೧. ಹುಯ್ಯೆಲೊ ಡಂಗುರವ

ಕದನಕ್ಕೆ ಮೊದಲಾದ ಬಿದನೂರು ಕೇರಿಯಲಿ ಹುಯ್ಯೆಲೊ ಡಂಗುರವ |
ಮದವೆದ್ದ ಆನೆ ಮಾವುತನೆದ್ದು ಕೊಲುತಿದೆ ಹುಯ್ಯೆಲೊ ಡಂಗುರವ ||  || ೧ ||

ಒಂದು ಕುಲದ ಮೇಲೆ ನಿಂದಾರು ಕಲಹದಿ ಹುಯ್ಯೆಲೊ ಡಂಗುರವ |
ಕಂದನು ಹತವಾಗುತೈದಾನೆ ಆ ಕ್ಷಣ ಹುಯ್ಯೆಲೊ ಡಂಗುರವ ||  || ೨ ||

ಪಟ್ಟದ ರಾಣಿಗೆ ಕೆಟ್ಟಕನಸು ಮುಂದೆ ಹುಯ್ಯೆಲೊ ಡಂಗುರವ |
ಪಟ್ಟಣಗಳೆಲ್ಲವೂ ಸುಟ್ಟು ಸೂರೆಗಳೆಂದು ಹುಯ್ಯೆಲೊ ಡಂಗುರವ ||  || ೩ ||

ಬಲ್ಲವರೊಳಗಾದ ಸೊಲ್ಲಿನ ಲಕ್ಷಣ ಹುಯ್ಯೆಲೊ ಡಂಗುರವ
ನಿಲ್ಲಲೀಸದು ಮುಂದೆ ಕಲಹ ತಪ್ಪದು ಸಿದ್ಧ ಹುಯ್ಯೆಲೊ ಡಂಗುರವ ||  || ೪ ||

ಸ್ವಾರಿಯ ತೇಜಿಯನೇರಿದ ಸಂಬಂಧ ಹುಯ್ಯೆಲೊ ಡಂಗುರವ |
ಮಾರಿ ದುರ್ಗೆಯರೆಲ್ಲ ಸೂರೆಗೆ ಬರುತಾರೆ ಹುಯ್ಯೆಲೊ ಡಂಗುರವ ||  || ೫ ||

ವ್ರತನೇಮ ಶೀಲರು ಮತಿಗೇಡಿಯಾದರು ಹುಯ್ಯೆಲೊ ಡಂಗುರವ |
ಸತಿಯಿಂದ ಕಾಂತನು ಹತವಾಗುತೈದಾನೆ ಹುಯ್ಯೆಲೊ ಡಂಗುರವ ||  || ೬ ||

ಕೊಬ್ಬಿದ ಮನುಜರಿಗೆ ಹಬ್ಬದ ದಿನ ಬಂತೊ ಹುಯ್ಯೆಲೊ ಡಂಗುರವ |
ಅಬ್ಬರದಿಂದಾರು ಲಕ್ಷವ ತರಿದಾರು ಹುಯ್ಯೆಲೊ ಡಂಗುರವ ||  || ೭ ||

ಜಂಗಮಲಿಂಗ ದೇವಾಂಗಕೆಲ್ಲಕೆ ಮುಂದೆ ಹುಯ್ಯೆಲೊ ಡಂಗುರವ |
ಭಂಗಪಡುವ ಕುರುಹು ಸಂಗಮ ಬರುತಾನೆ ಹುಯ್ಯೆಲೊ ಡಂಗುರವ ||  || ೮ ||

ವಾರುಧಿಯಿಂದೊಬ್ಬ ದಾರಿಯ ನಡಸುತ ಹುಯ್ಯೆಲೊ ಡಂಗುರವ |
ಕೇರಿಯ ಮುರಿದೆಲ್ಲ ದಾರಿಗಳಿಲ್ಲೆಂದು ಹುಯ್ಯೆಲೊ ಡಂಗುರವ ||  || ೯ ||

ಹದ್ದು ಕಾಗೆಗಳೆಲ್ಲ ಗುಡ್ಡ ಬೀಳುತಲಿವೆ ಹುಯ್ಯೆಲೊ ಡಂಗುರವ |
ಮಧ್ಯಾಹ್ನದೊಳಗೊಂದು ಪವಾಡವಾದೀತು ಹುಯ್ಯೆಲೊ ಡಂಗುರವ ||  || ೧೦ ||

ಕೊಟ್ಟ ಭಾಷೆಗೆ ತಪ್ಪಿ ಪಟ್ಟವು ಕೆಟ್ಟೀತು ಹುಯ್ಯೆಲೊ ಡಂಗುರವ |
ಪಟ್ಟಕ್ಕೆ ವೀರವಸಂತನು ಬರುತಾನೆ ಹು‌ಯ್ಯೆಲೊ ಡಂಗುರವ ||  || ೧೧ ||

ಮುಂದೆ ಬರುವ ಸುದ್ದಿಯೆಂದಿಗೆಯೆಂಬುದ ಹುಯ್ಯೆಲೊ ಡಂಗುರವ |
ಬಂದು ಸಾರಿದ ಶೃತಿ ನಿಂದ್ಯಗಳೆನಬೇಡಿ ಹುಯ್ಯೆಲೊ ಡಂಗುರವ ||  || ೧೨ ||

ಅಲ್ಲಮನೊಲವಿನ ಸೊಲ್ಲಿನ ಲೀಲೆಗೆ ಹುಯ್ಯೆಲೊ ಡಂಗುರವ |
ಅಲ್ಲಮ ಹಾ ಎಂಬ ಸೊಲ್ಲಿಗೆ ಕೊಲೆಯೆಂದು ಹುಯ್ಯೆಲೊ ಡಂಗುರವ ||  || ೧೩ ||

ಅಂಗಡಿಯೊಳಗೆಲ್ಲ ಮಂಗಳೋದಯವೆಂದು ಹುಯ್ಯೆಲೊ ಡಂಗುರವ |
ಸಂಗ ಸದ್ಗುರು ನಾಗಲಿಂಗ ಸಾರಿದನೆಂದು ಹುಯ್ಯೆಲೊ ಡಂಗುರವ ||  || ೧೪ ||

೨. ಕುರುಹು ಕೇಳಿರೋ
ವಚನ: ಮತ್ತಮೆಂತೆನೆ

ಕುರುಹ ಕೇಳಿರಣ್ಣಗಳಿರ ಕುರುಹು ಕೇಳಿರೊ |
ಗುರುವಿನರುವಿನೊಳಗೆ ಸಾರಿ ಬಂದ ಕುರುಹು ಕೇಳಿರೊ ||  || ಪಲ್ಲ ||

ಎಂಟು ದಿಕ್ಕಿನೊಳಗೆಲ್ಲ ಕುರುಹು ಕೇಳಿರೋ | ದೊಡ್ಡ
ಘಂಟೆ ನಾದ ಎಸೆವುತಿದೆ ಕುರುಹು ಕೇಳಿರೊ ||
ತುಂಟ ಪಟ್ಟದವರಿಗೆಲ್ಲ ಕುರುಹು ಕೇಳಿರೊ | ಮನೆಯ
ನಂಟ ತಾನೆ ಬರುತಲಹನೆ ಕುರುಹು ಕೇಳಿರೊ ||  || ೧ ||

ಮರ್ತ್ಯಕೆಲ್ಲ ಕರ್ತೃ ಬರುವ ಕುರುಹು ಕೇಳಿರೊ | ಜನರು
ವ್ಯರ್ಥವಾಗಿ ಹೋಗುತಾರೆ ಕುರುಹು ಕೇಳಿರೊ ||
ಸತ್ತ ಮನುಜರೆದ್ದು ಬರುವ ಕುರುಹು ಕೇಳಿರೊ | ದೊಡ್ಡ
ಎತ್ತು ಎಮ್ಮೆ ನುಂಗುತಾದೆ ಕುರುಹು ಕೇಳಿರೊ ||  || ೨ ||

ಕೇರಿಯೊಳಗೆ ಸಾರಿ ಬಂದ ಕುರುಹು ಕೇಳಿರೊ | ದೊಡ್ಡ
ಮಾರಿ ಹಬ್ಬವಾದ ಮೇಲೆ ಕುರುಹು ಕೇಳಿರೊ ||
ನಾರಿಗೊಬ್ಬ ನಲ್ಲ ಬಂದ ಕುರುಹು ಕೇಳಿರೊ | ಸೆಜ್ಜೆ
ದಾರವೆಲ್ಲ ಹರಿದು ಬಿದ್ದ ಕುರುಹು ಕೇಳಿರೊ ||  || ೩ ||

ನಟ್ಟನಡು ಇರುಳಿನೊಳು ಕುರುಹು ಕೇಳಿರೊ | ಕೇರಿ
ಸುಟ್ಟು ಸೂರೆಯಾಗುತಿದೆ ಕುರುಹು ಕೇಳಿರೊ ||
ಪಟ್ಟದಾನೆ ಗಟ್ಟದಲ್ಲಿ ಕುರುಹು ಕೇಳಿರೊ | ಆಡಿ
ಬಿಟ್ಟನಾ ಫಲವ ಸಿಂಧ ಕುರುಹು ಕೇಳಿರೊ ||  || ೪ ||

ಕಂಭದೊಳಗೆ ಬೊಂಬೆಯೆದ್ದು ಕುರುಹು ಕೇಳಿರೊ | ಶೂಲಿ
ನಂಬಿದವನೆಂಬ ಸುದ್ದಿ ಕುರುಹು ಕೇಳಿರೊ ||
ಕೊಂಬೆನೇರಿ ಕೂಗುತಿದೆ ಕುರುಹು ಕೇಳಿರೊ | ಶಿವನು
ಡೊಂಬಕಾರನಾಗುತ್ತಾನೆ ಕುರುಹ ಕೇಳಿರೊ ||  || ೫ ||

ವೇಣಪುರದೊಳಗೊಂದು ಕುರುಹು ಕೇಳಿರೊ | ಎತ್ತು
ಗಾಣವನ್ನು ಸುತ್ತಿತಿದೆ ಕುರುಹು ಕೇಳಿರೊ ||
ಓಣಿಯೊಳಗೆ ಸಾರುತಿದೆ ಕುರುಹು ಕೇಳಿರೊ | ಶಿವ
ನಾಣೆ ಮುಂದೆ ಹುಸಿಯದಲ್ಲ ಕುರುಹು ಕೇಳಿರೊ ||  || ೬ ||

ಲಿಂಗ ಜಂಗಮರುಗಳೆಲ್ಲ ಕುರುಹು ಕೇಳಿರೊ | ಅವರು
ಲಿಂಗ ಹಿಂಗಿ ಭಂಗ ಪಡುತಾರೆ ಕುರುಹು ಕೇಳಿರೊ |
ಸಂಗಮೇಶ ಎನ್ನ ಗುರುವು ಕುರುಹು ಕೇಳಿರೊ ||  || ೭ ||

೩. ಕತ್ತಿ ಹರಿಯುತಿದೆ
ವಚನ : ಮತ್ತಮೆಂತೆನೆ

ಕತ್ತಿ ಹರಿಯುತಿದೆ ಈ ಕಡೆಯಲಿ ಗುತ್ತಿ ಮುರಿಯುತಿದೆ |
ಎತ್ತಿನ ಹಬ್ಬಕ್ಕೆ ಕತ್ತಿಯ ಮೊನೆಗೊಂದು ವಿಸ್ತಾರವಾಗುತಿದೆ ||  || ಪಲ್ಲ ||

ಈ ಜಗವೆಲ್ಲ ಒಪ್ಪುತಿದೆ ಮೂಜಗದೊಳು ವಾಜೆಗಳುಂಟುತಿದೆ |
ಮಾಜುವೆನೆಂದರೆ ಅಜಹರಿ ರುದ್ರರ್ಗೆ ಸೋಜಿಗವಾಗುತಿದೆ ||  || ೧ ||

ಕುದುರೆಗಳೇಳುತಿದೆ ಕದನವೆದ್ದುವದಗುತ್ತ ಬರುತಲಿದೆ |
ಮದದಿಂದ ಮೂವತ್ತು ಮೂರು ಕುದುರೆಯಿಂದ ಕದನವು ಕೆಣಕುತಿದೆ ||  || ೨ ||

ಕೊಂಬುವರಿಲ್ಲೆಂದು ಕೂಗುವ ಧ್ವನಿಗಂಬುಜವರಳುತಿದೆ |
ತುಂಬಿಗಳದ ಸಂಭ್ರಮದ ಸೂಚನೆಗಿನ್ನು ಶಂಭು ತಾ ಬರುತಿದೆ ||  || ೩ ||

ಊರ ಮುಂದಾರು ಮಂದಿ ಮಾರಿ ದುರ್ಗಿಯರು ನೀರ ಬಿಂದಿಗೆಯನೆತ್ತಿ |
ಭೂರಿದ್ರುಮದ ಗಂಡ ಬರುವ ಸೂಚನೆಯಿಂದ ಸಾರಿತು ಡಂಗುರವ ||  || ೪ ||

ಉತ್ತರ ದೇಶದಿಂದ ಮತ್ತೈಯ್ಯ ಬಂದು ಕುಸ್ತಿಯ ಕಲಕುತಾನೆ
ವಿಸ್ತಾರದೊಳು ಪ್ರಭು ಮುಸ್ತವ ತೆಕ್ಕೊಂಡು ವಸ್ತುವನರಸುತಾನೆ ||  || ೫ ||

ಬೇಡನ ಮಕ್ಕಳೆಲ್ಲ ಈ ಜಗದೊಳು ರೂಢಿಸಿ ಮೆರೆವುತಿವೆಲೆ |
ನಾಡಿನೊಳಗಧಿಕ ಮೂಡಣ ದಿಕ್ಕಿನೊಳಗೊಂದು ಪವಾಡವೇಳುತಿದೆ ||  || ೬ ||

ಕಲೆಯೆದ್ದು ಕುರುಬನು ಬೆರಸಿ ಬಂದ ಕುರುಹುವೆಂಬಾದರುವಿನಿಂದ |
ನರನ ಪಟ್ಟಣದೊಳು ತೆರನಿಲ್ಲದಿಹ ಮುಂದೆ ಸ್ಥಿರಪಲ್ಲವಾಗುತಿದೆ ||  || ೭ ||

ವೀರಾಧಿವೀರರೆಲ್ಲ ಮಾರಿಯ ಮುಂದೆ ಹೋರಿತ್ತು ಆಗುತೀದೆ |
ಧಾರಿಣಿಯೊಳು ನಾಗಲಿಂಗೇಶನ ಕಾರುಣ್ಯವರುಹುತಿದೆ ||  || ೮ ||

೪. ದಿಮ್ಮಿಸಲೆನ್ನಿರೊ
ವಚನ : ಮತ್ತಮೆಂತೆನೆ

ದಿಮ್ಮಿಸಲೆನ್ನಿರೊ ನಮ್ಮವರೆಲ್ಲ ದಿಮ್ಮಿಸಲೆನ್ನಿರೊ
ದಿಮ್ಮಸಲೆಂದು ಬಿದ್ದಾದೆ ಸತ್ಯವುಳ್ಳ ಶರಣರೆಲ್ಲ ದಿಮ್ಮಿ ||  || ಪಲ್ಲ ||

ಮತ್ತೆ ಮನೆ ದ್ರವ್ಯವನ್ನು ನೆತ್ತಿಯೊಳು ಹೊತ್ತು ಬಂದ
ಅರ್ಥಿಯನ್ನು ಕೇಳಿರೊ ದಿಮ್ಮಿಸಲೆನ್ನಿರೊ ||  || ೧ ||

ಆದಿಯೊಳಗೆ ಅಜನ ಭಜನವಾದ ಜನ್ಮವಿಡಿದು ಬಂದ |
ಭೇದವನ್ನು ಮರೆದು ಬ್ರಹ್ಮಬೋಧೆಯನ್ನು ಕೇಳಿರೊ ದಿಮ್ಮಿಸಲೆನ್ನಿರೊ ||  || ೨ ||

ಪೂರ್ವದೊಳು ಪಾರ್ವರಣೆಯ ತೋರ್ಪ ಜನ್ಮ ವಿಡಿದು ಬಂದು |
ಪೆರ್ಮೆಯನ್ನು ಮರೆದು ಸತ್ಯ ಪೂರ್ವವನ್ನು ಕೇಳಿರೊ ದಿಮ್ಮಿಸಲೆನ್ನಿರೊ ||  || ೩ ||

ಹಿಂದೆ ಹಿರಿಯತನದಿ ದ್ವಿಜರೊಂದುಗೂಡಿ ಲೋಕ ಮುಖದಿ |
ಬಂದ ಬೆಡಗ ತಿಳಿದು ಅಡಗಿದಾನಂದವನ್ನು ಕೇಳಿರೊ ದಿಮ್ಮಿಸಲೆನ್ನಿರೊ ||  || ೪ ||

ನಾಮವಿಲ್ಲದ ಗಣಿಕನೊಬ್ಬಯೋಮದುದಯ ಮುಖದಿ ಬಂದ |
ಮಗಳನಳಿದು ಸುಕ್ಷೇಮಗಳ ಮುದದಿ ಮಾತ ಕೇಳಿರೊ ದಿಮ್ಮಿಸಲೆನ್ನಿರೊ ||  || ೫ ||

ತಾನುಯಿಲ್ಲದಾಗ ತನ್ನ ದೂರ ಹುಟ್ಟ ಮೆರೆವ ಕುರುಹ |
ಜ್ಞಾನದಿಂದ ತಿಳಿದು ಕಾಲಜ್ಞಾನವನ್ನು ಕೇಳಿರೊ ದಿಮ್ಮಿಸಲೆನ್ನಿರೊ ||  || ೬ ||

ಆಸೆಯಿಂದ ದೇಶವೆಲ್ಲ ಮೋಸ ಹೋದ ಮೂರುದಿನಕೆ |
ಘಾಸಿಯಾದರೆಂಬ ಪರಿಯ ದೇಶವೆಲ್ಲ ಕೇಳಿರೊ ದಿಮ್ಮಿಸಲೆನ್ನಿರೊ            || ೭ ||

ಬೇಡನೆದ್ದು ಆಡ ಬಡಿದು ಕೋಡಗನ ಕೊಂದ ಬಳಿಕ |
ಕೇಡು ತಪ್ಪದು ಮರ್ತ್ಯಕಿನ್ನು ರೂಢಿಯಲ್ಲಿ ಕೇಳಿರೊ ದಿಮ್ಮಿಸಲೆನ್ನಿರೊ ||  || ೮ ||

ಅತ್ತೆ ಅಳಿಯನೆದ್ದು ಕೂಡಿ ಹೆತ್ತ ಮಗಳ ಮದುವೆಯಾಗೆ |
ಮೃತ್ಯು ಬಂದ ಚಿತ್ರವೆಲ್ಲ ಮತ್ತೆ ನೀವು ಕೇಳಿರೊ ದಿಮ್ಮಿಸಲೆನ್ನಿರೊ ||  || ೯ ||

ಉತ್ತರದ ದಿಕ್ಕಿನೊಳು ಒತ್ತಿ ವಾಯು ಬೀಸಲಾಗಿ |
ಹೆತ್ತತಾಯಿ ಮಗನ ಕೊಲುವ ಕೃತ್ಯವೆಲ್ಲ ಕೇಳಿರೊ ದಿಮ್ಮಿಸಲೆನ್ನಿರೊ ||  || ೧೦ ||

ಕೋಣನೆದ್ದು ಕುಣಿಯ ಬಿದ್ದು ಗೋಣಮುರಿದು ಸಾಯಲಾಗಿ |
ಕ್ಷೋಣಿಗೀಶ ಬಂದು ನಿಲುವ ಜಾಣತನವ ಕೇಳಿರೊ ದಿಮ್ಮಿಸಲೆನ್ನಿರೊ ||  || ೧೧ ||

ಊರನ ಮುಂದೆ ಗೋರಿಕಟ್ಟಿ ಕೇರಿ ಸುಟ್ಟು ಸೂರೆಯಾಗಿ |
ಮಾರಿಬಂದು ಮನೆಯ ಹೊಕ್ಕ ದೂರನೆಲ್ಲ ಕೇಳಿರೊ ದಿಮ್ಮಿಸಲೆನ್ನಿರೊ ||  || ೧೨ ||

ನೀರ ಹೊಳೆಯ ದಾರಿವಿಡಿದು ನಾರಿ ಅಳುತ ಬಂದ ಬಳಿಕ |
ಭಾರಿ ಭೂತ ಹೊಡೆದು ಕೊಲುವ ಸೂರೆಯೆಲ್ಲ ಕೇಳಿರೊ ದಿಮ್ಮಿಸಲೆನ್ನಿರೊ ||  || ೧೩ ||

ಪಟ್ಟಣದೊಳು ಮೂರುಮಂದಿ ಶೆಟ್ಟಿಕಾರರಳಿದ ಬಳಿಕ |
ಪಟ್ಟಕ್ಕರಸು ಬಂದು ನಿಲುವ ದ್ರಷ್ಟವೆಲ್ಲ ಕೇಳಿರೊ ದಿಮ್ಮಿಸಲೆನ್ನಿರೊ ||  || ೧೪ ||

ಆನೆ ಅಳಿದ ಹಾನಿಗೆಂದು ಶ್ವಾನನಳುತ ಕರೆದ ಬಳಿಕ |
ಭಾನುತೇಜದರಸು ಬರುವ ಸ್ಥಾನವೆಲ್ಲ ಕೇಳಿರೊ ದಿಮ್ಮಿಸಲೆನ್ನಿರೊ ||  || ೧೫ ||

ಪಡುವಗಡಲ ತಡಿಯೊಳೊಬ್ಬ ಮಡದಿ ಮುಡಿಯ ಪಿಡಿದ ಬಳಿಕ |
ಪೊಡವಿಗೊಡೆಯ ಬಂದ ಬರದ ಬೆಡಗನೆಲ್ಲ ಕೇಳಿರೊ ದಿಮ್ಮಿಸಲೆನ್ನಿರೊ ||  || ೧೬ ||

ಪುರದ ಮುಂದುಗಡೆಯೊಳೊಂದು ಕೆರೆಯ ಕಟ್ಟಿ ಮುಗಿದ ಬಳಿಕ |
ದೊರೆಗೆ ದುಃಖ ತಪ್ಪದೆಂದು ಬರೆದ ಲಿಪಿಯ ಕೇಳಿರೊ ದಿಮ್ಮಿಸಲೆನ್ನಿರೊ ||  || ೧೭ ||

ದಕ್ಷಿಣ ದೆಸೆಯೊಳೊಂದು ಪಕ್ಷಿ ಪರಬ್ರಹ್ಮ ತನ್ನ |
ಪಟ್ಟಕಿಳಿದ ಎಂದು ನುಡಿದ ಆ ಕ್ಷಣವೆಲ್ಲಾ ಕೇಳಿರೊ ದಿಮ್ಮಿಸಲೆನ್ನಿರೊ ||  || ೧೮ ||

ಕೋಳಿಯೆದ್ದು ಕೂಗುತಿದೆ ಭಾಳನೇತ್ರ ಬಂದನೆಂದು|
ಪೇಳುಯೆಂದು ನುಡಿಸುತಿರ್ಪನೂಳಿಗವೆಲ್ಲ ಕೇಳಿರೊ ದಿಮ್ಮಿಸಲೆನ್ನಿರೊ ||  || ೧೯ ||

ಪಲ್ಲಿ ಪಲವು ನುಡಿದ ಬಳಿಕ ಮೃತ್ಯುಕುಲವು ಕೆಟ್ಟಿತೆಂದು |
ಸೊಲ್ಲ ನುಡಿಯಿಂದಾಡಿಸುವ ಗಲ್ಲಣವ ಕೇಳಿರೊ ದಿಮ್ಮಿಸಲೆನ್ನಿರೊ ||  || ೨೦ ||

ಅಳಿಯ ಬಂದಾರು ತಿಂಗಳಿಗೆ ಜನಕೆ ಪ್ರಳಯಗಾಲವೆಂದು |
ಉಳಿದುಕೊಳ್ಳಿ ಶರಣರೆಂದು ತಳೆಯದೆಲ್ಲನೇಳಿರೊ ದಿಮ್ಮಿಸಲೆನ್ನಿರೊ ||  || ೨೧ ||

ಇಷ್ಟು ಭೇದ ಭೇದಗಳನು ಪಟ್ಟದರಸು ತಾನೆ ಬಲ್ಲ |
ನಷ್ಟದೆಸೆಗರಿಷ್ಟ ಬಂದ ಕಟ್ಟಳೆಯ ಕೇಳಿರೊ ದಿಮ್ಮಿಸಲೆನ್ನಿರೊ ||  || ೨೨ ||

ಇಂದು ನಾಳೆ ನಾಳಿದ್ದೀಗೆ ಎಂದಿಗೆಂಬ ಭೇದವಳಿದು |
ಬಂದಿತೆಂದು ಎಂದು ನುಡಿದಾನಂದವೆಲ್ಲ ಕೇಳಿರೊ ದಿಮ್ಮಿಸಲೆನ್ನಿರೊ ||  || ೨೩ ||

ಆಡಿದಂಥ ವಾಕ್ಯವೆಲ್ಲ ಕೋಡಿಗಳೆಯದಿಂದಲ್ಲ ಮನುಜ |
ನುಡಿದ ಅಭಯವನ್ನು ನುಡಿದ ಪವಾಡವೆಲ್ಲ ಕೇಳಿರೊ ದಿಮ್ಮಿಸಲೆನ್ನಿರೊ ||  || ೨೪ ||

ಯೋಗನಿದ್ರೆ ತಿಳಿದು ಭಾಗ್ಯ | ಬೇಗದಿಂದ ಎನ್ನ ಗುರುವು |
ನಾಗಲಿಂಗ ನುಡಿಸಿದಂಥ ಆಗಮಗಳ ಕೇಳಿರೊ ||  || ೨೫ ||

೫. ದಿಮ್ಮಿಸಾಲೆ
ವಚನ : ಮತ್ತಂಮೆಂತೆನೆ

ದಿಮ್ಮಸಾಲೆ ಧಾರಿಣಿ ಶರಣರ ಕರುಣದ ಬರಕಿದು |
ದೊಡ್ಡ ಕರುಣಸ್ಥಳ ಈಶನ ವರವಿದು ದಿಮ್ಮಿಸಾಲೆ ||  || ೧ ||

ಆಡುವ ಬೇಡನ ಮಕ್ಕಳ ಹರುಷದಿ ದಿಮ್ಮಿಸಾಲೆ | ತಮ್ಮ
ಆಡದ ಆಟಕ್ಕೆ ನೋಡಿದ ಸೂಚನೆ ದಿಮ್ಮಿಸಾಲೆ ||  || ೨ ||

ಅಳಿಯನ ಮಕ್ಕಳ ತಳುವದೆ ಸುರಿದ ದಿಮ್ಮಿಸಾಲೆ | ಮುಂದೆ
ಅಳವಿಟ್ಟು ಉಳುವಿಯ ಸಾರುವ ಸೂಚನೆ ದಿಮ್ಮಿಸಾಲೆ ||  || ೩ ||

ನೋಟದ ಶರಣರು ಬೆಟ್ಟಕ್ಕೆ ಬಂದರು ದಿಮ್ಮಿಸಾಲೆ | ಅವ
ರಾಟವನರಿಯದೆ ಬೂಟಕತನದಿಂದ ದಿಮ್ಮಿಸಾಲೆ ||  || ೪ ||

ಉತ್ತರ ದಕ್ಷಿಣ ಪೂರ್ವ ಪಶ್ಚಿಮ ದಿಮ್ಮಿಸಾಲೆ | ದೊಡ್ಡ
ನಾರಿಯರು ಬರುತಾರೆ ಸುತ್ತಣ ಕೇರಿಗೆ ದಿಮ್ಮಿಸಾಲೆ ||  || ೫ ||

ಮುಂದಣ ಕೇರಿಯ ಹೊಂದಿದ ಬೇಗೆಯ ದಿಮ್ಮಿಸಾಲೆ | ಎಡ
ದಿಂದ ತಾ ಹತ್ತಿ ಬೆಂದಿತು ಮನೆಗಳು ದಿಮ್ಮಿಸಾಲೆ ||  || ೭ ||

ಆನೆಯ ಲಾಯಕ್ಕೆ ಜೀನ ಕಟ್ಟಿದ ಕುರುಹು ದಿಮ್ಮಿಸಾಲೆ | ಅಲ್ಲಿ
ಮಾನಿನಿಯರ ಮನೆ ಹಾನಿಗಳೆನುತಿದೆ ದಿಮ್ಮಿಸಾಲೆ ||  || ೭ ||

ಭತ್ತದ ಪಣಕದ ಮೇಳು ಹತ್ತೆಂಟು ಸೂಚನೆ ದಿಮ್ಮಿಸಾಲೆ | ಮುಂದೆ
ಅತ್ತೆಯ ಅರಮನೆ ವ್ಯರ್ಥಗಳೆನುತಿದೆ ದಿಮ್ಮಿಸಾಲೆ ||  || ೮ ||

ಅರಸಿಯೊಳರಸನು ಸರಸದೊಳಿರಲಾಗಿ ದಿಮ್ಮಿಸಾಲೆ | ದೊಡ್ಡ
ಸರಸಿಜಮುಖಿ ಬಂದು ಬೆರಸಿದ ಸೂಚನೆ ದಿಮ್ಮಿಸಾಲೆ ||  || ೯ ||

ಅರಮನೆಯೆಲ್ಲವು ಬರಿಮನೆಯಾದವು ದಿಮ್ಮಿಸಾಲೆ | ನಿಮ್ಮ
ಅರಸಿಯರೆಲ್ಲರು ಸೆರೆ ಸೂರೆಯಾದರು ದಿಮ್ಮಿಸಾಲೆ |    || ೧೧ ||

ಏರುವ ಕುದುರೆಯ ಮಾರಿದ ಸೂಚನೆ ದಿಮ್ಮಿಸಾಲೆ | ಮುಂದೆ
ಕಟ್ಟಿದ ಕೇರಿಯ ಬಿಟ್ಟೆಲ್ಲ ಹೋದರು ದಿಮ್ಮಿಸಾಲೆ ||  || ೧೨ ||

ಕಟ್ಟಿದ ಕೇರಿಯ ಬಿಟ್ಟೆಲ್ಲ ಬರುವಾಗ ದಿಮ್ಮಿಸಾಲೆ | ಮುಂದೆ
ಕಟ್ಟಿಗೆಯನು ಹಾಕಿ ಸುಟ್ಟರು ಶರಣರು ದಿಮ್ಮಿಸಾಲೆ ||  || ೧೩ ||

ವ್ರತನೇಮಶೀಲರು ಮತಿಗೆಟ್ಟು ಹೋದರು ದಿಮ್ಮಿಸಾಲೆ | ದೊಡ್ಡ
ಮತಿವಂತ ಬಸವಣ್ಣ ಮರ್ತ್ಯಕ್ಕೆ ಬರುವಾಗ ದಿಮ್ಮಿಸಾಲೆ ||  || ೧೪ ||

ಲಿಂಗವ ಧರಿಸಿದ ಜಂಗಮರೆಲ್ಲರು ದಿಮ್ಮಿಸಾಲೆ | ತಮ್ಮ
ಅಂಗದ ಲಿಂಗಕ್ಕೆ ತಂದರು ಭಂಗವ ದಿಮ್ಮಿಸಾಲೆ ||  || ೧೫ ||

ಉಬ್ಬಿದ ಜನರಿಗೆ ದಿಬ್ಬಣಗಳು ಬಂತು ದಿಮ್ಮಿಸಾಲೆ | ಇಲ್ಲಿ
ಒಬ್ಬನ ಮುಖದಿಂದ ಅಬ್ಬರವಾದೀತು ದಿಮ್ಮಿಸಾಲೆ ||  || ೧೬ ||

ಓದುವ ಶಾಸ್ತ್ರಕ್ಕೆ ಮಾದಿಗ ಬರುತ್ತಾನೆ ದಿಮ್ಮಿಸಾಲೆ | ಮುಂದೆ
ಆದಿಗಣಂಗಳ ಪಾದವೆ ಗತಿಯೆನ್ನಿ ದಿಮ್ಮಿಸಾಲೆ ||  || ೧೭ ||

ಧಾತ್ರಿಯ ಜನರೆಲ್ಲ ಒಂದು ಗೋತ್ರಗಳಾದರು ದಿಮ್ಮಿಸಾಲೆ | ವೇದ
ಶಾಸ್ತ್ರವನೋದುವ ರೀತಿಯನರಿಯರು ದಿಮ್ಮಿಸಾಲೆ ||  || ೧೮ ||

ಕತ್ತಲೆ ಕವಿದಾವು ಮರ್ತ್ಯದೊಳಗೆ ಮುಂದೆ ದಿಮ್ಮಿಸಾಲೆ | ಇದ
ರೊತ್ತದ ಕೇರಿಗಳುತ್ತಮವಾದೀತು ದಿಮ್ಮಿಸಾಲೆ ||  || ೧೯ ||

ಮರ್ತ್ಯದೊಳಗೆ ದೊಡ್ಡ ಎತ್ತಿನ ಹಬ್ಬಕ್ಕೆ ದಿಮ್ಮಿಸಾಲೆ | ಮುಂದೆ
ಕುಸ್ತಿಗಳಾದವು ಉತ್ತರ ದಿಕ್ಕಿಲಿ ದಿಮ್ಮಿಸಾಲೆ ||  || ೨೦ ||

ಕಲ್ಲನಂದಿಯ ಮುಂದೆ ಕಲ್ಯಾಣವಾದೀತು ದಿಮ್ಮಿಸಾಲೆ | ಒಂದು
ಕಲ್ಲಿನ ಗವಿಯಿಂದ ಬಲ್ಲಹವಾದೀತು ದಿಮ್ಮಿಸಾಲೆ ||  || ೨೧ ||

ಪಟ್ಟದ ಬಿದುನೂರು ಹೊಟ್ಟಾಗಿ ಹೋದೀತು ದಿಮ್ಮಿಸಾಲೆ | ಮುಂದೆ
ಪಟ್ಟಕ್ಕೆ ವೀರವಸಂತನು ಬರುತಾನೆ ದಿಮ್ಮಿಸಾಲೆ ||  || ೨೨ ||

ಆಂಗೀರಸ ಪುಷ್ಯ ಶುದ್ಧ ನವಮಿಯಲ್ಲಿ ದಿಮ್ಮಿಸಾಲೆ | ಮುಂದೆ
ಸಂಗನ ಶರಣರು ಪಿಂಗದೆ ಸಾರಿದರು ದಿಮ್ಮಿಸಾಲೆ ||  || ೨೩ ||

ಮುಂದಣ ಶಿಶುವು ಮುಂದಣ ಸುದ್ಧಿಗಳಿಂದಾಡಿತು ದಿಮ್ಮಿಸಾಲೆ |
ಎಂದಿಗೆ ಸಿದ್ಧಗಳೆಂದೆನಬೇಡಿರೊ ದಿಮ್ಮಿಸಾಲೆ ||  || ೨೪ ||

ಮಂಗಳವೆನಿಸುವ ಸಂಗಮೇಶ್ವರ ಸಿದ್ಧ ದಿಮ್ಮಿಸಾಲೆ | ನಾಗ
ಲಿಂಗನೆನ್ನಂಗದೊಳು ಹಿಂಗದೆ ಸಾರಿದ ದಿಮ್ಮಿಸಾಲೆ ||  || ೨೫ ||

ಕರಸ್ಥಲ ನಾಗಿದೇವರು ನಿರೂಪಿಸಿದ ಕಾಲಜ್ಞಾನ ಪದಗಳು
ಸಮಾಪ್ತಿ ಮಂಗಳಮಹಾ ಶ್ರೀ ಶ್ರೀ ಶ್ರೀ ||