ಕಮರಾಕ್ಷಿಯನ್ನು ಬೀಜ ಊರಿ ಹಾಗೂ ನಿರ್ಲಿಂಗ ಪದ್ಧತಿಗಳಲ್ಲಿ ವೃದ್ಧಿ ಮಾಡಬಹುದು. ಈಗ ಕಂಡುಬರುವ ಬಹುತೇಕ ಮರಗಳು ಬೀಜ ಊರಿ ಬೆಳೆದಂತಹುಗಳೇ ಆಗಿವೆ. ಆದರೆ ಅಂತಹ ಮರಗಳು ತಾಯಿ ಪೀಳಿಗೆಯಂತೆ ಇರುವುದಿಲ್ಲ ಮತ್ತು ಅವು ಬಹುದೊಡ್ಡಗಾತ್ರಕ್ಕೆ ಬೆಳೆಯುತ್ತವೆ. ಅವು ಬಲು ಎತ್ತರಕ್ಕೆ ಬೆಳಿಯುವ ಕಾರಣ ಹಣ್ಣನ್ನು ಕೊಯ್ಲು ಮಾಡುವ ಕೆಲಸ, ಸಸ್ಯಸಂರಕ್ಷಣೆ ಮುಂತಾದವು ಕಷ್ಟವಾಗುತ್ತವೆ. ಅವುಗಳಲ್ಲಿ ಕೆಲವು ಒಳ್ಳೆಯ ಗುಣಗಳೂ ಇರುತ್ತವೆ. ಅವುಗಳೆಂದರೆ ಬಹು ದೀರ್ಘಕಾಲ ಇದ್ದು ಹೆಚ್ಚು ಫಸಲನ್ನು ಬಿಡುವುದು. ಆಳವಿರುವ ಬೇರುಸಮೂಹದಿಂದಾಗಿ ಬರಗಾಲ ಪರಿಸ್ಥಿತಿಗಳನ್ನು ಹೆಚ್ಚು ಸಮರ್ಥವಾಗಿ ತಡೆದುಕೊಳ್ಳುವುದು ಮತ್ತು ಅಪರೂಪವಾಗಿ ವಿಶಿಷ್ಟ ಗುಣಗಳಿಂದ ಕೂಡಿದ ಆಕಸ್ಮಿಕ ಸಸಿಗಳನ್ನು ಉತ್ಪಾದಿಸುವುದು. ಆದರೆ ಬೀಜ ಸಸಿಗಳು ಚೊಚ್ಚಲ ಫಸಲು ಬಿಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಅಂತಹ ಸಸಿಗಳನ್ನು ಕಸಿಮಾಡುವಲ್ಲಿ ಬೇರು ಸಸಿಗಳನ್ನಾಗಿ ಬಳಸಿಕೊಳ್ಳಬಹುದು.

. ಬೀಜಪದ್ಧತಿ

ಇದಕ್ಕೆ ಸೀಡ್‌ ಪ್ರಾಪಗೇಷನ್, ಸೆಕ್ಷಯಲ್ ಪ್ರಾಪಗೇಷನ್ ಮುಂತಾಗಿ ಕರೆಯುತ್ತಾರೆ. ಈ ಉದ್ದೇಶಕ್ಕೆ ಹೆಚ್ಚು ಫಸಲುಬಿಡುವ ಹಾಗೂ ಕೀಟ ಮತ್ತು ರೋಗಗಳಿಂದ ಮುಕ್ತವಿರುವ ಮರಗಳಲ್ಲಿನ ಪೂರ್ಣಬಲಿತು ಪಕ್ವಗೊಂಡ ಹಣ್ಣುಗಳನ್ನು ಬಿಡಿಸಿ ತೆಗೆದು, ನೀರಿನಲ್ಲಿ ಕಿವುಚಿ, ಸಿಪ್ಪೆ, ನಾರು, ತಿರುಳುಗಳನ್ನು ಬಿಡಿಸಿದಲ್ಲಿ ಬೀಜ ತಳದಲ್ಲಿ ಸಂಗ್ರಹಗಳ್ಳತ್ತವೆ. ನೀರನ್ನು ಬಸಿದು ಬೀಜವನ್ನು ಹೊರತೆಗೆದು ನೆರಳಿನಲ್ಲಿ ತೆಳ್ಳಗೆ ಹರಡಿ ಒಂದೆರಡು ದಿನಗಳ ಕಾಲ ಚೆನ್ನಾಗಿ ಒಣಗಿಸಬೇಕು. ಅನಂತರ ಕ್ಯಾಪ್ಟಾನ್‌ ಅಥವಾ ಮತ್ತಾವುದಾದರೂ ಸೂಕ್ತ ತಾಮ್ರಯುಕ್ತ ಶಿಲೀಂಧ್ರನಾಶಕದ ದ್ರಾವಣದಲ್ಲಿ ಅದ್ದಿ ಉಪಚರಿಸಿ ಬಿತ್ತಬೇಕು. ಬೀಜವನ್ನು ಸಿದ್ಧಗೊಳಿಸಿದ ಒಟ್ಲುಪಾತಿಗಳಲ್ಲಿ, ಮಾಧ್ಯಮ ತುಂಬಿದ ಅಗಲ ಬಾಯಿಯ ಮಣ್ಣಿನ ಕುಂಡಗಳಲ್ಲಿ ಇಲ್ಲವೇ ಪ್ಲಾಸ್ಟಿಕ್‌ ಚೀಗಳಲ್ಲಿ ಬಿತ್ತಬಹುದು.

() ಒಟ್ಲು ಪಾತಿಗಳನ್ನು ಸಿದ್ಧಗೊಳಿಸಿ, ಬೀಜವನ್ನು ಬಿತ್ತುವುದು: ಒಟ್ಲು ಬಿಡುವ ಜಾಗವನ್ನು ಚೆನ್ನಾಗಿ ಅಗೆತ ಮಾಡಿ, ಹೆಂಟೆಗಳನ್ನು ಒಡೆದು ಪುಡಿಮಾಡಿ ಕೂಳೆಗಳು, ಕಳೆಕಸ, ಕಲ್ಲುಗಳು ಮುಂತಾಗಿ ಆರಿಸಿ ತೆಗೆದು, ಪಾತಿಗಳನ್ನು ಮಾಡಬೇಕು. ಪಾತಿಗಳ ಗಾತ್ರ ೧.೨ ಮೀ. ಅಗಲ, ೧೫ ಸೆಂ.ಮೀ. ಎತ್ತರ ಮತ್ತು ಅಗತ್ಯಕ್ಕೆ ತಕ್ಕ ಉದ್ದ ಇರುವಂತೆ ಸಿದ್ಧಗೊಳಿಸಿ ಪ್ರತಿ ಚದರ ಮೀಟರ್‌ಗೆ ೧೦ ಕಿ.ಗ್ರಾಂ.ಗಳಷ್ಟು ಚಿನ್ನಾಗಿ ಕೊಳೆತ ಸಗಣಿ ಗೊಬ್ಬರ ಅಥವಾ ಎಲೆಗೊಬ್ಬರವನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಮಿಶ್ರಮಾಡಬೇಕು.

ಬೀಜ ಗಾತ್ರದಲ್ಲಿ ಸಣ್ಣವಿರುತ್ತವೆ. ಅವುಗಳನ್ನು ಬಿತ್ತುವ ಮುಂಚೆ ಒಂದೆರಡು ತಾಸು ನೀರಿನಲ್ಲಿ ನೆನೆಸಿಟ್ಟು ಅವು ಬೇಗ ಮೊಳೆಯುತ್ತವೆ. ಒಟ್ಲುಪಾತಿಗಳಲ್ಲಿ ೧೦-೧೫ ಸೆಂ.ಮೀ. ಅಂತರದಲ್ಲಿ ಅಡ್ಡಗೀರುಗಳನ್ನು ಮಾಡಿ ೧೦ ಸೆಂ.ಮೀ.ಗೆ ಒಂದರಂತೆ ಬೀಜವನ್ನು ಬಿತ್ತಿ ಮೇಲೆ ಪುಡಿ ಗೊಬ್ಬರ ಅಥವಾ ಮರಳನ್ನು ಉದುರಿಸಿ ನೀರು ಹನಿಸುವ ಡಬ್ಬಿಯಿಂದ ನೀರು ಹಾಕಬೇಕು. ಬೀಜವನ್ನು ಹೆಚ್ಚು ಆಳಕ್ಕೆ ಬಿತ್ತಬಾರದು. ಒಂದು ವೇಳೆ ಹಾಗೇನಾದರೂ ಬಿತ್ತಿದ್ದೇ ಆದರೆ ಅವು ಕೊಳೆಯುವ ಸಾಧ್ಯತೆ ಇರುತ್ತದೆ. ಬೀಜವನ್ನು ೦.೫ ರಿಂದ ೧ ಸೆಂ.ಮೀ. ಆಳಕ್ಕೆ ಬಿತ್ತಿದರೆ ಸಾಕು. ಅದೇ ರೀತಿ ತೀರಾ ಹಳೆಯ ಬೀಜವನ್ನು ಬಿತ್ತನೆಗೆ ಬಳಸಬಾರದು. ಏಕೆಂದರೆ ಅಂತಹ ಬೀಜ ತಮ್ಮ ಮೊಳೆಯುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತವೆ. ಪ್ರತಿದಿನ ಹದವರಿತು ನೀರು ಹಾಕಿದಲ್ಲಿ ಅವು ಮೂರು ನಾಲ್ಕು ವಾರಗಳಲ್ಲಿ ಮೊಳೆಯುತ್ತವೆ.

() ಅಗಲಬಾಯಿಯ ಮಣ್ಣಿನ ಕುಂಡಗಳಲ್ಲಿ ಬಿತ್ತುವುದು: ಇವುಗಳನ್ನು ಸೀಡ್‌ಪ್ಯಾನ್‌ಗಳೆನ್ನುತ್ತಾರೆ ಅವುಗಳ ತಳಭಾಗದ ಅಂಚಿನ ಮೂಲೆಯಲ್ಲಿ ಬಸಿರಂಧ್ರವಿದ್ದು ಹೆಚ್ಚುವರಿ ನೀರು ಅದರ ಮೂಲಕ ಹೊರಬೀಳುತ್ತದೆ. ಅದರಿಂದಾಗಿ ಬೀಜ ಕೊಳೆಯುವುದಾಗಲೀ ಅಥವಾ ಎಳೆಯ ಸಸಿಗಳು ಸಾಯುವುದಾಗಲೀ ಇರುವುದಿಲ್ಲ. ಕುಂಡಗಳಿಗೆ ೧:೧:೧ ರಂತೆ ಮಣ್ಣು. ಮರಳು ಮತ್ತು ಕೊಳೆತ ಸಗಣಿ ಗೊಬ್ಬರ ಇಲ್ಲವೇ ಎಲೆಗೊಬ್ಬರಗಳನ್ನು ಬೆರೆಸಿ ಮಾಧ್ಯಮವಾಗಿ ತುಂಬಬೇಕು. ಅನಂತರ ಅಡ್ಡಗೀರುಗಳನ್ನು ಎಳೆದು ಅವುಗಳಲ್ಲಿ ಬೀಜವನ್ನು ಒಂದೊಂದಾಗಿ ೧೦ ಸೆಂ.ಮೀ. ಅಂತರದಲ್ಲಿ ಬಿತ್ತಿ, ಮೇಲೆ ಪುಡಿಗೊಬ್ಬರ ಉದುರಿಸಿ, ನೀರು ಹನಿಸುವ ಡಬ್ಬಿಯಿಂದ ನೀರು ಕೊಡಬೇಕು.

() ಪ್ಲಾಸ್ಟಿಕ್ ಚೀಲಗಳಲ್ಲಿ ಬೀಜ ಬಿತ್ತುವುದು: ಈ ಉದ್ದೇಶಕ್ಕೆ ೧೫ x ೧೦ ಸೆಂ.ಮೀ. ಉದ್ದಗಲಗಳ ೧೫೦ ಗೇಜ್‌ ದಪ್ಪದ ಪ್ಲಾಸ್ಟಿಕ್‌ ಚೀಲಗಳನ್ನು ಆರಿಸಿಕೊಂಡು ಅವುಗಳ ತಳಭಾಗ ಮತ್ತು ಪಾರ್ಶ್ವಗಳಲ್ಲಿ ರಂಧ್ರಗಳನ್ನು ಮಾಡಿ, ಮಾಧ್ಯಮ ತುಂಬಿ ತಲಾ ಒಂದರಂತೆ ಬೀಜ ಊರಿ, ನೀರು ಕೊಡಬೇಕು.

ಒಟ್ಲುಪಾತಿಗಳಲ್ಲಿನ ಹಾಗೂ ಮಣ್ಣಿನ ಕುಂಡಗಳಲ್ಲಿನ ಸಸಿಗಳಲ್ಲಿ ೪-೬ ಎಲೆಗಳಿದ್ದಾಗ ಅವುಗಳನ್ನು ಜೋಪಾನವಾಗಿ ಕಿತ್ತುತೆಗೆದು ಮಾಧ್ಯಮ ತುಂಬಿದ ಪ್ಲಾಸ್ಟಿಕ್‌ ಚೀಲಗಳಿಗೆ ವರ್ಗಾಯಿಸಿ, ನೀರು ಕೊಡುತ್ತಿದ್ದಲ್ಲಿ ಅವು ಮುಂದಿನ ಮುಂಗಾರಿನ ಹೊತ್ತಿಗೆ ಸುಮಾರು ೩೦-೪೫ ಸೆಂ.ಮೀ ಎತ್ತರೆಕ್ಕೆ ಬೆಳೆದು ನೆಡಲು ಅಥವಾ ಕಸಿಮಾಡಲು ಸಿದ್ಧವಿರುತ್ತವೆ. ಆ ಸಮಯಕ್ಕೆ ಅವುಗಳ ಕಾಂಡ ಒಂದು ಸೆಂ.ಮೀ. ದಪ್ಪವಿರುತ್ತದೆ.

. ನಿರ್ಲಿಂಗಪದ್ಧತಿ

ಇದಕ್ಕೆ ಏಸಿಕ್ಷುಯಲ್‌ ಅಥವಾ ವೆಜೆಟೇಟಿವ್‌ ಪ್ರಾಪಗೇಷನ್‌ ಎನ್ನುತ್ತಾರೆ. ಈ ವಿಧಾನದಲ್ಲಿ ವೃದ್ಧಿಪಡಿಸಿದ ಸಸಿಗಳು ತಾಯಿ ಪೀಳಿಗೆಯಂತಿದ್ದು, ಗಿಡ್ಡ ಮರಗಳನ್ನು ಉತ್ಪಾದಿಸುತ್ತವೆ. ಮತ್ತು ಚೊಚ್ಚಲ ಫಸಲು ಬೇಗ ಪ್ರಾರಂಭಗೊಳ್ಳುತ್ತವೆ.

ಈ ಪದ್ಧತಿಯಲ್ಲಿ ಹಲವಾರು ವಿಧಾನಗಳಿವೆ. ಅವುಗಳೆಂದರೆ ಕಸಿವಿಧಾನ, ಕಣ್ಣು ಕೂಡಿಸಿ ಕಸಿಮಾಡುವುದು, ಗೂಟಿಕಟ್ಟುವುದು, ರೆಂಬೆಗಳನ್ನು ನೆಲದಲ್ಲಿ ಊರಿ ಬೇರು ಬರುವಂತೆ ಮಾಡುವುದು, ರೆಂಬೆಯ ತುಂಡುಗಳನ್ನು ನೆಟ್ಟು ಬೇರುಬರುವಂತೆ ಮಾಡುವುದು ಹಾಗೂ ಅಂಗಾಂಶ ವಿಧಾನದಲ್ಲಿ ವೃದ್ಧಿಮಾಡುವುದು.

i. ಕಸಿ ವಿಧಾನ

ಇದು ಸರಳ ಮತ್ತು ಸುಲಭವಾದ ವಿಧಾನವಾಗಿದೆ. ಇದನ್ನು ‌ಗ್ರ್ಯಾಫ್ಟಿಂಗ್ ಎನ್ನುತ್ತಾರೆ. ಫ್ಲೋರಿಡಾದಲ್ಲಿ ಇದು ವಾಣಿಜ್ಯ ವಿಧಾನವಾಗಿದೆ. ಇದರಲ್ಲಿ ಎರಡು ಭಾಗಗಳಿರುತ್ತವೆ. ಅವುಗಳೆಂದರೆ ಬೇರು ಸಸಿ ಮತ್ತು ಕಸಿಕೊಂಬೆ. ಕಸಿಮಾಡಿದ ನಂತರ ಅವರೆಡೂ ಒಂದರಲ್ಲೊಂದು ಬೆಸೆದು ಒಂದುಗಿಡವಾಗಿ ಬೆಳದಾಗ ಅದನ್ನು ಕಸಿ ಗಿಡ ಎನ್ನುತ್ತೇವೆ. ಬೇರು ಸಮೂಹವನ್ನು ಒದಗಿಸುವ ಭಾಗ ಬೀಜ ಸಸಿಯಾಗಿರುತ್ತದೆ. ಅದು ಆಳಕ್ಕೆ ಇಳಿದು ಬಲಿಷ್ಠವಿರುವ ಬೇರು ಸಮೂಹವನ್ನು ಒದಗಿಸಿದರೆ, ಕಸಿಗಂಟಿನ ಮೇಲ್ಭಾಗದಲ್ಲಿನ ಭಾಗ ಹೂವು ಹಣ್ಣು ಬಿಟ್ಟು ನೆತ್ತಿಯ ಚೌಕಟ್ಟನ್ನು ಒದಗಿಸುವ ಅಪೇಕ್ಷಿತ ತಳಿಯ ಕಸಿಕೊಂಬೆಯಾಗಿರುತ್ತದೆ. ಇದರಲ್ಲಿ ಸಾಮೀಪ್ಯಕಸಿ ವಿಧಾನ, ವೆನೀರ್ ಕಸಿ ವಿಧಾನ, ಪಾರ್ಶ್ವ ಕಸಿ ವಿಧಾನ, ಮೆತುಕಟ್ಟಿಗೆ ಕಸಿವಿಧಾನ ವುಂತಾದವು ಇರುತ್ತವೆ.

() ಸಾಮೀಪ್ಯ ಕಸಿ ವಿಧಾನ: ಇದಕ್ಕೆ ಪಪ್ರೋಚ್‌ ‌ಗ್ರ್ಯಾಫ್ಟಿಂಗ್, ಇನಾರ್ಚಿಂಗ್‌ ಮುಂತಾಗಿ ಕರೆಯುತ್ತಾರೆ. ಇದಕ್ಕೆ ಒಂದು ವರ್ಷವಯಸ್ಸಿನ ಹಾಗೂ ಒಂದೇ ದಪ್ಪದ ಬೇರು ಸಸಿ ಮತ್ತು ಕಸಿಕೊಂಬೆಗಳು ಬೇಕು. ಅವುಗಳ ದಪ್ಪ ೧-೨ ಸೆಂ.ಮೀ. ಇದ್ದರೆ ಸಾಕು. ಈ ಕೆಲಸಕ್ಕೆ ಜನವರಿ, ಜೂನ್‌ ಮತ್ತು ಅಕ್ಟೋಬರ್ ಹೆಚ್ಚು ಸೂಕ್ತವಿರುತ್ತವೆ. ಪ್ಲಾಸ್ಟಿಕ್‌ ಚೀಲ ಅಥವಾ ಕುಂಡದಲ್ಲಿನ ಬೇರು ಸಸಿಯನ್ನು ತಾಯಿಮರದ ರೆಂಬೆಯ ಪಕ್ಕಕ್ಕೆ ಸರಿಸಬೇಕು. ನೆಲಮಟ್ಟದಿಂದ ೧೫-೨೦ ಸೆಂ.ಮೀ. ಎತ್ತರದಲ್ಲಿನ ರೆಂಬೆಗಳಾದಲ್ಲಿ ಅನುಕೂಲ. ಒಂದು ವೇಳೆ ಅವು ಸ್ವಲ್ಪ ಎತ್ತರದಲ್ಲಿದ್ದರೆ ಅಟ್ಟಣಿಗೆಗಳನ್ನು ನಿರ್ಮಿಸಿ, ಅವುಗಳ ಮೇಲೆ ಬೇರು ಸಸಿಗಳನ್ನಿಟ್ಟು ಕಸಿ ಮಾಡಬಹುದು.

ಬೇರು ಸಸಿಯ ಕಾಂಡದ ನಯವಾದ ಜಾಗದಲ್ಲಿ ಅಂದರೆ ೧೫-೨೨ ಸೆಂ.ಮೀ. ಎತ್ತರದಲ್ಲಿ ಹರಿತವಿರುವ ಚಾಕುವಿನಿಂದ ೨ ರಿಂದ ೨.೫ ಸೆಂ.ಮೀ. ಉದ್ದ ಇರುವಂತೆ ಅಂಡಾಕಾರದ ಕಚ್ಚುಕೊಟ್ಟು ತೊಗಟೆ ಚೆಕ್ಕೆಯನ್ನು ಬಿಡಿಸಿ ತೆಗೆಯಬೇಕು. ಅದೇ ರೀತಿ ಕಸಿಕೊಬೆಯಲ್ಲೂ ಸಹ ಅಷ್ಟೇ ಉದ್ದಗಲಗಳ ತೊಗಟೆ ಚಕ್ಕೆಯನ್ನು ಬಿಡಿಸಿ ತೆಗೆದು, ಎರಡೂ ಕಚ್ಚುಭಾಗಗಳನ್ನು ಎದುರುಬದುರಾಗಿ ಜೋಡಿಸಿ ಪ್ಲಾಸ್ಟಿಕ್‌ ಪಟ್ಟಿ ಇಲ್ಲವೇ ನೀರಿನಲ್ಲಿ ಅದ್ದಿದ ಬಾಳೆ ನಾರಿನಿಂದ ಬಿಗಿಯಾಗಿ ಸುತ್ತಿ ಕಟ್ಟಬೇಕು. ಕಸಿಮಾಡಿದ ನಾಲ್ಕರಿಂದ ಆರು ವಾರಗಳಲ್ಲಿ ಅವು ಬೆಸೆದು ಒಂದಾಗುತ್ತವೆ.

ಕಸಿ ಮಾಡಿದ ಸುಮಾರು ೪೫ ದಿನಗಳ ನಂತರ ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಅಡ್ಡಕಚ್ಚುಕೊಟ್ಟು ಕತ್ತರಿಸಬೇಕು. ಅದೇ ರೀತಿ ಕಸಿಕೊಂಬೆಯನ್ನು ಕಸಿಗಂಟಿನ ಸ್ವಲ್ಪ ಕೆಳಗೆ ಅದರ ದಪ್ಪದ ಮೂರನೇ ಒಂದರಷ್ಟು ಆಳಕ್ಕೆ ಕಚ್ಚುಕೊಟ್ಟು ಅದಾದ ೧೫ ದಿನಗಳ ನಂತರ ಅದನ್ನು ಮತ್ತಷ್ಟು ಆಳಮಾಡಿ, ಕಡೆಗೆ ಪೂರ್ಣವಾಗಿ ಬೇರ್ಪಡಿಸಬೇಕು. ಅವುಗಳನ್ನು ನೆರಳಿನಲ್ಲಿಟ್ಟು ನೀರು ಹಾಕುತ್ತಿದ್ದಲ್ಲಿ ಅವು ಬೇಗ ಚೇತರಸಿಕೊಂಡು ಬೆಳೆಯವಲ್ಲವು.

ತಮಿಳುನಾಡಿನ ಕಲ್ಲಾರ್ ಮತ್ತು ಬರ‍್ಲಿಯಾರ್ ಸಂಶೋಧನಾ ಕೇಂದ್ರಗಳಲ್ಲಿ ಈ ಪದ್ದತಿಯನ್ನು ಅನುಸರಿಸಿ ಜೂನ್‌ ಹಾಗೂ ಜನವರಿ ತಿಂಗಳುಗಳಲ್ಲಿ ಕಸಿಮಾಡಿದಾಗ ಶೇ. ೮೦ ರಿಂದ ೧೦೦ರಷ್ಟು ಯಶಸ್ಸು ಲಭಿಸಿದ್ದಾಗಿ ತಿಳಿದುಬಂದಿದೆ. ಕಸಿ ಮಾಡಲು ಕಮರಾಕ್ಷಿ ಬೀಜ ಸಸಿಗಳನ್ನೇ ಬಳಸಬೇಕು. ಸಿಂಗಪುರದಲ್ಲಿ ಪ್ಲಾಸ್ಟಿಕ್‌ ಚೀಲಗಳಲ್ಲಿ ಬೀಜ ಊರಿ ಎಬ್ಬಿಸಿದ ೬ ರಿಂದ ೮ ತಿಂಗಳುಗಳ ವಯಸ್ಸಿನ ಬೇರು ಸಸಿಗಳನ್ನು ಈ ಉದ್ದೇಶಕ್ಕೆ ಬಳಸುತ್ತಾರೆ.

() ವೆನೀರ್ ವಿಧಾನ: ಇದಕ್ಕೆ ೦.೬ ರಿಂದ ೧.೩ ಸೆಂ.ಮೀ. ದಪ್ಪದ ಕಾಂಡ ಇರುವಂತಹ, ಒಂದು ವರ್ಷವಯಸ್ಸಿನ ಬೀಜ ಸಸಿಗಳನ್ನು ಬೇರು ಸಸಿಗಳನ್ನಾಗಿ ಬಳಸುತ್ತಾರೆ. ಬೇರು ಸಸಿಯ ಕಾಂಡ ಕಸಿಕಡ್ಡಿಗಿಂತ ಸ್ವಲ್ಪ ದಪ್ಪ ಇದ್ದರೂ ಅಡ್ಡಿಯಿಲ್ಲ. ಕಸಿ ಕಡ್ಡಿಯಲ್ಲಿನ ಎಲೆಗಳನ್ನು ೧೦-೧೫ ದಿನ ಮುಂಚಿತವಾಗಿ ಸ್ವಲ್ಪ ತೊಟ್ಟು ಭಾಗ ಇರುವಂತೆ ಸವರಬೇಕು. ಹೀಗೆ ಮಾಡುವುದರೆಂದ ಅದರ ತುದಿಯಲ್ಲಿನ ಮೊಗ್ಗುಗಳು ಚೆನ್ನಾಗಿ ಉಬ್ಬುತ್ತವೆ ಹಾಗೂ ತೊಟ್ಟುಗಳ ಉಳಿಕೆ ಭಾಗಗಳು ತಮ್ಮಷ್ಟಕ್ಕೆ ತಾವೇ ಕಳಚಿಬೀಳುತ್ತವೆ.

ಕಸಿ ಮಾಡುವ ದಿನ ತಂಪು ಹೊತ್ತಿನಲ್ಲಿ ಕಸಿಕಡ್ಡಿಗಳನ್ನು ತಾಯಿ ಮರದಿಂದ ಬೇರ್ಪಡಿಸಿ ಪ್ಲಾಸ್ಟಿಕ್‌ ಹಾಳೆಯಲ್ಲಿ ಸುತ್ತಿಟ್ಟು ಕಸಿಮಾಡುವ ಜಾಗಕ್ಕೆ ತರಬೇಕು. ಬೇರು ಸಸಿಯಲ್ಲಿ ಸುಮಾರು ೧೫-೨೨ ಸೆಂ.ಮೀ. ಎತ್ತರದಲ್ಲಿ ಹರಿತವಿರುವ ಕಸಿಚಾಕುವಿನಿಂದ ೨.೫ ಸೆಂ.ಮೀ. ಉದ್ದದ ಇಳಿಜಾರು ಕಚ್ಚುಕೊಟ್ಟು ಅದರ ಬುಡದಲ್ಲಿ ಅದರ ಕಾಲು ಭಾಗದಷ್ಟು ಉದ್ದದ ಅಡ್ಡ ಕಚ್ಚು ಸ್ವಲ್ಪ ಓರೆಯಾಗಿರುವಂತೆ ಕೊಟ್ಟು ತೊಗಟೆ ಚಕ್ಕೆಗಳನ್ನು ಬಿಡಿಸಿ ತೆಗೆಯಬೇಕು. ಅದೇ ರೀತಿ ಕಸಿಕಡ್ಡಿಯ ಬುಡದ ಒಂದುಮಗ್ಗುಲಲ್ಲಿ ಸ್ವಲ್ಪ ಉದ್ದನಾದ ಇಳಿಜಾರು ಕಚ್ಚನ್ನು ಕೊಟ್ಟು ಅದರ ಮತ್ತೊಂದು ಮಗ್ಗುಲಲ್ಲಿ ಕಡಿಮೆ ಉದ್ದದ ಇಳಿಕಚ್ಚನ್ನು ಕೊಡಬೇಕು. ಹೀಗೆ ಸಿದ್ಧಗೊಳಿಸಿದ ಕಸಿಕಡ್ಡಿಯ ಬುಡವನ್ನು ಬೇರುಸಸಿಯ ಕಚ್ಚುಗಳಲ್ಲಿ ನೆಟ್ಟಗೆ ಇಳಿಸಿ ಪ್ಲಾಸ್ಟಿಕ್‌ ಪಟ್ಟಿಯಿಂದ ಬಿಗಿಯಾಗಿ ಸುತ್ತಿ ಕಟ್ಟಬೇಕು. ಸುಮಾರು ಮೂರು ನಾಲ್ಕುವಾರಗಳಲ್ಲಿ ಅವು ಬೆಸೆದು ಒಂದಾಗುತ್ತವೆ. ಕಸಿಕಡ್ಡಿಯಲ್ಲಿ ಸಾಕಷ್ಟು ಚಿಗುರುಮೂಡಿ ಬೆಳೆದಾಗ, ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಕತ್ತರಿಸಿಹಾಕಬೇಕು. ಹದವರಿತು ನೀರು ಕೊಡುತ್ತಿದ್ದಲ್ಲಿ ಕಸಿಗಿಡಗಳು ಬೆಳೆದು ಮಳೆಗಾಲದ ಹೊತ್ತಿಗೆ ನೆಡಲು ಸಿದ್ದವಿರುತ್ತವೆ.

() ಪಾರ್ಶ್ವಕಸಿ ವಿಧಾನ: ಇದಕ್ಕೆ ಸೈಡ್‌ಗ್ರ್ಯಾಪ್ಟಿಂಗ್‌ ಎನ್ನುತ್ತಾರೆ. ಫ್ಲೋರಿಡಾದಲ್ಲಿ ಈ ವಿಧಾನ ಬಹಳ ಯಶಸ್ವಿಯಾಗಿ ಕಂಡುಬಂದಿದೆ. ಇದರಲ್ಲಿ ಸಹ ಬೀಜ ಸಸಿಗಳನ್ನು ಬೇರು ಸಸಿಗಳನ್ನಾಗಿ ಬಳಸುತ್ತಾರೆ. ಸ್ವಲ್ಪ ದೊಡ್ಡವಿರುವ ಮರಗಳಲ್ಲಿಯೂ ಸಹ ಈ ವಿಧಾನವನ್ನು ಅನುಸರಿಸಬಹುದು. ಬೇರು ಸಸಿಯ ಕಾಂಡ ದಪ್ಪನಾಗಿದ್ದರೂ ಅಡ್ಡಿಯಿಲ್ಲ. ಕಸಿಮಾಡುವ ಕಾಲಕ್ಕೆ ಅದರಲ್ಲಿ ಕೂಡುಪದರ ರಸವತ್ತಾಗಿರುವುದು ಬಹು ಮುಖ್ಯ. ಕಸಿಕಡ್ಡಿಗಳ ಉಪಚಾರ ವೆನೀರ್ ವಿಧಾನದಲ್ಲಿ ಇದ್ದಂತೆ. ಅವುಗಳನ್ನು ಕಸಿ ಮಾಡುವ ದಿನ ತಂಪುಹೊತ್ತಿನಲ್ಲಿ ತಾಯಿಮರದಿಂದ ಬೇರ್ಪಡಿಸಿ ತಂದು ಕಸಿ ಮಾಡಲು ಬಳಸಬೇಕು. ಕಸಿಕಡ್ಡಿಯ ಬುಡದಲ್ಲಿ ಎರಡೂ ಮಗ್ಗುಲಲ್ಲಿ ಇಳಿಜಾರು ಕಚ್ಚುಕೊಟ್ಟು ಚೂಪುಮಾಡಬೇಕು.

ಬೇರು ಸಸಿಯ ಕಾಂಡದಲ್ಲಿ, ಸೂಕ್ತ ಎತ್ತರದಲ್ಲಿ ಇಳಿಕಚ್ಚುಕೊಟ್ಟು ತೊಗಟೆ ಮತ್ತು ಕಟ್ಟಿಗೆ ಭಾಗಗಳನ್ನು ಹಿಗ್ಗಿಸಿ, ಆ ಸೀಳುಗಳ ನಡುವೆ ಸಿದ್ಧಗೊಳಿಸಿದ ಕಸಿಕಡ್ಡಿಯ ಬುಡಭಾಗವನ್ನು ನೆಟ್ಟಗೆ ಇಳಿಬಿಟ್ಟು, ಕಚ್ಚುಗಳು ಒಮದಕ್ಕೊಂದು ಆತುಕೊಳ್ಳುವಂತೆ ಒತ್ತಿ ಹಿಡಿದು ಪ್ಲಾಸ್ಟಿಕ್‌ ಪಟ್ಟಿಯಿಂದ ಸುತ್ತಿ ಬಿಗಿಯಾಗಿ ಕಟ್ಟಬೇಕು. ಸುಮಾರು ಒಂದು ತಿಂಗಳಲ್ಲಿ ಕಸಿಕಡ್ಡಿಯು ಬೇರು ಸಸಿಯೊಂದಿಗೆ ಬೆಸೆದುಕೊಳ್ಳುತ್ತದೆ. ಅದರಲ್ಲಿ ಸಾಕಷ್ಟು ಚಿಗುರು ಕಾಣಿಸಿಕೊಂಡ ನಂತರ ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಸವರಬೇಕು. ಅದಾದ ಒಂದೆರಡು ತಿಂಗಳುಗಳನಂತರ ಕಸಿ ಗಂಟಿನ ಮೇಲೆ ಸುತ್ತಿರುವ ಪ್ಲಾಸ್ಟಿಕ್‌ ಸುರುಳಿಯನ್ನು ಬಿಚ್ಚಿ ತೆಗೆಯಬೇಕು.

() ಮೆತುಕಟ್ಡಿಗೆ ಕಸಿ ವಿಧಾನ: ಇದನ್ನು ಸಾಫ್ಟ್‌ವುಡ್‌  ಗ್ರ್ಯಾಪ್ಟಿಂಗ್‌  ಎನ್ನುತ್ತಾರೆ. ಬೇರು ಸಸಿಯ ಕಾಂಡ ಬಲಿತಿರುತ್ತದೆ ಆದರೆ ಅದು ಇನ್ನೂ ಹಸಿರಾಗಿರುತ್ತದೆ. ಅದರಲ್ಲಿನ ಕೆಂಬಯಂ ಅಂಗಾಂಶ ಚುರುಕಾಗಿದ್ದು ಕಸಿ ಮಾಡಿದಾಗ ಬೇಗಕೂಡಿಕೊಳ್ಳಲು ನೆರವಾಗುತ್ತದೆ. ಈ ಉದ್ದೇಶಕ್ಕೆ ಒಂದು ವರ್ಷವಸ್ಸಿನ ಹಾಗೂ ೧.೨೫ ಸೆಂ.ಮೀ. ದಪ್ಪ ಇರುವ ಕಾಂಡದ ಬೇರುಸಸಿಗಳನ್ನು ಆರಿಸಿಕೊಳ್ಳಲಾಗುತ್ತದೆ. ಮೊದಲೇ ಎಲೆಗಳನ್ನು ಸವರಿ ಉಪಚರಿಸಿದ, ಅಷ್ಟೇ ದಪ್ಪವಿರುವ ಕಸಿಗಡ್ಡಿಗಳನ್ನು ಬಳಸಿಕೊಂಡು ಕಸಿಮಾಡಬೇಕು. ಕಸಿಕಡ್ಡಿಯ ಬುಡದ ಎರಡೂ ಮಗ್ಗುಲಲ್ಲಿ ೨ ಸೆಂ.ಮೀ. ಉದ್ದದ ಇಳಿಜಾರು ಕಚ್ಚುಕೊಟ್ಟು ಚೂಪು ಮಾಡಬೇಕು. ಅದೇ ರೀತಿ ಬೇರು ಸಸಿಯ ತಲೆಯನ್ನು ೧೫-೨೨ ಸೆಂ.ಮೀ ಅಥವಾ ಇನ್ನೂ ಹೆಚ್ಚು ಎತ್ತರದಲ್ಲಿ ಅಡ್ಡಕ್ಕೆ ಸವರಿ, ಅದರ ಮಧ್ಯಭಾಗದಲ್ಲಿ ಇಳಿಕಚ್ಚುಕೊಟ್ಟು ಸೀಳಬೇಕು. ಈ ಸೀಳುಗಳ ನಡುವೆ ಸಿದ್ಧಗೊಳಿಸಿದ ಕಸಿಕಡ್ಡಿಯ ಬುಡದ ಚೂಪು ಭಾಗವನ್ನು ನೆಟ್ಟಗೆ ಇಳಿಸಿ, ಪ್ಲಾಸ್ಟಿಕ್‌ ಪಟ್ಟಿಯಿಂದ ಬಿಗಿಯಾಗಿ ಸುತ್ತಿ ಕಟ್ಟಬೇಕು. ಕಚ್ಚುಗಳೊಳಕ್ಕೆ ನೀರು ಇಳಿಯದಂತೆ ಮೇಲೆ ಪ್ಲಾಸ್ಟಿಕ್‌ ಚೀಲವನ್ನು ಇಳಿಬಿಟ್ಟು, ಕಸಿಗಂಟಿನ ಕೆಳಗೆ ದಾರದಿಂದ ಕಟ್ಟಬೇಕು. ಸುಮಾರು ೧೫-೨೦ ದಿನಗಳಲ್ಲಿ ಅವು ಬೆಸೆದುಕೊಳ್ಳುತ್ತವೆ. ಸಾಕಷ್ಟು ಚಿಗುರು ಕಾಣಿಸಿಕೊಂಡಾಗ ಪ್ಲಾಸ್ಟಿಕ್‌ ಚೀಲವನ್ನು ಬಿಚ್ಚಿ ತೆಗೆಯಬೇಕು. ಈ ರೀತಿಯಲ್ಲಿ ಸಿದ್ಧಗೊಳಿಸಿದ ಗಿಡಗಳು ಮುಂಗಾರಿನ ಹೊತ್ತಿಗೆ ನೆಡಲು ಬಳಸಬಹುದು. ಗಿಡಗಳನ್ನು ಒಪ್ಪವಾಗಿ ಜೋಡಿಸಿ, ಸ್ವಲ್ಪ ನೆರಳನ್ನು ಒದಗಿಸಿ, ನೀರು ಕೊಡುವುದನ್ನು ಮರೆಯಬಾರದು.

() ಹಳೆಯ ಮರಗಳ ಪುನರುಜ್ಜೀವನ: ಇದಕ್ಕೆ ರೆಜುವಿನೇಷನ್‌ ಎನ್ನುತ್ತಾರೆ. ಸಾಕಷ್ಟು ಫಸಲು ಬಿಡದಂತಹ, ತೀರಾ ಹಳೆಯದಾದ ಅಥವಾ ಬೀಜಸಸಿಗಳನ್ನು ಕಸಿಮಾಡುವ ಮೂಲಕ ಸರಿಪಡಿಸಬಹುದು.

ಅಂತಹ ಮರದ ಪ್ರಧಾನ ರೆಂಬೆಗಳನ್ನು ಸೂಕ್ತ ಉದ್ದಕ್ಕೆ ಕತ್ತರಿಸಬೇಕು. ಮೋಟು ಭಾಗಗಳಿಂದ ಹಲವಾರು ಚಿಗುರು ಪುಟಿದು ಬೆಳೆಯುತ್ತವೆ. ಅವುಗಳಲ್ಲಿ ಚೆನ್ನಾಗಿರುವ ೩-೪ ಚಿಗುರು ರೆಂಬೆಗಳನ್ನು ಉಳಿಸಿಕೊಂಡು ಮಿಕ್ಕವುಗಳನ್ನು ಚಿವುಟಿ ಹಾಕಬೇಕು. ಅವು ೧.೫ ರಿಂದ ೨ ಸೆಂ.ಮೀ. ದಪ್ಪವಿದ್ದಾಗ ಅವುಗಳ ತಲೆಯನ್ನು ಅಡ್ಡಕ್ಕೆ ಸವರಿ, ಮೊದಲೇ ಸಿದ್ಧಗೊಳಿಸಿದ ಕಸಿಕಡ್ಡಿಗಳನ್ನು ಬಳಸಿ ಮೆತುಕಟ್ಟಿಗೆ ಕಸಿ ವಿಧಾನದಲ್ಲಿದ್ದಂತೆ ಕಸಿಮಾಡಬೇಕು. ಹೀಗೆ ಕಸಿಮಾಡಿದ ಒಂದೆರಡು ವರ್ಷಗಳಲ್ಲಿ ಅವು ಫಸಲು ಬಿಡಲು ಪ್ರಾರಂಭಿಸುತ್ತವೆ.

ii. ಕಣ್ಣುಕೂಡಿಸಿ ಕಸಿಮಾಡುವುದು

ಇದನ್ನು ಬಡ್ಡಿಂಗ್‌ ಅಥವಾ ಬಡ್‌ಗ್ರ್ಯಾಪ್ಟಿಂಗ್‌ ಎನ್ನುತ್ತಾರೆ. ಇದರಲ್ಲಿ ಕಸಿಮಾಡುವ ಉದ್ದೇಶಕ್ಕೆ ಒಂದೇ ಒಂದು ಮೊಗ್ಗನ್ನು ಮಾತ್ರ ಬಳಸಲಾಗುತ್ತದೆ. ಅದರಲ್ಲಿ ಬರೀ