ರಾಗ: ಕನ್ನಡ ಕಾಂಬೋಧಿ

ನುತಿಸಲೆನ್ನಳವೆ ನಿಮ್ಮತಿಶಯ ಮಹಿಮೆಯ
ಸಿತಿಕಂಠ ವೀರಶರಭ ಮಾಚಿದೇವಯ್ಯ ||  || ಪಲ್ಲ ||

ಹರನ ಘನವನೆಂತುಟರಿಯದೆ ದಕ್ಷನು
ಮರುಳುವಿಡಿದು ಕೂಗಿ ಮಾರಿಯ ಕರವಂತೆ
ಕರಿಯು ಕೇಸರಿಯೊಳು ಕದನಕೆಳಸುವಂತೆ
ಹರಿಣ ವ್ಯಾಘ್ರನ ಕೂಡೆ ಹಾಸ್ಯದಿ ನುಡಿವಂತೆ
ಗರುಡನೊಡನೆ ವ್ಯಾಳ ಗರ್ವಿಸಿ ನಡೆವಂತೆ
ಉರಗನೊಡನೆ ದರ್ದುರನು ಮಚ್ಚರಿಪಂತೆ
ಉರಿವನಲನ ಕೂಡೆ ತೃಣವು ಸೆಣಸುವಂತೆ
ಹರಿಯಜರಿಗೆ ಮುನ್ನ ಹಗೆಯು ನಾನೆಂಬಂತೆ
ಸುರರೆಂಬ ಲತೆಗೆಲವಿತ್ರವ ಕೊಂಬಂತೆ
ವರಪತ್ನಿಯರ ಓಲೆಭಾಗ್ಯವ ಕಳವಂತೆ
ನೆರಹಿ ನಿರ್ಜರ ಸ್ತೋಮವ | ಕುಟಿಲ ದಕ್ಷ
ಹರವಿರಹಿತ ಯಜ್ಞವ | ರಚಿಸುತಿರೆ
ಪರಮೇಷ್ಠಿ ಶ್ರುತಿವೇದವ | ಪಂಕಜನಾಭ
ವಿರಚಿಸಿದನು ಯಾಗವ | ಕುಹಕರೆಲ್ಲ
ಹರುಷದೊಳಿರಲಭವ | ಪಣೆಯಗಣ್ಣ
ತೆರೆಯಲುದ್ಭವಿಸಿದ ವೀರಾವತಾರವಾ ||

೨.

ಮೃಡನ ಕೋಪವೆ ಬಹಿಷ್ಕರಿಸಿ ಮುಂದೆಸೆವುತೆ
ಸಿಡಿಲು ಕೋಟಿಗಳೊಂದು ರೂಪಾಗಿ ನಿಂದಂತೆ
ಘುಡುಘುಡಿಸುತ ನೆರೆ ಘರ್ಜಿಸಿ ಮೊರೆವುತೆ
ಕಿಡಿಗಣ್ಣು ಕೆದರಿದ ಜುಂಜು ಕುಂತಲವಂತೆ
ಬಿಡುಗಣ್ಣು ಪೊಳೆವ ದೌಂಷ್ಟ್ರವು ಮೀಸೆಗಳಂತೆ
ಕಡಿತಲೆ ಕಾಸೆ ಕಾಲಂದುಗೆ ಝಣರಂತೆ
ಪಿಡಿದ ಖಡ್ಗವು ಚಾಪ ಸರಳು ಹಲಗೆಯಂತೆ
ಉಡಿಯಲು ಕುಡಿಬಾಕು ರಣಚೂರಿ ಮೆರೆವುತ್ತೆ
ಪೊಡವಿ ನಡುಗಲಷ್ಟ ಶೈಲಂಗಳಲುಗುತೆ
ಕಡಲು ಕಂಪಿಸಲಿಂದು ರವಿ ತಾರೆ ಬೆದರುತೆ
ಕಡು ಭಯಂಕರವಾದನು | ಬ್ರಹ್ಮಾಂಡವು
ಹೊಡೆವಂತಾರ್ಭಟಿಸಿದನು | ಈಶ್ವರ ನೋಡಿ
ಕಡು ಬೇಗ ಬೆಸನಿತ್ತನು | ದಕ್ಷನ ಯಾಗ
ಗಡಣದೊಳಿರುವರನು | ಸಂಹರಿಸೆನೆ
ಮೃಡನಡಿಗೆರಗಿದನು | ವೀರೇಶೈರ
ನೆಡೆಗೊಂಡು ದಕ್ಷಾಧ್ವರಕೆ ಮುಖವಾದನು ||

ವರ ವೀರಭದ್ರನುದ್ಭವಿಸಲತ್ತವರಿಗೆ
ದುರಿತ ದುಷ್ಕೃತದ ಸೂಚನೆ ಸ್ವಪ್ನಗಳಾಗೆ
ಅರುಣಕೋಟಿಗಳೊಗೆದಂತೆ ಪ್ರಜ್ವಲವಾಗೆ
ಸುರಸತಿಯರ ಕರ್ಣಪತ್ರ ಓಸರಿಸೋಗ
ಶರಧಿ ಘೂರ್ಮಿಸುವಂತೆ ಸಂಜೆ ಬೊಬ್ಬೆಗಳಾಗೆ
ಉರಿವನಲನು ಗತವಾಗಿ ಕಾರ್ಬೊಗೆಯಾಗೆ
ಸುರ ಮನು ಮುನಿಗಳು ಸ್ರವದಂತಾಗಲು ಮಿಗೆ
ಹರಿ ವಿರಂಚಿಗಳಿಗೆ ಹುಮ್ಮು ಪಲ್ಲಟವಾಗೆ
ಹರುಷಗುಂದಲು ದಕ್ಷನಿಂತೆಂದನವರಿಗೆ
ಮರುಳೊಡನಾಡುವ ಮತಿಹೀನ ಗೊರವಂಗೆ
ಪೆರತಂಜುವೆನೆ ಎಂದನು | ಆ ನುಡಿಯೊಳು
ಧುರಧೀರನೆಯ್ತಂದನು | ದಕ್ಷರ ಶಿರ
ವರಿದು ಹೋಮದೊಳಿಟ್ಟನು | ಪದ್ಮಾಕ್ಷನ
ಶಿರವ ಹರಿಯಲೆಚ್ಚನು | ಭಾರತೀಯ ಮೂಗ
ನರಿದು ಕರದೊಳಿತ್ತನು | ಪೂವಡಿಗನ
ಉರವ ತುಳಿದು ಕುಲಿಲೆಂದು ಬೊಬ್ಬಿರಿದನು ||

ಅಕ್ಕಟ ಗಜವಿಂಡಿನೊಳಗೆ ಪಂಚಾಸ್ಯನು
ಹೊಕ್ಕಂತೆಲ್ಲರ ಸದೆಬಡಿದು ಭಂಗಿಸಿದನು
ಒಕ್ಕಲಿಕ್ಕುತ ಪಲ್ಲು ಕರ ಜಿಹ್ವೆಗೊಯಿದನು
ಕುಕ್ಷಿಯ ಭೈರವನೊಡಬಾಗ್ನಿಯೊಳು ತಾನು
ಸೊಕ್ಕಿದವರೆಲ್ಲ ಸಂಹಾರಗೆಯಿದನು
ಆ ಕ್ಷಣದೊಳು ಕಾಳಿ ಬರೆ ಶಾಂತನಾದನು
ಮಿಕ್ಕಿನವರನೆಲ್ಲ ನೊರಜೆಂದುಳುಹಿದನು
ದಕ್ಷಂಗಜನ ಶಿರವಿತ್ತು ನಡೆಸಿದನು
ಠಕ್ಕ ಭಕ್ತಿಯೊಳೆದ್ದು ಚರಣಕ್ಕೆರಗಿದನು
ಬೆಕ್ಕಸ ಬೆರಗಾಗಿ ನುತಿಸುತಲಿರ್ದನು
ಸಾಕ್ಷಾತ್ ತಿರುಗಿದನು | ಗಮ್ಮನೆ ಬಂದು
ಮುಕ್ಕಣ್ಣಗೆರಗಿದನು | ದ್ರೋಹಿಯ ತಂದು
ದೊಕ್ಕನೆ ನಿಲಿಸಿದನು | ಈಶ್ವರ ನೋಡಿ
ನಕ್ಕು ಹಾಸ್ಯವ ತಾಳ್ದನು | ದೂರ್ವಾಂಕುರ
ಚೊಕ್ಕಟ ಕೊಡಿ ಎಂದನು | ವೀರೇಶನ
ತರ್ಕೈಸಿಕೊಂಡು ಈಶ್ವರನು ಮುದ್ದಿಸಿದನು ||

ಮುಂದುಗಾಣದೆ ದಕ್ಷಯಜ್ಞವ ರಚಿಸಲು
ಬಂದ ದೇವರ್ಕಳೆಲ್ಲರು ಕಡು ನೋಯಲು
ನಂದಿಕೇಶ್ವರನಭಯವನಿತ್ತು ಸಲುಹಲು
ಕಂದರ್ಪಪಿತನಜ ಸುರ ಮನು ಮುನಿಗಳು
ಬಂದು ಶಂಕರನಡಿಗೆರಗಿ ಪಲ್ಗಿರಿಯಲು
ಎಂದಿನ ಮಣಿಹವನಿತು ಸಂತೈಸಲು
ಹಿಂದಣ ಶಾಪದಿ ಹರಿ ಮೃಗವಾಗಲು
ಕೊಂದು ಹಿರಣ್ಯನ ಶೋಣಿತಗುಡಿಯಲು
ಅಂದು ಸೊಕ್ಕೇರಿ ದಿವಿಜರ ಬೆದರಿಸಲು
ಬಂದು ದೇವರ್ಕಳೀಶ್ವರಗೆ ಭಿನ್ನವಿಸಲು
ಚಂದ್ರ ಭಾಸ್ಕರ ತೇಜನು | ವೀರೇಶ ಹೋ
ಗೆಂದು ಬೆಸನನಿತ್ತನು | ಅಜ್ಞಾನದಿ
ಹಿಂದಣ ಸ್ಥಿತಿಯ ತಾನು | ಮರದನೇಕ
ಮಂದಮತಿಯೊಳಿಹನು | ಉದ್ರೇಕದಿ
ನಿಂದು ಗರ್ವಿಸಲು ನೀನು | ಈಕ್ಷಣ ಶರ
ಭೇಂದ್ರಾವತಾರದೊಳ್ಸಂಹರಿಸೆಂದನು ||

ವಡಬ ತೃಣವನವಗ್ರಹಿಸುವಂತೆಯ್ದಿದ
ಕಡು ತವಕದೆ ನರಸಿಂಹನ ನುಡಿಸಿದ
ಜಡಮೃಗರೂಪನಾಂಕರಿಸಿ ಮಾತಾಡಿದ
ಸಿಡಿಮಿಡಿಗೊಳುತ ನೀನಾರೊ ಹೇಳಲೊ ಎಂದ
ಕಿಡಿಗಣ್ಣಭವನ ಕುಮಾರ ನಾನೆಲೆ ಎಂದ
ಪೊಡವಿ ಪಿತನು ಎನ್ನ ಮಗನ ಲಲಾಟದ
ನಡುವೆ ಹುಟ್ಟಿದ ಶಿವನೆನಗೆ ಮೊಮ್ಮಗನೆಂದ
ಜಡದೇಹಿ ನೀನು ಸ್ತ್ರೀಯಾಗಿ ತರ್ಕೈಸಿರ್ದ
ಕಡು ಸ್ನೇಹದೊಲ್ಲಭನೆಂತು ಮೊಮ್ಮಗನಾದ
ಮೃಡವೀರ್ಯ ಸೋಂಕಿನಿಂ ಬಸುರಾಗಿ ಬೆಸಲಾದ
ಬೆಡಗ ನೀ ಮರದೆಯಲ್ಲ | ಪುಲ್ಲಿಂಗಕ್ಕೆ
ತೊಡೆಯ ನೀನಾಂತುದಿಲ್ಲ | ಹಾಗೆಂದೆಂಬ
ನುಡಿಯ ನೀನಾಂತುದಿಲ್ಲ | ಹಾಗೆಂದೆಂಬ
ನುಡಿಯ ಲಾಲಿಸಿದನೆಲ್ಲ | ಸಿಂಹೇಂದ್ರನು
ಕಡಿದು ಘರ್ಜಿಸಿದ ಹಲ್ಲ | ಆರ್ಭಟಿಸಲು
ಕಡಲು ಕದಡಿದೆಲ್ಲ | ಸೊಕ್ಕಿರೆ ಕಂಡು
ಕಿಡಿಗಣ್ಣ ಶರಭಾವತಾರವಾದುದನೆಲ್ಲ ||

ದ್ವಿತಶಿರ ಕೊಕ್ಕು ರೆಕ್ಕೆಗಳು ದ್ವಿಚರಣವು
ದ್ವಿತಕೋಟಿ ಸೋಮಪ್ರಕಾಶದ ದೌಂಷ್ಟ್ರವ
ಹುತ ಪೆರ್ಚಿ ಪೊಗೆಗುಂದಿದಂತಾರು ನೇತ್ರವು
ಹಸ್ತ ಸಾವಿರ ಖಡ್ಗ ಹಲಗೆ ಕಮಾನವು
ಅತ್ಯುಗ್ರ ಕೋಫದಿಂದಾರ್ಭಟಿಸಲು ಬಹು
ಕ್ಷಿತಿಯ ತಳೆದ ಶೇಷದಂತೆ ನಡುಗಿದವು
ಕೃತನ ಶಿರದ ಮೇಲೆ ಬಂದು ಬಂದೆರಗುತ
ಗತಿಗೆಡಿಸುತಲೆತ್ತಿ ಹೊಡೆವುತ್ತ ಬಡಿವುತ್ತ
ಧೃತಿಗುಂದಲೊಡಲ ಕೋರೆಗಳಿಂದ ಸೀಳುತ್ತ
ರಕ್ತದೋಕುಳಿಯಾಡಿದ | ಆರ್ಭಟಿಸುತ್ತ
ಶತಕೋಟಿಯಲಿ ಕೊಂದನು | ನೃಸಿಂಹನು
ನುತಿಸಿ ಬಿನ್ನೈಸಿದನು | ಮರವೆಯಿಂದ
ಮತಿಗೆಟ್ಟು ನುಡಿದೆ ನಾನು | ತಪ್ಪೆನ್ನದು
ಪ್ರತಿಪಾಲಿಸಯ್ಯ ನೀನು | ಕಂಠೀರವಾ
ಕೃತಿಯ ತಳೆದು ನೊಂದೆನು | ಶಿರವು ಚರ್ಮ
ಗತವಾಗದಂತೆ ನೀವೇ ಧರಿಸೆಂದನು ||

ಅವನ ಶಿರವ ಘರಿಘರಿಲೆನೆ ಪೊಡೆದನು
ಅವನ ಚರ್ಮವ ಸರ್ರ‍ಸರ್ರ‍ನೆ ಸೀಳ್ದನು
ಅವನ ಜನ್ಮವನು ಸಂಹರಿಸಿ ತಿರುಗಿದನು
ಅವನ ಖಟ್ಟಾಂಗ ಕಪಾಲವೆಂಬೆರಡನು
ಅವಸೆಯೊಳೈತಂದು ಅಭವಗೊಪ್ಪಿಸಿದನು
ಶಿವನಂಘ್ರಿಕಮಲಕ್ಕೆ ಶರಭನೊಂದಿಸಿದನು
ಕುವರನ ನೋಡಿ ಕೊಂಡಾಡಿ ವಿಶ್ವೇಶನು
ಕೈವಲ್ಯಪುರದ ಪಟ್ಟವನೊಲಿದಿತ್ತನು
ಅವನ ಶಿರವ ವೀರಭದ್ರನಿಗಿತ್ತನು
ಅವನ ಚರ್ಮವನು ಕಪರ್ದಿ ಧರಿಸಿದನು
ಭವದೂರನಿಂತೆಂದನು | ಚತುರ್ದಶ
ಭುವನದೊಲ್ಲಭನು ನೀನು | ನಿನ್ನನು ಮೀರಿ
ದವರ ಸಂಹರಿಸೆಂದನು | ಶರಣು ಹೋಗೆ
ತವೆ ರಕ್ಷಿಸುವದೆಂದನು | ದನುಜವಿಂಡು
ಶವದಂತೆ ಕಂದಿಕುಂದಲು ಕೃಪೆಯಿತ್ತನು ||

ವರ ನಂದಿ ಭೃಂಗಿ ತುಂಬುರರು ನಾರಂದರು
ಗರುಡರು ಸಿದ್ಧಕಿನ್ನರರು ಕಿಂಪುರಷರು
ಸುರರು ಗಂಧರ್ವ ನಾಗಾಸುರ ಯಕ್ಷರು
ಹರಿಯಜರಿಂದ್ರ ಗೀರ್ವಾಣಮುನಿಂದ್ರರು
ಹರನ ಓಲಗದೊಳೊಪ್ಪಿರೆ ರುದ್ರಭದ್ರರು
ಹರಿನೇತ್ರ ವರುಣನೇತ್ರರು ಸೋಮನೇತ್ರರು
ಕರಿಮುಖ ಕಂಠೀರ ಹವಿ ಮೇಘ ಮುಖದೋರು
ನೆರೆದಿಹ ರುದ್ರರಸಂಖ್ಯಾತ ಪ್ರಮಥರು
ತರತರದೊಳು ಮಹಾ ಮನು ಮುನಿ ದನುಜರು
ಶರಭೇಂದ್ರ ಜಯ ಜಯ ಎನುತ ನುತಿಸುವರು
ಗಿರಿಜೇಶ ನಗುತಿರ್ದನು | ಆ ಸಮಯಕೆ
ವರಮುನಿ ನಾರಂದರು | ಭೂವಳಯವ
ಚರಿಸಿ ಒಯ್ಯನೆ ಬಂದನು | ಪಿನಾಕಿಯ
ಚರಣಕ್ಕೆರಗಿ ನಿಂದನು | ಮರ್ತ್ಯದೊಳಾರು
ಹರಭಕ್ತರಿಲ್ಲೆಂದನು | ಶ್ರವಣಮಯ
ನೆರೆ ಪೆರ್ಚಿತೆನಲು ವೀರೇಶನಿಂತೆಂದನು ||

೧೦

ಶಿವನ ಶ್ರೀಚರಣವಿಡಿದು ವೀರಭದ್ರನು
ಅವನಿಯೊಳಗೆ ವೀರಶೈವಾಚಾರವ ನಾನು
ಹವಣಿಸಿ ಬಹೆನೆಂದು ಹರಗೆ ವಂದಿಸಿದನು
ಕುವರನ ನೋಡಿ ಕಾಮಾರಿಯಿಂತೆಂದನು
ಭುವನದೊಳಾರು ದರುಶನಂಗಳಿರವನು
ವಿವರಗೊಳ್ಳದೆ ವೀರಶೈವದೊಳಿರು ನೀನು
ಶ್ರವಣ – ಚಾರ್ವಾಕ – ವೈಷ್ಣವ – ವೇದ ವಿಪ್ರರು
ನೆವದಿ ನಿಂದಿಸಲು ಸಂಹರಿಸಿ ಮಹಿಮೆಯನು
ಅವರಿಗೆ ತೋರಿ ಪಲ್ಗಿರಿಯೆ ಪಾಲಿಸು ನೀನು
ಶಿವಲಿಂಗ ವಸ್ತ್ರವ ತೊಳೆವ ಕಾಯಕವಿನ್ನು
ನಿಮಗೆ ಸಲುವುದೆಂದನು | ಪಿಪ್ಪಲಿಗೆಯ
ಶಿವಭಕ್ತನೊರ್ವ ತಾನು | ಮುಕ್ತಿಯನೀವ
ಕುವರನ ಬಯಸಿಹನು | ನಿರ್ಜನಿತದ
ಕುವರ ನೀನಾಗೆಂದನು | ನಾನೇ ಬಂದು
ಶಿವದೀಕ್ಷಾತ್ರಯವೀವೆನು | ಹೋಗೆನಲಾಗೆ
ಹವಿನೇತ್ರ ವೀರೇಶನಿಳೆಗೆ ಬಂದೊಗೆದನು ||

೧೧

ಧಾರಿಣಿಗಧಿಕ ಹಿಪ್ಪಲಿಗೆಯ ಪುರದೊಳು
ಕ್ರೂರ ಜೈನರು ವಿಪ್ರ ವೈಷ್ಣವಾದಿಗಳೊಳು
ವೀರಶೈವಾಚಾರಕ್ರಿಯಾ ದಂಪತಿಗಳು
ಆರಿಗೂ ವೇದ್ಯವಾಗದ ಭಕ್ತಿರತಿಯೊಳು
ಮಾರಹರನ ಜ್ಞಾನ ಜಂಗಮಾರ್ಚನೆಯೊಳು
ಮೀರಿ ಪಾದಾಂಬು ಪ್ರಸಾದದಿಂಗಡಲೊಳು
ಸಾರಿ ಸಂತೋಷದೊಳಿರೆ ಸತಿಪತಿಗಳು
ತೋರಿತು ಸ್ವಪ್ನವೊಂದಿರುಳೆ ಕುವರನೊಳು
ನಾರಿ ಪುರುಷರತಿ ಹರ್ಷವಾರಿಧಿಯೊಳು
ಬಾರೆಂದು ಕರದಪ್ಪುತಿರೆ ನಿದ್ರೆ ತಿಳಿಯಲು
ನೀರೆ ಸುಯ್ಯನೆ ಸುಯಿದು | ಯೌವನಗಳು
ಜೋರಿಟ್ಟು ತೊರೆದವೆಂದು | ಈ ಸ್ವಪ್ವವ
ನಾರೊಡನುಸುರಲೆಂದು | ವಿನೋದಕ್ಕೆ
ಮಾರಾರಿ ತಾನೆ ಬಂದು | ಎಂದೆನುತಲಿ
ನಾರಿ ರಮಣಗೆ ಪೇಳಿದಳಿದೇನು ಸೋಜಿಗವೆಂದು ||

೧೨

ಮುಂದುಗೊಂಡಿತು ಪುತ್ರಮೋಹವು ಮನದಾಗೆ
ಹೊಂದಿತು ಗರ್ಭಸೂಚನೆ ಭಕ್ತಪತ್ನಿಗೆ
ಮುಂದಣ ಮೊಲೆ ಹಸುರೇರಿ ಕಪ್ಪುಗಳಾಗೆ
ಹಿಂದಣ ಜಘನವು ಹೆಚ್ಚಿ ಬೆಳೆದು ಮಿಗೆ
ಇಂದಿಗಿಪ್ಪತ್ತೊಂದು ದಿವಸದ ಬಸುರಿಗೆ
ಒಂದಡಿಯಿಡಲಾರದಂತೆ ಭಾರಣೆಯಾಗೆ
ಬಂದು ಮಂಚವನೇರಲೊಡನೆ ಸುಪ್ತಿಗಳಾಗೆ
ಅಂದು ಶರಭನಿಷ್ಟಲಿಂಗದೊಳುದಿಸುಗೆ
ಮುಂದಿರಲೆಚ್ಚತ್ತು ಕಾಣುತ್ತ ಕುರುಡಗೆ
ಬಂದವು ನಯನವೆಂಬಂತೆ ದರಿದ್ರಂಗೆ
ಬಂದಂತೆ ಸೌಭಾಗ್ಯವು | ಕಾರುಣ್ಯದ
ಸಿಂಧು ಚಿತ್ತೈಸೆ ನೀವು | ಸಂಜೀವನ
ವಿಂದು ದೊರಕಿತು ನಾವು | ಸದ್ಗತಿಯೊಳ
ಗಿಂದು ನಿರ್ವಯಲಾದೆವು | ಕಲಿದೇವಯ್ಯ
ಬಂದಿತ್ತ ತ್ರೈದೀಕ್ಷೆಯ | ಭಸಿತ ಮಂತ್ರ
ದಿಂದ ಲಿಂಗವ ಧರಿಸಲ್ಕೆ ಕಣ್ದೆರದನು ||

೧೩

ಅಸಮಾಕ್ಷ ಗುರು ಮಾಚಿದೇವಯ್ಯನೆಂದೆಂಬ
ಪೆಸರಿಟ್ಟು ಪೋಗಲು ಪುತ್ರ ಭಕ್ತಿಯ ಕೊಂಬ
ಒಸೆದು ಲಿಂಗಕೆ ಮೊಲೆವಾಲ ಸವಿಯನುಂಬ
ರಸೆಯೊಳು ಹೊಡಕರಿಸುತಲೆದ್ದು ನಡೆಗೊಂಬ
ಭಸಿತ ರುದ್ರಾಕ್ಷಿ ಮಂತ್ರಂಗಳ ನೆಲೆಗೊಂಬ
ಮಿಶ್ರಿಸಿ ಕಲಿದೇವ ಗುರುವೆ ಶರಣು ಎಂಬ
ರಸಿಕ ಜಂಗಮದ ಪಾದಾಂಬು ಶೇಷವ ಕೊಂಬ
ವಸ್ತ್ರವ ತೊಳೆವ ಕಾಯಕವನು ಕೈಕೊಂಬ
ಮಿಸುಪ ಭಕ್ತಿಗೆ ವೀರಶೈವವೆ ಘನವೆಂಬ
ಶಸ್ತ್ರವ ಪಿಡಿದಿಹನು | ಶ್ರವಣರನು
ಕಸವೆಂದು ಲೆಕ್ಕಿಸನು | ಶರಣರೆಂಬ
ಮಿಸುನಿಯ ಹಳಿವರನು | ಸೀಳುವೆನೆಂದು
ಎಸೆವ ಪೆಂಡೆಯನಿಟ್ಟನು | ಶಿವನ ಭಕ್ತಿ
ಸಸಿಯ ಪಾಲಿಸುತಿಹನು | ಚಿದ್ಬೆಳಗಿನ
ಪಸರದೊಳಗೆ ಪರಂಜ್ಯೋತಿಯಾಗಿರುವನು ||

೧೪

ಇತ್ತ ಮಾಚಯ್ಯಗಳಿರೆ ಮೇರು ಪುರದೊಳು
ನಿತ್ಯ ನಿರ್ಮಾಯ ಗಣನಾಥ ಚಿತ್ತೈಸಲು
ಭೃತ್ಯರು ಹರಿಯಜ ಸುರರು ಕೊಂಡಾಡಲು
ಕರ್ತೃ ನಿರ್ಮಾಯ ಮಾಯ ಕೋಳಾಹಳನೆನ್ನಲು
ಶೈತ್ಯಾಚಲನ ಸುತೆ ಕನಲುತೆ ಮನದೊಳು
ಎತ್ತಣವನು ಇವಗೇಕಿಂತ ನುತಿಗಳು
ಪತ್ರಗಮನ ಪದ್ಮ ಸುತನಿಂದ್ರ ಮುನಿಗಳು
ತೊತ್ತಾಗಿಹರು ಎನ್ನ ಮಾಯೆಯ ಬಲೆಯೊಳು
ಚಿತ್ತ ಪಲ್ಲಟವಾಗದವರ ಹೇಳನ್ನೊಳು
ಮೃತ್ಯುಂಜಯನ ಕೂಡೆ ಮುನಿದು ವಾದಿಸಿದಳು
ಅತ್ಯಂತ ನಿರ್ಮಾಯನು | ನೀನಾರೆಂದು
ನೇತ್ರದೆರೆದು ನೋಡನು | ತಿಳಿಯಲುಂಟೆ
ಮರ್ತ್ಯಕ್ಕೆ ಹೋಗೆಂದನು | ಆ ಸೂತ್ರ ನಿ
ಮಿತ್ತ ಬಸವರಾಜನು | ಪ್ರಮಥಗಣ
ಮೊತ್ತ ಸಹಿತ ಬಂದನು | ಕಲ್ಯಾಣ ಮ
ಹತ್ವದ ಶರಧಿ ಸಂಭ್ರಮದ ಮಹಿಮರನು ||

೧೫

ಗಿರಿಜೆ ನಿರ್ಮಾಯನ ಕಾರಣದಿಂದ ಶರಣರು
ಧರೆಗೆ ಬಸವರಾಜನೊಡಗೂಡಿ ಬಂದರು
ಹರಿದುದ್ಭವಿಸಿ ಮೂಲಸೂತ್ರವನರಿವರು
ನೆರದು ಭಕ್ತಿಯ ನೆಲೆವನೆಯ ಸಾಧಿಸುವರು
ಗುರು ಚರ ಪರವಿಷ್ಟಲಿಂಗದ ಭಜಕರು
ಪರಮ ಪಾದೋದಕ ಪ್ರಸಾದ ಸನ್ನಿಹಿತರು
ಗುರುಕರುಣದ ವ್ರತಶೀಲ ಸಂಪನ್ನರು
ಚರಲಿಂಗ ದಾಸೋಹ ಚತುರ ಸಂಪನ್ನರು
ಚರಲಿಂಗ ದಾಸೋಹ ಚತುರ ಕಲಾಪರು
ಪರವಾದಿಗಳ ಶಿರವರಿವ ನಿಸ್ಸೀಮರು
ಪರದೈವಗಳನು ಸುಟ್ಟುರುಹುವ ಮಹಿಮರು
ನಿರತ ನಿರ್ಮಲಕಾಯರು | ದಂಡೇಶನ
ಹರಣ ಕಿನ್ನರದೇವರು ಮಾಚಯ್ಯನ
ಶರೀರವೆಂದೆನಿಸಿದರು | ಬಾಚರಸರೆ
ಸಿರಸವಾಗಿರುತಿಹರು | ಅಪ್ಪಣ್ಣನೆ
ಪರಮ ಚೇತನವಾದರು | ನೇತ್ರವೆ ಸಿದ್ಧ
ಮರುಳ ಶಂಕರ ಮಹಾಗಣಸ್ತೋಮವೆಸದರು ||

೧೬

ಧರೆಗೆ ಮಂಗಳವಾಡವೆನಿಪ ಕಲ್ಯಾಣದ
ಪರಮ ಶ್ರೀಗುರು ದಂಡಾಧೀಶ್ವರ ಮುಂತಾದ
ಶರಣ ಸದ್ಭಕ್ತರ ಲಿಂಗಾಂಗ ವಸ್ತ್ರವ
ಕರಿದು ಹಸುರು ಕೆಂಪು ಬಿಳಿದ ಪ್ರಕ್ಷಾಲಿಸಿ
ನಿರತ ಚಿದ್ಬೆಳಗಿನ ಬಿಳಿದನೆಚ್ಚರಿಸಿದ
ಬರೆ ಬೀದಿಯೊಳು ವೀರ ಜಯಘಂಟೆಗಳ ನಾದ
ನರಭವಿಗಳು ತೊಲ ತೊಲಗೆಂದು ಸಾರಿದ
ದುರುಳ ಶ್ರವಣ ಬರಲಿರಿದೆತ್ತಿ ಚಿಮ್ಮಿದ
ಇರಿದ ಪೆಣನ ಕಾಣದೆಲ್ಲರು ಬೆದರಿದ
ಪರಿಯನೆಲ್ಲವ ಮಂಚಿ ಪ್ರಾರ್ಥಿಸಿ ಪೇಳಿದ
ಪೊರೆದ ಪಲ್ಗಡಿದೆದ್ದನು | ಬಿಜ್ಜಳ ಮಹೀ
ವರೆಗೆ ಬಿನ್ನೈಸಿದನು | ಬಸವನೆಂಬ
ದುರುಳಗೆ ಮಣಿಹವನು | ಪಾಲಿಸಿಕೊಂಡು
ಬರಿ ಹುಂಬನಾದೆ ನೀನು | ಬೀದಿಗಳೊಳು
ಬರುತಿರ್ದ ಶ್ರವಣರನು | ತನ್ನಗಸನು
ಇರಿದನೇತಕೆ ವಿಚಾರಿಸು ರಾಯ ಎಂದನು ||

೧೭

ಉರಿ ಭುಗಿಲೆನುತ ಬಿಜ್ಜಳ ಮಹಾರಾಯನು
ಪಿರಿದು ಘರ್ಜಿಸಿ ದಂಡಾಧೀಶನ ನುಡಿದನು
ಧರಣೀಶ ನೀನಾದ ಬಳಿಕ ನಾವಿನ್ನೇನು
ಇರಿಯಬಹುದೆ ರಾಜವೀಥಿಯೊಳಗಸನು
ತರಿದು ಶೂಲಕೆ ಹಾಕಲೆಂದು ಬೆಸಸಿದನು
ಅರಸಿಗೆ ಹಿತವ ಮಂಚಣ್ಣ ನಿಂತೆಂದನು
ಕುರುಬ ಕುಂಬಾರ ಸಾಲಿಗ ಸಮಗಾರನು
ಕೊರಮ ಡೋಹರ ಮಾದಾರೆ ಮೇದಾರನು
ಸುರೆ ಮೀನು ಮಾಂಸ ಲಕ್ಕಡಿ ಹುಲ್ಲು ಹೊರೆಯನು
ಪುರದೊಳು ಮಾರಿ ಹೊಟ್ಟೆಯ ಮಾರುವರನು
ಉರುವ ಹಾದರ ಕನ್ನಗಳವ ಮಾಡುವರನು
ಶರಣರೆಂದೆನಲೇತಕೆ | ಇಂತವರನು
ನೆರಹಿಕೊಂಡಿರಲೇತಕೆ | ಮುಂದಿವರಿಂದ
ಕರ ಕೇಡು ಕಲ್ಯಾಣಕೆ | ಅಗಸನೆಂಬ
ದುರುಳಗೆ ಶೂಲವೇಕೆ | ಅವನ ಹಿಂಡಿ
ತರಿಸಿ ಗಜದ ಮುಂದಕೆ | ಹಾಕುವದೆಂಬ
ತ್ವರಿತವನರಿದು ಬಸವನೆಂದಾನದಕೆ ||

೧೮

ಎಲೆ ರಾಯ ಹಮ್ಮು ಬಿಮ್ಮಿನ ಮಾತ ಮರೆ ನೀನು
ಛಲದಂಕ ವೀರಾವತಾರ ಮಾಚಯ್ಯನು
ತೊಲಗದವರನಿರಿದಲ್ಲದೆ ಮಾಣನು
ಬಲುಹ ಮಾಡಲು ನಿನ್ನ ಭಂಗಗೊಳಿಸುವನು
ಸುಲಭನಲ್ಲೆನಲು ಭೂವರ ಕೋಪವಾದನು
ಹಳೆಯರುವೆಯ ತೊಳದೊಡಲ ರಕ್ಷಿಸುವನು
ಬಲುಗೈಯ್ಯನೆಂದಳವಾಡಬಹುದೆ ನೀನು
ತೊಲಗು ನಿನ್ನಯ ಪ್ರಧಾನತ್ವವೇ ಸಾಕಿನ್ನು
ಸುಲಿಸುವೆ ನಿನ್ನಸಗನ ಬೆನ್ನ ಬಾರನು
ಎಳಸುವೆನಾನೆಯ ಕಾಲಿನೊಳೆಂದನು
ಬಲುಹ ಭಂಗಿಸುವೆನೀಗ | ಅವನ ಬಡ
ದೆಳತನ್ನಿರೆಲವೊ ಬೇಗ | ಎಂದೆನೆ ಭಟ
ರುಲಿವುತ್ತ ಪೋದರಾಗ | ಮಾಚಯ್ಯನ
ಬಳಸಿ ಬಂಧಿಸಿದರಾಗ | ನಿನ್ನನ್ನು ಪಿಡಿ
ದೆಳದೊಯ್ಯ ಬಂದೆವೀಗ | ಬಿಜ್ಜಳನಾಣೆ
ತೊಳೆಯದಿರಸಗ ಬಾರೆನೆ ಘರ್ಜಿಸಿದನಾಗ ||

೧೯

ಬಿಡದೆ ಬಂಧಿಸಿ ಕಟ್ಟು ಕುಟ್ಟೆಂಬ ನುಡಿಗೇಳಿ
ಪಿಡಿದ ಖಡ್ಗವನೆತ್ತಿ ಚಿಮ್ಮಿಸೆ ಬಿರುಗಾಳಿ
ಹೊಡೆದಂತಾಗಲು ಚರರೆಲ್ಲ ಕಣ್ಗೆಡುತಲಿ
ಸಿಡಿಲೆರಗಿದ ಮೃಗದಂತೆ ಬಳಲುತಲಿ
ನಡುಗುತ ಬಂದು ಬಿಜ್ಜಳಂಗೆ ಬಿನನವಿಸಲು
ನುಡಿ ಬಾರದಿರೆ ಮೆಲ್ಲ ಮೆಲ್ಲನುಸುರುತಲಿ
ಒಡೆಯ ನೀ ಕೇಳು ನಿನ್ನವರ ಬುದ್ಧಿಗಳಲ್ಲಿ
ಕೆಡುವದೊಳ್ಳಿತೆ ನಿನಗೇಕೆ ಭಕ್ತರ ತಳ್ಳಿ
ಸಿಡಿಲ ಖಡ್ಗವ ಪಿಡಿದವರುಂಟೆ ನರರಲ್ಲಿ
ಮಡಿವಾಳ ವೀರಾವತಾರನೆಂದೆನ್ನಲು
ಒಡೆ ಬಾಯ ನೂಕೆಂದನು | ಕೊಂಡೆಯರೆಲ್ಲ
ಬಿಡಬಾರದಸಗನನು | ಮೈಲಿಗೆಯನು
ತಡೆಯದೆ ತರಿಸು ನೀನು | ಆಜ್ಞೆಗಳಿಂದ
ಒಡನೆ ನಾ ತೊಳಸುವೆನು | ಎಂದೆನಲಾಗ
ಪೊಡವಿಪನಹುದೆಂದನು | ಪಟ್ಟಣದೊಳು
ಹೊಡೆದು ಡಂಗುರವ ಮೈಲಿಗೆಯ ನೆರಹಿದನು ||

೨೦

ತರಿಸಿದ ತನ್ನರಮನೆಯ ಕಪ್ಪಡವನು
ಪಿರಿದಪ್ಪ ನವಗಜ ಸೋಪು ಜಲ್ಲಿಗಳನು
ಬರಹ ಪೊಂಬಟ್ಟೆ ಪೀತಾಂಬ್ರ ಶಾಲುಗಳನು
ಸೆರಗಿನ ಹಳದಿ ಹಸುರು ಕೆಂಪು ಕರಿದನು
ಚರರು ಬೇಗದೊಳೊಡನೊಡನೆ ಹೊರೆಗಳನು
ಕರಿ ಒಂಟೆ ಸಗಟು ಸಾವಿರಕೆ ಹೇರಿಸಿದನು
ಅರಸು ನಗುತ ನಡೆಯೆಂದು ಕಳುಹಿದನು
ದೊರೆ ಮಾಂಡಲೀಕರ ಮಾನ್ಯರ ಹಿತರನು
ಕರಸಿ ಕಪ್ಪಡದ ಕಾವಲು ನಿಮ್ಮದೆಂದನು
ತರುಣಿಯರುಟ್ಟ ಸೀರೆಗಳಲ್ಲದಿನ್ನೇನು
ಅರುವೆಗಳಿಲ್ಲೆನಲು | ಭೂವರ ಬೇಗ
ತ್ವರಿತದಿ ತೊಳಸೆನ್ನಲು | ರಾಜಾಜ್ಞೆಯ
ನಿರತ ಕಟ್ಟಳೆ ಕಾವಲು | ಬೀದಿಗಳೊಳು
ತೆರಹಿಲ್ಲದೆಡೆಯಾಡಲು | ಕುಜನರೆಲ್ಲ
ಪರಿಹಾಸ್ಯವನು ಮಾಡಲು | ಭೋರನೆ ಬಂದು
ಶರಣನ ಮುಂದೆ ರಾಸಿಯನೊಟ್ಟುತ್ತಿರಲು ||

೨೧

ಧರಣಿಪಾಲಕನ ಸೀರೆಗಳೊಂದು ದೆಸೆಯಲ್ಲು
ಹೊರೆ ಸಾಲುಗಟ್ಟಬಹುದು ನಾಲ್ಕು ದೆಸೆಯಲ್ಲು
ಕರದರು ಭಟರು ಮಾಚಯ್ಯ ಬಾರೆನುತ
ಅರಸು ಕಳುಹಿದ ಸೀರೆಗಲನೀಕ್ಷಣದಲ್ಲಿ
ವಿರಸವಿಲ್ಲದೆ ಬೇಗ ತೊಳೆ ಎಂದು ಪೇಳಲು
ಬರಿ ಹುಂಬಭವಿಗಳೊಸ್ತ್ರವ ಮುಟ್ಟೆವೆನ್ನಲು
ಉರುಬಿ ನಾಲ್ದೆಸೆಯೊಳೆಲ್ಲನು ಕೂಗಿ ಕರೆಯಲು
ವರವೀರ ಪಣೆಗಣ್ಣ ತೆರೆಯಲಾಕ್ಷಣದಲು
ಪುರ ಛಿಣಿಛಿಟಿಲೆಂಬಂತೆ ಕಪ್ಪಡವೆಲ್ಲ
ಉರಿಗಾರೋಗಣೆಯಾಗುತೆ | ಬಿಜ್ಜಳನಿಗೆ
ಪಿರಿದೊಸಗೆಯ ಪೇಳುತೆ | ಕಾರ್ಬೊಗೆ ಬಂದು
ಅರಮನೆಯೊಳು ತುಂಬುತೆ | ಕಲ್ಯಾಣದ
ಪುರಕೆ ಪಾವಕಗೊಂಡಂತೆ | ಕಾವಳವಾಗೆ
ಚರರುಗಳೆಯ್ದಿ ಬಿಜ್ಜಳಗೆ ಬಿನ್ನೈಸುತ್ತೆ ||

೨೨

ಎಂತು ಪೇಳಲಿ ರಾಯ ಮಡಿವಾಳನಿರವನು
ಅಂತಕರಿಪು ತಾನೆ ಮರ್ತ್ಯದೊಳೊಗೆದನು
ಕಂತುಮರ್ದನ ಕಾಯವಿಡಿದು ತಾ ಬಂದನು
ನೀಂ ತಿಳಿಯದೆ ಮತಿ ಮಸಳಿಸಿತಿನ್ನೇನು
ಮುಂಚೆ ಬಂಡಿಯೊಳರಮನೆಯ ದುಕುಲವನು
ದಂತಿಯ ಹೇರಿನ ನವಗಜವೆಂಟನು
ಇಂತೀ ಕಲ್ಯಾಣದ ಪ್ರಜೆಯ ಮೈಲಿಗೆಯನು
ನಿಂತು ಚರರು ಬೇಗಲೊಗೆಯನ್ನು ಶರಣನು
ದಂತವ ತಾಂಟಿಸಿ ಪಣೆಗಣ್ಣ ತೆರೆದನು
ತಂತ್ರದೊಳನಲಗೆ ತೃಪ್ತಿ ಬಡಿಸಿದನು
ಸಂತತ ವಸ್ತ್ರವ ಶಿಖಿಯೊಳು ತೊಳೆದನು
ಭ್ರಾಂತೆಂಬ ಗಳಿಗೆಯನು | ಗಟ್ಟಿಸಲೆಂದು
ಅಂತಕಗರುಹಿದನು | ಗಟ್ಟಿಸಲೆಂದು
ಅಂತಕಗರುಹಿದನು | ವಾದಿಗಳೆಂಬ
ಜಂತುಜೀವರುಗಳನು | ಸಂಹರಿಸುತ
ಹಂತವನಾಡುವನು | ಎಂದೆನೆ ರಾಯ
ಸಂತೋಷವಳಿದಿಹನು | ಆ ಸಮಯದೊ
ಳಿಂತೆಂದು ಮೆಚ್ಚಿ ರಾಯಗೆ ಪೇಳಿದನುವನು ||

೨೩

ಸೃಷ್ಟೀಶ ಬಿನ್ನವ ಕೇಳು ಮೈಲಿಗೆಯನು
ಸುಟ್ಟಂತೆ ತೋರ್ಪ ಮಹೇಂದ್ರ ಜಾಲಗಳನು
ವೃಷ್ಟಿಯ ತರಿಸಿ ವಾರಿಧಿಯ ಬರಿಸಿದನು
ದೃಷ್ಟದಂಜನಯಂತ್ರ ವಶ್ಯ ಗಾರುಡಿಗನು
ಬಿಟ್ಟೆನಾದಡೆ ಮಡಿವಾಳನ ಮಗ ನಾನಜ
ಸುಟ್ಟ ವಸ್ತ್ರದ ಬೂದಿ ಕಲ್ಲು ಮುಳ್ಳುಗಳನು
ಹೊಟ್ಟೆಯ ಸೀಳಿಸಿ ಹುಲ್ಲ ತುಂಬಿಸುವೆನು
ಕೊಟ್ಟು ಕಳುಹು ಮಂಡಲೀಕರ ಮಾನ್ಯರ ನೀನು
ಪಟ್ಟದ ಗಜ ನೂರು ಘಟಲಕ್ಷ ಹಯವನು
ಕಟ್ಟಿ ಬಂಧಿಸಿ ತಹೆನೆನಲು ನೃಪಾಲನು
ಅಷ್ಟಕ್ಕೊಡಂಬಟ್ಟನು | ವಜೀರರ
ದಿಟ್ಟರ ಕಳುಹಿದನು | ಅವನ ತಂದು
ಕೊಟ್ಟೊಡೆ ಮೆಚ್ಚುವೆನು | ಪೋಗೆನೆ ಬಲ
ವೆಷ್ಟೆಂದು ಹೇಳುವೆನು | ಕೆಂಧೂಳಿನ
ದಟ್ಟಣೆಯೊಳಗೆ ಭಾನು | ಸಿಲ್ಕಿದನೆಂದು
ಪಟ್ಟಣ ಗದಗದಿಸುವ ಭಯಂಕರವನು ||

೨೪

ಪೊಡೆವ ಢಮಾಯಿ ಭೇರಿಗಳು ತಂಬಟೆ ಡೋಲು
ಬಿಡದೆ ಚೀರುವ ರಣಗಾಳೆಯ ರಭಸದೊಳು
ಒಡನೆ ಹೂಂಕರಿಸಿ ಹಮ್ಮೀರ ಮಾನ್ಯರುಗಳು
ನಡೆದರು ರಾಯ ರಾವುತರು ನಾಲ್ದೆಸೆಯೊಳು
ಎಡೆಬಿಡವಿಲ್ಲದೆ ಕರಿಯು ತುರಗ ಡಾಲು
ಒಡನೆ ಕಾಲಾಳು ತುಪಾಕ ಹರಿಗೆಗಳು
ಪಿಡಿದ ಕಮಾನವು ಸರಳು ಸಬಳಗಳು
ಮಡಿವಾಳನೆಂಬ ಶಿಖಿಯ ಮೇಲೆ ತೃಣಗಳು
ಕೆಡೆವಂತೆ ಕವಿದುಕೊಂಡಿರೆ ತರಗೆಲೆಗಳು
ಸಿಡಿಲೊಳು ಸೆಣಸುವುದೆಂತು ಜೀವರುಗಳು
ಕೆಡಬೇಡ ತಿರುಗೆನ್ನಲು | ನಾಲ್ದೆಸೆಯೊಳು
ಹಿಡಿ ಹಿಡಿ ತಿವಿಯೆನ್ನಲು | ಮುರಿಗೆಯನ
ಪಿಡಿದು ಘರ್ಜಿಸಿ ನಿಲ್ಲಲು | ಸರ್ಪಳಿಗೊಟ್ಟು
ಕಡಿದು ಹಸ್ತಿಯ ನೂಂಕಲು | ಆನೆಯ ಕರ
ವಿಡಿದು ನೆಲಕೆ ಪೊಯ್ಯಲು | ಜಜ್ಜರಿಯಾಗೆ
ಕಿಡಿ ಕಿಡಿ ಮಸಗಿ ಶಸ್ತ್ರದ ವೃಷ್ಟಿಗರೆಯಲು ||

೨೫

ಹರನ ಪಟ್ಟದ ಹಸ್ತಿ, ಮಡಿವಾಳದೇವನು
ಕರಿತುರಗವನೆಲ್ಲ ಹುರಿದ ಮಹಿಮೆಯನು
ಚರನೋರ್ವನೆಯ್ದಿ ಭೂವರನೊಳುಸುರಿದನು
ಅರಸೆ ಲಾಲಿಪುದೆನೆ ಸೇನೆ ಮಾರ್ಬಲವನು
ಸರಳ ಮಳೆಗಳಿಂದ ಸಂಹಾರಗೈದನು
ಮರಳಿ ಬಾರದು ದಂಡು ಮರೆಯ ಮಾತಿನ್ನೇನು
ಕರಟಿ ಪಂಚಾಸ್ಯನ ಕೆಣಕಿ ಬಾಳುವವೇನು
ಅರಗನಲನ ಸೋಂಕಿದಂತಾಗೆ ರಾಯನು
ಹರಣವರತು ಕಂದಿ ಕುಂದಿ ಕರಗಿದನು
ಕರುಣಿ ಶ್ರೀಗುರು ದಂಡಾಧೀಶ ದಯಾಳ್ದನು
ಧರಣೀಶಗಿಂತೆಂದನು | ಲಾಲಿಸಿ ಕೇಳು
ಶರಣರ ಮಹಿಮೆಯನು | ಕಿನ್ನರಬ್ರಹ್ಮ
ಹರಶಬ್ದಗೆಯಿಸಿದನು | ಸೊಡ್ಡಳದೇವ
ಕರಗನೆ ಪ್ರತಿಮೆಯನು | ನಂದಿಯ ಕಿತ್ತು
ಮೆರಸನೆ ಬ್ರಹ್ಮಯ್ಯನು | ಆದಯ್ಯ ಸಂ
ಹರಿಸನೆ ಶ್ರವಣ ಪಡೆಯನೆಂದು ಪೇಳ್ದನು ||

೨೬

ಧರೆಯನೊಡೆದು ಪ್ರಳಯವನೆಯ್ದಿ ಸುವರುಂಟು
ಶರಧಿಸಪ್ತಗಳನೊಕ್ಕುಡಿತೆ ಮಾಡುವರುಂಟು
ಗಿರಿಗಳೆಲ್ಲವನಣ್ಣೆಕಲ್ಲನಾಡುವರುಂಟು
ಸುರಕೋಟಿ ಬ್ರಹ್ಮಾಂಡಗಳ ಮಾಲಾಧರರುಂಟು
ಹರಿಯ ಮುಂದಲೆವಿಡಿದರಿದ ಮಹಿಮರುಂಟು
ಪರಮೇಷ್ಠಿ ಮೃಗವಾಗೆ ಶಿರವರಿದವರುಂಟು
ಮರೆ ಹೊಗೆ ಕಾಯ್ದು ಕಾಮಿತವನೀವವರುಂಟು
ಶರಣರೊಡನೆ ಸೆಣಸಲು ಬಂತು ನಿನಗಿಷ್ಟು
ಕೊರಚ ಕೊಂಡೆಯರ ಗೊಟ್ಟಿಗಲನೆಲ್ಲವ ಬಿಟ್ಟು
ಮರುಳೆ ನೀ ಹೋಗಿ ಮಾಚಯ್ಯಗೆ ಮನವಿಟ್ಟು
ಶರಣೆಂದು ಬದುಕೆಂದನು | ಶವಕೆ ಪ್ರಾಣ
ದೊರದಂತೆ ಬಿಜ್ಜಳನು | ದಂಡೇಶನ
ಚರಣಕ್ಕೆ ನಮಿಸಿದನು | ನಾನಪರಾಧಿ
ಗುರುವೆ ನೀ ಸಲಹೆಂದನು | ಮಾಚಯ್ಯನ
ಚರಣವ ತೋರೆಂದನು | ಚಿದ್ಭಸಿತವ
ಧರಿಸು ಮಾಚಯ್ಯನೆಡೆಗೆ ಪೋಪವೆಂದನು ||

೨೭

ಅರಸು ಬಿಜ್ಜಳ ದಂಡಾಧೀಶನೊಡನೆ ಬಂದು
ಶರಣು ಹೊಕ್ಕನು ಮಾಚಿದೇವ ತಪ್ಪಿದೆನೆಂದು
ಗುರುವೆ ರಕ್ಷಿಸು ಕೃಪಾತರುವೆ ಭಕ್ತರ ಬಂಧು
ಮರೆಹೊಕ್ಕೆನೆನಲು ಮಾಚಯ್ಯ ಕರುಣಿಸೆಂದು
ಉರಿದ ಕಪ್ಪಡವಾನೆ ಸೇನೆ ಮಾರ್ಬಲವನು
ನೆರವಂತೆ ನೆರಹಿ ಪಾಲಿಸಿ ಕಳುಹಿದನಂದು
ಸುರರು ಸಂಕುಳಕೆ ಮಾಚಯ್ಯ ಮುಕುರವೆಂದು
ಕರುಣಿ ಶ್ರೀಗುರುಬಸವೇಶನೆ ಪಿತನೆಂದು
ಭರತವಲ್ಲಮಪ್ರಭು ಚೆನ್ನಬಸವ ಬಂದು
ಗುರು ಚರ ಪರವಿಷ್ಟ ಪ್ರಾಣ ಭಾವದಿ ನಿಂದು
ನಿರುತ ನಿಷ್ಕಲರೂಪರ | ಕಾರುಣ್ಯ ಸಾ
ಗರ ವೀರಮಾಚಯ್ಯನ | ಮಹಿಮೆಯನು
ಬರದೋದಿ ಪಠಿಸುವನ ಬಂಧನ ಭವ
ದುರಿತ ದುಷ್ಕೃತ ನಾಶನ | ಮುಕ್ತ್ಯಂಗನೆ
ಬೆರದ ನಿರ್ಮಲಕಾಯನ | ಕರಾಂಬುಜ
ದೆರೆಯ ಸದ್ಗುರು ಶಾಂತನೊಳು ಲೀಯವಾದನು ||

ಕಂದ :

ಕರುಣಾಬ್ದಿ ಮಡಿವಾಳಯ್ಯನ
ಚರಣವನಾವಗ ಕೀರ್ತಿನೆಗೆಯ್ವುತ್ತಿರಲೂ
ಸ್ಮರ ಕಾಲ ಕರ್ಮವಳಿವುದು
ಗುರುವರ್ಯನಂಘ್ರಿಮಂದಿರವಾಸದೊಳಿಹರೂ ||

ನಾಗಿದೇವರು ನಿರೂಪಿಸಿದ ಮಡಿವಾಳಯ್ಯನ ತಾರಾವಳಿ ಸಮಾಪ್ತಿ
ಮಂಗಳಮಹಾ ಶ್ರೀ ಶ್ರೀ ಶ್ರೀ ||