ಇದನ್ನು ಹಣ್ಣಾದ ನಂತರ ಬಳಸುತ್ತಾರೆಯೇ ಹೊರತು ತರಕಾರಯಾಗಿ ಬಳಸುವುದಿಲ್ಲ. ಕರ್ನಾಟಕದಲ್ಲಿಯೇ ಅಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ರಾಜಾಸ್ತಾನ ಮುಂತಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಹಣ್ಣುಗಳು ಹೆಸರುವಾಸಿ. ಕೇವಲ ಮೂರು ನಾಲ್ಕು ತಿಂಗಳಲ್ಲಿ ಬೆಳೆ ಕೈಗೆ ಸಿಗುತ್ತದೆ; ಹೆಚ್ಚು ಆದಾಯ ಕೊಡುವ ವಾಣಿಜ್ಯ ಬೆಳೆ ಕರಬೂಜ.

ಪೌಷ್ಟಿಕ ಗುಣಗಳು: ಕರಬೂಜ ಹಣ್ಣು ಅಧಿಕ ಪ್ರಮಾಣದ ಸಕ್ಕರೆ ಪಿಷ್ಟ, ಪ್ರೊಟೀನ್, ಖನಿಜ ಪದಾರ್ಥ ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ.

೧೦೦ ಗ್ರಾಂ ಕರಬೂಜ ಹಣ್ಣಿನ ತಿರುಳಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೯೪.೦ ಗ್ರಾಂ
ಶರ್ಕರಪಿಷ್ಟ – ೫.೦ ಗ್ರಾಂ
ಪ್ರೊಟೀನ್ – ೧.೦ ಗ್ರಾಂ
’ಎ’ ಜೀವಸತ್ವ – ೩೪೨೦ ಐಯು
ರೈಬೋಪ್ಲೇವಿನ್ – ೦.೦೫ ಮಿ.ಗ್ರಾಂ
’ಸಿ’ ಜೀವಸತ್ವ – ೩೩ ಮಿ.ಗ್ರಾಂ
ಥಯಮಿನ್ – ೦.೦೪ ಮಿ.ಗ್ರಾಂ

ಔಷಧೀಯ ಗುಣಗಳು : ಕರಬೂಜ ಹಣ್ಣು ಅಧಿಕ ಪ್ರಮಾಣದ ’ಎ’ ಜೀವಸತ್ವ ಹೊಂದಿರುವ ಕಾರಣ ಕಣ್ಣುಗಳ ದೃಷ್ಟಿ ಸುಧಾರಿಸುತ್ತದೆ ಕಣ್ಣಿನ ದೋಷಗಳು ಹಾಗೂ ಇರುಳುಗಣ್ಣುಗಳಿಂದ ಬಾಧೆ ಪಡುತ್ತಿರುವವರು ಇದನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಇದನ್ನು ತಿನ್ನುತ್ತಿದ್ದಲ್ಲಿ ಸ್ಕರ್ವಿ ಕಾಯಿಲೆಗೆ ಒಳ್ಳೆಯದು.

ಉಗಮ ಮತ್ತು ಹಂಚಿಕೆ : ಇದರ ಮೂಲ ಭಾರತ ಮತ್ತು ಆಫ್ರಿಕಾ. ಈಗ ಜಗತ್ತಿನ ಎಲ್ಲಾ ಕಡೆ ಇದರ ಬೇಸಾಯ ಮತ್ತು ಬಳಕೆಗಳು ಇವೆ.

ಸಸ್ಯ ವರ್ಣನೆ : ಕರಬೂಜ ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಬಳ್ಳಿ, ಕಾಂಡ ಬಲಹೀನ. ಅದು ಸಣಕಲಾಗಿದ್ದು ನೆಲದ ಮೇಲೆ ತೆವಳಿ ಹರಡುತ್ತದೆ. ಆಸರೆ ಸಿಕ್ಕಲ್ಲಿ ನುಲಿಬಳ್ಳಿಗಳ ನೆರವಿನಿಂದ ಮೇಲಕ್ಕೇರಬಲ್ಲದು. ಬಳ್ಳಿ ಕಾಂಡದಲ್ಲಿ ಹಲವಾರು ಕವಲು ಹಂಬುಗಳಿರುತ್ತವೆ. ಎಲೆಗಳು ಹೃದಯಾಕಾರ, ನರಗಳು ಉಬ್ಬಿರುತ್ತವೆ. ಎಲೆಗಳ ಬಣ್ಣ ಹಸುರು. ಹೂವು ಏಕಲಿಂಗಿಗಳು, ಕಾಯಿಗಳು ದುಂಡಗೆ, ಗೋಲಾಕಾರ, ಸೋರೆ ಬುರುಡೆಯಂತೆ ಮುಂತಾಗಿ ಹಲವಾರು ಆಕಾರಗಳಲ್ಲಿರುತ್ತವೆ. ಹಣ್ಣು ಅರ್ಧ ಕಿ.ಗ್ರಾಂ ನಿಂದ ಎರಡು ಕಿ.ಗ್ರಾಂ ಗಳವರೆಗೆ ತೂಗುತ್ತವೆ. ಹಣ್ಣು ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ. ಸಿಪ್ಪೆ ಬಿಳಿಗಂದು ಇಲ್ಲವೇ ಕೆನೆ ಬಿಳುಪು ಬಣ್ಣದ್ದಿದ್ದು ಮೇಲೆಲ್ಲಾ ಬಲೆಯಂತಹ ಗುರುತುಗಳಿರುತ್ತವೆ; ಕೆಲವೊಂದರಲ್ಲಿ ಅದು ನಯವಾಗಿ ಇರುವುದುಂಟು. ತಿರುಳು ದಪ್ಪ; ರಸವತ್ತಾಗಿ ಹಸಿರು ಇಲ್ಲವೇ ಕೆನೆಬಿಳುಪು ಬಣ್ಣವಿದ್ದು ಹರಳುಗಳಂತೆ ತಿನ್ನಲು ಗರಿಗರಿಯಾಗಿರುತ್ತದೆ. ಒಳಗಿನ ಪೊಳ್ಳು ಭಾಗ ಸಾಕಷ್ಟಿದ್ದು ಅದರ ಒಳಭಾಗದಲ್ಲಿ ಲೋಳೆಯಂತಹ ರಸದ ಪದರ ಹಾಗೂ ಬೀಜ ಇರುತ್ತವೆ. ಬೀಜ ಅಂಡಾಕಾರ; ಬಹುಮಟ್ಟಿಗೆ ಸೌತೆ ಬೀಜದಂತಿರುತ್ತವೆ. ಅದು ಬಲಿತು ಪಕ್ವಗೊಂಡಂತೆಲ್ಲಾ ವಿಶಿಷ್ಟ ಪರಿಮಳ ಹರಡುತ್ತದೆ. ಇದರ ಬೇರು ಸಾಕಷ್ಟು ಆಳಕ್ಕೆ ಇಳಿದಿರುತ್ತದೆ.

ಹವಾಗುಣ : ಈ ಬೆಳೆಯ ಬೇಸಾಯಕ್ಕೆ ಬಿಸಿ ಹವಾಗುಣ ಬಲು ಸೂಕ್ತ. ಅಧಿಕ ಬಿಸಿಲು ಹಾಗೂ ಒಣ ಹವೆಗಳಿದ್ದರೆ ಫಸಲಿನ ಗುಣಮಟ್ಟ ಅತ್ಯುತ್ತಮವಿರುತ್ತದೆ. ಕರ್ನಾಟಕದಲ್ಲಿ ಜನವರಿ-ಫೆಬ್ರುವರಿ ತಿಂಗಳುಗಳಲ್ಲಿ ಇದನ್ನು ಪ್ರಾರಂಭಿಸಬಹುದು.

ಭೂಗುಣ : ಆಳವಿರುವ ಹಾಗೂ ಚೆನ್ನಾಗಿ ನೀರು ಬಸಿಯುವ ಮರಳು ಮಿಶ್ರಿತ ಗೋಡು ಮಣ್ಣು ಹಾಗೂ ನದೀ ದಂಡೆಗಳಲ್ಲಿನ ಮರಳು ಬಹುವಾಗಿ ಒಪ್ಪುತ್ತದೆ. ಕಪ್ಪು ಜೇಡಿ ಅಥವಾ ಜಿಗುಟು ಮಣ್ಣಿನ ಭೂಮಿ ಸೂಕ್ತವಿರುವುದಿಲ್ಲ.

ತಳಿಗಳು : ಕರಬೂಜ ಹಣ್ಣಿನಲ್ಲಿ ಕೆಲವೇ ತಳಿಗಳಿದ್ದು ಮಿಶ್ರ ತಳಿಗಳ ಅಭಿವೃದ್ಧಿ ಅಗತ್ಯವಿದೆ. ಅಧಿಕ ಇಳುವರಿಯ ಜೊತೆಗೆ ಕೀಟ ಮತ್ತು ರೋಗ ನಿರೋಧಕ ಗುಣಗಳಿರುವುದು ಬಹುಮುಖ್ಯ. ಈ ದಿಶೆಯಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗಳು ಗಮನಾರ್ಹ ಪ್ರಗತಿ ಸಾಧಿಸಿವೆ; ಅರ್ಕಾರಾಜ್ ಹಂಸ್, ಅರ್ಕಾಜೀತ್, ಪೂಸಾಶರ್ಬತಿ ಹಾಗೂ ಪಂಜಾಬ್ ಕೃಷಿ ವಿಶ್ವ ವಿದ್ಯಾನಿಲಯದ ಹರಮಧು ಉತ್ತಮ ಉದಾಹರಣೆಗಳು.

. ಅರ್ಕಾರಾಜ್ ಹಂಸ್ : ಇದು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಕೊಡುಗೆ. ಸ್ಥಳೀಯ ಐಐಎಚ್‌ಆರ್-೧೦೭ ತಳಿಯಿಂದ ಆರಿಸಿ ವೃದ್ಧಿಪಡಿಸಲಾಯಿತು. ದಕ್ಷಿಣದ ರಾಜ್ಯಗಳಲೆಲ್ಲಾ ಇದನ್ನು ಬೆಳೆಯಬಹುದು. ಬೇಗ ಕೊಯ್ಲಿಗೆ ಬರುತ್ತದೆ. ಹಣ್ಣು ಗುಂಡಗೆ ಇಲ್ಲವೇ ಸ್ವಲ್ಪ ಆಂಡಾಕಾರವಾಗಿದ್ದು ಬಲೆಯಂತಹ ಗುರುತುಗಳಿಂದ ಕೂಡಿದ ಕೆನೆ ಬಿಳುಪು ಸಿಪ್ಪೆಯನ್ನು ಹೊಂದಿರುತ್ತದೆ. ಬಿಡಿ ಹಣ್ಣು ೧.೨೫ ರಿಂದ ೨ ಕಿ.ಗ್ರಾಂ ವರೆಗೆ ತೂಗುತ್ತವೆ. ತಿರುಳು ದಪ್ಪನಾಗಿ ಬೆಳ್ಳಗಿರುತ್ತದೆ; ರುಚಿಯಲ್ಲಿ ಮಧುರ, ಅದರಲ್ಲಿನ ಕರಗಿದ ಘನಪದಾರ್ಥಗಳ ಪ್ರಮಾಣ ಶೇಕಡಾ ೧೨ ರಿಂದ ೧೪ ರಷ್ಟು. ಹಣ್ಣುಗಳ ಸಂಗ್ರಹಣಾ ಗುಣ ಉತ್ತಮ. ಸಾಗಾಣಿಕೆಯಲ್ಲಿ ಕೆಡುವುದಿಲ್ಲ. ಈ ತಳಿ ಬೂದಿರೋಗಕ್ಕೆ ನಿರೋಧಕವಿರುತ್ತದೆ. ಬಿತ್ತನೆಯಾದ ಕೇವಲ ೯೦ ದಿನಗಳಲ್ಲಿ ಹಣ್ಣು ಕೊಯ್ಲಿಗೆ ಸಿದ್ದವಿರುತ್ತವೆ. ಹೆಕ್ಟೇರಿಗೆ ೨೮ ರಿಂದ ೩೦ ಟನ್ ಇಳುವರಿ ಸಾಧ್ಯ.

. ಅರ್ಕಾಜೀತ್  : ಬಹುಬೇಗ ಕೊಯ್ಲಿಗೆ ಬರುತ್ತದೆ. ಬಿತ್ತನೆ ಮಾಡಿದ ಸುಮಾರು ೯೦ ದಿನಗಳಲ್ಲಿ ಹಣ್ಣು ಕೊಯ್ಲಿಗೆ ಸಿದ್ಧವಿರುತ್ತವೆ. ಹಣ್ಣು ಗುಂಡಗೆ, ಕಿತ್ತಲೆ ಬಣ್ಣವಿದ್ದು ತಲಾ ೩೦೦ ರಿಂದ ೫೦೦ ಗ್ರಾಂ ತೂಕವಿರುತ್ತವೆ. ಸಿಪ್ಪೆ ನುಣ್ಣಗಿದ್ದು, ತಿರುಳು ಬೆಳ್ಳಗಿರುತ್ತದೆ. ಪರಿಮಳ ಹಿತವಾಗಿರುತ್ತದೆ. ತಿರುಳಿನಲ್ಲಿರುವ ಒಟ್ಟು ಕರಗಿದ ಘನಪದಾರ್ಥಗಳ ಪ್ರಮಾಣ ಶೇಕಡಾ ೧೫  ರಿಂದ ೧೭ ರಷ್ಟು. ಅದು ರಸವತ್ತಾಗಿದ್ದು ಅಧಿಕ ಪ್ರಮಾಣದ ’ಸಿ’ ಜೀವಸತ್ವವನ್ನು ಹೊಂದಿರುತ್ತದೆ. ಹೆಕ್ಟೇರಿಗೆ ೧೫ ಟನ್ನುಗಳಷ್ಟು ಹಣ್ಣನ್ನು ಉತ್ಪಾದಿಸಬಲ್ಲದು.

. ಪೂಸಾಶರ್ಬತಿ : ಇದು ಮಿಶ್ರ ತಳಿ. ನಮ್ಮ ದೇಶದ ಕುಟಾನ ಮತ್ತು ಅಮೆರಿಕಾ ದೇಶದ ಕ್ಯಾಂಟಲೋಪ್ ರೆಸಿಸ್ಟೆಂಟ್ ಎಂಬ ತಳಿಗಳ ಸಂಕರಣ. ಹಣ್ಣು ಗುಂಡಗೆ ಇಲ್ಲವೇ ಅಂಡಾಕಾರವಿರುತ್ತವೆ. ಸಿಪ್ಪೆಯ ಮೇಲೆ ಬಲೆಯಾಕಾರದ ಗುರುತುಗಳಿದ್ದು ಉದ್ದನಾದ ಹಸುರು ಪಟ್ಟಿಗಳಿಂದ ಕೂಡಿರುತ್ತದೆ. ತಿರುಳು ಕಿತ್ತಲೆ ಬಣ್ಣ. ಒಳಗಿನ ಪೊಳ್ಳು ಭಾಗ ಕಡಿಮೆ.

. ಹರಮಧು : ಇದು ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಕೊಡುಗೆ. ತಡವಾಗಿ ಕೊಯ್ಲಿಗೆ  ಬರುತ್ತದೆ. ಹಣ್ಣು ಗುಂಡಗಿದ್ದು ತಲಾ ಒಂದು ಕಿ.ಗ್ರಾಂ ನಷ್ಟು ತೂಗುತ್ತವೆ. ಸಿಪ್ಪೆ ಬೆಳ್ಳಗಿದ್ದು ಮೇಲೆಲ್ಲಾ ಹಸುರು ಗೀರುಗಳಿರುತ್ತವೆ. ತಿರುಳು ದಪ್ಪ, ಹಸಿರು ಬಣ್ಣ. ರಸವತ್ತಾಗಿ ತಿನ್ನಲು ಮಧುರವಾಗಿರುತ್ತದೆ. ತಿರುಳಿನಲ್ಲಿ ಶೇಕಡಾ ೧೩ ರಷ್ಟು ಕರಗಿದ ಘನಪದಾರ್ಥಗಳಿರುತ್ತವೆ. ಹಣ್ಣು ಪೂರ್ಣ ಪಕ್ವಗೊಂಡಾಗಲೂ ಸಹ ತೊಟ್ಟಿಗೆ ಅಂಟಿಕೊಂಡೇ ಇರುತ್ತದೆ.

. ದಾರ್ಗಾಪುರ ಮಧು : ಇದು ಮಧ್ಯಕಾಲಿಕ ತಳಿ. ಜಯಪುರದ ಕೃಷಿ ಇಲಾಖೆ ಇದನ್ನು ವೃದ್ದಿ ಪಡಿಸಿ ಬೇಸಾಯಕ್ಕೆ ಶಿಫಾರಸು ಮಾಡಿದೆ. ಬಿಡಿ ಹಣ್ಣು ೫೦೦ ರಿಂದ ೭೦೦ ಗ್ರಾಂಗಳಷ್ಟು ತೂಗುತ್ತವೆ. ಹಣ್ಣು ಓರೆಯಾಗಿದ್ದು ತೆಳು ಹಸಿರು ಸಿಪ್ಪೆಯಿಂದ ಕೂಡಿರುತ್ತದೆ. ತಿರುಳಿನ ಬಣ್ಣವೂ ಸಹ ತೆಳು ಹಸಿರೇ ರುಚಿಯಲ್ಲಿ ಮಧುರ. ಶೇಕಡಾ ೧೨ ರಷ್ಟು ಕರಗಿದ ಘನ ಪದಾರ್ಥಗಳಿರುತ್ತವೆ.

ಇವುಗಳೇ ಅಲ್ಲದೆ ಪಂಜಾಬ್ ಸುನೇರಿ, ಪಂಜಾಬ್ ಹೈಬ್ರಿಡ್, ಸೆಲೆಕ್ಷನ್-೧, ಅಭಿಜಿತ್ (ನಾಮ್‌ಧಾರಿ), ಎನ್‌ಎಸ್-೧೪೫೫, ಎಂ.ಎಚ್.ಸಿ-೨, ಎಂ.ಎಚ್.ಸಿ.-೯, ಎಂ.ಎಚ್.ಸಿ.೧೦ (ಮಹಿಕೊ) ಮುಂತಾದ ತಳಿಗಳು ಅಲ್ಲಲ್ಲಿ ಬೇಸಾಯದಲ್ಲಿ ಕಂಡುಬರುತ್ತವೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ಪಾತಿಗಳನ್ನು ತಯಾರಿಸಿ, ಪೂರ್ಣಪ್ರಮಾಣದ ತಿಪ್ಪೆಗೊಬ್ಬರ, ಅರ್ಧಭಾಗ ಸಾರಜನಕ ಮತ್ತು ಪೂರ್ಣಪ್ರಮಾಣದ ತಿಪ್ಪೆಗೊಬ್ಬರ, ಅರ್ಧಭಾಗ ಸಾರಜನಕ ಮತ್ತು ಪೂರ್ಣಪ್ರಮಾಣದ ರಂಜಕ ಹಾಗೂ ಪೊಟ್ಯಾಷ್ ಸತ್ವಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಪ್ರತಿ ಪಾತಿಯ ಮಧ್ಯೆ ಕುಳಿ ಮಾಡಿ ೩-೪ ಬೀಜ ಊರಬೇಕು. ಬಿತ್ತುವ ಆಳ ೧ ಸೆಂ.ಮೀ. ಅಷ್ಟು. ಮಣ್ಣು ಹಸಿಯಾಗಿಲ್ಲದ್ದಿದ್ದಲ್ಲಿ ತೆಳ್ಳಗೆ ನೀರು ಹಾಯಿಸಬೇಕು. ಅವು ಸುಮಾರು ೬-೭ ದಿನಗಳಲ್ಲಿ ಮೊಳೆಯುತ್ತವೆ. ಬಿತ್ತನೆ ಮಾಡಿದ ಸುಮಾರು ೧೫ ದಿನಗಳ ನಂತರ ಪ್ರತಿ ಮಡಿಯಲ್ಲಿ ಎರಡು ಸಸಿಗಳನ್ನು ಉಳಿಸಿಕೊಂಡು ಮಿಕ್ಕವುಗಳನ್ನು ಕಿತ್ತು ಹಾಕಬೇಕು. ಹೆಕ್ಟೇರಿಗೆ ೧.೨೫ ಕಿ.ಗ್ರಾಂ ಬೀಜ ಬೇಕಾಗುತ್ತವೆ. ಬಿತ್ತನೆಗೆ ಮುಂಚೆ ಶೇ. ೦.೧ ಕಾರ್ಬೆಂಡಜಿಂ ದ್ರಾವಣದಲ್ಲಿ ಬೀಜವನ್ನು ಅದ್ದಿ ಉಪಚರಿಸುವುದು ಒಳ್ಳೆಯದು.

ಗೊಬ್ಬರ : ಹೆಕ್ಟೇರಿಗೆ ೨೫ ಟನ್ ತಿಪ್ಪೆಬೊಬರ, ೧೦೦ ಕಿ.ಗ್ರಾಂ ಸಾರಜನಕ, ೭೫ ಕಿ.ಗ್ರಾಂ ರಂಜಕ ಮತ್ತು ೫೦ ಕಿ.ಗ್ರಾಂ ಪೊಟ್ಯಾಷ್ ಸತ್ವಗಳನ್ನು ಕೊಡಬೇಕಾಗುತ್ತದೆ.

ನೀರಾವರಿ : ಹವಾ ಮತ್ತು ಭೂಗುಣಗಳನ್ನನುಸರಿಸಿ ೩ ರಿಂದ ೫ ದಿನಗಳಿಗೊಮ್ಮೆ ನೀರು ಕೊಡಬೇಕಾಗುತ್ತದೆ.

ಅಂತರ ಬೇಸಾಯ ಮತ್ತು ಕಳೆ ಹತೋಟಿ :  ಕಳೆಗಳನ್ನು ಕಿತ್ತು ತೆಗೆಯಬೇಕು. ಬಿತ್ತನೆಯಾದ ಮೂರು ವಾರಗಳ ನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಟ್ಟು ಬುಡಗಳಿಗೆ ಮಣ್ಣು ಏರಿಸಬೇಕು.

ಕೊಯ್ಲು ಮತ್ತು ಇಳುವರಿ : ಪೂರ್ಣಬಲಿತು ಪಕ್ವಗೊಂಡ ಹಣ್ಣುಗಳನ್ನು ಮಾತ್ರವೇ ಕೊಯ್ಲು ಮಾಡಬೇಕು. ಮಳೆ ಪ್ರಾರಂಭಗೊಳ್ಳುವ ಮೊದಲೇ ಹಣ್ಣುಗಳನ್ನು ಕಿತ್ತು ತೆಗೆಯುವುದು ಒಳ್ಳೆಯದು. ಹಣ್ಣು ಚೆನ್ನಾಗಿ ಪಕ್ವಗೊಂಡಿದ್ದೇ ಆದರೆ ಅವು ಸುಲಭವಾಗಿ ಕಳಚಿ ಬರುತ್ತವೆ. ಬೆಳಿಗ್ಗೆ ತಂಪು ಹೊತ್ತಿನಲ್ಲಿ ಹಣ್ಣುಗಳನ್ನು ಬಿಡಿಸಿ ತೆಗೆದು, ಅವು ಜಜ್ಜಿ ಹಾಳಾಗದಂತೆ ಒಣಹುಲ್ಲನ್ನು ಹರಡಿ ಮೆತ್ತೆ ಕೊಟ್ಟು ಮಾರುಕಟ್ಟೆಗೆ ಸಾಗಿಸುವುದು ಒಳ್ಳೆಯದು. ಹೆಕ್ಟೇರಿಗೆ ೧೫-೨೦ ಟನ್ ಹಣ್ಣು ಸಾಧ್ಯ.

ಸಂಗ್ರಹಣೆ ಮತ್ತು ಇಳುವರಿ : ಸಾಧಾರಣ ಪರಿಸ್ಥಿತಿಗಳಲ್ಲಿ ಹಣ್ಣುಗಳನ್ನು ೮-೧೦ ದಿನಗಳವರೆಗೆ ದಾಸ್ತಾನು ಮಾಡಿಡಬಹುದು. ಶೀತಲ ಮಳಿಗೆಗಳಲ್ಲಿಟ್ಟು ಜೋಪಾನ ಮಾಡಿದರೆ ಅವು ಇನ್ನೂ ಹೆಚ್ಚು ಕಾಲ ಸುಸ್ಥಿತಿಯಲ್ಲಿರಬಲ್ಲವು.

ಕೀಟ ಮತ್ತು ರೋಗಗಳು : ಕಲ್ಲಂಗಡಿ ಹಣ್ಣಿನ ಬೆಳೆಯಲ್ಲಿ ಇದ್ದಂತೆ.

ಬೀಜೋತ್ಪಾದನೆ : ಕರಬೂಜ ಪರಕೀಯ ಪರಾಗಸ್ಪರ್ಶದ ಬೆಲೆ. ಹೆಕ್ಟೇರಿಗೆ ೨೦೦-೨೫೦ ಕಿ.ಗ್ರಾಂ. ಬೀಜ ಸಿಗುತ್ತವೆ.

* * *