ಸುಗುಣೆ ಮಹೇಶನ ಬಗೆಯ ತಿಳಿದು ಪೇಳ್ವೆ
ಮೃಗಮದಗಂಧಿ ಕೇಳೊಲಿದು ||  || ಪಲ್ಲ ||

ಚಿರದೋಷಮೆಸಗಿ ಭಾ
ಪುರೆ ತನ್ನ ಮರೆಯೋಗೆ
ಪೊರೆವನೆಂಬುದು ನಿಜವೇನು?
ಧರೆಗೆ ದೋಷಾಕರ
ನುರು ಚಂದ್ರನವನನು
ದ್ಧರಿಸಿದನಂದು ಮೃಗಾಕ್ಷಿ ||  || ೧ ||

ಅಂಗನೆ ವಿಶ್ವಜೀ
ವಂಗಳ ಪೆತ್ತಬೆ
ಡಂಗಿವಗದೆಂತಾದುದಮ್ಮಾ
ಪಿಂಗದುಮೆಯೆ ತನ
ಗಂಗವಾಗಿರೆ ಸೋಮೇ
ಶಂಗದೇನರಿದೆ ಲತಾಂಗಿ ||  || ೨ ||

ತನ್ನ ಧರ್ಮವೆ ಜಗ
ಮನ್ನರೆ ರಕ್ಷಿಪು
ದುನ್ನಿಜವೇನೆ ಮಾನಿನಿಯೆ
ನನ್ನಿ ಧರ್ಮವೆ ವೃಷ
ಭನ್ನಿಖಿಲಕೆ ಕರ್ತೃ
ವೆನ್ನದೆ ಜನವಿಂದುಲಮುಖಿಯೆ ||  || ೩ ||

ಸಲೆ ಮಸಣದಲಿ ತಾ
ನೊಲಿದು ಕುಣಿವನಂತೆ
ಲಲನೆ ಪೇಳ್ಗರುವರ ಗುಣವೆ
ವಿಲಯಕಾಲದೊಳೊಲ್ಮೆ
ಯಲರ್ದು ನಾಟ್ಯಕೆ ನಿಂದು
ನಲಿವ ವಿನೋದವೆ ಸಖಿಯೆ ||  || ೪ ||

ಪಸಿದೊವಲುಟ್ಟು ಕಾ
ಳ್ಬಿಸವುಂಡು ಜೋಗಿಗ
ರಸುಮಗಳೆಂತು ಸಾರಿದಳೆ
ಒಸೆದು ಕೇಳ್ಗಿರಿಜೆ ಮೋ
ಹಿಸಿ ತಪದಲ್ಲಿ ಮ
ಚ್ಚಿಸಿ ವಧುವಾದಳೆ ಚದುರೆ ||  || ೫ ||

ಸುರನರೋರಗಲೋಕ
ದರಸಂತೆ ಜಗದಲ್ಲಿ
ತಿರಿವನೇತಕೆ ತರಳಾಕ್ಷಿ
ಹರಿಯಜಾದ್ಯಮರರ
ಪೊರೆವ ಭಿಕ್ಷಾಟಣ
ವರಲೀಲೆಯಾತಂಗೆ ಬಾಲೆ ||  || ೬ ||

ತಿಳಿವಿಲ್ಲವೇನೆ ಕೋ
ಮಳೆ ಚಿತಾಭಸಿತವ
ತಳೆವುದು ತನಗಂದವೇನೆ?
ಕೆಳದಿಯಂಗಜನ ಸು
ಟ್ಟ ಲಘು ಭಸ್ಮವನಿಟ್ಟು
ಚಳಯೋಗಿಗಳ ದೇವನಮ್ಮ ||  || ೭ ||

ಘನಪಾಪವೆಸಗಿಯಂ
ತನೆ ತನ್ನ ಪೆಸರ್ಗೊಳ್ವ
ಜನರ ರಕ್ಷಿಪನಂತೆ ಕಾಂತೆ
ಮನವರಿಯಾ ಶ್ವೇತ
ನನೆಯ್ದೆ ಪೊರೆದಂತ
ಕನ ಕೊಂದನಂದು ಸುಂದರಿಯೆ ||  || ೮ ||

ಗೆಲಗಯ್ಯ ಬಿಲ್ಲಾರ
ನಲಘು ವಿಕ್ರಮನೆಂಬ
ರೊಲಿದುಸುರೆ ಪದ್ಮಗಂಧಿ
ಲಲನೆ ಮುಪ್ಪೊಳಲನಂ
ದೆಲೆ ಹರಿಬಾಣದೆ
ಗೆಲಿದುದು ಮರೆಯ ಮಾತೇನೆ ||  || ೯ ||

ಉಗುರ್ಗೊನೆಯಿಂದಬ್ಧಿ
ಸುಗಿಯೆ ಬರೆದನೆಂಬ
ಟ್ಟಗೆವಂದು ಗೆರೆಯನಂತಮ್ಮ
ಪಗೆ ಜಲಂಧರನ ತ
ಲೆಗೆ ಮಾರಿಯಾದುದೌ
ಮುಗುದೆ ಕೇಳ್ಗೆರೆಯ ಸಾಸವನು ||  || ೧೦ ||

ಅಲಸದೆ ಮಿಥ್ಯದಿಂ
ದುಲಿವ ದುರ್ಮುಖರ ಪೆ
ರ್ಗತಿಗೆ ಮುನಿವನಂತೆ ಜಾಣೆ
ಮಲತೂಳ್ವ ಬೊಮ್ಮನ
ತಲೆಯನರಿದುದ ನೀ
ನೆಲನರಿಯದೆ ನೀಲವೇಣಿ ||  || ೧೧ ||

ಧುರಧೀರನೀಶ ದ್ರೋ
ಹರ ಗಂಡನೆಂದೆಂಬ
ಬಿರುದಿವಗೆಂದಾದುದಮ್ಮ
ಹರಿಮುಖ್ಯ ಸುರರುಕ್ಕ
ನರಿದು ದಕ್ಷನ ಗೋಣ
ನರಿದಂದು ಮೊದಲೆ ಭಾವಕಿಯ ||  || ೧೨ ||

ಹರಿಗತಿ ಪ್ರಿಯನಂತೆ
ಹರಿಹರನಾದುದ
ಚ್ಚರಿ ಪೇಳೆ ಬಿತ್ತಿಗರರಸಿ
ಹರಿಯುವತಾರದು
ತ್ಕಕರದುಕ್ಕ ನಿಕ್ಕಲ್ಕೆ
ಹರಿಹರನೆನಿಸಿದನಮ್ಮ ||  || ೧೩ ||

ತೆಗೆತೆಗೆಯವನ ಲೇ
ಸಿಗೆ ಮೆಚ್ಚಿದಳಿಗಾವ
ಸೊಗಸೆ ಸುಗುಣರೊಲ್ಮೆಗಾರ್ತಿ
ಅಗಜೆಗರ್ಧಾಂಗವ
ನೊಗಮಿಗೆಯಿಂದಿತ್ತು
ಬಿಗಿದಪ್ಪಿದುದೆ ಸಾಕ್ಷಿಗರುವೇ ||  || ೧೪ ||

ಬಗೆಯಲನ್ಯಾಯ ವ
ರ್ತಿಗಳೆಂಬ ಮಿಗದೊಬ್ಬು
ಳಿಗೆ ಬೇಂಟೆಕಾರನಂತಮ್ಮ
ಮಗಳಿಗಳುಪಿದನಜ
ಮೃಗವೆಚ್ಚ ಬೇಡನಂ
ದಿಗೆ ವೇದ ಶುನಕವಾಗಿರವೆ ||  || ೧೫ ||

ಉಂಡಮನೆಯ ಕೊಂಬ
ಲೆಂಡರನಲೆದು ಮುಂ
ಕೊಂಡು ಮರ್ದಿಪನಂತೆ ನಿಪುಣೆ
ಕಂಡೆ ನಾ ಬಲಿಯ ಬೆಂ
ಗೊಂಡನೆಲುವ ಕಿಳ್ತು
ದಂಡವೆನಿಸಿ ತಳೆದುದನು ||  || ೧೬ ||

ಯುವತಿಯೀತಂಗೊಲಿ
ದವರ ಗೋತ್ರಾಪೇಕ್ಷೆ
ತವಿಸುವುದೇ ಶುಕವಾಣಿ
ಅವನಿಗೆ ತಂದೆಯಂ
ತವೆ ಕೊಂದ ಚಂಡನೆಂ
ಬವನಿವಂಗತಿಹಿತನರಿಯಾ ||  || ೧೭ ||

ಪಳಿಕುವಣ್ಣದ ದೇಹ
ಕಳವಟ್ಟ ಗಳದಲ್ಲಿ
ತೊಳಪ ನೀಲದ ಢಾಳವೇನೆ
ಬಳವಂ ಕೆಡಿಸಿ ದೇವ
ರ್ಕಳ ಕೊಲ್ವ ಪೊಸ ಬಿಸ
ದಳೆದನದೌಮಂದಯಾನೆ |   || ೧೮ ||

ಸನ್ಮಾರ್ಗಿಗಳನತಿ
ಉನ್ಮತರಂ ಕೊಲ್ವು
ದುನ್ಮಾನಿಗಿವನಿಷ್ಟದಂತೆ
ಸನ್ಮಾರ್ಗರರಿಗರಿ
ಮನ್ಮಥ ಜನಕಂಗೆ
ತನ್ಮಹಾ ಚಕ್ರವಿತ್ತೊಲಿದ ||  || ೧೯ ||

ಸಕಲವಿದ್ಯೆಗಳ ಸಾ
ಧಕರಿವನಮಲ ಪಾ
ದಕೆ ಮೊದಲೆರಗುವರೇಕೆ ?
ಪ್ರಕಟವಲ್ಲವೆ ನೀಲಾ
ಳಕಿ ಗಣನಾಥ ಜ
ನಕನೆಂದೊಡಭಿವಂದನಲ್ತೆ ||  || ೨೦ ||

ಮಿಗಿಲಾದ ನೇಹದ
ಣುಗನ ಮುದ್ದಿಪ ಸೈಪಿ
ನೊಗುಮಿಗೆಯುಂಟೇನೆ ಬಾಲೆ
ಅಗಜಾತೆ ಪೆತ್ತಾರು
ಮೊಗನ ಚುಂಬಿಸುವನ
ವಗಮಿದೆಲ್ಲಕೆ ರೂಢಿ ಪ್ರೌಢೆ ||  || ೨೧ ||

ಒಂದಡಿಯುರುಧರ್ಮ
ದಿಂದಿರೆರಡು ಯುಗ
ಮಂದಿರವೆನೆ ಪಾಲಿಪುದು
ಸುಂದರಿಯೊಲಿದು ಕೇ
ಳ್ನಂದೀಶನೇಕ ಪಾ
ದಂದೊರೆವಡೆದಿರ್ಪುದದೇಕೋ ||  || ೨೨ ||

ಪಾತಕರ್ಗಿತ್ತದಾ
ನಾತಿಶಯದ ದೋಷ
ಮೀತನಿಂದಳಿವವಂತಮ್ಮಾ
ಘಾತಕ ವಿಪ್ರರಿಂ
ಪಾತಕಮಂಟಿದ
ಗೌತಮನಘವ ಭಂಗಿಸನೆ ||  || ೨೩ ||

ನಾರಿಯರಿವನ ಶೃಂ
ಗಾರವೀಕ್ಷಿಸಿ ಕುಲಾ
ಚಾರವನುಳಿವರಂತಮ್ಮಾ
ದಾರುವನದೊಳಿರ್ಪ
ವಾರಿಜಾಕ್ಷಿಯರೇಳ್ಗೆ
ನೀರ ಕೊಡದೆ ಗಾಡಿಕಾರ್ತಿ ||  || ೨೪ ||

ಸರಿಮಿಗಿಲೆಂದಹಂ
ಕರಿಸೆ ಶಾಂತೇಶನ
ವರಪರಿಭವಿಸುವನಂತೆ
ಹರಿವಿಧಿಗಳ್ಕೇಣ
ಸರದೆ ಪೊರೆದೊಡುಗೆ
ದುರುಲಿಂಗವೌ ರಾಜವಂದನೆ ||  || ೨೫ ||

ಪರಮಾಯುರಾರೋಗ್ಯ
ಸ್ಥಿರಭಕ್ತಿ ಸೌಭಾಗ್ಯ
ಪರಮುಕ್ತಿ ಫಲಿಸುವದೆಂತು
ಹರನ ಲೀಲೆಗಳನಾ
ದರಿಸಿ ಕೇಳುವೆ ಬುದ್ಧಿ
ದೊರಕಲಂತವು ಸಾಧ್ಯವಮ್ಮ ||  || ೨೬ ||

ಕರಿಕನ್ನಡಿಯೊಳೆಯ್ದೆ
ಪರಿಶೋಭಿಸುವವೊಲೀ
ಶ್ವರನ ಘನತರ ಲೀಲೆಗಳ
ಶರಷಟ್ಪದದೆ ವಿ
ಸ್ತರಿಸಿದೆನಾಲಿಸಿ
ಗುರುಶಾಂತಲಿಂಗನರ್ಚಕರು ||  || ೨೭ ||

ಕರಸ್ಥಲ ನಾಗಿದೇವರು ನಿರೂಪಿಸಿದ
ಪಂಚವಿಂಶತಿ ಲೀಲಾಂಕಿತ ಸ್ತೋತ್ರ ಸಮಾಪ್ತಿ
ಮಂಗಳಮಹಾ ಶ್ರೀ ಶ್ರೀ ಶ್ರೀ ||