ಗುರುಶಾಂತಲಿಂಗ ಮೂರೇಳು ದೀಕ್ಷೆಯನಿತ್ತಾ
ತೆರನ ಪೇಳುವುದೆನ್ನ ಮತಿಗೆ ತಕ್ಕನಿತನು
ಶರಣಜನರಾಲಿಪುದು ಪಾಲಿಪುದು ನಲವಿಂದ ನಿಮ್ಮ ಶಿಶುವದು ಕಾರಣ ||  || ಪಲ್ಲ ||

ಮಲತ್ರಯಂಗಳ ಕಳದು ಕರಣದಿಂ ಭವಿಸಂಗ
ವಳಿದನ್ಯ ದೈವಸ್ಥಾವನ ಉಪವಾಸ ಹರಿಕೆ
ಕಳೆದು ದಶದ್ರೋಹಾದಿಗಳ ಬಿಡಿಸಿ ಷಡ್ವರ್ಗ ಸಪ್ತವ್ಯಸನಾದಿಗಳನು
ತೊಳದು ಡಂಬಕ ಹಮ್ಮು ಹೆಮ್ಮೆಗಳ ಸಂಹರಿಸಿ
ಅಳವಡಿಸಿ ಸದ್ಬಕ್ತಿ ಕ್ಷಮೆ ಶಾಂತಿಯಲಿ ಕರುಣೆ
ಗಳ ಹೃದಯದೊಳು ಬಿತ್ತಿ ಕರಣಗಳನರಿಯಲ್ಕೆ ತಾನಾಜ್ಞೇದೀಕ್ಷೆಯು ||  || ೧ ||

ಪರಿಶಿವನೆ ಗುರುಮೂರ್ತಿ ಸ್ಥೂಲ ಸೂಕ್ಷ್ಮಲಿಂಗ
ವೆರಡಕ್ಕೆ ಚೇತನವು ಚರಲಿಂಗ ಕಾರಣವು
ವರಭಸ್ಮ ಚಿತ್ಕರುಣ ದೃಗ್ಬಿಂದು ರುದ್ರಾಕ್ಷ ಶಿವಮಂತ್ರ ಮಾತೃಸ್ಥಾನ
ಕರುಣರಸವೇ ತೀರ್ಥವಾನಂದವೇ ಶೇಷ
ಹರನಷ್ಟ ಮೂರ್ತಿಯಷ್ಟಾವರಣಮಿಂತಿವರಾ
ವರಮಹಾತ್ಮೆಯ ಪೇಳಲರಿದುವಿದತಿಳಿಯೆಂದಡದುವೆಯುಪಮಾದೀಕ್ಷೆಯು ||  || ೨ ||

ಹರಿಯಜೇಂದ್ರಾದಿಗಳು ಶಿವನ ದಾಸರು ಎಂಬ
ಪರಿಯ ವಿಸ್ತರಿಸಿ ಕ್ಷೇತ್ರಾದಿ ಹಂಬಲ ಬಿಡಿಸಿ
ಹರನಿಲ್ಲದಿತರ ದೈವಗಳಿಗೊಡೆತನವಿಲ್ಲವೆಂಬರ್ಥವನು ತೋರಿಸಿ
ಕರ ಸುಗುಣ ಮನಬುದ್ಧಿ ಬಿತ್ತವಹಂಕಾರಗಳ
ದುರಿತಗಳ ನಿಲ್ಲಿಸಿ ದುರ್ಗುಣವ ಸಂಹರಿಸಿ
ಸ್ಥಿರಕಾರಣ ಮಾಡಲದು ಭವಹರಿವುದುವೋಡುವುದು ಸ್ವಸ್ಥಿಕಾರೋಹಣ ದೀಕ್ಷೆಯು ||  || ೩ ||

ವರಷಡಕ್ಷರ ಮಂತ್ರವೇ ಹರನ ಷಡ್ವದನ
ಕುರುಹೆನಿಸಿ ಪಂಚಕಳಸಗಳಾಗಿ ಗುರುತಾನೆ
ಮೆರೆವ ಪಾತಾಳ ಮುಖದಿರವೆನಿಸಿ ಷಡ್ವರ್ಗಮಂ ಪದಕೆ ಬೀಜಾಕ್ಷರ
ಉರಗ ಹಾರಂಗವನೆ ಸೂತ್ರದಾರದ ಸುತ್ತಿ
ಪರಿಪರಿಯ ತಳಿರು ಗಂಧಾಕ್ಷತೆಯ ಫಲಹಾರ
ವಿರಿಸಿ ವೀಳೆ ಸುವರ್ಣಗಾಣಿಕೆಯ ದಿಕ್ಕುಗಳನರಿಯೆ ಕಳಸಾಭಿದೀಕ್ಷೆಯು ||  || ೪ ||

ಓಡುವವು ಮೃತ್ಯುಮಾರಿಯು ಭೂತವೇತಾಳ
ಕಾದದೋಡುವುದು ದುರಿತ ದುಷ್ಕೃತವೆಲ್ಲ
ನೋಡೆ ನಾಲ್ವತ್ತೆಂಟು ಸ್ಥಾನದೊಳು ಮಂತ್ರಯುಕ್ತದಿಂ ಧರಿಸೆ ಕಾಮ್ಯಾರ್ಥವು
ಕೂಡಿ ಕೈಸಾರುವವು ಭಕ್ತಿ ಜ್ಞಾನ ವೈರಾಗ್ಯ
ವೀಡೇರುವುದು ಮೋಕ್ಷಮೊದಗುವುದು ತ್ರೈವ್ಯಾಳ್ಯ
ಅಡಲಿನ್ನೇನು ಸಿದ್ಧಿಸಿ ಕೀರ್ತಿ ಪಸರಿಸುವುದು ವಿಭೂತಿ ಪಟ್ಟದೀಕ್ಷೆಯು ||  || ೫ ||

ನೆತ್ತಿಯೊಳಗಿಡಗಿರ್ದ ನಿಜಕಳೆಯು ತೆಗೆ ತಂದು
ಮತ್ತಿಷ್ಟರೂಪಿನೊಳು ತುರುಗಿ ಮಂತ್ರವನೋದಿ
ಅತ್ಯಂತ ಪಂಚಾಭಿಷೇಕ ಮಜ್ಜನಂಗೈಯ್ದು ಅಷ್ಟವಿಧ ಪೂಜೆಗಳನು
ಇಂತು ಷೋಡಶವೆನಿಪವುಚಾರವನು ಮಾಡಿ
ಸತ್ತುಚಿತ್ತಾನಂದ ನಿತ್ಯ ಪರಿಪೂರ್ಣ ಕಳೆ
ತುತ್ತುರುಗಿ ಚರಲಿಂಗ ತೀರ್ಥ ಪ್ರಸಾದವೀಯಲ್ಕೆ ಲಿಂಗಾಯುತ ದೀಕ್ಷೆಯು ||  || ೬ ||

ಲಿಂಗವಿದು ನಿನ್ನಿಷ್ಟಲಿಂಗವಿದು ನಿನ್ನ ಕಳೆ
ಲಿಂಗವಿದು ನಿರುಪಮದ ಲಿಂಗವಿದು ನಿರ್ಲೇಪ
ಲಿಂಗ ಮುಕ್ತಿಯ ಸ್ಥಾನಲಿಂಗ ನಿನ್ನಯ ಪ್ರಾಣಲಿಂಗ ಭಾವದಿಯೊಪ್ಪುದು
ಲಿಂಗವಲ್ಲದೆ ಇತರ ದೈವಕ್ಕೆ ಎರಗದಿರು
ಲಿಂಗವಲ್ಲದೆ ಜಂಗಮವೆಂದು ಭಾವಿಸು ನೀನು
ಲಿಂಗದಂಗವೆ ನನ್ನ ಅಂಗವೆಂದರಿಯುತೆ ಧರಿಸೆ ಲಿಂಗಸ್ವಾಯುತ ದೀಕ್ಷೆಯು ||  || ೭ ||

ತನುದೀಕ್ಷೆಯೊಳಗಿನಿತು ಮನದೀಕ್ಷೆಯಂ ಪೇಳ್ವೆ
ಅನವರತ ಸತಿಸುತರು ಮಾತೆ ಪಿತರಾದೊಡಂ
ನೆನೆಯಲಾಗದು ಮತ್ತೆ ಭಕ್ತರಲ್ಲದಡವರು ಬಾಂಧವರೆ ಶಿವಶರಣರು
ಮನದಲ್ಲಿ ಶಿವಮಂತ್ರ ಕೇಳುವುದು ಶಿವಶಾಸ್ತ್ರ
ವನವರತ ದೃಢವೀರಶೈವಗಳನಾಚರಿಸಿ
ಕೊನರುವುದು ಶಿವಶಾಸ್ತ್ರದಿಂದ ಘನವಲ್ಲೆಂದಡದುವೆ ಸಮಯ ದೀಕ್ಷೆಯು ||  || ೮ ||

ಅಂಗಭೋಗವನೆಲ್ಲ ಲಿಂಗಗೋಸುಗ ಹೊಂಚಿ
ಹೊಂಗಳನು ಜಂಗಮಾರ್ಚನೆಗೋಸುಗ ತಹನು
ಕಂಗೊಳಿಪ ಸದ್ಗೃಹವ ರಚಿಪ ಚರಲಿಂಗ ಶರಣಾಳಿಗಳ ಪ್ರಾಶನಕ್ಕೆ
ಮಂಗಳ ಮಹೈಶ್ವರ್ಯವೆಲ್ಲ ಪರಹಿತಕಾಗಿ
ಹಿಂಗಿ ಸರಿಯಲಾಗಿ ನೋಯ ಚಿಂತಿಸುತ್ತಿರುತ
ಬೆಂಗೊಂಡು ಸರ್ವಕಂಠಕ ನಿಸ್ಸಂಸಾರ ದೀಕ್ಷೆಯಿಂತು ||  || ೯ ||

ಪರಲೋಕ ಇಹಲೋಕ ಸಮವೆಂಬ ನಿರ್ವಾಣ
ಹರುಷ ಚಿಂತೆಯು ಯುಗ್ಮವೇಕವಹ ನಿರ್ವಾಣ
ವರಪುಣ್ಯ ಪಾಪಗಳ ಸಮವೆಂಬ ನಿರ್ವಾಣ ಶತ್ರುತ್ವ ಮಿತ್ರತ್ವವು
ಸರಿಯೆಂದು ಉಪವಾಸ ತೃಪ್ತಿ ಸಮ ನಿರ್ವಾಣ
ಪರಿಪೂರ್ಣಭಾವ ಭರಿತಾನಂದ ನಿರ್ವಾದಿ ನಿರ್ವಾಣ ದೀಕ್ಷೆಯಿಂತು ||  || ೧೦ ||

ಒಂದು ಪ್ರಣಮದಿಯಿಷ್ಟ ಪ್ರಾಣಭಾವಂ ತ್ರಿವಿಧ
ಹೊಂದಿಹವು ಜ್ಞಾನೇಂದ್ರಿ ಹೃದಯದೊಳು ಷಡುಲಿಂಗ
ಸಂಧಿಸಿಯೆ ಛತ್ತೀಶದಿಂದೆ ದ್ವಿಶತ ಷೋಡಶತತ್ವ ತತದ್ವಿಗುಣಿತಾಂ
ಒಂದು ಒಂದೊಂದರೊಳಗಡಗುತ್ತ ಏಕದೊಳೆ
ಗೊಂದು ತೋರಲು ತತ್ತ್ವಮಾರ್ಗವದು ಮೈಯುಂಡು
ಅಂದವಡದವಯವಗಳು ಲಿಂಗಮುಖಿಯಾಗಿರಲು ತಿಳಿಯಲ್ಕೆ ತತ್ವದೀಕ್ಷೆಯು ||  || ೧೧ ||

ಅಂಗದೊಳಗುಳ್ಳ ತತ್ವಗಳಂ ನಿಶ್ಚೈಸಿ
ಅಂಗೈಯ ಲಿಂಗದೊಳು ಕಂಗಳಂ ಕಿಕ್ಕಿರಿಸಿ
ಹಿಂಗದಾ ನೋಟದೊಳು ಮನವೊಲಿದು ಭಾವದರೊಳಗೇಕಮಾಗಿ ನಲಿದು
ಕಂಗೊಳಿಪ ಭಸಿತ ರುದ್ರಾಕ್ಷೆಯ ಧರಿಸಿ ಮಿಗೆ
ಜಂಗಮವೆ ಪ್ರಾಣವೆಂಬಭಿಮತವ ಕೈಸಾರಿ
ಹೊಂಗಿ ಚಿತ್ಪ್ರಭೆಯಲ್ಲಿ ಮುಳುಗಿ ತಾ ತನ್ನನರಿಯದಿರಲುನುಗ್ರಹದೀಕ್ಷೆಯು ||  || ೧೨ ||

ಷಡುಚಕ್ರ ಸೋಪಾನವಿಡದೇರಿ ಮೇಲಕ್ಕೆ
ನಡದು ಪರಬ್ರಹೇಂದ್ರ ಸ್ಥಾನದಲಿ ಸೇರಿಸುತ
ಅಡಿಯಿಟ್ಟು ಶಿಖಾಚಕ್ರದೊಳಗೆ ಸೈವೆರಗಾಗಿ ಪಶ್ಚಿಮ ದ್ವಾರದೊಳಗೆ
ಕಡುವರೆವ ತೇಜಃಪುಂಜವನರಿತು ಮೈಮರೆದು
ಕೊಡನಮೃತ ಸವಿದು ಕ್ಷೆತ್ತೈಷೆ ಪಾಂಶೆಗಳನಳಿದು
ಹಿಡಿಯೆ ರೂಪಿಲ್ಲ ಬಿಡುವರೇ ನಿರೂಪಿತನಲ್ಲದಿರಲಾಧ್ಯಾತ್ಮ ದೀಕ್ಷೆಯು ||  || ೧೩ ||

ನಡವಳಿಯು ಕುಂದಿಲ್ಲ ದೃಢಭಾವ ಕೊರತಿಲ್ಲ
ನುಡಿದು ಹುಸಿಯಲಿಲ್ಲ ನಡಮನಗಳಿನಿತಿಲ್ಲ
ದೃಢಮಂತ್ರ ಬಿಡುವಿಲ್ಲ ಕರಣ ಸಂಚಲವಿಲ್ಲ ಕೃಪೆ ಹಿಂಗಲಿಲ್ಲ
ಅಡಕ ಲಿಂಗದಿ ಶರಣರೊಡೆಯರೆಂಬುದೆ ಸತ್ಯ
ಜಡಚಿತ್ತವಿರಲಿಲ್ಲ ಜಾತಿಸೂತಕವಿಲ್ಲ
ಕೊಡುವೆ ಕೊಂಬಡೆ ಕರ್ತನಲ್ಲದಾನಲ್ಲೆನಲು ಅಂದು ಸತ್ಯಶುದ್ಧ ದೀಕ್ಷೆಯು ||  || ೧೪ ||

ಪರಮ ಪತಿವ್ರತೆ ತನ್ನ ವಲ್ಲಭನ ರತಿಸುಖಕೆ
ಹರುಷಂದೊಲಿದಿವಳನ್ಯಪುರಷನನರಿಯಳು
ವರಸ್ವಪ್ನದಲ್ಲಿ ನಿಜವಲ್ಲಭನನೆ ನೆನೆವ ಭರವಾಗಿಯೆ ರಮಣನ
ಇರವಿದಕೆ ಸಂತೋಷಮಾಗಿಪ ರತಿಗೂಡಿ
ಎರಕವಾಗಿಹಳಂತೆ ಸದ್ಭಕ್ತ ಕ್ಷೇತ್ರಕ್ಕೆ
ಹರಿಯ ದುರ್ಗುಣವರಿಯ ತ್ರಿಕೂಟ ಗಿರಿಯಲ್ಲಿ ನೆರೆವದೇಕಾಗ್ರ ದೀಕ್ಷೆಯು ||  || ೧೫ ||

ಗುರುವರನೆ ಕುಲದೈವ ಲಿಂಗ ನಿಜಜೀವನವು
ಚರಲಿಂಗಮದೆ ದೈವವೆಂಬ ದೃಢಭಾವನೆಯು
ಸ್ಥಿರವಾಗಿ ಭವಿಯನ್ಯದೈವ ಸ್ಥಾವರ ಹಿಂಗಿ ಶುಚಿಪಾಕ ಮುಂದುಗೊಂಡು
ನೆರೆರೂಪು ಕ್ರೀಲಿಂಗ ರುಚಿ ಪ್ರಾಣ ಭಾವದೊಳು
ಕರತೃಪ್ತಿಯಂ ಮರೆಯದಿತ್ತ ತನು ಸುಖವಳಿದು
ಹರಕರ್ತನೆಂದು ಹಿಡಿದುದನು ತಾ ಬಿಡದಿರಲು ವರದೃಢ ವೃತದೀಕ್ಷೆ ನೋಡಾ || ೧೬ ||

ಪರಮ ಶೇಷವು ಗಂಧವಾಚಾರ ಘ್ರಾಣದೊಳು
ನೆರೆಲಿಂಗ ಶಿವಮಂತ್ರ ರಸವು ಗುರುಲಿಂಗದೊಳು
ಹರಲಿಂಗದರ್ಪಿತವು ಗುರುಕರುಣಂ ಕೇಳಿ ನೋಡಿ ಪರಿಣಮಿಸುವುದು
ಚರಲಿಂಗ ತ್ವಕ್ಕಿನಲಿ ಶರಣಾಳಿಗಳಿಗಿಷ್ಟ
ವರಲಿಂಗದರ್ಪಿತವು ಕರ್ಣ ಶಿವಸ್ತುತಿಗಳು
ಅರರೆ ಪ್ರಸಾದಲಿಂಗಕ್ಕೆನಲು ಪಂಚೇಂದ್ರಿಯಂಗಳರ್ಪಿತ ದೀಕ್ಷೆಯು ||  || ೧೭ ||

ಲೋಕದೊಳಗಾರಾದಡಂ ತನ್ನ ನೋಯಿಸಲು
ಶ್ರೀಕಂಠನಾಜ್ಞೆಯೆಂಬುದು ಸಹಜ ಶರಣಂಗೆ
ಬೇಕಾದ ಸುಖದುಃಖ ಬರಲು ಮನದಿಂ ತಿಳಿದು ಶಿವಸೂತ್ರವೆಂದು ನಲಿದು
ಶೋಕಮೋಹಕ್ಕೆಯೊಲ್ಲದನಾಗಿ ಜೀವಿಗಳ
ತಾ ಕೊಲ್ಲದಾಭಾವ ನಿಶ್ಚಯಿಸಿ ಸದ್ಭಕ್ತಿ
ಸಾಕಾರವಾಗಿ ಕರುಣಾಳು ಬುದ್ಧಿಯೊಳಿರೆ ತಿಳಿಯಲಿದು ಅಹಿಂಸೆ ದೀಕ್ಷೆಯು || ೧೮ ||

ಭೂತಸೋಂಕಿದ ಮನುಜಗರಿವರತು ಮೈಮರದು
ಧಾತುಗುಂದುವ ತೆರದಿ ಗುರುಕರುಣದಿಂ ಲಿಂಗ
ವೋತು ಸರ್ವಾಂಗಮಂ ಮುಸುಕಿರಲು ತನುಭಾಷೆಯಳಿದು ಲಿಂಗಾಂಗವಾಗಿ
ಭೂತಳದೊಳುಳ್ಳ ಕ್ಷೇತ್ರಂಗಳಂ ಹಿರಿದೆಂಬ
ಹೇತುಗಳ ಮರೆದು ಏಕೋದೇವನೆಂದರಿದು
ಸ್ವತಂತ್ರನಾಗಿ ಪಂಚಾಚಾರ ಪರಿಪೂರ್ಣ ವರಲಿಂಗನೈಷ್ಠ ದೀಕ್ಷೆಯು || ೧೯ ||

ಗುರುಲಿಂಗ ಜಂಗಮದಿ ವಿಶ್ವಾಸ ಮೈಯುಂಡು
ಕರಣಗಳ ಹರದಿಷ್ಟ ಲಿಂಗದೊಳು ನಿಂದು ಮಿಗೆ
ಪರಮ ಚಿತ್ಪ್ರಭೆಯಲ್ಲಿ ಭಾವ ಮನ ಬಿಚ್ಚಿಟ್ಟು ನಿಭ್ರಾಂತನಾಗಿ ನಲಿದು
ಶರೀರದೆಚ್ಚರ ಮರೆದು ಭೋಗಲಿಂಗದೊಳರತು
ಹೊರಗೊಳಗೆ ತತ್ವಮಯನಾಗಿ ನಿರ್ಗುಣಿಯಾಗಿ
ಅರದೆ ಚರ್ತುವಿಧ ಪದವ ಧಿಕ್ಕರಿಸಿ ಸ್ಚಚ್ಚರಿತಮಾಗೆ ಮನೋಲಯದ ದೀಕ್ಷೆಯು || ೨೦ ||

ಪರಮ ಸತ್ಕೃತಿಯೆ ತಾ ತಪಮೆನಿಸಿ ನಿಶ್ಚಯಿಸಿ
ಗುರುಕೃಪೆಯ ಪಡದು ವರಲಿಂಗ ಕರದೊಳಗಿರಲು
ನಿರುತ ಸಂಪದವೆನಿಸಿ ತೀರ್ಥಪ್ರಸಾದತ್ರಯ ದೊರಕಲದು ತನ್ಮೋಕ್ಷವು
ಮೆರೆವ ಭಕ್ತನ ಗೃಹದಿ ಕೈಲಾಸ ದಿಟವೆನಿಸಿ
ಯಿರಲು ಸದ್ಯೋನ್ಮಕ್ತಿ ತರುಣನಿಗೆಯೇಕವಿಂಶತಿ ದೀಕ್ಷೆಯು ||  || ೨೧ ||

ಕರಸ್ಥಲ ನಾಗಿದೇವನ ಏಕವಿಂಶತಿ ದೀಕ್ಷಾವಿಧಾನ ಸಮಾಪ್ತ
ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ ||