ಮುಂಜಾವಿನ ತಿರುಗಾಟಕ್ಕೆ  ಹೋದಾಗ, ಗಿಡ ಮರಗಳೆಲ್ಲ ಸ್ತಬ್ಧ. ಗಾಳಿಯ ಹೆಸರೂ ಇಲ್ಲದೆ, ಮೇಲೇರುತ್ತಿದ್ದ ರವಿ ಕಿರಣಗಳ ಪ್ರಖರತೆಗೆ ಭೂಮಿ ಕಾಯ ತೊಡಗಿತ್ತು. ಅಲ್ಲಿಂದೇಳುತ್ತಿದ್ದ ಧೂಳಿನ ಕಣಗಳು ದೃಷ್ಟಿ ಮಸಕಾಗುವಂತೆ ಮಾಡುತ್ತಿತ್ತು. ದೂರದಲ್ಲೆಲ್ಲೋ ಕಣ್ಣಿಗೆ ತಂಪಾಗುವ ಹಸಿರು ಕಂಡೊಡನೆ ಮರುಭೂಮಿಯಲ್ಲಿ ಓಯಸಿಸ್ ಕಂಡಂತೆ ಆಗುತ್ತಿತ್ತು. ಅಂತಹುದರಲ್ಲಿ ಅಲ್ಲೊಂದು ಪುಟ್ಟ ತೋಟ ನೋಡಿದಾಗ ನಿಧಿ ಕಂಡಂತೆ ಆಗಿದ್ದಂತೂ ನಿಜ. ಅದೇ ಕಮಲಕ್ಕನ ತೋಟ.

ಪಟ್ಟ ಕೈತೋಟದ ಒಂದು ನೋಟ.

ಕಮಲಕ್ಕ ಮೂಲತ: ದಾವಣಗೆರೆಯವರು. ಕೃಷಿ ಕುಟುಂಬದಿಂದ ಬಂದವರು. ವಾರ್ಷಿಕ ಬೆಳೆಗಳನ್ನು ಬೆಳೆಯುವುದೇ ಜಾಸ್ತಿ. ತರಕಾರಿ ಬೆಳೆದು ಅಭ್ಯಾಸವಿಲ್ಲ. ಆದರೂ ಮನೆಯ ಪಕ್ಕದಲ್ಲಿ ಸ್ವಲ್ಪ ಜಾಗ ನೋಡಿದಾಗ ಕಮಲಕ್ಕನಿಗೆ ಸುಮ್ಮನಿರಲಾಗಲಿಲ್ಲ. ಅಲ್ಲದೆ ತರಕಾರಿ ತರಲು ಎರೆಡು ಕಿ.ಮೀ. ದೂರ ಹೋಗಬೇಕು. ಹಾಗೆಂದು ಹೇಳಿದ್ದಕ್ಕೆ ನಮ್ಮ ಮನೆಯವರು ‘ನಡೆಯಲಾಗದಿದ್ದರೆ ನೀನೇ ಬೆಳೆದುಕೊ’ ಎಂದು ಹಾಸ್ಯ ಮಾಡಿದರು. ಆಗ ಬೆಳೆದು ನೋಡಬೇಕು ಅನ್ನಿಸಿತು. ಇದು ಶುರುವಾದದ್ದು ಹೀಗೆ ಟೊಮೆಟೊ, ಬೀನ್ಸ್, ಬದನೆ, ಮೆಣಸಿನಕಾಯಿ, ಬೀಜಗಳನ್ನು ತಂದರು. ಸಸಿಮಡಿಗಳನ್ನು ಮಾಡಿ ಗಿಡ ನೆಟ್ಟರು ಇದ್ದ ಜಾಗ ೧೫ಅಡಿ ಉದ್ದ, ೧೨ಅಡಿ ಅಗಲ.  ಇದರಲ್ಲಿ ಐದಾರು ಪುಟ್ಟ ಪುಟ್ಟ ಮಡಿಗಳು. ಹರಿವೆ, ದಂಟು, ಸಬಸಿಗೆ, ಮೆಂತ್ಯ, ಕೊತ್ತಂಬರಿ ಸೊಪ್ಪುಗಳು. ಪಕ್ಕದಲ್ಲಿ ಎರೆಡು ಅಡಿ ಅಂತರದಲ್ಲಿ ಒಂದೊಂದು ಬದನೆ. ಅದರ ಹಿಂದಿನ ಸಾಲಿನಲ್ಲಿ ಮೆಣಸಿನಕಾಯಿ ಗಿಡಗಳು.  ಮೈತುಂಬ ಕಾಯಿಗಳನ್ನು ಹೊತ್ತ ಟೊಮೆಟೊ ಗಿಡಗಳು ಎರೆಡು ಅಡಿ ಎತ್ತರ ಬೆಳೆದು ನಿಂತಿವೆ. ಎಲ್ಲ ಒಂದೂವರೆ ತಿಂಗಳಲ್ಲಿ ಆಗಿರುವ ಕೆಲಸ.

ಬಳ್ಳಿಯಲ್ಲಿ ಹಾಗಲ.

ಬಳ್ಳಿಹಬ್ಬಿಸಲು ಮುರಿದ ಕೊಂಬೆಗಳನ್ನು ಆಧಾರ ಕೊಟ್ಟಿದ್ದು ಒಳ್ಳೆಯದೇ ಆಯಿತು. ನೇತಾಡುತ್ತಿರುವ ಹಾಗಲಕಾಯಿ ನೋಡಿದರೆ ಸಂತಸವಾಗುತ್ತೆ. ಆದರೆ  ಟೊಮೆಟೊ ಗಿಡಗಳು ಜಾಸ್ತಿಯಾಯಿತು. ಮುಂದಿನ ಬಾರಿಗೆ ಕಮ್ಮಿ ಹಾಕ್ತೀನಿ ಅಂತಾರೆ. ನೋಡಲು ಚೆನ್ನಾಗಿ ಕಾಣುತ್ತದೆಂದು ಹಾಕಿದ ಚೆಂಡು ಹೂವಿನ ಗಿಡಗಳು ರೋಗ ಬರದಂತೆ ಕಾಪಾಡಿವೆ. ಚೆಂಡು ಹೂವಿನ ಕಶಾಯ ಹಲವು ರೋಗಗಳಿಗೆ ಮದ್ದು ಎಂದು ತಿಳಿಸಿದಾಗ ‘ಹಾಗಿದ್ದರೆ ಮುಂದಿನ ಬಾರಿ ತುಂಬ ಗಿಡ ಹಾಕ್ತೀನಿ ಎಂದರು. ಗಂಜಲಕ್ಕೆ ನೀರು ಬೆರೆಸಿ ಸಿಂಪಡಿಸಿದರೆ, ಕೀಟಗಳು ದೂರ ಇರುತ್ತವೆ ಎಂದು ತಿಳಿದಾಗ ಕಮಲಕ್ಕ  ‘ಸಧ್ಯ ಅಂಗಡಿಯಿಂದ ಆ ಪೀಡೆನಾಶಕ ತರೋದು ತಪ್ಪಿತು. ಶುದ್ಧ ತರಕಾರಿ ನಮ್ಮದು’ ಅವರಿಗೂ ಹೇಳ್ತೀನಿ ಅಂದರು.

ಗಿಡದ ತುಂಬ ಟೊಮೆಟೊ.

ಅವರು ಎಂದರೆ ಪಕ್ಕದ ಮನೆಯವರು. ಕಮಲಕ್ಕನ ಗಿಡಗಳನ್ನು ನೋಡಿ ಪ್ರಭಾವಿತರಾಗಿ ತೋಟ ಕಟ್ಟಿದವರು. ಅವರ ಕೈತೋಟದ ಜಾಗ ಇನ್ನೂ ಕಮ್ಮಿ. ಚಿಕ್ಕದಾದ ಮಡಿಗಳನ್ನು ಮಾಡಿ ಮಧ್ಯದಲ್ಲಿ ಮಣ್ಣು ಏರಿಹಾಕಿ ಮೂಲಂಗಿ ಹಾಕಿದ್ದಾರೆ. ಮಧ್ಯದ ಮಡಿಗಳಲ್ಲಿ ಸೊಪ್ಪು ಬೆಳೆದಿದ್ದಾರೆ ತ್ರ್ರಿಕೋಣಾಕಾರದ ಈ ಕೈತೋಟದಲ್ಲಿ ಎಲ್ಲ ಇದೆ. ನೋಡಲು ಸಹ ಆಕರ್ಷಣೀಯವಾಗಿದೆ.

ತೋಟದ ಒಂದು ನೋಟ.

ಈ ರೀತಿ ಡಿಸೈನ್ ಮಾಡಿದ ಉದ್ದೇಶ ನೋಡಲು ಚೆನ್ನಾಗಿರುತ್ತೆ ಅಂತಾನಾ? ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ ಪ್ರಾಯಶ: ಎಲ್ಲರಿಗೂ ಮಾರ್ಗದರ್ಶಿಯಾದೀತು. “ ಏನು ಮಾಡಿದರೂ ನೋಡಲು ಚೆನ್ನಾಗಿರ ಬೇಕೆಂಬುದೇನೋ ನಿಜ. ಆದರೆ ಸೊಪ್ಪಿನ ಬೀಜಗಳು ಬಹು ಸಣವ್ಣು. ನೀರು ಹಾಕಿದಾಗ ಕೊಚ್ಚಿ ಹೋಗುತ್ತೆ. ಹಾಗಾಗಿ ಪಟ ಮಾಡಿಕೊಳ್ಳ ಬೇಕು. ಸುತ್ತ ಮಣ್ಣು ಏರಿಹಾಕಿದಾಗ, ಜಾಗ ಕಮ್ಮಿ ಆಗುತ್ತೆ. ಮೂಲಂಗಿ ಆಳಕ್ಕೆ ಹೋಗುವ ಗೆಡ್ಡೆಯಾದ್ದರಿಂದ ಆ ಏರುಮಡಿಯಲ್ಲಿ ನೆಟ್ಟೆವು. ಈಗ ಸೊಪ್ಪೂ ಸುರಕ್ಷಿತ, ಮೂಲಂಗಿಯೂ ಚೆನ್ನಾಗಿ ಬಂದಿದೆ. ಮುಂದಿನ ಬಾರಿ ಮೂಲಂಗಿಯ ಜಾಗದಲ್ಲಿ ಮೆಣಸಿನ ಕಾಯಿ ಹಾಕೋಣ ಅಂತಿದ್ದೀನಿ. ಅಂಚಿಗೆಲ್ಲ ಬದನೆ ಹಾಕಿದರೆ ಅದೊಂದು ಡಿಸೈನ್ ಆಗುತ್ತೆ.  ಪಕ್ಕದಲ್ಲಿರುವ ಮರಕ್ಕೆ ಸುತ್ತ ಕಡ್ಡಿ ನೆಟ್ಟು ಬಳ್ಳಿ ತರಕಾರಿ ಹಬ್ಬಿಸಿದರೆ ಹಸಿ ತರಕಾರಿ ತಕ್ಷಣಕ್ಕೆ, ಒಣಗಿದ್ದು ಭವಿಷ್ಯಕ್ಕೆ.

ಸೊಪ್ಪಿನ ಮಡಿಯ ವೈವಿಧ್ಯ

ಜಾಗವಿಲ್ಲ, ಸಮಯವಿಲ್ಲ, ಎಂದು ಗೊಣಗುವ ಜನರಿಗೆ ಕಮಲಕ್ಕನ ತೋಟ ಮಾರ್ಗದರ್ಶಿ. ಇರುವ ಅತ್ಯಲ್ಪ ಜಾಗದಲ್ಲೇ ಹತ್ತಾರು ತರಕಾರಿ ಬೆಳೆದು , ಮನೆಯ ಖರ್ಚು ಕಡಿಮೆ ಮಾಡಿಕೊಂಡು, ಹೆಚ್ಚಾದ ತರಕಾರಿಯಿಂದ ಸ್ವಲ್ಪ ಆದಾಯ ಗಳಿಸ ಬಹುದು ಎಂಬುದನ್ನು ಕಮಲಕ್ಕ ತೋರಿಸಿ ಕೊಟ್ಟಿದ್ದಾರೆ.

(ಚಿತ್ರಗಳು : ಎ.ಆರ್.ಎಸ್. ಶರ್ಮ)