Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಕಯ್ಯಾರ ಕಿಙ್ಞಣ್ಣ ರೈ

ಕಯ್ಯಾರ ಕಿಙ್ಞಣ್ಣ ರೈ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಸ್ವಾತಂತ್ರ್ಯ ಹೋರಾಟಗಾರರಾಗಿ ಗಡಿಯ ಹೋರಾಟಗಾರರಾಗಿ, ಕವಿಯಾಗಿ ಕಯ್ಯಾರರು ತಮ್ಮ ದಾರಿಯಲ್ಲಿ ಮಾಸದ ಹೆಜ್ಜೆ ಮೂಡಿಸಿದ್ದಾರೆ. ಕನ್ನಡದ ಕಟ್ಟಾಬಿಮಾನಿ, ಸತ್ಯಶೋಧಕ ದೃಷ್ಟಿ, ನೇರನುಡಿಗೆ ಹೆಸರಾದ ಕಯ್ಯಾರ ಕಿಙ್ಞಣ್ಣ ರೈ. ಇವರು ಜೂನ್ ೮, ೧೯೧೮ ರಲ್ಲಿ ಕಾಸರಗೋಡಿನ ಪೆರಡಾಲ ಗ್ರಾಮದಲ್ಲಿ ಜನಿಸಿದರು. ಇವರು ವಿದ್ವಾನ್ ಮತ್ತು ಎಂ.ಎ. ಪದವಿದರರಾಗಿದ್ದು ಪೆರಡಾಲ ಪ್ರೌಡಶಾಲೆಯಲ್ಲಿ ಅಧ್ಯಾಪಕರಾಗಿ ನಿವೃತ್ತರಾದವರು.

‘ಸ್ವದೇಶಾಬಿಮಾನಿ, ‘ಪ್ರಭಾತ, ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೇಸಾಯ ಅವರ ಮನೆತನದ ಕಸುಬು. ಮಣ್ಣಿನ ಮಗನಾಗಿ, ಸಮಾಜ ಸೇವಕರಾಗಿ, ಗಡಿನಾಡ ಕಿಡಿಯಾಗಿ, ಭಾವ ಪ್ರಪಂಚದ ಶಬ್ದಶಿಲ್ಪಿಯಾಗಿ, ಅಧ್ಯಾಪಕರಾಗಿ, ವಿಮರ್ಶಕರಾಗಿ, ಬೆಳೆದ ಕೈಯ್ಯಾರಕಿಙ್ಞಣ್ಣ ರೈ ತಮ್ಮ ದುಡಿತವೇ ದೇವರು ಎಂಬ ತಮ್ಮ ಕೃತಿಯಲ್ಲಿ ಗತಜೀವನದ ಸವಿನೆನಪುಗಳನ್ನು ಸ್ವಾರಸ್ಯವಾಗಿ ಅನಾವರಣಗೊಳಿಸಿದ್ದಾರೆ. ‘ಶ್ರೀಮುಖ, ಎಂಬ ತಮ್ಮ ಚೊಚ್ಚಲ ಕವನ ಸಂಗ್ರಹ ದಿಂದಲೇ ಪ್ರಸಿದ್ದಿಗೆ ಬಂದ ಕವಿ.

ಶ್ರೀಮುಖ, ಐಕ್ಯಗಾನ, ಪುನರ್ನವಚೇತನ, ಕೊರಗ, ಇವು ಇವರ ಕವನ ಸಂಕಲನಗಳು. ಅವರ ಕವನಗಳು ಬದುಕಿನ ಕೈಗನ್ನಡಿ ಎಂದರೆ ತಪ್ಪಲ್ಲ. ಅಲ್ಲಿ ವೇದನೆಯಿದೆ, ಸಂವೇದನೆಯಿದೆ. ಅದರಲ್ಲಿ ಗಾಂದೀಜಿ ದೃಷ್ಟಿಯಿದೆ, ರಾಷ್ಟ್ರೀಯ ಭಾವನೆಯಿದೆ, ಸ್ವಾತಂತ್ರ್ಯಪ್ರೇಮ, ವಿಶಾಲಮನೋಭಾವ, ವಿಶಿಷ್ಟ ಶೈಲಿಯಿದೆ. ಲಕ್ಷ್ಮೀಷನ ಕಥೆಗಳು, ಪರಶುರಾಮ ಇವರ ಕಥಾಸಂಕಲನಗಳಾಗಿವೆ.

ರಾಷ್ಟ್ರಕವಿ ಗೋವಿಂದ ಪೈ, ಗೋವಿಂದ ಪೈ ಸ್ಮೃತಿ ಕೃತಿ, ಸಾಹಿತ್ಯದೃಷ್ಟಿ, ಮಲಯಾಳಂ ಸಾಹಿತ್ಯಚರಿತ್ರೆ, ಮಹಾಕವಿ ಗೋವಿಂದ ಪೈ ಕಾರ್ನಾಡು ಸದಾಶಿವರಾವ್, ಸಂಸ್ಕೃತಿಯ ಹೆಗ್ಗುರುತು, ಇವು ಇವರ ಕೃತಿಗಳು. ಈ ಕೃತಿಗಳಲ್ಲಿ ಅವರು ಭಾವಜೀವವಾಗಿ ತುಡಿಯದೆ ವಿಮರ್ಶಕನ ಪ್ರಜ್ಞೆಯಿಂದ ರಸಾನುಭವ ಉಂಟುಮಾಡುತ್ತಾರೆ.

ಇವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಮದ್ರಾಸ್ ಸರ್ಕಾರದ ಮತ್ತು ಮೈಸೂರು ಸರ್ಕಾರದ ಬಹುಮಾನ ನೀಡಿ ಗೌರವಿಸಲಾಗಿದೆ. ೧೯೭೦ ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಇವರನ್ನು ಮಂಗಳೂರಿನಲ್ಲಿ ನಡೆದ ಅರವತ್ತಾರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದರು.

ಕನ್ನಡದ ಕಟ್ಟಾಬಿಮಾನಿ, ಸತ್ಯಶೋಧರಕರ ದೃಷ್ಟಿ, ನೇರನುಡಿಗೆ ಹೆಸರಾದ ಕಯ್ಯಾರಕಿಙ್ಞಣ್ಣ ರೈ ತಮ್ಮ ಎತ್ತರದಷ್ಟೇ ಜೀವನದ ಎತ್ತರ ನಿಲುವು ಹೊಂದಿದ್ದಾರೆ. ಕಯ್ಯಾರರು ಏನು ಬರೆದರೂ ಅಲ್ಲಿ ಕನ್ನಡತನ, ಕನ್ನಡಮನ ಕಾಣುತ್ತದೆ.