ಜನನ : ೧೭-೪-೧೯೩೯ ರಂದು ಮೈಸೂರಿನಲ್ಲಿ

ಮನೆತನ : ಸಂಗೀತ ಸಾಹಿತ್ಯಾಸಕ್ತರ ಮನೆತನ. ತಂದೆ ಎಚ್. ಡಿ. ಶೇಷಗಿರಿರಾವ್, ತಾಯಿ ರಾಧಾಬಾಯಿ, ಪತಿ ಎಂ. ಆರ್. ರಾಮಕೃಷ್ಣ ಮಾವ ಗಮಕಿ ಎಂ. ರಾಘವೇಂದ್ರರಾವ್.

ಗುರುಪರಂಪರೆ : ಚಿಕ್ಕಂದಿನಲ್ಲಿ ತಂದೆ-ತಾಯಿಯರ ಪ್ರೋತ್ಸಾಹ. ಅನಂತರ ಮೈಸೂರಿನ ಕೃಷ್ಣಗಿರಿ ಕೃಷ್ಣರಾಯರ ಬಳಿ ಗಮಕ ಕಲೆಯಲ್ಲಿ ಶಿಕ್ಷಣ. ಸಂಗೀತದಲ್ಲೂ ಸಾಕಷ್ಟು ಪಾಠ. ಸೀನಿಯರ್ ಗ್ರೇಡ್ ಪರೀಕ್ಷೆ ತೇರ್ಗಡೆ.

ಕ್ಷೇತ್ರ ಸಾಧನೆ : ಮೈಸೂರು ಆಕಾಶವಾಣಿ ನಿಲಯದಿಂದ ಕಾರ್ಯಕ್ರಮಗಳು ಪ್ರಸಾರವಾಗಿವೆ. ಕೃಷ್ಣರಾಯರ ಸಮರ್ಥಮಾರ್ಗದರ್ಶನದಲ್ಲಿ ಗಮಕ ಕೋವಿದೆಯಾಗಿ ತನ್ನ ೨೦ನೇ ವಯಸ್ಸಿನಲ್ಲೇ ವಿದ್ವಜ್ಜನರ ಮುಂದೆ ಸಮಗ್ರ ಜೈಮಿನಿ ಭಾರತವನ್ನು ವಾಚನ ಮಾಡಿ ಗಮಕ ಕಲಾ ಪ್ರವೀಣೆ ಎಂಬ ಬಿರುದಿಗೆ ಪಾತ್ರರಾದರು. ಇವರ ಕಾವ್ಯ ವಾಚನದ ವೈಖರಿಗೆ ಮನ ಸೋತ ರಾಘವೇಂದ್ರರಾಯರು ತಮ್ಮ ಹಿರಿಯ ಮಗ ರಾಮಕೃಷ್ಣನಿಗೆ ಈಕೆಯನ್ನು ತಂದುಕೊಂಡು ಮದುವೆ ಮಾಡಿಸಿ ಕಮಲಾರನ್ನೇ ಸೊಸೆಯಾಗಿ ಮನೆ ತುಂಬಿಸಿಕೊಂಡರು. ಹೀಗಾಗಿ ಈಕೆಯ ಗಮಕ ಜೀವನಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಯಿತು. ನಾಡಿ ನಾಡಿಗಳಲ್ಲೂ ಗಮಕದ ಧಾರೆ ಹರಿಯಿತು. ಮುಂದೆ ಧಾರವಾಡದ ಸಾಧನ ಕೇರಿಯಲ್ಲಿ ವರಕವಿ. ದ. ರಾ. ಬೇಂದ್ರೆಯವರ ಮನೆಯಲ್ಲಿ ಅವರ ಸಮ್ಮುಖದಲ್ಲಿ ಗಮಕ ವಾಚನ ಮಾಡಿ ’ಸೈ’ ಎನ್ನಿಸಿಕೊಂಡರು. ಅವರ ತುಂಬು ಹೃದಯದ ಆಶೀರ್ವಾದ ಇವರಿಗೆ ದೊರೆಯಿತು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಮೂಲಕ ಗಮಕ ತರಗತಿಗಳನ್ನು ನಡೆಸುತ್ತಿರುವುದೇ ಅಲ್ಲದೆ ತಮ್ಮ ಮಾವನವರು ಹುಟ್ಟಿ ಹಾಕಿದ ಕವ್ಯ ಗಾಯನ ಕಲಾ ಮಂದಿರದ ಅಧ್ಯಾಪಕಿಯಾಗಿಯೂ ಕಾರ್ಯನಿರತರಾಗಿದ್ದಾರೆ. ಹಾಲಿ ಬೆಂಗಳೂರು ಆಕಾಶವಾಣಿ ದೂರದರ್ಶನ ಕೇಂದ್ರಗಳಿಂದಲೂ ಇವರ ವಾಚನಗಳು ಪ್ರಸಾರವಾಗುತ್ತಿದೆ. ೧೯೯೭ ರಲ್ಲಿ ಭಾರತ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅನೇಕ ಗಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅನಂತರದಲ್ಲಿ ಕಾವ್ಯ ಪುಷ್ಪಾಂಜಲಿ ಮಾಲಿಕೆಯಲ್ಲಿ ಪರಿಷತ್ತಿನ ವತಿಯಿಂದ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಸುವರ್ಣೊತ್ಸವ, ಕರ್ನಾಟಕ ಸುಗಮ ಸಂಗೀತ ಪರಿಷತ್ತು ಶಿವಮೊಗ್ಗಾದಲ್ಲಿ ನಡೆಸಿದ ಸಮ್ಮೇಳನದಲ್ಲಿ ಸಹ ಇವರ ಕಾರ್ಯಕ್ರಮಗಳು ನಡೆದಿವೆ.

ಪ್ರಶಸ್ತಿ – ಪುರಸ್ಕಾರಗಳು : ಮೈಸೂರಿನ ಶ್ರೀರಾಮ ಮಂದಿರದಿಂದ ’ಗಮಕ ಕಲಾ ಪ್ರವೀಣೆ’ ಹಾಗೂ ಸನ್ಮಾನ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೨೦೦೫-೦೬ ನೇ ಸಾಲಿನ ವಾರ್ಷಿಕ ಪ್ರಶಸ್ತಿ ಇವರಿಗೆ ಲಭಿಸಿದೆ.