*ಚೌಪದನ ಚೌಪದನ ಕೇಳಿದ[1]ರೆಯೇನುಂಟು1
ಚೌಪದನ ಮುಖವಾರು ಕೊಂಬು ಹದಿನೆಂಟು
[2]ಚೆಲ್ವ2 ಮೂವತ್ತೆರಡು ಕಂಗಳಕುಂಟು
ಚೌರಾಸಿ ಲಕ್ಷ ಜೀವನದೊಳಗುಂಟು ||  || ೧ ||

ಶ್ರೀ ಗುರುವೆ ಗಣನಾಥ ವದನ ಕರಿರೂಪಾ
ಶ್ರೀ ವಿದ್ಯಾಭರಿತನೇ ನೀ ಕನಕ ರೂಪಾ
ಶ್ರೀ ಭಾಗ್ಯ ಪುರುಷನೆ ವಿದ್ಯಾ ಕುಲದೀಪಾ
ಶ್ರೀ ಸಿದ್ಧ ಗಣನಾಥ ಶಶಿಗಿತ್ತ ಶಾಪಾ ||  || ೨ ||

ಬಂದನೋ ಗಣನಾಥ ಕೈಲಾಸದಿಂದಾ
ಬಂದು ಓದಿಸುವಂತಾ ಸಾಲಿಯೊಳು ನಿಂದು
ಬಂಧೂರ ಓಂಕಾರ ಬೀಜ ಬಿತ್ತಿ ಬೆಳಿಯೆಂದಾ
ಮುಂದೆ ಸಾವಿರ ಸೊನ್ನೆಲಬ್ದಾ ಹೇಳೆಂದಾ ||  || ೩ ||

ಚೆನ್ನಾಗಿ ಬಿತ್ತಿ ಬೆಳದುಳಿದ ಓಂಕಾರ
ಮುನ್ನೂರು ಅರವತ್ತುವಂದು ಅಕ್ಷರಾ
ಇನ್ನ ಕಳೆದುಳಿದು ಬಾವನ್ನದಕ್ಷರಾ
ಮುಂದೆ ಉಳಿದವು ಎರಡು ಬೀಜದಕ್ಷರಾ ||  || ೪ ||

ಮೂರೇಳು ಸಾವಿರದಾರನೂರು ಗಣಿತ
ತಾರಕ ಬ್ರಹ್ಮರಿಗೆ ಅಗಣಿತದ ಗುಣಿತ
ಬ್ಯಾರೆರಡು ಅಕ್ಷರದಿಂದದು ಗುಣಿತ
ದಾರಾದರೇನು ಗುಣಿಸುವದದುನೀತಾ ||  || ೫ ||

ಒಂದರಿಂದಾದಾವು ಐದು ಅಕ್ಷರ
ಒಂದೊಂದಕ್ಕೈದೈದು ಮುಂದೆ ವಿಸ್ತಾರಾ
ಒಂದರಿಂದೆರಡಾರು ಗುಣಿತದಕ್ಷರಾ
ತಂದೆನೊ ಗಣನಾಥ ಇದರ ಪ್ರಸ್ತಾರಾ ||  || ೬ ||

ರಾಗಕ್ಕೆ ಎರಡುಂಟುಯ ಬೀಜದಕ್ಷರಾ
ಯೋಗಕ್ಕೆ ಮೊದಲೆರಡಯ ಮಂತ್ರದಕ್ಷರಾ
ಭೋಗಕ್ಕೆ ಮೊದಲೆರಡು ತಂತ್ರದಕ್ಷರಾ
ನಾಗಲಿಂಗನ ಕಂಠ ಹೃದಯದಕ್ಷರಾ ||  || ೭ ||

ಓಂ ನಮಃ ಶಿವಾಯೆಂಬ ಮಂತ್ರವನು ಕೇಳಿ
ಓಂಕಾರದೊರ್ಣವನು ತಿಳಿದು ಮಗನೇಳಿ
ಓಂಕಾರ ಮೊದಲುಂಟು ಏನದು ಹೇಳಿ
ಓಂಕಾರವೆಂಬುದು ಅದು ತಾನೇನು ಹೇಳಿ ||  || ೮ ||

ನಾನೆ ನಾನೆಂಬ ಅಕ್ಷರದೊರ್ಣವನು ಕೇಳಿ
ನಾದ ಬಿಂದು ಕಳೆವೊಂದಾಗಿ ಹೇಳಿ
ನುಡಿಯ ನೋಡದ ಮಾತಾಡಬ್ಯಾಡಿ
ನಡೆಯಿಲ್ಲದಕ್ಷರಾ ಒಂದೆನ್ನಬ್ಯಾಡಿ ||  || ೯ ||

ಮಕರವೆಂಬೊ ವರ್ಣವನು ಹೇಳಿ
ಸಿಕಾರದೋಂಕಾರದೊರ್ಣವನು ಹೇಳಿ
ಯಕಾರ ವಕರದೊರ್ಣವನು ಹೇಳಿ
ಸಕಾರ ಸನ್ನತ ಬಲ್ಲವರು ಹೇಳಿ ||  || ೧೦ ||

ಅಕ್ಷರವಿಂತಿಷ್ಟು ಅಮೃತವ ನೀಡಿ
ಅಕ್ಷರ ಗುಣಿತವನು ತಿಳಿದು ಮಾತಾಡಿ
ಅಕ್ಷರವೆಂಟನು ಮೊದಲಿಡಬ್ಯಾಡಿ
ಅಕ್ಷರ ಜನಿಸಿದಾತ್ಮಿಕನ ನೋಡಿ ||  || ೧೧ ||

ಕವರ್ಗದ ಕಡೆಯು ಮೊದಲು ಅಕ್ಷರಾ
ದವರ್ಗದ ಕಡೆಯು ದ್ವಿತೀಯ ಅಕ್ಷರಾ
ಲಾ ವರ್ಗದ ಕಡೆಯು ದೀರ್ಘದಕ್ಷರಾ
ಅಕ್ಷರದೊಳಗೆ ಶೋಧಿಸಿದ ಅಕ್ಷರಾ ||  || ೧೨ ||

ಅಕಟಚತವಾಯ ಎಂಬೋ ಅಕ್ಷರಾ
ಅಕ್ಷರದೊಳಗೆಲ್ಲಾ ಸೂತ್ರದಕ್ಷರಾ
ಅಕ್ಷರದೊಳಗೆ ಕೆಂಪು ಕಪ್ಪು ಅಕ್ಷರಾ
ಅಕ್ಷರ ಗುಣಿಸಿ ತಿಳಿದಂತವನೆ ಶೂರಾ ||  || ೧೩ ||

ಅಕ್ಷರವೆಂಬುವದು ತಾನೇನು ಹೇಳಿ
ಅಕ್ಷರ ಬಲ್ಲವರು ಸಮನಿಸಿ ಹೇಳಿ
ಅಕ್ಷರ ಅರಿದ ಹಿರಿಯರನು ಕೇಳಿ
ಅಕ್ಷರದಾತ್ಮನುದಾವಾತ ಹೇಳಿ ||  || ೧೪ ||

ಶ್ರೀಮಂತವೆನಿಸುವದು ದಾವುದಕ್ಷರಾ
ತ್ರಿಮೂರ್ತಿಯೆನಿಸುವದು ದಾವುದಕ್ಷರಾ
ತ್ರಿಲೋಕದೊಳಗೊಂದಮೃತದಕ್ಷರಾ
ಸ್ತ್ರೀಣಬ್ರೂಣದ್ರೋಣ ಬಣ್ಣದಕ್ಷರಾ ||  || ೧೫ ||

ಅಕ್ಷರ ಬಲ್ಲಂತ ಓದಿಸುವ ಅಣ್ಣಾ
ಅಕ್ಷರತಾತ್ಮಕನು ತಾನೆ ಮುಕ್ಕಣ್ಣಾ
ಅಕ್ಷರ ಹನ್ನೆರಡಯ ಬ್ಯಾರೆ ಕೇಳಣ್ಣಾ
ಅಕ್ಷ ಜನಿಸಿದ ಮನೆ ಯಾವುದಣ್ಣಾ ||  || ೧೬ ||

ಕೆಂಪು ವರ್ಣದಲ್ಲೆಸೆವ ನಾಲ್ಕು ಅಕ್ಷರಾ
ಇಂಪು ನೀಲವರ್ಣದಲ್ಲೆಸೆವ ಆರು ಅಕ್ಷರಾ
ಸೋಂಪುದಳದಲ್ಲೆಸೆವ ಹತ್ತು ಅಕ್ಷರಾ
ನುಂಪು ವರ್ಣದಲ್ಲೆಸೆವ ದ್ವಾದಶಕ್ಷರಾ ||  || ೧೭ ||

ಹದಿನಾರು ಅಕ್ಷರದ ವರ್ಣವನು ನೋಡಿ
ಮೊದಲೊಂದು ಅಕ್ಷರದ ಗುಣಿತವನೆ ಮಾಡಿ
ಅದರಿಂದ ಅಕ್ಷರ ಮುನ್ನೂರು ಕೂಡಿ
ತುದಿ ಮೊದಲರಿಯಗಾಣದ ಮಾತಾಡಬ್ಯಾಡಿ ||  || ೧೮ ||

ಇಂತಿಷ್ಟು ಗುಣಿಗುಣಿತವನು ತಿಳಿದು ಮಾತಾಡಿ
ಆ ಗಣನಾಥ ತಿಂತಿಣಿ ಚೌಪಷ್ಟಿ ವಿದ್ಯೆವನು ಬಲ್ಲ ನೋಡಿ
ಮಂತ್ರ ಯೋಗ ಮಾರ್ಗವನು ಬಲ್ಲ ಗಣನಾಥನ ಕೂಡಿ
ಚಿತ್ರೈಸಲು ಗಣನಾಥ ಒಲಿದಾತ ನೋಡಿ ||  || ೧೯ ||

[3]ನಾದಮೂರ್ತಿ3ಯೆಂಬ ಗಣನಾಥ ಬಂದ
ವೇದಕ್ಕೆ ಮೊದಲೊಂದು ಪ್ರಸ್ತವನು ತಂದ
ನಾಗಲಿಂಗಯ್ಯನ ಹೃದಯ ಪೀಠದೊಳು ನಿಂದು
ನಾ ಹೇಳಲಳವಲ್ಲಲಾತನೆ ಚೆಂದಾ ||  || ೨೦ ||

ಸರಸ್ವತಿಯ ಗಣನಾಥ ಶರಧಿಯೊಳಗಿರಲು
ಭರದಿಂದ ಬ್ರಹ್ಮನು ಕರೆಯಲಿಕ್ಕೆ ಬರಲು
ಸುರಮುನಿಗಳು ವಿದ್ಯೆಯನು ಹೇಳೆನಲು
ಶ್ರೀ ಗುರುಬ್ರಹ್ಮ ವರವಿಟ್ಟು ಸ್ಥಿರದಿ ಬಾಳೆನಲು ||  || ೨೧ ||

ಕರಸ್ಥಲ ನಾಗಿದೇವನ ಅಕ್ಷರ ಚೌಪದ ಸಮಾಪ್ತ
ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ ||

 

* ಆರಂಭದಲ್ಲಿ ‘ಶ್ರೀಗುರು ಕರಸ್ಥಲದ ನಾಗಲಿಂಗಯ್ಯನವರು ಮಾಡಿದಾಕ್ಷರ ಚೌಪದ’ ಎಂದು ಆ ಪ್ರತಿಯಲ್ಲಿ ಆರಂಭವಾದರೆ, ಆ ಪ್ರತಿಯಲ್ಲಿ ‘ಕರಸ್ಥಲದ ನಾಗಲಿಂಗಯ್ಯನ ಚೌಪದನ’ ಬರೆಯುವುದಕ್ಕೆ ಶುಭಮಸ್ತು’ ಎಂದು ಆರಂಭವಾಗುತ್ತದೆ.

[1] ಕೇನೇನು ಉಂಟು (ಅ)

[2] ಚೆಲುವ (೨)

[3] ನಾಡಮೂರ್ತಿ (ಆ)