ಕರ್ನಾಟಕದ ವಿಶಿಷ್ಟ ಜಾನಪದ ಕಲೆಯಾದ “ಕರಗ ನೃತ್ಯ”ದಲ್ಲಿ ಹೆಸರಾಂತರಾಗಿ ಮೆರೆದ ಕೀರ್ತಿ ಕರಗದ ಕೆಂಪಣ್ಣನವರದು. ಈ ನೃತ್ಯವನ್ನು ಕರಗತ ಮಾಡಿಕೊಂಡ ಶ್ರೀಯುತರು ದೇಶದ ನಾನಾ ಭಾಗಗಳಲ್ಲಿ ಅದನ್ನು ಪ್ರದರ್ಶಿಸಿ, ಅದರ ಜನಪ್ರಿಯತೆಗೆ ಕಾರಣರಾಗಿದ್ದಾರೆ. ಆ ಕಲೆಯನ್ನು ಉಳಿಸಲು ಸಹಾಯಕರಾಗಿದ್ದಾರೆ.

ಹೊಸೂರು ತಾಲ್ಲೂಕಿನ ಪ್ಯಾರಹಳ್ಳಿಯ ಕೃಷಿಕ ಮನೆತನಕ್ಕೆ ಸೇರಿದ ಶ್ರೀಯುತರ ಹಿರಿಯರು ಈ ಕಲೆಯಲ್ಲಿ ಪರಿಣತರು. ಬಾಲ್ಯದಲ್ಲಿಯೇ ಈ ಕಲೆಯ ಪ್ರಭಾವಕ್ಕೆ ಒಳಗಾದ ಕೆಂಪಣ್ಣನವರಿಗೆ ತಂದೆ-ತಾಯಿಗಳ ಪ್ರೋತ್ಸಾಹವೂ ದೊರೆತು. ಗುರುಗಳ ಮೂಲಕ ಅದರ ಸಂಪ್ರದಾಯವನ್ನು ಕರಗತ ಮಾಡಿಕೊಂಡರು. ಹಾಡುಗಾರಿಕೆ ಹಾಗೂ ಮೃದಂಗ ವಾದನಗಳಲ್ಲೂ ಪರಿಶ್ರಮ ಪಡೆದು, ಪ್ರದರ್ಶನಗಳನ್ನು ನೀಡಲು ಪ್ರಾರಂಭಿಸಿದರು. ಕ್ರಮೇಣ ಈ ಪ್ರದರ್ಶನಗಳು ಜನಪ್ರಿಯತೆ ಗಳಿಸಿ, ಕೆಂಪಣ್ಣ ತಮ್ಮ ಜೀವನವನ್ನು ಈ ಕಲೆಗೆ ತೊಡಗಿಸಿಕೊಂಡರು.

ಶ್ರೀಯುತರು ರಾಜ್ಯ ಸಂಗೀತ ನಾಟಕ ಅಕಾಡೆಮಿ ಸಾಂಸ್ಕೃತಿಕ ವೃಂದದ ಸದಸ್ಯರಾಗಿ ವಿವಿಧ ಭಾಗಗಳಲ್ಲಿ ಸಂಚರಿಸಿ ಕನ್ನಡ ರಾಜ್ಯದ ಈ ಅಪೂರ್ವ ಕಲೆಗೆ ಅಪಾರ ಮನ್ನಣೆಯನ್ನುಒದಗಿಸಿಕೊಟ್ಟರು. ಇವರ ಪ್ರದರ್ಶನಗಳನ್ನು ಪ್ರಶಂಸಿದ ರಾಷ್ಟ್ರ ನಾಯಕರುಗಳಲ್ಲಿ ಡಾ. ಜಕೀರ್ ಹುಸೇನ್, ಬರ್ಮಾದ ಅಧ್ಯಕ್ಷ ನೇ ವಿನ್ ಸೇರಿದ್ದಾರೆ.

ಸಮಂದೂರಿನ ಕರಗದಮ್ಮನ ಆರ್ಚಕರಾಗಿ ಜೀವನವನ್ನು ಸಾಗಿಸಿದ ಕೆಂಪಣ್ಣ ತಮ್ಮ ಮಕ್ಕಳು ಮತ್ತು ಇತರ ಶಿಷ್ಯರಿಗೂ ಈ ಕಲೆಯಲ್ಲಿ ತರಬೇತಿ ಇತ್ತು. ಈ ವಿಶಿಷ್ಟ ಪ್ರಕಾರದ ಉಳಿವಿಗೂ ಕಾರಣರಾಗಿದ್ದಾರೆ.