ತುಮಕೂರು ಜಿಲ್ಲೆ ಶಿರಾ ತಾಲೂಕು ಕಳ್ಳಂಬೆಳ್ಳದ ಕಾಂತಣ್ಣ ಡಿಪ್ಲೊಮ ಪದವೀಧರರು. ಇಲ್ಲಿ ಒಂದೂವರೆ ಎಕರೆ ಚಿಕ್ಕ ತೋಟ. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಾ ತೋಟವನ್ನು ಗುತ್ತಿಗೆಗೆ ಕೊಟ್ಟಿದ್ದರು. ವರ್ಷಕ್ಕೆ ಒಂದಷ್ಟು ಹಣ ಬರುತ್ತಿತ್ತು, ಪಡೆದು ಸುಮ್ಮನಾಗುತ್ತಿದ್ದರು.

೨೦೦೧ರಿಂದ ಸತತ ಬರಗಾಲ. ಮೂರು ವರ್ಷಾನಂತರ ನಾನೂರು ಅಡಿಕೆ ಗಿಡ ಒಣಗಿ ಹೋಗಿದೆಯೆಂಬ ಸುದ್ದಿ. ಅದು ವರೆಗೂ ತೋಟ ಹೇಗಿದೆ, ಏನೇನು ಫಸಲಿದೆ ಎಂಬುದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಕಾಂತಣ್ಣ ಕಂಗಾಲು. ಊರಿಗೆ ಬಂದು ನೋಡಿದರೆ ತೋಟ ಭಾಗಶಃ ಹಾಳಾಗಿ, ಉಳಿದದ್ದೂ ಸಹ ಹೆಚ್ಚು ದಿನ ಬಾಳುವಂತಿರಲಿಲ್ಲ.

ವಂಶಪಾರಂಪರ್ಯವಾಗಿ ಬಂದ ಈ ಕೆರೆ ಹಿಂದಿನ ತೋಟ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿತ್ತು. ನೊಂದ ಕಾಂತಣ್ಣ ಬೆಂಗಳೂರು ತೊರೆದು ಮಣ್ಣಿಗೆ ಮರಳಿದರು. ಅಕ್ಕಪಕ್ಕದವರಂತೆ ತೋಟ ಮಾಡಿದರೆ ಉಳಿಗಾಲವಿಲ್ಲ ಎನಿಸಿತು.

ವಿಭಿನ್ನ ಮಾರ್ಗ – ಸಹಜ ಕೃಷಿಯ ಆಯ್ಕೆ. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬೇರೆಬೇರೆ ಕಡೆಯ ತೋಟ ಸುತ್ತಾಟ. ಅನುಭವಿ ಕೃಷಿಕರ ಭೇಟಿ. ಪುಸ್ತಕ ಅಧ್ಯಯನ. ಜೊತೆಗೆ ತಮ್ಮ ಸಾಮಾನ್ಯ ಜ್ಞಾನದ ಬಳಕೆ. ತೋಟದ ಜೀರ್ಣೋದ್ಧಾರಕ್ಕೆ ಇವೆಲ್ಲವೂ ಪ್ರಯೋಜನಕ್ಕೆ ಬಂದವು.

ಈ ಹಾದಿಯಲ್ಲಿ ಇವರು ಅಳವಡಿಸಿಕೊಡ ಮುಖ್ಯ ವಿಧಾನಗಳೆಂದರೆ ದನಗಳನ್ನು ಬಳಸಿ ತೋಟದ ಉಳುಮೆ ಮಾಡುವುದಕ್ಕೆ (ಈ ಭಾಗದಲ್ಲಿ ಅಡಿಕೆ ತೋಟಗಳನ್ನು ದನಗಳಿಂದ ಉಳುಮೆ ಮಾಡುತ್ತಾರೆ, ಒಂದು ವೇಳೆ ಗಿಡಗಳು ಒತ್ತಾಗಿದ್ದರೆ, ಅಥವಾ ಚಿಕ್ಕ ಗಿಡಗಳಿದ್ದರೆ ಆಳುಗಳಿಂದ ಅಗೆತ ಮಾಡಿಸುತ್ತಾರೆ) ವಿದಾಯ, ಉಪ ಬೆಳೆಗಳ ಅಳವಡಿಕೆ ಹಾಗೂ ತೋಟದ ತ್ಯಾಜ್ಯವನ್ನು ಅಲ್ಲೇ ಬಿಟ್ಟಿದ್ದು. 

ಮುಂಚೆ ತೋಟದ ತ್ಯಾಜ್ಯವೆಲ್ಲವನ್ನೂ ಒಟ್ಟು ಸೇರಿಸಿ ಹೊಲದಾಚೆ ಸುಟ್ಟು ಹಾಕುವುದಿತ್ತು. ಎಲ್ಲರ ವಿರೋಧದ ನಡುವೆಯೂ ಅದಕ್ಕೆ ವಿದಾಯ ಹೇಳಿ ಇವನ್ನು  ತೋಟದಲ್ಲೇ ಬಿಡಲು ಆರಂಭಿಸಿದರು. ಈ ಹೆಜ್ಜೆ ತೇವಾಂಶ ಉಳಿಸಲು ಸಹಾಯಕವಾಯಿತು. ಬರಗಾಲದಿಂದ ಎದುರಾಗಿದ್ದ ನೀರಿನ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಕ್ಕಿತು. ಕೊಕ್ಕೋ, ವೆನಿಲ್ಲಾ,  ಬಾಳೆ ಮುಂತಾದ ಉಪಬೆಳೆಗಳನ್ನು ತೆಂಗು, ಅಡಿಕೆ ಗಿಡಗಳ ಮಧ್ಯೆ ಬೆಳೆಸಿದ್ದರಿಂದ ನೆಲಕ್ಕೆ ಬಿಸಿಲು ಕಡಿಮೆಯಾಯಿತು. ತೇವಾಂಶ ಮತ್ತಷ್ಟು ಹೆಚ್ಚಾಯಿತು. ಬೇಸಿಗೆಯಲ್ಲೂ ಹದಿನೈದು-ಇಪ್ಪತ್ತು ದಿನಕ್ಕೊಮ್ಮೆ ನೀರುಣಿಸಿದರೆ ಸಾಕಾಯಿತು. ಮುಂಚೆ ಕಡ್ಡಾಯವಾಗಿ ವಾರ-ಹತ್ತು ದಿನಗಳಿಗೊಮ್ಮೆ ನೀರುಣಿಸಬೇಕಾಗಿತ್ತು.

ಇವರು ತೋಟಕ್ಕೆ ಮರಳಿದಾಗ ಒಂದೂವರೆ ಎಕರೆ ತೋಟದಲ್ಲಿ ಇದ್ದದ್ದು ೮೦೦ ಅಡಿಕೆ, ೨೦ ತೆಂಗು ಹಾಗೂ ೮ ಹುಣಸೆ ಮಾತ್ರ. ಈಗ-ನಾಲ್ಕು ವರ್ಷಗಳ ನಂತರ, ಈಗ, ಕಾಂತಣ್ಣನ ತೋಟದ ಬೆಳೆವೈವಿಧ್ಯ ನೋಡಿ. ಅಡಿಕೆ ೧೨೦೦, ಬಾಳೆ ೫೦೦, ಕೊಕ್ಕೋ ೫೦೦, ವೆನಿಲ್ಲಾ ೧೦೦೦, ಜಿಂಜರ್ ಲಿಲ್ಲಿ ೮೦೦. ಜೊತೆಗೆ ಮುಂಚೆ ಇದ್ದ ತೆಂಗು, ಹುಣಸೆ.

ಉಳುಮೆಗೆ ವಿದಾಯ ಹೇಳಿದ್ದರಿಂದ  ಆದ ಲಾಭವಂತೂ ಅಪಾರ.  ಮುಖ್ಯವಾಗಿ ಕೂಲಿ ಆಳುಗಳ ಕಾಲಿಗೆ ಬೀಳೋದು ತಪ್ತು ಎನ್ನುತ್ತಾರೆ ಕಾಂತಣ್ಣ. ಈ ಭಾಗದಲ್ಲಿ ಕೂಲಿ ಆಳುಗಳಿಗೆ ತುಂಬ ಅಭಾವ. ಒಮ್ಮೊಮ್ಮೆ ಎಷ್ಟು ಕೊಟ್ಟರೂ ಜನ ಸಿಗುವುದು ಕಷ್ಟ. ಉಳುಮೆ, ಅಗೆತ, ಗೊಬ್ಬರ ಹಾಕುವುದು, ತೋಟದಲ್ಲಿ ಕಳೆ ತೆಗೆಯುವುದು ಇತ್ಯಾದಿ ಕೆಲಸ ನಿಲ್ಲಿಸಿದ್ದರಿಂದ ಈಗ ಇಡೀ ವರ್ಷ ಒಬ್ಬ ಕೂಲಿಯಾಳೂ ಬೇಕಿಲ್ಲ. ಅಷ್ಟು ಖರ್ಚು ಉಳಿತಾಯ, ನಿರಾಳ. ಅಂದಾಜು ೩೫ ಸಾವಿರ ರೂ  ಉಳಿದಿದೆ ಎನ್ನುವುದು ಇವರ ಲೆಕ್ಕ.

ಅಡಿಕೆ ಫಸಲನ್ನು ಈಗ ಗುತ್ತಿಗೆಗೆ ಕೊಡುತ್ತಾರೆ. ಹಾಗಾಗಿ ಕೊಯ್ಲಿನ ಕೂಲಿಯೂ ಉಳಿದಿದೆ. ೨೦೦೮ ರಲ್ಲಿ ಒಂದು ಲಕ್ಷ ರೂ.ಗೆ ಫಲಗುತ್ತಿಗೆಗೆ ಕೊಟ್ಟಿದ್ದಾರೆ. ಜೀವಾಮೃತದ ಖರ್ಚು, ನೀರಾವರಿ ಹಾಗೂ ಮನೆಯವರ ಕೆಲಸ ಬಿಟ್ಟರೆ ಇನ್ಯಾವ ಖರ್ಚೂ ಮಾಡಿಲ್ಲ ಎನ್ನುತ್ತಾರೆ.

ಐದು ವರ್ಷ ಹಿಂದೆ ೮೦೦ ಅಡಿಕೆ ಗಿಡಗಳ ಇಳುವರಿ ಒಂದು ಕ್ವಿಂಟಾಲ್ ಮಾತ್ರ. ಅದು ಕೂಲಿಗೂ ಸಾಕಾಗುತ್ತಿರಲಿಲ್ಲ. ನಂತರದ ವರ್ಷಗಳಲ್ಲಿ ಇಳುವರಿಯ ಏರಿಕೆ ಆಶ್ಚರ್ಯಕರ. ೨೦೦೫ರಲ್ಲಿ ಆರು ಕ್ವಿಂಟಾಲ್. ಮುಂದಿನ ವರ್ಷ ಹತ್ತು. ಈ ವರ್ಷ(೨೦೦೮) ಹದಿನೈದು ತಲುಪಿದೆ. (ಆದಾಯ? ಮೇಲಿನ ಪ್ಯಾರಾದಲ್ಲಿ ಅದಾಯದ ಮಾಹಿತಿ ಇದೆ ) ”ಈ ರೀತಿ ಇಳುವರಿ ಹೆಚ್ಚಾದ್ದರಿಂದ ನನಗೂ ಧೈರ್ಯ ಬಂತು. ಈಗ ತೋಟಕ್ಕಾಗಿ ಹೊರಗಿನಿಂದ ಏನನ್ನೂ ಕೊಂಡು ತರುವುದಿಲ್ಲ. ಸಗಣಿಗೊಬ್ಬರ ಹಾಕುವುದನ್ನೂ ಸಹ ನಿಲ್ಲಿಸಿ ೨೦ ದಿನಕ್ಕೊಮ್ಮೆ ಜೀವಾಮೃತ ಮಾತ್ರ ಹಾಕುತ್ತೇನೆ” ಎನ್ನುತ್ತಾರೆ. ಮನೆಯಲ್ಲಿರುವ ಎರಡು ನಾಟಿ ಹಸುಗಳು ಜೀವಾಮೃತಕ್ಕೆ ಬೇಕಾದ ಸಗಣಿ ಕೊಡುತ್ತವಂತೆ.

ಉಪಬೆಳೆಗಳಲ್ಲಿ ಬಾಳೆ ಫಸಲು ಕೊಡುತ್ತಿದ್ದು ಕೊಕ್ಕೋ, ಜಿಂಜರ್ ಲಿಲ್ಲಿ ಮತ್ತು ವೆನಿಲ್ಲಾ ಫಸಲು ಈ ವರ್ಷ ಪ್ರಾರಂಭವಾಗುತ್ತಿದೆ. ಉಪ ಬೆಳೆಗಳಿಗೆ ಪ್ರತ್ಯೇಕ ಉಪಚಾರವಿಲ್ಲ. ಅಡಿಕೆಗೆ ಕೊಡುವ ಜೀವಾಮೃತವೇ ಇವುಗಳಿಗೂ ಸಿಕ್ಕು ಸೊಗಸಾಗಿ ಬೆಳೆದಿವೆ. ಕೊಯ್ಲು, ಸಂಸ್ಕರಣೆ ಬಿಟ್ಟರೆ ಇವುಗಳಿಗೆ ತಗುಲುವ ಖರ್ಚು ಕಡಿಮೆ.

ಜಿಲ್ಲೆಯಲ್ಲಿ ಜಿಂಜರ್ ಲಿಲ್ಲಿಯ ಹರಿಕಾರ

ಕಾಂತಣ್ಣ ಕೃಷಿಪತ್ರಿಕೆಗಳನ್ನು ತಪ್ಪದೆ ಓದುತ್ತಾರೆ. ಅವರ ಬಳಿ  ಕಾದಿಟ್ಟ ಕೃಷಿ ಲೇಖನಗಳ ರಾಶಿಯೇ ಇದೆ. ಅಡಿಕೆ ಪತ್ರಿಕೆಯಲ್ಲಿ ಬೆಳಕು ಕಂಡ ಹಲವು ವಿಚಾರಗಳನ್ನು ಅಳವಡಿಸಿಕೊಂಡಿದ್ದಾರೆ. ಅದರಲ್ಲಿ ಪರಿಚಯವಾಗುವ ಹಲವು ರೈತರ ತೋಟಗಳಿಗೆ ಹೋಗಿ ಬಂದಿದ್ದಾರೆ. ಹೋದಾಗಲೆಲ್ಲಾ ಏನಾದರೊಂದು ಗಿಡ ತಂದು ನೆಟ್ಟಿದ್ದಾರೆ.

ಆ ರೀತಿ ಅಡಿಕೆ ಪತ್ರಿಕೆಯಿಂದ ಪರಿಚಯವಾದದ್ದು ಜಿಂಜರ್ ಲಿಲ್ಲಿ(ಡಿಸೆಂಬರ್ ೨೦೦೬). ಸುಳ್ಯದ ಆರ್.ಕೆ.ರಾಜಿಯವರ ಲಿಲ್ಲಿ ಹೂವಿನ ಬಗೆಗಿನ ಲೇಖನ ಓದಿ ಸೀದಾ ತೋಟ ಭೇಟಿ. ೨೦೦೭ ಜೂನ್‌ನಲ್ಲಿ ಮತ್ತೊಮ್ಮೆ. ಆಗ ೧೫೦೦ ಜಿಂಜರ್ ಲಿಲ್ಲಿ ಸಸಿ ತಂದರು. ಎಂಟುನೂರು ನೆಟ್ಟು ಉಳಿದವನ್ನು ಇದೇ ಗ್ರಾಮದ ಮಂಜುನಾಥ್‌ಗೆ ಕೊಟ್ಟರು. ತೋಟದ ನಡುವೆ ಆರು ಅಡಿ ಅಂತರದಲ್ಲಿ ಲಿಲ್ಲಿ ನೆಟ್ಟಿದ್ದಾರೆ.  ಅರ್ಧ ಅಡಿ ಅಗಲ, ಒಂದಡಿ ಆಳ. ಗಿಡ ಮನೆಗೆ ತಲುಪಿದಾಗ ೨೫೦೦೦ ರೂ ಖರ್ಚಾಗಿತ್ತು.

ತುಮಕೂರು ಜಿಲ್ಲೆ ಒಣಪ್ರದೇಶ. ಲಿಲ್ಲಿ ನೆಟ್ಟಾಗ  ಕಾಂತಣ್ಣನವರಿಗೆ ಇದು ಇಲ್ಲಿಗೆ ಹೊಂದಿಕೊಳ್ಳುವ ಬಗ್ಗೆ ಅನುಮಾನವಿತ್ತು. ಆದರೆ ಈಗ ಇದು ಪರಿಹಾರವಾಗಿದೆ. ಜಿಂಜರ್ ಲಿಲ್ಲಿ ತುಮಕೂರಿನಲ್ಲೂ ಗೆದ್ದಿದೆ. ಈಗಾಗಲೇ ೧೦-೧೨ ತೆಂಡೆಗಳು ಬಂದಿವೆ. ”ಲಿಲ್ಲಿ ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಅಂತರ ಬೆಳೆಯಾಗಿ ಹಾಕಲು ಸೂಕ್ತವಾದುದು. ಅರೆನೆರಳಲ್ಲಿ ಉತ್ತಮವಾಗಿ ಬೆಳೆಯುತ್ತದೆ ” ಎನ್ನುತ್ತಾರೆ. ಕಾಂತಣ್ಣನ ತೋಟದ ತಂಪು ಸೂಕ್ಷ್ಮ ವಾತಾವರಣವೂ ಈ ಉತ್ತಮ ಬೆಳವಣಿಗೆಗೆ ಕಾರಣ. ಇದರೊಂದಿಗೇ  ಮಂಜುನಾಥ್ ತೋಟದಲ್ಲಿ ನೆಟ್ಟ ಗಿಡಗಳು ಅಷ್ಟು ಚೆನ್ನಾಗಿ ಉತ್ತಮವಾಗಿ ಬೆಳೆದಿಲ್ಲ.

ಜಿಂಜರ್ ಲಿಲ್ಲಿ ಶುಂಠಿ ಜಾತಿಗೆ ಸೇರಿದ ಗಿಡ.  ಕೆಂಪು ಬಣ್ಣದ ಆಕರ್ಷಕ ಹೂ. ಕಿತ್ತ ನಂತರ ಹನ್ನೆರಡು ದಿನಗಳವರೆಗೂ ಆಕರ್ಷಣೆ ಬಾಡುವುದಿಲ್ಲ. ಅಲಂಕಾರಕ್ಕೆ ಜನಪ್ರಿಯ. ವರ್ಷ ಪೂರ್ತಿ ಬೆಳೆ. ಬೆಂಗಳೂರಿನಲ್ಲಿ ಉತ್ತಮ ಮಾರುಕಟ್ಟೆ. ಹೂವೊಂದಕ್ಕೆ ೫೦ ರೂ. (ಇದು ನಿಜವೇ?) ವರೆಗೂ! ಕಾಂತಣ್ಣ ಸ್ಥಳೀಯವಾಗಿ ೧೦ ರಿಂದ ೧೨ ರೂಗಳಿಗೆ ಮಾರಿದ್ದಾರೆ.

”ಹೂಗಳಿಗಿಂತಲೂ ಸಸಿಗಳಿಗೇ ಹೆಚ್ಚು ಬೇಡಿಕೆ ಇದೆ”, ಕಾಂತಣ್ಣ ಹೇಳುತ್ತಾರೆ, ”ಈಗಾಗಲೇ ೧೦೦೦ ಸಸಿಗಳು ಬೇಕೆಂದು ಅಕ್ಕಪಕ್ಕದ ರೈತರು ಕೇಳಿದ್ದಾರೆ”. ಲಿಲ್ಲಿಯ  ವೈಶಿಷ್ಟ್ಯ ಎಂದರೆ ಹೂವಿನಲ್ಲೇ ಸಸಿಗಳ ಜನ್ಮ. ಅರಳಿದ ನಂತರ ಇಪ್ಪತ್ತು ದಿನ ಕೀಳದೆ ಬಿಟ್ಟರೆ ಸಸಿಗಳು ಮೊಳಕೆಯೊಡೆಯುತ್ತವೆ. ಪ್ರತಿಯೊಂದು ಹೂನಲ್ಲೂ ೧೦-೧೫ ಸಸಿ. ಹೂವಿಗಿಂತಲೂ ಸಸಿ ಮಾರಲು ಇದೂ ಒಂದು ಕಾರಣ. ಒಂದು ಹೂ ಮಾರುವುದಕ್ಕಿಂತ ಸಸಿ ಮಾರಿದರೆ ಐದಾರು ಪಟ್ಟು ಆದಾಯ.

ಬಾಳೆ ಜೊತೆ ಲಿಲ್ಲಿ ಅಂತರ ಬೆಳೆಯಾಗಿ ಹಾಕಿದರೆ ಬಾಳೆಗೆ ರೋಗ ಬರುವುದಿಲ್ಲ ಎನ್ನುತ್ತಾರೆ ಇವರು. ಇದಕ್ಕೆ ಇವರು ಕೊಡುವ ಉದಾಹರಣೆ ”ಪಕ್ಕದ ತೋಟದ ಬಾಳೆಗೆ ರೋಗ ಬಂದು ೩೦೦-೪೦೦ ಗಿಡಗಳು ನಾಶವಾದವು, ಆದರೆ ನಮ್ಮದಕ್ಕೆ ಯಾವುದೇ ರೋಗ ಬಂದಿಲ್ಲ” ಎನ್ನುವುದು. ಇದು ಕಾಕತಾಳೀಯವೂ ಇರಬಹುದು. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ.

ಪುಟ್ಟ ಬಾಳೆಯಿಂದ ದೊಡ್ಡ ಆದಾಯ!

ಕಳ್ಳಂಬೆಳ್ಳದ ಕೆರೆ ಹಿಂದೆ ಇರುವ ಹಲವಾರು ತೋಟಗಳಲ್ಲಿ ಕಾಂತಣ್ಣನ ತೋಟವನ್ನು ಸುಲಭವಾಗಿ ಗುರುತಿಸಬಹುದು. ಇವರ ತೋಟದಲ್ಲಿ ಬಾಳೆ ಎದ್ದು ಕಾಣುತ್ತದೆ. ಇದು ಹೆಚ್ಚು ಸಾವಯವ ತ್ಯಾಜ್ಯ ಮತ್ತು ಒಳ್ಳೆ ಆದಾಯ ತಂದಿರುವ ಬೆಳೆ. ಅಡಿಕೆ ನಡುವೆ ಹಾಕಿದ ಅಂತರ ಬೆಳೆಗಳಲ್ಲಿ ಬೇಗ ಆದಾಯ ತಂದಿದ್ದು ಪುಟ್ಟಬಾಳೆ ಎನ್ನುವುದು ಇವರ ಹೆಮ್ಮೆಯ ಹೇಳಿಕೆ.

೨೦೦೬ ಜೂನ್‌ನಲ್ಲಿ ಐನೂರು ಸಸಿ ನಾಟಿ. ವರ್ಷದ ನಂತರ ಫಸಲು. ಕಳೆದ ವರ್ಷ ೫೦,೦೦೦ ರೂ ನಿವ್ವಳ ಆದಾಯ ಬಂದಿದೆಯಂತೆ. ಕಾಂತಣ್ಣನ ಲೆಕ್ಕಾಚಾರದ ಪ್ರಕಾರ ಒಂದು ಗಿಡ ನೆಡಲು ಆಗಿರುವ ನೇರ ಖರ್ಚು ಒಂದೂವರೆ (ಒಳಸುರಿಯ ವೆಚ್ಚ ಮಾತ್ರ ಎನ್ನುವುದು ಒಳ್ಳೆಯದು. ಇವರ ಶ್ರಮ, ಬಂಡವಾಳ – ಇತ್ಯಾದಿ?)  ರೂಪಾಯಿ. ನೆಟ್ಟ ನಂತರ ಉಳಿದೆಲ್ಲಾ ಕೆಲಸಗಳನ್ನೂ ಮನೆಯವರೇ ನಿರ್ವಹಿಸಿದ್ದಾರೆ. ಬಾಳೆಗೊನೆ ಸರಾಸರಿ ೧೦-೧೨ ಕಿಲೋ ತೂಕ ಬಂದಿವೆ. ಕೆಲವು ೨೫ ಕಿಲೋ ತೂಗಿದ್ದುವು. ಕಿಲೋ ಒಂದಕ್ಕೆ ಸರಾಸರಿ ೧೫ ರೂ ಸಿಕ್ಕಿದೆಯಂತೆ.

ಪುಟ್ಟ ಬಾಳೆಯ ವಿಶೇಷ ಎಂದರೆ ತಾಳಿಕೆ  ಹೆಚ್ಚು. ಉದಾಹರಣೆಗೆ ಪಚ್ಚಬಾಳೆ  ಗೊನೆ ಕೊಯ್ದು ೨-೩ ದಿನ ಇದ್ದರೆ ಇದು ಎಂಟು ದಿನ ಇರುತ್ತದೆ. ತಿಂದವರೆಲ್ಲಾ ಇವರ ಬಾಳೆ ಹೆಚ್ಚು ರುಚಿ ಎನ್ನುತ್ತಾರಂತೆ. ಸಹಜ ಕೃಷಿಯ ಗುಣವಿರಬೇಕು.

ಪುಟ್ಟಬಾಳೆಗೆ ಸದಾ ಬೇಡಿಕೆ ಇರುವುದರಿಂದ ಮಾರುಕಟ್ಟೆ ಸಮಸ್ಯೆ ಕಾಡಿಲ್ಲ. ಬೆಲೆ ತುಂಬಾ ಕಡಿಮೆಯಾದದ್ದಿಲ್ಲ ಎನ್ನುತ್ತಾರೆ. ಬೇಸಾಯ ಖರ್ಚು ತೀರಾ ಕಡಿಮೆಯಾದ್ದರಿಂದ ನಷ್ಟ ಇಲ್ಲ.

ಬಾತುಕೋಳಿಗಳೇ ಕೂಲಿಯಾಳುಗಳು!

ಅಡಿಕೆ ಮರಗಳಿಗೆ ಬಸವನಹುಳು ಕಾಟ ವಿಪರೀತವಾಗಿತ್ತು. ಮಳೆಗಾಲದಲ್ಲಂತೂ ಹೇಳತೀರದು. ಕೂಲಿಯಾಳುಗಳ ಮೂಲಕ ಕೈಯಿಂದ ಆರಿಸಿ ನಿಯಂತ್ರಣ. ಇದು ಅಲ್ಪಸ್ವಲ್ಪ ಪರಿಣಾಮಕಾರಿ.  ಪ್ರಯೋಗಶೀಲ ಮನಸ್ಸಿನ ಕಾಂತಣ್ಣನಿಗೆ ಬಾತುಕೋಳಿಗಳು ಬಸವನಹುಳು ತಿನ್ನುತ್ತವೆ ಎಂದು ಓದಿದ್ದು ನೆನಪಾಯಿತು. ತುಂಬ ಹುಡುಕಿ ೩೦೦ ರೂ.ಗೆ ಒಂದು ಜೊತೆ ತಂದೇಬಿಟ್ಟರು. ಇವು ಎಷ್ಟು ಚೆನ್ನಾಗಿ ಕೆಲಸ ಮಾಡಿದುವೆಂದರೆ ಕಳೆದ ಆರು ತಿಂಗಳಿಂದ ಒಂದು ಬಸವನಹುಳುವೂ ಇವರ ತೋಟದಲ್ಲಿಲ್ಲ.

”ಸಹಜ ಕೃಷಿಯಲ್ಲಿ ನಾನು ಒಳ್ಳೆ ಫಲಿತಾಂಶ ಪಡೆದಿರುವುದು ಸುತ್ತಮುತ್ತಲ ತೋಟದವರೆಲ್ಲರಿಗೂ ಗೊತ್ತು, ಆದರೆ ಅಳವಡಿಕೆಗೆ ಮುಂದೆ ಬರುತ್ತಿಲ್ಲ” ಎಂಬ ಕೊರಗು ಇವರಲ್ಲಿದೆ. ಬೆರಳೆಣಿಕೆಯಷ್ಟು ಜನ ಮಾತ್ರ ಈಗೀಗ ಅಳವಡಿಕೆಗೆ ಮುಂದಾಗಿದ್ದಾರೆ. ಅದೇ ಸಂತಸ.

ಸಂಪರ್ಕ: ಕಮಲಕಾಂತ್, ಕಳ್ಳಂಬೆಳ್ಳ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ. ಮೊಬೈಲ್_ ೯೭೩೧೨ ೧೪೧೫೫

(ಇವರ ಪೂರ್ಣ ಹೆಸರು ಕಮಲಕಾಂತ್ ಆದರೂ ಕಾಂತಣ್ಣ ಎಂಬುದೇ ಜನಪ್ರಿಯ. )