ಶ್ರೀಮತ್ ಪರಮಾಮೃತ ಘನ
ತೀವಿ ಕರಸ್ಥಲದೊಳಿರಲು ಮನ ಭಾವದೊಳು
ಸೇವಿಸಿ ತೃಪ್ತಿಯನೈದಿದ
ಡಾ ಮಹಿಮನೆ ನಿತ್ಯಮುಕ್ತ ನಿಜಗುರುಶಾಂತ ||  || ೧ ||

ಬ್ರಹ್ಮಸ್ಥಾನದ ಅಮೃತವ
ಸುಮ್ಮಾನದೊಳುಂಬೆನೆಂದು ತಾಂ ಭ್ರಮಿಸುತಿರ್ಪಾ
ಕರ್ಮಗುಣವಳಿದು ಲಿಂಗ ಸು
ಖಾಮೃತವುಂಡವನೆ ನಿತ್ಯಮುಕ್ತ ನಿಜಗುರುಶಾಂತ ||  || ೨ ||

ಅಂಗದೊಳ ಹೊರಗೆ ಬೆಳಗುವ
ಲಿಂಗವ ಕರಕಮಲದಲ್ಲಿ ಧರಿಸಿ ಲಿಂಗವಾ
ಸಂಗಸುಖಾನಂದದೊಳಂ
ಅಂಗವ ಮರೆಯೆ ನಿತ್ಯಮುಕ್ತ ನಿಜಗುರುಶಾಂತ || ೩ ||

ನಿಷ್ಕಲವೆ ರೂಪುವೆತ್ತು ಮ |
ನ ಸ್ಖಲನದಿ ಮನದೊಳಿರದೆ ಲಕ್ಷ್ಯದೊಳಡಗಲು
ಸುತ್ತಿ ಕರಾಗ್ರದಿ ಬೆಳಗಲು
ಮತ್ತೆರಡಳಿದವ ನಿತ್ಯಮುಕ್ತ ನಿಜಗುರುಶಾಂತ ||  || ೪ ||

ನೆರೆ ಹೃದಯ ಕಮಲ ಮಧ್ಯದಿ
ಸ್ಫುರಿಸುವ ಸದಮಲವೆ ರೂಪೆತ್ತಿರೆ ಕರದೊಳ್
ಅರಿದೆನ್ನದೆ ತಾಂ ಮನವನ
ದರೊಳಡಗಿರ್ದನೆ ನಿತ್ಯಮುಕ್ತ ನಿಜಗುರುಶಾಂತ ||  || ೫ ||

ಚೇತನದೊಳಿರುತಿಹ ಚೈತ
ನ್ಯಾತ್ಮಕನ ರೂಪು ಮಾಡಿ ಕರಕಮಲದೊಳಗಂ
ಪ್ರೀತಿಯಿಂ ಧರಿಸಿ ಅರ್ಚಿಸು
ವಾತನೆ ಘನ ನಿತ್ಯಮುಕ್ತ ನಿಜಗುರುಶಾಂತ || ೬ ||

ಭಾವದೊಳಿರುತಿಹ ನಿರವಯ
ಸಾವಯವಾಗಿಳಿದು ಬಂದು ಕರಕಮಲದೊಳಿರೆ
ಆವಾಗರ್ಚಿಸಿ ಮನದೊಳು
ಸೇವಿಸುವನೆ ನಿತ್ಯಮುಕ್ತ ನಿಜಗುರುಶಾಂತ ||  || ೭ ||

ಅಂಗದೊಳಾತ್ಮದಿ ಕರಣದಿ
ಹಿಂಗದೆ ಬೆರಸಿರ್ದ ಪರಮಲಿಂಗವ ಕರಕಮಲದೊಳ್
ಪೊಂಗಿಸಿ ಮನವನದರೊಳಗೆ
ಸಂಗಿಸಿದನೆ ನಿತ್ಯಮುಕ್ತ ನಿಜಗುರುಶಾಂತ ||  || ೮ ||

ಜ್ಞಾನಸ್ವರೂಪವಾಗಿಹ
ಸ್ವಾನುಭವಾತ್ಮಕವ ತೆಗೆದು ಕರದಲಿ ಧರಿಸಿ
ಧ್ಯಾನದಿ ತನುಮನಗುಣವಳಿ
ದಾನಂದನೆ ನಿತ್ಯಮುಕ್ತ ನಿಜಗುರುಶಾಂತ ||  || ೯ ||

ನಡೆವೆಡೆಯೊಳು ನುಡಿವೆಡೆಯೊಳು
ಕೊಡುವೆಡೆಯೊಳು ಕೂಡುವೆಡೆಯೊಳೆಲ್ಲಾ ಎಡೆಯೊಳು
ಒಡಗಲಿಸಿ ಲಿಂಗದೊಳು ಮನ
ವಡಗಿರ್ದನೆ ನಿತ್ಯಮುಕ್ತ ನಿಜಗುರುಶಾಂತ ||  || ೧೦ ||

ಮನಸಿನೊಳಂ ನನಸಿನೊಳಂ
ಕನಸಿನೊಳಂ ನಿದ್ರೆಯೊಳಂ ಎಚ್ಚರೊಳೆಲ್ಲಂ
ಘನ ಶಿವಲಿಂಗ ಸುಸಂಗವ
ನಿನಿಸಗಲದನೆ ನಿತ್ಯಮುಕ್ತ ನಿಜಗುರುಶಾಂತ ||  || ೧೧ ||

ನೋಟವ ಲಿಂಗದೊಳೊಂದಿಸಿ
ಬೇಟವ ಮಾಡುವ ಮತ್ತೇ ಆತ್ಮದೊಳದನೇ
ನಾಟಿಸಿ ಇಹಪರವರಿಯದ
ಕೂಟಸ್ಥನೆ ನಿತ್ಯಮುಕ್ತ ನಿಜಗುರುಶಾಂತ ||  || ೧೨ ||

ನಾಲ್ಕುದಳ ಕಮಲ ಮಧ್ಯದಿ
ಲೋಕೈಕಂ ಬೆರಸಿ ಬೆರಸಲಂತಿರುತಿರಲರಿ
ದಾಕಾಶ ಮಾಡಿ ಲಿಂಗದೊ
ಳೇಕೀಕರಿಸಿದ ನಿತ್ಯಮುಕ್ತ ನಿಜಗುರುಶಾಂತ ||  || ೧೩ ||

ಸ್ವಾದಿಷ್ಟಾನದ ಷಡುದಳ
ದಾದಿಯನರಿದಲ್ಲಿ ಬೆಳಗುತಿಹ ಘನಲಿಂಗವಾ
ಸಾಧಿಸಿ ಕರಕಮಲದೊಳಂ
ವೇಧಿಸಿದನೆ ನಿತ್ಯಮುಕ್ತ ನಿಜಗುರುಶಾಂತ ||  || ೧೪ ||

ದಶದಳ ಕಮಲದೊಳಡಗಿಹ
ಉಸುರಿಗೆ ಚೇತನವಾಗಿಹ ನಿಃಶೂನ್ಯದಿ ಮನ
ವೈಸಿ ಕರದಲ್ಲಿ ಧರಿಸಿದ
ಅಸಮಾಕ್ಷನೆ ನಿತ್ಯಮುಕ್ತ ನಿಜಗುರುಶಾಂತ ||  || ೧೫ ||

ದ್ವಾದಶಗಳ ಕಮಲದೊಳಂ
ಭೇದಿಸಿ ನೋಡಲ್ಕಭೇದ್ಯವಾಗಿಹ ಘನವಂ
ಸಾಧಿಸಿ ಕರಕಮಲದೊಳಂ
ವೇಧಿಸಿದನೆ ನಿತ್ಯಮುಕ್ತ ನಿಜಗುರುಶಾಂತ ||  || ೧೬ ||

ಷೋಡಶದಳ ಕಮಲದೊಳಂ
ಗೂಢದಿ ನೆಲೆಸಿಪ್ಪ ಪರಮಲಿಂಗದಿ ಮನಮಂ
ಕೂಡಿಸಿ ಕರಕಮಲದೊಳಂ
ಸಾಧಿಸಿದನೆ ನಿತ್ಯಮುಕ್ತ ನಿಜಗುರುಶಾಂತ ||  || ೧೭ ||

ಭೃಕುಟಿ ಸ್ಥಾನದೊಳಿರುತಿಹ
ಸ್ಫಟಿಕ ಪ್ರಜ್ವಲಿತ ಜ್ಯೋತಿ ಕರಕಮಲದೊಳಿರೆ
ಕುಟಿಲ ಗುಣವಳಿದು ಲಿಂಗದಿ
ಘಟಿಸಿರ್ದನೆ ನಿತ್ಯಮುಕ್ತ ನಿಜಗುರುಶಾಂತ ||  || ೧೮ ||

ಸಾಸಿರದೆಸಳಿನ ಕಮಲದ
ವಾಸದೊಳಿರುತಿರ್ಪ ಲಿಂಗ ಕರಕಮಲದೊಳಿರೆ
ಸೂಸುತಿಹ ಮನವನದರೊಳು
ವಾಸಿಸಿದನೆ ನಿತ್ಯಮುಕ್ತ ನಿಜಗುರುಶಾಂತ ||  || ೧೯ ||

ಏಕದಳ ಕಮಲದೊಳಿಹ ಕ
ಳಾಕಾರದ ನಡುವೆ ಬೆಳಗುತಿಹ ಘನಲಿಂಗಂ
ಸಾಕಾರದಿ ಮನದೊಳಿರ್ದ
ವ್ಯಾಕುಳವಳಿಯೆ ನಿತ್ಯಮುಕ್ತ ನಿಜಗುರುಶಾಂತ ||  || ೨೦ ||

ಪಶ್ಚಿಮ ಚಕ್ರ ತ್ರಿದಳದಿ
ನಿಕ್ಷೇಪಮಾಗಿರ್ಪ ಘನಶಿವಲಿಂಗವು ಪ್ರ
ತ್ಯಕ್ಷಂ ಕರದೊಳಿರೆ ಮನ
ವಾಕ್ಷೇಪಿಸ ನಿತ್ಯಮುಕ್ತ ನಿಜಗುರುಶಾಂತ ||  || ೨೧ ||

ಷಡುಚಕ್ರಂಗಳ ಮಧ್ಯದಿ
ಅಡಗಕ್ಷರ ರೂಪಮಾದ ಲಿಂಗವ ಘನದಿಂ
ಬೆಡಗಿನಿಂ ತೆಗೆದು ಕರದಲಿ
ಪಿಡಿದಿರ್ದನೆ ನಿತ್ಯಮುಕ್ತ ನಿಜಗುರುಶಾಂತ ||  || ೨೨ ||

ನವಚಕ್ರ ಕಮಲದೊಳಗಂ
ಹವಣಿಸಿ ಬೆರೆದಿರ್ದ ಶೂನ್ಯಲಿಂಗವ ರೂಪಿಸಿ
ವಿವರದಿ ಕರದಲಿ ಧರಿಸಿದ
ಅವಿರಳನೇ ನಿತ್ಯಮುಕ್ತ ನಿಜಗುರುಶಾಂತ ||  || ೨೩ ||

ಚತುದರ್ಶ ಭುವನಗಳ ತ
ನ್ನತಿಶಯ ಗರ್ಭದೊಳಗಿರಿಸಿ ಹೃದಯಾಂಬುಜದೊಳು
ಸತತಂ ಬೆಳಗುವ ಲಿಂಗದಿ
ಮತಿಯಿರಿಸಿದ ನಿತ್ಯಮುಕ್ತ ನಿಜಗುರುಶಾಂತ ||  || ೨೪ ||

ಅತ್ಯತಿಷ್ಟರ್ದಶಾಂಗುಲ
ನಿತ್ಯ ಪರಿಪೂರ್ಣ ನಿರುಪಮನೆನಿಸುವ ಘನವಂ
ಹೃತ್ಕಮಲದಿ ಪ್ರತಿಭಾವಿಸಿ
ನಿತ್ಯ ಧರಿಸೆ ನಿತ್ಯಮುಕ್ತ ನಿಜಗುರುಶಾಂತ ||  || ೨೫ ||

ನೆನೆವುತೆ ನೋಡುತೆ ಭಾವಿಸು
ತನುನಯದಿಂದರಳಿದ ಕರಕಮಲದೊಳ್ ಪೂಜಿಸಿ
ಅನುವಿಂದಾರತಿಯೆತ್ತುತ
ತನುಗುಣವಳಿಯೆ ನಿತ್ಯಮುಕ್ತ ನಿಜಗುರುಶಾಂತ ||  || ೨೬ ||

ಪ್ರಾಣದ ನೈವೇದಿಸಿಯಾ
ಸ್ಥಾಣುವಿಗಾ ಸತ್ವ ರಜ ತಮೋಗುನವಳಿದಾ
ವೀಳೆಯವಿತ್ತಾ ಲಿಂಗದಿ
ಜಾಣಿಂದಿರ್ಪ ನಿತ್ಯಮುಕ್ತ ನಿಜಗುರುಶಾಂತ ||  || ೨೭ ||

ಕೈಯೊಳಗಿಹ ಶಿವಲಿಂಗಂ
ಮೈಯೊಳು ಬೆರೆಸಿರ್ದ ಭೇದವನರಿದಾ ಲಿಂಗವ
ನೊಯ್ಯನೆ ಅರ್ಚಿಸಿ ಮರಣದ
ಹುಯ್ಯಲಗೆಲೆ ನಿತ್ಯಮುಕ್ತ ನಿಜಗುರುಶಾಂತ ||  || ೨೮ ||

ಲಿಂಗವ ಕರಕಮಲದೊಳಂ
ಹಿಂಗದೆ ಧರಿಸಿರ್ದು ಮತ್ತೆಯಾ ಲಿಂಗದೊಳಂ
ಸಂಗಿಸಿ ಮನವಂ ಮರಣದ
ಭಂಗವ ಗೆಲೆ ನಿತ್ಯಮುಕ್ತ ನಿಜಗುರುಶಾಂತ ||  || ೨೯ ||

ಆದ್ಯಂತರಹಿತ ಲಿಂಗವ
ಭೇದಿಸಿ ಕರಕಮಲದಲ್ಲಿ ಪಿಡಿದಾ ಲಿಂಗದಿ
ವೇಧಿಸಿ ಮನವಂ ಮರಣದ
ಬಾಧೆಯ ಗೆಲೆ ನಿತ್ಯಮುಕ್ತ ನಿಜಗುರುಶಾಂತ ||  || ೩೦ ||

ಲಿಂಗದೊಳು ಪೂರ್ಣವಾಗಿಹ
ಲಿಂಗವು ಕರಕಮಲದೊಳಗೆ ಬೆಳಗುತ್ತಿರಲಾ
ಲಿಂಗ ಸುಸಂಗದಿ ಮನವಂ
ಸಂಗಿಸಿದನೆ ನಿತ್ಯಮುಕ್ತ ನಿಜಗುರುಶಾಂತ ||  || ೩೧ ||

ವ್ಯಾಕುಲವಳಿದು ಮಹಾಘನ
ದಾಕಾರದ ಮನವ ಭಾವಕರಣವ ಹರಣವ
ನೇಕ ಮಾಡಿದ ಮನದ ನಿ
ರಾಕಾರನೆ ನಿತ್ಯಮುಕ್ತ ನಿಜಗುರುಶಾಂತ ||  || ೩೨ ||

ನಡೆಯೊಳು ನುಡಿಯೊಳು ಹರಣದೊ
ಳೊಡೆಗಲಸಿದ ಘನವ ತೆಗೆದು ಕರಕಮಲದೊಳಂ
ದೃಢವಾಗಿ ಪಿಡಿದು ಹಿಂದಣ
ಜಡಗುಣ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೩೩ ||

ಅಂಗದೊಳಗಿಪ್ಪ ಆತ್ಮನ
ಸಂಗದಿ ಬಿಂಬಿಸುವ ಪರಮಲಿಂಗವ ಕರದೊಳು
ಕಂಗೊಳಿಸಿ ಮನವನದರೊಳು
ಸಂಗಿಸಿದನೆ ನಿತ್ಯಮುಕ್ತ ನಿಜಗುರುಶಾಂತ ||  || ೩೪ ||

ಅಡಿಗಡಿಗೆ ಕಟ್ಟಿ ಬಿಡುತಿಹ
ಜಡಬುದ್ಧಿಯನಳಿದು ಪರಮ ಲಿಂಗವ ಕರದೊಳು
ದೃಢವಾಗಿ ಪಿಡಿದು ಚರಿಸುವ
ಜಡಾತ್ಮನೆ ನಿತ್ಯಮುಕ್ತ ನಿಜಗುರುಶಾಂತ ||  || ೩೫ ||

ದೇಹೋಪಾಯಕೆ ಮನುಜರ
ಗೇಹವ ಪೊಕ್ಕವರ ಮುಂದೆ ಪಲ್ಗಿರಿವುತ್ತಿಹ
ಮೋಹವನುಳಿದಾಚರಿಸುವ
ಸಾಹಸಿಗನೆ ನಿತ್ಯಮುಕ್ತ ನಿಜಗುರುಶಾಂತ ||  || ೩೬ ||

ಊರಡವಿಯೆಂದು ಮನದೊಳ
ಗಾರೈಕೆಯ ಮಾಡದಮಲ ಲಿಂಗಾಮೃತವುಂ
ಡೋರಂತೆ ಹಸಿವು ತೃಷೆಗಳ
ದೂರವಿಡಲು ನಿತ್ಯಮುಕ್ತ ನಿಜಗುರುಶಾಂತ ||  || ೩೭ ||

ಅಡವಿ ಗಿರಿ ಗುಹೆಗಳೆನ್ನದೆ
ದೃಢವಾಗಿಯೆ ಲಿಂಗಸಂಗದೊಳು ಮನಭಾವವ
ವೆಡಗಲಿಸಿ ಚರಿಸಿಯಾಡುವ
ಸಡಗರದವ ನಿತ್ಯಮುಕ್ತ ನಿಜಗುರುಶಾಂತ ||  || ೩೮ ||

ಅಂಗಕೆ ಭಿಕ್ಷವೆನುತ್ತಿಹ
ಭಂಗದ ನುಡಿಗಳನು ತ್ಯಜಿಸಿ ಪರಮಾಮೃತ ಘನ
ಲಿಂಗದ ಸಂಗದ ತೃಪ್ತಿಯೊ
ಳಂಗವ ಮರೆದ ನಿತ್ಯಮುಕ್ತ ನಿಜಗುರುಶಾಂತ ||  || ೩೯ ||

ಹಸಿವು ತೃಷೆಯಿಂದ ಮನವಂ
ದೆಸೆಗೆಡಿಸದೆ ಅಮಲಲಿಂಗ ದಿವ್ಯಾಮೃತವುಂ
ಡೊಸೆದೊಸೆದು ದಣಿದು ಮರ್ತ್ಯರ
ವಾಸ ನಿಲಿಸೆ ನಿತ್ಯಮುಕ್ತ ನಿಜಗುರುಶಾಂತ ||  || ೪೦ ||

ಅಂಗದೊಳಾತ್ಮದಿ ಭಾವದಿ
ಹಿಂಗದೆ ಬೆರೆಸಿರ್ದ ಪರಮಲಿಂಗದಿ ಮನವಂ
ಸಂಗಿಸಿ ಜಡಮನುಜರುಗಳ
ಅಂಗಳಕೆಯ್ದ ನಿತ್ಯಮುಕ್ತ ನಿಜಗುರುಶಾಂತ ||  || ೪೧ ||

ನಿಂಬೆಯ ಕಾಯಷ್ಟನ್ನಕೆ
ಹಂಬಲಿಸುತ ಮನುಜರಿಪ್ಪ ಗೃಹಮಂ ಪೊರ್ದದೆ
ನಂಬುತೆ ಲಿಂಗದಿ ಅಮೃತದಿ
ಇಂಬಿಟ್ಟನೆ ನಿತ್ಯಮುಕ್ತ ನಿಜಗುರುಶಾಂತ ||  || ೪೨ ||

ಅರೆಮಾನದಕ್ಕಿಯನಶನಕೆ
ದುರುಳಾತ್ಮರ ಮನೆಗೆ ಹೋಗಿ ಒಡಲಂ ಹೊರೆಯದೆ
ಪರಮ ಲಿಂಗಾಂಗಯೋಗದ
ಪರಿಣಾಮಿಯೆ ನಿತ್ಯಮುಕ್ತ ನಿಜಗುರುಶಾಂತ ||  || ೪೩ ||

ಲಿಂಗವ ಕರದಲಿ ಧರಿಸಾ
ಲಿಂಗದೊಳಂ ಮನವ ನಿಲಿಸಿ ಪರಮೋಲ್ಲಾಸದಿ
ಹಿಂಗದೆ ಜಡ ಮಾನವರಿ
ಪ್ಪಂಗಳ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೪೪ ||

ತನುಗುಣವೆಲ್ಲದ ಮರೆದು
ಘನಲಿಂಗದಿ ಮನವ ಬೆರಸಿ ಜೀವೋಪಾಯಕೆ
ಮನುಜರ ಗೃಹಗಳಿಗೈದದ
ಅನುಪಮನೇ ನಿತ್ಯಮುಕ್ತ ನಿಜಗುರುಶಾಂತ ||  || ೪೫ ||

ಮರ್ತ್ಯರ ಇಚ್ಚೆಯ ನುಡಿಯದೆ
ಕರ್ತೆಂಬ ಭ್ರಾಂತನುಳಿದು ಘನಲಿಂಗದಿ ಮನ
ಹತ್ತಿ ಬೆರಗಾಗಿ ಚರಿಸುವ
ಅತ್ಯಧಿಕನೆ ನಿತ್ಯಮುಕ್ತ ನಿಜಗುರುಶಾಂತ ||  || ೪೬ ||

ವೇಷದ ರಂಜನೆಯಿಂದಂ
ದೇಶಂಗಳ ತೊಳಲಿ ಬಳಲಿ ಜಡಮನುಜರುಗಳ
ವಾಸಕ್ಕೆ ಹೋಗಿ ಭುಂಜಿಪ
ಹೇಸಿಕೆ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೪೭ ||

ಪರಮಲಿಂಗವನು ಕರದೊಳು
ಧರಿಸಿಯೆ ಮನುಜರುಗಳಿಪ್ಪ ಗೃಹಕತಿಭರದಿಂ
ದುರವಣಿಸಿ ಹೊಕ್ಕು ಉಣ್ಣದ
ನಿರುಪಮನೆ ನಿತ್ಯಮುಕ್ತ ನಿಜಗುರುಶಾಂತ ||  || ೪೮ ||

ಲಿಂಗವು ಕರಕಮಲದೊಳಿರೆ
ಅಂಗಗುಣಂಗಳ ಮರದು ದುರುಳಾತ್ಮಲರುಗಳ
ಅಂಗಳಕೆ ಹೋಗಿ ಚರಿಸದ
ಮಂಗಳನೇ ನಿತ್ಯಮುಕ್ತ ನಿಜಗುರುಶಾಂತ ||  || ೪೯ ||

ಲಿಂಗದಲಿ ದೃಷ್ಟಿಯಿಟ್ಟು
ಲಿಂಗದಿ ಮನಭಾವ ಕರಣವೆಲ್ಲವ ಕೊಟ್ಟು
ಲಿಂಗ ಸುಸಂಗದಿ ಲೋಕದ
ಸಂಗವ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೫೦ ||

ಮನೆಮನೆಯ ಹೊಕ್ಕು ಲಿಂಗದ
ಅನುಭಾವವನುಸುರಿ ಒಡಲಹೊರೆಯದೆ ಲಿಂಗದ
ಘನ ಬೆಳಗಿನಲಿ ಚರಿಸಾಡುವ
ಅನುಪಮನೇ ನಿತ್ಯಮುಕ್ತ ನಿಜಗುರುಶಾಂತ ||  || ೫೧ ||

ಜಡಮನುಜರಾವಾಸಗಳಿ
ಗೆಡೆಯಾಡುತರಿವ ಹೇಳುತ ಒಡಲು ಹೊರೆಯದೆ
ಸಡಗರದಿ ಲಿಂಗದೊಳು ಮನ
ವಡಗಿರ್ದನೆ ನಿತ್ಯಮುಕ್ತ ನಿಜಗುರುಶಾಂತ ||  || ೫೨ ||

ಭೂತ ಪಂಚಕದ ಸಂಚದ
ಲಾತುರವಂ ಕೆಡಿಸಿ ಪರಮ ಲಿಂಗವ ಕರದೊಳ್
ಸೈತಿರಿಸಿ ಅನ್ನ ಉದಕದ
ಪ್ರೀತಿಯಳಿದ ನಿತ್ಯಮುಕ್ತ ನಿಜಗುರುಶಾಂತ ||  || ೫೩ ||

ವೇಷವ ತೊಟ್ಟು ಮನುಜರ
ವಾಸವ ಹೊಕ್ಕವರ ಮುಂದೆ ಜ್ಞಾನಿಗಳೆನ್ನುತ
ಬೋಸರಿಸಲು ಒಡಲ ಹೊರೆವುದ
ನಾಶಮಾಡಿ ನಿತ್ಯಮುಕ್ತ ನಿಜಗುರುಶಾಂತ ||  || ೫೪ ||

ಭಕ್ತರ ಮನೆಯಂ ಹೊಕ್ಕವ
ರಿಚ್ಚೆಯ ನುಡಿದೊಂದು ತುತ್ತು ಅನ್ನವನುಣ್ಣದೆ
ನಿಚ್ಚಂ ಪರಮಾಮೃತ ಉಂ
ಡಕ್ಷಯನೇ ನಿತ್ಯಮುಕ್ತ ನಿಜಗುರುಶಾಂತ ||  || ೫೫ ||

ಅರೆಭಕ್ತರುಗಳ ಮನೆಯಂ
ಭರವಶದಿಂ ಹೊಕ್ಕು ತತ್ವಜ್ಞಾನದ ಮಾತಂ
ಸೊರವುತ ಉದರವ ಹೊರೆಯದ
ನಿರುಪಮನೇ ನಿತ್ಯಮುಕ್ತ ನಿಜಗುರುಶಾಂತ ||  || ೫೬ ||

ಮರ್ತ್ಯದ ನಾನಾ ಸುಖಗಳ
ಮಚ್ಚದರೊಳು ಮುಳುಗಿ ತಾಂ ಮುಂಗಾಣದೆ ಮನುಜರ
ವೊತ್ತಿಂಗೆ ಹೋಗಿ ಲಿಂಗದ
ವಾರ್ತೆಯ ನುಡಿಯ ನಿತ್ಯಮುಕ್ತ ನಿಜಗುರುಶಾಂತ ||  || ೫೭ ||

ಜಡಮನುಜರುಗಳ ವಾಸವ
ಬಿಡದೆಡೆಯಾಡುಂಡು ಅವರಿಚ್ಚೆಯ ನುಡಿಯದೆ
ವಡಗಲಿಸಿ ಲಿಂಗದೊಳು ಮನ
ವಡಗಿರ್ದನೆ ನಿತ್ಯಮುಕ್ತ ನಿಜಗುರುಶಾಂತ ||  || ೫೮ ||

ಕೀರ್ತಿವಾರ್ತೆಗಳ ಹಮ್ಮಿನ
ಆತುರದೊಳು ಬಿದ್ದು ಭಕ್ತರೆನುವ ಭ್ರಮಿತರ
ಧೂರ್ತರ ವಾಸದಲುಣ್ಣದ
ಸ್ವಾತಂತ್ರನೆ ನಿತ್ಯಮುಕ್ತ ನಿಜಗುರುಶಾಂತ ||  || ೫೯ ||

ಲಿಂಗವ ಕರದೊಳು ಧರಿಸಿ
ಲಿಂಗದೊಳಂ ದೃಷ್ಟಿನೆಟ್ಟು ಮನವಂ ಅದರೊಳು
ಸಂಗಿಸಿ ಜಡಮನುಜರ ವಾ
ಸಂಗಳ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೬೦ ||

ಅನುಭವಿಗಳೆಂದು ಮನುಜರ
ಮನೆಯಂ ಪೊಕ್ಕುಂಡವರ ಕೊಂಡಾಡುತಿಹ
ಬಿನುಗು ಗುಣವಳಿದು ಲಿಂಗ
ನೆನಹಿರ್ಪನೆ ನಿತ್ಯಮುಕ್ತ ನಿಜಗುರುಶಾಂತ ||  || ೬೧ ||

ಕಾಮನ ತೊತ್ತಿರ ಕಾಲೊಳು
ಪ್ರೇಮದಿ ಬಡಿವಡೆದು ಮತ್ತೆ ಜ್ಞಾನಿಗಳೆಂಬ
ತಾಮಸಿಗಳ ಸಂಗವ ತೊರೆ
ದ ಮಹಿಮನೆ ನಿತ್ಯಮುಕ್ತ ನಿಜಗುರುಶಾಂತ ||  || ೬೨ ||

ಅಂಗಜನ ಕೀಳು ತೊತ್ತಿರ
ಲಿಂಗಿಗಳಾಗಿಪ್ಪ ಮನುಜರೊಳು ಭುಂಜಿಸದೇ
ಪಿಂಗದೆ ಲಿಂಗ ಸಂಗದೊ
ಳಂಗವಿಸಿರೆ ನಿತ್ಯಮುಕ್ತ ನಿಜಗುರುಶಾಂತ ||  || ೬೩ ||

ಸತಿಯರ ಕಾಲಿನ ಘಾತಿಗೆ
ಸತತಂ ಮೈಮರೆದು ಮತ್ತೆ ಜ್ಞಾನಿಗಳೆಂಬ
ಮತಿಗೇಡಿಯ ಸಂಗವ ತೊರೆ
ದತಿಶಯನೆ ನಿತ್ಯಮುಕ್ತ ನಿಜಗುರುಶಾಂತ ||  || ೬೪ ||

ಹುಟ್ಟಿದ ನೆಲೆಯೊಳು ಮನಮಂ
ಕಟ್ಟಕ್ಕರೊಳಿರಿಸಿ ಮತ್ತೆ ಅನುಭವಿಯೆನುತಿಹ
ಭ್ರಷ್ಟರುಗಳ ಮನೆಗೆಯಿದುವ
ಕಷ್ಟವ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೬೫ ||

ಲಿಂಗಾಂಗಿಯೆಂದು ಗಳಹುತ
ಅಂಗನೆಯ ಕಾಲ ತನ್ನ ಹೆಗಲೊಳು ಹೊತ್ತು
ಸಂಗದಿ ಮೈಮರೆದಿಹ ಜಡ
ರಂಗಳ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೬೬ ||

ಸತಿಯರ ಮೋಹದಿ ಸತತಂ
ಹತವಾಗಿಯೆ ಮರೆಯ ನೀಗಿ ಅನುಭವಿಯೆನುತಿಹ
ಕೃತಕರ್ಮಿಯ ಮನೆಗೆಯಿದುವ
ಸ್ವತಸಿದ್ಧನೆ ನಿತ್ಯಮುಕ್ತ ನಿಜಗುರುಶಾಂತ ||  || ೬೭ ||

ಅಂಗನೆಯರಿಚ್ಛೆಯೊಳಿರ್ದು
ಅಂಗನೆಯರ ಸಂಗದಲ್ಲಿ ಮನಮಂ ಮೆಚ್ಚಿಸಿ
ಲಿಂಗಾಂಗಿಯೆಂಬ ಕರ್ಮಿಯ
ಸಂಗವ ತೊರೆಯೆ ನಿತ್ಯಮುಕ್ತ ನಿಜಗುರುಶಾಂತ ||  || ೬೮ ||

ಹೆಂಗಸಿನ ಕಾಲ ಸಂಗದಿ
ಹಿಂಗದೆ ತಾನಿರ್ದು ಲಿಂಗ ಸಂಗಿಗಳೆನುತಿಹ
ಭಂಗಿತರ ಮನೆಯನು ಹೊಕ್ಕು
ಭಂಗವಳಿಯೆ ನಿತ್ಯಮುಕ್ತ ನಿಜಗುರುಶಾಂತ ||  || ೬೯ ||

ಮನ್ಮಥನ ಬಾಣಗಾಯಕೆ
ಹಮ್ಮೈಸುತ ನರಳಿ ಹೊರಳಿಯುರುಳುತಲಿ ತಾವೇ
ಬ್ರಹ್ಮಜ್ಞಾನಿಗಳೆನುತಿಹ
ಕರ್ಮಿಯ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೭೦ ||

ಭಕ್ತರು ಸತ್ಯರು ನಿತ್ಯರು
ಮುಕ್ತರು ತಾನೆಂದು ಗಳಹಿ ಸತಿಯರ ಸಂಗದಿ
ಮತ್ತರಾಗಿಪ್ಪ ಜಡರುಗ
ಳೊತ್ತಿಗೆಳಸ ನಿತ್ಯಮುಕ್ತ ನಿಜಗುರುಶಾಂತ ||  || ೭೧ ||

ಹೊನ್ನಿನ ಹೆಣ್ಣಿನ ಮಣ್ಣಿನ
ಬಿನ್ನಾಣದ ಬಲೆಗೆ ಸಿಲುಕಿ ಲಿಂಗದ ನೆಲೆಯಂ
ಚೆನ್ನಾಗಿ ಅರಿದೆನೆನುತ್ತಿಹ
ಕುನ್ನಿಯ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೭೨ ||

ಸತಿಯರ ದ್ವಿಕಾಲ ಮಧ್ಯದಿ
ಸತತಂ ಮದಿಸುತ ಲೋಭಮೋಹದಿ ಮುಳುಗಿರ್ದ
ಸಿತ ಲಿಂಗಾಂಗಿಯೆನುತ್ತಿಹ
ಹಿತರ ನುಡಿಸೆ ನಿತ್ಯಮುಕ್ತ ನಿಜಗುರುಶಾಂತ ||  || ೭೩ ||

ಸತಿಯರ ನೋಡುವ ದೃಷ್ಟಿಯ
ಸತತಂ ಲಿಂಗದಲಿಯಿರಿಸಿ ಲಿಂಗದಿ ಬಾಳುತ
ರತಿಯಿಂದ ಕಾಮ ಸುಖಮಂ
ಹತಮಾಡಿದ ನಿತ್ಯಮುಕ್ತ ನಿಜಗುರುಶಾಂತ ||  || ೭೪ ||

ಷಣ್ಮುಖಿಯ ಮುದ್ರೆಯಿಂದಂ
ಬ್ರಹ್ಮದ ಬೆಳಗರಿವೆನೆಂದು ಕಣ್ಮುಚ್ಚಿರುತಿಹ
ದುರ್ನರರೊಳು ಘನಲಿಂಗವ
ನಿರ್ಣಯಿಸದ ನಿತ್ಯಮುಕ್ತ ನಿಜಗುರುಶಾಂತ ||  || ೭೫ ||

ಚಿದ್ರೂಪ ಲಿಂಗ ಕರದೊಳು
ನಿರ್ಧರವಾಗಿರಲು ಮುದ್ರೆಯಿಂದರಸುತಿಹ
ಬದ್ಧರ ನುಡಿಸದೆ ಲಿಂಗದೊ
ಳಿದ್ದರೆ ತಾಂ ನಿತ್ಯಮುಕ್ತ ನಿಜಗುರುಶಾಂತ ||  || ೭೬ ||

ಕಣ್ಮುಚ್ಚಿ ಬೊಮ್ಮರಂಧ್ರದ
ಚಿನ್ಮಯ ಲಿಂಗವನು ಕಂಡು ನಿಜವಂ ಮರದು
ಉನ್ಮತ್ತದಿ ಹುಟ್ಟಿ ಸಾಯ್ವ
ಕರ್ಮಿಯ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೭೭ ||

ನಿಶ್ಚಯದ ಲಿಂಗದೊಳು ಮನ
ಬೆಚ್ಚಾ ಲಿಂಗವನು ಕರಕಮದೊಳ್ ಧರಿಸಿ
ಇಚ್ಚೆಯೊಳಾಡುತ ಲೋಕದ
ಮೆಚ್ಚಳಿಯಲು ನಿತ್ಯಮುಕ್ತ ನಿಜಗುರುಶಾಂತ ||  || ೭೮ ||

ನಡೆಯಂ ನುಡಿಯಂ ಭಾಗ್ಯದೊ
ಳೊಡಗೂಡಿ ಲಿಂಗದೇವರಂ ಕರಕಮಲದಿ
ದೃಢವಾಗಿ ಪಿಡಿದು ಚರಿಸುವ
ಸಡಗರದವ ನಿತ್ಯಮುಕ್ತ ನಿಜಗುರುಶಾಂತ ||  || ೭೯ ||

ರೂಪಾತೀತನೆನಿಪ ನಿ
ರೂಪನ ನಿಜರೂಪವ ಮಾಡಿ ಕರದಿ ಪಿಡಿದಾ
ರೂಪಿನೊಳು ಪ್ರಾಣ ಮನವ
ಲೇಪಿಸದನೆ ನಿತ್ಯಮುಕ್ತ ನಿಜಗುರುಶಾಂತ ||  || ೮೦ ||

ನಿರ್ಧರ ಲಿಂಗದಿ ಮನಮಂ
ಹೊದ್ದು ಪರಮಾಮೃತ ಲಿಂಗವ ಕರಕಮಲದಿ
ಶ್ರದ್ಧೆಯಲಿ ಧರಿಸಿ ಚರಿಸುವ
ಚಿದ್ರೂಪನೆ ನಿತ್ಯಮುಕ್ತ ನಿಜಗುರುಶಾಂತ ||  || ೮೧ ||

ಆಶಾಪಾಶದ ಹೇಸಿಕೆ
ವಾಸದೊಳಿಹ ಮನವಂ ತಂದು ಲಿಂಗದ ನಿಜಾ
ವಾಸದೊಳಗಿರಿಸಿ ಆಶೆಯ
ನಾಶಗೊಳಿಪ ನಿತ್ಯಮುಕ್ತ ನಿಜಗುರುಶಾಂತ ||  || ೮೨ ||

ಬೀಜದೊಳು ವೃಕ್ಷವಿರ್ದುಂ
ರಾಜಿಸಿ ಸಫಲವಾಗಿ ಮತ್ತೆ ಬೀಜದೊಳಡಗಿ
ಓಜೆಯ ಲಿಂಗದೊಳಾಡುವ ಸ
ಹಜನವನೇ ನಿತ್ಯಮುಕ್ತ ನಿಜಗುರುಶಾಂತ ||  || ೮೩ ||

ಅಂಗದೊಳಗಿರ್ದ ಲಿಂಗದ
ಸಂಗದೊಳುರೆ ಬಾಳುತಿಹಪರಂಗಳನರಿಯದೆ
ಲಿಂಗವ ಕರಕಮಲದೊಳಂ
ಹಿಂಗದಿರಿಸೆ ನಿತ್ಯಮುಕ್ತ ನಿಜಗುರುಶಾಂತ ||  || ೮೪ ||

ಪಿಂಡ ಬ್ರಹ್ಮಾಂಡದೊಳಗೆ
ಖಂಡಿತನಾಗಿಪ್ಪ ನಿರವಯವನಾ ರೂಪಿಸಿ
ಕಂಡು ಕರದಲ್ಲಿ ಧರಿಸುವ
ಖಂಡನೇ ತಾಂ ನಿತ್ಯಮುಕ್ತ ನಿಜಗುರುಶಾಂತ ||  || ೮೫ ||

ಇಷ್ಟದ ಲಿಂಗದ ದೃಷ್ಟಿಯೆಲ್ಲವ
ನಿಟ್ಟು ಮನಂ ಬೆರಸಿ ತನುಗುಣಂಗಳನೆಲ್ಲವ
ನಿಟ್ಟೊರಸಿ ಚರಿಸಿಯಾಡುವ
ಶ್ರೇಷ್ಠನೆ ತಾಂ ನಿತ್ಯಮುಕ್ತ ನಿಜಗುರುಶಾಂತ ||  ೮೬ ||

ಮನಭಾವ ದೃಷ್ಟಿಯೆಲ್ಲವ
ಘನಲಿಂಗದೊಳಿರಿಸಿ ಮತ್ತೆಯೇನೊಂದು ತಾಂ
ನೆನೆಯದೆ ಭಾವಿಸಿ ನೋಡದ
ಸನುಮತನೇ ನಿತ್ಯಮುಕ್ತ ನಿಜಗುರುಶಾಂತ ||  || ೮೭ ||

ಅಂಬರದೊಳು ಹೊರಗೆಲ್ಲಂ
ತುಂಬಿಹ ಪರಮ ಪ್ರಕಾಶಲಿಂಗವ ಕರದೊಳ್
ತಂದಿರಿಸಿ ಮನವನದರೊಳ
ಗಿಂಬಿಟ್ಟನೆ ನಿತ್ಯಮುಕ್ತ ನಿಜಗುರುಶಾಂತ ||  || ೮೮ ||

ನೆಲೆಗೆಟ್ಟ ಶೂನ್ಯಲಿಂಗವ
ನೆಲೆಯಾಗಿಯೆ ಕರದೊಳಿರಿಸಿ ಆತ್ಮದಿ ಬೆಳಗುವ
ಸಲೆ ಚೈತನ್ಯವದರೊಳು
ನಿಲಿಸಿದನೇ ನಿತ್ಯಮುಕ್ತ ನಿಜಗುರುಶಾಂತ ||  || ೮೯ ||

ಜಡವಜಡವೆಂಬ ನುಡಿಯಂ
ಕಡೆಗಣಿಸಿ ಲಿಂಗಮೂರ್ತಿಯಂ ಕರಕಮಲದಿ
ದೃಢವಾಗಿವಿಡಿದು ಚರಿಸುವ
ಕಡುಗಲಿಯೆ ನಿತ್ಯಮುಕ್ತ ನಿಜಗುರುಶಾಂತ ||  || ೯೦ ||

ಬೋಳಾದ ಬಳಿಕ ವಿಷಯದ
ದಾಳಿಯನತಿಗಳೆದು ಪರಮಲಿಂಗದಿ ಮನವಂ
ಮೇಳೈಸಿ ತನುಗುಣಂಗಳ
ಜಾಳಿಸಿದನೆ ನಿತ್ಯಮುಕ್ತ ನಿಜಗುರುಶಾಂತ ||  || ೯೧ ||

ನಿಜಲಿಂಗವು ಕರಕಮಲದಿ
ಸದಮಲ ಜ್ಯೋತಿಸ್ವರೂಪವಾಗಿರೆ ಮನವಂ
ಪುದಿದಾ ಲಿಂಗದಿ ತೃಷೆಯಂ
ಕ್ಷುಧೆಯಳಿದನೆ ನಿತ್ಯಮುಕ್ತ ನಿಜಗುರುಶಾಂತ ||  || ೯೨ ||

ಕರಕಮಲದಲ್ಲಿ ಲಿಂಗವ
ಧರಿಸುರುತರ ಲಿಂಗದಿ ತನ್ನ ಅಂಗವನಿಟ್ಟು
ಉರುತರದನುಪಮ ಸುಖದಾ
ನಿರುಪಮನೇ ನಿತ್ಯಮುಕ್ತ ನಿಜಗುರುಶಾಂತ ||  || ೯೩ ||

ರೂಪಿಲ್ಲದ ನಿಃಶೂನ್ಯವು
ರೂಪಾಗಿಯೆ ಕರದೊಳಿರಲು ಮನದೊಳು ನಾನಾ
ವ್ಯಾಪಾರವಳಿದು ಆತ್ಮದಿ
ಲೇಪಿಸಿದನೆ ನಿತ್ಯಮುಕ್ತ ನಿಜಗುರುಶಾಂತ ||  || ೯೪ ||

ಅಂಗದೊಳು ಲಿಂಡವಡಗಿ
ರ್ದಂದವ ತಾಂ ತಿಳಿದು ಮತ್ತೆಯಾ ಲಿಂಗದೊಳಂ
ಸಂಧಿಸಿ ಮನವಂ ಕರದೊಳು
ಹಿಂಗದಿರಿಸೆ ನಿತ್ಯ ಮುಕ್ತ ನಿಜಗುರುಶಾಂತ ||  || ೯೫ ||

ಅರ್ಚಿಸಿ ಪೂಜಿಸಿ ಧ್ಯಾನಿಸಿ
ನಿಚ್ಚಂ ಜಪಮಾಡಿ ಹಾಡಿ ಹೊಗಳಿ ಭ್ರಮೆಯಂ
ತೀರ್ಚಿ ಲಿಂಗದಿ ಮನವಂ
ಬೆರ್ಚಿಪನೇ ನಿತ್ಯಮುಕ್ತ ನಿಜಗುರುಶಾಂತ ||  || ೯೬ ||

ಪ್ರಾಣದೊಳಿಪ್ಪ ಲಿಂಗವ
ಕಾಣಿಸಿ ಕರಕಮಲದಲ್ಲಿ ಧರಿಸಿ ಸಕೀಲ
ವನರಿದೊಡಗೂಡುತಲಿರ್ಪ
ಜಾಣನೆ ತಾಂ ನಿತ್ಯಮುಕ್ತ ನಿಜಗುರುಶಾಂತ ||  || ೯೭ ||

ನಿತ್ಯಾನಿತ್ಯವನರಿಯದೆ
ಚಿತ್ತವ ಲಿಂಗದೊಳಗಿರಿಸಿ ತಾನಿದಿರೆನ್ನದೆ
ಮರ್ತ್ಯರ ನಾನಾ ಸುಖಗಳ
ನತ್ತಲೆ ಬಿಡೆ ನಿತ್ಯಮುಕ್ತ ನಿಜಗುರುಶಾಂತ ||  || ೯೮ ||

ಪಲಕೆಲವ ನೆನೆವ ಮನವಂ
ತೊಲಗದೆ ಲಿಂಗದೊಳಿರಿಸಿ ಪರಮೋಲ್ಲಾಸದಿ
ಉಲುಹಡಗಿ ಶಬ್ದಮುಗ್ಧದಿ
ಚಲಿಸುವವನೇ ನಿತ್ಯಮುಕ್ತ ನಿಜಗುರುಶಾಂತ ||  || ೯೯ ||

ಅಂಗವ ಲಿಂಗವದೊಳಿರಿಸಿಯೆ
ಲಿಂಗವನಂಗದೊಳು ಧರಿಸಿ ತಾನಿದಿರಿಂದಂ
ಭಂಗವನಳಿದು ಮಹಾಘನ
ಲಿಂಗದಿ ಬೆರೆದ ನಿತ್ಯಮುಕ್ತ ನಿಜಗುರುಶಾಂತ ||  || ೧೦೦ ||

ಶಬ್ದಸಾರಾಯದ ಬಿನು
ಗುದ್ರೇಕವನಳಿದು ಪರಮಲಿಂಗವ ಕರದೊಳ್
ತಾಳ್ದಾಲಿಂಗದಿ ಮನಮಂ
ಅದ್ದ್ಯಾಚರಿಸೆ ನಿತ್ಯಮುಕ್ತ ನಿಜಗುರುಶಾಂತ ||  || ೧೦೧ ||

ಒಚ್ಚತನಾಗಿ ಲಿಂಗದಿ
ಬೆಚ್ಚು ಮನಂ ಬೆರಸಿ ಭೇದಬುದ್ಧಿಯನರಿಯದೆ
ನಚ್ಚಿ ಕರಕಮಲ ಲಿಂಗದಿ
ಬೆಚ್ಚಿಹನೇ ನಿತ್ಯಮುಕ್ತ ನಿಜಗುರುಶಾಂತ ||  || ೧೦೨ ||

ಕಂಗಳೊಳಗೊತ್ತಿದ ಮಹಾ
ಲಿಂಗದಿ ಮನವಿರಿಸಿ ಮತ್ತೆಯಾ ಲಿಂಗದೊಳುಂ
ಸಂಗಿಸುತ ಹಸಿವು ತೃಷೆಗಳ
ಜಂಗುಳಿಯುಳಿವ ನಿತ್ಯಮುಕ್ತ ನಿಜಗುರುಶಾಂತ ||  || ೧೦೩ ||

ಘನಕೆ ಘನವೆನಿಪ ಲಿಂಗದಿ
ಮನ ಭಾವವನೊಂದುಗೂಡಿಯಾ ಘನಲಿಂಗದ
ಅನುಪಮ ಚಿತ್ಸುಖದಿಂದಂ
ತನುಗುಣವಳಿದ ನಿತ್ಯಮುಕ್ತ ನಿಜಗುರುಶಾಮತ ||  || ೧೦೪ ||

ಜಾಗರ ಸ್ವಪ್ನ ಸುಷುಪ್ತಿಯ
ಬೇಗೆಯೊಳಂ ಬೇವುತಿಪ್ಪ ಮನವಂ ಲಿಂಗದಿ
ಯೋಗಿಸಿ ಮಾಯಾಸುಖಗಳ
ಭೋಗವ ಮರೆದ ನಿತ್ಯಮುಕ್ತ ನಿಜಗುರುಶಾಂತ ||  || ೧೦೫ ||

ಕರಕಮಲದಿ ಲಿಂಗವ ಕಾಟದಿ
ಕೋಟಲೆಗೊಳುತಿರ್ಪ ಮನವ ಘನಶಿವಲಿಂಗದಿ
ನಾಟಿಸಿ ತನುಗುಣವರಿಯದ
ಕೂಟಸ್ಥನೆ ನಿತ್ಯಮುಕ್ತ ನಿಜಗುರುಶಾಂತ ||  ೧೦೬ ||

ಊಟದ ನಿದ್ರೆಯ ಕಾಟದಿ
ಕೋಟಲೆಗೊಳುತಿರ್ಪ ಮನವ ಘನಶಿವಲಿಂಗದಿ
ನಾಟಿಸಿ ತನುಗುಣವರಿಯದ
ಕೂಟಸ್ಥನೆ ನಿತ್ಯಮುಕ್ತ ನಿಜಗುರುಶಾಂತ ||  || ೧೦೭ ||

ಸೀತೋಷ್ಣ ಹಸಿವು ತೃಷೆಗಳ
ಆತುರದಿಂ ಭ್ರಮಿಸುತಿರ್ಪ ಮನವಂ ಲಿಂಗದಿ
ಸಯ್ತಿರಿಸಿ ಅಡವಿ ಗಿರಿ ಗುಹೆ
ವಾಸದಿ ಚರಿಪ ನಿತ್ಯಮುಕ್ತ ನಿಜಗುರುಶಾಂತ |   || ೧೦೮|

ಮನದ ಕೊನೆಯೊಳಗೆ ಮಿನುಗುವ
ಘನಬೆಳಗಂ ತೆಗೆದು ಕರಕಮಲದೊಳ್ ಧರಿಸಿದ
ರನುವರಿದು ಚರಿಸಿಯಾಡುವ
ಚಿನುಮಯನೇ ನಿತ್ಯಮುಕ್ತ ನಿಜಗುರುಶಾಂತ ||  || ೧೦೯ ||

ತನುಗುಣವೆಲ್ಲವ ಲಿಂಗದ
ಅನುವಿನೊಳೊಡಗೂಡಿ ಮತ್ತೆ ಪಂಚೇಂದ್ರಿಯಮಂ
ಘನಲಿಂಗದೊಳು ಸಮರ್ಪಿಸೆ
ಸನುಮತನವ ನಿತ್ಯಮುಕ್ತ ನಿಜಗುರುಶಾಂತ ||  || ೧೧೦ ||

ತಾನೆನ್ನದೆ ಇದಿರೆನ್ನದೆ
ಏನೆನ್ನದೆ ಮನವನಮಲ ಲಿಂಗದ ಸಂಗದಿ
ಅನುವ ಮಾಡಿಯಾಚರಿಸುವ
ಮೌನಿಯು ತಾಂ ನಿತ್ಯಮುಕ್ತ ನಿಜಗುರುಶಾಂತ ||  || ೧೧೧ ||

ತನುವೆನ್ನದೆ ಮನವೆನ್ನದೆ
ಘನವೆನ್ನದೆ ಘನದಿ ತಾನು ಬೆರಸಿದೆನೆನ್ನದೆ
ಅನುಪಮ ಲಿಂಗವನಾತ್ಮದ
ಲನುಗೊಳಿಸಿದ ನಿತ್ಯಮುಕ್ತ ನಿಜಗುರುಶಾಂತ ||  || ೧೧೨ ||

ನುಡಿದಾ ಭಾವವ ಕಡೆಗಂ
ನಡೆಸದೆಯದರನುಭವ ಬಿಟ್ಟು ತ್ರಿವಿಧ ಮಲ ಕಟ್ಟಿರ್ದ
ಜಡಮತಿಗೆ ಲಿಂಗ ಸಂಗದ
ಜಡತೆ ಏಕೆ ನಿತ್ಯಮುಕ್ತ ನಿಜಗುರುಶಾಂತ ||  || ೧೧೩ ||

ಬಿಟ್ಟು ತ್ರಿವಿಧ ಮಲವ ಕೇಣ
ಗೆಟ್ಟು ಮನಮುಟ್ಟಿ ಮರಳಿಯುಮದನೆ ಕಲಿಸುವ
ಭ್ರಷ್ಟರಿಗೆ ಲಿಂಗ ಸಂಗದ
ನಿಷ್ಠೆ ಏಕೆ ನಿತ್ಯಮುಕ್ತ ನಿಜಗುರುಶಾಂತ ||  || ೧೧೪ ||

ಅರಿವುಳ್ಳ ಪುರುಷನಾದೊಡೆ
ಎರಗುವನೆ ? ಬಿಟ್ಟ ತ್ರಿವಿಧ ಮಲಕ್ಕೆ ಬಾಯ್
ತೆರೆವನೆ ? ಅದರ ರುಚಿಗೆ ಮಯ
ಮರೆವನೇ ? ತಾಂ ನಿತ್ಯಮುಕ್ತ ನಿಜಗುರುಶಾಂತ ||  || ೧೧೫ ||

ಇಹವೆನ್ನದೆ ಪರವೆನ್ನದೆ
ಇಹಪರವೆರಡರೊಳು ತೋರ್ಪ ಸುಖವ ಮೆಚ್ಚದೆ
ಸಹಜಾನಂದದಿ ಲಿಂಗದ
ಸಹವರ್ತಿಯೆ ನಿತ್ಯಮುಕ್ತ ನಿಜಗುರುಶಾಂತ ||  || ೧೧೬ ||

ಪರವೆನ್ನದೆ ಇಹವೆನ್ನದೆ
ಪರಪದವೆಂದೆಂಬ ಫಲಪದಂಗಳ ಬಯಸದೆ
ಕರಕಮಲದ ಲಿಂಗಕೆ ತಾ
ನಿರದರ್ಪಿಸೆ ನಿತ್ಯಮುಕ್ತ ನಿಜಗುರುಶಾಂತ ||  || ೧೧೭ ||

ಇಂತೀ [1]ಕಂದ1 ವನರಿದ ಮ
ಹಂತನು ನಿಜಮುಕ್ತನಾಗಿ ಜನನದಿ ಮರಣದಿ
ಭ್ರಾಂತಳಿದು ಲಿಂಗದೊಳಗೋ
ರಂತೊಡಗಲಸಿರ್ಪನಯ್ಯಾ ನಿಜಗುರುಶಾಂತ ||  || ೧೧೮ ||

ನಾಗಿದೇವರು ನಿರೂಪಿಸಿದ ಶಾಂತ ಶತಕ ಸಮಾಪ್ತಿ
ಮಂಗಳಮಹಾ ಶ್ರೀ ಶ್ರೀ ಶ್ರೀ ||

 

 

[1] ಶತಕ (ಶತಕ ಸಂಪುಟ ಸಂ : ಜಿ.ಎ.ಶಿವಲಿಂಗಯ್ಯ, ಮೈಸೂರು ೧೯೯೫ ಪು : ೨೭೧)