೪೩. ಅರ್ಪಿತಾನರ್ಪಿತನಾಸ್ತಿಯಾದ ಅಭಿನ್ನಲಿಂಗಾರ್ಪಣ ಸ್ಥಲ

ಇಂತಪ್ಪ ನಿರ್ದೇಹಲಿಂಗಾರ್ಪಣ ಪ್ರಸಾದಭೋಗದಲ್ಲಿ ಪರಂಜ್ಯೋತಿಯಾಗಿ ಸರ್ವಾಂಗವೂ ಲಿಂಗವಾದ ಬ್ರಹ್ಮಜ್ಞಾನಿಯಪ್ಪ ಅಖಂಡಮಹಾಪ್ರಸಾದಿಯ ಅರ್ಪಿತ ಅನರ್ಪಿತನಾಸ್ತಿಯಾದ ಅಭಿನ್ನಲಿಂಗಾರ್ಪಣ ಸ್ಥಲ ||

ಗ್ರಂಥ |

ಅರ್ಪಿತಾನರ್ಪಿತಂ ನಾಸ್ತಿ ಇತ್ಯಭೇದ ಸಮನ್ವಿತಂ
ಪದಾರ್ಥ ಚ ಪ್ರಸಾದಂ ಚ ಏತದ್‌ಗುಣಂ ಭಾವಯೇತ್‌ ||  || ||

ರುಚೀ ರೂಪಂ ನ ಚ ಜ್ಞಾನಂ ಅರ್ಪಿತಾನರ್ಪಿತಂ ತಥಾ
ಯದಿ ಪ್ರವತೇತೇ ಯಸ್ಯ ಶಿವೇನ ಸಹ ಮೋದತೇ ||  || ||

ವಚನ |

ಲಿಂಗದಲ್ಲಿ ಕೊಡಲುಂಟು ಕೊಳಲುಂಟಾಗಿ ಅರ್ಪಿತ; ಜಂಗಮದಲ್ಲಿ ಕೊಟ್ಟು ಕೊಳಲಿಲ್ಲವಾಗಿ ಅನರ್ಪಿತ; ಪ್ರಸಾದದಲ್ಲಿ ಕೊಡಲೂ ಕೊಳಲೂ ಇಲ್ಲವಾಗಿ ಉಭಯನಾಸ್ತಿ ಇಂತಿ ತ್ರಿವಿಧದ ಸಂಚವ ಸನುಮತವ ಕೂಡಲಚನ್ನಸಂಗಾ, ನಿಮ್ಮ ಶರಣನೆ ಬಲ್ಲ ||

ಕಲ್ಪಿಸಿ ಅರ್ಪಿಸಲಿಲ್ಲ, ಅರ್ಪಿಸಿ ಭೋಗಿಸಲಿಲ್ಲ, ಅರ್ಪಿತ ಅನರ್ಪಿತವೆಂಬೆರಡಳಿದನಾಗಿ, ಕಾಯದ ಕೈಗಳ ಕೈಯಲ್ಲಿ, ಭಾವದ ಕೈಗಳ ಕೈಯಲ್ಲಿ ಅರ್ಪಿಸುವನಲ್ಲ, ಆತ ಅನರ್ಪಿತನಾಗಿ, ಅರ್ಪಿತ ಅನರ್ಪಿತವೆಂಬ ಸಂದಳಿದನು ಕೂಡಲಚನ್ನಸಂಗಯ್ಯಾ, ನಿಮ್ಮ ಶರಣಂಗೆ ಪ್ರಸಾದವೇ ಪ್ರಳಯವಾಯಿತ್ತು ||

ಅರ್ಪಿತದಲ್ಲಿ ಅವಧಾನವರತು ಅನರ್ಪಿತದಲ್ಲಿ ಸುಯಿಧಾನವರತು ಬಂದುದು ಬಾರದುದು ಎಂದರಿಯದೆ ಬಂದ ನಿಲವಿನ ಪರಿಣಾಮಿ, ರುಚೀ ರೂಪಂ ನ ಚ ಜ್ಞಾನಂ ಅರ್ಪಿತಾನರ್ಪಿತಂ ತಥಾ | ಯದಿ ಪ್ರವರ್ತತೇ ಯಸ್ಯ ಶಿವೇನ ಸಹ ಮೋದತೇ || ಎಂದುದಾಗಿ ಕೂಡಲಚನ್ನಸಂಗಯ್ಯಾ, ನಿಮ್ಮ ಶರಣರು ಶಿವಸುಖ ಸಂಪನ್ನರು ||

ಅರ್ಪಿತಾನರ್ಪಿತವೆಂಬ ಸಂದಳಿದುಳಿದ ಮಹಾಪ್ರಸಾದಿಗೆ ಅರ್ಪಿತ ಪ್ರಸಾದವೆಲ್ಲಿಯದೋ? ಲಿಂಗಾರ್ಪಿತ ಪ್ರಸಾದಂ ನ ದದ್ಯಾಜ್ಜಂಗಮಾಯ ವೈ | ಜಂಗಮಾರ್ಪಿತ ಪ್ರಸಾದಂದದ್ಯಾತ್ತು ಲಿಂಗಮೂರ್ತಯೇ || ಮಹದಿಂದಾದ ಘನವ ಸೂತಕಕ್ಕಿಕ್ಕುವ ಪಾತಕರ ನೇನೆಂಬೆ ಕೂಡಲಚನ್ನಸಂಗಮದೇವಾ ||

ತನುವ ಗುರುಲಿಂಗಕ್ಕರ್ಪಿಸಿ, ಮನವ ಲಿಂಗಕ್ಕರ್ಪಿಸಿ, ಭಾವವ ಜಂಗಮಕ್ಕರ್ಪಿಸಿ, ಅರಿವ ನಿಜದಲರ್ಪಿಸಿ, ನಿಜವ ತೃಪ್ತಯಲರ್ಪಿಸಿ, ಅರ್ಪಿತವೆ ಅನರ್ಪಿತವಾಗಿ, ಅನರ್ಪಿತವೆ ಅರ್ಪಿತವಾಗಿ ಅರ್ಪಿತ ಅನರ್ಪಿತವೆಂಬ ಸಂದಳಿದುಳಿದ ಮಹಾಪ್ರಸಾದದ ಹಾದಿಯನೆಲ್ಲರಿಗೆ ಕರತಳಾಮಳಕವಾಗಿ ತೋರಿದ, ಗುಹೇಶ್ವರಾ, ನಿಮ್ಮ ಶರಣ ಚನ್ನಬಸವಣ್ಣನು ||

ಏಕಾದಶ ಪ್ರಸಾದದ ಭೇದವ ತಿಳಿವಡೆ, ಪ್ರಥಮದಲ್ಲಿ ಗುರುಪ್ರಸಾದ, ದ್ವಿತೀಯದಲ್ಲಿ ಲಿಂಗಪ್ರಸಾದ, ತೃತೀಯದಲ್ಲಿ ಜಂಗಮಪ್ರಸಾದ, ಚತುರ್ಥದಲ್ಲಿ ಪ್ರಸಾದಿಯ ಪ್ರಸಾದ, ಪಂಚಮದಲ್ಲಿ ಅಪ್ಯಾಯನ ಪ್ರಸಾದ, ಷಷ್ಟಮದಲ್ಲಿ ಸಮಯ ಪ್ರಸಾದ, ಸಪ್ತಮದಲ್ಲಿ ಪಂಚೇಂದ್ರಿಯ ವಿರಹಿತ ಪ್ರಸಾದ, ಅಷ್ಟಮದಲ್ಲಿ ಅಂತಃಕರಣ ಚತುಷ್ಟಯ ವಿರಹಿತ ಪ್ರಸಾದ, ನವಮದಲ್ಲಿ ಸದ್ಭಾವ ಪ್ರಸಾದ, ದಶಮದಲ್ಲಿ ಸಮತಾ ಪ್ರಸಾದ, ಏಕಾದಶದಲ್ಲಿ ಜ್ಞಾನ ಪ್ರಸಾದ, ಇಂತೀ ಏಕಾದಶ ಪ್ರಸಾದಸ್ಥಲವನತಿಗಳೆದು ಕೂಡಲಚನ್ನಸಂಗಯ್ಯನಲ್ಲಿ, ಐಕ್ಯ ಪ್ರಸಾದಿಗೆ ನಮೋ ನಮೋ ಎಂಬೆ ||

ದಶವಿಧ ಪಾದೋದಕವ, ಏಕಾದಶ ಪ್ರಸಾದವ ಬಲ್ಲವರ ಬಲ್ಲೆ, ಇನ್ನೊಂದ ಬಲ್ಲವರ ತೋರಾ ತಂದೆ, ಇನ್ನೊಂದ ಬಲ್ಲವರ ತೋರಾ ಲಿಂಗವೆ, ಲಿಂಗವೆ ನೆನೆಯದೆ, ಲಿಂಗಾರ್ಪಿತವ ಮಾಡದೆ, ಅನರ್ಪಿತವ ಮುಟ್ಟದ ಅಚ್ಚಪ್ರಸಾದಿಗಳ ತೋರಿ ಬದುಕಿಸಯ್ಯಾ, ಕೂಡಲಚನ್ನಸಂಗಮದೇವಯ್ಯಾ ||

ಇದೇನಯ್ಯಾ? ಪ್ರಸಾದ ಒಡನೆ ನಡೆಯುತ್ತಿದೆ ಇದೇನಯ್ಯಾ? ಪ್ರಸಾದ ಒಡನೆ ನುಡಿಯುತ್ತಿದೆ, ಇದೇನಯ್ಯಾ? ಪ್ರಾಣದ ಮೇಲೆ ಲಿಂಗಪ್ರತಿಷ್ಠೆಯಾದ ಶರಣಂಗೆ ಅದು ತಾನೆ ನಡೆವುದು, ಅದು ತಾನೆ ನುಡಿವುದು, ಎರಡೆಂಬುದಿಲ್ಲ, ಕೂಡಲಚನ್ನಸಂಗಯ್ಯಾ, ಅದು ತಾನೊಂದೆ ||

ರೂಪನರ್ಪಿಸಿ ನಿರೂಪ ಪ್ರಸಾದಿ; ತನ್ನನರ್ಪಿಸಿ ತಾನಿಲ್ಲದ ಪ್ರಸಾದಿ; ಇಲ್ಲವೆಯನರ್ಪಿಸಿ ಬಯಲ ಪ್ರಸಾದಿ, ಕೂಡಲಚನ್ನಸಂಗಯ್ಯಾ ನಿಮ್ಮ ಶರಣ ಮಹಾಪ್ರಸಾದಿ ||

೧೦

ಇಷ್ಟಲಿಂಗ ಮುಖದಲ್ಲಿ ಶರೀರವರ್ಪಿತ, ಪ್ರಾಣಲಿಂಗ ಮುಖದಲ್ಲಿ ಮನವರ್ಪಿತ, ಭಾವಲಿಂಗ ಮುಖದಲ್ಲಿ ಪ್ರಾಣವರ್ಪಿತ, ಇಂತೀ ತ್ರಿವಿಧಾರ್ಪಣವಾದಡೆ ಮಹಾಘನಲಿಂಗದಲ್ಲಿ ಸಮರಸೈಕ್ಯ ಕೂಡಲಚನ್ನಸಂಗಮದೇವಾ ||

೧೧

ರೂಪನರ್ಪಿತವ ಮಾಡಿದ ಬಳಿಕ ಅಂಗವೆಂಬುದಿಲ್ಲ, ರುಚಿಯನರ್ಪಿತವ ಮಾಡಿದ ಬಳಿಕ ಪ್ರಾಣವೆಂಬುದಿಲ್ಲ, ಭಾವ – ನಿರ್ಭಾವವ ನಿಜ ನುಂಗಿದ ಬಳಿಕ ಅರ್ಪಿಸುವ ಪರಿಯೆಂತೋ? ರೂಪು ಲಿಂಗ, ರುಚಿ ಜಂಗಮ, ಈ ಉಭಯದ ನಿರ್ಣಯ ಕೂಡಲಚನ್ನ ಸಂಗಯ್ಯನಲ್ಲಿ ಲಿಂಗೈಕ್ಯ ||

ಇಂತು ಅರ್ಪಿತ ಅನರ್ಪಿತ ನಾಸ್ತಿಯಾದ ಅಭಿನ್ನಲಿಂಗಾರ್ಪಣ ಸ್ಥಲ ಸಮಾಪ್ತ ||

ಇಂತಪ್ಪ ಅರ್ಪಿತ ಅನರ್ಪಿತನಾಸ್ತಿಯಾದ ಅಭಿನ್ನ ಲಿಂಗ ಪ್ರಸಾದವೇ ಕಡೆಯಾಗಿ ಷಟ್ಪ್ರಕಾರವನುಳ್ಳ ಸರ್ವ ಸಾವಧಾನ ಸಂಪೂರ್ಣಮಪ್ಪ ಬ್ರಹ್ಮಜ್ಞಾನಿಯಪ್ರಸಾದಸ್ಥಲ ಸಮಾಪ್ತ ||

ಇಂತಪ್ಪ ಪ್ರಸಾದಿಗಳಿಗೆ ನಿರೂಪವ ಕೊಟ್ಟ ಪ್ರಸಾದಮಹಾತ್ಮ್ಯ

ಗ್ರಂಥ |

ಪ್ರಸಾದೋ ಗಿರಿಜಾದೇವಿ, ಸಿದ್ಧಕಿನ್ನರಗುಹ್ಯಕ
ವಿಷ್ಣುಪ್ರಮುಖದೇವಾನಾಮಗ್ರಾಹ್ಯೋsಯಗೋಚರಃ ||  || ||

ಪ್ರಸಾದಸ್ಯ ಚ ಮಾಹಾತ್ಮ್ಯಂ ಶಿವಸ್ಯ ಪರಮಾತ್ಮನಃ
ಅಪಿ ದೇವಾ ನ ಜಾನಂತಿ ಶ್ರುತಯಶ್ಚನ ಸಂಶಯಃ ||  || ||

ಇದು ಶ್ರೀಮದಮಿತೋರು ಲಿಂಗಾಂಗ ಸಂಯೋಗಾನುಭವ
ಪ್ರಸಿದ್ಧ ಪರಿಪೂರ್ಣರೆನಿಪ್ಪ ಶೀಲಪರಮಾದ್ವೈತ
ವಿಶ್ರಾಂತರುಮಪ್ಪ ಪರಮಾಚಾರ್ಯರೂಪ
ಶ್ರೀ ಕರಸ್ಥಲದ ಮಲ್ಲಿಕಾರ್ಜುನೊಡೆಯರು
ಸೇರಿಸಿದ ಮಹಾನುಭಾವಬೋಧೆಯಪ್ಪ
ಶ್ರೀಮದ್ಬರಹ್ಮಾದ್ವೈತ ಸಿದ್ಧಾಂತ ಷಟ್‌ಸ್ಥಲಾಭರಣದೊಳು
ಬ್ರಹ್ಮಜ್ಞಾನಿಯಪ್ಪ ಪ್ರಸಾದಿಯ
ವರ್ಗ ತೃತೀಯ ಪರಿಚ್ಛೇದ ಸಮಾಪ್ತ ||

 

ಪ್ರಾಣಲಿಂಗಿ ಸ್ಥಲ

೪೪. ಪ್ರಾಣಲಿಂಗಿ ಸ್ಥಲ

ಇಂತಹ ಸಾವಧಾನದಿಂ ಪ್ರಸಾದಿಯಾಗಿ, ಆ ಸಾವಧಾನದೊಳಗಣ ಸ್ವಭಾವವೇಕದಿಂ ಬ್ರಹ್ಮ ಜ್ಞಾನಿಯಪ್ಪ ಪ್ರಸಾದಿ ತಾನೆ ಪ್ರಾಣಲಿಂಗಿಯಾದ ಪ್ರಾಣಲಿಂಗಿ ಸ್ಥಲ ||

ವೃತ್ತ |

ಷಟ್‌ತ್ರಿಶಂತಾ ಸಂಘಟಿತಾಂತರಾಯ
ತ್ವಗಾದಿಸಪ್ತಾವರಣಾನ್ವಿತಾಯ
ನಾದಾತ್ಮಲಿಂಗ ಸ್ಥಿತಿಮಂಗಲಾಯ
ನಮಃ ಶರೀರಾಯ ಶಿವಲಯಾಯ ||  || ||

ಷಟ್‌ತ್ರಿಂಶತತ್ವಭೃತಂ, ವಿಚಿತ್ರರಚನಾಗವಾಕ್ಷ ಪರಿಪೂರ್ಣ,
ನಿಜಮನ್ಯ ಶರೀರಂ, ಶರೀರವದ್ಭವತಿ ದೇವತಾಗಾರಂ ||  || ||

ಗ್ರಂಥ |

ದೇಹಂ ದೇವಾಲಯಂ ಪ್ರೋಕ್ತಂ ಜೀವೋ ದೇವಸ್ಸದಾಶಿವಃ
ತ್ಯಜೇದಜ್ಞಾನ ನಿರ್ಮಾಲ್ಯಂ ಸೋsಹಂ ಭಾವೇನ ಪೂಜಯೇತ್‌ ||  || ||

ಸ್ಯಂಭೌ ಪದೌ ಗೃಹಂ ದೇಹಂ ಶಿರಃ ಕಲಶಮೀರಿತಂ
ಜಿಹ್ವಾಗ್ರಂ ವಾಸಾಮಾಖ್ಯಾತಂ ಪೀಠಂ ಹೃದಯಪಂಕಜಂ ||  || ||

ಪೂಜಾ ಸಮಾಧಿರಿತ್ಯುಕ್ತಾ ಪ್ರಾಣಲಿಂಗಸ್ಯ ಸಂತತಂ
ಪ್ರಾಣಲಿಂಗಶಬ್ದನಿರ್ವಚನ ||

ಗ್ರಂಥ |

ಲಿಂಗಂ ಬ್ರಹ್ಮಾತ್ಮಕಂ ಪ್ರೋಕ್ತಂ ತದ್ಭಕ್ತೇ ಪ್ರಾಣರೂಪಕಂ
ಉಭಯೋರಂತರಂ ಜ್ಞಾತ್ವಾ ಪ್ರಾಣಲಿಂಗೀತಿ ಕಥ್ಯತೇ ||  || ||

ವಚನ |

ದೇಹದೊಳಗೆ ದೇಗುಲವಿರಲು ಮತ್ತೆ ದೇವಾಲಯವೇಕಯ್ಯಾ? ಹೇಳಲಿಲ್ಲ, ಕೇಳಲಿಲ್ಲ, ಗುಹೇಶ್ವರ, ನೀನು ಕಲ್ಲಾದಡೆ ನಾನೆಲ್ಲಿಪ್ಪೆನು? ||

ಉಳ್ಳವರು ದೇವಾಲಯವ ಮಾಡಿಸಲು ನಾನೇನ ಮಾಡುವೆ ಬಡವನಯ್ಯಾ ! ಎನ್ನ ಕಾಲೆ ಕಂಭ, ದೇಹವೆ ದೇಗುಲ, ಶಿರವೆ ಹೊನ್ನಕಳಸವಯ್ಯಾ, ಕೂಡಲಸಂಗಮದೇವ, ಕೇಳಯ್ಯಾ, ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ||

ಕಾಲೇ ಕಂಭಗಳಾದವೆನ್ನಯ ದೇಹವೇ ದೇಗುಲವಾಯಿತ್ತಯ್ಯಾ! ಎನ್ನ ನಾಲಗೆಯ ಘಂಟೆ, ಶಿರವೆ ಸುವರ್ಣದ ಕಳಶ ಇದೇನಯ್ಯಾ? ಸ್ವರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತಯ್ಯಾ ಗುಹೇಶ್ವರ, ನಿಮ್ಮ ಪ್ರಾಣಲಿಂಗ ಪ್ರತಿಷ್ಠೆ ಪಲ್ಲಟವಾಗದಂತಿದ್ದನೆಯ್ಯಾ ||

ಕಾಯವೆ ಶಿವಾಲಯ, ಕಮಲಮಧ್ಯಮಂಟಪವೆ ಸುಖಾಸನ, ನೋಡಯ್ಯಾ! ಜ್ಞಾನಾರೂಢ ಪ್ರಾಣೇಶ್ವರನೆಂಬಾತನು ಅಲ್ಲಿಯ ದೇವರು, ಒಂಬತ್ತು ಮಾನಿಸರು ತಾಂಡವಾಲಯರು, ಇಂಬಿನ ಮಠಪತಿ ಹಂಸಜೀಯನು, ತನ್ನ ದಳವಳಯವನೊಲ್ಲದೆ ಲಿಂಗವೆ ಗೂಡಾದನು, ಕೂಡಲಚನ್ನಸಂಗಯ್ಯನೆಂಬ ನಿಶ್ಚಿಂತ ನಿಜ್ಯಕ್ಯನು ||

ನವನಾಳ ಪದ್ಮದ ಅಷ್ಟದಳದೊಳಗೆ ಎಪ್ಪತ್ತುಮೂರು ನಾಳ ನೋಡಾ! ಸುಳಿದು ಬೀಸುವ ವಾಯು ಒಳಗೆ ಆತ್ಮಜ್ಯೋತಿ, ಅಲ್ಲಿಂದೊಳಗಿಪ್ಪ ಹಂಸನ ಗೃಹವ ನೋಡಾ! ಒಡಲ ದಂಡಿಸುವಡೆ, ಕೊಡುವ ಸಾಲಿಗನಲ್ಲ ಅಷ್ಟತನುವಿನೊಳಗೆ ಹುದುಗಿಪ್ಪ ಲಿಂಗವ ನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ ||

ಅಡವಿಯೊಳಗರಸುವಡೆ, ಗಿಡಗಂಟಿ ತಾನಲ್ಲ, ಮಡುವಿನೊಳಗರಸುವಡೆ, ಮತ್ಸ್ಯ ಮಂಡುಕನಲ್ಲ, ತಪಂ ಬಡುವಡೆ, ವೇಷಕ್ಕೆ ವೇಳೆಯಿಲ್ಲವೋ! ಒಡಲ ದಂಡಿಸುವಡೆ, ಕೊಡುವ ಸಾಲಿಗನಲ್ಲ ಅಷ್ಟತನುವಿನೊಳಗೆ ಹುದುಗಿಪ್ಪ ಲಿಂಗವ ನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ ||

ಎನ್ನ ತನುವೆ ಅಗ್ಗವಣಿಯ ಬಿಂದಿಗೆ, ಮನವೆ ಸಿಂಹಾಸನ, ಎನ್ನ ಹೃದಯ ಕಮಲವೆ ಪುಷ್ಪ, ಎನ್ನ ಕಿವಿಗಳೆ ಕೀರ್ತಿಮುಖ, ನುಡಿವ ನಾಲಗೆಯೆ ಘಂಟೆ, ಶಿರವೆ ಸುವರ್ಣದ ಕಳಸ, ಎನ್ನ ನಯನವೆ ಸ್ವಯಂಜ್ಯೋತಿಯಾರತಿ, ಎನ್ನ ಕಾಯಭಾಜನವೀ ಪರಿಯಾಯಿತ್ತಾಗಿ, ಕೂಡಲಚನ್ನಸಂಗಯ್ಯನ ಪೂಜಿಸಿದಲ್ಲದೆ ನಿಲ್ಲಲಾರೆನು ||

ಉದಕ ಮೂರ್ತಿಯಾಗಿ ಉದಯವಾಯಿತ್ತ್ತು, ಪೀಠಿಕೆಯಲ್ಲಿ ಮೂಲಸ್ಥಾನ ಸ್ಥಾಪ್ಯವಾಯಿತ್ತು, ಸ್ವದೇಹ ಶಿವಪುರದಲ್ಲಿ ವಾಯು ಪೂಜಾರಿಯಾಗಿ ಪರಿಮಳದಿಂಡೆಯ ಕಟ್ಟಿ ಪೂಜಿಸುತ್ತಿದ್ದಿತು, ನವದ್ವಾರ ಶಿವಾಲಯದಾದಿ ಮಧ್ಯ ಸ್ಥಾನದಲ್ಲಿ ಗುಹೇಶ್ವರನೆಂಬ ಲಿಂಗವಲ್ಲಿಯೆ ನಿಂದಿತ್ತು ||

ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ, ಹೂವಿಲ್ಲದ ಪರಿಮಳದ ಪೂಜೆ, ಹೃದಯ ಕಮಲದಲ್ಲಿ ‘ಶಿವಶಿವಾ’ ಎಂಬ ಶಬ್ದ ಇದು ಅದ್ವೈತ ಕಾಣಾ, ಗುಹೇಶ್ವರಾ ||

೧೦

ಬಯಲ ಉದಕ ಹಿಡಿದು ಮಜ್ಜನಕ್ಕೆರೆವೆನಯ್ಯಾ, ಅಷ್ಟದಳ ಪುಷ್ಪದ ಪೂಜೆಯ ಮಾಡುವೆನಯ್ಯಾ, ಸುಗಂಧ ದುರ್ಗಂಧವ ಕಳೆದು, ಧೂಪಾರತಿಯ ಬೀಸುವೆನಯ್ಯ, ಪರಬ್ರಹ್ಮವ ಹಿಡಿದು ನಿವಾಳಿಯನೆತ್ತುವೆನಯ್ಯಾ, ಪುಣ್ಯಪಾಪವ ಕಳೆದು ಓಗರವ ನೀಡುವೆನಯ್ಯ, ಹದಿನಾಲ್ಕು ಭುವನನೊಳಗು ಮಾಡಿ, ಹೊರಗೆ ನಿಂದು, ಸದಾಶಿವನ ಪೂಜಿಸಿದಾತನಂಬಿಗರ ಚೌಡಯ್ಯ ||

೧೧

ಎನ್ನ ಕಾಯವೆಂಬ ಸಿಂಹಾಸನದಲ್ಲಿ ಪ್ರಾಣವೆಂಬ ಲಿಂಗವ ಮೂರ್ತಿಗೊಳಿಸಿ, ಧ್ಯಾನವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸುತ್ತಿರಲು, ಮೆಲ್ಲ ಮೆಲ್ಲನೆ, ಸುತ್ತಿ ಮುತ್ತಿದ ಸಂಸಾರ ಬಯಲ ಬೆರಸಿ, ನಾನೀನೆಂಬ ಭೇದವಳಿದು ಮಹಾದಾನಿ ಸೊಡ್ಡಳನಲ್ಲಿ ನಿಜಲಿಂಗವಾಯಿತ್ತು ||

೧೨

ಗ್ರಾಮಮಧ್ಯದವಳಾರದೊಳಗೆ ಎಂಟು ಕಂಭ, ಒಂಭತ್ತು ಬಾಗಿಲ ಶಿವಾಲಯವಿರುತ್ತಿರಲು, ಅಲ್ಲಿಯ ಸ್ವಯಂಭುನಾಥನನರಿಯದೆ ಕೆಟ್ಟರೆಲ್ಲರು! ಆ ಸ್ವಯಂಭುನಾಥನು ಕಣ್ಣ ತಪ್ಪಿಸಿಕೊಂಡು ಕಲ್ಲಿನಾಥನ ತೊರೆದನು, ಆ ಕಲ್ಲಿನಾಂಥಗೆ ಮೆಚ್ಚಿ ಮರುಳಾದರೆಲ್ಲರು! ಶಿವಾಲಯದ ಮಧ್ಯಸ್ಥಾನವನರಿದು ಗರ್ಭಗೃಹವ ತಿಳಿದಡೆ, ಕಲ್ಲಿನಾನಾಸ್ತಿ! ಕೂಡಲಚನ್ನ ಸಂಗಯ್ಯನೆಂಬ ಪ್ರಾಣಲಿಂಗವಿರುತಿರಲು, ಎತ್ತಲೆಂದರಿಯರಲ್ಲಾ ||

೧೩

ಹೃದಯ ಕಮಲದ ಮಧ್ಯದೊಳಗಿಪ್ಪ ದೇವನ ದೇಹಾರವ ಮಾಡಲರಿಯರು ದೇಹ ನಿರ್ದೇಹವಾಗದನ್ನಕ ದೇಹಾರವೆಲ್ಲಿಯದೋ! ಅನಂತಮುಖದಲ್ಲಿ ದೇಹಾವ ಮಾಡಿದಡೆ ದೇವರಲ್ಲಿಲ್ಲ, ನೋಡಯ್ಯ! ಅಸತ್ಯವ ಹಿಡಿದು ಹುಸಿಯನೆ ಪೂಜಿಸಿ ಗಸಣಿಗೊಳಗಾದರು! ಅನಂತವನಳಿದು ನಿಜವನರಿದಡೆ, ಏಕೋಗ್ರಾಹಿ, ಕೂಡಲಚೆನ್ನಸಂಗಯ್ಯಾ, ನಿಮ್ಮಶರಣ ||

ಶ್ರೀಮದ್ಬ್ರಹ್ಮಜ್ಞಾನಿಯಪ್ಪ ಪ್ರಾಣಲಿಂಗಿಯ ಪ್ರಥಮಸ್ಥಲ ಸಮಾಪ್ತ ||

೪೫. ಬಾಹ್ಯ ಕ್ರಿಯಾನಿರಸನಸ್ಥಲ

ಇಂತಪ್ಪ ಹೃದಯ ಕಮಲ ಕರ್ಣಿಕಾ ಮಧ್ಯದೊಳಿಪ್ಪ ಮಹಾಘನ ಪ್ರಾಣಲಿಂಗವನರಿದರ್ಚಿಸಲರಿಯದೆ ಅನಂತಮುಖದಲ್ಲಿ ದೇಹಾರವ ಮಾಡಲು, ದೇವರಲ್ಲಿಲ್ಲವೆಂದರಿದ ಬ್ರಹ್ಮಜ್ಞಾನಿಯಪ್ಪ ಮಹಾಘನ ಪ್ರಾಣಲಿಂಗಿಯ ಬಾಹ್ಯ ಕ್ರಿಯಾನಿರಸನಸ್ಥಲ ||

ಗ್ರಂಥ |

ಸದ್ಯೋಜಾತಾದ್ಭವೇದ್ಭೂಮಿರ್ವಾಮದೇವಾತ್ತಥಾ ಜಲಂ
ಅಘೋರಾದ್ವಹ್ನಿರುದ್ಭೂಸ್ತತ್ಪುರುಷಾದ್ವಾಯುರುಚ್ಯತೇ
ಈಶಾನ್ಯಾದ್ಗನಾಕಾರಂ ಪಂಚಬ್ರಹ್ಮಮಂ ಜಗತ್‌ ||  || ||

ಜಗತಃ ಪಂಚಕಂ ಬೀಜಂ ಪಂಚಕಸ್ಯ ಚಿದದ್ವಯಂ
ಯದ್ವೀಜಂ ತತ್ಫಲಂ ವಿದ್ಧಿ ತಸ್ಮಾದ್ಬ್ರಹ್ಮಮಯಂ ಜಗತ್‌ ||  || ||

ಕ್ರಿಯಾ ಕರ್ಮಣಿ ಬದ್ಧಂ ಚ ಲೋಕಾಲೋಕಜಗತ್ತ್ರಯಂ
ತಸ್ಮಾತ್ಕರ್ಮಪರಿತ್ಯಾಗೋ ಬ್ರಹ್ಮಯೋ ಉದಾಹೃತಃ ||  || ||

ನ ದೇವಾನ್ಪೂಜಯೇನ್ನಿತ್ಯಂ ಧಾತಾರಂ ನೈವ ಪೂಜಯೇತ್‌
ಸದಾ ಸಂಪೂಜಯೇಲ್ಲಿಂಗಂ ದಿವಾರಾತ್ರಿ ವಿವರ್ಜಿತಃ ||  || ||

ಪರಬ್ರಹ್ಮಣಿ ವಿಜ್ಞಾತೇ ಸಮಸ್ತೈರ್ನಿಯಮೈರಲಂ
ವೇಣುವೃಂತೇನ ಕಿಂ ಕಾರ್ಯಮುಚ್ಛೇಮಲಯಮಾರುತೇ ||  || ||

ಬ್ರಹ್ಮಜ್ಞಾನೇನ ಪ್ರಧ್ವಸ್ತ ಮದಮಾತ್ಸರ್ಯಯೋಗಿನಃ
ನೈವಾಸ್ತಿ ಕಿಂಚಿತ್ಕರ್ತವ್ಯಮಸ್ತಿಚೇನ್ನಸತತ್ವವಿತ್‌ ||  || ||

ಜ್ಞಾನಾಮೃತೇನ ತೃಪ್ತಸ್ಯ ಭಕ್ತಸ್ಯ ವಿವಶಾತ್ಮನಃ
ನಾಂತಸ್ತೃಪ್ತಿರ್ಬಹಿಸ್ತೃಪಿಃ ಕೃತ್ಯಂ ನಾಸ್ತಿ ಕದಾಚನ ||  || ||

ವಚನ |

ಸದ್ಯೋಜಾತ ಮುಖವೇ ಪೃಥ್ವಿಯೆಂದರಿದಲ್ಲಿ ಪತ್ರೆ ಪುಷ್ಟದ ಹಂಗೇಕೆ? ವಾಮದೇವ ಮುಖವೇ ಅಪ್ಪುವೆಂದರಿದಲ್ಲಿ ಅಗ್ಗವಣಿಯಲ್ಲಿ ಮಜ್ಜನಕ್ಕೆರೆವ ಹಂಗೇಕೆ? ಅಘೋರ ಮುಖವೇ ಅಗ್ನಿಯೆಂದರಿದಲ್ಲಿ, ಧೂಪದೀಪಾರತಿಗಳ ಹಂಗೇಕೆ? ತತ್ಪುರುಷ ಮುಖವೇ ವಾಯುವೆಂದರಿನಲ್ಲಿ ಮಂತ್ರತಂತ್ರದ ಹಂಗೇಕೆ? ಈಶಾನ್ಯ ಮುಖವೇ ಆಕಾಶವೆಂದರಿದಲ್ಲಿ ಧಾನ್ಯಮೌನದ ಹಂಗೇಕೆ? ಇಂತೀ ಪಂಚಬ್ರಹ್ಮವೆ ಪರಬ್ರಹ್ಮವೆಂದರಿದ ಶರಣಂಗೆ ಸರ್ವ ಉಪಚಾರ ಸಂಕಲ್ಪವೇಕೆ, ಹೇಳಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಹೊರಗನೆ ಕೊಯಿದುಹೊರಗನೆ ಪೂಜಿಸಿ ಹೊರಗಾಯಿತ್ತಲ್ಲ ತ್ರೈಜಗವೆಲ್ಲಾ! ನಾನರಿಯದಂತೆ ಪೂಜಿಸಹೋದಡೆ ಕೈ ಲಿಂಗದಲ್ಲಿ ಸಿಲುಕಿತ್ತು ನೋಡಾ ಮನದುರವಣಿಯಿಂದ ನಿಮ್ಮ ನೆನೆದೆಹೆನೆಂದು ಹೋದಡೆ, ತನು ಸಂದಣಿಸಿತ್ತು, ಗುಹೇಶ್ವರಾ ||

ಮುಟ್ಟಿ ಭಕ್ತನಲ್ಲ, ಬಿಟ್ಟು ಸೂತಕಿಯಲ್ಲ, ನೆಟ್ಟನೇ ತಾನಾಗಿ ಆದಿ ಅಂತ್ಯವಿಲ್ಲದ ಶರಣ, ಮುಟ್ಟಿ ಅಗ್ಗವಣಿಯ ಕೊಡ, ಹುಟ್ಟುವ, ಹೊಂದುವ ಗಿಡುವಿನ ಪೂಜೆಯ ಮಾಡ ಕಷ್ಟದ ಮಾಟವ ಮಾಡಿಸಿಕೊಳ್ಳಲಿಲ್ಲಾಗಿ, ಮುಟ್ಟುವ ಮೂರುತಿ ನಷ್ಟವೆಂದರಿಯರು, ಇದು ಕಾರಣ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲವೆಂದನು ||

ತಾನೆಂದಲ್ಲಿ ಓಯೆಂದುದೇನೋ! ಎಂದು ಸಂಕಲ್ಪವೆಲ್ಲಿಯಡಗಿತ್ತೋ! ತಾನೆಂದು ಜಡವಿಡಿದ ಭೂತಪ್ರಾಣಿಗಳಿಗೆ ಲಿಂಗವೆಲ್ಲಿಯದೋ? ಪೂಜಿಸಿ ಪೂಜಿಸಿ ಗತಿಗೆಟ್ಟರೆಲ್ಲರು, ಗತಿಗೆಡದಲ್ಲಿಯೇ ಅಡಗಿತ್ತು! ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ, ಇಲ್ಲ! ನಿಲ್ಲು, ಮಾಣು ||

ಪ್ರಾಣಲಿಂಗವ ಪರಲಿಂಗ ಮಾಡಿ ಇಷ್ಟಲಿಂಗವ ಪೂಜಿಸುವರ ಕಷ್ಟವ ನೊಡಾ, ತೊಟ್ಟಿಲ ಶಿಶುವಿಂಗೆ ಜೋಗುಳವಲ್ಲದೆ ಹೊಟ್ಟೆಯ ಶಿಶುವಿಂಗೆ ಜೋಗುಳವುಂಟೆ? ಬಯಲಾಸೆ ಹಾಸ್ಯವಾಯಿತ್ತು! ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ, ಇಲ್ಲ, ನಿಲ್ಲು, ಮಾಣು ||

ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲ, ಅಂಗ ಸಂಗಿಗಳೆಲ್ಲರು, ಮಹಾಘನವರಿಯದೆ ನಿಂದಿರೋ! ಹುಸಿಯನೆ ಕೊಯ್ದು, ಹುಸಿಯನೆ ಪೂಜಿಸಿ, ಗಸಣಿಗೊಳಗಾದರು ಗುಹೇಶ್ವರಾ ||

ಆಡಿಗೆ ದಾಯಾದ್ಯರಾದಿರಲ್ಲಾ! ಕಾಡ ಗಿಡುವಿಗೆ ಮೃತ್ಯುವಾದಿರಲ್ಲಾ! ಅರಿವನರಿಯ ಹೇಳಿ ಶ್ರೀಗುರು ಕುರುಹ ಕೈಯಲ್ಲಿ ಕೊಟ್ಟಡೆ ಅರಿವನೆ ಮರೆದು ಕುರುಹನೆ ಪೂಜಿಸುವ ಕುರಿಗಳ ನೋಡಾ, ಗುಹೇಶ್ವರಾ ||

ಕಾಣಬಹ ಲಿಂಗವೆಂದು ಅಗ್ಗವಣಿಯ ಕೊಟ್ಟು ಕೆಳೆಯಾದಿರಲ್ಲ! ಲೋಕ ನಿರಾಳಲಿಂಗಕ್ಕೆ ಕೊಡಲರಿಯರು, ಕಂಡವರ ಕಂಡು, ಕಂಡಂತೆ! ಇದು ಕಾರಣ, ಕೂಡಲಚನ್ನಸಂಗಯ್ಯನಲ್ಲಿ ಇಂಥವರ ಕಂಡು ನಾಚಿತ್ತೆನ್ನ ಮನವು ||

ಊರಕ್ಕಿ, ಊರೆಣ್ಣೆ [ಉಣ್ಣು] ಮಾರಿಕವ್ವ ತಾಯೆ, ಬಾರಕ್ಕ ಮಾರನ ತಲೆಗಾಯಿ ಎಂಬಂತೆ ಕಾಡ ಹೂ, ಮಡುವಿನಗ್ಗವಣಿಯ ತಂದು ಕೈಯಲಿಂಗವ ಪೂಜಿಸುವಾತ ಭಕ್ತನೆಂದೆಂಬರು; ಅಲ್ಲ! ಸುವಿಚಾರದಿಂದ ತಾನೆ ಲಿಂಗ, ತನ್ನ ಮನವೆ ಪುಷ್ಪವಾಗಿ, ಪೂಜೆಯ ಮಾಡಬಲ್ಲಾತನೆ ಸದ್ಭಕ್ತನು ಕಾಣಾ, ಗುಹೇಶ್ವರಾ ||

೧೦

ಉದಯ ಮುಖದಲ್ಲಿ ಪೂಜಿಸಹೋದಡೆ ಹೃದಯ ಮುಖದಲ್ಲಿ ಕತ್ತಲೆಯಾಯಿತ್ತು! ಹಾರಿಹೋಯಿತ್ತು ಪ್ರಾಣಲಿಂಗವು ಹರಿದುಬಿದ್ದಿತ್ತು ಸೆಜ್ಜೆ, ನೋಡಯ್ಯಾ! ಕಟ್ಟುವ ಬಿಡುವ ಸಂಬಂಧಿಗಳ ಕಷ್ಟವ ನೋಡಾ, ಗುಹೇಶ್ವರಾ ||

೧೧

ಉದಯವಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ, ಬೈಗಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ, ಲಿಂಗಕ್ಕೆ ನೇಮವಿಲ್ಲ! ಇರುಳಿಗೊಮ್ಮೆ ನೇಮ ಹಗಲಿಗೊಮ್ಮೆ ನೇಮ! ಲಿಂಗಕ್ಕೆ ನೇಮವಿಲ್ಲ, ಹಸಿವಿಗೊಮ್ಮೆ ನೇಮ, ತೃಷೆಗೊಮ್ಮೆ ನೇಮ, ಲಿಂಗಕ್ಕೆ ನೇಮವಿಲ್ಲ, ಕಾಯಕ್ಕೊಮ್ಮೆ ನೇಮ, ಕರಣಕ್ಕೊಮ್ಮೆ ನೇಮ, ಲಿಂಗಕ್ಕೆ ನೇಮವಿಲ್ಲ, ನೇಮವೆಂಬುದೆಲ್ಲಾ ಕಾಯದ ಕಳವಳ! ಆರಹಂಗಿಲ್ಲದಾತನೊಬ್ಬನೆ ಗುಹೇಶ್ವರ ||

೧೨

ಹೊತ್ತಾರೆ ಪೂಜಿಸಲು ಬೇಡ, ಕಂಡಾ! ಬೈಗೆ ಪೂಜಿಸಲು ಬೇಡ ಕಂಡಾ! ಇರುಳು ಪೂಜಿಸಲು ಬೇಡ, ಕಂಡಾ! ಹಗಲು ಪೂಜಿಸಲು ಬೇಡ ಕಂಡಾ! ಇರುಳನೂ ಹಗಲನೂ ಕಳೆದು ಪೂಜಿಸಲು ಬೇಕು, ಕಂಡಾ! ಇಂತಪ್ಪ ಪೂಜೆಯ ಮಾಡುವರ ಎನಗೊಮ್ಮೆ ತೋರಾ ಗುಹೇಶ್ವರಾ ||

೧೩

ಹೊತ್ತಾರಿನ ಪೂಜೆ, ಹಗಲಿನ ಪೂಜೆ, ಬೈಗಿನ ಪೂಜೆ, ನಿಚ್ಚಕ್ಕಿನ ಪೂಜೆಯ ಮಾಡಿ ಅಚ್ಚಿಗಗೊಂಡರೆಲ್ಲರು ನಿಶ್ಚಿಂತನಿರಾಳ ನಿಜೈಕ್ಯಲಿಂಗವ ಹೊತ್ತಿಂಗೆ ತರಲುಂಟೆ? ಹೊತ್ತನೆ ಪೂಜಿಸಿ, ಹೊತ್ತನೆ ಅರ್ಚಿಸಿ, ಇತ್ತಲೆಯಾದರೆಲ್ಲರು, ನಿಶ್ಚಿಂತವನರಿದು ನಿಜವ ನೆಮ್ಮಿದಡೆ, ಚಿತ್ತಸಮಾಧಾನ, ಕೂಡಲಚನ್ನಸಂಗನೆಂಬ ನಿಶ್ಚಿಂತ ನಿಜೈಕ್ಯನು ||

೧೪

ಅಂಗದ ಮೇಲೆ ಲಿಂಗವರತು, ಲಿಂಗದ ಮೇಲೆ ಅಂಗವರತು, ಭಾವತುಂಬಿ ಪರಿಣಾಮವರತು, ನಾಮವಿಲ್ಲದ ದೇವರಿಗೆ ನೇಮದಲ್ಲಿಯದೋ, ಗುಹೇಶ್ವರಾ ||

೧೫

ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ? ಬೇಟದ ಮರುಳಿಗೆ ಲಜ್ಜೆ ಮುನ್ನೇಕೆ? ನಿಮ್ಮನರಿದ ಶರಣಂಗೆ, ಶಿವಪೂಜೆಯ ಹಂಬಲ ದಂದುಗವೇಕೆ? ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ? ಗುಹೇಶ್ವರಲಿಂಗಕ್ಕೆ ಕುರುಹು ಮುನ್ನೇಕೆ? ||

೧೬

ವರ್ಣವಿಲ್ಲದ ಲಿಂಗಕ್ಕೆ ರೂಪ ಪ್ರತಿಷ್ಠೆಯ ಮಾಡುವರು, ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ಮಾಡುವರು, ನುಡಿಯಬಾರದ ಲಿಂಗಕ್ಕೆ ಜಪಸ್ತ್ರೋತ್ರ ಪೂಜೆಯ ಮಾಡುವರು, ಮುಟ್ಟಬಾರದ ಲಿಂಗವಕೊಟ್ಟು ಕೊಂಡಾಡಿದೆವೆಂಬರು! ಬೊಟ್ಟಿಡಲೆಡೆಯಿಲ್ಲದ ಲಿಂಗವಮುಟ್ಟಿ ಪೂಜಿಸೆನೆಂಬ ಭ್ರಷ್ಟರ ನೋಡಾ, ಗುಹೇಶ್ವರಾ ||

೧೭

ತರುಗಳ ಹರಿಯೆ, ಜಲಧಿಯ ತುಳುಕೆ, ಪಾಷಾಣವ ಪೂಜಿಸೆ, ಮನದಲ್ಲಿ ನೆನೆಯೆ, ವಚನಕ್ಕೆ ತಾರೆ, ಹೊಡವುಂಟು, ಬೇರುಮಾಡೆ, ತಾಯ ಬಸುರೊಳಗಿದ್ದು ಕಾಲ ನೀಡುವ ಬುದ್ಧಿ ಕೂಡದು; ಕೂಡದೆಂದನಂಬಿಗರಗೌಡಯ್ಯ ||

೧೮

ಪುಣ್ಯಪಾಪವಿರಹಿತಖಂಡಕ್ರೀಯೇಕೆ? ಒಬ್ಬನೇ ಕಂಡ ಆರು ದರ್ಶನವೇಕೆ? ಮಾಟವೆಂಬುದೆಲ್ಲವು ಕೋಟಲೆ ಎಂದು ಕಳೆದು ದೂಟಿಸಿ ನುಡಿದಾತನಂಬಿಗಚೌಡಯ್ಯ ||

೧೯

ಅಂತರಂಗದ ಭಕ್ತಿ ಹಾದರಗಿತ್ತಿಯ ತೆರನಂತೆ, ಬಹಿರಂಗದ ಭಕ್ತಿ ವೇಶಿಯ ತೆರನಂತೆ, ಅಂತರಂಗವು ಇಲ್ಲ, ಬಹಿರಂಗವೂ ಇಲ್ಲ, ಶರಣನ ಪರಿ ಬೇರೆ! ಕೂಡಲಚನ್ನಸಂಗನೆಂಬ ಮಾತದಂತಿರಲಿ ||

೨೦

ಆರತವಡಗಿತ್ತು, ಸಾರತ ಸವೆಯಿತ್ತು, ನಾಚಿಕೆ ನಾಚಿತ್ತು, ಮಚ್ಚಿಕೆ ಮರೆಯಿತ್ತು, ನಿಷ್ಠೆ ನಿರ್ಭಾವಿಸಿ ನಿಸ್ಸಂದೇಹಕ್ಕೊಳಗಾಯಿತ್ತು! ನಮ್ಮ ಸಿಮ್ಮಲಿಗೆ ಚೆನ್ನರಾಮನೆಂಬ ಲಿಂಗದಲ್ಲಿ ಖಂಡಿತ ಪೂಜೆ ಭಂಡಾಯಿತ್ತು ||

೨೧

ಅರಳಿದ ಪುಷ್ಪ ಪರಿಮಳಿಸದಿಹುದೆ? ತುಂಬಿದ ಸಾಗರ ತೆರೆನೊರೆಯಾಡದಿಹುದೇ? ಆಕಾಶವ ಮುಟ್ಟುವವ ದಾಟುಗೋಲ ಪಿಡಿವನೆ? ಪರಮ ಪರಿಣಾಮಿ ಕರ್ಮವನತಿ ಗೆಳೆಯದಿಹನೇ ಮಹಾಲಿಂಗ ಕಲ್ಲೇಶ್ವರಾ ||

ಇಂತು ಬಾಹ್ಯಕ್ರಿಯಾ ನಿರಸನಸ್ಥಲ ಸಮಾಪ್ತ ||