ಮಾಹೇಶ್ವರ ಸ್ಥಲ

೩೨. ಮಾಹೇಶ್ವರ ಸ್ಥಲ

ಇಂತು ಪರಮವಿಶ್ವಾಸದಿಂದ ಭಕ್ತನಾಗಿ ಆ ವಿಶ್ವಾಸದೊಳಗಣ ಏಕೋನಿಷ್ಠೆಯಿಂ ಬ್ರಹ್ಮ ಜ್ಞಾನಿಯಪ್ಪ ಭಕ್ತನು ತಾನೆ ಮಾಹೇಶ್ವರನಾದ ಮಾಹೇಶ್ವರಸ್ಥಲ ||

ವೃತ್ತ |

ಆಸ್ತಿಕ್ಯ ಬುದ್ಧಿನಿಯಮವ್ರತ ಸತ್ಯ ಧರ್ಮಂ
ಶೌಚಾದಿಲಕ್ಷಣ ಪರಿಸ್ಫುಟ ಸಚ್ಫರಿತ್ರಂ
ಲಿಂಗೈಕ್ಯನೈಷ್ಠಿ ಕತಯಾ ಸಹ ವೀರವೃತ್ತಂ
ಮಾಹೇಶ್ವರಸ್ಥಲಮಿತಿ ಪ್ರವದಂತಿ ಸಂತಃ ||  || ೧ ||

ಗ್ರಂಥ |

ಪರಸ್ತ್ರೀಂ ಪರದ್ರವ್ಯಂ ಚ ವರ್ಜಿತೋ ಭಾವಶುದ್ಧಿಮಾನ್
ಲಿಂಗನಿಷ್ಠಾತ್ಮಯುಕ್ತೋ ವಾ ಮಾಹೇಶ್ವರ ಇತಿಸ್ಮೃತಃ ||  || ೨ ||

ಸದಾಕಾಲೇ ಶಿವೇ ಭಕ್ತಿರ್ಲಿಂಗಜಂಗಮ ಪೂಜನಂ
ಏಕ ಪತ್ನೀವ್ರತಂ ವೀರಮಾಹೇಶ್ವರ ಮಹಾವ್ರತಂ ||  || ೩ ||

ಏಕ ನಿಷ್ಠಾವ್ರತಂ ಶೀಲಂ ದ್ವೀತೀಯಂ ಯೋ ನ ಮನ್ಯತೇ
ಪರಿಚ್ಛೇದಕರಂ ವೀರಮಾಹೇಶ್ವರಭೀಷ್ಟದಂ ||  || ೪ ||

ವಿದ್ಯಾಯಾಂ ರಮತೇ ನಿತ್ಯ ಮಾಯಾಂ ಹೇಯಾಂ ಶ್ವವದ್ರಹೇತ್
ಅನೇನೈವ ನಿರುಕ್ತೇನ ವೀರ ಮಾಹೇಶ್ವರಸ್ಮೃತಃ ||  || ೫ ||

ವಚನ |

ಸಜ್ಜನ ಸದ್ಭಾವಿ ಅನ್ಯರಲ್ಲಿ ಕೈಯಾಂತು ಬೇಡ, ಲಿಂಗ ಮುಟ್ಟಿದ ಕೈ ಮೀಸಲು, ಕಂಗಳಲ್ಲಿ ಒಸೆದು ನೋಡ ಪರವಧುವ, ಅನ್ಯವ ನೆನೆಯ, ಮಾನವ ಸೇವೆಯ ಮಾಡ, ಲಿಂಗವು ಪೂಜಿಸಿ ಲಿಂಗವ ಬೇಡ, ಲಿಂಗ ಕೊಟ್ಟ ಹಂಗನೊಲ್ಲ, ಕೂಡಲಚನ್ನಸಂಗಯ್ಯಾ ನಿಮ್ಮ ಶರಣ ||

ಛಲಬೇಕು ಶರಣಂಗೆ ಪರಧನವನೊಲ್ಲೆಂಬ, ಛಲಬೇಕು ಶರಣಂಗೆ ಪರಸತಿಯ ನೊಲ್ಲೆಂಬ, ಛಲಬೇಕು ಶರಣಂಗೆ ಪರದೈವನೊಲ್ಲೆಂಬ, ಛಲಬೇಕು ಶರಣಂಗೆ ಲಿಂಗಜಂಗಮವೊಂದೆಂಬ, ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ, ಛಲವಿಲ್ಲದವರ ಮೆಚ್ಚ ಕೂಡಲ ಸಂಗಮದೇವ ||

ಬಟ್ಟೆಯಲ್ಲಿ ಹೊನ್ನು, ವಸ್ತ್ರ ಬಿದ್ದಿದ್ದಡೆ ಕೈಮುಟ್ಟಿ ಎತ್ತಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ! ನೀವಿಕ್ಕಿದ ಭಿಕ್ಷದಲ್ಲಿಪ್ಪೆನು, ಶಂಭುಜಕ್ಕೇಶ್ವರಾ! ಅಳಿಮನವ ಮಾಡಿ ಪರ ದ್ರವ್ಯಕ್ಕೆ ಆಸೆ ಮಾಡಿದೆಡೆ, ಎನ್ನ ನರಕದಲದ್ದಿ ನೀನೆದ್ದು ಹೋಗು ||

ಹದಿನಾರು ತೆರನ ಭಕ್ತಿಯ ಮಾಡುವೆನು ಷೋಡಶೋಪಚಾರಂಗಳ ಮಾಡುವೆನು ಬಂದುದಕೆ ಪರಿಣಾಮವ ಮಾಡುವೆನು, ಇದ್ದುದಕ್ಕೆ ಇಂಬುಗೊಡುವೆನು, ಆಯತದಲ್ಲಿ ಲಿಂಗಾರ್ಚನೆಯ ಮಾಡುವೆನು, ಸ್ವಾಯತದಲ್ಲಿ ಲಿಂಗಭೋಗೋಪಭೋಗವ ಮಾಡುವೆನು ಅನರ್ಪಿತಂಗಳ ಹೊದ್ದಲೀಯದೆ, ಗುರುವಿಂಗೆ ತನುವ ಕೊಟ್ಟು ಲಿಂಗಕ್ಕೆ ಮನವಕೊಟ್ಟು, ಜಂಗಮಕ್ಕೆ ಧನವಕೊಟ್ಟು ಇಂತೀ ತ್ರಿವಿಧವ ವಿನಯದಲ್ಲಿ ನೇಮಿಸಿ ನಡೆವೆನು ಕೂಡಲ ಚನ್ನಸಂಗಮದೇವಯ್ಯಾ, ನೀವು ಮುಂತಾಗಿ ||

ಎನ್ನ ಅರ್ಥವ ಅನರ್ಥವಮಾಡಿ ಕೋಳಾಹಳಂಗೈವುತ್ತಿರಲಿ! ಹುಟ್ಟಿದ ಮಕ್ಕಳ ಕಡಿಖಂಡವ ಮಾಡಿ ಕಡಿವುತ್ತಿರಲಿ! ಮುಟ್ಟಿದ ಸ್ತ್ರೀಯ ಮುಖದ ಮುಂದೆ ಅಭಿಮಾನವ ಕೊಂಡು ನೆರೆವುತ್ತಿರಲಿ! ಇಂತಿವು ಹೊರಗಣವು ಇನ್ನೆನಂಗದ ಮೇಲೆ ಬರಲಿ! ಇಕ್ಕುವ ಶೂಲಕ್ಕೆ ಪ್ರಾಪ್ತಿಯಾಗಲಿ ಹಾಕೊಂದಾಸೆ ಹನ್ನೊಂದೆಸೆಯ ಮಾಡುತ್ತಿರಲಿ! ಲಿಂಗಾರಾಧನೆಯ ಮಾಡುವೆನು, ಜಂಗಮಾರಾಧನೆಯ ಮಾಡುವೆನು, ಪ್ರಸಾದಕ್ಕೆ ತಪ್ಪೆನು, ಇಂತಪ್ಪ ಭಾಷೆಗೆ ಕಿಂಚಿತ್ತು ಹುಡಿಯಾದಡೆ ನೀನಂದೆ ಮೂಗ ಕೊಯ್ಯಿ, ಕೂಡಲಸಂಗಮದೇವಾ ||

ಒಡವೆ ಭಾಂಡಾರ ಕಡವರದ್ರವ್ಯವ ಬಡ್ಡಿವ್ಯವಹಾರವನಾಡಿ ಮನೆಯಲ್ಲಿ ಹೊಯ್ದು ಕೊಂಡಿದ್ದೆನಾದಡೆ ಅದು ಎನ್ನ ಅರ್ಥವಲ್ಲ, ಅನರ್ಥವೆಂಬೆ ! ಆ ಧನದ ಮೇಲೆ ನಿಮ್ಮವರು ಬಂದು ಮನಬಂದ ಹಾಂಗೆ ಸೂರೆಗೊಳ್ಳುತ್ತಿದ್ದಡೆ, ಬೇಕು ಬೇಡೆಂದೆನಾದಡೆ, ನಿಮ್ಮಾಣೆ! ನಿಮ್ಮ ಪ್ರಮಥರಾಣೆ! ಕಾಮನೇಮವೆಂಬ ಸಿಂಧು ಬಲ್ಲಾಳನ ವಧುವ ಸರ್ವಭುವನದೊಡೆಯ ಸಂಗಮದೇವರು ಬೇಡಿದಂತೆ ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳಿಕೆಯ ಚೆಲುವೆ! ಆಕೆಯ ನಿಮ್ಮವರು ಬಂದು, ನಡುಬೀದಿಯಲ್ಲಿ ಸಂಭೋಗವ ಮಾಡುತ್ತಿದ್ದಡೆ ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ಮನದೊಡೆಯ, ನೀವೆ ಬಲ್ಲಿರಿ! ಸಿರಿಯಾಳ ಚಂಗಳವ್ವೆಯ ಮೆನೆಗೆ ಹೋಗಿ ಅವರ ಮಗನ ಬೇಡಿದ ಹಾಂಗೆ, ಸಂಗಮದೇವಾ, ನಿಮ್ಮ ಹೆಸರ ಚಿಕ್ಕ ಸಂಗಯ್ಯನೈದಾನೆ! ಆತನ ಕಡಿಕಂಡವ ಮಾಡಿ ಕಡಿದು ಬಾಣಸಂಗೈವುತ್ತಿದ್ದಡೆ ಎನ್ನುದರದಲ್ಲಿ ಹುಟ್ಟಿದ ಪುತ್ರನೆಂದು ಮಾಯಕ್ಕೆ ಮರುಗಿದೆನಾದಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ! ಇಂತೀ ತ್ರಿವಿಧವು ಹೊರಗಣವು! ಎನ್ನ ನೋವಿನೊಳಗಲ್ಲ; ಎನ್ನ ಬೇನೆಯೊಳಗಲ್ಲ! ಕದ್ದ ಕಳ್ಳನ ಹಾಂಗೆ ಹೆಡಗುಡಿಯಂ ಕಟ್ಟಿ ಶೂಲಕ್ಕೆ ಪ್ರಾಪ್ತಿಸಲು, ಸೂಜಿಯ ಮೊನೆಯಂತಪ್ಪ ಶೂಲದ ಐದು ಮೊನೆಯಲ್ಲಿ ಹಾಯ್ವಾಗ, ಅಂಥಾದರಲ್ಲಿ ಲಿಂಗಾರ್ಚನೆಯಂ ಮಾಡುವೆ ಜಂಗಮಾರ್ಚನೆಯ ಮಾಡುವೆ ಪ್ರಸಾದಕ್ಕೆ ತಪ್ಪಿದೆನಾದಡೆ, ಮೂಗ ಕೊಯ್ದಿಟ್ಟಿಗೆಯಲದ್ದಿ ಕನ್ನಡಿಯ ತೋರು, ಕೂಡಲಸಂಗಮದೇವ ||

ಲಿಂಗಕ್ಕಲ್ಲದೆ ಮಾಡೆನೀ ಮನವ, ಜಂಗಮಕ್ಕಲ್ಲದೆ ನೀಡೆನೀ ಧನವ, ಪ್ರಸಾದಕ್ಕಲ್ಲದೆ ಮಾಡೆನೀ ತನುವ, ಈ ತ್ರಿವಿಧವನು ತ್ರಿವಿಧಕ್ಕರ್ಪಿಸುವೆ, ಅನರ್ಪಿತವಾದಡೆ ತಪ್ಪೆನ್ನದು, ನೀನಂದೆ ಮೂಗುಕೊಯ್ಯಿ, ಕೂಡಲಸಂಗಮದೇವ ||

ಹಲ್ಲು ಹತ್ತಿ ನಾಲಗೆ ಹೊರಳದಿದ್ದಲ್ಲಿ ಮನವೆರಡಾದಡೆ ಆಣೆ ! ನಿಮ್ಮಾಣೆ ! ಮಾಡುವ ನೇಮಕ್ಕೆ ಛಲವಿಲ್ಲದಿರ್ದಡೆ ಆಣೆ! ನಿಮ್ಮಾಣೆ! ಕೂಡಲಸಂಗಮದೇವರೆನ್ನ ಮನವ ನೋಡಲಟ್ಟಿದಡೆ ಪ್ರಸಾದಕಲ್ಲದೆ ಬಾಯ್ದೆರದೆನಾದಡೆ ಆಣೆ | ನಿಮ್ಮಾಣೆ ||

ಎನಿಸೆನಿಸೆಂದಡಾನು ಧೃತಿಗೆಡೆನಯ್ಯಾ, ಎಲುದೋರಿ ನರಹರಿದು ಕರುಳು ಕುಪ್ಪಳಿಸಿದಡಾನು ಧೃತಿಗೆಡೆನಯ್ಯಾಶಿರ ಹರಿದು ಅಟ್ಟೆ ನೆಲಕ್ಕೆ ಬಿದ್ದಡೆ ನಾಲಗೆ ಕೂಡಲಸಂಗ ಶರಣೆನುತಿದ್ದಿತಯ್ಯಾ ||

೧೦

ಒಣಗಿಸಿ ಎನ್ನ ಘಣಘಣನೆ ಮಾಡಿದಡೆಯೂ ಹರಣವುಳ್ಳನ್ನಕ್ಕ ನಿಮ್ಮ ಚರಣವ ನೆನೆವುದ ಮಾಣೆ! ಮಾಣೆ! ಶರಣೆಂಬುದ ಮಾಣೆ! ಮಾಣೆ! ಕೂಡಲಸಂಗಮದೇವ, ಎನ್ನ ಹೆಣನ ಮೇಲೆ ಕಂಚಿಟ್ಟುಂಡಡೆಯೂ ಮಾಣೆ ! ಮಾಣೆ ||

೧೧

ಒಡೆಯರೊಡವೆಯ ಕೊಂಡಡೆ, ಕಳ್ಳಂಗಾಯಿತ್ತೆಂಬ ಗಾದೆ ಎನಗಿಲ್ಲಯ್ಯಾ! ಇಂದೆನ್ನ ಧನವ, ನಾಳೆನ್ನ ವಧುವ ನಾಡಿದೆನ್ನ ತನುವ ಬೇಡಿರೇಕಯ್ಯಾ ! ಕೂಡಲಸಂಗಮದೇವಾ ಆನು ಮಾಡಿದುದಲ್ಲದೆ ಬಯಸಿದ ಬಯಕೆ ಸಲುವುದೆ ಅಯ್ಯಾ ||

೧೨

ಕಟ್ಟುವೆನುಪ್ಪರಗುಡಿಯ ಜಗವೆಲ್ಲಾ ಅರಿಯಲು ಮಾಡುವೆನೆನ್ನ ಕಾಯ ಕೆಡೆವೆನ್ನಕ್ಕ! ಬೇಡುವದೆನ್ನ ತನುಮನಧನವ, ಬೇಡಲಾರದ ಹಂದೆ, ಕೇಳು ಈ ಬಿರುದು ಸಂದಿತ್ತು ಕೂಡಲಸಂಗಮದೇವ ||

೧೩

ವೇದಕ್ಕೊರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯ್ವೆ, ನೋಡುಯ್ಯಾ, ಕೂಡಲಸಂಗಮದೇವಯ್ಯಾ ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ ||

ಶ್ರೀ ಮದ್ಬ್ರಹ್ಮಜ್ಞಾನಿಯಪ್ಪ ಮಾಹೇಶ್ವರನ ಪ್ರಥಮಸ್ಥಲ ಸಮಾಪ್ತ ||

೩೩. ಶ್ರುತಿ ಭ್ರಾಂತಿ ನಿರಸನ ಸ್ಥಲ

ಇಂತು ಶಿವನೊಲಿದ ಶಿವಭಕ್ತನೇ ಸತ್ಕುಲಜನೆಂದರಿದು ವರ್ಣಾಶ್ರಮಧರ್ಮಗಳ ಹೇಳುವ ಶ್ರುತಿ ತತಿಯೆಲ್ಲವ ನಿರಾಕರಿಸಿ, ಆ ಶ್ರುತಿಕಿಂಕರನಾಗದೆ ಆ ಶ್ರುತಿ ತತಿಯ ಮಸ್ತಕವ ಮೆಟ್ಟಿ ನಡೆವ ಬ್ರಹ್ಮಜ್ಞಾನಿಯಪ್ಪ ವೀರಮಾಹೇಶ್ವರನ ಶ್ರುತಿ ಭ್ರಾಂತಿ ನಿರಸನಸ್ಥಲ ||

ಗ್ರಂಥ |

ವರ್ಣಾಶ್ರಮಾಭಿಮಾನೇನ ಶ್ರುತಿದಾಸೋ ಭವೇನ್ನರಃ
ತಥಾಭಿಮಾನ ನಿರ್ಮುಕ್ತೋ ವರ್ತತೇ ಶ್ರುತಿಮೂರ್ಧನಿ ||  || ೧ ||

ವೇದಶಾಸ್ತ್ರ ಪುರಾಣಾನಿ ನ ಪ್ರಮಾಣಾನಿ ಸರ್ವಥಾ
ಸ್ವಾತ್ಮಸ್ಥವಸ್ತು – ವಿಜ್ಞಾನೇ ಪ್ರಮಾಣಂ ಸ್ವಯಮೇವ ಹಿ ||  || ೨ ||

ವೇದಶಾಸ್ತ್ರ ಪುರಾಣಾನಿ ಜ್ಞಾನಾರ್ಥ ಕೇಶವ ತ್ರಣು
ಜ್ಞಾನಾರ್ಥಂ ಲಭತೇ ಯಸ್ತು ವೇದಶಾಸ್ತ್ರೇಣ ತಸ್ಯ ಕಿಂ ||  || ೩ ||

ಮಂತ್ರಜಾಲಂ ಮಹಾದುಃಖಂ ತಂತ್ರಜಾಲಂ ತಥೈವ ಚ
ಶಾಸ್ತ್ರಜಾಲಮನೇಕಾರ್ಥ ತ್ರಯಂ ತ್ಯಕ್ತ್ವಾ ಸುಖೀ ಭವ ||  || ೪ ||

ಯಶ್ಯ ನಾಸ್ತಿ ಶಿವೇ ಭಕ್ತಿ ಶಾಸ್ತ್ರಂ ತಸ್ಯ ಕರೋತಿ ಕಿಂ
ಲೋಚನಾಭ್ಯಾಂ ವಿಹಿ ನಸ್ಯ ದರ್ಪಣಃ ಕಿಂ ಕ ಕರಿಷ್ಯತಿ ||  || ೫ ||

ವಚನ |

ಆಗಮಪುರುಷರಿರಾ, ನಿಮ್ಮ ಆಗಮ ವಾಯವಾಗಿ ಹೋಯಿತ್ತೇ? ವಿದ್ಯಾಪುರುಷರಿರಾ, ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ ಬರಿಮುಖರಾದಿರಲ್ಲ! ವೇದಪುರುಷರಿರಾ, ನಿಮ್ಮ ವೇದ ಹೊಲಬುದಪ್ಪಿ ವೇದವೇ ದೈವವೆಂದು ಕೆಟ್ಟಿರಲ್ಲ, ಪುರಾಣಪುರುಷರಿರಾ, ನಿಮ್ಮ ಪುರಾಣವಿಚಾರ ಭ್ರಷ್ಟಾದಲ್ಲಿ ನೀವು ಒಡನೆ ಭ್ರಷ್ಟರಾದಿರಲ್ಲ ! ಶಾಸ್ತ್ರ ಪುರುಷರಿರಾ, ನಿಮ್ಮ ಶಾಸ್ತ್ರ ಮಹಾಪಥದ ಹೊನಲಲ್ಲಿ ಹೋದಲ್ಲಿ, ಭಕ್ತದೇಹಿಕದೇವನೆಂದರಿಯದೆ ಕೆಟ್ಟಿರಲ್ಲ! ‘ಯತ್ರ ಶಿವಸ್ತತ್ರ ಮಹೇಶ್ವರನೆಂ’ದು ಹೇಳಿತ್ತು ಮುನ್ನ, ಅಂತು ಭಕ್ತನಿತ್ಯಸತ್ಯ ಸನ್ನಹಿತ, ಗುಹೇಶ್ವರ, ನಿಮ್ಮ ಶರಣ ||

ನಾದದ ಬಲದಿಂದ ವೇದಂಗಳಾದವಲ್ಲದೆ ವೇದ ಸ್ವಯಂಭುವಲ್ಲ; ನಿಲ್ಲು! ಮಾತಿನ ಬಲದಿಂದ ಶಾಸ್ತ್ರಂಗಳಾದವಲ್ಲದೆ ಶಾಸ್ತ್ರ ಸ್ವಯಂಭುವಲ್ಲ; ನಿಲ್ಲು! ಪಾಷಾಣದ ಬಲದಿಂದ ಸಮಯಂಗಳಾದವಲ್ಲದೆ ಸಮಯ ಸ್ವಯಂಭುವಲ್ಲ; ನಿಲ್ಲು! ಇಂತೀ ಮಾತಿನ ಬಣಬೆಯ ಮುಂದಿಟ್ಟುಕೊಂಡು ಆತನ ಕಂಡೆನೆಂದಡೆ ಆತನತ್ಯತಿಷ್ಟದ್ದಶಾಂಗುಲ! ಆತನೆಂತು ಸಿಲುಕುವನೆಂದಾತನಂಬಿಗ ಚೌಡಯ್ಯ ||

ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ ಸಕಲವೇದಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋಗುಳವಾಡುತೈದಾಳೆ ಭ್ರಾಂತಿಯೆಂಬ ತಾಯಿ! ತೊಟ್ಟಿಲು ಮುರಿದು, ನೇಣುಹರಿದು ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು ||

ವೆಂದವೆಂಬುದು ಓದಿನ ಮಾತು ಶಾಸ್ತ್ರವೆಂಬುದು ಸಂತೆಯ ಸುದ್ಧಿ, ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹರಟೆ, ಭಕ್ತಿಯೆಂಬುದು ತೋರಿಯುಂಬ ಲಾಭ ಗುಹೇಶ್ವರನೆಂಬುದು ಮೀರಿದ ಘನವು ||

ವೇದ ಘನವೆಂಬುದೊಂದು ಸಂಪಾದನೆ, ಶಾಸ್ತ್ರ ಘನವೆಂಬುದೊಂದು ಸಂಪಾದನೆ, ಪುರಾಣ ಘನವೆಂಬುದೊಂದು ಸಂಪಾದನೆ, ಆಗಮ ಘನೆವೆಂಬುದೊಂದು ಸಂಪಾದನೆ, ಅಹುದೊಂಬುದೊಂದು ಸಂಪಾದನೆ, ಅಲ್ಲವೆಂಬುದೊಂದು ಸಂಪಾದನೆ, ಗುಹೇಶ್ವರನೆಂಬ ಮಹಾಘನದ ನಿಜವನರಿಯದ ಕಾರಣ, ಹಲವು ಸಂಪಾದನೆಗಳಾದವು ||

ಓದಿಯೋದಿ ವೇದ ವಾದಕ್ಕಿಕ್ಕಿತ್ತು, ಕೇಳಿ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತು, ಅರಿದೆನರಿದೆನೆಂದು ಆಗಮ ಅಗಲಕ್ಕೆ ಹರಹಿತ್ತಲಯ್ಯಾ, ನೀನೆತ್ತ ನಾನೆತ್ತಲೆಂದು ಬೊಮ್ಮ ಬಕ್ಕಬಯಲು ಗುಹೇಶ್ವರಾ ||

ವೇದ ವೇದಿಸಲರಿಯೆದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು, ಪುರಾಣ ಪೂರೈಸಲರಿಯದೆ ಕೆಟ್ಟವು, ಹಿರಿಯರು ತಮ್ಮ ತಾವರಿಯದೆ ಕೆಟ್ಟರು, ತಮ್ಮ ಬುದ್ಧಿ ತಮ್ಮನೆ ತಿಂದಿತ್ತು! ನಿಮ್ಮನೆತ್ತ ಬಲ್ಲರು, ಹೇಳಾ, ಗುಹೇಶ್ವರಾ? ||

ಓದಿನ ಹಿರಿಯರು, ವೇದದ ಹಿರಿಯರು, ಶಾಸ್ತ್ರದ ಹಿರಿಯರು, ಪುರಾಣದ ಹಿರಿಯರು, ವೇಷದ ಹಿರಿಯರು, ಭಾಷೆಯ ಹಿರಿಯರು, ಇವರೆಲ್ಲರು ತಮ್ಮ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ ತಮ್ಮ ಮರೆದು ನಿಮ್ಮ ಮೆರೆದಡೆ, ಕೂಡಿಕೊಂಡಿದ್ದ ನಮ್ಮ ಕೂಡಲ ಸಂಗಮದೇವರು ||

ವೇದಶಾಸ್ತ್ರ ಪುರಾಣವನೋದಿದವರು ಹಿರಿಯರೇ? ಕವಿ ಗೀತವಾದಿ ವಾಗ್ಮಿಗಳು ಹಿರಿಯರೇ? ನಟ್ಟವಿಗ ಬಾಣ ವಿಲಾಗು ವಿದ್ಯೆಯಕಲಿತ ಡೊಂಬನೇನು ಕಿರಿಯನೇ? ಹಿರಿಯತನವಾವುದಯ್ಯಾ ಎಂದಡೆ ಗುಣ ಜ್ಞಾನ ಆಚಾರ ಶೀಲ ಧರ್ಮ! ಕೂಡಲಚನ್ನಸಂಗನ ಶರಣರು ಸಾಧಿಸಿದ ಸಾಧನೆಯೆ ಹಿರಿಯತನ ||

೧೦

ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಮಾತು, ಪುರಾಣ ಪುಂಡರ ಗೋಷ್ಠಿ, ಆಗಮ ಅನೃತದ ನುಡಿ, ತರ್ಕ ವ್ಯಾಕರಣ ಕವಿತಾಪ್ರೌಢಿಮೆ – ಇಂತಿವರಂಗದ ಮೇಲೆ ಲಿಂಗವಿಲ್ಲದ ಭಾಷೆ, ಇದು ಕಾರಣ ತನ್ನೊಳಗನರಿದ ಅನುಭವಿಯಿಂದ ಘನವಿಲ್ಲೆಂದ ನಮ್ಮ ಕಲಿ ದೇವರದೇವ ||

೧೧

ವೇದಶಾಸ್ತ್ರ ಪುರಾಣಾಗಮಂಗಳೆಲ್ಲವು ಕೊಟ್ಣಣವ ಕುಟ್ಟುವ ನುಚ್ಚು ತೌಡು ಕಾಣಿ ಭೋ! ಇವ ಕುಟ್ಟಲೇಕೆ? ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚ ಬರಿಯ ಬಯಲು, ಚನ್ನಮಲ್ಲಿಕಾರ್ಜುನಾ ||

೧೨

ವೇದವಾಕ್ಯ ವಿಚಾರಕ್ಕೆ ಬೀಜ, ಶಾಸ್ತ್ರವಾಕ್ಯ ಸಂದೇಹಕ್ಕೆ ಬೀಜ, ಪುರಾಣವಾಕ್ಯ ಪುಣ್ಯಕ್ಕೆ ಬೀಜ, ಭಕ್ತಿಯಫಲ ಭವಕ್ಕೆ ಬೀಜ, ಏಕೋಭಾವದ ನಿಷ್ಠೆ ಸಮ್ಯಕ್ ಜ್ಞಾನಕ್ಕೆ ಬೀಜ, ಸಮ್ಯಕ್‌ಜ್ಞಾನ ಅದ್ವೈತಕ್ಕೆ ಬೀಜ, ಅದ್ವೈತ ಅರಿವಿಂಗೆ ಬೀಜ, ಅರಿವನಾರಡಿಗೊಂಡು ಕುರುಹಿಲ್ಲದ ಲಿಂಗದಲ್ಲಿ ತೆರಹಿಲ್ಲದಿಪ್ಪುದನರಿಯಾ ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ ||

೧೩

ಅನಂತ ವೇದಶಾಸ್ತ್ರಾಗಮ ಪುರಾಣ – ತರ್ಕ – ತಂತ್ರಗಳನು ಆತ್ಮ ಮಾಡಿದನಲ್ಲದೆ ಆತ್ಮನನವು ಮಾಡಿದುದಿಲ್ಲ ಎನ್ನ ಅಂತರಂಗದ ಅರಿವಿನ ಮೂರ್ತಿಯಾಗಿ ಎನ್ನ ಉರಿಲಿಂಗ ಪೆದ್ದಿಪ್ರಿಯ ದೇವರು ಸಂಕಲ್ಪಿಸಿ ಆಗೆಂದಡಾದವು ||

ಇಂತು ಶ್ರುತಿಭ್ರಾಂತಿ ನಿರಸನಸ್ಥಲವು ಸಮಾಪ್ತ ||

೩೪. ಸ್ಥಿತಿ ಭ್ರಾಂತಿ ನಿರಸನ ಸ್ಥಲ

ಇಂತಪ್ಪ ಶ್ರುತಿ ಭ್ರಾಂತಿ ನಿರಸನವಂ ಮಾಡಿ ಉತ್ಪತ್ತಿ ಸ್ಥಿತಿ ಲಯಂಗಳಿಗೆ ಶಿವನೆ ಕರ್ತನೆಂದರಿದು ಇಂದಿಗೆಂತು ನಾಳಿಗೆಂತೆಂಬ ಚಿಂತೆಯನಳಿದು, ಸರ್ವತ್ರ ಶಿವಚಿಂತನೆ ಯೆಂದರಿದು ನಿಶ್ಚಿಂತನಾದ ಬ್ರಹ್ಮಜ್ಞಾನಿಯಪ್ಪ ವೀರ ಮಾಹೇಶ್ವರನ ಸ್ಥಿತಿ ಭ್ರಾಂತಿ ನಿರಸನ ಸ್ಥಲ ||

ಗ್ರಂಥ |

ಉತ್ಪತ್ತಿ ಸ್ಥಿತಿ ನಾಶಾದಿಶ್ಯಿವಾಜ್ಞಾ ಸರ್ವಜಂತುಷು
ಸ್ವಸ್ತಿತಿಚಿಂತಾಂ ಸಂವರ್ಜ್ಯ ಸದಾ ಶಂಭುಂ ವಿಚಿಂತಯೇತ್ ||  || ೧ ||

ಉತ್ಪತ್ತಿ ಸ್ಥಿತಿ ನಾಶೇಷು ಸ್ಥಿತಿ ಚಿಂತಾ ಕುತಸ್ತವ
ಯಥೋತ್ಪತ್ತಿರ್ಯಥಾನಾಶಃ ಸ್ಥಿತಿಸ್ತದ್ವಧ್ಭವಿಷ್ಯತಿ ||  || ೨ ||

ಉಪಕರ್ತುಃ ಪರಂ ದ್ರವ್ಯಂ ಯತ್ತಾತ್ಕಾಲ ಸಮುದ್ಭವಂ
ಕಿಮಾಸ್ತೆ ತಾಲವೃಂತಸ್ಯ ಮಂದಮಾರುತ ಸಂಗ್ರಹಃ ||  || ೩ ||

ಯೋ ಮೇ ಗರ್ಭಗತಸ್ಯಾಪಿ ವೃತ್ತಿಂ ಕಲ್ಪಿತವಾನ್ ಪ್ರಭುಃ
ಶೇಷವೃತ್ತಿ ಪ್ರಧಾನೇ ತು ಸುಪ್ತಸ್ಸ ಅಥವಾ ಮೃತಃ ||  || ೪ ||

ವಚನ |

ಶಿವಲಿಂಗವು ಕೊಟ್ಟ ಆಯುಷ್ಯದಲ್ಲಿ ನಿಮಿಷಾರ್ಧವ ಹೆಚ್ಚಿಸಬಾರದು, ನಿಮಿಷಾರ್ಧವು ಕುಂದಿಸಬಾರದು, ಶಿವಲಿಂಗವು ಕೊಟ್ಟ ಭಾಷೆಯಲ್ಲಿ ಕಾಣಿಯ ಹೆಚ್ಚಿಸಬಾರದು ಕಾಣಿಯ ಕುಂದಿಸಬಾರದು, ಶಿವಲಿಂಗವು ಹರಿಬ್ರಹ್ಮಾದಿಗಳಿಗೆಯು ತೃಣದಂತಪ್ಪ ಕಾರ್ಯವ ಮಾಡಬಾರದು, ಅದೆಂತೆಂದಡೆ:ತೇನ ವಿನಾ ತೃಣಾಗ್ರಮಪಿ ನ ಚಲತಿ, ಎಂದುದಾಗಿ, ಉತ್ಪತ್ತಿ ಸ್ಥಿತಿಲಯಕ್ಕೆ ಶಿವನೊಬ್ಬನೆ ಕರ್ತನಲ್ಲದೆ ಮತ್ತಾರೂ ಇಲ್ಲ, ಅದೆಂತೆಂದಡೆ : ಉತ್ಪತ್ತಿ ಸ್ಥಿತಿಲಯಕ್ಕೆ ಶಿವನೊಬ್ಬನೆ ಕರ್ತನಲ್ಲದೆ ಮತ್ತಾರೂ ಇಲ್ಲ, ಅದೆಂತೆಂದಡೆ : ಉತ್ಪತ್ತಿ ಸ್ಥಿತಿನಾಶಾದಿಃ ಶಿರ್ವಾಜ್ಞಾ ಸರ್ವ ಜಂತುಷು, ಸ್ವಸ್ಥಿತಿ ಚಿಂತಾಂ ಸಂವರ್ಜ್ಯ ಸದಾ ಶಂಭುಂ ವಿಚಿಂತಯೇತ್, ಎಂದುದಾಗಿ, ಇದನರಿತು ಇನ್ನೇಕೆ ಅನ್ಯಕಾಸೆ ಮಾಡುವಿರಿ? ಅನ್ಯರು ಆಯುಷ್ಯ – ಭವಿಷ್ಯ – ಭೋಗಾದಿ ಭೋಗಂಗಳ ಕೊಟ್ಟಾರೆಂಬ ಆಶೆ ಬೇಡ; ಕೊಡರೆಂಬ ಕ್ಲೇಶ ಬೇಡ, ಶಿವಾಧೀನವಲ್ಲದೆಯಿಲ್ಲವೆಂಬುದನರಿದು,ಪರಿಣಾಮಿಸಿಕೊಂಡು ಪರಿಣಾಮದಿಂದ ಲಿಂಗವನರ್ಚಿಸಿ, ಪೂಜಿಸಿ, ಕೇವಲ ವಿಶ್ವಾಸಮಂ ಮಾಡಿದಡೆ ಬೇಡಿತ್ತ ಕೋಡುವನು, ಇಹಪರಸಿದ್ಧಿ, ನೆರೆನಂಬು ಮನವೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ||

ಆಗದ ಕಾಲಕ್ಕೆ ಆಗೆಂದಡಾಗದು, ಆಗಬೇಕೆಂದು ನಾನು ಬೆಂಬೀಳನಯ್ಯಾ ಆಗುಮಾಡುವ ತಂದೆ ನೀನು, ಆಡಿ ಬಹಮಕ್ಕಳಿಗೆ ಊಡುವ ತಾಯಂತೆ ನೋಡಿ ಸಲಹೆನ್ನ ಕೂಡಲ ಸಂಗಮದೇವಾ ||

ಹುಟ್ಟಿಸಿದ ಬಳಿಕ ಕೊಟ್ಟ ಭೋಗಂಗಳ ತಪ್ಪಿಸಿಹೆನೆಂದಡೆ ತಪ್ಪುವು ನೋಡಯ್ಯಾ ಎನ್ನಗಿನ್ನೆಂತೋ ಎನ್ನಗಿನ್ನೆಂತೋ ಎನ್ನಗಿನ್ನೆಂತೆಂದು ಚಿಂತಿಸಲೇಕಯ್ಯಾ? ನಾ ಭುಕ್ತಂ ಕ್ಷೀಯತೇ ಕರ್ಮ ಎಂಬ ಶ್ರುತಿ ತಪ್ಪುವುದೇ? ಕೂಡಲಸಂಗಮದೇವಾ ||

ಕಾಯಕಕಳವಳಕಂಜಿ ಕಾಯಯ್ಯಾ ಎನ್ನೆನು, ಜೀವನೋಪಾಯಕಂಜಿ ಈಯಯ್ಯಾ ಎನ್ನೆನು, ಯುದ್ಭಾವಂ ತದ್ಭವತಿ, ಉರಿಬರಲಿ! ಸಿರಿಬರಲಿ! ಬೇಕು ಬೇಡೆನ್ನೆನು, ನಿಮ್ಮ ಹಾಗೆ; ಮಾನವರ ಬೇಡೆ! ಆಣೆ! ನಿಮ್ಮಾಣೆ! ಕೂಡಲಸಂಗಮದೇವಾ ||

ಅದು ಬೇಕು, ಇದು ಬೇಕು, ಎಂದೆಂಬ ಎದೆಗುದಿಹತನ ಬೇಡ, ಹದುಳಿಗನಾಗಿ ಇದ್ದಡೆ ಸಾಕು ಪಡಿಪದಾರ್ಥ ತನ್ನಿದ್ದೆಡೆಗೆ ಬಹುದು, ನಿಧಿನಿಕ್ಷೇಪ ತನ್ನಿದ್ದೆಡೆಗೆ ಬಹುದು, ಹೃದಯ ಶುದ್ಧನಾಗಿ ಸಕಳೇಶ್ವರ ದೇವ ಶರಣೆಂದಡೆ, ನಿಜಪದವನೀವನು ||

ಮನೆಮನೆದಪ್ಪದೆ ಹಗಹಗದ ಭತ್ತ ಎನಗಿಲ್ಲೆಂದು ಬೆಂಬೀಳಲೇಕಯ್ಯಾ? ಶಿವಶರಣೆಂಬ ಹಗದ ಭತ್ತ ಭವಭವದಲ್ಲಿ ಬಳಸಲುಂಟು | ತವನಿಧಿಯ ಹಡದ ನಮ್ಮ ಜೇಡರ ದಾಸಯ್ಯನುಂಟು, ಕೂಡಲಸಂಗಮದೇವಾ ||

ಅಂದಂದಿಗೆ ನೂರು ತುಂಬಿತ್ತೆಂಬಂತಿರಬೇಕು, ಸಂದ ಪುರಾತರ ನೆನೆಯುತ್ತಿರಬೇಕು, ಜಂಗಮ ಮಠಕ್ಕೆ ಬಂದಡೆ ವಂಚನೆಯಿಲ್ಲದೆ ಮಾಡಬೇಕು ಎನಗಿದೇ ವರವನೀವುದು ಬಸವಪ್ರಿಯ ಕೂಡಲಚನ್ನಸಂಗಮದೇವಾ ||

ಹಿಂದೆ ಬಂದುದನರಿದುದಿಲ್ಲಾಗಿ, ಮುಂದೆ ಬಹುದಕ್ಕೆ ಚಿಂತಿಸಲೇಕೆ? ಇಂದಿಗೆಂಬುದು ಲಿಂಗದೊಲವು ಶಿವಭಕ್ತಂಗೆ, ನಾಳಿಗೆಂಬುದು ಬದ್ಧಭವಿತನ ಎನ್ನಾದಿಗುರು ಕಪಿಲಸಿದ್ಧ ಮಲ್ಲಿಕಾರ್ಜುನದೇವಾ, ನೀವಂದಂದಿಂಗೆ ಕೊಟ್ಟ ಪಡಿ ತಪ್ಪದಯ್ಯಾ ||

ದೊರೆಕೊಂಡಂತೆ ಮನದಣಿದಿಪ್ಪವರ, ದುಃಖಕ್ಕೆ ದೂರವಾಗಿಪ್ಪವರ, ಒಳಗೆ ನೆರೆಯರಿದು ಹೊರಗ ಮರೆದಿಪ್ಪವರ, ಸದಾ ಸಂತೋಷದಲ್ಲಿಪ್ಪವರ ತೋರಿ ಬದುಕಿಸಯ್ಯಾ ಸಕಳೇಶ್ವರಾದೇವಾ, ನಾನೇನುವನೊಲ್ಲೆ, ಎನಗಿದೇ ವರವು ಕಂಡಾ! ತಂದೇ ||

೧೦

ಅಂದಂದಿಗೆ ಬಂದ ಧನವನಂದಂದಿಗೆ ವೆಚ್ಚಿಸಿ ಊರ್ಧ್ವನಿರಾಳನಾಗಿಪ್ಪುದಿದೇ ತೆರನು; ಇದಾರಿಗೂ ವಶವಲ್ಲ; ಎಂದೂ ಸಾಧಿಸಬಾರದ ಒಬ್ಬ ಪುರುಷನ ಸಾಧಿಸಬಲ್ಲಡೆ ಹಿರಿಯರಿಬ್ಬರೂ ತನ್ನ ವಶರಪ್ಪರು; ತನ್ನವರಾದಡೆ, ಸರ್ವವೂ ಸಾಧ್ಯವಪ್ಪುದು; ಸರ್ವವೂ ಸಾಧ್ಯವಾದಡೆ, ತಾನಿಲ್ಲ, ಬಯಲಹುದಕ್ಕೆ ಇದೇ ಚಿಹ್ನ ನೋಡಾ! ಇದನರಿದು ನಂಬುವುದು, ನಂಬಲರಿಯದಿದ್ದಡೆ ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣ ಹೋಣೆಯ ಕೊಡುವೆನು ||

೧೧

ಭಕ್ತಂಗೆ ಉತ್ಪತ್ತಿಯಲ್ಲಾಗಿ ಸ್ಥಿತಿಯಿಲ್ಲ ಸ್ಥಿತಿಯಿಲ್ಲಾಗಿ ಲಯವಿಲ್ಲ, ಮುನ್ನ ಎಲ್ಲಿಂದ ಬಂದನಲ್ಲಿಗೆ ಹೋಗಿ ಸುಖಿಯಾಗಿಪ್ಪ ಗುಹೇಶ್ವರಲಿಂಗ ನಿಮ್ಮ ಶರಣ ||

ಇಂತು ಸ್ಥಿತಿಭ್ರಾಂತಿ ನಿರಸನ ಸ್ಥಲ ಸಮಾಪ್ತ ||

೩೫. ಪ್ರಪಂಚ ಭಕ್ತನಿರಸನ ಸ್ಥಲ

ಇಂತಪ್ಪ ಸ್ಥಿತಿ ಭ್ರಾಂತಿ ನಿರಸನವ ಮಾಡಿ ಅರ್ಥಪ್ರಾಣಾಭಿಮಾನವೆಂಬ ತ್ರಿಬಂಧವಹ ಪ್ರಪಂಚಿತ ಭಕ್ತಿಯೊಳಗೆ ಲಿಂಗವಿಲ್ಲೆಂದರಿದ ಬ್ರಹ್ಮಜ್ಞಾನಿಯಪ್ಪ ವೀರಮಾಹೇಶ್ವರನ ಪ್ರಪಂಚ ಭಕ್ತನಿರಸನ ಸ್ಥಲ ||

ಗ್ರಂಥ |

ದೇಹೆಂದ್ರಿಯ ಮನಃಪ್ರಾಣಾಹಂಕಾರಾ ಭವಿನೋ ಮತಾಃ
ಸ ಏವ ಭವಿ ಭಕ್ತನಾಂ ವಿಭಕ್ತೋ ಭಕ್ತ ಉಚ್ಯತೇ ||  || ೧ ||

ಪಕ್ಷಪಾತ್ ಪಂಕ್ತಿಭೇದಶ್ಚ ಜಿಹ್ವಾನಿಷ್ಠುರ ಏವ ಚ
ವಿತ್ತಶಾಠ್ಯಸ್ತ್ವದಾತಾ ಚ ನ ಭಕ್ತಶ್ಚಾತ್ಮಚೋರಕಃ ||  || ೨ ||

ವಚನ |

ಕಬ್ಬಿನ ಮೇಲೆ ಜೇನಿಟ್ಟಿತೆಂಬರು ಅವು ಒಂದರ ಸಿಹಿಯನೊಂದರಿಯವು, ಭಕ್ತ ಜಂಗಮದ ನಡುವೆ ಅರ್ಥ ಪ್ರಾಣಾಭಿಮಾನವೆಂಬ ಸಿಗುರು ಕಾಡಿತ್ತು ಕಾಣಾ! ಕೂಡಲಸಂಗಮದೇವಾ ||

ಕಾರಣವಿಲದೆ ಕಾರ್ಯವಿಲ್ಲ, ಏತಕ್ಕೆ ಭಕ್ತರಾದೆವೆಂಬಿರಾ! ಐವರ ಬಾಯ ಎಂಜಲ ನುಂಬಿರಿ, ಐವರು ಸ್ತ್ರೀಯರ ಮುಖವನರಿಯರಿ, ಮೂರು ಸಂಕಲೆಯ ಕಳೆಯಲರಿಯರಿ, ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ ಭ್ರಮೆಯ ನೋಡಾ ಗುಹೇಶ್ವರಾ ||

ಕಲ್ಲ ಹೋರಿನೊಳಗೊಂದು ಕೆಚ್ಚು ಹುಟ್ಟಿತ್ತ ಕಂಡೆ, ಹುಲ್ಲ ಮೇವ ಎರಳೆಯ ಹುಲಿಯ ಸರಸವ ಕಂಡೆ, ಎಲ್ಲರು ಸತ್ತು ಆಡುತಿಪ್ಪುದ ಕಂಡೆ, ಇನ್ನೆಲ್ಲಿಯ ಭಕ್ತಿ ಹೇಳಾ ಗುಹೇಶ್ವರಾ ||

ತನುವಿನಲ್ಲಿ ತನು ಸವೆಯದು, ಮನದಲ್ಲಿ ಮನ ಸವೆಯದು, ಧನದಲ್ಲಿ ಧನಸವೆಯದು, ಭಕ್ತಿಯುಕ್ತಿಯ ಮಾತು ನಿನಗೇಕೆ ಹೇಳಾ ಬಸವಾ| ಮಾಟಕೂಟಬೆಂಬ ಕೀರ್ತಿವಾರ್ತೆಗೆ ಸಿಲುಕಿ ಜಂಗಮವೆ ಲಿಂಗವೆಂಬುದ ಮರೆದೆಯಲ್ಲಾ ಬಸವಣ್ಣಾ ! ಗುಹೇಶ್ವರನ ಶರಣರಿಗೆ ತ್ರಿಕರಣವನೊಪ್ಪಿದಲ್ಲದೆ ಭಕ್ತನಾಗಬಾರದು ಕಾಣಾ ಸಂಗನಬಸವಣ್ಣಾ ||

ಜಂಗಮವೆ ಲಿಂಗವೆಂದು ನಂಬಿಕ ಬಳಿಕ ಸಂದೇಹವಿಲ್ಲದಿರಬೇಕು ನೋಡಾ! ಸಂದು ಸಂಶಯವಳಿದು ಸಯನಾದ ಭಕ್ತಿ ಹಿಮ್ಮೆಟ್ಟಿದಡೆ, ಹೋಯಿತ್ತಲ್ಲಾ! ಒಪ್ಪಚ್ಚಿ ಹೊತ್ತು ಕಿಂಕಿಲನಾಗಿ, ಮತ್ತೊಪ್ಪಚ್ಚಿ ಹೊತ್ತು ಅಹಂಕಾರಿಯಾದಡೆ ಹೊರಗೆ ನೂಕುವನು ಕಾಣಾ ನಮ್ಮ ಗುಹೇಶ್ವರಲಿಂಗವು ||

ಸಜ್ಜನ ಸನ್ನಹಿತವಾದ ಸದ್ಭಕ್ತಿ ಹೊತ್ತಿಗೊಂದು ಪರಿಯುಂಟೆ ಹೇಳಾ? ಒಮ್ಮೆ ಅಹಂಕಾರ, ಒಮ್ಮೆ ಕಿಂಕಿಲವೇ? ಮನಕ್ಕೆ ಮನ ಸಾಕ್ಷಿಯಾಗಿ ಮಾಡುವ ಭಕ್ತನಲ್ಲಿ ಗುಹೇಶ್ವರನಿಲ್ಲದೆ ಪ್ರಪಂಚುಗಳಲ್ಲಿಲ್ಲ ಕಾಣಾ, ಸಂಗನಬಸವಣ್ಣಾ ||

ಬಸುರೊಳಗಣ ಶಿಶು ತಾಯ ಮುಖವನರಿಯದು, ತಾಯಿ ಶಿಶುವಿನ ಮುಖವನೇನೆಂದೂ ಅರಿಯಳು, ಮಾಯಾಪ್ರಪಂಚಿನೊಳಗಿಪ್ಪ ಭಕ್ತ ದೇವರನರಿಯ, ದೇವರು ಭಕ್ತನನೇನೆಂದೂ ಅರಿಯ ಕಾಣಾ, ರಾಮನಾಥಾ ||

ಹೊನ್ನಿಗಾಗಿ ಸತ್ತುದೊಂದು ಕೋಟಾನುಕೋಟಿ, ಹೆಣ್ಣಿಗಾಗಿ ಸತ್ತುದೊಂದು, ಕೋಟಾನು ಕೋಟಿ, ಮಣ್ಣಿಗಾಗಿ ಸತ್ತುದೊಂದು ಕೋಟಾನುಕೋಟಿ, ನೀ ಗುರಿಯಾಗಿ ಸತ್ತವರನಾರನೂ ಕಾಣೆ, ಗುಹೇಶ್ವರಾ ||

ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ, ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ, ನೀ ಗುರಿಯಾಗಿ ಹೋದವರನಾರನೂ ಕಾಣೆ, ಗುಹೇಶ್ವರಾ ||

೧೦

ಅರತವಡಗದು, ರೌದ್ರ ಉಡುಗದು, ಕ್ರೂರ ಕುಭಾಷೆಗಳಳಿಯದ ಮುನ್ನ, ನೀನೆನ್ನ? ಶಿವನೆತ್ತ? ಹೋಗತ್ತ ಮರುಳೆ ! ಭವರೋಗ ನೇತ್ರದ ತಿಮಿರ ಹರಿಯದು ಮುನ್ನ ಕೂಡಲಸಂಗಯ್ಯನೆತ್ತ? ಹೋಗತ್ತ ಮರುಳೇ ||

ಇಂತು ಪ್ರಪಂಚಭಕ್ತ ನಿರಸನ ಸ್ಥಲ ಸಮಾಪ್ತ ||