“ನೀವೂ ಮಹಾವ್ಯಕ್ತಿಯಾಗಿರುವುದು ನಿಮ್ಮ ತಾಯಿಯವರ ಪ್ರಭಾವದಿಂದಲೇ ಇರಬಹುದೇ?”

-ಭಾರತದ ಪ್ರಧಾನಿ ಇಂದಿರಾ ಗಾಂಧಿಯವರನ್ನು, ಬ್ರಿಟಿಷ್‌ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ (ಇಂಗ್ಲೆಂಡಿನ ಆಕಾಶವಾಣಿ ಸಂಸ್ಥೆ) ಪ್ರತಿನಿಧಿ ಕೇಳಿದರು.

ಇಂದಿರಾ ಗಾಂಧಿ ಹೇಳಿದರು: “ಹೌದು, ನಮ್ಮ ತಾಯಿ ಕಮಲಾ ನೆಹರೂ ಅವರ ಮಹತ್ವಪೂರ್ಣವಾದ ಗುಣಗಳು ನನ್ನ ಮೇಲೆ ಮಾತ್ರವಲ್ಲ, ನಮ್ಮ ತಂದೆಯವರ ಜೀವನದಲ್ಲಿಯೂ ಬಹಳ ಪ್ರಭಾವ ಬೀರಿದ್ದವು.”

ಬಾಲ್ಯ

೧೮೯೯ರ ಆಗಸ್ಟ್ ಮೊದಲನೆಯ ದಿನ ಸಂಪ್ರದಾಯಸ್ಥ ಕಾಶ್ಮೀರಿ ಬ್ರಾಹ್ಮಣರ ಒಂದು ಮನೆತನದಲ್ಲಿ ಹುಟ್ಟಿದರು ಕಮಲಾ. ಗೌರವಸ್ಥ ವ್ಯಾಪಾರಿಗಳಾದ ಜವಾಹರಮಲ್ ಕೌಲ್ ಅವರ ತಂದೆ; ರಾಜ್‌ಪತೀ ದೇವಿ ಅವರ ತಾಯಿ. ಆಗಿನ ಕಾಲದ ಬಹಳ ಹಳೆಯ ಸಂಪ್ರದಾಯ ರೀತಿಯಲ್ಲಿ ಕಮಲಾ ಬಾಲ್ಯವನ್ನು ಕಳೆದರು. ಗಂಡುಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಷ್ಟೇ; ಹೆಣ್ಣುಮಕ್ಕಳಿಗೆ ಪಂಡಿತರು ಮನೆಗೇ ಬಂದು ಹಿಂದಿ, ಸಂಸ್ಕೃತ ಮುಂತಾದವುಗಳಲ್ಲಿ ಶಿಕ್ಷಣ ಕೊಡುತ್ತಿದ್ದರು. ಕಮಲಾಳ ವಿದ್ಯಭ್ಯಾಸವೂ ಈ ರೀತಿಯಲ್ಲೇ ನಡೆಯಿತು. ಆಗಿನ ಕಾಲದಲ್ಲಿ ಹೆಣ್ಣುಮಕ್ಕಳು ಆಟವಾಡಲು ಸಹ ಹೊರಗೆ ಹೋಗುವಂತಿರಲಿಲ್ಲ.ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೆಣ್ಣುಮಕ್ಕಳು ಪಲ್ಲಕ್ಕಿಯಲ್ಲಿ ಹೋಗಬೇಕಾಯಿತು. ಅದರಲ್ಲಿ ಕುಳಿತವರು ಕಾಣದ ಹಾಗೆ ಅದನ್ನು ನಾಲ್ಕೂ ಕಡೆಯಿಂದ ಪರದೆಯಿಂದ ಮುಚ್ಚಿಬಿಟ್ಟಿರುತ್ತಿದ್ದರು.

ಆದರೆ ಕಮಲಾ ಅವರಿದ್ದ ಹಳೆಯ ಕಾಲದ ಮನೆಯಲ್ಲಿ ದೊಡ್ಡ ಅಂಗಳವಿದ್ದದ್ದರಿಂದ ಕಮಲಾ ಅಂಗಳದಲ್ಲಿಯೇ ಜೂಟಾಟ, ಕುಂಟೆಬಿಲ್ಲೆ ಎಲ್ಲವನ್ನೂ ಆಡುತ್ತಿದ್ದಳು. ಆ ಅಂಗಳವೇ ಅವಳ ಪ್ರಪಂಚವಾಯಿತು. ಒಂದು ಸಲ ಒಟ್ಟು ಪರಿವಾರವು ಜಯಪುರಕ್ಕೆ, ನೆಂಟರ ಮನೆಗೆ ಕೆಲವು ತಿಂಗಳು ಹೋಗಬೇಕಾಯಿತು. ಆ ನೆಂಟರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಬಹು ಕಟ್ಟುನಿಟ್ಟು. ಒಂಬತ್ತು ವರ್ಷದ ಕಮಲಾ, ಹೆಂಗಸರಿಗೆಂದು ಇರುತ್ತಿದ್ದ ಒಳಗಿನ ಕೊಠಡಿಗಳಲ್ಲೇ ಇರಬೇಕಾಗಿತ್ತು. ಪಾಪ, ಗುಹೆಯಲ್ಲಿ ಕೂಡಿಹಾಕಿದ ಹಾಗಾಯಿತು ಹುಡುಗಿಗೆ. ಇದನ್ನು ನೋಡಿ ಅವರ ತಾಯಿಗೂ ಬೇಸರ. ಕಮಲಾಗೆ ಹುಡುಗನ ಉಡುಪು ಹಾಕಿಬಿಟ್ಟು ಅಣ್ಣ ತಮ್ಮಂದಿರೊಡನೆ ಕುದುರೆ ಸವಾರರಿಗೆ ಕಳಿಸಿಬಿಡುತ್ತಿದ್ದರು. ಮನೆಗೆ ಬಂದ ಕೂಡಲೇ ಪುನಃ ಹುಡುಗಿಯ ಉಡುಪು!

ಜವಾಹರಲಾಲರ ವಧು

ಜವಾಹರಲಾಲ್ ನೆಹರೂ ಅವರ ತಂದೆ ಮೋತಿಲಾಲ್ ನೆಹರೂ ಅಲಹಾಬಾದಿನಲ್ಲಿ ಸುಪ್ರಸಿದ್ಧ ವಕೀಲರು ಮತ್ತು ಅಪಾರ ಶ್ರೀಮಂತರು. ಅವರ ಮೆನ ’ಆನಂದ ಭವನ’ ಅರಮನೆಯ ಹಾಗಿತ್ತು. ಬಗೆಬಗೆಯ ಪುಷ್ಪಗಳಿಂದ ತುಂಬಿದ್ದ ಸುಂದರ ಉದ್ಯಾನವನ, ವಿಧವಿಧವಾದಹಣ್ಣಿನ ಮರಗಳು, ನೀರಿನ ಕಾರಂಜಿಗಳು, ಈಜುವ ಕೊಳಗಳು, ಅದರ ಸುತ್ತ ಅಲ್ಲಲ್ಲಿ ನಿಲ್ಲಿಸಿದ್ದ ಸುಂದರ ಕಲಾಪ್ರತಿಮೆಗಳು, ಟೆನಿಸ್ ಕೋರ್ಟುಗಳು, ಎಲ್ಲ ಇದ್ದ ಭವ್ಯ ಭವನ, ಪಾಶ್ಚಾತ್ಯ ರೀತಿಗಳನ್ನು ಬಹಳವಾಗಿ ಮೆಚ್ಚಿ ಅದನ್ನೇ ಅನುಕರಣೆ ಮಾಡುತ್ತಿದ್ದ ಮೋತಿಲಾಲ್ ನೆಹರೂ, ಮಗನಿಗೆ ಪಾಶ್ಚಾತ್ಯ ರೀತಿಯಲ್ಲಿಯೇ ಪಾಲನೆಪೋಷಣೆ ಮಾಡಿದರು. ನೆಹರೂರವರ ಶಿಕ್ಷಣಕ್ಕಾಗಿ ಆಂಗ್ಲ ಅಧ್ಯಾಪಕರನ್ನು ನೇಮಿಸಿದ್ದರು. ಲೆಕ್ಕವಿಲ್ಲದಷ್ಟು ಆಳುಕಾಳುಗಳು, ಆಯಾ, ಬಟ್ಲರುಗಳು, ಕಾರುಗಳು, ಕೋಚ್ ಗಾಡಿಗಳು, ನಾಯಿಗಳು, ಕುದುರೆಗಳು, ಮಕ್ಕಳಿಗಾಗಿ ಕುದುರೆ ಮರಿಗಳು ಮತ್ತು ಐಶ್ವರ್ಯವು ಕೊಳ್ಳಬಹುದಾದ ಎಲ್ಲಾ ರೀತಿಯ ಸೌಲಭ್ಯಗಳನ್ನೂ ಹೊಂದಿ, ಸುಖವೈಭವಗಳಿಂದ ರಾಜಕುಮಾರರಂತೆ ಬೆಳೆದರು ನೆಹರೂ, ಹದಿನೈದು ವರ್ಷದ ಹುಡುಗನಿರುವಾಗಲೇ ಇಂಗ್ಲೆಂಡಿಗೆ ತೆರೆಳಿ ವಿದ್ಯಾಭ್ಯಾಸ ಮುಗಿಸು ೧೯೧೨ರಲ್ಲಿ ಭಾರತಕ್ಕೆ ಹಿಂತಿರುಗಿದರು.

ಜವಾಹರಲಾಲ್‌ರ ತಂದೆತಾಯಿಗಳು ಮಗನಿಗೆ ಅನುರೂಪಳಾದ ವಧುವಿಗೋಸ್ಕರವಾಗಿ ಬಹಳ ದಿನಗಳಿಂದ ಹುಡುಕುತ್ತಿದ್ದರೂ ಅವರ ಮನಸ್ಸಿಗೆ ಯಾರೂ ಒಪ್ಪಿಗೆಯಾಗಿರಲೇ ಇಲ್ಲ. ಒಮ್ಮೆ, ಕಮಲಾ ಅವರ ತಾತ ಪಂಡಿತ್ ಕಿಷನ್‌ಲಾಲ್ ಮೊಮ್ಮಗಳನ್ನು ಕರೆದುಕೊಂಡು ಒಂದು ಮದುವೆಯ ಮನೆಗೆ ಹೋಗಿದ್ದರು. ಕಮಲಾಅವರಿಗೆ ಹದಿಮೂರು ವರ್ಷ. ಮುದ್ದು ಹುಡುಗಿ, ಮೃದು ಸ್ವಭಾವದ ಹುಡುಗಿ ಕಮಲಾಳನ್ನು ನೋಡುತ್ತಲೇ ಜವಾಹರರ ತಂದೆತಾಯಿ ಮನಸೋತರು. ಸಂತೋಷ ಭರತರಾಗಿ ಅವಳನ್ನು ವಧುವಾಗಿ ಆರಿಸಿದರು.

ಮದುವೆಗಿನ್ನೂ ನಾಲ್ಕು ವರ್ಷವಿತ್ತು. ಮೋತಿಲಾಲ್ ನೆಹರೂ, ಮಿಸ್ ಹೂಪರ್ ಎಂಬ ಆಂಗ್ಲ ಶಿಕ್ಷಕಿಯನ್ನು ಕಮಲೆಯ ಮನೆಗೆ ಕಳಿಸಿ, ಅವರಿಗೆ ಇಂಗ್ಲಿಷ್ ಭಾಷೆ ಯಲ್ಲಿಯೂ, ರೀತಿ ನೀತಿ ವ್ಯವಹಾರಗಳ ವಿಷಯದಲ್ಲಿಯೂ ಶಿಕ್ಷಣ ಕೊಡಿಸಿದರು. ಮದುವೆಯು ಸಮೀಪಿಸುತ್ತಿದ್ದ ಹಾಗೇ ವಧುವಿಗೆ ವಜ್ರ ವೈಢೂರ‍್ಯಗಳ ಒಡವೆಗಳನ್ನು ಮಾಡಿಸಿದರು. ದೆಹಲಿ, ಮುಂಬಯಿಗಳಿಂದ ಹೆಸರುವಾಸಿಯಾದ ಅಕ್ಕಸಾಲಿಗರನ್ನು ಕರೆಸಿ, ಆನಂದಭವನದಲ್ಲಿ ಎದುರಿಗೆ ನಿಂತು ಮಾಡಿಸಿದರು ಮೋತಿಲಾಲ್ ನೆಹರೂ. ಮದುವೆಯ ದಿನ ಕಮಲಾ ಉಡಬೇಕಾಗಿದ್ದ ಸೀರೆಯ ಮೇಲೆ ನಿಜವಾದ ಮುತ್ತುಗಳಿಂದ ಚಿತ್ತಾರ ಹೆಣೆಯಲ್ಪಟ್ಟಿತ್ತು. ಈ ಕೆಲಸವನ್ನು ಮಾಡಲು ಬೇರೆ ಊರುಗಳಿಂದ ಕರೆಸಿದ್ದ ಕಸೂತಿಗಾರರಿಗೆ ಕೆಲವು ತಿಂಗಳುಗಳು ಹಿಡಿಯಿತು.

ನವ ವಧೂವರರು-ಜವಾಹರ ಲಾಲ್ ನೆಹರೂ ಮತ್ತು ಕಮಲಾ ನೆಹರೂ.

೧೯೧೬ರ ಫೆಬ್ರವರಿ ಎಂಟರಂದು ವಸಂತ ಪಂಚಮಿಯ ದಿನ, ಕಮಲಾ-ಜವಾಹರ್ ಇವರ ವಿವಹಾವು ದೆಹಲಿಯಲ್ಲಿ ಅದುವರೆಗೂ ಯಾರೂ ನೋಡದ ರೀತಿಯ ವಿಜೃಂಭಣೆಯಿಂದ ಹತ್ತು ದಿನಗಳವರೆಗೆ ನಡೆಯಿತು. ಅಲಹಾಬಾದಿನಿಂದ ದೆಹಲಿಗೆ ವರನ ಕಡೆಯವರು ವಿಶೇಷ ರೈಲಿನಲ್ಲಿ ಬಂದರಂತೆ!

ಕಮಲಾ,ಆನಂದ ಭವನಕ್ಕೆಕಾಲಿಡುತ್ತಿದ್ದ ಹಾಗೆಯೇ ಅಲ್ಲಿನ ಪಾಶ್ಚಾತ್ಯ ರೀತಿಯ ವೈಭವ ಜೀವನಕ್ಕೂ ಹಳೆಯ ಸಂಪ್ರದಾಯದ ತಮ್ಮಸರಳ ರೀತಿಯ ಜೀವನಕ್ಕೂ ಅಜಗಜಾಂತರವನ್ನು ಕಂಡು ತಬ್ಬಿಬ್ಬಾದರು. ಆನಂದಭವನಕ್ಕೆ ಐರೋಪ್ಯ ಅತಿಥಿಗಳು ಅನೇಕರು ಬರುತ್ತಿದ್ದರು. ಕಾಶ್ಮೀರದ ಸಂಪ್ರದಾಯಸ್ಥ ಮನೆಯಿಂದ ಬಂದ ಕಮಲಾ ಸತ್ಕಾರಕೂಟಗಳಲ್ಲಿ ಭಾಗವಹಿಸಿ, ಆಂಗ್ಲರಂತೆಯೆ ನಡೆದುಕೊಳ್ಳಬೇಕಾಗುತ್ತಿತ್ತು. ಆಗ ಆಕೆಗೆ ದಿಕ್ಕುತೋರದ ಹಾಗಾಗುತ್ತಿತ್ತು. ಆದರೆ ಹದಿನೇಳು ವರ್ಷದ ಆ ಮುಗ್ಧ ಹುಡುಗಿಯು ಅತ್ತೆಮನೆಗೆ ಬರುತ್ತಿದ್ದ ಹಾಗೆ ಎಲ್ಲರ ಪ್ರೀತಿಯನ್ನೂ ಸಂಪಾದಿಸಿಬಿಟ್ಟಿದ್ದಳು. ಎಲ್ಲರೂ ಕಮಲಾಳಿಗೆ ಸಹಾಯ ಮಾಡಿದರು. ಚುರುಕು ಬುದ್ಧಿಯ ಕಮಲಾ ಅಲ್ಲಿನ ಹೊಸ ಸಂಪ್ರದಾಯಗಳನ್ನೆಲ್ಲಾ ಕೆಲವೇ ದಿನಗಳಲ್ಲಿ ಕಲಿತರು. ಮನೆಯ ಸೊಸೆಯಾಗಿ ತಮ್ಮ ಜವಾಬ್ದಾರಿಯನ್ನೆಲ್ಲ ಚೆನ್ನಾಗಿ ನಿರ್ವಹಿಸಿದರು.

ವ್ಯವಹಾರಕ್ಕಾಗಿ ಆಧುನಿಕತೆಯನ್ನು ಕಲಿತರೂ ಸಹ ಅವರ ಸ್ವಭಾವದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಅವರ ಸಹಜತೆ ಮತ್ತು ಸರಳತೆಗೆ ಯಾವ ಕುಂದೂ ಉಂಟಾಗಲಿಲ್ಲ. ಎಲ್ಲರೊಡನೆಯೂ ಹೊಂದಿಕೊಂಡು ಸದಾ ನಗುನಗುತ್ತ ಇರುತ್ತಿದ್ದ ಕಮಲಾ ಎಲ್ಲರಿಗೂ ಬೇಕಾದವರಾದರು.

ಇಂದಿರಾ ಜನನ

ಶ್ರೀಮಂತಿಕೆಯ ಜೀವನ. ರಾಜರನ್ನು ಮೀರಿಸುವ ವೈಭವ. ಜವಾಹರರಂತಹ ಗಂಡ. ಮಮತೆಯಿಂದ ನೋಡಿಕೊಳ್ಳುವ ಅತ್ತೆ ಮಾವ. ಅತ್ತೆಮನೆಯಲ್ಲಿ ಕಮಲಾ ಅವರ ಜೀವನ ಸಂತೋಷವಾಗಿತ್ತು.

೧೯೧೭ರ ನವೆಂಬರ್ ಹತ್ತೊಂಬತ್ತರಂದು ಕಮಲಾ ಹೆಣ್ಣು ಮಗುವನ್ನು ಹೆತ್ತರು. ಆನಂದಭವನದಲ್ಲಿ ಸಂಭ್ರಮ ಹೇಳತೀರದು.

ಹಳೆಯ ಕಾಲದವರಾದ ಅತ್ತೆ ಸ್ವರೂಪರಾಣಿ “ಹೆಣ್ಣು ಮಗುವೇ? ಗಂಡುಮಗುವಾಗಿದ್ದರೆ ಚೆನ್ನಾಗಿತ್ತು” ಎಂದರು. ಈ ಮಾತುಗಳನ್ನು ಕೇಳಿದ ಮೋತಿಲಾಲ್ ನೆಹರೂ, “ನೀನು ಹಾಗೆಲ್ಲಾ ಮಾತನಾಡಬಾರದು. ಹೆಣ್ಣುಮಗು

ಆ ಹೆಣ್ಣುಮಗುವೇ ಮುಂದೆ ಭಾರತದೇಶಕ್ಕೆ ಪ್ರಧಾನಿಯಾದ ಇಂದಿರಾ. (ಮುಂದೆ ಇವರು ಫಿರೋಜ್‌ಗಾಂಧಿ ಎನ್ನುವವರನ್ನು ಮದುವೆಯಾದುದರಿಂದ, ಇಂದಿರಾಗಾಂಧಿ ಎಂದು ಹೆಸರಾದರು)

ಬಾಳಿನಲ್ಲಿ ಹೊಸ ಅಧ್ಯಾಯ

ಇದ್ದಕ್ಕಿದ್ದಂತೆ ನೆಹರೂ ಮನೆತನದ ಬಾಳಿನ ರೀತಿಯೇ ಬದಲಾಗಿ ಹೋಯಿತು. ಐಶ್ವರ್ಯ, ಸುಖ, ಒಟ್ಟಿಗೆ ಸಂಸಾರ- ಎಲ್ಲ ಅಲ್ಲೋಲಕಲ್ಲೋಲವಾಯಿತು. ನೆಹರೂಗಳ ಪ್ರಪಂಚಕ್ಕೆ ಗಾಂಧಿ ಕಾಲಿಟ್ಟರು. ಗುಲಾಮಗಿರಿಯಲ್ಲಿದ್ದ ಭಾರತದ ಕರೆ ಮೋತಿಲಾಲ್- ಜವಾಹರಲಾಲರ ಕಿವಿಗೆ ಕೇಳಿತು.

ಆಗ ನಮ್ಮ ದೇಶದ ಬ್ರಿಟಿಷರ ದಬ್ಬಾಲಿಕೆಗೆ ಒಳಗಾಗಿತ್ತು. ಭಾರತೀಯರು ಅವಮಾನಗಳನ್ನು ಸಹಿಸಬೇಕಾಗಿತ್ತು. ಸ್ವಾತಂತ್ರ್ಯ ಬೇಕು ಎಂದು ಕೇಳುವುದೇ ದೊಡ್ಡ ಅಪರಾಧವಾಗಿತ್ತು.

ಮೊದಲನೆಯ ಮಹಾಯುದ್ಧದಲ್ಲಿ ಭಾರತೀಯರು ಬ್ರಿಟಿಷರಿಗೆ ಸಹಾಯ ಮಾಡಿದ್ದರೂ, ಯುದ್ಧವು ಮುಗಿದ ಬಳಿಕ ಬ್ರಿಟಿಷರು ನಮ್ಮವರಿಗಿದ್ದ ಅಲ್ಪ ಸ್ವಲ್ಪ ಸ್ವಾತಂತ್ರ್ಯವನ್ನೂ ಕಸಿದುಕೊಂಡುಬಿಟ್ಟರು. ಗಾಂಧೀಜಿ ’ಅಸಹಕಾರ ಚಳವಳಿ’ಯನ್ನು ಆರಂಭಿಸಿದರು. ಆ ಸಂದರ್ಭದಲ್ಲಿ ಮೊದಲ ಬಾರಿಗೆ ಮಹಾತ್ಮಾ ಗಾಂಧಿ-ಜವಾಹರ್‌ಲಾಲ್ ನೆಹರೂ ಇವರಿಬ್ಬರ ಭೇಟಿಯಾಯಿತು. ಪೂಜ್ಯ ಬಾಪೂಜಿಯವರನ್ನು ಕಂಡ ದಿನವೇ, ಅವರ ಹೆಜ್ಜೆಯನ್ನು ಅನುಸರಿಸಿ ನಡೆಯುವುದಾಗಿ ಪಣತೊಟ್ಟರು ನೆಹರೂ.

ಬ್ರಿಟಿಷ್ ಸರ್ಕಾರದ ದಬ್ಬಾಳಿಕೆ ಹೆಚ್ಚಿತು. ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಸಭೆ ಸೇರಿದ್ದ ನೂರಾರು ಮಂದಿ ನಿರಪರಾಧಿಗಳನ್ನು, ಹೆಂಗಸರು ಮಕ್ಕಳನ್ನು ಅನಿರೀಕ್ಷಿತವಾಗಿ ಸುತ್ತುಗಟ್ಟಿ ಗುಂಡಿನೇಟಿನಿಂದ ಕೊಂದು ಹಾಕಿದರು! ಈ ಭೀಕರ ಕೊಲೆಯ ಪ್ರತಿಕ್ರಿಯೆಯು ಕಾಡುಕಿಚ್ಚನಂತೆ ವ್ಯಾಪಿಸಿತು. ಭಾರತದ ತರುಣರ ರಕ್ತವು ದೇಶಭಕ್ತಿಯಿಂದ ಕುದಿಯತೊಡಗಿತು. ಇವರಲ್ಲಿ ಒಬ್ಬರು ನೆಹರೂ.

ಹೀಗೆ ಕಮಲಾ ನೆಹರೂ ಅವರ ಪ್ರಶಾಂತ ಜೀವನಕ್ಕೆ ಇದ್ದಕ್ಕಿದ್ದ ಹಾಗೆ ಬಿರುಗಾಳಿ ಹೊಡೆಯಿತು. ಕ್ರೂರವಾದ ಏರುಪೇರುಗಳಾದವು. ಆದರೆ ಕಮಲಾ ಧೈರ್ಯಗುಂದಲಿಲ್ಲ. ಚಿಕ್ಕಹುಡುಗಿಯಾಗಿದ್ದರೂ ಧೈರ್ಯದಿಂದ ಕಷ್ಟಗಳನ್ನೆಲ್ಲಾ ತಡೆದುಕೊಂಡರು.

ಐಶ್ವರ್ಯ ಹೋಯಿತು. ಮನೆಯ ಆಳುಕಾಳುಗಳನ್ನು ಬಿಡಿಸಬೇಕಾಯಿತು. ಮಾವ, ಗಂಡ ಯಾವಾ ಸೆರೆಮನೆ ಸೇರುವರೋ, ಎಷ್ಟು ವರ್ಷ ಅಲ್ಲಿ ಕೊಳೆಯುವರೋ ಹೆಳುವಂತಿರಲಿಲ್ಲ. ಸೆರೆಮನೆಯಲ್ಲಿಲ್ಲದಿದ್ದರೂ ಊರೂರು

ಸೇವಕರು. ಗಂಡನ ಮುಖ ನೋಡುವುದು, ಎರಡು ಮಾತನಾಡುವುದು ವಿರಳವಾಗಿಹೋಯಿತು. ೧೯೨೧ರ ಡಿಸೆಂಬರಿನಿಂದ ೧೯೨೩ರ ಮಾರ್ಚ್‌‌ವರೆಗೆ ಹದಿನಾರು  ತಿಂಗಳಲ್ಲಿ ಜವಾಹರರು ಮುನ್ನೂರೈವತ್ತು ದಿನ (ಹತ್ತಿರಹತ್ತಿರ ಒಂದು ವರ್ಷ!) ಸೆರೆಮನೆಯಲ್ಲೆ ಇದ್ದರು. ಪತಿಯು ಕೈಗೊಂಡ ಅಮೋಘವಾದ ಕಾರ‍್ಯದ ಮುಂದೆ ತಮ್ಮ ಸ್ವಂತ ಸುಖವು ತೀರಾ ಅಲ್ಪವೆಂದು ಕಮಲಾ ನೆಹರೂ ಭಾವನೆ. ಕಷ್ಟದ ಜೀವನ ಬಂದಿತೆಂದು ಬೇಸರಿಸಲಿಲ್ಲ, ದುಃಖಿಸಲಿಲ್ಲ. ಗಂಡನಿಗೆ ತಾವೇ ಬೆಂಬಲವಾದರು. ಎಲ್ಲ ಖರ್ಚುಗಳನ್ನೂ ಕಡಿಮೆ ಮಾಡಿದರು. ಇಪ್ಪತ್ತಮೂರು ಇಪ್ಪತ್ತನಾಲ್ಕರ ಯುವತಿಯೇ ಬೆಲೆಬಾಳುವ ಉಡುಪನ್ನು ಬಿಟ್ಟು ಸರಳವಾಗಿ ಉಡುಪು ಧರಿಸಲು ಪ್ರಾರಂಭಿಸಿದರು. ಸಂಸಾರಕ್ಕಾಗಿ ತಮ್ಮ ಒಡವೆಗಳನ್ನೆ ಮಾರಿದರು.

ಕಮಲಾ ಅವರ ಈಮನೋಬಲವು ನೆಹರೂ ಅವರಿಗೆ ದೊಡ್ಡಬೆಂಬಲವಾಯಿತು, ಸ್ಪೂರ್ತಿಯಾಯಿತು. ಒಂದು ಸಲ ಅವರು, ಮಗಳು ಇಂದಿರಾಳಿಗೆ, “ಅಂತಹ ಅಮ್ಮನನ್ನು ಪಡೆದ ನೀನೆಷ್ಟು ಭಾಗ್ಯಶಾಲಿ! ಏನೇ ಬರಲಿ, ಧೈರ್ಯ ತುಂಬಲು ನಿನ್ನ ಅಮ್ಮ ಯಾವಾಗಲೂ ಸಿದ್ಧ!” ಎಂದು ಪತ್ರ ಬರೆದರು.

ಜವಾಹರಲಾಲ್ ನೆಹರೂ ಅವರು ಜೈಲಿಗೆ ಹೊರಟುಹೋದಾಗ ಅವರ ಕಾರ್ಯಗಳನ್ನು ಮುಂದುವರಿಸುವ ಜವಾಬ್ಜರಿಯನ್ನು ಮೇಲೆ ಹೊತ್ತರು ಕಮಲಾ. ಚಿಕ್ಕ ವಯಸ್ಸು. ತಂದೆ-ತಾಯಿ, ಅತ್ತೆ- ಮಾವ, ಗಂಡ ಇವರ ಪ್ರೀತಿಯ ನೆರಳಿನಲ್ಲೆ ಬೆಳೆದು ಬಾಳಿದ ಮೃದು ಸ್ವಭಾವದ ಹುಡುಗಿ. ಅನುಭವವಿಲ್ಲ, ಆರೋಗ್ಯವಿಲ್ಲ. ಆದರೂ ಹೃದಯದಲ್ಲಿ ಉಕ್ಕಿದ ದೇಶ ಪ್ರೇಮವೇ ಅವರಿಗೆ ದಾರಿ ತೋರಿಸಿತು. ದೇಶಕ್ಕಾಗಿ ಬಿಸಿಲೆನ್ನದೆ, ಛಳಿ ಎನ್ನದೆ ಶ್ರಮಿಸಿದರು. ಛಳಿಗಾಲದಲ್ಲಿ ಬೆಳಿಗ್ಗೆ ಐದು ಘಂಟೆಗೆಲ್ಲಾ ಎದ್ದು ಸ್ವಯಂ ಸೇವಕಿಯರಿಗೆ ವ್ಯಾಯಾಮ ಮಾಡಿಸುವುದು, ಕಾಲ್ನಡೆ ಮಾಡಿಸುವುದು, ಆಯಾ ದಿನದ ಕಾರ್ಯಕ್ರಮಗಳನ್ನು ಒಂದು ಶಿಸ್ತಿನಿಂದ ವ್ಯವಸ್ಥೆಗೊಳಿಸುವುದು, ಮಹಿಳಾ ಸಂಘಗಳನ್ನು ಕೂಡಿಸಿ, ಅವರಿಗೆ ವರ್ತಮಾನಗಳನ್ನು ತಿಳಿಯಹೇಳುವುದು, ಅಲಹಾಬಾದಿನ ಬೇಸಿಗೆಯ ಆ ಸುಡುಬಿಸಿಲಿನಲ್ಲಿ ಬೆಳಗಿನಿಂದ ಸಂಜೆಯವರೆಗೂ ಧೂಳು ತುಂಬಿದ ರಸ್ತೆಗಳಲ್ಲಿ, ಸ್ವಯಂಸೇವಕಿಯರೊಡನೆ ವಿದೇಶಿ ಮಾಲುಗಳು, ವಿದೇಶಿ ವಸ್ತ್ರಗಳನ್ನು ಮಾರುವ ಅಂಗಡಿಗಳೆದುರು ಸತ್ಯಾಗ್ರಹ ನಡೆಸುವುದು-ಇಂತಹ ಪ್ರಯಾಸಕರ ಕಾರ್ಯಗಳನ್ನೂ ಕೂಡ ಅಸಾಧಾರಣ ದಕ್ಷತೆಯಿಂದ ನಿರ್ವಹಿಸುತ್ತಿದ್ದರು ಕಮಲಾ.

ಆಗ ನೈನಿ ಜೈಲಿನಲ್ಲಿದ್ದ ಜವಾಹರಲಾಲ್ ನೆಹರೂ ಅವರಿಗೆ ಈ ಸುದ್ದಿ ಮುಟ್ಟಿದಾಗ ಅವರಿಗಾದ ಆನಂದ ಅಷ್ಟಿಷ್ಟಲ್ಲ. ಗಟ್ಟಿಯಾಗಿ ಮಾತನ್ನು ಸಹ ಆಡದ, ಸದಾ ಸೌಮ್ಯವಾಗಿರುತ್ತಿದ್ದ ಹೆಂಡತಿಯಲ್ಲಿ ಇಂತಹ ದೇಶಭಕ್ತಿಯ ಕಿಡಿಯು ನೆಹರೂ ಅವರಿಗೊಂದು ಅನಿರೀಕ್ಷಿತ ವಿಸ್ಮಯ!

ಕೇವಲ ದಕ್ಷತೆಯೊಂದೇ ಅಲ್ಲ. ಯಾವ ಕೆಲಸವನ್ನು ಮಾಡಿದರೂ ಮಾನವಹಿತ ದೃಷ್ಟಿಯಿಂದಲೇ ಮಾಡುತ್ತಿದ್ದರು ಕಮಲಾ.ಅವರಲ್ಲಿ ಮಾತಿನ ಆಡಂಬರ ಇರಲಿಲ್ಲ. ಇತರರ ಕಷ್ಟಗಳನ್ನು ಚೆನ್ನಾಗಿ ಅರಿತುಕೊಂಡು, ಸಹಾಯವನ್ನು ಮಾಡುತ್ತಿದ್ದರು.ಇದರಿಂದ ಎಲ್ಲರೂ ಕಮಲಾ ಅವರನ್ನು ಪ್ರೀತಿಸುತ್ತಿದ್ದರು.

ಒಂದು ಸಲ ಕಮಲಾ ಪ್ರತಿನಿತ್ಯದಂತೆ ಒಂದು ಕಾಂಗ್ರೆಸ್ ಮೆರವಣಿಗೆಗೆ ಮುಂದಾಳಾಗಿ, ಬಾವುಟ ಹಿಡಿದು ಅಲಹಾಬಾದಿನ ಬೀದಿಗಳಲ್ಲಿ ಹೋಗುತ್ತಿದ್ದರು. ಪೊಲೀಸಿ ನವರು ಮೆರವಣಿಗೆಯನ್ನು ತಡೆದರು. ಮೆರವಣಿಗೆ ರಸ್ತೆಯಲ್ಲೇ ಕೂತಿತು. ರಾತ್ರಿಯಾಗುತ್ತಾ ಬಂದರೂ ಅಲ್ಲಾಡಲಿಲ್ಲ. ಛಳಿಗಾಲದ ರಾತ್ರಿ, ನಾಲ್ಕೂ ಕಡೆಯಿಂದ ಕೊರೆಯುವ ಗಾಳಿ ಬೀಸುತ್ತಿತ್ತು. ಕಮಲಾ ಅವರಿಗೆ ಅವತ್ತು ಜ್ವರವಿದ್ದುದರಿಂದ ಅವರ ಸ್ನೇಹಿತರೊಬ್ಬರು ಒಂದು ಶಾಲನ್ನು ತಂದು ಅವರಿಗೆ ಹೊದಿಸಿದರು. ಒಂದು ಗಂಟೆಯನಂತರ ಆ ಸ್ನೇಹಿತರು ಬಂದು ನೋಡಿದರೆ ಕಮಲಾ ತನ್ನ ತೆಳ್ಳನೆಯ ಸೀರೆಯಲ್ಲಿ ನಡುಗುತ್ತಲೇ ಕುಳಿತಿದ್ದಾರೆ. ಅವರ ಮೈಮೇಲಿದ್ದ ಶಾಲನ್ನು ಪಕ್ಕದಲ್ಲಿದ್ದ ಮುದುಕಿಯೊಬ್ಬರಿಗೆ ಬೆಚ್ಚಗೆ ಹೊದಿಸಿದ್ದರು ಕಮಲಾ!

ಸ್ವಲ್ಪ ದಿನಗಳಲ್ಲಿಯೇ ಜನಪ್ರಿಯರಾದ ಕಮಲಾ  ಅಲಹಾಬಾದಿನ ಕಾಂಗ್ರಿಸಿನ ಮಹಿಳೆಯರಿಗೆಲ್ಲಾ ಮುಂದಾಳಾದರು. ಅಲಹಾಬಾದ್ ನಗರ ಕಾಂಗ್ರೆಸ್‌ಸಮಿತಿಗೆ ಅಧ್ಯಕ್ಷಿಣಿಯಾದರು. “ಕಮಲಾ ಎಂದರೆ ಅಲಹಾಬಾದಿಗೇ ಹೆಮ್ಮೆಯಾಯಿತು” ಎಂದು ಜವಾಹರಲಾಲ್ ನೆಹರೂ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.

ಆಸ್ಪತ್ರೆಯ ಕೇಂದ್ರ ಚೇತನ

ಕಾಂಗ್ರೆಸಿನ ಕಚೇರಿಗೆ ಬಳಸುತ್ತಿದ್ದ ಸ್ವರಾಜ್ ಭವನದ ಕೆಲವು ಕೊಠಡಿಗಳನ್ನು, ಸ್ವಾತಂತ್ರ್ಯ ಚಳವಳಿಯಲ್ಲಿ ಗಾಯಗೊಂಡವರ ಶುಶ್ರೂಷೆಗಾಗಿ ಆಸ್ಪತ್ರೆಯ ’ವಾರ್ಡು’ಗಳಂತೆ ಕಮಲಾ ಮಾರ್ಪಡಿಸಿದರು. ಸ್ವಯಂಸೇವಕಿಯರ ಸಹಾಯ ಪಡೆದು ಆಸ್ಪತ್ರೆಯನ್ನು ಅತಿ ಶ್ರದ್ಧೆಯಿಂದ ತಾವೇ ನಡೆಸುತ್ತಿದ್ದರು. ರೋಗಿಗಳ ಯೋಗಕ್ಷೇಮವನ್ನು ವಿಚಾರಿಸುತ್ತಾ ಕಮಲಾ ಕೊಠಡಿಯಿಂದ ಕೊಠಡಿಗೆ ಓಡಾಡುತ್ತಿದ್ದರೆ ಪುಟ್ಟ ಇಂದಿರಾ ಅಮ್ಮನ ಹಿಂದೆ ಹಿಂದೆ ನರ್ಸಿನ ಹಾಗೆ ಓಡಾಡುತ್ತಿದ್ದರಂತೆ! ಆ ಬಂಗಲೆಯ ಕಾಂಪೌಡಿನಲ್ಲಿಯೇ ಇದ್ದ ಇನ್ನೊಂದು ಸಣ್ಣ ಮನೆ, ಆಸ್ಪತ್ರೆ ಸೇರದೆ  ಔಷಧೋಪಚಾರ ಪಡೆಯುವ ಹೊರರೋಗಿಗಳ ಚಿಕಿತ್ಸೆಗೆ ಸಿದ್ಧವಾಯಿತು. ಈ ಆಸ್ಪತ್ರೆಯ ಅಭಿವೃದ್ಧಿಗಾಗಿ ಹಣ ಶೇಖರಿಸಲು ಕಮಲಾ ಇಡೀ ಅಲಹಾಬಾದಿನಲ್ಲೆಲ್ಲಾ ತಿರುಗಿದರು. ಚಿಕಿತ್ಸೆಗಾಗಿ ಯುರೋಪಿಗೆ ಹೊರಡುವುದಕ್ಕೆ ಮುಂಚೆ ಕಮಲಾ ನೆಹರೂ ಗಾಂಧೀಜಿಯವರನ್ನು, “ಸ್ವರಾಜ್‌ಭವನದಲ್ಲಿ ಪ್ರಾರಂಭವಾದ ಆಸ್ಪತ್ರೆಯನ್ನು ವಿಸ್ತಾರಗೊಳಿಸಿ, ಅದನ್ನು ಬಡವರಿಗಾಗಿ ಶಾಶ್ವತವಾದ ಆಸ್ಪತ್ರೆಯನ್ನು ಮಾಡಬೇಕು” ಎಂದು ಪ್ರಾರ್ಥಿಸಿಕೊಂಡರು. (ಈ ಶ್ರೇಷ್ಠ ಕೋರಿಕೆಯನ್ನು ಈಡೇರಿಸಲು ಬಾಪೂಜಿಗೆ ಕೆಲವು ವರ್ಷಗಳ ನಂತರ ಸಾಧ್ಯವಾಯಿತು. ಈಗ ಅದರ ಹೆಸರು ’ಕಮಲಾ ನೆಹರೂ ಮೆಮೋರಿಯಲ್ ಹಾಸ್ಪಿಟಲ್.’)

ತಾವೇ ಆಸ್ಪತ್ರೆಯಲ್ಲಿ

ಕಮಲಾ ಅವರ ಆರೋಗ್ಯ ಚಿಕ್ಕ ವಯಸ್ಸಿನಲ್ಲೇ ಕೆಟ್ಟಿತು. ದೇಹಸ್ಥಿತಿ ತೀರಾ ಕೆಟ್ಟಾಗ, ೧೯೨೬ರ ಮಾರ್ಚ್‌‌ನಲ್ಲಿ ಕಮಲಾ, ಜವಾಹರ್ ಮತ್ತು ಇಂದಿರಾ ಯುರೋಪಿನಲ್ಲಿರುವ ಸ್ವಿಟ್ಜರ್‌ಲೆಂಡ್‌ಗೆ ಹೋದರು. ಆಸ್ಪತ್ರೆಯಲ್ಲಿದ್ದೇ ಕಮಲಾ ಉರ್ದು ಕಲಿತರು, ಇಂಗ್ಲಿಷ್ ಕಲಿತರು, ಇಂಗ್ಲಿಷ್ ಕಲಿತರು. ಸ್ವಿಟ್ಜರ್‌ಲೆಂಡ್‌ನಿಂದ ಇಂಗ್ಲೆಂಡಿಗೆ  ಹೋದರು. ಬೇರೆ  ದೇಶಗಳಲ್ಲಿ ಹೆಂಗಸರಿಗೆ ಇರುವ ಸ್ಥಾನವನ್ನು ಕಮಲಾ ಕಣ್ಣಾರೆ ಕಂಡರು. ಭಾರತದಲ್ಲಿಯೂ ಹೆಂಗಸರು ತಮ್ಮ ಹಕ್‌ಉಗಳಿಗಾಗಿ ಹೋರಾಡಬೇಕು, ಪರದೆಗಳನ್ನು ಕಿತ್ತೊಗೆದು ಗಂಡಸರ ಸಮನಾಗಿ ಬಾಳುವ ಹಕ್ಕನ್ನು ಪಡೆಯಬೇಕು ಎನ್ನಿಸಿತು ಅವರಿಗೆ.

ಭಾರತಕ್ಕೆ ಹಿಂದಿರುಗುತ್ತಲೆ ಜವಾಹರರು ಮತ್ತೆ ದೇಶದ ಸ್ವಾತಂತ್ರ್ಯ ಸ್ವಾತಂತ್ರ್ಯದ ಹೋರಾಟದಲ್ಲಿ ಧುಮುಕಿದರು. ಮತ್ತೆ ಊರುರುಗಳಿಗೆ ಭೇಟಿ, ಸಭೆಗಳು, ಲಾಠಿ ಏಟು, ಸೆರೆಮನೆ….

ಸ್ವಾತಂತ್ರ್ಯ ಹೋರಾಟದ ಸೈನ್ಯದಲ್ಲಿ

ಪತಿಯ ದೇಶಪ್ರೇಮದಲ್ಲಿ ಅಪಾರ ಹೆಮ್ಮೆ ಇದ್ದರೂ ಸಹ, ಜವಾಹರಲಾಲ್ ನೆಹರೂ ಅವರ ಕೀರ್ತಿಯ ನೆರಳಿನಲ್ಲಿ ದೇಶಸೇವೆ ಮಾಡಲು ಮನಸೊಪ್ಪದು ಕಮಲಾ ಅವರಿಗೆ. ಸ್ವರಾಜ್ಯಕ್ಕಾಗಿ ತಾವೇ ಶ್ರಮಿಸಬೇಕು, ಎಷ್ಟು ಸಣ್ಣದಾದರೂ ತಮ್ಮಪಾತ್ರವಿರಬೇಕು ಎಂಬ ಹಂಬಲ. ಸ್ವಾತಂತ್ರ್ಯ ಹೋರಾಟದಲ್ಲಿ ಹೆಂಗಸರೂ ಭಾಗವಹಿಸಬೇಕು, ಅದಕ್ಕೆ ಅವರಿಗೆ ಶಿಕ್ಷಣ ಕೊಡಬೇಕು ಎಂಬ ಉದ್ದೇಶದಿಂದ ದೇಶ ಸೇವಿಕಾ ಸಂಘ ಎಂಬುದು ಪ್ರಾರಂಭವಾಯಿತು. ಅದರ ನಾಯಕತ್ವ ಕಸ್ತೂರಿ ಬಾ, ಸರೋಜಿನಿ ನಾಯ್ಡು ಮತ್ತು ಕಮಲಾ ನೆಹರೂ ಅವರದು. ಈ ದೇಶಸೇವಕಿಯರು ಪೊಲೀಸರ ಲಾಠಿಗಳನ್ನು, ಸಿಪಾಯಿಗಳ ಬಂದೂಕುಗಳನ್ನು ಧೈರ್ಯವಾಗಿ ಎದುರಿಸಿದರು. ೧೯೩೦ರ ಆಗಸ್ಟ್‌ನಲ್ಲಿ ಕಾಂಗ್ರೆಸ್‌ಕಾರ್ಯಕಾರಿ ಸಮಿತಿಯ ಇತರ ಸದಸ್ಯರ ದಸ್ತಗಿರಿ ಆಯಿತು, ಕಮಲಾ ಅವರ ದಸ್ತಗಿತಿ ಆಗಲಿಲ್ಲ. ಇದರಿಂದ ಅವರಿಗೆ ನಿರಾಸೆಯಾಯಿತಂತೆ! ೧೯೩೧ ರ ಹೊಸ ವರ್ಷದ ದಿನ ಒಂದು ಸಭೆಯಲ್ಲಿ ಕಮಲಾ ನೆಹರೂ “ವಿದೇಶಿ ಬಟ್ಟೆಗಳಿಗೆ ಬಹಿಷ್ಕಾರ ಹಾಕಬೇಕು, ಖಾದಿಯನ್ನು ಉಪಯೋಗಿಸಬೇಕು” ಎಂದು ಭಾಷಣ ಮಾಡುತ್ತಿದ್ದಾಗ ಅವರ ದಸ್ತಾಗಿರಿಯಾಯಿತು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ, ಜವಾಹರರೊಡನೆ ಕಮಲಾ

ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಅವರಿಗೆ ಎರಡು ತಿಂಗಳ ಸೆರೆಮನೆವಾಸದ ಶಿಕ್ಷೆ ಆಯಿತು. ಕಮಲಾ ನಗುನಗುತ್ತಾ ಶಿಕ್ಷೆಯನ್ನು ಸ್ವೀಕರಿಸಿದರು. ವಿಚಾರಣೆ ನೋಡಲು ನೆರೆದಿದ್ದ ಆರು ಸಾವಿರ ಜನ “ಕಮಲಾಜೀ ಕೀ ಜೈ!” ಎಂದು ಸಿಂಹಗರ್ಜನೆ ಮಾಡಿದಾಗ, ನ್ಯಾಯಾಲಯವೇ ನಡುಗಿಹೋಯಿತು.

ಕಮಲಾ ನೆಹರೂ ಜೈಲಿಗೆ ಹೋಗುತ್ತಿದ್ದಾಗ ಪತ್ರಿಕೆಗಳವರು ಅವರನ್ನು, ಸಂಧಿಸಿ “ಏನಾದರೂ ಸಂದೇಶವಿದೆಯೇ?” ಎಂದು ಕೇಳಿದರು. ಅವರು “ನನಗೆ ಎಷ್ಟು ಸಂತೋಷವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮವರು ಧ್ವಜವನ್ನು ಮೇಲೆತ್ತಿ ಹಿಡಿದಿರಲಿ ಎಂದು ನನ್ನ ಪ್ರಾರ್ಥನೆ” ಎಂದರು.

ಹೋರಾಟಕ್ಕೆ ತೆರಬೇಕಾದ ಬೆಲ

ಸೆರೆಮನೆಯಿಂದ ಹೊರಬಂದ ಮೇಲೆ ಮತ್ತೆ ಕಮಲಾ ಸ್ವಾತಂತ್ರ್ಯದ ಹೋರಾಟದಲ್ಲಿ ಮೈಮರೆತರು.

ಆದರೆ ೧೯೩೧ರ ಕೊನೆಯ ಹೊತ್ತಿಗೆ ಮತ್ತೆ ಕಾಯಿಲೆ ಮಲಗಿದರು. ಜವಾಹರರು ಅವರನ್ನು ಮುಂಬಯಿಯಲ್ಲಿ ಆಸ್ಪತ್ರೆಗೆ ಸೇರಿಸಿ ಅಲಹಾಬಾದಿಗೆ ಹಿಂದಿರುಗಿದರು. ಅಲ್ಲಿ ಅವರನ್ನು ದಸ್ತಗಿರಿ ಮಾಡಿ ನೈನ ಸೆರೆಮನೆಗೆ ಕರೆದೊಯ್ದರು.

ಇಲ್ಲಿಂದ ನಾಲ್ಕು ವರ್ಷ ಕಮಲಾ ಅವರ ಕಠಿಣವಾದ ಕಾಲ. ಅವರಿಗೆ ದೇಹಾರೋಗ್ಯ ಕೆಡುತ್ತಹೋಯಿತು. ಆದರೂ ಸಭೆಗಳಲ್ಲಿ, ಮೆರವಣಿಗೆಗಳಲ್ಲಿ ಭಾಗವಹಿಸಿದರು. ಜ್ವರದಿಂದಮೈ ಕಾದು ಕೆಂಡವಾದಾಗಲೂ ಊರೂರು ಪ್ರಯಾಣ ಮಾಡಿದರು, ಸಭೆಗಳಲ್ಲಿ ಮಾತನಾಡಿದರು, ಸಾವಿರಾರು ಜನರಿಗೆ ಸ್ಫೂರ್ತಿಕೊಟ್ಟರು. ಮೋತಿಲಾಲರು ತೀರಿಕೊಂಡಿದ್ದರು. ಜವಾಹರರು ಸಾಮಾನ್ಯವಾಗಿ ಸೆರೆಮನೆಯಲ್ಲಿ. ಇಂದಿರಾ ಹರೆಯದ ಹುಡುಗಿ. ಕಮಲಾ ಒಬ್ಬಂಟಿಯಾದರು.ಒಂದು ಬಾರಿಯಂತೂ, ಜವಾಹರರು ಸರ್ಕಾರದ ವಿರುದ್ಧ ಪ್ರತಿಭಟಿಸಲು, ಸೆರೆಮನೆಯಲ್ಲಿ ತಮ್ಮನ್ನು ನೋಡಲು ಬಂದವರನ್ನು ತಾವು ನೋಡುವುದಿಲ್ಲ ಎಂದು ಬಿಟ್ಟರು. ಹದಿನೈದು ದಿನ-ತಿಂಗಳಿಗೊಮ್ಮೆಯಾದರೂ ಗಂಡನನ್ನು ನೋಡುವ ಅವಕಾಶವೂ ತಪ್ಪಿತು. ಆದರೆ ದುಃಖವನ್ನೆಲ್ಲ ನುಂಗಿಕೊಂಡು ದೇಶದ ಹೋರಾಟದಲ್ಲಿ ಮುಳುಗಿದರು.

ಈ ಹೊತ್ತಿಗೆ ಅವರ ಆರೋಗ್ಯ ಬಹಳ ಕೆಟ್ಟಿತ್ತು. ೧೯೩೪ರ ಜುಲೈ ತಿಂಗಳಿನಲ್ಲಿ ’ಪ್ಲೂರಸಿ’ ಎಂಬ ಕಾಯಿಲೆ ಅಂಟಿತು. ಸರ್ಕಾರದ ಜವಾಹರರನ್ನು ಸೆರೆಯಿಂದ ಬಿಟ್ಟಿತು. ಆಗಲೂ ಕಮಲಾ ಅವರಿಗೆ ಗಂಡ ಎಷ್ಟು ಕೃಶರಾಗಿದ್ದಾರೆ ಎಂಬ ದುಃಖ. ಹನ್ನೊಂದೇ ದಿನಗಳ ನಂತರ ಕಮಲಾ ಅವರ ಆರೋಗ್ಯ ಸ್ವಲ್ಪ ಉತ್ತಮವಾಯಿತೆಂದು ಸರ್ಕಾರ ಜವಾಹರರನ್ನು ಮತ್ತೆ ಜೈಲಿಗೆ ಸೇರಿಸಿತು.

೧೯೩೫ರ ಏಪ್ರಿಲ್ ತಿಂಗಳಲ್ಲಿ ಕಮಲಾ ಅವರ ದೇಹಸ್ಥಿತಿ ತೀರ ಕಟ್ಟಿತು. ಹವಾ ಬದಲಾವಣೆಯಾದರೆ ಅವರ ಸ್ಥಿತಿ ಉತ್ತಮಗೊಳ್ಳಬಹುದೆಂದು, ಅವರನ್ನು ಜರ್ಮನಿಯ ಬೇಡನ್ ವೇಯ್ಲರ್ ಎಂಬ ಕಡೆಗೆ ಕಳುಹಿಸಿ ಕೊಡುವುದೆಂದು ನಿಶ್ಚಯವಾಯಿತು. ಇಂದಿರಾ, ತಾಯಿಯನ್ನು ಕರೆದುಕೊಂಡು ಹೋದರು. ಆಗ ಜವಾಹರರು ಆಲ್ಮೋರ ಜೈಲಿನಲ್ಲಿದ್ದರು; ಬಿಡುಗಡೆಯಾದ ಮೇಲೆ, ಯುರೋಪಿನಲ್ಲಿ ಕಮಲಾ ಅವರನ್ನು ಸೇರಿದರು. “ಅಷ್ಟು ದಿನಗಳ ಜ್ವರದ ತಾಪದಿಂದ ಶರೀರವು ಸೊರಗಿದ್ದರೂ, ಕಮಲಾ ಕಣ್ಣುಗಳಲ್ಲಿ ಎಂದಿನ ಕಾಂತಿ ಇತ್ತು. ಮುಖದ ಮೇಲೆ ಎಂದಿನ ಮಂದಹಾಸವಿತ್ತು” ಎಂದು ನೆಹರೂ ತಮ್ಮ ಆತ್ಮಚರಿತ್ರೆಯ್ಲಲಿ ಬರೆದಿದ್ದಾರೆ.

ಅಂತಹ ಸ್ಥಿತಿಯಲ್ಲಿದ್ದಾಗಲೂ ಸಹ ಕಮಲಾ ತಮ್ಮ ವಿಚಾರವನ್ನು ಯೋಚನೆ ಮಾಡುತ್ತಿರಲಿಲ್ಲ. ಅವರಿಗಿದ್ದದ್ದು ದೇಶದ ಭವಿಷ್ಯದ ಚಿಂತೆ. ಗಂಡ ಮತ್ತು ಮಗಳ ಚಿಂತೆ. ಇದು ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು. ತುಂಬಾ ಒಲವಿನಿಂದ ಅವರನ್ನು ಜವಾಹರರು ಮತ್ತು ಇಂದಿರಾ ನೋಡಿಕೊಂಡರು. ಕಮಲಾ ಅವರ ಬೇಸರ ಕಳೆಯಲು ಅವರಿಗಿಷ್ಟವಾದ ಪರ್ಲ್‌ಬಕ್ ಅವರ ಕಾದಂಬರಿ ’ದಿ ಗುಡ್ ಆರ್ತ್‌’ ಎಂಬುದನ್ನು ನೆಹರೂ ದಿನವೂ ಅವರ ಹಾಸಿಗೆಯ ಬಳಿ ಕುಳಿತು ಸ್ವಲ್ಪಸ್ವಲ್ಪ ಓದುತ್ತಿದ್ದರು. ಅದನ್ನು ಕೇಳುತ್ತಾ ಕಮಲಾ ಹಾಗೇ ನಿದ್ರೆಹೋಗುತ್ತಿದ್ದರು. ಮಗುವಿನಂತೆ ಮಲಗಿ ನಿದ್ರಿಸುತ್ತಿದ್ದ ಆ ಮುದ್ದಾದ ಮುಖವನ್ನು ನೋಡುತ್ತಾ ನೋಡುತ್ತಾ ನೆಹರೂ ಅವರ ಮನಸ್ಸಿನಲ್ಲಿ ನೂರಾರು ಚಿತ್ರಗಳು ಗೇಲಿಬಂದವು. ಕಷ್ಟದಲ್ಲಿ, ಸುಖದಲ್ಲಿ, ಸೇವೆಯಲ್ಲಿ, ತ್ಯಾಗದಲ್ಲಿ ಸದಾ ಜೊತೆಗಿದ್ದು ತಮಗೆ ಬೆಂಬಲ ಕೊಡುತ್ತಿದ್ದ ತಮ್ಮ ಕಮಲಾ ಎಷ್ಟು ನಿಸ್ವಾರ್ಥಿ ಎಂದು ನೆನೆಯುತ್ತಿದ್ದ ನೆಹರೂಗೆ ಹಿಂದಿನ ಘಟನೆಯೊಂದು ನೆನಪಿಗೆ ಬಂತು.

ತ್ಯಾಗಮಯಿ

ಜಲಿಯನ್ ವಾಲಾಬಾಗ್ ಪ್ರಕರಣದ ನಂತರ ಮೋತಿಲಾಲ್ ನೆಹರೂ ಲಕ್ಷಗಟ್ಟಲೆ ಹಣ ತರುತ್ತಿದ್ದ ತಮ್ಮ ವಕೀಲ ವೃತ್ತಿಯನ್ನು ಬಿಟ್ಟುಕೊಟ್ಟು, ಕಾಂಗ್ರೆಸನ್ನು ಸೇರಿದ್ದರು. ತಂದೆ, ಮಗ ಇಬ್ಬರೂ ಮತ್ತೆ ಮತ್ತೆ ಸೆರೆಮನೆ ಸೇರಿದರು; ಹೊರಗಿದ್ದಾಗ ದೇಶದ ಕೆಲಸ. ಹೀಗಾಗಿ ಕೂಡಿಟ್ಟಿದ್ದ ಹಣವೆಲ್ಲಾ ಕರಗುತ್ತಾ ಬಂದಿತ್ತು. ಮನೆಯ ವೆಚ್ಚ ನಿರ್ವಹಿಸುವುದೇ ಕಷ್ಟವಾಗಿತ್ತು. ಜೊತೆಗೆ ಅವರನ್ನು ಇನ್ನೂ ಅಪಾರ ಶ್ರೀಮಂತರೆಂದೇ ತಿಳಿದಿದ್ದ ಬಡಬಗ್ಗರು, ಕಷ್ಟದಲ್ಲಿರುವವರು ಹಣದ ಸಹಾಯ ಮಾಡಬೇಕೆಂದು ಅವರಿಗೆ ಪತ್ರ ಬರೆಯುತ್ತಲೇ ಇದ್ದರು. ಇಂತಹ ಪತ್ರಗಳೂ ಮತ್ತು ಲೆಕ್ಕವಿಲ್ಲದಷ್ಟು ಪಾವತಿ ಮಾಡಬೇಕಾಗಿದ್ದ ’ಬಿಲ್’ಗಳೂ ಒಂದು ದಿನ ನೆಹರೂ ಅವರ ಮೇಜಿನ ಮೇಲೆ ಬೆಟ್ಟದ ಹಾಗೆ ಕೂತಿದ್ದವು. ನೆಹರೂ ಅದೇ ತಾನೇ ಎರಡು ವರ್ಷದ ಕಾರಾಗೃಹವಾಸ ಮುಗಿಸಿ ಮನೆಗೆ ಬಂದಿದ್ದವರು ಆ ‘ಬೆಟ್ಟ’ವನ್ನು ನೋಡಿ ಯೋಚನೆ ಮಾಡುತ್ತಾ ಕುಳಿತರು. ಕಮಲಾ, ಕಣ್ಣು ಕೋರೈಸುವ ಅಮೂಲ್ಯ ರತ್ನಗಳನ್ನೂ, ವಜ್ರ ಮುತ್ತಿನ ಹಾರಗಳನ್ನೂ, ಬಳೆಗಳನ್ನೂ, ಉಂಗುರಗಳನ್ನೂ ಇಟ್ಟಿದ್ದ ತಮ್ಮ ಆಭರಣದ ಪೆಟ್ಟಿಗೆಯನ್ನು ತಂದು ಗಂಡನ ಕೈಯಲ್ಲಿತ್ತರು. ನೆಹರೂ ಒಪ್ಪಲಿಲ್ಲ.

ಕಮಲಾ “ಖದ್ದರ್ ಸೀರೆಯನ್ನುಟ್ಟು, ಒಂದು ದಿನವಾದರೂ ಇದುವರೆಗೂ ಒಡವೆ ಧರಿಸದಿದ್ದ ನನಗೆ ಇನ್ನು ಮುಂದೆಅದರ ಉಪಯೋಗವಾದರೂ ಏನು?” ಎಂದು ವಾದಮಾಡಿದರು. ಕಡೆಗೂ ಒಡವೆಗಳನ್ನು ಮಾರಲು ಗಂಡನನ್ನು ಒಪ್ಪಿಸಿದರು. ಇದೆಲ್ಲವೂ ನೆನಪಾಯಿತು ನೆಹರೂ ಅವರಿಗೆ.

ಕಮಲ ಬಾಡಿ ಉರುಳಿತು

ಜರ್ಮನಿಯಿಂದ ಕಮಲಾ ಅವರನ್ನು ಸ್ವಿಟ್ಜರ್‌ಲೆಂಡಿಗೆ ಕರೆದೊಯ್ದರು. ಕಮಲಾ ಅವರ ಸ್ಥಿತಿ ಉತ್ತಮಗೊಳ್ಳಲೇ ಇಲ್ಲ. ದೇಶವು ಸ್ವತಂತ್ರವಾಗುವುದೆಂಬ ಹೊಂಗನಸು ಕಾಣುತ್ತಿದ್ದ ಕಮಲಾ ಸ್ವಾತಂತ್ರ್ಯ ಬಂದುದನ್ನು ನೋಡಲೇ ಇಲ್ಲ.

೧೯೩೬ರ ಫೆಬ್ರವರಿ ಇಪ್ಪತ್ತೆಂಟರಂದು ಕಮಲಾ ನೆಹರೂ ಮರಣಹೊಂದಿದರು. ಆಗ ಅವರಿಗೆ ಮೂವತ್ತೇಳು ವರ್ಷ. ಸ್ವಿಟ್ಜರ್‌ಲೆಂಡಿನ ಲಾಸೇನ್‌ನಲ್ಲಿಯೆ ಅವರ

ನೆಹರೂ ಭಾರತಕ್ಕೆ ಹಿಂದಿರುಗುತ್ತಿದ್ದಾಗ ವಿಮಾನ ಮಧ್ಯೆ ಬಾಗ್‌ದಾದ್‌ನಲ್ಲಿ ನಿಂತಿತು. (ಅವರು ತಮ್ಮ ಆತ್ಮಚರಿತ್ರೆಯನ್ನು ಬರೆದು ಮುಗಿಸಿ, ಲಂಡನ್ನಿನಲ್ಲಿ ಪ್ರಕಟಣೆಗಾಗಿ ಕೊಟ್ಟಿದ್ದರು. ಅದರಲ್ಲಿನ ಕೆಲವು ಅಧ್ಯಾಯಗಳನ್ನು ಕಮಲಾ ನೆಹರೂ ಇನ್ನೂ ಓದಿರಲಿಲ್ಲ.) ಲಂಡನಿನ ಅವರ ಪ್ರಕಾಶಕರಿಗೆ, ತಮ್ಮ ಪುಸ್ತಕವು ’ಕಮಲಾ ಅವರಿಗೆ ಅರ್ಪಿತ’ ಎಂದು ಕೇಬಲ್ ಕಳುಹಿಸಿದರು.

ದುಃಖದ ವಾರ್ತೆಯು ಭಾರತವನ್ನು ಮುಟ್ಟಿ ಜನರು ಶೋಕದಲ್ಲಿ ಮುಳುಗಿದರು. ಜವಾಹರಲಾಲ್ ಅಲಹಾಬಾದನ್ನು ತಲಪುವ ವೇಳೆಗೆ ಊರಿಗೆ ಊರೇ ರೈಲ್ವೆ ನಿಲ್ದಾಣದಲ್ಲಿ ಕಿಕ್ಕಿರಿದು ನೆರೆದು ಅವರನ್ನು ಸಂತೈಸಿತು.

ಗಾಂಧೀಜಿ ತುಂಬಾ ವ್ಯಥೆಪಟ್ಟರು. ಅವರು ಇಂದಿರಾಳನ್ನು ಸಂತೈಸುತ್ತಾ “ಮಗೂ, ಕಮಲಾಳ ಗುಣಗಳನ್ನು ಅನುಸರಿಸುವ ಶಕ್ತಿಯನ್ನೂ ದೇವರು ನಿನಗೆ ಕರುಣಿಸಲಿ” ಎಂದು ಬರೆದರು.

ಮನೆಯ ಲಕ್ಷ್ಮಿನಾಡಿನ ವೀರಶ್ರೀ

ಕಮಲಾ ನೆಹರೂ ನಿಜವಾಗಿ ಅಮೂಲ್ಯ ಸ್ತ್ರೀರತ್ನ. ಅವರು ಬದುಕಿದ್ದು ಮೂವತ್ತೇಳೆ ವರ್ಷಗಳ ಕಾಲ. ಇಪ್ಪತ್ತನೆಯ ವರ್ಷಕ್ಕೆ ಅವರ ಆರೋಗ್ಯ ಕೆಟ್ಟಿತು. ಇಪ್ಪತ್ತನೆಯ ವರ್ಷಕ್ಕೇ ಅವರ ಆರೋಗ್ಯ ಕೆಟ್ಟಿತು. ಇಪ್ಪತ್ತಾರನೆಯ ವರ್ಷದಿಂದ ಅವರು ಆರೋಗ್ಯವಾಗಿದ್ದ ದಿನಗಳೇ ವಿರಳ. ಆದರೆ ಲಕ್ಷ್ಮಿಯಾಗಿ, ಭಾರತದ ಮಗಳಾಗಿ ಆಕೆ ಬದುಕಿದ ಬಾಳು ಅಚ್ಚರಿಗೊಳಿಸುವಂತಹದು.

ಹೆಂಡತಿ ಗಂಡನ ಜೊತೆಗಾತಿ

ಕಮಲಾ ಸ್ತ್ರೀ ಸ್ವಾತಂತ್ರ್ಯವಾದಿ. ಸ್ತ್ರೀಯರು ಗಂಡಂದಿರಿಗೆ ಗುಲಾಮರಾಗಿ ಮುಕಪಶುಗಳಂತೆ ಬಾಳುವುದು ಅವರಿಗೆ ಸ್ವಲ್ಪವೂ ಒಪ್ಪದ ಮಾತು. “ಮನೆಯ ಯಜಮಾನನೇ ಸರ್ವಾಧಿಕಾರಿ ಎಂದು ತಿಳಿದು ಅವನಿಗೆ ಗುಲಾಮಳಂತಿರಬಾರದು. ಹೆಂಗಸು  ತನ್ನ  ಹಕ್ನ್ನೂ ಕಾಪಾಡಿಕೊಂಡು ಗಂಡನಿಗೆ ಎಲ್ಲಾ ಕ್ಷೇತ್ರದಲ್ಲಿಯೂ ನೆರವು ನೀಡಿ ಅವನಿಗೆ ಜೊತೆಗಾತಿಯಂತಿರಬೇಕು” ಎನ್ನುತ್ತಿದ್ದರು.

ರೈತರ ಸಂಸಾರಗಳೊಂದಿಗೆ ಮಾತನಾಡುವ ಅವಕಾಶ ಸಿಕ್ಕಿದಾಗಲೆಲ್ಲಾ ಕಮಲಾ, “ನಿಮ್ಮ ಹೆಣ್ಣು ಮಕ್ಕಳನ್ನೂ ಶಾಲೆಗೆ ಕಳುಹಿಸಬೇಕು. ಒಬ್ಬ ಹೆಂಗಸು ವಿದ್ಯಾವಂತಳಾದರೆ ಇಡೀ ಸಂಸಾರಕ್ಕೆ ವಿದ್ಯೆ ಬಂದ ಹಾಗೆ” ಎಂದು ಹೇಳುತ್ತಿದ್ದರು.

ಪರಮಾತ್ಮನಿಗೆ ಅರ್ಪಿಸಿಕೊಂಡು ಕಮಲ

ಆಧುನಿಕ ಅಭಿಪ್ರಾಯಗಳನ್ನು ಹೊಂದಿದ್ದುದು ಕಮಲಾ ಅವರ ವ್ಯಕ್ತಿತ್ವದ ಒಂದು ರೂಪವಾದರೆ ಅವರ ಆಳವಾದ ಆದ್ಯಾತ್ಮಿಕ ಸೌಂದರ್ಯವು ಇನ್ನೊಂದು ರೂಪ. ಕಮಲಾ ಅವರ ವ್ಯಕ್ತಿತ್ವದ ಒಂದು ರೂಪವಾದರೆ ಅವರ ಆಳವಾದ ಆಧ್ಯಾತ್ಮಿಕ ಸೌಂದರ್ಯವು ಇನ್ನೊಂದು ರೂಪ, ಕಮಲಾ ಅವರಿಗೆ ದೇವರಲ್ಲಿ ಆಗಾಧ ಪ್ರೇಮ, ಭಕ್ತಿ. ಸಂಸ್ಕೃತ ಶ್ಲೋಕಗಳನ್ನೂ, ರಾಮಾಯಣ, ಭಗವದ್ಗೀತೆಗಳನ್ನೂ ತಪ್ಪದೆ ಓದುತ್ತಿದ್ದರು. ಮಗಳು ಇಂದಿರಾ ದಿನವೂ ಭಗವದ್ಗೀತೆ, ರಾಮಾಯಣವನ್ನೋದಬೇಕೆಂಬುದು ಅವರ ಇಚ್ಛೆ. “ಸಮಯ ದೊರೆತಾಗಲೆಲ್ಲಾ, ನಾನು, ನಮ್ಮ ತಾಯಿ, ನಮ್ಮ ತಂದೆ ಮೂವರೂ ಕುಳಿತು ಬೆಳಗಿನ ಹೊತ್ತು ಭಗವದ್ಗೀತೆಯನ್ನೂ, ಸಂಜೆಯ ಹೊತ್ತು ರಾಮಾಯಣ ವನ್ನೂ ಓದುತ್ತಿದ್ದೆವು, ನಮ್ಮ ತಾಯಿಯವರ ಪ್ರೇರಣೆಯೇ ಇದಕ್ಕೆ ಕಾರಣ” ಎಂದು ಇಂದಿರಾ  ಹೇಳುತ್ತಾರೆ.

ಕಮಲಾ ೧೯೨೮ರಲ್ಲಿ ರಾಮಕೃಷ್ಣಾಶ್ರಮದ ಸ್ವಾಮಿ ಶಿವಾನಂದ ಎನ್ನುವವರೊಡನೆ, ಜೀವನದ ಗುರಿ ಏನು ಎಂದು ಚರ್ಚೆ ನಡೆಸಿದರು. ಅನಂತರ ತಮ್ಮ ಬಾಳನ್ನು ಪರಮಾತ್ಮನಿಗೆ ಮುಡಿಪಾಗಿಡುವೆನೆಂದು ಪ್ರತಿಜ್ಞೆ ಮಾಡಿದರು. ತಮ್ಮ ಸುಖ, ಆರೋಗ್ಯ ಯಾವುದನ್ನೂ ಕುರಿತು ಯೋಚಿಸದೆ ದೇಶಕ್ಕಾಗಿ, ಕಷ್ಟದಲ್ಲಿರುವವರಿಗಾಗಿ ಬದುಕಿದರು.

ಗಂಗಾನದಿಯ ದಡದಲ್ಲಿ ಕುಳಿತು ದಿನವೂ ಸ್ವಲ್ಪ ಹೊತ್ತು ಕಾಲ ಕಳೆಯುವುದು ಕಮಲಾ ಅವರಿಗೆ ಬಹಳ ಪ್ರಿಯವಾದ ಕೆಲಸ. ಪ್ರಶಾಂತವಾಗಿ ಹರಿಯುವ ಗಂಗೆಯನ್ನು ನೋಡಿ ಬಂದಾಗ ಅವರ ಮನಸ್ಸಿಗೆ ಏನೋ ಒಂದು ಬಗೆಯ ಶಾಂತಿ ಸಿಗುತ್ತಿತ್ತು. ಪ್ರಯಾಗದಲ್ಲಿ (ಅಲಹಾಬಾದಿಗೆ ಪ್ರಯಾಗವೆಂಬ ಹೆಸರೂ ಇದೆ) ನಡೆಯುತ್ತಿದ್ದ  ಕುಂಭಮೇಳಕ್ಕಾಗಿ ಸಾವಿರಾರು ಮಂದಿ ಯಾತ್ರಾರ್ಥಿಗಳು, ಸಾದು ‘ಸಜ್ಜನರು ಬರುತ್ತಿದ್ದರು. ಕೆಲವು ವೇಳೆ ಸಾಧು ಸನ್ಯಾಸಿಗಳು ನೆಹರೂ ಅವರ ಮನೆಗೆ ಹೋಗುತ್ತಿದ್ದರು. ಕಮಲಾ ಅವರನ್ನು ಗೌರವಿಸಿ ಸತ್ಕಾರ  ಮಾಡುತ್ತಿದ್ದರು.

ಕಮಲಾ ಯಾರ ಮನಸ್ಸನ್ನಾಗಲೀ ಒಂದು ದಿನ ನೋಯಿಸಿದವರಲ್ಲ. “ನಮ್ಮ ತಾಯಿ ಒಂದು ದಿನವೂ ನನ್ನನ್ನು ಗದರಿಸಿಕೊಂಡಿಲ್ಲ” ಎನ್ನುತ್ತಾರೆ ಇಂದಿರಾ. ಒಂದು ಸಲ ನೆಂಟರೊಬ್ಬರು ಪ್ಯಾರಿಸಿನಿಂದ, ಅತ್ಯಂತ ಸುಂದರ ಕಸೂತಿಯ ಫ್ರಾಕ್ ಒಂದನ್ನು ಇಂದಿರಾಗೆಂದು ತಂದಕೊಟ್ಟರು. ಮಗಳು ಆ ಫ್ರಾಕನ್ನು ತೆಗೆದುಕೊಳ್ಳುವುದು ತಾಯಿಗೆ ಇಷ್ಟವಿರಲಿಲ್ಲ. “ಬೇಡ” ಎಂದು ಬಿಟ್ಟರೆ ಮಗುವಿನ ಮನಸ್ಸು ನೋಯುವುದು ಎಂದು ಯೋಚನೆ. “ನಿನಗೆ ಹೇಗೆ ತೋರಿದರೆ ಹಾಗೆ ಮಾಡು” ಎಂದು ದೊಡ್ಡ ನಿರ್ಧಾರವನ್ನು ಪುಟ್ಟ ಇಂದಿರಾಗೇ ಬಿಟ್ಟರು. ವಿದೇಶಿ ವಸ್ತ್ರಗಳ ವಿಷಯದಲ್ಲಿ ತಂದೆತಾಯಿಯರ ಮನೋಭಾವವನ್ನು ಅರಿತಿದ್ದ ಇಂದಿರಾ ನೆಂಟರಿಗೆ ವಿಯವಾಗಿ ವಂದಿಸಿ “ಬೇಡ” ವೆಂದು ನಿರಾಕರಿಸಿದಳು. ಸುಪ್ರೀತರಾದ ಕಮಲಾ ಮುಗುಳ್ನಗೆಯಿಂದ ನೆಂಟರಿಗೆ “ದಯವಿಟ್ಟು ತಪ್ಪು ತಿಳಿಯಬೇಡಿ. ಈಗ ನಾವುಗಳು ಖದ್ದರ್ ವಸ್ತ್ರಗಳ ಹೊರತು ಬೇರೆ ಏನನ್ನೂ ಧರಿಸುವುದಿಲ್ಲ” ಎಂದರು.

ಹಳೆಯ ಸ್ನೇಹವನ್ನಾಗಲೀ, ಸೌಜನ್ಯವನ್ನಾಗಲಿ ಎಂದಿಗೂ ಮರೆತವರಲ್ಲ ಕಮಲಾ. ಒಂದು ಸಲ ಪಂಡಿತ  ಅವತಾರ ಕೃಷ್ಣ ಕೌಲ್ ಎಂಬ ತರುಣ ಎಂಜಿನಿಯರೊಬ್ಬರಿಗೆ ಆನಂದಭವನದಲ್ಲಿ ಸ್ವಲ್ಪ ಕೆಲಸವಿತ್ತು. ಅವರು ಕಾರು ನಿಲ್ಲಿಸಿ ಇಳಿದು ಹೋದರು. ಕೌಲರ ಹೆಂಡತಿ ಮತ್ತು ಕಮಲಾ ನೆಹರೂ ಇಬ್ಬರೂ ಬಾಲ್ಯದ ಗೆಳತಿಯರು. ಆದರೂ ಸಹ ಶ್ರೀಮತಿ ಕೌಲ್, “ಕಮಲಾ ಈಗ ಒಬ್ಬ ದೊಡ್ಡ ವ್ಯಕ್ತಿ. ಹಳೆಯ ಸ್ನೇಹಿತೆಯನ್ನು ಗುರುತು ಹಿಡಿಯದೇ ಅವಮಾನವಾದರೆ-” ಎಂದು ಯೋಚಿಸಿ, ಕಾರಿನಲ್ಲೇ ಕುಳಿತಿದ್ದರು. ಕತ್ತಲಾಗುತ್ತ ಬಂದಿತ್ತು. ಇದ್ದಕ್ಕಿದ್ದ ಹಾಗೆ ಸುಂದರ ಯುವಕನೊಬ್ಬ ಬಂದು ಅವರ ಕೈಹಿಡಿದೆಳೆದು ಕಾರಿನಿಂದ ಇಳಿಸಿ ಹೆಗಲ ಮೇಲೆ ಸ್ನೇಹದಿಂದ ಕೈಹಾಕಿದ. ಶ್ರೀಮತಿ ಕೌಲ್ ದಿಗ್ಬ್ರಾಂತರಾದರು! ಆಗ ಯುವಕನ ವೇಷದಲ್ಲಿದ್ದ ಕಮಲಾ ನಗುತ್ತಾ “ನಾನು ಕಮಲಾ ಎಂದು ಗುರ್ತು ಸಿಗಲಿಲ್ಲವೇ?” ಎಂದರು. (ಆ ದಿನ ಕಮಲಾ ಸತ್ಯಾಗ್ರಹಕ್ಕೆ ಹೊರಡುವಾಗ ಬಿಳಿಯ ಷರಟು, ಜುಬ್ಬ ಮತ್ತು ಗಾಂಧಿ ಟೋಪಿಯನ್ನು ಹಾಕಿಕೊಂಡಿದ್ದರು.) ಬಾಲ್ಯದ ಸ್ನೇಹಿತೆಯನ್ನು ಒಳಗೆ ಕರೆದೊಯ್ದು ಬಹಳ ಪ್ರೀತಿಯಿಂದ ಆದರಿಸಿದರು.

ಕಮಲಾ ಅವರ ಮುಖದಲ್ಲಿ ಸೌಮ್ಯ ಕಳೆ; ಮಾತು ಮೃದು, ಸ್ವಭಾವ ಕರುಣೆಯಿಂದ ತುಂಬಿತ್ತು. ಆದರೂ ಅವರನ್ನು ಕಂಡರೆ ಯಾರಿಗೇ ಆಗಲಿ ಗೌರವ ಬರುತ್ತಿತ್ತು. ಅವರಿಗೆ ಸಂಸ್ಕೃತವನ್ನು ಹೇಳಿಕೊಡಲು, ಮದನಮೋಹನ ಮಾಲವೀಯರ ನೆಂಟರೊಬ್ಬರು ಹೋಗುತ್ತಿದ್ದರು. ಅವರಿಗೆ ಕಮಲಾ ಅವರಲ್ಲಿ ಒಂದು ಬಗೆಯ ಭಯಮಿಶ್ರಿತ ಗೌರವವಿತ್ತು. “ಗಟ್ಟಿಯಾಗಿ ಸಹ ಮಾತನಾಡದ ಗೊಂಬೆಯಂತೆ ನಾಜೂಕಾಗಿರುವ ನಮ್ಮ ಅಮ್ಮನನ್ನು ಕಂಡರೆ ಇವರಿಗೆ ಭಯವೇಕೆ?” ಎನಿಸುತ್ತಿತ್ತಂತೆ ಇಂದಿರಾಗೆ. ಸಂಸ್ಕೃತ ಪಂಡಿತರು “ನಿಮ್ಮ ತಾಯಿ ಶಕ್ತಿಯ ದೇವತೆಯಂತೆ. ಮನಸ್ಸು ಮಾಡಿಬಿಟ್ಟರೆ ಅವರು ಎಂತಹ ಕೆಲಸವನ್ನು ಬೇಕಾದರೂ ಸಾಧಿಸಿಬಿಡುವರು, ಗೊತ್ತೇ?” ಎನ್ನುತ್ತಿದ್ದರು. ಈ ಮಾತನ್ನು ಕೇಳಿ ಕಮಲಾ ಅವರಿಗೆ ನಗು ಬರುತ್ತಿತ್ತಂತೆ. ಇಂದಿರಾ ಹೇಳುತ್ತಾರೆ- ” ನಿಜ. ನಮ್ಮ ತಾಯಿಯವರು ನೋಡಲು ಕೋಮಲವಾಗಿದ್ದರೂ ಅವರ ಮನಸ್ಸಿನಲ್ಲಿ ಅಪಾರ ಶಕ್ತಿ ಅಡಗಿತ್ತು. ಇದಕ್ಕಾಗಿ ಎಲ್ಲರೂ ಅವರನ್ನು ಗೌರವಿಸುತ್ತಿದ್ದರು. ಮನೆಯಲ್ಲಿ ಅವರು ಹೇಳಿದ್ದೆಲ್ಲವೂ ನಡೆದುಬಿಡುತ್ತಿತ್ತು.”

ಚಿಂತೆಯ ಕೋಟೆಯಲ್ಲಿ

ಕಮಲಾ ಅವರಿಗೆ ಚಿಂತೆ ಏನೂ ಕಡಿಮೆ ಇರಲಿಲ್ಲ. ಜವಾಹರಲಾಲ್ ನೆಹರೂ, ಮೋತಿಲಾಳ್ ನೆಹರೂ ಇಬ್ಬರೂ ಕಾರಾಗೃಹಕ್ಕೆ ಹೊರಟುಹೋದಾಗ ಮನೆಯ ಜವಾಬ್ದಾರಿ ಎಲ್ಲಾ ಇವರ ಮೇಲೆ ಬೀಳುತ್ತಿತ್ತು. ಅಲ್ಲದೆ ಮಗು ಇಂದಿರಾ, ತಂದೆ ಮತ್ತು ತಾತನ ಒಲವಿನ ಮಡಿಲಿನಲ್ಲಿ ಸುಖವಾಗಿ ಬೆಳೆದು, ಇದ್ದಕ್ಕಿದ್ದ ಹಾಗೆ ಕ್ರೂರವಾದ ಬದಲಾವಣೆಯನ್ನು ಅನುಭವಿಸಬೇಕಾಯಿತಲ್ಲ, ತಂದೆ-ತಾತ ಇವರಿಂದ ದೂರವಾಗಬೇಕಾಯಿತಲ್ಲ ಎಂದು ಕಮಲಾ ಅವರ ಮನಸ್ಸು ಸಂಕಟಪಡುತ್ತಿತ್ತು. ಇಂದಿರಾ ತನ್ನ ತಾತನನ್ನೂ ತುಂಬಾ ಪ್ರೀತಿಸುತ್ತಿದ್ದಳು. ಅವರು ಅವಳ ಪ್ರಶ್ನೆಗಳಿಗೆಲ್ಲಾ ಸ್ವಲ್ಪವೂ ಬೇಸರ ಪಡದೆ ಉತ್ತರ ಹೇಳುತ್ತಿದ್ದರು. ಎಲ್ಲಿಗೆ ಹೋದರೂ ಇಂದಿರಾ ಅವರ ಜೊತೆಯೇ. ಅಂತಹ ತಾತ ಜೈಲಿಗೆ ಹೊರಟುಹೋದರೆ ಮೂರು ವರ್ಷದ ಇಂದಿರಾ ಒಳಗೊಳಗೇ ಕೊರಗುತ್ತಿದ್ದಳು.ಇಂತಹ ದುಃಖವನ್ನೆಲ್ಲಾ ಒಂಟಿಯಾಗಿಯೇ ಸಹಿಸಬೇಕಾಗಿತ್ತು ಕಮಲಾ.

ರಾಜಕೀಯ ಕೈದಿಗಳು ನ್ಯಾಯಾಲಯ ವಿಧಿಸಿದ ಜುಲ್ಮಾನೆಯನ್ನು ಕೊಡಲು ಒಪ್ಪುತ್ತಿರಲಿಲ್ಲ. ಮೋತಿಲಾಲ್ ಮತ್ತು ಜವಾಹರಲಾಲ್‌ನೆಹರೂ ಸಹ ಜುಲ್ಮನೆ ಕೊಡಲು ನಿರಾಕರಿಸಿದಾಗ ಪೊಲೀಸರು ಆನಂದಭವನಕ್ಕೆ ನುಗ್ಗಿ,ಅಲ್ಲಿದ್ದ ಸುಂದರ ಕಲಾವಸ್ತುಗಳನ್ನಾಗಲೀ, ಬೆಲೆಬಾಳುವ ಕುರ್ಚಿಮೇಜುಗಳನ್ನಾಗಲೀ ಭಾರೀ ಭಾರೀ ಪರ್ಷಿಯನ್ ಜಮಖಾನೆಗಳನ್ನಾಗಲೀ ಎತ್ತಿಕೊಂಡು ಹೊರಟು ಹೋಗುತ್ತಿದ್ದರು. ರಾತ್ರಿ ಮಲಗಿ ನಿದ್ರಿಸುತ್ತಿದ್ದ ಇಂದಿರಾ ಒಂದೊಂದು ಸಲ ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಪೊಲೀಸಿನವರ ಗದ್ದಲ ಕೇಳಿ ಗಾಬರಿಯಾಗಿ ಎದ್ದುಬಿಡುತ್ತಿದ್ದಳು. ಮನೆಯ ಸಾಮಾನುಗಳನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿದ್ದರೆ, ಏನೊಂದೂ ಅರ್ಥವಾಗದೆ ಪುಟ್ಟ ಇಂದಿರಾಗೆ ತುಂಬಾ ದುಃಖವಾಗುತ್ತಿತ್ತು. ಒಂದು ಸಲ ಪೊಲೀಸಿನವರನ್ನು, “ಹೇ! ಅದೆಲ್ಲಾ ನಮ್ಮ ಸಾಮಾನು! ಅದನ್ನೇಕೆ ತೆಗೆದುಕೊಂಡು ಹೋಗುತ್ತೀರಿ?” ಎಂದು ಗದರಿಸಿಯೇ ಬಿಟ್ಟಳು. ಎಳೆಯ ಮನಸ್ಸಿನ ಮೇಲೆ ಈ ಘಟನೆಗಳು ಎಂತಹ ಪ್ರಭಾವ ಬೀರುವುದೋ ಎಂದು ತುಂಬಾ ಯೋಚನೆ ಕಮಲಾ ಅವರಿಗೆ. ಇಂದಿರಾಳ ವಿದ್ಯಾಭ್ಯಾಸಕ್ಕೆ ಇನ್ನೂ ಸರಿಯಾದ ತಳಹದಿಯನ್ನೇ ಹಾಕಿರಲಿಲ್ಲ. ಈ ವಿಷಯವನ್ನೂ ನೋಡಬೇಕಾಗಿತ್ತು. ಯೋಚನೆಗಳು ಒಂದೇ? ಎರಡೇ?

ಕತ್ತಲಲ್ಲಿ ಬೆಳಕಿನಂತೆ

ಆದರೂ ಸಹ ನೆಹರೂರನ್ನು ನೋಡಲು ಕಮಲಾ ಜೈಲಿಗೆ ಹೋದಾಗ ಒಂದೂ ಬೇಸರದ ಮಾತನ್ನಾಡುತ್ತಿರಲಿಲ್ಲ. ಜೈಲಿನ ವಾತಾವರಣದಲ್ಲಿ ಮೊದಲೇ ಅಸುಖಿಯಗಿರುವ ಅವರ ಮನಸ್ಸಿಗೆ ಮತ್ತಷ್ಟು ಚಿಂತೆ ತುಂಬುವುದೇ ಎಂದು ಯೋಚಿಸಿ, ತಮ್ಮ ಚಿಂತೆಯನ್ನು ನುಂಗಿಕೊಂಡು, ನಗುನಗುತ್ತ ಮಾತನಾಡಿ ಇನ್ನೂ ಅವರಿಗೇ ಧೈರ‍್ಯ ಹೇಳುತ್ತಿದ್ದರು. ಹೊರಗೆ ನಡೆಯುತ್ತಿದ್ದುದರ ಸುದ್ದಿಗಳನ್ನೆಲ್ಲಾ ಹೇಳಿ ಪತಿಯ ಬೇಸರವನ್ನು ಕಳೆದು ಉತ್ಸಾಹವನ್ನು ತುಂಬುತ್ತಿದ್ದರು. ನೆಹರೂ ತಮ್ಮ  ಆತ್ಮಚರಿತ್ರೆಯ್ಲಲಿ, “ಕಮಲಾ ನನ್ನನ್ನು ನೋಡುವುದಕ್ಕೆ ಜೈಲಿಗೆ ಬಂದಾಗಲೆಲ್ಲಾ ಕತ್ತಲೆಯಲ್ಲಿ ಬೆಳಕು ತಂದಂತೆ ಆಗುತ್ತಿತ್ತು” ಎಂದಿದ್ದಾರೆ.

ಇತರರಿಗಾಗಿ ಬದುಕು

ಇತರರಿಗಾಗಿ ಬದುಕಿದರು ಕಮಲಾ ನೆಹರೂ. ಅರಮನೆಯ ವೈಭವ-ಸುಖವನ್ನು ನಾಚಿಸುವ ವೈಭವ-ಸುಖಗಳ ಮೆನಗೆ ಕಾಲಿಟ್ಟಾಗಲೂ ಅವರಿಗೆ ಬೇಕಾಗಿದ್ದುದು ಸರಳತೆ. ೧೯೨೮ರ ಅನಂತರವಂತೂ ಅವರು ಸಂನ್ಯಾಸಿನಿಯಂತೆ ಬದುಕಿದರು. ೧೯೩೨ರಲ್ಲಿ ಅವರ ಅತ್ತೆ ಸ್ವರೂಪರಾಣಿ ಸೊಸೆಯ ಕಠಿಣವಾದ ಬದುಕನ್ನು ಕಂಡು ದುಃಖಪಟ್ಟರು. ಇದ್ದ ಒಡವೆಗಳನ್ನು ಮುಟ್ಟುತ್ತಿರಲಿಲ್ಲ. ಕಮಲಾ. ಸ್ವರೂಪರಾಣಿಯವರು, ಒಂದು ಚಿನ್ನದ ಸರ, ಒಂದು ಜೊತೆ ಬಳೆಯನ್ನಾದರೂ ಧರಿಸುವಂತೆ ಸೊಸೆಗೆ ಹೇಳುವಂತೆ ಸ್ವಾಮಿ ಅಭಯಾನಂದ ಎಂಬುವರಿಗೆ ಹೇಳಿದರು. ಸ್ವಾಮೀಜಿಗೆ ಕಮಲಾ ಉತ್ತರ ಕೊಟ್ಟರು: “ಸಾಧ್ಯವೇ ಇಲ್ಲ, ಸ್ವಾಮೀಜಿ. ಇಂತಹ ಮಾತನ್ನೇ ಎತ್ತಬೇಡಿ. ನಮ್ಮ ಜನ ಹೊಟ್ಟೆಗಿಲ್ಲದೆ ಸಂಕಟಪಡುತ್ತಿರುವಾಗ ನನ್ನ ಒಡವೆಗಳನ್ನು ಪ್ರದರ್ಶನ ಮಾಡಿಕೊಂಡು ರಸ್ತೆಯಲ್ಲಿ ತಿರುಗುವುದು ಮಹಾ ಪಾಪ. ಎಷ್ಟೋ ಜನ ಕಲ್ಕತ್ತೆಯ ರಸ್ತೆಗಳ ಮಗ್ಗುಲಲ್ಲಿ ಮಲಗಿ ರಾತ್ರಿ ಕಳೆಯುತ್ತಾರೆ. ನನ್ನ ಒಡವೆಗಳನ್ನು ಅವರಿಗೆ ಸಂತೋಷದಿಂದ ಹಂಚಿಕೊಟ್ಟೇನು.”

೧೯೩೪ರಲ್ಲಿ ಕಮಲಾ ಅವರಿಗೆಬಹು ಅನಾರೋಗ್ಯ ಆಗಲೆ ಬಿಹಾರದಲ್ಲಿ ಪ್ರಪಂಚಡ ಭೂಕಂಪವಾಗಿ ಸಾವಿರಾರು ಜನ ನಿರ್ಗತಿಕರಾದರು. ಕಮಲಾ ಬಿಹಾರಿಗೆ ಹೋಗಲು ಬಯಸಿದರು. “ನಿಮ್ಮ ಆರೋಗ್ಯ ಕೆಡುತ್ತದೆ. ಬೇಡ” ಎಂದು ವೈದ್ಯರು ಹೇಳಿದರೂ ಕೇಳಲಿಲ್ಲ. ಬಿಹಾರಿನಲ್ಲಿ ಸುತ್ತಾಡಿ, ಜನರಿಗೆ ಸಮಾಧಾನ ಹೇಳಿದರು. ಬಟ್ಟೆಬರೆಗಳನ್ನೂ ಔಷಧಿಗಳನ್ನೂ ಸಂಗ್ರಹಿಸಿ ಕಳುಹಿಸಿದರು.

ಜವಾಹರರು ಸೆರೆಮನೆಯಲ್ಲಿದ್ದಾಗ ಸ್ವರೂಪರಾಣಿ ಒಮ್ಮೆ ಅವರನ್ನು ನೋಡಿಕೊಂಡು ಬಂದರು. ಮಗ ಸೆರೆಯಲ್ಲಿ ಅನುಭವಿಸುವ ಕಷ್ಟ ನೋಡಿ ಅವರಿಗೆ ಸಂಕಟವಾಯಿತು. ಅವರು ಮನೆಗೆ ಬಂದು ಅಳುತ್ತಿದ್ದಾಗ, ಕಮಲಾ ಹೇಳಿದರು: “ಅಮ್ಮ, ನೀವು ನಿಮ್ಮ ಜವಾಹರರ ವಿಷಯ ಯೋಚಿಸುತ್ತಿದ್ದೀರಿ. ಮುವತ್ತು ಮೂವತ್ತೈದು ಸಾವಿರ ಜನ ಯುವಕ ಯುವತಿಯವರು ಬ್ರಿಟಿಷರ ಸೆರೆಮನೆಗಳಲ್ಲಿ ಅನುಭವಿಸುತ್ತಿರುವ ಸಂಕಟವನ್ನು ಮರೆತಿರಾ?”

ಕ್ರಾಂತಿವೀರನಿಗೆ ನಮೋ!

ಕಮಲಾ ನೆಹರೂರವರಿಗೆ ಸ್ವಾತಂತ್ರ್ಯ ಹೋರಾಟ ಗಾರರೆಂದರೆ ಬಹು ಅಚ್ಚುಮೆಚ್ಚು. ಅವರು ಅಹಿಂಸಾ ವಾದಿಗಳೇ ಆಗಿರಲಿ,ಕ್ರಾಂತಿಕಾರಿಗಳೇ ಆಗಿರಲಿ, ಅವರಲ್ಲಿ ವಿಶ್ವಾಸ.

ಅವರ ಮನೆ ಆನಂದಭವನಕ್ಕೆ ಕೆಲವು ಸಲ ಬಂದುಹೋಗಿದ್ದ ಕ್ರಾಂತಿಕಾರಿಗಳಲ್ಲಿ ಕ್ರಾಂತಿರತ್ನ ಚಂದ್ರಶೇಕರ ಆಜಾದ್ ಒಬ್ಬ. ಆತನ ಎದೆಗಾರಿಕೆಯ, ಬುದ್ಧಿವಂತಿಕೆಯ ಘಟನೆಗಳನ್ನು ಕೇಳಿ ಆಕೆಗೆಅವನಲ್ಲಿ ವಿಶೇಷ ಮಮತೆ.

೧೯೩೧ರ ಫೆಬ್ರವರಿ ೨೭ರಂದು, ಅಲಹಾಬಾದಿನ ಆಲ್ಫ್ರೆಡ್ ಪಾರ್ಕಿನಲ್ಲಿ ಪೊಲೀಸರ ಪಡೆಯೊಡನೆ ಗುಂಡಿನ ಹೋರಾಟ ಮಾಡುತ್ತಾ ಆಜಾದ್ ಅಸುನೀಗಿದ. ಅದನ್ನು ಕೇಳಿ ಕಮಲಾ ನೆಹರೂ ಬಹಳ ದುಃಖಿತರಾದರು. ಅಂತಹ ವೀರಾಗ್ರೇಸರನ ಶವ ಪೊಲೀಸರ ಕೈಯಲ್ಲಿ ನಾಯಿ ನರಿಗಳ ಪಾಡು ಪಡಬಾರದು; ಅವನ ಶವಕ್ಕೆ ಯೋಗ್ಯ ಸಂಸ್ಕಾರವಾಗಬೇಕೆಂದು ಒಬ್ಬ ವ್ಯಕ್ತಿಯನ್ನು ಪೊಲೀಸರ ಬಳಿಗೆ ಕಳಿಸಿ ಶವವನ್ನು ಕೊಡಲಿಲ್ಲ, ಕೊನಗೆ ಆಕೆ ಒಬ್ಬ ವ್ಯಕ್ತಿಯನ್ನು ಕಾಶಿಗೆ ಕಳಿಸಿ, ಅಲ್ಲಿದ್ದ ಪಂಡಿತ ಶಿವವಿನಾಯಕ ಮಿಶ್ರ ಎಂಬವರು ಆಜಾದನ ಬಳಗದವಂತೆ ನಟಿಸಿ ಶವವನ್ನು ಪಡೆಯಲು ವ್ಯವಸ್ಥೆ ಮಾಡಿದರು. ಬಹಳ ಪರಿಶ್ರಮದ ನಂತರ ಶವ ವ್ಯವಸ್ಥೆ ಮಾಡಿದರು. ಬಹಳ ಪರಿಶ್ರಮದ ನಂತರ ಶವ ಸಿಕ್ಕಿತು. ಆದರೆ ಆ ವೇಳೆಗೆ ಪೊಲೀಸರು ಬೆಂಕಿ ಹಚ್ಚಿದ್ದರು. ಮತ್ತೆ ಅದಕ್ಕೆ ಶಿವ ವಿನಾಯಕ ಮಿಶ್ರರು ಅಂತ್ಯಕ್ರಿಯೆ ಮಾಡಿದರು. ಆ ಸಮಯದಲ್ಲಿ ಅಲಹಾಬಾದಿನ ರಸೂಲಾ ಬಾದ್ ಸ್ಮಶಾನದಲ್ಲಿದ್ದವರ ಪೈಕಿ ಕಮಲಾ ನೆಹರೂ ಕೂಡ ಒಬ್ಬರು.

ದಿನಾಂಕ ೨೮ರಂದು ಅಲಹಾಬಾದ್ ಟಂಡನ್ ಪಾರ್ಕಿನಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಆಕೆ ಭಾಗವಹಿಸಿ ಅಗಲಿದ ಕಾಂತಿಕಾರಿಗೆ ತಮ್ಮ ಹೃದಯದಾಳದ ಅಶ್ರುತರ್ಪಣ ನೀಡಿದರು.

ಧೀರ ಚೇತನ

ಕಮಲಾ, ಕಾಯಿಲೆ ಬಿದ್ದಾಗ ಸಹ, ತಾವು ಯಾರಿಗೂ ಹೊರೆಯಾಗಬಾರದು, ತಮಗಾಗಿ ಪತಿ ಜವಾಹರಲಾಲ್ ಅವರ ಆತ್ಮಗೌರವಕ್ಕೆ ಧಕ್ಕೆ ಬರುವಂತೆ ಆಗಬಾರದು ಎಂದೇ ಆಶಿಸುತ್‌ಇತದ್ದರು.

ಒಮ್ಮೆ, ಜವಾಹರಲಾಲರು ಸೆರೆಯಲ್ಲಿದ್ದಾಗ, ಕಮಲಾ ಅವರಿಗೆ ಕಾಯಿಲೆ ಬಹಳ ಹೆಚ್ಚಾಯಿತು. ಸರ್ಕಾರ. ನೆಹರೂ ಅವರನ್ನು ಕೆಲವು ದಿನಗಳ ಮಟ್ಟಿಗೆ ಬಿಡುಗಡೆ ಮಾಡಿತು. ಅಲ್ಲದೆ ಒಂದು ಷರತ್ತನ್ನು ಹಾಕಿತು- “ಇನ್ನು ಮುಂದೆ ರಾಜಕೀಯ ಚಟುವಟಿಕೆಗಳಿಗೆ ಕೈ ಹಾಕುವುದಿಲ್ಲ ಎಂದು ಜವಾಹರರು ಮಾತು ಕೊಟ್ಟರೆ ಅವರನ್ನು ಪುನಃ ಬಂಧಿಸುವುದಿಲ್ಲ. “ಈ ವಿಷಯ ಹೇಗೋ ಕಮಲಾ ಅವರಿಗೆ ತಿಳಿದುಹೋಯಿತು.

ನೆಹರೂ ಮನೆಗೆ ಬಂದಾಗ ಕಮಲಾ ಅವರಿಗೆ ವಿಪರೀತ ಜ್ವರ. ಪತಿಯು ಬಂದ ಆನಂದವನ್ನು ಕಣ್ಣುಗಳಲ್ಲಿಯೇ ತೋರಿಸಿದರು. ಮಾತನಾಡುವಷ್ಟು ’ಶಕ್ತಿಯೇ ಇರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಹೊತ್ತು ಮೀರಿತೆಂದು ಪೊಲೀಸಿನವರು ಕರೆಯಲು ಬಂದರು. ಆಗ ಕಮಲ ತಮ್ಮ ಬಳಿ ಕೆಳಕ್ಕೆ ಬಾಗುವಂತೆ ಪತಿಗೆ ಸನ್ನೆ ಮಾಡಿದರು. “ಏನೇ ಆಗಲಿ, ಹೋರಾಟ ಬಿಡುತ್ತೇನೆ ಅಂತ ಮಾತು ಕೊಡಬೇಡಿ” ಎಂದರು.

ಅವರ ಇಂತಹ ತ್ಯಾಗವನ್ನು ನೋಡಿ ಮೂಕ ರಂತಾದರು ನೆಹರೂ!

ಕಮಲಾ ನೆಹರೂ ಅವರ ತ್ಯಾಗಮಯ ಧೀರ ಜೀವನಕ್ಕೆ ನಾಡೇ ಮೂಕವಾಗಿ ನಮಿಸುತ್ತದೆ.