೧. ಕಂಡೆ ನಾನೊಂದು ಕನಸು

ರಾಗ : ಒಡ್ಡಿಯ ಧನ್ವಾಸಿ

ಕಂಡೆ ನಾನೊಂದು ಕನಸುವ
ಮಂಡೆಯೊಡೆದು ಮನೆ ಬೇವುದ ||  || ಪಲ್ಲ ||

ಕಣ್ಣಬಿಟ್ಟಡೆ ಕಾರಿರುಳಾದುದ ಕಂಡೆ |
ಬಣ್ಣವುಳ್ಳರ್ಕ ಶಶಿಯ ಕಂಡೆ |
ಬಣ್ಣಿಸಬಾರದ ಬಹುವಾದ್ಯವ ಕಂಡೆ |
ತಣ್ಣನುರಿದ ಜ್ಯೋತಿಯ ಕಂಡೆ ||  || ೧ ||

ಕಾಲಕಾಮ ನಾರಿಯರು ಓಲೆಗಳೆವುದ ಕಂಡೆ |
ಮಾಲಗಣ್ಣೊಳು ತೊಳಲುವುದ ಕಂಡೆ |
ಸುಯ್ಲಿಡುತಿಹ ಸರ್ಪ ಸುಮ್ಮನಾದುದ ಕಂಡೆ |
ಕೀಲಿ ಸಡಿಲಿ ಪುರ ಬೇವುದ ಕಂಡೆ        || ೨ ||

ಹೇಮದ ಶಿಖಿಯೊಳು ಹೋಮವಾದುದ ಕಂಡೆ
ಆ ಮಹಾಕಡಲುಕ್ಕುವುದ ಕಂಡೆ |
ವ್ಯೋಮ ವ್ಯೋಮವು ಕೂಡಿ ನಾಮವಾದುದ ಕಂಡೆ |
ಆ ಮಹಾಗುರು ಶಾಂತನೊಲಿಯಲು ||  || ೩ ||

೨. ಬಳ್ಳು ಕೂಗಿದ ಫಲವ
ರಾಗ : ದೇಶಿ

ಬಳ್ಳು ಕೂಗಿದ ಫಲವ ಬಲ್ಲೆಯ ಎಲೆಯಕ್ಕ
ಒಳ್ಳಿತಲ್ಲವೆ ತಂಗಿ ಮರದ ಜನರ್ಗಳಿಗೆ ||  || ಪಲ್ಲ ||

ಪುರದ ಮೂಡಣ ದಿಕ್ಕನಡರಿಯಗ್ನಿಗೆ ಬಂದು
ಸರವನಿಕ್ಕಿತು ಯಮನೈರುತ್ಯಕ್ಕಾಗಿ
ದೊರೆಗಳಳಿವರು ತಂಗಿ, ಮರಣ ತಳವಾರರಿಗೆ
ಸಿರಿ ಹೋಗಿ ಭೂಪತಿಗೆ ಸೆರೆಯಬಹುದು ತರಳೆ |            || ೧ ||

ನಡುಗೇರಿ ಉರಿದು ನಾನಾ ಭಟರು ಮಡಿದಾರು
ನಡೆವುತಿದೆ ವರುಣ ವಾಯುವ್ಯಕ್ಕಾಗಿ
ಕಡುಚೆಲ್ವೆ ಕೇಳು, ಕುಬೇರನಲಿ ಕೂಗುತಿದೆ
ಒಡೆಯನಾಗುವನಲ್ಲಿ ಪರಲೋಕದರಸು ||  || ೨ ||

ಸೊಲ್ಲುತಿದೆ ಈಶಾನ್ಯದಲ್ಲಿ ಜಂಬುಕ ತಾನು
ಎಲ್ಲ ಮಾತೇಕೆ ಶಿವಪುರವಾದುದು
ತಲ್ಲೀಯವಹುದು ಗುರುಶಾಂತನೊಳಗೆ ಬಳ್ಳು
ನಿಲ್ಲುತಿದೆ ಬಟ್ಟ ಬಯಲೊಳಗೆ ಲಲಿತಾಂಗಿ ||  || ೩ ||

೩. ಸದರವಲ್ಲವೋ ನಿಜಭಕ್ತಿ
ರಾಗ : ಸೌರಾಷ್ಟ್ರ

ಸದರವಲ್ಲವೋ ನಿಜಭಕ್ತಿ | ಸತ್ಯ
ಸದಮಲ ಗುರುಕರುಣಾನಂದ ಮುಕ್ತಿ ||  || ಪಲ್ಲ ||

ಅಡಿಯಲಂಬರ ಮೂಡದನಕ ಅಗ್ನಿ
ಕುಡಿಯೆದ್ದು ಮೇಲಣ ಕೊಡನುಕ್ಕದನಕ,
ಒಡನಿಬ್ಬರೊಂದಾಗದನಕ ತ
ನ್ನೊಡನಿರ್ದ ಮಡದಿಯ ನುಡಿಗೇಳದನಕ ||  || ೧ ||

ನಾಡಿ ಹಲವು ಕಟ್ಟದನಕ | ಬ್ರಹ್ಮ
ನಾಡಿಯೊಳಗೆ ಹೊಕ್ಕು ನೆಲೆಗಾಣದನಕ,
ಕಾಡುವ ಕಪಿ ಸಾಯದನಕ | ಸು
ಟ್ಟೋಡಿಲಿ ರಸತೀವಿ ತೊಟ್ಟಿಡದನಕ ||  || ೨ ||

ಆದಿ ಕುಂಭವ ಕಾಣದನಕ | ಅದ
ಸಾಧಿಸಿಯನುದಿನ ಸವಿದುಣ್ಣದನಕ,
ಗಾದಿಗಚ್ಚರಿಯಾಗದನಕ | ಮುಂದೆ
ಭೇದಿಸಿ ಗುರುಶಾಂತನ ಕೂಡದನಕ ||  || ೩ ||

೪. ಅಕ್ಕುಲಜನೆ ಯೋಗಿ
ರಾಗ : ಪಹಾಡಿ

ಅಕ್ಕುಲಜನೆ ಯೋಗಿ | ಅನಾಮಿಕನೆ ದೈವ
ಮಿಕ್ಕ ಶೀಲವ ಹಿಂಸೆ ಮೀರಿದುವೆ ನೇಂ ||  || ಪಲ್ಲ ||

ಹಸು ಕರವನಿರಿದು ಹಾರುವವ ಕೊಲ್ಲುವುದೆ ಮುಕ್ತಿ
ಹುಸಿಯೆಂಬುದೆ ಶಾಸ್ತ್ರವಾ ಯೋಗಿಗೆ
ಶಶಿರವಿಗಳಳಿದ ಸ್ವಸ್ಥಿರವೆ ನಿರ್ಮಲ ಭೂಮಿ
ಅಸಿಪದವೆ ಮುಕ್ತಿ, ಅವರ್ಣನೆ ಲಿಂಗ ||  || ೧ ||

ಕರಿತುರಗ ಕಾಲಾಳನಿರಿದು ಕೊಲುವುದೆ ಭಕ್ತಿ |
ಪುರವ ಕಿಚ್ಚಿಕ್ಕಿ ಸುಡುವುದೆ ನೇಮವು |
ಹರಿಯಜ ರುದ್ರರನು ಹರಿಯ ಹೊಯ್ವುದೆ ಶೀಲ |
ಉರಿವ ಸರ್ಪನ ಕಂಡು ಉಣುತಿಹುದೆ ಸಿದ್ಧಿ ||  || ೨ ||

ಮುಂದಡಿಗಳೊಡನಾಟ, ಮೂರುಲೋಕದ ಹಗೆಯು |
ಎಂದೆಂದು ಕಾಣದಾ ನದಿಯ ಸ್ನಾನ
ಸಂದೇಹವಿಲ್ಲಿದಕೆ ಗುರುಶಾಂತೇಶನೊಳು
ದ್ವಂದ್ವ ಬುದ್ಧಿಯನಳಿದು ನಿಂದ ಶಿವಯೋಗಿ |            || ೩ ||

೫. ಶರಣರ ಸೇವೆಯ ಮಾಡು ಬೇಗ
ರಾಗ : ಸೌರಾಷ್ಟ್ರ

ಶರಣರ ಸೇವೆಯ ಮಾಡು ಬೇಗ | ಗುರು
ಕರುಣವ ಪಡೆದು ನಿಜವ ನೋಡಿರೀಗ ||  || ಪಲ್ಲ ||

ಮೂರು ಮೊನೆಯದೊಂದು ಬೆಟ್ಟ |ಅದ
ನೇರಬಲ್ಲವರಿಲ್ಲ ಅದು ಬಲು ಕೊಟ್ಟಿ |
ಏರಿ ಹೋದವ ಬಲು ದಿಟ್ಟ | ಹತ್ತಿ
ಸೂರೆಗೊಂಡವ ಹೋಗಿ ಮೂರನೆ ಸುಟ್ಟ ||  || ೧ ||

ಹಲವು ವೆಜ್ಜದದೊಂದು ಭಾಂಡ | ಅದ
ಕೆಲವು ದಿನದ ಮೇಲೆ ಸಾಧಿಸಿ ಕಂಡ
ಬಲಿದ ಬಾಗಿಲಿಗೊಂದು ಗುಂಡ | ಅಲ್ಲಿ
ಲಲನೆಯೊರ್ವಳ ಕಂಡು ಕೈಸೆರೆಗೊಂಡ ||  || ೨ ||

ನೆಲೆನೆಲೆಗಳ ಹತ್ತಿ ಕಂಡ | ಮೇಲು
ನೆಲೆ ಮನೆಯೊಳಗೊಂದು ಅಮೃತದ ಹೊಂಡ |
ಚಲನೆಯಿಲ್ಲದ ಸವಿದುಂಡ | ನಮ್ಮ
ಸಲೆ ಗುರುಕರುಣಿ ಶಾಂತನ ಕೂಡಿಕೊಂಡ ||  || ೩ ||

೬. ಆರು ತಿಳಿಯಬಹುದೀ ಘನವ
ರಾಗ : ಶಂಕರಾಭರಣ

ಆರು ತಿಳಿಯಬಹುದೀ ಘನವ
ನೀರಜದೊಳಗೊಂದು ಶಶಿ ಉದಯವ ಕಂಡೆ ||  || ಪಲ್ಲ ||

ಪಂಕಜನಾಳದೊಳು ಮೀ
ನಂಕನ ಬಾಣವ ಕಂಡೆ |
ಕಂಕಣದುಲುಹು ನಂದಿ
ಕಂಣುದೆರೆದುದ ಕಂಡೆ ||  || ೧ ||

ಮುಪ್ಪುರಂಗಳನೊಂದು
ಕಪ್ಪೆ ನುಂಗಿದುದ ಕಂಡೆ |
ಸರ್ಪನ ಹೆಡೆಯ ಮೇಲೆ
ಕರ್ಪುರದುರಿಯ ಕಂಡೆ ||  || ೨ ||

ಏಳು ಕಮಲದೊಳಗೊಂದು
ಹೂಳಿರ್ದ ವಸ್ತುವ ಕಂಡೆ
ಹೇಳ ಬಾರದಗ್ಗಳೆಯ
ನಿಶ್ಚಿಂತ ಶಾಂತನ ಕಂಡೆ ||  || ೩ ||

೭. ಆರು ಬಲ್ಲರು ಶಿವಯೋಗದ ನೆಲೆಯ
ರಾಗ : ದೇಶಿ

ಆರು ಬಲ್ಲರು ಶಿವಯೋಗದ ನೆಲೆಯ
ಊರಿಂದ ಹೊರಗಾದನಾಮಿಕಗಲ್ಲದೆ |           || ಪಲ್ಲ ||

ನಾರಿಯೊರ್ವಳ ವಿಷಯದೋರದೆ ಕಂಡು
ನೀರೊಳಗಣ ಕಿಚ್ಚನುರುಹಿಕೊಂಡು
ಗಾರುಗಾರೆನೆ ಸುಟ್ಟು, ಸುರಿ ಕಂಡವನೆ ಮಾಡಿ
ಓರಂತೆ ತಿನುಗಿಹನಾಮಿಕಗಲ್ಲದೆ ||  || ೧ ||

ಅಷ್ಟ ಕುಬಟ್ಟೆಯ ಮೆಟ್ಟಿಯಾರಣ್ಯದ
ದುಷ್ಟ ಮೃಗಗಳೆಚ್ಚೆಚ್ಚು ಕೊಂದು,
ಅಷ್ಟಮದಕರಿಯನಟ್ಟಟ್ಟು ಭಕ್ಷಿಸಿ
ನಷ್ಟವಾಗಿ ಹೋದ ಹೊಲೆಯಂಗಲ್ಲದೆ ||  || ೨ ||

ಶುದ್ಧವಾಯಿತೆಂದು ಸಿದ್ಧಿಗೆಯನೆ ತುಂಬಿ
ಇದ್ದ ಹುಸಿಯನಿದ್ದಲ್ಲಿ ಬಿಟ್ಟು,
ಸಿದ್ಧಶಾಂತನಲ್ಲಿ ಭವಿಯ ಕೂಡಿದ ನಮ್ಮ
ಹೊದ್ದಿ ಹೊದ್ದದೆ ಹೋದ ಹೊಲೆಯಂಗಲ್ಲದೆ ||  || ೩ ||

೮. ಇಂದುಧರನ ಪಾದಪೂಜಕರೊಲವಿಗೆ

ಇಂದುಧರನ ಪಾದಪೂಜಕರೊಲವಿಗೆ ತಂದನೆನ್ನ
ಎಂದೆಂದಿಗೆ ಗುರುಸೇವೆಯಲ್ಲಿರುಯೆಂದು ತಂದನೆನ್ನ ||  || ಪಲ್ಲ ||

ಎತ್ತಿದ ದೇಹವಿದೊಂದಲ್ಲದಿಲ್ಲವೆಂದು ತಂದನೆನ್ನ
ಮತ್ತೆ ಧರಾತಳಕಿಳಿಯದ ಮಾರ್ಗಕೆ ತಂದನೆನ್ನ
ಪೃಥ್ವಿಯ ಕಾಲ ಕರ್ಮಂಗಳ ಗೆಲಲೆಂದು ತಂದನೆನ್ನ
ಚಿತ್ತವೀ ಲೋಕರಂಜನೆಗಿರಬೇಡೆಂದು ತಂದನೆನ್ನ ||  || ೧ ||

ನುಡಿದ ಪಂಥಕೆ ತೊಲಗದ ನಿಜಭಾಷೆಗೆ ತಂದನೆನ್ನ
ಹಿಡಿದ ವ್ರತವನಡಸುವ ದೃಢವಾಗಿಯೆ ತಂದನೆನ್ನ
ಒಡಲಾಸೆಗೆ ಅಡಿಯಿಡದೆ ನಿರ್ಗಮನಕ್ಕೆ ತಂದನೆನ್ನ
ಮೃಡನಾದರೆ ಆಸೆಗೈಯ್ಯದೆ ಬಾಳ್ವೆಗೆ ತಂದನೆನ್ನ ||  || ೨ ||

ಲಿಂಗಾಣತಿಯೆ ವಿಚಾರಿಸು ಭೋಗಕೆ ತಂದನೆನ್ನ
ಅಂಗದಿಚ್ಛೆಯ ಕಾಣಿಸದೆ ಗಂಭೀರಕ್ಕೆ ತಂದನೆನ್ನ
ಬೆಂಗೊಡದಿರು ಕಲಿಯುಗದ ಸಂಚಲಕೆಂದು ತಂದನೆನ್ನ
ಮಂಗಳಮಯ ಗುರುಶಾಂತನರ್ಚನೆಗಾಗಿ ತಂದನೆನ್ನ        || ೩ ||

೯. ವೀರಶೈವಾಚಾರ ಮಾರ್ಗದೊಳು

ವೀರಶೈವಾಚಾರ ಮಾರ್ಗದೊಳು ನಿಂದು ಮರಳಿ
ಬಾರನೆಂದು ಹೇಳು ಕಂಡ್ಯ ಕೋಗಿಲೆ ||  || ಪಲ್ಲ ||

ಅಂಗ ಮಹಲಿಂಗದಲ್ಲಿ ಲಿಂಗಮಹ
ಸಂಗದಲ್ಲಿ ಸಂಗ ಸೌಖ್ಯ ಸಾವಧಾನವಾಗಿ
ಮಂಗಳ ಮಹಿಮನೊಳು ಕಂಗಳೇಕಪ್ರಾಪ್ತಿ ದು
ಸ್ಸಂಗವಳಿದರೆಂದು ಹೇಳು ಕೋಗಿಲೆ ||  || ೧ ||

ಕಾಲ ಕರ್ಮದ ಕೀಲ ಮುರಿದು ಮೇಲೆ ಅಷ್ಟತನುವನಳಿದು
ಸ್ಥೂಲ ಬ್ರಹ್ಮಾಂಡವನು ತಿರುಗಿ ನಿಂತು
ಆಲಿಯಡಗಿ ಮನವು ಮುಳುಗಿ ಆ ಬ್ರಹ್ಮನೊಳೇಕವಾಗಿ
ಲೀಲೆಯಾದರೆಂದು ಹೇಳು ಕೋಗಿಲೆ ||  || ೨ ||

ಅಷ್ಟದಳದ ಕಮಲದಲ್ಲಿ ಮೆಟ್ಟಿ ಆರು ಹಂಸಗಳನ್ನು
ದಿಟ್ಟವನ್ನು ತೆಗೆದು ಕೈಕಾಲು ಮುರಿದು
ಸುಟ್ಟು ಬಾಲ್ಯ ಸಾವುಗಳೆದು ಹೊಟ್ಟೆ ತುಂಬ ಉಂಡು ಸಂ
ತುಷ್ಟರಾದರೆಂದು ಹೇಳು ಕೋಗಿಲೆ ||  || ೩ ||

ಸ್ಥಾನ ಸ್ಥಾನ ಮೂಲವನ್ನು ಲೀಲೆಯಿಂದ ಏರಿ ನೋಡಿ
ಲೋಲ ಗಿರಿಯ ಮಧ್ಯದೊಳಿಪ್ಪ ಕೊಳದೊಳಾಡಿ
ಮಾರುತನ ಮರ್ಮ ತಿಳಿದು ಧೀರನಾದ ಗುರುವ ನೆನದು
ಈ ಲೋಕವಳಿದರೆಂದು ಹೇಳು ಕೋಗಿಲೆ ||  || ೪ ||

ಜೀವ ಭಾವ ಭಕ್ತಿಗಳನು ತೀವಿ ಪರಮಾನಂದದೊಳು
ಭಾವ ಸಾಹಸದಿಂದಲಿ ಶುದ್ಧನಾಗಿ
ದೇವ ಗುರುಶಾಂತನಾದ ಭಾವ ಬಯಲಾದ ಮಹಾ
ದೇವರಾದರೆಂದು ಹೇಳು ಕೋಗಿಲೆ ||  || ೫ ||

೧೦. ಆಗುಚೇಗೆಗಳ ಲೆಕ್ಕಿಸದನುಪಮ
ರಾಗ : ನಾದರಾಮಕ್ರೀ

ಆಗುಚೇಗೆಗಳ ಲೆಕ್ಕಿಸದನುಪಮ ಭೋಗವದೆಚ್ಚರಿಕೆ
ನಾಗಭೂಷಣನ ಪದಕಮಲದೆ ಮನ ಯೋಗದೆಚ್ಚರಿಕೆ ||  || ಪಲ್ಲ ||

ನಾನಾವಸ್ಥೆಯ ಸುಖದುಃಖ ನೋಟ ಸಮಾನವದೆಚ್ಚರಿಕೆ
ಹೀನಕೃತ್ಯಂಗಳ ನೆನೆಯದೆ ನಿಂದ ನಿಧಾನವದೆಚ್ಚರಿಕೆ
ಸ್ವಾನುಭಾವ ಗತಿ ತೊಲಗದ ಲಿಂಗಾಭಿಮಾನವದೆಚ್ಚರಿಕೆ
ಜ್ಞಾನರಹಿತರೊಡನೇನು ಎನ್ನದ ಮೌನವದೆಚ್ಚರಿಕೆ ||  || ೧ ||

ಎತ್ತಿದ ದೇಹವಿದೊಂದರಲಿ ಕಾಬ ಯುಕ್ತಿಯದೆಚ್ಚರಿಕೆ
ಮತ್ತೆ ಧರಾತಳಕೈದದಚಲ ಪದ ಮುಕ್ತಿಯದೆಚ್ಚರಿಕೆ
ಸತ್ತು ಹುಟ್ಟುವ ಬಗೆಯಳಿದಾಚರಿಪ ವಿರಕ್ತಿಯದೆಚ್ಚರಿಕೆ
ಚಿತ್ತದೊಳಿಹಪರ ಒಂದಾದ ಘನತರಯುಕ್ತಿಯದೆಚ್ಚರಿಕೆ ||  || ೨ ||

ಆಸೆ ರೋಷಗಳ ಮೀರಿ ನುಡಿವ ಬಲುಭಾಷೆಯದೆಚ್ಚರಿಕೆ
ಮೋಸದಿ ಶಿವನಿಗೆ ಬೆಂಗೊಡದಮಳ ವಿಲಾಸವದೆಚ್ಚರಿಕೆ
ಈಶತಂತ್ರದಿಂದಡಿಯಿಡುತಿಹ ನಿಜವೇಷವದೆಚ್ಚರಿಕೆ
ಶಾಶ್ವತ ಗುರುಶಾಂತೇಶಗೆ ಹೃದಯನಿವಾಸವದೆಚ್ಚರಿಕೆ ||  || ೩ ||

೧೧. ಇಷ್ಟಲಿಂಗದಿ ನೋಡಲೆ
ರಾಗ :ಲಲಿತೆ

ಇಷ್ಟಲಿಂಗದಿ ನೋಡಲೆ ಯೋಗಿ ನಿನ್ನ
ದೃಷ್ಟಿನಿಂದಡೆ ಮುಕ್ತನಹೆ ನೀನು || ಪಲ್ಲ ||

ತಲೆಹೊಲದೊಳು ಥಳಥಳಿಸುತಿರ್ಪ ಚಿ
ತ್ಕಳೆಯನು ಗುರುಕರದೊಳು ತಂದು
ಸ್ಥಲದೊಳು ತುಂಬಿ ಲಿಂಗವ ನಿನ್ನ ಕರ
ಸ್ಥಲಕೆ ಕೊಡಲು ನೋಡುತಿರೆ ಯೋಗಿ ||  || ೧ ||

ದೀಪದ ಪ್ರಭೆ ಗುಣದೊಳಗುಂಟೆ ಶುದ್ಧ
ರೂಪುಳ್ಳ ಇಷ್ಟಲಿಂಗವ ನಂಬಲುಸ
ದ್ರೂಪದ ಇಷ್ಟಲಿಂಗವ ನಂಬಿದರೆ ನಿ
ರೂಪು ಪ್ರಾಣಲಿಂಗ ಗೋಚರವು ||  || ೨ ||

ತಿಳಿದುಪ್ಪ ಘಟ್ಟಿಯಾದಂತೆ ಕಳೆ
ಬಲಿದಿಷ್ಟಲಿಂಗವೆಯಾಗೆ
ಸ್ಥಲದೊಳು ತುಂಬಿ ಲಿಂಗವನೆ ನಿನ್ನ ಕರ
ಸ್ಥಲದೊಳು ನೋಡುತಿರೆ ಯೋಗಿ ||  || ೩ ||

ಅರಳಿಯೊಳಿಹ ಕಿಚ್ಚು ಮಥನದಿಂದ ಗೋ
ಚರಿಸುತಿರ್ಪ ದೃಷ್ಟಾಂತದಿಂದ
ಕರ ಲಿಂಗಕಳೆ ಮಂತ್ರಮಥನದಿಂದ ಗೋ
ಚರಿಸುತಿಪ್ಪುದು ಕೇಳಲೆ ಯೋಗಿ ||  || ೪ ||

ಅಂಗಯ್ಯ ಲಿಂಗವ ಪ್ರಭು ತೆಗೆಯೆ ಪ್ರಾಣ
ಹಿಂಗಿತು ಅನುಮಿಷದೇವಗೆ
ಲಿಂಗ ಹೋಗಿ ಪ್ರಾಣ ಬಾರದಿರೆ ಪ್ರಾಣ
ಹಿಂಗಲಿಬೇಕು ಕೇಳಲೆ ಯೋಗಿ ||  || ೫ ||

ಸಾಕಾರವ ನಂಬೆಲೆ ಯೋಗಿ ನಿ
ರಾಕಾರವ ನಂಬಲಾಗದು
ಸಾಕಾರವ ನಂಜದಜಸುತನು ನಿ
ರಾಕಾರವ ನಂಬಿ ಒಂಟಿಯಾದ ||  || ೬ ||

ಲಿಂಗದೊಳಡಕ ನೀಲಮ್ಮನಿಗೆ ಗುರು
ಲಿಂಗದೊಳಡಕ ಬಸವಣ್ಣನಿಗೆ
ಲಿಂಗಜಂಗಮಗುರು ಒಂದೆಂದು
ಸಂಗನ ಬಸವಣ್ಣನರುಹಿದ ||  || ೭ ||

ಕರೆಯ ಬಂದಪ್ಪಣ್ಣನ ಮುಂದೆ ಬಸ
ವರರಸನ ರಾಣಿ ನೀಲಾಂಬಿಕೆ
ಕರಲಿಂಗದೊಳು ದೇಹ ಸಹವಾಗಿ ದೇಹ
ದಿರವಳಿದಿರ್ದುದ ಕೇಳಲೆ ಯೋಗಿ ||  || ೮ ||

ಸಂಗನಬಸವನು ನೋಡುರೆ ತ
ಮ್ಮಂಗೈಯ್ಯ ಲಿಂದೊಳಪ್ಪಣ್ಣನು
ಅಂಗಸಹಿತ ಹೊಕ್ಕು ಬಯಲಾದ ತ
ಲ್ಲಿಂಗವು ಬಯಲಾದುದೆಲೆ ಯೋಗಿ ||  || ೯ ||

ಅಂಗಯ್ಯ ಲಿಂಗದಿ ಪ್ರಭುದೇವರು ತ
ಮ್ಮಂಗೇಂದ್ರಿಯ ದೇಹವ ಮರದು
ಕಂಗಳ ಮುಚ್ಚದೆ ನೋಡುತಿರೆ ತ
ಲ್ಲಿಂಗದೊಳು ಬಯಲಾದನೆ ಯೋಗಿ ||  || ೧೦ ||

ಅಂಗಯ್ಯ ಲಿಂಗವನೀಕ್ಷಿಸುತ ಕ
ರ್ಣಂಗಳ ನಾದವ ಕೇಳುತ್ತ
ಕಂಗಳ ಬೆಳಗ ನಿವಾಳಿಸುತ ಶಾಂತ
ಲಿಂಗವು ತಾನಾದನೆಲೆ ಯೋಗಿ ||  || ೧೧ ||

೧೨. ಉಪದೇಶವಿಲ್ಲದವ ಶ್ವಪಜ
ರಾಗ : ಪಾಡಿ

ಉಪದೇಶವಿಲ್ಲದವ ಶ್ವಪಜ ಮುಕ್ತಿಗೆ ಸಲ್ಲ
ಅಪರ ಜೀವಿಯವ ಬ್ರಹ್ಮ ರಾಕ್ಷಸನಹನು ||  || ಪಲ್ಲ ||

ದೀಕ್ಷೆ ಇಲ್ಲದ ಪಾಪಿಯೊಡನುಂಡರವಗೊಂಡು
ಲಕ್ಷ್ಯ ಜನ್ಮವು ಶ್ವಾನ ಸೂಕರಗಳ
ಕುಕ್ಷೆಯೊಳಗೆ ಬಂದು ಕುಟಿಲ ಪಾತಕನಾಗಿ
ಶಿಕ್ಷೆಗೊಳಗಪ್ಪನಾ ಸಮವರ್ತಿಯಾ ||  || ೧ ||

ಗುರುಕೃಪೆವಡೆಯದೆ ಭಸಿತರುದ್ರಾಕ್ಷೆಯ
ಧರಿಸಲು ಫಲವಿಲ್ಲ ಹರಮಂತ್ರವ
ನೆರೆ ಜಪಿಸಲು ಸಲ್ಲಯೋಗ್ಯನ ತಪವು ಹೊಲ್ಲ
ಗುರುವಿಲ್ಲದವಗೆ ಪಾತಕ ಬಿಡದೆಂದಾ ||  || ೨ ||

ಗುರುಕರಜಾತರು ಗುರುದೀಕ್ಷೆ ಹೀನರ
ವರಗೃಹದೊಳಗೆನ್ನ ಪಾನಂಗಳಾ
ಕರಮುಟ್ಟಿ ಕೊಂಡಡೆ ನರಕ ಗಾರ್ದಭ ಮೂತ್ರ
ಸರಿ ಎಂಬ ಶ್ರುತಿಯುಂಟು ಕೊಳುಕೊಡೆ ಸಲ್ಲ ||  || ೩ ||

ಧರೆಯೊಳಗುಳ್ಳ ನಾನಾ ಧರ್ಮವನು ಮಾಡೆ
ಸ್ಥಿರ ಮೋಕ್ಷನಲ್ಲ ಪಂಕ್ತಿಗೆ ಸಲ್ಲನು
ಹರಶಾಸ್ತ್ರಗಳ ಕೇಳತಕ್ಕ ಸುಕೃತನುಮಲ್ಲ
ಹರನವನಾರ್ಚನೆಗಳನೊಲ್ಲನು ||  || ೪ ||

ಹರಧ್ಯಾನ ಹರಪೂಜೆ ಕಾಲದೀಕ್ಷಾಶೂನ್ಯ
ನರನ ಕಂಡರೆ ದೋಷವಿದು ನಿಶ್ಚಯ
ಕರುಣಿ ಎನ್ನೊಡೆಯ ಶ್ರೀ ಗುರುಶಾಂತೇಶನು
ಗುರುವಿಲ್ಲದವಗೆ ಮೋಕ್ಷವು ನಾಸ್ತಿ ಎಂದಾ ||  || ೫ ||

೧೩. ಎಂತೆಂಬುದೊರೆವೆನು ಬಿಡದೆ
ರಾಗ : ಪಾಡಿ

ಎಂತೆಂಬುದೊರೆವೆನು ಬಿಡದೆ ಕಾಡುವ ಶಿವ ಸ್ವ
ತಂತ್ರ ಸದ್ಭಕ್ತನೆಚ್ಚರಿನುಭಯ ಪಂಥ ||  || ಪಲ್ಲ ||

ತನುಮನ ಧನದಾಸೆ ತೋರಿ ನಿತ್ಯತ್ವದಾ
ನೆನಹ ಬಿಡಿಸುವೆನೆಂಬುದು ಶಿವನ ಪಂಥ
ಎನಿತೆನಿತು ಮರವೆಗೆ ಸಿಲುಕದೆ ಸುಜ್ಞಾನ
ದನುವಿನಿಂದಾಚರಿಪುದು ಶರಣಪಂಥ ||  || ೧ ||

ಹಲವು ಪ್ರಕಾರದ ಸೂತಕ ಭಯದೋರೆ
ತೊಲಗಿಸಿ ಹಳಿವನೆಂಬುದು ಶಿವನ ಪಂಥ
ಕಲೆಯನರಿದು ಲಿಂಗಕೆತ್ತಿದ ತನುವೆಂಬ
ನೆಲೆಯಿಂದ ಕೂಡಿ ಭೋಗಿಪುದು ಶರಣಪಂಥ ||  || ೨೨ ||

ಕಂಗೊಳಿಸಿದ ವ್ರತನೈಷ್ಠಾಚಾರವ
ಹಿಂಗಿಸಿ ನಗುವೆನೆಂಬುದು ಶಿವನ ಪಂಥ
ಮಂಗಳಮಯವಪ್ಪ ದೃಢದಿಂದ ಹರನಿಗೆ
ಬೆಂಗೊಡದಡಿಯಿಡುವದು ಶರಣಪಂಥ ||  || ೩ ||

ಹಂಬಲಿಕೆಯನೊಡ್ಡಿ ಎಡರು ವಿಘ್ನಗಳಿಂದ
ನಂಬುಗೆಗೆಡಿಪೆನೆಂಬುದು ಶಿವನ ಪಂಥ
ಬೆಂಬಿಡದನುಪಮನಂಘ್ರಿಯ ಮತ್ತೆ ಮತ್ತೆ
ನಂಬಿ ಬಲ್ವಿಡಿವುದಗ್ಗಳ ಶರಣಪಂಥ ||  || ೪ ||

ಬಿನ್ನಾಣದಿಂದ ಕಾಡಿದರಂಜದವರಿಗೆ
ತನ್ನನೆ ಕೊಡುವೆನೆಂಬುದು ಶಿವನ ಪಂಥ
ಸನ್ನುತ ಗುರುಶಾಂತೇಶನೊಳಾತ್ಮ ನಿ
ರ್ಭಿನ್ನನಾಗಿರ್ಪುದುದೆ ಶರಣಪಂಥ ||  || ೫ ||

೧೪. ಕಾಡಲಮ್ಮವು ಕರಣಂಗಳು
ರಾಗ : ಶಂಕರಾಭರಣ

ಕಾಡಲಮ್ಮವು ಕರಣಂಗಳು ಕೂಡಿಹ
ಸ್ವಯಂಜ್ಯೋತಿ ಬೆಳಗನರಿದನಾ ||  || ಪಲ್ಲ ||

ನೀರಿನೊಳಗೆ ತಾವರೆ ಇಪ್ಪುದೆಂತಂತೆ
ಕ್ಷೀರ ಮಾಂಸದೊಳಿರ್ಪ ತೆರನಂತೆ
ಆರೈದು ನೋಡಿ ಕಾಳಿಕೆ ಹೊದ್ದದಾಲಿಯಂತೆ
ಸೇರಿ ಪ್ರಪಂಚು ಹೊದ್ದಿಯು ಹೊದ್ದದಿಪ್ಪನಾ ||  || ೧ ||

ಹುಡಿ ಹತ್ತದನಿಲನಂತೆ ನುಡಿ ಹತ್ತದ ಜಿಹ್ವೆಯಂತೆ
ಕಡಲೊಳಗಿದ್ದು ಕೆಡದ ವಡಬನಂತೆ
ಜಡದೆನಿಸುವ ಸಕಲದೊಳಗಿದ್ದು ಇಲ್ಲದೆ
ಮೃಡನ ನಿಜವೆ ತಾನೆನಿಸಿ ನಿಂದವನ ||  || ೨ ||

ಬೇವಿನ ಕೋಲಾರದೊಳಗಿಪ್ಪ ಮಧುವಿನಂತೆ
ಆವಿನ ಪಾಲೊಳಗಿರ್ಪ ಘೃತದಂತೆ
ಈ ವಿಧದೊಳು ಸಂಸಾರ ಹೇಯವಾಗಿ
ತೀವಿಕೊಂಡಿರ್ದು ಇಲ್ಲದೆ ಇಪ್ಪ ಅಜಡನ ||  || ೩ ||

ಸಕಲದೊಳಗೆ ನಿಃಕಲವಿಪ್ಪುದೆಂತಂತೆ
ಅಖಿಲರೊಡಲೊಳಗಿಪ್ಪ ಸುಖದಂತೆ
ಮುಕುರದೊಳಗೆ ತೋರುವ ಪ್ರತಿಬಿಂಬದಂತೆ
ಅಕಳಂಕನಾಗಿ ಹೊದ್ದಿಯೂ ಹೊದ್ದದಜಡನ ||  || ೪ ||

ಅಂಗವೆ ಲಿಂಗವಾಗಿ ಮನವೆ ಪುಷ್ಪವಾಗಿ
ಸಂಗಿಸಲನನ್ಯ ಸುಖಂಗಳನು
ಮಂಗಳಮಯ ನಿಜ ಶ್ರೀಗುರು ಶಾಂತೇಶನೊಳು
ಅಂಗವೆ ಲಿಂಗ ಲಿಂಗನೆ ಅಂಗವಾದವನ ||  || ೫ ||

೧೫. ಕಾಯಿ ಲಿಂಗ ಕಾಯಿ
ರಾಗ : ಶ್ರೀರಾಗ

ಕಾಯಿ ಲಿಂಗ ಕಾಯಿ ಕಾಯಿ
ಕಾಯಿ ಲಿಂಗ ಕಾಯಿ ಕಾಯಿ ||  || ಪಲ್ಲ ||

ಅವನಿಯಂಬರದಾದಿಯಷ್ಟತನುಗಳ ತಾಳಿ
ಅವಿರಳ ಮಹಾಘನದಿಯವತರಿಸಿ ತೋರಿದ ||  || ೧ ||

ಪಂಚವರ್ಣದ ಬ್ರಹ್ಮ ಪಂಚಜಿಹ್ವೆಯ ಗಾತ್ರ
ಪಂಚಾಕ್ಷರಿಯವೆಸರ ಪಂಚವದನದ ಸವಿಯ ||  || ೨ ||

ನಿರುತ ಬ್ರಹ್ಮದ ಘಟ್ಟಿ ನಿತ್ಯ ಚಿದ್ರೂಪನೆನಿಪ
ಗುರುಶಾಂತ ನಿಮ್ಮ ಕರಕಮಲದಲ್ಲಿ ಉದಯಿಸಿದ ||  || ೩ ||

೧೬. ಕುದಿದು ಕೋಟಲೆಗೊಂಬೆ
ರಾಗ : ಶುದ್ಧ ಕಾಂಬೋಧಿ

ಕುದಿದು ಕೋಟಲೆಗೊಂಬೆ ಉದರಾಗ್ನಿ ಬಹು
ಚದುರಿನೂಟವನುಂಬೆ ಉದರಾಗ್ನಿ
ವಿದಿತ ಭೋಗವನುಂಡೆ ಉದರಾಗ್ನಿ ನಿನ್ನ
ಮೊದಲಾಗಿ ಬಲ್ಲೆ ನಾನು ಉದರಾಗ್ನಿ ||  || ಪಲ್ಲ ||

ನೋಡುವೆ ಕಾಲಕಾಲಂಗಳ ಕೊಂ
ಡಾಡುವೆಯಖಿಳ ಜನಂಗಳ
ಬೇಡುವೆ ಭಕ್ತಿಸುಖಂಗಳ ನಿನ್ನ
ಗಾಢವ ಬಲ್ಲೆ ನಾನುದರಾಗ್ನಿ ||  || ೧ ||

ನುಡಿಯದವರ ಮಿಗೆ ನುಡಿಸುವೆ ನೀ
ನಡೆಯದಲ್ಲಿಗೆ ಅಡಿವಿಡಿಸುವೆ
ಪಿಡಿದ ವ್ರತಂಗಳ ಬಿಡಿಸುವೆ ನಿನ್ನ
ಕಡು ಸೆರೆಯ ಬಲ್ಲೆ ನಾನುದರಾಗ್ನಿ ||  || ೨ ||

ಹೊತ್ತುತ ಹೊಗೆ ಮೊದಲೇರುವೆ ಕಣ್ಣು
ಗತ್ತಲೆ ಗವಿಸುತ ಬೀರುವೆ
ಅತ್ಯಂತ ಕಳವಳದೋರುವೆ ನಿನ್ನ
ಕೃತ್ಯದ ಬಲ್ಲೆ ನಾನುದರಾಗ್ನಿ ||  || ೩ ||

ಏಳುವೆ ಭುಗಿಭುಗಿಲೆನ್ನುತ ಮಿಗೆ
ತಾಳುವೆ ಕ್ರೋಧವನುನ್ನತ
ಕೇಳುವೆ ಎನ್ನವನೆನ್ನುತ ನಿನ್ನ
ಬಾಳುವೆಯ ಬಲ್ಲೆ ನಾನುದರಾಗ್ನಿ ||  || ೪ ||

ಹೂಣಿಸಿದವಿರಳ ಸಂಗದಿ ಎನ್ನ
ಪ್ರಾಣ ಸದ್ಗುರುಶಾಂತ ಲಿಂಗದಿ
ಮಾಣದೆ ನಿಂದ ನಿಜಾಂಗದಿ ನಿನ್ನ ನಾ
ಕಾಣೆ ಕಾಣೆ ನಾನುದರಾಗ್ನಿ ||  || ೫ ||

೧೭. ಜನ ಮೆಚ್ಚಲದೇಕೆ
ರಾಗ : ಸೌರಾಷ್ಟ್ರ

ಜನ ಮೆಚ್ಚಲದೇಕೆ ನಿನ್ನ
ಮನಸಾಕ್ಷಿಯಾಗಿರಲದು ಜೋಕೆ ||  || ಪಲ್ಲ ||

ಕರಣ ಗುಣಗಳಿಚ್ಚೆಯ ಬಿಟ್ಟು ಬಂದಾ
ವರಿಸುವ ಸುಖಗಳ ಲಿಂಗಕೆ ಕೊಟ್ಟು
ಗುರುಭಕ್ತಿ ಸಲೆ ಅಳವಟ್ಟು ಸುರು
ಚಿರ ಬ್ರಹ್ಮದೊಳು ನಿನ್ನ ಮನವ ಕಟ್ಟು ||  || ೧ ||

ಕರ್ಮ ನೀತಿಗಳ ಕಳೆವುದು ನಿನ್ನ
ಘೂರ್ಮಿಸಿ ಕಾಡುವ ಭವವನಳಿವುದು
ನಿರ್ಮಳ ಗುಣವ ತಾಳುವುದು ಶಿವ
ಧರ್ಮ ಮಾರ್ಗವ ಆಚರಣೆಯ ತಿಳಿವುದು ||  || ೨ ||

ಇಂತು ನಿನ್ನೊಳಗೆ ನೀ ನೋಡು ದೊರೆ
ದಂತೆ ಸತ್ಪಾತ್ರ ಜನಕೆ ನೀಡಿ ಮಾಡು
ಚಿಂತೆ ಸಂತಸುವ ನೀಗಾಡು ಪ್ರಭು
ಕಾಂತ ಕರಸ್ಥಲದಧಿಕನ ಕೂಡು ||  || ೩ ||

೧೮. ಕೋಲೆ ಕೋಲೆ ಕೋಲು
ರಾಗ : ಪಂತು ವರಾಳಿ

ಕೋಲೆ ಕೋಲೆ ಕೋಲು ಸುಜ್ಞಾನದ ಕೋಲೆ
ಕೋಲ ಪದನ ಘನಲೀಲೆ ನೀ ಪೇಳಂಗದ ಮೇಲೆ ||  || ಪಲ್ಲ ||

ಗಗನ ಮಂಟಪದೊಳು ಪೊಗುತ
ಸೊಗಸಿ ಲಿಂಗದ ಗತಿ ವಿಗುತ
ಯುಗ ನಯನಾಶ್ರುಗಳೊಗುತ ಈ
ಜಗದ ಜನರ ನೋಡಿ ನಗುತ ||  || ೧ ||

ಆರು ಮುಖದ ಶಕ್ತಿ ನೋಡೆ
ಮೂರು ಲಿಂಗದ ಯುಕ್ತಿಗೂಡೆ
ತೋರು ಸದ್ಭಕ್ತಿಯ ಪಾಡೆ ಮಿಗೆ
ಮೀರಿದ ಶಕ್ತಿಯೊಳಾಡೆ ||  || ೨ ||

ಎತ್ತಿಸಿ ಕ್ರೀಗಳ ನುಡಿದು
ನಿತ್ಯಾನಂದದೊಳಗೆ ನಡೆದು
ಅತ್ಯಂತದನುಭಾವವಡೆದು
ಹತ್ತಿರ ಬಾ ಕೋಲ್ವಿಡಿದು ||  || ೩ ||

ಕದುಬುವ ಕರಣಾದಿ ಚಿಂತೆ
ಎದೆವನೆಯೊಳು ನಿಲ್ಲದಂತೆ
ಸದಮಲ ಸದ್ಗುಣವಂತೆ ಕೊ
ಲೊದಗಿ ಬಾರೆ ಚಿತ್ಕಾಂತೆ ||  || ೪ ||

ಭಾವದೃಷ್ಟಿ ಬಲಿಬಲಿಯೆ
ತೀವಿದ ಮನ ನಲಿನಲಿಯೆ
ಸೇವೆ ರತಿಯೊಳೊಲಿದುಲಿಯ ನ
ಮ್ಮೈವರ ಗತಿಗೊಲಿದೊಲಿಯೆ ||  || ೫ ||

ರೂಪು ರೂಪಿನಿಂದೊಲಿಯೆ
ರೂಪಿನೊಳಗೆ ಮೈಮರೆಯೆ
ರೂಪನೆರೆದು ಕಣ್ದೆರೆಯೆ ಚಿ
ದ್ರೂಪ ನಿರೂಪಿನಲಿ ಮರೆಯೆ ||  || ೬ ||

ಮಂಗಳಮಯ ಪುಟಮಾಗೆ
ಸಂಗಸುಖದ ಘಟ್ಟಿಯಾಗೆ
ಲಿಂಗಭೋಗ ದಿಟಮಾಗೆ ತ
ನ್ನಂತರಂಗದ ಗುಣ ಸಟೆಯಾಗೆ ||  || ೭ ||

ಜಾಣೆ ನಿನ್ನಯ ವೇಷ
ಮಾಣದೆ ನಿಂದ ವಿಲಾಸ
ಹೂಣಿಸಿ ಬಲಿದ ಪ್ರಕಾಶ ನೆರೆ
ಕಾಣಿಸುತಿದೆ ಕೈಲಾಸ ||  || ೮ ||

ಸಂತತ ಪ್ರಣಮ ಸುನಾದ ನಿ
ಶ್ಚಿಂತಾತ್ಮ ನಿರ್ಭೇದ
ಇಂತೆಸೆಯಲ್ಕೆ ವಿನೋದ ಗುರು
ಶಾಂತಲಿಂಗ ತಾನಾದ ||  || ೯ ||

೧೯. ತಾನೆ ತಾನಾರೆಂದರಿದು
ರಾಗ : ಪಂತು ವರಾಳಿ
ತಾನೆ ತಾನಾರೆಂದರಿದು
ತಾನು ತಾನೆಯೆಂದರಿದು ||  || ಪಲ್ಲ ||

ಲಿಂಗಾಣತಿ ನಡೆ ಲಿಂಗಾಣತಿ ನುಡಿ
ಲಿಂಗಾಣತಿ ದೃಢಮಂಗಳದ
ಲಿಂಗಾಣತಿ ಘನಸಂಗವ ಹಿಂಗದ
ಲಿಂಗಾನುಭವ ಸುಖಿ ಬಂದ ಕಾಣೆಯಮ್ಮ ||  || ೧ ||

ಪಂಚಭೂತ ಯೋಗಾಸನವೆನಿಸುವ
ಪಂಚೇಂದ್ರಿಯ ಸಂಚವನರಿದು
ಪಂಚವಿಷಯ ನಿರ್ವಂಚನ ಭೋಗದ
ಪಂಚವದನ ಸುಖಿ ಬಂದ ಕಾಣೆಯಮ್ಮ ||  || ೨ ||

ಆಸೆ ರೋಷ ಸುಖದುಃಖದೊಡಲಗುಣ
ವೇಶಿಗೊಲಿದು ಮನಸಂಚರಿಸಿ
ಈಶನಾದೊಡಾಗಲಿ ಪ್ರಿಯಗಯ್ಯದ
ಭಾಷೆಯ ನಿಜಸುಖಿ ಬಂದ ಕಾಣೆಯಮ್ಮ ||  || ೨ ||

ಹಾರನೋರ್ವರ ಹಳಿದು ನಿಂದಿಸಿ
ಆರಯ್ಯನ ಸರ್ವರ ಗತಿಯ
ವೀರಶೈವಾಚಾರ ವಿಚಾರದ
ಕಾರಣಿಕ ಸುಖಿ ಬಂದ ಕಾಣೆಯಮ್ಮ ||  || ೪ ||

ಬೇಕು ಬೇಡನು ನನ್ನದು ಎಂಬ ಅ
ನೇಕ ಚಿಂತೆ ಭಾವಭ್ರಮೆಯ
ಲೋಕರಂಜನದ ಜೊತೆಗೆ ಪೋಗದ ನಿ
ರಾಕುಳಾತ್ಮಸುಖಿ ಬಂದ ಕಾಣೆಯಮ್ಮ ||  || ೫ ||

ಮಾತಿಗೆ ಮಂತ್ರವು ಸೀತಕ್ಕೆ ರಗಟಿಯು
ಓತು ಕ್ಷುಧೆಗೆ ಭಕ್ಷದಾಹಾರಾ
ನೀತಿ ನಿದ್ರೆಯಂ ಧ್ಯಾನದಿ ಕಳೆವ ಅ
ಜಾತ ರತಿಸುಖಿ ಬಂದ ಕಾಣೆಯಮ್ಮ ||  || ೬ ||

ಬಾಲೋನ್ಮತ್ತ ಪಿಸಾಚಿ ಭಾವದಲ್ಲಿ
ಕಾಲ ಕಾಮ ಕಂಟಕವಳಿದು
ಭೂಲೋಕದಿ ನೆರೆ ಸುಳಿವುತಿರ್ಪ ಆ
ಲೋಲಮನದಿ ಸುಖಿ ಬಂದ ಕಾಣೆಯಮ್ಮ ||  || ೭ ||

ಮರ್ತ್ಯರಲ್ಲುತ್ತಮ ಮಧ್ಯ ಕನಿಷ್ಠರ
ಕೃತ್ಯಾಕೃತ್ಯವ ಲೆಕ್ಕಿಸಿ ಬರೆವ
ಚಿತ್ರಗುಪ್ತರ ಲೆಕ್ಕಕ್ಕೆ ನಿಲುಕದ
ನಿತ್ಯ ನಿಃಕಳಸುಖಿ ಬಂದ ಕಾಣೆಯಮ್ಮ ||  || ೮ ||

ಕಾಂತೆ ಕೇಳೆ ಎನ್ನ ಹೃತ್ಕಮಲಕೆ
ಸಂತಸವಿತ್ತು ಸದಾನಂದ
ಕಾಂತಿ ವಿರಾಜಿಪ ಬೆಳಗಿನಿಂದ ಗುರು
ಶಾಂತಲಿಂಗಸುಖಿ ಬಂದ ಕಾಣೆಯಮ್ಮ ||  || ೯ ||

೨೦. ಧಾರುಣಿಯ ಭೋಗಕಿನ್ನು
ರಾಗ : ಒಡ್ಡಿ ಧನ್ವಾಸಿ

ಧಾರುಣಿಯ ಭೋಗಕಿನ್ನು ತನುವೆತ್ತಿ ಮರಳಿ
ಬಾರೆನೆಂದು ಹೇಳು ಕೋಗಿಲೆ ಕೋಗಿಲೆ |          || ಪಲ್ಲ ||

ಬಾಲ ಯೌವನದಿ ವೃದ್ಧಲೀಲೆವಡೆದಸುವ ಭವ
ಜಾಲವ ಪರಿದು ಸುಖ ದುಃಖವರಿತು
ಕಾಲಕಾಮರುಗಳ ದುರ್ವ್ಯಾಪಾರವ ಲೇಖನವ
ಸೀಳಿದವನೆಂದು ಹೇಳು ಕೋಗಿಲೆ ||  || ೧ ||

ಕೋಟಲೆ ಸಂಚಾರ ಲೋಕರಂಜನಾಹಂ ಮಮತೆಯ
ಲೂಟಿವರಿದೋಮ ಮೂಲಸೂತ್ರದಲ್ಲಿ
ನಾಟಿವಿಡಿದು ಮನದಿಂದಾನು ನನ್ನದೆಂಬ ನುಡಿ
ನೋಟಗೆಟ್ಟಿತೆಂದು ಹೇಳು ಕೋಗಿಲೆ ||  || ೨ ||

ಮೀರಿ ಲೀಲಾಸುಖದಿ ತಾಳಿ ತನುವಿನಗ್ರದ ಕಲೆಯನರಿದು
ಬೇರೆ ತಂತ್ರವಿಲ್ಲವೆಂದು ತಿಳಿದ ಚಿತ್ತಾ
ತೋರಿ ತೋರಿ ನಿಚ್ಚ ನಿಚ್ಚ ನೆನೆವ ಭೋಗ ರತಿಯ ಕೀಲು
ಜಾರಿತೆಂದು ಹೇಳು ಕಂಡ್ಯಾ ಕೋಗಿಲೆ ||  || ೩ ||

ಹಿಂದು ಮುಂದು ಕುಂದು ಹೆಚ್ಚು ಬಂದಿತು ಬಾರದು ಎಂಬ
ದ್ವಂದ್ವ ಗತಿ ಭಾವರತಿ ದೂರನಾಗಿ
ಅಂದಂದಿಗಂತಿದ್ದುದಂತೆ ವಿರಾಜಿಸಿ ನಿಂದ
ನೆಂದು ಹೇಳು ಕಂಡ್ಯಾ ಕೋಗಿಲೆ ||  || ೪ ||

ಅಂಗದೊಳಹೊರಗೆ ಸುಸಂಗದಿ ಕಾಣಿಸುತ ಬೆ
ಡಂಗಿನಿಂದ ಕರಕಮಲದಿ ನಿಂದು
ಮಂಗಳಾರ್ಚನೆಯ ಕೈಕೊಳುತಿಹ ಗುರುಶಾಮತ
ಲಿಂಗನೊಳೈಕ್ಯವು ಹೇಳು ಕೋಗಿಲೆ ||  || ೫ ||

೨೧. ನೋಡು ಕಾಮಿಗೆ ಲಿಂಗಾಣತಿಯ
ರಾಗ : ಲಲಿತೆ

ನೋಡು ಕಾಮಿಗೆ ಲಿಂಗಾಣತಿಯ
ಪಾಡಿನಿಂದಲೆ ಸುಳಿದಾಡುವನನುದಿನ ||  || ಪಲ್ಲ ||

ಭೇರಿಯ ಬಡಿದರೆ ಬಾಯ ಮುಚ್ಚಿ ಮದ
ವಾರಣನ ಕೆಣಕಿ ಗುಡಿಲನು
ಸಾರುವ ತೆರನಾಗದೆ ದೃಢ ಚಿತ್ತದ
ವೀರಶೈವದಾಚರಣೆಯನರಿದು ||  || ೧ ||

ಖ್ಯಾತಿಗೆ ಬಾರದೆ ಬಂದ ಬಳಿಕ ಸಲೆ
ಭೀತಿಗೊಳದೆ ತೊಟ್ಟ ಶರೀರವೆಂಬುದು ವೀರವ್ರತದ
ರೀತಿಯ ತೊಲಗದೆ ಕಲಿಯುಗದೆಳೆಯ
ಮಾತಿನ ಮಾತಿನ ಮನವ ತಾನೀಯದೆ ||  || ೨ ||

ಹುಟ್ಟುವ ಹೊಂದುವ ಬಾಧೆಗೆ ಅಳುಕಿ
ಮುಟ್ಟಿ ನಡೆವ ಸುವ್ರತಳಿಗೆ
ಕೊಟ್ಟ ಶರೀರವೆಂಬುದು ನಿಶ್ಚಯಿಸುವ
ಮೆಟ್ಟಿದ ಹೆಜ್ಜೆಯ ಮೆಟ್ಟದೆ ನಿಂದು ||  || ೩ ||

ಬೆಡಗಿನ ಕಾಮ ಕೃತಾಂತಕನೆನಿಸುವ
ಕಡು ಹಾಹೆಗಳೊಗ್ಗಿನ ತೊಡರ
ಪಡ ಹುಸಿಯನು ತವೆ ಸರಗೊಳಿಸುತ ತ
ನ್ನೆಡದ ಪಾದದಿ ಕಟ್ಟಿ ಮೆರೆವುತ ||  || ೪ ||

ಬಸವೇಶ್ವರ ಮೊದಲಾದ ಪುರಾತನ
ರಸಮ ಪದಂಗಳ ಬಲ್ವಿಡಿದು
ಎಸೆವ ಮಹಾಗುರುಶಾಂತನ ಕೃಪೆಯಿಂದ
ವಸುಮತಿಯೊಳಗವಿರಳ ಸುಖಿಯಾದ ||  || ೫ ||

೨೨. ಪಾಡುತಾದಿಯ ಶರಣರು
ರಾಗ : ಶಂಕರಾಭರಣ

ಪಾಡುತಾದಿಯ ಶರಣರು ತ್ರಿವಿಧ ಒಂದು
ಗೂಡಿ ಆಡಿದರುಯ್ಯಲೆ ||  || ಪಲ್ಲ ||

ಸತ್ಯ ಶಾಂತಿಗಳ ಕಂಭ ಕ್ಷಮೆ ದಯೆ ಭೂಮಿ
ಭಕ್ತಿ ಜ್ಞಾನವೆರಡು ನೇಣು
ಭತ್ತವೆಂಬ ಮಣಿಯ ಮೆಟ್ಟಿ ಒಲೆಯಲಲಿದು
ಮುಕ್ತಿ ಪದವನೆ ಕೂಡಿತು ||  || ೧ ||

ಚಿತ್ತ ಸಕತಿ ಸಮ್ಮೇಳದ ಷಡುಸ್ಥಲದ
ತುದಿ ಪದವ ಮೆಟ್ಟಿ ನಿಂದು
ಸದಮಲ ಜ್ಞಾನದಿಂದ ಭವಪಾಶ
ಹೊದ್ದದಾಡಿದರುಯ್ಯಲೆ ||  || ೨ ||

ಸತ್ತು ಚಿತ್ತಾನಂದದ ನಿಜವನೇ
ಭಿತ್ತಿಯಲ್ಲಿ ನೋಡಿ ನಿಂದು
ತತ್ವಮಸಿ ಪದವನರಿದು
ಒಡಗೂಡಿ ಸತ್ಯರಾಡಿದರುಯ್ಯಲೆ ||  || ೩ ||

ಪ್ರಣವದಾದಿಯ ನಾದವ ಮುಟ್ಟುತಲಿ
ಪ್ರಣಮಾಗ್ರ ಮುಟ್ಟಲಾಗಿ
ಗಣನೆಗತಿಶಯ ಬೆಳಗಿನ ಕಳೆಯೊಳಗೆ
ಅಣಿಯೊಳಾಡಿದರುಯ್ಯಲೆ ||  || ೪ ||

ನಾದಬಿಂದು ಕಳೆ ಮೂರರ ನಿಜವನೇರಿ
ಸಾಧಿಸಿಯೆ ನಿಂದು ನೋಡಿ
ಆದಿಮಧ್ಯಾಂತರಹಿತ ಶಾಂತನೊಳು
ಛೇಧಿಸಾಡಿದರುಯ್ಯಲೆ ||  || ೫ ||

೨೩. ಬಸವನ ನೆನಹಿಂದ
ರಾಗ : ಆಹರಿ

ಬಸವನ ನೆನಹಿಂದ ಎ
ನ್ನಸುವಾನಂದೊಳೆಸೆವುತಿದೆ ||  || ಪಲ್ಲ ||

ಗುರುಕಾರುಣ್ಯ ಗುಡಿಕಟ್ಟುತಿದೆ
ಪರಿಪೂರ್ಣದ ಮೊಳೆದೋರುತ್ತಿರೆ
ದುರಿತೋಘವು ಮುರಿದೋಡುತಿದೆ
ಹರಮಂತ್ರ ಒಳವಿಂದೊದಗುತಿದೆ ||  || ೧ ||

ಕರತಳ ಕೈಲಾಸವಾಗುತಿದೆ
ಕರಣತತಿಯು ಕೆಲ ಕೋಡುತಿದೆ
ಶರಣಸಂಗಕೆ ಮನವೆಳಸುತಿದೆ
ಸುರಚಿರ ಬೆಳಗಾವರಿಸುತಿದೆ ||  || ೨ ||

ತನು ರೋಮಾಂಚನದಳೆವುತಿದೆ
ಮನವೇಂಕಾತವ ಬಯಸುತಿದೆ
ಜನನ ಮರಣಗಳಿಗಲಸುತಿದೆ
ಉನುಮನಿಯನು ಉಲುಹಡಗುತಿದೆ ||  || ೩ ||

ಮೋಹವೆನಗೆ ಮುಂದೋರುತಿದೆ
ಸ್ನೇಹವೆನಗೆ ನೆಲೆಯಾಗುತಿದೆ
ಊಹೆ ಎನಗೆ ಉಚ್ಚಳಿಸುತಿದೆ
ಸಹಜ ಸಮರಸವೈದುತಿದೆ ||  || ೪ ||

ಮನ ಘನದೊಳು ಮುಳುಗಾಡುತಿದೆ
ಅನುನಯ ವಿನಯವು ಹೆಚ್ಚುತಿದೆ
ವಿನುತ ಪ್ರಸಾದವ ಸವಿವುತಿದೆ ನಿಜ
ಘನ ಗುರುಶಾಂತನ ಕೂಡುತಿದೆ ||  || ೫ ||

೨೪. ಬಸವನೆ ಗುರುವೆನಗೆ
ರಾಗ : ಧನ್ವಾಸಿ

ಬಸವನೆ ಗುರುವೆನಗೆ ಸಂಗನ
ಬಸವನೆ ಪರವೆನಗೆ ||  || ಪಲ್ಲ ||

ಹರಣದಿ ಲಿಂಗವ ಧರಿಸಿದನು ಎನ್ನ
ಕರಣೇಂದ್ರಿಯಂಗಳ ಕೆಡಿಸಿದನು
ಉರುತರ ಮಂತ್ರವನರುಹಿದನು ಶಿವ
ಶರಣರ ಸಂಗದೊಳಿರಿಸಿದನು ||  || ೧ ||

ಭಕ್ತಿಯ ಮಾಡೆಂದು ಹೇಳಿದನು
ಯುಕ್ತಿ ಇದೆಯೆಂದು ತೋರಿದನು
ತೀರ್ಥ ಪ್ರಸಾದವನರುಹಿದನು ಘನ
ಮುಕ್ತಿಯ ಪಥಕೆನ್ನ ಸಲಿಸಿದನು ||  || ೨ ||

ನಾದಬಿಂದುಕಳೆಗತಿಶಯನು
ವೇದ ನಾಲ್ಕುರೊಳು ಸಿಲುಕಿದನು
ಮೂದೇವರುಗಳು ಕಾಣದನು
ಭೇದಿಸಿ ಕೊಟ್ಟನು ಗುರುಶಾಂತೇಶನು ||  || ೩ ||

೨೫. ಲಿಂಗಾಯತ ಲಿಂಗಸ್ವಾಯತ
ರಾಗ : ವರಾಳಿ

ಲಿಂಗಾಯತ ಲಿಂಗಸ್ವಾಯತ ಘನ
ಲಿಂಗ ಸನ್ಮತ ಲಿಂಗಾಂಗಯೋಗ
ಹಿಂಗದಿವರ ಘನದಾಯತವರಿದು ಸು
ಸಂಗವಡೆದು ಲಿಂಗೈಕ್ಯನಾದ ||  || ಪಲ್ಲ ||

ಉನುಮನಿಯೊಳಗಣ ಕಮಲ ಕರ್ಣಿಕೆಯ ಸ
ದ್ವಿನುತ ಮಧ್ಯದೊಳಿಹ ಘನಲಿಂಗವ
ಅನುವಾಗಿ ಕರದಲ್ಲಿ ಧರಿಸಿ ಆ ಲಿಂಗದ
ನೆನಹಿನೊಳಿರೆ ಲಿಂಗಾಯತ ||  || ೧ ||

ಲಿಂಗದೊಳೆಡದೆರಹಿಲ್ಲದೆ ಮನಭಾವ
ಸಂಗವಾಗಿ ಅ ಲಿಂಗದಲ್ಲಿ
ಸಂಗ ಶಂಕೆಯನಳಿದೊಡಗೂಡಬಲ್ಲರೆ
ಮಂಗಳಮಯ ಲಿಂಗಸ್ವಾಯತ ||  || ೨ ||

ನುಡಿವ ನೋಡಿಸುವ ರುಚಿಸುವ ವಾಸಿಸುವ
ಬಿಡದೆ ಕೇಳಿಸುವೆಡೆಯೊಳು ತಾನಾಗಿ
ಒಡಗಲಸಿರ್ಪ ಲಿಂಗದ ದೃಢಕರದಲ್ಲಿ
ಪಿಡಿದು ಧರಿಸಿ ಲಿಂಗಸಂಗನುಮತ ||  || ೩ ||

ಮನಭಾವಕರಣ ಹರಣ ದೃಷ್ಟಿಗಳೆಲ್ಲ
ಘನಲಿಂಗದೊಳು ಸಮರಸವಾಗಿ
ತನುವಿನ ಒಳಹೊರಗಿಪ್ಪ ಮಹಾಘನ
ದನುವನರಿಯೆ ಲಿಂಗಾಂಗಯೋಗ ||  || ೪ ||

ಪಂಚೇಂದ್ರಿಯ ಸಪ್ತಧಾತು ಷಡುವರ್ಗದ
ವಂಚನೆ ಎಲ್ಲವನತಿಗಳೆದು ನಿ
ಶ್ಚಿಂತ ನಿರ್ಮಲ ಗುರುತಾಂತೇಶ್ವರ
ನಂತುವಣೈದು ಲಿಂಗೈಕ್ಯನಾದ ||  || ೫ ||

೨೬. ಶಿವಸುಖವಾಗದಾಗದು
ರಾಗ : ಪಂತುವರಾಳಿ

ಶಿವಸುಖವಾಗದಾಗದು ಅವಿರಳ ಮನದಲ್ಲಿ ಬೊ
ಮ್ಮವ ನೆಮ್ಮಿ ಅನುಭವ ಸುಖರಸವನು ಕಂಡ
ಯೋಗಿಗಲ್ಲದಾಗದಾಗದು ||  || ಪಲ್ಲ ||

ಪರಿಪೂರ್ಣದ ಬೋಧಾಂಬುಧಿಯ
ಪರಮಾದ್ವಯ ಸುಧೆಯನು ಸವಿದು
ಕರಣೇಂದ್ರಿಯ ಸುಖಗಳ ನಿರಸನವೆಂದು
ತೊರೆದು ನಿಜವ ನಿಮ್ಮನಿಂದ ಯೋಗಿಗಲ್ಲದಾಗದು ||  || ೧ ||

ದೇಹಭಾವದಿ ತೋರುವ ದೃಶ್ಯ
ಮೋಹಗಳಿವನೆಲ್ಲವ ಜರಿದು
ಸೋಹಂ ಜಪವ ಜಪಿಸುತೀಶಂಗೆ ದಾ
ಸೋಹವ ಮಾಡಿದ ಯೋಗಿಗಲ್ಲದಾಗದಾಗದು ||  || ೩ ||

೨೭. ಸಾಲದೆ ಪೂರ್ವರ
ರಾಗ : ಒಡ್ಡಿ ಧನ್ಯಾಸಿ

ಸಾಲದೆ ಪೂರ್ವರ ಬೇಡದಾ ಸುಖ
ಲೋಲತ್ವವನೊಂದ ಪಡೆದರೆ ||  || ಪಲ್ಲ ||

ಕಾಯ ಹೊರೆವ ನಿರ್ಧಯದಿ ವಿಶ್ವ
ರಾಯನಾದರು ಪ್ರಿಯಗೈಯದ
ಆಯಸಗೊಂಡತಿ ಸುಯ್ಯದ ಮನ
ನೋಯದ ಸುಖ ಒಂದ ಪಡೆದರೆ ||  || ೧ ||

ಮರೆಯದೆ ಮನದ ಸಧರ್ಮವ
ನೆರೆಯದೆ ಅವಿಚಾರ ವರ್ಮವ
ಜರೆಯದೆ ಯಾವ ಸತ್ಕರ್ಮವ ತನ್ನ
ನರಿದ ಚಿತ್ ಸುಖ ಒಂದ ಪಡೆದರೆ ||  || ೨ ||

ನಾನು ನನ್ನ ತನುವೆನ್ನದ ಉಪ
ಮಾನದಿ ಭಿನ್ನರ ಸಲಹದಾ
ಸ್ವಾನುಭಾವ ಪರಿಪೂರ್ಣದಾ
ಘನಮೌನದ ಸುಖ ಒಂದ ಪಡೆದರೆ ||  || ೩ ||

ಭೇದಿಸದಾರ ಮನಂಗಳ ಮಿಗೆ
ಸಾಧಿಸದಖಿಳ ಜನನಂಗಳಾ
ಬೋಧಿಸದಿರ್ಪ ಗುಣಂಗಳ ನಿರು
ಪಾದಿಯ ಸುಖ ಒಂದ ಪಡೆದರೆ ||  || ೪ ||

ಆವುದ ಬಯಸದಜಾತನ ನಿಜ
ತೀವಿಯಾನಂದಿಸುತಾತ್ಮನಾ
ಭಾವಬಲಿದು ಗುರುಶಾಂತನ ಪದ
ಸೇವೆಯ ಸುಖ ಒಂದ ಪಡೆದರೆ ||  || ೫ ||

೨೮. ಹಸ್ತದೊಳಗಿರ್ಪ ಲಿಂಗ
ರಾಗ : ಶಂಕರಾಭರಣ

ಹಸ್ತದೊಳಗಿರ್ಪ ಲಿಂಗ ಷಡುಚಕ್ರ
ದತ್ತಲಾಡಿದನುಯ್ಯಲೆ ||  || ಪಲ್ಲ ||

ಕರಪೀಠ ಮಣೆಯ ಮಾಡಿ ಆತ್ಮನೆಂಬುರುತರದ ನೇಣಕಟ್ಟಿ
ಬೆಳಗುನ್ಮನಿಯ ಸಹಸ್ರದಳಕಮಲದೊಳಗೆ ಆಡಿದನುಯ್ಯಲೆ ||  || ೧ ||

ಮನುಮುನಿಗಳಂತ ರಂಗದೊಳಗಿಪ್ಪ ಘನಲಿಂಗ ಕರಸ್ಥಲದಲಿ ನಿಂದು
ಎಣಿಕೆಗೊಳಗಾಗದಿಪ್ಪ ಭೂಮದ್ಯದೊಳಗೆ ಆಡಿದನುಯ್ಯಲೆ ||  || ೨ ||

ವೇದಶಾಸ್ತ್ರಗಳರಿಯದೆ ಇರುತಿಪ್ಪನಾದಿ ಪರಂಜ್ಯೋತಿರ್ಲಿಂಗ
ನಾದಸ್ವರೂಪನಾಗಿ ಶುದ್ಧಿಯೊಳು ವೇಧಿಸಾಡಿದನುಯ್ಯಲೆ ||  || ೩ ||

ಎತ್ತ ನೋಡಿದಡಿಲ್ಲದ ಶೂನ್ಯಪರತತ್ವ ಪ್ರಾಣದೊಳು ಬೆರಸಿ
ಹಸ್ತದೊಳಗೊಲಿದು ನಿಂದು ಹೃತ್ಕಮಲದತ್ತಲಾಡಿದನುಯ್ಯಲೆ ||  || ೪ ||

ಕಡೆ ಮೊದಲು ಇಲ್ಲದಿರ್ಪ ಘನಲಿಂಗ ಅಡರಿ ಕಮಲದೊಳಗೆ
ಷಡುಚಕ್ರದೊಳಗಕ್ಷರ ರೂಪಾಗಿ ಅಡರಿಯಾಡಿದನುಯ್ಯಲೆ ||  || ೫ ||

ಮಣಿಮಯದ ಮಂಟಪದೊಳು ಬೆಳಗುತಿಹ ನಿರುಪಮ ನಿಜೇಷ್ಟಲಿಂಗ
ಕರಕಮಲಕಿಳಿದು ಬಂದು ನೆನಹಿನಾ ಕೊನೆಯಲಾಡಿದನುಯ್ಯಲೆ ||  || ೬ ||

ಕರಕಮಲದೊಳಗೆ ನಿಂದು ಸರ್ವಾಂಗದೊಳಗೆ ಪರಿಪೂರ್ಣನಾಗಿ
ನೆಲೆನೆಲೆಯ ಪೀಠದಲ್ಲಿ ಗುರುಶಾಂತ ಕರುಣಿಯಾಡಿದನುಯ್ಯಲೆ ||  || ೭ ||

೨೯. ಹೇಗಿರ್ದುದೆ ಹಾಗೆ
ರಾಗ : ಪಂತುವರಾಳಿ

ಹೇಗಿರ್ದುದೆ ಹಾಗೆ ಲಿಂಗಾಣತಿ
ರಾಗವಿರಾಗಕ್ಕೆ ಭೋಗವಿದೂರಗೆ ||  || ಪಲ್ಲವಿ ||

ಎಲ್ಲ ಪುರಾತನ ವಿಮಳ ಸುವಾಕ್ಯದ
ಸಲ್ಲೀಲೆಯ ಸಾಧನವೆಂದು
ಸೊಲ್ಲಿನ ಗತಿಯನಾರೈವುತ ಗೌರಿ
ವಲ್ಲಭ ನಟಿಸುವ ಸೂತ್ರವ ತಿಳಿದಂಗೆ ||  || ೧ ||

ಹಿಂಗಿಸಿ ನೋಡನು ಭಕ್ತಿ ವಿರಕ್ತಿಯ
ಅಂಗದಿಚ್ಚೆಗೆ ಏನುವ ಬೇಡ
ಮಂಗಳಮಯದಿಂ ಬರುವ ಪದಾರ್ಥವ
ಲಿಂಗವೆ ಕೊಡುವುದು ಕೊಂಬುದೆಂದರಿದಂಗೆ ||  || ೨ ||

ಒಡಲುವಿಡಿದು ಧಾರುಣಿಯೊಳು ಚರಿಸುತ
ನಡೆಗಾಣಿಸದೆ ನಿರಾಕುಳದಿ
ಹೊಡೆಗೆಡೆಯದ ಬೆಳೆಯ ತೆರನಂತೊಂ
ದೆಡೆ ಇಲ್ಲದೆ ಮಾಡುವ ನಿಸ್ಸೀಮಗೆ ||  || ೩ ||

ಊರೊಳಗಡಿಯಿಡುವಂದದಿ ಮತ್ತಾ
ಅರಣ್ಯದ ಪಣ್ ಫಲಾದಿ ಪುಷ್ಪ
ವಾರಿ ಮುಖ್ಯ ದ್ರವ್ಯಗಳ ಸ್ವತಂತ್ರದಿ
ಸಾರಿ ಪರಿದು ಸೇವಿಪ ನಿಜಭರಿತರಿಗೆ ||  || ೪ ||

ಎಂತಿರ್ದುದಂತೆ ವಿರಾಜಿಸುತಾತ್ಮನ
ಚಿಂತೆ ಮೊಳೆಯದೆ ಸ್ವಯಸ್ಥಲದಿ
ಸಂತತ ಗಮಿಸುತ ಜ್ಞಾನಕ್ರಿಯೆಗಳ
ಪಂಥವಿಡಿದ ಗುರುಶಾಂತನ ಶರಣಗೆ ||  || ೫ ||

೩೦. ಹೋದ ಧಾರುಣಿ ಭೋಗವಳಿದು
ರಾಗ : ಆಹರಿ

ಹೋದ ಧಾರುಣಿ ಭೋಗವಳಿದು ವಿ
ನೋದ ಪಾವನಮೂರ್ತಿ ಲಿಂಗದೊಳು ಬೆರೆದು ||  || ಪಲ್ಲ ||

ಹಮ್ಮು ಬಿಮ್ಮನೆ ತುಳಿದು ಹಸಿವು ತೃಷೆಯನೆ ಮರೆದು
ಕಲ್ಮಷದ ಕಸ ನೀಗಿ ಕಿಚ್ಚನಿಕ್ಕಿ
ನಿರ್ಮಲದಿ ಝಗಝಗಿಪ ಜ್ಯೋತಿ ನೆಲೆಯನೆ ಕಂಡು
ಜುಮ್ಮುದಟ್ಟುತ ಹಿಗ್ಗಿ ತಾನು ತಾನಾಗಿ ||  || ೧ ||

ಭಕ್ತಸ್ಥಲದಂಕುರದಿ ಶರಣಸ್ಥಲವನು ಕಂಡು
ಮನೆಗಳೆಲ್ಲವ ಚಲ್ಲಗಳೆದು
ಎತ್ತಿ ದಶವಾಯುಗಳನೂರ್ಧ್ವ ಮುಖವನೆ ಮಾಡಿ
ಚಿತ್ತಪರಿಪೂರ್ಣ ಬೆಳಗಿನಲಿ ಬೆಳಗಾಗಿ ||  || ೨ ||

ಕುಂಡಲಿಯ ಸರ್ಪನನು ಸುಟ್ಟು ಮೂರನೆ ಧರಿಸಿ
ಲಂಡ ಖಳರೈವರನೆ ಒಡಲ ಬಗೆದು
ಉಂಡು ಉಣ್ಣದೆ ಇಪ್ಪ ಉರಿಯ ಬ್ರಹ್ಮದ ಪ್ರಭೆಯ
ಕಂಡು ಮನನಟ್ಟು ಪ್ರಣಯದೊಳು ಬಯಲಾಗಿ ||  || ೩ ||

ಅಜಹರಿರುದ್ರರೆಂಬಲ್ಪ ಸದೆಗಳ ಕಳೆದು
ನಿಜತತ್ವ ನಿರ್ವಯಲ ನೆಲೆಯ ತಿಳಿದು
ಭುಜಬಲದಿ ಜ್ಞಾನಾಮೃತವನುಂಡು ಮೋಹಿನಿಯ
ಗಜವನೇರಿದ ವಸ್ತು ತಾನು ತಾನಾಗಿ ||  || ೪ ||

ಉರಿ ಕರ್ಪುರದೊಳಿಪ್ಪ ತೆರನಂತೆ ಮರಿದುಂಬಿ
ಪರಿಮಳದ ನುಂಗಿ ತಾ ಸುಖವಂದದಿ
ಪರವಶದೊಳು ನಿಂದು ಗುರುಶಾಂತನೊಳು ಬೆರೆದು
ಪರುಣಿ ಯತಿಗಪ್ರಿಯ ಕರಸ್ಥಲದರಾಯ ||  || ೫ ||

೩. ಕಣಿಯ ಹೇಳಬಂದೆ
ರಾಗ : ಶುದ್ಧ ಕಾಂಬೋಧಿ

ಕಣಿಯ ಹೇಳಬಂದೆ ನಾನು ಕಣಿಯ ಕೇಳೆ ಹೆಣ್ಣೆ ನೀನು
ಕ್ಷಣದಿ ನಿನ್ನ ದೇಹ ಜಡವ ಹಣಿದವಾಡಿ ಓಡಿಸುವೆನು ||  || ಪಲ್ಲ ||

ಸತ್ಯದಕ್ಕಿ ಹಸೆಯನಿಕ್ಕಿ
ಭಕ್ತಿ ತಾಂಬೂಲವಿರಿಸಿ
ಚಿತ್ತದಮಳ ತೈಲವನ್ನು ತಂದು ಮಡುಗಲು
ನಿತ್ಯ ಪ್ರಣವದಾದಿಯಕ್ಷರಂಗ
ಳಲಲ್ಲಿ ಬೋಧಿಸುತ್ತ ಜ್ಞಾನ
ಚಿತ್ತದಿಂದ ಹೊಯ್ದು ನಿನ್ನ ಮತ್ತ ಜಡವನೋಡಿಸುವೆನು ||  || ೧ ||

ಮೂರು ಬಟ್ಟೆ ಮಧ್ಯದಲ್ಲಿ
ಜಾರಿ ಬಿದ್ದು ನಾಲ್ಕು ದೆಸೆಯ
ಬೇರೆ ಬೇರೆ ನೋಡುತಿರ್ದೆ ಮಗಳೆ ಅಕ್ಕಟಾ |
ಊರ ಹಿಡಿದುವೈದು ಭೂತ
ವಾರು ದಿವಸದಿಂದ ನಿನಗೆ
ತೋರದಿಚ್ಚೆ ಗಂಡನಲ್ಲಿ ಮೀರಿ ಜಡವನೋಡಿಸುವೆನು ||  || ೨ ||

ವೆಗ್ಗಳಿಸಿತು ಹಲವು ಮಾತು
ಹಿಗ್ಗಿ ಪೋದುದಾತ್ಮನರಿವು
ಮಗ್ನವಾದೆ ಬಹುವಿಕಾರ ಗರ್ವಬಂಧದಿ
ಅಗ್ಗಳೆಯತನದಿ ನಿಜದ
ಹಗ್ಗದಿಂದ ಬಿಗಿದು ಕಟ್ಟಿ
ನೆಗ್ಗಿ ನೆಗ್ಗಿ ಮರವೆ ಜಡವ ನುಗ್ಗು ಮಾಡಿ ಓಡಿಸುವೆನು ||  || ೩ ||

ಅಷ್ಟದಳನ ದಿಕ್ಕುಗಟ್ಟಿ
ಮೆಟ್ಟಿ ನಿಲಿಸಿ ಏಳಲೀಸ
ದಟ್ಟಿ ಮುಟ್ಟಿ ಹಿಡಿವ ಚಿದಾಕಣತಿ ಎಂಬುದು
ದೃಷ್ಟವಾಗಿ ಕಾಣಿಸುವೆನು
ಇಷ್ಟಲಿಂಗ ತೂಳದಿಂದ
ಎಷ್ಟು ದೋಷ ದುರಿತ ಜಡನ ಬಿಟ್ಟು ಬಿಟ್ಟು ಓಡಿಸುವೆನು ||  || ೪ ||

ಹಿಂಗಿಸುವೆನುದ ಭೂತವೈದ
ಕಂಗೊಳಿಸುವೆ ನಿನ್ನ ಕೈಯ
ಲಿಂಗ ಗುರುಶಾಂತ ರಮಣ ಯೋಗದರ್ತಿಯಾ
ಸಂಗಸುಖದಿ ಭೋಧಿಸುವೆನು
ಮಂಗಳಾಂಗ ಭಸಿತವಿಟ್ಟು
ಹೆಂಗಳರಸಿ ಹಲವು ಭವದ ಭಂಗ ಜಡನ ಓಡಿಸುವೆನು ||  || ೫ ||

೩೨. ಎಂತು ಮಾಡಲಿ ದೇವರೆ

ಎಂತು ಮಾಡಲಿ ನಲ್ಲನ ಕೂಡ ಜೊತೆಗಳಾದವಲ್ಲ
ತಂತ್ರದಿಂದೆನ್ನ ಬಂಗಾರವ ಸೆಳಕೊಂಡ ||  || ಪಲ್ಲ ||

ಮೂರು ಮುತ್ತಿನ ಸರವು ಮುನ್ನವೆ ಪಂಚಹಾರ ಹೀರಾವಳಿಯು
ಆರು ನಗವ ಸೆಳಕೊಂಡು ನೋಡಿವ ಎನ್ನ ಮೂರು ಬಟ್ಟೆಯ ಮಾಡಿದ
ಬೆರಳಿ ತೊಲಿ ಬಂಗಾರ ಹೆಸರ್ಹೇಳಬಾರದಂತಾಯಿತ್ತಲ್ಲ
ಮೀರದ ಮಂತ್ರಗಾರನಿಗೆ ಸಿಕ್ಕಿ ಮರುಳಾದೆ ದೂರಮಾಡಿದನೆನ್ನನು ||  || ೧ ||

ಹತ್ತು ತೊಲಿ ಚಿಂತಾಕ ಕರ್ಣದ ರೂಪ ವ್ಯಕ್ತವಾಗಿರುತಿರಲು
ಚಿತ್ತವಿಟ್ಟು ಸೆಳಕೊಂಡು ನೋಡಿವ ಎನ್ನ ಬೆತ್ತಲೆ ಮಾಡಿದನು
ಮತ್ತೆ ನಾಲ್ಕೈದು ಹೊನ್ನ ಪದಕವನು ಎತ್ತಲಾಯಿತು ಕಾಣೆನು
ಮುತ್ತಿನ ಬಳೆಯ ಸೆಳೆದುಕೊಂಡು ಮೋಹದ ಗೊತ್ತನೆ ಜಾರಿಸಿದ ||  || ೨ ||

ಎಂಟು ಕರಿಮಣಿಯು ಲೇವಳ ಹದಿನೆಂಟು ರೂಪಗಳೆಲ್ಲವು
ನಂಟುತನದಿ ಸೆಳಕೊಂಡು ಕೈಯೊಳಗೊಂದು ಗಂಟ ಬೋಧಿಸಿ ಕೊಟ್ಟನು
ಗಿಂಟವನುಡಲೀಯದೆ ನೂರೊಂದು ಗಂಟನರಿವೆಯನಿತ್ತನು
ದಾಂಟಿಸಿದನು ಕರಸ್ಥಲದ ಮದ್ಗುರುಶಾಂತ ನಂಟು ಮಾಡಿದನೆನ್ನನು ||  || ೩ ||

೩೩. ನಾನೆಂತು ಪಡೆದಿದ್ದೇನೆ

ನಾನೆಂತು ಪಡೆದಿದ್ದೇನೆ ಇವನಿಂದ
ಲೇನು ಸುಖವಾಯಿತೆನಗೆ ಸಖಿಯೆ ||  || ಪಲ್ಲ ||

ತರಳತನದಲಿ ಮೋಹಿಸಿ ತದ್ಗತದಿ
ಮರುಳಾದೆ ಇವನ ಕೂಡ ಸಖಿಯೆ
ತೊರೆದೆ ಬಾಂಧವರನೆಲ್ಲ ಎನ್ನ ಹಣೆಯ
ಬರಹವನು ತೊಡೆದನಲ್ಲ ಸಖಿಯೆ ||  || ೧ ||

ಕೂಡಿದ್ದು ನುಡಿಯದಿಹನು ಅರ್ತಿಯನು
ಮಾಡಿದರೆ ಸಾರದಿವಗೆ ಸಖಿಯೆ
ಗೂಡಾಗಿ ಕಾಯ್ದಿರುವನು ನೋಡಿವಗೆ
ಕೇಡು ಬಹದ ಕಾಣೆನೆ ಸಖಿಯೆ ||  || ೨ ||

ಬಂಗಾರ ಬಳೆಗಾಣೆನೆ ಇವನಿಂದ ಲಂಗ
ಭೋಗವ ಕಳೆದೆನೆ ಸಖಿಯೆ
ಹಿಂಗದೊಂದರಗಳಿಗೆಯು ನೋಡಿವನ
ಸಂಗ ಇಂತಾಯಿತ್ತೆನಗೆ ಸಖಿಯೆ ||  || ೩ ||

ಮುನ್ನ ಮಾಡಿದ ಕರ್ಮವು ತಪ್ಪಿತೆನ
ಗಿನ್ನೇಕೆ ಹಲವು ಚಿಂತೆ ಸಖಿಯೆ
ಬೆನ್ನ ಬಾಂಧವರೈವರನು ತೊರೆದೆ ನಾ
ಇನ್ನೆಂಥ ಭವಗೇಡಿಯೆ ಸಖಿಯೆ ||  || ೪ ||

ಚುನ್ನ ಚುಂಬನ ವಿರಹದಿ ಚುಕಿ ವಿಚಿತ್ರ
ಮುನ್ನಿನಂತಾಯಿತ್ತೆನಗೆ ಸಖಿಯೆ
ತನ್ನೊಳೆನ್ನನು ಬೆರೆದನೇಕರು ರೂಹದ
ಚೆನ್ನ ಸದ್ಗುರು ಶಾಂತನೆ ಸಖಿಯೆ ||  || ೫ ||

೩೪. ಭ್ರಮರ ಕುಂತಳೆ ಕೇಳ್ವ

ಭ್ರಮರ ಕುಂತಳೆ ಕೇಳ್ವರಿಯ ಮನೋ
ರಮಣ ಎನ್ನೊಳು ಮೌನಗೊಂಡಿಹ ಬಗೆಯ ||  || ಪಲ್ಲ ||

ಉರುಬಾರದತ್ತತ್ತ ಮುನ್ನ ಕಂಡು
ತರಹರಿಸದೆ ಬಂದು ಕೂಡಿದನೆನ್ನ
ಹೆರೆ ಹಿಂಗಲಿಲ್ಲ ನಾಥನನು ಕೂಡಿ
ಸರಿ ಮಿಂಡಿಯಾದ ಮೇಲಿನ್ನೇಕೆ ಮೌನ ||  || ೧ ||

ಆಡಬಾರದ ಮಾತನ್ನೆಲ್ಲ ಮುನ್ನ
ಲಾಡಿ ತೋರಿದನಲ್ಲೆ ನೂರೊಂದನೆಲ್ಲ
ನೋಡಲೊಳ್ಳಿನಿತಿನಿತು ತಪ್ಪಿಲ್ಲ ಕೈ
ಗೂಡಿನ್ನು ಬಹಿರಂಗಕೆ ಬಂದನಲ್ಲೆ ||  || ೨ ||

ಬಿಟ್ಟಗಲದೆ ಕೂಡಲುಂಟೆ ತಾ
ಕೆಟ್ಟುದೊಮ್ಮನ ಖಂಡುವಾಯಿತೆಂಬೆ
ಕುಟ್ಟಿ ಜೊಳ್ಳನೆ ತೂರಿಕೊಂಬೆ ಮರು
ಹುಟ್ಟಿಲ್ಲ ದಡಗಿಯ ನಾ ಕೈಕೊಂಬೆ ||  || ೩ ||

ಅಷ್ಟನಂಬಿಗಿಯಿತ್ತು ತಾನು ಹಸ್ತ
ವಿಟ್ಟು ಮಸ್ತಕದೊಳು ಕರ್ಣಬೋಧೆಯನು
ಎಷ್ಟೆಂದು ಹೇಳಲಿ ನಾನು ನಂಬಿ
ಕಟ್ಟಿದೆ ಇವನಿಗೆ ಕಂಕಣವನು ||  || ೪ ||

ನಾಣುಗೆಟ್ಟಿವನೊಳು ನಡೆದೆ ಅಭಿ
ಮಾನವ ತೊರೆದು ಕೂಟದೊಳೆಡವೆರದೆ
ಪ್ರಾಣದೊಲ್ಲಭ ಕರರುಹದ ಸಲೆ
ಜಾಣ ಸದ್ಗುರು ಶಾಂತಗಾನು ವಧುವಾದೆ ||  || ೫ ||

೩೫. ತುಂಬಿತು ಘನಲಿಂಗ ಎನ್ನ

ತುಂಬಿತು ಘನಲಿಂಗ ಎನ್ನ ಪಚೇಂದ್ರಿಯೊಳಗೆಲ್ಲ ತುಂಬಿ
ಕುಂಭಿನಿ ಜಲ ತೇಜ ಮರುತಾಂಬರ ಸರ್ವಾಂಗ ತುಂಬಿ ||  || ಪಲ್ಲ ||

ಗುರು ಕರುಣದೊಳಿತ್ತ ಪರಮಲಿಂಗವು ಎನ್ನ ಕರ ತುಂಬಿ
ನಿರುತವಾಗಿಹ ಪ್ರಾಣಚೇತನ ಲಿಂಗವು ಎನ್ನ ಉರ ತುಂಬಿ
ಕರಕೋಟಿ ಬೆಳಗನೊಳಕೊಂಡ ಲಿಂಗವು ಎನ್ನ ಶಿರ ತುಂಬಿ
ಕರ ಉರ ತ್ರಿವಿಧ ಮೂಲಮಂತ್ರವು ಎನ್ನ ಕರ್ಣ ತುಂಬಿ ||  || ೧ ||

ಧರಣಿಗುದಯಿಸಿದ ನಾಸಿಕವ ಆಚಾರಲಿಂಗ ತುಂಬಿ
ಸರವೇಕ ಮುಖವಾದ ಜಿಹ್ವೆಯೊಳಗೆ ಗುರುಲಿಂಗ ತುಂಬಿ
ಪಿರಿದು ತೇಜವಹ ನೇತ್ರದೊಳಗೆ ಶಿವಲಿಂಗ ತುಂಬಿ
ಮರುತಂಗವಾಗಿಹ ತ್ವಕ್ಕಿನೊಳಗೆ ಚರಲಿಂಗ ತುಂಬಿ ||  || ೨ ||

ವ್ಯೋಮರೂಪವಾದ ಶ್ರೋತೃದಿ ಪ್ರಸಾದಲಿಂಗ ತುಂಬಿ
ಆ ಮಹಾಹೃದಯದಿ ನಿಜವೆನಿಸುವ ಮಹಾಲಿಂಗ ತುಂಬಿ
ನಾಮರೂಪ ಕ್ರಿಯಾಗುಣಕತಿಶಯವಾದ ಲಿಂಗ ತುಂಬಿ
ಕಾಮ ಧರ್ಮಮೋಕ್ಷಾರ್ಥವ ಮೀರಿತು ಲಿಂಗ ತುಂಬಿ ||  || ೩ ||

ಅರಿವು ಮರೆವೆಗಳನೊಳಕೊಂಡ ಪರಿಮಿತ ಲಿಂಗ ತುಂಬಿ
ತೆರಪಿಲ್ಲದಿಹ ಕಾರಕರಣಂಗಳೊಳಗೆಲ್ಲ ಲಿಂಗ ತುಂಬಿ
ಕುರುಹಿಡಬಾರದ ಪರಿಪೂರ್ಣವಾಗಿಹ ಲಿಂಗ ತುಂಬಿ
ನೆರೆ ತನ್ನ ಬೆಳಗಲಿ ತಾನೆ ರಾಜಿಸುತಿದೆ ಲಿಂಗ ತುಂಬಿ ||  || ೪ ||

ತಾನೆ ತಾನಾಗಿ ತನ್ನೊಳಗೆ ರಾಜಿಸುತಿದೆ ಲಿಂಗ ತುಂಬಿ
ಜ್ಞಾನಜ್ಞಾತೃಜ್ಞೇಯ ತ್ರಿಪುಟಿಯು ಮೀರಿತು ಲಿಂಗ ತುಂಬಿ
ಏನೆನ್ನಬಾರದು ನಾಗಯ್ಯಪ್ರಿಯ ಶಾಂತಲಿಂಗ ತುಂಬಿ
ಮೌನಗೊಂಡಿತು ಲಿಂಗವೆಂದೆಂಬ ನುಡಿಯೊಳು ಲಿಂಗ ತುಂಬಿ ||  || ೫ ||

೩೬. ಕಾಣರು ಕರುಣದನುವ

ಕಾಣರು ಕರುಣದನುವ ಎಂಟು
ಗೇಣಿನ ಶರೀರದೊಳಡಗಿಕೊಂಡಿಹುದು ||  || ಪಲ್ಲ ||

ಕದಳಿಯ ಪುಷ್ಪದಂತಿಹುದು ಅದು
ಸದಮಲ ಜ್ಯೋತಿಯು ರೂಪಿನಂತಿಹುದು
ಹೃದಯದೊಳೊಡಗಿಕೊಂಡಿಹುದು ತನ್ನ
ವಿಧವನಾರಿಗೆ ತೋರಗೂಡದಿಹುದು ||  || ೧ ||

ತಲೆಕೆಳಗಾಗಿ ತಾನಿಹುದು ಅದು
ಬಲು ಹಿಂದೆ ಬಾಲ ಮೇಲಾಗಿ ನಿಂತಿಹುದು
ಮಲದೇಹಿಗಳಿಗೆ ಕಾಣಿಸದು ತನ್ನ
ಸಲಿಗೆಯುಳ್ಳವರಿಗೆ ಒಲುಮೆಯಾಗಿಹುದು ||  || ೨|

ನೆತ್ತಿಲಿ ರತ್ನದಂತಿಹುದು ಅದು
ಅತ್ಯತಿಷ್ಠದ್ದಶಾಂಗುಲನೆನಿಸಿಹುದು
ಉತ್ತರ ಗಮನದಲ್ಲಿಹುದು ಇದ
ರರ್ಥವು ನಾಗಲಿಂಗಗೆ ತಿಳಿದಿಹುದು |   || ೩ ||

೩೭. ಮಾಡಲಿಲ್ಲವೆ ಮನವೆ

ಮಾಡಲಿಲ್ಲವೆ ಮನವೆ ಮಹಾಲಿಂಗ ಸಾಧನೆಯ
ರೂಢಿಯೊಳು ಭಕ್ತಿಯೆಂದೆಂಬ ಗರುಡಿಯೊಳು ||  || ಪಲ್ಲ ||

ಸತ್ಯ ಸದಾಚಾರವೆಂಬ ಚಲ್ಲಣದ ತೊಟ್ಟು
ನಿತ್ಯ ನೇಮಗಳೆಂಬ ದಟ್ಟಿಯುಟ್ಟು
ಭಕ್ತಿ ವೈರಾಗ್ಯವೆಂದೆಂಬ ಬಂದಿಕೋಲ್ಪಿಡಿದು
ನಿತ್ಯ ನಿಜತತ್ವವೆಂದೆಂಬ ಸಾಧನೆಯ ||  || ೧ ||

ಗುರುಲಿಂಗ ಜಂಗಮಗೆ ದೀರ್ಘದಂಡವನೊತ್ತಿ
ವರಭಸಿತ ಮುತ್ತುಕೆಯ ಮೈಗೆ ಪೂಸಿ
ಅರಿಷಡುವರ್ಗವನು ಎಳೆದೆಳೆದು ಇಳೆಗೊರಸಿ
ಪರಮ ಸುಜ್ಞಾನವೆಂದೆಂಬ ಕಂಬವನು ಕಟ್ಟಿ ||  || ೨ ||

ಪ್ರಣವ ಪಂಚಾಕ್ಷರಿಯೆಂದೆಂಬ ಸಗ್ರಣವೆತ್ತಿ
ಅಣಿಮಾದಿ ಸಿದ್ದಿಗಳಲೊಡತಿರುಹಿ
ತ್ರಿಣಯಧ್ಯಾನವೆಂದೆಂಬ ಕೊಡತಿಯ ತೊಡರಿ
ಮಣಿಯ ರುದ್ರಾಕ್ಷಿಯೆಂದೆಂಬ ಗೊಣತರವ ಪೊತ್ತು ||  || ೩ ||

ಅಷ್ಟಮದಗಳನೆಲ್ಲ ಅಡಿಮೆಟ್ಟಿ ಕುಪ್ಪಳಿಸಿ
ಇಷ್ಟಲಿಂಗವ ಕರದಿ ಪಿಡಿದು ಜಳ್ಪಿಸುತ
ದೃಷ್ಟಿ ಕರಣಾದಿಗಳ ಕೈವಶ ಮಾಡಿಕೊಂಡು
ತುಟ್ಟಿತುದಿ ಮೊದಲನೆಲ್ಲವ ಕಂಡು ನಲಿದು ||  || ೪ ||

ಇಂತಪ್ಪ ಸಾಧನೆಯ ಮಾಡುತಿಹ ಮಹಿಮಗ
ನಂತ ಜನ್ಮದಿನಾಳಿನಾಳಾಗಿ
ಚಿಂತೆಯಿನ್ನೇಕೋ ಗುರು ಶಾಂತೇಶ್ವರ ಎ
ನ್ನಂತರಂಗವ ಕಂಡು ನೆಲಸಿ ನಿಜವಾದ ಬಳಿಕ ||  || ೫ ||

೩೮. ನಿರುಪಮ ದೇಶದಿ

ನಿರುಪಮ ದೇಶದಿ ಭರದಿ ಬಂದಿತು ಪಕ್ಷಿ ಚಂದಮಾಮ
ಅದ ವಿವರಿಸಿ ನೋಡಿದರೆ ತುಪ್ಪಟ ಅದಕಿಲ್ಲ ಚಂದಮಾಮ         || ಪಲ್ಲ ||

ಊರ ಮಧ್ಯದೊಳೊಂದು ಉಪ್ಪರಿಗೆಯ ಮೇಲೆ ಚಂದಮಾಮ
ಅದು ಕಾರುಣೀಕದ ಪಕ್ಷಿ ಕನಸಲ್ಲ ದಿಟವಿದು ಚಂದಮಾಮ ||  || ೧ ||

ಆರು ವರ್ಣದ ಪಕ್ಷಿ ಆನಂದವಾಗಿದೆ ಚಂದಮಾಮ
ಅದು ನೀರಜದುದಕದಿ ನಿಂತು ನೋಡುತಿದೆ ಚಂದಮಾಮ ||  || ೨ ||

ಕ್ಷಿತಿಯು ಆಕಾಶಕ್ಕೆ ನಡುವೆ ಗೂಡಿಕ್ಕಿತು ಚಂದಮಾಮ
ಅದು ಅತಿಶಯದಮೃತದ ಗುಟುಕ ನುಂಗಿತು ಚಂದಮಾಮ ||  || ೩ ||

ಸತ್ ಚಿತ್ತದ ಬೆಳಕಿನೊಳಾಡಿತು ಚಂದಮಾಮ
ಅವು ಮರಿದುಂಬಿ ಪ್ರಣಮದೀಶ್ವರನೆಂದು ಕೂಗಿತು ಚಂದಮಾಮ ||  || ೪|

ಪಕ್ಷಿಗೆ ಕ್ರಿಯಾಜ್ಞಾನ ಪಕ್ಕಗಳ್ಬಂದವು ಚಂದಮಾಮ
ಅದು ಸಿಕ್ಕದೆ ಹೋದೀತು ಹದಿನಾಲ್ಕು ಲೋಕಕ್ಕೆ ಚಂದಮಾಮ ||  || ೫ ||

ಇಕ್ಕಟ ಬೈಲೊಳು ಬೆದರಿತು ನಿಜದಿಂದ ಚಂದಮಾಮ
ಅಕ್ಕಟ ಗುರುಶಾಂತಪ್ರಭುವಿನೊಳಡಗಿತು ಚಂದಮಾಮ ||  || ೬ ||

೩೯. ಲಿಂಗ ಸೋಂಕಿದ ತನು

ಲಿಂಗ ಸೋಂಕಿದ ತನು ಲಿಂಗವಾಯಿತು ಘನಲಿಂಗ ತುಂಬಿ
ಮಂಗಳವಾಯಿತು ಕರವೂರ ಶಿವಮಂತ್ರಲಿಂಗ ತುಂಬಿ ||  || ಪಲ್ಲ ||

ಪಂಚಭೂತಂಗಳ ಕಳೆದು ಶ್ರೀಗುರುವಿತ್ತಲಿಂಗ ತುಂಬಿ
ಸಂಚಲವಡಂಗಿತು ಕರಣಂಗಳೊಳು ಪ್ರಾಣಲಿಂಗ ತುಂಬಿ
ಮಿಂಚುವ ಮನವರಿಷಡ್ವರ್ಗದೊಳಗೆಲ್ಲ ಲಿಂಗ ತುಂಬಿ ದ್ವಿ
ಪಂಚ ಮಾರುತ ಮರು ವಿಷಯಂಗಳವು ತಾವು ಲಿಂಗ ತುಂಬಿ ||  || ೧ ||

ಒದವೆ ಝೇಂಕಾರ ಪ್ರಣವ ಸ್ವರೂಪದ ಲಿಂಗ ತುಂಬಿ
ಮುದದಿ ದ್ವಿಭುಜದೊಳು ನಾಮದ್ವಿಯಕಾಕ್ಷರ ಲಿಂಗ ತುಂಬಿ
ಹೃದಯ ಮಧ್ಯದೊಳು ಶಿಕಾರ ಪ್ರಣವರೂಪ ಲಿಂಗ ತುಂಬಿ
ಪದದ್ವಯದಪಳು ಚ ಯಃ ಕಾ ಷಡಕ್ಷರ ಲಿಂಗ ತುಂಬಿ ||  || ೨ ||

ಹೋದಾರ ಚೌದಶ ಚೌಲಿತವಾ ಚರಲಿಂಗ ತುಂಬಿ
ಸ್ವಾದಿಷ್ಟ ಷಡುವಳ ಷಡುಲಿಕ್ತದೊಳು ಗುರುಲಿಂಗ ತುಂಬಿ
ಭೇದಿನಿ ಮಣಿಪುರದ ಸಲಿಕ್ತದೊಳು ಶಿವಲಿಂಗ ತುಂಬಿ
ದ್ವಾದಶದಳಲಿಕ್ತ ಅನಾಹತದೊಳು ಚಾರುಲಿಂಗ ತುಂಬಿ ||  || ೩ ||

ವಿಶುದ್ಧಿ ಷೋಡಶದಳಲಿಕ್ತ ಪ್ರಾಸದ ಲಿಂಗ ತುಂಬಿ
ಮಿಸುಪಾಜ್ಞೆಯೊಳು ದ್ವಿದಳವು ದ್ವಿಯಕಾಕ್ಷರ ಮಹಲಿಂಗ ತುಂಬಿ
ಎಸೆವ ಬ್ರಹ್ಮೇಂದ್ರಿ ನಿಃಕಲ ಶಿಖಾಗ್ರದಿ ಶೂನ್ಯಲಿಂಗ ತುಂಬಿ
ಪಶ್ಚಿಮ ಚಕ್ರದಿ ಪರಮ ನಿರಂಜನಲಿಂಗ ತುಂಬಿ ||  || ೪ ||

ಇಳೆತತ್ವವಳಿದು ಘಾಣೇಂದ್ರಿಯೊಳಗೆ ಚರಲಿಂಗ ತುಂಬಿ
ಜಲತತ್ವವಳಿದು ಜಿಹ್ವೇಂದ್ರಿಯೊಳಗೆ ಗುರುಲಿಂಗ ತುಂಬಿ
ಸಲೆ ತೇಜತತ್ವವಳಿದು ನೇತ್ರೇಂದ್ರಿಯೊಳಗೆ ಶಿವಲಿಂಗ ತುಂಬಿ
ಸುಳಿ ಮಾರುತತ್ವವಳಿದು ತ್ವಕ್ಕೇಂದ್ರಿಯೊಳಗೆ ಚರಲಿಂಗ ತುಂಬಿ ||  || ೫ ||

ಗಗನತ್ವವಳಿದು ಶ್ರೋತ್ರೇಂದ್ರಿಯೊಳ್ ಪ್ರಸಾದಲಿಂಗ ತುಂಬಿ
ಘನ ಹೃದಯದಿ ನಿಜವೆನಿಸುವ ಮಹಲಿಂಗ ತುಂಬಿ
ಆಗು ಹೋಗುವ ಮಠಮರವೆಗಳು ಮೀರುತು ಲಿಂಗ ತುಂಬಿ
ಬೀಗಿ ಸಲೆ ರವಿ ಕೋಟಿ ತೇಜ ಪ್ರಭಾಮಯ ಲಿಂಗ ತುಂಬಿ ||  || ೬ ||

ನವಚಕ್ರ ನವವರ್ಣ ನವನಾಮ ನವವಿಧಿ ಲಿಂಗ ತುಂಬಿ
ನವಶಕ್ತಿ ನವಭಕ್ತಿ ನವಪೂಜೆ ನವಮಂತ್ರ ಲಿಂಗ ತುಂಬಿ
ವಿವರಿಸಬಾರದ ತ್ರಿಪುಟಿಯನೊಳಕೊಂಡ ಲಿಂಗ ತಾಯಿ
ಎವೆ ಹೊಳಚದೆ ಕರವುರದ ಮದ್ಗುರು ಶಾಂತಲಿಂಗ ತುಂಬಿ ||  || ೭ ||

೪೦. ಅರಿವಿನ ದೀಪವೆಚ್ಚರಿಕೆ

ಅರಿವಿನ ದೀಪವೆಚ್ಚರಿಕೆ ಕಂಡ್ಯ
ಬಟ್ಟ ಬರಿದೆ ಆನಂದ ತೋರುವದು ಕಂಡ್ಯ ||

ಕಣ್ಣುಗಾಣದೆ ಬಾಗಿಲೊಳಗೆ ಕಂಡ್ಯ ಮೂರು
ಬಣ್ಣದ ಸೊಡರ ರತ್ನ ಪಣತೆ ಕಂಡ್ಯ
ಎಣ್ಣೆ ಬತ್ತಿಯ ಹಂಗಿಲ್ಲ ಕಂಡ್ಯ ಅದು
ಸಣ್ಣನಾಗಿ ಉರಿವ ನಿಜಕಂಡ್ಯ ||  || ೧ ||

ಹುಬ್ಬಳ್ಳಿ ನಟ್ಟ ನಡುವೆ ಕಂಡ್ಯ ಮನ
ರಿಂಬಿಟ್ಟು ದಾಟವು ನಿಲಲಿ ಕಂಡ್ಯ
ಕಬ್ಬ ಬಿಲ್ಲನೆ ತೆರೆ ಜೋಕೆ ಕಂಡ್ಯ ಮನ
ಸುಬ್ಬಿನ ಕೊಬ್ಬು ತಾ ಬಿಟ್ಟುದು ಕಂಡ್ಯ ||  || ೨ ||

ಹಗಲಿರುಳು ಆನಂದಯಿಹುದು ಕಂಡ್ಯ
ಇಹಲೋಕ ಪರಲೋಕ ಸಾಧನವು ಕಂಡ್ಯ
ನಿತ್ಯ ನೀ ರಕ್ಷಿಸು ನೋಡು ಕಂಡ್ಯ
ನಮ್ಮ ಗುರುಶಾಂತ ಬಸವೇಶ ತಾನೆ ಕಂಡ್ಯ ||  || ೩ ||

೪೧. ಬಗುಳಿದವರಾರೆಂದು
ರಾಗ : ಪಾಡಿ

ಬಗುಳಿದವರಾರೆಂದು ನೀನು ಹೋಗಿ
ಮಗುಳಿ ಮೂದಲಿಸುವರೀಶಾತ್ಮ ನಿನಗೇನು ||  || ಪಲ್ಲ ||

ಒಡಲಾಹುತಿಗೆ ಶುನಿಯು ತುಡಗ ತಿಂಬುದಕಟ
ಕಡೆಯ ಮನೆಬಾಗಿಲೊಳು ನಿಂದಿರುತಿರೆ
ಬಿಡದೆ ದಡಿಯಲಿ ಪೊಯಿದು ಕೆಡಹುವಂದದಿ ಯಮನು
ಹೊಡಗಿಚ್ಚಿಗಿಕ್ಕಿ ಶಿಕ್ಷಿಪನಿರ್ದಯೆಲೆ ||  || ೧ ||

ಹೇಳುವನೊಬ್ಬ ಕೇಳುವ ತಿರುಕನಿರುತಿರಲು
ತಾಳಿದರೆ ನೀ ಮಾನ್ಯನೆನಿಸಿಕೊಂಬೆ
ಗಾಳಿಗೆತ್ತಿದ ಸೊಡರಿನಂತಾದ ಲೋಕದೊಳು
ಬೀಳುನುಡಿಗಳಿಗೆ ಬೇಸರಿಸುವರೆಯಾತ್ಮ ||  || ೨ ||

ಅಶನದಿಂದಲಿ ವಸನದಿಂದಲಿ ವಿಷಯದಿಂದಲಿ ತಾಪ
ಮುಸುಕಿರ್ದ ಮೇಲೆ ಹೊಲೆಗುಣವಲ್ಲವೆ
ಹುಸಿ ಕಳವು ಹೊಲಸು ನಾರುವ ಕುಳಿಗೆ ಮನವೆಳಸಿ
ಮುಸುಕಿ ಬಿರ್ದಂಗಹೀನರ ನುಡಿಯ ಕೇಳ್ದು ||  || ೩ ||

ಕರಿಯೆಂಟಗಳನೊಬ್ಬನೇರಿ ದಶವಾಯುಗಳ
ಕರಣಾದಿಗಳನೂರ್ಧ್ವಮುಖಕೆ ತಂದು
ಸ್ಮರನ ಕೊರಳರಿದ ಧೀರನ ಮುಂದೆ ಶತಲಕ್ಷ
ನರಿನಾಯಿ ನಿಲ್ಲಬಲ್ಲುವೆ ರಾಜಹಂಸ ||  || ೪ ||

ಕುರಿ ಕುರುಬನಿಂದ ವಿಶ್ವಾಸಿಕೆಯ ನೆರೆ ಬಯಸಿ
ಕರೆದವರ ಸುತ್ತ ಹಿಂದೆ ಪೋಪುದು
ಕುರಿಗಳಿಂ ಕಷ್ಟ ನರಗುರಿಗಳೆಂದರಿದೆಮ್ಮ
ಗುರುಶಾಂತನೊಳು ಬೆರಸಿ ಸುಖಿಸೆಲೆಲೆಯಾತ್ಮ ||  || ೫ ||

೪೨. ಶಿವಶಿವಾ ಏನೆಂಬೆನಯ್ಯಾ

ಶಿವಶಿವಾ ಏನೆಂಬೆನಯ್ಯಾ ||  || ಪಲ್ಲ ||

ಏನೆಂಬೆನಯ್ಯ ನಿರಾಮಯ ನಿಜವನರಿಯದ ಜ್ಞಾನಿ
ಮಾನವರಲ್ಪಸುಖಕೆಳಸಿ ಪರಶಿವ
ಜ್ಞಾನವಿಲ್ಲದೆ ತೊಳಲಿ ಬಳಲುತಿಹ ಭವಭವದಿ
ಕಾನನದ ಮಧ್ಯದೊಳಗೆ ||  || ೧ ||

ಉರಲಿನೊಳು ಸಿಲ್ಕಿ ಮಾನವನ ಕೈವಶವಾದ
ಗರುಡನುರಗನ ಕಚ್ಚಿಕೊಂಡದರ ಜಿಹ್ವೆಯೊಳು
ಹರಿಯದರ ಬಾಯೊಳಗೆ ನೊಣವ್ರಣಕೆ
ಗುರಿಯಾಗಿ ಸ್ಥಿರಬಾಳ್ವೆನೆಂಬ ತೆರದಿ ||  || ೨ ||

ಪುರುಷ ಸಂಗವ ಬಯಸಿ ಹೊಟ್ಟೆ ಬೇನೆಯ ಸತಿಯು
ನಿರಿಯ ಪಸರಿಸಿ ಉಟ್ಟು ಶೃಂಗರಿಸುವಂದದಿಂ
ನರರಲ್ಪಸುಖಕೆಳಸಿ ಪಿರಿದು ದುಃಖವ ಮರೆದು
ದುರಿತಕಿಡದರಯ್ಯೊ ಅರಿಭಯದಿ ಮುರಿದಿಂದ್ರುಪ
ಪರಿದೋಡುತಿರೆ ಕಂಡು ತನ್ನ ಪುರ ಸೂರೆ ಹೋಗದಲ್ಲಿ
ಪಿರಿದಡವಿಯನೆ ಬಿದ್ದು ಮೊರವ ರಕ್ಕಸಕಿಚ್ಚು
ಕರಿ ಸಿಂಹ ಸಾಧು ಅಲ್ಲಿರದೆ ಭೋರನೆ ಬಂದು ಬಾವಿಯೊಳು ಬೀಳಲು ||  || ೩ ||

ಸರಗನೂರಲು ಕಂಡು ಶರಧಿ ಬಳ್ಳಿಯ ಪಿಡಿದು
ಮಧುಬಿಂದುವನೆ ಸವಿದು ಪಿರಿದು ಸುಖವಾಯಿತೆನಗೆ
ದುರಿತವೆಲ್ಲಿಯದೆಂಬ ನರರ ಬಾಳ್ವೆಯ ತೆರದಿ || |೪ ||

ಇಂತು ಎಳೆಹೂಟೆ ಸಾಣಿಯ ಬಾರುಗಾಣದೆ
ತ್ತಂತೆ ತಿಗುರಿಯ ತಿರುತಿರುಗಿ ಬರುತೆ ಭವಭವದಿ
ಸಂತೈಸಲರಿಯದುಭಯಗ್ರದುರಿಕಾಷ್ಟ ಮ
ಧ್ಯಂತಕೀಟದಂತಸ್ಥಿಕೆ ಚನ್ನಂತೆ
ಇಂತು ಗುರುಶಿವ ಸಿದ್ಧ ಶಾಂತನಂಘ್ರಿಯದ್ವಯದ
ಚಿಂತನೆಯ ಪರಮಸುಖದಿ ||  || ೫ ||

೪೩. ಮೆರೆಯದ ಜಡಸ್ಥಿತಿಗೆ

ಮೆರೆಯದ ಜಡಸ್ಥಿತಿಗೆ ಮುಯ್ಯನುಪರೀತಕೆ ಬರಿದೆ ||  || ಪಲ್ಲ ||

ತನುವೆಂದೆಂಬೆನೆ ರುಜೆಗಳ ಗೂಡು
ಮನವೆಂದೆಂಬೆನೆ ಚಿಂತೆಯ ಬೀಡು
ಧನವೆಂದೆಂಬೆನೆ ರಾಜರಿಗೀಡು
ಮನುಜರಿಗಿದು ಕೇಡು |      || ೧ ||

ಒಂದಾಗುಂಬ ಮಾನವರೆಲ್ಲ
ಸಂದಾಗೊಡನೆ ಬx x x x ತರಿಲ್ಲ
ಮುಂದೀ ಧರ್ಮಗಳೆಳ್ಳನಿತಿಲ್ಲ ಹೇ
ಗೆಂದು ತಿಳಿದು ನಡೆವವರಿಲ್ಲ ||  || ೨ ||

ಎರವಿನ ಸಿರಿ x x x ಯೆಲ್ಲರ ಜರಿದು
ಸ್ಥಿರವಹ ಸತ್ಕ್ರೀಗಳ ಮರದು
ಗುರುಶಾಂತನ ಸೇವೆಯೊಳಿರದೆ
ಇರುತಿಹ ಶರೀರವಿದೇತರದು ||  || ೩ ||

೪೪. ಪೋದಧಾರ x x x ವಿನೋದ

ಪೋದಧಾರ x x x ವಿ
ನೋದ ಪಾವನಮೂರ್ತಿ ಲಿಂಗದೊಳ್ ಬೆರೆದು xxxxx ಮು ಬಿಂಕ ||  || ಪಲ್ಲ ||

ಭಕ್ತಿಸ್ಥಲವನೆ ಕಂಡು ಶರಣ ಸ್ಥಲವನೆ ಕಂಡು
ಉತ್ಪತ್ಯ ಸ್ಥಿತಿಲಯವನೆಲ್ಲ ಕಳೆದು
ಎತ್ತಿ ದಶವಾಯುಗಳ ಊರ್ಧ್ವಮುಖವನೆ ಮಾಡಿ
ನಿತ್ಯಪರಿಪೂರ್ಣ ಬೆಳಗಿನೊಳ್ ಬೆಳಗಾಗಿ ||  || ೧ ||

ಹಮ್ಮ ಬಿಮ್ಮುವ ಕಳೆದು ಹಸಿವು ತೃಷೆಗಳ ಮರೆದು
ಕಲ್ಮಷದ ಕಸಗಳಿಗೆ ಕಿಚ್ಚನಿಕ್ಕಿ
ನಿರ್ಮಲದಿ ಧಗಧಗಿಪ ಜ್ಯೋತಿ ನೆಲೆಯನೆ ಕಂಡು
ಜಮ್ಮುದಟ್ಟುತ ಹಿಗ್ಗಿ ತಾನು ತಾನಾಗಿ ||  || ೨ ||

ಕುಂಡಲಿಯ ಸರ್ಪನ ಗ್ರಹಿಸಿ ಮೂವರ ಗೆಲಿದು
ಲಂಡ ಕಳ್ಳರೈವರನು ಒಡಲ ಬಗೆದು
ಉಂಡು ಉಣ್ಣದಲಿಪ್ಪ ಉರಿಯ ಬ್ರಹ್ಮನ ಪ್ರಭೆಯ
ಕಂಡು ಮನನೆಟ್ಟು ಪ್ರಣಮದೊಳು ಬಯಲಾಗಿ ||  || ೩ ||

ಅಜ ಹರಿ ರುದ್ರರೆಂಬ ಅಲ್ಪಸುಖವನೆ ಕಳೆದು
ನಿಜತತ್ವ ನಿರ್ವಯಲ ನೆಲೆಯ ತಿಳಿದು
ಭುಜ ಪರಾಕ್ರಮದ ಮೋಹಿನಿವಿದೊಟ್ಟಿ
ಗಜವನೇರಿದ ವಸ್ತು ತಾನು ತಾನಾಗಿ ||  || ೪ ||

ಉರಿ ಕರ್ಪುರವನುಂಡ ತೆರನೆ x x x ಮರಿದುಂಬಿ
ಪರಿಮಳದ ತಾನುಂಡ ಸುಖಬಂಧದಿ
ಪರವಶದೊಳಗಿಪ್ಪ ಗುರುಶಾಂತನೊಳ್ ಬೆರೆದು
ಕರುಣಿಯತಿಗಳ ಪ್ರಿಯ ಕರಸ್ಥಲದ ರಾಯ ||  || ೫ ||

೪೫. ಬೇಡ ಸಂಸಾರ ಸುಖ

ಬೇಡ ಸಂಸಾರ ಸುಖ ನೆಲೆಯಿಲ್ಲ ಮನುಜರಿಗೆ
ನೋಡಿ ನಡೆವುದು ಮುಂದೆ ಪುಣ್ಯ ಪಾಪವನರಿದು
ಮಾಡುವುದು ಮುಟ್ಟಿ ಘನ ಶಿವಲಿಂಗ ಪೂಜೆಯನು
ಕೂಡುವುದು ಶಿವನ ಕೂಡೆ ಶಂಖರ ಬೇಡ ಸಂಸಾರಸುಖವು |          || ಪಲ್ಲ ||

ಒಡಲೆಂಬುದಿದು ಬಾಳ ಹಡಿಕೆ ಹೊಲಸಿನ ಹಾಳು
ನಡುವೆ ಮಲಮೂತ್ರಕೊಂಡವು ಕ್ರಿಮಿಗಳ ರಾಸಿ
ಎಡೆ ನರಕ ಎಲವು ಸುತ್ತಿದ ಮಾಕ್ಷ ಉಗ್ಗಡಿಸಿಕೊಂಡಿಹ ಹೇಸಿಕೆ
ಒಡೆದ ಗೋಡೆಯ ಮೆತ್ತಿ ಪೂಸಿದಂತಿಹ ದೇಹ
ಉಡಿಗೆ ತೊಡಿಗೆಯ ಮೇಲೆ ಮೆರದಿಪ್ಪುದಲ್ಲದೇ
ಪಿಡಿದು ನೋಡಲು ಒಂದು ಹುರುಳಿಲ್ಲ ಸಂಸಾರ ಕೇಡು ನರಕವೆನಿಸಿರ್ಪುದೊ ||  || ೧ ||

ನಿದ್ರೆಯೆಂಬಾ ಮರವೆ ಹೊದ್ದಿದಡೆ ಈ ದೇಹ
ಎದ್ದು ಹೋಹದು ತನ್ನಯ ಬಿಟ್ಟೆಲ್ಲಾದಡಂ
ಸಿದ್ಧರಂದದಿ ಹೋಗಿ ತಿರುಗಾಡುತಿರ್ಪಯದ್ದಿರವನಾರ್ಬಲ್ಲರೊ
ಹೊದ್ದ ವಸ್ತ್ರಂಗಳನು ತೊಟ್ಟ ಬಂಗಾರವನು
ಕದ್ದು ತೆಗೆವರನರಿಯ ನಾವೆಂಬದಿಂತಿಹುದು
ಎದ್ದಾಗಳೆಚ್ಚತ್ತು ಎಡಬಲಂಗಳ ನೋಡಿ ಕ್ಷುದ್ರರಾರೆನುತಿರ್ಪರೊ ||  || ೨ ||

ಕಣ್ಣಿನಲಿ ಜಾರು ಕಿವಿಯಲಿ ಗುಗ್ಗೆ ಮೂಗಿನಲಿ
ಗೊಣ್ಣೆ ತಾಗಿಯೆ ಸರಿವರುಣ್ವ ಬಾಯೆಂಜಲು
ಹುಣ್ಣು ಕುರು ಕಜ್ಜಿ ತುರಿಗಳು ಮೂಡಿ ಅತಿಭಯದಿ ಹಣ್ಣಾಗಿ ಬಳಲುತಿಹರೊ
ಹೆಣ್ಣೆಂಬ ನಾಮಕ್ಕೆ ಉರದಲ್ಲಿ ಮಾಕ್ಷವು
ಚಿಣ್ಣೆ ತಾಗಿಯು ಮೂಡಿ ಬಾತು ತಗ್ಗುವ ತೆರದಿ
ಅಣ್ಣಗಳು ಹಿರಿಯರೆಲ್ಲರೂ ನೋಡಿ ಮನಸಿಟ್ಟು ಕಣ್ಣಿನಲಿ ಸಿಲ್ಕಿಪ್ಪರೋ ||  || ೩ ||

ಅರ್ಥವನು ಗಳಿಸಿಯು ನಿರರ್ಥಕ್ಕೆ ಕೆಡಬೇಡ
ವ್ಯರ್ಥವಪ್ಪುದು ನಿನಗೆ ಕಾಲನಿಗೆ ಕಾಯವಿದು
ಮೃತ್ಯು ಬಂದೆಳವಾಗ ಮಿಡಮಿಡನೆ ಮಿಡುಕಿಸೀ ಮತ್ತೆ ಬಯಸಿದವರುಂಟೇ
ಅರ್ಥವನು ಅರಮನೆಯಾಳುಗಳು ಕೊಂಡೊಯ್ಯೊ
ಮಿತ್ರೆಯಂ ಮತ್ತೊಬ್ಬ ಅತಿಕಾಮಿ ಸೆಳಕೊಂಬ
ಹುತ್ತದೊಳಗಣ ಹಾವಿನಂತೆ ಕಾಯ್ದಿರಬೇಡ ಬಿತ್ತಿ ಬೆಳೆಯಿರೋ ಧರ್ಮವ ||  || ೪ ||

ಅದ್ದಿ ಪ್ರಾಣವೆಂಬಾ ಮುದ್ದಿನಂತಾ ಸತಿಯು
ಹೊದ್ದಲಮ್ಮಳು ಜೀವ ಹೋಯಿತೆಂಬಾಗಳೆ
ಇದ್ದಂತೆ ಆಚೆಯೀಚೆಯ ಮನೆಯೊಳಗಿಪ್ಪ ಬುದ್ದಿವಂತರ ಕರೆಸುತ
ಹೊದ್ದ ವಸ್ತ್ರಾಭರಣವೆಲ್ಲವನು ತೆಕ್ಕೊಂಡು
ಇದ್ದಾಗೆ ಒಂದು ಹಳೆಯರುವೆಯನು ಮುಸುಕಿಟ್ಟು
ಉದ್ಯೋಗವುಂಟು ಹೆಣನ ತೆಗೆಯೆಂಬರು ಬಿದ್ದ ಬಳಿಕಾರುಯಿಲ್ಲ ಶಂಕರ|    || ೫ ||

ಉಡಿದೊಗಲು ಕೈಯ ಗರಗಸಗತ್ತಿ ನಾರಾಚ
ಪಿಡಿದ ಹೇರಿಟ್ಟಿ ಡೆಂಕಣಿಯ ಬಾವುಲಿ ತೊಡರು
ಪಿಡಿದ ಹಾಸಿನ ನಾಯಿ ರೌದ್ರಾವತಾರದಿಂ ಗುಡುಗುಡಿಸುತ್ತೆಮದೂತರು
ಪೊಡವಿಯೊಳು ಬಿದ್ದಿರ್ದ ನರನಾವನೋ ಎಂದು
ಮಡದಿಮಕ್ಕಳು ಬಂಧುಗಳು ಸುತ್ತ ಮುತ್ತಿರಲು
ನಡುವೆ ಅವನಸುವನಾರುಂ ಕಾಣದಂದದಲಿ ಪಿಡಿದೆಳೆದು ಕೊಂಡೊಯ್ವರೊ ||  || ೬ ||

ಮಾಡುವರು ದೇಗುಲದ ಪರಿಯಂತೆ ವಿಸ್ತರಿಸಿ
ಕೂಡೆ ಹೊಂಬಣ್ಣ ದೇವಾಂಗಗಳೆನೆ ಬಿಗಿದು
ಗಾಡಿಯೊಳಗೈದಿರ್ಪರೊ ಗೂಡಿನೊಳಗಣ ಪಕ್ಷಿಹಾರಿ ಹೋದಡೆ ಹಾಳು
ಗೂಡಿಂಗೆ ಕೈಯಯಿಟ್ಟು ಸಡಗರ ಸಂಭ್ರಮವ
ಮಾಡುವರೆ ಬೇಕು ಬೇಡೆನಲಾಗದಿದನು ನೋಡುತ್ತಿಹುದತಿಚೋದ್ಯವು ||  || ೭ ||

ಹುಟ್ಟಿದಾಗಲೆ ವಸು x x x ವರನೆಂದು ಮುಂಜಿಯನು
ಗಟ್ಟಿ ಮದುವೆಯ ಮಾಡಿ ಉಚ್ಚಹದ ಹರಿಯೆಂದು
ಕಟ್ಟಕಡೆಯಲಿ ಮಡಿದನೆಂದು ಹೊಯ್ವ ಹರೆಯ ಸಾವರಿಗಳೆಂದೆಂಬರೊ
ಹೊಟ್ಟೆಯೊಳಗಿರದೆ ಪೊರೆಮಡಲ ಮನುಜನ ದೇಹ
ಮುಟ್ಟದಿರಿ ಹೆಣನೆಡೆಗೆಯೆಂದು ಮಾಡಿದ ಶಿವನ
ಕಟ್ಟಳೆಯನಾರ್ಬಲ್ಲರೊ ||  || ೮ ||

ಒಡೆಯರೊಡವೆ [ಯ] ಕೊಳಲು ಕಳ್ಳಗಳಲಾದಂತೆ
ಒಡಹುಟ್ಟಿದರು ಬಂಧುಗಳು ಸಹಾ ಸತ್ತಿರಲು
ನುಡಿದು ಪೊಯಿವರು ಆಗಳೇ ಮತ್ತವ ಹೋದ
ಕಡೆಯ ಬಾರಿಯ ಸಾವು ತಮತಮಗೆ ತಪ್ಪದುಯೆಂದು
ನಡುವೆ ನಾಲ್ಕೆರಡು ದಿವಸಗಳೈಸೆ ಮತ್ತಿದಕೆ
ಕಡು ಮರುಗುತ್ತಲಿಪ್ಪರೊ ಶಂಕರ ||  || ೯ ||

ಬೆಳ್ಳಿ ಬಂಗಾರವನು ಬಾಯಿಗಳಿಗೆ ಅಕ್ಕಿಯನಿಕ್ಕಿ
ಕುಳಿಯೊಳಗಿರಿಸಿ ತಾವೆಲ್ಲರುಂ ಕೂಡಿ
ಒಳ್ಳೆಯನುಗುಣರೂಪು ಬುದ್ಧಿವಂತನುಯೆಂದು ಹೊಳ್ಳ ನುಡಿಗಳ ನುಡಿವರೊ
ಎಳ್ಳು ಅಕ್ಷತೆ ಹಲವು ಭಕ್ಷ್ಯ ಭೋಜ್ಯಂಗಳನು
ಹಳ್ಳದೊತ್ತಿಗೆ ತಂದು ಕೂಳ ಮುಂದೆಯು ಹಾಕಿ
ಕೊಳ್ಳೆಂದು ಕಾಗೆಗಳ ಕರಕರದು ತಂಡ ತಂಡದ ಡಳ್ಳುರಿಯೊಳೆ x x ಬx x ||  || ೧೦ ||

ಇಂತು ಸಂಸಾರವೆಂಬ ಕಾನನದೊಳು ಸಿಲ್ಕಿ
ಭ್ರಾಂತನಾಗಿ ನಿನ್ನ ನೆನೆಯಲರಿಯದೆ ಕೆಟ್ಟೆ
ಅಂತಕನ ಅಗ್ನಿಗೀಡಾಗಿ ನರಕಾಬ್ದಿಯೊಳು ಈಜಾಡಿ ಕಡೆಗಾಣದೆ
ಸಂತತಂ ಸತ್ತು ಹುಟ್ಟುವ ಗೊಡವೆಗೆ ನಾಕಿ
ಕಾಲಾಂತಕನೆ ನಿಮ್ಮ ನೆನೆವಂತೆ ಬುದ್ಧಿಯ
ನಿತ್ತು ಕರುಣಿಸು ಗುರುಶಾಂತ ಶಂಕರಲಿಂಗವೆ ||  || ೧೧ ||

೪೬. ಹತ್ತು ಸಾವಿರ ಶಾಸ್ತ್ರವನೋದಿ
ರಾಗ : ಶಂಕರಾಭರಣ

ಹತ್ತು ಸಾವಿರ ಶಾಸ್ತ್ರವನೋದಿ ಫಲವೇನು
ಚಿತ್ತ ಲಿಂಗವನಪ್ಪಿ ನೆಲೆಗೊಳ್ಳದನ್ನಕ್ಕ |          || ಪಲ್ಲ ||

ಕಡುಚಪಲತೆಯಿಂದ ಬಹಪಾಠಕನಾಗಿ
ನುಡಿದಲ್ಲಿ ಫಲವೇನು ಬಯಲದ್ವೈತವ ||  || ೧ ||

ಅಗಣಿತ ನದಿಯಿರೆ ಜಲವೆಲ್ಲ ಸರಿಯೆಂದು
ಅಗಳನೀರನೆ ಹೊಕ್ಕು ಮೊಗದೊಳೆವಂದದಿ ||  || ೨ ||

ಒಡೆಯ ಶಾಂತೇಶ ನಿಮ್ಮ ನರಿಯದವನ ಭಕ್ತಿ ಗೇಣು
ಕಡಿಮೆಯಗಳ ದಾಂಟಿ ಜಾರಿಬಿದ್ದಂದದಿ ||  || ೩ ||

೪೭. ಮಾಸಾಳು ಬಂದ ಕಣೆ
ರಾಗ : ಕಾಂಬೋಧಿ

ಮಾಸಾಳು ಬಂದ ಕಣೆ ನೋಡೆಲೆ ತಂಗಿ
ಮಾಸಾಳು ಬಂದ ಕಣೆ ಮನದಾಸೆ
ರೋಷವನಳಿದವಿರಳಾತ್ಮಕನಾದ ||    || ಪಲ್ಲ ||

ಅಟಮಟ ವ್ಯಾಪಾರ ಕುಟಿಲ ವಂಚನೆಯಿಂದ
ನಿಟಿಲಾಕ್ಷಮೃಡನ ವೇಷವ ಧರಿಸಿ
ಘಟವ ರಕ್ಷಿಪ ಜನರೆದೆಯ ಮೆಟ್ಟುತ ಪಟು
ಭಟ ವೀರಮಾಹೇಶ್ವರರುಗಳೆನಿಸುವ ||  || ೧ ||

ಪರಧನ ಪರಸತಿ ಪರಹಿಂಸೆಗಳ ಮಾಡಿ
ಗುರುಲಿಂಗ ಜಂಗಮನೆನಿಸಿಕೊಂಡು
ಬೆರೆತುಕೊಂಡಿಹ ನರಗುರಿಗಳ ಮೂಗನು
ಕೊರೆದು ಹಿಂಗೆಡಿಸಿ ಕನ್ನಡಿಯ ತೋರುತ ಚೆಲ್ವ ||  || ೨ ||

ದಶವಾಯು ದಶ ಇಂದ್ರಿಯಂಗಳಿಂದಲಿ ಮನ
ಹಸಗೆಟ್ಟು ವಿಷಯದಿಚ್ಛೆಗೆ ಹರಿದು
ಒಸರುವ ಮೂತ್ರನಾಳದಿ ಬಿದ್ದು ಹೊರಳುವ
ಪಶುಜೀವಿಗಳು ಚರಲಿಂಗವಲ್ಲವೆನುತ ||  || ೩ ||

ಲಿಂಗಾಂಗ ಸಮರಸದಿಂಗಿತವರಿಯದೆ
ಭಂಗಿತರುಗಳು ಜಂಗಮವೆನಿಸಿ
ಅಂಗಜನರಳಂಬಿಗೆ ಸಿಕ್ಕಿ ನರಳುವ
ಜಂಗುಳಿ ಮನುಜರು ಹಿಂಗದೆ ಪರಿವ್ರತ ||  || ೪ ||

ಅಷ್ಟಾವರಣ ಪಂಚಾಚಾರವರಿಯದೆ
ಭ್ರಷ್ಟರು ಲಿಂಗಜಂಗಮ ವೇಷವ
ತೊಟ್ಟರೆಯವನು ಜಂಗಮವಲ್ಲ ಪೂಜ್ಯಕ್ಕೆ
ನೆಟ್ಟನೆ ಹೊರಗೆಂದು ದಟ್ಟಿಸಿ ನುಡಿವುತ ||  || ೫ ||

ಚರಸ್ವಯ ಪರವೀ ತ್ರಿವಿಧ ಲಕ್ಷಣಂಗಳ
ನೆರೆ ತಿಳಿಯದೆ ವೃಥಾ ಬರಿದೆ
ಪರಾತ್ಪರ ಶಿವಲಾಂಛನವೆನಿಸಿಕೊಳುತಲಿರ್ಪ
ಗುರುಳಾತ್ಮರುಗಳ ತಾನೀಗ ಛೇದಿಸುತ ||  || ೬ ||

ಆನೆಚೋಹವ ತೊಟ್ಟು ನಾಯಾಗಿ ಬಗುಳುವ
ಹೀನಮಾನವರ ಧಿಕ್ಕರಿಸುತಲಿ
ಭಾನುಕೋಟಿ ದಿವ್ಯತೇಜ ಪ್ರಕಾಶನ
ನೂನ ಗುರುಶಾಂತಲಿಂಗದೊಲುಮೆಯಾದ ||  || ೭ ||

೪೮. ತೊಲಗಲಿಲ್ಲವೆ ಶರಣ
ರಾಗ : ವರಾಳಿ

ತೊಲಗಲಿಲ್ಲವೆ ಶರಣ
ತೊಲಗಲಿಲ್ಲವೆ ಮಾಯಾಬಲೆಗೆ ಸಿಲ್ಕಿ
ಹೊಲಬುಗೆಟ್ಟ ಜಡಜನಗಳ ಕಂಡು ಹೇಸಿ ||  || ಪಲ್ಲ ||

ಹೇಮಭೂಮಿ ಸತಿಯರೇಕೆಂಬ
ತಾಮಸದೊಳು ಸಿಲ್ಕಿ ನಿತ್ಯ
ವ್ಯೋಮಕೇಶನಿರವ ಮರೆದು
ಕಾಮಭೃತ್ಯರಿರವ ಕಂಡು ಹೇಸಿ ||  || ೧ ||

ಅಶನ ವೆಸನ ವಿಷಯಕಾಗಿ
ಹುಸಿಯ ಶಾಸ್ತ್ರಗಳನು ಪಠಿಸಿ
ವಸುಧೆಯೊಳಗೆ ಪ್ರಾಜ್ಞರೆನಿಪ
ಪಶುಜೀವಾತ್ಮರುಗಳ ಕಂಡು ಹೇಸಿ ||  || ೨ ||

ಅಷ್ಟಮದಗಳಿಂದ ಹಲವು
ಕಷ್ಟವಿಷಯದೊಳಗೆ ಸಿಲ್ಕಿ
ಶ್ರೇಷ್ಠರೆನಿಸಿಕೊಳುತಲಿರ್ಪ
ಭ್ರಷ್ಟರುಗಳು ಕಂಡು ಹೇಸಿ ||  || ೩ ||

ಮಂಜಿನಂತೆ ತೋರಿ ಹರಿವ
ರಂಜನೆಯೊಳು ಸಿಲ್ಕಿಸದ ನಿ
ರಂಜನನನರಿಯದೆ ನರಕ
ಭುಂಜಿತರನ ಕಂಡು ಹೇಸಿ ||  || ೪ ||

ತಮ್ಮ ತಾವರಿಯದೆ ಬರಿದೆಯ
ಗಮ್ಯವನ್ನು ನುಡಿದು ಪರ
ಬ್ರಹ್ಮ ವೆನಿಸಿಕೊಳುತಲಿರ್ಪ
ಕರ್ಮಿಗಳನು ಕಂಡು ಹೇಸಿ ||  || ೫ ||

ಜೀವ ಪರಮರಿರ್ಪ ಉಭಯ
ಠಾವನರಿದು ಲಿಂಗದಲ್ಲಿ
ಸಾವಧಾನಿಯಾಗದಿರ್ಪ
ಗಾವಿಲರನು ಕಂಡು ಹೇಸಿ ||  || ೬ ||

ಸತ್ತು ಚಿತ್ತಾನಂದದಿಂದ
ಅತ್ತ ತಿಳಿದು ಶಾಂತನೊಳಗೆ
ಚಿತ್ತಶುದ್ಧವಾಗದಿರ್ಪ
ಮುಕ್ತಿ ಹೀನರುಗಳ ಕಂಡು ಹೇಸಿ ||  || ೭ ||

೪೯. ಸುಲಭವಲ್ಲವೊ ಬ್ರಹ್ಮಾನಂದ
ರಾಗ : ನಾದ ನಾಮ ಕ್ರಿಯೆ ತಾಳ

ಸುಲಭವಲ್ಲವೊ ಬ್ರಹ್ಮಾನಂದ ತನ್ನ
ನೆಲೆಯ ಕಾಣಿಸಬೇಕು ಗುರುರಾಯನಿಂದ ||  || ಪಲ್ಲ ||

ಬೆಕ್ಕನು ಇಲಿ ನುಂಗಿದನಕ ದೊಡ್ಡ
ರಕ್ಕಸಿಯನು ಕಂಡು ಗಿಳಿ ನುಂಗದನಕ
ಮಕ್ಕಳ ಭಕ್ಷಿಸದನಕ ಮದ
ಸೊಕ್ಕಿದ ಗಜವನ್ನನುರಿ ನುಂಗದನಕ ||  || ೧ ||

ಇಬ್ಬರ ಒಡನಾಡದನಕ ಗಿರಿ
ಗುಬ್ಬಿಯ ರಾಜಹಂಸನು ಆಗದನಕ
ಒಬ್ಬರೊಡನೆ ಆಡದನಕ ಮೂರು
ಹಬ್ಬಿದ ಬೆಟ್ಟವ ನೊಣ ನುಂಗದನಕ ||  || ೨ ||

ಒಳಹೊರಗೊಂದನಕ ತಾನು
ತಿಳಿದನೆಂಬೋ ಭಾವ ಬಯಲಾಗದನಕ
ಬೆಳಕಿನೊಳಗೆ ಕಾಣದನಕ ಕರ
ಸ್ಥಲ ನಾಗಲಿಂಗನ ದಯವಾಗದನಕ ||  || ೩ ||