ಗುರುಸ್ಥಲದ ಅನುಭಾವ ತೆರವ ವರ್ಣಿಸಲಿಕ್ಕೆ
ಧರೆಯೊಳಿಪ್ಪಂಥ ಶರಣದ ತತ್ವದಾ
ಕುರುಹು ಇದು ಎಂದು ತಿಳಿಯುವುದು ||  || ೧ ||

ಎಂಟು ಮೊನೆಯ ಮೇಲೆ ಏರಿ ದುರ್ಗವ ಮೂರ
ದಾಂಟಿ ಅರಣ್ಯವ ಸುಡತಲಾ ನರಿ ನಾಯಿ
ಬೇಂಟೆಯನು ಅಡಿ ಮೆರೆದಿಹೆನು ||  || ೨ ||

ಭೂತ ಕರಣಾದಿಗಳ ಧಾತು ಪಂಚೇಂದ್ರಿಯದ
ಲಾ ತನ್ನ ದೇಹವನು ಮರೆದು ಮೆರೆವಾ ಮ
ಹಂತರವರ್ಗಲ್ಲದಸದಳವು ||  || ೩ ||

ನಾಲ್ಕು ಮನೆಗಳ ಮುಂದೆ ನಾಲ್ಕು ದೇಗುಲಗಳಿವೆ
ನಾಲ್ಕು ಹನ್ನೆರಡಯ ಚೌಕಾದ ಬಾಗಿಲದು
ಓಂಕಾರದಲ್ಲಿ ಮುಳುಗಿತ್ತು ||  || ೪ ||

ಕಳ್ಳರರುವರ ಕೊಂದು ಕಾಡಾನೆ ಎಂಟನ್ನು
ತಳ್ ನೂಕಿ ನಿಂದು ತಲೆವರಿದ ವಿಷಯದಾ
ಮುಳ್ಳಿನಾ ಮೊನೆಯ ಮುರಿದಿಹೆನು ||  || ೫ ||

ಉಟ್ಟ ಸೀರೆಯ ಬಿಟ್ಟು ಉಣ್ಣದೂಟವನುಂಡು
ಬಟ್ಟ ಬಯಲಾದ ಘನಸುಖದ ಹಾರೈಕೆ
ದಿಟ್ಟನಿಗಲ್ಲದೀ ಬಿರಿದುಂಟೆ ||  || ೬ ||

ಅರಣ್ಯವೆಂಬುದದು ಆಧಾರವು ಪ್ರಾಣಕ್ಕೆ
ಕ್ರೂರ ಮೃಗಗಳೇ ಇರುತಿಹವು ಸುಡುಗಾಡು
ಕೇರಿಯ ಕಳೆದರೆ ಆವ ದಿಟ್ಟ ||  || ೭ ||

ಆಧಾರವು ಎಂಬೆರಡು ಅಂಗ ಕಳೆ ಲಿಂಗದೊಳು
ವೇಧಿಸುತ ಪಂಚ ಮುಖಗಳ ಭೇದವನು
ಭೇದಿಸುತ ಕಂಡವರ ದಿಟ್ಟ ||  || ೮ ||

ಹೊಲೆನೆತ್ತರ ಸೂತಕದ ಹೊಲೆಯನಾ ಸುತ ನಾನು
ತಲೆಯ ಚಂಡಾಡಿ ಮಡಿದಿಯಾ ಗಂಡನ ಒ
ಡಲನ್ನೆ ಬಗಿದು ಬರುತಿರ್ದೆ ||  || ೯ ||

ಕುಂದು ಹೆಚ್ಚೆಂಬುದನು ಒಂದಾಗಿಸುಭಯವನು
ಕೊಂದು ನಿಃಶೂನ್ಯದೊಳು ಬೆರೆದು ಭಯರಹಿತ
ಗಂಧಕ್ಕೆ ಭೃಂಗನೆರಗಿದೆನು ||  || ೧೦ ||

ಮಂಜೂರು ಕಿಚ್ಚ ನಾನಂಜದೆಯೆ ಕೈಯಲ್ಲಿ
ಮಂಜೂರು ಸುಟ್ಟು ಗಳಗಳನೆ ಬೆಡಗಿನಾ
ಕೆಂಡವನು ಉಂಡು ಸುಖಿಯಾದೆ ||  || ೧೧ ||

ಪತಿವ್ರತೆ ಎನಿಸುವಳು ಪತಿಯ ತಾನಗಲದಿರೆ
ಪತಿ ತನ್ನ ಮನೆಯ ಕಟಕಿಗೆ ತನುವಿತ್ತ
ಪರಿಯೊಳಡಗಿ ನಾ [1]ಬದುಕಿರ್ದೆ1 ||  || ೧೨ ||

ನವಚಕ್ರ ಮೊದಲಾದ ನವ ಬಾಗಿಲನೆ ತುಂಬಿ
ನವ ಎಂಟು ಕಮಲ ಷಟುವರ್ಣದೊಳಗಿರ್ದು
ಅವಿರಳನ ಒಳಗೆ ಬಯಲಾದೆ ||  || ೧೩ ||

ಮಂಜಿನಾ ನೀರನ್ನು ಹಂಜರಕೆ ನಾನಿತ್ತೆ
ಹಂಜರವು ದಣಿದು ದಣಿಯಾದ ನೀರಿಗಂ
ಹಂಜರವ ಕೊಟ್ಟು ಬರುತಿರ್ದೆ ||  || ೧೪ ||

ಕೆಂಡವ ನುಂಗಿದಾ ಪಕ್ಷಿ ಕೆಲೆದಾಡಿ ಗಿರಿ ಎಂಟ
ನುಂಡು ಷಡುಸ್ಥಲಕೆ ಮುಖವಾಗಿ ನೋಡುವ ಅ
ಖಂಡನೊಳ್ ಬೆರೆದು ಬಯಲಾದೆ ||  || ೧೫ ||

ವಿರಳವಿಲ್ಲದ ಮಣಿಯ ವಿರಳಕ್ಕೆ ಸೂತ್ರವನು
ಮೆರೆವಾರು ಮುಖದಿ ಅಳವಡಿಸಿ ಲಿಂಗದಲಿ
ಉರು ಕರ್ಪುರದಂತಾ ತೆರನಾದೆ ||  || ೧೬ ||

ಹಸಿವು ತೃಷೆ ವಿಷಯವನು ಹೊಸೆದು ಭಸ್ಮವ ಮಾಡಿ
ಕಿಸುಕುಳದ ಗಂಟ ಕಡೆಗೊತ್ತಿದ್ದು ಸಂಸಾರ
ಹಸೆಗೆಟ್ಟಿತೆಂದು ನಗುತಿರ್ದೆ ||  || ೧೭ ||

ರತ್ನವಹ್ನಿಯೊಳಿರ್ದಾ ರತ್ನದಾ ಸಖನಂತೆ
ರತ್ನವನು ಉಂಡು ನಸು ಮುತ್ತ ಕೊಂಬಂಥ
ರತ್ನ ಬೆಳಗಿನೊಳು ಬೆಳಗಾದೆ ||  || ೧೮ ||

ಅರಿವರಿತು ನೆರೆಯುಂಡು ಅಂಗಕ್ಕೆ ದಣಿವಿಲ್ಲ
ದರೆ ಬೆಂದ ಕೊರಡ ತರಿದೊಟ್ಟಿ ಜೀವನದ
ಒಡಲೆಂಬ ಘನವ ಮುರಿದಿಹೆನು ||  || ೧೯ ||

ಮೂವತ್ತು ಮುಳ್ಳಿನಾ ಮುತ್ತುಗದ ಹೂವಿಂಗೆ
ಮೂವರು ಸುತರು ಮಡಿದುದನು ನಾ ಕಂಡು
ಮೂವರನು ಬೆರೆದು ಬರುತಿರ್ದೆ ||  || ೨೦ ||

ಕೂಪವನು ಅಗಲಿರ್ದ ಕೂಸಿನಾ ತಾಯಿಗಂ
ಕೂಪವೆಂಟರಲಿ ಒದಗಿತ್ತು ನಾ ಕಂಡೆ
ಕೂಪ ಜ್ಯೋತಿಯಲಿ ಅಡಗಿತ್ತು ||  || ೨೧ ||

ತುಳಿದಿಹೆನು ಹದಿನಾಲ್ಕು ಭುವನದಾ ಕೀಲನ್ನು
ಬಲೆಯನ್ನು ಹರಿದು ಬಯಲಾದ ಪಕ್ಷಿಯಾ
ಬೆಳಗಿನೊಳು ಅಡಗಿ ಬರುತಿರ್ದೆ ||  || ೨೨ ||

ಕೊಂಬೆ ಕೊಂಬೆಗೆ ಹಾರಿ ಕೋ ಎಂದು ಕೂಗುವಾ
ಡೊಂಬನಾ ಹಣೆಯ ಮುರಿಯುತ್ತ ಖುಲ್ಲನಾ
ಇಂಬಿಗಂ ಮುಳ್ಳನೆಳೆದಿಹೆನು ||  || ೨೩ ||

ಮಡಿಕೆಯೊಂದನು ತಂದು ಪಡಿ ಎರಡು ಅಕ್ಕಿಯನು
ಬಡಿದು ಒಮ್ಮನಕೆ ಸವನಿಸುತ ಲೋಕದಾ
ತೊಡಕೆಂಬ ಕೀಲ ಮುರಿದಿಹೆನು ||  || ೨೪ ||

ಮೊಂಡನ ಹೆಂಡತಿ ಹೋಗೆ ಮೋಹದಿ ಹಾರುವೆನು
ಗಂಡನ ಮಾತಿಂಗೆ ಒಳಗಾಗಿ ಇಬ್ಬರನು
ಹಿಂದಿ ಈಡಾಡಿ ಬರುತಿರ್ದೆ ||  || ೨೫ ||

ಸರ್ಪನಾ ಇದಿರೊಳಗೆ ಇರ್ಪ ಮಾರುತನೆದ್ದು
ಸರ್ಪನಾ ಮದವನಡಗಿಸುತ ನಡೆದಿಹೆನು
ಕರ್ಪುರವನುಂಡ ಉರಿಯಂತೆ ||  || ೨೬ ||

ಕಾಡುವಾ ಕಪಿ ನಾಲ್ಕು ಮೃಗ ಹತ್ತು
ಕೋಡಗದ ಲೆಖ್ಖ ಕಡೆಯಿಲ್ಲದೂರೊಳಗೆ
ಓಡೆತ್ತೆ ಉಂಡು ಸುಖಿಯಾದೆ ||  || ೨೭ ||

ಭಿನ್ನ ಕ್ರಿಯೆ ಎಂಬ ಭಿತ್ತಿಯ ಕೀಲುಗಳ
ಉಣ್ಣದಲೆ ಕಡೆಗೆ ತೊಲಗಿಸುತ ಸಂಸಾರ
ದಣ್ಣ ಹನ್ನೆರಡ [2]ಕಳೆ2ದಿಹೆನು ||  || ೨೮ ||

ಜ್ಯೋತಿ ಜ್ಯೋತಿಯೊಳಿರ್ದ ಜ್ಯೋತಿಯ ಶಿಶುವಂತೆ
ರೀತಿ ನೀತಿಗಳ ಎರಡೊಂದು ಅದ ಪರ
ಮಾತ್ಮನೊಳು ಅಡಗಿ ಬರುತಿರ್ದೆ ||  || ೨೯ ||

ದೇವನಿಗೆ ತರುತಿರ್ದ ಹೂವಿನಾ ತೋರಣಕೆ
ಭಾವಿಸುತ ಕುರಿಯು ಹಸಿವಿಂಗೆ ಹಾರುತಿಹ
ಜೀವನನು ಕಳೆದು ಬರುತಿರ್ದೆ ||  || ೩೦ ||

ಪರಿಮಳವ ಕೊಂಬಂಥ ವರಭೃಂಗನಂದದಲಿ
ಪರಿಮಹಂಸನೊಳು ಒಡೆವೆರೆದು ಕರಸ್ಥಲದ
ಗುರುಶಾಂತನೊಳಗೆ ಬಯಲಾದೆ ||  || ೩೧ ||

ಕರಸ್ಥಲನಾಗಿದೇವನ ತ್ರಿವಿಧಿ ಸಮಾಪ್ತ
ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ ||

 

[1] ಬರುತಿರ್ದೆ (ಮೂ)

[2] ತಿಳಿ (ಮೂ)