೩೬. ಕಾಮ್ಯಭ್ರಾಂತಿ ನಿರಸನ ಸ್ಥಲ

ಇಂತಪ್ಪ ಪ್ರಪಂಚಭಕ್ತ ನಿರಸನವ ಮಾಡಿ, ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ, ಧರ್ಮಾರ್ಥ ಕಾಮಮೋಕ್ಷಂಗಳೆಂಬ ಚತುರ್ವಿಧ ಫಲಪದಂಗಳಲ್ಲಿಯ ಅಪೇಕ್ಷೆಯಳಿದು ನಿರಪೇಕ್ಷಕನಾಗಿ ಲಿಂಗವೇ ಪರಮೈಶ್ವರ್ಯವಾಗಿಯುಳ್ಳ ಬ್ರಹ್ಮಜ್ಞಾನಿಯಪ್ಪ ವೀರಮಾಹೇಶ್ವರನ ಕಾಮ್ಯ – ಭ್ರಾಂತಿ – ನಿರಸನ ಸ್ಥಲ ||

ಗ್ರಂಥ |

ಸಾಲೋಕ್ಯಮಥ್ಯ ಸಾಮೀಪ್ಯಂ ಸಾರೂಪ್ಯಂ ಚ ಸಾಯುಜ್ಯತಾಂ
ಸಕೃದಾಪೇಕ್ಷಿತಭಕ್ತಾನಾಂ ನಾಸ್ತಿ ಮೋಕ್ಷೋ ವರಾನನೇ ||  || ೧ ||

ವೃತ್ತ |

ನ ನಾಕಪೃಷ್ಠಂ ನ ಚ ದೇವರಾಜ್ಯಂ
ನ ಬ್ರಹ್ಮಲೋಕಂ ನ ಚ ವಿಷ್ಣುಲೋಕಂ
ನ ಧರ್ಮಕಾನ್ನಿಖಿಲನ್ ವೃಣೊಮಿ
ರಹಸ್ಯ ದಾಸತ್ವಮಹಂ ವೃಣೊಮಿ ||  || ೨ ||

ವಚನ |

ನಾನು ಕಾಮಿಸುತ್ತಿಪ್ಪ ಸಾಲೋಕ್ಯವಿದೆ, ಸಾಮೀಪ್ಯವಿದೆ, ಸಾರೂಪ್ಯವಿದೆ, ಸಾಯುಜ್ಯವಿದೆ, ಧರ್ಮವಿದೆ, ಆರ್ಥವಿದೆ, ಕಾಮವಿದೆ, ಮೋಕ್ಷವಿದೆ, ನಾನೇನನರಸುವ ಅರಕೆಯೆಲ್ಲೆವೂ ಇದೆಯಿದೆ, ನೋಡಾ! ನಾನೇನ ಬಯಸುವ ಬಯಕೆಯೆಲ್ಲವೂ ಇದೆಯಿದೆ, ನೋಡಾ! ಶ್ರೀ ಗುರು ಕಾರುಣ್ಯದಿಂದ ಮಹಾವಸ್ತು ಕರಸ್ಥಲಕೆ ಬಂದ ಬಳಿಕ, ಸರ್ವ ಸುಖಂಗಳೆಲ್ಲವೂ ಇವೆಯಿವೆ, ನೋಡಾ! ಇನ್ನು ಎನ್ನ ಬಯಲ ಭ್ರಮೆಯೊಳಗಿರಿಸದಿರಯ್ಯಾ, ನಿಮ್ಮ ಬೇಡಿಕೊಂಬೆ! ನಿಮಗೆ ಎನ್ನಾಣೆ! ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ ||

ನೀನೊಲಿದು ಕೂತವರು, ನಿಮಗೊಲಿದು ಕೂತವರು ನಿಮ್ಮ ಪರಿಯೆ? ಅವರು ನಿಮ್ಮ ರೂಪೇ, ಹೇಳಾ? ಆಳಾರು, ಅರಸಾರು, ಎಂದರಿಯಬಾರದು, ನಿಮ್ಮ ರೂಪೇ ಮಹಾಲಿಂಗ ಗಜೇಶ್ವರನನೊಲಿದು ಪೂಜಿಸಿದರು, ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಪಡೆದವರು ಎನಗೆ ನಿಮ್ಮ ತೊತ್ತು ಸೇವೆಯೇ ಸಾಕು ||

ಬ್ರಹ್ಮಪರವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ, ರುದ್ರ ಪದವಿಯನೊಲ್ಲೆ, ನಾನು ಮತ್ತಾವ ಪದವಿಯನೊಲ್ಲೆ ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವ ಕರುಣಿಸಯ್ಯಾ ||

ದೇವಾ, ನಿಮ್ಮಲ್ಲಿ ಬಯಸಿ ಬೇಡುವಡೇನಿಲ್ಲ, ದೇವಾ, ಆಯುಷ್ಯವ ಬೇಡುವೆನೇ? ಸಂಸಾರಕ್ಕಾನಂಜುವೆ, ಶ್ರೀಯ ಬೇಡುವೆನೇ? ಪರಾಂಗನೆ ಪಾಪ, ಮುಕ್ತಿಯ ಬೇಡುವೆನೇ? ಅದು ನಿಮ್ಮ ಪದವಿ, ಸಕಳೇಶ್ವರದೇವಾ, ನಾನೇನುವನೊಲ್ಲೆ, ನಿಮ್ಮ ಶ್ರೀಪಾದದ ಸೇವೆಯೇ ಸಾಕು ||

ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ, ಪರಮಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ, ಎನಗೆ ನಿಮ್ಮ ತೊತ್ತು ಸೇವೆಯೇ ಸಾಕು, ಮಹಾಲಿಂಗ ಗಜೇಶ್ವರದೇವಾ, ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ ||

ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷವಾದ ಪರಮೇಶ್ವರನ ಕಂಡು, ಇತ್ತಲೇಕಯ್ಯಾ? ಕಾಯದ ತಿದಿಯ ಹೊತ್ತಾಡುವನ ಮುಂದೇಕೆ ನಿಂದೆ? ನಿನ್ನ ಭಕ್ತರ ಠಾವಿಂಗೆ ಹೋಗಿ ಮುಕ್ತಿಯ ಮಾಡು, ನೀ ಹೊತ್ತ ಬಹುರೂಪು ತಪ್ಪದೆ, ನಿನ್ನ ಬೆಟ್ಟದ ಮೇಲಕ್ಕೆ ಹೋಗಿ ನಿನ್ನ ಬೇಡಿದ ಭಕ್ತರಿಗೆ ಮುಕ್ತಿಯ ಕೊಡು, ಕಾಮಧೂಮ ಧೂಳೇಶ್ವರನ ಕರುಣದಲ್ಲಿ ನೀನೆ ಬದುಕು ||

ಅಯ್ಯಾ, ಪಾಷಾಣಕ್ಕೆ ಗಿರಿ ಸವೆದು, ಪತ್ರೆಗೆ ತರು ಸವೆದು, ಸಪ್ತಸಾಗರಂಗಳು ಮಜ್ಜನಕ್ಕೆ ಸವೆದು, ಅಗ್ನಿ ಧೂಪಕ್ಕೆ ಸವೆದು, ವಾಯು ಕಂಪಿತಕ್ಕೆ ಸವೆದು, ಉಘೆ ಚಾಂಗು ಭಲಾ, ಎಂಬ ಶಬ್ದ ಸವೆದು, ಎನಗಿನ್ನೆಂತೋ? ಎನ್ನಗಿನ್ನೆಂತೋ? ಉಮೆಯ ಶರಣನ ಮಹಾ ಮನೆಯಲ್ಲಿ ಅಮರ ಗಣಂಗಳು ಲಿಂಗಾರ್ಚನೆಯ ಮಡುತ್ತೈದಾರೆ, ಅವರ ಪಾದುಕೆಯ ಕಾದಿದ್ದೆನೆಂದಾತನಂಬಿಗಚೌಡಯ್ಯಾ ||

ಮಜ್ಜನಕ್ಕೆರೆವ ಮಹಿಮರೆಲ್ಲರೂ ಸಲಿಗೆವಂತರಾಗಿ ಒಳಗೈದಾರೆ, ನಾನು ಜೀಯಾ, ಹೊರಗಣವನು, ಸಂಬೋಳಯೆನುತ್ತ, ಇಂಬಿನೊಳಿದ್ದೇನೆ ಕೂಡಲಸಂಗಮದೇವಯ್ಯಾ, ನಿಮ್ಮ ನಾಮವಿಡಿದ ಅನಾಮಿಕ ನಾನಯ್ಯಾ || ೯

ಹರಿ ಬ್ರಹ್ಮ ಇಂದ್ರ ಚಂದ್ರ ರವಿಕಾಲ ಕಾಮದಕ್ಷ ಇವರೊಳಗಾದ ಸಮಸ್ತ ದೇವದಾನವ ಮಾನವರೆಲ್ಲರೂ ಶಿವಲಿಂಗದೇವರನಾರಾಧಿಸಿಹೆವೆಂದು ಜಪತಪ ಹೋಮ ನಿಯಮ ನಿತ್ಯಧ್ಯಾನಮೌನ ನಾನಾವ್ರತ ನಿಯಮಂಗಳಂ ಕೈಕೊಂಡು, ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ, ಅನೇಖ ಫಲ – ಪದ – ಮುಕ್ತಿಯ ಪಡೆದು ಭೋಗಿಸಿ ಸುಖಿ ಯಾಗಿರುಹುದಕ್ಕೆ ಏನೂ ಸಂಶಯ ಬೇಡ, ಶ್ರುತ – ದೃಷ್ಟ – ಅನುಮಾನದಿಂದ ತಿಳಿದು ವಿಚಾರಿಸಿ ನೋಡಿರೆ, ಅದಕ್ಕೇನೂ ಸಂದೇಹಂಬಡಲಿಲ್ಲವಯ್ಯಾ, ಎರಡಿಲ್ಲದೆ ಏಕವಾಗದೆ ಭಿನ್ನದೋರದೆ ಶಿವನಂಗವಾದ ಶಿವಭಕ್ತನು ಇವರಂತಲ್ಲ! ಜಪತಪ ಹೋಮ ನಿಯಮ ನಿತ್ಯಾಧ್ಯಾನ ಮೌನ ನಾನಾವ್ರತನಿಯಮಂಗಳಂ ಕೈಕೊಂಡು, ಅರ್ಚನೆ ಪೂಜನೆಯಂ ಮಾಡಿ ಹಲವು ಪ್ರಕಾರದಿಂದೊಲಿಸಿ, ಅನೇಖ ಫಲಪದ ಮುಕ್ತಿಯ ಪಡೆಯಬೇಕೆಂಬ ಅಲ್ಪಾಸೆವಿಡಿದು ಭ್ರಮೆಗೊಳಗಾದ ಮರ್ಕಟ ಮನದ ಪರಿಯನೋಡಾ! ಶಿವ ಶಿವ ! ಮಹಾದೇವ ! ಮಹದೇವ ! ಮಹಾವಸ್ತುವಿನಲ್ಲಿ ಭೇದವಿಲ್ಲದಿಪ್ಪ ಅಭೇದ್ಯ ಶರಣಂಗೆ ಜಪತಪದ ಲೇಪವೆಲ್ಲಿಯದೋ? ಅಜಪದ – ಪಲ ಕೈಸಾರಿದಂಗೆ ಧ್ಯಾನಮೌನದ ಬಂಧನವೆಲ್ಲಿಯದೋ? ಆ ಧ್ಯಾನ ದೇಹದಲ್ಲಿ ಅಳವಟ್ಟ ಆನಂದ ಮಹಿಮಂಗೆ ತಪದ ದಂಡಣೆಯ ತಗಹೆಲ್ಲಿಯದೋ? ಇಹಪರವೆಂಬ ಇದ್ದೆಸೆಗೆಟ್ಟವಂಗೆ ವ್ರತ ನಿಯಮದ ನೋಂಪಿಯ ಸೂತಕವೆಲ್ಲಿಯದೋ? ಉದ್ಯಾಪನೆಯಂ ಮಾಡಿ ಮಹಾಪುರುಷನಂ ಪಡೆದು ತೆರಹಿಲ್ಲದ ಪತಿ ಭಕ್ತಿಯ ಮಾಡುವ ಸಜ್ಜನ ಸತಿಗೆ ಅರ್ಚನೆ ಪೂಜನೆಯಂ ಮಾಡುವ ಸಂಭ್ರಮದ ದಂದುಗವೆಲ್ಲಿಯದೋ? ತನುಮನಧನ ಮೊದಲಾದವೆಲ್ಲವೂ ಶಿವನೊಡವೆಯೆಂದು ಮಾಡುವ ಸದ್ಭಕ್ತಂಗೆ, ಆವಾಗಳೂ ಶಿವನ ಸೇವೆಯ ಮಾಡುವ ಕೈಗಳಿಗೆ ಮಣಿಯ ಹಿಡಿದುಕೊಂಡು ತಿರುಹಬೇಕೆಂಬ ಕೋಟಲೆ ಗೊಳಗಾಗಲೇಕೆ? ಅನುಶ್ರುತವೂ ನೆನೆವ ಮನದ ನೆನಹಂ ಬಿಡಿಸಿ ಎಣಿಸಿ ಎಣಿಸಿ ಸಂದೇಹಿಸುವ ಸಂಚಲವೇಕೆ? ಅನುಮಿಷನಾಗಿ ನೋಡುವ ದೃಷ್ಟಿಗಳಿಗೆ ಎವೆಯ ಮರೆಯ ಮಾಡಿಕೊಂಡು ಕಣ್ಣ ಮುಚ್ಚಲೇಕೆ? ಕಣ್ಣು ಮನ ಕೈಯೆಂಬ ತ್ರಿಸ್ಥಾನದಲ್ಲಿರಿಸಲರಿಯದೆ ಭೇದವ ಮಾಡಿ ಅಗಲಿಸುವ ಜಪ ತಾನೇಕೆ ? ಪರಿಪೂರ್ಣವಾಗಿಹ ಪರಾಪರ ವಸ್ತುವನಗಲಿಸಿ, ದೂರಕ್ಕಿಕ್ಕಿ, ಎಡೆದೆರಹಂ ಮಾಡಿ ಖಂಡಿಸಿ ಕಂಡೆಹೆನೆಂಬ ಧ್ಯಾನಮೌನವೇಕೆ? ಸರ್ವ ಪದವೀವ ಸ್ವತಂತ್ರತೆಯ ಸಾಮರ್ಥ್ಯವನ್ನುಳ್ಳ ಮಹಾಪದದೊಳಗಿರ್ದು ಅಲ್ಪಪದವ ಸಾಧಿಸಿಹೆನೆಂದು ಕಾಯವ ದಂಡಿಸಿ, ಆತ್ಮನಿಗ್ರಹವಂ ಮಾಡಿ ಬಟ್ಟಗುತ್ತತನವಂ ಹಣ್ಣಿ, ತಗಹಿನಲ್ಲಿ ಕುಳ್ಳಿರ್ದು ಬೇಡಿಕೊಂಬ ತಪ ತಾನೇಕೆ? ಮುಟ್ಟಿದ್ದೆಲ್ಲ ಪವಿತ್ರ, ನೋಡಿದ್ದೆಲ್ಲ ಪಾವನಮಯ, ನಿರ್ಮಾಯ ನಿರ್ಮಳಾಂಗ ನಿತ್ಯಶುದ್ಧ ದಾಸೋಹದೊಳಗಿರುತ್ತ ! ಸೂತಕ ಬಿಡದು ಜಡಕ್ರೀಯಿಂದ ಭಾಷೆಗೊಡಲ ಗುರಿಮಾಡಿ, ಮೀಸಲಾಗಿಹ ಪ್ರಾಣವಳಿದು ಸಾವ ಸಂಕಲ್ಪದ ವ್ರತ ನಿಯಮವೇಕೆ? ಪೂಜೆಯೂ ಪೂಜ್ಯನೂ ಪೂಜಿಸುವ – ಈ ತ್ರಿವಿಧದ ಓಜೆಯ ಸೂತ್ರಾತ್ಮಕ ತಾನೆಯೆಂದರಿದು ಆ ಅರಿವಿಂಗಾಶ್ರಯವಾಗಿರ್ದು ಇರಲರಿಯದೆ ನಾನಾ ಪರಿಯಿಂದ ಒಲಿಸಿ ಮೆಚ್ಚಿಸಿ ಸ್ವರ್ಗಾದಿ ಭೋಗ ಧರ್ಮ ಕರ್ಮವನುಂಬ ಕೈಕೂಲಿಕಾರ ಕರ್ಮಿಗಳಂತೆ ಮಾಡುವ ಅರ್ಚನೆಯ ಪೂಜನೆಯ ಆಯಾಸದವನಲ್ಲ, ಜಪದ ಜಾಡ್ಯದ ಜಂಜಡದವನಲ್ಲ, ಧ್ಯಾನ ಮೌನದಿಂದ ಬೆರೆತಿಹ ಬಂಧನದವನಲ್ಲ, ತಪದ ದಂಡಣೆಯ ತಗಹನೊಲ್ಲ, ವ್ರತ ನಿಯಮದ ಸೂತಕಿಯಲ್ಲ, ಅರ್ಚನೆಯ ಪೂಜನೆಯ ಫಲ ಗ್ರಾಹಕನಲ್ಲ, ಹರಕೆಗೆ ಹವಣಿಸಿ ಬರಿದಹವನಲ್ಲ, ನೆವದಿಂದ ತದ್ದಿನವ ಮಾಡಬೇಕೆಂಬ ಉದ್ದೇಶಿಯಲ್ಲ, ವರುಷಕ್ಕೊಂದು ತಿಥಿಯೆಂದು ಕೂಡಲಿಕ್ಕೆ ಮಾಡಿ ಕೀರ್ತಿವಾರ್ತೆಗೆ ಮುಯ್ಯಾನುವನಲ್ಲ, ಮಿಕ್ಕಾದ ಕಿರುಕುಳ ಬಾಧೆಗೆ ಅಡಿಯಿಡದ ಸಹಜ ಸಂತೋಷಿ ಸರ್ವಸುಖಾನಂದಮಯನಾಗಿರುತ್ತ ಭಿನ್ನವೇಕೆ? ಕ್ಷೀರಸಾಗರದೊಳೋಲಾಡುತ್ತಿರ್ದು ಓರೆಯಾವಿನ ಬೆನ್ನಲ್ಲಿ ಹರಿವ ಮರುಳನಲ್ಲ, ಪರುಷದ ಗಿರಿ ಕೈ ಸಾರುತ್ತಿರಲು, ನಾಡ ಮಣ್ಣ ಕೂಡಲಿಕ್ಕೆ ತೊಳೆದು ಹಾಗವ ಸಾಧಿಸಿಹೆನೆಂಬ ದಾವತಿಯವನಲ್ಲ, ಅತ್ಯಂತ ಸ್ನೇಹದಿಂದ ನೆನಹಿನಲ್ಲಿ ಮನಕ್ಕೆ ಬಂದು ನೆಲೆಗೊಂಡಿರುತ್ತಿರಲು, ‘ಆಹಾ! ಪುಣ್ಯವೇ!’ ಎಂದು ಕ್ರೀಡಿಸುವ ರತಿ ಸುಖವಂ ಬಿಟ್ಟು ತಾ ಬೇರೆ ನೆನದರಸಿಹೆನೆಂಬವನಲ್ಲ, ಕೆಲವು ಮತದವರಂತೆ ತೆರಪಿಟ್ಟು ಅರಸಲುಂಟೆ? ತಾನಲ್ಲದನ್ಯವಿಲ್ಲೆಂದರಿದು ಅಹಂಕರಿಸಿ ಬೆರೆವವನಲ್ಲ, ಮತ್ತೆ ಉಳಿದ ಕಾಕುಮತದ ಸೊಗಸಿಂಗೆಳಸನಾಗಿ ಹೊಲಬುಗೆಡುವವನಲ್ಲ, ಹೊತ್ತುದ ಹುಸಿಮಾಡಿ ಮತ್ತೆ ಉಂಟೆಂದು ಭೇದವ ಮಾಡುವ ದುಷ್ಟದುರ್ಮತಿಗಳ ಪರಿಯಲ್ಲ, ಮಾಡಬೇಕೆಂಬ ಸಂಸಾರದ ಬಂಧನದವನಲ್ಲ, ಮಾಡಲೊಲ್ಲೆನೆಂಬ ವಿಕಲ್ಪವಾವರಿಸಿಹ ವೈರಾಗ್ಯದ ಉದಾಸೀನದವನೂ ಅಲ್ಲ, ರಿತುವುಳ್ಳ ಸತಿಯ ರತಿಕೂಟದಂತೆ ಮುಂದು ಅಗಲಿಸುವ ಕಷ್ಟದ ಸುಖದವನೂ ಅಲ್ಲ, ರಿತುವರತ ಸತಿಯ ರತಿಕೂಟದಂತೆ ಮುಂದೆ ಅಗಲಿಕೆಯಿಲ್ಲದ ಸುಖದ ಸಂಯೋಗದ ನೆಲೆಯನರಿದಂಗೆ, ಮಾಡುವಾತನೂ ಮಾಡಿಸಿಕೊಂಬಾತನೂ ಸೋಹ – ದಾಸೋಹ ತಾನೆಯೆಂದರಿದು ಬೇರೆನ್ನದೆ, ದಾತೃ ಭೋಕ್ತೃ ಶಿವನೊಬ್ಬನಲ್ಲದೆ, ಬೇರೆ ಬೇರೆ ತಮತಮಗೆ ಸ್ವತಂತ್ರರುಂಟೇ? ಇಲ್ಲ, ಆದಿ ಪರಶಿವಲಿಂಗವು ತಾನೆಯೆಂದರಿದು ಮಾಡುವ ಮಾಟ ಸಟೆಯಿಲ್ಲದೆ, ದಿಟ ಘಟಿಸಿ ಸ್ವಯವಾಗಿನಿಂದು, ನಿರಾಶ್ರಯದ ಕುಳದ ನಿಜವೆಡೆಗೊಂಡ ನಿಲವ ಪ್ರಮಾಣಿಸಿ ಕಾಬವಂಗೆ ಮಾಡಬೇಕೆಂದು ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು? ಮಾಡಿಹೆನೆಂದು ನೆನೆವ ಚೈತನ್ಯದ ಪ್ರಾಣವ ತಂದಿರಿಸಿದವರಾರು? ಮಾಡಬೇಕೆಂಬ ಅರಿವಿನ ಜ್ಞಾನವ ಕಣ್ದೆರೆದವರಾರು? ಮಾಡಬೇಕೆಂಬ, ಮಾಡಿಹೆನೆಂಬ ಮಾಡುವ ಇವನೆಲ್ಲ ಇನಳವಡಿಸಿಕೊಂಡಿಹ ಕಾಯವ ರೂಪಿಸಿದವರಾರು? ಇದು ಎಲ್ಲವೂ ಎನ್ನಿಂದಲಾಯಿತ್ತು, ನಾ ಮಾಡಿದೆನೆಂದುಲಿವ ದೇಹಿಯನೇನೆಂದೆ ನಬಹುದಯ್ಯಾ? ನದಿಯುದಕವ ನದಿಗರ್ಪಿಸುವಂತೆ ಒಡೆಯರಿಗೊಡವೆಯನಿತ್ತು, ತಾ ಶುದ್ಧನಾಗಿ, ನಡೆನುಡಿಯಲ್ಲಿ ಕವಲುದೋರದೆ ಘನವೆಡೆಗೊಂಡ ಮಹಾನುಭಾವಿಗಳು, ಇವನೆಲ್ಲವನಳವಡಿಸಿಕೊಂಡಿಹ ಕಾಯವ ಗುರುವೆಂದೆ ಸಾಧಿಸಿದರು, ಆನೇ ನವಚೈತನ್ಯದ ಪ್ರಾಣಲಿಂಗವೆಂದೇ ಭೇದಿಸಿದರು, ಆ ಅರಿವಿನ ಜ್ಞಾನವ ಜಂಗಮವೆಂದೇ ಅರಿದರು ಕೂಡಲ ಚನ್ನಸಂಗಯ್ಯಾ, ನಿಮ್ಮ ಶರಣರು ||

ಇಂತು ಕಾಮ್ಯಭ್ರಾಂತಿ ನಿರಸನ ಸ್ಥಲ ಸಮಾಪ್ತ ||

೩೭. ಶಿವಲೋಕಭ್ರಾಂತಿ ನಿರಸನ ಸ್ಥಲ

ಇಂತು ಕಾಮ್ಯಭ್ರಾಂತಿ ನಿರಸನವ ಮಾಡಿ, ದೇವಲೋಕ ಮರ್ತ್ಯಲೋಕವೆಂಬ ಸೀಮೆಯ ಮೀರಿ ನಿಸ್ಸೀಮನಾಗಿ, ಅಚಲಲಿಂಗಸಂಗದಲ್ಲಿ ಅಭಿನ್ನಭಾವಿ ತಾನಾದ ಬ್ರಹ್ಮಜ್ಞಾನಿಯಪ್ಪ ವೀರಮಾಹೇಶ್ವರನ ಶಿವಲೋಕಭ್ರಾಂತಿ ನಿರಸನ ಸ್ಥಲ ||

ಗ್ರಂಥ |

ಕ್ಷಣಂ ಕ್ಷಣಂ ಜನ್ಮ ವಿನಾಶವಂತಃ
ಕಥಂ ಮನುಷ್ಯಾಃ ಪ್ರವದಂತಿ ದೇವಾಃ
ದೇವಾ ದಿವಿಸ್ಥಾ ಮನುಜಾ ಭುವಿ ಸ್ಥಾಃ
ಸರ್ವತ್ರ ಸಂಸ್ಥಾಃ ಶಿವಯೋಗನಿಷ್ಠಾಃ ||  || ೧ ||

ಸರ್ವತ್ರ ದೃಶ್ಯತೇ ಸ್ವಸ್ಥಃ ಸರ್ವರ್ತ ವಿಮಲಾಶಯಃ
ಸರ್ವತ್ರ ವಾ ಸದಾಯುಕ್ತೋ ಮುಕ್ತಸ್ಸರ್ವತ್ರ ರಾಜತೇ ||  || ೨ ||

ವಚನ |

ಅಹುದಹುದು! ಸಾಕಾರ ಶರಣರ ನುಡಿ ಹುಸಿವುದೆ? ದಿಟ ದಿಟ! ತಪ್ಪದು ಒಳಗೆಂಬುದೆ ದೇವಲೋಕ, ಹೊರಗೆಂಬುದೆ ಮರ್ತ್ಯಲೋಕ, ಈ ಎರಡೂ ಲೋಕದೊಳಗೆ ತಾವೇ ಇರಲಿ, ಈ ಎರಡೂ ಲೋಕಕ್ಕೆ ನಾವು ಮುನ್ನವೆ ಹೊರಗು ಗುಹೇಶ್ವರಾ ||

ಆಗ ಹುಟ್ಟಿ ಬೇಗ ಸಾವ ಮಾನವ ನೀನು ದೇವರೆಸಿಕೊಂಬುದಾವುದಂತರ ಹೇಳಾ? ದೇವರಿಗೆ ದೇವಲೋಕ, ಮಾನವರಿಗೆ ಮರ್ತ್ಯಲೋಕ, ಗುಹೇಶ್ವರಲ್ಲಯ್ಯಂಗೆ ಆವ ಲೋಕವಿಲ್ಲ ||

ಆದಿಯನರಿಯದೆ ಅನಾದಿಯಿಂದತ್ತ ತಾನಾರೆಂಬುದ ವಿಚಾರಿಸಿ ತಿಳಿದು ನೋಡದೆ ಮಾಡಿ ಫಲವೇನಯ್ಯಾ ಬಸವಯ್ಯಾ? ಸಾವನ್ನಕ್ಕ ಸರವ ಮಾಡಿದಡೆ ಕಾದುವ ದಿನವಿನ್ನಾವುದಯ್ಯಾ ಬಸವಯ್ಯಾ? ಬಾಳುವನ್ನಕ್ಕ ಭಜನೆ ಮಾಡಿದಡೆ ತಾನಹ ದಿನವಿನ್ನಾವುದಯ್ಯಾ ಬಸವಯ್ಯಾ? ಬಾಳುವನ್ನಕ್ಕ ಭಜನೆ ಮಾಡಿದರೆ ತಾನಹ ದಿನವಿನ್ನಾವುದಯ್ಯಾ ಬಸವಯ್ಯಾ? ಇದು ಕಾರಣ, ಮರ್ತ್ಯಲೋಕದ ಭಕ್ತರುಗಳೆಲ್ಲ ತಥ್ಯವನರಿಯದೆ, ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ವ್ಯರ್ಥರಾಗಿ ಹೋದರು, ತಮ್ಮ ತಾವರಿಯದೆ ಕೆಟ್ಟರು, ತಲೆಯಂ ಕೊಯ್ದು, ದೇಹವ ಕಡಿದು ಕಣ್ಣಕಳೆದು, ಹೊಟ್ಟೆಯಸೀಳಿ, ಮಗನ ಕೊಂದು ಬಾಣಸವಂ ಮಾಡಿ, ವಾದಿಗೆ ಪುರಂಗಳನೊಯ್ದು ಕಾಯವೆರಸಿ ಕೈಲಾಸಕ್ಕೆ ಹೋದವರೆಲ್ಲರೂ ಭಕ್ತರಪ್ಪರೇ? ಅವರಿಗೆ ಶಿವಪದವು ಸಾಧ್ಯವಾಯಿತ್ತೇ? ಭವಹಿಂಗಿತ್ತೇ? ಅದು ಸಹಜವೆ? ಅಲ್ಲಲ್ಲ! ನಿಲ್ಲು, ಮಾಣು, ನರಲೋಕದವರುಗಳೆಲ್ಲರೂ ನರ – ಸಂಸಾರಕ್ಕೊಳಗಾದರು ಮುನಿಜನಂಗಳೆಲ್ಲರೂ ತಪವೆಂಬ ಸಂಸಾರಕ್ಕೊಳಗಾದರು ಸುರಲೋಕದ ಸುರರುಗಳೆಲ್ಲರೂ ಸುರ ಸಂಸಾರಕ್ಕೊಳಗಾದರು, ಲಿಂಗವ ಹಿಡಿದವರೆಲ್ಲರೂ ಫಲಪದಂಗಳೆಂಬ ಸಂಸಾರಕ್ಕೊಳಗಾದರು, ಜಂಗಮವ ಹಿಡಿದವರೆಲ್ಲರೂ ಸಾಯುಜ್ಯವೆಂಬ ಸಂಸಾರಕ್ಕೊಳಗಾದರು, ಇಂತಿ ಸಂಕಲ್ಪಕ್ಕೊಳಗಾದವರೆಲ್ಲರೂ ಮಾಯೆಯ ಹೊಡೆಕಿಚ್ಚ ಗೆಲ್ಲಬಲ್ಲರೇ? ಇದು ಕಾರಣ, ನಿತ್ಯ ನಿಜತತ್ವ ತಾನೆಂದರಿಯದೆ ತತ್ವಮಸಿಯಾದಿ ವಾಕ್ಯದ ಹೊರಹೊರಗನೇ ಬಳಸಿ ಕೆಟ್ಟರಲ್ಲಾ ಹಿರಿಯರು! ಸತ್ತರಲ್ಲಾ ನಾಯಿ ಸಾವ, ಸತ್ತವರ ಹೆಸರ ಪತ್ರವ ನೋಡದಡೆ ಅದೆಂತಣ ಮುಕ್ತಿಯೋ ಗುಹೇಶ್ವರ ||

ಭಕ್ತಿಯೆಂಬ ಪಿತ್ತ ತಲೆಗೇರಿ, ಕೈಲಾಸದ ಬಟ್ಟೆಯ ಹತ್ತುವ ವ್ಕರ್ಥರ ಕಂಡು ಎನ್ನ ಮನ ನಾಚಿತ್ತು ! ನಾಚಿತ್ತು ! ಕೈಲಾಸವೆಂಬುದೇನೋ? ಪೃಥ್ವಿಯ ಮೇಲೊಂದು ಮೊರಡಿ! ಆ ಪೃಥ್ವಿಗೆ ಲಯವುಂಟು; ಆ ಮೊರಡಿಗೆ ಲಯ ಉಂಟು; ಅಲ್ಲಿಪ್ಪ ಗಂಗೆವಾಳುಕ ಸಮರುದ್ರರಿಗೆಯೂ ಲಯವುಂಟು! ಯುದ್ದೃಷ್ಟಂ ತನ್ನಷ್ಟಮೆಂಬ ಶ್ರುತಿಯ ನೋಡಿ ತಿಳಿದು ಬಟ್ಟ ಬಯಲ ತುಟ್ಟ ತುದಿಯ ಮೆಟ್ಟಿನಿಂದ, ಕೂಡಲಸಂಗಾ, ನಿಮ್ಮ ಶರಣ ||

ಪೃಥ್ವಿ ಅಪ್ಪು ತೇಜ ವಾಯು ಆಕಾಶದಲೊದಗಿದ ತನುವಿನ ಭೇದವ ನೋಡಿರೆ! ತಮ್ಮ ತಮ್ಮ ವಿಶ್ರಾಮಕ್ಕೆ ತನು ಸವೆದುಹೋಗುತಿದೆ, ಮುಂದೆ ದೇವರ ಕಂಡೆಹೆನೆಂಬುದಕೆ ಇನ್ನೆಲ್ಲಿಯ ತನುವೋ? ಅಕಟಕಟಾ! ಜಡದೇಹಿಗಳೆಲ್ಲ ಜಡನನೆ ಪೂಜಿಸಿ, ಹತ್ತಿದರಲ್ಲಾ ಕೈಲಾಸದ ಬಟ್ಟೆಯ, ಅಲ್ಲಿಯೂ ಪ್ರಾಯ ತಪ್ಪದಲ್ಲದೆ ಪ್ರಳಯ ತಪ್ಪದು, ಹಿಂದೆ ಅಸಂಖ್ಯಾತ ಮಹಾಗಣಂಗಳೆಲ್ಲರೂ ಲಾಭಕ್ಕೆ ವ್ಯವಹಾರವ ಮಾಡಿದರಲ್ಲದೆ, ಅವರು ಭಕ್ತರಲ್ಲ! ನಾನು ಅಚಲ ಲಿಂಗ ಸೋಂಕಿನ ಅನುಭಾವದ ಸಂಬಂಧಿಯಾದ ಕಾರಣ, ಕೈಲಾಸದ ಬಟ್ಟೆ ಹಿಂದಾಯಿತ್ತು! ನಾನು ಬಟ್ಟಬಯಲಾದೆನು ಕಾಣಾ, ಕೂಡಲಚನ್ನಸಂಗಮದೇವಾ ||

ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರೆಂತೆಂಬೆ, ಒಬ್ಬ ಭಾವದ ರೂಪ, ಒಬ್ಬ ಪ್ರಾಣದ ರೂಪ, ಒಬ್ಬನೈಮುಖನಾಗಿ ವಿಶ್ವಕ್ಕೆ ಕಾಯರೂಪದ, ಇಬ್ಬರು ಉತ್ಪತ್ತಿ ಸ್ಥಿತಿಗೆ ಕಾರಣರಾದರು, ಐಮುಖನರಮನೆ ಸುಖವಿಲ್ಲೆಂದರಿದೆನಾಗಿ, ಇನ್ನು ಕೈಲಾಸವನು ಹೊಗೆ, ಹೊಗೆ, ಮರ್ತ್ಯಕ್ಕೆ ಅಡಿಯಿಡೆನು, ಚನ್ನಮಲ್ಲಿಕಾರ್ಜುನದೇವಾ, ನೇವೇ ಸಾಕ್ಷಿ ||

ಇಂದು ಬಂದ ಬಹುರೂಪವ ನೋಡಿರಯ್ಯಾ, ಗತಿಯ ಹೊದ್ದದೆ, ಮತಿಯ ಹೊದ್ದದೆ, ಸ್ಥಿತಿಯ ಹೊದ್ದದೆ, ಸಾವ ಹೊದ್ದದೆ, ಐವರು ಕಟ್ಟಿದ ಕಟ್ಟಳೆಯ ಮೀರಿ ಆನಾಡುವೆ ಬಹುರೂಪ ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತ್ತು ಈ ಲೋಕವೆಲ್ಲವೂ ||

ಇನ್ನಾಡುವೆ ಜಂಗಮ ಬಹುರೂಪ, ಈ ಲೋಕಕ್ಕೆ ಬಂದಿನ್ನು ಆನು ಹೊಗೆನಯ್ಯಾ ಇನ್ನು ಅನು ಹೋದೆನಾದಡೆ, ಎನಗೆ ಇರ – ಠಾವಿಲ್ಲ, ಮುನ್ನಹೋದವರೆಲ್ಲರೂ ತಗಹಿನಲ್ಲಿ ಕುಳ್ಳಿರ್ದರು, ಆನು ಆ ತಗಹನರಿತೆನಾಗಿ ಒಲ್ಲದೆ ಬಂದೆನಿಲ್ಲಿಗೆ, ಇಲ್ಲೆನ್ನೋ ಮದ್ದಳಿಗೆ, ಒಲ್ಲೆನ್ನೋ ಕಹಳೆಕಾರಾ, ಬಿಂದುವ ಹರಿದು, ನಿಂದು ಹೊತ್ತಿರೋ ಹಣತಿಯರಿರಾ! ತಾಳ ವಿತಾಳವಾಯಿತ್ತಲ್ಲಾ! ನಾದ ಸುನಾದವಾಯಿತ್ತಲ್ಲಾ, ಕೇಳಿಕೆ ನಿಶೂನ್ಯವಾಯಿತ್ತಲ್ಲಾ ; ರೇಕಣ್ಣ ಪ್ರಿಯ ನಾಗಿನಾಥಾ, ಬಸವನಿಂದೆ ಬದುಕಿನೀ ಲೋಕವೆಲ್ಲ ||

ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು ಇಲ್ಲಿಯ ಬಹುರೂಪು ಎಲ್ಲಿ ಅಡಗಿತ್ತೋ? ಇನ್ನು ಎನ್ನ ಬಹುರೂಪ ಬಲ್ಲವರಾರೋ? ನಾದ ಹರಿದು ಸ್ವರವು ಸೂಸಿದ ಬಳಿಕ ಈ ಬಹುರೂಪ ಬಲ್ಲವರಾರೋ? ರೇಕಣ್ಣಪ್ರಿಯ ನಾಗಿನಾಥನಲ್ಲಿ ಬಸವನಿಂದ ಬದುಕಿತ್ತೀ ಮೂರು ಲೋಕವೆಲ್ಲ ||

ಇಂತು ಶಿವಲೋಕ ಭ್ರಾಂತಿ ನಿರಸನ ಸ್ಥಲ ಸಮಾಪ್ತ ||

ಇಂತಪ್ಪ ಶಿವಲೋಕ ಭ್ರಾಂತಿ ನಿರಸನ ಸ್ಥಲವೇ ಕಡೆಯಾಗಿ ಷಟ್ಟ್ರಕಾರವನುಳ್ಳ ಸರ್ವ – ನಿಷ್ಠಾ – ಸಂಪೂರ್ಣಮಪ್ಪ ಬ್ರಹ್ಮಜ್ಞಾನಿಯ ಮಾಹೇಶ್ವರಸ್ಥಲ ಸಮಾಪ್ತ || ಇಂತಪ್ಪ ಮಾಹೇಶ್ವರಂಗೆಯೂ ನನಗೆಯೂ ಅಭಿನ್ನವೆಂದು ಶಿವನಿರೂಪವ ಕೊಟ್ಟ ಮಾಹೇಶ್ವರ ಮಹಾತ್ಮ್ಯ ||

ಗ್ರಂಥ |

ಅಹಂ ಮಾಹೇಶ್ವರ ಪ್ರಾಣೋ ಮಮ ಪ್ರಾಣೋ ಮಹೇಶ್ವರಃ
ತಸ್ಮಾದವಿರಳಂ ನಿತ್ಯಂ ಶರಣ್ಯಂ ನಾಮ ವರ್ತತೇ ||  || ೧ ||

ಇದು ಶ್ರೀಮದಮಿತೋರುಲಿಂಗ ಸಂಯೋಗಾನುಭವಪ್ರಸಿದ್ಧ ಪರಿಪೂರ್ಣಶೀಲ
ಪರಮಾದ್ವೈತ ವಿಶ್ರಾಂತರುಮಪ್ಪ ಪರಮ ಚರರೂಪ ಶ್ರೀ ಕರಸ್ಥಲದ
ಮಲ್ಲಿಕಾರ್ಜುನನೊಡೆಯರು ಸೇರಿಸಿದ ಮಹಾನುಭಾವ ಬೋಧೆಯಪ್ಪ
ಶ್ರೀಮದ್ಬ್ರಹ್ಮಾದ್ವೈತ ಸಿದ್ಧಾಂತ ಷಟ್‌ಸ್ಥಲಾಭರಣದೊಳು
ಬ್ರಹ್ಮಜ್ಞಾನಿಯಪ್ಪ ಮಾಹೇಶ್ವರನ ವರ್ಗ
ದ್ವಿತೀಯ ಪರಿಚ್ಛೇದ ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ ||

 

ಪ್ರಸಾದಿ ಸ್ಥಲ

೩೮. ಪ್ರಸಾದಿ ಸ್ಥಲ

ಇಂತು ಪರಮನಿಷ್ಠೆಯಿಂ ವೀರಮಾಹೇಶ್ವರನಾಗಿ, ಆ ನಿಷ್ಠೆಯೊಳಗಣ ಸಾವಧಾನದಿಂದ ಬ್ರಹ್ಮಜ್ಞಾನಿಯಪ್ಪ ಮಾಹೇಶ್ವರನು ತಾನೇ ಪ್ರಸಾದಿಯಾದ ಪ್ರಸಾದಿ ಸ್ಥಲ ||

ಗ್ರಂಥ |

ಲಿಂಗಾರ್ಪಿತ ಪ್ರಸಾದಂ ಚ ಸುಭೋಗಿ ಲಿಂಗಸಂಯುತಂ
ಅನರ್ಪಿತವಿಸರ್ಜ್ಯ ಚ ಪ್ರಸಾದಿ ಸ್ಥಲಮುತ್ತಮಂ ||  || ೧ ||

ಪ್ರಸಾದಶ್ಚ ಗುರೋಸ್ಸರ್ವೋ ಜಂಗಮಾನಾಂ ಚ ಸರ್ವದಾ
ಶಿವಸ್ಯ ಸತತಂ ಭೋಜ್ಯಃ ಪ್ರಸಾದಿ ಸ್ಥಲಮುತ್ತಮಂ ||  || ೨ ||

ವೃತ್ತ |

ಶಿವಪ್ರಸಾದೇನ ವಿನಾ ನ ಮುಕ್ತಯಃ
ಶಿವಪ್ರಸಾದೇನ ವಿನಾ ನ ಭುಕ್ತಯಃ
ಶಿವಪ್ರಸಾದೇನ ಸಮಂ ನ ವಿದ್ಯತೇ
ಶಿವಪ್ರಸಾದೇನ ಶಿವಸ್ಯ ಸನ್ನಿಧಿಃ ||  || ೩ ||

ಶಿವಪ್ರಸಾದೇನ ವಿಶುದ್ಧಿತಾತ್ಮನಃ
ಶಿವಪ್ರಸಾದೇನ ಯುತಸ್ಯ ಸುವ್ರತ
ನ ಜನ್ಮ ನಾಶೌ ಭವತಸ್ಸದೈವತು
ಶಿವಪ್ರಸಾದೇನ ಯುತಃ ಸ್ವಯಂ ಶಿವಂ ||  || ೪ ||

ಪ್ರಸಾದೋ ಗಿರಿಜಾದೇವಿ ಸಿದ್ಧ ಕಿನ್ನರ ಗುಹ್ಯಕ
ವಿಷ್ಣು ಪ್ರಮುಖದೇಪಾನಾಮಗ್ರಗಣ್ಯಸ್ತ್ವ ಗೋಚರಃ ||  || ೫ ||

ವಚನ |

ಲಿಂಗಕ್ಕೆಂದೇ ನೆನೆದು ಲಿಂಗಕ್ಕೆಂದೇ ಮಾಡಿ ಲಿಂಗಕ್ಕೆಂದೇ ಕೊಡುವೆ ನಾನಯ್ಯಾ, ಸಕಲ ಪದಾರ್ಥಂಗಳ ಲಿಂಗಕ್ಕೆಂದೇ ಭಾವಿಸುವೆ, ಅಂಗ ಗುಣಂಗಳನರಿಯೆ ನಾನು, ಲಿಂಗಕ್ಕೆಂದೇ ಕಾಮಿಸುವೆ ನಾನು ನಿಷ್ಕಾಮಿಯಾಗಿ, ಎನ್ನ ದೇಹೇಂದ್ರಿಯ ಮನಃಪ್ರಾಣಾದಿಗಳು ಲಿಂಗಕ್ಕೆ ಸತಿಗಳಾಗಿ, ಲಿಂಗಕ್ಕೆಂದೇ ಬಯಸಿ ಲಿಂಗಪ್ರಾಣಿಗಳಾದ ಕಾರಣ, ಲಿಂಗಕ್ಕೆಂದೇ ಕೈಗೊಂಬೆಯನು, ಅನರ್ಪಿತವನರಿಯೆನು, ಕೂಡಲಚನ್ನಸಂಗಮದೇವಾ ||

ಲಿಂಗವಲ್ಲದೆ ಎನ್ನ ಮನಕ್ಕೆ ಸಮನಿಸದು, ಜಂಗಮವಲ್ಲದೆ ಎನ್ನ ಮನಕ್ಕೆ ಸಮನಿಸದು, ಪ್ರಸಾದವಲ್ಲದೆ ಎನ್ನ ತನುವಿಚ್ಛೆಗೆ ಸಮನಿಸದು, ಕೂಡಲಚನ್ನಸಂಗಯ್ಯಾ, ಇದು ಸತ್ಯ, ನೋಡಯ್ಯಾ! ಸಕಲೇಂದ್ರಿಯಗಳು ಅನ್ಯವಿಷಯಕ್ಕೆ ಸಮನಿಸವು |

ಮೊದಲಿಲ್ಲ! ಮೊದಲಿಲ್ಲ! ಅಚ್ಚೊತ್ತಿದ ಕಾರಣ, ಎಚ್ಚರಿಕೆಯಾಯಿತ್ತು, ಗುರುಕಾರುಣ್ಯದಿಂದ ಅರಿವಾಯಿತ್ತು, ಆಚಾರವಾಯಿತ್ತು, ಜಂಗಮದಿಂದ ತಿಳಿದ ತಿಳಿವಿನಲ್ಲಿ ಪ್ರಸಾದ ಸಾಧ್ಯವಾಯಿತ್ತು, ಕೂಡಲಚನ್ನಸಂಗಯ್ಯನಲ್ಲಿ ಏಕಾರ್ಥವಾಯಿತ್ತು |

ಅಗ್ನಿ ಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯಾ, ಗುರುಪ್ರಸಾದವಂಗೆ ಸೋಂಕಲೊಡನೆ ಸರ್ವಾಂಗವೂ ಲಿಂಗವಪ್ಪುದು ತಪ್ಪದಯ್ಯಾ, ಲಿಂಗಪ್ರಸಾದ, ಮನಸೋಂಕಲೊಡನೆ ಮನಲಿಂಗವಪ್ಪದು ತಪ್ಪದಯ್ಯಾ, ಶಿವಶಿವಾ! ಪ್ರಸಾದದ ಮಹಿಮೆಯನೇನೆಂದು ಪಮಿಸುವೆ? ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ, ಪ್ರಸಾದವೇ ಪರಾತ್ಪರ, ಪ್ರಸಾದವೇ ಪರಮಜ್ಞಾನ, ಪ್ರಸಾದವೇ ಜ್ಞಾನಾತೀತ, ಪ್ರಸಾದವೇ ಸಚ್ಚಿದಾನಂದ, ಪ್ರಸಾದವೇ ನಿತ್ಯಪರಿಪೂರ್ಣ! ಇಂತಪ್ಪ ಪ್ರಸಾದವ ಸ್ವೀಕರಿಸಿ ನಾನು ಬದುಕಿದೆನು ಕಾಣಾ! ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ |

ಗುರುಪ್ರಸಾದಿಗಳಪೂರ್ವವಪೂರ್ವ, ಲಿಂಗಪ್ರಸಾದಿಗಳಪೂರ್ವವಪೂರ್ವ, ಜಂಗಮ ಪ್ರಸಾದಿಗಳಪೂರ್ವವಪೂರ್ವ, ಪ್ರಸಾದಿಪ್ರಸಾದಿಗಳಪೂರ್ವವಪೂರ್ವ, ಗುರುಪ್ರಸಾದಿ ಗುರು ಭಕ್ತನಯ್ಯಾ, ಲಿಂಗಪ್ರಸಾದಿ ಪ್ರಭುದೇವರು, ಜಂಗಮಪ್ರಸಾದಿ ಬಸವಣ್ಣನು, ಪ್ರಸಾದಿ ಪ್ರಸಾದಿ ಬಿಬ್ಬಿಬಾಚಯ್ಯನು ಮಿಕ್ಕಿದ ಪ್ರಸಾದಿಗಳೆಲ್ಲರೂ ಆಪ್ಯಾಯ ಪ್ರಸಾದಿಗಳು ಕೂಡಲ ಚನ್ನಸಂಗಮದೇವಾ |

ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡು ಉಂಬಿರಿ, ಪ್ರಸಾದವಾವುದು, ಓಗರವಾವುದು, ಬಲ್ಲಡೆ ನೀವು ಹೇಳಿರೇ! ಕೈಯಾಂತು ಕೊಂಬವ ಗುರುದ್ರೋಹಿ, ಕಾಯವ ಕಳೆದು ಕಾಯಪ್ರಸಾದಿ, ಜೀವವ ಕಳೆದು ಜೀವಪ್ರಸಾದಿ, ಪ್ರಾಣವ ಕಳೆದು ಪ್ರಾಣ ಪ್ರಸಾದಿ, ಕಾಯ ಜೀವ – ಇಂದ್ರಿಯ ವಿರೋಧಿ, ಇಂತೀ ತ್ರಿವಿಧಸಾಹಿತ್ಯ ಕೂಡಲ ಚನ್ನಸಂಗಯ್ಯನಲ್ಲಿ ಬಸವಣ್ಣಂಗಲ್ಲದೆ ಮತ್ತಾರಿಗೆಯೂ ಆಗದು ||

ಪ್ರಕಟದಲ್ಲಿ ಕೊಂಬುದು ಪ್ರಸಾದವಲ್ಲ, ಗುಪ್ತದಲ್ಲಿ ಕೊಂಬುದು ಪ್ರಸಾದವಲ್ಲ, ಪ್ರಕಟದಂತುಟೆ ಪ್ರಸಾದ! ಗುಪ್ತದಂತುಟೆ ಪ್ರಸಾದ? ಪ್ರಸಾದ ಪ್ರಸಾದದಂತುವನೇನೆಂದು ಹೇಳುವೆನಯ್ಯಾ! ಭವಭಾರಿ ಜೀವಿಗಳೊಡನೆ ಪ್ರಸಾದದಂತುವನೇನೆಂದುಪಮಿಸುವೆನಯ್ಯಾ? ಆರೂಢಿಶ್ಚ ಪ್ರಸಾದೇನನ ಗುಪ್ತಿಶ್ಚ ಪ್ರಸಾದಕೇ ಗುಪ್ತ್ಯಾರೂಢ್ಯೋಭಯಂ ನಾಸ್ತಿ ಮಹಾ ಪ್ರಸಾದಸ್ಸಜ್ಜನ | ಎಂದುದಾಗಿ ಪ್ರಕಟಗುಪ್ತವ ಕಳೆದು ನೆಟ್ಟನೇ ಪ್ರಸಾದವ ಮಾಡಿಕೊಳಬಲ್ಲ ಕೂಡಲಚನ್ನಸಂಗಯ್ಯನಲ್ಲಿ ಬಸವಣ್ಣನು ||

ಎಡೆಗೊಡುವನಲ್ಲ, ಎಡೆಗೊಂಬುವನಲ್ಲ, ನುಡಿಯೆಡೆಯೊಳಗೆ ಮರುಳುವನಲ್ಲ, ತನ್ನ ತಾನು ಮಹಾಪ್ರಸಾದಿ ಕಡೆಗೊಂಡ ನಿರ್ಲೇಪ ಪ್ರಸಾದಿ, ಎಡೆಯಲ್ಲಿ ಅಂಧಕಾರ ರೂಪನಲ್ಲ, ಇದು ಕಾರಣ, ಕೂಡಲಚನ್ನಸಂಗಯ್ಯನಲ್ಲಿ ಇರ್ದುದನರ್ಪಿಸಬಲ್ಲನಾಗಿ, ಆತ ಮಹಾ ಪ್ರಸಾದಿ ||

ಸ್ಥೂಲ ಸೂಕ್ಷ್ಮವೆಂಬ ಶಬ್ದಪರಿಭಾವ ತಲೆದೋರದ ಸಂಗಮಹಾಸಂಗದ ವರ್ಮದಾಸೋಹ ಹೃದಯದಲ್ಲಿ ಸಾಹಿತ್ಯವಾದ ಭಕ್ತಂಗೆ ಅರ್ಪಿತಾನರ್ಪಿತವೆಂಬ ಸಂಕಲ್ಪವಿರಹಿತ, ಮತ್ತೆ ಅರ್ಪಿಸಲಿಲ್ಲಾಗಿ! ಸದ್ಯೋಜಾತ ವಾಮದೇವ ಮೊದಲಾದ ಪಂಚವಕ್ತ್ರವನು ಊರ್ಧ್ವ ಮುಖಕ್ಕೆತ ತಂದು ಅರ್ಪಿಸಬಲ್ಲನಾಗಿ, ಗುರುಪ್ರಸಾದಿ ಹೊರಗೆ ಭಜಿಸಲಿಲ್ಲ, ಒಳಗೆ ನೆನೆಯಲಿಲ್ಲ, ಸರ್ವಾಂಗಲಿಂಗಸಂಯೋಗವಾಗಿಹ ಲಿಂಗಪ್ರಸಾದಿ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ, ಆತ್ಮ – ಇಂತೀ ಅಷ್ಟತುನುವನು ದಾಸೋಹದಲ್ಲಿ ಅರ್ಪಿಸಬಲ್ಲನಾಗಿ, ಜಂಗಮಪ್ರಸಾದಿ, ಇದುಕಾರಣ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣ ಮಹಾಪ್ರಸಾದಿ ||

೧೦

ಸ್ಥಲದಿಂದ ಸ್ಥಲವನರ್ಪಿಸುವುದು ಒಡಲ ಗುಣ, ನಿಃಸ್ಥಲದಿಂದ ನಿಃಸ್ಥಲವನರ್ಪಿಸುವುದು ಪ್ರಾಣನ ಗುಣ, ಇಂತಹ ಮಹಂತರ ಠಾವ ತೋರಿ ಬದುಕಿಸಯ್ಯಾ ಕೂಡಲಚನ್ನ ಸಂಗಮದೇವಾ ||

ಶ್ರೀ ಮಹಾಜ್ಞಾನಿಯಪ್ಪ ಪ್ರಸಾದಿಯ ಪ್ರಥಮಸ್ಥಲ ಸಮಾಪ್ತ ||