ಸಾಂಪ್ರದಾಯಿಕ ಪರಂಪರೆಯನ್ನು ಅನುಸರಿಸುವ ಶ್ರದ್ಧೆ ರಸಿಕರನ್ನು ಮಂತ್ರ ಮುಗ್ಧರನ್ನಾಗಿಸುವ ಕಂಠಶ್ರೀ ಕಮಲಾರವರನ್ನು ಜನಪ್ರಿಯ ಕಲಾವಿದೆಯಾಗಿಸಿರುವ ಅಂಶಗಳು. ಹಿರಿಯ ವಿದ್ವಾಂಸರ ಸಂಗೀತದಿಂದ ಪ್ರಭಾವಿತರಾಗಿದ್ದ ಇವರನ್ನು ಉತ್ತೇಜಿಸಿ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಇವರ ತಾಯಿಯ ಪಾತ್ರ ಹಿರಿದು. ವಾಸಾ ಪದ್ಮನಾಭಂ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕ್ರಮವಾದ ಶಿಕ್ಷಣ ದೊರಕಿತು. ವಿಜಯೇಶ್ವರರಾವ್‌ ಅವರಿಂದಲೂ ತಮ್ಮ ಸಂಗೀತ ಸಾಧನೆಗೆ ನೆರವು ಪಡೆದರು.

ಸುಮಾರು ಮೂರು ದಶಕಗಳಿಂದ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಕಮಲಾ ಸಂಗೀತ ಕಛೇರಿಗಳನ್ನು ನೀಡುವುದು ಮಾತ್ರವಲ್ಲದೆ ಸುಪ್ರಸಿದ್ಧ ನೃತ್ಯ ಕಲಾವಿದರ ನಾಟ್ಯ ರೂಪಕಗಳಿಗಾಗಿಯೂ ಹಾಡಿದ್ದಾರೆ.

ತಮ್ಮ ಪತಿ ಶ್ರೀ ರಾಮಮೂರ್ತಿಯವರೊಡಗೂಡಿ AARKAY ಸಂಸ್ಥೆ ಸ್ಥಾಪಿಸಿ ತನ್ಮೂಲಕ ಲೆಕ್ಕವಿಲ್ಲದಷ್ಟು ಕಛೇರಿಗಳನ್ನು ವ್ಯವಸ್ಥೆಗೊಳಿಸುವುದಲ್ಲದೇ ವರ್ಷಂಪ್ರತಿ ದೀಕ್ಷಿತರ ಉತ್ಸವ ಪುರಂದರ ದಾಸೋತ್ಸವ ಮುಂತಾದ ಉತ್ಸವಗಳನ್ನು ನಡೆಸುತ್ತಾರೆ. ಇವರ ಈ ಸಂಸ್ಥೆ ಹಲವಾರು ಭಾರತೀಯ ಹಾಗೂ ಕರ್ನಾಟಕದ ಕಲಾವಿದರ ಪ್ರವಾಸಕ್ಕೆ ಏರ್ಪಾಟುಗಳನ್ನು ಮಾಡುತ್ತಿದೆ.

ಹಲವು ರೀತಿಯಲ್ಲಿ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ಹೊರ ದೇಶದಲ್ಲಿ ನೆಲೆಸಿರುವ ಕನ್ನಡಿತಿ ಕಮಲಾ ಅವರನ್ನು ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.