತದಲ್ಲಿ ಶೇ. ೧೪ರಷ್ಟು ಹೂವು ಹೀಚುಗಳು ಉದುರಿದ್ದಾಗಿ ವರದಿಯಾಗಿದೆ. ಅದರಿಂದಾಚೆಗೆ ಉದರುವ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಾ ಹೊಗುತ್ತದೆ.

ಪರಾಗಸ್ಪರ್ಶದ ನಂತರ ಗರ್ಭಧಾರಣೆಯಾಗಿ ಹೀಚು ವೃದ್ಧಿಹೊಂದಲು ಪ್ರಾರಂಭಿಸುತ್ತವೆ. ಹೀಚು ವೃದ್ಧಿಹೊಂದಿ ಹಣ್ಣಾಗುವ ಕಾರ್ಯ ಹಂತಗಳಲ್ಲಿ ಸಾಗುತ್ತದೆ. ಮೊದಲ ಮೂರು ವಾರಗಳಲ್ಲಿ ಅದು ತೀವ್ರಗತಿಯದಿದ್ದು ಅನಂತರದ ದಿನಗಳಲ್ಲಿ ಒಂದೇ ತೆರನಾದ ವೃದ್ಧಿ ಇರುತ್ತದೆ. ಹೂಮೊಗ್ಗು ಅಂಕುರಿಸಿ ಹಣ್ಣು ಕೊಯ್ಲಿನ ಹಂತ ತಲುಪಲು ೧೦೦ ರಿಂದ ೧೦೮ ದಿನಹಿಡಿಸುತ್ತವೆ. ಹಣ್ಣುಗಳ ವೃದ್ಧಿ ಹನ್ನೂಂದು ವಾರಗಳಲ್ಲಿ ಶೇ. ೭೫, ಹದಿಮೂರು ವಾರಗಳಲ್ಲಿ ಶೇ. ೮೫ರಷ್ಟು ಇದ್ದು ಹೆದಿನೈದು ವಾರಗಳಲ್ಲಿ ಪೂರ್ಣಗೊಂಡು, ಕೊಯ್ಲು ಮಾಡಲು ಸಿದ್ಧವಿರುತ್ತವೆ. ಹೀಚುಗಳ ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ. ಹುಳಿಬಗೆಗಳಲ್ಲಿ ಅವುಗಳ ಬಣ್ಣ ಹಸುರಿದ್ದರೆ, ಸಿಹಿ ಬಗೆಗಳಲ್ಲಿ ಅವುಗಳ ಬಣ್ಣ ಬಿಳಿಪು ಇರುತ್ತದೆ. ಅದೇ ರೀತಿ ಅವುಗಳ ಗಾತ್ರ ಸಹ ವ್ಯತ್ಯಾಸಗೊಳ್ಳುತ್ತದೆ. ಹುಳಿ ಬಗೆಗಳಲ್ಲಿ ಸರಾಸರಿ ೬ ಸೆಂ.ಮೀ. ಉದ್ದ ಮತ್ತು ೧.೯ ಸೆಂ.ಮೀ. ದಪ್ಪ ಇದ್ದರೆ ಸಿಹಿ ಬಗೆಗಳಲ್ಲಿ ಸರಾಸರಿ ೪ ಸೆಂ.ಮೀ. ಉದ್ದ ಮತ್ತು ೧.೯ ಸೆಂ.ಮೀ. ದಪ್ಪ ಇದ್ದುದಾಗಿ ವರದಿಯಾಗಿದೆ.

ಕಮರಾಕ್ಷಿ ಹುಳಿ ಬಗೆಗಳ ಗೊಂಚಲುಗಳಲ್ಲಿ ಸರಾಸರಿ ಎರಡು ಹಣ್ಣುಗಳಿದ್ದರೆ ಸಿಹಿ ಬಗೆಗಳ ಗೊಂಚಲಲ್ಲಿ ನಾಲ್ಕು ಹಣ್ಣು ಇರುವುದುಂಟು. ಚಳಿಗಾಲದ ಕಡೆಯ ಭಾಗದಲ್ಲಿ ಪಕ್ವಗೊಂಡ ಹಣ್ಣು ಸಾಮಾನ್ಯವಾಗಿ ಗಾತ್ರದಲ್ಲಿ ಸಣ್ಣವಿದ್ದು ರುಚಿಯಲ್ಲಿ ಸಪ್ಪೆ ಇರುತ್ತವೆ.

ಇವುಗಳ ಹಣ್ಣು ಮರದಿಂದ ಕಿತ್ತನಂತರ ಪಕ್ವಗೊಳ್ಳುವುದಿಲ್ಲ. ಆದ್ದರಿಂದ ಅವು ಪೂರ್ಣಬಲಿತು ಪಕ್ವಗೊಳ್ಳುವ ತನಕ ಮರದಲ್ಲಿಯೇ ಇರುವುದು ಒಳ್ಳೆಯದು. ಅರೆಬಲಿತ ಹಣ್ಣು ತೆಳುಹಳದಿ ಬಣ್ಣವಿದ್ದು ಅಂಚುಗಳತ್ತ ಹಸುರಾಗಿರುತ್ತದೆ. ಅವು ಪೂರ್ಣ ಪಕ್ವಗೊಂಡಾಗ ದಟ್ಟ ಹಳದಿ ಬಣ್ಣವಿದ್ದು ಕಿತ್ತಳೆ ಛಾಯೆಯಿಂದ ಕೂಡಿರುತ್ತವೆ.  ಪೂರ್ಣಪಕ್ವಗೊಂಡಾಗ ಅವುಗಳಲ್ಲಿ ಗರಿಷ್ಟ ಪ್ರಮಾಣದ ಆಕ್ಷಾಲಿಕ್ ಆಮ್ಲ, ಟ್ಯಾನಿನ್‌ ಎಸ್ಟರ್ ಮತ್ತು ಕೀಟೋನ್‌ ಅಂಶಗಳಿದ್ದು ವಿಶಿಷ್ಟ ಪರಿಮಳ ಉಂಟಾಗುತ್ತದೆ. ಹಣ್ಣುಗಳ ಪರಿಮಳ ಬಲು ತೀಕ್ಷ್ಣ ಹಾಗಾಗಿ ಕೆಲವರಿಗೆ ಅದು ಹಿಡಿಸುವುದಿಲ್ಲ.

ಸಾಧಾರಣ ಪರಿಮಳವಿರುವ ಮತ್ತು ಗರಿಗರಿಯಾದ ತಿರುಳು ಇರುವ ಹಣ್ಣನ್ನು ಇಷ್ಟ ಪಡುವವರೆಗೆ ಗೋಲ್ಡನ್‌ ಸ್ಟಾರ್, ಫ್ವಾಂಗ್‌ಟುಂಗ್‌ ಮತ್ತು ಮಹಾ ತಳಿಗಳು ಬಲು ಸೂಕ್ತ. ಪೂರ್ಣಪಕ್ವಗೊಂಡ ಹಣ್ಣುಗಳಲ್ಲಿ ೪೧ ಆರುವ ವಸ್ತುಗಳಿದ್ದು ಅವುಗಳ ಪೈಕಿ ಅತ್ಯಧಿಕ ಪ್ರಮಾಣದಲ್ಲಿ ಕಂಡುಬರುವುದು ಮೀಥೈಲ್‌-ಆ‍ಯ್‌ಂಥ್ರಾನಿ ಲೇಟ್‌ ಅಂಶ. ಇದು ಈ ಹಣ್ಣುಗಳಿಗೆ ದ್ರಾಕ್ಷಿ ಹಣ್ಣಗಳ ಪರಿಮಳವನ್ನುಂಟು ಮಾಡುತ್ತದೆ.

ಅಧಿಕ ಇಳುವರಿಗೆ ಕೆಲವು ಸಲಹೆಗಳು

 • ಕಮರಾಕ್ಷಿ ಉಪಯುಕ್ತವಿರುವ ಹಾಗೂ ಒಳ್ಳೆಯ ವರಮಾನ ತರುವ ಕಿರುಹಣ್ಣಿನ ಬೆಳೆಯಾಗಿದೆ. ಕಡಿಮೆ ಆರೈಕೆ ಇದ್ದರೂ ಚೆನ್ನಾಗಿ ಫಲಿಸಬಲ್ಲವು.
 • ಕಡಿಮೆ ಮಳೆಯಾಗುವ, ಬರಗಾಲಪೀಡಿತ ಹಾಗೂ ಜಲಾನಯನ ಪ್ರದೇಶಗಳಿಗೆ ಬಹುವಾಗಿ ಒಪ್ಪುವ ಹಣ್ಣಿನ ಮರಗಳು ಇವಾಗಿವೆ.
 • ಖುಷ್ಕಿ ತೋಟಗಾರಿಕೆ ಸೂಕ್ತವಿರುವಂತಹವು.
 • ಒಮ್ಮೆ ನೆಟ್ಟು ಬೆಳೆಸಿದಲ್ಲಿ ಹಲವಾರು ವರ್ಷಗಳವರೆಗೆ ಫಸಲು ಕೊಡುತ್ತಿರುತ್ತವೆ.
 • ಹಣ್ಣುಗಳಿಗೆ ಒಳ್ಳೆಯ ಬೇಡಿಕೆ ಇದೆ.
 • ವಾಣಿಜ್ಯ ಮಟ್ಟದಲ್ಲಿ ಬೆಳೆಯಲು ಉದ್ದೇಶಿಸಿದಲ್ಲಿ ಇತರರು ಬೆಳೆದಿರುವ ತೋಟಕ್ಕೆ ಬೇಟಿ ಇತ್ತು ನೋಡಿ ವಿಚಾರಿಸಬೇಕು.
 • ತೋಟ ಎಬ್ಬಿಸುವ ಮೊದಲು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಲುವುದು ಅಗತ್ಯ.
 • ತಜ್ಞರೊಂದಿಗೆ ಚರ್ಚಿಸಿ, ಸ್ಥಳ ಪರೀಕ್ಷೆ ಮಾಡಿಸಬೇಕು.
 • ಮಣ್ಣು ಮತ್ತು ನೀರುಗಳನ್ನು ಪರೀಕ್ಷೆ ಮಾಡಿಸುವುದು ಒಳ್ಳೆಯದು.
 • ಅಪೇಕ್ಷಿತ ತಳಿಯ ಗಿಡಗಳಿಗಾಗಿ ಖಾತರಿಯಿಂದ ಕೂಡಿದ ನರ್ಸರಿಗಳವರನ್ನು ಸಂಪರ್ಕಿಸಬೇಕು ಹಾಗೂ ಕಾದಿರಸಬೇಕು..
 • ಅಪರಿಚಿತರಿಂದ ಅಥವಾ ದಾರಿಪಕ್ಕ ಇಲ್ಲವೇ ಸಂತೆಗಳಲ್ಲಿ ಮಾರಾಟ ಮಾಡುವ ಗಿಡಗಳನ್ನು ಖರೀದಿಸಬಾರದು.
 • ನೆಡುವ ಉದ್ದೇಶಕ್ಕೆ ಬೀಜಸಸಿಗಳನ್ನು ಬಳಸಬಾರದು.
 • ತೀರಾ ವಯಸ್ಸಾದ ಅಥವಾ ಸಾಕಷ್ಟು ರೆಂಬೆ ಹಾಗೂ ಎಲೆಗಳಿಂದ ಕೂಡಿರದ, ಕೀಟ ಮತ್ತು ರೋಗಪೀಡಿತ ಗಿಡಗಳನ್ನು ಖರೀದಿಸಬಾರದು.
 • ತೋಟದ ಸುತ್ತ ಭದ್ರವಿರುವ ಬೇಲಿಯಿರಬೇಕು.
 • ಬೇಲಿಯ ಒಳಮಗ್ಗಲ ಉದ್ದಕ್ಕೆ ಒಂದೆರಡು ಸಾಲು ಗಾಳಿ ತಡೆಯ ಸಸಿಗಳನ್ನು ನೆಟ್ಟು ಬೆಳೆಸಿದಲ್ಲಿ ಎಷ್ಟೇ ಬಲವಾದ ಗಾಳಿ ಬೀಸಿದರೂ ಹಣ್ಣಿನ ಮರಗಳಿಗೆ ಅಪಾಯ ಇರುವುದಿಲ್ಲ.
 • ಸರ್ವೆ, ಸಿಲ್ವರ್, ಓಕ್‌ ಮುಂತಾಗಿ ಈ ಉದ್ದೇಶಕ್ಕೆ ಸೂಕ್ತವಿರುತ್ತವೆ. ಅವುಗಳನ್ನು ಮುಂಗಾರಿನಲ್ಲಿ ನೆಟ್ಟು ಬೆಳೆಸಿದರೆ ಸೂಕ್ತ.
 • ಜಮೀನಿನಲ್ಲಿರುವ ಗಿಡಗೆಂಟೆ, ಕುರುಚಲು ಪೊದೆ ಮುಂತಾಗಿ ಬೇರು ಸಮೇತ ಕಿತ್ತು ಹೊರಹಾಕಬೇಕು. ಒಂದೆರಡು ಸಾರಿ ಉಳುಮೆ ಮಾಡುವುದು ಅಗತ್ಯ.
 • ಜಮೀನನ್ನು ಸಮಮಾಡಿದಲ್ಲಿ ಉತ್ತಮ; ಅದು ಇಳಿಜಾರಿನಿಂದ ಕೂಡಿದ್ದರೆ ಸಮಪಾತಳಿ ತಾಕುಗಳನ್ನು ನಿರ್ಮಿಸಬೇಕು. ಜಗಲಿ ಪಾತಿಗಳನ್ನೂ ಸಹ ಮಾಡಬಹುದು. ಬದುಗಳು ಇಳಿಜಾರಿಗೆ ಅಡ್ಡಲಾಗಿರಬೇಕು.
 • ಭೂಮಿ ಫಲವತ್ತಾಗಿಲ್ಲದಿದ್ದರೆ ಹಸಿರು ಗೊಬ್ಬರದ ಬೆಳೆಯನ್ನು ಬಿತ್ತಬೇಕು.
 • ಮೇ ತಿಂಗಳ ಕಡೆಯಲ್ಲಿ ಅಥವಾ ಜೂನ್‌ ತಿಂಗಳ ಮೊದಲ ಭಾಗದಲ್ಲಿ ಶಿಫಾರಸ್ಸು ಮಾಡಿದ ಅಂತರದಲ್ಲಿ ೧ ಘನ ಮೀ. ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು.
 • ಮೇಲ್ಮಣ್ಣು ಸಾರವತ್ತಾಗಿರುತ್ತದೆ. ಅದನ್ನು ಒಂದು ಮಗುಲಲ್ಲಿಯೂ ಮತ್ತು ತಳ ಪದರಗಳ ಮಣ್ಣನ್ನು ಮತ್ತೊಂದು ಮಗ್ಗುಲಲ್ಲಿಯೂ ಹಾಕಬೇಕು.
 • ನಾಟಿಗೆ ಕಸಿಗಿಡಗಳಾದಲ್ಲಿ ಸೂಕ್ತ. ನೆಡುವ ಕಾಲಕ್ಕೆ ಅವುಗಳ ವಯಸ್ಸು ಒಂದರಿಂದ ಒಂದೂವರೆ ವರ್ಷದಷ್ಟಿರಬೇಕು.
 • ಗುಂಡಿಗಳಿಗೆ ಸಮಪ್ರಮಾಣದ ಮೇಲ್ಮಣ್ಣು ಮತ್ತು ಕೊಳೆತ ಕೊಟ್ಟಿಗೆ ಗೊಬ್ಬರಗಳನ್ನು ಹರಡಿ ತುಂಬಬೇಕು. ಗುಂಡಿಗಳ ತಳಭಾಗದಲ್ಲಿ ಎಕ್ಕ, ತಂಗಡಿ, ಉಗನಿಹಂಬು, ಗ್ಲಿರಿಸಿಡಿಯ, ಹೊಂಗೆ ಮುಂತಾದ ಸೊಪ್ಪುಗಳನ್ನು ಸಣ್ಣಗೆ ತುಂಡುಮಾಡಿ ಹರಡಿದಲ್ಲಿ ಲಾಭದಾಯಕ.
 • ಒಂದೆರಡು ಮಳೆಗಳಾದರೆ ಆ ಮಿಶ್ರಣ ಚಿನ್ನಾಗಿ ಕುಳಿತುಕೊಳ್ಳುತ್ತದೆ.
 • ಗಿಡಗಳನ್ನು ನೆಡಲು ಜೂನ್‌ ಕಡೆಯ ಭಾಗ ಇಲ್ಲವೆ ಜುಲೈ ಮೊದಲ ಭಾಗ ಹೆಚ್ಚು ಸೂಕ್ತ. ಅದರಿಂದ ಮಳೆಗಾಲದ ಸಂಪೂರ್ಣ ಲಾಭ ಸಾಧ್ಯ.
 • ಗಿಡಗಳನ್ನು ನೆಡುವ ಕೆಲಸವನ್ನು ಯಾವುದೇ ಕಾರಣಕ್ಕೆ ಮುಂದೂಡಬಾರದು.
 • ನೆಡುವುದಕ್ಕಿಂತ ಒಂದೆರಡು ವಾರ ಮುಂಚಿತವಾಗಿ ಗಿಡಗಳನ್ನು ತಂದು ನೆರಳಿನಲ್ಲಿಟ್ಟು ನೀರು ಕೊಡುತ್ತಿದ್ದಲ್ಲಿ ಅವುಗಳಿಗೆ ಸಾಗಾಣಿಕೆ ಆಘಾತ ಇರುವುದಿಲ್ಲ.
 • ಒದೇ ಗಾತ್ರದ ಹಾಗೂ ಒಳ್ಳೆಯ ಬೆಳವಣಿಗೆಯಿಂದ ಕೂಡಿದ ಗಿಡಗಳನ್ನು ಆರಿಸಿಕೊಳ್ಳಬೇಕು.
 • ಗಿಡಗಳನ್ನು ತಂಪು ಹೊತಿನಲ್ಲಿ ನೆಟ್ಟಿದ್ದೇ ಆದರೆ ಅವು ಬಾಡುವುದಿಲ್ಲ.
 • ಅವುಗಳನ್ನು ಹೆಪ್ಪು ಸಮೇತ ನೆಡಬೇಕು.
 • ನೆಡುವ ಮುಂಚೆ ಹೆಪ್ಪನ್ನು ಅವರಿಸಿರುವ ಪ್ಲಾಸ್ಟಿಕ್‌ ಚೀಲ ಅಥವಾ ಮಣ್ಣಿನ ಕುಂಡವನ್ನು ಜೋಪಾನವಾಗಿ ಬಿಡಿಸಿ ತೆಗೆಯುವುದು ಅಗತ್ಯ.
 • ಪ್ರತಿ ಗುಂಡಿಯ ಮಧ್ಯೆ, ಹೆಪ್ಪು ಹಿಡಿಸುವಷ್ಟೇ ಗಾತ್ರದ ತಗ್ಗು ತೆಗೆದು ಅದರಲ್ಲಿ ಗಿಡವನ್ನು ನೆಟ್ಟಗೆ ನಿಲ್ಲಿಸಿ, ಬುಡದ ಸುತ್ತ ಹಸಿ ಮಣ್ಣನ್ನು ಹರಡಿ ಚೆನ್ನಾಗಿ ಅದುಮಿ, ನಂತರ ತುಳಿಯಬೇಕು.
 • ಕಸಿ ಗಿಡಗಳಾದಲ್ಲಿ ಕಸಿಗಂಟು ನೆಲಮಟ್ಟದಿಂದ ೧೫ ಸೆಂ.ಮೀ. ಎತ್ತರದಲ್ಲಿರುವುದು ಅಗತ್ಯ.
 • ಕಸಿಗಂಟಿನ ಕೆಳಗೆ ಅಂದರೆ ಬೇರು ಸಸಿಯಲ್ಲಿ ಚಿಗುರುಗಳೇನಾದರೂ ಇದ್ದರೆ ಅವುಗಳನ್ನು ಚಿವುಟಿ ಹಾಕಬೇಕು.
 • ಸಾಲುಗಳ ಮತ್ತು ಸಸಿಗಳ ನಡುವೆ ೬ ಮೀ. ಅಂತರ ಕೊಟ್ಟಾಗ ಹೆಕ್ಟೇರಿಗೆ ೨೭೭ ಗಿಡ ಹಿಡಿಸುತ್ತವೆ.
 • ನೆಟ್ಟ ನಂತರ ಕೈನೀರು ಕೊಟ್ಟು ಪ್ರತಿ ಪಾತಿಯ ಅಗಲಕ್ಕೆ ೫೦ ಗ್ರಾಂ ಹೆಪ್ಟಾಕ್ಲೋರ್ ಪುಡಿ ಇಲ್ಲವೇ ೧೦೦ ಗ್ರಾಂ ಬೇವಿನ ಹಿಂಡಿಯನ್ನು ಉದುರಿಸಿದರೆ ಗೆದ್ದಲು, ಗೊಣ್ಣೆಹುಳು ಮುಂತಾಗಿ ಬಾಧಿಸಲಾರವು.
 • ಪ್ರತಿ ಗಿಡಕ್ಕೆ ಆಸರೆ ಕೋಲು ಸಿಕ್ಕಿಸಿ ಕಟ್ಟಬೇಕು. ಅದರಿಂದ ಗಿಡಗಳು ಗಾಳಿಗೆ ಅಲುಗಾಡುವುದಿಲ್ಲ.
 • ಬಿದ್ದಂತಹ ಮಳೆ ನೀರು ಆಯಾ ತಾಕುಗಳಲ್ಲಿಯೇ ಹಿಂಗುವಂತೆ ಮಾಡಲು ಸುತ್ತ ಬದು ಹಾಕಬೇಕು. ಬದುಗಳ ಮೇಲೆ ಹುಲ್ಲನ್ನು ಬೆಳಸಿದಲ್ಲಿ ಮಣ್ಣು ಕೊಚ್ಚಿ ಹೋಗವುದಿಲ್ಲ.
 • ತಾಕುಗಳ ನಾಲ್ಕೂ ಮೂಲೆಗಳಲ್ಲಿ ಒಂದರಂತೆ ಸೂಕ್ತ ಗಾತ್ರದ ಗುಂಡಿಗಳನ್ನು ತೆಗೆದರೆ ಹೆಚ್ಚುವರಿ ನೀರು ಅವುಗಳಲ್ಲಿ ಸಂಗ್ರಹಗೊಳ್ಳುತ್ತದೆ. ಹಾಗಾಗಿ ತೇವ ಹೆಚ್ಚುಕಾಲ ಲಭಿಸುತ್ತದೆ.
 • ಇಳಿಜಾರು ಇದ್ದರೆ ಪ್ರತಿ ಗಿಡದ ಪಾತಿಯ ಇಳುಕಲಿನ ಕಡೆ ಅರ್ಧಚಂದ್ರಾಕಾರದ ಬದು ಹಾಕುವುದು ಲಾಭದಾಯಕ.
 • ಗಿಡಗಳಿಂದ ಉದುರಿಬಿದ್ದ ಎಲೆ, ಕಸಕಡ್ಡಿ, ಮೇಲಿನಿಂದ ಕೊಚ್ಚಿ ಬಂದ ಮಣ್ಣು ಮುಂತಾಗಿ ಬೆರೆತು ಒಳ್ಳೆಯ ಗೊಬ್ಬರವಾಗುತ್ತದೆ.
 • ಪ್ರತಿ ವರ್ಷ ಗೊಬ್ಬರಗಳನ್ನು ಎರಡು ಸಮ ಕಂತುಗಳಾಗಿ ಮಾಡಿ ಹಾಕಬೇಕು. ಉಂಗುರದ ತಗ್ಗು ಕಾಲುವೆಯಲ್ಲಿ ಹಾಕಿ ಮಣ್ಣು ಮುಚ್ಚಬೇಕು. ಸಾವಯವ ಗೊಬ್ಬರಗಳಲ್ಲಿ ಕೊಟ್ಟಿಗೆ ಗೊಬ್ಬರ, ಹಸಿರುಗೊಬ್ಬರ, ಹಿಂಡಿ, ರಾಸಾಯನಿಕ ಗೊಬ್ಬರಗಳು ಸೇರಿರುತ್ತವೆ.
 • ತಗ್ಗು ಕಾಲುವೆಯನ್ನು ಪ್ರತೀ ವರ್ಷ ದೂರದೂರಕ್ಕೆ ಮಾಡಬೇಕು.
 • ಕೆಲವೊಮ್ಮೆ ಸೂಕ್ಷ್ಮ ಪೋಷಕಾಂಶಗಳೂ ಸಹ ಬೇಕಾಗುತ್ತವೆ.
 • ಎಳೆಯ ಗಿಡಗಳಿಗೆ ಮಳೆ ಇಲ್ಲದ ದಿನಗಳಲ್ಲಿ ಕೈನೀರು ಕೊಡಬೇಕು. ಮೊದಲ ಒಂದು ವರ್ಷ ಹೀಗೆ ಮಾಡಿದಲ್ಲಿ ಸಾಕು.
 • ಮಡಕೆ ನೀರಾವರಿ ಮಿತವ್ಯಯದಿಂದ ಕೊಡಿರುತ್ತದೆ.
 • ಮಣ್ಣು ಗಡಸುಗೊಳ್ಳುವುದನ್ನು ತಡೆಯಲು ಮತ್ತು ಕಳೆಗಳು ಮಿಜೃಂಭಿಸದಂತಿರಲು ಅಂತರಬೇಸಾಯ ಮತ್ತು ಕಳೆಹತೋಟಿ ಬಲುಮುಖ್ಯ.
 • ಸಾಲುಗಳ ನಡುವಣ ಜಾಗ ಖಾಲಿಯಾಗಿ ಬಿಡುವುದರ ಬದಲಾಗಿ ಸೂಕ್ತ ಅಂತರ ಬೆಳೆಗಳನ್ನು ಇಲವೇ ಹಸಿರು ಹೊಬ್ಬರದ ಬೆಳೆಗಳನ್ನು ಬೆಳೆದು ಲಾಭ ಹೊಂದಬಹುದು.
 • ದ್ವಿದಳ ಧಾನ್ಯ ಬೆಳೆಗಳಾದರೆ ಮಣ್ಣಿನಲ್ಲಿನ ಸಾರಜನಕದ ಅಂಶ ಹೆಚ್ಚುತ್ತದೆ. ಅದರಿಂದ ಗೊಬ್ಬರಗಳಿಗೆ ಆಗುವ ಖರ್ಚ ಉಳಿಯುತ್ತದೆ.
 • ಅವುಗಳನ್ನು ಹೂಬಿಡುವ ಮುಂಚೆ ಕಿತ್ತು ಮಣ್ಣಿಗೆ ಸೇರಿಸಿದರೆ ಬೇಗ ಕೊಳೆಯಬಲ್ಲವು.
 • ಪಾತಿಗಳ ಅಗಲಕ್ಕೆ ಹೊದಿಕೆ ಹರಡುವುದು ಲಾಭದಾಯಕ.
 • ಕಸಿಗಿಡಗಳ ಕಸಿಗಂಟಿನ ಮೇಲೆ ಸುತ್ತಿರುವ ಪ್ಲಾಸ್ಟಿಕ್‌ ಸುರುಳಿಯನ್ನು ಬಿಚ್ಚಿ ತೆಗೆಯಬೇಕು.
 • ಗಿಡಗಳಿಗೆ ಒಳ್ಳೆಯ ಆಕಾರ ಮತ್ತು ಚೌಕಟ್ಟನ್ನು ಒದಗಿಸಬೇಕು.
 • ಕಾಂಡ ನೆಟ್ಟಗಿದ್ದು ನೆತ್ತಿ ಸಮತೋಲನವಾಗಿರಲು, ಕಾಂಡದಲ್ಲಿನ ಪಕ್ಕ ರೆಂಬೆಗಳನ್ನು ೧ ಮೀ. ಎತ್ತರದವರೆಗೆ ಸವರಿ ತೆಗೆಯಬೇಕು.
 • ಬೆಳೆದ ಮರಗಳಲ್ಲಿ ಕೊಯ್ಲು ಮುಗಿದ ನಂತರ ಸವರುವ ಕೆಲಸ ಮಾಡಬೇಕು.
 • ಮೊದಲು ಒಂದೆರಡು ವರ್ಷಗಳವರೆಗೆ ಹೂವು-ಹೀಚುಗಳನ್ನು ಕಿತ್ತುಹಾಕಿದಲ್ಲಿ ಗಿಡಗಳು ಕಸುವಿನಿಂದ ಬೆಳೆಯುತ್ತವೆ.
 • ಸುಡು ಬೇಸಿಗೆ ಇದ್ದಾಗ ಎಳೆಯ ಗಿಡಗಳಿಗೆ ನೆರಳನ್ನು ಒದಗಿಸಬೇಕು.
 • ಕಾಂಡದ ತೊಗಟೆ ಕಿತ್ತು ಗಾಯವಾಗಿದ್ದರೆ ಅದಕ್ಕೆ ಬೋರ್ಡೊ ಸರಿಯನ್ನು ಇಲ್ಲವೇ ಬ್ಲೈಟಾಕ್ಸ್‌ ಅನ್ನು ಹಚ್ಚಬೇಕು.
 • ಕೀಟ ಮತ್ತು ರೋಗಗಳಿಗೆ ಸಕಾಲದಲ್ಲಿ ಸಸ್ಯ ಸಂರಕ್ಷಣೆ ಅಗತ್ಯ.
 • ಪೂರ್ಣ ಬಲಿತ ಆಕರ್ಷಕ ಬಣ್ಣ ಇರುವ ಹಣ್ಣನ್ನು ಮಾತ್ರ ಕೊಯ್ಲಮಾಡಬೇಕು.
 • ಕೊಯ್ಲುಮಾಡಲು ಮರದ ಮೇಲೆ ಹತ್ತಬಾರದು. ಅದೇ ರೀತಿ ರೆಂಬೆಗಳನ್ನು ಹಿಡಿದು ಜೋರಾಗಿ ಅಲ್ಲಾಡಿಸಬಾರದು; ಮಡಚುವ ಏಣಿಗಳನ್ನು ಬಳಸುವುದು ಸೂಕ್ತ.
 • ಕಿತ್ತ ಹಣ್ಣನ್ನು ಜೋಪಾನವಾಗಿ ಚೀಲಗಳಲ್ಲಿ ತುಂಬಿ, ಕೆಳಗಿಳಿಸಿಬೇಕು; ಅದೇ ರೀತಿ ಸಾಗಿಸಿ, ವರ್ಗಿಕರಿಸಬೇಕು
 • ಮಾರಾಟಕ್ಕೆ ಯೋಗ್ಯವಲ್ಲದ ಹಣ್ಣನ್ನು ಸಂಸ್ಕರಣೆಗೆ ಬಳಸಬಹುದು.
 • ಹಣ್ಣುಗಳ ಮಾರಾಟ ಬೆಲೆ ಕಿ.ಗ್ರಾಂ ಒಂದಕ್ಕೆ ೩ ರೂ ಇದ್ದರೂ ಸಹ ಹತ್ತು ವರ್ಷ ವಯಸ್ಸಿನ ಮರಗಳಿರುವ ತೋಟದಿಂದ ವರ್ಷಕ್ಕೆ ಕನಿಷ್ಟ ೮೦,೦೦೦ ರೂ.ಗಳ ನಿವ್ವಳ ಆದಾಯ ಸಾಧ್ಯ.
 • ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಿದ್ದೇ ಆದರೆ ಇನ್ನೂ ಹೆಚ್ಚಿನ ವರಮಾನ ಸಾಧ್ಯ.
 • ಫಲಪುಷ್ಪ ಪ್ರದರ್ಶನಗಳು, ವಿಚಾರಗೊಷ್ಟಿಗಳು ಮುಂತಾಗಿ ಭಾಗವಹಿಸಿ ಹೆಚ್ಚಿನ ಮಾಹಿತಿ ಸಿಗುತ್ತದೆ. ಈ ಬೆಳೆಯ ಬಗ್ಗೆ ತರಬೇತಿ ಪಡೆದರೆ ಹೆಚ್ಚು ಲಾಭದಾಯಕ.
 • ಸಸ್ಯಾಭಿವೃದ್ಧಿ, ಪದಾರ್ಥಗಳನ್ನು ತಯಾರಿಸುವ ಸಂಸ್ಕರಣಾ ಕೇದ್ರಗಳಲ್ಲಿ, ಸಸ್ಯ ಸಂರಕ್ಷಣೆ, ನಿರ್ವಹಣೆ ಮುಂತಾದ ಅಂಶಗಳಲ್ಲಿ  ಹೆಚ್ಚಿನ ತರಬೇತಿ ಅಗತ್ಯ.
 • ಮಾರಾಟ ಮತ್ತು ರಫ್ತುಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕು.
 • ಸಾವಯವ ವಿಧಾನದಲ್ಲಿ ಹಣ್ಣನ್ನು ಉತ್ಪತ್ತಿ ಮಾಡಿದ್ದೇ ಆದರೆ ಹೆಚ್ಚಿನ ವರಮಾನ ಸಾಧ್ಯ.