*ನಿತ್ಯ ನಿರಂಜನವಹ ವಸ್ತುವ ಸ್ಥಲದಲ್ಲಿ ಹಿಡಿದು
ಮತ್ತೆ ಮನ ಭಾವ ಕರಣವ ಲಿಂಗದೊಳು
ವರ್ತಿಸಲವನೆ ನಿಜಮುಕ್ತಾ ||  || ೧ ||

ಆದಿ ಮಹಲಿಂಗವ ಭೇದಿಸಿ ಕರದಲ್ಲಿ
ಭೇದಗುಣವಳಿದು ನಿಜಲಿಂಗದಲ್ಲಿ ಮನ
ವೇಧಿಸಬಲ್ಲಡವ ಸುಖಿ ||  || ೨ ||

ಪರಮಪಾವನ ಲಿಂಗ ಕರದೊಳಗಿರುತಿರೆ
ಸ್ಥಿರ ಬುದ್ಧಿಯಿಂದ ಮನವನಾ ಲಿಂಗದೊಳ
ಗಿರಿಸಬಲ್ಲವನೆ ನಿಜಸುಖಿ ||  || ೩ ||

ಬ್ರಹ್ಮರಂಧ್ರದೊಳಿಪ್ಪ ನಿರ್ಮಲ ಬೆಳಗುವ
ನೊಮ್ಮೆ ಕರದೊಳಗೆ ನೆಲಸಿರೆ ಮನಭಾವ
ನೆಮ್ಮಿರಬಲ್ಲಡವ ನಿತ್ಯ ||  || ೪ ||

ಕಂಗಳೊಳಗಣ ಬೆಳಗು ಹಿಂಗದೆ ಕರದೊಳಗೆ
ಮಂಗಳಾಮನವನದರೊಳಗೆ ಬೆರಸಿ ತ
ನ್ನಂಗವಳಿದವನೆ ನಿಜಮುಕ್ತಾ ||  || ೫ ||

ಹೃದಯ ಕಮಲದೊಳಿಪ್ಪ ಸದಮಲ ಬೆಳಗುವ
ಪದವಿ ಕರದೊಳಗೆ ನೆಲಸಿರೆ ಮನಭಾವ
ಹುದುಗಿ ನಿಲಲವನು ನಿಜಮುಕ್ತಾ ||  || ೬ ||

ಆದಿವ್ಯಾಧಿಗಳೆಂಬ ಬಾಧೆಯನತಿಗಳೆದು
ಸಾಧಿಸಿ ಲಿಂಗ ನಿಜತತ್ವದಲ್ಲಿ ಮನ |
ವೇಧಿಸಬಲ್ಲಡದ ಸುಖಿ ||  || ೭ ||

ಭಾವ ದೃಷ್ಟಿಗೆ ತೋರ್ಪ ಕೇವಲ ಲಿಂಗ ತಾ
ನಾವಾಗ ಕರದೊಳಿರುತಿರೆ ಮನವಲ್ಲಿ
ತಿವಿಕೊಂಡಿರ್ದೊಡವ ಸುಖಿ ||  || ೮ ||

ಮನದ ಮಧ್ಯದೊಳಿಪ್ಪ ಅನುಪಮ ಲಿಂಗ ತಾ
ಘನ ಕರಸ್ಥಲದೊಳಿರುತಿರೆ ಅದರಲ್ಲಿ
ನೆನಹು ನಿಂದಿರ್ದಡವ ಸುಖಿ ||  || ೯ ||

ಮನಭಾವ ಕರಣದೊಳು ಬೆಳಗಿ ತೋರುವ ಲಿಂಗ
ಅನುವಾಗಿ ಕರದೊಳಿರುತಿರೆ ಹಿಂದಣ
ಜಿನುಗು ಗುಣವಳಿಯಲವ ಮುಕ್ತಾ ||  || ೧೦ ||

ಭೃಕುಟಿ ಸ್ಥಾನದೊಳಿಪ್ಪ ಸ್ಫಟಿಕ ವರ್ಣದ ಜ್ಯೋತಿ
ದಿಟವಾಗಿ ಕರದೊಳಿರುತಿರೆ ಮನವ ಸಂ
ಪುಟವ ಮಾಡುವನೆ ನಿಜಸುಖಿ ||  || ೧೧ ||

ಅಷ್ಟದಳಕಮಲದುತ್ಕ್ರುಷ್ಟದ ಬೆಳಗು ತಾ
ನಿಷ್ಟೆಯಿಂ ಕರದೊಳಿರುತಿರೆ ಅಲ್ಲಿ ಮನ
ಕಟ್ಟುವಡೆದವನೆ ನಿಜಸುಖಿ ||  || ೧೨ ||

ಕಾಮಕ್ರೋಧಂಗಳ ಸೀಮೆಯನತಿಗಳದು
ಆ ಮಹಾಲಿಂಗದೊಳು ಮನ ಭಾವವ
ತೀವಿಕೊಂಡಿರ್ದಡವ ಸುಖಿ ||  || ೧೩ ||

ಲಿಂಗಕರದೊಳಗಿರೆ ಭಂಗ ಗುಣಂಗಳ
ಹಂಗು ಹರಿಯಳಿದು ನಿಜಲಿಂಗದಲ್ಲಿ ಮನ
ತೊಂಗಿರಲವನು ನಿಜಮುಕ್ತಾ ||  || ೧೪ ||

ನಿತ್ಯನೇಕೋರುದ್ರನದ್ವಿತೀಯನೆಂದು ತಾ
ಶ್ರುತ್ಯಾರ್ಥವಂದುತಿಹ ಲಿಂಗ ಕರದೊಳಿರೆ
ಚಿತ್ತ ಮನ ಬೆರೆಸಲವ ಸುಖಿ ||  || ೧೫ ||

ಆ ಲಿಂಗದೊಳಗೆ ಮನ ತೀವಿಯಿದ್ದಡೆ ಸಾಕು
ದೇವ ಪದವದಕೆ ಸರಿಯಲ್ಲ ಅವನು ನಿ
ರಾವಲಂಬಿತನು ನಿಜಸುಖಿ ||  || ೧೬ ||

ಕರ್ಮಕುಟಿಲಂಗಳ ವರ್ಮವನತಿಗಳದು
ತನ್ನ ಮನ ಲಿಂಗದೊಳಗಳವಟ್ಟಡೆ
ಬ್ರಹ್ಮ ಪದವದಕೆ ಸರಿಯಲ್ಲ ||  || ೧೭ ||

ಅತ್ತಲಿತ್ತಲು ತಿರುಗಿ ಹೊತ್ತುಗಳೆಯಲಿಬೇಡ
ಚಿತ್ತ ಲಿಂಗದಲಿ ನೆಲೆಗೊಂಡ ಮಹಿಮಂಗೆ
ಮುಕ್ತಿ ಬೇರುಂಟೆ ಶಿವಶಿವಾ ||  || ೧೮ ||

ಹಸಿವು ತೃಷೆ ವಿಷಯವನತಿಗಳದು ಲಿಂಗದಲಿ
ವಶಮಾಡಿ ಮನವ ಭಾವಕರಣಂಗಳ
ಬೆಸಸಿಕೊಂಡಿರ್ದಡವ ಸುಖಿ ||  || ೧೯ ||

ಹಸ್ತದಾ ಲಿಂಗದಲಿ ಚಿತ್ತ ಮನ ಭಾವವ
ವರ್ತಿಸ ಬಲ್ಲಡಾತಂಗೆ ನಿಜಮುಕ್ತಿ
ಯತ್ತಳ ಶುದ್ಧಿ ಒಲವಿಲ್ಲಾ ||  || ೨೦ ||

ಮನವು ನಿಜಲಿಂಗದಾ ಅನುವನರಿದಡೆ ಸಾಕು
ಪುನಃ ಬೇರೆ ಮತ್ತೆಯೆನಲಿಲ್ಲ ಆತಂಗೆ
ಅನುಪಮ ಮುಕ್ತಿಯದು ತಾನೆ ||  || ೨೧ ||

ಮುಕ್ತಿಗಿಕ್ತಿಗಳೆಂಬ ಯುಕ್ತಿಯನತಿಗಳದು
ಚಿತ್ತ ಲಿಂಗದಲಿ ನೆಲೆಗೊಂಡಾತಂಗೆ
ಮತ್ತೆ ಪುನಃ ಉಂಟೆ ಶಿವಶಿವಾ ||  || ೨೨ ||

ಜ್ಞಾನವೊಂದುಳ್ಳಡೆ ಮೌನಗೊಂಡಿರಬೇಡ
ಹೀನ ಕರಣಾದಿ ಗುಣಗಳನರಿದು
ಶಿವಜ್ಞಾನಿಯಾಗಿಪ್ಪಡವೆ ಸುಖಿ ||  || ೨೩ ||

ಚಿತ್ತ ಮನ ಭಾವದಲಿ ಅಚ್ಚೊತ್ತಿದಾ ಬೆಳಗು
ಹಸ್ತದೊಳು ನೆಲಸಿಯಿರೆ ಕರಣ ಗುಣಗಳನು
ಮೆಟ್ಟಿ ನಿಂದವನೆ ನಿಜಸುಖಿ ||  || ೨೪ ||

ಮನವು ಕರಣಾದಿಗಳಿಗನುಕೂಲಮಾಗಿಕ್ಕು
ಮನವನಾಲಿಂಗದೊಳಗಿರಿಸಲಾತಂಗೆ
ಕರಣ ಕರ್ಮಂಗಳಿನಿತಿಲ್ಲಾ ||  || ೨೫ ||

ಮುಕ್ತಿಯ ಬಯಸುವ ಯುಕ್ತಿಯೊಂದುಳ್ಳಡೆ
ಹಸ್ತಲಿಂಗದೊಳು ಮನಭಾವವ
ನ್ಯಸ್ತ ಮಾಡುವನೆ ನಿಜಮುಕ್ತಾ ||  || ೨೬ ||

ಹಸ್ತದ ಲಿಂಗದಲಿ ಚಿತ್ತವನೊಂದಿಸಿ
ಮತ್ತೆ ಎರಡಳಿದು ಕರಣಾದಿ ಗುಣಗಳ
ಮೆಟ್ಟಿ ನಿಂದವನೆ ನಿಜಮುಕ್ತಾ ||  || ೨೭ ||

ಮುಕ್ತಿಯ ಬಯಸಿ ಸುತ್ತಿಕೊಳಲಲು ಬೇಡ
ಹಸ್ತದೊಳಗಿಪ್ಪ ನಿಜಲಿಂಗದೊಳು ಮನವ
ಸಿಕ್ಕಿಸಲು ತಾನೆ ನಿಜಮುಕ್ತಾ ||  || ೨೮ ||

ಪಾಪಪುಣ್ಯಗಳೆಂಬ ಲೇಪವೊಂದಿನಿತಿಲ್ಲ
ದಾ ಪರಮ ಲಿಂಗದೊಳು ಮನಭಾವವ
ವಾಸ ಮಾಡುವನೆ ನಿಜಮುಕ್ತಾ ||  || ೨೯ ||

ಹಸಿವು ತೃಷೆ ನಿದ್ರೆಯಾ ದೆಸೆಗಳೆಲ್ಲವ ಕೆಡಿಸಿ
ವಶ ಮಾಡಿ ಮನವ ನಿಜಲಿಂಗದಲ್ಲಿ ವಂ
ದಿಸಿ ನೋಡುತಿಹನೆ ನಿಜಮುಕ್ತಾ ||  || ೩೦ ||

ಅಸನ ವ್ಯಸನಾದಿಗಳ ದೆಸೆಯೊಳಿಪ್ಪ ಮನವ
ಹಸಗೆಡಿಸಿ ಮತ್ತೆ ನಿಜಲಿಂಗ ಮಾರ್ಗದಲಿ
ವಶಮಾಡಬಲ್ಲಡವ ಮುಕ್ತಾ ||  || ೩೧ ||

ಆಗುಹೋಗೆಂಬಾರ ನೀಗಿ ನಿಜಲಿಂಗದಾ
ಯೋಗವನರಿದು ಆ ಲಿಂಗದೊಳು ಮನವ
ಸಾಗಿಸಬಲ್ಲಡವ ಮುಕ್ತಾ ||  || ೩೨ ||

ಅದ್ವೈತಂಗಳ ನುಡಿದು ಉದ್ದೇಶಿಯಾಗದೆ
ಸಾರ್ದಲಿಂಗದಲಿ ಮನಭಾವ ಕರಣಗಳ
ಅದ್ದಿರಬಲ್ಲಡವ ಮುಕ್ತಾ ||  || ೩೩ ||

ಹಾಳು ಮಾತನೆ ನುಡಿದು ಕಾಲಕರ್ಮಂಗಳ
ಜಾಲದೊಳು ಸಿಕ್ಕಿ ಕೆಡದೆ ಶಿವಲಿಂಗದಾ
ಮೇಳದೊಳಗಿಪ್ಪನವ ಮುಕ್ತಾ ||  || ೩೪ ||

ಆದ್ಯಂತ ರಹಿತವೆಂದೋದುವ ವೇದವಾ
ಹಾದಿಯನರಿದು ನಿಜಲಿಂಗದಲ್ಲಿ ಮನ
ವೇಧಿಸಬಲ್ಲಡವ ಮುಕ್ತಾ ||  || ೩೫ ||

ಅಂಗದೊಳಗಣ ಆತ್ಮ ಸಂಗವಾದ ಬೆಳಗು
ಅಂಗೈಯೊಳಿರಲು ಮನ ಭಾವ ಕರಣವ
ಸಂಗ ಮಾಡುವನೆ ನಿಜಮುಕ್ತಾ          || ೩೬ ||

ಪಾವನತರಮಪ್ಪ ಕೇವಲ ಲಿಂಗ ತಾ
ತೀವಿ ಕರದಲ್ಲಿಯಿರುತಿರೆ ಹರಣ ಮನ
ಸಲಿಸಬಲ್ಲಡವನೆ ನಿಜಮುಕ್ತಾ ||  || ೩೭ ||

ನಿಗಮ ಶಾಸ್ತ್ರಾದಿಗಳ ಬಗೆಗಗೋಚರವಾದ
ಅಗಣಿತ ಲಿಂಗ ಕರದೊಳಿರೆ ಅದರಲ್ಲಿ
ಸುಗುಣಿಯಾದವನೆ ನಿಜಮುಕ್ತಾ ||  || ೩೮ ||

ಪರಮಲಿಂಗದಿ ತನ್ನ ಹರಣವಂದಿದ ಬಳಿಕ
ಕರಣಾದಿ ಗುಣವು ಕೆಲಸಾರ್ಗು ಆತ ತಾ
ಮರಣವೆ ಗೆಲಿದ ನಿಜಮುಕ್ತಾ ||  || ೩೯ ||

ಲಿಂಗಮಧ್ಯದಿ ಮನ ಹಿಂಗದಿರ್ದಡೆ ಸಾಕು
ಅಂಗಗುಣವಿಲ್ಲ ಇಹಪರವೆಂಬವರ
ಹಂಗು ಹರಿಯಳಿದಾ ನಿಜಮುಕ್ತಾ ||  || ೪೦ ||

ಕಾಕು ಕುಟಿಲಂಗಳ ವ್ಯಾಕುಲವಳಿದು ಶಿವ
ನಾ ಕರಸ್ಥಲದಿ ಪಿಡಿದು ಮನ ಭಾವವ
ಏಕ ಮಾಡುವನೆ ನಿಜಮುಕ್ತಾ ||  || ೪೧ ||

ನಡೆ ನುಡಿವೊಂದಾಗಿ ಕೆಡಿಸಿ ಕರಣಾದಿಯ
ಹುಡಿಗುಟ್ಟಿ ಕಳದು ನಿಜಲಿಂಗದಲ್ಲಿ ಮನ
ವಡಗಿರಲವನು ನಿಜಮುಕ್ತಾ ||  || ೪೨ ||

ಉತುಪತಿ ಸ್ಥಿತಿಲಯಾಹುತಿಯಾಗಿ ಹೋಹುದು
ಅತಿಶಯ ಲಿಂಗದೊಳು ಮನಭಾವವ
ವಸಿಸಿಕೊಂಡವನೆ ನಿಜಮುಕ್ತಾ ||  || ೪೩ ||

ಆಕಾರವಿಲ್ಲದ ನಿರಾಕಾರ ಲಿಂಗದ
ಸಾಕಾರದಲ್ಲಿ ಹರಣಮನ ಭಾವವ
ಏಕ ಮಾಡುವನೆ ನಿಜಮುಕ್ತಾ ||  || ೪೪ ||

ಎಲ್ಲಿಯಿಲ್ಲದ ಬೆಳಗು ಸಲ್ಲಲಿತವಾಗಿ ತ
ನ್ನಲ್ಲಿ ಬೆರಸಿರಲು ಹರಣ ಮನ ಭಾವವ
ನಲ್ಲಿಯಿರಿಸುವನೆ ನಿಜಮುಕ್ತಾ ||  || ೪೫ ||

ಎತ್ತನೋಡಲು ಶೂನ್ಯತತ್ವವೆನಿಸುವ ಬೆಳಗು
ಹಸ್ತದೊಳಗಿರಲು ಮನಭಾವ ಕರಣವ
ಚ್ಚೊತ್ತಿ ನಿಂದಿರ್ದಡವ ಮುಕ್ತಾ ||  || ೪೬ ||

ನೆಲೆಗೆಟ್ಟ ಶೂನ್ಯದೊಳನುಪಮ ಲಿಂಗವದು
ಬಲವಾಗಿ ಕರದೊಳಿರುತಿರಲದರಲ್ಲಿ
ನೆಲೆಯಾಗಿ ನಿಂದಡವ ಮುಕ್ತಾ ||  || ೪೭ ||

ಅತ್ಯತಿಷ್ಟಾರ್ದ್ದಶಾಂಗುಲವಪ್ಪ ಲಿಂಗವದು
ಹಸ್ತದೊಳಿರಲು ಮನ ಭಾವ ಕರಣದಲಿ
ನ್ಯಸ್ತ ಮಾಡುವನೆ ನಿಜಮುಕ್ತಾ ||  || ೪೮ ||

ವೇದ ಪುರಾಣಗಳು ಓದಿ ಅರಸುತಿಪ್ಪ
ನಾದಿ ಲಿಂಗದಲಿ ಮನ ಭಾವ ಕರಣಗಳ
ವೇಧಿಸಬಲ್ಲಡವ ಮುಕ್ತಾ ||  || ೪೯ ||

ಶಾಸ್ತ್ರದ ಶುದ್ಧಿಗೆ ಸ್ವಾತ್ಮಾತ್ಮ ಸದಾಲಿಂಗ
ಆಶ್ರಯವಾಗಿ ಕರದೊಳಿರೆ ಮನವಲ್ಲಿ
ಆಶ್ರೈಸಬಲ್ಲಡವ ಮುಕ್ತಾ ||  || ೫೦ ||

ಸುತ್ತಿ ತೊಳಲಲುಬೇಡ ಮತ್ತೆ ಅರಸಲುಬೇಡ
ಹಸ್ತದೊಳಿಪ್ಪ ನಿಜಲಿಂಗದೊಳು ಮನ
ನ್ಯಸ್ತವಾಗಿರ್ದಡವ ಮುಕ್ತಾ ||  || ೫೧ ||

ಹೆಣ್ಣು ಹೊನ್ನು ಮಣ್ಣಿಂದ ಬಣ್ಣ ಬಡುತಿಪ್ಪವರು
ತನ್ನ ನಿಜವರಿಯರದರಿಂದ ಲಿಂಗದಲಿ
ತನ್ನ ಮನವಿರಿಸಲವ ಮುಕ್ತಾ ||  || ೫೨ ||

[ಅಂಗ]ಕರಣಾದಿಗುಣಗಳನೆಣಿಕೆಗೊಳ್ಳದೆ
ಲಿಂಗದೆಣಿಕೆಯೊಳಿರಲು ಅನುಪಮ ಮುಕ್ತಿ ತಾ
ಕ್ಷಣದೊಳು ತೋರ್ಕು ನಿಜಸುಖಿ ||  || ೫೩ ||

ಲಿಂಗದೊಳು ಮನ ಭಾವ ತೊಂಗಿರಲಾತಂಗೆ
ಅಂಗಗುಣವಿಲ್ಲ ನಿಜಮುಕ್ತಿಯೆಂಬುದು
ಮುಂದೆ ಬಂದಿಕ್ಕು ಶಿವಶಿವಾ ||  || ೫೪ ||

ಕರಣಾದಿ ಗುಣಗಳನೆಣಿಕೆಗೊಳ್ಳದೆ ಲಿಂಗ
ದೆಣಿಕೆಯೊಳೀಗ ಲಿಂಗದೊಳು ಭಾವವ
ಅನುಭವಿಸುವನೆ ನಿಜಮುಕ್ತಾ ||  || ೫೫ ||

ಜಪದ ಜಂಜಡದಲ್ಲಿ ಗತಿಗೆಡದೆ ಲಿಂಗವೆ
ಗತಿಯೆಂದು ತಿಳಿದು ಮನಭಾವ ಕರಣದಲಿ
ಪತಿಕರಿಸಲಾತ ನಿಜಮುಕ್ತಾ ||  || ೫೬ ||

ಕೊಟ್ಟು ಕೊಂಡಿಹೆನೆಂಬ ಕಷ್ಟಗುಣಗಳನಳಿದು
ನಿಷ್ಠೆಯಿಂ ಲಿಂಗದೊಳು ಮನಭಾವವ
ಕಟ್ಟುಗೊಳಿಸುವನೆ ನಿಜಮುಕ್ತಾ ||  || ೫೭ ||

ಸಂದು ಸಂಶಯಗಳ ದಂದುಗಂಗಳ ಕಳದು
ನಿಂದ ನಿಜದಲ್ಲಿ ಮನಭಾವ ಕರಣವಾ
ನಂದವೆಯಿದುವನೆ ನಿಜಮುಕ್ತಾ ||  || ೫೮ ||

ಹಲವು ಚಲನೆಯಲ್ಲಿ ಹೊಲಬುಗೆಟ್ಟಿಹ ಮನದ
ಬಿನುಗು ಗುಣವಳಿದು ಅನುವಾದ ಮಹಾ
ಲಿಂಗದಲಿ ನೆನಹು ನಿಂದವನೆ ನಿಜಮುಕ್ತಾ ||  || ೫೯ ||

ಅಂಗೈಯೊಳಗಣ ಬೆಳಗನಂಗೀಕರಿಸಿ ಮನದ
ಭಂಗಗುಣವಳಿದು ನಿಜವಾಗಿರ್ದುದರಲ್ಲಿ
ಹಂಗು ಹರಿದವನೆ ನಿಜಮುಕ್ತಾ ||  || ೬೦ ||

ಹುಟ್ಟುಹೊಂದುಗಳೆಂಬ ಕಷ್ಟಗುಣಗಳನಳಿದು
ಇಷ್ಟಲಿಂಗದಲಿ ಮನಭಾವ ಕರಣಂಗಳು
ನಟ್ಟಿರಬಲ್ಲಡವ ಮುಕ್ತಾ ||  || ೬೧ ||

ಮಂಗಳ ಬೆಳಗು ತನ್ನಂಗೈಯ್ಯೊಳಿತಿರೆ
ಕಂಗಳ ಮುಚ್ಚಿ ಹಲುಬದೆ ಮನ ಶಿವ
ಲಿಂಗದೊಳಿರ್ದಡವ ಮುಕ್ತಾ ||  || ೬೨ ||

ಬೆಳಗ ನೋಡಿಹನೆಂದು ಕಳವಳಿಸಿ ಕೆಡಬೇಡ
ಬೆಳಗು ಕರದೊಳಗೆ ಇರುತಿರೆ ಅಲ್ಲಿ ಮನ
ವಳಿದಿರ್ದಡಾತ ನಿಜಮುಕ್ತಾ ||  || ೬೩ ||

ಬೆಳಗು ಕಳೆ ಮೊಳೆಗೆಂಬ ಬಣಗು ಗುಣವನೆ ಕಳದು
ಬೆಳಗು ಕರದೊಳಗೆ ನೆಲಸಿರೆ ಮನವದರೊ
ಳಳವಟ್ಟಡವನೆ ನಿಜಸುಖಿ ||  || ೬೪ ||

ನೋಟಬೇಟಗಳೆಂಬ ಆಟವನತಿಗಳದು
ಮಾಟ ಮಹಾಲಿಂಗದೊಳಗಿರಲು ಮರಣದ
ಕೋಟಲೆಯಿಲ್ಲ ನಿಜಮುಕ್ತಾ ||  || ೬೫ ||

ಪರಮ ಲಿಂಗವು ತನ್ನ ಕರದ ಮಧ್ಯದೊಳಿರೆ
ಹರವರಿಯ ಮನವನದರೊಳಗಿರಿಸಲು
ಕರಣಗುಣವಿಲ್ಲ ನಿಜಮುಕ್ತಾ ||  || ೬೬ ||

ಆತ್ಮಾಂತರಾತ್ಮ ಪರಮಾತ್ಮನೆನಿಸುವ ಬೆಳಗು
ಸ್ವಾತಂತ್ರವಾಗಿ ಕರದೊಳಿರೆ ಮನವಲ್ಲಿ
ಸ್ವಾತ್ಮಿಸಿ ನಿಂದಡವ ಸುಖಿ ||  || ೬೭ ||

ಇಷ್ಟಲಿಂಗವೆನಿಪ್ಪ ಕಷ್ಟನುಡಿಗಳನಳಿದು
ಮತ್ತೆ ಮನಭಾವ ಹರಣವ ಬೆಳಗಿನೊಳು
ಕಟ್ಟುವಡದವನೆ ನಿಜಮುಕ್ತಾ ||  || ೬೮ ||

ಅನುಭಾವವೆಂದೆಂಬ ಬಿನುಗು ಮಾತುಗಳೆಲ್ಲ
ಅನುವಲ್ಲವೆಂದು ಮನವು ಶಿವಲಿಂಗದ
ನೆನಹಿನಲಿರಲಾತ ನಿಜಮುಕ್ತಾ ||  || ೬೯ ||

ಅಂಗೈಯ್ಯೊಳಿಪ್ಪ ಶಿವಲಿಂಗದೊಳು ಮನಭಾವ
ತೊಂಗಿರಲಾತ ನಿಜಸುಖದಲ್ಲಿ ಅ
ಭಂಗನಾಗಿಹನು ಶಿವಶಿವಾ ||  || ೭೦ ||

ಮರದ ಮಥನದೊಳಗ್ನಿ ಹೊರಗೆ ರೂಪಾದಂತೆ
ಹರಣದೊಳಿಪ್ಪ ಶಿವಲಿಂಗ ಕರದೊಳಿರೆ
ಮನವಲ್ಲಿ ನಿಂದಡವ ಮುಕ್ತಾ ||  || ೭೧ ||

ಅತ್ಯನುಪಮ ಬೆಳಗು ಹಸ್ತದಲ್ಲಿರುತಿರೆ
ಮತ್ತೆ ಉಂಟೆಂದು ಬಳಲದೆ ಅದರಲ್ಲಿ
ಚಿತ್ತವಿಕ್ಕುವನೆ ನಿಜಮುಕ್ತಾ ||  || ೭೨ ||

ಸಾರಾಯ ಸುಖಗಳನಾರೈಯ್ಯಲೇತಕೆ
ಸಾರಿರ್ದ ಲಿಂಗದೊಳು ಮನಭಾವವ
ಸಲಿಸಬಲ್ಲಡವ ಮುಕ್ತಾ ||  || ೭೩ ||

ಸಾರೆದೂರಗಳೆಂದು ಹೋರುತಿರಲೇತಕ್ಕೆ
ಓರಂತೆ ಲಿಂಗದೊಳು ಮನಭಾವವ
ಸಲಿಸಬಲ್ಲಡವ ಮುಕ್ತಾ ||  || ೭೪ ||

ಅಜನಕಲ್ಪನೆಗಳ ತ್ಯಜಿಸಬೇಕೆಂಬುದನು
ನಿಜಲಿಂಗದಲ್ಲಿ ಮನಭಾವನೆಯಿದಲು
ತ್ರಿಜಗದೊಳಾತ ನಿಜಸುಖಿ ||  || ೭೫ ||

ಲಿಂಗದಲಿ ಮನ ಭಾವ ಹಿಂಗದಿರ್ದಡೆ ಸಾಕು ತ
ನ್ನಂಗ ಗುಣವಳಿದು ನಿಜಸುಖದಲ್ಲಿ ಭೂ
ಭಂಗನಾಗಿಕ್ಕು ಶಿವಶಿವಾ ||  || ೭೬ ||

ಮನಭಾವ ಕರಣಗಳ ಘನಲಿಂಗದಲ್ಲಿರಿಸಿ
ತನುವಿನಿಚ್ಚೆಗಳ ಮರೆದಡೆ ನಿಜಮುಕ್ತಿ
ಯನು ಕಾಣಲಕ್ಕು ಶಿವಶಿವಾ ||  || ೭೭ ||

ಅಂಗಗುಣಂಗಳ ಸಂಗವನತಿಗಳೆದು
ಲಿಂಗಸಂಗದಲಿ ಮನವಿರ್ದಡಾತಂಗೆ
ಸಂದಿಲ್ಲದಿರ್ಪ ನಿಜಸುಖಿ ||  || ೭೮ ||

ಅಂಗಲಿಂಗವೆಂಬ ಹಂಗು ಹರಿಗಳನಳಿದು
ಅಂಗ ಮನಭಾವ ಕರಕಮಲದೊಳಗಿಪ್ಪ
ಲಿಂಗದೊಳಿರಲು ನಿಜಸುಖಿ ||  || ೭೯ ||

ಪ್ರಾಣದೊಳು ಲಿಂಗವ ಕಾಣಬೇಕೆಂದೆಂಬ
ಕ್ಷೀಣ ಗುಣವಳಿದು ನಿಜಲಿಂಗದೊಳು ಮನ
ಹೂಣಿ ಹೊಕ್ಕವನೆ ನಿಜಮುಕ್ತಾ ||  || ೮೦ ||

ಭಾವಲಿಂಗವು ಉಂಬ ಭ್ರಮಿತರ ಮಾತುಗಳ
ಹೇವರಿಸಿ ಕಳದು ನಿಜಲಿಂಗದೊಳು ಭಾವ
ತೀವಿಕೊಂಡಿರಲು ನಿಜಮುಕ್ತಾ ||  || ೮೧ ||

ಅಂಗಪ್ರಾಣ ಭಾವ ಅಂಗೈಯ್ಯ ಲಿಂಗದೊಳು
ಹಿಂಗದೆಯಿರಲು ಕಾಲ ಕರ್ಮಾದಿಗಳ
ಹಂಗು ಹರಿಯಿಲ್ಲ ನಿಜಮುಕ್ತಾ ||  || ೮೨ ||

ಅಂಗಮನ ಪ್ರಾಣದೊಳು ಸಂಗವಾದ ಬೆಳಗು
ಅಂಗೈಯ್ಯೊಳಿರಲು ಅದರಲ್ಲಿ ಭಾವ ಕರ
ಣಂಗಳಿರಿಸುವವನೆ ನಿಜಮುಕ್ತಾ ||  || ೮೩ ||

ಆಕಾಶದೊಳು ಮಿಂಚು ಸಾಕಾರವಾದಂತೆ
ಆತ್ಮನೊಳಗೆಯಿಪ್ಪ ಶಿವಲಿಂಗದಾ
ಆಕಾರ ಮನದೊಳಿರೆ ನಿಜ ಮುಕ್ತಾ ||  || ೮೪ ||

ಬ್ರಹ್ಮರಂಧ್ರದಿ ಬೆಳಗುವ ವರ್ಮವನರಿದಡೆ
ಕರ್ಮಕ್ರೀಯಿಂದ ಅರಸದೆ ಲಿಂಗವ
ನೆಮ್ಮಿರಬಲ್ಲಡದು ತಾನೆ ||  || ೮೫ ||

ಅದು ತಾನೆ ಬೆಳಗು ಮತ್ತದು ಮಹಾಲಿಂಗ ಮ
ತ್ತದನು ಕರದಲ್ಲಿ ನೆಲೆಗೊಳಿಸಿ ಮನ ಭಾವ
ಹುದುಗಿರಬಲ್ಲಡನ ಮುಕ್ತಾ ||  || ೮೬ ||

ಬ್ರಹ್ಮರಂಧ್ರದ ಬೆಳಗು ತನ್ನ ಕರದೊಳಗಿರಲು
ಇನ್ನು ಉಂಟೆಂದು ಬಳಲದೆ ಮನವಲ್ಲಿ
ಸನ್ನಹಿತನಾದಡವ ಮುಕ್ತಾ ||  || ೮೭ ||

ಬೆಳಗು ಬೇರುಂಟೆಂದು ಹಲುಬಿ ಹಂಬಲಿಸದೆ
ಬೆಳಗು ಕರದೊಳಗೆ ನೆಲಸಿರೆ ಅದರಲ್ಲಿ
ಮನವು ನಿಂದವನೆ ನಿಜಮುಕ್ತಾ ||  || ೮೮ ||

ಭಾವದೊಳಗಿಪ್ಪ ನಿರಾವಲಂಬದ ಬೆಳಗು
ತೀವಿ ಕರದಲ್ಲಿ ಇರುತಿರೆ ಮನವಲ್ಲಿ
ಸೇವಿಸಬಲ್ಲಡವ ಮುಕ್ತಾ ||  || ೮೯ ||

ಜ್ಞಾನದೊಳಗಿರುತಿಪ್ಪ ಭಾನುಕೋಟಿಯ ಬೆಳಗು
ತೀವಿ ಕರದಲ್ಲ ಇರುತಿರೆ ಮನವಲ್ಲಿ
ಧ್ಯಾನಗೊಂಡಿರ್ದಡವ ಮುಕ್ತಾ ||  || ೯೦ ||

ಹಲವು ಕಡೆಗೆ ಹರಿವ ಕರಣಂಗಳನು ತಗೆದು
ನಿಲಿಸಿ ನಿಜಲಿಂಗದೊಳು ತನ್ನನಳಿದಂಗೆ
ಘನಮುಕ್ತಿ ತಾನೆ ನಿಜಸುಖಿ ||  || ೯೧ ||

ಒಳಗು ಹೊರಗೆಂದೆಂಬ ಕಳವಳಂಗಳನುಳಿದು
ಅಳವಟ್ಟ ಲಿಂಗದೊಳು ಮನಭಾವವ
ನೆಲೆಗೊಳಿಸಬಲ್ಲಡವ ಮುಕ್ತಾ ||  || ೯೨ ||

ಆದಿ ಶೂನ್ಯವೆನಿಪ ನಾದಸ್ವರೂಪವದು
ವೇಧಿಸಿ ಕರಣದೊಳಿರುತಿರೆ ಮನವಲ್ಲಿ
ಸಾಧಿಸಿ ತಿಳಿಯಲವ ಮುಕ್ತಾ ||  || ೯೩ ||

ಗುರುಕೊಟ್ಟ ಲಿಂಗದಲಿ ಹರಣ ಮನ ಭಾವವ
ಸ್ಥಿರವಾಗಿಯಿರಿಸಿ ಆ ಲಿಂಗದಲಿ ತನ್ನ
ಹರಣ ಗುಣವಳಿಯಲವ ಮುಕ್ತಾ ||  || ೯೪ ||

ಕೈಯ ಲಿಂಗದಿ ಮನ ಒಯ್ಯನೆ ಬೆರಸಿ ಜಗ
ದಯ್ಯನೆನಿಸುವನು ಕರಣಾದಿ ಗುಣಗಳ
ಹುಯ್ಯಲ ಗೆಲುವ ನಿಜಮುಕ್ತಾ ||  || ೯೫ ||

ಲಿಂಗವೆಂಬುದು ತನ್ನ ಅಂಗದೊಳಿರುತಿಪ್ಪ
ಮಂಗಳ ಬೆಳಗು ಕರದೊಳಿರೆ ಮನಭಾವ
ಸಂಗವಾಗಿರಲು ನಿಜಮುಕ್ತಾ ||  || ೯೬ ||

ಮುಕ್ತಿ ನಿಜಸುಖವೆಂದು ಮತ್ತೆ ಅರಸಲುಬೇಡ
ಹಸ್ತದೊಳಿಪ್ಪ ನಿಜಲಿಂಗದೊಳು ಮನ
ವಚ್ಚೊತ್ತಿಯಿರಲು ನಿಜಮುಕ್ತಾ ||  || ೯೭ ||

ಆನಂದ ಶಾಂತೇಶ ತಾನು ಕರಸ್ಥಲದಲ್ಲಿ
ಶೂನ್ಯವನುಳಿದು ನಿಜರೂಪುದೋರಿ ಮನ
ಧ್ಯಾನಿಸುತಿರಲು ನಿಜಮುಕ್ತಾ ||  || ೯೮ ||

ನಾಗಿದೇವರು ನಿರೂಪಿಸಿದ
ಲಿಂಗನಿಜ ಸ್ಥಲದ ವಚನ ಸಮಾಪ್ತಿ
ಮಂಗಳಮಹಾ ಶ್ರೀ ಶ್ರೀ ಶ್ರೀ ||

 

* ಆರಂಭದಲ್ಲಿ | “ಶ್ರೀ ಗುರು ಬಸವಲಿಂಗಾಯ ನಮಃ | ಕರಸ್ಥಲದ ನಾಗಿದೇವರು ನಿರೂಪಿಸಿದ ಲಿಂಗನಿಜಸ್ಥಲದ ವಚನ || ಯೀ ವಚನವನು ವೊನಕೆವಾಡು ತ್ರಿವಿದಿ ವರ್ನದಿಂದಲೋದುವುದು ||” ಎಂದಿದೆ.