ಕಮರಾಕ್ಷಿಯು ಮೊಲುಕ್ಕಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಇಂಡೋ ಚೈನಾಗಳ ನಿವಾಸಿ. ಪ್ರಸ್ತುತ ಇದನ್ನು ಭಾರತದ ಎಲ್ಲಾ ಕಡೆ ಕಾಣಬಹುದಾದರೂ ಹೆಚ್ಚಿನ ಪ್ರಮಾಣದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ ಹಾಗೂ ಅವುಗಳ ಕ್ಷೇತ್ರ ಮತ್ತು ಉತ್ಪಾದನೆಗಳನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಶ್ರೀಲಂಕಾ, ಬರ್ಮಾ, ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಮಲೇಷ್ಯಾ, ಸಿಂಗಪುರ, ಜಪಾನ್‌, ಚೀನ, ತೈವಾನ್, ಅಸ್ಟ್ರೇಲಿಯಾ, ಕ್ಯಾಲಿಫೋರ್ನಿಯಾ, ಹವಾಯ್‌, ಕಮರಾಕ್ಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಪ್ರದೇಶಗಳು. ಅಮೇರಿಕಾಕ್ಕೆ ಫ್ಲೋರಿಡಾದ ಒಂದು ಹಣ್ಣಿನ ಗಿಡಗಳ ನರ್ಸರಿಯವರು ಇದನ್ನು ೧೮೯೦ರಲ್ಲಿ ಪ್ರವೇಶಪಡಿಸಿದ್ದಾಗಿ ತಿಳಿದುಬಂದಿದೆ. ಅದೇ ರೀತಿ ಆಸ್ಟ್ರೇಲಿಯಾಕ್ಕೆ ಇದು ೧೦೦ ವರ್ಷ‌ಗಳಿಗೂ ಹಿಂದೆಯೇ ಪ್ರವೇಶ ಮಾಡಿರಬಹುದೆಂದು ಅಂದಾಜು.

ಸಸ್ಯ ವರ್ಣನೆ

ಕಮರಾಕ್ಷಿ ಆಕ್ಷಾಲಿಡೇಸೀ ಕುಟುಂಬದ ಅವೆರ್ರ್‌ಹೋವ ಉಪವರ್ಗಕ್ಕೆ ಸೇರಿದ ಫಲ. ಇದರ ಸಸ್ಯನಾಮ ಅವೆರ್ರ್ಹೋವ ಕ್ಯರಂಬೋಲ L. ಈ ಉಪವರ್ಗಕ್ಕೆ ಅವೆರ್ರ್‌ಹೋವ ಎಂಬ ಹೆಸರನ್ನು ಹೆಸರಾಂತ ಅರಬ್ಬೀ ವೈದ್ಯರಾದ ಅವೆರ್ರ್‌ಹೋಸ್‌ ಎಂಬುವರ ಜ್ಞಾಪಕಾರ್ಥ ಕೊಡಲಾಗಿದೆ. ಕಮರಾಕ್ಷಿಯನ್ನು ಸಂಸ್ಕೃತದಲ್ಲಿ ಬೃಹದ್ದಳ, ಧಾರಾಫಲ, ಮುದ್ಗರ, ಪೀತಫಲ, ಶುಕ್‌ ಪ್ರಿಯ, ಸುಜಕರ ಎಂದರೆ, ಕಮರಾಕ್ಷಿ, ಕಾಮರಂಗ, ಕೊಬ್ರಿಕಾಯಿ, ದಾರೆಹುಳಿ, ಟಮಟಂಗ ಮುಂತಾದವು ಕನ್ನಡದ ಹೆಸರುಗಳು, ಕಮ್ರಾಜ್‌, ಕ್ಯರಂಬೋಲ, ಕ್ಯರಂಬೋಲ ಆಯಪಲ, ಚೈನೀಸ್‌ ಗೂಸ್‌ಬೆರ್ರಿ, ಕೋರಮಂಡಲ್‌ ಗೂಸ್‌ಬೆರ್ರಿ, ಸ್ಟಾರ್ ಫ್ರೂಟ್‌, ಫೈವ್‌  ಕಾರ್ನರ‍್‌ಡ್‌ ಫ್ರೂಟ್‌ ಮುಂತಾದವು ಇದರ ಇಂಗ್ಲೀಷ್‌ ಹೆಸರುಗಳು.

ಕಮರಾಕ್ಷಿ ಉಷ್ಣಪ್ರದೇಶಗಳ ನಿತ್ಯ ಹಸುರಿನ ಮರವಾಗಿದೆ. ಪೂರ್ಣ ಬೆಳೆದಾಗ ಕಮರಾಕ್ಷಿಯ ಮರಗಳು ೧೦-೧೫ ಮೀ. ಎತ್ತರವಿರುತ್ತವೆ ಹಾಗೂ ಅಸಂಖ್ಯಾತ ರೆಂಬೆಗಳನ್ನು ಹೊಂದಿರುತ್ತವೆ. ಅವು ಬಲಿಷ್ಠವಿದ್ದು ಸುತ್ತ ಹರಡಿ ಚಾಚಿರುತ್ತವೆ. ಕೆಳಭಾಗದ ರೆಂಬೆಗಳು ನೆಲಮಟ್ಟಕ್ಕೆ ತೀರಾ ಹತ್ತಿರದಲ್ಲಿರುತ್ತವೆ. ಮರಗಳ ನೆತ್ತಿ ವಿಶಾಲವಾಗಿ ಹರಡಿದ್ದು, ಗೋಪುರದಂತೆ ಕಾಣುವುದು. ತೊಗಟೆ ಬೂದುಬಣ್ಣವಿದ್ದು ನಯವಾಗಿರುತ್ತದೆ. ಎಳೆಯ ಗಿಡಗಳಲ್ಲಿನ ಕವಲು ರೆಂಬೆಗಳ ಮೇಲೆಲ್ಲಾ ಹಳದಿ ಬಣ್ಣದ ಮೋಟುತುಪ್ಪಳವಿದ್ದು, ದಿನಕಳೆದಂತೆಲ್ಲಾ ರೆಂಬೆಗಳು ಬರಲುಬರಲಾಗಿ ಮಾರ್ಪಡುತ್ತವೆ.

ಕಮರಾಕ್ಷಿ ಕಾಯಿಗಳು

ಎಲೆಗಳು ಸಂಯುಕ್ತವಿದ್ದು ಪ್ರತಿಯೂಂದರಲ್ಲಿ ೩-೫ ಜೊತೆ ಉಪ ಎಲೆಗಲಿರುತ್ತವೆ. ಉಪಎಲೆಗಳಿಗೆ ಪುಟ್ಟತೊಟ್ಟು ಇರುತ್ತದೆ. ಉಪ ಎಲೆಗಳು ಅಂಡಾಕಾರವಿದ್ದು ೨-೯ ಸೆಂ.ಮೀ. ಉದ್ದ ಮತ್ತು ೧-೪ ಸೆಂ.ಮೀ. ಅಗಲ ಇದ್ದು ತುದಿಯತ್ತ ಚೂಪಾಗಿರುತ್ತವೆ. ಎಲೆಗಳ ಬಣ್ಣ ತೆಳುಹಸಿರು; ಮೇಲೆಲ್ಲಾ ಹೊಳಪಾಗಿರುತ್ತವೆ.

ಹೂವು ಬಲಿತ ರೆಂಬೆಗಳ ತುದಿಯತ್ತ, ಚಿಗುರು ರೆಂಬೆಗಳಲ್ಲಿ, ಎಲೆರಹಿತ ಬೋಳು ರೆಂಬೆಗಳಲ್ಲಿ ಹಾಗೂ ಎಲೆಗಳ ಕಂಕುಳಲ್ಲಿ ಗೊಂಚಲು ಗೊಂಚಲಾಗಿ ಬಿಡುತ್ತವೆ. ಸಿಹಿಬಗೆಗಳಲ್ಲಿ ಹೂವು ಕವಲುರೆಂಬೆಗಳ ತುದಿಯಲ್ಲಿ ಬಿಡುತ್ತವೆ. ಹೂಗೊಂಚಲು ಮಧ್ಯಾರಂಭಿಯಾಗಿರುತ್ತದೆ. ಗೊಂಚಲುಗಳಲ್ಲಿನ ಹೂಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುತ್ತದೆ. ಗೊಂಚಲೊಂದರಲ್ಲಿ ಸರಾಸರಿ ೧೬-೩೮ ಹೂಗಳಿರುತ್ತವೆ.

ಬಿಡಿಹೂವು ೮-೧೦ ಮಿ.ಮೀ. ಉದ್ದವಿದ್ದು ಬೆಳ್ಳಗೆ, ಬಿಳಿಗೆಂಪು, ಬಿಳಿಕೆನ್ನೀಲಿ ಇಲ್ಲವೇ ಕೆಂಪು ಬಣ್ಣವಿದ್ದು ಗಿಡ್ಡ ತೊಟ್ಟುಗಳಿಗೆ ಅಂಟಿಕೊಂಡಿರುತ್ತವೆ. ಪ್ರತಿ ಹೂವಿನಲ್ಲಿ ೫ ಪುಷ್ಪಪೀಠದ ಎಸಳುಗಳು, ಮತ್ತು ೫ ಹೂದಳಗಳು ಇರುತ್ತವೆ. ಕೇಸರಗಳ ಸಂಖ್ಯೆ ೧೦. ಆದರೆ ಅವುಗಳ ಪೈಕಿ ಐದು ಮಾತ್ರ ಫಲದಾಯಕವಾಗಿರುತ್ತವೆ. ತಳಿಗಳನ್ನು ಶಲಾಕೆಯ ಉದ್ದವನ್ನುನುಸರಿಸಿ ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ ಉದ್ದಶಲಾಕೆಯ ತಳಿಗಳು ಮತ್ತು ಗಿಡ್ಢ ಶಲಾಕೆಯ ತಳಿಗಳು. ಶಲಾಕೆ ಕೇಸರಗಳಿಗಿಂತ ಮುಂದಕ್ಕೆ ಚಾಚಿದ್ದರೆ ಅದನ್ನು ಉದ್ದ ಶಲಾಕೆಯ ಹೂವು ಎಂಬುದಾಗಿ ಮತ್ತು ಶಲಾಕೆ ಗಿಡ್ಡನಾಗಿದ್ದು ಕೇಸರಗಳಿಗಿಂತ ಕೆಳ ಮಟ್ಟದಲ್ಲಿದ್ದರೆ ಗಿಡ್ಡ ಶಲಾಕೆಯ ಹೂವು ಎಂಬುದಾಗಿ ಕರೆಯುತ್ತಾರೆ. ಉದ್ದ ಶಲಾಕೆಯ ಹೂಗಳನ್ನು ‘ಪಿನ್‌ಐ ಪ್ಲವರ್ಸ್’ ಎಂಬುದಾಗಿಯೂ ಮತ್ತು ಗಿಡ್ಡ ಶಲಾಕೆಯ ಹೂಗಳನ್ನು ‘ಥ್ರಮ್‌ಐ ಪ್ಲವರ್ಸ್’ ಎಂಬುದಾಗಿಯೂ ಕರೆಯುತ್ತಾರೆ. ಗಿಡ್ಡ ಶಲಾಕೆಯ ತಳಿಗಳು ಸ್ವ-ಫಲಪ್ರದವಿರುವುದಿಲ್ಲ ಮತ್ತು ಉದ್ದ ಶಲಾಕೆಯ ತಳಿಗಳು ಸ್ವ-ಫಲಪ್ರದವಿರುತ್ತವೆ. ಗಿಡ್ಡ ಶಲಾಕೆಯ ತಳಿಗಳು ಕಾಯಿ ಕಚ್ಚವಂತಾಗಲು ಉದ್ದ ಶಲಾಕೆಯ ತಳಿಗಳು ಬೇಕಾಗುತ್ತವೆ. ಅಂಡಾಶಯ ಉಚ್ಛಸ್ಥಿತಿಯದಿರುತ್ತದೆ. ಇವು ಅನ್ಯ-ಪರಾಗಸ್ಪರ್ಶದ ಹಣ್ಣಿನ ಬೆಳೆಗಳಾಗಿವೆ. ಹಣ್ಣನ್ನು ಬೆರ್ರಿ ಎನ್ನುತ್ತಾರೆ. ಕಮರಾಕ್ಷಿಯಲ್ಲಿ ಹಣ್ಣಿನ ಉದ್ದಕ್ಕೆ ಎದ್ದುಕಾಣುವ ಏಣುಗಳಿರುತ್ತವೆ.

ತಳಿಗಳು ಮತ್ತು ತಳಿವಿಬೇಧಗಳು

ಆಕ್ಸಾಲಿಡೇಸೀ ಕುಟುಂಬದ ಜನಪ್ರಿಯ ಹಣ್ಣಿನ ಬೆಳೆಯಾದ ಕಮರಾಕ್ಷಿಯ ಸಸ್ಯನಾಮ ಅವೆರ್ರ್ಹೋವ ಕ್ಯರಂಬೋಲ L. ಇದರಲ್ಲಿ ಹಲವಾರು ತಳಿಗಳಿವೆ. ಹೊರದೇಶಗಳಲ್ಲಿ ಹಲವಾರು ಉತ್ಕೃಷ್ಟ ತಳಿಗಳಿರುವುದಾಗಿ ತಿಳಿದುಬಂದಿದೆ. ಅವು ಹೀಗೆವೆ:

. ಫ್ಲೋರಿಡಾದ ತಳಿಗಳು: ಫ್ಟಾಂಗ್‌ಟುಂಗ್‌, ಡಾಹ್‌ಪಾನ್‌, ಟೀನ್ಮ, ಆರ್ಕಿನ್‌, ಮಹಾ, ಸ್ಟಾರ್ ಕಿಂಗ್, ಥಾಯ್‌ನೈಟ್‌, ವೀಲರ್, ನ್ಯೂಕೊಂಬ್‌ ಮುಂತಾದವು.
. ತೈವಾನ್ ದೇಶದ ತಳಿಗಳು: ಲೂಥೊ, ಚೆಂಗ್‌ಟ್ಸಿ, ಡಾಹ್‌ಪಾನ್‌, ಎರ್-ಲಿನ್‌, ಸಾಫ್ಟ್‌ಸಿಹ್‌ ಮುಂತಾದವು.
. ಸಿಗಪುರದಲ್ಲಿನ ತಳಿಗಳು: ಲೆಂಗ್‌ಬಾಕ್‌, ಜುರಾಂಗ್‌  ಮುಂತಾದವು.

. ಥಾಯ್ಲೆಂಡ್ನಲ್ಲಿನ ತಳಿಗಳು: ಲೆಂಗ್‌ಬಾಕ್‌, ಜುರಾಂಗ್‌  ಮುಂತಾದವು.
. ಮಲೇಷ್ಯಾದಲ್ಲಿನ ತಳಿಗಳು: ಬಿ೧, ಬಿ೨, ಬಿ೪, ಬಿ೬, ಬಿ೮, ಬಿ೧೦, ಬಿ೧೧, ಸುಧಾರಿತ ಆಯ್ಕೆಗಳ ಜೂತೆಗೆ ಜೈಂಟ್‌ಸಯಾಂ, ಜಂಗಲ್‌ಗೋಲ್ಡ್‌, ಬಿಸಿಪಿ-೧, ಹೋಸಿ, ಚುಬುಬ ಮುಂತಾದ ಸ್ಥಳೀಯ ಆಯ್ಕೆಗಳೂ ಸಹ ಇವೆ.

ಚೀನಾ ದೇಶದಲ್ಲಿನ ತಳಿವಿಬೇಧಗಳ ಹಣ್ಣು ಹೆಚ್ಚು ಸಿಹಿ ಇರುವುದಾಗಿಯೂ ಮತ್ತು ಬ್ರೆಜಿಲ್‌ ದೇಶದ ಬಗೆಗಳ ಹಣ್ಣು ಅಧಿಕ ಪ್ರಮಾಣದ ಸಿ ಜೇವಸತ್ವ ಹೊಂದಿರುವುದಾಗಿಯೂ ತಿಳಿದುಬಂದಿದೆ.

ಕ್ವೀನ್ಸ್‌ಲ್ಯಾಂಡ್‌ ಮತ್ತು ಕ್ಯಾನರಿ ದ್ವೀಪಗಳಲ್ಲಿ ಬೇಸಾಯದಲ್ಲಿರುವ ಕೆಲವು ತಳಿ ಹಾಗೂ ಆಯ್ಕೆಗಳ ಹಣ್ಣುಗಳ ಗುಣವಿಶೇಷಗಳನ್ನು ಕೋಷ್ಟಕ ೨.೨ ರಲ್ಲಿ ಕೊಟ್ಟಿದೆ.

ಕೋಷ್ಟಕ .: ಕ್ವೀನ್ಸಲ್ಯಾಂಡ್ ಮತ್ತು ಕ್ಯಾನರಿ ದ್ವೀಪಗಳಲ್ಲಿನ ತಳಿ ಹಾಗೂ ಆಯ್ಕೆಗಳ ಗುಣವಿಶೇಷಗಳು

ತಳಿ / ಆಯ್ಕೆಯ ಹೆಸರು

ಏಣು / ರೆಕ್ಕೆತುದಿಯ ಅಂಚು

ಅಪಕ್ವ ಕಾಯಿಗಳ

ಪಕ್ವಗೊಂಡ ಹಣ್ಣುಗಳಲ್ಲಿ ಬಣ್ಣ

ಹಣ್ಣುಗಳ ತೂಕ (ಗ್ರಾಂ) (ಡಿಗ್ರಿಬ್ರಿಕ್ಸ್)

ರುಚಿ

ಮೇಲ್ಮೈರಚನೆ / ವಿನ್ಯಾಸ

ಆರ್ಕಿನ್‌ ಸ್ವಲ್ಪ ದುಂಡು ಬಂಗಾರ / ಹಳದಿ ೮.೨ – ೧೧.೫ ೯೦ – ೨೦೦ ೪.೯ ೫.೦
ಬಿ೧ ದುಂಡು ನಿಂಬೆ ೮ – ೧೧.೫ ೧೦೦ – ೧೩೦ ೪.೮ ೪.೭
ಬಿ೬ ಸ್ವಲ್ಪ ದುಂಡು ಕಿತ್ತಲೆ ೯.೫ – ೧೨.೦ ೧೯೯ – ೩೦೦ ೫.೬ ೪.೩
ಬಿ೧೦ ಸ್ವಲ್ಪ ದುಂಡು ಹಳದಿ / ಕಿತ್ತಲೆ ೯.೦ – ೧೨.೦ ೧೦೦ – ೨೦೦ ೫.೨ ೫.೦
ಫ್ಟಾಗ್‌-ಟುಂಗ್‌ ಸ್ವಲ್ಪ ದುಂಡು ತೆಳು ಹಳದಿ ೯.೨ – ೧೨.೬ ೧೦೦ – ೩೦೦ ೫.೫ ೫.೦
ಮಹಾ ಸ್ವಲ್ಪ ದುಂಡು ಬಿಳಿ ಹಳದಿ ೮.೨ – ೧೧.೫ ೧೦೦ – ೨೦೦ ೫.೦ ೩.೯
ಕೆಂಬನ್‌ಗನ್‌ ಸ್ವಲ್ಪ ದುಂಡು ನಿಂಬೆ ಹಳದಿ ೯.೫ – ೧೩.೦ ೧೫೦ – ೨೫೦ ೬.೩ ೩.೬
ಕಾಜನ್ ಸ್ವಲ್ಪ ದುಂಡು ನಿಂಬೆ ಹಳದಿ ೮.೫ – ೧೧.೫ ೧೫೦ – ೨೫೦ ೫.೧ ೩.೪
೧೧-೧ ಸಾಧಾರಣ ಚೂಪು ಹಳದಿ ೧೦.೦ – ೧೨.೦ ೧೩೦ – ೨೫೦ ೬.೮ ೩.೭
೯-೪ ಚೂಪು ನಿಂಬೆ ಹಳದಿ ೯.೭ – ೧೧.೫ ೧೫೦ – ೨೫೦ ೬.೧ ೩.೫

ಮಲೇಷ್ಯಾ, ಕೊಲಂಬಿಯಾ, ಕ್ವೀನ್ಸ್‌ಲ್ಯಾಂಡ್‌, ಹವಾಯ್‌ ಮುಂತಾದ ದೇಶಗಳ ಬೀಜಸಸಿಗಳಿಂದ ಆರಿಸಿ, ನಿರ್ಲಿಂಗ ರೀತಿಯಲ್ಲಿ ವೃದ್ಧಿಪಡಿಸಿ ಬೇಸಾಯಕ್ಕೆ ಬಿಡುಗಡೆ ಮಾಡಿದ ಆಯ್ಕೆಗಳಲ್ಲಿ ಇಕಂಬೋಲ, ಗೋಲ್ಡನ್‌‌ಸ್ಟಾರ್ ಮುಂತಾದವು ಬಹು ಮುಖ್ಯವಾದವು.

ಕೋಷ್ಟಕ ೨.೨ ರಲ್ಲಿ ತಿಳಿಸಿರುವ ಹಣ್ಣುಗಳ ರುಚಿಯನ್ನು ಹೆಡಾನಿಕ್ ಸ್ಕೇಲ್‌ನಲ್ಲಿ ಅಳತೆ ಮಾಡಲಾಗಿದ್ದು ಅದರಲ್ಲಿ ೧ ರಿಂದ ೯ರವರೆಗೆ ಗುರುತುಗಳಿರುತ್ತವೆ. ೧ ಎಂಬುದಾಗಿ ಇದ್ದಲ್ಲಿ ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ ಎಂಬುದಾಗಿಯೂ ಮತ್ತು ೯ ಎಂಬುದಾಗಿ ಇದ್ದಲ್ಲಿ ಹಣ್ಣುಗಳನ್ನು ಬಹುವಾಗಿ ಇಷ್ಟಪಡುವುದಾಗಿಯೂ ತಿಳಿಯಬೇಕು. ಅದೇ ರೀತಿ ಹಣ್ಣುಗಳ ಮೇಲ್ಮೈ ರಚನೆಯಲ್ಲಿ ೧ ಎಂಬುದಾಗಿ ನಮೂದಿಸಿದ್ದರೆ ಮೃದು ಎಂಬುದಾಗಿಯೂ, ೨ ಎಂಬುದಾಗಿದ್ದಲ್ಲಿ ಭಾಗಶಃ ಮೃದು, ೩ ಎಂದಿದ್ದರೆ ಬಿಗುವಾಗಿದೆ ಎಂದು, ೪ ಎಂದಿದ್ದರೆ ಸ್ವಲ್ಪಮಟ್ಟಿಗೆ ಗರಿಗರಿಯಾಗಿದೆಯೆಂದೂ ಮತ್ತು ೫ ಎಂದು ಇದ್ದರೆ ತಿನ್ನಲು ಗರಿಗರಿಯಾಗಿದೆ ಎಂದು ತಿಳಿಯತಕ್ಕದ್ದು.

ಇಕಂಬೋಲ ಕಮರಾಕ್ಷಿಯ ಬೀಜ ಸಸಿಗಳಲ್ಲಿನ ಉತ್ತಮ ಆಯ್ಕೆ. ಅದನ್ನು ೧೯೫೭ರಲ್ಲಿ ಕೊಲಂಬಿಯಾದ ಪಾಮೈರಾದಲ್ಲಿ ಆಯ್ಕೆ ಮಾಡಲಾಯಿತು. ಇದು ಆಕಸ್ಮಿಕವಾಗಿ ಕಂಡುಬಂದ ಉತ್ತಮ ಆಯ್ಕೆ. ಇದರ ಮರಗಳು ಸ್ವಲ್ಪ ಎತ್ತರಕ್ಕೆ ಬೆಳೆಯುತ್ತವೆ. ಇದರ ಮರಗಳಲ್ಲಿನ ಇಳುವರಿ ಇತರ ತಳಿಗಳಲ್ಲಿ ಇರುವುದಕ್ಕಿಂತ ನಾಲ್ಕುಪಟ್ಟು ಹೆಚ್ಚಾಗಿರುತ್ತದೆ. ಹಣ್ಣು ಒಂದೇ ತೆರನಾಗಿದ್ದು. ಸ್ಪರ್ಶಕ್ಕೆ ಬಿಗುವಾಗಿರುತ್ತವೆ. ರಸಸಾರ ಮತ್ತು ಒಟ್ಟು ಕರಗಿದ ಘನಪದಾರ್ಥಗಳ ಪ್ರಮಾಣ ಜಾಸ್ತಿ ಇದ್ದು ರುಚಿಯಲ್ಲಿ ಮಧುರವಾಗಿರುತ್ತವೆ; ಹಣ್ಣು ಬೇಗ ಬಿಡುತ್ತವೆ. ಅಲ್ಲಿ ಬೇಸಾಯದಲ್ಲಿರುವ ಸಾಮಾನ್ಯ ಬಗೆಗಳ ಹಣ್ಣು ಮತ್ತು ಇಕಂಬೋಲ ಆಯ್ಕೆಯ ಹಣ್ಣುಗಳಿಗೆ ಇರುವ ವ್ಯತ್ಯಾಸವನ್ನು ಕೊಷ್ಟಕ ೨.೩ ರಲ್ಲಿ ಕೊಟ್ಟಿದೆ.

ಕೋಷ್ಟಕ .: ಇಕಂಬೋಲ ಮತ್ತು ಸಾಮಾನ್ಯ ಸ್ಥಳೀಯ ಬಗೆಗಳ ಹಣ್ಣುಗಳಲ್ಲಿನ ವ್ಯತ್ಯಾಸ

ಹಣ್ಣುಗಳ ಗುಣ ವಿಶೇಷಗಳು ಇಕಂಬೋಲ ಸಾಮಾನ್ಯ ಸ್ಥಳೀಯ ಬಗೆ
ಹಣ್ಣಿನ ಉದ್ದ (ಸೆ. ಮೀ) ೭.೩೧ ೭.೬೪
ಹಣ್ಣಿನ ದಪ್ಪ (ಸೆ. ಮೀ) ೪.೦೯ ೪.೧೪
ಹಣ್ಣಿನ ತೂಕ (ಗ್ರಾಂ) ೫೮.೧೦ ೪೯.೯
ಶೇ. ಒಟ್ಟು ಕರಗಿದ ಘನಪದಾರ್ಥ ೮.೯೦ ೭.೯೦
ಒಟ್ಟು ಕರಗಿದ ಘನಪದಾರ್ಥ / ಹುಳಿ ೧.೮೫ ೩.೯೯
ರಸಸಾರ ೪.೨೦ ೪.೦೦
ಶೇ. ಪೆಕ್ಟಿಕ್‌ ಆಮ್ಲ ೦.೭೦ ೦.೭೨

ಹವಾಯ್‌ನಲ್ಲಿ ಎಚ್‌. ಎಸ್‌. ವೋಲ್ಫೆ ಎಂಬಾತ ಬೀಜ ಕಂಪನಿಯೊಂದರಿಂದ ಈ ಗಿಡಗಳನ್ನು ತರಿಸಿಕೊಂಡಾಗ ಆಕಸ್ಮಿಕವಾಗಿ ಕಂಡುಬಂದ ಉತ್ತಮ ಗುಣಗಳಿಂದ ಕೂಡಿದ ಈ ಆಯ್ಕೆಗೆ ಗೋಲ್ಟನ್‌ಸ್ಟಾರ್ ಎಂಬ ಹೆಸರನ್ನು ಕೊಡಲಾಯಿತು. ಫ್ಲೋರಿಡಾ ವಿಶ್ವವಿದ್ಯಾನಿಲಯವು ಅದನ್ನು ಈ ಹೆಸರಿನಿಂದಲೇ ಬೇಸಾಯಕ್ಕೆ ಬಿಡುಗಡೆ ಮಾಡಿತು. ಗೋಲ್ಟನ್‌ಸ್ಟಾರ್ ಅಯ್ಕೆಯ ಗುಣವಿಶೇಷಗಳನ್ನು ಕೊಷ್ಟಕ ೨.೪ ರಲ್ಲಿ ಕೊಟ್ಟಿದೆ.

ಕೋಷ್ಟಕ .: ಗೋಲ್ಟನ್ಸ್ಟಾರ್ ಅಯ್ಕೆಯ ಗುಣವಿಶೇಷಗಳು

ಹಣ್ಣುಗಳ ಆಕಾರ ಮೊಟ್ಟೆಯಾಕಾರ, ಅದುಮಿದಂತೆ ಇರುತ್ತದೆ.
ಹಣ್ಣುಗಳ ಉದ್ದ ೧೦-೧೩ ಸೆಂ.ಮೀ.
ಹಣ್ಣುಗಳ ತೂಕ ೧೧೦-೧೨೦
ಏಣುಗಳ ಸಂಖ್ಯೆ ೪-೬
ಸಿಪ್ಪಿಯ ಬಣ್ಣ ಹೊಳಪು ಹಳದಿ
ಸಿಪ್ಪಿಯ ದಪ್ಪ ದಪ್ಪನಾಗಿರುತ್ತದೆ
ಸಿಪ್ಪಿಯ ಮೇಲ್ಮೈ  ಮೇಲೆಲ್ಲಾ ಮೇಣದ ಹೊದಿಕೆ ಇರುತ್ತದೆ.
ತಿರುಳು ನಾರು ಇರುವುದಿಲ್ಲ, ತಿನ್ನಲು ಗರಿಗರಿಯಾಗಿರುತ್ತದೆ
ರುಚಿ ಮತ್ತು ಪರಿಮಳ ಸ್ವಾದಿಷ್ಟವಿದ್ದು ಹುಳಿ-ಸಿಹಿಗಳ ಸಮ್ಮಿಶ್ರಣವಿರುತ್ತದೆ.
ಇಳುವರಿ (ಮರವೊಂದಕ್ಕೆ) ೪೫ ರಿಂದ ೧೩೫ ಕಿ.ಗ್ರಾಂ

ಇದರ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ ಹಾಗೂ ‘ಎ’ ಮತ್ತು ‘ಸಿ’ ಜೀವಸತ್ವಗಳಿರುವುದಾಗಿ ತಿಳಿದುಬಂದಿದೆ. ಕ್ಯಾನರಿ ದ್ವೀಪಗಳಲ್ಲಿ ಸಹ ಹಲವಾರು ಕಮರಾಕ್ಷಿ ತಳಿ ಹಾಗೂ ಆಯ್ಕೆಗಳು ಬೇಸಾಯದಲ್ಲಿವೆ. ಅವುಗಳ ಪೈಕಿ ಕಲವೊಂದು ಪ್ರಮುಖ ತಳಿ ಹಾಗೂ ಆಯ್ಕೆಗಳ ಗುಣವಿಶೇಷಗಳನ್ನು ಕೊಷ್ಟಕ ೨.೫ ರಲ್ಲಿ ಕೊಟ್ಟಿದೆ.

ಕೋಷ್ಟಕ .: ಕ್ಯಾನರಿ ದ್ವೀಪಗಳಲ್ಲಿ ಬೇಸಾಯದಲ್ಲಿರುವ ಕಮರಾಕ್ಷಿ ತಳಿ / ಆಯ್ಕೆಗಳ ಗುಣವಿಶೇಷಗಳು