ಕಮರಾಕ್ಷಿ ಹಣ್ಣನ್ನು ಹಾಗೆಯೇ ತಿನ್ನುವುದುಂಟು. ಸಿಹಿಬಗೆಗಳ ಹಣ್ಣು ತಿನ್ನಲು ರುಚಿಯಾಗಿರುತ್ತವೆ. ಪಕ್ವಗೊಂಡ ಹಣ್ಣನ್ನು ಹೆಚ್ಚುಕಾಲ ಇಡಲು ಆಗುವುದಿಲ್ಲ. ಆದರೆ ಅವುಗಳಿಂದ ತಯಾರಿಸಿದ ಪದಾರ್ಥಗಳನ್ನು ಹೆಚ್ಚುಕಾಲ ಜೋಪಾನ ಮಾಡಿಡಬಹುದು. ಈ ಮೊದಲೇ ಹೇಳಿದಂತೆ ಕಮರಾಕ್ಷಿಯ ಹಣ್ಣುಗಳನ್ನು ತೆಳು ಬಿಲ್ಲೆಗಳಾಗಿ ಕತ್ತರಿಸಿ ತಿಂಡಿ ಭಕ್ಷ್ಯಗಳ ಮೇಲೆ ಒಪ್ಪವಾಗಿ ಅಲಂಕರಿಸಿದರೆ ಬಹು ಸೊಗಸಾಗಿ ಕಾಣುತ್ತವೆ. ಅದೇ ರೀತಿ ಹಣ್ಣಿನ ಸಾಲಡ್‌ಗಳಲ್ಲಿ ಸಹ ಬೆರೆಸುವುದುಂಟು.

ಹಣ್ಣುಗಳಿಂದ ಜಾಮ್‌, ಜೆಲ್ಲಿ, ರಸ, ಪ್ರಿಸರ್ವ್‌, ಟಾರ್ಟ್, ಪುಡ್ಡಿಂಗ್‌, ಉಪ್ಪಿನಕಾಯಿ ಮುಂತಾಗಿ ತಯಾರಿಸಬಹುದು. ಅವುಗಳ ಪೈಕಿ ಕೆಲವೊಂದನ್ನು ತಯಾರಿಸುವ ವಿಧಾನವನ್ನು ಇಲ್ಲಿ ವಿವರಿಸಿದೆ.

. ಜಾಮ್

ಅಗತ್ಯವಿರುವ ಸಾಮಗ್ರಿಗಳು: ಹಣ್ಣು, ಸಕ್ಕರೆ, ಸಿಟ್ರಿಕ್‌ಆಮ್ಲ, ನೀರು, ಸ್ಟೇನ್‌ಲೆಸ್‌ ಸ್ಟೀಲ್‌ನ ಪಾತ್ರೆ, ತಟ್ಟೆ, ಉದ್ದ ಹಿಡಿಕೆಯ ಸೌಟು, ಟೇಬಲ್ ಚಮಚೆ, ಉರಿಯುತ್ತಿರುವ ಒಲೆ ಇಲ್ಲವೇ ಸ್ಟೌವ್‌ ಮುಂತಾದವು.

ತಯಾರಿಸುವ ವಿಧಾನ: ಚೆನ್ನಾಗಿರುವ ಹಣ್ಣುಗಳನ್ನು ಆರಿಸಿ ನೀರಿನಲ್ಲಿ ತೊಳೆದು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ, ಬೀಜವನ್ನು ಹೊರಹಾಕಿ, ಪಾತ್ರೆಗೆ ಸುರಿಯಬೇಕು. ಅವು ಮುಳುಗುವಷ್ಟೆ ನೀರನ್ನು ಸೇರಿಸಿ, ಸಣ್ಣ ಉರಿಯ ಮೇಲಿಟ್ಟು ಬೇಯಿಸಬೇಕು. ಆಗಾಗ್ಗೆ ಕಲಕುವುದನ್ನು ಮರೆಯಬಾರದು. ಹೋಳುಗಳು ಮತ್ತಗಾದಾಗ ಸಮಪ್ರಮಾಣದ ಸಕ್ಕರೆ ಸೇರಿಸಿ ಪುನಃ ಬೇಯಿಸಬೇಕು. ಹೀಗೆ ಬೇಯುತ್ತಿರುವ ಮಿಶ್ರಣಕ್ಕೆ ಸಿಟ್ರಿಕ್‌ ಆಮ್ಲವನ್ನು ಸೇರಿಸಿ, ಕಲಕಬೇಕು. ಅನಂತರ ಮಿಶ್ರಣದಲ್ಲಿ ಸ್ವಲ್ಪ ಭಾಗವನ್ನು ಚಮಚೆಯಿಂದ ಹೊರತೆಗೆದು, ಬೆರಳುಗಳಿಂದ ಮುಟ್ಟಿದಲ್ಲಿ ಅದು ಮಂದವಾದ ಹಾಗೂ ಅಂಟಂಟಾಗಿರುವ ಅನುಭವ ಸಿಗುತ್ತದೆ. ಆಗ ಪಾತ್ರೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಬೇಕು. ಬಿಸಿನೀರಿನಲ್ಲಿ ಅದ್ದಿದ ಗಾಜಿನ ಜಾಡಿಗಳಿಗೆ ಸುರಿದು, ಮುಚ್ಚಳ ಬಿಗಿದು ಭದ್ರಮಾಡಿಡಬೇಕು. ಈ ಪದಾರ್ಥವನ್ನು ಬ್ರೆಡ್‌, ಚಪಾತಿ, ರೊಟ್ಟಿ, ಪೂರಿ, ಬನ್‌ ಮುಂತಾಗಿ ಸೇರಿಸಿ ತಿಂದಲ್ಲಿ ಬಲು ರುಚಿಯಾಗಿರುತ್ತದೆ. ಅದು ಹೆಚ್ಚುಕಾಲ ಇರುತ್ತದೆ. ಚೀನಾದಲ್ಲಿ ವಾಯ್‌ವಿ ತಳಿಯ ಹಣ್ಣುಗಳನ್ನು ಜಾಮ್‌ ಮಾಡಲು ಬಳಸುತ್ತಾರೆ.

. ಜೆಲ್ಲಿ

ಅಗತ್ಯವಿರುವ ಸಾಮಗ್ರಿಗಳು: ಹಣ್ಣು, ಸಕ್ಕರೆ, ಸಿಟ್ರಿಕ್‌ಆಮ್ಲ, ನೀರು, ಪೆಕ್ಟಿನ್‌, ಸ್ಟೇನ್‌ಲೆಸ್‌ ಸ್ಟೀಲ್‌ನ ಪಾತ್ರೆ, ತಟ್ಟೆ, ಉದ್ದ ಹಿಡಿಕೆಯ ಸೌಟು, ಟೇಬಲ್ ಚಮಚೆ, ಚಾಕು, ಜೆಲ್ಲಿಚೀಲ ಅಥವಾ ತೆಳ್ಳನೆಯ ಶುಭ್ರವಿರುವ ಬಟ್ಟೆ, ಉರಿಯುತ್ತಿರುವ ಒಲೆ ಇಲ್ಲವೇ ಸ್ಟೌವ್‌ ಮುಂತಾಗಿ.

ತಯಾರಿಸುವ ವಿಧಾನ: ಚೆನ್ನಾಗಿರುವ ಹಣ್ಣುಗಳನ್ನು ಆರಿಸಿ ನೀರಿನಲ್ಲಿ ತೊಳೆಯಬೇಕು. ಅನಂತರ ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿ, ಬೀಜಗಳನ್ನು ಹೊರಹಾಕಿ, ಪಾತ್ರೆಯೊಳಕ್ಕೆ ಸುರಿದು ಅವು ಮುಳುಗುವಷ್ಟೆ ನೀರನ್ನು ಸೇರಿಸಿ, ಸಣ್ಣ ಉರಿಯ ಮೇಲಿಟ್ಟು ಬೇಯಿಸಬೇಕು. ಹೋಳುಗಳಿಗೆ ಸಿಟ್ರಿಕ್‌ ಆಮ್ಲದ ಹರಳಗಳನ್ನು ೧ ಕಿ.ಗ್ರಾಂ ಹಣ್ಣಿಗೆ ೧.೫ ರಿಂದ ೨ ಗ್ರಾಂ ಪ್ರಕಾರ ಸೇರಿಸಬೇಕು. ತಳ ಸೀಯದಂತೆ ಅಗಾಗ್ಗೆ ಕಲುಕುತ್ತಿರಬೇಕು. ಸುಮಾರು ೩೦ ನಿಮಿಷಗಳಲ್ಲಿ ಅವು ಬೆಂದು ಮೆತ್ತಗಾಗುತ್ತವೆ. ಒಂದೆರಡು ಹೋಳುಗಳನ್ನು ಹೊರತೆಗೆದು, ಬೆರಳುಗಳಲ್ಲಿ ಅದುಮಿದರೆ ಅವು ಅಂಟಂಟಾಗಿರುತ್ತವೆ. ಆಗ ಪಾತ್ರೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿಕೊಂಡು ಜೆಲ್ಲಿ ಚೀಲ ಇಲ್ಲವೇ ಬಟ್ಟೆ ಬಿಗಿದ ಮತ್ತೊಂದು ಪಾತ್ರೆಗೆ ಸುರಿಯಬೇಕು. ಎರಡನೇ ಪಾತ್ರೆಯಲ್ಲಿ ತಿಳಿ ರಸಮಾತ್ರ ಸಂಗ್ರಹಗೊಂಡಿರುತ್ತವೆ. ಮೊದಲಿನ ಪಾತ್ರೆಯಲ್ಲಿ ಸ್ವಲ್ಪವೇ ಸ್ವಲ್ಪ ನೀರನ್ನು ಚಿಮುಕಿಸಿ ಮತ್ತೆ ಜೆಲ್ಲಿ ಚೀಲಕ್ಕೆ ಇಲ್ಲವೇ ಬಟ್ಟೆಗೆ ಸುರಿದು. ಹಗುರವಾಗಿ ಹಿಂಡಿದಲ್ಲಿ ಮತ್ತಷ್ಷು ತಿಳಿ ಸಿಗುತ್ತದೆ.

ಪೆಕ್ಟಿನ್ಗಾಗಿ ಪರೀಕ್ಷೆ: ಹೀಗೆ ಸೋಸಿ ಸಂಗ್ರಹಿಸಿದ ತಿಳಿದ್ರವ ಪದಾರ್ಥದಲ್ಲಿ ಸಾಕಷ್ಟು ಪೆಕ್ಟಿನ್‌ ಇದಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಅದಕ್ಕಾಗಿ ಒಂದು ಚಮಚೆ ತಿಳಿರಸಕ್ಕೆ ಎರಡು ಚಮಚೆಗಳಷ್ಟು ಮದ್ಯಸಾರ ಸೇರಿಸಬೇಕು. ಅದು ಹೆಪ್ಪುಗಟ್ಟಿದಲ್ಲಿ ಆ ತಿಳಿರಸದಲ್ಲಿ ಸಾಕಷ್ಟು ಪೆಕ್ಟಿನ್‌ ಇದೆ ಎಂದು ಅದರ ಅರ್ಥ. ಒಂದು ವೇಳೆ ಅದು ನೀರು ನೀರಾಗಿ ಇದ್ದದ್ದೇ ಆದರೆ ಅದಕ್ಕೆ ಮಾರುಕಟ್ಟಯಲ್ಲಿ ದೊರೆಯುವ ಪೆಕ್ಟಿನ್‌ನ್ನು ಸೇರಿಸಬೇಕು.

ಸಕ್ಕರೆ ಬೆರಸಿ, ಕಾಯಿಸುವುದು: ಸೋಸಿದ ತಿಳಿರಸವನ್ನು ಅಳತೆಮಾಡಿಕೊಂಡು ಒಂದು ಬಟ್ಟಲು ತಿಳಿರಸಕ್ಕೆ ಮುಕ್ಕಾಲು ಬಟ್ಟಲು ಸಕ್ಕರೆ ಸೇರಿಸಿ. ಪುನಃ ಕಾಯಿಸಬೇಕು. ಹೀಗೆ ಮಿಶ್ರಣ ಕುದಿಯುತ್ತಿರುವಾಗ ನೊರೆಬರುತ್ತಿರುತ್ತದೆ. ಅದನ್ನು ಸೌಟಿನಿಂದ ತೆಗೆದು ಹಾಕಬೇಕು. ಸುಮಾರು ೩೦ ನಿಮಿಷಗಳಲ್ಲಿ ಮಿಶ್ರಣ ಮಂದಗೊಳ್ಳುತ್ತದೆ. ಸ್ವಲ್ಪ ಭಾಗವನ್ನು ಹೊರತೆಗೆದು ಮೇಲಿಂದ ಕೆಳಕ್ಕೆ ಇಳಿಬಿಡಬೇಕು. ಅದು ದಾರದಂತೆ ಇಲ್ಲವೇ ಹಾಳೆಯಂತೆ ಇಳಿಬಿದ್ದರೆ ಬೇಯಿಸುವ ಕೆಲಸ ಮುಗಿದಂತೆ. ಆಗ ಪಾತ್ರೆಯನ್ನು ಒಲೆಯ ಮೇಲಿಂದ ಕೆಳಕ್ಕಿಳಿಸಿಕೊಂಡು, ಬಿಸಿ ನೀರಿನಲ್ಲಿ ಅದ್ದಿದ ಗಾಜಿನ ಜಾಡಿಗಳಿಗೆ ಸುರಿದು, ತಣ್ಣಗಾದ ನಂತರ ಮುಚ್ಚಳ ಬಿಗಿದು, ಭದ್ರಪಡಿಸಬೇಕು. ಚೆನ್ನಾಗಿ ತಯಾರಾದ ಜೆಲ್ಲಿ ಪಾರದರ್ಶಕವಿದ್ದು ಸ್ಪಟಿಕದಂತೆ ಕಾಣುತ್ತದೆ. ಅದನ್ನು ಹರಿತವಿರುವ ಚಾಕುವಿನಿಂದ ಹೋಳುಮಾಡಿದಲ್ಲಿ ಅವು ಸಲೀಸಾಗಿ ಬೇರ್ಪಡುತ್ತವೆ ಮತ್ತು ತಟ್ಟೆಯಲ್ಲಿಟ್ಟು ಅಲುಗಾಡಿಸಿದರೆ ಅವು ಬಳುಕುತ್ತವೆ.

ಈ ಪದಾರ್ಥವನ್ನು ಬ್ರೆಡ್, ಬನ್‌, ಚಪಾತಿ, ಮುಂತಾಗಿ ಸೇರಿಸಿ ತಿಂದಲ್ಲಿ ಬಲು ರುಚಿಯಾಗಿರುತ್ತದೆ.

. ರಸ: ಚೆನ್ನಾಗಿರುವ ಹಣ್ಣುಗಳನ್ನು ಆರಿಸಿಕೊಂಡು ನೀರಿನಲ್ಲಿ ತೊಳೆದು ಹೋಳುಮಾಡಿ, ಬೀಜವನ್ನು ಹೊರಹಾಕಿದ ನಂತರ ಮಿಕ್ಸಿಯಂತ್ರದ ನೆರವಿನಿಂದ ರಸ ಹಿಂಡಬೇಕು. ಹಿಂಡಿದ ರಸವನ್ನು ಶುಭ್ರವಿರುವ ಬಟ್ಟೆ ಅಥವಾ ಜರಡಿಯ ಮೂಲಕ ಸೋಸಿ ಸಿಪ್ಪೆ, ನಾರು ಮುಂತಾಗಿ ಬೇರ್ಪಡಿಸಿ, ತಿಳಿರಸಕ್ಕೆ ಅಗತ್ಯವಿದ್ದಷ್ಟು ನೀರು ಮತ್ತು ಸಕ್ಕರೆ ಸೇರಿಸಿ ಕುಡಿಯಬಹುದು.

. ಪ್ರಿಸರ್ವ್:ಇದು ತಿನ್ನಲು ಬಲು ರುಚಿಯಾಗಿರುತ್ತದೆ. ಚೆನ್ನಾಗಿರುವ ಹಣ್ಣುಗಳನ್ನು ಆರಿಸಿ, ನೀರಿನಲ್ಲಿ ತೊಳೆದು, ಶುಭ್ರವಿರುವ ಬಟ್ಟೆಯಿಂದ ಒರೆಸಿ ಶೇ.೨ ಉಪ್ಪಿನ ದ್ರಾವಣದಲ್ಲಿ ನೆನೆಸಿಡಬೇಕು. ದ್ರಾವಣದ ಸಾಮರ್ಥ್ಯವನ್ನು ಪ್ರತಿದಿನ ಶೇ.೨ ರಂತೆ ನಾಲ್ಕು ದಿನಗಳವರೆಗೆ ಏರಿಸುತ್ತಾ ಹೋಗಬೇಕು. ಈ ಸಾಮರ್ಥ್ಯದ ದ್ರಾವಣದಲ್ಲಿ ಅವುಗಳನ್ನು ಒಂದು ವಾರದವರೆಗೆ ಹಾಕಿಟ್ಟು ಅನಂತರ ಹೊರತೆಗೆದು ನೀರಿಗೆ ಸುರಿದು ಉಪ್ಪಿನಂಶ ಹೋಗುವವರೆಗೆ ತೊಳೆಯಬೇಕು ಅದಾದ ಮೇಲೆ ಸ್ಟೇನ್ ಲೆಸ್ ಸ್ಟೀಲ್ ದಬ್ಬಳದಿಂದ ಹಣ್ಣುಗಳ ಮೇಲೆಲ್ಲಾ ಚುಚ್ಚಿ, ಶೇ.೨ರ ಸ್ಫಟಿಕದ ದ್ರಾವಣದಲ್ಲಿ ಅದ್ದಿ, ಪುನಃ ನೀರಿನಲ್ಲಿ ತೊಳೆಯಬೇಕು.ಅಗತ್ಯವೆನಿಸಿದರೆ ಸ್ವಲ್ಪ ಹುಳಿ ಬೆರೆಸಬೇಕಾಗತ್ತದೆ. ಇಷ್ಟೆಲ್ಲಾ ಆದನಂತರ ಅವುಗಳನ್ನು ಶೇ.೫೦ರ ಬಿಸಿ ಸಕ್ಕರೆ ಪಾಕಕ್ಕೆ ವರ್ಗಾಯಿಸಿ ಚೆನ್ನಾಗಿ ಹೊರಳಾಡಿಸಬೇಕು. ಹೀಗೆ ಪ್ರತಿದಿನ ನಾಲ್ಕೈದು ದಿನಗಳವರೆಗೆ ಈ ಕೆಲಸವನ್ನು ಮುಂದುವರಿಸಬೇಕು. ಅನಂತರ ಅವುಗಳ ಮೇಲೆ ಸಕ್ಕರೆ ಹರಳುಗಳನ್ನು ಉದುರಿಸಬೇಕು. ಈ ಹರಳುಗಳು ಅವುಗಳಲ್ಲಿನ ತೇವಾಂಶವನ್ನು ಹೀರಿಕೊಂಡು ಚೆನ್ನಾಗಿ ಅಂಟಿಕೊಳ್ಳುತ್ತವೆ. ಈ ರೀತಿಯಲ್ಲಿ ಸಿದ್ದಪಡಿಸಿದ ಪದಾರ್ಥಕ್ಕೆ ಶೇ. ೦.೦೨ ಅಥವಾ ೨೦೦ ಪಿಪಿಎಂ ಸೋಡಿಯಂ ಬೆಂಜೊಯೇಟ್ ಅನ್ನು ಸೇರಿಸಿದಲ್ಲಿ ಅದು ಹೆಚ್ಚು ಕಾಲ ಸುರಕ್ಷಿತವಾಗಿರಬಲ್ಲದು ಬಿಸಿನೀರಿನಲ್ಲಿ ಅದ್ದಿ ಒರಿಸಿದ ಗಾಜಿನ ಜಾಡಿಗಳಲ್ಲಿ ಹರಡಿ, ಬಿಸಿಪಾಕ ಸುರಿದು ಅದು ತಣ್ಣಗಾದನಂತರ ಮುಚ್ಚಳ ಬಿಗಿದು. ಭದ್ರಪಡಿಸಬೇಕು.

. ಉಪ್ಪಿನ ಕಾಯಿ: ಕಮರಾಕ್ಷಿ ಹಣ್ಣಿನ ಉಪ್ಪಿನಕಾಯಿ ಬಲು ರುಚಿಯಾಗಿರುತ್ತದೆ ಚೆನ್ನಾಗಿರುವ ಹಣ್ಣುಗಳನ್ನು ಆರಿಸಿಕೊಂಡು ನೀರಿನಲ್ಲಿ ತೊಳೆದು ಶುಭ್ರವಿರುವ ಬಟ್ಟೆಯಿಂದ ಒರೆಸಬೇಕು. ಹಣ್ಣು ಗಾತ್ರದಲ್ಲಿ ದೊಡ್ಡವಿದ್ದರೆ ಹೋಳುಗಳಾಗಿ ಕತ್ತರಿಸಬೇಕು ಸಣ್ಣ ಗಾತ್ರದ ಹಣ್ಣುಗಳನ್ನು ಹಾಗೆಯೇ ಬಳಸಬಹುದು. ಎರಡು ಕಿ.ಗ್ರಾಂ. ಹೋಳುಗಳಿಗೆ ೨.೫ ಕಿ.ಗ್ರಾಂನಷ್ಟು ಅಡುಗೆ ಉಪ್ಪನ್ನು ಸೇರಿಸಿ ಪಿಂಗಾಣಿ ಜಾಡಿಯಲ್ಲಿ ತುಂಬಿ, ಮುಚ್ಚುಳ ಹೊದಿಸಿ, ಮೇಲೆ ಬಟ್ಟೆ ಸುತ್ತಿ ಕಟ್ಟಬೇಕು. ಜಾಡಿಯನ್ನು ಬಿಸಿಲಿನಲ್ಲಿ ಇಡಬೇಕು. ನಾಲ್ಕೈದು ದಿನಗಳ ನಂತರ ಬಟ್ಟೆ ಬಿಚ್ಬಿ. ಮುಚ್ಚಳ ತಗೆದು ಸಂಗ್ರಹಗೊಂಡ ದ್ರಾವಣವನ್ನು ಹೊರಚೆಲ್ಲಿ, ಹದವಾಗಿ ಹುರಿದು ಕುಟ್ಟಿದ ಮೆಂತ್ಯದ ಪುಡಿ, ಸಾಸಿವೆಪುಡಿ, ಕೆಂಪು ಮೆಣಸಿನಕಾಯಿ ಪುಡಿ, ಅರಶಿನ, ಸೋಂಪು ಮುಂತಾಗಿ ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು. ಪುನಃ ಮುಚ್ಚುಳ ಬಿಗಿದು ಬಟ್ಟೆ ಸುತ್ತಿ ಬಿಸಿಲಿನಲ್ಲಿ ಒಂದುವಾರದವರೆಗೆ ಇಡಬೇಕು.

ಈ ಅವಧಿಯಲ್ಲಿ ಅವು ಸಂಬಾರ ವಸ್ತುಗಳೊಂದಿಗೆ ಚೆನ್ನಾಗಿ ಊರಿ, ಹದಗೊಳ್ಳುತ್ತವೆ. ಕೆಲವರು ರುಚಿಗಾಗಿ ಹಸಿಮೆಣಸಿನ ಕಾಯಿ, ಶುಂಠಿ ಮುಂತಾಗಿ ಸೇರಿಸಿ, ಮೇಲೆ ಕುದಿಸಿದ ಎಳ್ಳೆಣ್ಣೆಯನ್ನು ಸುರಿದು, ಮಿಶ್ರಮಾಡುವುದುಂಟು. ಯಾವುದೇ ಸಂದರ್ಭದಲ್ಲಿ  ಅದರೊಳಕ್ಕೆ ನೀರು ಸೇರದಂತೆ ಎಚ್ಚರವಹಿಸಬೇಕು. ಅದೇ ರೀತಿ ತೆರೆದಿಡಬಾರದು. ಹೊರತೆಗೆಯುವಾಗ ಕೈಯಿಂದ ಮುಟ್ಟದೆ ತೇವವಿರದ ಚಮಚೆ ಅಥವಾ ಸೌಟನ್ನು ಬಳಸಬೇಕು. ಈ ರೀತಿಯಲ್ಲಿ ತಯಾರಿಸಿದ ಪದಾರ್ಥ ಬಹುಕಾಲ ಇರುತ್ತದೆ.